ಮಿಂಚುಹುಳ
ಮಿಂಚುಹುಳ | |
---|---|
ಫ಼ೋಟೂರಿಸ್ ಲೂಸಿಕ್ರೆಸೆನ್ಸಿ[೪] | |
ಲ್ಯಾಂಪಿರಿಸ್ ನಾಕ್ಟಿಲ್ಯೂಕಾ ಕೂಡುತ್ತಿರುವುದು | |
Scientific classification | |
ಕ್ಷೇತ್ರ: | Eukaryota |
ಸಾಮ್ರಾಜ್ಯ: | Animalia |
ವಿಭಾಗ: | ಆರ್ಥ್ರೊಪೋಡಾ |
ವರ್ಗ: | ಇನ್ಸೆಕ್ಟಾ |
ಗಣ: | ಕೋಲಿಯಾಪ್ಟೆರಾ |
ಉಪಗಣ: | ಪಾಲಿಫ಼ೇಗಾ |
ಕೆಳಗಣ: | ಎಲ್ಯಾಟರಿಫ಼ಾರ್ಮಿಯಾ |
ಮೇಲ್ಕುಟುಂಬ: | ಎಲ್ಯಾಟರಾಯ್ಡೀ |
ಕುಟುಂಬ: | ಲ್ಯಾಂಪಿರಿಡೀ Rafinesque, 1815 |
ಉಪಕುಟುಂಬಗಳು | |
ಆಮಿಡೆಟಿನೀ[೧] ಕುಲಗಳು ತಿಳಿಯದ ಸಂಬಂಧಗಳ:[೧] |
ಮಿಂಚುಹುಳು ಲ್ಯಾಂಪಿರಿಡೆ ಎಂಬ ಕೀಟಗಳ, ಕೊಲಿಯೋಪ್ಟೆರ ಕುಟುಂಬಕ್ಕೆ ಸೇರುತ್ತದೆ. ಇವುಗಳು ರೆಕ್ಕೆಯುಳ್ಳ ಜೀರುಂಡೆಗಳು. ಮಿಂಚುಹುಳುಗಳು ತಮ್ಮಿಂದ ಉಂಟಾಗುವ ಬೆಳಕನ್ನು ಸಂಗಾತಿಯನ್ನು ಸೆಳೆಯಲು ಅಥವಾ ಬೇಟೆಯನ್ನು ಹಿಡಿಯಲು ಬಳಸುತ್ತವೆ. ಮಿಂಚು ಹುಳುಗಳು ತಣ್ಣನೆಯ ಬೆಳಕು ಉತ್ಪತ್ತಿ ಮಾಡುತ್ತವೆ. ಈ ಬೆಳಕು ಯಾವುದೇ ಅತಿಗೆಂಪು ಅಥವಾ ನೇರಳಾತೀತ ಆವರ್ತನಗಳಲ್ಲಿ ಇರುವುದಿಲ್ಲ. ರಾಸಾಯನಿಕವಾಗಿ ಇದರ ಹೊಟ್ಟೆಯ ಕೆಳಭಾಗದಿಂದ ಉತ್ಪತ್ತಿಯಾಗುವ ಬೆಳಕು ಹಳದಿ, ಹಸಿರು ಅಥವಾ ತಿಳಿಗೆಂಪಾಗಿರುತ್ತದೆ, ಹಾಗು ಇವು ೫೧೦ ರಿಂದ ೬೭೦ ನ್ಯಾನೋಮೀಟರ್ ತರಂಗಾಂತರವನ್ನು ಹೊಂದಿರುತ್ತವೆ. ಸುಮಾರು ೨೦೦೦ ಜಾತಿಯ ಮಿಂಚುಹುಳುಗಳು ಸಮಶೀತೋಷ್ಣ ಮತ್ತು ಉಷ್ಣವಲಯದಲ್ಲಿ ಕಂಡುಬರುತ್ತವೆ. ಮಿಂಚುಹುಳುಗಳ ಮರಿಗಳು ಬೆಳಕನ್ನು ಹೊರಸೂಸುವುದರಿಂದ ಅವನ್ನು ಮಿಣುಕುಹುಳು ಎಂದು ಯುರೇಶಿಯಾದಲ್ಲಿ ನಿರ್ದಿಷ್ಟವಾಗಿ ಕರೆಯಲಾಗುತ್ತದೆ. ಅನೇಕ ಜಾತಿಗಳಲ್ಲಿ ಗಂಡು ಮಿಂಚುಹುಗಳು ಹಾಗು ಹೆಣ್ಣು ಮಿಂಚುಹುಗಳು ಎರಡೂ ಹಾರುತ್ತವೆ, ಆದರೆ ಕೆಲವು ಪ್ರಭೇಧಗಳಲ್ಲಿ ಹೆಣ್ಣು ಮಿಂಚುಹುಳುಗಳು ಹಾರಲಾರವು.
ಮಿಣುಕುಹುಳುಗಳ ಪೈಕಿ ಅತ್ಯಂತ ಪ್ರಸಿದ್ಧವಾದ ಪ್ರಭೇದಗಳೆಂದರೆ ಲ್ಯಾಂಪೈರಿಡೀ ಕುಟುಂಬದ ಲ್ಯಾಂಪೈರಿಸ್ ನಾಕ್ಟಲ್ಯೂಕ, ಫಾಸ್ಫೀನಸ್ ಹೆಮಿಪ್ಟರಸ್, ಫ಼ೋಟಿನಸ್, ಫ಼ೋಟ್ಯೂರಿಸ್, ಫಾಸಿಸ್ ಸ್ಪೆಂಡಿಡ್ಯುಲ, ಲ್ಯಾಂಪ್ರೋಪೋರಸ್ ಟೆನಿಬ್ರೋಸಸ್ (ಇದು ಭಾರತ ಹಾಗೂ ಶ್ರೀಲಂಕಾಗಳಲ್ಲಿ ಕಾಣದೊರೆಯುತ್ತದೆ) ಹಾಗೂ ಇಲ್ಯಾಟರಿಡೀ ಕುಟುಂಬಕ್ಕೆ ಸೇರಿದ ಪೈರೊಫ಼ೋರಸ್ ಜಾತಿಯ ಪೆಲ್ಯೂಸೆನ್ಸ್, ಲೂಮಿನೋಸ, ನಾಕ್ಟಿಲ್ಯೂಕಸ್ ಮತ್ತು ಫಾಸ್ಫಾರೆಸೆನ್ಸ್ ಪ್ರಭೇದಗಳು.
ಆಹಾರ ಪದ್ಧತಿ
[ಬದಲಾಯಿಸಿ]ಮಿಂಚುಹುಳುಗಳು ತಮ್ಮ ಮರಿಗಳಿಗೆ ಎಲ್ಲಿ ಅತಿಹೆಚ್ಚು ಆಹಾರ ಸಿಗುತ್ತದೆಯೋ ಅಂದರೆ ಉದಾಹರಣೆಗೆ ಜವುಗು ಭೂಮಿಯಲ್ಲಿ ಅಥವಾ ಗಿಡಮರ ತುಂಬಿದ ಪ್ರದೇಶದಲ್ಲಿ ಕಂಡುಬರುತ್ತವೆ. ಹಲವು ಜಾತಿಯ ಮಿಂಚುಹುಳುಗಳು ಒಳ್ಳೆಯ ಪರಭಕ್ಷಕಗಳು. ಕೆಲವು ಮಿಂಚುಹುಳುಗಳು ತಮ್ಮ ಬೇಟೆಯನ್ನು ನೇರವಾಗಿ ಜೀರ್ಣಿಸಿಕೊಳ್ಳಲಾರವು. ಆದ್ದರಿಂದ ಅವು ಜೀರ್ಣಕಾರಿ ದ್ರವಗಳನ್ನು ತಲುಪಿಸುವ ತೋಡುಳ್ಳ ಮ್ಯಾಂಡಿಬಲ್‍ಗಳ ಮೂಲಕ ತಮ್ಮ ಬೇಟೆಗಳಿಗೆ ವಿಷಕಾರಿ ದ್ರವವನ್ನು ತಲುಪಿಸುತ್ತವೆ. ಆದರೆ ವಯಸ್ಕ ಮಿಂಚುಹುಳುಗಳ ಆಹಾರ ಪದ್ಧತಿ ಬದಲಾಗುತ್ತದೆ. ಅವು ಸಸ್ಯ ಪರಾಗ ಅಥವಾ ಮಕರಂದ ಆಹಾರವನ್ನು ಸೇವಿಸುತ್ತವೆ. ಇನ್ನು ಯುರೋಪಿನಲ್ಲಿ ಕಂಡುಬರುವ ಕೆಲವು ಮಿಂಚು ಹುಳು ಜೀರುಂಡೆಗಳು, ಉದಾಹರಣೆಗೆ ಲಾಂಪಿರಿಸ್ ನೊಕ್ಟಿಲ್ಯೂಕಾಗಳು ಬಾಯಿಯನ್ನು ಹೊಂದಿರುವುದಿಲ್ಲ. ಕೆಲವು ವಯಸ್ಕ ಮಿಂಚುಹುಳುಗಳು ಪುಷ್ಪ ಪರಾಗವನ್ನು, ಇಬ್ಬನಿಯ ಸಣ್ಣಹನಿ ಹಾಗು ಮಕರಂದವನ್ನು ಹೀರಿಕೊಳ್ಳುತ್ತವೆ. ವಯಸ್ಕ ಮಿಂಚುಹುಳುಗಳು ತಮ್ಮ ಮರಿಗಳಿಗೆ ಕೊಳೆತಿರುವ ಮನುಷ್ಯನ ದೇಹ, ಮಣ್ಣಿನಲ್ಲಿ ಇರುವ ಬಸವನಹುಳು, ಎರೆಹುಳುವನ್ನು, ಸಂಧಿಪದಿಗಳು ಅಥವಾ ಬೇಟೆಯಾಡಿದ ನೊಣವನ್ನು ತಿನ್ನಿಸುತ್ತವೆ.
ಜೀವಶಾಸ್ತ್ರ
[ಬದಲಾಯಿಸಿ]ಚಿಕ್ಕಗಾತ್ರದ ಇಲ್ಲವೆ ಮಧ್ಯಮ ಗಾತ್ರದ (ದೇಹದ ಉದ್ದ 10-18 ಮಿಮೀ) ಕೀಟಗಳಿವು. ದೇಹ ಚಪ್ಪಟೆಯಾಗಿದೆ. ಮಿಂಚುಹುಳು ಸಾಮಾನ್ಯವಾಗಿ ಕಂದು ಬಣ್ಣ ಹಾಗು ಮೃದುವಾದ ದೇಹವನ್ನು ಹೊಂದಿರುತ್ತದೆ. ಮೈ ಕಪ್ಪು, ಕಂದು, ಹಳದಿ, ಕೆಂಪು-ಹೀಗೆ ವಿಭಿನ್ನ ವರ್ಣದ್ದಾಗಿದೆ. ಅವುಗಳು ಮುಂಭಾಗದಲ್ಲಿ ರೆಕ್ಕೆಗಳು ಅಥವಾ ಎಲಿಟ್ರಾ ದಿಂದ ಕೂಡಿರುತ್ತವೆ. ಇವು ಕೊಂಚ ಮಿದುವಾಗಿರುವುವು ಮಿಂಚುಹುಳುಗಳ ರೆಕ್ಕೆಗಳು ಬೇರೆ ಜೀರುಂಡೆಗಳ ರೆಕ್ಕೆಗಳಿಗಿಂತ ಒರಟಾಗಿರುತ್ತದೆ. ಕೆಲವು ಹೆಣ್ಣು ಮಿಂಚುಹುಳುಗಳ ಜಾತಿ, ಗಂಡು ಮಿಂಚುಹುಳುಗಳ ಹಾಗೆ ಕಾಣಿಸುತ್ತವೆ. ಲಾವಿಫ಼ೊರ್ಮ್ ಹೆಣ್ಣು ಮಿಂಚುಹುಳುಗಳು, ಬೇರೆ ಮಿಂಚುಹುಳುಗಳ ಜಾತಿಯಲ್ಲೂ ಕಂಡುಬರುತ್ತವೆ. ಮಿಂಚುಹುಳುಗಳು ಸರಳ ಕಣ್ಣುಗಳನ್ನು ಹೊಂದಿರುತ್ತವೆ, ಇವುಗಳನ್ನು ಸುಲಭವಾಗಿ ಪತ್ತೆಹಚ್ಚಬಹುದು. ಸಾಮಾನ್ಯವಾಗಿ ಕೆಲವು ಮಿಂಚುಹುಳುಗಳು ರಾತ್ರಿಯ ವೇಳೆ ಕಂಡುಬರುತ್ತವೆ, ಹಾಗು ಇನ್ನು ಕೆಲವು ಮಿಂಚುಹುಳುಗಳು ಹಗಲಿನಲ್ಲಿ ಕಂಡುಬರುತ್ತವೆ. ಆದುದರಿಂದ ರಾತ್ರಿ ವೇಳೆ ಕಂಡು ಬರುವ ಮಿಂಚುಹುಳುಗಳನ್ನು ನಿಶಾಚರಿ ಹಾಗು ಹಗಲಿನಲ್ಲಿ ಕಂಡು ಬರುವ ಮಿಂಚುಹುಳುಗಳನ್ನು ದಿವಾಚರಿ ಎಂದು ಕರೆಯಲಾಗುತ್ತದೆ. ಕೆಲವು ದಿವಾಚರಿ ಜಾತಿಯ ಮಿಂಚುಹುಳುಗಳು ದೀಪ್ತಿಶೀಲವಲ್ಲ. ಆದರೆ ನೆರಳಿನ ಪ್ರದೇಶದಲ್ಲಿ ಕಂಡುಬರುವ ಕೆಲವು ಮಿಂಚುಹುಳುಗಳ ಜಾತಿ ಬೆಳಕನ್ನು ಸೃಷ್ಟಿಸುತ್ತದೆ.
ಸಂತಾನೋತ್ಪತ್ತಿ
[ಬದಲಾಯಿಸಿ]ಕೆಲವು ದಿನಗಳ ಮಿಲನದ ನಂತರ, ಹೆಣ್ಣು ಮಿಂಚುಹುಳುವು ತನ್ನ ಫಲವತ್ತಾದ ಮೊಟ್ಟೆಯನ್ನು ನೆಲದ ಮೇಲ್ಮೈ ಅಥವಾ ನೆಲದ ಕೆಳಗೆ ಇಡುತ್ತದೆ. ನಾಲ್ಕೈದು ವಾರಗಳಲ್ಲಿ ಮೊಟ್ಟೆ ಒಡೆದು ಮರಿಯಾಗುತ್ತದೆ. ಬೇಸಿಗೆ ಮುಗಿಯುವವರೆಗೂ ತನ್ನ ಮರಿಗಳನ್ನು (ಲಾರ್ವೆಯನ್ನು) ಪೋಷಣೆಮಾಡುತ್ತದೆ. ಲಾರ್ವೆಯನ್ನು ಸಾಮಾನ್ಯವಾಗಿ ಗ್ಲೋ ವರ್ಮ್ ಎಂದು ಕರೆಯುತ್ತಾರೆ. ಲ್ಯಾಂಪಿರಿಡೆ ಲಾರ್ವೆಗಳು ಸರಳ ಕಣ್ಣುಗಳನ್ನು ಹೊಂದಿರುತ್ತದೆ. ಗ್ಲೋ ವರ್ಮ್ ಎಂಬ ಪದವನ್ನು ವಯಸ್ಕ ಹಾಗು ಲಾರ್ವ ಲ್ಯಾಂಪಿರಿಸ್ ನೋಕ್ಟಿಲ್ಯೂಕವನ್ನು ಕರೆಯಲು ಉಪಯೋಗಿಸಲಾಗುತ್ತದೆ. ಸಾಮಾನ್ಯವಾಗಿ ಯುರೋಪಿಯನ್ ಗ್ಲೋ ವರ್ಮ್ ಹಾರಲಾರದ ವಯಸ್ಕ ಹೆಣ್ಣು ಮಿಂಚುಹುಳುಗಳು ಸದಾ ಹೊಳೆಯುತ್ತವೆ, ಆದರೆ ಹಾರುವ ಗಂಡು ಮಿಂಚುಹುಳುಗಳು ದುರ್ಬಲವಾಗಿ ಹಾಗು ಸಾಂದರ್ಭಿಕವಾಗಿ ಹೊಳೆಯುತ್ತವೆ. ಮಿಂಚುಹುಳುಗಳು ಚಳಿಗಾಲದಲ್ಲಿ ಮರಿ (ಲಾರ್ವ) ಹಂತದಲ್ಲಿ ಚಳಿನಿದ್ದೆ (ಹೈಬರ್ನೇಟ್) ಮಾಡುತ್ತವೆ.
ಕೆಲವು ಜಾತಿಯ ಮಿಂಚುಹುಳುಗಳು ವರ್ಷಗಟ್ಟಲ್ಲೆ ನಿದ್ದೆ ಮಾಡುತ್ತವೆ. ಕೆಲವು ನೆಲದ ಕೆಳಗೆ ಬಿಲ ತೋಡಿ ಮಲಗುತ್ತವೆ, ಇನ್ನೂ ಕೆಲವು ಜಾತಿಯ ಮಿಂಚುಹುಳುಗಳು ಮರದ ತೊಗಟೆ ಅಡಿಯಲ್ಲಿ ಮಲಗುತ್ತವೆ. ವಸಂತಕಾಲದಲ್ಲಿ ಮಿಂಚುಹುಳುಗಳು ಹೊರಹೊಮ್ಮುತ್ತವೆ. ಕೆಲವು ವಾರಗಳು ತಮ್ಮ ಮರಿಗಳಿಗೆ ಆಹಾರ ನೀಡುತ್ತವೆ, ನಂತರ ಮರಿಗಳು ೧.೦ ಅಥವಾ ೨.೫ ವಾರದವರೆಗೆ ಪೊರೆಹುಳುವಾಗಿ ಬದಲಾಗುತ್ತವೆ, ನಂತರ ಅವು ವಯಸ್ಕ ಮಿಂಚುಹುಳುವಾಗುತ್ತವೆ.[೫][೬][೭][೮]
ಬೆಳಕು ಮತ್ತು ರಾಸಾಯನಿಕ ಉತ್ಪಾದನೆ
[ಬದಲಾಯಿಸಿ]ಮಿಂಚುಹುಳುವಿನಲ್ಲಿ ಕಂಡುಬರುವ ಬೆಳಕಿನ ಉತ್ಪತ್ತಿಗೆ ರಾಸಾಯನಿಕ ಕ್ರಿಯೆ ಕಾರಣವಾಗಿದೆ. ಅದುವೇ ಜೈವದೀಪ್ತಿ (ಬಯೋಲ್ಯುಮಿನಸೆನ್ಸ್). ಈ ಕ್ರಿಯೆಯು ಬೆಳಕು ಉತ್ಪತ್ತಿ ಮಾಡುವ ಅಂಗವಾದ ಕೆಳಗಿನ ಕಿಬ್ಬೊಟ್ಟೆಯಲ್ಲಿ ಸಂಭವಿಸುತ್ತದೆ. ಇವು ಮಾರ್ಪಾಟುಗೊಂಡ ಮೇದಸ್ಸು ಕೋಶಗಳು. ಇವುಗಳಲ್ಲಿ ಕೆಲವು ತೆರನ ಕಿಣ್ವಗಳಿದ್ದು ಇವು ಸಂದೀಪ್ತ ಕ್ರಿಯೆಯನ್ನು ವೇಗೋತ್ಕರ್ಷಗೊಳಿಸುವುವು. ಈ ಕೋಶಗಳಿಗೆ ಆಕ್ಸಿಜನ್ ಪೂರೈಸಲು ವಿಶೇಷ ಗಾಳಿ ಕೊಳವೆಗಳುಂಟು. ಇಡೀ ವಿದ್ಯಮಾನ ಮಿದುಳಿನ ನಿಯಂತ್ರಣಕ್ಕೊಳಪಟ್ಟಿದೆ. ಕಾಡಿನಲ್ಲೂ, ಗದ್ದೆ ಬಯಲಿನಲ್ಲೂ, ಚೌಗು ಪ್ರದೇಶಗಳಲ್ಲೂ ಒಂದು ನೆಲೆಯಲ್ಲಿ ವಾಸಿಸುವ ಮಿಣುಕುಹುಳುಗಳೆಲ್ಲ ಲಯಬದ್ಧವಾಗಿ ಒಟ್ಟಿಗೆ ಪ್ರದರ್ಶಿಸುವ ಈ ಸ್ಫುರಸಂದೀಪ್ತಿ ಅತ್ಯಂತ ಮನೋಹರವಾದ ನೈಸರ್ಗಿಕ ವಿದ್ಯಮಾನಗಳ ಪೈಕಿ ಒಂದೆನಿಸಿದ್ದು, ಇದರ ಬಗ್ಗೆ ಹಲವಾರು ಕಲ್ಪನೆಗಳು ಕತೆಗಳು ಮೂಡಲು ಕಾರಣವೆನಿಸಿದೆ. ಲ್ಯುಸಿಫೆರೇಸ್ (ಪ್ರಕಾಶೋತ್ತೇಜಕ) ಕಿಣ್ವವು ಮೆಗ್ನೀಸಿಯಮ್, ಎಟಿಪಿ, ಮತ್ತು ಆಮ್ಲಜನಕದ ಉಪಸ್ಥಿತಿಯಲ್ಲಿ ಲ್ಯುಸಿಫೆರಿನ್ (ದೀಪ್ತಿದಾಯಕ) ಮೇಲೆ ಪ್ರಭಾವ ಬೀರಿ ಬೆಳಕನ್ನು ಉತ್ಪತ್ತಿ ಮಾಡುತ್ತದೆ. ಅನುವಂಶಿಕ ಧಾತು ಅಂದರೆ ಜೀನ್ ಕೋಡಿಂಗ್ ಬೇರೆಯ ಜೀವಿಗಳಲ್ಲಿ ಸಂಯೋಜಿತವಾಗಿರುತ್ತದೆ. ಮಿಂಚುಹುಳುವಿನಲ್ಲಿ ಕಂಡುಬರುವ ಲ್ಯುಸಿಫೆರೇಸ್ ಕಿಣ್ವವನ್ನು ವೈದ್ಯಕೀಯ ನ್ಯಾಯಶಾಸ್ತ್ರದಲ್ಲಿ ಉಪಯೋಗಿಸುತ್ತಾರೆ, ಹಾಗೂ ವೈದ್ಯಕೀಯ ಲೋಕದಲ್ಲಿ, ಮುಖ್ಯವಾಗಿ ಎಟಿಪಿ ಅಥವಾ ಮೆಗ್ನೀಸಿಯಮ್ ಅನ್ನು ಕಂಡುಹಿಡಿಯಲು ಉಪಯೋಗಿಸುತ್ತಾರೆ. ಬರೊಕ್ ವರ್ಣಚಿತ್ರಕಾರ ಕಾರಾವ್ಯಾಗ್ಗಿಯೊ, ಒಣಗಿದ ಮಿಂಚುಹುಳುವಿನ ಪುಡಿಯನ್ನು ಉಪಯೋಗಿಸಿ ರಟ್ಟುಬಟ್ಟೆಯನ್ನು ತಯಾರಿಸಿದ್ದಾನೆ. ಇದರಿಂದ ದ್ಯುತಿಸಂವೇದಿ ಮೇಲ್ಮೈಯನ್ನು ರಚಿಸಿ, ಅದರ ಮೇಲೆ ಅವನು ಚಿತ್ರಿಸಬೇಕಾದ ಚಿತ್ರವನ್ನು ಯೋಜಿಸಿದ್ದಾನೆ ಎಂದು ಊಹಿಸಲಾಗಿದೆ.[೯]
ಎಲ್ಲ ಮಿಂಚುಹುಳುಗಳು ಲಾರ್ವೆ ಗಳಿದ್ದಾಗ ಮಿಂಚುತ್ತವೆ. ಜೈವದೀಪ್ತಿಯು ಲಾಂಪಿರಿಡೆ ಮರಿಗಳಲ್ಲಿ ಒಂದು ತರಹ ಕಾರ್ಯ ನಿರ್ವಹಿಸಿದರೆ, ವಯಸ್ಕ ಮಿಂಚುಹುಳುಗಲ್ಲಿ ಮತ್ತೊಂದು ತರಹ ಕಾರ್ಯ ನಿರ್ವಹಿಸುತ್ತದೆ. ಇದನ್ನು ಕಂಡಾಗ ಅದು ತನ್ನನ್ನು ತಿನ್ನಲು ಬರುವ ಬೇಟೆಗೆ ಎಚ್ಚರಿಕೆ ಕೊಡುತ್ತದೆ ಎಂದು ಅನ್ನಿಸುತ್ತದೆ, ಏಕೆಂದರೆ ಹಲವು ಮಿಂಚುಹುಳುಗಳ ಮರಿಗಳು ರಾಸಾಯನಿಕ ಹಾಗು ವಿಷಕಾರಿ ದ್ರವವನ್ನು ಹೊಂದಿರುತ್ತವೆ, ಅಂದರೆ ಅನೇಕ ಮಿಂಚಿನಹುಳುಗಳ ಮರಿಗಳು ಅಸಹ್ಯಕರ ಅಥವಾ ವಿಷಕಾರಿ ರಾಸಾಯನಿಕಗಳು ಹೊಂದಿರುತ್ತವೆ. ಆದ್ದರಿಂದ, ಪರಭಕ್ಷಕಗಳಿಗೆ ಒಂದು ಎಚ್ಚರಿಕೆ ಸಂಕೇತ ಹೋಗುತ್ತದೆ. ಮೊದಲೆಲ್ಲ ವಯಸ್ಕ ಮಿಂಚುಹುಳು ಮಿಂಚುವುದನ್ನು ಕಂಡಾಗ, ಅದು ತನ್ನನ್ನು ತಿನ್ನಲು ಬರುವ ಬೇಟೆಗೆ ಎಚ್ಚರಿಕೆ ಕೊಡುತ್ತಿರುವ ಸಂಕೇತ ಎಂದು ಅಂದುಕೊಂಡಿದ್ದರು, ಆದರೆ ಈಗ ಅದರ ಮೊದಲ ಉದ್ದೇಶವಾದ ತನ್ನ ಸಂಗಾತಿಯನ್ನು ಹುಡುಕಲು ಉಪಯೋಗಿಸುತ್ತದೆ ಎಂದು ತಿಳಿದಿದೆ. ಮಿಂಚುಹುಳುಗಳು ತಮ್ಮಲ್ಲಿ ಉತ್ಪತ್ತಿಯಾಗುವ ಬೆಳಕನ್ನು ಸಂಗಾತಿಯನ್ನು ಹುಡುಕಲು ಬಳಸುವ ಅತ್ಯುತ್ಕೃಷ್ಟ ಉದಾಹರಣೆಯಾಗಿದೆ. ಇವುಗಳು ತಮ್ಮ ಸಂಗಾತಿಯೊಡನೆ ವಿಶೇಷ ರೀತಿಯಲ್ಲಿ ಸಂವಹನ ಮಾಡುತ್ತದೆ. ಆ ರೀತಿಗಳಾವುವೆಂದರೆ ಸ್ಥಿರ ಗ್ಲೋ, ಮಿನುಗುವುದು ಮತ್ತು ರಾಸಾಯನಿಕ ಸಂಕೇತಗಳು. ಈ ಸಂಕೇತಗಳನ್ನು ತಮ್ಮ ಸಂಗಾತಿಯನ್ನು ಹುಡುಕಲು ಹಾಗು ಗುಣಮಟ್ಟದ ಸಂಗಾತಿಯನ್ನು ಹುಡುಕಲು ಉಪಯೋಗಿಸುತ್ತದೆ.
ಮಿಂಚುಹುಳುಗಳಲ್ಲಿ ಕೆಲವು ಉಷ್ಣವಲಯದ ಮಿಂಚುಹುಳುಗಳು, ವಿಶೇಷವಾಗಿ ದಕ್ಷಿಣ ಏಷಿಯಾದಲ್ಲಿ, ದೊಡ್ಡ ಗುಂಪಿನಲ್ಲಿ ಹೊಳಪನ್ನು ಹಬ್ಬುತ್ತವೆ. ಈ ಕ್ರಿಯೆಯನ್ನು ಫೇಸ್ ಸಿನ್ಕ್ರೊನೈಸೇಶನ್ ಎಂದು ಕರೆಯುತ್ತಾರೆ. ಮಲೇಷಿಯಾದ ಕಾಡುಗಳಲ್ಲಿ ನದಿಯ ತಟದಲ್ಲಿ ರಾತ್ರಿ ಹೊತ್ತು ಮಿಂಚುಹುಳು ತನ್ನ ಬೆಳಕನ್ನು ಹೊರಸೂಸುತ್ತದೆ. ಈ ವರ್ತನೆಗೆ ಕಾರಣ ಪ್ರಚಲಿತ ಆಹಾರ, ಸಾಮಾಜಿಕ ಪರಸ್ಪರ ಕ್ರಿಯೆ, ಮತ್ತು ಎತ್ತರ. ಫಿಲಿಫೈನ್ಸ್ ನ ಡೊನ್ಸೊಲ್ ಪಟ್ಟಣದಲ್ಲಿ ಸಾವಿರಾರು ಮಿಂಚುಹುಳುಗಳನ್ನು ವರ್ಷವಿಡೀ ಕಾಣಬಹುದು. ಅಮೇರಿಕದಲ್ಲಿ, ಮಿಂಚುಹುಳುಗಳ ಹೊಳೆಯುವ ದೃಶ್ಯವನ್ನು 'ಗ್ರೇಟ್ ಸ್ಮೋಕಿ ಪರ್ವತ'ದಲ್ಲಿರುವ ಎಲ್ಕ್‌ಮೋಂಟ್‍ನ, ಟೆನ್ನೆಸ್ಸೀಯಲ್ಲಿ ಜೂನ್ ಮೊದಲ ವಾರಗಳಲ್ಲಿ ಕಾಣಬಹುದು. ಫೊಟ್ಯುರಿಸ್ ಮಿಂಚುಹುಳುಗಳು ಬೇಟೆಗಾರರಿಂದ ತಪ್ಪಿಸಿಕೊಳ್ಳಲು, ಮಿಲನದ ಸಂಗಾತಿಗಳನ್ನು ಹುಡುಕಲು ಬೆಳಕನ್ನು ಬಳಸಿ ತಪ್ಪಿಸಿಕೊಳ್ಳುತ್ತವೆ. ಹಲವಾರು ಮಿಂಚುಹುಳುಗಳು ಬೆಳಕನ್ನು ಉತ್ಪತ್ತಿ ಮಾಡುವುದಿಲ್ಲ. ಕೆಲವು ದಿವಾಚರಿ ಮಿಂಚುಹುಳುಗಳು ನೆರಳಿನ ಪ್ರದೇಶದಲ್ಲಿ ಅಂದರೆ ಉದ್ದವಾದ ಗಿಡ ಅಥವಾ ಮರಗಳಲ್ಲಿ ವಾಸಿಸುತ್ತವೆ, ಉದಾಹರಣೆಗೆ 'ಲ್ಯೂಸಿಡೋಟ್'. ಬೆಳಕನ್ನು ಸೃಷ್ಟಿಮಾಡದ ಅಂದರೆ ಜೈವದೀಪ್ತಿಯಿಲ್ಲದ ಮಿಂಚುಹುಳುಗಳು ಫೆರೋಮೋನ್‍ಗಳನ್ನು ಬಳಸಿ ತಮ್ಮ ಮಿಲನದ ಸಂಗಾತಿಗಳನ್ನು ಹುಡುಕಿಕೊಳ್ಳುತ್ತವೆ. 'ಫೊಸ್ಫೋನಿಯಸ್ ಹೆಮಿಪ್ಟೆರೆಸ್' ಪ್ರಭೇದವು ದ್ಯುತಿ ಅಂಗ ಹೊಂದಿದೆ. ದ್ಯುತಿ ಅಂಗವು ಕೆಲವು ಜೈವದೀಪ್ತೀಯ ವರ್ತನೆಯನ್ನು ತೋರಿಸುವುದಿಲ್ಲ. ಹೀಗಿದ್ದರೂ ಅದು ದಿವಾಚರಿಯಾಗಿದ್ದು ದೊಡ್ಡ ಅಂಟೇನಾಗಳು ಹಾಗು ಚಿಕ್ಕ ಕಣ್ಣುಗಳನ್ನು ಹೊಂದಿದೆ. ಹೀಗಾಗಿ ಫೆರೋಮೋನ್‍ಗಳನ್ನು ಲೈಂಗಿಕ ಆಯ್ಕೆಗೆ ಹಾಗು ದ್ಯುತಿ ಅಂಗವನ್ನು ಎಚ್ಚರಿಕೆಯನ್ನು ಕೊಡಲು ಉಪಯೋಗಿಸುತ್ತದೆ ಎಂದು ತಿಳಿದುಬರುತ್ತದೆ.[೧೦][೧೧][೧೨]
ವಿಧಾನ
[ಬದಲಾಯಿಸಿ]ನಿಯಂತ್ರಿತ ಪ್ರಯೋಗಗಳಲ್ಲಿ ಗಾಳಿ ಕಡೆಗೆ ಬರುವ ಗಂಡುಗಳು ಹೆಣ್ಣನ್ನು ಮೊದಲು ತಲಪುತ್ತವೆ. ಇದು ಸೂಚಿಸುವುದೇನೆಂದರೆ ಗಂಡು ಮೇಲ್ಕಡೆಗೆ ಫೆರೋಮೋನ್ ಪ್ಲ್ಯೂಮ್ ಜೊತೆ ತಲಪುತ್ತದೆ. ಪೆಟ್ರಿ ತಟ್ಟೆಯ ಅಕ್ಕಪಕ್ಕವನ್ನು ಕಪ್ಪು ಟೇಪ್‍ನಿಂದ ಮುಚ್ಚಲಾಗುತ್ತದೆ. ಇದರಿಂದ ಗಂಡು ಹೆಣ್ಣನ್ನು ದೃಶ್ಯ ಸೂಚನೆಗಳಿಲ್ಲದೇನೆ ಹುಡುಕುತ್ತದೆ ಎಂಬುದು ಖಚಿತವಾಯಿತು. ಹೆಣ್ಣು ರಾತ್ರಿ ಹೊತ್ತಿನಲ್ಲಿ ಬೆಳಕು ಉಂಟುಮಾಡುವುದಿಲ್ಲ ಹಾಗು ಗಂಡು ಪಿ ಹೆಮಿಪ್ಟೆರೆಸ್ ನ ಲೈಂಗಿಕ ಸಂವಹನ ಸಂಪೂರ್ಣವಾಗಿ ಫೆರೋಮೋನ್‍ಗಳನ್ನು ಆಧರಿಸಿದ ದೈನಿಕ ಬಿಂದುವಿನ ಮೇಲೆ ಅವಲಂಬಿಸುತ್ತದೆ.
ವರ್ಗೀಕರಣ
[ಬದಲಾಯಿಸಿ]ಅನೇಕ ಕೀಟಗಳಂತೆ ಮಿಂಚುಹುಳುವಿನ ವರ್ಗೀಕರಣವು ನಿರಂತರ ಬದಲಾಯಿಸುತ್ತಿರುವ ಸ್ಥಿತಿಯಲ್ಲಿದೆ, ಏಕೆಂದರೆ ಹೊಸ ಪ್ರಭೇದಗಳನ್ನು ಕಂಡುಹಿಡಿಯಲಾಗುತ್ತಿದೆ. ಮಿಂಚುಹುಳುವು ಐದು ಕುಟುಂಬಗಳಿಗೆ ಸೇರುತ್ತದೆ. ಅವುಗಳಲ್ಲಿ ಅಮಿಡಿಟಿನೆ ಮತ್ತು ಸೈಲೋಕ್ಲೆಡಿನೆ ಗಳನ್ನು ಪ್ರಸ್ತಾಪಿಸಲಾಗಿದೆ. ಇದನ್ನು ಮುಖ್ಯವಾಗಿ ಲ್ಯಾಂಪಿರಿನೆಯನ್ನು ಪರಿಷ್ಕರಿಸಲು ಮಾಡಲಾಗಿದೆ. ಇದು ಸ್ವಲ್ಪ ಸ್ವಲ್ಪ ಬದಲಾಗಿ ಕಸದ ಬುಟ್ಟಿಯಂಥ ವರ್ಗ ಆಗಿತ್ತು. ಇದು ತಿಳಿಯದ ಸಂಬಂಧವುಳ್ಳ ಮಿಂಚುಹುಳುಗಳ ಪ್ರಭೇದಗಳು ಮತ್ತು ಕುಲಗಳ ವರ್ಗವಾಗಿತ್ತು. ಕೆಲವು ಬದಲಾವಣೆಗಳು ಪ್ರಸ್ತಾಪದಲ್ಲಿವೆ, ಉದಾ. ಲ್ಯುಸಿಯೋಲಿನೆಯ ಒಳಗೆ ಓಟೊಟ್ರೆಟಿನೆ ಯನ್ನು ವಿಲೀನಗೊಳಿಸುವಂತೆ ಸೂಚಿಸಲಾಗಿದೆ. ಇಲ್ಲಿ ಬಳಸಲಾಗಿರುವ ವ್ಯವಸ್ಥೆಯು ಸದ್ಯಕ್ಕೆ ಅತಿ ಹೆಚ್ಚು ಕಾಣಲಾಗುವ ಮತ್ತು ಸ್ಥಿರ ವಿನ್ಯಾಸವೆಂದು ತೋರುತ್ತದೆ. ಬಹುತೇಕ ಮಿಂಚುಹುಳುಗಳು ಏಕಸ್ರೋತೋದ್ಭವಿಗಳೆಂದು ತೋರುತ್ತವೆಯಾದರೂ, ಕೆಲವನ್ನು (ಉದಾಹರಣೆಗೆ, ಫೋಟಿನಿನಿ ಪಂಗಡ) ಬಹುಶಃ ಉತ್ತಮವಾಗಿ ವಿಂಗಡಿಸಬೇಕಾಗಿದೆ.
ಎರಡು ಉಪಗುಂಪುಗಳು ಅಸ್ತಿತ್ವದಲ್ಲಿವೆ ಎಂದು ತೋರುತ್ತದೆ. ಅದರಲ್ಲಿ ಒಂದು, ಲ್ಯಾಂಪಿರಿನೆ ಮತ್ತು ಫೋಟ್ಯುರೀನೆಯಲ್ಲಿನ ಹಲವು ಅಮೇರಿಕನ್ ಮತ್ತು ಯುರೇಶಿಯಾದ ಕೆಲವು ಪ್ರಭೇದಗಳನ್ನು ಹೊಂದಿರುವಂಥದ್ದು, ಹಾಗೂ ಮತ್ತೊಂದು ಪ್ರಧಾನವಾಗಿ ಏಷ್ಯದಲ್ಲಿರುವ ಮಿಂಚುಹುಳುಗಳನ್ನು ಹೊಂದಿರುವಂಥದ್ದು. ಸಾಮಾನ್ಯವಾಗಿ ಉಪಕುಟುಂಬಗಳು ಏಕಸ್ರೋತೋದ್ಭವಿಯಾಗಿವೆಯಾದರೂ, ಮಿಂಚುಹುಳುವಿನ ನಡುವೆ ವಿಕಾಸಾತ್ಮಕ ಸಂಬಂಧಗಳನ್ನು ನಿಖರವಾಗಿ ಪ್ರತಿನಿಧಿಸಲು ಕೆಲವು ಕುಲಗಳನ್ನು ಈಗಲೂ ಸ್ಥಳಾಂತರಿಸಬೇಕಾಗಿದೆ.
ರಾಗೋಥಾಲ್ಮಿಡೆಯು ಎಲಾಟೆರೋಯ್ಡಿಯ ಮಿಂಚುಹುಳುವಿನಂತಹ ವಂಶವಾಗಿದೆ. ಇತ್ತೀಚಿನ ದಿನಗಳಲ್ಲಿ ಇದನ್ನು ಸ್ಪಷ್ಟವಾಗಿ ಗುರುತಿಸಬಹುದಾದ ಕುಟುಂಬ ಎಂದು ಪರಿಗಣಿಸಲಾಗಿದೆ, ಆದರೆ ಇದು ಸರಿಯಾಗಿದೆಯೊ, ಇಲ್ಲವೊ ಎಂದು ಇನ್ನೂ ವಿವಾದದಲ್ಲಿದೆ. ನಿಜಕ್ಕೂ, ಅವು ಗೊಂದಲಗೊಳಿಸುವ ಮಿಂಚುಹುಳು ಕುಲವಾದ ಟೆರೋಟಸ್‍ನ ಏಕೈಕ ನಿಕಟ ಸಂಬಂಧಿಯಾಗಿರಬಹುದು. ಇದನ್ನು ಕೆಲವೊಮ್ಮೆ ಏಕೈಕ ಮಾದರಿಯ ಉಪಕುಟುಂಬಕ್ಕೆ ಸೇರಿಸುತ್ತಾರೆ.
ಪೌಸಿಸ್ ಕುಲವನ್ನು ಸಾಮಾನ್ಯವಾಗಿ ಲ್ಯಾಂಪಿರಿನೆಯ ಫೋಟಿನಿನಿ ಪಂಗಡದಲ್ಲಿ ಇರಿಸಲಾಗುತ್ತದೆ. ಇದು ಮಿಂಚುಹುಳುವುವಿನ ಮತ್ತೊಂದು ವಂಶಾವಳಿಯನ್ನು ಪ್ರತಿನಿಧಿಸುವ ಹಾಗೆ ಕಾಣಿಸುತ್ತದೆ.[೧೩][೧೪][೧೫]
ಉಲ್ಲೇಖಗಳು
[ಬದಲಾಯಿಸಿ]- ↑ ೧.೦ ೧.೧ ೧.೨ ೧.೩ ೧.೪ Martin, Gavin J.; Stanger-Hall, Kathrin F.; Branham, Marc A.; et al. (1 November 2019). Jordal, Bjarte (ed.). "Higher-Level Phylogeny and Reclassification of Lampyridae (Coleoptera: Elateroidea)". Insect Systematics and Diversity. 3 (6). Oxford University Press ). doi:10.1093/isd/ixz024.
- ↑ Ferreira, Vinicius S.; Keller, Oliver; Branham, Marc A.; Ivie, Michael A. (2019). "Molecular data support the placement of the enigmatic Cheguevaria as a subfamily of Lampyridae (Insecta: Coleoptera)". Zoological Journal of the Linnean Society. 187 (4). Oxford University Press: 1253–1258. doi:10.1093/zoolinnean/zlz073.
- ↑ Ferreira, Vinicius S.; Keller, Oliver; Branham, Marc A (1 November 2020). Marvaldi, Adriana (ed.). "Multilocus Phylogeny Support the Nonbioluminescent Firefly Chespirito as a New Subfamily in the Lampyridae (Coleoptera: Elateroidea)". Insect Systematics and Diversity. 4 (6). Oxford University Press. doi:10.1093/isd/ixaa014.
- ↑ Cirrus Digit Firefly Photuris lucicrescens
- ↑ http://animals.nationalgeographic.com/animals/bugs/firefly/
- ↑ https://www.youtube.com/watch?v=KfxLIw5Ldu4
- ↑ https://www.youtube.com/watch?v=QCWkzQqO7Ro
- ↑ earthsky.org/earth/bugs-firefly-light
- ↑ https://en.wikipedia.org/wiki/Caravaggio
- ↑ https://www.google.co.in/?gfe_rd=cr&ei=7qjGV6SXHsKL8Qfe4YDQCw#q=how+long+do+lightning+bugs+live
- ↑ "ಆರ್ಕೈವ್ ನಕಲು". Archived from the original on 2017-01-17. Retrieved 2016-09-21.
- ↑ https://en.wikipedia.org/wiki/Firefly
- ↑ https://www.google.co.in/?gfe_rd=cr&ei=7qjGV6SXHsKL8Qfe4YDQCw#q=firefly+insect+food
- ↑ "ಆರ್ಕೈವ್ ನಕಲು". Archived from the original on 2016-10-03. Retrieved 2016-09-21.
- ↑ https://www.google.co.in/?gfe_rd=cr&ei=7qjGV6SXHsKL8Qfe4YDQCw#q=do+fireflies+migrate