ವಿಷಯಕ್ಕೆ ಹೋಗು

ಸರ್ಪಗಂಧ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸರ್ಪಗಂಧ
Scientific classification
ಸಾಮ್ರಾಜ್ಯ:
plantae
Division:
ವರ್ಗ:
ಗಣ:
ಕುಟುಂಬ:
ಕುಲ:
ಪ್ರಜಾತಿ:
R. serpentina
Binomial name
ರೌವೋಲ್ಫಿಯ ಸರ್ ಪೆಂಟಿನ
ಸರ್ಪಗಂಧ

ಸರ್ಪಗಂಧ (Serpent wood) ಒಂದು ಔಷಧೀಯ ಸಸ್ಯ, ಬಹುವಾರ್ಷಿಕ ಸಸ್ಯ. ಇದು ಚೀನಾ ದೇಶದಲ್ಲಿ ಕೂಡಾ ಔಷದೀಯ ಸಸ್ಯವಾಗಿ ಬಳಕೆಯಲ್ಲಿದೆ. ಸರ್ಪಬೇರು ಪರ್ಯಾಯನಾಮ.

ಕರ್ನಾಟಕದಲ್ಲಿ ತೇವ ಪರ್ಣಪಾತಿ ಹಾಗೂ ಮಿಶ್ರಪರ್ಣಪಾತಿ ಅರಣ್ಯ ಭಾಗದಲ್ಲಿ ಕೆಳಭಾಗದಲ್ಲಿ ಬೆಳೆಯುವುದು. ಹಿಮಾಲಯ ಶ್ರೇಣಿ, ನೇಪಾಳ, ಶ್ರೀಲಂಕಾ, ಮ್ಯಾನ್ಮಾರ್, ಸಿಕ್ಕಿಮ್, ಬಿಹಾರ, ಅಸ್ಸಾಮ್, ಪಶ್ಚಿಮ ಘಟ್ಟದ ವಿವಿಧ ಭಾಗಗಳಲ್ಲಿ, ಆಗ್ನೇಯ ಏಷ್ಯದ ಕೆಲವು ಭಾಗಗಳಲ್ಲಿ, ಆಫ್ರಿಕ ಹಾಗೂ ದಕ್ಷಿಣ ಅಮೆರಿಕಗಳಲ್ಲಿ ಕಂಡುಬರುತ್ತದೆ.[][] ಉಷ್ಣಹವೆ ಇದರ ಬೆಳೆವಣಿಗೆಗೆ ಹೆಚ್ಚು ಪ್ರಶಸ್ತ.

ಸಸ್ಯಶಾಸ್ತ್ರೀಯ ವರ್ಗೀಕರಣ

[ಬದಲಾಯಿಸಿ]

ಇದು ಅಪೊಸಿನಾಸಿಯೆ (Apocynaceae) ಕುಟುಂಬದಲ್ಲಿದೆ.[]

ಸಸ್ಯಶಾಸ್ತ್ರೀಯ ಹೆಸರು ರೌವೋಲ್ಫಿಯ ಸರ್ಪೆಂಟಿನ (Rauwolfia Serpentina).

ತುಳು ಭಾಷೆಯಲ್ಲಿ ಗರುಡಪಾತಾಳ, ಕನ್ನಡದಲ್ಲಿ ಪಾತಾಳಗಂಧಿ, ಹಡಕಿ, ಸರ್ಪಾಕ್ಷಿ ಮುಂತಾದ ಹೆಸರೂ ಇದೆ.

ಸಸ್ಯದ ಗುಣಲಕ್ಷಣಗಳು

[ಬದಲಾಯಿಸಿ]
ಸರ್ಪಗಂಧ

ಇದು ಒಂದು ಸಣ್ಣ ಸಸ್ಯ. ಉಜ್ವಲ ಹಸಿರಿನ ಹೊಳಪಿನ ಎಲೆಗಳು. ಕೆಂಪು ಪುಷ್ಪ ಪತ್ರದ ಬಿಳಿಛಾಯೆಯ ಹೂಗಳು. ಇದರ ಬೇರು ಔಷಧೀಯ ಗುಣಗಳನ್ನು ಹೊಂದಿದೆ.

ಇದು 150-180 ಸೆ.ಮೀ. ಎತ್ತರಕ್ಕೆ ನೆರವಾಗಿ ಬೆಳೆಯುವ ಮೃದು ತೊಗಟೆಯ ಗಿಡ. ಪೊದರು ಸಸ್ಯ. ೮ ರಿಂದ ೨೦ ಸೆ.ಮೀ. ಉದ್ದವಿರುವ ಎಲೆ ಸುರುಳಿ ಸುತ್ತಿಕೊಂಡಿರುವಂತೆ ಇದ್ದು ತುದಿ ನೀಳವಾಗಿರುತ್ತದೆ.

ಇದರ ಕಾಂಡ ಬಿರುಸಾಗಿರುತ್ತದೆ. ತಾಯಿಬೇರಿನಿಂದ ಹಲವು ಉಪಬೇರುಗಳು ಹೊರಡುತ್ತವೆ. ಟೊಂಗೆಯ ಸುತ್ತ ಮೂರು ಅಥವಾ ನಾಲ್ಕು ಅಗಲ ಎಲೆಗಳು ಚಕ್ರಾಕಾರವಾಗಿ ಜೋಡಿಸಿಕೊಂಡಿರುತ್ತವೆ. ಕೆಲವು ವಿಧಗಳಲ್ಲಿ ಎಲೆಗಳು ಎದುರುಬದಿರಾಗಿರುವುವು. ನೀಲಿ, ತಿಳಿಗೆಂಪು ಅಥವಾ ಬಿಳಿಯ ಬಣ್ಣದ ಹೂಗಳು ಗೊಂಚಲಾಗಿ ಬೆಳೆಯುತ್ತವೆ. ಫಾಲಿಕಲ್ ಬಗೆಯ ಕಾಯಿಗಳು.

ಉಪಯೋಗಗಳು

[ಬದಲಾಯಿಸಿ]

ಈ ಸಸ್ಯದ ಬೇರಿನಲ್ಲಿ ಓಫ್ಲೊಕ್ಸೈಲಿನ್ ಎಂಬ ಹರಳಿನಂಥ ವಸ್ತು, ರೆಸಿನ್, ಪಿಷ್ಟ, ಪೊಟ್ಯಾಶಿಯಮ್, ಫಾಸ್ಫೇಟ್, ಮ್ಯಾಂಗನೀಸ್ ಮುಂತಾದ ರಾಸಾಯನಿಕಗಳು, ಹಾಗೂ ಅಜ್ಮಲೀನ್, ಅಜ್ಮಲಿನಿನ್, ಅಜ್ಮಲಿಸಿನ್, ಸರ್ಪೆಂಟಿನ್, ಸರ್ಪೆಂಟಿನೀನ್ ಎಂಬ ಐದು ಸಸ್ಯಕ್ಷಾರಗಳೂ ಇವೆ.[] ಇವುಗಳಿಂದಾಗಿ ಸರ್ಪಗಂಧಕ್ಕೆ ಔಷಧೀಯ ಮಹತ್ತ್ವವಿದೆ. ಇದರ ಬೇರಿನಲ್ಲಿ ರಿಸರ್ಪಿನ್ (reserpine) ಎಂಬ ಸಸ್ಯಕ್ಷಾರವಿದ್ದು, ಆಯುರ್ವೇದ ಪದ್ಧತಿಯಲ್ಲಿ ವ್ಯಾಪಕವಾಗಿ ಬಳಕೆಯಲ್ಲಿದೆ. ಹಾವಿನ ಕಡಿತಕ್ಕೆ ಔಷಧವಾಗಿ ಬಳಕೆಯಾಗುತ್ತದೆ. ಮನೋರೋಗ, ಉನ್ಮಾದ ಮುಂತಾದವುಗಳಿಗೆ ಇದು ಉತ್ತಮ ಔಷಧ. ರಕ್ತದೊತ್ತಡ,[] ರೋಗ ಭ್ರಾಂತಿ (Hypochondria) ಇವುಗಳ ಉಪಶಮನಕ್ಕೆ ಉತ್ತಮ ಔಷಧ. ಕೇಂದ್ರ ಹಾಗೂ ಅನುವೇದನಾ ನರಮಂಡಲಗಳ ಮೇಲೆ ಪರಿಣಾಮ ಬೀರುತ್ತದೆ. ಶಾಮಕ (Sedetive) ವಾಗಿ ಕೂಡಾ ಬಳಕೆಯಲ್ಲಿದೆ. ಇದು ಹೆಚ್ಚಿನ ಎಲ್ಲಾ ವೈದ್ಯ ಪದ್ಧತಿಗಳಲ್ಲಿ ಬಳಕೆಯಲ್ಲಿರುವ ಸಸ್ಯವಾಗಿದೆ.

ಇದರೊಂದಿಗೆ ಮಲಬದ್ಧತೆ, ಯಕೃತ್ತಿಗೆ ಸಂಬಂಧಿಸಿದ ರೋಗಗಳು, ಕೀಲುನೋವಿನ ಉಪಶಮನಕ್ಕೆ ಕೂಡ ಬಳಸುತ್ತಾರೆ. ಹುಳುಕಡ್ಡಿ, ಇಸುಬು, ಮೊಡವೆ, ಮತ್ತಿತರ ಚರ್ಮರೋಗಗಳ ಉಪಶಮನದಲ್ಲಿಯೂ ಇದರ ಪ್ರಯೋಗವಿದೆ. ಬೇರಿನ ಕಷಾಯವನ್ನು ಗರ್ಭಕೋಶದ ತೊಂದರೆ ನಿವಾರಣೆ ಹಾಗೂ ಮತ್ತು ಬರಿಸುವುದರಲ್ಲಿಯೂ ನೀಡಲಾಗುತ್ತದೆ.

ಸರ್ಪಗಂಧದ ಸೇವನೆಯಿಂದ ಹಾನಿಯೂ ಇದೆ. ರಕ್ತದ ಒತ್ತಡ ತರುವುದು, ಹಸಿವು ಕಡಿಮೆಯಾಗುವುದು, ಲೈಂಗಿಕಾಸಕ್ತಿ ಕ್ಷೀಣಿಸುವುದು, ಮಂಕುತನ ಕವಿಯುವುದು, ದೇಹತೂಕ ಹೆಚ್ಚುವುದು, ಜಠರ ಬಾಧೆಗಳುಂಟಾಗುವುದು ಕೆಲವು ನಿದರ್ಶನಗಳು. ಇದನ್ನು ಸ್ತನ ಕ್ಯಾನ್ಸರ್ ಇರುವ ಸ್ತ್ರೀಯರು, ಗರ್ಭಿಣಿಯರು, ಸ್ತನ್ಯಪಾನ ಮಾಡಿಸುವ ಬಾಣಂತಿಯರು, ಜಠರದ ಹುಣ್ಣಿರುವವರು, ನಿದ್ದೆ ಔಷಧ ಸೇವಿಸುವವರು, ಹೃದಯ ಹಾಗೂ ಪಿತ್ತಕೋಶದ ತೊಂದರೆಗಳಿರುವವರು, ಹಸಿವು ಇಲ್ಲದವರು, ತೀವ್ರ ಮನೋರೋಗವುಳ್ಳವರು ಸೇವಿಸಬಾರದು. 

ಆಧಾರ ಗ್ರಂಥಗಳು

[ಬದಲಾಯಿಸಿ]

೧.ವನಸಿರಿ:ಅಜ್ಜಂಪುರ ಕೃಷ್ಣಸ್ವಾಮಿ.

೨.www.organoindia.org

ಉಲ್ಲೇಖ

[ಬದಲಾಯಿಸಿ]
  1. "Module 11: Ayurvedic". Archived from the original on 2007-12-14. Retrieved 2008-02-11.
  2. eFloras. "Rauvolfia serpentina". Flora of China. Missouri Botanical Garden, St. Louis, MO & Harvard University Herbaria, Cambridge, MA. Retrieved 9 April 2012.
  3. Oudhia, P. and Tripathi, R.S. (2002). Identification, cultivation and export of important medicinal plants. In Proc. National Seminar on Horticulture Development in Chhattisgarh: Vision and Vistas. Indira Gandhi Agricultural University, Raipur (India) 21-23 Jan. 2002:78-85.
  4. "Rauwolfia serpentina root". DrugBank, Canadian Institutes of Health Research. 2 November 2018. Retrieved 25 November 2018.
  5. Srivastava, A.; Tripathi, A. K.; Pandey, R.; Verma, R. K.; Gupta, M. M. (2006). "Quantitative determination of reserpine, ajmaline, and ajmalicine in Rauvolfia serpentina by reversed-phase high-performance liquid chromatography". Journal of Chromatographic Science. 44 (9): 557–60. doi:10.1093/chromsci/44.9.557. PMID 17059683.
  6. Finnerty, Frank A. (November 1954). "Rauwolfia serpentina root". American Journal of Medicine. 17 (5): 629–640. doi:10.1016/0002-9343(54)90022-4. PMID 13207143. Retrieved 5 December 2019.


ಬಾಹ್ಯ ಸಂಪರ್ಕಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಸರ್ಪಗಂಧ&oldid=1169789" ಇಂದ ಪಡೆಯಲ್ಪಟ್ಟಿದೆ