ವಿಷಯಕ್ಕೆ ಹೋಗು

ರಕ್ತಚಂದನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Pterocarpus santalinus
in Talakona forest, in Chittoor District of Andhra Pradesh, India.
Conservation status
Scientific classification e
ಸಾಮ್ರಾಜ್ಯ: Plantae
ಏಕಮೂಲ ವರ್ಗ: ಹೂಬಿಡುವ ಸಸ್ಯ
ಏಕಮೂಲ ವರ್ಗ: Eudicots
ಏಕಮೂಲ ವರ್ಗ: Rosids
ಗಣ: Fabales
ಕುಟುಂಬ: Fabaceae
ಕುಲ: ಟೀರೊಕಾರ್ಪಸ್
ಪ್ರಜಾತಿ:
P. santalinus
Binomial name
Pterocarpus santalinus
Synonyms[]
  • Lingoum santalinum (L.f.) Kuntze
ರಕ್ತಚಂದನ
ರಕ್ತಚಂದನ ಮರ

ರಕ್ತಚಂದನ ದಕ್ಷಿಣ ಭಾರತದ ಪರ್ವತ ವ್ಯಾಪ್ತಿಯ ಸ್ಥಳೀಯ ಸಸ್ಯ. ಕೆಂಪು ಸ್ಯಾಂಡಲ್‍ವುಡ್, ಕೆಂಪು ಚಂದನ, ಇವು ಈ ಮರಕ್ಕಿರುವ ಸಾಮಾನ್ಯ ಹೆಸರುಗಳು.[] ಇದು ಫ್ಯಾಬೇಸೀ ಕುಟುಂಬದ ಫ್ಯಾಬಾಯ್ಡೀ ಉಪಕುಟುಂಬಕ್ಕೆ ಸೇರಿರುವ ಪರ್ಣಪಾತಿ ಮರ (ರೆಡ್ ಸ್ಯಾಂಡರ್ಸ್). ಹೊನ್ನೆಮರದ ಹತ್ತಿರ ಸಂಬಂಧಿ. ಅದರಂತೆಯೇ ಇದು ಕೂಡ ಒಳ್ಳೆಯ ಚೌಬೀನೆಮರವಾಗಿ ಪ್ರಸಿದ್ಧವಾಗಿದೆ. ಟೀರೊಪಕಾರ್ಪಸ್ ಸ್ಯಾಂಟಲೈನಸ್ ಇದರ ಸಸ್ಯಶಾಸ್ತ್ರೀಯ ಹೆಸರು. ಇದಕ್ಕೆ ರಂಜನ ಎಂಬ ಹೆಸರೂ ಇದೆ.

ದೇಶೀಯ ಹೆಸರುಗಳು

[ಬದಲಾಯಿಸಿ]

ಬಂಗಾಳಿ: ರಾಕ್ಷ ಚಂದನ್, ಗುಜರಾತಿ: ರತಂಜಲಿ; ಹಿಂದಿ: ಲಾಲ್ ಚಂದನ್, ರಾಗತ್ ಚಂದನ್, ರುಖ್ಟೋ ಚಂದನ್, ಅಂಡಮ್, ಕನ್ನಡ: ರಕ್ತಚಂದನ, ಮರಾಠಿ: ತಂಬದಾ ಚಂದನ್, ಒರಿಯಾ: ರಾಕ್ಷಚಂದನ್, ಮಲಯಾಳಂ: ಪತರಂಗಂ, ತಿಲಪರ್ಣಿ, ರಾಕ್ಷ ಚಂದನಮ್, ತಮಿಳು: ಚೆಂಜಂಡನಮ್, ಸೆಮರಮಮ್, ಸಿವಪ್ಪು ಚಂದನಂ, ತೆಲುಗು: ಅಗರು ಗಂಧಮು, ಎರಾಚಂಡನಂ, ರಾಕ್ಷಚಂಡನಂ, ರಕ್ಷಾ ಗಂಧಮು ಸಂಸ್ಕೃತ: ರಕ್ತಚಂದನ []

ವ್ಯಾಪ್ತಿ

[ಬದಲಾಯಿಸಿ]

ಭಾರತದಲ್ಲಿ ಕೆಲವು ಪ್ರದೇಶಗಳಲ್ಲಿ ಮಾತ್ರ ಇದು ಸ್ವಾಭಾವಿಕವಾಗಿ ಬೆಳೆಯುತ್ತದೆ. ಆಂಧ್ರಪ್ರದೇಶದ ಕಡಪ, ಕರ್ನೂಲು, ನೆಲ್ಲೂರು ಮತ್ತು ಉತ್ತರ ಅರ್ಕಾಟ್ ಜಿಲ್ಲೆಗಳಲ್ಲಿ ಹೆಚ್ಚು ಕಾಣದೊರೆಯುವ ಇದು ಈ ಜಿಲ್ಲೆಗಳಿಗೆ ಅಂಟಿಕೊಂಡಂತಿರುವ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ಜೆಲ್ಲೆಗಳಲ್ಲೂ ಕೊಂಚಮಟ್ಟಿಗೆ ಬೆಳೆಯುತ್ತದೆ.[][] ಸುಮಾರು 75 ರಿಂದ 100 ಸೆಂಮೀ ಮಳೆ ಬೀಳುವ ಪ್ರದೇಶದಲ್ಲಿ ಇದು ಚೆನ್ನಾಗಿ ಬೆಳೆಯಬಲ್ಲದು.

ಕಲ್ಲುಬಂಡೆಗಳಿರುವ ಬಂಜರು ಭೂಮಿಗಳಲ್ಲಿ, ಬೆಟ್ಟಪ್ರದೇಶಗಳಲ್ಲಿ ನೀರು ಚೆನ್ನಾಗಿ ಬಸಿದುಹೋಗುವಂಥ ನೈಸ್, ಕ್ವಾರ್ಟ್‌ಜ಼ೈಲ್, ಷೇಲ್ ಮತ್ತು ಲ್ಯಾಟರೈಟ್ ಶಿಲೆಗಳ ಭೂಮಿಗಳಲ್ಲಿ ಚೆನ್ನಾಗಿ ಬೆಳೆಯುತ್ತದೆ.

ವಿವರಣೆ

[ಬದಲಾಯಿಸಿ]

ರಕ್ತಚಂದನ ಎಂಬುದು ಬಹು ಬೇಡಿಕೆಯ ಮಧ್ಯಮಗಾತ್ರದ ಮರ; ಸುಮಾರು 10ಮೀ ಎತ್ತರಕ್ಕೆ ಬೆಳೆಯುತ್ತದೆ. ಮುಖ್ಯ ಕಾಂಡದ ವ್ಯಾಸ ಸುಮಾರು 1.5 ಮೀ ಇರುವುದುಂಟು. ತೊಗಟೆ ಕಪ್ಪುಮಿಶ್ರಿತ ಕಂದು. ಈ ಮರದ ತೊಗಟೆಯನ್ನು ಕೆತ್ತಿದಾಗ ಕೆಂಪಾದ ಸಾರವು ಸುರಿಯುವುದು. ಮರದ ತಿರುಳನ್ನು ಔಷಧ ಹಾಗೂ ಧಾರ್ಮಿಕ ಕಾರ್ಯಗಳಲ್ಲಿ ಉಪಯೋಗಿಸಲಾಗುತ್ತದೆ. ಗಿಡ ಸಣ್ಣದಿರುವಾಗ ವೇಗವಾಗಿ ಬೆಳೆಯುತ್ತದೆ, ಮೂರು ವರ್ಷಗಳಲ್ಲಿ ೪-೫ ಮೀಟರ್ (೧೬ ಅಡಿ) ಎತ್ತರಕ್ಕೆ ಬೆಳೆಯುತ್ತದೆ. ಇದರ ಎಲೆಗಳು ೩-೯ಸೆಂ.ಮೀ. ಉದ್ದವಿದ್ದು ಮೂರು ಪದರಗಳನ್ನು ಹೊಂದಿದೆ.[] ರಕ್ತಚಂದನದ ಎಲೆ ಮೂರು ಕಿರು ಎಲೆಗಳಿಂದ ಕೂಡಿದ ಸಂಯುಕ್ತ ಮಾದರಿಯದು. ಕೆಲವೊಮ್ಮೆ ನಾಲ್ಕು -ಐದು ಕಿರು ಎಲೆಗಳೂ ಇರುವುದುಂಟು. ಹೂವಿನಲ್ಲಿ ಹತ್ತು ಕೇಸರಗಳಿದ್ದು ಅವು ಎರಡು ಗುಂಪುಗಳಾಗಿ ವಿಂಗಡಣೆಗೊಂಡಿರುತ್ತದೆ. ಈ ಸ್ಥಿತಿಗೆ ಡಯಾಡೆಲ್ಫಸ್ ಎಂದು ಹೆಸರು.

ಜನವರಿಯಿಂದ ಮಾರ್ಚ್ ತಿಂಗಳ ತನಕ ಎಲೆಗಳು ಉದುರುತ್ತವೆ. ಏಪ್ರಿಲ್‌ನಲ್ಲಿ ಹೊಸ ಚಿಗುರು ಮೂಡುತ್ತದೆ. ಏಪ್ರಿಲ್‌ನಿಂದ ಜೂನ್ ತಿಂಗಳ ಹೂ ಬಿಡುವ ಕಾಲ. ಹೂಗಳು ಮುಂದಿನ ಫೆಬ್ರವರಿ ವೇಳೆಗ ಕಾಯಾಗಿ ಬಲಿಯುತ್ತವೆ. ಎಲೆಗಳು ದನಗಳಿಗೆ ಒಳ್ಳೆಯ ಮೇವಾಗಿರುತ್ತದೆ.

ಬೇಸಾಯ

[ಬದಲಾಯಿಸಿ]

ರಕ್ತಚಂದನ ತೀಕ್ಷ್ಣ ಬಿಸಿಲಿನಲ್ಲಿ ಹುಲುಸಾಗಿ ಬೆಳೆಯುತ್ತದೆ. ನೆರಳನ್ನು ಇಷ್ಟಪಡದು. ಬೆಂಕಿಗೆ ಬೇಗ ಈಡಾಗುವುದಿಲ್ಲ. ಬೀಜ ಬಿತ್ತಿ ವೃದ್ಧಿಸಬಹುದು; ಇಲ್ಲವೆ ಕಾಂಡತುಂಡುಗಳಿಂದ ಬೆಳೆಸಬಹುದು. ಬೆಳೆದ ಮರವನ್ನು ಬುಡಮಟ್ಟಕ್ಕೆ ಕತ್ತರಿಸಿದರೆ ಮೋಟಿನಿಂದ ಚೆನ್ನಾಗಿ ಚಿಗುರೊಡೆಯಯುತ್ತದೆ. ಅಲ್ಲದೆ ಬೇರುಸಸಿಗಳೂ ಧಾರಾಳವಾಗಿ ಹುಟ್ಟುವುವು. ಎಳೆಯ ಸಸಿಗಳು ದನಕರು, ಜಿಂಕೆ ಜಾನುವಾರಗಳಿಗೆ ಮೆಚ್ಚಿನ ಮೇವೆನಿಸಿವೆ. ಬೀಜಗಳು ಮಳೆಗಾಲದಲ್ಲಿ ಮೊಳೆತು ಸಸಿಯಾಗುತ್ತವೆ. ಬೆಂಕಿ ಅಥವಾ ಜಾನುವಾರಗಳಿಂದ ಬಾಧಿತವಾಗದ ಪ್ರದೇಶಗಳಲ್ಲಿ ಈ ಮರ ಹೆಚ್ಚಾಗಿ ಬೆಳೆಯುತ್ತದೆ. ಸಾಲುಮರಗಳಂತೆ, ಸಾಲು ಚರಂಡಿ, ಕೋಡಿ ಹಾಗೂ ಮಣ್ಣಿನ ದಿಬ್ಬಗಳಲ್ಲಿ ಬೀಜವನ್ನು ಬಿತ್ತಿ ಕೃತಕವಾಗೂ ಬೆಳೆಸಬಹುದು.

ಉಪಯೋಗಗಳು

[ಬದಲಾಯಿಸಿ]
ರಕ್ತಚಂದನ ಮರದ ತಿರುಳು
  • ಮರದ ದಿಮ್ಮಿ: ಚೀನಾದ ಕ್ವಿಂಗ್ ರಾಜವಂಶದ ಚಕ್ರವರ್ತಿಗಳು ಬಳಸುತ್ತಿದ್ದ ರಕ್ತಚಂದನದ ಒಂದು ಕುರ್ಚಿಯನ್ನು ಇಂದು ಕಾಣಬಹುದಾಗಿದೆ.
  • ರಕ್ತಚಂದನದಿಂದ ತಯಾರಿಸಲ್ಪಟ್ಟ ವಸ್ತುಗಳು ಹಾಗೂ ಪೀಠೋಪಕರಣಗಳಿಗೆ ಬಹಳಷ್ಟು ಬೇಡಿಕೆಯಿದ್ದು, ದುಬಾರಿಯಾಗಿದೆ.
  • ಜಪಾನ್ ಸಂಗೀತ ವಾದ್ಯ ಶಾಮಿಸನ್ನ ಕುತ್ತಿಗೆಯನ್ನು ಮಾಡಲು ಕೆಂಪು ಚಂದನ ಅಥವಾ ರಕ್ತಚಂದನದ ಮರವನ್ನು ಬಳಸುತ್ತಾರೆ[]
  • ಸೌಂದರ್ಯವರ್ಧಕಗಳ ತಯಾರಿಕೆಯಲ್ಲಿ ರಕ್ತಚಂದನವನ್ನು ಬಳಸಲಾಗುತ್ತದೆ.

ರಕ್ತಚಂದನದ ಚೌಬೀನೆ ಭಾರವಾದ್ದೂ (ಘನ ಅಡಿಗೆ 76 ಪೌಂ) ಗಡುಸಾದ್ದೂ ಬಾಳಿಕೆ ಬರುವಂಥದ್ದೂ ಆಗಿದೆ. ಹದಮಾಡುವುದೂ ಸುಲಭ. ಹೊರ ಮರ ಮಾಸಲು ಬಿಳಿಯ ಬಣ್ಣಕ್ಕಿದ್ದರೆ ಚೇಗುಮರ ಕುಯ್ದ ಹೊಸದರಲ್ಲಿ ಕೆಂಪು ಬಣ್ಣದ್ದಾಗಿದ್ದು ಕ್ರಮೇಣ ಕಂದುಬಣ್ಣಕ್ಕೆ ತಿರುಗುತ್ತದೆ. ಚೌಬೀನೆ ಕೆತ್ತನೆ ಕೆಲಸಗಳಿಗೆ ಉಪಯುಕ್ತ. ರಕ್ತಚಂದನದ ಬೊಂಬೆಗಳು ಪ್ರಸಿದ್ಧವಾಗಿವೆ.

ರಕ್ತಚಂದನದ ಕಾಷ್ಠದಲ್ಲಿ ಸ್ಯಾಂಟಲಿನ್ ಎಂಬ ಕೆಂಪು ವರ್ಣಕವೂ ಡೀಸಾಕ್ಸಿ ಸ್ಯಾಂಟಲಿನ್ ಎಂಬ ಹಳದಿ ವರ್ಣಕವೂ ಇವೆ. ಉಣ್ಣೆ, ಹತ್ತಿಬಟ್ಟೆ, ಚರ್ಮ ಮತ್ತು ಬೇರೆ ತೆರನ ಚೌಬೀನೆಗಳಿಗು ಕೆಲವೊಂದು ಆಹಾರ ಪದಾರ್ಥಗಳು, ಔಷಧಿಗಳು ಹಾಗೂ ಕಾಗದ ಪಲ್ಪಿಗೂ ಬಣ್ಣಕಟ್ಟಲು ಈ ವರ್ಣಕಗಳನ್ನು ಬಳಸಲಾಗುತ್ತದೆ. ಮರಕ್ಕೆ ಪ್ರತಿಬಂಧಕ, ಉತ್ತೇಜಕಗುಣಗಳೂ ಇವೆ. ಊತ, ತಲೆನೋವು ನಿವಾರಣೆಗೆ ಇದರ ಲೇಪ ಹಚ್ಚಲಾಗುತ್ತದೆ.

ಔಷಧೀಯ ಮೌಲ್ಯಗಳು

[ಬದಲಾಯಿಸಿ]
  • ರಕ್ತಚಂದನವನ್ನು ಶರೀರದ ಉಷ್ಣ ಹಾಗೂ ಬಾಯಾರಿಕೆಗಳನ್ನು ಶಮನಗೊಳಿಸಲು ಮತ್ತು ರಕ್ತಶುದ್ಧಿಗಾಗಿ ಹಾಗೂ ಜ್ವರ, ಚರ್ಮರೋಗ, ಸಾಮಾನ್ಯವಾಗಿ ರಕ್ತ ಹಾಗೂ ಪಿತ್ತಜವಿಕಾರಗಳಲ್ಲಿ ಉಪಯೋಗಿಸುತ್ತಾರೆ. ಇದನ್ನು ಮುಖಕಾಂತಿಯನ್ನು ವರ್ಧಿಸಲು ಸಹ ಬಳಸಲಾಗುತ್ತದೆ.
  • ಶಿಶುಗಳ ಮೈಬೆವರುವಿಕೆ, ಮೈಮೇಲೆ ಬೀಳುವ ಕಜ್ಜು, ತುರಿಕೆ, ಬೊಕ್ಕೆ ಇತ್ಯಾದಿಗಳಲ್ಲಿ ರಕ್ತಚಂದನ ಮರದ ತಿರುಳನ್ನು ನೀರಿನಲ್ಲಿ ತೇಯ್ದು ಲೇಪನ ಮಾಡುವುದು. ಇದನ್ನು ಈ ರೀತಿಯಾಗಿ ಮಾಡುವುದರಿಂದ ಚರ್ಮದ ಆರೋಗ್ಯ ಮತ್ತು ಕಾಂತಿ ಹೆಚ್ಚುವುದು.
  • ವಿವಿಧ ಔಷಧೀಯ ಹಾಗೂ ಆಹಾರ ಉಪಯೋಗಿ ಪಾನೀಯಗಳ ಉತ್ಪಾದನೆಯಲ್ಲಿ ರಕ್ತಚಂದನವನ್ನು ಸುವಾಸನೆಗಾಗಿ ಬಳಸಲಾಗುತ್ತದೆ.[]

ಸಂರಕ್ಷಣೆ ಸ್ಥಿತಿ

[ಬದಲಾಯಿಸಿ]

ದಕ್ಷಿಣ ಭಾರತದಲ್ಲಿ ಅದನ್ನು ಹೆಚ್ಚಾಗಿ ಬಳಸುತ್ತಿರುವುದರಿಂದ ಐಯುಸಿಎನ್ ಸಂಸ್ಥೆಯು ರಕ್ತಚಂದನವನ್ನು ನಶಿಸಿ ಹೋಗುತ್ತಿರುವ ಪ್ರಭೇದವಾಗಿ ಪಟ್ಟಿಮಾಡಿದೆ.

ಛಾಯಾಂಕಣ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. ೧.೦ ೧.೧ Ahmedullah, M. (2021). "Pterocarpus santalinus". IUCN Red List of Threatened Species. 2021: e.T32104A187622484. doi:10.2305/IUCN.UK.2021-1.RLTS.T32104A187622484.en. Retrieved 13 November 2021.
  2. "The Plant List: A Working List of All Plant Species". Theplantlist.org. Archived from the original on 20 ಜನವರಿ 2022. Retrieved 30 September 2014.
  3. "ಆರ್ಕೈವ್ ನಕಲು". Archived from the original on 2020-09-29. Retrieved 2018-08-16.
  4. "ಆರ್ಕೈವ್ ನಕಲು". Archived from the original on 2017-09-29. Retrieved 2018-08-16.
  5. "ILDIS LegumeWeb (version 10)". Ildis.org. Retrieved 25 March 2022.
  6. http://vikaspedia.in/agriculture/crop-production/package-of-practices/medicinal-and-aromatic-plants/pterocarpus-santalinus
  7. https://www.webmd.com/vitamins/ai/ingredientmono-383/red-sandalwood
  8. https://www.researchgate.net/publication/259005803_Medicinal_uses_of_Hildegardia_populifolia_and_Pterocarpus_santalinus_Red_listed_and_endemic_taxa_in_Andhra_Pradesh



ಹೊರಗಿನ ಕೊಂಡಿಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: