ಸದಸ್ಯ:Geetha A J/ಸಿದ್ದಿ ಜನಾಂಗ
ಕರ್ನಾಟಕದ ಸಿದ್ದಿಗಳು ( ಸಿದ್ಧಿಗಳು) ಭಾರತದಲ್ಲಿ ವಾಸಿಸುವ ಜನಾಂಗೀಯ ಗುಂಪು. ಇವರು ಪೋರ್ಚುಗೀಸ್ ವ್ಯಾಪಾರಿಗಳು ಮತ್ತು ಅರಬ್ ವ್ಯಾಪಾರಿಗಳ ಗುಲಾಮರಾಗಿ ಭಾರತೀಯ ಉಪಖಂಡಕ್ಕೆ ಕರೆತರಲಾದ ಆಗ್ನೇಯ ಆಫ್ರಿಕಾದ ಬಂಟು ಜನರ ವಂಶಸ್ಥರು. [೧] ಭಾರತದಾದ್ಯಂತ 50,000 ಸಿದ್ದಿ ಜನರಿದ್ದಾರೆ, ಅದರಲ್ಲಿ ಮೂರನೇ ಒಂದು ಭಾಗಕ್ಕಿಂತ ಹೆಚ್ಚು ಜನರು ಕರ್ನಾಟಕದಲ್ಲಿ ವಾಸಿಸುತ್ತಿದ್ದಾರೆ. ಉತ್ತರ ಕನ್ನಡದ ಯಲ್ಲಾಪುರ, ಹಳಿಯಾಳ, ಅಂಕೋಲಾ, ಜೋಯಿಡಾ, ಮುಂಡಗೋಡ ಮತ್ತು ಸಿರ್ಸಿ ತಾಲ್ಲೂಕುಗಳಲ್ಲಿ, ಬೆಳಗಾವಿ ಜಿಲ್ಲೆಯ ಖಾನಾಪುರ ಮತ್ತು ಧಾರವಾಡ ಜಿಲ್ಲೆಯ ಕಲಘಟಗಿಯಲ್ಲಿ ಸಿದ್ದಿ ಜನಾಂಗವನ್ನು ಕಾಣಬಹುದು . ಸಿದ್ದಿ ಸಮುದಾಯದ ಅನೇಕ ಸದಸ್ಯರು ಸ್ವಾತಂತ್ರ್ಯದ ನಂತರ ಪಾಕಿಸ್ತಾನಕ್ಕೆ ವಲಸೆ ಹೋಗಿ ಕರಾಚಿ ಮತ್ತು ಸಿಂಧ್‌ನಲ್ಲಿ ನೆಲೆಸಿದ್ದಾರೆ. ಇತ್ತೀಚೆಗೆ ಸಂಗೀತ ನಿರ್ದೇಶಕಿ ಸ್ನೇಹಾ ಖಾನ್ವಾಲ್ಕರ್ ಅವರು, MTV ಸೌಂಡ್ ಟ್ರಿಪ್ಪಿನ್ ಸಂಗೀತ ಕಾರ್ಯಕ್ರಮಕ್ಕಾಗಿ ಸಂಯೋಜಿಸಿದ 'ಯೇರೆ' ಟ್ರಾಕ್ ನಲ್ಲಿ ಸಿದ್ದಿಗಳನ್ನು ಪರಿಚಯಿಸಿದ್ದರು. ಈ ಕಾರ್ಯಕ್ರಮದ ಮೂಲಕ ಸಿದ್ದಿಗಳು ಎಲ್ಲೆಡೆ ಪರಿಚಿತರಾಗಿದ್ದಾರೆ.
ಜನಾಂಗೀಯ ಹಿನ್ನೆಲೆ
[ಬದಲಾಯಿಸಿ]ಸಿದ್ದಿ ಎಂಬ ಹೆಸರಿನ ಮೂಲದ ಬಗ್ಗೆ ಹಲವಾರು ಊಹೆಗಳಿವೆ. ಆಧುನಿಕ ಭಾರತ ಮತ್ತು ಪಾಕಿಸ್ತಾನದಲ್ಲಿ ಸಾಹಿಬ್ ಪದದಂತೆಯೇ ಉತ್ತರ ಆಫ್ರಿಕಾದಲ್ಲಿ ಈ ಪದವು ಗೌರವದ ಪದವಾಗಿತ್ತು ಎಂಬುದು ಒಂದು ಸಿದ್ಧಾಂತ. ಎರಡನೆಯ ಸಿದ್ಧಾಂತವೆಂದರೆ ಭಾರತಕ್ಕೆ ಈ ಜನರನ್ನು ಮೊದಲು ಕರೆತಂದ ಅರಬ್ ಹಡಗುಗಳ ನಾಯಕರು ಸಿದ್ದಿ ಎಂಬ ಬಿರುದನ್ನು ಇಟ್ಟುಕೊಂಡಿದ್ದರಿಂದ ಅವರು ಕರೆತಂದ ಜನರನ್ನೂ ಸಿದ್ದಿ ಎಂದು ಕರೆಯಲಾಗಿದೆ. ಈ ನಾಯಕರನ್ನು ಸಯ್ಯದ್ ಎಂದು ಕರೆಯಲಾಗುತ್ತಿತ್ತು ಎಂಬ ಉಲ್ಲೇಖಗಳಿವೆ. [೨] ವಿಲಿಯಂ ಎಂಬ ವ್ಯಕ್ತಿ ಬರೆದ ಪತ್ರದಲ್ಲಿ ಸಿದ್ದಿ ಎಂಬ ಪದದ ಉಲ್ಲೇಖವಿದ್ದು ಮುಂದಕ್ಕೆ ಅದುವೇ ಬಳಕೆಗೆ ಬಂದಿರಬಹುದು ಎಂಬ ಊಹೆಯೂ ಇದೆ. ಇಂಗ್ಲೆಂಡ್‌ನಿಂದ ದಕ್ಷಿಣ ಭಾರತ ಮತ್ತು ಶ್ರೀಲಂಕಾಕ್ಕೆ ಪ್ರಯಾಣಿಸಿದ ಎಸ್ ಎಸ್ ನೇಪಾಲ್ (S.S. Nepal) ಎಂಬ ಹಡಗಿನಲ್ಲಿರುವ ಸಿಬ್ಬಂದಿಗಳ ವಿವರಗಳನ್ನು ಈ ಪತ್ರವು ಒಳಗೊಂಡಿತ್ತು. ಪತ್ರದಲ್ಲಿ ಅವರು, 'ಈ ಹಡಗಿನಲ್ಲಿ ಏಳು ಸೇನೆಯ ಅಧಿಕಾರಿಗಳು (English quarter masters) ಮತ್ತು ನಲವತ್ಮೂರು ಈಜುಗಾರರು(lascar seamen), ಆರು ಇಂಜಿನಿಯರ್‌ಗಳು, ಮೂವತ್ತೈದು ಪುರುಷರು (ಮುಸ್ಲಿಂ) ಮತ್ತು ಹದಿನೈದು ಸಿದ್ದಿಗಳು ಅಥವಾ ಕಲ್ಲಿದ್ದಲು ಹೊರುವ ನೀಗ್ರೋಗಳು" ಇದ್ದಾರೆ ಎಂದು ವಿವರಿಸಿದ್ದಾರೆ. [೩]
ಅಂತೆಯೇ, ಸಿದ್ದಿ ಪದಕ್ಕೆ ಇನ್ನೊಂದು ಪರ್ಯಾಯ ಪದ, ಹಬ್ಶಿ ( ಅಬಿಸ್ಸಿನಿಯಾದ ಅರೇಬಿಕ್ ಪದ ಅಲ್-ಹಬ್ಶ್ ಮೂಲ ಪದ). ಈ ಪದವೂ ಸಿದ್ದಿ ಗುಲಾಮರನ್ನು ಮೊದಲ ಬಾರಿಗೆ ಭಾರತದ ಉಪಖಂಡಕ್ಕೆ ಕರೆತರಲಾದ ಇಥಿಯೋಪಿಯನ್ / ಅಬಿಸ್ಸಿನಿಯನ್ ಹಡಗುಗಳ ಕ್ಯಾಪ್ಟನ್‌ಗಳ ಹೆಸರುಗಳಾಗಿದ್ದು, ಬಹುಶ: ಅಲ್ಲಿಂದಲೇ ಈ ಹೆಸರನ್ನು ಪಡೆಯಲಾಗಿದೆ ಎಂದು ಪರಿಗಣಿಸಲಾಗಿದೆ. [೪] ಈ ಪದವು ಕಾಲಾನಂತರದಲ್ಲಿ ಸಿದ್ದಿಗಳಿಗೆ ಮಾತ್ರವಲ್ಲದೆ ಇತರ ಆಫ್ರಿಕನ್ನರಿಗೂ ಅನ್ವಯಿಸಲ್ಲಟ್ಟಿತು. ಕಾಲಕ್ರಮೇಣ ಅವರ ವಂಶಸ್ಥರನ್ನೂ ಇದೇ ಹೆಸರಿನಲ್ಲಿ ಕರೆಯಲಾಯಿತು. ಹಬ್ಶಿ ಪದವನ್ನು ಕೆಲವೊಮ್ಮೆ "ಹಫ್ಸಿ" ಎಂದು ಉಚ್ಚರಿಸಲಾಗುತ್ತದೆ. ಆದರೆ ಇದನ್ನು ವ್ಯಕ್ತಿಯನ್ನು ಅವಮಾನಿಸುವ ಪದ ಎಂದು ಪರಿಗಣಿಸಲಾಗುತ್ತದೆ. [೫]
ಇತಿಹಾಸ
[ಬದಲಾಯಿಸಿ]ಕೆಲವು ಸಿದ್ದಿಗಳು ಪೋರ್ಚುಗೀಸ್ ಗುಲಾಮ ವ್ಯಾಪಾರದ ಬಲಿಪಶುಗಳಾಗಿದ್ದರೆ, ಹೆಚ್ಚಿನವರು 15-16 ನೇ ಶತಮಾನಗಳಲ್ಲಿದ್ದ ಸುಲ್ತಾನರು ಸೇನಾ ಕೂಲಿಗಳಾಗಿ ಆಮದು ಮಾಡಿಕೊಂಡವರು. ಇತರರು ವ್ಯಾಪಾರ ಮಾರ್ಗಗಳ ಅನ್ವೇಷಣೆಯ ಹಡಗಿನಲ್ಲಿ ಕರೆತಂದವರು. [೬]
2013 ರಲ್ಲಿ, ನ್ಯೂಯಾರ್ಕ್ ಪಬ್ಲಿಕ್ ಲೈಬ್ರರಿಯು ಆಫ್ರಿಕನ್ಸ್ ಇನ್ ಇಂಡಿಯಾ ಪ್ರಮ್ ಸ್ಲೇವ್ಸ್ ಟು ಜನರಲ್ಸ್ ಆಂಡ್ ರೂಲರ್ಸ್ ಎಂಬ ಶೀರ್ಷಿಕೆಯ ಕಲಾತ್ಮಕ ಪ್ರದರ್ಶನವನ್ನು ನಡೆಸಿತು. ಈ ಪ್ರದರ್ಶನವು ಐತಿಹಾಸಿಕವಾಗಿ ಪ್ರಮುಖರಾದ ಸಿದ್ದಿಗಳ ಜೀವನ ಮತ್ತು ಸಾಧನೆಗಳ ಚಿತ್ರಣವನ್ನು ಕಟ್ಟಿಕೊಟ್ಟಿತು. ಇತ್ತೀಚಿನವರೆಗೆ ನಡೆದ ಈ ಪ್ರದರ್ಶನವು ಸುಮಾರು ೧೦೦ ವರ್ಣಚಿತ್ರಗಳು ಮತ್ತು ಆಧುನಿಕ ಛಾಯಾಚಿತ್ರಗಳನ್ನು ಒಳಗೊಂಡಿತ್ತು. [೬]
ಧರ್ಮ
[ಬದಲಾಯಿಸಿ]ಕರ್ನಾಟಕದ ಬಹುತೇಕ ಸಿದ್ದಿಗಳು ಹಿಂದೂ ಧರ್ಮವನ್ನು ಅನುಸರಿಸುತ್ತಾರೆ. ಇವರಲ್ಲೂ ಇಸ್ಲಾಂ ಮತ್ತು ಕ್ರಿಶ್ಚಿಯನ್ ಧರ್ಮವನ್ನು ಅನುಸರಿಸುವ ಜನರಿದ್ದಾರೆ. ಹಳಿಯಾಳ ತಾಲೂಕಿನಲ್ಲಿ ಇದೇ ಜನಾಂಗಕ್ಕೆ ಸೇರಿದ ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರಿದ್ದಾರೆ. ಆದರೆ ಯಲ್ಲಾಪುರ ಮತ್ತು ಅಂಕೋಲಾದ ಘಟ್ಟ ಪ್ರದೇಶಗಳ ಸಮೀಪ ಹಿಂದೂ ಧರ್ಮವನ್ನು ಅನುಸರಿಸುವ ಸಿದ್ದಿಗಳಿದ್ದಾರೆ.[೩] ಸಿದ್ಧಿಗಳು ವಿವಿಧ ಧರ್ಮಗಳನ್ನು ಪಾಲಿಸುತ್ತಿದ್ದರೂ ವೈವಾಹಿಕ ಸಂಬಂಧಗಳಿಗೆ ಯಾವುದೇ ರೀತಿಯ ಧಾರ್ಮಿಕ ಕಟ್ಟುಪಾಡುಗಳಿಲ್ಲ.. [೭]
- ಹಿರಿಯರ ಪೂಜೆ
ಸಿದ್ಧಿಗಳನ್ನು ಅವರ ಧರ್ಮದ ಹೊರತಾಗಿ ಒಗ್ಗೂಡಿಸುವ ಅಂಶವೆಂದರೆ ಅದು 'ಹಿರಿಯಾರು' ಅಥವಾ ಪೂರ್ವಜರ ಆರಾಧನೆ. ಸಿದ್ದಿಗಳ ನಂಬಿಕೆಯ ಪ್ರಕಾರ ಸತ್ತವರು ಆತ್ಮಗಳ ರೂಪದಲ್ಲಿದ್ದು ಹತ್ತಿರದಲ್ಲೇ ಇರುತ್ತಾರೆ. ಕುಟುಂಬವೊಂದು ತನ್ನ ಎಲ್ಲಾ ಆಗುಹೋಗುಗಳಲ್ಲಿ ಆತ್ಮಗಳ ರೂಪದಲ್ಲಿರುವ ಹಿರಿಯನ್ನು ಪರಿಗಣಿಸಬೇಕಾಗುತ್ತದೆ. ಜನನ, ವಿವಾಹ ಮತ್ತು ಮರಣದಂತಹ ಸಂದರ್ಭಗಳಲ್ಲಿ, ಪೂರ್ವಜರನ್ನು ಪೂಜಿಸಲಾಗುತ್ತದೆ. 'ಹಿರಿಯಾರು' ಕಾರ್ಯಕ್ರಮವು ಸಿದ್ದಿಗಳನ್ನು ಅಗಲಿದ ಪೂರ್ವಿಕರ ಸ್ಮರಣೆ, ಹಲವಾರು ವರ್ಷಗಳಿಂದ ಆತ್ಮಗಳಾಗಿ ಮನೆಯವರನ್ನು ರಕ್ಷಿಸುವ ಕಾಳಜಿಗಾಗಿ ಅವರಿಗೆ ವಂದನೆಗಳನ್ನು ಸಲ್ಲಿಸುವ ಹಾಗೂ ಭವಿಷ್ಯದಲ್ಲಿಯೂ ಮನೆಯನ್ನು ಕಾಯುವಂತೆ ಪ್ರಾರ್ಥಿಸುವ ಕಾರ್ಯಕ್ರಮವಾಗಿರುತ್ತದೆ. ಈ ಸಮಾರಂಭದಲ್ಲಿ ಎಲ್ಲಾ ಸಂಬಂಧಿಕರು ಪಾಲ್ಗೊಳ್ಳುವುದು ಕಡ್ಡಾಯವಾಗಿದ್ದು, ಸಂಬಂಧಗಳನ್ನು ನವೀಕರಿಸುವ ಮಹತ್ವವೂ ಇದರಲ್ಲಿದೆ.. [೩]
ಹಿರಿಯರು ಆರಾಧನೆಯನ್ನು ಕುಟುಂಬದ 'ಕರ್ತ' (ಮುಖ್ಯಸ್ಥ) ವರ್ಷಕ್ಕೆ ಎರಡು ಬಾರಿ ನಡೆಸಬಹುದು. ಇದು ಸಾಮಾನ್ಯವಾಗಿ ನವೆಂಬರ್ ಮೊದಲ ವಾರದಲ್ಲಿ ಅಂದರೆ ನವರಾತ್ರಿ ಹಬ್ಬದ ಸಮಯದಲ್ಲಿ ನಡೆಯುತ್ತದೆ. ಕಾರಣಾಂತರಗಳಿಂದ ಇದು ಸಾಧ್ಯವಾಗದಿದ್ದರೆ, ಇದನ್ನು ಏಪ್ರಿಲ್-ಮೇ ತಿಂಗಳಲ್ಲಿ ನಡೆಯುವ ಸಿದ್ದಿಗಳ ಇನ್ನೊಂದು ಪ್ರಮುಖ ಹಬ್ಬವಾದ ಹೋಳಿ ಸಂದರ್ಭದಲ್ಲಿ ನಡೆಸಬಹುದು. ಹಿಂದೂ ಧರ್ಮವನ್ನು ಪಾಲಿಸುವ ಸಿದ್ದಿಗಳಿಗೆ 'ಹಿರಿಯಾರು' ಆರಾಧನೆ ಪ್ರಮುಖ ಕಾರ್ಯಕ್ರಮವಾಗಿದ್ದರೆ, ಕ್ರಿಶ್ಚಿಯನ್ ಮತ್ತು ಮುಸ್ಲಿಂ ಧರ್ಮವನ್ನು ಪಾಲಿಸುವ ಸಿದ್ಧಿಗಳಲ್ಲಿ ಇದಕ್ಕೆ ಅಂತಹಾ ಪ್ರಾಮುಖ್ಯತೆ ಇಲ್ಲ.
ಭಾಷೆ
[ಬದಲಾಯಿಸಿ]ಸಿದ್ದಿಗಳು ಮುಖ್ಯವಾಗಿ ಇಂಡೋ-ಆರ್ಯನ್ ಕುಟುಂಬಕ್ಕೆ ಸೇರಿದ ಗೋವಾದ ಸ್ಥಳೀಯ ಭಾಷೆಯಾದ ಕೊಂಕಣಿಯನ್ನು ಮಾತನಾಡುತ್ತಾರೆ. ಕೆಲವು ಸಿದ್ದಿಗಳು ಕನ್ನಡ ಮತ್ತು ಮರಾಠಿ ಸೇರಿದಂತೆ ಇತರ ಭಾಷೆಗಳನ್ನೂ ಮಾಡುತ್ತಾರೆ. [೮]
ಉದ್ಯೋಗ
[ಬದಲಾಯಿಸಿ]ಹೆಚ್ಚಿನ ಸಿದ್ದಿಗಳು ಕೃಷಿ ಅಥವಾ ಇತರ ಕೆಲಸದ ಕೂಲಿಯಾಳುಗಳಾಗಿ, ಗುತ್ತಿಗೆ ಅಥವಾ ಕೆಲವು ಸಂದರ್ಭಗಳಲ್ಲಿ ಜೀತದಾಳುಗಳಾಗಿ, ಮನೆಕೆಲಸದವರಾಗಿ ಕೆಲಸ ಮಾಡುತ್ತಿದ್ದಾರೆ. [೯] ಗೋವಾದಿಂದ ಓಡಿಹೋಗಿ ಉತ್ತರ ಕರ್ನಾಟಕದ ಅರಣ್ಯ ಪ್ರದೇಶದಲ್ಲಿ ನೆಲೆನಿಂತ ಸಿದ್ದಿಗಳು ಅಲ್ಲಿಯೇ ಕೃಷಿಯನ್ನು ಆರಂಭಿಸಿ ಅರಣ್ಯವಾಸಿಗಳಾಗಿದ್ದಾರೆ. ಇಂತಹಾ ಹಲವಾರು ಪ್ರದೇಶಗಳಲ್ಲಿ ಸಿದ್ದಿಗಳೇ ಮೂಲ ನಿವಾಸಿಗಳು ಎನಿಸಿಕೊಂಡಿದ್ದಾರೆ.
ಕಲೆ
[ಬದಲಾಯಿಸಿ]ಕರ್ನಾಟಕದ ಸಿದ್ದಿಗಳು ಮಾಡುವ ಕವಂಡಿ ಎಂಬ ವಿಶಿಷ್ಟ ಜಮಾಖಾನೆ ಇತ್ತೀಚೆಗೆ ತುಂಬಾ ಜನಪ್ರಿಯವಾಗಿದೆ. ಪ್ರತಿ ಸಿದ್ದಿ ಗುಂಪುಗಳು ಬಹಳ ವಿಭಿನ್ನವೂ ಸಂಕಿರ್ಣವೂ ಆದ ರಜಾಯಿಯನ್ನು ತಯಾರು ಮಾಡುತ್ತದೆ. ಈ ಕಲೆಯೇ ಸಿದ್ದಿಗಳ ಗುಂಪನ್ನು ಒಂದಕ್ಕಿಂತ ಇನ್ನೊಂದು ಭಿನ್ನವಾಗಿ ಗುರುತಿಸಲ್ಪಡುವಂತೆ ಮಾಡುತ್ತದೆ. ಮರುಬಳಕೆಯ ಬಟ್ಟೆಯನ್ನು ಆಯ್ದುಕೊಳ್ಳುವ ಜಮಾಖಾನೆ ವಿನ್ಯಾಸಗಾರರು ಆಕರ್ಷಣೀಯ ಶೈಲಿಯಲ್ಲಿ ನೇಯ್ಗೆ ಮಾಡುತ್ತಾರೆ, ಕೆಲವೊಮ್ಮೆ ಅದರಲ್ಲಿ ಧಾರ್ಮಿಕ ಚಿನ್ಹೆಯನ್ನೂ ಮೂಡಿಸುತ್ತಾರೆ. ಹೊಲದಲ್ಲಿ ಕೆಲಸ ಮಾಡಲು ಸಾಧ್ಯವಾಗದ ವಯಸ್ಸಾದ ಮಹಿಳೆಯರಿಂದ ಸಾಮಾನ್ಯವಾಗಿ ಕುಟುಂಬದ ಸದಸ್ಯರಿಗೆ ಗಾದಿಗಳನ್ನು ತಯಾರಿಸಲಾಗುತ್ತದೆ. ಜಮಾಖಾನೆಗಳನ್ನು ಹಾಸಿಗೆಗಳ ಹೊದಿಕೆಗಳಾಗಿ, ನೆಲಹಾಸುಗಳಾಗಿ ಅಥವಾ ಮಳೆಗಾಲದಲ್ಲಿ ಹೊದಿಕೆಗಳಾಗಿಯೂ ಉಪಯೋಗಿಸಬಹುದು. [೧೦] ಸಿದ್ದೀಸ್ ವುಮೆನ್ ಕ್ವಿಲ್ಟಿಂಗ್ ಕೋಆಪರೇಟಿವ್ (SWQC) ಎನ್ನುವ ಲಾಭರಹಿತ ಸಂಸ್ಥೆ ಯನ್ನು 2004 ರಲ್ಲಿ ಸಿದ್ದಿ ಸಮುದಾಯಕ್ಕೆ ಹಾಗೂ ಮತ್ತು ಗಾದಿ ತಯಾರಕರಿಗೆ ಆದಾಯದ ಮೂಲವನ್ನು ಒದಗಿಸುವ ಉದ್ದೇಶದಿಂದ ರಚಿಸಲಾಗಿದೆ. 2011 ರಲ್ಲಿ "ಸೋಲ್‌ಫುಲ್ ಸ್ಟಿಚಿಂಗ್: ಪ್ಯಾಚ್‌ವರ್ಕ್ ಕ್ವಿಲ್ಟ್ಸ್ ಬೈ ಆಫ್ರಿಕನ್ಸ್ (ಸಿದ್ದಿಸ್) ಇನ್ ಇಂಡಿಯಾ" ಎಂಬ ಶೀರ್ಷಿಕೆಯ ಪ್ರದರ್ಶನವನ್ನು ಆಫ್ರಿಕನ್ ಡಯಾಸ್ಪೊರಾ ಮ್ಯೂಸಿಯಂನಲ್ಲಿ ಆಯೋಜಿಸಲಾಗಿತ್ತು. ಈ ಪ್ರದರ್ಶನವನ್ನು ಸಿದ್ದಿ ಸಮುದಾಯದ ಗಾದಿ ತಯಾರಕರಿಗೆ ಮನ್ನಣೆ ನೀಡುವ ನಿಟ್ಟಿನಲ್ಲಿ ಆಯೋಜಿಸಲಾಗಿತ್ತು. [೧೧]
ಸ್ಥಳೀಯ ಸಂಸ್ಕೃತಿಯೊಂದಿಗೆ ಸಮ್ಮಿಲನ
[ಬದಲಾಯಿಸಿ]ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾದಲ್ಲಿ ವಾಸಿಸುತ್ತಿರುವ ಸಿದ್ದಿಗಳಲ್ಲಿ ಇರುವ ಸಾಮಾನ್ಯ ಲಕ್ಷಣವೆಂದರೆ ಅವರು ಸ್ಥಳೀಯ ಸಂಸ್ಕೃತಿಯೊಂದಿಗೆ ಮಿಳಿತಗೊಂಡಿರುವುದು. ಯಾವುದೇ ಬಾಹ್ಯ ಒತ್ತಡವಿಲ್ಲದೆ ಸ್ವ ಇಚ್ಚೆಯಿಂದ ಸ್ಥಳೀಯ ಸಂಸ್ಕೃತಿಯೊಂದಿಗೆ ಬೆರೆತುಕೊಳ್ಳುವುದು ಇವರ ವಿಶೇಷತೆ. ಸಿದ್ದಿಗಳು ಆಚರಿಸುತ್ತಿರುವ 'ಹಿರಿಯಾರು' ಪದ್ದತಿ ಕೂಡಾ ಸ್ಥಳೀಯ ಹಿಂದೂ ಆಚರಣೆಗಳನ್ನು ಹೋಲುತ್ತವೆ. ಬುಡಕಟ್ಟಿನ ಜನಾಂಗೀಯ ಗುಣಲಕ್ಷಣಗಳನ್ನು ಹೊರತುಪಡಿಸಿ, ಇವರನ್ನು ಇತರ ಜನರಿಂದ ಪ್ರತ್ಯೇಕವಾಗಿ ಗುರುತಿಸಲು ಸಾಧ್ಯವಿಲ್ಲ. [೩] ಭಾರತದಲ್ಲಿ ಇಂದು ವಾಸಿಸುತ್ತಿರುವ ಬಹುತೇಕ ಸಿದ್ದಿಗಳು ಇಂಡೋ-ಆಫ್ರಿಕನ್ ಜನಾಂಗದವರಾಗಿದ್ದಾರೆ. ಇಂದು ಕರ್ನಾಟಕದಲ್ಲಿ ಕೆಲವೇ ಮಂದಿ ಶುದ್ಧ ಸಿದ್ದಿ ಜನಾಂಗದವರಿದ್ದು , ಮೂಲ ಸಿದ್ದಿಗಳನ್ನು ಗುಜರಾತಿನಲ್ಲಿ ಕಾಣಬಹುದು. ಆದರೂ ಈ ಸಿದ್ದಿಗಳಲ್ಲಿ ಹಲವರು ತಮ್ಮಮೂಲ ಆಫ್ರಿಕನ್ ಹೆಸರುಗಳು ಮತ್ತು ಸಂಸ್ಕೃತಿಯನ್ನು ಕಳೆದುಕೊಂಡಿದ್ದಾರೆ. ಆದಾಗ್ಯೂ ಅವರ ನೃತ್ಯ ಮತ್ತು ಸಂಗೀತದ ಪ್ರಕಾರಗಳ ಮೂಲಕ ಆಫ್ರಿಕನ್ ಸಂಪ್ರದಾಯಗಳ ಕೆಲವು ಲಕ್ಷಣಗಳನ್ನು ಉಳಿಸಿಕೊಂಡಿದ್ದಾರೆ.
ಐತಿಹಾಸಿಕ ಉಲ್ಲೇಖಗಳು
[ಬದಲಾಯಿಸಿ]ಕೊಡಗಿನ ಇತಿಹಾಸ ಎಂಬ ಕನ್ನಡ ಪುಸ್ತಕದಲ್ಲಿ ದೊಡ್ಡ ವೀರರಾಜೇಂದ್ರ (1763-1809) ಆಳ್ವಿಕೆಯಲ್ಲಿ ಕೊಡಗಿನಲ್ಲಿ ಸಿದ್ಧಿ ಅರಮನೆಯ ಕಾವಲುಗಾರರು ಇದ್ದ ಉಲ್ಲೇಖಗಳಿವೆ. ರೆವ್ ಅವರ ಖಾತೆ. ರೆವರೆಂಡ್ ಜಿ. ರಿಕ್ಟರ್ ಅವರ ೧೮೭೦ ಯ ಬರಹವೊಂದರಲ್ಲಿ ದೊಡ್ಡ ವೀರರಾಜೇಂದ್ರ ರಾಜನ ಸೇವೆಯಲ್ಲಿ "ಆಫ್ರಿಕನ್ ಅಂಗರಕ್ಷಕರು" ಇರವುದನ್ನು ಉಲ್ಲೇಖಿಸಿದ್ದಾರೆ.[೧೨] ಗಜವೀರ ಎಂಬ ಸಿದ್ಧಿಯು 1829-30ರಲ್ಲಿ ಕಿತ್ತೂರಿನ ಬಳಿ ಬ್ರಿಟಿಷರ ವಿರುದ್ಧದ ದಂಗೆಯಲ್ಲಿ ಸಂಗೊಳ್ಳಿರಾಯಣ್ಣನೊಂದಿಗೆ ಕೈಜೋಡಿಸಿದನೆಂದು ಹೇಳಲಾಗಿದೆ. ನೆರೆಯ ಮಹಾರಾಷ್ಟ್ರ ರಾಜ್ಯದ ರತ್ನಗಿರಿ ಜಿಲ್ಲೆಯ ಸಾವಂತವಾಡಿಯಲ್ಲಿ 1844 ರ ದಂಗೆಯಲ್ಲಿ ದಾಂಡೇಲಿಯ ಬಳಿಯ ಪುನ್ಸೊಲ್ಲಿಯ ಇಬ್ಬರು ಸಿದ್ಧಿ ಸಹೋದರರಾದ ಬಾಸ್ಟಿಯನ್ ಮತ್ತು ಬೆನೋವ್ ಅವರನ್ನು ಸಾವಂತವಾಡಿ ಆಸ್ಥಾನದ ಗಣ್ಯರಾದ ಫೆನ್ ಸಾವಂತ್ ಅವರು ಸೇರಿಸಿಕೊಂಡರು ಎಂದು ದಾಖಲೆಗಳು ತೋರಿಸುತ್ತವೆ.
ಸುಪಾ ದಂಗೆಯ ಸಮಯದಲ್ಲಿ ಅವರು ಸರ್ಕಾರಿ ಹಣವನ್ನು ಕಳ್ಳತನ ಮಾಡಿ ಅನೇಕ ಚೌಕಿದಾರರನ್ನು (ಕಾವಲುಗಾರರನ್ನು) ವಶಪಡಿಸಿಕೊಂಡು ಹಲವಾರು ಬ್ರಿಟೀಶ್ ಠಾಣೆಗಳನ್ನು ಸುಟ್ಟುಹಾಕಿರುವುದು ಈ ಗುಂಪಿನ ಪ್ರಮುಖ ಕಾರ್ಯ ಎಂದು ಪರಿಗಣಿಸಲಾಗಿದೆ. ಬ್ರಿಟೀಷರಿಂದ ತಪ್ಪಿಸಿಕೊಳ್ಳಲು ಈ ಗುಂಪಿನ ( 'bundh) ಮುಖಂಡರು ದರ್ಶನಿಗುಡ್ಡ ಶ್ರೇಣಿಗಳಲ್ಲಿ ಆಶ್ರಯ ಪಡೆದಿದ್ದರು ಹಾಗೂ ನಂತರ ನೆರೆಯ ಗೋವಾ ಪ್ರದೇಶಕ್ಕೆ ತಪ್ಪಿಸಿಕೊಂಡಿದ್ದರು ಎಂದು ಹೇಳಲಾಗಿದೆ. ದಾಂಡೇಲಿಯಲ್ಲಿ ನಡೆದ ಭೀಕರ ಕಾಳಗ ಮತ್ತು ಸೋಮಲಿಂಗ ದೇವಸ್ಥಾನದಲ್ಲಿ ನಡೆದ ಹೋರಾಟದ ಉಲ್ಲೇಖಗಳೂ ಇವೆ. ಈ ಚಟುವಟಿಕೆಗಳು ಹಲವಾರು ತಿಂಗಳುಗಳ ಕಾಲ ಮುಂದುವರೆದು ಕೊನೆಗೆ ಕ್ತ್ತುಕೈದಿಗಳಾದ ಕೆಲವರಿಗೆ ಬ್ರಿಟಿಷರು ಮರಣದಂಡನೆ ವಿಧಿಸಿದರು. ಸಹೋದರರು ಮತ್ತು ಅವರ ಕುಟುಂಬಗಳನ್ನು ಒಳಗೊಂಡ 100 ಕ್ಕೂ ಹೆಚ್ಚು ದಂಗೆಕೋರರನ್ನು ಪೋರ್ಚುಗೀಸರು ಈಸ್ಟ್ ಇಂಡೀಸ್‌ನ ಟಿಮೋರ್‌ಗೆ ಗಡೀಪಾರು ಮಾಡಿದರು. ಈ ಸಂದರ್ಭದಲ್ಲಿ ಗುಣಬಾ ಶೆಣ್ವಿ, ಸಿದ್ದಿ ಬಾಸ್ಟಿಯನ್, ಅವರ ಸಹೋದರ ಅಣ್ಣಾ ಸಾಹೇಬ್ ಮತ್ತು ಮೂವರು ಫಡ್ನಿಸ್ ಸಹೋದರರು ತಲೆಮರೆಸಿಕೊಂಡಿದ್ದರು. ಜುಲೈ 1859 ರಲ್ಲಿ ಬ್ರಿಟಿಷರು ಅವರ ಬಂಧನಕ್ಕೆ ತಲಾ 1000 ರೂ ಬಹುಮಾನ ಘೋಷಿಸಿದ್ದರು.. ಚಿಂತೋಬಾ ಫಡ್ನಿಸ್ ಮತ್ತು ಸಿದ್ದಿ ಬಾಸ್ಟಿಯನ್ ಜಗಬೆಟ್‌ನಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಕೊಲ್ಲಲ್ಪಟ್ಟರು.
ಜನಸಂಖ್ಯೆ
[ಬದಲಾಯಿಸಿ]ದೇಶದಲ್ಲಿರುವ ಸಿದ್ದಿ ಜನಾಂಗವನ್ನು ಗಮನಿಸಿದರೆ ಕರ್ನಾಟಕ ರಾಜ್ಯದಲ್ಲಿ ಅತಿ ಹೆಚ್ಚು ಸಿದ್ದಿಗಳಿದ್ದಾರೆ. [೬] ಇತ್ತೀಚಿನ ಅಂದಾಜಿನ ಪ್ರಕಾರ ರಾಜ್ಯದಲ್ಲಿ ಸುಮಾರು 3,700 ಸಿದ್ದಿ ಕುಟುಂಬಗಳಿದ್ದು ಒಟ್ಟು 18,000 ಸಿದ್ದಿಗಳಿದ್ದಾರೆ. ಗುಜರಾತ್‌ನಲ್ಲಿ ಸುಮಾರು 10,000 ಮತ್ತು ಹೈದರಾಬಾದ್‌ನಲ್ಲಿ 12,000 ಸಿದ್ದಿ ಜನಸಂಖ್ಯೆಯಿದೆ. ಕೆಲವರು ಲಕ್ನೋ, ದೆಹಲಿ ಮತ್ತು ಕಲ್ಕತ್ತಾ ಮೊದಲಾದ ಪ್ರದೇಶದಲ್ಲಿದ್ದಾರೆ. ಶ್ರೀಲಂಕಾದಲ್ಲಿ "ಸಿಲೋನ್ ಕಾಪ್ರಿಸ್" ಎಂಬ ಸಿದ್ದಿ ಜನಾಂಗವಿದ್ದು ಅವರ ಸಂಖ್ಯೆ 1,000 ಕ್ಕಿಂತಲೂ ಕಡಿಮೆ ಇದೆ.[೬]
ಆನುವಂಶಿಕ
[ಬದಲಾಯಿಸಿ]ಆನುವಂಶಿಕ ವಿಶ್ಲೇಷಣೆಯಲ್ಲಿನ ಇತ್ತೀಚಿನ ಪ್ರಗತಿಗಳು ಸಿದ್ದಿಗಳ ಜನಾಂಗೀಯ ಹಿನ್ನೆಲೆಯ ಮೇಲೆ ಸ್ವಲ್ಪ ಬೆಳಕು ಚೆಲ್ಲಲು ಸಹಾಯ ಮಾಡಿದೆ. ಜೆನೆಟಿಕ್ ವಂಶಾವಳಿ, ಆಧುನಿಕ ಜನಸಂಖ್ಯೆಯ ವಂಶವಾಹಿಗಳನ್ನು ತಮ್ಮ ಜನಾಂಗೀಯ ಮತ್ತು ಭೌಗೋಳಿಕ ಮೂಲಗಳನ್ನು ಪತ್ತೆಹಚ್ಚಲು ಬಳಸುವ ಒಂದು ನವೀನ ವಿಧಾನ ಸಿದ್ದಿಗಳ ಹಿನ್ನೆಲೆಯನ್ನು ಅರಿತುಕೊಳ್ಳಲು ಸಹಾಯ ಮಾಡಿದೆ.
ವೈ ಡಿಎನ್ಎ
[ಬದಲಾಯಿಸಿ]ಶಾ ಮತ್ತು ಇತರರು (2011 ನಡೆಸಿದ ವೈ-ಕ್ರೋಮೋಸೋಮ್ ಅಧ್ಯಯನದ ಮೂಲಕ ಭಾರತದಲ್ಲಿನ ಸಿದ್ದಿಗಳ ವಂಶವಾಹಿಯನ್ನು ಪರೀಕ್ಷೆ ನಡೆಸಿದ್ದರು. ಈ ಸಂಶೋದಕರು ಬಂಟು ಜನರಲ್ಲಿ ಸಾಮಾನ್ಯವಾಗಿರುವ E1b1a1 ಹ್ಯಾಪ್ಲೋಗ್ರೂಪ್ (ಈಗ ಹ್ಯಾಪ್ಲೋಗ್ರೂಪ್ E-M2 ಎಂದು ಕರೆಯಲಾಗುತ್ತದೆ),ವಂಶವಾಹಿ ಕರ್ನಾಟಕದ ಸಿದ್ದಿಗಳಲ್ಲಿ 42% ಮತ್ತು ಗುಜರಾತ್ ನ ಸಿದ್ದಿಗಳಲ್ಲಿ 34%ಇರುವುದನ್ನು ಗುರುತಿದ್ದಾರೆ. ಅದೇ ರೀತಿ ಕರ್ನಾಟಕ ದ 14% ಸಿದ್ದಿಗಳು ಮತ್ತು ಗುಜರಾತ್‌ನ ಸುಮಾರು 35% ಸಿದ್ದಿಗಳು ಉಪ-ಸಹಾರನ್ B-M60 ಗೆ ಸೇರಿದವರು ಎಂಬುದನ್ನು ಈ ಅಧ್ಯಯನ ತಿಳಿಸಿದೆ..ಉಳಿದ ಸಿದ್ದಿಗಳು ಭಾರತೀಯ ಅಥವಾ ಸಮೀಪದ ಪೂರ್ವ-ಸಂಬಂಧಿತ ವಂಶವಾಹಿ ಹಿನ್ನೆಲೆಯನ್ನು ಹೊಂದಿದ್ದು, ಇದರಲ್ಲಿ P, H, R1a-M17, J2 ಮತ್ತು L-M20 ಹ್ಯಾಪ್ಲೋಗ್ರೂಪ್‌ಗಳಿವೆ. [೧೩]
ತಂಗರಾಜ್ (2009) ನಡೆಸಿದ ಅಧ್ಯಯನದಲ್ಲೂ ಸಿದ್ದಿಯ ನಡುವೆ ಇದೇ ರೀತಿಯ, ಮುಖ್ಯವಾಗಿ ಬಂಟು-ಸಂಬಂಧಿತ ವಂಶವಾಹಿ ಸಂಬಂಧಗಳನ್ನು ಗಮನಿಸಲಾಗಿದೆ. [೧೪]
mtDNA
[ಬದಲಾಯಿಸಿ]ಶಾ ಮತ್ತು ಇತರರು ನಡೆಸಿದ mtDNA ಅಧ್ಯಯನದ ಪ್ರಕಾರ (2011), ಸಿದ್ದಿಗಳ ತಾಯಿಯ ವಂಶವಾಹಿಯ ಲಕ್ಷಣಗಳು ಉಪ-ಸಹಾರನ್ ಮತ್ತು ಭಾರತೀಯ ಹ್ಯಾಪ್ಲೋಗ್ರೂಪ್‌ಗಳ ಮಿಶ್ರಣವನ್ನು ಒಳಗೊಂಡಿದೆ. ಗುಜರಾತಿನ ಸುಮಾರು 53% ಸಿದ್ದಿಗಳು ಮತ್ತು ಕರ್ನಾಟಕದ 24% ಸಿದ್ದಿಗಳು ಉಪ-ಸಹಾರನ್ ಮ್ಯಾಕ್ರೋ-ಹ್ಯಾಪ್ಲಾಗ್ರೂಪ್ L ಉಪ-ವರ್ಗಗಳಿಗೆ ಸೇರಿದವರು. ಕೆಲವು ಸಿದ್ದಿಗಳ ವಂಶವಾಹಿಯು ಮುಖ್ಯವಾಗಿ ಬಂಟು ಮಹಿಳೆಯರಿಗೆ ಸಂಬಂಧಿಸಿದ L0 ಮತ್ತು L2a ಉಪವರ್ಗಗಳನ್ನು ಒಳಗೊಂಡಿತ್ತು. ಉಳಿದವುಗಳು ಯುರೇಷಿಯನ್ ಹ್ಯಾಪ್ಲೋಗ್ರೂಪ್‌ಗಳಾದ M ಮತ್ತು N ವಂಶವಾಹಿಯ ಲಕ್ಷಣಗಲನ್ನು ಒಳಗೊಂಡಿದ್ದು, ಸ್ಥಳೀಯ ವಂಶವಾಹಿಯೊಂದಿಗಿನ ಮಿಶ್ರಣವನ್ನು ಸೂಚಿಸುತ್ತದೆ. [೧]
ಆಟೋಸೋಮಲ್ ಡಿಎನ್ಎ
[ಬದಲಾಯಿಸಿ]ನಾರಂಗ್ ಮತ್ತು ಇತರರು (2011) ಭಾರತದಲ್ಲಿನ ಸಿದ್ದಿಗಳ ಆಟೋಸೋಮಲ್ ಡಿಎನ್‌ಎ ಪರೀಕ್ಷೆ ನಡೆಸಿದ್ದರು. ಸಂಶೋಧಕರ ಪ್ರಕಾರ, ಸುಮಾರು 58% ಸಿದ್ದಿಗಳ ಸಂತತಿಯು ಬಂಟು ಜನಾಂಗದಿಂದ ಬಂದಿದೆ. ಉಳಿದವು ಭಾರತದ ಉತ್ತರ ಮತ್ತು ವಾಯುವ್ಯ ಭಾಗದಲ್ಲಿ ವಾಸಿಸುವ ಇಂಡೋ-ಯುರೋಪಿಯನ್- ಭಾಷೆಯನ್ನು ಮಾತನಾಡುವ ಭಾರತೀಯರ ಲಕ್ಷಣಗಳನ್ನು ಹೊಂದಿವೆ. ಇದು ಬಹುಶ: ಸ್ಥಳೀಯ ಜನಾಂಗದೊಂದಿಗಿನ ಅವರ ಸಮ್ಮಿಲನವನ್ನು ಸೂಚಿಸುತ್ತದೆ . [೧೫]
ಅಂತೆಯೇ, ಶಾ ಮತ್ತು ಇತರರು(2011) ನಡೆಸಿದ ಸಂಶೋಧನೆಯಂತೆ ಗುಜರಾತ್‌ನಲ್ಲಿರುವ ಸಿದ್ದಿಗಳು 66.90%-70.50%ರಷ್ಟು ವಂಶವಾಹಿಯನ್ನು ಬಂಟು ಜನಾಂಗದಿಂದ ಪಡೆದಿದ್ದಾರೆ. ಕರ್ನಾಟಕದ ಸಿದ್ದಿಗಳು 64.80%-74.40% ರಷ್ಟು ವಂಶವಾಹಿಯನ್ನು ಆಗ್ನೇಯ ಆಫ್ರಿಕಾದಿಂದ ಪಡೆದುಕೊಂಡಿದ್ದಾರೆ. ಅಧ್ಯಯನಕ್ಕಾಗಿ ಆಯ್ಕೆ ಮಾಡಿದ ಉಳಿದ ಸಿದ್ದಿಗಳ ನಮೂನೆಯಲ್ಲಿ ಕಂಡುಬಂದ ಆಟೋಸೋಮಲ್ ಡಿಎನ್‌ಎ ಘಟಕಗಳು ಮುಖ್ಯವಾಗಿ ಸ್ಥಳೀಯ ದಕ್ಷಿಣ ಏಷ್ಯಾದ ಜನಸಂಖ್ಯೆಯೊಂದಿಗೆ ಸಂಬಂಧ ಹೊಂದಿವೆ. ಲೇಖಕರ ಪ್ರಕಾರ, ಸಿದ್ದಿ ಜನಾಂಗ, ಬಂಟು ಜನಾಂಗ ಮತ್ತು ಸ್ಥಳೀಯ ಭಾರತೀಯ ನಡುವಿನ ಜೀನ್ ಹರಿವು ಏಕಮುಖವಾಗಿದೆ. ಅವರ ಪ್ರಕಾರ ಈ ವಂಶವಾಹಿಯ ಹರಿವು ಸುಮಾರು 200 ವರ್ಷಗಳಿಂದ ಅಂದರೆ ಎಂಟು ತಲೆಮಾರುಗಳಿಂದ ಹರಿದುಬಂದಿದೆ . [೧]
ಸಾಮಾಜಿಕ ಸ್ಥಾನಮಾನ ಮತ್ತು ಪುನರ್ವಸತಿ
[ಬದಲಾಯಿಸಿ]ಭಾರತದ ಉಳಿದ ಭಾಗಗಳಲ್ಲಿ ವಾಸಿಸುವ ಸಿದ್ದಿಗಳಂತೆ, ಕರ್ನಾಟಕದಲ್ಲಿರುವ ಸಿದ್ದಿಗಳೂ ಕೂಡಾ ಮುಖ್ಯವಾಹಿಸಿಯಿಂದ ದೂರ ಉಳಿದಿದ್ದು, ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ನಿರ್ಲಕ್ಷಿಸಲ್ಪಟ್ಟಿದ್ದಾರೆ. [೬] ಸಿದ್ಧಿಗಳನ್ನು ಸಂಘಟಿಸಿಲು ಮತ್ತು ಅವರ ಸಮಗ್ರ ಅಭಿವೃದ್ಧಿಗಾಗಿ ಕೆಲಸ ಮಾಡಲು1984 ರಲ್ಲಿ, ದಾಂಡೇಲಿಯ ಗ್ರಾಮೀಣ ಅಭಿವೃದ್ದಿ ಟ್ರಸ್ಟ್‌ನ ಕಾರ್ಯದರ್ಶಿ ಮತ್ತು ಇತರರ ಶ್ರಮದಿಂದ "ಅಖಿಲ-ಕರ್ನಾಟಕ ಸಿದ್ದಿ ಅಭಿವೃದ್ಧಿ ಸಂಘ"ವನ್ನು ರಚಿಸಲಾಯಿತು. ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತರಾದ ಕೆ.ವಿ.ಸುಬ್ಬಣ್ಣ ಕೂಡಾ ತಮ್ಮ ನೀನಾಸಂ ಸಂಸ್ಥೆಯ ಮೂಲಕ ಈ ನಿಟ್ಟಿನಲ್ಲಿ ಕೆಲವು ಪ್ರಯತ್ನಗಳನ್ನು ಮಾಡಿದರು.
ಸಿದ್ದಿಗಳನ್ನು ಸಾಂವಿಧಾನಿಕವಾಗಿ ಸಬಲೀಕರಣಗೊಳಿಸುವ ಉದ್ದೇಶದಿಂದ ಜನವರಿ 8,2003 ರಂದು, ಕೇಂದ್ರ ಸರ್ಕಾರವು ಪರಿಶಿಷ್ಟ ಪಂಗಡಗಳ ಪಟ್ಟಿಗೆ ಸಿದ್ದಿ ಜನಾಂಗವನ್ನು ಸೇರಿಸಿತು.. ಇದಲ್ಲದೆ, ನಿರಾಶ್ರಿತ ಸಿದ್ದಿಗಳಿಗೆ ಮನೆಗಳನ್ನು ಒದಗಿಸುವ ನೀತಿಗಳು, ನೀರಿನ ಸೌಲಭ್ಯಗಳು, ಶಿಕ್ಷಣ, ಉದ್ಯೋಗಾವಕಾಶಗಳು, ರಸ್ತೆಗಳು, ವಿದ್ಯುತ್, ಸಂಚಾರಿ ಆಸ್ಪತ್ರೆಗಳು, ಪ್ರತಿ ಸಿದ್ದಿ ಕುಟುಂಬಕ್ಕೆ ಎರಡು ಎಕರೆ ಭೂಮಿ ಮತ್ತು ಅರಣ್ಯ ಉತ್ಪನ್ನಗಳನ್ನು ಸಂಗ್ರಹಿಸುವ ಹಕ್ಕನ್ನು ಸಂಸತ್ತು ಅನುಮೋದಿಸಿತು. ಈ ನೀತಿಗಳ ಸರಿಯಾದ ಅನುಷ್ಠಾನವು ಸಿದ್ಧಿ ಸಮುದಾಯವು ಸಾಮಾಜಿಕ ಮತ್ತು ಆರ್ಥಿಕ ವಾಗಿ ಅಭಿವೃದ್ದಿಗಳಿಸಲು ಸಹಾಯಮಾಡಲಿವೆ ಎಂದು ಆಶಿಸಲಾಗಿದೆ.
ಅಂತಾರಾಷ್ಟ್ರೀಯವಾಗಿಯೂ ಸಹ, ಪೂರ್ವ ರಾಷ್ಟ್ರಗಳಲ್ಲಿ ವಾಸಿಸುವ ಉಪ-ಸಹಾರನ್ ಆಫ್ರಿಕನ್ ಜನಾಂಗದ ಬಗೆಗಿನ ಅರಿವು ತುಂಬಾ ಕಡಿಮೆ. [೧೬] ಆದಾಗ್ಯೂ, 2006 ಲ್ಲಿ ಆರಂಭವಾದ, ಯುನೆಸ್ಕೋ ಬೆಂಬಲಿತ ಕಾರ್ಯಕ್ರಮವಾದ 'ದಿ ಆಫ್ರಿಕನ್ ಡಯಾಸ್ಪೊರಾ ಇನ್ ಏಷ್ಯಾ' (TADIA), ಸಿದ್ದಿಜನಾಂಗದ ಪುನರ್ವಸತಿಗಾಗಿ ಆಸಕ್ತಿವಹಿಸಿದೆ. [೧೬] ಬ್ರೆಜಿಲ್‌ನ ಪ್ರೊ ಆಂಜೆನೋಟ್ ನೇತೃತ್ವದಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮವು, ಕರ್ನಾಟಕ, ಗುಜರಾತ್ ಮತ್ತು ಆಂಧ್ರಪ್ರದೇಶದಲ್ಲಿ ವಾಸವಿರುವ ಸಿದ್ದಿಗಳು ಹಾಗೂ ಸಂಶೋಧನಾ ವಿದ್ವಾಂಸರ ನಡುವಿನ ಶೈಕ್ಷಣಿಕ ಕೊಂಡಿಯಾಗಿದೆ ಕೆಲಸಮಾಡುತ್ತಿದೆ. ಜೊತೆಗೆ ಸಿದ್ದಿಗಳ ಕುರಿತಂತೆ ಶೈಕ್ಷಣಿಕ ಸಂಶೋಧನೆಗಳನ್ನು ನಡೆಸುವುದು, ಸಾಂಸ್ಕೃತಿಕ ವಿನಿಮಯವನ್ನು ಉತ್ತೇಜಿಸುವುದು ಮತ್ತು ಸಿದ್ದಿಗಳಿಗೆ ಶಿಕ್ಷಣ ಮತ್ತು ಉದ್ಯೋಗ ಸೃಷ್ಟಿ ಮತ್ತು ಈ ಕಾಯಗಳಿಗಾಗಿ ದೇಣಿಗೆಯನ್ನು ಸಂಗ್ರಹಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.
ಇತರ ಮಾಹಿತಿ
[ಬದಲಾಯಿಸಿ]- ಪ್ರಸಿದ್ಧ ಸಸ್ಯಶಾಸ್ತ್ರಜ್ಞ ಬಿಜಿಎಲ್ ಸ್ವಾಮಿ ಪ್ರಕಾರ ಭಾರತದಲ್ಲಿ ಬೆಳಯುವ ಆದರೆ ಆಫ್ರಿಕಾದ ಮೂಲವಿರುವ ಅಡಾನ್ಸೋನಿಯಾ ಡಿಜಿಟಾಟಾ ಲಿನ್ ಎಂಬ ಬೃಹತ್ ಮರದ ಬೀಜಗಳನ್ನು ಸಿದ್ದಿಗಳು ತಂದಿರಬಹದು ಎಂದು ಊಹಿಸಿದ್ದಾರೆ. [೩]
- 70 ರ ದಶಕದ ಜನಪ್ರಿಯ ಕನ್ನಡ ಚಿತ್ರ, ಭೂತಯ್ಯನ ಮಗ ಅಯ್ಯು, ಚಿತ್ರದಲ್ಲಿ ಸಿದ್ದಿ ಜನಾಂಗದ ಮಹಿಳೆ ಸಿದ್ದಿ ಬೈರ ಪಾತ್ರವನ್ನು ಮಾಡಿದ್ದಾಳೆ.
- ಒಂದು ಸುದ್ದಿಯ ಪ್ರಕಾರ ಬರಾಕ್ ಒಬಾಮಾ ಸಿದ್ದಿ ಜನಾಂಗದ ವಂಶವಾಹಿಗೆ ಸಂಬಂಧಿಪಟ್ಟವರಾಗಿದ್ದು, ಅವರು 2010 ರಲ್ಲಿ ಭಾರತಕ್ಕೆ ಭೇಟಿ ಕೊಟ್ಟಾಗ ಸಿದ್ದಿಗಳು ಅವರಿಗೆ ಒಂದು ಬಾಟಲಿ ಜೇನು ಕೊಡಲು ಬಯಸಿದ್ದರು.
ಗಮನಾರ್ಹ ಜನರು
[ಬದಲಾಯಿಸಿ]- ಕರ್ನಾಟಕ ಲೆಜಿಸ್ಲೇಟಿವ್ ಕೌನ್ಸಿಲ್ ಸದಸ್ಯ ಶಾಂತಾರಾಮ ಸಿದ್ದಿ,(ಭಾರತದಲ್ಲಿ ಶಾಸಕರಾದ ಆಫ್ರಿಕನ್ ಮೂಲದ ಮೊದಲ ವ್ಯಕ್ತಿ)
ಸಹ ನೋಡಿ
[ಬದಲಾಯಿಸಿ]
ಉಲ್ಲೇಖಗಳು
[ಬದಲಾಯಿಸಿ]- Sadiq Ali, Shanti. 1996. The African dispersal in the Deccan: from medieval to modern times. New Delhi: Orient Longman.
- An article in the Deccan Herald
- Empowering the Siddi community
ಬಾಹ್ಯ ಕೊಂಡಿಗಳು
[ಬದಲಾಯಿಸಿ]- ಕರ್ನಾಟಕದ ಭಾರತೀಯ-ಆಫ್ರಿಕನ್ ಬುಡಕಟ್ಟು
- ದಿ ಹಿಂದೂ : ಸೂತ್ರದ ವಿರುದ್ಧ ಹೋರಾಡುವುದು
- ಟೈಮ್ಸ್ ಆಫ್ ಇಂಡಿಯಾದಲ್ಲಿ ಸಿದ್ಧಿ ಸಂಗೀತದ ಉಲ್ಲೇಖ
- ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ಕೆ.ವಿ.ಸುಬ್ಬಣ್ಣನವರ ಸಿದ್ಧಿಗಳ ಜತೆಗಿನ ಕೆಲಸಗಳ ಉಲ್ಲೇಖ
- ಆದಿವಾಸಿಗಳಿಗೆ ಉಪಚರಿಸುವುದು - ಡೆಕ್ಕನ್ ಹೆರಾಲ್ಡ್
- ಹಿಂದೂ - ಸಂಗೀತ : ಅತೀಂದ್ರಿಯ ಮಧುರ ಸಂಜೆ
ಟಿಪ್ಪಣಿಗಳು
[ಬದಲಾಯಿಸಿ]- ↑ ೧.೦ ೧.೧ ೧.೨ Shah, Anish M.; et al. (15 July 2011). "Indian Siddis: African Descendants with Indian Admixture". American Journal of Human Genetics. 89 (1): 154–161. doi:10.1016/j.ajhg.2011.05.030. PMC 3135801. PMID 21741027.
- ↑ Vijay Prashad (2002), Everybody Was Kung Fu Fighting: Afro-Asian Connections and the Myth of Cultural Purity, Beacon Press, ISBN 978-0-8070-5011-8,
... since the captains of the African and Arab vessels bore the title Sidi (from Sayyid, or the lineage of the prophet Muhammad), the African settlers on the Indian mainland came to be called Siddis ...
- ↑ ೩.೦ ೩.೧ ೩.೨ ೩.೩ ೩.೪ Sadiq Ali, Shanti. 1996. The African dispersal in the Deccan: from medieval to modern times. New Delhi: Orient Longman.
- ↑ Vijay Prashad, Everybody Was Kung Fu Fighting: Afro-Asian Connections and the Myth of Cultural Purity, (Beacon Press: 2002), p.8
- ↑ Ronald Segal (2002), Islam's Black Slaves: The Other Black Diaspora, Macmillan, ISBN 978-0-374-52797-6,
... Ethiopians were particularly favored; the term Habashi or Habshi— from the Arabic word for Ethiopian – came to be applied to other Africans as well, and referred not only to the freed but to their descendants ...
- ↑ ೬.೦ ೬.೧ ೬.೨ ೬.೩ ೬.೪ Devika Sequeira. "Near forgotten, Siddis to meet". Deccan Herald. Archived from the original on 2007-09-29. Retrieved 2007-07-19.
- ↑ "The Siddhi Community". K.L.Kamat. Kamat's Potpourri. Retrieved 2007-07-20.
- ↑ Pinto, Jeanette (2006). "The African Native in Indiaspora". African and Asian Studies. 5 (3): 383–397. doi:10.1163/156920906779134786. ISSN 1569-2094.
- ↑ Bhatt, Purnima Mehta (2017-09-05). The African Diaspora in India. Routledge India. doi:10.4324/9781315148380. ISBN 978-1-315-14838-0.
- ↑ Drewal, Henry John (March 2013). "Soulful Stitching: Patchwork Quilts by Africans (Siddis) of India". African Arts (in ಇಂಗ್ಲಿಷ್). 46 (1): 6–17. doi:10.1162/AFAR_a_00039. ISSN 0001-9933.
- ↑ "Museum of the African Diaspora Presents "Soulful Stitching: Patchwork Quilts by Africans (Siddis) in India"". artdaily.cc. Retrieved 2020-05-13.
- ↑ "The Raja had surrounded his house with African bodyguards"
- ↑ Shah, AM; Tamang, R; Moorjani, P; Rani, DS; Govindaraj, P; Kulkarni, G; Bhattacharya, T; Mustak, MS; Bhaskar, LV (2011). "Indian Siddis: African Descendants with Indian Admixture". Am. J. Hum. Genet. 89 (1): 154–61. doi:10.1016/j.ajhg.2011.05.030. PMC 3135801. PMID 21741027.
- ↑ Mishra, Rakesh K. (2009). Chromosomes To Genome. I. K. International Pvt Ltd. p. 183. ISBN 978-9380026213.
- ↑ Narang, Ankita; et al. (15 July 2011). "Recent Admixture in an Indian Population of African Ancestry". American Journal of Human Genetics. 89 (1): 111–120. doi:10.1016/j.ajhg.2011.06.004. PMC 3135806. PMID 21737057.
- ↑ ೧೬.೦ ೧೬.೧ Beeranna Nayak Mogata. "Empowering the Siddi community". Deccan Herald. Archived from the original on 2007-09-29. Retrieved 2007-07-19.