ವಿಷಯಕ್ಕೆ ಹೋಗು

ರೋನಾಲ್ಡ್ ಫಿಶರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
೧೯೧೩ ರಲ್ಲಿ ಫಿಶರ್

ರೋನಾಲ್ಡ್ ಐಲ್ಮರ್ ಫಿಶರ್ (1890-1962) ಇಂಗ್ಲೆಂಡಿನಲ್ಲಿ ಜನಿಸಿ (17-2-1890) ಆಸ್ಟ್ರೇಲಿಯಾದಲ್ಲಿ ಮಡಿದ (29-7-1962) ಗಣಿತವಿದ. ಸಂಖ್ಯಾಕಲನವಿಜ್ಞಾನ, ಜೀವಮಾಪನ (ಬಯೊಮೆಟ್ರಿ) ಮತ್ತು ತಳಿವಿಜ್ಞಾನ ಕ್ಷೇತ್ರಗಳಲ್ಲಿ ಕೂಡ ಕೊಡುಗೆ ನೀಡಿದ್ದಾನೆ.[]

ಆರಂಭಿಕ ಜೀವನ

[ಬದಲಾಯಿಸಿ]

ಚಿಕ್ಕಂದಿನಿಂದಲೂ ಇವನಿಗೆ ಗಣಿತದಲ್ಲಿ ಅಭಿರುಚಿ. ಹ್ಯಾರೊದಲ್ಲಿ ಶಾಲೆಗೆ ಹೋಗುವಾಗಲೂ, ಕೇಂಬ್ರಿಜಿನಲ್ಲಿ ಕೇಸ್ ಕಾಲೇಜಿನಲ್ಲಿ ಕಲಿಯುವಾಗಲೂ ಇದನ್ನೇ ಐಚ್ಛಿಕ ವಿಷಯವಾಗಿ ತೆಗೆದುಕೊಂಡ. 1912 ರಲ್ಲಿ ರ‍್ಯಾಂಗ್ಲರ್ ಆಗಿ ಪದವಿ ಗಳಿಸಿದ.[] ಇಲ್ಲಿ ಇವನು ಖಗೋಳ, ಭೌತ, ಜೀವ ಮತ್ತು ತಳಿವಿಜ್ಞಾನಗಳನ್ನು ಕಲಿತ.

ಚಿಕ್ಕಂದಿನಲ್ಲಿಯೇ ಇವನಿಗೆ ದೃಷ್ಟಿದೋಷ ಬಡಿದು ಇವನ ಚಟುವಟಿಕೆಗಳನ್ನು ಸೀಮಿತಗೊಳಿಸಿತ್ತು. ವಿದ್ಯಾರ್ಥಿ ದಿನಗಳಿಂದಲೇ ಈತನಿಗೆ ವೈದ್ಯರು ಕೃತಕ ಬೆಳಕಿನಲ್ಲಿ ಓದಬಾರದೆಂದು ವಿಧಿಸಿದ್ದರು. ಹೀಗಾಗಿ ಇವನು 1914 ರಲ್ಲಿ ಆರಂಭವಾದ ಮಹಾಯುದ್ಧದಲ್ಲಿ ಸೈನ್ಯ ಪಡೆಯನ್ನು ಸೇರಲು ಅನರ್ಹನಾಗಿದ್ದ.[]

ವೃತ್ತಿಜೀವನ

[ಬದಲಾಯಿಸಿ]

ಈ ಕಾಲದಲ್ಲಿ ಶಿಕ್ಷಕ ವೃತ್ತಿಯನ್ನು ಮಾಡಿ ವಿಷಯಗಳನ್ನು ಚೆನ್ನಾಗಿ ಮನನ ಮಾಡಿದ. ಹೀಗೆ ನ್ಯೂನತೆಯೂ ಈತನ ವಿಚಾರದಲ್ಲಿ ಅದೃಷ್ಟವಾಗಿಯೇ ಪರಿಣಮಿಸಿತು. 1919 ರಲ್ಲಿ ರೋಧಾಮ್‌ಸ್ಟೆಡ್ ಕೃಷಿ ಸಂಶೋಧನ ಕೇಂದ್ರದಲ್ಲಿ ಸಂಖ್ಯಾಕಲನವಿದನಾಗಿ ಸೇರಿಕೊಂಡ. ಮುಂದಿನ ಹದಿನಾಲ್ಕು ವರ್ಷಗಳಲ್ಲಿ ಕೃಷಿವಿಜ್ಞಾನದ ಎಲ್ಲ ವಿಭಾಗಗಳಲ್ಲಿಯೂ ಸಂಖ್ಯಾಕಲನವನ್ನು ಅಳವಡಿಸಲು ಹೆಣಗಾಡಿದ.[] ಇಂದು ಸಂಖ್ಯಾಕಲನದ ಸಹಾಯದಿಂದ ಉತ್ತಮ ತಳಿ, ಉತ್ತಮ ಗೊಬ್ಬರ ಮತ್ತು ಉತ್ತಮ ಬೆಳೆ ಪಡೆಯುತ್ತಿದ್ದರೆ ಅವು ಫಿಶರನ ಸಾಧನೆಗಳ ಫಲ. ಕ್ಷೇತ್ರವಿಭಾಗಗಳಲ್ಲಿ ಎರಡು ತಳಿಗಳ ಪೈರನ್ನು ನೆಟ್ಟರೆ ಬೆಳೆಗಳ ವ್ಯತ್ಯಾಸ ತಳಿ ವ್ಯತ್ಯಾಸದಿಂದ ಎಷ್ಟು ಆಯಿತು ಮತ್ತು ಕ್ಷೇತ್ರವಿಭಾಗಗಳ ಫಲವತ್ತತೆಯ ವ್ಯತ್ಯಾಸದಿಂದ ಎಷ್ಟು ಆಯಿತು ಎಂಬುದಾಗಿ ವಿಶ್ಲೇಷಿಸಿ ಚಲನೀಯ ವಿಶ್ಲೇಷಣೆ ಎಂಬ ವಿಧಾನವನ್ನು ಜನಪ್ರಿಯಗೊಳಿಸಿದ. ಕ್ಷೇತ್ರಪ್ರಯೋಗ ಮಾಡುವಾಗ ಕ್ಷೇತ್ರವಿಭಾಗಗಳಿಗೆ ವಿವಿಧ ಜಾತಿಯ ಬೀಜಗಳನ್ನು ಯಾದೃಚ್ಛಿಕವಾಗಿ ಹಂಚಿದರೆ ಬೀಜಗಳ ಪರಿಣಾಮದ ಬಗ್ಗೆ ತರ್ಕಬದ್ಧ ತೀರ್ಮಾನಗಳನ್ನು ಕೈಗೊಳ್ಳಲು ಸಾಧ್ಯವಿದೆ ಎಂದು ತೋರಿಸಿ ಯಾದೃಚ್ಛಿಕ ವಿಧಾನವನ್ನು ಬಳಕೆಗೆ ತಂದ. ಒಂದೇ ಜಾತಿಯ ಬೀಜಗಳನ್ನು ಎರಡು ಅಥವಾ ಹೆಚ್ಚು ಕ್ಷೇತ್ರ ವಿಭಾಗಗಳಲ್ಲಿ ಬಿತ್ತುವ ಪದ್ಧತಿ, ಒಂದೇ ರೀತಿಯ ಮಣ್ಣಿನ ಗುಣಗಳುಳ್ಳ ಕ್ಷೇತ್ರ ವಿಭಾಗಗಳನ್ನು ಕೂಡಿಸಿ ಒಂದು ಕ್ಷೇತ್ರಭಾಗವನ್ನು ರಚಿಸುವ ಔಚಿತ್ಯ ಇತ್ಯಾದಿಗಳನ್ನು ಕೃಷಿವಿಜ್ಞಾನದಲ್ಲಿ ಮಾತ್ರವಲ್ಲದೆ ವ್ಯಾಪಾರ, ಉದ್ಯೋಗ, ಔಷಧಿ, ಆರೋಗ್ಯ, ವಿದ್ಯೆ, ಮನಶ್ಶಾಸ್ತ್ರ ಮುಂತಾದ ವಿಜ್ಞಾನಗಳಲ್ಲಿಯೂ ಪ್ರಯೋಗಗಳಿಂದ ತರ್ಕಬದ್ಧ ತೀರ್ಮಾನಗಳನ್ನು ಕೈಗೊಳ್ಳಲು ಉಪಯೋಗಿಸುವರು. ಇವನು ಬರೆದ ಪ್ರಯೋಗಗಳ ಆಲೇಖ್ಯ ಎಂಬ ಪುಸ್ತಕ ಇಂದಿಗೂ ಕೃಷಿವಿಜ್ಞಾನಿಗಳ ಪವಿತ್ರ ಗ್ರಂಥವಾಗಿದೆ. ಇವನು ರೊಧಾಮ್‌ಸ್ಟೆಡನ್ನು ಪ್ರಪಂಚದ ಅತ್ಯಂತ ಶ್ರೇಷ್ಠ ಕೃಷಿಸಂಖ್ಯಾಕಲನ ತರಬೇತಿ ಕೇಂದ್ರವಾಗಿ ಬೆಳೆಸಿದ.

1933 ರಲ್ಲಿ ಫಿಶರ್ ಸುಜನನ ವಿಜ್ಞಾನದ (ಯೂಜೆನಿಕ್ಸ್) ಪ್ರಾಚಾರ್ಯನಾಗಿ ಯೂನಿವರ್ಸಿಟಿ ಕಾಲೇಜಿನಲ್ಲಿ (ಲಂಡನ್) ನೇಮಕಗೊಂಡ.[] ತಳಿವಿಜ್ಞಾನದ ಮತ್ತು ಸಂಖ್ಯಾಕಲನ ವಿಧಾನಗಳ ಮೂಲತತ್ತ್ವಗಳ ಬಗ್ಗೆ ಸತತವಾಗಿ ಲೇಖನಗಳನ್ನು ಬರೆದ. 1934 ರಲ್ಲಿ ರಾಯಲ್ ಸೊಸೈಟಿಯ ಫೆಲೊ ಆಗಿ ಚುನಾಯಿತನಾದ. 1948 ರಲ್ಲಿ ಡಾರ್ವಿನ್ ಪಾರಿತೋಷಿಕವನ್ನೂ 1955 ರಲ್ಲಿ ಕೊಪ್ಲಿ ಪಾರಿತೋಷಿಕವನ್ನೂ ಪಡೆದ. 1952 ರಲ್ಲಿ ನೈಟ್‌ಹುಡ್ (ಸರ್) ಗೌರವ ದೊರೆಯಿತು. 1952 ರಿಂದ 1954 ರ ತನಕ ರಾಯಲ್ ಸ್ಟ್ಯಾಟಿಸ್ಟಿಕಲ್ ಸೊಸೈಟಿಯ ಅಧ್ಯಕ್ಷನಾಗಿದ್ದ.

ಪುಸ್ತಕಗಳು ಮತ್ತು ಲೇಖನಗಳು

[ಬದಲಾಯಿಸಿ]

ಫಿಶರ್ ಆರು ಪುಸ್ತಕಗಳನ್ನೂ, ಸುಮಾರು ನಾಲ್ಕುನೂರು ಲೇಖನಗಳನ್ನೂ ಬರೆದಿದ್ದಾನೆ. ಇವನ ಲೇಖನಗಳನ್ನು ಮುಖ್ಯವಾಗಿ ಮೂರು ವಿಭಾಗಗಳಾಗಿ ಮಾಡಬಹುದು.

  1. ಸಂಖ್ಯಾಕಲನವಿಜ್ಞಾನವನ್ನು ಕೃಷಿ ಪ್ರಯೋಗಗಳಲ್ಲಿ ಉಪಯೋಗಿಸುವುದು.
  2. ಸಂಖ್ಯಾಕಲನವಿಜ್ಞಾನದ ವಿಧಾನಗಳ ಗಣಿತೀಯ ನೆಲೆಯನ್ನು ಭದ್ರಪಡಿಸುವುದು.
  3. ತಳಿವಿಜ್ಞಾನವನ್ನು ಸಂಖ್ಯಾಕಲನಾತ್ಮಕವಾಗಿ ಅಭ್ಯಸಿಸುವುದು.

ಮೊದಲನೆಯ ವಿಭಾಗದ ಲೇಖನಗಳ ಬಗ್ಗೆ ಈಗಾಗಲೇ ಹೇಳಿದುದಾಗಿದೆ. ಎರಡನೆಯ ಮತ್ತು ಮೂರನೆಯ ವಿಭಾಗದ ಲೇಖನಗಳೂ ಅಪಾರ. ನಿದರ್ಶಕಗಳಿಂದ ಪಡೆದ ಅಂದಾಜಿಕಗಳು ಆ ನಿದರ್ಶಕಗಳು ವ್ಯತ್ಯಾಸವಾದಂತೆ ವ್ಯತ್ಯಾಸವಾಗುತ್ತವೆ ಮತ್ತು ಒಂದು ವಿತರಣೆ ಹೊಂದಿರುತ್ತವೆ. ವಿವಿಧ ಅಂದಾಜಿಕಗಳಿಗೆ ನಿದರ್ಶಕ ವಿತರಣೆಯನ್ನು ಫಿಶರ್ ಕಂಡುಹಿಡಿದ. ಹಿಂಚಲನೆಯ ಸೂಚಿ (ರಿಗ್ರೆಶನ್ ಕೋಎಫಿಶೆಂಟ್), ಸಹಸಂಬಂಧ ಸೂಚಿ, ಆಂಶಿಕ ಮತ್ತು ಗುಣಿತ ಸಹಸಂಬಂಧ ಸೂಚಿಗಳ ಎರಡು ವಿಚಲನೆಗಳ ಪ್ರಮಾಣ, ಇತ್ಯಾದಿ, ಅನೇಕ ಅಂದಾಜಿಕಗಳ ವಿತರಣೆಗಳನ್ನು ಕಂಡುಹಿಡಿದ. ಒಂದು ಅಂದಾಜಿಕ (ಎಸ್ಟಿಮೇಟ್) ಯಾವ ಗುಣಗಳನ್ನು ಪಡೆದಿರಬೇಕು ಎಂದು ವಿವೇಚಿಸಿ, ಗರಿಷ್ಠ ಪ್ರಾಯಿಕತೆಯ ವಿಧಾನವನ್ನು ಪ್ರತಿಪಾದಿಸಿದ. ಸಾಂಗತ್ಯ (ಕನ್ಸಿಸ್ಟೆನ್ಸಿ), ದಕ್ಷತೆ (ಎಫಿಶಿಯನ್ಸಿ), ಪರ್ಯಾಪ್ತಿ (ಸಫಿಶಿಯನ್ಸಿ) ಮುಂತಾದ ಗುಣಗಳನ್ನು ಮಂಡಿಸಿ ಅಭ್ಯಸಿಸಿದ. ಒಂದು ಅಂದಾಜಿಕ ಅಥವಾ ನಿದರ್ಶಕ ಕೊಡುವ ಮಾಹಿತಿಯನ್ನು ಸಂಖ್ಯಾಕಲನಾತ್ಮಕವಾಗಿ ಕ್ರೋಡೀಕರಿಸಿದ. ಕಾರ್ಲ್ ಪಿಯರ್ಸನ್ ಕಂಡುಹಿಡಿದ ಸ್ಟ್ಯಾಟಿಸ್ಟಿಕನ್ನು ಬೇರೆ ಬೇರೆ ಸಂದರ್ಭಗಳಲ್ಲಿ ಅಳವಡಿಸಲು ಸಹಾಯವಾಗುವಂತೆ ಯುಕ್ತ ಸಂಖ್ಯಾಕಲನಾತ್ಮಕ ಆಧಾರವನ್ನು ಸಾಧಿಸಿದ. ಸ್ಟ್ಯಾಟಿಸ್ಟಿಕಲ್ ಮೆಥಡ್ಸ್ ಫಾರ್ ರಿಸರ್ಚ್ ವರ್ಕರ್ಸ್ ಎಂಬ ಫಿಶರ್ ರಚಿತ ಪುಸ್ತಕ ಸಂಖ್ಯಾಕಲನವಿಜ್ಞಾನದ ತಳಪಾಯ ಹಾಕಿದೆ.[] ಇತನ ಶಿಷ್ಯರ ಪೈಕಿ ಭಾರತದ ಪಿ.ಸಿ. ಮಹಾಲನೋಬಿಸ್, ಎಸ್. ಎನ್. ರೋಯ್, ಸಿ.ಆರ್. ರಾವ್,[] ಇಂಗ್ಲೆಂಡಿನ ವಿಶಾರ್ಟ್ ಮತ್ತು ಅಮೆರಿಕದ ಹೋಟೆಲ್ಲಿಂಗ್ ಪ್ರಮುಖರು. ಇವರಲ್ಲದೆ ಇನ್ನೂ ಅನೇಕರು ಫಿಶರನ ಕಾರ್ಯಗಳನ್ನು ಮುಂದುವರಿಸಿಕೊಂಡು ಬಂದಿದ್ದಾರೆ.

ಮೆಂಡಲನ ತತ್ತ್ವ ಮತ್ತು ತಳಿವಿಜ್ಞಾನ ಫಿಶರನ ಪ್ರೀತಿಯ ವಿಷಯಗಳು. ಸಹಜ ಆಯ್ಕೆಯಿಂದ ಮಾನವ ಹೇಗೆ ವಿಕಾಸ ಹೊಂದುವನು ಎಂದು ಪ್ರತಿಪಾದಿಸಿ ಡಾರ್ವಿನ್ನನ ವಾದಗಳನ್ನು ಸಂಖ್ಯಾಕಲನಾತ್ಮಕವಾಗಿ ಸಮರ್ಥಿಸಲು ಸಾಧ್ಯವಾಗುವಂತೆ ಮಾಡಿದ. ಮಿಶ್ರತಳಿಗಳನ್ನು ಉತ್ಪಾದಿಸುವ ವಿಧಾನಗಳನ್ನು ಶಾಸ್ತ್ರೀಯವಾಗಿ ವಿವೇಚಿಸಿದ.

ಉಲ್ಲೇಖಗಳು

[ಬದಲಾಯಿಸಿ]
  1. "Sir Ronald Aylmer Fisher". Encyclopaedia Britannica. 25 July 2023.
  2. The Historical Register of the University of Cambridge, Supplement, 1911–1920
  3. Box, Joan Fisher; Edwards, A. W. F. (2005). "Fisher, Ronald Aylmer". F isher, R onald a ylmer. Encyclopedia of Biostatistics. John Wiley & Sons. doi:10.1002/0470011815.b2a17045. ISBN 978-0470849071..
  4. Russell, E. John Russell. "Sir Ronald Fisher". MacTutor History of Mathematics archive. Retrieved 23 August 2017.
  5. Department History, Department of Statistics, University College London.
  6. Conniffe, Denis (1991). "R.A. Fisher and the development of statistics - a view in his centerary year". Journal of the Statistical and Social Inquiry Society of Ireland. 26 (3): 55–108. hdl:2262/2764. ಟೆಂಪ್ಲೇಟು:ProQuest.
  7. ರೋನಾಲ್ಡ್ ಫಿಶರ್ at the Mathematics Genealogy Project


ಹೊರಗಿನ ಕೊಂಡಿಗಳು

[ಬದಲಾಯಿಸಿ]