ನಾಗಪುರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
नागपुर (ನಾಗಪುರ)
India-locator-map-blank.svg
Red pog.svg
नागपुर (ನಾಗಪುರ)
ರಾಜ್ಯ
 - ಜಿಲ್ಲೆ
ಮಹಾರಾಷ್ಟ್ರ
 - ನಾಗಪುರ
ನಿರ್ದೇಶಾಂಕಗಳು 21.08° N 79.03° E
ವಿಸ್ತಾರ
 - ಎತ್ತರ
೨೧೮ km²
 - ೩೧೦ ಮೀ.
ಸಮಯ ವಲಯ IST (UTC+5:30)
ಜನಸಂಖ್ಯೆ (೨೦೦೬)
 - ಸಾಂದ್ರತೆ
೨೪೨,೦೦೦
 - ೧೧,೧೦೧/ಚದರ ಕಿ.ಮಿ.
ಕೋಡ್‍ಗಳು
 - ಪಿನ್ ಕೋಡ್
 - ಎಸ್.ಟಿ.ಡಿ.
 - ವಾಹನ
 
 - ೪೪೦೦xx
 - +೯೧-೭೧೨
 - MH-31,MH-40

ನಾಗಪುರ ಮಹಾರಾಷ್ಟ್ರ ರಾಜ್ಯದ ಉಪರಾಜಧಾನಿ. ಇದು ರಾಜ್ಯದ ಮೂರನೆಯ ಮತ್ತು ಭಾರತದಲ್ಲಿ ಹದಿಮೂರನೆಯ ಅತಿ ದೊಡ್ಡ ನಗರ ಪ್ರದೇಶ. ಮಹಾರಾಷ್ಟ್ರವಿದರ್ಭ ವಿಭಾಗದ ಅತಿ ದೊಡ್ಡ ನಗರ ಹಾಗೂ ನಾಗಪುರ ಜಿಲ್ಲೆಯ ಜಿಲ್ಲಾ ಕೇಂದ್ರವೂ ಇದಾಗಿದೆ. ಮಹಾರಾಷ್ಟ್ರ ವಿಧಾನಮಂಡಲದ ಚಳಿಗಾಲದ ಅಧಿವೇಶನ ಇಲ್ಲಿ ನಡೆಯುತ್ತದೆ. ಸರಿಸುಮಾರು ಭಾರತದ ಮಧ್ಯಭಾಗದಲ್ಲಿರುವ ಇಲ್ಲಿ ಭಾರತದ ಸೊನ್ನೆ ಮೈಲಿಕಲ್ಲನ್ನು ನೋಡಬಹುದು. ಇಲ್ಲಯ ಹೆಸರುವಾಸಿ ಕಿತ್ತಲೆಹಣ್ಣುಗಳಿಂದಾಗಿ ಇದನ್ನು ಕಿತ್ತಲೆಹಣ್ಣುಗಳ ನಗರ ಎಂದೂ ಸಂಬೋಧಿಸಲಾಗುತ್ತದೆ. ಈ ನಗರದ ೩೦೦ನೆಯ ಹುಟ್ಟುಹಬ್ಬವನ್ನು ಇತ್ತೀಚೆಗೆ ಆಚರಿಸಲಾಯಿತು.

ಭೂಗೋಲ ಮತ್ತು ಹವಾಮಾನ[ಬದಲಾಯಿಸಿ]

220 ಚದರ ಕಿ.ಮೀ. ವಿಸ್ತೀರ್ಣದ ನಾಗಪುರ ಸಮುದ್ರಮಟ್ಟದಿಂದ 310 ಮೀಟರ್ ಎತ್ತರದಲ್ಲಿದೆ. ಸಮುದ್ರದಿಂದ ಅತಿ ದೂರದಲ್ಲಿರು ಕಾರಣ ಇಲ್ಲಿ ಸಾಧಾರಣವಾಗಿ ಶುಷ್ಕ ಹವೆಯಿದ್ದು, ತಾಪಮಾನವೂ ಹೆಚ್ಚಿರುತ್ತದೆ. ವರ್ಷಕ್ಕೆ ಸರಾಸರಿ 1205 ಮಿ.ಮೀಟರ್ ಮಳೆಯಾಗುತ್ತದೆ.

ಮಳೆಗಾಲ ಜೂನ್- ಸೆಪ್ಟೆಂಬರ್ ಅವಧಿಯಲ್ಲಿದ್ದು, ಮಾರ್ಚ್ ನಿಂದ ಜೂನ್ ವರೆಗೆ ಬೇಸಿಗೆಯಿರುತ್ತದೆ. ಬೇಸಿಗೆಯ ಝಳ ಮೇ ತಿಂಗಳಿನಲ್ಲಿ ಅತಿ ಹೆಚ್ಚಿರುತ್ತದೆ. ಈ ತಿಂಗಳಿನಲ್ಲಿ ತಾಪಮಾನ ೪೬ ಡಿಗ್ರಿ ಸೆಂಟಿಗ್ರೇಡ್ ವರೆಗೂ ಹೋಗುವುದುಂಟು. ನವೆಂಬರ್ಜನವರಿ ಅವಧಿಯಲ್ಲಿ ಚಳಿಗಾಲವಿದ್ದು , ಆಗ ಕನಿಷ್ಟ ಉಷ್ಣಾಂಶ 10 ಡಿಗ್ರಿ ಸೆಂಟಿಗ್ರೇಡ್ ವರೆಗೂ ಕುಸಿಯುತ್ತದೆ.

ಇತಿಹಾಸ[ಬದಲಾಯಿಸಿ]

10ನೆಯ ಶತಮಾನದ ತಾಮ್ರಪಟವೊಂದರಲ್ಲಿ ನಾಗಪುರದ ಮೊಟ್ಟಮೊದಲ ಉಲ್ಲೇಖ ದೊರೆಯುತ್ತದೆ. ಕ್ರಿ.ಶ. 940ರ ಈ ತಾಮ್ರಪಟವು ವರ್ಧಾ ಪ್ರದೇಶದ ದೇವಾಳೀ ಎಂಬಲ್ಲಿ ಸಿಕ್ಕಿದೆ.ಛಿಂದವಡಾ ಜಿಲ್ಲೆಯಲ್ಲಿಯ ದೇವಗಡದ ರಾಜ ಬಖ್ತ್ ಬುಲಂದ್ ಶಹಾನು 1702ರಲ್ಲಿ ನಾಗನದಿಯ ದಂಡೆಯಮೇಲೆ ನಾಗಪುರ ನಗರವನ್ನು ಸ್ಥಾಪಿಸಿದನು. ಆಗಿನ ದೇವಗಡ ರಾಜ್ಯದಲ್ಲಿ ನಾಗಪುರ, ಸಿವಾನಿ, ಬಾಲಾಘಾಟ್, ಬೈತೂಲ್ ಮತ್ತು ಹೋಶಂಗಾಬಾದ್ ಪ್ರದೇಶಗಳು ಸಮಾವೇಶವಾಗಿದ್ದವು. ಬಖ್ತ್ ಬುಲಂದ್ ಶಹಾನ ನಂತರ ಅವನ ಮಗ ರಾಜಾ ಚಾಂದ್ ಸುಲ್ತಾನ್ ಸಿಂಹಾಸನವೇರಿದ. ಇವನ ಕಾಲದಲ್ಲಿಯೇ, 1706ರಲ್ಲಿ, ನಾಗಪುರ ರಾಜಧಾನಿಯಾಯಿತು. ಮುಂದಿನ 33 ವರ್ಷಗಳ ಅವನ ಆಡಳಿತದಲ್ಲಿ ನಾಗಪುರ ಭರದಿಂದ ಬೆಳೆಯಿತು. ರಾಜಾ ಚಾಂದ್ ಸುಲ್ತಾನನ ನಂತರ ನಾಗಪುರ ಭೋಂಸಲೇ ರಾಜವಂಶದ ಸುಪರ್ದಿಗೆ ಬಂದಿತು. 1742ರಲ್ಲಿ ರಘೂಜೀರಾಜೇ ಭೋಂಸಲೇ ಸಿಂಹಾಸನವೇರಿದನು. 1817ರಲ್ಲಿ ಸೀತಾಬರ್ಡಿಯ ಯುದ್ಧದಲ್ಲಿ ಮರಾಠರನ್ನು ಸೋಲಿಸಿದ ಬ್ರಿಟಿಷರು ನಾಗಪುರವನ್ನು ತಮ್ಮ ವಶಕ್ಕೆ ತೆಗೆದುಕೊಂಡರು. 1861ರಲ್ಲಿ ಇದು ಸೆಂಟ್ರಲ್ ಪ್ರಾವಿನ್ಸ್ ಮತ್ತು ಬೆರಾರ್ ಪ್ರಾಂತದ ರಾಜಧಾನಿಯಾಯಿತು.


1867ರಲ್ಲಿ ನಾಗಪುರದಿಂದ ಮುಂಬಯಿವರೆಗೆ ರೈಲುಮಾರ್ಗವನ್ನು ಗ್ರೇಟ್ ಇಂಡಿಯನ್ ಪೆನಿನ್ಸುಲಾ ಕಂಪನಿಯು ನಿರ್ಮಿಸಿತು. ಈ ಹಳಿಗಳ ಮೇಲೆ ನಾಗಪುರದಿಂದ ಹೊರಟ ಮೊದಲ ರೈಲು ಓಡಿದ್ದು ಅದೇ ವರ್ಷದಲ್ಲಿ. ಟಾಟಾ ಉದ್ಯೋಗಸಮೂಹದ ಸ್ಥಾಪಕ ಜಮಶೇಟಜೀ ಟಾಟಾ ದೇಶದ ಮೊತ್ತಮೊದಲ ಬಟ್ಟೆ ಗಿರಣಿಯನ್ನು ನಾಗಪುರದಲ್ಲಿ ಸ್ಥಾಪಿಸಿದರು.


ಭಾರತದ ಸ್ವಾತಂತ್ರಚಳುವಳಿಯಲ್ಲಿಯೂ ಈ ನಗರ ಮಹತ್ವದ ಪಾತ್ರ ವಹಿಸಿದೆ.ಸ್ವಾತಂತ್ರ ಪೂರ್ವದಲ್ಲಿ ಕಾಂಗ್ರೆಸ್ಸಿನ ಎರಡು ಅಧಿವೇಶನಗಳು ಇಲ್ಲಿ ಜರುಗಿದ್ದವು. ಅಸಹಕಾರ ಚಳುವಳಿಯ ಘೋಷಣೆಯಾಗಿದ್ದು 1920ರ ನಾಗಪುರ ಅಧಿವೇಶನದಲ್ಲಿ. ಸ್ವಾತಂತ್ರ್ಯಾನಂತರ ಸೆಂಟ್ರಲ್ ಪ್ರಾವಿನ್ಸ್ ಮತ್ತು ಬೆರಾರ್ ಪ್ರದೇಶಗಳನ್ನು ಒಟ್ಟುಗೂಡಿಸಿ ನಾಗಪುರವನ್ನು ಅದರ ರಾಜಧಾನಿಯನ್ನಾಗಿ ಮಾಡಲಾಯಿತು. 1950ರಲ್ಲಿ ಮಧ್ಯ ಪ್ರದೇಶ ರಾಜ್ಯದ ಸ್ಥಾಪನೆಯಾಗಿ, ನಾಗಪುರ ಅದರ ರಾಜಧಾನಿಯಾಯಿತು. 1956ರಲ್ಲಿ ರಾಜ್ಯ ಪುನರ್ರಚನಾ ಆಯೋಗವು ನಾಗಪುರವೂ ಸೇರಿದಂತೆ , ಬೆರಾರ್ (ವರ್ಹಾಡ್) ಪ್ರದೇಶವನ್ನು ಆಗಿನ ಬಾಂಬೆ (ಇಂದಿನ ಮಹಾರಾಷ್ಟ್ರ )ರಾಜ್ಯದಲ್ಲಿ ವಿಲೀನಗೊಳಿಸಿತು. ದೇಶದ ಭೌಗೋಲಿಕ ಸುರಕ್ಶಿತತೆಯ ದೃಷ್ಟಿಯಿಂದ , ನಾಗಪುರವನ್ನು ಭಾರತದ ರಾಜಧಾನಿಯಾಗಿ ಬದಲಾಯಿಸುವ ಪ್ರಸ್ತಾವವೂ ಇತ್ತು. ಮಹಾರಾಷ್ಟ್ರ ದ ಉಪರಾಜಧಾನಿಯಾಗಿರುವ ನಾಗಪುರದಲ್ಲಿ ವಿಧಾನಮಂಡಳದ ಚಳಿಗಾಲದ ಅಧಿವೇಶನ ನಡೆಯುತ್ತದೆ.

1956ರಲ್ಲಿ ಡಾ. ಬಾಬಾಸಾಹೇಬ ಅಂಬೇಡ್ಕರರು ತಮ್ಮ ಲಕ್ಷಾಂತರ ಅನುಯಾಯಿಗಳೊಂದಿಗೆ ನಾಗಪುರದಲ್ಲಿ ಬೌದ್ಧ ಧರ್ಮ ಸ್ವೀಕಾರ ಮಾಡಿದರು.

ನಾಗಪುರದ ಹೆಸರುವಾಸಿ ಸಂಸ್ಥೆಗಳು[ಬದಲಾಯಿಸಿ]

thumb

ನಾಗಪುರ ಮಹಾರಾಷ್ಟ್ರದ ಉಪರಾಜಧಾನಿಯಾದ ಕಾರಣ ವರ್ಷದಲ್ಲಿ ಸುಮಾರು ಎರಡುವಾರದ ಅವಧಿಯ ವಿಧಾನಮಂಡಲದ ಚಳಿಗಾಲದ ಅಧಿವೇಶನ ಇಲ್ಲಿಯೇ ನಡೆಯುತ್ತದೆ. ಮುಂಬಯಿಯ ಉಚ್ಚನ್ಯಾಯಾಲಯದ ಪೀಠವೊಂದು ಇಲ್ಲಿ ಕಾರ್ಯನಿರ್ವಹಿಸುತ್ತಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ಥಾಪನೆಯಾದದ್ದು ನಾಗಪುರದಲ್ಲಿ. ಇದರ ಮುಖ್ಯ ಕಾರ್ಯಾಲಯ ಇಲ್ಲಿಯೇ ಇದೆ.

ನಾಗಪುರ ಅನೇಕ ರಾಷ್ಟ್ರೀಯ ಮಟ್ಟದ ಸರಕಾರೀ ವೈಜ್ಞಾನಿಕ ಸಂಸ್ಥೆಗಳಿವೆ. ರಾಷ್ಟ್ರೀಯ ಪರ್ಯಾವರಣ ಇಂಜಿನಿಯರಿಂಗ್ ಸಂಸ್ಥೆ (NEERI) ,ಕೇಂದ್ರ ಹತ್ತಿ ಸಂಶೋಧನಾ ಸಂಸ್ಥೆ (CICR) ,ರಾಷ್ಟ್ರೀಯ ಕಿತ್ತಳೆ (Citrus) ಸಂಶೋಧನಾ ಸಂಸ್ಥೆ, , ಭೂಮಿ ಸರ್ವೇಕ್ಷಣ ಮತ್ತು ಉಪಯೋಗದ ರಾಷ್ಡ್ರೀಯ ಬ್ಯೂರೋ, ಜವಹರಲಾಲ್ ನೆಹರೂ ರಾಷ್ಟ್ರೀಯ ಅಲ್ಯುಮಿನಿಯಮ್ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ,, ಭಾರತೀಯ ಗಣಿಗಾರಿಕಾ ಬ್ಯೂರೋ, ಇತ್ಯಾದಿ.

ನಾಗಪುರ ಭಾರತೀಯ ಸೇನೆ ಯ ದೃಷ್ಟಿಯಿಂದ ಮಹತ್ವದ್ದಾಗಿದೆ. ಭಾರತೀಯ ವಾಯುಸೇನೆಯ ಮುಖ್ಯ ದುರಸ್ತಿ ಕಾರ್ಯಾಲಯ ನಾಗಪುರದಲ್ಲಿದೆ..ಅಷ್ಟೇ ಅಲ್ಲ, ಸಿಬ್ಬಂದಿ ಕಾಲೇಜು, दारुगोळा कारखाना ಇವೂ ಇಲ್ಲಿವೆ.ಭಾರತೀಯ ಸೇನಾದಳದ ರೆಜಿಮೆಂಟ್ ಸೆಂಟರ್ ಆಫ್ ಇಂಡಿಯನ್ ಆರ್ಮಿ ಬ್ರಿಗೇಡ್ ಗಾಗಿ ಕಟ್ಟಿರುವ ಮಿಲಿಟರಿ ಸಂಸ್ಥೆ (Cantonment Board) ಕಾಂಪ್ಟೀ (Kamptee) ಉಪನಗರದಲ್ಲಿದೆ.ಮಿಲಿಟರಿಯ ಅಧೀನದಲ್ಲಿ NCC Officer’s Training School, Institute of Military Law ಇತ್ಯಾದಿ ಅನೇಕ ಸಂಸ್ಥೆಗಳೂ ಇವೆ. ಇಲ್ಲಿಯ ನಾಗರೀಕ ಸಂರಕ್ಷಣಾ ಕಾಲೇಜು ( Civil Defense College) ಭಾರತ ಮತ್ತು ಹೊರಗಿನ ಅನೇಕ ವಿದ್ಯಾರ್ಥಿಗಳಿಗೆ ನಾಗರೀಕ ಸಂರಕ್ಷಣೆಯ ತರಬೇತಿ ನೀಡುತ್ತದೆ.

ದೇಶದ ಮಧ್ಯಭಾಗದಲ್ಲಿರುವುದರಿಂದ ನಾಗಪುರದ ಸಿವಿಲ್ ಲೈನ್ಸ್ ಪ್ರದೇಶದಲ್ಲಿರುವ ಸೊನ್ನೆ ಮೈಲಿಕಲ್ಲಿನಿಂದ (zero milestone) ದೇಶದ ಎಲ್ಲಾ ಪ್ರದೇಶಗಳ ಅಧಿಕೃತ ದೂರದ ಗಣನೆ ಮಾಡಲಾಗುತ್ತದೆ.

ಪ್ರವಾಸಿ ತಾಣಗಳು[ಬದಲಾಯಿಸಿ]

ಇಲ್ಲಿಯ ದೀಕ್ಷಾಭೂಮಿ ಎಂಬಲ್ಲಿ ಡಾ. ಅಂಬೇಡ್ಕರರು ತಮ್ಮ ಅನುಯಾಯಿಗಳೊಂದಿಗೆ ಬೌದ್ಧ ಧರ್ಮ ಸ್ವೀಕಾರ ಮಾಡಿದ್ದರು. ದೀಕ್ಷಾ ಭೂಮಿಯಲ್ಲಿರು ಸ್ತೂಪ ಪ್ರಪಂಚದಲ್ಲಿಯೇ ಅತಿ ದೊಡ್ಡ ಪೊಳ್ಳು ಸ್ತೂಪವಾಗಿದೆ. ಅಶೋಕ ದಶಮಿ / ಅಂಬೇಡ್ಕರ್ ಸ್ಮೃತಿದಿನದಂದು ಲಕ್ಷಾಂತರ ಅನುಯಾಯಿಗಳು ದೇಶದ ಎಲ್ಲೆಡೆಯಿಂದ ಇಲ್ಲಿಗೆ ತಮ್ಮ ಗೌರವಗಳನ್ನು ಅರ್ಪಿಸಲು ಬರುತ್ತಾರೆ.

ಸೀತಾಬರ್ಡಿಯಲ್ಲಿ ಬ್ರಿಟಿಷರಿಗೂ ಮರಾಠರಿಗೂ 1817ರಲ್ಲಿ ದೊಡ್ಡ ಯುದ್ಧವಾಗಿತ್ತು. ಯುದ್ಧದಲ್ಲಿ ಗೆದ್ದ ಬ್ರಿಟಿಷರು ನಾಗಪುರವನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದರು. ನಗರದ ಎಲ್ಲೆಡೆಯಲ್ಲಿಯೂ ದೊಡ್ಡ ದೊಡ್ಡ ದೇವಾಲಯಗಳಿದ್ದು , ರಾಮನಗರದ ಶ್ರೀ ಪೊದ್ದಾರೇಶ್ವರ ಮಂದಿರ ಅವುಗಳಲ್ಲೆಲ್ಲಾ ಪ್ರಸಿದ್ಧವಾದದ್ದು. ಕೋರಾಡಿಯ ಮಹಾಲಕ್ಷ್ಮಿ ಮಂದಿರದ ದರ್ಶನಕ್ಕಾಗಿ ಬರುವ ಭಕ್ತರ ಸಂಖ್ಯೆ ಹೆಚ್ಚಿದ್ದು ಅದರಲ್ಲಿಯೂ ನವರಾತ್ರಿಯಲ್ಲಿ ವಿಶೇಷವಾಗಿರುತ್ತದೆ.ಇವಲ್ಲದೆ ಕ್ಯಾಥೋಲಿಕ್ ಸೆಮಿನರಿ, ಬೌದ್ಧರ ಡ್ರಾಗನ್ ಪ್ಲೇಸ್ ಇವುಗಳು ಕೂಡಾ ಪ್ರಸಿದ್ಧವಾಗಿವೆ.

ನಗರದ ಅಂಬಾಝಾರಿ,ತೆಲಂಗ ಖೇಡಿ, ಗಾಂಧೀಸಾಗರ, ಗೋರೇವಾಡಾ ಮತ್ತು ಸೋನೇಗಾವ್ ಈ ಕೆರೆಗಳು ಪ್ರವಾಸಿಗಳಿಗೆ ಪ್ರಿಯವಾದ ತಾಣಗಳು. ಅಂಬಾಝಾರಿಯಲ್ಲಿರುವ ಸುಂದರವಾದ ಉದ್ಯಾನವನವು ಬಹಳ ಹಿಂದಿನಿಂದಲೂ ಪ್ರಸಿದ್ಧವಾಗಿದೆ.ಭೋಸಲೇ ರಾಜವಂಶ ಅಭಿವೃದ್ಧಿಪಡಿಸಿದ ಮಹಾರಾಜಬಾಗ್ ಪ್ರಾಣಿಸಂಗ್ರಹಾಲಯದಲ್ಲಿ ಅನೇಕ ಅಪರೂಪದ ಪ್ರಾಣಿ, ಪಕ್ಷಿಗಳು ನೋಡಲು ಸಿಗುತ್ತವೆ. ಪೇಂಚ್ ಅಭಯಾರಣ್ಯ (ಇದರ ಬಗ್ಯೆ ರಡ್ಯಾರ್ಡ್ ಕಿಪ್ಲಿಂಗನ ಜಂಗಲ್ ಬುಕ್ ಪುಸ್ತಕದಲ್ಲಿ ಉಲ್ಲೇಖವಿದೆ) ನಾಗಪುರ ನಗರದಿಂದ ಉತ್ತರಕ್ಕೆ 45 ಕಿ.ಮೀ ದೂರದಲ್ಲಿದೆ.

ರಾಷ್ಟ್ರಮಟ್ಟದ ಕ್ರಿಕೆಟ್ ಪಂದ್ಯಗಳು ನಡೆಯುವ ಭಾರತದ ಮೈದಾನಗಳಲ್ಲಿ ಇಲ್ಲಿಯ ವಿದರ್ಭ ಕ್ರಿಕೆಟ್ ಮೈದಾನವೂ ಒಂದು.ವರ್ಧಾ ರಸ್ತೆಯಲ್ಲಿ ನಿರ್ಮಾಣವಾಗುತ್ತಿರುವ ಹೊಸ ಸ್ಟೇಡಿಯಮ್ಮಿನಲ್ಲಿ 80,000 ಪ್ರೇಕ್ಷಕರು ಕುಳಿತು ನೋಡುವ ಅವಕಾಶವಿರುವಂತೆ ಯೋಜಿಸಲಾಗಿದೆ.

ಭಾರತೀಯ ಮತ್ತು ಅಂತರರಾಷ್ಟ್ರಿಯ ಪದ್ಧತಿಯ ಊಟೋಪಚಾರದ ಹೋಟೆಲುಗಳು ನಾಗಪುರದಲ್ಲಿ ವಿಪುಲವಾಗಿವೆ.ಲಿಬರ್ಟಿ ಮತ್ತು ಸ್ಮೃತಿ ಇಲ್ಲಿಯ ಜನಪ್ರಿಯ ಚಿತ್ರಮಂದಿರಗಳು.ನಗರದ ಮೊಟ್ಟಮೊದಲ ಮಲ್ಟಿಪ್ಲೆಕ್ಸ್ ವರ್ಧಮಾನನಗರದಲ್ಲಿ ತಯಾರಾಗಿದ್ದು, ಇನ್ನೂ ಮೂರು ತಯಾರಿಯ ವಿವಿಧ ಹಂತದಲ್ಲಿವೆ. ಇಲ್ಲಿಯ ಚಿತ್ರಮಂದಿರಗಳಲ್ಲಿ ಮರಾಠಿ, ಹಿಂದಿ ಮತ್ತು ಇಂಗ್ಲೀಷ್ ಬಾಷೆಯ ಚಿತ್ರಗಳು ಸಾಧಾರಣವಾಗಿ ಪ್ರದರ್ಶಿತವಾಗುತ್ತವೆ. ಹೋಟೆಲ್ ಟುಲಿ ಇಂಟರ್ನ್ಯಾಷನಲ್ ಮತ್ತು ಹೋಟೆಲ್ ಪ್ರೈಡ್ ಇಲ್ಲಿಯ ಎರಡು ಪಂಚತಾರಾ ಹೋಟೆಲುಗಳು. ಸೆಂಟರ್‍ ಪಾಯಿಂಟ್ ಹಾಗೂ ದಿ ಹೆರಿಟೇಜ್ ಹೋಟೆಲುಗಳು ಸಹಾ ಪ್ರಮುಖವಾದವು. ಸೆಂಟ್ರಲ್ ಅವೆನ್ಯೂ ಆಸುಪಾಸಿನಲ್ಲಿ ಅನೇಕ ಸಣ್ಣ ದೊಡ್ಡ ಉಪಾಹಾರಗೃಹಗಳಿವೆ. ಸೀತಾಬರ್ಡಿಯ ಬಳಿ ಮಹಾರಾಜಾಬಾಗ್ ರಸ್ತೆಯಲ್ಲಿ ಎಟರ್ನಿಟಿ ಮಾಲ್ ಇದೆ.

ಜನಜೀವನ ಮತ್ತು ಸಂಸ್ಕೃತಿ[ಬದಲಾಯಿಸಿ]

ರಾಜ್ಯ ಭಾಷೆ ಮರಾಠಿ ಇಲ್ಲಿ ಬಹುಸಂಖ್ಯಾಕರು ಮಾತನಾಡುವ ಭಾಷೆ. ವಿದರ್ಭದ ಇತರ ಭಾಗಗಳಲ್ಲಿಯಂತೆ ಇಲ್ಲಿಯೂ ಕೂಡಾ ಮರಾಠಿಯ ವರ್ಹಾಡಿ ಪ್ರಬೇಧವೂ ಕೇಳಲಿಕ್ಕೆ ಸಿಗುತ್ತದೆ. ಹಿಂದಿ ಮತ್ತು ಇಂಗ್ಲೀಷ್ ಇಲ್ಲಿ ಚಲಾವಣೆಯಲ್ಲಿ ಇರುವ ಇತರ ಮುಖ್ಯ ಭಾಷೆಗಳು. 2001ರಲ್ಲಿಯ ಜನಗಣತಿಯ ಪ್ರಕಾರ ಇಲ್ಲಿಯ ಜನಸಂಖ್ಯೆ 21,29,500 ಯಷ್ಟಿತ್ತು.

ಈಚೆಗೆ ನಾಗಪುರ ನಗರಕ್ಕೆ ಭಾರತದ ಅತಿ ಸ್ವಚ್ಛ ಮತ್ತು , ಬೆಂಗಳೂರು ಬಿಟ್ಟರೆ, ಅತಿ ಹಸಿರಾದ ನಗರ ಎಂಬ ಹೆಸರು ಸಿಕ್ಕಿದೆ. ಇಲ್ಲಿಯ ಜಾಗದ ಕಿಮ್ಮತ್ತು ಸದ್ಯಕ್ಕಂತೂ ನಿಯಂತ್ರಣದಲ್ಲಿದೆ (2007). ಆದರೂ ಸಿವಿಲ್ ಲೈನ್ಸ್ ಮತ್ತು ರಾಮದಾಸಪೇಟೆಯಂಥ ಪ್ರದೇಶಗಳಲ್ಲಿ ಬೆಲೆ ಬಹಳಷ್ಟು ಹೆಚ್ಚಿದೆ.ನಗರಪಾಲಿಕೆ ಸಾಕಷ್ಟು ನೀರು ಪೂರೈಕೆ ಮಾಡುತ್ತಿರುವುದರಿಂದ ನೀರಿಗೆ ಬವಣೆಯಿಲ್ಲ.ಆದರೆ ರಾಜ್ಯಾದ್ಯಂತವಿರುವ ವಿದ್ಯುತ್ ಅಭಾವದ ಕಾರಣ ಇಲ್ಲಿಯೂ ವಿದ್ಯುತ್ ಕಡಿತದ ತೊಂದರೆಯಿದೆ.

ವರ್ಷದುದ್ದಕ್ಕೂ ಸಣ್ಣ ದೊಡ್ಡ ಹಬ್ಬಗಳು, ಉತ್ಸವಗಳು ನಡೆಯುತ್ತಲೇ ಇರುತ್ತವೆ.ಪೊದ್ದಾರೇಶ್ವರ ರಾಮಮಂದಿರದಲ್ಲಿ ಪ್ರತಿವರ್ಷ ರಾಮನವಮಿಯ ಪ್ರಯುಕ್ತ ಭವ್ಯ .ಶೋಭಾಯಾತ್ರೆ ನಡೆಯುತ್ತದೆ. ಮತ್ತೆ ಭಾರತ ಇತರೆ ಎಡೆಗಳಲ್ಲಿಯಂತೆ ಇಲ್ಲಿಯೂ ದೀಪಾವಳಿ, ಹೋಳಿ , ದಸರಾ ಇತ್ಯಾದಿಗಳನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಗಣೇಶೋತ್ಸವ ಮತ್ತು ದುರ್ಗಾಪೂಜೆ ಅನೇಕ ದಿನಗಳವರೆಗೆ ನಡೆಯುತ್ತವೆ. ಈದ್, ಮೊಹರಮ್ , ಕ್ರಿಸ್ಮಸ್, ಗುರುನಾನಕ ಜಯಂತಿ ಇತ್ಯಾದಿ ಧಾರ್ಮಿಕ ಹಬ್ಬಗಳೂ ಇಲ್ಲಿ ಆಚರಿಸಲಾಗುತ್ತದೆ. ಕ್ರೈಸ್ತರ ಜನಸಂಖ್ಯೆಯೂ ಗಣನೀಯ ಪ್ರಮಾಣದಲ್ಲಿದ್ದು ಆಲ್ ಸೇಂಟ್ಸ್ ಕೆಥೆಡ್ರಲ್ ಹಾಗೂ ಕ್ರೈಸ್ತ ವಿದ್ಯಾಸಂಸ್ಥೆಗಳು ಇಲ್ಲಿ ಜನಮನ್ನಣೆ ಗಳಿಸಿವೆ. ಸೀತಾಬರ್ಡಿಯಲ್ಲಿರುವ ಸೆಂಟ್ ಫ್ರಾನ್ಸಿಸ್ ಝೇವಿಯರ್ ಚರ್ಚ್ ಹಾಗೂ ಅಜನಿಯಲ್ಲಿರುವ ಕ್ಯಾಥಲಿಕ್ ಚರ್ಚ್ಗಳೂ ತಮ್ಮದೇ ಆದ ಸೇವೆ ನೀಡುತ್ತಿವೆ.


ವರ್ಷಪೂರ್ತಿ ಒಂದಲ್ಲ ಒಂದು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುತ್ತಿರುತ್ತವೆ. ಮಹಾರಾಷ್ಟ್ರ ಸರಕಾರ ಆಯೋಜಿಸುವ ಕಾಲಿದಾಸ ಮಹೋತ್ಸವ ಒಂದು ವಾರದ ಅವಧಿಯವರೆಗೆ ನಡೆಯುತ್ತದೆ.ಈ ಮಹೋತ್ಸವದಲ್ಲಿ ಸಂಗೀತ, ನೃತ್ಯಕ್ಕೆ ಸಂಬಂಧಪಟ್ಟಂತೆ ಅನೇಕ ಕಾರ್ಯಕ್ರಮಗಳಿರುತ್ತವೆ. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಖ್ಯಾತಿಯ ಅನೇಕ ಕಲಾವಿದರು ಇದರಲ್ಲಿ ಪಾಲ್ಗೊಳ್ಳುತ್ತಾರೆ. ದಕ್ಷಿಣ-ಮಧ್ಯ ಸಾಂಸ್ಕೃತಿಕ ಕೇಂದ್ರವು ಸಂತ್ರನಗರಿ ಕ್ರಾಫ್ಟ್ ಮೇಳ, ಲೋಕನೃತ್ಯ ಮಹೋತ್ಸವ ಇತ್ಯಾದಿ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತದೆ.ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ನಾಗಪುರದ ನಾಗರೀಕರಿಗೆ ಪ್ರಿಯವಾದದ್ದು. ಪಂ.ಭೀಮಸೇನ ಜೋಷಿಯವರೇ ಮೊದಲಾದ ಖ್ಯಾತನಾಮರು ಇಲ್ಲಿ ಸಂಗೀತಕಾರ್ಯಕ್ರಮಗಳನ್ನು ನೀಡುತ್ತಾರೆ.ಮರಾಠಿ ನಾಟಕಗಳಿಗೆ ಇಲ್ಲಿ ಅಪಾರ ಜನಪ್ರಿಯತೆಯಿದೆ.

ನಾಗಪುರ ಆಕಾಶವಾಣಿ ಮತ್ತು ನಾಗಪುರ ದೂರದರ್ಶನ ಸ್ಥಾನಿಕ ಸುದ್ದಿಗಳನ್ನು ಮತ್ತು ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತವೆ.ಪ್ರಮುಖ ಎಫ್ ಎಂ ವಾಹಿನಿಗಳೂ ಇಲ್ಲಿ ಕಾರ್ಯಾರಂಭ ಮಾಡಿವೆ.ಲೋಕಮತ, ಹಿತವಾದ,ಸಕಾಳ, ತರುಣ ಭಾರತ್ ಮತ್ತು ಲೋಕಸತ್ತಾ ಈ ಪ್ರಸಿದ್ಧ ಪತ್ರಿಕೆಗಳು ಇಲ್ಲಿಂದ ಆವೃತ್ತಿಗಳನ್ನು ಹೊರಡಿಸುತ್ತವೆ.ಇವಲ್ಲದೇ ಜನಪ್ರಿಯ ಹಿಂದಿ ಮತ್ತು ಇಂಗ್ಲೀಷ್ ನಿಯತಕಾಲಿಕಗಳೂ ಇಲ್ಲಿ ಲಭ್ಯವಿವೆ.

ಪ್ರಮುಖ ಸ್ಥಳಗಳು[ಬದಲಾಯಿಸಿ]

ನಗರದ ಸಿವಿಲ್ ಲೈನ್ಸ್ ಪ್ರದೇಶದಲ್ಲಿ ಮುಂಬಯಿ ಉಚ್ಚ ನ್ಯಾಯಾಲಯದ ವಿಭಾಗೀಯ ಪೀಠ , ವಿಧಾನ ಭವನ ಇತ್ಯಾದಿ ಪ್ರಮುಖ ಸರ್ಕಾರೀ ಕಟ್ಟಡಗಳಿವೆ. ಸಿತಾಬರ್ಡೀಯಲ್ಲಿ ನಗರದ ಮುಖ್ಯ ಮಾರುಕಟ್ಟೆಯಿದೆ. ಇಲ್ಲಿಯ ಮುಖ್ಯ ರಸ್ತೆ ವ್ಯಾಪಾರಕ್ಕೆ ಹೆಸರುವಾಸಿ. ಇದೇ ಭಾಗದಲ್ಲಿ ಸಿತಾಬರ್ಡೀ ಕೋಟೆಯಿದೆ. ಧರ್ಮಪೀಠದಲ್ಲಿ ದೊಡ್ಡ ಅಂಗಡಿಗಳು, ಉಪಹಾರಗೃಹಗಳು ಹಾಗೂ ಕೃಷಿ ಉತ್ಪನ್ನಗಳ ಬಜಾರು ಇವೆ. ರಾಮದಾಸಪೇಟೆಯಲ್ಲಿ ಅನೇಕ ಅಂಗಡಿಪೇಟೆಗಳೂ, ಕಾರ್ಯಾಲಯಗಳೂ ಇವೆ. ವಸ್ತುಗಳ ಚಿಲ್ಲರೆ ವ್ಯಾಪಾರಕ್ಕೆ ಇತವಾರಿ ಹೆಸರಾಗಿದೆ. ನಗರದ ಹಳೆಯ ಭಾಗ, ಮಹಲಿನಲ್ಲಿ ಸಣ್ಣ ಸಣ್ಣ ಗಲ್ಲಿಗಳಿದ್ದು ಗಿರಾಕಿಗಳಿಂದ ಗಿಜಿಗಿಜಿಗುಟ್ಟುತ್ತಿರುತ್ತದೆ.ಕಲಾಮನಾ ಕಿತ್ತಳೆ ಮತ್ತು ಧಾನ್ಯಗಳ ಸಗಟು ವ್ಯಾಪಾರ ಕೇಂದ್ರ.

ಅರ್ಥ ವ್ಯವಸ್ಥೆ[ಬದಲಾಯಿಸಿ]

ನಾಗಪುರ ವಿದರ್ಭ ವಿಭಾಗದ ಮಹತ್ವದ ಕೃಷಿಕೇಂದ್ರವಾಗಿದೆ. ಕಳೆದ ಕೆಲವರ್ಷಗಳಿಂದ ಇಲ್ಲಿ ಬಂಡವಾಳ ಹೂಡಿಕೆ ಹೆಚ್ಚಾಗುತ್ತಿದ್ದು ಅರ್ಥ ವ್ಯವಸ್ಥೆ ವಿಸ್ತರಿಸುತ್ತಿದೆ. 2004ರ ಸಾಲಿನಲ್ಲಿ ಸುಮಾರು 5000 ಕೋಟಿ ರೂಪಾಯಿಗಳಷ್ಟು ಬಂಡವಾಳವನ್ನು ಇಲ್ಲಿ ಹೂಡಲಾಗಿದೆ ಎಂದು ಅಂದಾಜಿದೆ. ನಾಗಪುರದ ಅಂತರರಾಷ್ಟ್ರೀಯ ವಿಮಾನನಿಲ್ದಾಣದ ಸಮೀಪದಲ್ಲಿ ಸಾಮಾನು ಮತ್ತು ಪ್ರವಾಸಿ ಕೇಂದ್ರದ ನಿರ್ಮಾಣವಾಗುತ್ತಿದೆ ( Multimodal International Hub Airport at Nagpur – MIHAN) . ಈ ಯೋಜನೆಯು ಆಗ್ನೇಯ ಮತ್ತು ಮಧ್ಯಪೂರ್ವ ಏಶಿಯಾದ ಮಹತ್ವದ ಸಾಮಾನು ವಿತರಣಾ ((break of bulk) ನಿಲ್ದಾಣವಾಗಲಿದೆ. ಪ್ರಖ್ಯಾತ ವಿಮಾನ ತಯಾರಿಕಾ ಕಂಪನಿಯಾದ ಬೋಯಿಂಗ್ , 18.5 ಕೋಟಿ ಡಾಲರುಗಳ ಬಂಡವಾಳವನ್ನು ನಾಗಪುರದಲ್ಲಿ ಹೂಡುವ ಪ್ರಸ್ತಾವವನ್ನು ಮುಂದಿಟ್ಟಿದೆ.

ವಿಸ್ತೀರ್ಣದಲ್ಲಿ ಇಲ್ಲಿಯ ಬುಟಿಬೋರಿ ಪ್ರದೇಶವು ಏಶಿಯಾದಲ್ಲಿಯೇ ಅತಿ ದೊಡ್ಡ ಕೈಗಾರಿಕಾ ಕೇಂದ್ರವೆಂದು ಹೆಸರಾಗಿದೆ. ಇಂಡೋ ರಾಮಾ ಸಿಂಥೆಟಿಕ್ಸ್ , ಕೇ ಇ ಸಿ, ಹ್ಯುಂಡಯಿ, ಏ ಸಿ ಸಿ , ನಿಹೋನ್ ಕನ್ಸಲ್ಟಿಂಗ್, ವಿಡಿಯೋಕಾನ್ ಇಲ್ಲಿಯ ಅತಿ ಪ್ರಸಿದ್ಧ ಉದ್ಯಮಗಳಲ್ಲಿ ಕೆಲವು. ಇವಲ್ಲದೆ ಅನೇಕ ಮಧ್ಯಮ ಗಾತ್ರದ ಉದ್ಯಮಗಳೂ, ಮಹಾರಾಷ್ಟ್ರದ ಮೊಟ್ಟಮೊದಲ ಫುಡ್ ಪಾರ್ಕ್ ಸಹಾ ಇಲ್ಲಿವೆ. ಮುಂಬಯಿ-ಠಾಣೆ-ಪುಣೆ ಪ್ರದೇಶದಲ್ಲಿ ಇನ್ನೂ ಹೆಚ್ಚು ಉದ್ಯಮೀಕರಣಕ್ಕೆ ಹೆಚ್ಚು ಆಸ್ಪದವಿಲ್ಲದ ಕಾರಣ ಬುಟಿಬೋರಿ ಅನೇಕ ಉದ್ಯಮಗಳನ್ನು ಆಕರ್ಷಿಸುತ್ತಿದೆ.

ನಗರದ ಪಶ್ಷಿಮ ಭಾಗದಲ್ಲಿರುವ ಹಿಂಗಣಾ ಉದ್ಯಮ ಕೇಂದ್ರದಲ್ಲಿ ಸರಿಸುಮಾರು 900 ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳು ನೆಲೆಯಾಗಿವೆ.ಮಹೀಂದ್ರಎಂಡ್ ಮಹೀಂದ್ರ, ನೆಕೋ ಕಾಸ್ಟಿಂಗ್ , ಬಜಾಜ್ ಆಟೋ ಸಮೂಹ, ಕಾಂಡಿಗೋ, ಅಜಂತಾ ಟೂಥ್ ಬ್ರಶ್, ಸನ್ ವಿಜಯ್ ಸಮೂಹ, ವಿಕ್ಕೋ ಲ್ಯಾಬೋರೇಟರಿ, ದಿನ್ಶಾ, ಹಳದೀರಾಮ್ ಇವು ಇಲ್ಲಿಯ ಕೆಲವು ಉಲ್ಲೇಖನೀಯ ಉದ್ಯಮ ಸಂಸ್ಥೆಗಳು.

ಇಲ್ಲಿಯ ಭೌಗೋಲಿಕ ಸ್ಥಾನ, ಸಂಪರ್ಕ ಸಾರಿಗೆ ಅನುಕೂಲಗಳು, ವಿದ್ಯಾವಂತ ವರ್ಗ , ಇವೆಲ್ಲವುಗಳಿಂದ ಪುಣೆ, ಮುಂಬಯಿಗಳ ನಂತರ ಮಾಹಿತಿ ತಂತ್ರಜ್ಙಾನದ ಉದ್ಯಮಕ್ಕೆ ನಾಗಪುರ ಆಕರ್ಷಕವಾಗುತ್ತಿದೆ.10,000 ಕೋಟಿ ರೂಪಾಯಿ ಖರ್ಚಿನಲ್ಲಿ ವಿಶೇಷ ಆರ್ಥಿಕ ಕೇಂದ್ರ (Special Economic Zone –SEZ) ವನ್ನು ಸ್ಥಾಪಿಸುವ ಪ್ರಸ್ತಾವವೂ ಇದೆ.

ಶಿಕ್ಷಣ[ಬದಲಾಯಿಸಿ]

ನಾಗಪುರ ಮಧ್ಯ ಭಾರತದ ಪ್ರಮುಖ ಶೈಕ್ಷಣಿಕ ಕೇಂದ್ರವಾಗಿದ್ದು , ದೇಶದ ಅನೇಕ ಕಡೆಗಳಿಂದ ವಿದ್ಯಾರ್ಥಿಗಳು ಶಿಕ್ಷಣಾರ್ಥವಾಗಿ ಇಲ್ಲಿ ಬರುತ್ತಾರೆ. ನಾಗಪುರದಲ್ಲಿ ರಾಷ್ಟ್ರ ಸಂತ ತುಕಡೋಜೀ ಮಹಾರಾಜ ನಾಗಪುರ ವಿದ್ಯಾಪೀಠವಿದೆ. ನಗರದಲ್ಲಿ ಮೂರು ವೈದ್ಯಕೀಯ ಕಾಲೇಜುಗಳಿವೆ. ಐ ಎಮ್ ಟಿ ಮತ್ತು ದೇಶದ ಏಕಮೇವ ಅಗ್ನಿ- ತಾಂತ್ರಿಕ (Fire Engineering) ಕಾಲೇಜು ಸಹ ಇಲ್ಲಿವೆ.

ಇಲ್ಲಿಯ ಶಿಕ್ಷಣ ಸಂಸ್ಥೆಗಳ ಮಾಧ್ಯಮ ಮರಾಠಿ, ಹಿಂದಿ ಅಥವಾ ಇಂಗ್ಲೀಷ್. ಇಲ್ಲಿಯ ಶಾಲೆಗಳು ಮಹಾರಾಷ್ಟ್ರ ರಾಜ್ಯ ಶಿಕ್ಷಣ ಮಂಡಳಿಯ ನಿಯಂತ್ರಣಕ್ಕೆ ಒಳಪಟ್ಟಿವೆ. ಕೇಂದ್ರೀಯ ವಿದ್ಯಾಲಯ (CBSE) ಪಠ್ಯಕ್ರಮದ ಶಾಲೆಗಳೂ ಅಲ್ಲಲ್ಲಿ ತಲೆ ಎತ್ತುತ್ತಿವೆ. ಇಲ್ಲಯ ಕಾಲೇಜುಗಳು ರಾಷ್ಟ್ರ ಸಂತ ತುಕಡೋಜೀ ಮಹಾರಾಜ ನಾಗಪುರ ವಿದ್ಯಾಪೀಠದ ನಿಯಂತ್ರಣದಲ್ಲಿವೆ. ನಾಗಪುರ ನಗರದ ಸಾಕ್ಷರತೆ 89.3% .


ಕೆಲವು ಮಹತ್ವದ ಶಿಕ್ಷಣ ಸಂಸ್ಥೆಗಳು[ಬದಲಾಯಿಸಿ]

ಸಂಚಾರ ವ್ಯವಸ್ಥೆ[ಬದಲಾಯಿಸಿ]

ರೈಲ್ವೆ

ದೇಶದ ಮಧ್ಯಭಾಗದಲ್ಲಿರುವ ನಾಗಪುರದ ಭೌಗೋಲಿಕ ವೈಶಿಷ್ಟ್ಯತೆಯಿಂದಾಗಿ, ಇದು ರೈಲ್ವೆ ಜಾಲದ ಒಂದು ಪ್ರಮುಖ ಜಂಕ್ಷನ್ನಾಗಿದೆ. ದೇಶದ ವಿವಿಧೆಡೆಗಳಿಂದ ,ಅದರಲ್ಲಿಯೂ ಮುಖ್ಯವಾಗಿ, ಮುಂಬಯಿ, ದೆಹಲಿ, ಕಲಕತ್ತಾ ಮತ್ತು ಚೆನ್ನೈ ಮಹಾನಗರಗಳಿಂದ, ಬರುವ ರೈಲುಗಳು ಇಲ್ಲಿಂದ ಹಾದು , ನಿಂತು ಹೋಗುತ್ತವೆ. ನಾಗಪುರವಲ್ಲದೆ, ಅಜನಿ, ಇಟಾವರಿ, ಕಲಾಮನಾ, ಕಾಮಟಿ ಮತ್ತು ಖಾಪ್ರಿ ರೈಲು ನಿಲ್ದಾಣಗಳೂ ನಗರದ ಸಮೀಪದಲ್ಲಿವೆ.

ರಸ್ತೆ ಸಂಚಾರ

ಭಾರತದ ಎರಡು ಮಹತ್ವದ ಹೆದ್ದಾರಿಗಳು , ಕನ್ಯಾಕುಮಾರಿವಾರಣಾಸಿ ನಡುವಿನ ಹೆದ್ದಾರಿ ಕ್ರಮಾಂಕ 7 ಮತ್ತು ಹಾಜಿರಾಕಲಕತ್ತಾ ನಡುವಿನ ಹೆದ್ದಾರಿ ಕ್ರಮಾಂಕ 6, ನಾಗಪುರದ ಮೂಲಕ ಹಾದು ಹೋಗುತ್ತವೆ. ಹೆದ್ದಾರಿ ಕ್ರಮಾಂಕ 69 (ನಾಗಪುರ - ಭೋಪಾಲ್) ಇಲ್ಲಿಂದಲೇ ಪ್ರಾರಂಭವಾಗುತ್ತದೆ. ಇದಲ್ಲದೆ ಎರಡು ಏಶಿಯಾ ಹೆದ್ದಾರಿಗಳು, ಆಗ್ರಾ ದಿಂದ ಶ್ರೀಲಂಕಾದ ಮಟಾರಾದವರೆಗಿನ ಏ. ಎಚ್.47 ಮತ್ತು ಖರಗಪುರದಿಂದ ಧುಳೆವರೆಗಿನ ಏ. ಎಚ್.46, ಇಲ್ಲಿಯ ಮೂಲಕ ಹಾದುಹೋಗುತ್ತವೆ.

ನಾಗಪುರ ಉತ್ತಮ ಗುಣಮಟ್ಟದ ರಸ್ತೆಗಳಿಗಾಗಿಯೂ ಹೆಸರಾಗಿದೆ. ಇಲ್ಲಿಯ ಒಳನಾಡು ಬಂದರು (Inland port) ದೇಶದಲ್ಲಿಯೇ ಅತಿ ವೇಗದಿಂದ ಬೆಳೆಯುತ್ತಿರುವ ಬಂದರಾಗಿದೆ. ಆದರೆ ನಗರ ಸಾರಿಗೆಯು ಈಗಷ್ಟೇ ಜನಪ್ರಿಯಗೊಳ್ಳುತ್ತಿದೆ. ನಗರದ ಮತ್ತು ಗ್ರಾಮೀಣ ಜನತೆಯ ಅವಶ್ಯಕತೆಗಳನ್ನು ಪೂರೈಸುವುದರಲ್ಲಿ ಮಹಾರಾಷ್ಟ್ರ ರಾಜ್ಯ ಪರಿವಹನ ಮಂಡಳಿಯ ಬಸ್ಸುಗಳ ವ್ಯವಸ್ಥೆ ಇನ್ನೂ ಅಭಿವೃದ್ಧಿಯಾಗಬೇಕಾಗಿದೆ. ಮಾನೋರೈಲ್ ಸ್ಥಾಪಿಸುವ ಪ್ರಸ್ತಾಪವಿದೆ.

ವಿಮಾನ ಸಂಚಾರ

ನಾಗಪುರದ ವಿಮಾನ ಸಂಚಾರ ನಿಯಂತ್ರಣ ಕೇಂದ್ರ ಭಾರತದಲ್ಲಿಯೇ ಅತಿಹೆಚ್ಚು ... ಯಾಗಿದೆ. ದಿನಕ್ಕೆ 300ಕ್ಕೂ ಹೆಚ್ಚು ವಿಮಾನಗಳು ನಗರದ ಮೇಲಿಂದ ಹಾರುತ್ತವೆ. ಇಂಡಿಯನ್ ಎಯರ್ ಲೈನ್ಸ್, ಜೆಟ್ ಎಯರ್ವೇಸ್, ಎಯರ್ ಡೆಕ್ಕನ್ ಇತ್ಯಾದಿ ವಿಮಾನಗಳು ನಾಗಪುರದಿಂದ ಮುಂಬಯಿ , ದೆಹಲಿ, ಹೈದರಾಬಾದು ಮತ್ತು ಕಲಕತ್ತಾ ನಗರಗಳಿಗೆ ಹಾರುತ್ತವೆ. 1 ಅಕ್ಟೋಬರ್ 2005ರಂದು ನಾಗಪುರದ ಸೋನೇಗಾಂವ್ ವಿಮಾನನಿಲ್ದಾಣಕ್ಕೆ ಅಂತರರಾಷ್ಟ್ರೀಯ ದರ್ಜೆ ಸಿಕ್ಕು , ಅದರ ಹೆಸರು ಡಾ. ಬಾಬಾಸಾಹೇಬ ಅಂಬೇಡ್ಕರ್ ಅಂತರರಾಷ್ಟ್ರೀಯ ವಿಮಾನನಿಲ್ದಾಣ ಎಂದು ಬದಲಾಯಿಸಲಾಯಿತು. ದೇಶದ ಮಧ್ಯಭಾಗದ ಪ್ರಮುಖ ನಿಲ್ದಾಣವಾಗಿರುವ ಇಲ್ಲಿಂದ ಎಯರ್ ಅರೇಬಿಯಾ (ಶಾರ್ಜಾ) , ಇಂಡಿಯನ್ ಎಯರ್ಲೈನ್ಸ್ (ಬ್ಯಾಂಕಾಕ್), ಕತಾರ್ ಎಯರ್ವೇಸ್ (ದೋಹಾ) ಮೊದಲಾದ ಅಂತರಾಷ್ಟ್ರೀಯ ಸಂಸ್ಥೆಗಳು ವಿಮಾನಸಂಪರ್ಕ ಕಲ್ಪಿಸಿವೆ.

MIHAN (Multi Modal International Cargo Hub)ದ ನಿರ್ಮಾಣ 2006ರಲ್ಲಿ ಸಂಪೂರ್ಣಗೊಂಡಿದ್ದು, ಈ ಸಾಮಾನು ಸಾಗಾಣಿಕೆಯ ಯೋಜನೆಯಿಂದ , ಬರಿಯ ನಾಗಪುರ ನಗರವಲ್ಲದೆ , ಸಂಪೂರ್ಣ ವಿದರ್ಭ ವಿಭಾಗದ ಆರ್ಥಿಕ ಪ್ರಗತಿ ಬಿರುಸಿನಿಂದ ಅಗುವ ನಿರೀಕ್ಷೆಯಿದೆ.

ವೆಬ್ಸೈಟ್[ಬದಲಾಯಿಸಿ]

www.nmcnagpur.gov.in

"https://kn.wikipedia.org/w/index.php?title=ನಾಗಪುರ&oldid=1050641" ಇಂದ ಪಡೆಯಲ್ಪಟ್ಟಿದೆ