ವಿಷಯಕ್ಕೆ ಹೋಗು

ಕರ್ನಾಟಕದಲ್ಲಿ ಶಿಕ್ಷಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕರ್ನಾಟಕದಲ್ಲಿ ಶಿಕ್ಷಣ: ಭಾರತಸಂವಿಧಾನದ ಪ್ರಕಾರ ಶಿಕ್ಷಣ ಮುಖ್ಯವಾಗಿ ರಾಜ್ಯ ಸರ್ಕಾರಗಳಿಗೆ ಸೇರಿದ ವಿಷಯ. ವಿವಿಧ ರಾಜ್ಯಗಳಲ್ಲಿಯ ಉಚ್ಚ ಶಿಕ್ಷಣ ಮತ್ತು ಸಂಶೋಧನೆಗಳ ಮಟ್ಟವನ್ನು ನಿರ್ಧರಿಸುವುದೂ ಅವನ್ನು ಕ್ರೋಡೀಕರಿಸುವುದೂ ಕೇಂದ್ರ ಸರ್ಕಾರದ ಹೊಣೆ. ೧೯ನೆಯ ಶತಮಾನದಲ್ಲಿ ಇಂಗ್ಲೆಂಡಿನ ಶಿಕ್ಷಣ ವ್ಯವಸ್ಥೆಯ ಮಾದರಿಯಲ್ಲಿ ಭಾರತದಲ್ಲಿ ಸ್ಥಾಪಿತವಾದ ವ್ಯವಸ್ಥೆಯನ್ನೇ ಕರ್ಣಾಟಕದಲ್ಲೂ ಕಾಣಬಹುದಾದರೂ ಇದರಲ್ಲಿ ಕರ್ಣಾಟಕಕ್ಕೆ ವಿಶಿಷ್ಟವಾದ ಕೆಲವು ಲಕ್ಷಣಗಳನ್ನು ಕಾಣಬಹುದಾಗಿದೆ. ಸುಮಾರು ಎರಡು ಸಾವಿರ ವರ್ಷಗಳಿಂದ ಕರ್ಣಾಟಕದಲ್ಲಿ ಬೆಳೆದು ಬಂದ ಶಿಕ್ಷಣಾಪರಂಪರೆಯೊಂದು ಇದಕ್ಕೆ ದತ್ತವಾಗಿದೆ. ಇಂದಿಗೂ ಅಲ್ಲಲ್ಲಿ ಉಳಿದಿರುವ ಹಳೆಯ ಪದ್ಧತಿಯ ಕೆಲವು ಅಂಶಗಳಿಂದ ಕರ್ಣಾಟಕದ ಪ್ರಾಚೀನ ಮತ್ತು ಮಧ್ಯಯುಗಗಳ ಶಿಕ್ಷಣ ಇತಿಹಾಸವನ್ನು ಸ್ಥೂಲವಾಗಿ ರೂಪಿಸಬಹುದಾಗಿದೆ. ಪ್ರಾಚೀನ ಕಾಲ, ಮಧ್ಯಯುಗ ಮತ್ತು ಆಧುನಿಕ ಯುಗಗಳಲ್ಲಿ ಕರ್ಣಾಟಕದಲ್ಲಿ ಶಿಕ್ಷಣ ಪದ್ಧತಿ ರೂಪುಗೊಂಡ ಬಗೆಯನ್ನೂ ಕರ್ನಾಟಕಕ್ಕೆ ಸಂಬಂಧಿಸಿದಂತೆ ಶಿಕ್ಷಣದ ಮುಖ್ಯ ಅಂಕಿಅಂಶಗಳನ್ನೂ ಪ್ರಕೃತ ಲೇಖನದಲ್ಲಿ ಕೊಡಲಾಗಿದೆ.

ಪ್ರಾಚೀನ ಕರ್ನಾಟಕದಲ್ಲಿ

[ಬದಲಾಯಿಸಿ]

ಕರ್ನಾಟಕದ ಜನಜೀವನ ಹಲವು ಕ್ಷೇತ್ರಗಳಲ್ಲಿ ವಿಶಿಷ್ಟವಾದದ್ದಾದರೂ ಅದರ ಶಿಕ್ಷಣಪದ್ಧತಿ ಅಖಂಡ ಭಾರತದ ಶಿಕ್ಷಣ ಪ್ರವಾಹದೊಡನೆ ಬೆಳೆದು ಬಂದದೇ ಆಗಿದೆ. ಪ್ರ.ಶ.ಪೂ. ೩ನೆಯ ಶತಮಾನಕ್ಕೆ ಹಿಂದೆ ಇಲ್ಲಿಯ ಶಿಕ್ಷಣ ಹೇಗಿತ್ತೆಂಬುದನ್ನು ಊಹಿಸುವುದು ಕಷ್ಟ. ಪ್ರ.ಶ.ಪೂ. ೨ನೆಯ ಶತಮಾನದಿಂದ ಈಚಿನ ಕಾಲದಲ್ಲಿ ದೊರೆತಿರುವ ಹಲವು ಆಧಾರಗಳನ್ನು ಅನುಸರಿಸಿ ಕರ್ನಾಟಕದಲ್ಲಿ ಶಿಕ್ಷಣ ಹೇಗಿತ್ತು, ಹೇಗೆ ಬೆಳೆದು ಬಂತು ಎಂಬುದನ್ನು ವಿವರಿಸಲು ಇಲ್ಲಿ ಯತ್ನಿಸಿದೆ.

ಕರ್ನಾಟಕದ ರಾಜಕೀಯ ಇತಿಹಾಸ ಸಾತವಾಹನ ಅರಸರ ಕಾಲದಿಂದ ಆರಂಭವಾಗುವುದಾದರೂ ಅದಕ್ಕೂ ಹಿಂದಿನ ಕಾಲದಲ್ಲೂ ಇಲ್ಲಿ ವಿಶಿಷ್ಟವಾದ ಶಿಕ್ಷಣ ಪದ್ಧತಿಯೊಂದು ಬೆಳೆದಿತ್ತೆಂದು ಭಾವಿಸಬಹುದಾಗಿದೆ. ಚಂದ್ರಗುಪ್ತಮೌರ್ಯ ತನ್ನ ಗುರು ಭದ್ರಬಾಹುವಿನೊಂದಿಗೆ ಕ್ರಿ.ಪೂ. ೪ನೆಯ ಶತಮಾನದಲ್ಲಿ ಕರ್ನಾಟಕಕ್ಕೆ ಆಗಮಿಸಿದನೆಂದೂ ಅವರೊಂದಿಗೆ ಇಲ್ಲಿಗೆ ಜೈನಧರ್ಮವೂ ಜೈನ ಸಂಸ್ಕೃತಿ ಸಂಪ್ರದಾಯಗಳೂ ಆಗಮಿಸಿದುವೆಂದೂ ಹೇಳಲಾಗಿದೆ. ಆ ಧರ್ಮದ ತತ್ತ್ವಪ್ರಚಾರಕ್ಕಾಗಿ ಜೈನಬಸದಿಗಳು ಅಸ್ತಿತ್ವಕ್ಕೆ ಬಂದುವು. ಅಂದಿಗಾಗಲೆ ಕರ್ನಾಟಕದಲ್ಲಿ ಅನುಷ್ಠಾನದಲ್ಲಿದ್ದಿರಬಹುದಾದ ಹಿಂದೂ (ವೈದಿಕ) ವ್ರತಾಚಾರಗಳ ಮೇಲೆ ಅವು ನೂತನ ಪ್ರಭಾವ ಬೀರಿದುವು. ಮೋಕ್ಷಸಾಧನೆಗೆ ಭಕ್ತಿ, ನಂಬಿಕೆ, ಆರಾಧನೆಗಳ ಜೊತೆಗೆ ಸುಜ್ಞಾನದ ಆವಶ್ಯಕತೆಯನ್ನು ಎತ್ತಿ ಹಿಡಿದು ಅದರ ಸಾಧನೆಗೆ ಶಿಕ್ಷಣದ ಅನಿವಾರ್ಯತೆಯ ಕಡೆ ಗಮನ ಕೊಡುವಂತಾಯಿತು. ಧಾರ್ಮಿಕ ಮತ್ತು ಮತೀಯ ಕೇಂದ್ರಗಳಲ್ಲಿ ಶಿಕ್ಷಣ ಸೇವಾಕಾರ್ಯಕ್ಕೆ ಈ ಮೂಲಕ ಒಂದು ಮತೀಯ ಅನುಮೋದನೆ ದೊರಕಿತು. ಆದರೆ ಶಿಕ್ಷಣ ಕೇವಲ ವೈಯಕ್ತಿಕ ಕಾರ್ಯವಾಗಿತ್ತೇ ಹೊರತು ಅದರ ವಿಶಿಷ್ಟ ಹೊಣೆಗಾರಿಕೆಯ ನಿರ್ವಹಣೆಗೆ ಸಂಘಟಿತ ಸಂಸ್ಥೆಗಳ ಸ್ಥಾಪನೆಯಾಗಲಿಲ್ಲ. ಅನಂತರ ಚಂದ್ರಗುಪ್ತ ಮೌರ್ಯನ ಮೊಮ್ಮಗನಾದ ಅಶೋಕ ಬೌದ್ಧಧರ್ಮವನ್ನವಲಂಬಿಸಿ ಕರ್ನಾಟಕದಲ್ಲಿ ಅದರ ಪ್ರಚಾರಕ್ಕಾಗಿ ಶಾಸನಗಳನ್ನು ಸ್ಥಾಪಿಸಿದನಷ್ಟೆ. ಬ್ರಾಹ್ಮೀ ಲಿಪಿಯಲ್ಲಿ ಬರೆದ ಪ್ರಾಕೃತ ಭಾಷೆಯ ಈ ಶಾಸನಗಳು ರಾಯಚೂರು ಜಿಲ್ಲೆಕೊಪ್ಪಳ, ಮಸ್ಕಿ, ಬ್ರಹ್ಮಗಿರಿ, ಸಿದ್ದಾಪುರ ಮುಂತಾದೆಡೆ ದೊರಕಿವೆ. ಆಗ ಪ್ರಚಾರದಲ್ಲಿದ್ದ ಸಂಸ್ಕೃತದ ಬದಲು ದೇಶೀಯ ಭಾಷೆಯ ಪ್ರಚಾರಕ್ಕೆ ಇವು ನಾಂದಿಯಾದುವು. ಜೊತೆಗೆ ಅವುಗಳನ್ನು ಅರಿಯಬೇಕಾದರೆ ಸಾಮಾನ್ಯ ಶಿಕ್ಷಣದ ಅಗತ್ಯವೂ ಕಂಡುಬಂದು ಅದರ ಪ್ರಚಾರಕ್ಕೆ ನಿರ್ದಿಷ್ಟ ಸಂಸ್ಥೆಗಳು ಅಗತ್ಯವೆನಿಸಿದುವು.

ಅಂದಿಗಾಗಲೆ ಬೌದ್ಧಧರ್ಮ ದಕ್ಷಿಣದಲ್ಲಿ ಪ್ರಚಾರದಲ್ಲಿತ್ತು. ಅದರ ಪ್ರಚಾರಕ್ಕಾಗಿ ಏರ್ಪಟ್ಟಿದ್ದ ಬೌದ್ಧಭಿಕ್ಷುಗಳ ಶಿಕ್ಷಣಕ್ಕಾಗಿ ಉತ್ತರದಲ್ಲಿ ಮಠಗಳು ಸಂಘಟಿತಸಂಸ್ಥೆಗಳು ರೂಪದಲ್ಲಿ ಆರಂಭವಾಗಿದ್ದುವು. ವೈದಿಕ ಧರ್ಮ ಶಿಕ್ಷಣದಲ್ಲಿ ಈ ಬಗೆಯ ಸಂಘಟನೆ ಇರಲಿಲ್ಲ. ಅದು ವೈಯಕ್ತಿಕವಾಗಿ ಗುರುಕುಲ, ಆಶ್ರಮ ಮುಂತಾದೆಡೆಗಳಲ್ಲಿ ನಡೆಯುತ್ತಿತ್ತು. ಆದರೆ ಬೌದ್ಧರು ಶಿಕ್ಷಣ ಕೇವಲ ಕೆಲವರ ಸೊತ್ತಲ್ಲವೆಂಬ ತತ್ತ್ವವನ್ನು ಎತ್ತಿ ಹಿಡಿದು, ಬಡವರು ಬಲ್ಲಿದರು, ಹೆಂಗಸರು, ಗಂಡಸರು, ಉತ್ತಮರು, ಅಧಮರು ಎಲ್ಲರಿಗೂ ಅದು ಸಮಾನವೆಂದು ಶಿಕ್ಷಣದಲ್ಲಿ ಲೋಕಸತ್ತೆಯನ್ನು ತಂದರು. ಅದಕ್ಕಾಗಿ ವಿಹಾರಗಳನ್ನೂ ಮಠಗಳನ್ನೂ ಸ್ಥಾಪಿಸಿದರು. ಅಲ್ಲಿ ಧಾರ್ಮಿಕ ಶಿಕ್ಷಣದಂತೆ ಲೌಕಿಕ ಶಿಕ್ಷಣವನ್ನೂ ನೀಡುತ್ತಿದ್ದರು. ಅವು ಆ ರೀತಿಯಲ್ಲಿ ಕೆಲಸ ಮಾಡುತ್ತಿರುವುದು ಅಲ್ಲಲ್ಲಿ ಇಂದಿಗೂ ಉಳಿದುಕೊಂಡು ಬಂದಿದೆ. ಪ್ರ.ಶ.೧ನೆಯ ಶತಮಾನದ ವೇಳೆಗೆ ದೇಶಾದ್ಯಂತ ಅಲ್ಲಲ್ಲಿ ಅವು ಆರಂಭವಾಗಿದ್ದುವು. ವಿದ್ಯಾದಾನ ಮಹಾ ಪುಣ್ಯಕಾರ್ಯವೆಂಬ ದೃಷ್ಟಿ ಬೆಳೆದು ಬಂದಿತ್ತು. ರಾಜರೂ ಧನಿಕರೂ ವಿಹಾರಗಳನ್ನು ಸ್ಥಾಪಿಸಿ ಅವಕ್ಕೆ ದತ್ತಿ ಕೊಡುವ ಪದ್ಧತಿ ಆರಂಭವಾಗಿತ್ತು. ಕ್ರಿ.ಶ.೩ನೆಯ ಶತಮಾನದ ಬನವಾಸಿಯ ಒಂದು ಶಾಸನದಂತೆ ಶಿವಸ್ಕಂದ ನಾಗಶ್ರೀ ಎಂಬ ಚುಟು ರಾಜಕುಮಾರಿ ವಿದ್ಯಾದಾನಕ್ಕಾಗಿ ಒಂದು ಬೌದ್ಧ ವಿಹಾರವನ್ನು ನಿರ್ಮಿಸಿದ್ದಳು. ಇದೇ ನಮಗೆ ದೊರಕುವ ಬೌದ್ಧವಿಹಾರದ ಮೊಟ್ಟ ಮೊದಲ ಪರಿಚಯ. ಅಂದಿಗಾಗಲೆ ದೇಶದಲ್ಲಿ ಬೆಳೆಯುತ್ತಿದ್ದ ವಿಹಾರಗಳ ಸಂಖ್ಯೆ ೭ನೆಯ ಶತಮಾನದ ಎರಡನೆಯ ಪುಲಕೇಶಿಯ ಆಳ್ವಿಕೆಯ ಹೊತ್ತಿಗೆ ನೂರಕ್ಕೆ ಏರಿತ್ತು. ಅಲ್ಲಿ ನೂರಾರು ಯತಿಗಳು ಇದ್ದರೆಂಬುದು ಯುವಾನ್ ಚಾಂಗನ ವರದಿಯಿಂದ ತಿಳಿದುಬರುತ್ತದೆ. ಜನಸಾಮಾನ್ಯರು ಪಾಂಡಿತ್ಯಪ್ರಿಯರೆಂಬುದನ್ನೂ ಅದೇ ವರದಿ ಸೂಚಿಸುತ್ತದೆ. ಇವೆರಡರ ಆಧಾರದ ಮೇಲೆ, ವಿಹಾರಗಳು ಸಂನ್ಯಾಸಿಗಳಿಗೆ ಧಾರ್ಮಿಕ ಶಿಕ್ಷಣವೀಯುವುದರ ಜೊತೆಗೆ ಮಠಗಳೂ ಜನರಿಗೆ ಪ್ರಾಥಮಿಕ ಮತ್ತು ಉನ್ನತ ಲೌಕಿಕ ಶಿಕ್ಷಣವನ್ನು ದೊರಕಿಸುತ್ತಿದ್ದುವು ಎಂದು ತಿಳಿಯಬಹುದು. ಏಳು ವರ್ಷ ವಯಸ್ಸಿನ ಮಕ್ಕಳು ಅಲ್ಲಿಗೆ ಸೇರುತ್ತಿದ್ದರು. ಅಲ್ಲಿ ಅಕ್ಷರಾಭ್ಯಾಸ ನಡೆದು ವ್ಯಾಕರಣ, ಕುಶಲವೃತ್ತಿ, ಯಂತ್ರೋಪಕರಣ ಕಲೆ, ಜ್ಯೋತಿಷ್ಯ, ವೈದ್ಯಶಾಸ್ತ್ರ, ಮಂತ್ರಪ್ರಯೋಗ, ತರ್ಕಶಾಸ್ತ್ರ, ಆತ್ಮವಿಜ್ಞಾನ ಇವನ್ನು ಬೋಧಿಸುತ್ತಿದ್ದರು. ಉನ್ನತ ಶಿಕ್ಷಣ ಪಡೆಯತಕ್ಕವರು ೨೦, ೨೨, ೨೪ನೆಯ ವರ್ಷಗಳ ತನಕ ಶಿಕ್ಷಣ ಪಡೆಯುತ್ತಿದ್ದರು.

ಮೌರ್ಯರ ಕಾಲದಿಂದ ರಾಷ್ಟ್ರಕೂಟರ ಕಾಲದವರೆಗೆ ಎಂದರೆ ೮-೯ನೆಯ ಶತಮಾನಗಳ ತನಕ ವೈದಿಕ ಮತ್ತು ಜೈನ ಶಿಕ್ಷಣಗಳೊಡನೆ ಬೌದ್ಧ ಶಿಕ್ಷಣವೂ ಪ್ರಚಾರದಲ್ಲಿತ್ತು. ಬಾದಾಮಿ ಚಳುಕ್ಯರ ಆಳ್ವಿಕೆಯ ಕೊನೆಯ ವೇಳೆಗೆ ಬೌದ್ಧ ಶಿಕ್ಷಣ ವ್ಯವಸ್ಥೆ ಅವನತಿಗಿಳಿಯುತ್ತ ಬಂದಂತೆ ಕಾಣುತ್ತದೆ. ಕರ್ನಾಟಕದಲ್ಲಿ ಅಸ್ತಿತ್ವಕ್ಕೆ ಬಂದ ಕೊನೆಯ ಬೌದ್ಧವಿಹಾರಗಳಲ್ಲಿ ೧೦೯೫ರ ಸುಮಾರಿನಲ್ಲಿ ಸಂಗಮದ ಶೆಟ್ಟಿ ಧಾರವಾಡ ಜಿಲ್ಲೆಯ ಡಂಬಳದಲ್ಲಿ (ಧರ್ಮವೊಳಲ್) ಕಟ್ಟಿಸಿದ್ದೂ ಒಂದೆಂದು ಹೇಳುತ್ತಾರೆ. ಶಿವಮೊಗ್ಗ ಜಿಲ್ಲೆಯ ಬಳ್ಳಿಗಾಮೆಯಲ್ಲಿ ೧೨ನೆಯ ಶತಮಾನದವರೆಗೂ ಬೌದ್ಧಧರ್ಮವನ್ನು ಅಧ್ಯಯನ ವಿಷಯವನ್ನಾಗಿ ಮಾಡಿಕೊಳ್ಳಲಾಗಿತ್ತು.

ಪ್ರಾಥಮಿಕ ಶಿಕ್ಷಣ

[ಬದಲಾಯಿಸಿ]

ಪ್ರಾಚೀನ ಭಾರತದ ಶಿಕ್ಷಣಕ್ಕೆ ಸಂಬಂಧಿಸಿದಂತೆ ದೊರೆತಿರುವ ಸಾಕ್ಷ್ಯಾಧಾರಗಳೆಲ್ಲ ಬಹುಮಟ್ಟಿಗೆ ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದವು. ಪ್ರಾಥಮಿಕ ಶಿಕ್ಷಣಕ್ಕಿದ್ದ ಸೌಲಭ್ಯಗಳನ್ನು ಈಚೆಗೆ ಇಲ್ಲಿಯ ದೇಶೀಯ ಶಿಕ್ಷಣಪದ್ಧತಿಯಲ್ಲಿದ್ದ ವ್ಯವಸ್ಥೆಯ ಆಧಾರದ ಮೇಲೆ ಊಹಿಸಿಕೊಳ್ಳಬೇಕಾಗಿದೆ. ರಾಜಮಹಾರಾಜರೂ ಇತರ ಧನಿಕರೂ ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ಪಂಡಿತರನ್ನು ನೇಮಿಸಿಕೊಳ್ಳುತ್ತಿದ್ದರೆನ್ನಬಹುದು; ಅಂತೆಯೆ ಕೆಲವು ವರ್ಣೀಯರಿಗೆ ಮತೀಯವಾದ ಸೌಲಭ್ಯಗಳು ಇದ್ದಿರಬಹುದು. ಮಿಕ್ಕ ಬಹುತೇಕ ಮಂದಿಗೆ ಪ್ರಾಥಮಿಕ ಶಿಕ್ಷಣದ ಸೌಲಭ್ಯ ಬಹುಶಃ ಇದ್ದಿರಲಾರದು. ಊರಿನ ದೇವಾಲಯದಲ್ಲಿ, ಚಾವಡಿಯಲ್ಲಿ, ಧನಿಕರ ಪಡಸಾಲೆಗಳಲ್ಲಿ ಮಕ್ಕಳಿಗಾಗಿ ಅಕ್ಷರಾಭ್ಯಾಸದ ತರಗತಿಗಳು ನಡೆಯುತ್ತಿದ್ದಿರಬಹುದು. ಕ್ರಿ.ಶ. ದ ಆರಂಭದ ಹೊತ್ತಿಗೆ ಬೌದ್ಧಧರ್ಮದ ಪ್ರಚಾರದ ಫಲವಾಗಿ ಕನ್ನಡ ಅಕ್ಷರಾಭ್ಯಾಸಕ್ಕೆ ಪ್ರೋತ್ಸಾಹ ಬಂದಿರಬೇಕು. ಅದನ್ನು ಬಾಲಶಿಕ್ಷೆ, ಕನ್ನಡ ಶಿಕ್ಷೆ ಎನ್ನುತ್ತಿದ್ದರು. ಊರಿನಲ್ಲಿ ಪುರಾಣ ಮಾಡುತ್ತಿದ್ದ ಭಟ್ಟರು ಅನೇಕ ವೇಳೆ ಆ ಕಾರ್ಯಕ್ಕೆ ನೇಮಕವಾಗುತ್ತಿದ್ದರು. ಅದಕ್ಕಾಗಿ ಅವರಿಗೆ ಧನ, ಧಾನ್ಯ, ಭೂಮಿ ಅಥವಾ ಇತರ ರೂಪದ ಸಂಭಾವನೆ ದೊರಕುತ್ತಿದ್ದುವೆಂಬುದು ಅನೇಕ ಶಾಸನಗಳಿಂದ ಗೊತ್ತಾಗುತ್ತದೆ. ಅವರನ್ನು ಪಂಡಿತರೆಂದೂ ಕರೆಯುತ್ತಿದ್ದರು. ನರಸಿಂಹರಾಜಪುರದ ಪಂಡಿತರೊಬ್ಬರಿಗೆ ೧೨ ಗದ್ಯಾಣಗಳೂ ತಾಳಗುದದ ಪಂಡಿತರಿಗೆ, ೭ ಗದ್ಯಾಣಗಳೂ ಸಿಕ್ಕುತ್ತಿದ್ದುವೆಂದು ಶಾಸನದಲ್ಲಿ ಉಲ್ಲೇಖಗಳಿವೆ. ಉಚ್ಚಶಿಕ್ಷಣಕ್ಕಾಗಿ ಏರ್ಪಟ್ಟಿದ್ದ ಅಗ್ರಹಾರ ಬ್ರಹ್ಮಪುರಿಗಳಲ್ಲೂ ಪ್ರಾಥಮಿಕಶಿಕ್ಷಣಕ್ಕೆ ಅವಕಾಶವಿತ್ತು. ಅಲ್ಲಿ ಉಚ್ಚಶಿಕ್ಷಣದ ಪಂಡಿತರಿಗೆ ಹೆಚ್ಚು ಸಂಭಾವನೆಯೂ ಪ್ರಾಥಮಿಕ ಶಿಕ್ಷಣದ ಪಂಡಿತರಿಗೆ ಕಡಿಮೆ ಸಂಭಾವನೆಯೂ ಬರುತ್ತಿದ್ದುವೆಂದು ರಾಯಲ್ ಏಷ್ಯಾಟಿಕ್ ಸೊಸೈಟಿಯ ಮುಂಬಯಿ ಶಾಖೆಯ ಪತ್ರಿಕೆಯ ೯ನೆಯ ಸಂಪುಟದಲ್ಲಿ ಹೇಳಲಾಗಿದೆ. ಅಲ್ಲಿ ಕಲಿಸುತ್ತಿದ್ದುದು ಮುಖ್ಯವಾಗಿ ಅಕ್ಷರಾಭ್ಯಾಸ, ಕಾಗುಣಿತ, ಕನ್ನಡ ಭಾಷೆಯ ಓದು, ಬರೆಹ, ಹ್ಯುಯೆನ್ ತ್ಸಾಂಗನ ಕಾಲಕ್ಕೆ ಆಗಲೆ ಕನ್ನಡದಲ್ಲಿ ಕಾವ್ಯಗಳೂ ಬಂದಿರಬೇಕು. ಅವನ್ನು ಓದಿ ಅರ್ಥಮಾಡಿಕೊಡುವ ಕಾರ್ಯ ಪ್ರಾಥಮಿಕ ತರಗತಿಯ ಅಂತಿಮ ಘಟ್ಟದ ವೇಳೆಗೆ ನಡೆಯುತ್ತಿದ್ದಿರಬೇಕು. ಅಲ್ಲಿಯ ಬೋಧನ ಕ್ರಮ ಇತ್ತೀಚಿನ ವರೆಗೂ ಹಳ್ಳಿಯ ಕೂಲಿಮಠಗಳಲ್ಲಿ ಇದ್ದಂತೆಯೇ ಇದ್ದಿರಬಹುದು. ಮಕ್ಕಳು ಬೆರಳಿನಿಂದ ಮರಳಿನ ಮೇಲೆ ಅಕ್ಷರ ಬರೆದು ಅದನ್ನು ಗಟ್ಟಿಯಾಗಿ ಪಠಿಸುತ್ತ ಕಲಿಯುತ್ತಿದ್ದರು. ಮಗ್ಗಿಯನ್ನು ಸಾಮೂಹಿಕವಾಗಿ ಹೇಳಿಕೊಂಡು ಅಭ್ಯಸಿಸುತ್ತಿದ್ದರು. ಪಾಠವನ್ನು ಅಧ್ಯಾಪಕರು ಹೇಳಿಕೊಡುವಾಗ ಮಕ್ಕಳು ಅದರಂತೆ ಉಚ್ಚರಿಸುತ್ತಿದ್ದರು. ಮಾರನೆಯ ದಿನ ಅದನ್ನು ಮನೆಯಲ್ಲಿ ಓದಿಕೊಂಡು ಬಂದು ಉಪಾಧ್ಯಾಯರ ಮುಂದೆ ಒಪ್ಪಿಸುತ್ತಿದ್ದರು.

ಉನ್ನತ ಶಿಕ್ಷಣ

[ಬದಲಾಯಿಸಿ]

ಶಾಲೆ ಎಂಬ ಪದವನ್ನು ಪ್ರಾಥಮಿಕ ಮತ್ತು ಉನ್ನತಶಿಕ್ಷಣ ಸಂಸ್ಥೆಗಳೆರಡಕ್ಕೂ ಬಳಸುತ್ತಿದ್ದುದು ಕಂಡುಬರುತ್ತದೆ. ಘಟಿಕಗಳು, ಅಗ್ರಹಾರಗಳು, ಬ್ರಹ್ಮಪುರಿಗಳು, ಮಠಗಳು ಮತ್ತು ದೇಗುಲದ ವಿದ್ಯಾಲಯಗಳು ಉನ್ನತಶಿಕ್ಷಣವೀಯುತ್ತಿದ್ದ ಇತರ ಸಂಸ್ಥೆಗಳಾಗಿದ್ದುವು. ಕರ್ಣಾಟಕದ ಬೇರೆಬೇರೆ ಭಾಗಗಳಲ್ಲಿ ಇವು ಬೇರೆಬೇರೆ ಕಾಲಗಳಲ್ಲಿ ಆರಂಭವಾಗಿ ಬೇರೆಬೇರೆ ಕಾಲಾವಧಿಯ ವರೆಗೆ ಅಸ್ತಿತ್ವದಲ್ಲಿದ್ದ ಸಂಗತಿ ತಿಳಿದುಬರುತ್ತದೆ. ಅವೆಲ್ಲ ಬಹುಮಟ್ಟಿಗೆ ಖಾಸಗಿ ಸಂಸ್ಥೆಗಳಾಗಿದ್ದು, ಆಳರಸರಿಂದಲೂ ದಾನಿಗಳಿಂದಲೂ ದೊರೆಯುತ್ತಿದ್ದ ದತ್ತಿ, ಪುದುವಟ್ಟು, ಕೊಡುಗೆ ಇತ್ಯಾದಿಗಳ ಬೆಂಬಲದಿಂದ ನಡೆದುಕೊಂಡು ಬರುತ್ತಿದ್ದುವು. ಪ್ರ.ಶ.೪೦೦ ರಿಂದ ೧೨೦೦ರ ತನಕ ಇಡೀ ಭರತಖಂಡದಲ್ಲೆ ಬೌದ್ಧಮಠಗಳೂ ಹಿಂದೂ ದೇವಾಲಯಗಳೂ ಎಲ್ಲೆಲ್ಲೂ ಆರಂಭವಾಗುತ್ತಿದ್ದವು. ೫೦೦ ರಿಂದ ಅವುಗಳಲ್ಲಿ ಶೈಕ್ಷಣಿಕ ಕಾರ್ಯಕ್ರಮ ದಿನಚರಿಯಾಗುತ್ತ ಬಂತು. ಆದರೆ ಹಿಂದೂ ದೇವಾಲಯಗಳಲ್ಲಿ ಉನ್ನತ ಶಿಕ್ಷಣದ ವ್ಯವಸ್ಥೆಯ ಬಗ್ಗೆ ಸಾಕ್ಷ್ಯ ದೊರೆತಿರುವುದು ೧೦ನೆಯ ಶತಮಾನದ ಸುಮಾರಿನದು. ಬಹುಶಃ ಅದಕ್ಕೂ ಹಿಂದೆ ಅವು ಆ ಕಾರ್ಯ ಮಾಡುತ್ತಿದ್ದಿರಬಹುದು. ಅವುಗಳಲ್ಲಿ ಕೆಲವನ್ನು ನಿದರ್ಶನಗಳಾಗಿ ಆಯ್ದುಕೊಂಡು ಪರಿಶೀಲಿಸುವುದರಿಂದ ಅವು ನೀಡುತ್ತಿದ್ದ ಶಿಕ್ಷಣದ ಸ್ವರೂಪವನ್ನು ಪರಿಚಯ ಮಾಡಿಕೊಳ್ಳಬಹುದು. ೧. ಘಟಿಕಗಳು: ಇವು ಸಂಖ್ಯೆಯಲ್ಲಿ ವಿರಳವಾಗಿದ್ದರೂ ಕದಂಬರ ಕಾಲದಿಂದಲೂ ಇವುಗಳ ಉಲ್ಲೇಖವುಂಟು. ಕದಂಬವಂಶದ ಮೂಲಪುರಷನಾದ ಮಯೂರಶರ್ಮ ಕಂಚಿಯ ಒಂದು ಘಟಿಕದಲ್ಲಿ ಶಿಕ್ಷಣ ಪಡೆಯಲು ಯತ್ನಿಸಿದ್ದ. ಕಂಚಿಯ ಘಟಿಕ ಉತ್ತರದಲ್ಲಿ ಈ ಕಾಲದಲ್ಲಿ ಅಸ್ತಿತ್ವದಲ್ಲಿದ್ದ ನಲಂದ ವಿಶ್ವವಿದ್ಯಾಲಯದಂತಿದ್ದಿರಬಹುದು. ಅದು ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಅಗ್ರಸ್ಥಾನ ಪಡೆದಿತ್ತು. ಮಹಾಜನರೆಂಬ ಸಂರಕ್ಷಕರ ಮಂಡಲಿ ಅದರ ಕಾರ್ಯನಿರ್ವಹಿಸುತ್ತಿತ್ತು. ಸಾಮಾನ್ಯವಾಗಿ ಅವನ್ನು ದೇವಸ್ಥಾನಗಳಲ್ಲಿ ನಡೆಸುತ್ತಿದ್ದರು. ಕರ್ಣಾಟಕದ ಘಟಿಕಗಳಲ್ಲಿ ಪ್ರಸಿದ್ಧವಾದದ್ದು ಗುಲ್ಬರ್ಗಾದ ಬಳಿಯ ನಾಗೈಯಲ್ಲಿತ್ತು. ಅಲ್ಲಿ ಒಂದು ಆವರಣದಲ್ಲಿ ೨೫೭ ವಿದ್ಯಾರ್ಥಿಗಳೂ ಮತ್ತೊಂದರಲ್ಲಿ ೪೦೦ ವಿದ್ಯಾರ್ಥಿಗಳೂ ಇದ್ದರು. ಅಲ್ಲಿ ವೇಳಾನಿಗದಿಕಾರರೂ ಕಾವಲುಗಾರರೂ ಇದ್ದರು. ೨೦೦ ಮಂದಿ ವೇದಗಳನ್ನೂ ೫೨ ಮಂದಿ ಶಾಸ್ತ್ರಗಳನ್ನೂ ಅಧ್ಯಯನ ಮಾಡುತ್ತಿದ್ದರು. ವೇದಪಾಠಕ್ಕೆ ಮೂವರೂ ಶಾಸ್ತ್ರಪಾಠಕ್ಕೆ ಮೂವರೂ ಪಂಡಿತರಿದ್ದರು. ಅವರು ಭಟ್ಟದರ್ಶನ, ನ್ಯಾಸ (ವ್ಯಾಕರಣ) ಮತ್ತು ಪ್ರಭಾಕರಗಳನ್ನು ಬೋಧಿಸುತ್ತಿದ್ದರು. ಅಲ್ಲಿ ಒಂದು ದೊಡ್ಡ ಗ್ರಂಥಾಲಯವೂ ಅದನ್ನು ನೋಡಿಕೊಳ್ಳಲು ಆರು ಜನ ಅಧಿಕಾರಿಗಳೂ (ಸರಸ್ವತಿ ಭಂಡಾರಿ) ಇದ್ದರು. ಆ ಘಟಿಕಕ್ಕೆ ಸಂಬಂಧಿಸಿದ ದೇವಾಲಯವೊಂದನ್ನು ನೋಡಿ ಕೊಳ್ಳುವುದಕ್ಕೂ ಅಧ್ಯಾಪಕರ ಮತ್ತು ಇತರರ ರಕ್ಷಣೆಗೂ ಪ್ರತ್ಯೇಕ ಪ್ರತ್ಯೇಕವಾಗಿ ಭೂ ಕೊಡುಗೆಯಿತ್ತು. ಹೀಗೆಯೆ ಇತರ ಕಡೆಗಳಲ್ಲೂ ಘಟಿಕಗಳಿದ್ದುವು. ಅವುಗಳಲ್ಲಿ ಕಡಿಯೂರ್, ಕುಕ್ಕೂರ್, ಹೆಂಜೇರು (ತುಮಕೂರು ಜಿಲ್ಲೆ) ಮೊರಿಗೆರೆ, ರಾಯಬಾಗ್- ಇವು ಮುಖ್ಯವಾದವು. ಘಟಿಕದಲ್ಲಿ ಶಿಕ್ಷಣವನ್ನು ಮುಗಿಸಿದವರಿಗೆ ಘಟಿಕ ಸಾಹಸ ಎಂಬ ಪದವಿ ಸಿಗುತ್ತಿತ್ತು. ಇದನ್ನು ಘನವಿದ್ವಾಂಸರಿಗೆ ಒಂದು ಗೌರವ ಪದವಿಯಾಗಿಯೂ ಕೊಡಲಾಗುತ್ತಿತ್ತು.

ಅಗ್ರಹಾರ

[ಬದಲಾಯಿಸಿ]

ಕರ್ನಾಟಕದ ಅಗ್ರಹಾರಗಳಲ್ಲಿ ಶಿವಮೊಗ್ಗದ ತಾಳಗುಂದದ ಅಗ್ರಹಾರ ಅತ್ಯಂತ ಪ್ರಾಚೀನವಾದ್ದು. ಇದನ್ನು ಮಯೂರಶರ್ಮನ ಪುರ್ವಿಕನಾದ ಮುಕ್ಕಣ್ಣ ಕದಂಬ ಸ್ಥಾಪಿಸಿದ. ಅವನು ಉತ್ತರದ ಅಹಿಚ್ಫತ್ರ ಎಂಬ ಸ್ಥಳದಿಂದ ೩೨ ಬ್ರಾಹ್ಮಣ ಕುಟುಂಬಗಳನ್ನು ಕರೆತಂದು ಅಲ್ಲಿ ನೆಲೆಸುವಂತೆ ಮಾಡಿದ. ಅವರು ವೇದ, ವೇದಾಂಗ, ಉಪಾಂಗ, ಮೀಮಾಂಸೆ, ತರ್ಕಪದ್ಧತಿ, ಸ್ಮೃತಿ, ಪುರಾಣ, ನಾಟಕ ಇತ್ಯಾದಿಗಳಲ್ಲಿ ಪರಿಣತರಾಗಿದ್ದರು (೧೦೯೧ರ ಶಾಸನ).

ಮೊದಲ ಕದಂಬರು ತಾಳಗುಂದದ ಸ್ಥಾಪನೆಗೆ ಹೆಸರಾಗಿದ್ದಂತೆ ಬಾದಾಮಿ ಚಳುಕ್ಯರು ಬಾದಾಮಿಯ ಅಗ್ರಹಾರಗಳನ್ನು ಸ್ಥಾಪಿಸಿದರು. ೬೯೯ರ ಒಂದು ಶಾಸನದಂತೆ ವಾತಾಪಿ ಅಥವಾ ಬಾದಾಮಿಯನ್ನು ಒಂದು ಅಧಿಷ್ಠಾನವೆಂದು ಹೆಸರಿಸಿದ್ದರೂ ಅದರ ವರ್ಣನೆಯಿಂದ ಅದೊಂದು ಅಗ್ರಹಾರವಾಗಿತ್ತೆಂಬುದು ಶ್ರುತಪಟ್ಟಿದೆ. ಅಲ್ಲಿ ಚತುರ್ದಶಶಾಸ್ತ್ರ ವಿದ್ಯೆಗಳಲ್ಲಿ ಪರಿಣತರಿದ್ದರು; ೨,೦೦೦ ಮಂದಿ ವಿದ್ವಾಂಸರಿದ್ದರು. ಅದು ಧಾರ್ಮಿಕ ಹಾಗೂ ವೈದಿಕ ಶಿಕ್ಷಣದ ಕೇಂದ್ರವಾಗಿತ್ತೆಂದು ಅದರ ಹೆಸರು ಸೂಚಿಸುವುದಾದರೂ ಅಲ್ಲಿ ಲೌಕಿಕ ವಿದ್ಯೆಗೂ ಪ್ರಾಶಸ್ತ್ಯವಿತ್ತು.

ಚಳುಕ್ಯರ ಮತ್ತೊಂದು ಅಗ್ರಹಾರ ಐಹೊಳೆಯಲ್ಲಿತ್ತು. ಸೋಮಯಾಜಿ ಎಂಬುವನು ಐಹೊಳೆಯ (ಆರ್ಯಪುರ) ೫೦೦ ಮಂದಿ ಚತುರ್ವೇದಿಗಳ ತಂಡಕ್ಕೆ ದತ್ತಿ ನೀಡಿರುವುದು ೮-೯ನೆಯ ಶತಮಾನದ ಶಾಸನವೊಂದರಲ್ಲಿ ಉಲ್ಲೇಖವಾಗಿದೆ. ಆ ಅಗ್ರಹಾರ ಅನಂತರವೂ ೨-೩ ಶತಮಾನಗಳ ತನಕ ಪ್ರಸಿದ್ಧಿ ಉಳಿಸಿಕೊಂಡುಬಂತೆಂದು ೧೧೯೧ರ ಶಾಸನದಿಂದ ತಿಳಿಯಬರುತ್ತದೆ.

ರಾಷ್ಟ್ರಕೂಟರ ಕಾಲದಲ್ಲಿ ಬಿಜಾಪುರ ಜಿಲ್ಲೆಯ ಸಾಲೊಟಗಿ ಪ್ರಮುಖ ಅಗ್ರಹಾರವೆನಿಸಿತ್ತು. ಇದನ್ನು ಕೆಲವು ಇತಿಹಾಸಕಾರರು ದೇಗುಲ ವಿದ್ಯಾಲಯ (ಟೆಂಪಲ್ ಕಾಲೇಜ್) ಎಂದೂ ಪರಿಗಣಿಸುತ್ತಾರೆ. ಇದರ ಹಿಂದಿನ ಹೆಸರು “ಪಾವಿಟ್ಟಿಗೆ”. ಇದರೊಡನೆ “ಶಾಲೆ” ಸೇರಿ ಅನಂತರ ಅವೆರಡರ ಹ್ರಸ್ವರೂಪವಾಗಿ “ಸಾಲೊಟಿಗೆ” ಪ್ರಚಾರಕ್ಕೆ ಬಂತು. ೩ನೆಯ ಕೃಷ್ಣರಾಜನ ಮುಖ್ಯಮಂತ್ರಿ ನಾರಾಯಣ ಅಲ್ಲಿ ೯೪೫ರಲ್ಲಿ ಭವ್ಯ ಮಂದಿರವೊಂದನ್ನು ಕಟ್ಟಿಸಿದ. ಅಲ್ಲಿ ವಿವಿಧಭಾಗಗಳಿಂದ ಆಗಮಿಸಿದ್ದ ವಿದ್ವಾಂಸರಿದ್ದರು. ಅವರ ರಕ್ಷಣೆಗಾಗಿ ಸಾಕಷ್ಟು ಭೂಮಿಕಾಣಿಗಳನ್ನು ಒದಗಿಸಲಾಗಿತ್ತು. ಅವರ ವಾಸಕ್ಕೆ ಗೃಹವನ್ನೂ ಅಗ್ರಹಾರದ ಕಾರ್ಯಕ್ರಮಗಳ ನಿರ್ವಹಣೆಗಾಗಿ ಭೂಮಿಯನ್ನೂ ಕೊಡುಗೆಯಾಗಿ ಅಲ್ಲಿನ ಅಧಿಕಾರಿಗಳು ಕೊಟ್ಟರು. ಈ ದಾನಗಳ ಮೇಲೆ ತೆರಿಗೆ ಎತ್ತುತ್ತಿರಲಿಲ್ಲ. ಗ್ರಾಮಸ್ಥರು ವಿದ್ವಾಂಸರಿಗೆ ಮದುವೆ, ಮುಂಜಿ, ಚೌಲ ಮುಂತಾದ ದಿನಗಳಲ್ಲಿ ಕಾಣಿಕೆ ಕೊಟ್ಟು ಗೌರವಿಸುತ್ತಿದ್ದರು.

ಕಲ್ಯಾಣಿ ಚಾಳುಕ್ಯರ ಕಾಲದಲ್ಲಿ ಗದಗಿನ ಬಳಿಯ ಉಮ್ಮಜಿಗೆಯಲ್ಲಿ ಒಂದು ಉನ್ನತ ಶಿಕ್ಷಣಕೇಂದ್ರವನ್ನು ಸ್ಥಾಪಿಸಲಾಗಿತ್ತು. ಅಲ್ಲಿ ಒಂದು ಮಹಾವಿದ್ಯಾಲಯವೂ ಛಾತ್ರಾಲಯವೂ ಇದ್ದುವು. ಅಲ್ಲಿಯ ಅಧ್ಯಾಪಕರಿಗೆ ವಾಸದ ಮನೆಯನ್ನೂ ಜೀವನೋಪಾಯಕ್ಕೆ ಭೂಮಿಯ ಕೊಡುಗೆಯನ್ನೂ ನೀಡಲಾಗಿತ್ತು. ಅಲ್ಲಿ ಶಿಕ್ಷಣ ನೀಡುತ್ತಿದ್ದವರು ಅಕ್ಕರಿಗರು (ಅಕ್ಷರ ಬೋಧಕ). ಇವರು ಗಣಿತ, ಖಗೋಳವಿಜ್ಞಾನ, ಛಂದಸ್ಸು, ವ್ಯಾಕರಣ, ಕಾವ್ಯಶಾಸ್ತ್ರ ಮುಂತಾದವುಗಳ ರಚಕರೂ ಬೋಧಕರೂ ಆಗಿದ್ದರು. ಇವರಿಗೆ ಬೇಕಾದ ಹಾಗೆ ಭೂಮಿಯನ್ನು ದಾನವಾಗಿ ಕೊಡಲಾಗಿತ್ತು. ಅದರಿಂದ ಬಂದ ಆದಾಯದಲ್ಲಿ ತಾವು ಜೀವಿಸುವುದಲ್ಲದೆ ತಮ್ಮ ಶಿಷ್ಯರಿಗೆ ದಿನಕ್ಕೆ ಒಂದು ಊಟವನ್ನೂ ವರ್ಷಕ್ಕೊಮ್ಮೆ ಬಟ್ಟೆಯನ್ನೂ ಒದಗಿಸಬೇಕಾಗಿತ್ತು.

ಮೇಲಿನ ಅಗ್ರಹಾರಗಳ ಜೊತೆಗೆ ಇನ್ನೂ ಅನೇಕ ಅಗ್ರಹಾರಗಳು ಕರ್ನಾಟಕದ ಬೇರೆಬೇರೆ ಭಾಗಗಳಲ್ಲಿದ್ದುದು ತಿಳಿದು ಬಂದಿದೆ. ಕದಂಬರಾಜ್ಯದ ಅರಸನಾದ ಶಿವಚಿತ್ತನ ರಾಣಿ ಕಮಲಾದೇವಿ ಬೆಳಗಾಂವಿ ಜಿಲ್ಲೆಯ ಡಿಗಾಂವಿಯಲ್ಲಿ ಒಂದು ಅಗ್ರಹಾರವನ್ನು ಸ್ಥಾಪಿಸಿದ್ದಳು. ಅದಕ್ಕಾಗಿ ಭಾರತದ ಬೇರೆಬೇರೆ ಭಾಗಗಳಿಂದ ವಿದ್ವಾಂಸರನ್ನು ಕರೆಸಿ ಅವರ ಸಂರಕ್ಷಣೆಗಾಗಿ ದತ್ತಿಯನ್ನು ಹಾಕಿಸಿಕೊಟ್ಟಳು. ಅಲ್ಲಿ ವೇದ, ವೇದಾಂಗ, ನ್ಯಾಯ, ಮೀಮಾಂಸೆ, ಸಾಂಖ್ಯ, ಯೋಗ, ವೇದಾಂತ, ಸ್ಮೃತಿ, ಇತಿಹಾಸ, ಪುರಾಣ, ಖಗೋಳಶಾಸ್ತ್ರ- ಇವುಗಳ ಬೋಧನೆಗೆ ಅವಕಾಶ ಕಲ್ಪಿಸಲಾಗಿತ್ತು. ಆಯಾ ಅಧ್ಯಾಪಕರ ವಿಷಯಪಾಂಡಿತ್ಯಕ್ಕೂ ಕಾರ್ಯಮಹತ್ತ್ವಕ್ಕೂ ಅನುಗುಣವಾಗಿ ದಾನಗಳನ್ನು ನೀಡಲಾಗಿತ್ತು. ಹೀಗೆಯೆ ಕರ್ನಾಟಕದ ಇತರೆಡೆಗಳಲ್ಲೂ ಅಗ್ರಹಾರಗಳು ಸ್ಥಾಪನೆಯಾಗಿದ್ದುವು.

ಬ್ರಹ್ಮಪುರಿ

[ಬದಲಾಯಿಸಿ]

ಅಗ್ರಹಾರಗಳಂತೆ ಬ್ರಹ್ಮಪುರಿಗಳೂ ಕರ್ನಾಟಕದಲ್ಲಿ ಪ್ರಾಚೀನ ಕಾಲ ದಿಂದಲೂ ಅಸ್ತಿತ್ವದಲ್ಲಿದ್ದ ಉನ್ನತ ಶಿಕ್ಷಣ ಸಂಸ್ಥೆಗಳು. ಅಗ್ರಹಾರ ಶಿಕ್ಷಣಕ್ಕಾಗಿ ಏರ್ಪಟ್ಟ ವಿಶಿಷ್ಟ ಗ್ರಾಮವಾಗಿದ್ದರೆ ಬ್ರಹ್ಮಪುರಿ ನಗರದ ಒಂದು ಭಾಗ ಮಾತ್ರವಾಗಿತ್ತು. ಬೆಳಗಾಂವಿಯಲ್ಲಿ ಬನವಾಸಿಯ ಪ್ರಾಂತ್ಯಾಧಿಕಾರಿಯಾದ ಕೇಶವದೇವ ಬ್ರಹ್ಮಪುರಿಯೊಂದನ್ನು ಸ್ಥಾಪಿಸಿದ್ದ. ಅಲ್ಲಿ ೩೮ ಮಂದಿ ಕೀರ್ತಿವೆತ್ತ ವಿದ್ವಾಂಸರಿದ್ದರು. ಅವರು ಪುರಾಣ, ಸ್ಮೃತಿ, ಭಾಷ್ಯ, ಕಾವ್ಯ, ನಾಟಕ ಇತ್ಯಾದಿ ಜ್ಞಾನಕ್ಷೇತ್ರಗಳಲ್ಲಿ ಪಂಡಿತರೆನಿಸಿದ್ದು ಆಯಾ ಜ್ಞಾನವನ್ನು ಬೋಧಿಸುತ್ತಿದ್ದರು. ಆ ನಗರದ ದಕ್ಷಿಣದ ಫಲವತ್ತಾದ ನೆಲವನ್ನು ಅವರ ವಸತಿಗೂ ಜೀವನೋಪಾಯಕ್ಕೂ ಕೇಶವದೇವ ದಾನವಾಗಿ ಕೊಟ್ಟಿದ್ದ. ಅಲ್ಲಿ ಒಂದು ಸುಂದರವಾದ ದೇಗುಲ ಕಟ್ಟಿಸಿ ಅದರ ಮುಂದೆ ವೀರಕೇಶವಪುರ ಎಂಬ ನಗರವನ್ನು ನಿರ್ಮಿಸಿದ್ದ. ಅನೇಕ ವಸತಿಗಳನ್ನು ಕಟ್ಟಿಸಿ ಅವುಗಳನ್ನು ಪೀಠೋಪಕರಣಾದಿಗಳಿಂದ ಸಜ್ಜುಗೊಳಿಸಿ ಶೈಕ್ಷಣಿಕ ಕಾರ್ಯಕ್ರಮಗಳಿಗೆ ಅನುಕೂಲ ಮಾಡಿಕೊಟ್ಟಿದ್ದ. ಅಧ್ಯಾಪಕರ ವಸತಿಗೃಹಗಳನ್ನು ಕಟ್ಟಿಸಿ ವಾಸಕ್ಕೆ ಸಜ್ಜುಗೊಳಿಸಿ (ಫರ್ನಿಷ್ಡ್‌) ಕೊಡಲಾಗಿತ್ತು. ಬ್ರಹ್ಮಪುರಿಗಳು ಸೂಡಿ, ಅರಸೀಬೀದಿ (ವಿಕ್ರಮಪುರ), ತಲಕಾಡು ಮುಂತಾದ ಕರ್ಣಾಟಕದ ಇತರ ಕೆಲವು ನಗರಗಳಲ್ಲೂ ಇದ್ದುವು.

ದೇವಾಲಯ ವಿದ್ಯಾಕೇಂದ್ರಗಳು

[ಬದಲಾಯಿಸಿ]

ಅಗ್ರಹಾರಗಳೂ ಬ್ರಹ್ಮಪುರಿಗಳೂ ಕರ್ನಾಟಕದ ವಿಶಿಷ್ಟ ಉನ್ನತ ಶಿಕ್ಷಣಕೇಂದ್ರಗಳೆನಿಸಿದ್ದರೂ ಇವು ಆ ಕಾಲದಲ್ಲಿ ಉತ್ತರ ಭಾರತದಲ್ಲಿ ಪ್ರಚಾರದಲ್ಲಿದ್ದ ಟೋಲ್ ಎಂಬ ಶಿಕ್ಷಣ ಸಂಸ್ಥೆಗಳನ್ನು ಹೋಲುತ್ತಿದ್ದುವು. ಇವನ್ನೇ ಕೆಲವರು ದೇವಾಲಯದ ವಿದ್ಯಾಲಯಗಳೆಂದು ಕರೆದಿರುವರು. ದೇವಾಲಯ ವಿದ್ಯಾಲಯ ಗಳಲ್ಲಿ ಕೆಲವು ಪ್ರಾಥಮಿಕ ಶಿಕ್ಷಣವನ್ನು ಬೋಧಿಸುತ್ತಿದ್ದರೂ ಮತೆ ಕೆಲವು ಉನ್ನತಶಿಕ್ಷಣಕ್ಕೂ ಅವಕಾಶ ಕಲ್ಪಿಸಿದ್ದುವು. ಹರಿಹರದ ಹರಿಹರೇಶ್ವರ ದೇವಾಲಯವೂ ತಾಳಗುಂದದ ಪ್ರಣವೇಶ್ವರದೇವಾಲಯವೂ ಅಂಥ ಉನ್ನತ ಶಿಕ್ಷಣ ಕೇಂದ್ರಗಳಾಗಿ ಕೆಲಸ ಮಾಡುತ್ತಿದ್ದುವು. ಹರಿಹರೇಶ್ವರ ದೇವಾಲಯದ ಶಿಕ್ಷಣ ಕೇಂದ್ರದಲ್ಲಿ ಋಗ್ವೇದ, ಯಜುರ್ವೇದ, ವ್ಯಾಕರಣ, ಮೀಮಾಂಸೆ ಇತ್ಯಾದಿ ವಿಷಯಗಳ ಬೋಧನೆಗೆ ಪಡಿತರಿದ್ದುದಲ್ಲದೆ ಪ್ರಾಥಮಿಕ ಶಿಕ್ಷಣದ ಅಧ್ಯಾಪಕರೂ ಇದ್ದರು. ತಾಳಗುಂದದ ಪ್ರಣವೇಶ್ವರ ದೇವಾಲಯದ ಕೇಂದ್ರದಲ್ಲಿ ಋಗ್ವೇದ, ಯಜುರ್ವೇದ, ಸಾಮವೇದ, ಪದಪಾಠ, ಕಲ್ಪ, ವ್ಯಾಕರಣ, ನ್ಯಾಸ, ಪ್ರಭಾಕರ, ಕಲ್ಪಾವತಾರ ಮತ್ತು ವೇದಾಂತಗಳನ್ನು ಹೇಳಿಕೊಡುತ್ತಿದ್ದರಲ್ಲದೆ ಪ್ರಾಥಮಿಕ ಶಿಕ್ಷಣಕ್ಕೂ ವ್ಯವಸ್ಥೆಗೊಳಿಸಲಾಗಿತ್ತು. ಒಬ್ಬೊಬ್ಬ ಪಂಡಿತರೂ ಎಂಟು ಮಂದಿ ವಿದ್ಯಾರ್ಥಿಗಳಿಗೆ ಪಾಠ ಹೇಳುತ್ತಿದ್ದರೆಂದೂ ದೇವಸ್ಥಾನದ ಆದಾಯದಿಂದ ೪೮ ವಿದ್ಯಾರ್ಥಿಗಳಿಗೂ ಪಂಡಿತರಿಗೂ ಊಟವಸತಿಗಳನ್ನು ಏರ್ಪಡಿಸಲಾಗಿತ್ತೆಂದೂ ತಿಳಿದುಬರುತ್ತದೆ.

ಮಠಗಳು

[ಬದಲಾಯಿಸಿ]

ಹತ್ತನೆಯ ಶತಮಾನದ ವೇಳೆಗೆ ಕರ್ನಾಟಕದ ಅನೇಕ ಊರುಗಳಲ್ಲಿ ಧಾರ್ಮಿಕ ಮಠಗಳು ಆರಂಭವಾಗಿದ್ದುವು. ದೇವಸ್ಥಾನಗಳಿಗೆ ಮಠ ಅಥವಾ ಆಶ್ರಮಗಳನ್ನು ಸೇರಿಸುವುದೂ ಆರಂಭವಾಗಿ ದೇವಸ್ಥಾನಗಳಂತೆ ಮಠಗಳೂ ಮಕ್ಕಳ ಮತ್ತು ದೊಡ್ಡವರ ಶಿಕ್ಷಣ, ಬೋಧನೆ, ಧರ್ಮಪ್ರಚಾರ ಇತ್ಯಾದಿ ಕಾರ್ಯಗಳನ್ನು ನಡೆಸಲಾರಂಭಿಸಿದುವು. ಅವುಗಳಲ್ಲಿದ್ದ ಮಠಾಧಿಪತಿಗಳು ಮೊದಮೊದಲು ಆಯಾ ಮತಗಳ ಅನುಯಾಯಿಗಳಿಗಾಗಿ ಹಾಗೂ ಮಠಿಗಳಾಗತಕ್ಕವರಿಗಾಗಿ ಧಾರ್ಮಿಕ ಶಿಕ್ಷಣವೀಯುವ ಯತ್ನದ ಪೂರ್ವಭಾವಿ ಯಾಗಿ ಪ್ರಾಥಮಿಕ ಶಿಕ್ಷಣವನ್ನೂ ನೀಡಬೇಕಾಗಿತ್ತು. ಕೆಲವು ಕಡೆ ಅದಕ್ಕಾಗಿ ಮಠಾಧಿಪತಿಗಳ ಜೊತೆಗೆ ಪ್ರತ್ಯೇಕ “ಅಯ್ಯ”ಗಳೂ ಇರುತ್ತಿದ್ದರು. ಇಂಥ ಮಠಗಳಲ್ಲಿ ಪ್ರಾಥಮಿಕ ಶಿಕ್ಷಣದಂತೆ ಉನ್ನತಶಿಕ್ಷಣಕ್ಕೂ ಅವಕಾಶವಿರುತ್ತಿತ್ತು. ಮತೀಯ ಮಠಗಳು ಕ್ರಮೇಣ ಊರುರುಗಳಲ್ಲೂ ಆರಂಭವಾದುವು. ಮೊದ ಮೊದಲು ಅವು ಧಾರ್ಮಿಕ ಸಂಸ್ಥೆಗಳಾಗಿದ್ದರೂ ಶಿಕ್ಷಣ ಕಾರ್ಯವನ್ನೂ ತಮ್ಮ ಪ್ರಧಾನ ಕರ್ತವ್ಯಗಳಲ್ಲೊಂದಾಗಿ ಮಾಡಿಕೊಂಡುವು. ಅಂಥ ಮಠಗಳಲ್ಲಿ ಕೋಡಿಮಠ ಮತ್ತು ನಾಗೈಮಠಗಳನ್ನು ಉಲ್ಲೇಖಿಸಬಹುದು. ಆಗ ಆರಂಭವಾಗಿದ್ದ (೧೧೬೨ರ ಶಾಸನ) ಕೋಡಿಮಠ ಬಳ್ಳಿಗಾಮೆಯ ಕೇದಾರೇಶ್ವರ ದೇವಾಲಯಕ್ಕೆ ಸೇರಿದಂತಿತ್ತು. ಅಲ್ಲಿ ಎಲ್ಲ ರೀತಿಯ ಜ್ಞಾನಬೋಧನೆಗೂ ಅವಕಾಶವಿದ್ದುದಲ್ಲದೆ ಬಡವ ಬಲ್ಲಿದರಿಗೂ ಸಬಲ ಅಬಲರಿಗೂ ಕುರುಡ ಮೂಗರಿಗೂ ವಿದ್ಯಾಭ್ಯಾಸಕ್ಕೆ ಅವಕಾಶವಿತ್ತು. ಅವರ ಅಶನ, ವಸನ, ವಸತಿ- ಇತ್ಯಾದಿಗಳಿಗೂ ಸೌಲಭ್ಯ ಕಲ್ಪಿಸಲಾಗಿತ್ತು; ಎಲ್ಲ ಮತೀಯರೂ ಎಲ್ಲ ದೇಶೀಯರೂ ನಿರ್ಭಯವಾಗಿ ಅಧ್ಯಯನ ಮಾಡುವ ಸನ್ನಿವೇಶ ಅಲ್ಲಿತ್ತು. ಜೊತೆಗೆ ಅದಕ್ಕೆ ಸೇರಿದಂತೆ ಒಂದು ವೈದ್ಯಾಲಯವೂ ಛಾತ್ರಾಲಯವೂ ಇದ್ದುವು. ಈ ಪೀಠದ ಅಧ್ಯಕ್ಷತೆಯನ್ನು ಪ್ರಸಿದ್ಧ ಪಂಡಿತರು ವಹಿಸಿದ್ದರು. ಅವರಲ್ಲೊಬ್ಬರಾದ ವಾಮಶಕ್ತಿಯೆಂಬುವನು ವ್ಯಾಕರಣ, ವೇದಾಂತ, ನಾಟಕ, ಕಾವ್ಯರಚನೆ, ಸಿದ್ದಾಂತ, ಶಿವಪದ ಇತ್ಯಾದಿ ಜ್ಞಾನಕ್ಷೇತ್ರಗಳಲ್ಲಿ ದೊಡ್ಡ ಪಂಡಿತನೆನಿಸಿದ್ದ. ಆತ ಶಿಷ್ಯರೊಡನೆ ತಳೆದಿದ್ದ ಬಾಂಧವ್ಯವನ್ನು ಕುರಿತ ಶಾಸನವೊಂದು “ತನ್ನ ಶಿಷ್ಯರೆಲ್ಲರ ಭಾವನೆಗಳೂ ಬಯಕೆಗಳೂ ಕೇಂದ್ರೀಕರಿಸಿರುವ ಏಕೈಕ ವ್ಯಕ್ತಿಯಾಗಿದ್ದ ವಾಮಶಕ್ತಿ” ಎಂದು ಉಲ್ಲೇಖಿಸಿದೆ. ನಾಗೈನಲ್ಲಿದ್ದ ಮಧುಸೂದನ ದೇವಾಲಯಕ್ಕೆ ಸೇರಿದ ಇನ್ನೊಂದು ಮಠವನ್ನು ಮೂರಂತ್ತಸಿನ ಭವ್ಯಮಂದಿರದಲ್ಲಿ ಸ್ಥಾಪಿಸಲಾಗಿತ್ತು. ಅಲ್ಲಿ ಉನ್ನತ ಶಿಕ್ಷಣದಲ್ಲೆ ಬೇರೆ ಬೇರೆ ಅಂತಸ್ತಿನ ಸ್ನಾತಕ ಮತ್ತು ಸ್ನಾತಕೋತ್ತರ ಶಿಕ್ಷಣಗಳ ವ್ಯವಸ್ಥೆಯಿತ್ತು. ವಟುಗಳಂತೆ ವಿರಕ್ತರೂ ಅಲ್ಲಿ ಅಧ್ಯಯನ ಮಾಡುತ್ತಿದ್ದರು. ಅಲ್ಲಿ ಅವರೆಲ್ಲಿರಗೂ ಅಶನ, ವಸನ, ವಸತಿ ಇತ್ಯಾದಿ ಸೌಲಭ್ಯಗಳನ್ನು ಏರ್ಪಡಿಸಲಾಗಿತ್ತು. ಮಠದ ಆವರಣಕ್ಕೆ ಸೇರಿದಂತೆ ನೃತ್ಯಾಲಯವೂ ಇತ್ತು. ಮಠಕ್ಕೆ ಎತ್ತರವಾದ ಮುಖಮಂಟಪಗಳೂ ದ್ವಾರ ಹಜಾರಗಳೂ ವಠಾರದ ಗೋಡೆಗಳೂ ಇದ್ದುವು. ಅಲ್ಲಿಯ ಕಾರ್ಯಕರ್ತರ ಮಂಡಲಿಯಲ್ಲಿ ಮೂವರು ಅಧ್ಯಾಪಕರೂ ಒಬ್ಬ ಪುರಾಣ ಭಟ್ಟನೂ ಕಾಲೇಜಿನ ಕಟ್ಟಡಾದಿಗಳ ಮೇಲ್ವಿಚಾರಣೆ ನೋಡಿಕೊಳ್ಳಲು ನಾಲ್ಕು ಜನ ಶಿಲ್ಪಿಗಳೂ ಇದ್ದುದಲ್ಲದೆ ಆ ಮಠದ ಕಾರ್ಯನಿರ್ವಹಣೆಯ ವೆಚ್ಚಕ್ಕಾಗಿ ಬಿಟ್ಟಿದ್ದ ದತ್ತಿಯ ಭೂಮಿಯ ವ್ಯವಸಾಯವನ್ನು ನೋಡಿಕೊಳ್ಳಲು ಒಬ್ಬ ವ್ಯವಸ್ಥಾಪಕನೂ ಮೂವರು ಘಟಿಯಾರರೂ (ಆಳುಗಳೂ) ಇದ್ದರು.

ಉನ್ನತ ಶಿಕ್ಷಣಕ್ಕಾಗಿ ಏರ್ಪಟ್ಟಿದ್ದ ವಿವಿಧ ವಿದ್ಯಾಸಂಸ್ಥೆಗಳನ್ನು ಕುರಿತ ಮೇಲಿನ ವಿವರಣೆಯಿಂದ ಕೆಲವು ಸರ್ವಸಾಮಾನ್ಯ ವಿಷಯಗಳು ಎದ್ದು ಕಾಣುತ್ತವೆ. ಶಿಕ್ಷಣ ಪ್ರಾಥಮಿಕ ಅಂತಸ್ತಿನಂತೆಯೆ ವಿಕೇಂದ್ರೀಕರಣವಾಗಿದ್ದರೂ ಒಂದೊಂದಕ್ಕೂ ಪ್ರತ್ಯೇಕ ಆಡಳಿತ ವ್ಯವಸ್ಥೆಯಿತ್ತು. ಕಾರ್ಯನಿರ್ವಹಣೆಗೂ ಅಧ್ಯಾಪಕರ ಸಂಭಾವನೆಗೂ ಅಗತ್ಯವೆನಿಸುವಷ್ಟು ಉತ್ಪತ್ತಿಯಿಂದ ಬೂಕೊಡುಗೆಯಿದ್ದು ಅವು ಸ್ವಯಂಪೂರ್ಣವೂ ಸ್ವತಂತ್ರವೂ ಆಗಿದ್ದುವು. ವಿದ್ಯಾಲಯಕ್ಕೆ ಸೇರಿದ ಭೂಮಿಯನ್ನು ನೋಡಿಕೊಳ್ಳುವುದಕ್ಕೂ ಕಟ್ಟಡಗಳ ದುರಸ್ತಿಗೂ ಕಾವಲು ಕಾಯುವುದಕ್ಕೂ ತಕ್ಕ ಏರ್ಪಾಡುಗಳಿದ್ದುವು. ಸಾಮಾನ್ಯವಾಗಿ ಅವೆಲ್ಲ ವಸತಿ ವಿದ್ಯಾಲಯಗಳಂತಿದ್ದುವು. ವಿದ್ಯಾರ್ಥಿಗಳ ಅಧ್ಯಯನವನ್ನು ನೋಡಿಕೊಳ್ಳುವ ಮೇಲ್ವಿಚಾರಕರೂ ಇರುತ್ತಿದ್ದರು. ಉಪಾಧ್ಯಾಯವರ್ಗದಲ್ಲಿ ತಮ್ಮ ತಮ್ಮ ವಿಷಯದಲ್ಲಿ ಉನ್ನತಮಟ್ಟದ ಪಾಂಡಿತ್ಯ ಪಡೆದವರನ್ನು ಮಾತ್ರ ಸೇರಿಸಿಕೊಳ್ಳುವ ವ್ಯವಸ್ಥೆಯಿತ್ತು. ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳುವ ಮುನ್ನ ಒಂದು ಪ್ರವೇಶಪರೀಕ್ಷೆ ಮಾಡಿ ಸೂಕ್ತರಾದವರನ್ನು, ಅವಕಾಶವಿರುವಷ್ಟು ಸಂಖ್ಯೆಯಲ್ಲಿ ಮಾತ್ರ, ಆಯ್ದುಕೊಳ್ಳಲಾಗುತ್ತಿತ್ತು.

ಮೇಲೆ ಸೂಚಿಸಿದ ವಿದ್ಯಾಲಯಗಳಲ್ಲಿ ಪಠ್ಯವಿಷಯಗಳಲ್ಲಿ ಸಾಮಾನ್ಯವಾಗಿ ವ್ಯಾಕರಣ, ವೇದ, ಆಗಮ, ಪುರಾಣ, ಕಾವ್ಯ, ನಾಟಕ ಇವನ್ನು ಗೊತ್ತುಮಾಡುತ್ತಿದ್ದರು. ವ್ಯಾಕರಣಕ್ಕೆ ಪಾಣಿನಿಯಂಥ ಅಧಿಕೃತ ಗ್ರಂಥಗಳು ಪಠ್ಯಪುಸ್ತಕಗಳಾಗಿರುತ್ತಿದ್ದುವು. ಬೇರೆ ಬೇರೆ ವಿದ್ಯಾಲಯಗಳಲ್ಲಿ ಬೇರೆ ಬೇರೆ ವಿಷಯಗಳ ಅಧ್ಯಯನಕ್ಕೆ ಅವಕಾಶ ಕಲ್ಪಿಸಿತ್ತು. ಕೋಡಿಮಠದಲ್ಲಿ ಭಾರತೀಯ ಷಡ್ದರ್ಶನಗಳೂ ಬೌದ್ಧತತ್ತ್ವಶಾಸ್ತ್ರಗಳೂ, ಲಕುಲರ ಯೋಗಸೂತ್ರಗಳೂ ಒಂದು ವರ್ಗದ ವಿಶಿಷ್ಟ ಅಧ್ಯಯನ ವಿಷಯಗಳಾಗಿದ್ದುವು. ಶಿವಮೊಗ್ಗ ಜಿಲ್ಲೆಯ ಕುಪ್ಪತ್ತೂರ ಮಠದಲ್ಲಿ ವಾತ್ಸಾಯನನ ಕಾಮಸೂತ್ರ ಅಧ್ಯಯನದ ವಿಶೇಷ ವಿಷಯವಾಗಿತ್ತು. ಅರಸೀಕೆರೆಯಲ್ಲಿ ಭಾಷಾಶಾಸ್ತ್ರದ ಅಧ್ಯಯನಕ್ಕೆ ಪ್ರಾಶಸ್ತ್ಯವಿತ್ತು. ನಾಗೈಯಲ್ಲಿ ಮನುಧರ್ಮಶಾಸ್ತ್ರ, ಶುಕ್ರಶಾಸ್ತ್ರ ಮತ್ತು ವ್ಯಾಸರ ಗ್ರಂಥಗಳ ಅಧ್ಯಯನ ಪ್ರಧಾನವಾಗಿತ್ತು. ಉಮ್ಮಚಿಗಿಯಲ್ಲಿ ವ್ಯಾಕರಣಶಾಸ್ತ್ರ, ಛಂದಸ್ಸು, ಗ್ರಂಥರಚನೆ ಇತ್ಯಾದಿಗಳಿಗೆ ಪ್ರಾಶಸ್ತ್ಯವಿತ್ತು.

ಶಿಕ್ಷಣ ಸಂಸ್ಥೆಗಳಲ್ಲಿ ಶಿಸ್ತು

[ಬದಲಾಯಿಸಿ]

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳು ಕಠಿಣವೆನಿಸುವ ಶಿಸ್ತಿನ ಜೀವನ ನಡೆಸಬೇಕಾಗಿತ್ತು. ಅವರು ಬ್ರಹ್ಮಚಾರಿಗಳಾಗಿರಬೇಕೆಂದೂ ಶ್ರದ್ಧೆಯಿಂದ ಕಷ್ಟಪಟ್ಟು ಅಭ್ಯಾಸಮಾಡಬೇಕೆಂದೂ ಎಲ್ಲ ಸಂಸ್ಥೆಗಳೂ ಸಾಮಾನ್ಯವಾಗಿ ನಿಬಂಧನೆ ಮಾಡಿದ್ದುವು. ಆ ನಿಯಮಗಳನ್ನು ಉಲ್ಲಂಘಿಸಿದವರನ್ನು ಸಂಸ್ಥೆಯಿಂದ ಹೊರಹಾಕುವುದು ರೂಢಿಯಲ್ಲಿತ್ತು. ಉಮ್ಮಚಿಗಿ ಅಗ್ರಹಾರದಲ್ಲಿ ಬೈಗುಳ, ಗಲಭೆ, ಹೊಡೆದಾಟ, ವ್ಯಭಿಚಾರ, ಇತ್ಯಾದಿ ದುರ್ನಡತೆಗಳಿಗಾಗಿ ವಿದ್ಯಾರ್ಥಿಗಳಿಗೆ ದಂಡ ವಿಧಿಸಲಾಗುತ್ತಿತ್ತು. ವಿದ್ಯಾರ್ಥಿಗಳಲ್ಲೂ ಅಧ್ಯಾಪಕರಲ್ಲೂ ಕೆಲವರು ನೈಷ್ಠಿಕ (ಆಜೀವ) ಬ್ರಹ್ಮಚಾರಿಗಳಿದ್ದರು. ಶಿಸ್ತಿನ ನಿಯಮಗಳು ವಿದ್ಯಾರ್ಥಿಗಳಂತೆ ಅಧ್ಯಾಪಕರಿಗೂ ಅನ್ವಯಿಸುತ್ತಿದ್ದುವು. ಅವರು ಸಿಬ್ಬಂದಿವರ್ಗದವರೇ ಆಗಿರಲಿ, ಸಂನ್ಯಾಸಿಗಳೇ ಆಗಿರಲಿ, ಮಠದಲ್ಲಿದ್ದಷ್ಟು ಕಾಲ ಕಠಿಣವಾದ ಬ್ರಹ್ಮಚರ್ಯವನ್ನು ಪಾಲಿಸಬೇಕಾಗಿತ್ತು. ಹಾಗೆ ಪಾಲಿಸದಿದ್ದವರನ್ನು ಗ್ರಾಮಸ್ಥರೂ ರಾಜ್ಯದ ಅರಸರೂ ಸಮಾಲೋಚನೆ ನಡೆಸಿ ಮಠದಿಂದ ಹೊರದೂಡುತ್ತಿದ್ದರು.

ಹೆಣ್ಣುಮಕ್ಕಳ ಶಿಕ್ಷಣ

[ಬದಲಾಯಿಸಿ]

ಜನಸಾಮಾನ್ಯರಲ್ಲಿ ಹೆಣ್ಣುಮಕ್ಕಳಿಗೆ ಶಿಕ್ಷಣಕ್ಕಾಗಿ ಈ ಕಾಲದಲ್ಲಿ ಯಾವ ಸೌಲಭ್ಯವಿತ್ತೆಂಬುದು ಗೊತ್ತಾಗಿಲ್ಲ. ಆದರೆ ಅರಸುಮನೆತನದ ಹೆಣ್ಣುಮಕ್ಕಳಿಗೂ ಶ್ರೀಮಂತ ಕುಟುಂಬಗಳಿಗೂ ನಿರ್ದಿಷ್ಟ ಶಿಕ್ಷಣವ್ಯವಸ್ಥೆಯೇನೋ ಇತ್ತು. ಅವರಿಗೆ ಅಕ್ಷರ ವಿದ್ಯೆಯ ಜೊತೆಗೆ ಸಂಗೀತ, ನೃತ್ಯ, ಆಡಳಿತಜ್ಞಾನ ಇತ್ಯಾದಿ ಶಿಕ್ಷಣವನ್ನು ದೊರಕಿಸಲಾಗುತ್ತಿತ್ತು. ಅದಕ್ಕಾಗಿ ಸಂಭಾವನೆಯ ಮೇಲೆ ಅಥವಾ ಇನ್ನಿತರ ಕೊಡುಗೆಯ ಮೂಲಕ ಅಧ್ಯಾಪಕರನ್ನು ನೇಮಿಸಲಾಗುತ್ತಿತ್ತು. ಬಾದಾಮಿ ಚಳುಕ್ಯರ ಚಂದ್ರಾದಿತ್ಯನ ರಾಣಿ ವಿಜಯಭಟ್ಟಾರಿಕೆ ಸ್ವತಃ ಕವಯಿತ್ರಿಯಾಗಿದ್ದು ರಾಜ್ಯದ ಆಡಳಿತವನ್ನೂ ನೋಡಿಕೊಳ್ಳುತ್ತಿದ್ದಂತೆ ಕಾಣುತ್ತದೆ. ಅವಳು ತನ್ನ ಹೆಸರಿನಲ್ಲಿ ದತ್ತಿಯೊಂದನ್ನು ನೀಡಿದ್ದಳು. ರಾಷ್ಟ್ರಕೂಟರ ಕಾಲದಲ್ಲಿ ನಾಗರಖಂಡದ ನಾಳ್ಗಾವುಂಡ ತನ್ನ ಅರಸನಿಗಾಗಿ ಹೋರಾಡಿ ಮಡಿದಾಗ ಅವನ ಮಡದಿ ಜಕ್ಕಿಯಬ್ಬೆ ಪ್ರಾಂತಾಧಿಕಾರ ವಹಿಸಿಕೊಂಡು ನಿರ್ವಹಿಸಿದು ದಾಗಿಯೂ ಅನಂತರ ಆ ಕಾರ್ಯವನ್ನು ತನ್ನ ಮಗಳಿಗೆ ವಹಿಸಿದುದಾಗಿಯೂ ಐತಿಹ್ಯವುಂಟು. ಎಂದರೆ ರಾಜಕುಮಾರಿಯವರಿಗೆ ಪೂರ್ವಭಾವಿಯಾಗಿ ಅಗತ್ಯಶಿಕ್ಷಣ ಪಡೆಯುವ ವ್ಯವಸ್ಥೆ ಇದ್ದಿರಬೇಕು. ಕಲ್ಯಾಣದ ಚಾಳುಕ್ಯರ ಕಾಲದಲ್ಲಿ ಕಿಸುಕಾಡಿನ ಸತ್ಯಾಶ್ರಯನ ಮಗಳಾದ ಅಕ್ಕಾದೇವಿ ಪ್ರಾಂತಾಧಿಕಾರಿಣಿಯಾಗಿ ಅಧಿಕಾರ ನಡೆಸಿದಳು. ಹಾಗೆಯೆ, ಕಳಚುರ್ಯ ಸೋವಿದೇವನ ರಾಣಿ ಸೋವಲಾದೇವಿ ವಿದ್ವಜ್ಜನರ ಸಭೆಯಲ್ಲಿ ನೃತ್ಯಕಲಾಪ್ರದರ್ಶನವಿತ್ತು ಮೆಚ್ಚುಗೆ ಪಡೆದಿದ್ದಳೆಂದು ತಿಳಿದುಬರುತ್ತದೆ. ಚೋಳಮಹಾರಾಜನ ರಾಣಿಯಾದ ಲಕ್ಷ್ಮಾದೇವಿ ರಾಜ್ಯಾಡಳಿತದಲ್ಲಿ ಪತಿಗೆ ಸರಿಸಮವಾಗಿ ನೆರವಾಗುವಷ್ಟು ವಿದ್ಯಾವಂತೆಯೆನಿಸಿದ್ದಳು. ಅವಳು ಕಾವ್ಯ, ಚಿತ್ರಕಲೆ, ಸಂಗೀತ, ನೃತ್ಯ ಮುಂತಾದವುಗಳಲ್ಲೂ ಪಾಂಡಿತ್ಯ ಪಡೆದಿದ್ದಳು. ಆ ಕಾಲದಲ್ಲಿ ಶಿಲಾಶಾಸನಗಳನ್ನು ಬರೆಯುತ್ತಿದ್ದ ಮಹಿಳೆಯರೂ ಇದ್ದರೆಂಬ ಅಂಶ ಇತ್ತೀಚೆಗೆ ತಿಳಿದುಬಂದಿದೆ. ಮಹಿಳಾಶಿಕ್ಷಣ ಬಹುಮಟ್ಟಿಗೆ ಅವರವರ ಮನೆಗಳಲ್ಲೇ ನಡೆಯುತ್ತಿದ್ದಿರಬೇಕು.

ವೃತ್ತಿಶಿಕ್ಷಣ

[ಬದಲಾಯಿಸಿ]

ಆಗ ಶಿಲ್ಪಕಲೆ ಎಂಥ ಉತ್ತಮ ಮಟ್ಟವನ್ನು ಮುಟ್ಟಿತ್ತೆಂಬುದನ್ನು ಇಂದಿಗೂ ಉಳಿದುಕೊಂಡು ಬಂದಿರುವ ಆ ಕಾಲದ ಕೆಲವು ದೇವಾಲಯಗಳು ಸಾರಿ ಹೇಳುತ್ತವೆ. ಕದಂಬರು, ಗಂಗರು, ರಾಷ್ಟ್ರಕೂಟರು ಮತ್ತು ಚಾಲುಕ್ಯರು ಅನೇಕ ಸುಂದರ ದೇವಾಲಯ ಗಳನ್ನು ನಿರ್ಮಿಸಿದರು. ಶಿಲ್ಪವಿದ್ಯೆಯನ್ನು ತಂದೆಯಿಂದ ಮಗ ಮನೆಯಲ್ಲಿ ಅಥವಾ ಅವನೊಡನೆ ಕೆಲಸಮಾಡುವಾಗ ಕಾರ್ಯಕ್ಷೇತ್ರದಲ್ಲಿ ಕಲಿಯುತ್ತಿದ್ದ. ಇತರರೂ ಉಮೇದುದಾರ ರಾಗಿ ಗುರುವಿನೊಡನೆ ಕೆಲಸ ಮಾಡುತ್ತ ಕಲಿತುಕೊಳ್ಳುತ್ತಿದ್ದರು. ಬೌದ್ಧವಿಹಾರಗಳೂ ಮಠಗಳೂ ಕಲೆ ಮತ್ತು ಹಸ್ತ ಕೌಶಲಗಳನ್ನು ಬೋಧಿಸುತ್ತಿದ್ದುವೆಂಬ ಅಂಶ ತಿಳಿದುಬರುತ್ತದೆ. ಹ್ಯುಯೆನ್ ತ್ಸಾಂಗ್ ಹೇಳುವಂತೆ ಅಲ್ಲಿ ಬೋಧಿಸುತ್ತಿದ್ದ ಐದು ವಿಜ್ಞಾನಗಳಲ್ಲಿ ತಾಂತ್ರಿಕ ಶಿಕ್ಷಣವೂ ಸೇರಿತ್ತು.

ಶಿಕ್ಷಣದಲ್ಲಿ ನವೋದಯ

[ಬದಲಾಯಿಸಿ]

ಹನ್ನೊಂದು ಹನ್ನೆರಡನೆಯ ಶತಮಾನಗಳಲ್ಲಿ ಆರಂಭವಾದ ವೀರಶೈವ ಧರ್ಮದ ಪ್ರಚಾರ ಶಿಕ್ಷಣದಲ್ಲಿ ಮಹತ್ತರ ಪ್ರಗತಿ ಸಾಧಿಸಲು ಪ್ರಚೋದನೆಯಾಯಿತು. ಧರ್ಮಪ್ರಚಾರದ ಅಂಗವಾಗಿ ಜನತೆಯ ನೈತಿಕ ಜೀವನವನ್ನು ಉತ್ತಮಪಡಿಸುವಲ್ಲಿ ಶಿಕ್ಷಣವನ್ನು ಪರಿಣಾಮಕಾರಿಯಾದ ಉಪಕರಣವಾಗಿ ಮಾಡಿಕೊಳ್ಳಲಾಯಿತು. ದೇಶಾದ್ಯಂತ ಅದಕ್ಕಾಗಿ ಮಠಗಳನ್ನು ಸ್ಥಾಪಿಸಿ, ಅಲ್ಲಿಯ ಗುರುಗಳಿಗೆ ಪ್ರಧಾನ ಸ್ಥಾನವಿತ್ತು. ಜನತೆಯಲ್ಲಿ ಶಿಕ್ಷಣ ಪ್ರಚಾರಕ್ಕೆ ಅವಕಾಶ ಕಲ್ಪಿಸಿಕೊಳ್ಳಲಾಯಿತು. ಅಕ್ಷರವಿದ್ಯೆ ಲೆಕ್ಕಾಚಾರಗಳನ್ನು ಮಕ್ಕಳಿಗೂ ದೊಡ್ಡವರಿಗೂ ಹೇಳಿಕೊಡುವ ವಿಶಿಷ್ಟಕಾರ್ಯ ನಿರ್ವಹಿಸುತ್ತಿದ್ದ ಮಠಗಳೂ ಅಸ್ತಿತ್ವಕ್ಕೆ ಬಂದುವು. ಅಲ್ಲಿ ನೂಲುವುದು, ನೇಯುವುದು ವೈದ್ಯ, ವ್ಯವಸಾಯ ಇತ್ಯಾದಿ ವೃತ್ತಿಶಾಸ್ತ್ರಗಳನ್ನೂ ಬೋಧಿಸುತ್ತಿದ್ದರು. ಅದರ ಫಲವಾಗಿ ವೃತ್ತಿಶಿಕ್ಷಣಕ್ಕೆ ನೂತನ ಆಧ್ಯಾತ್ಮಿಕ ಗೌರವ ದೊರಕಿತು. ಮುಂದೆ ಈ ಮಠಗಳು ಊರೂರುಗಳಲ್ಲೂ ಅಸ್ತಿತ್ವಕ್ಕೆ ಬಂದು ಪ್ರಾಥಮಿಕ ಶಾಲೆಗಳ (ಓದುಮಠ) ಉಗಮಕ್ಕೆ ಕಾರಣವಾದುವು. ವೀರಶೈವ ಮಠಗಳು ನೂತನವಾಗಿ ಧರ್ಮಪ್ರಚಾರ ಮಾಡಲು ಯತ್ನಿಸಿದಾಗ ಜನತೆ ಅದರ ಪ್ರಸಾದ ಪಡೆಯಬೇಕಾದರೆ ಅಗತ್ಯವಾಗಿ ಪ್ರಾಥಮಿಕ ಶಿಕ್ಷಣವನ್ನಾದರೂ ಕಲಿಯಬೇಕಾಯಿತು. ಅದಕ್ಕಾಗಿ ಮಠಗಳನ್ನೂ ಅಲ್ಲಿ ಬೋಧಿಸಲು ಅಗತ್ಯ ವ್ಯವಸ್ಥೆಯನ್ನೂ ಕೈಗೊಳ್ಳಲಾಯಿತು. ಕಲ್ಯಾಣದ ಅನುಭವಮಂಟಪ ಒಂದು ದೃಷ್ಟಿಯಿಂದ ಮಠದಲ್ಲಿ ಗುರುಗಳಾಗತಕ್ಕವರಿಗೆ ತರಬೇತಿ ನೀಡುವ ಕೇಂದ್ರವಾಗಿಯೂ ಕೆಲಸ ಮಾಡಿತೆನ್ನಬಹುದು. ಅಲ್ಲಿ ನುರಿತ ಸಹಸ್ರಾರು ಪರಿವ್ರಾಜಕ ಜಂಗಮರು ಚಲವಿದ್ಯಾಲಯಗಳಂತೆ ನಾಡಿನ ಎಲ್ಲ ಕಡೆಯೂ ಸಂಚರಿಸುತ್ತ ಜನತೆಯ (ಸಾಮಾಜಿಕ) ಶಿಕ್ಷಣವನ್ನು ಬಹುಯಶಸ್ವಿಯಾಗಿ ನಿರ್ವಹಿಸುತ್ತಿದ್ದರು. ಧರ್ಮಪ್ರಚಾರಕ್ಕಾಗಿ ಬಳಸಲಾಗುತ್ತಿದ್ದ ಆಡುಮಾತಿನ ಕನ್ನಡ ವಚನಗಳ ಕಂಠಪಾಠ ಶಾಲೆಗಳಲ್ಲೂ ಜನಸಾಮಾನ್ಯದಲ್ಲೂ ಪ್ರಚಾರಕ್ಕೆ ಬರಹತ್ತಿತು.

ಪ್ರಾಚೀನ ಕರ್ನಾಟಕದಲ್ಲಿ ವಿದ್ಯಾಭಿಮಾನ

[ಬದಲಾಯಿಸಿ]

ಕುರಿತೋದದೆಯುಂ ಕಾವ್ಯ ಪ್ರಯೋಗ ಪರಿಣತಮತಿಗಳೆಂದು ಅಭಿವರ್ಣಿತರಾದ ಕರ್ನಾಟಕದ ಜನರಲ್ಲಿ ಶಿಕ್ಷಣದ ಬಗ್ಗೆ ಆದಿಕಾಲದಿಂದಲೂ ಪಕ್ಷಪಾತವುಂಟು. ಮಾತು ಮತ್ತು ಸಾಹಿತ್ಯ ದೇವರು ಕೊಟ್ಟ ವರಗಳೆಂದೂ ಸಾಹಿತ್ಯ ದೈವಾಂಶಸಂಭೂತವೆಂದೂ ಇಲ್ಲಿಯವರ ನಂಬಿಕೆ. ದೇವತೆಗಳು ಜ್ಞಾನಿಗಳನ್ನು ಪ್ರೀತಿಸುವರೆಂಬ ನಂಬಿಕೆಯೂ ಉಂಟು. ಮಾನವರಲ್ಲಿ ಜ್ಞಾನಿಗಳೇ ಶ್ರೇಷ್ಠರೆಂದೂ ಅಂಥ ಜ್ಞಾನ ಕೇವಲ ಬುದ್ಧಿವಂತಿಕೆಯಿಂದಾಗಲಿ, ಕಂಠಪಾಠದಿಂದಾಗಲಿ ಸಿದ್ಧಿಸುವಂಥದಲ್ಲವೆಂದೂ ಅರ್ಥಜ್ಞಾನ ಮತ್ತು ವಿವೇಚನೆಯಿಂದ ಲಭಿಸುವುದೆಂದೂ, ಕಲಿವಿಗೆ ಅಧಿದೇವತೆಯಾದ ಸರಸ್ವತಿ ಅಂಥ ಜ್ಞಾನಿಗಳಿಗೆ ಮಾತ್ರ ಒಲಿಯುವಳೆಂದೂ ನಂಬಿಕೆಯುಂಟು. ಇವೆಲ್ಲ ಕಾರಣಗಳಿಂದ ವ್ಯಕ್ತಿಗೆ ಉನ್ನತ ಶಿಕ್ಷಣ ಮುಗಿದ ಮೇಲೆ ಮುಂದುವರಿದ (ಫರ್ದರ್ ಎಜುಕೇಷನ್) ಶಿಕ್ಷಣ ಅಗತ್ಯವೆಂಬುದನ್ನು ಅರಿತುಕೊಂಡು ಕಾವ್ಯ, ನಾಟಕ, ವೇದ, ಆಗಮ, ಪುರಾಣ ಇತ್ಯಾದಿಗಳನ್ನು ಅಭ್ಯಾಸ ಮಾಡುವುದು ಜನತೆಯ ಹಾಗೂ ಸುಶಿಕ್ಷಿತರ ಜೀವನದಲ್ಲಿ ದಿನಚರಿಯಾಗಿತ್ತು. ಇಂದಿಗೂ ಇದು ಕಂಡುಬರುತ್ತದೆ. ಧಾರ್ಮಿಕ ಆಚರಣೆಗಳೂ ವ್ಯಕ್ತಿಗೆ ಒಂದು ರೀತಿಯ ಮುಂದುವರಿದ ಶಿಕ್ಷಣ ಕಾರ್ಯಕ್ರಮವೆಂದೇ ಭಾವಿಸಬಹುದು. ಇದರಿಂದ ವಿದ್ಯಾವಂತರು ಮತ್ತೆ ನಿರಕ್ಷರತೆಗೆ ಜಾರುವುದು ತಪ್ಪುತ್ತಿತ್ತು. ಪಂಚಮಹಾಯಜ್ಞದಲ್ಲಿ ಪ್ರತಿ ಕುಟುಂಬಿಯೂ ನಿತ್ಯವೂ ಸ್ವಾಧ್ಯಾಯಕ್ಕಾಗಿ ಸ್ವಲ್ಪ ಕಾಲ ಮೀಸಲಿಡಬೇಕೆಂಬ ವಿಧಿಯುಂಟು. ತಾನು ವಿದ್ಯಾರ್ಥಿದೆಶೆಯಲ್ಲಿ ಕಲಿತ ಪವಿತ್ರ ಜ್ಞಾನವನ್ನು ಸ್ಮರಿಸಕೊಳ್ಳುವುದು ಸ್ವಾಧ್ಯಾಯದ ಉದ್ದೇಶ. ನಿಜವಾದ ಜ್ಞಾನಿಗಳಿಗೆ ಸಮಾಜದಲ್ಲಿ ಉತ್ತಮಸ್ಥಾನವನ್ನು ನೀಡುವ ಪದ್ಧತಿಯಿಂದ ವಿದ್ಯಾರ್ಜನೆಯನ್ನು ನಿರಂತರವೂ ಮುಂದುವರಿಸುವ ಕಾರ್ಯಕ್ಕೆ ಸಾಮಾಜಿಕ ಗೌರವ ಸಂದಿದೆ. ಬೃಹದಾರಣ್ಯಕ ಉಪನಿಷತ್ತು ಹೇಳುವಂತೆ ಮಕ್ಕಳನ್ನು ಪಡೆಯುವುದರಿಂದಲೇ ತಂದೆಯ ಕರ್ತವ್ಯ ಮುಗಿಯುವುದಿಲ್ಲ; ಅವರಿಗೆ ತಕ್ಕ ಶಿಕ್ಷಣವೀಯುವುದೂ ಅವನ ಕರ್ತವ್ಯ. ಮಧ್ವಾಚಾರ್ಯರೂ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ತಾನು ಎಷ್ಟೇ ಬಡತನದಲ್ಲಿದ್ದರೂ ಮಕ್ಕಳಿಗೆ ಹೇಗಾದರೂ ಮಾಡಿ ಪ್ರಾಥಮಿಕ ಶಿಕ್ಷಣವನ್ನಾದರೂ ಕೊಡುವುದು ತಂದೆಯ ಕರ್ತವ್ಯವಾಗಿತ್ತು.

ಶಿಕ್ಷಣವನ್ನು ವಿವಿಧ ರೀತಿಯಲ್ಲಿ ಸಮಾಜ ಪ್ರೋತ್ಸಾಹಿಸುತ್ತಿತ್ತು. ಧಾರ್ಮಿಕ ಸಂಘ ಸಂಸ್ಥೆಗಳು ಜನತೆಯ ಶಿಕ್ಷಣ ಕಾರ್ಯಗಳಲ್ಲಿ ಪಾತ್ರವಹಿಸುವ ಏರ್ಪಾಡು ಮಾಡಲಾಗಿತ್ತು. ದಾನಗಳಲ್ಲೆಲ್ಲ ವಿದ್ಯಾದಾನ ಶ್ರೇಷ್ಠವೆಂಬ ಭಾವನೆಯನ್ನು ಎತ್ತಿಹಿಡಿದಿದುದ್ದರಿಂದ ಅದಕ್ಕಾಗಿ ದಾನದತ್ತಿಗಳನ್ನು ಸಂಗ್ರಹಿಸಲು ಧಾರ್ಮಿಕ ವಾತಾವರಣ ಅನುಕೂಲ ಕಲ್ಪಿಸಿತು. ಧನಿಕರೂ ಮಾಂಡಲಿಕರೂ ರಾಜಮಹಾರಾಜರೂ ಶಿಕ್ಷಣಕ್ಕಾಗಿ ಕೊಟ್ಟಿರುವ ದಾನದ ಬಗ್ಗೆ ಬೇಕಾದ ಹಾಗೆ ಶಾಸನ ಸಾಕ್ಷ್ಯಗಳು ದೊರೆತಿವೆ. ರಾಷ್ಟ್ರಕೂಟ ದೊರೆಯಾದ ಮುಮ್ಮಡಿ ಕೃಷ್ಣನ ಸಚಿವ ನಾರಾಯಣ ೯೪೫ರಲ್ಲಿ ಸಾಲೊಟಗಿಯಲ್ಲಿ ಒಂದು ಮಹಾ ವಿದ್ಯಾಲಯ (ಕಾಲೇಜು) ಕಟ್ಟಿಸಿದ. ಅದನ್ನು ನಡೆಸಿಕೊಂಡು ಬರುವ ಖರ್ಚಿಗಾಗಿ ಸ್ಥಳೀಯ ಧನಿಕರೊಬ್ಬರು ೨೦೦ ನಿವರ್ತನ ಭೂಮಿಯನ್ನು ದತ್ತಿಯಾಗಿ ಬಿಟ್ಟರು. ಬಿಜಾಪುರ ಜಿಲ್ಲೆಯ ಮೇತುಂಗಿಯಲ್ಲಿ ೧೨೯೦ರಲ್ಲಿ ಹೊಯ್ಸಳ ಅರಸನ ಮಂತ್ರಿಯಾದ ಪೆರುಮಾಳ ಒಂದು ಮಹಾವಿದ್ಯಾಲಯವನ್ನು ಸ್ಥಾಪಿಸಿ ಅಲ್ಲಿ ವೇದ, ಶಾಸ್ತ್ರ ಕನ್ನಡ, ಮರಾಠಿ ಮತ್ತು ಸಂಸ್ಕೃತಗಳ ಅಧ್ಯಯನಕ್ಕೆ ಅವಕಾಶ ಕಲ್ಪಿಸಿದ. ಬೆಳಗಾಂವಿ ಜಿಲ್ಲೆಯ ಸೊರತೂರಿನಲ್ಲಿ ಶಿಕ್ಷಣಪ್ರಸಾರಕ್ಕಾಗಿ ಒಬ್ಬ ಪ್ರಾಂತಾಧಿಕಾರಿ ೫೦ ಎಕರೆ ಭೂಮಿಯ ಕೊಡುಗೆಯಿತ್ತಿದ್ದ. ಧಾರವಾಡ ಜಿಲ್ಲೆಯ ಹಡಲೆ ಗ್ರಾಮವಾಸಿಯೊಬ್ಬ ೧,೦೮೪ ವಿದ್ಯಾರ್ಥಿಗಳಿಗೆ ಊಟ ಮತ್ತು ಬಟ್ಟೆ ಒದಗಿಸಲು ೩೦ ಎಕರೆ ಭೂಮಿಯನ್ನು ಕೊಟ್ಟ. ಅದೇ ಜಿಲ್ಲೆಯ ಡಂಬಳದಲ್ಲಿ ಹನ್ನೆರಡನೆಯ ಶತಮಾನದಲ್ಲಿದ್ದ ಒಂದು ಶ್ರೀಮಂತ ವೃತ್ತಿ ಸಂಘ ತನ್ನ ಸಿಬ್ಬಂದಿಯವರಿಗಾಗಿ ಒಂದು ಶಿಕ್ಷಣ ಸಂಸ್ಥೆಯನ್ನು ನಡೆಸಿಕೊಂಡು ಬರುತ್ತಿತ್ತು.

ಮುದ್ರಣ ಇಲ್ಲಿದಿದ್ದ ಪ್ರಾಚೀನಕಾಲದಲ್ಲಿ ಗ್ರಂಥಗಳನ್ನು ಕೈಯಲ್ಲಿ ಬರೆದುಕೊಳ್ಳಬೇಕಾಗಿತ್ತು. ವಿದ್ಯಾಕೇಂದ್ರಗಳಲ್ಲಿ ಹಾಗೆ ಬರೆದ ಗ್ರಂಥಗಳ ಸಂಗ್ರಹಣೆ ಅಗತ್ಯವೆಂಬುದನ್ನು ಅರಿತ ಸಮಾಜ ಗ್ರಂಥದಾನ ಒಂದು ಪವಿತ್ರಕಾರ್ಯವೆಂದು ಪರಿಗಣಿಸಿತ್ತು. ಯೋಗ್ಯರು ಗ್ರಂಥದಾನ ಮಾಡುವ ಅಗತ್ಯವನ್ನು ನಂದಿಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಪುರಾಣಗಳನ್ನು ದಾನ ಮಾಡುವಾಗ ಒಂದೊಂದು ಪುರಾಣದ ಗ್ರಂಥ ದಾನಕ್ಕೂ ಬೇರೆ ಬೇರೆ ಪ್ರಮಾಣದಲ್ಲಿ ಪುಣ್ಯ ದೊರೆಯಬಹುದೆಂಬ ಉಲ್ಲೇಖವೂ ಉಂಟು. ಇದರ ಫಲವಾಗಿ ಧನಿಕರೂ ಇತರರೂ ಗ್ರಂಥಗಳನ್ನು ಬರೆಯಿಸಿ ಅಥವಾ ತಾವೇ ಬರೆದು ವಿದ್ಯಾಕೇಂದ್ರಗಳಿಗೆ ದಾನವಾಗಿ ಅರ್ಪಿಸುತ್ತಿದ್ದರು.

ಹಬ್ಬ ಹುಣ್ಣಿಮೆಗಳಲ್ಲೂ ಇತರ ಶುಭಕಾರ್ಯಗಳಲ್ಲೂ ವಿದ್ಯಾರ್ಥಿಗಳನ್ನೂ ಅಧ್ಯಾಪಕ ರನ್ನೂ ಆಹ್ವಾನಿಸುವ ಪದ್ಧತಿ ಕರ್ನಾಟಕದ ಎಲ್ಲ ಭಾಗಗಳಲ್ಲೂ ಇತ್ತು. ಸಾಲೊಟಗಿಯ ಮಹಾಜನರಲ್ಲಿ ಈ ಪದ್ಧತಿಯಿತ್ತೆಂಬುದು ಶಾಸನವೊಂದರಿಂದ ತಿಳಿದು ಬರುತ್ತದೆ. ಹಾಗೆಯೆ ಬಡವಿದ್ಯಾರ್ಥಿಗಳಿಗೆ ಊಟಕ್ಕಾಗಿ ಸತ್ರಗಳನ್ನು ಏರ್ಪಡಿಸುತ್ತಿದ್ದರು. ಆ ಬಗ್ಗೆಯೂ ಯಥೇಚ್ಛ ವಾಗಿ ಸಾಕ್ಷ್ಯಗಳು ದೊರೆತಿವೆ. ಕೊಳಗಳ್ಳಿ, ಮನಗೋಳಿ, ನೀಲಗುಂದ, ನೇಸರ್ಗೆ, ಬಾಗೇವಾಡಿ, ಬೆಳಗಾಂವಿ, ಡಂಬಳ, ಗದಗ, ಬೇಹಟ್ಟಿ ಇತ್ಯಾದಿ ಸ್ಥಳಗಳ ವಿದ್ಯಾರ್ಥಿ ಛಾತ್ರಾಲಯಗಳು ಪ್ರಸಿದ್ಧಿ ಪಡೆದಿದ್ದುವು. ಊರಿನ ಧನಿಕರಿಂದ ಮಾತ್ರ ವ್ಯವಸ್ಥೆ ಏರ್ಪಡುತ್ತಿತ್ತು. ಮಿಕ್ಕವರು ವಿದ್ಯಾರ್ಥಿಗಳಿಗೆ ವಾರ, ಭಿಕ್ಷಾನ್ನ ಇತ್ಯಾದಿಗಳನ್ನು ಒದಗಿಸುವುದರ ಮೂಲಕ ಮಕ್ಕಳ ಶಿಕ್ಷಣವನ್ನು ಪ್ರೋತ್ಸಾಹಿಸುತ್ತಿದ್ದರು.

ವ್ಯಕ್ತಿ, ಸಮಾಜ, ಸಂಘ, ಸಂಸ್ಥೆಗಳಂತೆ ರಾಷ್ಟ್ರವೂ (ಸರ್ಕಾರ) ವಿದ್ಯೆಗೆ ಪ್ರೋತ್ಸಾಹ ನೀಡುತ್ತಿತ್ತು. ವಿದ್ವಜ್ಜನರಿಗೆ ರಾಜನ ಆಸ್ಥಾನದಲ್ಲಿ ಪುರಸ್ಕಾರವಿತ್ತು. ಅವರಿಗೆ ವಿವಿಧ ರೀತಿಯ ಕೊಡುಗೆ, ಸಂಭಾವನೆ, ದಕ್ಷಿಣೆ ಇತ್ಯಾದಿಗಳು ದೊರಕುತ್ತಿದ್ದುವು. ಕೌಟಿಲ್ಯ ತನ್ನ ಅರ್ಥಶಾಸ್ತ್ರದಲ್ಲಿ ಸೂಚಿಸಿರುವ, ಶೈಕ್ಷಣಿಕ ಆಶ್ರಮಗಳಿಗಾಗಿ ಬ್ರಾಹ್ಮಣರಿಗೆ ನಿವೇಶನಗಳನ್ನು ನೀಡಬೇಕೆಂಬ ಸಲಹೆಗೆ ರಾಜರಲ್ಲಿ ಮನ್ನಣೆಯಿತ್ತು. ವಿದ್ಯಾಶ್ರಯ ರಾಜರ ಕರ್ತವ್ಯಗಳಲ್ಲೊಂದೆಂಬ ಸ್ಮೃತಿವಚನದ ಬಗ್ಗೆಯೂ ಮನ್ನಣೆಯಿತ್ತು. ಕರ್ನಾಟಕ ಇತಿಹಾಸದ ಪ್ರಥಮ ಅರಸರಾದ ಸಾತವಾಹನರೇ ಈ ಬಗ್ಗೆ ಮುಂದಿನ ರಾಜಪೀಳಿಗೆಗೆ ತಮ್ಮ ವಿದ್ಯಾಪ್ರೋತ್ಸಾಹದಿಂದ ಮೇಲ್ಪಂಕ್ತಿಯಾದರು. ರಾಜರು ವಿದ್ವಜ್ಜನರಿಗೂ ವಿದ್ಯಾಸಂಸ್ಥೆಗಳಿಗೂ ಧನ, ಕನಕ, ಭೂಮಿ, ಇತ್ಯಾದಿ ಸಹಾಯ ನೀಡಿರುವ ಅಂಶ ಪ್ರಾಚೀನ ಕರ್ನಾಟಕದ ಇತಿಹಾಸದಲ್ಲಿ ಧಾರಾಳವಾಗಿ ವ್ಯಕ್ತಪಟ್ಟಿದೆ. ರಾಷ್ಟ್ರಕೂಟ ಅರಸನಾದ ನಾಲ್ವಡಿ ಗೋವಿಂದ ೯೧೮ರಲ್ಲಿ ರಾಜ್ಯಾರೋಹಣ ಮಾಡಿದಾಗ ೬೦೦ ಹಳ್ಳಿಗಳನ್ನು ಬ್ರಾಹ್ಮಣರಿಗೆ ದಾನವಾಗಿ ಕೊಟ್ಟ. ಹನ್ನೊಂದನೆಯ ಶತಮಾನದ ರಾಜೇಂದ್ರ ಕುಲೋತ್ತುಂಗ ಚೋಳ ತನ್ನ ರಾಜ್ಯದ ಅಧ್ಯಾಪಕರಿಗೆಲ್ಲ ತೆರಿಗೆಯಿಂದ (ಮನೆಗಂದಾಯ) ವಿನಾಯಿತಿ ನೀಡಿದ್ದ. ವಿದ್ಯಾರ್ಥಿಗಳಿಗೂ ರಾಜ್ಯ ಸರ್ಕಾರ ಕೆಲವು ವಿನಾಯಿತಿಗಳನ್ನು ನೀಡುತ್ತಿತ್ತು. ಅವರು ನೇರವಾದ ಯಾವ ತೆರಿಗೆಯನ್ನೂ ಕೊಡಬೇಕಾಗಿರಲಿಲ್ಲ. ಹೊಳೆ ದಾಟುವಾಗ ದೋಣಿಗೆ ಪ್ರಯಾಣದ ತೆರ ಕೊಡಬೇಕಾಗಿರಲಿಲ್ಲ. ಅಭ್ಯಾಸಿಗಳಿಗೂ ವಿದ್ಯಾರ್ಥಿಗಳಿಗೂ ೫೦ ವರ್ಷ ವಯಸ್ಸಿನವರೆಗೂ ಇಂಥ ವಿನಾಯಿತಿ ಇರುತ್ತಿತ್ತು.

ರಾಜ್ಯಗಳು ಸಾರ್ವಜನಿಕ ಶಿಕ್ಷಣವನ್ನು ನೇರ ಹೊಣೆಗಾರಿಕೆಗೆ ತೆಗೆದುಕೊಂಡಿರದಿದ್ದರೂ ಆ ಕಾಲದಲ್ಲಿ ಪ್ರಪಂಚದ ಇತರ ರಾಷ್ಟ್ರಗಳಿಗಿಂತ ಇಲ್ಲಿಯ ಸರ್ಕಾರಗಳು ವಿದ್ಯೆಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದುದು ತೌಲನಿಕ ಇತಿಹಾಸದ ಅಧ್ಯಯನದಿಂದ ವ್ಯಕ್ತಪಡುತ್ತದೆ. ಅದರ ಫಲವಾಗಿ ಅನೇಕ ಶಾಸ್ತ್ರಗಳೂ ವಿಜ್ಞಾನಗಳೂ ಇಲ್ಲಿ ಅಭಿವೃದ್ಧಿ ಹೊಂದಿದುವು. ಲಲಿತಕಲೆಗಳಿಗೆ ರಾಜರು ನೀಡುತ್ತಿದ್ದ ಆಶ್ರಯವನ್ನು ಇಂದಿಗೂ ಅನೇಕ ದೇವಾಲಯಗಳ ಶಿಲ್ಪ ವೈಭವ ಸಾರಿ ಹೇಳುತ್ತದೆ.

ಪ್ರಾಚೀನ ಕರ್ನಾಟಕದಲ್ಲಿ ಶಿಕ್ಷಣದ ಗುರಿ ಮತ್ತು ದೃಷ್ಟಿ: ಗುಣಶೀಲ ನಿರೂಪಣೆ, ವ್ಯಕ್ತಿತ್ವ ವಿಕಾಸ, ಪ್ರಾಚೀನ ಸಂಸ್ಕೃತಿ ರಕ್ಷಣೆ, ಧಾರ್ಮಿಕ- ಇವು ಶಿಕ್ಷಣದ ಪ್ರಧಾನ ಕರ್ತವ್ಯ ನಿರ್ವಹಣೆಗಾಗಿ ಕಿರಿಯ ಪೀಳಿಗೆಗೆ ಶಿಕ್ಷಣ ನೀಡಿಕೆ- ಇವು ಶಿಕ್ಷಣದ ಪ್ರಧಾನ ಗುರಿಗಳಲ್ಲಿ ಸೇರಿದ್ದುವು. ಇದು ಬಹುಮಟ್ಟಿಗೆ ಭಾರತೀಯ ಶಿಕ್ಷಣದ ಗುರಿಯೇ ಆಗಿತ್ತು. ಅದಕ್ಕಾಗಿ ಇಲ್ಲಿ ರೂಪುಗೊಂಡಿದ್ದ ಶಿಕ್ಷಣಪದ್ಧತಿ ಆ ಗುರಿಗಳನ್ನು ಪರಿಣಾಮಕಾರಿಯಾಗಿ ಸಾಧಿಸುತ್ತಿದ್ದ ಬಗ್ಗೆ ಭಾರತದ ಈ ಭಾಗದಲ್ಲಿ ಸಂಚರಿಸಿದ ಯುವಾನ್ ಚಾಂಗ್ ಮುಂತಾದ ಯಾತ್ರಿಕರು ಉಲ್ಲೇಖಿಸಿದ್ದಾರೆ.

ಹೊಯ್ಸಳರ ಕಾಲದಲ್ಲಿ ಶಿಕ್ಷಣ

[ಬದಲಾಯಿಸಿ]

ಹಿಂದಿನ ಯುಗಗಳಲ್ಲಿದ್ದ ಅಗ್ರಹಾರ, ಘಟಿಕ, ಬ್ರಹ್ಮಪುರಿ, ಮಠ ಇವೆಲ್ಲ ತಮ್ಮ ಶಿಕ್ಷಣಸೇವೆಯನ್ನು ಹೊಯ್ಸಳರ ಕಾಲದಲ್ಲೂ ಮುಂದುವರಿಸಿ ಕೊಂಡೇ ಬಂದುವು. ಅರಸೀಕರೆ (ಸರ್ವಜ್ಞಪುರ) ಬನವಾಸಿಯ ನಾಗರುಖಂಡ, ಶಿವಮೊಗ್ಗ ಜಿಲ್ಲೆಯ ಕೆಲ್ಲಾಂಗ್ರೆ ಈ ಅಗ್ರಹಾರಗಳು ಉಚ್ಛ್ರಾಯಸ್ಥಿತಿಯಲ್ಲಿದ್ದುವು. ನೊಣಂಬೇಶ್ವರ ದೇವಾಲಯದ ಶಿಕ್ಷಣ ಕೇಂದ್ರ ಪ್ರಸಿದ್ಧ ಘಟಿಕಾ ಸ್ಥಾನವೆಂಬ ಖ್ಯಾತಿ ಗಳಿಸಿತ್ತು. ಬೌದ್ಧವಿಹಾರ ಗಳಂತೆ ಕೆಲವು ಬ್ರಹ್ಮಪುರಿಗಳೂ ಈ ಕಾಲದಲ್ಲಿ ಉಚ್ಚಶಿಕ್ಷಣ ನೀಡುತ್ತಿದ್ದುವು. ೧೧೫೮ರ ಸುಮಾರಿನಲ್ಲಿ ಅಸ್ತಿತ್ವದಲ್ಲಿದ್ದ ತಾಳಗುಂದದ ದೇವಾಲಯಕ್ಕೆ ಸೇರಿದ ಚಿಕ್ಕ ಸಂಸ್ಕೃತ ಕಾಲೇಜು ಉಚ್ಚಶಿಕ್ಷಣದ ನವಲತ್ತು ವಿದ್ಯಾರ್ಥಿಗಳಿಗೆ ಆಶ್ರಯ ಸ್ಥಾನವಾಗಿತ್ತು. ಬನವಾಸಿಯ ರಾಜಧಾನಿಯಾದ ಬಳ್ಳಿಗಾವೆಯಲ್ಲಿ ಮೂರು ಬ್ರಹ್ಮಪುರಗಳೂ ಏಳು ಬ್ರಹ್ಮಪುರಿಗಳೂ, ಶಿವ, ಬುದ್ಧ, ಜಿನ, ಬ್ರಹ್ಮ, ವಿಷ್ಣು ಇವರಿಗೆ ಏರ್ಪಡಿಸಿದ್ದ ಐದು ಮಠಗಳೂ ಜೈನಬಸದಿಗಳೂ ಬೌದ್ಧವಿಹಾರಗಳೂ ಹಿಂದೂ ದೇವಾಲಯಗಳೂ ಇದ್ದು ಸರ್ವಧರ್ಮಗಳ ಶಿಕ್ಷಣಕ್ಕೂ ಅದು ಕೇಂದ್ರವೆನಿಸಿತ್ತು. ಅಂದಿಗೆ ಜೈನ ಶಿಕ್ಷಣಸಂಸ್ಥೆಗಳ ಪ್ರಭಾವ ಕಳೆಗುಂದುತ್ತ ಬಂದಿದ್ದರೂ ಅವು ಹೊಯ್ಸಳರ ಆಳ್ವಿಕೆಯ ಕೊನೆಯ ದಿನಗಳವರೆಗೂ ಕರ್ನಾಟಕದಲ್ಲಿ ಮುಂದುವರಿದು ಕೊಂಡು ಬಂದುವು. ಹೊಯ್ಸಳದೊರೆಗಳು ಹಿಂದೂ ಮತ್ತು ಜೈನ ಮಠಗಳೆರಡಕ್ಕೂ ಸಮಾನ ಉತ್ತೇಜನವೀಯುತ್ತ ಬಂದರು. ಎಲ್ಲ ಮಠಗಳೂ ಎಲ್ಲ ಮತದವರಿಗೂ ಉಚ್ಚ ಶಿಕ್ಷಣವೀಯುತ್ತಿದ್ದುದು ಒಂದು ವಿಶಿಷ್ಟ ಅಂಶ. ಹೊಯ್ಸಳದೊರೆಗಳೂ, ಅವರ ರಾಜ್ಯದ ವರ್ತಕರೂ ಶ್ರೀಮಂತರೂ ಮಠಗಳಿಗೂ ಇತರ ಶಿಕ್ಷಣಸಂಸ್ಥೆಗಳಿಗೂ ದತ್ತಿಗಳನ್ನು ಕೊಡುತ್ತಿದ್ದರು. ಅಲ್ಲದೆ ಚಾಳುಕ್ಯ ಮತ್ತು ಕಳಚುರ್ಯ ಅರಸರೂ ನೆರೆಹೊರೆಯ ರಾಜ್ಯಗಳ ಶ್ರೀಮಂತರೂ ಅವಕ್ಕೆ ದತ್ತಿ, ಉಂಬಳಿ, ಕೊಡುಗೆ ಇತ್ಯಾದಿಗಳನ್ನು ನೀಡುತ್ತಿದ್ದರು. ಪ್ರತಿ ಹಳ್ಳಿಯೂ ಪ್ರಾಥಮಿಕ ಶಿಕ್ಷಣದ ಮಹತ್ತ್ವವನ್ನು ಕಂಡುಕೊಂಡು ಮಕ್ಕಳಿಗೆ ಪಾಠ ಹೇಳಲು ಸಾರ್ವಜನಿಕ ವ್ಯವಸ್ಥೆಯನ್ನು ಮಾಡಿಕೊಳ್ಳುವುದು ಆರಂಭವಾಯಿತು. ಅದಕ್ಕಾಗಿ ಸಂಭಾವನೆಯ ಮೇಲೆ ಅಧ್ಯಾಪಕರನ್ನು ಊರವರು ನೇಮಕ ಮಾಡಿಕೊಳ್ಳುತ್ತಿದ್ದರು.

ಆ ಕಾಲದಲ್ಲಿ ಅನೇಕ ಮಹಿಳೆಯರು ಸಾಹಿತ್ಯ ಮತ್ತು ಲಲಿತಕಲೆಗಳಲ್ಲಿ ಪ್ರಾವೀಣ್ಯ ಪಡೆದಿದ್ದರು. ಕಂತಿ, ಮಹಾದೇವಿಯಕ್ಕ ಮುಂತಾದವರು ಕವಯಿತ್ರಿಯರು, ತತ್ತ್ವಜ್ಞಾನಿಗಳು. ಆದರೆ ಜನಸಾಮಾನ್ಯರಲ್ಲಿ ಮಹಿಳೆಯರಿಗೆ ಪ್ರತ್ಯೇಕ ಪ್ರಾಥಮಿಕ ಅಥವಾ ಉನ್ನತ ಶಿಕ್ಷಣ ವ್ಯವಸ್ಥೆಯಿದ್ದಂತೆ ತೋರುವುದಿಲ್ಲ. ದೇವಸ್ಥಾನ, ಮಠಗಳು, ಜಾತ್ರೆ, ಉತ್ಸವ ಮುಂತಾದವುಗಳಲ್ಲಿ ಏರ್ಪಡಿಸುತ್ತಿದ್ದ ಪುರಾಣಶ್ರವಣ ಹರಿಕಥೆ, ಶಿವಕಥೆ, ಧಾರ್ಮಿಕ ಪ್ರವಚನ, ನಾಟಕಪ್ರದರ್ಶನ ಇತ್ಯಾದಿಗಳ ಮೂಲಕವೇನೋ ಅವರಿಗೆ ಒಂದು ರೀತಿಯ ಶಿಕ್ಷಣ ದೊರಕುತ್ತಿತ್ತು.

ವೃತ್ತಿ ಶಿಕ್ಷಣ

[ಬದಲಾಯಿಸಿ]

ಹೊಯ್ಸಳರ ಕಾಲದಲ್ಲಿ ಯುದ್ಧಗಳು ಆಗಾಗ ನಡೆಯುತ್ತಿದ್ದುದರಿಂದ ಸೈನ್ಯಾಚರಣೆಗೆ ಸಂಬಂಧಿಸಿದ ಉದ್ಯೋಗಗಳ ಶಿಕ್ಷಣಕ್ಕೆ ಪ್ರಚೋದನೆ ದೊರಕಿತ್ತೆಂದು ಹೇಳಬಹುದು. ಸೈನಿಕ ಶಿಕ್ಷಣದಂತೆ ಯುದ್ಧೊಪಕರಣಗಳಿಗೆ ಬೇಕಾದ ಲೋಹದ ಕೆಲಸ, ಬಡಗಿ ಕೆಲಸ, ಕಮ್ಮಾರರ ಕೆಲಸ ಇತ್ಯಾದಿಗಳಲ್ಲಿ ಶಿಕ್ಷಣವೀಯಲು ಕಸಬುದಾರರ ಮನೆಯೇ ತಾಂತ್ರಿಕ ಶಿಕ್ಷಣ ಶಾಲೆಯಾಗಿ ಕೆಲಸಮಾಡುತ್ತಿತ್ತು. ಅನೇಕ ವೃತ್ತಿಗಳು ವಂಶಪಾರಂಪರ್ಯವಾಗಿ ಬಂದ ಕುಟುಂಬದ ಕಸಬುಗಳಾಗಿದ್ದರೂ ಅವರು ರೂಪಿಸಿದ ಸಾಮಗ್ರಿಗಳನ್ನು ಸಂಗ್ರಹಿಸಿ ವ್ಯಾಪಾರ ಮಾಡುವ ಸಂಸ್ಥೆಗಳು ಅಸ್ತಿತ್ವದಲ್ಲಿದ್ದು ಅಲ್ಲಿಯ ಸಿಬ್ಬಂದಿಯವರಿಗೆ ವಿವಿಧ ವೃತ್ತಿಗಳಲ್ಲಿ ಶಿಕ್ಷಣವೀಯಲು ಆ ಸಂಸ್ಥೆಗಳೇ ವ್ಯವಸ್ಥೆ ಗೊಳಿಸುತ್ತಿದ್ದುವು. ಇಂಥ ಸಂಸ್ಥೆಗಳಲ್ಲಿ ವೀರ ಪಂಚಾಲದ ಉದಾಹರಣೆ ಕೊಡಬಹುದು. ಅಭ್ಯಾಸಿಗಳು ತಾವು ಕಸಬನ್ನು ಕಲಿಯುವಾಗಲೂ ಹಣ ಗಳಿಸುತ್ತಿದ್ದರು. ಹೀಗೆ ಕಸಬುಗಳು ವ್ಯಕ್ತಿಯಿಂದ ವ್ಯಕ್ತಿಗೆ ಹಸ್ತಗತವಾಗುತ್ತಿದ್ದುದರ ಜೊತೆಗೆ ವ್ಯಾಪಾರ ಸಂಸ್ಥೆಗಳೂ ಆ ಕಾರ್ಯದಲ್ಲಿ ಮುಖ್ಯ ಪಾತ್ರ ವಹಿಸುತ್ತಿದ್ದುವು. ಆ ಕಾಲದಲ್ಲಿ ರೂಪುಗೊಂಡಿರುವ ಪ್ರಸಿದ್ಧ ದೇವಾಲಯಗಳನ್ನು ನೋಡಿದರೆ ಶಿಲ್ಪಕಲೆಗೂ ನಕಾಸೆ ರಚಿಸುವ ಕಲೆಗೂ ವ್ಯಾಪಕರೀತಿಯ ಶಿಕ್ಷಣವಿದ್ದಿರ ಬೇಕೆಂಬುದು ವ್ಯಕ್ತವಾಗುತ್ತದೆ. ಆ ಶಿಕ್ಷಣಕ್ಕೆ ಸಂಬಂಧಿಸಿದಂತೆ ಪುರಾಣ, ಗಣಿತ, ಚಿತ್ರಕಲೆ ಇವುಗಳ ಶಿಕ್ಷಣಕ್ಕೂ ಅವಕಾಶ ಮಾಡಿದ್ದಿರಬೇಕು. ವಾಸ್ತುಶಿಲ್ಪ, ಶಿಲ್ಪಶಾಸ್ತ್ರ, ಪ್ರತಿಮಾಶಿಲ್ಪ, ವರ್ಣಚಿತ್ರ ಇತ್ಯಾದಿ ವಿದ್ಯೆಗಳಲ್ಲಿ ಪ್ರಸಿದ್ಧಿ ಪಡೆದಿದ್ದ ಕುಟುಂಬಗಳು ಇದ್ದುವೆಂಬ ಅಂಶ ತಿಳಿದುಬಂದಿದೆ. ಸಂಗೀತ, ನೃತ್ಯ ಇತ್ಯಾದಿ ಲಲಿತಕಲೆಗಳ ಶಿಕ್ಷಣ ಸಾಮಾನ್ಯವಾಗಿ ರಾಜಮನೆತನಗಳಿಗೂ ಧನಿಕವರ್ಗದವರಿಗೂ ಸೀಮಿತವಾಗಿದ್ದರೂ ಅವನ್ನು ಕಲಿಸತಕ್ಕವರು ಸಾಮಾನ್ಯ ಜನರೇ ಆಗಿದ್ದು ಆ ಕಲೆಯ ಶಿಕ್ಷಣ ಆ ಕುಟುಂಬಕ್ಕೆ ವಂಶಪಾರಂಪರ್ಯವಾಗಿ ಬಂದುದಾಗಿತ್ತು. ಆಯುರ್ವೇದ, ಗಣಿತಶಾಸ್ತ್ರ, ಪಶುವೈದ್ಯ, ಇತ್ಯಾದಿ ಶಾಸ್ತ್ರಗಳ ಶಿಕ್ಷಣವೂ ಕೆಲಕೆಲವು ಕುಟುಂಬಗಳಲ್ಲಿ ವಂಶಪಾರಂಪರ್ಯವಾಗಿ ನಡೆದು ಬರುತ್ತಿತ್ತು. ಹೊಯ್ಸಳ ದೊರೆಗಳು ಪಶುವೈದ್ಯ ಶಾಸ್ತ್ರವನ್ನು ಅಭಿವೃದ್ಧಿಪಡಿಸಲು ತುಂಬ ಆಸಕ್ತಿ ತೋರುತ್ತಿದ್ದರು. ಆನೆಗಳ ವಿಷಯಕ್ಕೆ ಸಂಬಂಧಿಸಿದ ವ್ಯಾಸಂಗದಲ್ಲೂ ಅವರಿಗೆ ಅಷ್ಟೇ ಆಸಕ್ತಿಯಿತ್ತು.

ಶಿಕ್ಷಣ ಮಾಧ್ಯಮ

[ಬದಲಾಯಿಸಿ]

೧ನೆಯ ಶತಮಾನಾದ ಅನಂತರದ ಧಾರ್ಮಿಕ ಪುನರುಜ್ಜೀವನದ ಪರಿಣಾಮವೆಂದರೆ ಸಂಸ್ಕೃತಾಧ್ಯಯನಕ್ಕೆ ಲಭಿಸಿದ ಪ್ರಾಶಸ್ತ್ಯ. ದೇಶೀಯ ಭಾಷೆಯ ಪ್ರಚಾರಕರೆಂದು ಪ್ರಸಿದ್ಧರಾಗಿದ್ದ ಜೈನ ಬೌದ್ಧರೂ ಸಂಸ್ಕೃತವನ್ನೇ ವಿಶೇಷವಾಗಿ ಬಳಸಲಾರಂಭಿಸಿದರು. ೪ನೆಯ ಶತಮಾನದಿಂದ ಪ್ರಾಕೃತದಲ್ಲಿ ಬರೆದ ಶಾಸನಗಳಾಗಲಿ ಇತರ ಲೇಖನಗಳಾಗಲಿ ದೊರೆತಿಲ್ಲ. ಅಂಥ ಕಾಲದಲ್ಲಿ ಸಾತವಾಹನ ಅರಸರು ಪ್ರಾಕೃತಕ್ಕೆ ಪ್ರಾಶಸ್ತ್ಯವಿತ್ತು ಎಲ್ಲ ಕಾರ್ಯಗಳಿಗೂ ಅದನ್ನು ಬಳಸಲಾರಂಭಿಸಿದ್ದರು. ಜನರು ಮನೆಯಲ್ಲೂ ಅದನ್ನೇ ಆಡಬೇಕೆಂದು ಉತ್ತರದ ಕೆಲವು ರಾಜರು ಶಾಸನ ಮಾಡಿದ್ದರು. ಆದರೆ ಅವರ ಅನಂತರದ ರಾಜರು ತಮ್ಮ ಅಂತಃಪುರದಲ್ಲಿ ಮೊದಲುಗೊಂಡು ಎಲ್ಲೆಲ್ಲೂ ಸಂಸ್ಕೃತವನ್ನೇ ಆಡಬೇಕೆಂದು ಗೊತ್ತುಮಾಡಿದರು. ಅದರ ಪ್ರಭಾವ ದಕ್ಷಿಣದ ಕರ್ನಾಟಕದ ಮೇಲೂ ಬಿದ್ದಿತ್ತು. ಪ್ರಾಥಮಿಕ ಶಾಲೆಗಳಲ್ಲೂ ಸಂಸ್ಕೃತ ವ್ಯಾಕರಣವನ್ನು ಬೋಧಿಸುವುದು ಆರಂಭವಾಯಿತು. ಪ್ರಾಕೃತಕ್ಕಾಗಲಿ ಜನರ ಆಡುನುಡಿಗಾಗಲಿ ಪುರಸ್ಕಾರವಿಲ್ಲವಾಯಿತು. ಇದರ ಪರಿಣಾಮವಾಗಿ ಜನಸಾಮಾನ್ಯರಲ್ಲಿ ಜ್ಞಾನ ಮತ್ತು ಸಂಸ್ಕೃತಿ ಪ್ರಚಾರಕ್ಕೆ ಅಡ್ಡಿಯೊದಗಿತು. ಕನ್ನಡ ಭಾಷೆಯ ಬೆಳೆವಣಿಗೆಗೆ ಇದರಿಂದ ಅವಕಾಶವಿಲ್ಲದಂತಾಗಿರಬೇಕು. ಸಾತವಾಹನರ ಅನಂತರ ಬಂದ ಚಾಳುಕ್ಯಾದಿ ರಾಜಮನೆತನಗಳು ಕನ್ನಡಕ್ಕೆ ಪ್ರೋತ್ಸಾಹ ನೀಡತೊಡಗಿದುವು. ಅನಂತರ ಕನ್ನಡ ಅಕ್ಷರಾಭ್ಯಾಸ, ಓದು, ಬರಹ- ಇವು ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಕಲಾಪಗಳಾಗತೊಡಗಿದುವು. ಕ್ಷತ್ರಿಯರೂ ವೈಶ್ಯರೂ ಇತರರೂ ತಮ್ಮ ಉದ್ಯೋಗ ನಿರ್ವಹಣೆಗೆ ಜನಸಾಮಾನ್ಯರೊಂದಿಗೆ ಆಡುಭಾಷೆಯ ಮೂಲಕವೇ ಸಂಪರ್ಕ ಪಡೆಯಬೇಕಾಗಿದ್ದುದರಿಂದ ಅವರು ಕನ್ನಡವನ್ನೂ ಕಲಿಯುವುದು ಅಗತ್ಯವಾಗುತ್ತ ಬಂತು. ಜನಸಾಮಾನ್ಯರ ಪ್ರಾಥಮಿಕ ಶಾಲೆಗಳಲ್ಲಿ ಅಂಕಗಣಿತ, ಲೆಕ್ಕಾಚಾರ ಇವನ್ನೆಲ್ಲ ಕನ್ನಡದಲ್ಲೇ ಬೋಧಿಸುತ್ತಿದ್ದರು. ಕ್ರಮಕ್ರಮವಾಗಿ ಸಂಸ್ಕೃತಕ್ಕಿದ್ದ ಆದ್ಯತೆ ಕಡಿಮೆಯಾಗಿ ಆ ಸ್ಥಾನ ಕನ್ನಡಕ್ಕೆ ಬಂತು. ನರಸೀಪುರದಲ್ಲಿದ್ದ ಉನ್ನತ ಶಿಕ್ಷಣಕೇಂದ್ರದಲ್ಲಿಯ ವಿದ್ಯಾರ್ಥಿಗಳಿಗೆ ಅವರ ಮಾತೃಭಾಷೆಯಲ್ಲೆ ಬೋಧಿಸುವುದು ಆರಂಭವಾಯಿತು. ಸಾಮಾನ್ಯ ಜನರಲ್ಲಿ ಕನ್ನಡವೇ ಎಲ್ಲ ಕಾರ್ಯಗಳಿಗೂ ಬಳಕೆಯ ಭಾಷೆಯಾಗುತ್ತ ಬಂತು. ಅವರಿಗೆ ಶಿಕ್ಷಣ ದೊರೆಯುತ್ತಿದ್ದುದು ಕನ್ನಡದಲ್ಲೆ. ಆದರೆ ಅಲ್ಲಲ್ಲಿದ್ದ ಕೆಲವು ಪಾಠಶಾಲೆಗಳಲ್ಲಿ ಸಂಸ್ಕೃತವನ್ನು ಅಧ್ಯಯನ ಮಾಡುತ್ತಿದ್ದರು. ಉನ್ನತ ಶಿಕ್ಷಣ ಸಂಸ್ಥೆಗಳಲ್ಲಂತೂ ಮಧ್ಯಯುಗದ ಆರಂಭ ಕಾಲದವರೆಗೂ ಕನ್ನಡ ಅಧ್ಯಯನವಿಷಯವಾಗಿದ್ದರೂ ಶಿಕ್ಷಣ ಮಾಧ್ಯಮವಾಗಿ ಅಷ್ಟಾಗಿ ಪ್ರಚಾರಕ್ಕೆ ಬಂದಿರಲಿಲ್ಲ.

ಮಧ್ಯಯುಗದಲ್ಲಿ

[ಬದಲಾಯಿಸಿ]

ಹೊಯ್ಸಳರ ಆಳ್ವಿಕೆಯ ಕೊನೆಗಾಲದೊಡನೆ ಸಂಭವಿಸಿದ ಮುಸಲ್ಮಾನರ ಆಕ್ರಮಣದ ಫಲವಾಗಿ ಹಿಂದಿನಿಂದಲೂ ನಡೆದುಕೊಂಡು ಬರುತ್ತಿದ್ದ ಶಿಕ್ಷಣಪ್ರಗತಿಗೆ ಅಡ್ಡಿಯೊದಗಿತು. ಆಗ ಅಸ್ತವ್ಯಸ್ತವಾದ ಕರ್ನಾಟಕದ ಶಿಕ್ಷಣವ್ಯವಸ್ಥೆ ಒಂದು ಸಂದಿಗ್ಧ ಸ್ಥಿತಿ ಮುಟ್ಟಿತು. ಹದಿನಾಲ್ಕನೆಯ ಶತಮಾನದಲ್ಲಿ ನಡೆದ ಅವರ ದಾಳಿಯ ಮುನ್ನಡೆಯ ಪ್ರವಾಹ ದಕ್ಷಿಣದಲ್ಲಿ ರಾಮೇಶ್ವರದ ವರೆಗೂ ಸಾಗಿ ಜನಜೀವನ ಕ್ಷೋಭೆಗೀಡಾಗಿ ಶಿಕ್ಷಣವೂ ಬಲವಾದ ಪೆಟ್ಟು ತಿಂದಿತು. ಸಾಮಾನ್ಯಜನತೆಯ ಶಿಕ್ಷಣ ಹಾಗಿರಲಿ, ರಾಜಕುಮಾರರ ಶಿಕ್ಷಣವೂ ದುವರ್ಯ್‌ವಸ್ಥೆಗೀಡಾಯಿತು. ಅದು ತನಕ ಒಂದೂವರೆ ಸಹಸ್ರವರ್ಷಗಳ ಹಿಂದೆಯೇ ಜೈನ ಮತ್ತು ಬೌದ್ಧ ಶಿಕ್ಷಣ ಪದ್ಧತಿಗಳು ಕರ್ನಾಟಕದ ಮೇಲೆ ದಾಳಿಮಾಡಿದ್ದರೂ ಇಲ್ಲಿಯ ಪದ್ಧತಿಗೆ ಅವು ಪರಕೀಯವೆನಿಸಿಕೊಂಡು ಉಳಿಯದೆ ಅದನ್ನು ಪರಿಪುಷ್ಟಿ ಗೊಳಿಸಿದುವು; ಅಷ್ಟೇ ಅಲ್ಲ, ಕರ್ನಾಟಕ ಜನತೆಗೆ ಅವು ಆದರಣೀಯವೆನಿಸಿ ಇಲ್ಲಿಯ ಜನಜೀವನವನ್ನು ರಸಾವಿಷ್ಟಗೊಳಿಸಿ ಜೀವನದ ಮೌಲ್ಯದಲ್ಲಿ ಹೊಸ ದಿಗಂತವನ್ನು ಕಂಡುಕೊಳ್ಳುವಂಥ ಅಮೃತ ಪರಿಣಾಮವನ್ನೂ ಬೀರಿದುವು. ಮುಸ್ಲಿಮರ ದಾಳಿ ಇಲ್ಲಿಯವರ ಜೀವನವನ್ನು ಪರಿಪೋಷಿಸುವುದು ಹಾಗಿರಲಿ, ಇಲ್ಲಿಯ ಜನತೆಗೂ ಧರ್ಮ ಸಂಸ್ಕೃತಿಗಳಿಗೂ ನಿರ್ದಿಷ್ಟವಾಗಿ ವಿಪತ್ಕಾರಿಯಾಗಿ ಪರಿಣಮಿಸಿತು. ಹಿಂದೂ ರಾಜ್ಯಗಳ ಪತನದಿಂದ ಶಿಕ್ಷಣ ಸಂಸ್ಥೆಗಳಿಗೆ ಪ್ರೋತ್ಸಾಹ ಇಲ್ಲವಾಯಿತು. ಮುಸಲ್ಮಾನರ ದಾಳಿಗೆ ಸಿಕ್ಕಿಯೂ ಇವು ಹಾಳಾದುವು. ತಮ್ಮ ಪರಂಪರೆಗೇ ವಿನಾಶವೊದಗೀತೆಂಬ ಭೀತಿ ಜನ ಜೀವನದಲ್ಲಿ ಆವರಿಸಿ, ಕನ್ನಡಿಗರ ಶಕ್ತಿಯನ್ನು ಸಂಘಟಿಸಿ ತಮ್ಮ ಸಂಸ್ಕೃತಿ ಸಂಪ್ರದಾಯಗಳನ್ನು ರಕ್ಷಿಸಬಲ್ಲ ಪ್ರಬಲರಾಷ್ಟ್ರವೊಂದರ ನಿರ್ಮಾಣಕ್ಕೆ ಪ್ರೇರಣೆಯಾಯಿತು. ಅದರ ಫಲವಾಗಿ ವಿಜಯನಗರ ಸಾಮ್ರಾಜ್ಯ ಅಸ್ತಿತ್ವಕ್ಕೆ ಬಂತು; ಕರ್ನಾಟಕಕ್ಕೆ ಶಾಂತಿನೆಮ್ಮದಿಗಳನ್ನು ಒದಗಿಸಿ ಕೊಟ್ಟಿತು. ರಾಜರು, ಮಾಂಡಲಿಕರು, ಮತ್ತಿತರ ವರಿಷ್ಠ ಮನೆತನಗಳಲ್ಲಿ ಶಿಕ್ಷಣದ ಪ್ರಾಮುಖ್ಯದ ಅರಿವುಂಟಾಗಿ ರಾಜಕೀಯ ದೃಷ್ಠಿಯಿಂದ ಅಗತ್ಯ ವ್ಯವಸ್ಥೆಗಳು ಅನುಷ್ಠಾನಕ್ಕೆ ಬಂದುವು. ಆ ರಾಜ್ಯದ ಮೂಲ ಪುರುಷರಾದ ಬುಕ್ಕ ಹರಿಹರರೇ ಪ್ರಸಿದ್ಧ ವಿದ್ವಾಂಸರೆನಿಸಿದ್ದ ವಿದ್ಯಾರಣ್ಯರ ಶಿಷ್ಯರಾಗಿದ್ದರು. ಹರಿಹರ ಸ್ವತಃ ಪಂಡಿತಶ್ರೇಷ್ಠ, “ಕರ್ನಾಟಕದ ವಿದ್ಯಾವಿಲಾಸ” ನೆಂಬ ಕೀರ್ತಿಗೆ ಪಾತ್ರ. ವಿಜಯನಗರ ವಿದ್ಯಾಪ್ರೇಮ ಕರ್ನಾಟಕದ ಇತರ ರಾಜಮನೆತನ ಗಳಲ್ಲೂ ಪ್ರತಿಬಿಂಬಿಸಿತು. ರಾಜಕುಮಾರರಿಗೆ ಉಚಿತವಾದ ಶಾಸ್ತ್ರ ಶಿಕ್ಷಣ, ದೈಹಿಕ ಶಿಕ್ಷಣ, ರಾಜನೀತಿ, ಯುದ್ಧ ಕೌಶಲ ಇತ್ಯಾದಿ ವಿದ್ಯೆಗಳನ್ನೆಲ್ಲ ರಾಣಿ ಚೆನ್ನಮ್ಮಾಜಿ ತನ್ನ ದತ್ತಪುತ್ರ ಬಸವಪ್ಪನಿಗೆ ಕಲಿಸಿದ್ದಳು.

ಪ್ರಾಥಮಿಕ ಶಿಕ್ಷಣ

[ಬದಲಾಯಿಸಿ]

ಪ್ರಾಥಮಿಕ ಶಿಕ್ಷಣದಲ್ಲಿ ಲಿಪಿಗ್ರಹಣ, ಪದವಾಕ್ಯ ಪ್ರಮಾಣ, ಪುರಾಣಶ್ರವಣ, ಚರಿತ್ರೆಗಳೇ ಮುಂತಾದವು, ಭೂಗೋಳಗಳ ಅಧ್ಯಯನ, ಅಂಗಸಾಧನೆ, ಸಂಗೀತ ಇವೆಲ್ಲವನ್ನೂ ಕಲಿಸಲಾಗುತ್ತಿತ್ತು. ಆ ವೇಳೆಗೆ ಕರ್ನಾಟಕದ ಊರೂರುಗಳಲ್ಲೂ ವೀರಶೈವಮತದ ಪುನರುಜ್ಜೀವನದ ಫಲವಾಗಿ ರೂಪುಗೊಂಡಿದ್ದ ಮಠಗಳು ಕ್ರಮ ಕ್ರಮವಾಗಿ ಧಾರ್ಮಿಕ ಶಿಕ್ಷಣದ ಜೊತೆಗೆ ಮೇಲೆ ಸೂಚಿಸಿದ ಲೌಕಿಕ ಶಿಕ್ಷಣಕ್ಕೂ ಅವಕಾಶ ಮಾಡಿಕೊಟ್ಟವು. ಶಿಕ್ಷಣಕ್ಕೆ ದೊರೆತ ಪ್ರಾಮುಖ್ಯವನ್ನರಿತ ಜನಸಾಮಾನ್ಯರು ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ವಿಶಿಷ್ಟ ವ್ಯವಸ್ಥೆ ಮಾಡಲು ತೊಡಗಿದ್ದರು. ಅದನ್ನೇ ವಿಶಿಷ್ಟ ಉದ್ಯೋಗವನ್ನಾಗಿ ಅನುಸರಿಸುವ ಅಯ್ಯಗಳು ಕಾಣಿಸಿಕೊಳ್ಳಹತ್ತಿದರು. ಕನಕದಾಸರು ತಮ್ಮ ಮೋಹನ ತರಂಗಿಣಿಯಲ್ಲಿ ಸೂಚಿಸಿರುವಂತೆ ಕಸೆ ಅಂಗಿ ತೊಟ್ಟು ಕೈಯಲ್ಲಿ ಬೆತ್ತ ಹಿಡಿದು ಚೌಪದಿ ರಚನೆಯಲ್ಲಿ ನಿಪುಣರೆನಿಸಿದ್ದ ಅಂದಿನ ಉಪಾಧ್ಯಾಯರ ವ್ಯಕ್ತಿ ಚಿತ್ರ ಇಂದಿಗೂ ನೆನಪಾಗಿ ಉಳಿದಿದೆ. ಮರಳಿನ ಮೇಲೆ ತಿದ್ದಿ ಅಕ್ಷರಾಭ್ಯಾಸ ಮಾಡಿಸುವ ಪದ್ಧತಿಯೇ ಮುಂದುವರಿಯು ತ್ತಿತ್ತು. ಸಂಖ್ಯಾಪಠನ, ಮಗ್ಗಿ, ಪುರ್ಣಾಂಕಗಳಿಂದ ಭಿನ್ನಾಂಕಗಳನ್ನು ಗುಣಿಸುವುದು, ನಾಣ್ಯ, ಅಳತೆ, ತೂಕ, ಇವುಗಳನ್ನೊಳಗೊಂಡ ಲೆಕ್ಕ ಮಾಡುವುದು ಇವೆಲ್ಲ ಅಲ್ಲಿಯ ಪಠ್ಯ ಕ್ರಮದಲ್ಲಿ ಸೇರಿದ್ದುವು. ಅಂದಿಗಾಗಲೆ ಕನ್ನಡದಲ್ಲಿ ಗ್ರಂಥಗಳ ರಚನೆಯಾಗಿದ್ದು ಪುರಾಣ ವಾಚನವೂ ನಡೆಯುತ್ತಿತ್ತು. ೧೭ನೆಯ ಶತಮಾನದಲ್ಲಿ ಭಾರತಪ್ರವಾಸ ಮಾಡಿದ ಪಿರಾರ್ದ್‌ ದೆಲವಲ್ ಇಲ್ಲಿಯ ಬೋಧನಕ್ರಮವನ್ನು ವಿವರಿಸುತ್ತ, ಬುದ್ಧಿವಂತನಾದ ವಿದ್ಯಾರ್ಥಿ ಒಂದು ಪಾಠವನ್ನು ಪಠಿಸುತ್ತಿದ್ದ; ಮಿಕ್ಕವರು ಅದನ್ನು ಪುನರಾವರ್ತಿಸುತ್ತಿದ್ದರು. ಕಾಗದ, ಮಸಿ ಇವಾವುವೂ ವ್ಯರ್ಥವಾಗದೆ ಸರಾಗವಾಗಿ ವಿದ್ಯಾರ್ಥಿಗಳು ಪಾಠ ಕಲಿಯುತ್ತಿದ್ದ ಈ ಕ್ರಮ ತುಂಬ ಪರಿಣಾಮಕಾರಿಯೂ ಸರಳವೂ ಆದದ್ದು ಎಂದು ಹೊಗಳಿದ್ದಾನೆ. ಮಾನಿಟರ್ ಪದ್ಧತಿಯ ಈ ಬೋಧನಕ್ರಮದ ಉಲ್ಲೇಖ ಮೊಟ್ಟಮೊದಲು ಇವನ ವರದಿಯಲ್ಲಿ ಕಾಣಿಸಿಕೊಂಡಿದೆ. ಪ್ರಾಥಮಿಕ ಶಿಕ್ಷಣ ೫-೬ ವರ್ಷಗಳದಾಗಿದ್ದು ಮೇಲಿನ ತರಗತಿಯಲ್ಲಿ ಸಂಕಲನ, ವ್ಯವಕಲನ, ಗುಣಾಕಾರ, ಭಾಗಾಕಾರ, ಸರಳಬಡ್ಡಿ, ತ್ರೈರಾಶಿ- ಈ ಲೆಕ್ಕಗಳನ್ನು ಕಲಿಸುತ್ತಿದ್ದರು. ಅಲ್ಲಿಯ ಶಿಕ್ಷಣಕ್ಕೆ ಕಳಸವಿಟ್ಟಂತೆ ಜೈಮಿನಿಭಾರತ, ವಿದುರನೀತಿ, ಸೋಮೇಶ್ವರ ಶತಕ, ಅಮರಕೋಶ, ಪಂಚತಂತ್ರ ಇತ್ಯಾದಿಗಳನ್ನು ಓದಿಸಲಾಗುತ್ತಿತ್ತು.

ಉನ್ನತ ಶಿಕ್ಷಣ

[ಬದಲಾಯಿಸಿ]

ಪ್ರಾಚೀನ ಕಾಲದ ಉನ್ನತ ಶಿಕ್ಷಣ ಸಂಸ್ಥೆಗಳು ಮಧ್ಯಯುಗಗಳಲ್ಲೂ ಮುಂದುವರಿದುಕೊಂಡು ಬಂದುವು. ಆದರೆ ವಿಜಯನಗರದ ಪತನಾನಂತರ ಕೆಲವು ಅಗ್ರಹಾರಗಳು ನಿಂತುಹೋದುವು. ಮತ್ತೆ ಕೆಲವು ಕೇವಲ ಊಟದ ಸತ್ರಗಳಾಗಿ ಪರಿಣಮಿಸಿದುವು. ಆಗಲೂ ಕೆಲವು ಹೊಸ ಅಗ್ರಹಾರಗಳು ಆರಂಭವಾದುದೇನೋ ನಿಜ. ದಳವಾಯಿ ದೇವರಾಯನ ರಾಮಚಂದ್ರಪುರದ ಅಗ್ರಹಾರ ಇದಕ್ಕೆ ಉದಾಹರಣೆ. ೧೭೪೮ರಲ್ಲಿ ದೇವರಾಯ ಅಲ್ಲಿ ಅಗತ್ಯವಾದ ಮನೆಮಠಗಳನ್ನು ಕಟ್ಟಿಸಿ ಸಜ್ಜುಗೊಳಿಸಿ ೧೨೦ ಮಂದಿ ವೇದಾಂಗಶಾಸ್ತ್ರಗಳಲ್ಲಿ ಪಂಡಿತರೆನಿಸಿದ ಬ್ರಾಹ್ಮಣರನ್ನು ನೆಲೆಗೊಳಿಸಿದ. ಇಂಥ ಸದುದ್ದೇಶದಿಂದ ಸ್ಥಾಪನೆಯಾದ ಈ ಅಗ್ರಹಾರ ೧೮೦೭ರಲ್ಲಿ ಎಳಂದೂರನ್ನು ಪೂರ್ಣಯ್ಯ ನವರಿಗೆ ಜಹಗೀರು ಕೊಟ್ಟಾಗ ಅಂತ್ಯಗೊಂಡಿತು. ಹಿಂದಿನ ಮಠಗಳು ವಿದ್ಯಾಭ್ಯಾಸವನ್ನು ನಿರ್ಲಕ್ಷಿಸುತ್ತ ಬಂದು ಅವು ಕೇವಲ ಮತೀಯಕೇಂದ್ರಗಳಾದುವು. ಅಲ್ಲಿಯ ಗುರುಗಳನೇಕರು ಜನತೆಯ ವಿದ್ಯಾಭ್ಯಾಸದ ಕಡೆ ಗಮನವೀಯದೆ ತಮ್ಮ ಅನುಯಾಯಿಗಳ ಮೇಲೆ ಧಾರ್ಮಿಕ ಒಡೆತನ ಸಾಧಿಸುವುದರಲ್ಲಿ ಮಾತ್ರ ನಿರತರಾದರು. ಪಠ್ಯವಿಷಯ ಮತ್ತು ಅಧ್ಯಯನ ವಿಧಾನ: ಅಂದಿನ ರಾಜಾಸ್ತಾನದಲ್ಲಿ ಯಾವ ಯಾವ ಅಂಶಗಳಿಗೆ ಪ್ರಾಶಸ್ತ್ಯವಿತ್ತೊ ಆ ವಿಷಯಗಳನ್ನು ಕೆಲವು ಉನ್ನತ ಶಿಕ್ಷಣ ಕೇಂದ್ರಗಳು ಬೋಧಿಸುತ್ತಿದ್ದುವು. ಅಂಥ ವಿಷಯಗಳಲ್ಲಿ ಕಾವ್ಯ, ಗಾಯನ, ಪುರಾಣ, ಜ್ಯೋತಿಷ, ಯುದ್ಧಕಲೆ- ಇವುಗಳ ಶಿಕ್ಷಣಕ್ಕೆ ಪ್ರಾಧಾನ್ಯ ಬರಹತ್ತಿತ್ತು. ಸೋಮೇಶ್ವರ ಶತಕದಲ್ಲಿ ಹೇಳುವಂತೆ ಆ ವಿಷಯಗಳನ್ನು ಬಲ್ಲವರಿಂದ, ಶಾಸ್ತ್ರಗಳಿಂದ, ಇತರ ಕೃತಿಗಳಿಂದ, ತನ್ನ ಬೌದ್ಧಿಕ ಯತ್ನದಿಂದ ಅಥವಾ ಸಜ್ಜನರ ಸಂಗದಿಂದ ಕಲಿಯುವುದು ರೂಢಿಯಲ್ಲಿತ್ತೆಂದು ಊಹಿಸ ಬಹುದು. ಅಧ್ಯಯನಾನಂತರ ಪರೀಕ್ಷೆಯೊಂದು ಇರದಿದ್ದರೂ ಸರ್ಕಾರದ ಅಂಗೀಕಾರ ಪ್ರೋತ್ಸಾಹಗಳು ಬೇಕಾಗಿದ್ದರೆ ಸಾರ್ವಜನಿಕ ಪರೀಕ್ಷೆಯೊಂದಕ್ಕೆ ಸಿದ್ಧರಾಗಬೇಕಾಗಿತ್ತು. ೧೪೪೭ರಲ್ಲಿ ಭಾಷ್ಯಭೂಷಣ ಎಂಬ ಗ್ರಂಥರಚನಕಾರನಾದ ಆದಿತ್ಯಾಚಾರ್ಯ ಅಂಥ ಒಂದು ಪರೀಕ್ಷೆಯಲ್ಲಿ ಉತ್ತೀರ್ಣನಾಗಿ ನಲ್ಲಂಗಿ ಎಂಬ ಗ್ರಾಮವನ್ನು ದತ್ತಿಯಾಗಿ ಪಡೆದ ಪ್ರಸಂಗದ ಉಲ್ಲೇಖವುಂಟು. ತನ್ನಿಂದ ಬಹುಮಾನವನ್ನಪೇಕ್ಷಿಸುತ್ತಿದ್ದವರನ್ನು ಕೃಷ್ಣದೇವರಾಯ ಸ್ವತಃ ಪರೀಕ್ಷಿಸುತ್ತಿದ್ದನಂತೆ. ಗುರುಶಿಷ್ಯ ಸಂಬಂಧ: ಪ್ರಾಚೀನ ಕಾಲದಿಂದಲೂ ಬಂದ ಗುರುಗಳ ಉನ್ನತ ಸ್ಥಾನ ಮುಂದುವರಿದುಕೊಂಡು ಬಂತು. ಸರ್ವಜ್ಞ ಹೇಳುವಂತೆ “ಗುರುವಿನ ಬಳಿ ಅವನ ಎತ್ತಾಗಿ, ತೊತ್ತಾಗಿ, ಅವನ ಹಿತ್ತಲಿನ ಗಿಡವಾಗಿ, ಅವನ ಕಾಲಿನ ಒತ್ತಾಗಿ ಇರುವುದು ಶಿಷ್ಯರಿಗೆ ಅಗತ್ಯವಾಗಿತ್ತು. ಕನಕದಾಸ ಹೇಳುವಂತೆ ಗುರುವಿನ ಗುಲಾಮನಾಗುವ ವರೆಗೆ ಮುಕುತಿ ದೊರೆಯುವುದು ದುರ್ಲಭವೆಂಬ ನಂಬಿಕೆಯಿತ್ತು. ಆದರೆ ಅಂಥ ಪುಜ್ಯತೆಯನ್ನು ಪಡೆದುಕೊಳ್ಳಬೇಕಾದರೆ ಗುರು ತನ್ನ ನೆಲೆಯನ್ನು ಅರಿತುಕೊಂಡಿರುವುದೂ ಪಾಂಡಿತ್ಯ ಘನತೆ ಗಾಂಭೀರ್ಯಾದಿ ಉನ್ನತ ಆದರ್ಶಗಳನ್ನು ತಳೆದಿರುವುದೂ ಅಗತ್ಯವಾಗಿತ್ತು. ಅಲ್ಲದೆ, ಅಂಥ ವಿದ್ವಾಂಸರು ವಿದ್ಯೆಯನ್ನು ಇತರರಿಗೆ ಕಲಿಸುವುದು ಕರ್ತವ್ಯವಾಗಿತ್ತು”.

ಮುಸ್ಲಿಂ ಶಿಕ್ಷಣ

[ಬದಲಾಯಿಸಿ]

ಪ್ರ.ಶ. ೧೪ನೆಯ ಶತಮಾನದ ಮೊದಲ ದಶಕಗಳಲ್ಲಿ ಮುಸ್ಲಿಂ ಶಿಕ್ಷಣ ಸಂಸ್ಥೆಗಳು ಉತ್ತರ ಕರ್ಣಾಟಕದ ಬೇರೆ ಬೇರೆ ಭಾಗಗಳಲ್ಲಿ ಅಸ್ತಿತ್ವಕ್ಕೆ ಬಂದುವು. ಅವುಗಳೆಲ್ಲ ಬಹುಮಟ್ಟಿಗೆ ಮಸೀದಿಗಳ ಅಂಗವಾಗಿ ಏರ್ಪಟ್ಟಿದ್ದುವು. ೧೩೪೩ರಲ್ಲಿ ಅಲ್ಲಿ ಪ್ರವಾಸಮಾಡಿದ ಇಬ್ನ್‌ ಬತೂತ ವಿವರಿಸಿರುವಂತೆ ಮಸೀದಿಗಳ ನಿಧಿಯಿಂದ ವಿದ್ಯಾರ್ಥಿವೇತನಗಳನ್ನು ಪಡೆದು ಮುಸ್ಲಿಂ ಧರ್ಮಶಾಸ್ತ್ರಗಳನ್ನು ಅಭ್ಯಾಸ ಮಾಡುತ್ತಿದ್ದರು. ಹೊನ್ನಾವರ ಪ್ರದೇಶದಲ್ಲಿ ಮುಸ್ಲಿಂ ಹೆಣ್ಣು ಮಕ್ಕಳಿಗಾಗಿಯೆ ಅನೇಕ ಶಾಲೆಗಳು ಆರಂಭವಾಗಿದ್ದುವು. ಅಲ್ಲಿ ವಿದ್ಯಾರ್ಥಿನಿಯರು ಬಹು ಆಸಕ್ತಿಯಿಂದ ಖುರಾನನ್ನು ಪಠಣ ಮಾಡುತ್ತಿದ್ದರು. ಬಹಮನಿ ಅರಸ ಎರಡನೆಯ ಮಹಮ್ಮದ್ ತನ್ನ ಮುಸ್ಲಿಂ ಪ್ರಜೆಗಳಿಗೆ ಉತ್ತಮ ಶಿಕ್ಷಣ ಸೌಲಭ್ಯವನ್ನು ಒದಗಿಸಿದ್ದ. ಸ್ವತಃ ಆತ ಒಳ್ಳೆಯ ವಿದ್ಯಾವಂತನಾಗಿದ್ದು ೧೩೭೮ರಲ್ಲಿ ಉನ್ನತ ಶಿಕ್ಷಣಕ್ಕಾಗಿ ಮದ್ರಸಾಗಳೆಂಬ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಅಲ್ಲಿ ಅನಾಥವಿದ್ಯಾರ್ಥಿಗಳ ಊಟ ವಸತಿಗಳೂ ಉಚಿತ ಶಿಕ್ಷಣಕ್ಕೂ ವ್ಯವಸ್ಥೆಗೊಳಿಸಿದ್ದ. ಗುಲ್ಬರ್ಗಾ, ಬಿದರೆ ಮುಂತಾದೆಡೆ ಗಳಲ್ಲಿ ಆರಂಭವಾದ ಮದ್ರಸಾಗಳು ಬಹು ಪ್ರಸಿದ್ಧವಾಗಿದ್ದುವು. ಅಲ್ಲದೆ ಆತ ಕೆಲವು ಸೈನಿಕ ಶಾಲೆಗಳನ್ನೂ ಸ್ಥಾಪಿಸಿದ್ದ. ಅನಂತರ ಹದಿನೈದನೆಯ ಶತಮಾನದ ಕೊನೆಯಲ್ಲಿ ಅಲ್ಲಿಯ ರಾಜರ ಬಳಿ ಮಂತ್ರಿಯಾಗಿದ್ದ ಮಹಮೂದ್ ಗಾವಾನ್ ಮುಸಲ್ಮಾನರಿಗೆ ಉನ್ನತ ಶಿಕ್ಷಣಸೌಲಭ್ಯವನ್ನು ವಿಸ್ತರಿಸಿದ. ೧೪೭೨ರಲ್ಲಿ ಆತ ತನ್ನ ಸ್ವಂತ ಹಣದಿಂದ ಬಿದರೆಯಲ್ಲಿ ಮಹಾ ವಿದ್ಯಾಲಯವೊಂದನ್ನು ಕಟ್ಟಿಸಿದ. ಇಸ್ಲಾಂದೇಶಗಳಲ್ಲಿ ಆ ಕಾಲದಲ್ಲಿದ್ದ ವಿದ್ಯಾಮಂದಿರ ಗಳ ಮಾದರಿಯಲ್ಲೆ ರಚನೆಯಾಗಿದ್ದ ಈ ವಿದ್ಯಾಲಯದಲ್ಲಿ ಆತ ದಕ್ಷರಾದ ವಿಜ್ಞಾನಿಗಳನ್ನೂ ಇತರ ಪಂಡಿತರನ್ನೂ ನೇಮಿಸಿದ್ದ. ಜೊತೆಗೆ ಅಲ್ಲಿ ಅವನೂ ಪ್ರಾಧ್ಯಾಪಕನಾಗಿ ಕೆಲಸ ಮಾಡುತ್ತಿದ್ದ. ಅಲ್ಲಿಯ ಪುಸ್ತಕ ಭಂಡಾರದಲ್ಲಿ ಸುಮಾರು ಮೂರು ಸಾವಿರ ಗ್ರಂಥಗಳಿದ್ದುವು.

ಬಹಮನಿ ಅರಸರ ಅನಂತರ ಅಧಿಕಾರಕ್ಕೆ ಬಂದ ಆದಿಲ್ಷಾಹಿ ಅರಸರು ಬಿಜಾಪುರ ವನ್ನು ರಾಜಧಾನಿಯನ್ನಾಗಿ ಮಾಡಿಕೊಂಡರು. ಅವರು ಸಾರ್ವತ್ರಿಕ ಪ್ರಾಥಮಿಕ ಶಿಕ್ಷಣಕ್ಕೂ ತಾಂತ್ರಿಕ ಶಿಕ್ಷಣಕ್ಕೂ ಉತ್ತೇಜನ ಕೊಟ್ಟರು. ಅವರು ಅರಬೀ ಮತ್ತು ಪರ್ಷಿಯನ್ ಭಾಷೆಗಳ ಪುರೋಭಿವೃದ್ಧಿಗೆ ನೆರವು ನೀಡಿದರು. ಅವರ ಕಾಲದಲ್ಲಿ ವಾಸ್ತುಶಿಲ್ಪ ಮತ್ತು ವಿಜ್ಞಾನ ವಿದ್ಯೆಗಳಲ್ಲಿ ಪರಿಣತರಾದವರು ದೇಶದಲ್ಲಿ ಹೇರಳವಾಗಿದ್ದರು. ಕರ್ಣಾಟಕಕ್ಕೆ ಆದಿಲ್ಷಾಹಿಗಳು ಹೊರಗಿನವರಾದರೂ ಇಲ್ಲಿಯ ಮುಸಲ್ಮಾನರ ಕಲ್ಯಾಣಕ್ಕಾಗಿ ಎಲ್ಲ ರೀತಿಯ ಶಿಕ್ಷಣಕ್ಕೂ ಪ್ರೋತ್ಸಾಹ ನೀಡುತ್ತಿದ್ದರು. ಮುಸಲ್ಮಾನ್ ಪ್ರಜೆಗಳ ಪ್ರಾಥಮಿಕ ಶಿಕ್ಷಣಕ್ಕಾಗಿ ಮಕ್ತಾಬ್ ಎಂಬ ಸಂಸ್ಥೆಗಳನ್ನು ಆರಂಭಿಸಿದ್ದರು. ಅವು ಆ ಕಾಲದಲ್ಲಿ ಉತ್ತರಭಾರತ ದಲ್ಲಿ ಪ್ರಚಾರದಲ್ಲಿದ್ದ ಸಂಸ್ಥೆಗಳ ಮಾದರಿಯಲ್ಲೆ ಇದ್ದು ಉರ್ದು ಭಾಷೆಯ ಅಕ್ಷರಾಭ್ಯಾಸ, ಓದುಗಾರಿಕೆ, ಬರೆವಣಿಗೆ ಇತ್ಯಾದಿಗಳನ್ನು ಕಲಿಸುತ್ತಿದ್ದುವು.

ಮೈಸೂರಿನ ಒಡೆಯರು ಕಲೆ, ವಿಜ್ಞಾನ, ಶಾಸ್ತ್ರ ಇತ್ಯಾದಿಗಳ ಪುರೋಭಿವೃದ್ಧಿಗೆ ಆಶ್ರಯವಿತ್ತಿದ್ದುದು ಕರ್ನಾಟಕದ ಇತಿಹಾಸದಲ್ಲಿ ಪ್ರಧಾನವಾಗಿ ಎದ್ದು ಕಾಣುತ್ತದೆ. ರಾಜ್ಯದ ಅಧಿಕಾರ ಹೈದರ್ ಅಲಿ ಟಿಪ್ಪು ಸುಲ್ತಾನರ ಕೈಸೇರಿದಾಗ ಹಿಂದೂ ಶಿಕ್ಷಣಕ್ಕೆ ಅಷ್ಟಾಗಿ ಪ್ರೋತ್ಸಾಹವಿರಲಿಲ್ಲ. ಟಿಪ್ಪುಸುಲ್ತಾನ ವಿದ್ಯಾಪ್ರೇಮಿಯಾಗಿದ್ದರೂ ಮುಖ್ಯವಾಗಿ ಮುಸ್ಲಿಂ ಶಿಕ್ಷಣದ ಕಡೆ ಗಮನ ಕೊಟ್ಟಿದ್ದ. ಅನಂತರ ಸುಮಾರು ಐದು ಶತಮಾನಗಳ ತನಕ ಎಂದರೆ ಬ್ರಿಟಿಷರು ತಮ್ಮ ಶಿಕ್ಷಣ ಪದ್ಧತಿಯನ್ನು ಆರಂಭಿಸುವ ತನಕ ದಕ್ಷಿಣ ಭಾರತದಲ್ಲಿ ಮುಸಲ್ಮಾನರ ಆಡಳಿತ ಕರ್ನಾಟಕದ ಬೇರೆ ಬೇರೆ ಭಾಗಗಳಲ್ಲಿ ಅಸ್ತಿತ್ವದಲ್ಲಿದ್ದರೂ ಆ ಆಳರಸರು ದೇಶೀಯ ಶಿಕ್ಷಣಪದ್ಧತಿಗೆ ಪ್ರೋತ್ಸಾಹವನ್ನಾಗಲಿ ಕೊಡುಗೆಯನ್ನಾಗಲಿ ನೀಡಲಿಲ್ಲ. ಮುಸಲ್ಮಾನರ ಅಥವಾ ಆ ಮತವನ್ನು ಅನುಸರಿಸಿದವರ ಶಿಕ್ಷಣಕ್ಕಾಗಿ ಮಕ್ತಾಬ್ಗಳನ್ನೂ ಮದ್ರಸಾಗಳನ್ನೂ ಆರಂಭಿಸಿದರೂ ಹಿಂದೂಗಳ ಶಿಕ್ಷಣದ ಬಗ್ಗೆ ಆಸಕ್ತಿ ವಹಿಸಲಿಲ್ಲ. ಹಿಂದೆಲ್ಲ ರಾಜರೂ ಮಾಂಡಲಿಕರೂ ಹಿಂದೂ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ನೀಡುತ್ತಿದ್ದ ಆಶ್ರಯ ಇಲ್ಲವಾಯಿತು. ಅವರ ಆಕ್ರಮಣದ ದಾಳಿಯ ಕಾಲದಲ್ಲಿ ಅನೇಕ ದೇವಾಲಯಗಳೂ ಅವುಗಳಲ್ಲಿದ್ದ ಶಿಕ್ಷಣಕೇಂದ್ರಗಳೂ ಗ್ರಂಥಭಂಡಾರಗಳೂ ನಾಶವಾದುವು. ಅಲ್ಲಿದ್ದ ಅಧ್ಯಾಪಕರೂ ವಿದ್ಯಾರ್ಥಿಗಳೂ ಅವನ್ನು ಬಿಟ್ಟುಹೋಗಬೇಕಾಯಿತು. ಹಿಂದೂ ಶಿಕ್ಷಣವನ್ನು ಪಡೆದವರಿಗೆ ರಾಜ್ಯದಲ್ಲಿ ಉದ್ಯೋಗವಾಗಲಿ ಪ್ರೋತ್ಸಾಹವಾಗಲಿ ದೊರಕುವಂತಿರಲಿಲ್ಲ. ಇವೆಲ್ಲದರ ಫಲವಾಗಿ ಅಕ್ಷರಸ್ಥರ ಸಂಖ್ಯೆ ಕುಗ್ಗುತ್ತ ಬಂತು. ಉನ್ನತ ಶಿಕ್ಷಣ ಪಡೆದವರ ಸಂಖ್ಯೆಯೂ ತೀರ ಕಡಿಮೆಯಾಯಿತು. ೧೮ನೆಯ ಶತಮಾನದ ಕೊನೆಯ ವೇಳೆಗೆ ಅಕ್ಷರಸ್ಥರ ಸಂಖ್ಯೆ ಶೇ. ೧೫ಕ್ಕಿಂತ ಕಡಿಮೆಯಿತ್ತೆಂದೂ ೧೨ನೆಯ ಶತಮಾನದಲ್ಲಿ ಆ ಸಂಖ್ಯೆ ಶೇ.೩೦ಕ್ಕಿಂತ ಹೆಚ್ಚಾಗಿತ್ತೆಂದೂ ಊಹಿಸಲಾಗಿದೆ.

ಮುಸಲ್ಮಾನರ ದಾಳಿಯಿಂದ ವಿಪತ್ತಿಗೀಡಾದ ಮೇಲೆ ಕರ್ನಾಟಕದಲ್ಲಿ ಅನಾದಿ ಕಾಲ ದಿಂದಲೂ ಬೆಳೆದುಕೊಂಡು ಬಂದಿದ್ದ ಶಿಕ್ಷಣ ಸಂಪ್ರದಾಯ ಮುಂದೆ ಚೇತರಿಸಿಕೊಳ್ಳಲಿಲ್ಲ. ಅಲ್ಲೊಂದು ಇಲ್ಲೊಂದು ಮಠ, ಅಗ್ರಹಾರ, ಬ್ರಹ್ಮಪುರಿಗಳು ಉಳಿದುಕೊಂಡಿದ್ದರೂ ಮುಸಲ್ಮಾನ್ ರಾಜರು ಪ್ರೋತ್ಸಾಹ ನೀಡದಿದ್ದುದರ ಫಲವಾಗಿ ಅವು ಕ್ರಮಕ್ರಮವಾಗಿ ಕಾರ್ಯವಿಮುಖವಾದುವು. ಮುಂದೆ ೧೯ನೆಯ ಶತಮಾನದಲ್ಲಿ ಇಂಗ್ಲಿಷರು ಆರಂಭಿಸಿದ ಶಿಕ್ಷಣ ಪದ್ಧತಿಯ ಮೇಲೆ ಅವು ತಮ್ಮ ಪ್ರಭಾವ ಬೀರದಾದುವು.

ಆಧುನಿಕ ಯುಗ ಆರಂಭವಾಗುವ ಎಂದರೆ ೧೯ನೆಯ ಶತಮಾನದ ಆದಿಯವರೆಗೆ ಪಾಶ್ಚಾತ್ಯ ದೇಶಗಳಿಂದ ಮತಪ್ರಚಾರಕ್ಕಾಗಿ ಬಂದ ಪಾದ್ರಿಗಳು ಅದರ ಅಂಗವಾಗಿ ಅಥವಾ ಕ್ರೈಸ್ತ ಸಂನ್ಯಾಸಿಗಳಿಗಾಗಿ ಶಿಕ್ಷಣ ಸಂಸ್ಥೆಗಳನ್ನು ತಮ್ಮ ದೇಶಗಳಲ್ಲಿದ್ದ ಮಾದರಿಯಲ್ಲಿ ಆರಂಭಿಸಿದರು. ಗೋವ, ಮದ್ರಾಸು, ಕಲ್ಕತ್ತ ಮುಂತಾದೆಡೆ ಅಂಥ ಸಂಸ್ಥೆಗಳು ೧೭ನೆಯ ಶತಮಾನದ ಕೊನೆಯ ಹೊತ್ತಿಗೆ ಆರಂಭವಾದರೂ ಕರ್ನಾಟಕದಲ್ಲಿ ಅವು ಹತ್ತೊಂಬತ್ತನೆಯ ಶತಮಾನದ ಮೊದಲನೆಯ ದಶಕದ ಅನಂತರವೇ ಆರಂಭವಾದದ್ದು. ಅಂಥ ಶಾಲೆಗಳು ೧೯೧೨ರಲ್ಲಿ ಬಳ್ಳಾರಿಯಲ್ಲೂ ಅನಂತರ ಇತರೆಡೆಗಳಲ್ಲೂ ಆರಂಭವಾದುವು. ಪೋರ್ಚುಗೀಸ್, ಫ್ರೆಂಚ್ ಮತ್ತು ಡೇನಿಷ್ ಕ್ರೈಸ್ತಪಾದ್ರಿಗಳು ಅಲ್ಲಲ್ಲಿ ತೆರೆದ ಶಿಕ್ಷಣ ಸಂಸ್ಥೆಗಳ ಮೂಲಕ ಯೂರೋಪಿನ ಕ್ರೈಸ್ತ ಶಿಕ್ಷಣ ಪದ್ಧತಿ ಭಾರತಕ್ಕೂ ಆ ಮೂಲಕ ಕರ್ನಾಟಕಕ್ಕೂ ಆಗಮಿಸಿತು. ಕ್ರೈಸ್ತಮತೀಯ ಕೇಂದ್ರಗಳಿಗೆ ಸಂಬಂಧಿಸಿದಂತೆ ಪ್ರಾಥಮಿಕ ಶಾಲೆಗಳೂ ವ್ಯವಸಾಯ ಮತ್ತು ಕೈಗಾರಿಕಾ ಶಿಕ್ಷಣಕೇಂದ್ರಗಳೂ ಕೆಲವು ಉನ್ನತ ಶಿಕ್ಷಣಸಂಸ್ಥೆಗಳೂ ಕ್ರೈಸ್ತಪಾದ್ರಿಗಳ ತರಬೇತಿಗಾಗಿ ಸೆಮಿನರಿಗಳೂ ಸ್ಥಾಪಿತವಾದುವು. ಬ್ರಿಟಿಷರ ಈಸ್ಟ್‌ ಇಂಡಿಯಾ ಕಂಪೆನಿಯ ಅಧಿಕಾರ ಕರ್ನಾಟಕಕ್ಕೆ ವ್ಯಾಪಿಸಿದಂತೆ ಕ್ರೈಸ್ತ ಶಿಕ್ಷಣ ಪದ್ಧತಿಯ ವ್ಯಾಪ್ತಿ ಹೆಚ್ಚಲಾರಂಭಿಸಿತು. ಧರ್ಮಾರ್ಥ ಶಿಕ್ಷಣಸಂಸ್ಥೆಗಳ ಕಟ್ಟಡ, ಸಿಬ್ಬಂದಿ ಮುಂತಾದ ವೆಚ್ಚಗಳಿಗಾಗಿ ಆ ಶಾಲೆಗಳಿಗೆ ಅಷ್ಟಿಷ್ಟು ಧನ ಸಹಾಯವನ್ನು ಕಂಪೆನಿಯ ಸರ್ಕಾರ ಒದಗಿಸುತ್ತಿತ್ತು. ೧೯ನೆಯ ಶತಮಾನದ ೩-೪ನೆಯ ದಶಕದ ಹೊತ್ತಿಗೆ ಅಮೆರಿಕದ ಕೆಲವು ಕ್ರೈಸ್ತ ಮತೀಯ ಸಂಸ್ಥೆಗಳೂ ತಮ್ಮ ಶೈಕ್ಷಣಿಕ ಚಟುವಟಿಕೆಗಳನ್ನು ಆರಂಭಿಸಿದುವು. ಹತ್ತೊಂಬತ್ತನೆಯ ಶತಮಾನದ ೪, ೫, ೬ನೆಯ ದಶಕಗಳನ್ನು ಮಿಷನರಿ ಶಾಲೆಗಳ ಕಾಲವೆಂದು ಹೇಳುವುದುಂಟು. ಅಂದಿಗಾಗಲೆ ಮುಸ್ಲಿಮರ ದಾಳಿಯಿಂದಲೂ ಸ್ಥಳೀಯ ರಾಜಮಹಾರಾಜರ ಮತ್ತು ಶ್ರೀಮಂತ ದಾನಿಗಳ ಪ್ರೋತ್ಸಾಹದ ಅಭಾವದಿಂದಲೂ ದೇಶೀಯ ಶಿಕ್ಷಣ ಪದ್ಧತಿ ಕ್ಷೀಣಿಸಿತು. ನೂತನ ಶಿಕ್ಷಣ ಪದ್ಧತಿ ಬಹುಬೇಗ ದೇಶಾದ್ಯಂತ ವ್ಯಾಪಿಸಹತ್ತಿತು. ಆಗತಾನೆ ಭದ್ರವಾಗುತ್ತಿದ್ದ ಇಂಗ್ಲಿಷರ ರಾಜಕೀಯ ಬೆಂಬಲವೂ ಅದಕ್ಕೆ ದೊರೆತದ್ದರಿಂದ ಇಲ್ಲಿನವರೆಗೆ ಆ ಪದ್ಧತಿ ಆಕರ್ಷಣೀಯವಾಗಿಯೂ ಪರಿಣಮಿಸಿತು. (ಎನ್.ಎಸ್.ವಿ.)

ಆಧುನಿಕ ಯುಗದಲ್ಲಿ

[ಬದಲಾಯಿಸಿ]

ಬ್ರಿಟಿಷರ ಕಾಲದಲ್ಲಿ ಹಲವು ಆಡಳಿತ ವ್ಯವಸ್ಥೆಗಳ ನಡುವೆ ಹಂಚಿಹೋದ ಕರ್ನಾಟಕದಲ್ಲಿ ಸಮಗ್ರವಾದ ಶಿಕ್ಷಣವ್ಯವಸ್ಥೆ ರೂಪುಗೊಂಡದ್ದು ಏಕೀಕರಣದ ಅನಂತರವೇ. ಅದಕ್ಕೆ ಮುಂಚೆ ಇದರ ವಿವಿಧ ಭಾಗಗಳಲ್ಲಿ ಆಯಾ ಆಡಳಿತ ವ್ಯವಸ್ಥೆಗಳ ಶಿಕ್ಷಣ ಪದ್ಧತಿಗಳೇ ಬಹುತೇಕ ಜಾರಿಯಲ್ಲಿದ್ದುವು. ಮೈಸೂರು ಸಂಸ್ಥಾನ ಭಾಗದಲ್ಲಿ ಆಧುನಿಕ ಪದ್ಧತಿಯ ಶಿಕ್ಷಣ ಪ್ರಾರಂಭವಾದುದು ಹತ್ತೊಂಬತ್ತನೆಯ ಶತಮಾನದ ಆದಿಯಿಂದ. ಅದಕ್ಕೆ ಹಿಂದೆ ದೇವಾಲಯಗಳಲ್ಲಿ ವೇದಪಾಠ ಶಾಲೆಗಳೂ, ಮಸೀದಿಗಳಲ್ಲಿ ಕೊರಾನ್ ಶಾಲೆಗಳೂ ಗ್ರಾಮಾಂತರಗಳಲ್ಲಿ ಓದುಬರಹ ಲೆಕ್ಕಾಚಾರದ ಲೌಕಿಕ ಶಿಕ್ಷಣದ ಕೂಲಿ ಮಠಗಳೂ ಶಿಕ್ಷಣ ಸಂಸ್ಥೆಗಳಾಗಿದ್ದುವು. ಆಧುನಿಕ ಶಿಕ್ಷಣಾಶಾಲೆಗಳು ಸ್ಥಾಪಿತವಾದಂತೆ ಈ ಮೂರು ಬಗೆಯ ಶಾಲೆಗಳು ಕಡಿಮೆಯಾಗುತ್ತ ಬಂದುವು.

ಭಾರತೀಯರು ಇಂಗ್ಲಿಷ್ ಭಾಷೆಯಲ್ಲಿ ಶಿಕ್ಷಣ ಪಡೆಯುವುದು ಅವರ ಪರೋಭಿವೃದ್ಧಗೆ ಅವಶ್ಯವೆಂಬುದಾಗಿ ಭಾರತದಲ್ಲಿ ಪ್ರತಿಪಾದಿಸಿದವರೆಂದರೆ ಮಕಾಲೆ ಮತ್ತು ರಾಜಾರಾಮ ಮೋಹನರಾಯ. ೧೮೪೦-೧೮೫೦ರ ಕಾಲದಲ್ಲಿ ಮೈಸೂರು ಸಂಸ್ಥಾನದ ಕೆಲವು ಕಡೆಗಳಲ್ಲಿ ಕ್ರೈಸ್ತ ಪಾದ್ರಿಗಳೂ ಬೆಂಗಳೂರಿನಲ್ಲಿ ಸರ್ಕಾರವೂ ಮೈಸೂರು ನಗರದಲ್ಲಿ ಮಹಾರಾಜರೂ ಇಂಗ್ಲಿಷ್ ಶಾಲೆಗಳನ್ನು ತೆರೆದರು. ಭಾರತ ಸರ್ಕಾರಕ್ಕೆ ೧೮೫೪ರಲ್ಲಿ ಬ್ರಿಟಿಷ್ ಸರ್ಕಾರ ಕಳಿಸಿದ ವೂಡ್ರ ಪತ್ರದ (ವೂಡ್ಸ್‌ ಡೆಸ್ಪ್ಯಾಚ್) ಅಂಗವಾಗಿ ಶಿಕ್ಷಣ ವ್ಯವಸ್ಥೆ ರಚಿತವಾಯಿತು. ಭಾರತ ಸರ್ಕಾರ ನಾಲ್ಕು ವಿಭಾಗೀಯ ಇಂಗ್ಲಿಷ್ ಶಾಲೆಗಳನ್ನು ಎಂಬತ್ತು ತಾಲ್ಲೂಕು ದೇಶ ಭಾಷಾ ಶಾಲೆಗಳನ್ನೂ ಇವುಗಳ ವೆಚ್ಚಕ್ಕಾಗಿ ೧,೨೫,೦೦೦ ರೂಪಾಯಿಗಳನ್ನೂ ಮಂಜೂರು ಮಾಡಿತು. ಜೂನ್ ೧೮೫೭ರಲ್ಲಿ ವಿದ್ಯಾಇಲಾಖೆಯನ್ನು ಸ್ಥಾಪಿಸಿ, ಶಿಕ್ಷಣದ ಜವಾಬ್ದಾರಿಯನ್ನು ಬ್ರಿಟಿಷ್ ಕಮಿಷನ್ ತಾನೇ ವಹಿಸಿಕೊಂಡಿತು. ಕಡಿಮೆ ಬೆಲೆಯಲ್ಲಿ ಪಠ್ಯಪುಸ್ತಕಗಳನ್ನು ಮುದ್ರಿಸಲು ೧೮೫೮ರಲ್ಲಿ ಸರ್ಕಾರಿ ಮುದ್ರಣಾಲಯ ಸ್ಥಾಪಿತವಾಯಿತು. ಉತ್ತಮ ಕೂಲಿ ಮಠಗಳ ಶಿಕ್ಷಕರಿಗೆ ಸಂಭಾವನೆ ಕೊಡುವುದು ಜಾರಿಗೆ ಬಂತು. ನಾರ್ಮಲ್ ಶಾಲೆಯೂ ಎಂಜಿನಿಯರಿಂಗ್ ಮತ್ತು ಸರ್ವೆ ತರಗತಿಗಳೂ ಪ್ರಾರಂಭವಾದುವು. ೧೮೬೪ರಿಂದ ಮುಂದೆ, ೯ರೂ.ಗಳಿಗೆ ಮೇಲ್ಪಟ್ಟ ವೇತನದ ಸರ್ಕಾರೀ ಕೆಲಸಗಳಿಗೆ ನೇಮಕವಾಗುವವರು ಮಾತೃಭಾಷೆಯಲ್ಲಿ ಓದುಬರಹ ಕಲಿತಿರಬೇಕೆಂಬ ಸರ್ಕಾರಿ ಆಜ್ಞೆ ಹೊರಟಿತು.

ಗ್ರಾಮಾಂತರ ಶಿಕ್ಷಣಪ್ರಸಾರಕ್ಕಾಗಿ ವಿದ್ಯಾಭ್ಯಾಸ ಇಲಾಖೆಯ ಡೈರಕ್ಟರ್ ಲೂಯಿರೈಸ್ ಹೋಬಳಿ ಶಾಲೆಗಳ ಯೋಜನೆ ತಯಾರಿಸಿದ. ೧೮೭೫ರಲ್ಲಿ ಇನ್ನೂ ಮೂರು ನಾರ್ಮಲ್ ಶಾಲೆಗಳು, ಎಂಜಿನಿಯರಿಂಗ್ ಶಾಲೆ, ಬೆಂಗಳೂರು ಸೆಂಟ್ರಲ್ ಕಾಲೇಜ್ ಸ್ಥಾಪಿತವಾದುವು. ಮೂರು ವಿಭಾಗಗಳ ಪ್ರೌಢಶಾಲೆಗಳು ಕೊಲಿಜಿಯೇಟ್ ಮಟ್ಟಕ್ಕೆ ಏರಿದುವು. ರೂ.೨೦ಕ್ಕೆ ಮೇಲ್ಪಟ್ಟ ವೇತನದ ನೌಕರಿಗಳಿಗಾಗಿ ಸಾಮಾನ್ಯ ಪರೀಕ್ಷೆ (ಜನರಲ್ ಟೆಸ್ಟ್‌) ಪ್ರಾರಂಭವಾಯಿತು. ವೈದ್ಯಕೀಯ ಶಾಲೆ ಮತ್ತು ಸಸ್ಯಶಾಸ್ತ್ರೀಯ (ಬೊಟಾನಿಕಲ್) ಶಾಲೆ ಸ್ಥಾಪಿತವಾದುವು (೧೮೮೦). ಸಂಸ್ಥಾನದ ಆಡಳಿತವನ್ನು ಬ್ರಿಟಿಷ್ ಕಮಿಷನರಿಂದ ಮಹಾರಾಜರಿಗೆ ವರ್ಗ ಮಾಡಿದಾಗ (೧೮೮೧), ನಗರ ಮತ್ತು ಗ್ರಾಮಾಂತರ ಪ್ರದೇಶಗಳೆರಡರಲ್ಲಿಯೂ ಆಧುನಿಕ ಶಿಕ್ಷಣದ ತಳಹದಿ ರೂಪುಗೊಂಡಿತ್ತು.

ಮಹಾರಾಜರ ಸರ್ಕಾರದ ಉದಾರನೀತಿ ಮತ್ತು ಪ್ರಗತಿಪ್ರಿಯತೆಯ ಫಲವಾಗಿ ಶಾಲೆಗಳ ಮತ್ತು ಮಕ್ಕಳ ಸಂಖ್ಯೆಗಳು ಒಂದೇ ಸಮನೆ ಏರುತ್ತ ಬಂದುವು. ದಿವಾನ್ ಎಂ. ವಿಶ್ವೇಶ್ವರಯ್ಯನವರ ಕಾಲದಲ್ಲಿ ಏರ್ಪಡಿಸಲಾದ ಆರ್ಥಿಕ ಸಮ್ಮೇಳನದ ಫಲವಾಗಿ ಜನಜಾಗೃತಿಯುಂಟಾಯಿತು. ಗ್ರಾಮಾಂತರ ಸಹಾಯಧನ ಶಾಲೆಗಳ ಯೋಜನೆ (೧೯೧೪) ಆಚರಣೆಗೆ ಬಂತು. ಕೆಲವು ಚುನಾಯಿತ ಪ್ರದೇಶಗಳಲ್ಲಿ ಒತ್ತಾಯ ಶಿಕ್ಷಣ ಜಾರಿಗೆ ಬಂತು. ವಾಣಿಜ್ಯಶಿಕ್ಷಣಶಾಲೆ ಮತ್ತು ವ್ಯವಸಾಯ ಶಿಕ್ಷಣಶಾಲೆ ಪ್ರಾರಂಭವಾದುವು. ಗ್ರಾಮಾಂತರ ಸಂಚಾರಿ ಪುಸ್ತಕಭಂಡಾರಯೋಜನೆ ಪ್ರಾಯೋಗಿಕವಾಗಿ ಆಚರಣೆಗೆ ಬಂತು. ಮೈಸೂರು ವಿಶ್ವವಿದ್ಯಾನಿಲಯ ಸ್ಥಾಪಿತವಾದದ್ದು ೧೯೧೬ರಲ್ಲಿ.

ಗ್ರಾಮಾಂತರ ಶಾಲೆಗಳ ಪರಿಸ್ಥಿತಿಯನ್ನು ಉತ್ತಮಪಡಿಸಲು ವಿದ್ಯಾಭ್ಯಾಸದ ಇನ್ಸ್‌ಪೆಕ್ಟರ್ ಜನರಲ್ ಸಿ.ಆರ್.ರೆಡ್ಡಿಯವರು ಒಂದು ಶಿಕ್ಷಣ ಲಿಖಿತವನ್ನು (ಮೆಮೊರಾಂಡಂ ಆಫ್ ಎಜ್ಯುಕೇಷನ್) ೧೯೨೧ರಲ್ಲಿ ತಯಾರಿಸಿದರು. ಅದನ್ನು ಸರ್ಕಾರ ಅಂಗೀಕರಿಸಿತು. ಶಿಕ್ಷಣ ತೆರಿಗೆಯನ್ನು ವಿಧಿಸಿ, ಅದರಿಂದ ಬಂದ ಹಣದಿಂದ ಹೊಸ ಹೊಸ ಶಾಲೆಗಳನ್ನು ತೆರೆಯಲಾಯಿತು. ೧೯೨೨ ರಲ್ಲಿ ಸಂಸ್ಥಾನದಲ್ಲಿ ಶಿಕ್ಷಣ ಸಮೀಕ್ಷೆ ನಡೆಸಿ ಉತ್ತಮ ಅನುದಾನ ಶಾಲೆಗಳನ್ನು ಸರ್ಕಾರಿ ಶಾಲೆಗಳನ್ನಾಗಿ ಪರಿವರ್ತಿಸಲಾಯಿತು. ಅನಂತರ ೧೯೨೭-೨೮ರಲ್ಲಿ ಮತ್ತೊಂದು ಸಮೀಕ್ಷೆ ನಡೆಸಿ ವಿದ್ಯಾಪ್ರಗತಿಯನ್ನು ಪರಿಶೀಲಿಸಿ, ಕೇಂದ್ರೀಯ ಶಾಲಾ ಯೋಜನೆಯನ್ನು ಆಚರಣೆಗೆ ತರಲಾಯಿತು. ೧೯೩೦ರಲ್ಲಿ ಪ್ರಾಥಮಿಕ ಶಾಲೆಗಳ ಆಡಳಿತವನ್ನು ಸ್ಥಳೀಯ ಸಂಸ್ಥೆಗಳು ವಹಿಸಿಕೊಂಡುವು.

ಈ ಕಾಲದಲ್ಲಿ ಪ್ರೌಢ (ಸೆಕಂಡರಿ) ಶಿಕ್ಷಣವೂ ಪ್ರಗತಿ ಹೊಂದಿತು. ಪೌರಸಭಾ ಪ್ರೌಢಶಾಲೆಗಳೂ ಪ್ರಾರಂಭವಾದುವು. ಮಾಧ್ಯಮಿಕ ಮತ್ತು ಪ್ರೌಢಶಾಲೆಗಳ ಹೊಸ ವ್ಯಾಸಂಗಕ್ರಮವನ್ನು ರೂಪಿಸಿದಾಗ ಅದರಲ್ಲಿ ಮರಗೆಲಸ ಮೊದಲಾದ ೨೩ ಕಸಬು ಕಲೆಗಳೂ ಔದ್ಯೋಗಿಕ ಪಾಠ ವಿಷಯಗಳೂ ಸೇರಿದುವು. ೧೯೩೭ರಲ್ಲಿ ಪ್ರೌಢಶಾಲೆಗಳ ವ್ಯಾಸಂಗಕ್ರಮದಲ್ಲಿ ಮತ್ತೆ ಬದಲಾವಣೆಗಳಾದುವು. ಕನ್ನಡ ಮಾಧ್ಯಮವೂ ಜಾರಿಗೆ ಬಂತು.

ವಿಶ್ವವಿದ್ಯಾನಿಲಯ ಇಂಟರ್ಮೀಡಿಯೇಟ್ ಪರೀಕ್ಷೆಯ ಜಾರಿ, ಕನ್ನಡದ ಎಂ.ಎ., ಗಣಿತದ ಎಂ.ಎ., ಎಂ.ಎಸ್ಸಿ. ಮತ್ತು ಬಿ.ಟಿ. ಪರೀಕ್ಷೆಗಳ ಆರಂಭ - ಇವು ಆ ಕಾಲದ ಬೆಳವಣಿಗೆಗಳು. ಮಹಾರಾಜರ ರಜತೋತ್ಸವದ ಸ್ಮಾರಕವಾಗಿ (೧೯೨೭) ಒಂದು ತಾಂತ್ರಿಕ ಶಿಕ್ಷಣ ಶಾಲೆ ಸ್ಥಾಪಿತವಾಯಿತು.

ಪ್ರಾಥಮಿಕ ಶಿಕ್ಷಣ ನಿರೀಕ್ಷಿಸಿದಷ್ಟು ಪ್ರಗತಿ ಪಡೆಯದಿದ್ದುದರಿಂದ ಅದರ ಆಡಳಿತವನ್ನು ಸರ್ಕಾರವೇ ಮತ್ತೆ ವಹಿಸಿಕೊಳ್ಳಬೇಕಾಯಿತು. ಅನೇಕ ಹೊಸ ಶಾಲೆಗಳು ಸ್ಥಾಪಿತವಾದುವು. ಸ್ವಲ್ಪಮಟ್ಟಿನ ಒತ್ತಾಯ ಶಿಕ್ಷಣವೂ ಆಚರಣೆಗೆ ಬಂತು. ಅನೇಕ ಗ್ರಾಮಾಂತರ ಪ್ರಾಥಮಿಕ ಶಾಲೆಗಳಲ್ಲಿ ಮಾಧ್ಯಮಿಕ ತರಗತಿಗಳ ಆರಂಭ, ಪೌರಸಭಾ ಮತ್ತು ಜಿಲ್ಲಾ ಬೋರ್ಡ್ ಪ್ರೌಢಶಾಲೆಗಳ ಸ್ಥಾಪನೆ - ಇವುಗಳಿಂದ ಶಿಕ್ಷಣ ಹೆಚ್ಚು ವ್ಯಾಪಕವಾಯಿತಾದರೂ ೧೯೪೭ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂದು, ಪಂಚವಾರ್ಷಿಕ ಯೋಜನೆ ರೂಪುಗೊಂಡ ಮೇಲೆಯೇ ಪ್ರಗತಿಯ ವೇಗ ಹೆಚ್ಚಿದ್ದು. ಬೇಸಿಕ್ ಶಿಕ್ಷಣ ಪದ್ಧತಿ ಜಾರಿಗೆ ಬಂತು. ಶಿಕ್ಷಣ ಪುನರ್ವ್ಯವಸ್ಥೆಯ ಬಗ್ಗೆ ಸಲಹೆ ನೀಡಲು ಸಿ.ಆರ್.ರೆಡ್ಡಿಯವರು ೧೯೪೮ರಲ್ಲಿ ನೇಮಕವಾದರು. ಅನಂತರ ೧೯೫೨ರಲ್ಲಿ ಶಿಕ್ಷಣ ಸುಧಾರಣಾಸಮಿತಿಯೊಂದನ್ನು ರಚಿಸಲಾಯಿತು. ಇದರ ಶಿಫಾರಸುಗಳನ್ನು ಜಾರಿಗೆ ಕೊಡುವುದರೊಳಗಾಗಿ ೧೯೫೬ರಲ್ಲಿ ರಾಜ್ಯಗಳ ಪುನರ್ವಿಂಗಡಣೆ ನಡೆದು, ಮುಂಬಯಿ, ಮದ್ರಾಸು, ಹೈದರಾಬಾದು ಕನ್ನಡ ಪ್ರದೇಶಗಳೂ ಕೊಡಗೂ ಅಂದಿನ ಮೈಸೂರು ರಾಜ್ಯದೊಡನೆ ಸೇರಿ ಹೊಸ ಮೈಸೂರು ರಾಜ್ಯವಾಯಿತು.

ಏಕೀಕೃತ ಕರ್ನಾಟಕದಲ್ಲಿ ಐದು ವಿವಿಧ ಶಿಕ್ಷಣ ಪದ್ಧತಿಗಳನ್ನು ಒಂದು ರೂಪಕ್ಕೆ ತರುವ ಬೃಹತ್ ಸಮಸ್ಯೆ ತಲೆದೋರಿತು. ಇದಕ್ಕಾಗಿ ಸರ್ಕಾರ ಶಿಕ್ಷಣ ಸಂಯೋಜನ ಸಲಹಾ ಸಮಿತಿಯನ್ನು ರಚಿಸಿತು. ಪ್ರಾಥಮಿಕ ಶಿಕ್ಷಣ ೭ ವರ್ಷಕಾಲ, ಪ್ರೌಢಶಿಕ್ಷಣ ೪ ವರ್ಷಕಾಲ ಎಂಬುದು ಇತ್ಯರ್ಥವಾಯಿತು. ಹೊಸ ತರಗತಿಗಳ ವಿಂಗಡಣೆಯೂ ಹೊಸ ವ್ಯಾಸಂಗಕ್ರಮಗಳೂ ೧೯೫೯-೬೦ರಿಂದ ಮೊದಲಾಗಿ ೧೯೬೪-೬೫ಕ್ಕೆ ಪೂರ್ಣವಾಗಿ ಆಚರಣೆಗೆ ಬಂದುವು. ಇದಕ್ಕೆ ಹೊಂದುವಂತೆ ವಿಶ್ವವಿದ್ಯಾನಿಲಯಗಳು ಮೂರು ವರ್ಷದ ಪುನರ್ರಚಿತ ಪದವಿ ಶಿಕ್ಷಣವನ್ನು ಮುಂದಾಗಿ ಆಚರಣೆಗೆ ತಂದುವು. ಭಾರತದ ಎಲ್ಲಡೆಗಳಂತೆ ಕರ್ನಾಟಕ ರಾಜ್ಯದಲ್ಲಿಯೂ ಶಿಕ್ಷಣ ಸಮೀಕ್ಷೆ ನಡೆಸಿ (೧೯೫೭-೮೮), ಶಿಕ್ಷಣ ಸೌಕರ್ಯಗಳಿಲ್ಲದ ಪ್ರದೇಶಗಳಿಗೆ ಹೊಸ ಶಾಲೆಗಳನ್ನು ಯೋಜಿಸಲಾಯಿತು. ಕಡ್ಡಾಯ ಶಿಕ್ಷಣಕ್ಕೆ ಸ್ಪಷ್ಟರೂಪಕೊಟ್ಟು, ೧೯೬೧-೬೨ ರಿಂದ ರಾಜ್ಯದಾದ್ಯಂತ ಆಚರಣೆಗೆ ತರಲಾಗಿದೆ. ಪ್ರತಿವರ್ಷ ಶಾಲಾ ಮಕ್ಕಳ ಗಣತಿ ನಡೆಸಿ ಹೆಚ್ಚು ಹೆಚ್ಚು ದಾಖಲೆ ಮಾಡುತ್ತಿರಲಾಗಿದೆ. ಉಚಿತ ಪುಸ್ತಕ ಮತ್ತು ಬಟ್ಟೆಗಳ ರೂಪದಲ್ಲಿ ವಿದ್ಯಾರ್ಥಿವೇತನಗಳು, ಕೇರ್ ಸಂಸ್ಥೆಯ ಸಹಾಯದಿಂದ ಮಧ್ಯಾಹ್ನದ ಉಪಾಹಾರ ಮೊದಲಾದ ಪ್ರೋತ್ಸಾಹಗಳಿಂದ ಹಾಜರಿಯನ್ನು ಉತ್ತಮಪಡಿಸುತ್ತಿರಲಾಗಿದೆ. ಶಾಲಾಭಿವೃದ್ಧಿ ಸಮಿತಿಗಳ ಮೂಲಕ ಪ್ರಜೆಗಳೇ ತಮ್ಮ ತಮ್ಮ ಪ್ರದೇಶಗಳ ಶಾಲೆಗಳಿಗೆ ಬೇಕಾದ ಅನುಕೂಲಗಳನ್ನು ಒದಗಿಸಿಕೊಳ್ಳುವಂತಾಗಿದೆ. ಶಾಲಾಕಟ್ಟಡಗಳನ್ನು ಕಟ್ಟಿಸಿ ಕೊಡುವ ಹೊಣೆಯನ್ನು ಇಂದಿನಂತೆ ಈಗಲೂ ಗ್ರಾಮದವರಿಗೇ ವಹಿಸಲಾಗಿದೆ. ಗ್ರಾಮಾಂತರ ಶಾಲೆಗಳ ಶಿಕ್ಷಕಿಯರಿಗಾಗಿ ವಸತಿಗೃಹಗಳನ್ನು ಕಟ್ಟಿಸುವ ಯೋಜನೆ ಕೈಗೊಳ್ಳಲಾಗಿದೆ. ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಅಧ್ಯಾಪಕ ಶಿಕ್ಷಣ ಸಂಸ್ಥೆಗಳನ್ನು ತೆರೆಯುತ್ತಿರಲಾಗಿದೆ. ಆಡಳಿತವನ್ನು ಪುನಃ ಸ್ಥಳೀಯ ಸಂಸ್ಥೆಗಳಿಗೆ ವಹಿಸಿ ಕೊಡುವ ಯತ್ನ ನಡೆಯುತ್ತಿದೆ.

ಪ್ರೌಢಶಿಕ್ಷಣವೂ ತೀವ್ರಗತಿಯಲ್ಲಿ ವಿಸ್ತರಿಸುತ್ತಿದೆ. ಖಾಸಗಿಯವರೂ ಸ್ಥಳೀಯ ಸಂಸ್ಥೆಗಳೂ ಹೊಸ ಪ್ರೌಢಶಾಲೆಗಳನ್ನು ತೆರೆಯಲು ಉದಾರ ಪ್ರೋತ್ಸಾಹ ಮತ್ತು ಸಹಾಯ ಧನಗಳನ್ನು ಸರ್ಕಾರ ನೀಡುತ್ತಿದೆ. ರೂ, ೨,೪೦೦ಕ್ಕೆ ಹೆಚ್ಚಿಲ್ಲದ ವಾರ್ಷಿಕ ವರಮಾನವುಳ್ಳವರ ಮಕ್ಕಳಿಗೆ ಪಾಠದ ಶುಲ್ಕದ ವಿನಾಯಿತಿಯುಂಟು. ಜೊತೆಗೆ ವಿದ್ಯಾರ್ಥಿ ವೇತನಗಳು ದೊರೆಯುತ್ತಿವೆ. ಮಕ್ಕಳಿಗೆ ಕಡಿಮೆ ಬೆಲೆಯಲ್ಲಿ ಉತ್ತಮ ಪಠ್ಯಪುಸ್ತಕಗಳನ್ನೊದಗಿಸುವುದಕ್ಕಾಗಿ ಪ್ರಾಥಮಿಕ ಪಠ್ಯಪುಸ್ತಕಗಳ ಮಟ್ಟಿಗೆ ಪೂರ್ಣ ರಾಷ್ಟ್ರೀಕರಣವನ್ನು ಕೈಗೊಳ್ಳಲಾಗಿದೆ. ಪಠ್ಯಪುಸ್ತಕಗಳ ಮುದ್ರಣಕ್ಕಾಗಿಯೇ ಮೈಸೂರು ನಗರದಲ್ಲಿ ಒಂದು ಸರ್ಕಾರಿ ಮುದ್ರಣಾಲಯವನ್ನು ಸ್ಥಾಪಿಸಲಾಗಿದೆ. ಪಠ್ಯಪುಸ್ತಕಗಳ ದಾಸ್ತಾನು ಮತ್ತು ಹಂಚಿಕೆಗಳಿಗಾಗಿ ರಾಜ್ಯದಲ್ಲಿ ಹತ್ತು ಕೇಂದ್ರಗಳನ್ನು ಸ್ಥಾಪಿಸುವ ಪ್ರಯತ್ನ ನಡೆದಿದೆ. ಶಿಕ್ಷಕರ ಸಂಬಳಗಳನ್ನು ೧೯೫೭ರಲ್ಲಿ ಮತ್ತು ೧೯೬೧ರಲ್ಲಿ ಪುನರ್ವಿಮರ್ಶಿಸಲಾಯಿತು. ಖಾಸಗಿ ಶಾಲೆಗಳ ಶಿಕ್ಷಕರ ಸಂಬಳವನ್ನು ಸರ್ಕಾರಿ ಶಾಲೆಗಳವರ ಮಟ್ಟಕ್ಕೆ ಏರಿಸಲಾಯಿತು. ಅವರಿಗಾಗಿ ನಿವೃತ್ತಿವೇತನ, ಭವಿಷ್ಯನಿಧಿ, ಜೀವವಿಮೆ- ಈ ತ್ರಿವಿಧ ಸೌಲಭ್ಯ ಯೋಜನೆಯನ್ನು ರಚಿಸಲಾಗಿದೆ. ಶಿಕ್ಷಕರ ವೃತ್ತಿಮಟ್ಟವನ್ನು ಹೆಚ್ಚಿಸಲು ಸಮಾಲೋಚನ ಗೋಷ್ಠಿಗಳನ್ನು ಏರ್ಪಡಿಸಲಾಗುತ್ತಿದೆ. ಶಾಲಾ ತನಿಖೆಯನ್ನು ಉತ್ತಮ ರೀತಿಯಲ್ಲಿ ನಡೆಸಲು ವಿಷಯ ಪರೀಕ್ಷಕರು ನೇಮಕವಾಗಿದ್ದಾರೆ.

ಶಿಕ್ಷಣದ ಗುಣಮಟ್ಟವನ್ನು ಉತ್ತುಮಪಡಿಸಲು ಹೊಸ ಹೊಸ ಸಂಸ್ಥೆಗಳನ್ನು ಕಟ್ಟುತ್ತಿರ ಲಾಗಿದೆ. ೧೯೫೮ರಲ್ಲಿ ಶಿಕ್ಷಣ ಸಂಶೋಧನಾಲಯವೂ ಶೈಕ್ಷಣಿಕ ವೃತ್ತೀಯ ಮಾರ್ಗದರ್ಶ ನಾಲಯವೂ ೧೯೫೯ರಲ್ಲಿ ರಾಜ್ಯದ ಶೈಕ್ಷಣಿಕ ಪುಸ್ತಕ ಭಂಡಾರವೂ ಸ್ಥಾಪಿತವಾದುವು. ಪ್ರಾಥಮಿಕ ಶಿಕ್ಷಣ ಸಂಶೋಧನೆ ಮತ್ತು ಶಿಕ್ಷಕ ಶಿಕ್ಷಣಗಳಿಗಾಗಿ ೧೯೬೪ರಲ್ಲಿ ರಾಜ್ಯದ ಶೈಕ್ಷಣಿಕ ಕೇಂದ್ರ ಸರ್ಕಾರದ ನೆರವಿನಿಂದ ಪ್ರಾರಂಭವಾಯಿತು. ಜನರಲ್ಲಿ ವಾಚನಾಭಿರುಚಿ ಮತ್ತು ತಿಳಿವಳಿಕೆ ಹೆಚ್ಚಿಸಲು ರಾಜ್ಯದಲ್ಲಿ ಪುಸ್ತಕಭಂಡಾರ ಕಾಯಿದೆ ಜಾರಿಗೆ ಬಂದಿದೆ.

ವಿಶ್ವವಿದ್ಯಾನಿಲಯ ಕ್ಷೇತ್ರದಲ್ಲಿಯೂ ಮಹತ್ತರ ಬದಲಾವಣೆಗಳಾಗಿವೆ. ಮೈಸೂರು ಮತ್ತು ಕರ್ನಾಟಕ ವಿಶ್ವವಿದ್ಯಾನಿಲಯಗಳು ಸಂಶೋಧನೆಗೆ ಸಂಪೂರ್ಣ ಗಮನ ಕೊಡಲು ಸಾಧ್ಯವಾಗುವಂತೆ ಅವುಗಳ ಅಧೀನದಲ್ಲಿದ್ದ ಬಹುತೇಕ ಕಾಲೇಜುಗಳ ಆಡಳಿತವನ್ನು ಸರ್ಕಾರ ತಾನೇ ವಹಿಸಿಕೊಂಡಿತು. ಅದಕ್ಕಾಗಿ ಒಬ್ಬ ಕಾಲೇಜು ಶಿಕ್ಷಣಾಧಿಕಾರಿಯನ್ನು ನೇಮಿಸಿತು. ೧೯೬೪ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯವೂ ೧೯೬೫ರಲ್ಲಿ ಹೆಬ್ಬಾಳದಲ್ಲಿ ವ್ಯವಸಾಯ ವಿಶ್ವವಿದ್ಯಾಲಯವೂ ಆರಂಭವಾದುವು. ತಾಂತ್ರಿಕ ಶಿಕ್ಷಣ ಸಂಸ್ಥೆಗಳ ಆಡಳಿತವನ್ನು ನೋಡಿಕೊಳ್ಳಲು ಪ್ರತ್ಯೇಕ ಅಧಿಕಾರಿಯನ್ನು ನೇಮಿಸಿ, ಎಲ್ಲ ಜಿಲ್ಲೆಗಳಲ್ಲೂ ತಾಂತ್ರಿಕ ಶಿಕ್ಷಣ ಸೌಕರ್ಯಗಳನ್ನು ವಿಸ್ತರಿಸಲಾಗುತ್ತಿದೆ. ಶಿಕ್ಷಣ ಹೀಗೆ ವಿಸ್ತಾರದಲ್ಲಿಯೂ ಗುಣದಲ್ಲಿಯೂ ತೀವ್ರಪ್ರಗತಿ ಸಾಧಿಸುತ್ತಿದೆ.

2011ರ ಅಂಕಿ ಅಂಶಗಳು

[ಬದಲಾಯಿಸಿ]

ಕರ್ನಾಟಕದಲ್ಲಿ (2011) 20 ವಿಶ್ವವಿದ್ಯಾನಿಲಯಗಳೂ 152 ಎಂಜನಿಯರಿಂಗ್ ಸಂಸ್ಥೆಗಳೂ, 114 ವೈದ್ಯಕೀಯ ಕಾಲೇಜುಗಳೂ 248 ತಾಂತ್ರಿಕ (ಪಾಲಿಟೆಕ್ನಿಕ್) ಶಾಲೆಗಳೂ 103, ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಗಳೂ ಇವೆ. ಕರ್ನಾಟಕದ ಪ್ರಥಮ ವಿಶ್ವವಿದ್ಯಾನಿಲಯ ಮೈಸೂರಿನಲ್ಲಿ 1916ರಲ್ಲಿ ಪ್ರಾರಂಭವಾಗಿ ಮೈಸೂರು ವಿಶ್ವವಿದ್ಯಾನಿಲಯವೆಂದು ಪ್ರಸಿದ್ಧಿ ಪಡೆಯುವುದರೊಂದಿಗೆ 5 ನಕ್ಷತ್ರ (ಸ್ಟಾರ್) ಸ್ಥಾನಮಾನವನ್ನು ವಿಶ್ವವಿದ್ಯಾನಿಲಯ ಅನುದಾನ ಆಯೋಗದ ರಾಷ್ಟ್ರೀಯ ಯೋಗ್ಯತಾ ನಿರ್ಣಯ ಸಮಿತಿ (ನ್ಯಾಕ್)ಯಿಂದ ಪಡೆದಿದೆ. ಅದರಂತೆಯೇ ಬೆಂಗಳೂರು (1964) ಗುಲ್ಬರ್ಗಾ (1980) ವಿಶ್ವವಿದ್ಯಾನಿಲಯಗಳೂ ಈ ಗೌರವಕ್ಕೆ ಪಾತ್ರವಾಗಿವೆ. ಮುಂದೆ ಕರ್ನಾಟಕ ವಿಶ್ವವಿದ್ಯಾನಿಲಯ (1949), ಮಂಗಳೂರು ವಿಶ್ವವಿದ್ಯಾಲಯ (1980), ಕುವೆಂಪು ವಿಶ್ವವಿದ್ಯಾಲಯ (1987) ಪ್ರಾರಂಭವಾದವು. ಬೆಂಗಳೂರಿನ ಕೃಷಿ ವಿಜ್ಞಾನ ವಿಶ್ವವಿದ್ಯಾಲಯ (1965) ಧಾರವಾಡದ ಕೃಷಿ ವಿಜ್ಞಾನ ವಿಶ್ವವಿದ್ಯಾಲಯ (1986)ರಲ್ಲಿ ಪ್ರಾರಂಭವಾದವು. ಹಂಪೆಯ ಕನ್ನಡ ವಿಶ್ವವಿದ್ಯಾಲಯ 1991 ರಿಂದ ಕಾರ್ಯಾರಂಭ ಮಾಡಿದೆ. ಬೆಂಗಳೂರಿನಲ್ಲಿ ಭಾರತ ಸಂಖ್ಯಾಶಾಸ್ತ್ರ ಸಂಸ್ಥೆ (1978) ಭಾರತ ವಿಜ್ಞಾನ ಸಂಸ್ಥೆ (1911) ಭಾರತ ಆಡಳಿತನಿರ್ವಹಣಾ ಸಂಸ್ಥೆ (1972) ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ (1987) ಸಾಮಾಜಿಕ ಮತ್ತು ಆರ್ಥಿಕ ಪರಿವರ್ತನೆ ಸಂಸ್ಥೆ (1972) ಕೆಲಸ ಮಾಡುತ್ತಿವೆ. ಬೆಂಗಳೂರಿನಲ್ಲಿ ಖಾಸಗಿಯಾದ ಅಜೀಂ ಪ್ರೇಮ್ಜಿ ವಿಶ್ವವಿದ್ಯಾನಿಲಯ, ಅಲಿಯನ್ಸ್‌ ವಿಶ್ವವಿದ್ಯಾಲಯಗಳೂ ಇವೆ. ಪಶುಸಂಗೋಪನಾ ಮತ್ತು ಮತ್ಸೋದ್ಯಮದ ತರಬೇತಿ ಕೇಂದ್ರಗಳೂ ಇವೆ. ವೈದ್ಯ ಮತ್ತು ದಂತ ಕಾಲೇಜುಗಳನ್ನೊಳಗೊಂಡ ವೈದ್ಯಕೀಯ ವಿಶ್ವವಿದ್ಯಾನಿಲಯ ಆಯುರ್ವೇದ, ಪ್ರಕೃತಿ ಹಾಗೂ ಹೋಮಿಯೋಪತಿ ಕಾಲೇಜುಗಳ ಶಿಕ್ಷಣ ಸಂಸ್ಥೆಗಳೂ ಕರ್ನಾಟಕದಲ್ಲಿ ಪ್ರಗತಿ ಪಥದತ್ತ ನಡೆದಿವೆ. ಬಿ.ಎಡ್., ಎಂ.ಎಡ್. ಶಿಕ್ಷಣ ಹಾಗೂ ವಿವಿಧ ಬಗೆಯ ಆಧುನಿಕ ಶಿಕ್ಷಣ ಕರ್ನಾಟಕದ ಜನತೆಗೆ ದೊರಕುತ್ತಿದೆ. ಸರಾಸರಿ ಆಧುನಿಕ ಶಿಕ್ಷಣ ಕರ್ನಾಟಕದ ಜನತೆಗೆ ದೊರಕುತ್ತಿದೆ. ಸರಾಸರಿ 378 (ಮಾರ್ಚ್ 2011) ಮಂದಿ ವಿದ್ಯಾರ್ಥಿಗಳನ್ನು ಸರ್ಕಾರಿ ಕಾಲೇಜುಗಳಲ್ಲಿ ಸೇರಿಸಿಕೊಳ್ಳಲಾಗಿತ್ತು. ಸರ್ಕಾರದಿಂದ ಅರೆ ಅನುದಾನಿತ ಕಾಲೇಜುಗಳೂ ಸೇರಿದಂತೆ ಬೆಂಗಳೂರಿನ 61 ಕಾಲೇಜುಗಳಲ್ಲಿ 60,000. ಮಂದಿ ವಿದ್ಯಾರ್ಥಿಗಳನ್ನು ಸೇರಿಸಿಕೊಂಡಿದ್ದವು. ವಾಕ್ಶ್ರವಣ ಸಂಸ್ಥೆ, ಕೇಂದ್ರ ಆಹಾರ ಸಂಸ್ಕರಣ ಸಂಸ್ಥೆ ಮುಂತಾದವೂ ತಮ್ಮ ಕಾರ್ಯಕ್ಷೇತ್ರದಲ್ಲಿ ಹೆಸರು ಗಳಿಸಿವೆ. ಇವಲ್ಲದೆ 4597 ಪೂರ್ವ ಪ್ರಾಥಮಿಕ ಶಾಲೆಗಳೂ 23690 ಪ್ರಾಥಮಿಕ ಶಾಲೆಗಳೂ, 24142 ಎಲಿಮೆಂಟರಿ ಶಾಲೆಗಳೂ, 8216, ಪ್ರೌಢಶಾಲೆಗಳೂ, 1497 ಪಿ.ಯು.ಸಿ. (ಸೀನಿಯರ್ ಸೆಕೆಂಡರಿ ಶಾಲೆಗಳೂ) ಇವೆ. ಕರ್ನಾಟಕದಲ್ಲಿ ಮೊದಲಿನಿಂದಲೂ ರಾಜಾಶ್ರಯ ಹಾಗೂ ಧನಿಕರ ದಾನಿಗಳ ಉದಾರತನದಿಂದಾಗಿ ವಿದ್ಯಾಶಾಲೆಗಳು ನಡೆದುಬಂದು ಇಂದು ಎಲ್ಲಾ ರಾಷ್ಟ್ರಗಳ, ದೃಷ್ಟಿಯನ್ನೂ ತನ್ನತ್ತ ಕರ್ನಾಟಕ ಸೆಳೆಯುವಂತಹ ಪ್ರಗತಿಯನ್ನು ಶಿಕ್ಷಣ ಕ್ಷೇತ್ರದಲ್ಲಿ ತೋರಿದೆ.[]

  1. ಕರ್ನಾಟಕದ ವಿಶ್ವವಿದ್ಯಾಲಯಗಳು
  2. ಕರ್ನಾಟಕದಲ್ಲಿ ಶಿಕ್ಷಣ ಮತ್ತು ವಿದ್ಯಾರ್ಥಿಗಳು
  3. ಕರ್ನಾಟಕದಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ
  4. ಸ್ಕೌಟ್ ಚಳುವಳಿ
  5. ನ್ಯಾಷನಲ್ ಕೆಡೆಟ್ ಕೋರ್-ಎನ್.ಸಿ.ಸಿಎನ್ ಸಿ ಸಿ--ಎನ್.ಸಿ.ಸಿ
  6. ಭಾರತದಲ್ಲಿ 2011ರ ಜನಗಣತಿ ಮತ್ತು ಸಾಕ್ಷರತೆ
  7. ಕರ್ಣಾಟಕದಲ್ಲಿ ವೈಜ್ಞಾನಿಕ ಶಿಕ್ಷಣ
  8. ಕರ್ನಾಟಕದಲ್ಲಿ ಶಿಕ್ಷಣ

ಉಲ್ಲೇಖಗಳು

[ಬದಲಾಯಿಸಿ]
  1. https://kn.wikisource.org/s/g8w ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕರ್ನಾಟಕದಲ್ಲಿ ಶಿಕ್ಷಣ


ಏಕರೂಪ ಉನ್ನತ ಶಿಕ್ಷಣ

[ಬದಲಾಯಿಸಿ]

ಉಲ್ಲೇಖ

[ಬದಲಾಯಿಸಿ]