ಠಾಣೆ
ಠಾಣೆ ಮಹಾರಾಷ್ಟ್ರದಲ್ಲಿ , ಮುಂಬಯಿ ನಗರದ ನೆರೆಯಲ್ಲಿರುವ ಒಂದು ನಗರ. ಇದು ಇದೇ ಹೆಸರಿನ ಜಿಲ್ಲೆಯ ಕೇಂದ್ರವೂ ಹೌದು. ಕೊಂಕಣದಲ್ಲಿ ಆಳುತ್ತಿದ್ದ ಶಿಲಾಹಾರ ರಾಜರ ಸ್ಥಾನ ಅಥವಾ ಸ್ಥಾನಕ ಎಂಬ ಹೆಸರಿನ ರಾಜಧಾನಿಯಿಂದ ಠಾಣೆ ಎಂದು ಹೆಸರುಬಂದಿದೆ ಎನ್ನಲಾಗಿದೆ. ಮಧ್ಯಯುಗದ ಶಿಲಾಶಾಸನಗಳು, ತಾಮ್ರಪತ್ರಗಳು ಠಾಣೆಯಲ್ಲಿ ಸಿಕ್ಕಿವೆ.
ಇತಿಹಾಸ
[ಬದಲಾಯಿಸಿ]ಠಾಣೆ ನಗರದ ಇತಿಹಾಸವನ್ನು ಐದು ಕಾಲಖಂಡಗಳಲ್ಲಿ ವಿಂಗಡಿಸಬಹುದು.
- ವೇದಕಾಲದಿಂದ ಕ್ರಿ.ಶ. ೧೩೦೦ರ ವರೆಗೆ : ಪುರಾತನ ಕಾಲದಿಂದ ಹಿಡಿದು ಅಪರಾಂತ, ಶಿಲಾಹಾರ ಮತ್ತು ಬಿಂಬಾ ಸಾಮ್ರಾಜ್ಯಗಳವರೆಗೆ
- ೧೩೦೦ರಿಂದ ೧೭೩೭ರವರೆಗೆ : ಮುಸ್ಲಿಮ್ ಮತ್ತು ಪೋರ್ಚುಗೀಸರ ರಾಜ್ಯಭಾರದ ಕಾಲ.
- ೧೭೩೭ರಿಂದ ೧೮೦೦ : ಮರಾಠರ ಮತ್ತು ಪೋರ್ಚುಗೀಸರ ಕಾಲ.
- ೧೮೦೦-೧೯೪೭ : ಬ್ರಿಟಿಷರ ರಾಜ್ಯಭಾರದ ಕಾಲ.
- ೧೯೪೭ ರಿಂದ ಇಂದಿನವರೆಗೆ : ಸ್ವತಂತ್ರ ಭಾರತ.
ಠಾಣೆ ಪ್ರದೇಶದ ಪುರಾತನ ಹೆಸರು 'ಅಪರಾಂತ'. ಗ್ರೀಕರ ಚಕ್ರವರ್ತಿ ಅಲೆಗ್ಜಾಂಡರನು ಭಾರತದ ಮೇಲೆ ದಂಡೆತ್ತಿ ಬಂದಾಗ ಅವನೊಂದಿಗೆ ಅನೇಕ ತತ್ವಶಾಸ್ತ್ರಜ್ಞರು, ಇತಿಹಾಸಜ್ಞರು, ಭೂಗೋಳ ತಜ್ಞರು ಭಾರತಕ್ಕೆ ಭೇಟಿ ಕೊಟ್ಟರು. ಗ್ರೀಕ್ ತತ್ವಶಾಸ್ತ್ರಜ್ಞ ಟಾಲೆಮಿ, ತನ್ನ ಬರಹಗಳಲ್ಲಿ (ಕ್ರಿ.ಶ. ೧೩೫ರಿಂದ ೧೫೦) ಉಲ್ಲೇಖಿಸಿರುವ ಚೆರ್ಸೊನೇಸಸ್ ಎಂಬ ಸ್ಥಳ , ಈಗಿನ ಠಾಣೆ ಕೊಲ್ಲಿಯ ಸುತ್ತಮುತ್ತಲ ಪ್ರದೇಶ ಎಂದು ಸಂಶೋಧನೆಯ ಪ್ರಕಾರ ತಿಳಿದುಬಂದಿದೆ. ಕ್ರಿ.ಶ ೯ನೆಯ ಶತಮಾನದಲ್ಲಿ , ಆಗ ಶ್ರೀಸ್ಥಾನಕ ಎಂದು ಹೆಸರಾಗಿದ್ದ ಠಾಣೆ ಶಿಲಾಹಾರ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ಇವರ ರಾಜ್ಯಭಾರ ಕ್ರಿ.ಶ. ೮೧೦ರಿಂದ ೧೨೬೦ರವರೆಗೆ ನಡೆಯಿತು. ಠಾಣೆ ಯಲ್ಲಿ ಇಂದಿಗೂ ಇರುವ ಘೋಡ್ ಬಂದರ್ ಎಂಬ ಜಾಗ ಹಿಂದೆ ಕುದುರೆ (ಘೋಡಾ)ಗಳ ವ್ಯಾಪಾರಕ್ಕೆ ಪ್ರಸಿದ್ಧವಾಗಿತ್ತು. ಈ ಕಾಲದಲ್ಲಿ ತಾನ್ಸಿ ಎಂದು ಕರೆಯಲಾಗುತ್ತಿದ್ದ ಬಟ್ಟೆ ಇನಲ್ಲಿಂದ ರಫ್ತಾಗುತ್ತಿತ್ತು.
ಶೈವರಾಗಿದ್ದ ಶಿಲಾಹಾರ ರಾಜರ ಕಾಲದಲ್ಲಿ ಕೌಪೀನೇಶ್ವರ ದೇವಾಲಯ ನಿರ್ಮಾಣವಾಯಿತು. ಶಿಲಾಹಾರರ ಸರ್ವಧರ್ಮಸಮಭಾವ ದೃಷ್ಟಿಯಿಂದ ಪ್ರೋತ್ಸಾಹಿತರಾದ ಇತರೆ ಮತೀಯರು ಉದಾ. ಪಾರ್ಸಿಗಳು, ಕ್ರೈಸ್ತರು, ಮುಸ್ಲಿಮರು ಮತ್ತು ಯಹೂದಿಗಳು ಇಲ್ಲಿ ನೆಲೆಸಿದರು.
ಶಿಲಾಹಾರರು ನಗರವನ್ನು ಬೇರೆಬೇರೆ ವಲಯಗಳನ್ನಾಗಿ ವಿಭಾಗಿಸಿ ಅವುಗಳನ್ನು ’ಪಾಡಾ’ ಎಂದು ಕರೆದರು. ಈ ಇಂದಿಗೂ ನೌಪಾಡಾ, ಪಾಟ್ಲಿಪಾಡಾ, ಅಗ್ರಿಪಾಡಾ ಎಂಬ ಪ್ರದೇಶಗಳನ್ನು ಠಾಣೆಯಲ್ಲಿ ನೋಡಬಹುದು. ೧೨ನೆಯ ಶತಮಾನದ ಮೊದಲಭಾಗದಲ್ಲಿ ಹೊಸ ನಗರವನ್ನು ಕಟ್ಟುವ ಉದ್ದೇಶದಿಂದ ರಾಜಾ ಬಿಂಬದೇವನು ತನ್ನ ೬೬ ಉಪಶಾಖೆಗಳೊಂದಿಗೆ ಬಂದು ಠಾಣೆಯಲ್ಲಿ ನೆಲೆಯೂರಿದ. ಖ್ಯಾತ ಇಟಾಲಿಯನ್ ಯಾತ್ರಿಕ ಮಾರ್ಕೋ ಪೋಲೋ ಕ್ರಿ.ಶ. ೧೨೯೦ರಲ್ಲಿ ಠಾಣೆಯನ್ನು ಸಂದರ್ಶಿಸಿದ್ದ. ಮಹಾನಗರ ಎಂದು ಆತ ಕರೆದಿರುವ ಈ ನಗರ, ಆತ ಉಲ್ಲೇಖಿಸಿರುವ ಸತತ ಬಂದು ಹೋಗುತ್ತಿದ್ದ ಹಡಗುಗಳು, ಚರ್ಮ, ಹತ್ತಿ , buckram ಗಳ ರಫ್ತು, ಕುದುರೆಗಳ ಆಮದು ಇವುಗಳ ವ್ಯಾಪಾರ ಈ ದೃಷ್ಟಿಯಿಂದ , ಬಹುಶಃ ಸುಸಜ್ಜಿತ ಬಂದರಾಗಿತ್ತು.
೧೪೮೦ರಲ್ಲಿ ಗುಜರಾತಿನ ಸುಲ್ತಾನ ಮಹಮೂದ್ ಬೇಗಾರನು ತನ್ನ ಸುಭಾ ರಾಜ್ಯದ ರಾಜಧಾನಿಯನ್ನಾಗಿ ಠಾಣೆ ನಗರವನ್ನು ಆರಿಸಿಕೊಂಡ.
೧೫೩೦ ರಿಂದ ೧೭೩೯ರವರೆಗೆ ಇನ್ನೂರಕ್ಕೂ ಹೆಚ್ಚು ವರ್ಷ ಠಾಣೆ ಪೋರ್ಚುಗೀಸರ ಆಡಳಿತಕ್ಕೊಳಪಟ್ಟಿತ್ತು. ಆ ಕಾಲದಲ್ಲಿ ಇದನ್ನು ’ಕಲಬೆ ಡ ಟಾನಾ’ ಎಂದು ಕರೆಯಲಾಗುತ್ತಿತ್ತು. ಇಲ್ಲಿ ಯ ಸೈಂಟ್ ಜಾನ್ ದ ಬ್ಯಾಪ್ಟಿಸ್ಟ್ ಚರ್ಚು ಸ್ಥಾಪನೆಯಾದದ್ದು ೧೬೬೩ರಲ್ಲಿ. ೧೭೩೦ರಲ್ಲಿ ಠಾಣೆಯ ಕೋಟೆಯ ಕಟ್ಟಡ ಪ್ರಾರಂಭವಾಯಿತು. ಮರಾಠಾ ಸೇನಾಪತಿ ಚಿಮಾಜಿ ಅಪ್ಪಾ ೧೭೩೭ರಲ್ಲಿ ವಸಯಿಯ ಆಕ್ರಮಣಕ್ಕೆ ಯೋಜನೆ ಹಾಕಿದ. ೧೭೩೮ರ ಮಾರ್ಚ್ ೨೮ರಂದು ಠಾಣೆಯ ಕೋಟೆ ಮರಾಠರ ವಶವಾಯಿತು. ೧೭೪೪ರಲ್ಲಿ ಬ್ರಿಟಿಷರು ಠಾಣೆ ನಗರ ಮತ್ತು ಕೋಟೆಯನ್ನು ತಮ್ಮ ವಶಕ್ಕೆ ತೆಗೆದುಕೊಂಡರು.
೧೭೬೦ರಲ್ಲಿ ಕೌಪೀನೇಶ್ವರ ದೇವಾಲಯವನ್ನು ಪುನರುಜ್ಜೀವನ ಮಾಡಲಾಯಿತು. ಪೇಶ್ವೆಗಳ ಅರಮನೆಯಂತಹಾ ಸೌಧದಲ್ಲಿ ೧೭೭೮ರಲ್ಲಿ ಕೋರ್ಟು ಸ್ಥಾಪನೆಯಾಯಿತು. ಪಾರಸೀ ಜನಗಳ ಅಗ್ನಿ ದೇವಾಲಯ ೧೭೮೦ರಲ್ಲಿ ಸ್ಥಾಪನೆಯಾಯಿತು. ೧೮೬೩ರ ಮಾರ್ಚ್ ೧೦ರಂದು ಠಾಣೆ ಮುನಿಸಿಪಾಲಿಟಿ ಅಸ್ತಿತ್ವಕ್ಕೆ ಬಂತು.
ಠಾಣೆಯ ಮೊದಲ ವೃತ್ತಪತ್ರಿಕೆ ಪ್ರಾರಂಭವಾದದ್ದು ೧೮೬೬ರಲ್ಲಿ. ಅರುಣೋದಯ, ಸರ್ವೋದಯ, ವಕಿಲಾಂಚಾ ಸಾಥೀ, ನ್ಯಾಯಲಹರಿ, ಮನೋಹರ, ಜ್ಞಾನಪ್ರದೀಪ, ಜ್ಞಾನದೀಪಿಕಾ ಇತ್ಯಾದಿ ಪತ್ರಿಕೆಗಳು ಪ್ರಸಾರದಲ್ಲಿದ್ದವು. ೧೮೮೦ ರಲ್ಲಿ ೧೨೯೬೦ ರೂ ಖರ್ಚಿನಲ್ಲಿ ಠಾಣೆಯ ಕುಡಿಯುವ ನೀರಿಗಾಗಿ ಪೋಖ್ರಣ್ ಕೆರೆಯನ್ನು ಅಭಿವೃದ್ಧಿಪಡಿಸಲಾಯಿತು. ಈ ಯೋಜನೆಯ ಪ್ರಾರಂಭೋತ್ಸವಕ್ಕೆ ಮುಂಬಯಿ ಪ್ರೆಸಿಡೆನ್ಸಿಯ ಗವರ್ನರ್ ಸರ್ ಫರ್‍ಗ್ಯುಸನ್ ಜೇಮ್ಸ್ ನನ್ನು ಕರೆಸಲಾಗಿತ್ತು. ೧೮೮೧ರಲ್ಲಿ ನಡೆದ ಮೊಟ್ಟಮೊದಲ ಜನಗಣತಿಯ ಪ್ರಕಾರ ಠಾನೆಯ ಜನಸಂಖ್ಯೆ ೧೪,೪೫೬ವಾಗಿತ್ತು. ಠಾಣೆ ಇಂಗ್ಲೀಷ್ ಸ್ಕೂಲ್ ಎಂಬ ಪ್ರಥಮ ಇಂಗ್ಲೀಷ್ ಮಾಧ್ಯಮ ಶಾಲೆ ೧೮೨೧ರಲ್ಲಿ ಪ್ರಾರಂಭವಾಯಿತು.
ನಾಸಿಕ್ ಜಿಲ್ಲೆಯ ಕಲೆಕ್ಟರ್ ಜಾಕ್ಸನ್ನನನ್ನು ಗುಂಡಿಕ್ಕಿ ಕೊಂದ ಆರೋಪದ ಮೇಲೆ ಕ್ರಾಂತಿಕಾರಿಗಳಾದ ಅನಂತ ಲಕ್ಷ್ಮಣ ಕಾನ್ಹೇರೆ, ಗೋಪಾಲ ಕೃಷ್ಣಾಜಿ ಕರ್ವೆ ಮತ್ತು ವಿನಾಯಕ ನಾರಾಯಣ ದೇಶಪಾಂಡೆ ಈ ಮೂವರನ್ನು ಠಾಣೆಯ ಕೇಂದ್ರೀಯ ಕಾರಾಗೃಹದಲ್ಲಿ ಗಲ್ಲಿಗೇರಿಸಲಾಯಿತು.
ಭಾರತದ ಮೊಟ್ಟಮೊದಲ ರೈಲು ಮುಂಬಯಿಯ ವಿ.ಟಿಯಿಂದ (ಈಗ ಛತ್ರಪತಿ ಶಿವಾಜಿ ಟರ್ಮಿನಸ್) ಠಾಣೆಯವರೆಗೆ ೧೮೫೩ರಲ್ಲಿ ಓಡಿತು. ಆಗ ವಿ.ಟಿ ಬಿಟ್ಟರೆ ಇದೊಂದೇ ರೈಲು ನಿಲ್ದಾಣವಾಗಿತ್ತು.
ಇಂದಿನ ಠಾಣೆ
[ಬದಲಾಯಿಸಿ]ಭಾರತದ ಸ್ವಾತಂತ್ರದ ನಂತರ ಬೆಳೆದ ಠಾಣೆ ೬೦ , ೭೦ರ ದಶಕದಲ್ಲಿ ಔದ್ಯೋಗಿಕ ಕೇಂದ್ರವಾಯಿತು. ಅದಕ್ಕೆ ಅನುಗುಣವಾಗಿ ವಾಣಿಜ್ಯ, ಸಾರಿಗೆ ಮತ್ತು ಕಟ್ಟಡ ನಿರ್ಮಾಣ ಚಟುವಟಿಕೆಗಳೂ ಪ್ರಾರಂಭವಾಗಿ , ೮೦ರ ದಶಕದಲ್ಲಿ ಬಿರುಸಿನಿಂದ ಬೆಳೆದವು. ಒಂದಾನೊಂದು ಮುಂಬಯಿಗೆ ಹೋಲಿಸಿದರೆ ಕಳಪೆಯಾಗಿ ಕಾಣುತ್ತಿದ್ದ ಠಾಣೆ ಇಂದು ಯೋಜನೆಯಲ್ಲಿ , ಸ್ವಚ್ಛತೆಯಲ್ಲಿ ಮುಂಬಯಿಯನ್ನು ಮೀರಿಸುತ್ತದೆ. ಆಧುನಿಕ ಠಾಣೆ ಮುನಿಸಿಪಲ್ ಕಾರ್ಪೋರೇಷನ್ ೧೯೮೨ರಲ್ಲಿ ಅಸ್ತಿತ್ವಕ್ಕೆ ಬಂತು. ಇದು ಕೈಗೊಂಡ ಅನೇಕ ಅಭಿವೃದ್ಧಿ ಯೋಜನೆಗಳ ಫಲವಾಗಿ ೨೦೦೦ದಲ್ಲಿ ಭಾರತ ಸರ್ಕಾರದ ’ಸ್ವಚ್ಛ ನಗರ ’ ಪ್ರಶಸ್ತಿ ಠಾಣೆನಗರ ಗಳಿಸಿಕೊಂಡಿತು. ಠಾಣೆ ಇಂದೂ (೨೦೦೭) ತ್ವರಿತವಾಗಿ ಬೆಳೆಯುತ್ತಿದ್ದು , ಇಲ್ಲಿ ಕಿಕ್ಕಿರಿದ ಜನದಟ್ಟಣೆ ಮತ್ತು ಸಾರಿಗೆ ಸಮಸ್ಯೆಗಳಾಗಿವೆ.
ಠಾಣೆ ಕೊಲ್ಲಿಯ ಪಶ್ಚಿಮ ದಂಡೆಯ ಮೇಲಿರುವ ಠಾಣೆ ನಗರದ ಪೂರ್ವಕ್ಕೆ ಪಾರಸಿಕ್ ಗುಡ್ಡಗಳೂ , ಪ಼ಶ್ಚಿಮಕ್ಕೆ ಯೆವೂರ್ ಗುಡ್ಡಗಳೂ ಇವೆ. ಠಾಣೆ ಕೊಲ್ಲಿ ಸ್ವಾಭಾವಿಕ ರಕ್ಷಣೆಯಲ್ಲದೇ, ಬಹು ಹಿಂದಿನ ಕಾಲದಿಂದಲೂ ಸಮುದ್ರಸಾರಿಗೆಗೆ ಇಂಬು ಕೊಟ್ಟಿದೆ. ಇದರಿಂದ ಸ್ಥಳೀಯ ಮತ್ತು ಅಂತರರಾಷ್ಟ್ರೀಯ ವಾಣಿಜ್ಯದ ಅಭಿವೃದ್ಧಿ ಸಾಧ್ಯವಾಯಿತು. ಠಾಣೆ ನಗರ ಶ್ರೀಮಂತ ಸಾಂಸ್ಕೃತಿಕ ಪರಂಪರೆ , ಪೌರಾಣಿಕ ಹಿನ್ನೆಲೆ ಹೊಂದಿದ್ದು ಐತಿಹಾಸಿಕ ಮಹತ್ವದ ಅನೇಕ ಘಟನೆಗಳ ತವರಾಗಿದೆ. ಈಗ ಠಾಣೆಯ ಕೋಟೆ ಕೇಂದ್ರೀಯ ಕಾರಾಗೃಹವಾಗಿದೆ
ಠಾಣೆಯ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ರಕ್ಷಿಸಿ ಬೆಳೆಸುವ ಉದ್ದೇಶದಿಂದ ಠಾಣೆ ಮುನಿಸಿಪಾಲಿಟಿಯು ರಂಗಾಯತನ ಎಂಬ ಹೆಸರಿನ ನಾಟ್ಯಗೃಹವನ್ನು ನಿರ್ಮಿಸಿತು. ಮರಾಠಿಯ ಪ್ರಸಿದ್ಧ ನಾಟಕಕಾರ ರಾಮ ಗಣೇಶ ಗಡಕರಿ ಯವರ ನೆನಪಿನಲ್ಲಿ ಕಟ್ಟಿರುವ ಈ ಸಂಸ್ಥೆಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಯಾವಾಗಲೂ ನಡೆಯುತ್ತಿರುತ್ತವೆ.
ಸಂಸ್ಕೃತಿ
[ಬದಲಾಯಿಸಿ]೭೬% ಇರುವ ಮರಾಠಿಗರು ಇಲ್ಲಿ ಬಹುಸಂಖ್ಯಾತರು. ಅಷ್ಟಾದರೂ ಮರಾಠಿ ಅಲ್ಲದ ಇತರ ಭಾಷಿಕರ ಸಂಸ್ಕೃತಿಯೂ ಕಾಣಬರುತ್ತದೆ. ಗಣೇಶ ಚತುರ್ಥಿಯನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಗಡಕರಿ ರಂಗಾಯತನದಲ್ಲಿ ವರ್ಷವಿಡೀ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿರುತ್ತವೆ. ಮುಂಬಯಿಗೆ ಹೋಲಿಸಿದರೆ ’ತೂಕಡಿಸುತ್ತಿರುವ ನಗರ’ ಎನ್ನಿಸಿಕೊಳ್ಳುತ್ತಿದ್ದ ಠಾಣೆ ೧೯೯೦ರಿಂದ ಈಚೆಗೆ ಅನೇಕ ಪಟ್ಟು ಬೆಳೆದಿದೆ. ಮುಂಬಯಿಯ ಅತಿ ಇಕ್ಕಟ್ಟಾದ ಮತ್ತು ಅತಿ ತುಟ್ಟಿ ಮನೆಗಳಿಂದ ಬೇಸತ್ತ ಜನ ಅಗ್ಗದ ಮತ್ತು ಸೌಕರ್ಯಯುತವಾದ ಮನೆಯನ್ನು ಹುಡುಕಿಕೊಂಡು ಠಾಣೆಗೆ ಲಗ್ಗೆ ಹಾಕಿದರು.
ಮುಂಬಯಿಯಂತೆ ವರ್ಣರಂಜಿತ ರಾತ್ರಿಗಳಿಲ್ಲದಿದ್ದರೂ, ಸಂಜೆಯ ಕಾರ್ಯಕ್ರಮಗಳು ಬೇಕಾದಷ್ಟುಇವೆ. ಊಟ, ತಿಂಡಿಗೆ ತರತರಹೆಯ ಪುಷ್ಕಳ ಹೋಟೆಲುಗಳಿವೆ. ಇಲ್ಲಿ ಪಾಂಚಪಾಖಡಿ ಪ್ರದೇಶ ವಿಧವಿಧವಾದ ಹೋಟೆಲುಗಳು, ಐಸ್ ಕ್ರೀಮ್ ಪಾರ್ಲರುಗಳು, ಕೇಕ್ ಅಂಗಡಿಗಳು ಇತ್ಯಾದಿಗಳಿಂದ ಪ್ರಸಿದ್ಧವಾಗಿದೆ. ’ದಹಿ ಹಂಡಿ’ ಎಂಬ ಗೋಕುಲಾಷ್ಟಮಿಯ ದಿನ ಆಡುವ , ಜನ ಪಿರಮಿಡ್ಡಿನ ಆಕಾರದಲ್ಲಿ ಒಬ್ಬರಮೇಲೊಬ್ಬರು ನಿಂತು ಮೊಸರಿನ ಕುಡಿಕೆಯನ್ನು ಒಡೆಯುವ ಆಟ ಇಲ್ಲಿ ಬಹಳ ಜನಪ್ರಿಯ. ಇಲ್ಲಿಯ ಎರಡು ಅಂಥಾ ದಹಿ ಹಂಡಿ ಪ್ರಾಯೋಜಕರು ಗೆದ್ದ ತಂಡಕ್ಕೆ ೧೦ ಲಕ್ಷ ರೂಪಾಯಿಗೂ ಹೆಚ್ಚು ಬಹುಮಾನ ಘೋಷಿಸುತ್ತಾರೆ.
ವಿಶೇಷ ತಾಣಗಳು
[ಬದಲಾಯಿಸಿ]ಠಾಣೆ ಕೇಂದ್ರೀಯ ಕಾರಾಗೃಹ, ಸೈಂಟ್ ಜಾನ್ ದ ಬ್ಯಾಪ್ಟಿಸ್ಟ್ ಚರ್ಚು, ಕೌಪೀನೇಶ್ವರ ಮಂದಿರ, ತಲಾವ್ ಪಾಳಿ, ಉಪವನ ಕೆರೆ, ಯವೂರ್ ಗುಡ್ಡ, ಚಂದನವಾಡಿಯ ಬ್ರಹ್ಮ ದೇವ ದೇವಾಲಯ
ಕೆರೆಗಳು
[ಬದಲಾಯಿಸಿ]ಠಾಣೆ ನಗರದಲ್ಲಿ ಸುಮಾರು ಮೂವತ್ತು ಕೆರೆಗಳಿದ್ದು ಇದನ್ನು ’ಕೆರೆಗಳ ನಗರ’ ಎಂದೇ ಕರೆಯಲಾಗುತ್ತದೆ. ಮಸುಂದಾ (ಅಥವಾ ತಲಾವ್ ಪಾಳಿ) ಇವುಗಳಲ್ಲಿ ಹೆಸರುವಾಸಿಯಾದದ್ದು. ಇಲ್ಲಿ ದೋಣಿವಿಹಾರದ ಸೌಲಭ್ಯವಿದೆ.