ಹೋಮಿಯೋಪಥಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸ್ಯಾಮ್ಯುಯೆಲ್ ಹಾನಿಮನ್, ಹೋಮಿಯೋಪಥಿಯ ಸ್ಥಾಪಕ

ಹೋಮಿಯೋಪಥಿ ಒಂದು ವೈದ್ಯ ಪದ್ಧತಿ. ಇದನ್ನು ಸ್ಯಾಮ್ಯುಯೆಲ್ ಹಾನಿಮನ್ ೧೮೦೦ ರ ಸುಮಾರಿಗೆ ಬಳಕೆಗೆ ತಂದರು. ಇದು ನೈಸರ್ಗಿಕ ಕ್ಷಮತೆಯನ್ನು ಚೇತರಿಸಿ, ರೋಗಿಯನ್ನು ಗುಣಪಡಿಸುವ ಸಿದ್ಧಾಂತವನ್ನು ಹೊಂದಿದೆ. ಆರೋಗ್ಯವಂತರಿಗೆ ನೀಡಿ, ಅದರ ಪರಿಣಾಮವನ್ನು ವೀಕ್ಷಿಸಿ, ರೋಗಿಗಳಿಗೆ, ಹೋಮಿಯೋಪಥಿ ವೈದ್ಯರು, ಹೋಮಿಯೋಪಥಿ ಔಷಧವನ್ನು, ಅದೇ ರೋಗಲಕ್ಷಣಗಳು ಕಂಡುಬಂದಾಗ ನೀಡಿ, ರೋಗಿಯನ್ನು ಗುಣಪಡಿಸುತ್ತಾರೆ. ಉದಾಹರಣೆಗೆ, ಈರುಳ್ಳಿ ಕಣ್ಣಿನಿಂದ ಹಾಗೂ ಮೂಗಿನಿಂದ, ನೀರನ್ನು ಸುರಿಸುವ ಗುಣ ಹೊಂದಿದೆ. ಹಾಗಾಗಿ, ಈರುಳ್ಳಿಯಿಂದ ತಯಾರಿಸಿದ ಹೋಮಿಯೋಪಥಿ ಔಷಧವನ್ನು, ಕೆಲವು ತರಹದ ಶೀತವನ್ನು ಗುಣಪಡಿಸಲು ನೀಡಲಾಗುತ್ತದೆ. ಹೋಮಿಯೋಪಥಿ ವೈದ್ಯರು, ಒಮ್ಮೆಗೆ, ಒಂದು ರೋಗಕ್ಕೆ, ಒಂದೇ ಔಷಧವನ್ನು ನೀಡುತ್ತಾರೆ.[೧] ‘ಪುಟ್ಟ ಗುಟ್ಟಿ ಪ್ರಮಾಣ (ಡೋಸೇಜ್) ದೊಡ್ಡದಕ್ಕಿಂತ ಪರಿಣಾಮಕಾರಿ’ ಎಂಬ ತತ್ತ್ವವನ್ನಾಧರಿಸಿ ಔಷಧಿ ಪ್ರಯೋಗ.

ಈ ವೈದ್ಯಕೀಯ ಚಿಕಿತ್ಸಾಕ್ರಮವನ್ನು ‘ಆಧುನಿಕ’ ವೈದ್ಯವಿಜ್ಞಾನ ಒಪ್ಪುವುದಿಲ್ಲವಾದರೂ ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ಕಾನೂನುಬದ್ಧ ಚಿಕಿತ್ಸಾಕ್ರಮಗಳ ಪೈಕಿ ಒಂದೆಂದು ಮಾನ್ಯತೆ ಪಡೆದಿದೆ.

ಪರಿಚಯ[ಬದಲಾಯಿಸಿ]

ಆರೋಗ್ಯವಂತ ಮನುಷ್ಯರಲ್ಲಿ ರೋಗವನ್ನು ಉಂಟುಮಾಡುವ ವಸ್ತುಗಳನ್ನು ಉಪಯೋಗಿಸಿ ಅದರಿಂದ ಔಷಧಿಯನ್ನು ಸಿದ್ದಪಡಿಸಿ, ರೋಗದಿಂದ ಬಳಲುತ್ತಿರುವ ಮಾನವರಿಗೆ ಇದನ್ನೇ ನೀಡುವುದು (ಸಿಮಿಲಿಯಾ ಸಿಮಿಲಿಬಸ್ ಕ್ಯೂರೆಂಟರ್) ಈ ಪದ್ಧತಿಯ ವಿಶೇಷತೆ.[೨]

ಇತಿಹಾಸ[ಬದಲಾಯಿಸಿ]

೧೭೯೦ರಲ್ಲಿ ಡಾ. ಸ್ಯಾಮ್ಯುಯೆಲ್ ಹಾನಿಮನ್ ಅವರು ಡಾ.ಕುಲೆನ್ ಅವರ ಟ್ರೀಟೀಸ್ ಆಫ್ ಮೆಟೀರಿಯಾ ಮೆಡಿಕ ಎಂಬ ಪುಸ್ತಕವನ್ನು ಭಾಷಾಂತರಿಸುವಾಗ, ಪೆರೂವಿಯನ್ ತೊಗಟೆಯ ಔಷಧೀಯ ಗುಣಗಳನ್ನು ವಿವರಿಸಬೇಕಾದರೆ ಡಾ.ಕುಲೆನ್ ಅವರು ಈ ತೊಗಟೆಯ ಮರುಕಳಿಸುವ ಜ್ವರವನ್ನು ನಿವಾರಿಸುವ ಗುಣವು ಅದರ ಕಹಿ ರುಚಿಯಿಂದಾಗಿ ಎಂದು ಬರೆದಿರುತ್ತಾರೆ. ಇಂತಹ ವಿವರಣೆಯಿಂದ ಅಸಮಧಾನಗೊಂಡ ಸ್ಯಾ.ಹಾನಿಮನ್ ಅವರು ಸ್ವತಃ ತಮ್ಮ ಮೇಲೆ ಈ ಔಷಧಿಯನ್ನು ಪ್ರಯೋಗಿಸಲು ಮುಂದಾಗುತ್ತಾರೆ. ಈ ಪ್ರಯೋಗವನ್ನು ತನ್ನ ಮೇಲೆಯಷ್ಟೇ ಸೀಮಿತವಿಡದೆ ತನ್ನ ಬಂಧು ಮಿತ್ರರ ಮೇಲೂ ನಡೆಸಿ ಕೊನೆಗೆ ಈ ತೀರ್ಮಾನಕ್ಕೆ ಬರುತ್ತಾರೆ. ‘ಆರ್ಗನನ್ ಡೆರ್ ರೇಶನೆಲ್ಲೆನ್ ಹೆಯಿಲ್‌ಕನ್‌ಸ್ಟ್’ (ಆರ್ಗನನ್ ಆಫ್ ರೇಶನಲ್ ಮೆಡಿಸಿನ್) ಎಂಬ ಗ್ರಂಥ ಮುಖೇನ ತನ್ನ ಸಿದ್ಧಾಂತವನ್ನು ಪ್ರಕಟಿಸಿದ (1810). ಆರೋಗ್ಯವಂತರ ಮೇಲೆ ಔಷಧವಸ್ತುಗಳನ್ನು ವ್ಯವಸ್ಥಿತವಾಗಿ ಪ್ರಯೋಗಿಸಿದಾಗ (ಈ ತಂತ್ರಕ್ಕೆ ಆತ ನೀಡಿದ ಹೆಸರು ‘ಪ್ರೂವಿಂಗ್’) ಅವರಲ್ಲಿ ಕಾಣಿಸಿಕೊಂಡ ಲಕ್ಷಣಗಳನ್ನು ವಿವರವಾಗಿ ದಾಖಲಿಸಿ  ‘ರೆಯ್ನೆ ಅರ್ಝ್ನೆಯ್ಮಿಟ್ಟೆಲೆಹ್ರೆ’ (ಶುದ್ಧ ಔಷಧಿ ಪ್ರಭಾವ ವಿಜ್ಞಾನ) ಎಂಬ ಹೆಸರಿನ 6 ಸಂಪುಟಗಳಲ್ಲಿ ಪ್ರಕಟಿಸಿದ (1811). ಯಾವ ಔಷಧಿ ಕಾಯಿಲೆಯನ್ನು ಗುಣಪಡಿಸುತ್ತದೆಯೋ ಅದೇ ಔಷಧಿಗೆ ಆ ಕಾಯಿಲೆಯನ್ನು ಉತ್ಪಾದಿಸುವ ಕ್ಷಮತೆಯೂ ಇರುತ್ತದೆ. ಈ ತತ್ವವೇ ಹೋಮಿಯೋಪತಿಯೆಂಬ ಪರ್ಯಾಯ ಔಷಧೀಯ ವ್ಯವಸ್ಥೆಯ ಅಡಿಪಾಯವಾಯಿತು. ಇಂತಹ ಪದ್ಧತಿಯು ಭಾರತದಲ್ಲಿ ಸ್ಥಾಪನೆಗೊಂಡದ್ದು ೧೮೧೦ರಲ್ಲಿ. ಜರ್ಮನಿಯಿಂದ ಭೂವೈಜ್ಞಾನಿಕ ತನಿಖೆಗೆಂದು ಭಾರತಕ್ಕೆ ಬಂದ ಜರ್ಮನಿಯ ಒಂದು ವೈದ್ಯ ಹಾಗು ಭೂವಿಜ್ಞಾನಿ ಅವರ ಗುಂಪಿನ ಸದಸ್ಯರೊಂದಿಗೆ ಬಂಗಾಲದಲ್ಲಿ ಈ ಔಷಧಿಯನ್ನು ಅಲ್ಲಿಯ ಜನರ ಮೇಲೆ ಪ್ರಯೋಗಿಸಿದರು. ಹೀಗೆ ಹೋಮಿಯೋಪತಿ ಎಂಬ ಪದ್ಧತಿಯು ಬಂಗಾಲ, ಕಲ್ಕತ್ತಾ, ಪಂಜಾಬ್‍ನಂತಹ ಕೆಲ ಪ್ರದೇಶಗಳಲ್ಲೂ ಪಸರಿಸಲಾರಂಭಿಸಿತು. ೧೮೩೯ರಲ್ಲಿ ಡಾ.ಜಾನ್ ಮಾರ್ಟಿನ್ ಹೋನಿಗ್‍ಬರ್ಗರ್ ಭಾರತಕ್ಕೆ ಬಂದಿದ್ದಾಗ ಪಂಜಾಬಿನ ಮಹರಾಜ ರಂಜಿತ್ ಸಿಂಗ್ ಅವರಿಗೆ ಗಂಟಲಿನ ತೊಂದರೆಗೆ ಡಲ್ಕಾಮೆರ ಎಂಬ ಹೋಮಿಯೋಪತಿ ಔಷಧಿ ಕೊಟ್ಟು ರೋಗಮುಕ್ತಗೊಳಿಸಿದ್ದರು.[೩][೪] ಇದರಿಂದ ಪ್ರಭಾವಿತರಾದ ರಾಜ ರಂಜಿತ್ ಸಿಂಗ್ ಅವರನ್ನು ಅಲ್ಲೇ ವೈದ್ಯರಾಗಿ ಇದೇ ಪದ್ಧತಿಯನ್ನು ಅಭ್ಯಸಿಸಲು ಅನುಮತಿ ನೀಡಿದರು.

ವಿವರಗಳು[ಬದಲಾಯಿಸಿ]

ಈ ಪದ್ಧತಿಯ ಜನಕ ಹಾನಿಮನ್ ಪ್ರಕಾರ ‘ಆರೋಗ್ಯಸ್ಥಿತಿ ಹಳಿತಪ್ಪುವಿಕೆಯೇ ರೋಗ.’ ರೋಗವನ್ನು ಯಾಂತ್ರಿಕವಾಗಿ ದೇಹದಿಂದ ನಿರ್ಮೂಲಿಸಲು ಸಾಧ್ಯವಿಲ್ಲ. ರೋಗವನ್ನು ಬೇಗನೆ ವಿಶ್ವಾಸಾರ್ಹವಾಗಿಯೂ ಶಾಶ್ವತವಾಗಿಯೂ ವಾಸಿ ಮಾಡಬಲ್ಲ ಚಿಕಿತ್ಸಾಕ್ರಮ ಅತ್ಯುತ್ತಮವಾದದ್ದು. ಎಂದೇ, ಈ ಎಲ್ಲ ಗುಣಗಳುಳ್ಳದ್ದು ಸಮಗ್ರತಾದೃಷ್ಟಿಯ (ಹೋಲಿಸ್ಟಿಕ್) ಔಷಧೋಪಚಾರ ಪದ್ಧತಿ ಎಂದಾತ ನಂಬಿದ್ದ. ರೋಗಗಳಲ್ಲಿ ಎರಡು ಬಗೆ: ತಾತ್ಕಾಲಿಕವಾಗಿ ವ್ಯಕ್ತಿಯನ್ನು ಶಕ್ತಿಗುಂದಿಸುತ್ತದಾದರೂ ಯುಕ್ತ ಚಿಕಿತ್ಸೆಯಿಂದ ವಾಸಿಮಾಡಬಹುದಾದ ತೀವ್ರ ರೋಗ ಮತ್ತು ಅನೇಕ ಬಾರಿ ರೋಗಬಾಧಿತನಾಗಿ ಅಪಾಯಕಾರಿ ಎನ್ನಬಹುದಾದಷ್ಟು ಶಕ್ತಿಗುಂದಿಸುವ ದೀರ್ಘಕಾಲಿಕ ರೋಗ. ಇಂಥ ರೋಗಗಳಿಗೆ ಚಿಕಿತ್ಸೆ ಮಾಡಬಯಸುವ ಹೋಮಿಯೊಪತಿ ವೈದ್ಯನಲ್ಲಿ ಇರಬೇಕಾದ ಸಾಮರ್ಥ್ಯಗಳು ನಾಲ್ಕು:

  1. ವ್ಯಾಧಿಕಾರಣ ಜ್ಞಾನ, ರೋಗಲಕ್ಷಣ ಜ್ಞಾನ, ರೋಗದ ಮುಂದಿನ ಬೆಳೆವಣಿಗೆ ಜ್ಞಾನ ಹಾಗೂ ರೋಗನಿದಾನ ವಿಧಾನ ಜ್ಞಾನ.
  2. ಔಷಧವಸ್ತುವಿನ ಔಷಧೀಯ ಸಾಮರ್ಥ್ಯ ಜ್ಞಾನ.
  3. ರೋಗಿಯ ಸ್ಥಿತಿಗೆ ಔಷಧದ ಔಷಧೀಯ ಸಾಮರ್ಥ್ಯವನ್ನು ಅನ್ವಯಿಸುವ ಸಾಮರ್ಥ್ಯ.
  4. ರೋಗಿ ರೋಗಮುಕ್ತನಾಗಲು ಇರುವ ಪ್ರತಿಬಂಧಕಗಳ ಮತ್ತು ಅವನ್ನು ನಿವಾರಿಸುವ ವಿಧಾನಗಳ ಜ್ಞಾನ.

ರೋಗಗ್ರಸ್ತ ಭಾಗಕ್ಕೆ ಮಾತ್ರ ಚಿಕಿತ್ಸೆ ನೀಡುವುದಕ್ಕೆ ಬದಲಾಗಿ ರೋಗಿಯ ಸಮಗ್ರ ದೇಹಸ್ಥಿತಿಯನ್ನು ಪರಿಗಣಿಸಿ ಸಮಗ್ರಚಿಕಿತ್ಸೆ ನೀಡುವ ಗುರಿಸಾಧನೆಗೆ ಇವು ಅನಿವಾರ್ಯ.

ತನಗೆ ತಗಲುವ ರೋಗಗಳನ್ನು ನಿವಾರಿಸಿಕೊಳ್ಳುವ ನೈಸರ್ಗಿಕ ಶಕ್ತಿ ದೇಹಕ್ಕೆ ಇದೆ ಎಂಬ ನಂಬಿಕೆಯನ್ನು ಆಧರಿಸಿ ಹೋಮಿಯೊಪತಿ ವೈದ್ಯ ಚಿಕಿತ್ಸೆ ನೀಡುತ್ತಾನೆ. ಚಿಕಿತ್ಸಾವಿಧಾನ ನಾಲ್ಕು ಮೂಲ ತತ್ತ್ವಗಳನ್ನು ಆಧರಿಸಿದೆ:

  1. ಸದೃಶಗಳ ನಿಯಮ (ಲಾ ಆಫ್ ಸಿಮಿಲರ್ಸ್): ‘ಸದೃಶಕ್ಕೆ ಸದೃಶವೇ ರೋಗಪರಿಹಾರಕ’ (ಲೈಕ್ ಕ್ಯೂರ್ಸ್ ಲೈಕ್, ಮೂಲ ರೂಪ: ಸಿಮಿಲಿಯ ಸಿಮಿಲಿಬಸ್ ಕ್ಯೂರೆಂಟರ್). ‘ರೋಗಲಕ್ಷಣವನ್ನು ಉಂಟುಮಾಡಬಲ್ಲ ಔಷಧವಸ್ತು ರೋಗವನ್ನು ವಾಸಿ ಮಾಡುತ್ತದೆ’. ಇದು ಈ ನಿಯಮದ ತಿರುಳು. ಉದಾ: ನಿದ್ದೆ ಬಾರದಂತೆ ತಡೆಯಬಲ್ಲ ಕೆಫೀನ್ ನಿದ್ರಾಹೀನತೆಯನ್ನು ನಿವಾರಿಸಲೂಬಲ್ಲದು. ‘ಆಧುನಿಕ’ ಔಷಧವಿಜ್ಞಾನ ಇದನ್ನು ಒಪ್ಪುವುದಿಲ್ಲ.
  2. ಸಾಮರ್ಥ್ಯವರ್ಧನಾ ನಿಯಮ (ಲಾ ಆಫ್ ಪೊಟೆನ್ಶಿಏಷನ್): ‘ಔಷಧದ ಅಧಿಕ ಗುಟ್ಟಿಪ್ರಮಾಣದಿಂದ ರೋಗ ಉಲ್ಬಣಿಸುತ್ತದೆ, ಅಲ್ಪ ಗುಟ್ಟಿಪ್ರಮಾಣ ದೇಹದ ರಕ್ಷಣ ಯಂತ್ರತೆಯನ್ನು ಬಲಪಡಿಸುತ್ತದೆ ಅಥವಾ ಔಷಧಿಯ ಸಾರರಿಕ್ತತೆ ಹೆಚ್ಚಿದಂತೆಲ್ಲ ಅದರ ಫಲಕಾರಿತ್ವ ಹೆಚ್ಚುತ್ತದೆ.’ ಔಷಧದ ಸಾಮರ್ಥ್ಯ ಅದರ ಗುಣವನ್ನು ಆಧರಿಸಿದೆಯೇ ವಿನಾ ಗುಟ್ಟಿಪ್ರಮಾಣವನ್ನಲ್ಲ ಎಂಬುದು ಹೋಮಿಯೊಪತಿಯ ಬುನಾದಿ ನಂಬಿಕೆ. ಹೋಮಿಯೊಪತಿ ವೈದ್ಯರು ಸಾಧ್ಯವಿರುವಷ್ಟು ಸಾರರಿಕ್ತ ಔಷಧ ನೀಡುವುದರ, ಔಷಧದ ಸಾರರಿಕ್ತತೆಯನ್ನು ಕ್ರಮೇಣ ಬದಲಿಸುವುದರ ಹಾಗೂ ಸುದೀರ್ಘವಾದ ಅನುಶಾಶನ ವಿಧಿಸುವುದರ ಒಳಮರ್ಮ ಇದು.
  3. ರೋಗವಾಸಿಯಾಗುವ ನಿಯಮ (ಲಾ ಆಫ್ ಕ್ಯೂರ್): ದೇಹದ ಮೇಲ್ಭಾಗದಿಂದ ಕೆಳಭಾಗದತ್ತ (ಶಿರಪದಾಭಿಮುಖವಾಗಿ), ಒಳಭಾಗದಿಂದ ಹೊರಭಾಗದತ್ತ (ಅಂತರ್ಬಾಹ್ಯಾಭಿಮುಖವಾಗಿ), ಪ್ರಮುಖ ಅಂಗದಿಂದ ಅಷ್ಟೇನೂ ಪ್ರಮುಖವಲ್ಲದ ಅಂಗದತ್ತ ಹಾಗೂ ರೋಗಲಕ್ಷಣಗಳು ಪ್ರಕಟವಾದ ಕ್ರಮಕ್ಕೆ ವಿರುದ್ಧ ಕ್ರಮದಲ್ಲಿ ರೋಗಪರಿಹಾರ ಮುಂದುವರಿಯುತ್ತದೆ.
  4. ರೋಗಪರಿಹಾರ ಏಕತ್ವ ಔಷಧೀಕರಣ ನಿಯಮ (ಲಾ ಆಫ್ ಸಿಂಗಲ್ ರೆಮೆಡಿ ಮೆಡಿಕೇಶನ್): ಒಂದು ಬಾರಿಗೆ ಒಂದು ಔಷಧಿಯನ್ನು ಶುದ್ಧರೂಪದಲ್ಲಿ ನೀಡಬೇಕೇ ವಿನಾ ಏಕಕಾಲದಲ್ಲಿ ವಿಭಿನ್ನ ಔಷಧಿಗಳ ಮಿಶ್ರಣ ನೀಡಬಾರದು.

ಇತರರ ಕೊಡುಗೆ[ಬದಲಾಯಿಸಿ]

  1. ೧೮೪೬-೪೭ರಲ್ಲಿ ಸ್ಯಾಮ್ಯೂಲ್ ಬ್ರೂಕಿಂಗ್‍ರವರು ತಾಂಜೋರ್ ಹಾಗು ತಮಿಳು ನಾಡಿನಲ್ಲಿ ಹೋಮಿಯೋಪತಿ ಆಸ್ಪತ್ರೆ ಸ್ಥಾಪಿಸಿದರು
  2. ೧೮೫೧ರಲ್ಲಿ ಸರ್.ಜಾನ್ ಹಂಟರ್ ಲಿಟ್ಲರ್ ಸ್ಥಳೀಯ ಹೋಮಿಯೋಪತಿ ಆಸ್ಪತ್ರೆ ಹಾಗು ಔಷಧಾಲಯ ಎಂಬ ಸಂಸ್ಥೆಯನ್ನು ಬಂಗಾಲದಲ್ಲಿ ಸ್ಥಾಪಿಸಿದರು.
  3. ಭಾರತದಲ್ಲಿ ಹೋಮಿಯೋಪತಿಯ ಅಡಿಪಾಯವನ್ನು ಇನ್ನಷ್ಟು ಬಲವಾಗಿ ಸ್ಥಾಪಿಸಿದವರು ಬಾಬು ರಾಜೇಂದ್ರಲಾಲ್ ದತ್
  4. ಮಹೇಂದ್ರ ಲಾಲ್ ಸರ್ಕಾರ್ ಅವರು ಅಲೋಪಥಿ ಪದ್ಧತಿಯನ್ನು ತೊರೆದು ಹೋಮಿಯೋಪತಿ ವೈದ್ಯರಾಗಿ ಪರಿವರ್ತಿಸಿಕೊಂಡರು.
  5. ಬನಾರಸ್ ಹೋಮಿಯೋಪತಿ ಆಸ್ಪತ್ರೆಯ ಉದ್ಘಾಟನೆ ೧೯೬೭ರಲ್ಲಿ ಜರಗಿತು.
  6. ೧೮೬೯ರಲ್ಲಿ ಹೋಮಿಯೋಪತಿ ಚಾರಿಟೆಬಲ್ ಡಿಸ್ಪೆನ್ಸರಿ ಅಲ್ಲಾಹಬಾದ್‍ನಲ್ಲಿ ಪ್ರಾರಂಭಗೊಂಡಿತು.
  7. ಮಹೇಶ್ ಚಂದ್ರ ಭಟಾಚಾರ್ಯ ಹೋಮಿಯೋಪತಿ ಫಾರ್ಮಕೋಪಿಯವನ್ನು ಪ್ರಕಟಿಸಿದರು.
  8. ೧೯೭೨ರಲ್ಲಿ ಸಿ.ಸಿ.ಎಚ್.( ಸೆಂಟ್ರಲ್ ಕೌಂಸಿಲ್ ಆಫ್ ಹೋಮಿಯೋಪತಿ ) ರೂಪುಗೊಂಡಿತು.[೫]

ಉಲ್ಲೇಖಗಳು[ಬದಲಾಯಿಸಿ]

  1. http://www.homeoint.org/books3/kentmm/dulc.htm
  2. https://homeopathic.com/a-condensed-history-of-homeopathy/
  3. "ಆರ್ಕೈವ್ ನಕಲು". Archived from the original on 2019-03-27. Retrieved 2019-03-17.
  4. "Honigberger, John (Johann) Martin (1795-)". Jstor. Retrieved 9 March 2019.
  5. "ಆರ್ಕೈವ್ ನಕಲು". Archived from the original on 2019-03-14. Retrieved 2019-03-17.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

Videos
Associations
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: