ಕೇನೋಪನಿಷತ್
ಐತರೇಯ · ಬೃಹದಾರಣ್ಯಕ · ಈಶಾವಾಸ್ಯ · ತೈತ್ತಿರೀಯ · ಛಾಂದೋಗ್ಯ · ಕೇನ · ಮುಂಡಕ · ಮಾಂಡೂಕ್ಯ · ಕಠ · ಪ್ರಶ್ನ · ಶ್ವೇತಾಶ್ವತರ |
ಗರುಡ · ಅಗ್ನಿ . ನಾರದ . ಪದ್ಮ . ಸ್ಕಾಂದ . ಭವಿಷ್ಯ . ಬ್ರಹ್ಮ . ಭಾಗವತ . ಬ್ರಹ್ಮವೈವರ್ತ . ಬ್ರಹ್ಮಾಂಡ . ವಾಯು . ಲಿಂಗ . ವಿಷ್ಣು . ವಾಮನ . ಮಾರ್ಕಂಡೇಯ . ವರಾಹ . ಕೂರ್ಮ . ಮತ್ಸ್ಯ |
ಭಗವದ್ಗೀತೆ · ಆಗಮ· ಶೂನ್ಯ ಸಂಪಾದನ· ಶ್ರೀ ಸಿದ್ಧಾಂತ ಶಿಖಾಮಣಿ · ವೀರಶೈವ ಪುರಾಣ · ವಿಷ್ಣು ಸಹಸ್ರನಾಮ . ಬಸವರಾಜ ವಿಜಯಂ |
ಕೇನೋಪನಿಷತ್ ಅಥವಾ ತಲವಕಾರೋಪನಿಷತ್ ಸಾಮವೇದದ ತಲವಕಾರ ಬ್ರಾಹ್ಮಣಕ್ಕೆ ಸೇರಿದೆ ತಲವಕಾರ ಬ್ರಾಹ್ಮಣಕ್ಕೆ "ಜೈಮಿನೀಯ ಬ್ರಾಹ್ಮಣ"ವೆಂದೂ ಹೆಸರಿದೆ. ಕೇನೋಪನಿಷತ್ ತಲವಕಾರ ಬ್ರಾಹ್ಮಣಕ್ಕೆ ಸೇರಿರುವದರಿಂದ ಇದನ್ನು ತಲವಕಾರ ಉಪನಿಷತ್ ಎಂದೂ ಕರೆಯುತ್ತಾರೆ.ಈ ಉಪನಿಷತ್ತಿನ ಮೊದಲ ಮಂತ್ರವು "ಕೇನ" ಎಂಬ ಪದದಿಂದ ಆರಂಭವಾಗುವದರಿಂದ ಇದಕ್ಕೆ "ಕೇನೋಪನಿಷತ್" ಎಂಬ ಹೆಸರು ಬಂದಿದೆ.ಕೇನ ಎಂದರೆ ಯಾರಿಂದ ಎಂದು ಅರ್ಥ.ಈ ಜಗತ್ತಿನ ಸೃಷ್ಟಿ ಯಾರಿಂದ ಆಯಿತು ಎಂಬ ಪ್ರಶ್ನೆಗೆ ಉತ್ತರವು ಕೇನೋಪನಿಷತ್ತಿನಲ್ಲಿದೆ. ಈ ಉಪನಿಷತ್ತಿಗೆ ಶ್ರೀ ಶಂಕರಾಚಾರ್ಯರದೆಂದು ಪ್ರಸಿದ್ಧವಾದ ಎರಡು ಭಾಷ್ಯಗಳಿವೆ.ಒಂದಕ್ಕೆ ಪದಭಾಷ್ಯವೆಂದೂ ಇನ್ನೊಂದಕ್ಕೆ ವಾಕ್ಯಭಾಷ್ಯವೆಂದೂ ಹೆಸರುಗಳುಂಟು.ಆದರೆ ವಾಕ್ಯಭಾಷ್ಯವು ಶಂಕರಾಚಾರ್ಯರದೇ ಎಂದು ಹೇಳಲು ಕೆಲವು ಸಂದೇಹಗಳಿವೆ. ಶಂಕರಾಚಾರ್ಯರು ತಮ್ಮ ಭಾಷ್ಯದಲ್ಲಿ ಹೇಳಿರುವಂತೆ ಈ ಉಪನಿಷತ್ತು ಬ್ರಹ್ಮ ವಿಷಯಿಕವಾಗಿದೆ. ಅಧ್ಯಯನಾನುಕೂಲಕ್ಕಾಗಿ ಈ ಉಪನಿಷತ್ತು ನಾಲ್ಕು ಖಂಡಗಳಾಗಿ ವಿಭಜಿತವಾಗಿದೆ.
ಮೊದಲನೆಯ ಖಂಡ
[ಬದಲಾಯಿಸಿ]ಪರಬ್ರಹ್ಮವು ಅತೀಂದ್ರಿಯ ವಸ್ತುವೆಂದೂ, ಜಡವಾದ ಇಂದ್ರಿಯಗಳ ಚೇತನತ್ವವು ಅದರಿಂದಲೇ ಉಂಟಾಗಿದೆಯೆಂದೂ, ಇದರ ಸ್ವರೂಪವನ್ನು ಪ್ರಮಾಣಗಳಿಂದ ಇತರರಿಗೆ ಉಪದೇಶಿಸುವುದು ಅಸಾಧ್ಯವೆಂದೂ ಮೊದಲನೆಯ ಖಂಡದಲ್ಲಿ ಹೇಳಿದೆ.
ಎರಡನೆಯ ಖಂಡ
[ಬದಲಾಯಿಸಿ]"ಬ್ರಹ್ಮವನ್ನು ಹೇಗೆ ಅರಿಯಬಹುದು?" ಎಂಬುದಕ್ಕೆ ಎರಡನೆಯ ಖಂಡವು ಉತ್ತರವನ್ನು ಕೊಡುತ್ತದೆ."ತಿಳಿದುಕೊಂಡಿಲ್ಲವೆಂದೂ ಎಣಿಸಿರುವುದಿಲ್ಲ ತಿಳಿದೂ ಇರುತ್ತೇನೆ" ಎಂಬ ಙ್ಞಾನವು ಯಾವನಿಗೆ ಇರುತ್ತದೆಯೋ ಅವನೇ ತಿಳಿದಿರುತ್ತಾನೆ. ಬ್ರಹ್ಮವು ಇಂದ್ರಿಯಗಳಿಗೆ ವಿಷಯವಾಗದಿದ್ದರೂ,ಪ್ರತ್ಯಗಾತ್ಮನೆಂದು ಅರಿಯಬಹುದು.ಆದರೆ "ಚೆನ್ನಾಗಿ ಅರಿತಿದ್ದೇನೆ" ಎಂದು ಹೇಳಲಾಗುವುದಿಲ್ಲವೆಂದು ಈ ಖಂಡವು ತಿಳಿಸುತ್ತದೆ.
ಮೂರನೆಯ ಖಂಡ
[ಬದಲಾಯಿಸಿ]ಮೂರನೆಯ ಖಂಡದಲ್ಲಿ ಬ್ರಹ್ಮದ ಮಹಿಮೆಯನ್ನು ಸಾರಲು ಅಖ್ಯಾಯಿಕೆಯೊಂದನ್ನು ಹೇಳಲಾಗಿದೆ.ದೇವತೆಗಳ ಗರ್ವಭಂಗಕ್ಕಾಗಿ ಬ್ರಹ್ಮವು ಅಗ್ನಿ ವಾಯುಗಳಿಗೆ ಯಕ್ಷರೂಪದಿಂದ ಕಾಣಿಸಿಕೊಳ್ಳಲು ಅದು ಅವರಿಗೆ ಎನೆಂದು ತಿಳಿಯಲಿಲ್ಲ. ಇಂದ್ರನಿಗೆ ಮಾತ್ರ ಉಮಾ ಹೈಮವತಿಯ ದರ್ಶನವಾದಮೇಲೆ ಅದು ಬ್ರಹ್ಮವೆಂದು ತಿಳಿಯಿತು. ಬ್ರಹ್ಮವಿದ್ಯೆಯ ಸ್ತುತಿಗಾಗಿ ಮತ್ತು ಬ್ರಹ್ಮದ ಅಸ್ತಿತ್ವವನ್ನು ಪ್ರತಿಪಾದಿಸುವುದಕ್ಕಾಗಿ ಈ ಅಖ್ಯಾಯಿಕೆಯು ಬಂದಿದೆ.
ನಾಲ್ಕನೆಯ ಖಂಡ
[ಬದಲಾಯಿಸಿ]ಈ ಖಂಡವು ಉಪನಿಷತ್ತಿನ ಮುಖ್ಯವಾದ ಭೋಧನೆಯನ್ನೊಳಗೊಂಡಿರುವುದರಿಂದ ಬಹಳ ಮಹತ್ವದ್ದಾಗಿದೆ.ಈ ಖಂಡದಲ್ಲಿ ಉಮಾ ಹೈಮವತಿಯು ಉಪಮಾನಗಳ ಮೂಲಕ ಬ್ರಹ್ಮವಿದ್ಯೆಯನ್ನು ಇಂದ್ರನಿಗೆ ಉಪದೇಶಿಸುತ್ತಾಳೆ.ಬ್ರಹ್ಮವು ಮಿಂಚಿನ ಬಳ್ಳಿಯಂತೆ ಹೊಳೆದು ಮಾಯವಾಗುತ್ತದೆ ಎಂದು ಹೇಳಲಾಗಿದೆ.ಉಮೆಯು ಕೊಡುವ "ಮಾನಸಿಕ" ಉಪಮಾನವನ್ನು ಹಲವು ಭಾಷ್ಯಾಕಾರರು ಮತ್ತು ಪಶ್ಚ್ಯಾತ್ಯ ಅನುವಾದ/ಅಧ್ಯಯನಕಾರರು ವಿಧವಿಧವಾಗಿ ಅರ್ಥೈಸಿದ್ದಾರೆ. ಬಹ್ಮವು ಮನಸ್ಸಿನ ಪ್ರತ್ಯಯಗಳೊಂದಿಗೆ ತೋರಿಸಿಕೊಳ್ಳುವ ಸ್ವಭಾವವುಳ್ಳದ್ದೆಂದು ಶಂಕರಾಚಾರ್ಯರು ಬರೆದಿರುತ್ತಾರೆ.ಮನಸ್ಸಿನಿಂದ ಬ್ರಹ್ಮವನ್ನು ವಿಷಯೀಕರಿಸಲು ಸಾಧ್ಯವಿಲ್ಲವೆಂದು ರಂಗರಾಮಾನುಜಾಚಾರ್ಯರ ಅಭಿಪ್ರಾಯ. ಮನಸ್ಸು ವಿಷಯಗಳ ಕಡೆಗೆ ಹೋಗುವುದರಿಂದಲೂ,ನಮ್ಮಲ್ಲಿರುವ ಯಾವುದೋ ಒಂದು ವಸ್ತುವು ವಿಷಯಗಳನ್ನು ಅರಿಯುವುದರಿಂದಲೂ ಮತ್ತು ಪ್ರತ್ಯಯಗಳನ್ನು ಒಟ್ಟುಗೂಡಿ ಸ್ಮರಿಸುವದರಿಂದಲೂ ಬ್ರಹ್ಮದ ಅಸ್ತಿತ್ವವು ಸಿದ್ಧವಾಗುವುದೆಂದು ಮ್ಯಾಕ್ಸ್ ಮುಲ್ಲರ್ ಅವರ ಅಭಿಪ್ರಾಯ.ಕೊನೆಗೆ ಬ್ರಹ್ಮವನ್ನು "ತದ್ವನ" ಅಥವಾ "ವನ" ಎಂದು ಉಪಾಸಿಸಬೇಕೆಂದು ಹೇಳಿದೆ.ಎಲ್ಲರೂ ಪ್ರತ್ಯಗಾತ್ಮವಾದ ಬ್ರಹ್ಮವನ್ನು ಪ್ರೀತಿಸುವದರಿಂದ,ಬಯಸುವದರಿಂದ ಅದಕ್ಕೆ ಈ ಹೆಸರು ಬಂದಿದೆ. ಈ ಉಪಾಸನೆಯೇ ಕೇನೋಪನಿಷತ್ತಿನ ಪರಮ ರಹಸ್ಯವೆಂದು ಹೇಳಬಹುದು.
ಸಾರಾಂಶ
[ಬದಲಾಯಿಸಿ]ನಮ್ಮ ಇಂದ್ರಿಯಗಳಿಗೆ ವಿಷಯಗಳನ್ನು ಪ್ರಕಾಶಗೊಳಿಸುವ ಸಾಮರ್ಥ್ಯ ಆತ್ಮಜ್ಯೋತಿಯಿಂದಲೇ ಆಗಿದೆ. ಬ್ರಹ್ಮವು ನಮ್ಮ ಪ್ರತ್ಯಗಾತ್ಮವಾದುದರಿಂದ ಅದನ್ನು "ತದ್ವನ" ಎಂದು ಉಪಾಸಿಸತಕ್ಕದ್ದು. ತಪೋದಮ ಕರ್ಮಗಳು ಅದಕ್ಕೆ ಪ್ರತಿಷ್ಠೆ. ಇದು ಈ ಉಪನಿಷತ್ತಿನ ಸಾರಾಂಶ
ಆಧಾರ
[ಬದಲಾಯಿಸಿ]೧.ಹಿಂದೂ ಧರ್ಮದ ಪರಿಚಯ:ಎದುರ್ಕಳ ಕೆ.ಶಂಕರನಾರಾಯಣ ಭಟ್