ಶ್ಯಾಮ್ ಬೆನಗಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಶ್ಯಾಮ್ ಬೆನಗಲ್

ಹುಟ್ಟು ಹೆಸರು
ಹುಟ್ಟಿದ ದಿನ
ಹುಟ್ಟಿದ ಸ್ಥಳ
(1934-12-14) ೧೪ ಡಿಸೆಂಬರ್ ೧೯೩೪ (ವಯಸ್ಸು ೮೯)
ತ್ರಿಮುಲ್ಘೆರ್ರಿ, ಸಿಕಂದರಾಬಾದ್
ವೃತ್ತಿ ಚಿತ್ರ ನಿರ್ದೇಶಕ, ಸಂಭಾಷಣೆಕಾರ


ಭಾರತೀಯ ಚಲನಚಿತ್ರರಂಗದಲ್ಲಿ ಹೊಸ ಅಲೆಯನ್ನು ಸೃಷ್ಟಿಸಿದ ನಿರ್ದೇಶಕ ಶ್ಯಾಮ್ ಬೆನಗಲ್‌ ೨೦೦೭ರ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಬೆನಗಲ್ ಕುಟುಂಬ ಮೂಲತಃ ಕರ್ನಾಟಕದ ಕರಾವಳಿಯ ಪ್ರಸಿದ್ಧ ಬೆನಗಲ್‌ನಲ್ಲಿ ನೆಲೆಸಿದ್ದರು. ಅಲ್ಲಿಂದ ವಲಸೆ ಹೋಗಿದ್ದ ಸಿಕಂದರಾಬಾದಿನ ಅಲವಾಲಾದಲ್ಲಿ, ಶ್ಯಾಮ್ ಬೆನಗಲ್ ಡಿಸೆಂಬರ್ ೧೪,೧೯೩೪ ರಂದು ಜನಿಸಿದರು.

ವಿದ್ಯಾಭ್ಯಾಸ[ಬದಲಾಯಿಸಿ]

ಶ್ಯಾಮ್ ಬೆನಗಲ್ ಉಸ್ಮಾನಿಯಾ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದರು. ನಂತರ ಪುಣೆಯ ಎಫ್‌ಟಿಟಿಐನಲ್ಲಿ ಡಿಪ್ಲೊಮಾ ಪಡೆದರು. ತಮ್ಮ ೧೨ನೆಯ ವಯಸ್ಸಿನಿಂದಲೇ ತಂದೆಯವರ ಕ್ಯಾಮರಾ ಹಿಡಿದು ನಿರ್ದೇಶಕನಾಗುವ ಕನಸು ಕಂಡರು. ಅವರ ತಂದೆಯೂ ಒಬ್ಬ ಒಳ್ಳೆಯ ಕಲಾವಿದರು. ಫೋಟೋಗ್ರಾಫರ್ ಆಗಿದ್ದವರು. ಅವರು ಉಡುಪಿ ಜಿಲ್ಲೆಯ ಬೆನೆಗಲ್ ಗ್ರಾಮ ದ ಮೂಲದವರು. ಕೆಲಸಕ್ಕಾಗಿ ಹೈದರಾಬಾದ್‍ಗೆ ಹೋಗಿದ್ದರು. ೧೦ ಮಕ್ಕಳ ಪರಿವಾರ. ಚಿಕ್ಕ ಸಮಾರಂಭಗಳು, ಪಿಕ್ನಿಕ್ಗಳ ಸಮಾರಂಭಗಳನ್ನು ಚಿತ್ರಿಸಿಕೊಡುವ ಕೆಲಸಮಾಡುತ್ತಿದ್ದರು. ಶ್ಯಾಮ್‍ರ ೬ ವರ್ಷದ ಹುಟ್ಟು ಹಬ್ಬಕ್ಕೆ ಅವರ ತಂದೆ ಒಂದು ಮ್ಯಾಜಿಕ್ ಲ್ಯಾಂಟ್ರಿನ್, ಒಂದು ಪುಟಾಣಿ ಪ್ರೊಜೆಕ್ಟರ್ ಮತ್ತು ಕೆಲವು ಕಾರ್ಟೂನ್ ಚಿತ್ರಗಳನ್ನು ಬಹುಮಾನವಾಗಿ ಕೊಟ್ಟಿದ್ದರು. ಇದೇ ಅವರ ಚಿತ್ರಕಲಾಸಕ್ತಿ ಗರಿಗೆದರಲು ಆದ ಒಂದು ಬಹುಮುಖ್ಯ ಸನ್ನಿವೇಶವೆಂದು, ಈಗ ಶ್ಯಾಮ್ ಒಮ್ಮೊಮ್ಮೆ ಜ್ಞಾಪಿಸಿಕೊಳ್ಳುತ್ತಾರೆ.

ವೃತ್ತಿ ಜೀವನ[ಬದಲಾಯಿಸಿ]

೧೯೬೦ರಿಂದ ೧೯೬೬ರವರೆಗೆ ಮುಂಬಯಿಲಿಂಟಾಸ್ ಏಜೆನ್ಸಿ ಯಲ್ಲಿ ಜಾಹೀರಾತು ಕಾಪಿರೈಟರ್ ಮತ್ತು ನಿರ್ದೇಶಕರಾಗಿ ಕೆಲಸ ಮಾಡಿದರು. ಭಾಬಾ ಸಾಹೇಬ್ ಫೆಲೋಶಿಪ್ ಪಡೆದು,ಅಮೆರಿಕದಲ್ಲಿ ಕೆಲಸ ಮಾಡಿದರು. ಚಲನಚಿತ್ರ ನಿರ್ದೇಶನಕ್ಕೆ ಇಳಿಯುವ ಮುನ್ನ ಸಾಕ್ಷ್ಯಚಿತ್ರಗಳನ್ನು ತೆಗೆದು, ಪಳಗಿದ್ದರು. ಸುಮಾರು ೧,೫೦೦ ಜಾಹೀರಾತುಗಳು, ಹಾಗೂ ೪೫ ಸಾಕ್ಷ್ಯಚಿತ್ರಗಳನ್ನು ತೆಗೆದಿದ್ದಾರೆ. ಬಾಲಕ ಶ್ಯಾಮ್, ತನ್ನ ೧೨ ನೆಯ ವಯಸ್ಸಿನಲ್ಲೇ " ಛುಟ್ಟಿಯೋಂಮೆ ಮೌಜ್ ಮಸ್ತಿ ," ಎಂಬ ಕಿರು-ಚಿತ್ರವನ್ನು ತಯಾರಿಸಿದರು.

ಜಾಹಿರಾತಿನಿಂದ ಆರಂಭ[ಬದಲಾಯಿಸಿ]

ಶ್ಯಾಮ್ ಬೆನೆಗಲ್ ರವರ ಮೇಲೆ ಅತ್ಯಂತ ಪ್ರಭಾವಮಾಡಿದ, ಹಿಂದಿ ಚಿತ್ರಗಳು : ಗುರುದತ್ತರ ಪ್ಯಾಸಾ, ರಾಜ್ ಕಪೂರರ ಜಾಗ್ತೆ ರಹೊ, ಬಿಮಲ್ ರಾಯ್ ರವರ, 'ದೊ ಬಿಘಾ ಜಮೀನ್', ಸತ್ಯ ಜಿತ್ ರೇರವರ 'ಪಥೇರ್ ಪಾಂಚಾಲಿ', ಇತ್ಯಾದಿ ಚಿತ್ರಗಳು. ಹಿಂದಿ ಚಿತ್ರರಂಗದ ವ್ಯಾಪ್ತಿ ಬಲುದೊಡ್ಡದು. ಅತ್ಯಂತ ಗಂಭೀರವಾಗಿ, ಕಲಾತ್ಮಕವಾಗಿ, ಆಕರ್ಷಕವಾಗಿ, ತಮ್ಮ ಚಿತ್ರಗಳನ್ನು ಹೊರತಂದರು. ಸರಳ, ಹಾಗೂ ನೈಜ ಚಿತ್ರಣಗಳು ಹಾಗೂ ನಿರೂಪಣಾಶೈಲಿಗಳ ಅದ್ಭುತ ಸಂಗಮದಲ್ಲಿ ನಾವು ಅವರ ಯಶಸ್ಸಿನ ಗುಟ್ಟನ್ನು ಪತ್ತೆಹಚ್ಚಬಹುದು.

ಅಂಕುರ್ಚಲನಚಿತ್ರದ ನಿರ್ದೇಶನ[ಬದಲಾಯಿಸಿ]

ಶ್ಯಾಮ್ ಬೆನೆಗಲ್ ತಮ್ಮ ವಾಕ್ಚಿತ್ರಕ್ಕೆ ಪಾದಾರ್ಪಣೆ ಮಾಡಿದ್ದು, ಅಂಕುರ್ ಚಿತ್ರದಿಂದ. ಅನಂತನಾಗ್, ಶಬಾನಾ ಆಜ್ಮಿ , ಮತ್ತು ಸಾಧು ಮೆಹರ್ ನಟಿಸಿದ, ಈ ಹಿಂದಿ ಚಿತ್ರ, ಹೊಸಆಯಾಮ ನೀಡಿದ್ದಲ್ಲದೆ, ಅಂತರರಾಷ್ಟ್ರೀಯ ಖ್ಯಾತಿಯನ್ನು ತಂದು ಕೊಟ್ಟಿತು. ಭೂಮಾಲೀಕತ್ವದ ಅನೇಕ ಜನರು ಬಡವರನ್ನು, ಶೋಷಿತರನ್ನು ಕಾಡುವ ಚಿತ್ರವಾದ ಇದು, ಭೂಮಾಲೀಕರ ಮತ್ತು ಅವರ ಜೀವನದ ಒಳನೋಟಗಳನ್ನು ವಿಸ್ತರಿಸುತ್ತಾ ಸಾಗುತ್ತದೆ. ಅದನ್ನು ತಯಾರಿಸಿದಾಗ ಅವರಿಗೆ ೩೭ ವರ್ಷ. ಚಿತ್ರನಿರ್ಮಾಣಕಾರ್ಯದಲ್ಲಿ ಆತ್ಮ- ಸ್ಥೈರ್ಯವನ್ನು ತಂದುಕೊಟ್ಟ ಮೊದಲ ಚಿತ್ರ ಇದು. ಅಲ್ಲಿಂದ ಮುಂದೆ ಸುಮಾರು ೨೧ ಚಲನಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಕಲಾತ್ಮಕ ಹಾಗೂ ಕಮರ್ಷಿಯಲ್ ಎರಡರ ಸಮ್ಮಿಶ್ರಣದಲ್ಲಿ ಇವರ ಚಿತ್ರಗಳು ರೂಪುಗೊಂಡಿವೆ. ಸಮಾಜದ ಸಮಸ್ಯೆಗಳಿಗೆ ಕನ್ನಡಿ ಹಿಡಿಯುವ ಪ್ರಯತ್ನದೊಂದಿಗೆ,ಬದಲಾವಣೆಯ ತುಡಿತವೂ ಇವರ ಚಿತ್ರಗಳಲ್ಲಿ ಎದ್ದು ಕಾಣುತ್ತವೆ. ಇವರ ಕೆಲವು ಪ್ರಸಿದ್ಧ ಹಿಂದಿ ಚಿತ್ರಗಳು , ಕಲಿಯುಗ್, ಮಂಥನ್. ೧೯೮೬ರಲ್ಲಿ ಭಾರತೀಯ ರೈಲ್ವೆಗೆ ಯಾತ್ರಾ ಎಂಬ ಧಾರಾವಾಹಿ ನಿರ್ದೇಶಿಸಿದರು. ಇಳಾ_ಅರುಣ್ ಮತ್ತು ಇತರರು ನಟಿಸಿದ ಈ ಧಾರಾವಾಹಿ, ಬಹು ಮನ್ನಣೆಗೆ ಪಾತ್ರವಾಯಿತು.

೧೯೬೯ ರಲ್ಲಿ, ಭಾರತೀಯ ಹಿಂದಿ ಚಿತ್ರರಂಗದಲ್ಲಿ ಹೊಸ ಶೈಲಿ, ಹೊಸ ವಿನ್ಯಾಸಗಳು, ಹೊಸ ಆಶಯಗಳನ್ನು ಚಿತ್ರ ನಿರ್ಮಾಪಕರುಗಳು ಗುರುತಿಸಿ, ಅವುಗಳನ್ನು ಪರದೆಯಮೇಲೆ ತರಲು ಯತ್ನಿಸುತ್ತಿದ್ದರು. ಅನೇಕ ವಾರ್ತಾ-ಚಿತ್ರಗಳನ್ನೂ ತಯಾರಿಸಿದ ಅನುಭವಿ,೪ ದಶಕಗಳಕಾಲ ಹಿಂದಿ ಚಿತ್ರರಂಗದಲ್ಲಿ ಸೇವೆಮಾಡಿದ ಈ ದಿಗ್ದರ್ಶಕ, ಆರಿಸಿಕೊಂಡ ಕೆಲವು ಕಲಾವಿದರು, ಮುಂದೆ ಹೆಚ್ಚು ಹೆಚ್ಚು ಪ್ರವರ್ಧಮಾನಕ್ಕೆ ಬಂದರು. ಸ್ಮಿತಾ ಪಾಟೀಲ್, ನಾಸಿರುದ್ದೀನ್ ಶಾ, ಓಂ ಪುರಿ, ಕುಲ್ ಭೂಷಣ್ ಖರಬಂದಾ. ಹೊಸ ಅಲೆಯ ಚಿತ್ರನಿರ್ಮಾಪಕ, ನಿರ್ದೇಶಕರಿಗೆ ಮಾದರಿಯಂತಿದ್ದ ಬೆನೆಗಲ್ ರವರು, ಒಬ್ಬ ಕಲಾತ್ಮಕ, ಜನಪ್ರಿಯ ಮತ್ತು ನಿರ್ಮಾಪಕ ನಿರ್ದೇಶರೆಂದು ಹೆಸರುಮಾಡಿ, ಹಿಂದಿ- ಚಿತ್ರರಂಗಕ್ಕೆ ಪಾದಾರ್ಪಣೆಮಾಡಿದ ಕೆಲವೇ ಸಮಯದಲ್ಲಿ ತಮ್ಮ ಛಾಪನ್ನು ಚಿತ್ರರಂಗದಮೇಲೆ ಒತ್ತಿಬಿಟ್ಟರು.ಮುಂದೆ 'ಚರಣದಾಸ್ ಚೋರ್,' ಎಂಬ ಎಂಬ ಮಕ್ಕಳ ಚಿತ್ರ ತಯಾರಿಸಿದರು. 'ನಿಶಾಂತ್', 'ಭೂಮಿಕಾ', 'ಮಂಥನ್', 'ಜುನೂನ್', 'ಕಲಿಯುಗ್', 'ಆರೋಹಣ್', 'ಮಂಡಿ', 'ತ್ರಿಕಾಲ್', ಮೆಗಾ ಕಿರುತೆರೆ ಧಾರಾವಾಹಿ 'ಯಾತ್ರಾ' ಮರೆಯಲಾರದ ಚಿತ್ರಗಳು. ವಾಸ್ತವಿಕತೆ, ಮತ್ತು ವೈವಿಧ್ಯತೆ ಅವರ ಚಿತ್ರಗಳಲ್ಲಿ ಎದ್ದು ತೋರುತ್ತವೆ. ಪ್ರಾದೇಶಿಕತೆಯನ್ನು ಅವರಷ್ಟು ಗಾಢವಾಗಿ ಚಿತ್ರಿಸುವವರು ಕಡಿಮೆ. ಶಿಕ್ಷಕನ ಕಣ್ಣಿನಲ್ಲಿ, ಭಾರತದ ಗ್ರಾಮೀಣ ಚಿತ್ರಣವನ್ನು, ನಿಶಾಂತ್ ಚಿತ್ರದಲ್ಲಿ ಕಾಣುತ್ತೇವೆ. ಮಂಥನ್ ಚಿತ್ರ, ಗುಜರಾತಿನ ಹಾಲಿನ ಕ್ರಾಂತಿಯ ಹಿನ್ನೆಲೆಯಲ್ಲಿ ಕಂಡುಕೊಂಡ ಕಟುಸತ್ಯಗಳ ನಿರೂಪಣೆಯಾಗಿದೆ. ಒಬ್ಬ ನಟಿಯು ತನ್ನ ಜೀವನದಲ್ಲಿ ಆತ್ಮಹತ್ಯೆಗೆ ಪ್ರಯತ್ನಿಸುತ್ತಾಳೆ. ಆ ತಾರೆಯ ಜೀವನವನ್ನು ಮರುಸೃಷ್ಟಿಮಾಡುವ ಪ್ರಯತ್ನ, 'ಭೂಮಿಕಾ' ದಲ್ಲಿ ನಿಜಕ್ಕೂ ಸೊಗಸಾಗಿದೆ. ಇನ್ನುಳಿದ ಶ್ಯಾಮ್ ಬೆನೆಗಲ್ ರ ಚಿತ್ರಗಳನ್ನು ಬಲ್ಲವರು, ದೃಶ್ಯ ಕಾವ್ಯಗಳೆಂದು ಬಣ್ಣಿಸುತ್ತಾರೆ.

ದೂರದರ್ಶನದ ಧಾರಾವಾಹಿ "ಭಾರತ್ ಎಕ್ ಖೋಜ್"[ಬದಲಾಯಿಸಿ]

೧೯೮೮ರಲ್ಲಿ ಜವಾಹರಲಾಲ್ ನೆಹರು ಅವರ "ಡಿಸ್ಕವರಿ ಆಫ್ ಇಂಡಿಯಾ" ಪುಸ್ತಕವನ್ನು ಆಧರಿಸಿದ "ಭಾರತ್ ಏಕ್ ಖೋಜ್" ಎಂಬ ಧಾರಾವಾಹಿಯನ್ನು ನಿರ್ದೇಶಿಸಿದರು. ಅತ್ಯಂತ ಪ್ರಭಾವಿ ದೃಶ್ಯ ಮತ್ತು ಪ್ರಭಾವೀ ವಿವರಣೆಗಳಿಂದಾಗಿ ಎಲ್ಲ ವರ್ಗದ ಪ್ರೇಕ್ಷಕರಿಗೆ ಆನಂದವನ್ನುಂಟುಮಾಡಿತ್ತು.ಇದು ಅತ್ಯಂತ ಯಶಸ್ವೀ ಪ್ರಯೋಗಗಳಲ್ಲೊಂದಾಗಿತ್ತು. ಭಾರತೀಯ ಫಿಲಂ ಮತ್ತು ಟೆಲಿವಿಷನ್ ಇನ್ಸ್ಟಿಟ್ಯೂಟ್ಗೆ ಎರಡುಬಾರಿ ಅಧ್ಯಕ್ಷರಾಗಿದ್ದ 'ಶ್ಯಾಂ ಬೆನೆಗಲ್', ಈಗ ಶ್ರೀಲಂಕಾ ಸರ್ಕಾರದ ನೆರವಿನಿಂದ 'ಗೌತಮಬುದ್ಧ' ಚಿತ್ರದ ನಿರ್ಮಾಣದಲ್ಲಿ ತಮ್ಮ ಸಮಯವನ್ನು ವಿನಿಯೋಗಿಸುತ್ತಿದ್ದಾರೆ. ಭಾರತೀಯ ಚಿತ್ರರಂಗಕ್ಕೆ ಅವರು ಸಲ್ಲಿಸಿದ ಸೇವೆಗಾಗಿ ಸನ್ ೨೦೦೭ ರ ಅಕ್ಟೋಬರ್ ತಿಂಗಳಿನಲ್ಲಿ ಭಾರತಸರಕಾರವು ಭಾರತದ ಅತ್ಯುನ್ನತ 'ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ'ಯನ್ನು ಪ್ರ್ದಾನ ಮಾಡಿತು.

ಪ್ರಶಸ್ತಿಗಳು ಹಾಗೂ ಫೆಲೋಶಿಪ್ ಗಳು[ಬದಲಾಯಿಸಿ]