ವಿಷಯಕ್ಕೆ ಹೋಗು

ಸಿಯಾಚಿನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸೆಟಲೈಟ್ ಚಿತ್ರ

ಸಿಯಾಚಿನ್ ನೀರ್ಗಲ್ಲು ಹಿಮಾಲಯದ ಪೂರ್ವ ಕರಕೋರಮ್ ಪರ್ವತ ಶ್ರೇಣಿಯಲ್ಲಿದೆ(ಅಕ್ಷಾಂಶ, ರೇಖಾಂಶ 35.421226°N 77.109540°E).ಪಾಯಿಂಟ್ NJ9842ರ ಈಶಾನ್ಯ ದಿಕ್ಕಿಗೆ ತಾಗಿಕೊಂಡಿದೆ.ಪಾಯಿಂಟ್ NJ9842 ನಲ್ಲಿಗೆ ಭಾರತ-ಪಾಕಿಸ್ತಾನ ನಡುವಿನ 'ಗಡಿ ನಿಯಂತ್ರಣ ರೇಖೆ' (ಲೈನ್ ಆಫ್ ಕಂಟ್ರೋಲ್ ) ಮುಗಿಯುತ್ತದೆ. ೭೬ ಕಿಲೋಮೀಟರ್ ಉದ್ದವಿರುವ ಈ ನೀರ್ಗಲ್ಲಿನ ಮೇಲ್ಭಾಗ ಸುಮಾರು ೫೭೫೩ ಮೀಟರ್ ಎತ್ತರದಲ್ಲಿರುವ ಇಂದಿರಾ ಕೊಲ್(Indira col) ಎಂಬಲ್ಲಿಂದ ಹಿಡಿದು ಸುಮಾರು ೩೬೨೦ ಮೀಟರ್ ಎತ್ತರದಲ್ಲಿರುವ ಅದರ ಬುಡದ ವರೆಗು ಚಾಚಿದೆ.ಸದ್ಯ ಸಿಯಾಚಿನ್ ನೀರ್ಗಲ್ಲು ಹಾಗು ಅದರ ಎಲ್ಲಾ ಮುಖ್ಯ ಕಣಿವೆ ಮಾರ್ಗಗಳು ಭಾರತದ ಆಡಳಿತದಲ್ಲಿದೆ.ಪಾಕಿಸ್ತಾನದ ಆಡಳಿತದಲ್ಲಿರುವ ಪ್ರದೇಶವೇನಿದ್ದರು ಸಲ್ಟಾರೋ ಗುಡ್ಡಸಾಲಿನ ಪಶ್ಚಿಮಕ್ಕಷ್ಟೇ ಸೀಮಿತವಾಗಿದೆ .ಪಾಕಿಸ್ತಾನದ ಮಿಲಿಟರಿ ಪೋಸ್ಟ್ ಗಳೇನಿದ್ದರೂ ಭಾರತದ ಮಿಲಿಟರಿ ಪೋಸ್ಟ್ಗಳಿಗಿಂತ ೩೦೦೦ಅಡಿಗಳಷ್ಟು ಕೆಳಗಿದೆ.

ಸಿಯಾಚಿನ್ ನೀರ್ಗಲ್ಲು ಯುರೇಶಿಯನ್ ನೆಲತಟ್ಟೆ(plate) ಹಾಗು ಭಾರತ ನೆಲತಟ್ಟೆಯನ್ನು ಬೇರ್ಪಡಿಸುವ 'ಗ್ರೇಟ್ ಡ್ರೈನೇಜ್ ಡಿವೈಡ್' (great drinage divide )ನ ದಕ್ಷಿಣಕ್ಕಿದೆ.ಕರಕೋರಮ್ ನ ಈ ಭೂಭಾಗ ಅತಿ ಹೆಚ್ಚಾಗಿ ಹಿಮನದಿಗಳನ್ನು ಹೊಂದಿರುವ ಕಾರಣ ಇದನ್ನು ಮೂರನೆ ಧ್ರುವ ಎಂದು ಕರೆಯಲಾಗುತ್ತದೆ. ಸಲ್ಟಾರೋ ಗುಡ್ಡ ಸಾಲುಗಳ ಪೂರ್ವದಲ್ಲಿದೆ.ಸಲ್ಟಾರೋ ಗುಡ್ಡಸಾಲಿನ ಎತ್ತರ ೫೪೫೦ ಮೀಟರಿನಿಂದ ೭೭೨೦ ಮೀಟರಿನವರೆಗೂ ಇದೆ.ಸಲ್ಟಾರೋ ಗುಡ್ಡಸಾಲಿನ ಮುಖ್ಯ ಕಣಿವೆ ಮಾರ್ಗಗಳಾದ ಸಿಯಾ-ಲಾ ೫೫೮೯, ಬಿಲಾಫೊಂಡ್ -ಲಾ ೫೪೫೦, ಹಾಗು ಗ್ಯಾಂಗ್ -ಲಾ ೫೬೮೯ ಗಳೆಲ್ಲವೂ ಉತ್ತರ-ದಕ್ಷಿಣ ಮುಖವಾಗಿದೆ.

ಇಲ್ಲಿ ಚಳಿಗಾಲದಲ್ಲಿ ಸರಾಸರಿ ಸುಮಾರು ೧೦೦೦ ಸೆಂಟೀ ಮೀಟರಿನಷ್ಟು ಹಿಮಪಾತವಾಗುತ್ತದೆ ಹಾಗು ತಾಪಮಾನ ಸುಮಾರು -೫೦ ಡಿಗ್ರಿ ಸೆಂಟಿಗ್ರೇಡ್ ಗೆ ಇಳಿಯುತ್ತದೆ.

ಹೆಸರಿನ ಹಿನ್ನೆಲೆ.

[ಬದಲಾಯಿಸಿ]

ಬಾಲ್ಟೀ ಭಾಷೆಯಲ್ಲಿ "ಸಿಯಾ" ಎಂದರೆ ಗುಲಾಬಿ ಜಾತಿಗೆ ಸೇರಿದ ಒಂದು ನಮೂನೆಯ ಹೂ ಎಂದು ಹಾಗು "ಚನ್" ಎಂದರೆ "ಹೇರಳವಾಗಿ ಕಾಣಸಿಗುವ " ಎಂಬರ್ಥವಿದೆ. ಸಿಯಾಚಿನ್ ನೀರ್ಗಲ್ಲಿನ ಪ್ರದೇಶದಲ್ಲಿ ಯಾವುದೆ ರೀತಿಯ ಗಿಡಮರಗಳು ಬೆಳೆಯುವುದಿಲ್ಲ. ಆದರೆ ಸಿಯಾಚಿನ್ ಕೆಳಭಾಗದಲ್ಲಿ ಕಾಣಸಿಗುವ ಒಂದು ನಮೂನೆಯ ಗುಲಾಬಿ ಹೂವಿನಿಂದ ಈ ಹೆಸರು ಬಂದಿರಬಹುದು [೧].

ವಿವಾದ.

[ಬದಲಾಯಿಸಿ]

ಇಡಿ ಸಿಯಾಚಿನ್ ಪ್ರದೇಶದ ಒಡೆತನದ ಕುರಿತಂತೆ ಭಾರತ ಹಾಗು ಪಾಕಿಸ್ತಾನದ ನಡುವೆ ವಿವಾದವಿದೆ.ಎರಡೂ ರಾಷ್ಟ್ರಗಳು ಈ ಪ್ರದೇಶ ತಮಗೆ ಸೇರಿದ್ದೆಂದು ವಾದಿಸುತ್ತವೆ.೧೯೭೦ ಹಾಗು ೧೯೮೦ ರ ದಶಕದಲ್ಲಿ ಅಮೆರಿಕ ಹಾಗು ಪಾಕಿಸ್ತಾನದ ಭೂಪಟಗಳಲ್ಲಿ NJ9842 ವಿನಿಂದ ಕರಕೋರಮ್ ನ ವರೆಗೂ ಚುಕ್ಕಿ-ಗೆರೆಯಲ್ಲಿ (dotted lines )ತೋರಿಸುತ್ತಿದ್ದವು.ಇದನ್ನ ಭಾರತ ಭೂಪಟಶಾಸ್ತ್ರದ ದೋಷ (cartographic error)ಎಂದೇ ಭಾವಿಸಿತ್ತು.ಆದರೆ ಇದು ಪಾಕಿಸ್ತಾನದ ಕಡೆಯಿಂದ "ಶಿಮ್ಲಾ ಒಪ್ಪಂದದ " ಉಲ್ಲಂಘನೆಯಾಗಿತ್ತು.೧೯೮೪ ರಲ್ಲಿ ಭಾರತ "ಆಪರೇಷನ್ ಮೇಘದೂತ್" ಎಂಬ ಸೇನಾ ಕಾರ್ಯಾಚರಣೆ ನಡೆಸಿ ಸಿಯಾಚಿನ್ ನೀರ್ಗಲ್ಲು ಹಾಗು ಅದರ ಉಪನದಿಗಳ ಮೇಲೆ ಹತೋಟಿ ಪಡೆಯಿತು.ಸಿಯಾಚಿನ್ ನಲ್ಲಿ ೧೯೮೪ ರಿಂದ ೧೯೯೯ ರ ವರೆಗೂ ಭಾರತ ಹಾಗು ಪಾಕಿಸ್ತಾನ ಸೇನೆಯ ನಡುವೆ ಘರ್ಷಣೆ ನಡೆಯುತ್ತಲೇ ಇತ್ತು. ಪಾಕಿಸ್ತಾನ 'ಆಪರೇಷನ್ ಅಬ್ದಿಲ್' ನ ಮೂಲಕ ಸಿಯಾಚಿನ್ ಅನ್ನು ಪಡೆಯಲು ಯೋಚಿಸಿತ್ತು.ಆದರೆ ಭಾರತ 'ಆಪರೇಷನ್ ಮೇಘದೂತ್' ಕಾರ್ಯಾಚರಣೆಯ ಮೂಲಕ ಪಾಕಿಸ್ತಾನಕ್ಕಿಂತ ಒಂದು ದಿನ ಮೊದಲೇ ಸಿಯಾಚಿನ್ ಹಾಗು ಅದರ ಪಶ್ಚಿಮಕ್ಕಿರುವ ಸಲ್ಟಾರೋ ಗುಡ್ಡಸಾಲಿನ ಎತ್ತರದ ಪ್ರದೇಶಗಳನ್ನು ವಶಪಡಿಸಿಕೊಂಡಿತು.ಸಿಯಾಚಿನ್ ಪ್ರದೇಶದಲ್ಲಿ ಯುದ್ಧದಲ್ಲಿ ಮಡಿದವರಿಗಿಂತ ಅಲ್ಲಿನ ಕಠಿಣ ಹವಾಮಾನದಿಂದಾಗಿ ಹೆಚ್ಚು ಜನ ಮಡಿದ್ದಿದ್ದಾರೆ.[೨][೩]

೨೦೧೨ ರಲ್ಲಿ ಗಯಾರಿ ಪ್ರಾಂತ್ಯದಲ್ಲಿ ಸಂಭವಿಸಿದ ಹಿಮಪಾತದಲ್ಲಿ ೧೪೦ ಯೋಧರು ಮಡಿದಿದ್ದಾರೆ.೨೦೦೩-೨೦೧೦ ರ ನಡುವೆ ಪಾಕಿಸ್ತಾನ ೩೫೩ ಯೋಧರನ್ನು ಕಳೆದುಕೊಂಡಿದೆ.ಡಿಸೆಂಬರ್ ೨೦೧೫ ರಲ್ಲಿ ಭಾರತ ಸರ್ಕಾರದ ರಕ್ಷಣಾ ಮಂತ್ರಿ (ರಾಜ್ಯ) ಇಂದರ್ ಸಿಂಗ್ ಅವರು ನೀಡಿದ ಲಿಖಿತ ಪ್ರತಿಕ್ರಿಯೆಯಲ್ಲಿ ತಿಳಿಸಿರುವಂತೆ ಭಾರತ 'ಆಪರೇಷನ್ ಮೇಘದೂತ್' ಶುರು ಮಾಡಿದಾಗಿನಿಂದ ಅಂದಿನ ವರೆಗೂ ಸುಮಾರು ೮೬೯ ಭಾರತೀಯ ಯೋಧರು ಸಿಯಾಚಿನ್ ನಲ್ಲಿ ಮಡಿದಿದ್ದಾರೆ.ಇಂದಿಗೂ ಎರಡೂ ದೇಶಗಳು ಸಿಯಾಚಿನ್ ನ ಸುತ್ತಮುತ್ತಲೂ ಸಾವಿರಾರು ಸಂಖ್ಯೆಯಲ್ಲಿ ಸೇನೆಯನ್ನು ಜಮಾವಣೆ ಮಾಡುತ್ತಿವೆ.ಸಿಯಾಚಿನ್ ನಿಂದ ಎರಡೂ ದೇಶಗಳು ತಮ್ಮ ತಮ್ಮ ಸೇನೆಯನ್ನು ಹಿಂಪಡೆದು ಸೇನಾ-ಮುಕ್ತ ಪ್ರದೇಶವನ್ನಾಗಿ ಮಾಡಬೇಕೆಂದು ಹಲವಾರು ಪ್ರಯತ್ನಗಳು ನಡೆದಿದ್ದರೂ,ಇದುವರೆಗು ಯಾವುದೂ ಯಶಸ್ವಿಯಾಗಿಲ್ಲ.[೪]

ಸಿಯಾಚಿನ್ ಪ್ರದೇಶದಲ್ಲಿ ಸೇನೆಯವರನ್ನು ಹೊರತುಪಡಿಸಿ ಬೇರೆ ಇನ್ಯಾವ ನಾಗರಿಕ ವಸತಿ ಇಲ್ಲ.ಭಾರತದ ಬೇಸ್ ಕ್ಯಾಂಪಿನಿಂದ ೧೦ ಮೈಲಿ ಕೆಳಗೆ ವಾರ್ಷಿ ಎಂಬ ಹಳ್ಳಿಯೇ ಕೊನೆಯ ಜನವಸತಿ ಇರುವ ಸ್ಥಳ.ಸಿಯಾಚಿನ್ ನಿರ್ಜನ ಪ್ರದೇಶವಾಗಿದ್ದು ರಸ್ತೆ ಸಂಪರ್ಕವೂ ವಿರಳವಾಗಿದೆ.ಭಾರತದ ಬದಿಯಿಂದ ಸಿಯಾಚಿನ್ ನೀರ್ಗಲ್ಲಿನ ಶಿಖರದಿಂದ ೭೨ ಕಿಲೋಮೀಟರ್ ದೂರದಲ್ಲಿನ ಜಿಂಗ್ರುಲ್ಮಾ ದಲ್ಲಿರುವ ಮಿಲಿಟರಿ ಬೇಸ್ ಕ್ಯಾಂಪಿನಲ್ಲಿ ರಸ್ತೆ ಸಂಪರ್ಕ ಕೊನೆಗೊಳ್ಳುತ್ತದೆ.ಸಿಯಾಚಿನ್ ತಲುಪಲು ಭಾರತ ಮನಾಲಿ-ಲೇಹ್ ಹೆದ್ದಾರಿಯೂ ಸೇರಿದಂತೆ ಹಲವಾರು ದಾರಿಗಳನ್ನು ರೂಪಿಸಿದೆ.೨೦೧೨ ರಲ್ಲಿ ಅಂದಿನ ಸೇನಾ ಮುಖ್ಯಸ್ಥರಾಗಿದ್ದ ಜೆನರಲ್ ಬಿಕ್ರಮ್ ಸಿಂಗ್ ಅವರು ಭಾರತ ಯುದ್ಧಾನುಕೂಲದ ಲಾಭಕ್ಕಾಗಿ (strategic advantage) ಸಿಯಾಚಿನ್ ನಲ್ಲಿ ಸೇನೆಯನ್ನು ಉಳಿಸಿಕೊಳ್ಳಬೇಕು. ಭಾರತ ಸಿಯಾಚಿನ್ ಗಾಗಿ ಈಗಾಗಲೇ ಬಹಳಷ್ಟು ರಕ್ತ ಹರಿಸಿದೆ.ಆ ಕಾರಣ ಸಿಯಾಚಿನ್ ನಿಂದ ಸೇನೆಯನ್ನು ಹಿಂಪಡೆಯಲಾಗುವುದಿಲ್ಲ ಎಂದು ತಿಳಿಸಿದರು.ಈಗ ಸಧ್ಯ ಸಿಯಾಚಿನ್ ನೀರ್ಗಲ್ಲು ಹಾಗು ಸಲ್ಟಾರೋ ಗುಡ್ಡ ಸಾಲುಗಳು ಹಾಗು ಅದರ ಮುಖ್ಯ ಕಣಿವೆ ಮಾರ್ಗಗಳು ಭಾರತದ ವಶದಲ್ಲಿದೆ.ಸಲ್ಟಾರೋ ಗುಡ್ಡ ಸಾಲಿನ ಪಶ್ಚಿಮದಲ್ಲಿರುವ ಪ್ರದೇಶಗಳು ಪಾಕಿಸ್ತಾನದ ವಶದಲ್ಲಿದೆ.ಸಿಯಾಚಿನ್ ಪ್ರದೇಶದ AGPL ಅನ್ನು ಸರಿಯಾಗಿ ಗುರುತಿಸಿ, ದೃಢೀಕರಿಸಿ ,ಸರಿಯಾಗಿ ರೇಖಿಸಿ ನಂತರ ಭೂಪಟಕ್ಕೆ ಸೇರಿಸದ ಹೊರತು ಸಿಯಾಚಿನ್ ನಿಂದ ಭಾರತ ಹಿಂದೆ ಸರಿಯುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

೧೯೪೮ ರ ಕರಾಚಿ ಒಪ್ಪಂದವು NJ9842 ವರೆಗು ಗಡಿಯನ್ನು ಸ್ಪಷ್ಟವಾಗಿ ಗುರುತಿಸುತ್ತದೆ.ಅದರೆ NJ9842 ವಿನಿಂದ ಮುಂದೆ,"ಉತ್ತರದ ನೀರ್ಗಲ್ಲಿನ ಕಡೆಗೆ"( "thence north to glaciers") ಎಂದು ತಿಳಿಸುತ್ತದೆ. ಅದರಂತೆ ಉತ್ತರದ ನೀರ್ಗಲ್ಲಿನ ಪಶ್ಚಿಮಕ್ಕಿರುವ ಸಲ್ಟಾರೋ ಸಾಲಿನ ಮೂಲಕವೇ ಗಡಿರೇಖೆ ಸಾಗುತ್ತದೆ ಎಂಬುವುದು ಭಾರತದ ನಿಲುವು.ಗುಡ್ಡಗಾಡು ಪ್ರದೇಶಗಳಲ್ಲಿ ಗಡಿರೇಖೆಯನ್ನು ಹೆಚ್ಚಾಗಿ ಅಲ್ಲಿನ ನೀರುಹರಿಯುವ ದಾರಿಯನ್ನೇ ಗಡಿ ಎಂದು ಗುರುತಿಸುತ್ತಾರೆ.

ಹರಿವು.(Drainage)

[ಬದಲಾಯಿಸಿ]

ನೀರ್ಗಲ್ಲಿನಿಂದ ಕರಗಿ ಹೊರಬರುವ ನೀರು ನುಬ್ರಾ ನದಿಗೆ ಸೇರುತ್ತದೆ. ನುಬ್ರಾ ನದಿಯು ಭಾರತದ ಲಡಾಖ್ ಪ್ರದೇಶದಲ್ಲಿ ಹರಿದು ಮುಂದೆ ಶ್ಯೋಕ್ ನದಿಯನ್ನು ಸೇರುತ್ತದೆ.ಶ್ಯೋಕ್ ನದಿಯು ಸ್ಕರ್ದು ಪಟ್ಟಣದ ಬಳಿ ಸಿಂಧು ನದಿಯನ್ನು ಸೇರುತ್ತದೆ.

ಪರಿಸರ ವಿವಾದಗಳು.(Environmental issue)

[ಬದಲಾಯಿಸಿ]

೧೯೮೪ ರ ವರೆಗೂ ನಿರ್ಜನ ಪ್ರದೇಶವಾಗಿತ್ತು ಹಾಗಾಗಿ ಯಾವುದೆ ಮಾಲಿನ್ಯವಿರಲ್ಲಿಲ್ಲ.ಆದರೆ ಅದರ ನಂತರ ಸಾವಿರಾರು ಸಂಖ್ಯೆಯಲ್ಲಿ ಸೈನಿಕರ ಜಮಾವಣೆ ಮಾಡಲು ಶುರುವಾದ ನಂತರ ಹಿಮಗಡ್ಡೆ ಕರಗುವುದು, ಪರಿಸರ ಮಾಲಿನ್ಯವಾಗುವುದು ಶುರುವಾಯಿತು.ಸೈನಿಕರ ಅನುಕೂಲಕ್ಕಾಗಿ ಹಿಮಗಡ್ಡೆಯನ್ನು ರಾಸಾಯನಿಕ ಸ್ಪೋಟಕಗಳ ಮೂಲಕ ಒಡೆಯಲಾಯಿತು,ಇದರಿಂದ ಹಿಮಗಡ್ಡೆಯು ವೇಗವಾಗಿ ಕರಗುತ್ತಿದೆ.ಇನ್ನು ಜೈವಿಕವಾಗಿ ವಿಘಟನೆ ಹೊಂದದ ಕಸವನ್ನು ಸುರಿದಿರುವ ಕಾರಣ ಹಾಗು ಮದ್ದು-ಗುಂಡುಗಳ ಕಾರಣ ಅಲ್ಲಿನ ಪರಿಸರದ ಮೇಲೆ ಸಾಕಷ್ಟು ಪರಿಣಾಮ ಬೀರಿದೆ.

ನೀರ್ಗಲ್ಲು ಸವೆತ.(Glacial retreat)

[ಬದಲಾಯಿಸಿ]

೨೦೦೭ರಲ್ಲಿ ಪಾಕಿಸ್ತಾನದ ಹವಾಮಾನ ಇಲಾಖೆ ನಡೆಸಿದ ಸಮೀಕ್ಷೆ ಪ್ರಕಾರ,ಸಿಯಾಚಿನ್ ನೀರ್ಗಲ್ಲು ಕಳೆದ ಮೂವತ್ತು ವರ್ಷದಿಂದ ಅಘಾತಕರಿ ಪ್ರಾಮಾಣದಲ್ಲಿ ಕರಗುತ್ತಿದೆ ಎಂದು ತಿಳಿಸಿದೆ.ಉಪಗ್ರಹ ಚಿತ್ರಗಳನ್ನು ನೋಡಿದಾಗ,ಪ್ರತಿ ವರ್ಷ ಸುಮಾರು ೧೧೦ ಮೀಟರಿನಷ್ಟು ಹಿಮಗಲ್ಲು ಕರಗುತ್ತಿದೆ ಹಾಗು ಈಗಾಗಲೆ ಶೇಕಡ ೩೫ ರಷ್ಟು ಕರಗಿ ಹೋಗಿದೆ ಎಂದು ಹೇಳಲಾಗುತ್ತಿದೆ.ಸಿಯಾಚಿನ್ ನ ಹಿಮಗಲ್ಲುಗಳು ೨೦೩೫ ರ ಹೊತ್ತಿಗೆ, ೨೦೧೧ ರಲ್ಲಿದ್ದರ ಒಂದನೆ ಐದರ ಪ್ರಮಾಣಕ್ಕೆ ಕುಸಿಯಲಿದೆ ಎಂದು ಊಹಿಸಲಾಗಿದೆ.೧೯೨೯-೧೯೫೮ ರ ಕಾಲಾವಧಿಯಲ್ಲಿ ಅಂದರೆ ಸೇನೆ ಬರುವ ಬಹಳ ಮೊದಲೇ ನೀರ್ಗಲ್ಲು ಸುಮಾರು ೯೧೦ ಮೀಟರಿನಷ್ಟು ಕರಗಿತ್ತು ಎಂದು ದಾಖಲಾಗಿದೆ.ನೀರ್ಗಲ್ಲು ಸವೆಯಲು ಸೇನೆಯವರು ತಮ್ಮ ಡೇರೆ, ಪೋಸ್ಟ್ ಗಳನ್ನು ಹಾಕಲು ನಡೆಸುವ ರಾಸಾಯನಿಕ ಸ್ಪೋಟವೇ ಮುಖ್ಯ ಕಾರಣ ಎಂದು ಹೇಳಲಾಗಿದೆ. ಭಾರತ ಸೇನೆಯು ೨೦೦೧ ರಲ್ಲಿ ತನ್ನ ಸೇನಾ ಓಟ್ ಪೋಸ್ಟ್ ಹಾಗು ಬೇಸ್ ಕ್ಯಾಂಪ್ ಗಳಿಗೆ ಇಂಧನ ಪೂರೈಸಲು ಕೊಳವೆ ಕೂಡ ಹಾಕಿದೆ.೨೦೦೭ ರಂತೆ ಸಿಯಾಚಿನ್ ಪ್ರದೇಶದಲ್ಲಿ ಪ್ರತಿ ವರ್ಷ ಸುಮಾರು ೦.೨ ಡಿಗ್ರಿ ಸೆಲ್ಶಿಯಸ್ ನಷ್ಟು ಏರಿಕೆಯಾಗುತ್ತಿದೆ,ಇದರಿಂದ ನೀರ್ಗಲ್ಲು ಸವೆತ,ಹಿಮಪಾತ,ಕೊರಕಲುಗಳು ಉಂಟಾಗುತ್ತಿದೆ.

ಕಸ ಸುರಿಯುವಿಕೆ.(Waste dumping)

[ಬದಲಾಯಿಸಿ]

ಅಲ್ಲಿ ಜಮಾವಣೆಗೊಂಡಿರುವ ಸೇನೆಯಿಂದ ಉತ್ಪತ್ತಿಯಾಗುವ ಕಸವನ್ನು ನೀರ್ಗಲ್ಲಿನ ಕೊರಕಲುಗಳಲ್ಲಿ ಸುರಿಯಲಾಗುತ್ತಿದೆ.ಅಲ್ಲಿಗೆ ಭೇಟಿಕೊಟ್ಟ ಚಾರಣಿಗರು ಸಿಯಾಚಿನ್ ನಲ್ಲಿ ದೊಡ್ಡ ಪ್ರಮಾಣದ ಕಸವನ್ನು ಅಲ್ಲಲ್ಲೆ ಸುರಿದಿರುವುದು ನೋಡಿರುವುದಾಗಿ ಹೇಳಿದ್ದಾರೆ.ಈ ಕಸದಲ್ಲಿ ಪ್ಯಾರಾಚೂಟ್ ಗಳು,ಖಾಲಿ ಮದ್ದು ಗುಂಡಿನ ಶೆಲ್ ಗಳು ಮುಂತಾದವು ಮಣ್ಣಾಗುವುದಿಲ್ಲ.ಇವುಗಳನ್ನು ಅಲ್ಲಿನ ವಾತಾವರಣದ ಕಾರಣ ಸುಡಲೂ ಆಗುವುದಿಲ್ಲ.

ಪ್ರತಿದಿನ ಸುಮಾರು ೧೦೦೦ ಕಿಲೋಗ್ರಾಂ ನಷ್ಟು ಕಸ ಉತ್ಪತ್ತಿಯಾಗುತ್ತಿದೆ.ಭಾರತೀಯ ಸೇನೆ "ಗ್ರೀನ್ ಸಿಯಾಚಿನ್ ಕ್ಲೀನ್ ಸಿಯಾಚಿನ್ " ಎಂಬ ಯೋಜನೆಯಡಿ ಅಲ್ಲಿರುವ ಕಸವನ್ನು ಹೊರತರಲು ಯೋಚಿಸಿದೆ.ಹಾಗೆ ಅಂತಹ ಚಳಿ ಪ್ರದೇಶದಲ್ಲಿ ,ಆಮ್ಲಜನಕ ಇಲ್ಲದೆಯೂ ಕೆಲಸಮಾಡುವ ಜೈವಿಕ ವಿಘಟಕವನ್ನು(bio digestor) ಅಳವಡಿಸಲು ಯೋಚಿಸಲಾಗಿದೆ.ಸಿಯಾಚಿನ್ ನಲ್ಲಿಯ ಸುಮಾರು ೪೦% ರಷ್ಟು ಕಸ ಪ್ಲಾಸ್ಟಿಕ್ ಮತ್ತು ಲೋಹದಿಂದ ಕೂಡಿದೆ.ಇದರಲ್ಲಿ ಕ್ಯಾಡಮಿಯಂ,ಕೊಬಾಲ್ಟ್ ಮತ್ತು ಕ್ರೋಮಿಯಂ ನಂತಹ ವಿಷಕಾರಿ ಲೋಹಗಳು ಸೇರಿದೆ.ಇದು ಮುಂದೆ ಶ್ಯೋಕ್ (ಇದು ಮುಂದೆ ಸಿಂಧು ನದಿಯನ್ನು ಸೇರುತ್ತದೆ )ನದಿಯನ್ನು ಸೇರುತ್ತಾದರಿಂದ,ಆ ನದಿಯ ನೀರಿನ.ಮೇಲು ಪರಿಣಾಮ ಬೀರುತ್ತದೆ. ಸಿಂಧು ನದಿ ನೀರನ್ನು ನೀರಾವರಿಗೆ, ಕುಡಿಯುವುದಕ್ಕೆ ಕೂಡ ಬಳಸಲಾಗುತ್ತದೆ.ಸಿಯಾಚಿನ್ ನಲ್ಲಿನ ಕಸವನ್ನು ವೈಜ್ಞಾನಿಕ ರೀತಿಯಲ್ಲಿ ಸಂಸ್ಕರಿಸುವ ಕುರಿತಾಗಿ 'ದಿ ಎನರ್ಜಿ ಎಂಡ್ ರಿಸರ್ಚ್ ಇನ್ಸ್ಟಿಟ್ಯೂಟ್ 'ನಲ್ಲಿ ಸಂಶೋಧನೆ ನಡೆಯುತ್ತಿದೆ.ಅಂಟಾರ್ಕ್ಟಿಕಕ್ಕೆ ಭೇಟಿ ನೀಡಿದ ಕೆಲವು ಡಿ.ಆರ್.ಡಿ.ಒ ವಿನ ವಿಜ್ಞಾನಿಗಳು ಕೂಡ ಚಳಿ ಪ್ರದೇಶಗಳಲ್ಲಿ ಬದುಕಬಲ್ಲ ಬ್ಯಾಕ್ಟೀರಿಯಾವನ್ನು ತಯಾರಿಸುವ ಕುರಿತು ಸಂಶೋಧನೆ ನಡೆಸುತ್ತಿದ್ದಾರೆ, ಇದರಿಂದ ನೈಸರ್ಗಿಕವಾಗಿ ಕಸವನ್ನು ಸಂಸ್ಕರಿಸಬಹುದಾಗಿದೆ.

ಸಸ್ಯ ಮತ್ತು ಪ್ರಾಣಿ

[ಬದಲಾಯಿಸಿ]

ಈ ಪ್ರದೇಶವು ಹಿಮಚಿರತೆ,ಕರಡಿ ಹಾಗು ಐಬೆಕ್ಸ್ ಮುಂತಾದ ಜೀವಿಗಳ ವಾಸಸ್ಥಾನವಾಗಿದೆ.ಹೆಚ್ಚಿನ ಸೇನೆ ಜಮಾವಣೆಯಿಂದ ಇವುಗಳಿಗೆ ಹಾನಿಯಾಗುತ್ತಿದೆ.

ಗಡಿ ವಿವಾದ

[ಬದಲಾಯಿಸಿ]
ಭಾರತದ ಪ್ರಧಾನಿ ಸಿಯಾಚಿನಿನಲ್ಲಿ ಭಾರತೀಯ ಸೈನ್ಯದ ಅಧಿಕಾರಿಗಲು ಮತ್ತು ಸೈನಿಕರ ಜೊತೆಗೆ ವಾರ್ತಾಲಾಪ ಮಾಡಿದರು

ಸಿಯಾಚಿನ್ 'ಜಗತ್ತಿನ ಎತ್ತರದ ಯುದ್ಧ ಭೂಮಿ ' ಎಂಬ ಹೆಗ್ಗಳಿಕೆ ಪಡೆದಿದೆ.೧೯೮೪ ರ ನಂತರ ಭಾರತ ಹಾಗು ಪಾಕಿಸ್ತಾನ, ಎರಡೂ ದೇಶಗಳು ಸೇನೆಯನ್ನು ಈ ಪ್ರದೇಶದಲ್ಲಿ ಉಳಿಸಿಕೊಂಡಿವೆ.

ಸಂಭಾಳಿಸಲು ಕಷ್ಟವಿರುವ ಕೆಲವು ಪೋಸ್ಟ್ ಗಳಿಂದ ಸೇನೆಯನ್ನು ಹಿಂಪಡೆಯಲು ಭಾರತ ಈ ಹಿಂದೆ ಯೋಚಿಸಿತ್ತು. ಆದರೆ ಕಾರ್ಗಿಲ್ ಯುದ್ಧದ ನಂತರ ಈ ಯೋಚನೆಯನ್ನು ಭಾರತ ಕೈಬಿಟ್ಟಿದೆ. ಭಾರತ ಸಧ್ಯದ ಗಡಿ ರೇಖೆಯನ್ನು ಪಾಕಿಸ್ತಾನ ಒಪ್ಪಿಕೊಳ್ಳುವ ವರೆಗು ತಾನು ಸಿಯಾಚಿನ್‍ನಿಂದ ಸೇನೆಯನ್ನು ಹಿಂಪಡೆಯಲಾಗದು ಎಂದು ಸ್ಪಷ್ಟವಾಗಿ ತಿಳಿಸಿದೆ. ಸೇನೆಯನ್ನು ಹಿಂದಕ್ಕೆ ಪಡೆದರೆ ಪಾಕಿಸ್ತಾನ ಆಕ್ರಮಿಸುವ ಸಾಧ್ಯತೆ ಇರುವುದರಿಂದ ಭಾರತ ಈ ನಿರ್ಧಾರ ಕೈಗೊಂಡಿದೆ.

ಈ ಹಿಂದೆ ಭಾರತದ ಪ್ರಧಾನಿ ಮನಮೋಹನ ಸಿಂಗ್ ರವರು ಸಿಯಾಚಿನ್ ಗೆ ಭೇಟಿ ನೀಡಿದ್ದರು. ಸಿಯಾಚಿನ್‍ಗೆ ಭೇಟಿ ನೀಡಿದ ಭಾರತದ ಮೊದಲ ಪ್ರಧಾನಿಯಾಗಿದ್ದರು. ಈಗಿನ ಪ್ರಧಾನಿ ನರೇಂದ್ರ ಮೋದಿ ಕೂಡ ೨೦೧೪ರಲ್ಲಿ ಪ್ರಧಾನಿಯಾಗಿ ತಮ್ಮ ಮೊದಲ ದೀಪಾವಳಿಯನ್ನು ಸಿಯಾಚಿನ್‍ಗೆ ಭೇಟಿ ಸೈನಿಕರೊಂದಿಗೆ ಕಳೆದರು[೫].

೨೦೧೨ ರಲ್ಲಿ ಪಾಕಿಸ್ತಾನದ ಅಧ್ಯಕ್ಷ ಆಸಿಫ್ ಅಲಿ ಜರ್ಧಾರಿ ಹಾಗು ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಶ್ಫಾಖ್ ಪರ್ವೇಜ಼್ ಖಯಾನಿ ಇಬ್ಬರೂ ಭೇಟಿ ನೀಡಿದ್ದರು[೬].ಈ ಹಿಂದೆ ಸಿಯಾಚಿನ್ ಗೆ ಭೇಟಿ ನೀಡಿದ್ದ ಅಬ್ದುಲ್ ಕಲಾಂ ರವರು ಸಿಯಾಚಿನ್ ಗೆ ಭೇಟಿಯಿತ್ತ ಮೊದಲ ರಾಷ್ಟ್ರಪತಿಯಾಗಿದ್ದರು.

೨೦೦೭ ರಿಂದ ಭಾರತವು ಸಣ್ಣ ಸಂಖ್ಯೆಯಲ್ಲಿ ಸಿಯಾಚಿನ್‍ಗೆ ಚಾರಣ ಕಳುಹಿಸಿಕೊಡುತ್ತಿದೆ. ಭಾರತೀಯ ಸೇನೆಯು ಸಿಯಾಚಿನ್‍ನಂತಹ ದುರ್ಗಮ ಪ್ರದೇಶದಲ್ಲಿಯೂ ಸಹ ಕಾರ್ಯ ನಿರ್ವಹಿಸುತ್ತಿದೆ ಹಾಗು ಪಾಕಿಸ್ತಾನವು ಸಿಯಾಚಿನ್ ನೀರ್ಗಲ್ಲಿನ ೧೫ ಕಿಲೋಮೀಟರ್ ಆಸುಪಾಸಿನಲ್ಲೆಲ್ಲೂ ಇಲ್ಲ ಎಂಬುದನ್ನು ಜಗತ್ತಿಗೆ ತೊರಿಸಲು ಈ ರೀತಿಯ ಚಾರಣಕ್ಕೆ ಅವಕಾಶ ಮಾಡಿಕೊಟ್ಟಿದೆ ಎಂದು ಹೇಳಲಾಗುತ್ತಿದೆ. ಸಿಯಾಚಿನ್‍ನ ಚಾರಣಕ್ಕೆ ಪಾಕಿಸ್ತಾನ ಪ್ರಬಲವಾಗಿ ವಿರೋಧಿಸುತ್ತಿದೆ. ಭಾರತವು ತನಗೆ ಸೇರಿದ ಪ್ರದೇಶದಲ್ಲಿ ಚಾರಣಕ್ಕೆ ಅವಕಾಶ ಕಲ್ಪಿಸಲು ಬೇರೆಯವರ ಅನುಮತಿ ಪಡೆಯುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ. ೨೦೧೯ರಲ್ಲಿ ಭಾರತದ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇದನ್ನು ಪ್ರವಾಸಿಗರಿಗೆ ಮುಕ್ತಗೊಳಿಸಿದರು[೧].

ಸಾವು ನೋವು

[ಬದಲಾಯಿಸಿ]

ಏಪ್ರಿಲ್ ೭, ೨೦೧೨ ರಲ್ಲಿ ಸಿಯಾಚಿನ್‍ನ ಕೆಳತುದಿಯಿಂದ ಸುಮಾರು ೩೦ ಕಿಲೋಮೀಟರ್ ದೂರದಲ್ಲಿರುವ ಗಯಾರಿ ಸೆಕ್ಟರ್ ನಲ್ಲಿರುವ ಮಿಲಿಟರಿ ಪೋಸ್ಟಿನಲ್ಲಿ ಸಂಭವಿಸಿದ ಹಿಮಪಾತದಲ್ಲಿ ಪಾಕಿಸ್ತಾನದ ೧೨೯ ಯೋಧರು ಹಾಗು ೧೧ ನಾಗರಿಕರು ಸಾವನಪ್ಪಿದರು.

ಫೆಬ್ರವರಿ 03, ೨೦೧೬, ಸಿಯಾಚಿನ್‍ನಲ್ಲಿ ಹಿಮಪಾತದಲ್ಲಿ ಭಾರತೀಯ ಸೈನ್ಯದ ೧೦ ಯೋಧರು ಮರಣ ಹೊಂದಿದರು. ಆದರೆ ಅವರಲ್ಲಿ ಕರ್ನಾಟಕದ ಧಾರವಾಡ ಜಿಲ್ಲೆಯ, ಕುಂದಗೋಳ ತಾಲೂಕಿನ, ಬೆಟದೂರು ಗ್ರಾಮದ ಲ್ಯಾನ್ಸ ನಾಯ್ಕ ಹನುಮಂತಪ್ಪ ಕೊಪ್ಪದ ೬ ದಿನ ಸಿಯಾಚಿನ್‍ನ ಹಿಮದಲ್ಲಿ ಸಿಲುಕಿ ಬದುಕಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ದೆಹಲಿಯಲ್ಲಿ ಅವರನ್ನು ಸೇರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಫೆಬ್ರವರಿ ೧೨, ೨೦೧೬ ರಂದು ಕೊನೆಯುಸಿರೆಳೆದರು. ಇದು ಇಡೀ ದೇಶದಲ್ಲಿ ಮತ್ತು ವಿಶೇಷವಾಗಿ ಕರ್ನಾಟಕದಲ್ಲಿ ಸಂಚಲನ ಮೂಡಿಸಿತ್ತು[೭].

ಸಿಯಾಚಿನ್‍ನ ಸೈನಿಕರಿಗಾಗಿ ಇಸ್ರೋ ನೆರವು

[ಬದಲಾಯಿಸಿ]

ಇಸ್ರೋ ಸಿಯಾಚಿನ್‍ನ ಸೈನಿಕರಿಗಾಗಿ ಹಲವು ಅವಿಷ್ಕಾರ ಮಾಡಲಿದೆ. ಸೈನಿಕರು ಧರಿಸುವ ಸಮವಸ್ತ್ರಗಳು ವಿಶಿಷ್ಠ ರೀತಿಯಲ್ಲಿ ತಯ್ಯಾರಿಸುತ್ತಾರೆ. ಇಸ್ರೋ, ಈ ಸಮವಸ್ತ್ರದ ಪದರಗಳ ನಡುವೆ ಬಿಸಿಯನ್ನು ಹಿಡಿದಿಡುವ ವಿಶಿಷ್ಠ ಜೆಲ್ ಉಪಯೋಗಿಸುವ ಬಗ್ಗೆ ಸಂಶೋಧನೆ ನಡೆಸುತ್ತಿದೆ. ಸೈನಿಕರ ಸ್ಥಾನವನ್ನು ಸೂಚಿಸುವ ಕೆಲವು ಉಪಕರಣಗಳ ಸಂಶೋಧನೆ ನಡೆಯುತ್ತಿದೆ [೮] [೯]. ಟೆಲಿ ಮೆಡಿಸಿನ್ ಉಪಯೋಗಿಸಿ ಸಿಯಾಚಿನ್‍ನಲ್ಲಿರುವ ಸೈನಿಕರ ನೆರವಿಗೆ ಇಸ್ರೋ ಧಾವಿಸಿದೆ. ಮಹಾನಗರಗಳ ಪ್ರಖ್ಯಾತ ಆಸ್ಪತ್ರೆಗಳ ನುರಿತ ವ್ಯದ್ಯರ ಮೂಲಕ ಖಾಯಿಲೆಗಳ ಶೂಶ್ರೂಷೆಗೆ ವ್ಯವಸ್ಥೆ ಮಾಡಿದೆ. ಇದಕ್ಕೆ ವಿ-ಸಾಟ್‍ಗಳ ಮೂಲಕ ಈ ಸೇವೆ ಒದುಗಲಿದೆ [೧೦].

ಪೀಸ್ ಪಾರ್ಕ್ ಸ್ಥಾಪಿಸುವ ಯೋಚನೆ

[ಬದಲಾಯಿಸಿ]

ಸಿಯಾಚಿನ್ ಪ್ರದೇಶದಲ್ಲಿ ಸೇನೆಯ ಜಮಾವಣೆಯಿಂದಾಗಿ ಅಲ್ಲಿನ ಪರಿಸರದ ಮೇಲಾಗುತ್ತಿರುವ ಹಾನಿಯನ್ನು ಗಮನವಿಟ್ಟುಕೊಂಡು ಈ ಪ್ರದೇಶವನ್ನು 'ಪೀಸ್ ಪಾರ್ಕ್'(ಶಾಂತ ಪ್ರದೇಶ) ಮಾಡುವ ಯೋಚನೆಯನ್ನು ಪರಿಸರವಾದಿಗಳು ಮುಂದಿಟ್ಟಿದ್ದಾರೆ.೨೦೦೫ ರಲ್ಲಿ ನಡೆದ ೫ ನೇ 'ವರ್ಲ್ಡ್ ಪಾರ್ಕ್ ಕಾಂಗ್ರೆಸ್' ನಲ್ಲಿ ಸಿಯಾಚಿನ್ ಪ್ರದೇಶವನ್ನು ಶಾಂತವಾಗಿರಿಸಿ,ಅಲ್ಲಿನ ಪರಿಸರವನ್ನು ಪುನಃ ಸುಸ್ಥಿತಿಗೆ ತರುವಂತೆ ಭಾರತ ಮತ್ತು ಪಾಕಿಸ್ತಾನಕ್ಕೆ ತಾಕೀತು ಮಾಡಲಾಯಿತು.ಇಟಲಿಯ ಪರಿಸರ ತಜ್ಞ ಗ್ಯುಲಿಯಾನೋ ಟಲೋನೆ (Giuliano Tallone )ಅವರು ಅಂದು 'ಸಿಯಾಚಿನ್ ಪೀಸ್ ಪಾರ್ಕ್' ಸ್ಥಾಪನೆ ಕುರಿತು ಪ್ರಸ್ತಾಪಿಸಿದರು.ಈ ಪ್ರಸ್ತಾಪದ ನಂತರ transboundary Peace Park ಸ್ಥಾಪಿಸುವ ಪ್ರಸ್ತಾವನೆಯನ್ನು ಮುಂದಿಡಲಾಯಿತು.International Mountaineering and Climbing Federation ಹಾಗು International Union for Conservation of Nature ಸಂಸ್ಥೆಗಳು ಜಿನೆವಾದಲ್ಲಿ ಒಂದು ಸಭೆ ಆಯೋಜಿಸಿ ಅದಕ್ಕೆ ಭಾರತ ಹಾಗು ಪಾಕಿಸ್ತಾನದ ಚಾರಣಿಗರನ್ನು ಆಹ್ವಾನಿಸಿತು.ಈ ಜಾಗವನ್ನು ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ(United Nations' World Heritage List) ಸೇರಿಸಲು ಆಯ್ಕೆ ಮಾಡಲಾಗಿತ್ತು,ಆದರೆ ಇದನ್ನುWorld Heritage Committee ತಿರಸ್ಕರಿಸಿತು.ಸಿಯಾಚಿನ್ ನ ಪೂರ್ವ ಹಾಗು ಪಶ್ಚಿಮ ಪ್ರದೇಶವನ್ನು ಈಗಾಗಲೇ ವಿಶ್ವ ಪಾರಂಪರಿಕ ತಾಣ ಎಂದು ಘೋಶಿಸಲಾಗಿದೆ.

Sandia National Laboratories ಸಂಸ್ಥೆ ಒಂದು ಸಭೆ ಆಯೋಜಿಸಿ ಅದರಲ್ಲಿ ಭಾರತ, ಪಾಕಿಸ್ತಾನ ಹಾಗು ಇತರೆ ದೇಶಗಳ ಮಿಲಿಟರಿ ತಜ್ಞರು, ಪರಿಸರ ತಜ್ಞರನ್ನು ತಮ್ಮ ಕಾಗದವನ್ನು ಪ್ರಸ್ತುತಗೊಳಿಸಲು ಆಹ್ವಾನಿಸಲಾಗಿತ್ತು.ಕೆಂಟ್ ಎಲ್ ಬಿರಿಗ್ನರ್ (Kent L. Biringer) ಎಂಬುವವರು ಸಿಯಾಚಿನ್ ಪ್ರದೇಶದಲ್ಲಿ ಭಾರತ ,ಪಾಕಿಸ್ತಾನ ಎರಡೂ ದೇಶಗಳು ಸೇರಿ "ಸಿಯಾಚಿನ್ ವಿಜ್ಞಾನ ಕೇಂದ್ರ" ಸ್ತಾಪಿಸುವ ಪ್ರಸ್ತಾವನೆಯನ್ನು ಇಟ್ಟರು.ಅದರಲ್ಲಿ ಎರಡೂ ದೇಶಗಳು ಜಂಟಿಯಾಗಿ ಎತ್ತರ ಪ್ರದೇಶಗಳ ಕುರಿತಾದ ನೀರ್ಗಲ್ಲರಿಕೆ(glaciology),ಭೂಮಿಯರಿಕೆ(Geology) ಹಾಗು ವಾತಾವರಣ ವಿಷಯಗಳ ಬಗ್ಗೆ ಸಂಶೋಧನೆ ನಡೆಸಬಹುದು ಎಂದು ಪ್ರಸ್ತಾಪಿಸಿದರು.

  1. ೧.೦ ೧.೧ ಕನ್ನಟಪ್ರಭ, ಸುದ್ದಿಮನೆ. "ಪ್ರವಾಸಿಗರಿಗೆ ಸಿಯಾಚಿನ್‌ ಮುಕ್ತ; ಈಗಲೇ ಪ್ರವಾಸ ಹೋಗಬಹುದೆ?". ಕನ್ನಡಪ್ರಭ. Archived from the original on 27 Oct 2019. Retrieved 17 May 2020.
  2. "ಆರ್ಕೈವ್ ನಕಲು". Archived from the original on 2016-02-15. Retrieved 2016-11-01.
  3. http://vijaykarnataka.indiatimes.com/news/india/siachen-glacier/articleshow/50985511.cms
  4. http://vijaykarnataka.indiatimes.com/news/world/-130-/articleshow/12570658.cms
  5. ಹೆಗಡೆ, ಮಧುಸೂಧನ. "ಯೋಧರೊಂದಿಗೆ ಸಿಯಾಚಿನ್ ನಲ್ಲಿ ಮೋದಿ ದೀಪಾವಳಿ". ಒನ್ ಇಂಡಿಯಾ. Archived from the original on 17 May 2020. Retrieved 17 May 2020.
  6. http://vijaykarnataka.indiatimes.com/news/world/-/articleshow/12997835.cms
  7. ಎ, ಸಾವಿತ್ರಿ. "ಸಿಯಾಚಿನ್ ವೀರ ಅಮರ: ಕಂಬನಿಯ ಕುಯಿಲು". ವಿಜಯ ಕರ್ನಾಟಕ. Archived from the original on 17 May 2020. Retrieved 17 May 2020.
  8. "ಹಗುರ 'ಸ್ಪೇಸ್‌ ಸೂಟ್', ರೇಡಿಯೊ ಸಂಕೇತ ಉಪಕರಣ ಸಿಯಾಚಿನ್‌ ಸೈನಿಕರ ನೆರವಿಗೆ ಇಸ್ರೊ ತಾಂತ್ರಿಕತೆ". ಪ್ರಜಾವಾಣಿ. Archived from the original on 7 Apr 2016. Retrieved 17 May 2020.
  9. "ಇಸ್ರೋದ ತಾಂತ್ರಿಕತೆಯಿಂದ ಸಿಯಾಚಿನ್‍ನಲ್ಲಿರುವ ಸೈನಿಕರ ಜೀವದ ರಕ್ಷಣೆ - (Here's how ISRO's space technology can save lives of soldiers at Siachen)" (in English). businessinsider. Archived from the original on 12 Jul 2016. Retrieved 17 May 2019.{{cite news}}: CS1 maint: unrecognized language (link)
  10. "ಇಸ್ರೋದಿಂದ ಸಿಯಾಚಿನ್‍ನಲ್ಲಿರುವ ಸೈನಿಕರಿಗೆ ಸಹಾಯ(Isro to provide healing touch to Siachen soldiers)" (in English). timesofindia. Archived from the original on 31 May 2016. Retrieved 17 May 2020. {{cite news}}: |archive-date= / |archive-url= timestamp mismatch; 31 ಮೇ 2019 suggested (help)CS1 maint: unrecognized language (link)