ದೇವನಹಳ್ಳಿಯ ಸುಭದ್ರಕೋಟೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಟಿಪ್ಪೂ ತವರಿನ ಸುಂದರ ಕೋಟೆ,ದೇವನಹಳ್ಳಿಯ ಸುಭದ್ರಕೋಟೆ..

ರಾಜ್ಯದ ರಾಜಧಾನಿ ಬೆಂಗಳೂರಿಗೆ ಕೇವಲ ೩೫ ಕಿಲೋ ಮೀಟರ್ ದೂರದಲ್ಲಿರುವ ಊರು ದೇವನಹಳ್ಳಿ. ದೇವನಹಳ್ಳಿ ಇತಿಹಾಸ ಪ್ರಸಿದ್ಧವಾದ ಸ್ಥಳ. ಆದರೂ ದೇವನಹಳ್ಳಿ ಜನಜನಿತವಾದದ್ದು ಕೇವಲ ಐದಾರು ವರ್ಷದಿಂದೀಚೆಗೆ. ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಸ್ತಾಪ ಬಂದಾಗ, ಮೈಸೂರು ರಸ್ತೆಯ ಕುಂಬಳಗೋಡು ಹಾಗೂ ದೇವನಹಳ್ಳಿಯ ಹೆಸರು ಕೇಳಿಬಂತು. ಕೊನೆಗೆ ಜಯಿಸಿದ್ದು ದೇವನಹಳ್ಳಿ.

ಇತಿಹಾಸ[ಬದಲಾಯಿಸಿ]

ದೇವನಹಳ್ಳಿ ಒಂದು ಪುಟ್ಟ ಊರು. ಈ ಊರಿಗೆ ಖ್ಯಾತಿ ಬಂದಿದ್ದು ಮೈಸೂರು ಹುಲಿ ಟಿಪ್ಪೂ ಸುಲ್ತಾನರಿಂದ. ೧೭೫೦ರ ನವೆಂಬರ್ ೧೦ರಂದು ಟಿಪ್ಪು ಹುಟ್ಟಿದ್ದೇ ಈ ಪುಟ್ಟ ಊರಿನಲ್ಲಿ. ಚಿಕ್ಕದೊಂದು ಗುಡಿಸಿಲಿನಲ್ಲಿ. ದೇವನಹಳ್ಳಿ ಅತ್ಯಂತ ಪುರಾತನವಾದ ಊರು. ೧೪ನೇ ಶತಮಾನದಲ್ಲೇ ಇಲ್ಲಿ ಊರಿತ್ತು ಎಂದು ಶಾಸನಗಳು ಸಾರುತ್ತವೆ. ಈ ಊರಿನ ಹಿಂದಿನ ಹೆಸರು ದೇವನದೊಡ್ಡಿ. ಇಲ್ಲಿ ೫೦೦ ವರ್ಷಗಳಷ್ಟು ಪುರಾತನವಾದ ಭದ್ರವಾದ ಹಾಗೂ ಆಮೆಯಾಕಾರದ ಸುಂದರ ಕೋಟೆ ಇದೆ. ಕಂಚಿಯಿಂದ ವಲಸೆ ಬಂದ ಆವತಿ ರಾಜವಂಶದ ಮಲ್ಲಭೈರೇಗೌಡ ೧೫೦೧ರಲ್ಲಿ ಈ ಕೋಟೆ ಕಟ್ಟಿದ ಎನ್ನುತ್ತದೆ ಇತಿಹಾಸ.

೧೪ನೇ ಶತಮಾನದ ಆದಿಯಲ್ಲಿ ತಮಿಳುನಾಡಿನ ಕಾಂಚೀಪುರ ಸಮೀಪದ ಅತ್ತೂರಿನ ಪಾಳೆಯಗಾರರ ಉಪಟಳ ತಾಳಲಾರದೆ ಊರು ಬಿಟ್ಟು ಬಂದ ರಣಭೈರೇಗೌಡ ಹಾಗೂ ಆತನ ಆರು ಸಹೋದರರು ಸಮೃದ್ಧವಾಗಿ ನೀರಿದ್ದ ದೇವನಹಳ್ಳಿ ಸಮೀಪದ ಆವತಿ ಎಂಬ ಗ್ರಾಮದಲ್ಲಿ ನೆಲೆಸಿದರು. ಊರಿನಲ್ಲಿ ಉತ್ತಮ ಕೆಲಸ ಮಾಡಿ ಯಜಮಾನಿಕೆ ಮಾಡಿದರು. ೧೭೪೯ರಲ್ಲಿ ದಳವಾಯಿ ನಂಜರಾಜಯ್ಯ ಇದನ್ನು ವಶಪಡಿಸಿಕೊಂಡ. ಆಗ ಇದು ಮೈಸೂರು ಅರಸರ ಆಳ್ವಿಕೆಗೆ ಒಳಪಟ್ಟಿತು. ಹೈದರಾಲಿಯ ಶೌರ್ಯ ಪ್ರತಾಪಗಳು ಬೆಳಕಿಗೆ ಬಂದಿದ್ದೇ ಈ ಯುದ್ಧದಲ್ಲಿ. ಹೈದರಾಲಿ ರಾಜನಾದ ಬಳಿಕ ಈ ಕೋಟೆಯನು ದುರಸ್ತಿ ಮಾಡಿಸಿದ. ಹೈದರ್ ಈ ಕೋಟೆಯನ್ನು ಮತ್ತೆ ಕಟ್ಟಿಸಿದ ಎಂಬ ಉಲ್ಲೇಖಗಳೂ ಇವೆ. ನಂತರ ದೇವನಹಳ್ಳಿಗೆ ಟಿಪ್ಪು ಯೂಸಫಾಬಾದ್ ಎಂದೂ ಕರೆದ. ಆದರೆ ಆ ಹೆಸರು ಸ್ಥಿರವಾಗಲಿಲ್ಲ. ೧೭೯೧ರಲ್ಲಿ ಈ ಕೋಟೆ ಕಾರ್ನವಾಲೀಸ್ ಪಾಲಾಯಿತು.ಇಂದಿಗೂ ಇಲ್ಲಿ ಟಿಪ್ಪೂ ಹುಟ್ಟಿದ ಸ್ಥಳವನ್ನು ರಾಷ್ಟ್ರೀಯ ಸ್ಮಾರಕ ಮಾಡಲಾಗಿದೆ.

ಕೋಟೆ[ಬದಲಾಯಿಸಿ]

ಕಲ್ಲು, ಇಟ್ಟಿಗೆ, ಗಾರೆಯಿಂದ ನಿರ್ಮಿಸಿರುವ ಈ ಕೋಟೆಯಲ್ಲಿ ೧೩ ವೃತ್ತಾಕಾರದ ಕೊತ್ತಲಗಳಿವೆ. ಎರಡು ಚೌಕಾಕಾರದ ಬತೇರಿಗಳಿವೆ. ಪ್ರತಿ ಹೊರಭಿತ್ತಿಯ ಒಳಗಡೆ ಚಿಕ್ಕ ಚಿಕ್ಕ ರಂದ್ರಗಳಿವೆ. ಈ ರಂಧ್ರಗಳು ಇಂಗ್ಲಿಷ್ ವಿ ಆಕಾರದಲ್ಲಿದ್ದು ದೂರದರ್ಶಕದಂತೆ ಕೆಲಸ ಮಾಡುತ್ತವೆ. ಈ ಕಿಂಡಿಗಳಲ್ಲಿ ನೋಡಿದರೆ ಕೋಟೆಯ ಹೊರಗಿನ ಚಿತ್ರಣ ಸಂಪೂರ್ಣ ಕಾಣುತ್ತದೆ. ಶತ್ರುಗಳಿಂದ ರಕ್ಷಣೆ ಪಡೆಯಲು ಇದು ಅದ್ಭುತವಾದ ಕಾರ್ಯವಾಗಿದೆ.

ಕೋಟೆಯ ಪೂರ್ವದ ಬಾಗಿಲು ಬಿದ್ದು ಹೋಗಿದೆಯಾದರೂ, ಪಶ್ಚಿಮದ ಬಾಗಿಲು ಸುಭದ್ರವಾಗಿದೆ. ಶತ್ರುಗಳ ದಾಳಿಯಿಂದ ರಕ್ಷಿಸಲು ಬೇಕಾದ ಸಕಲ ವ್ಯವಸ್ಥೆಯನ್ನೂ ಈ ಕೋಟೆಯಲ್ಲಿ ಮಾಡಲಾಗಿದೆ. ಕೋಟೆಯ ಒಳಗೇ ನಿಂತು ಹೊರಗಿನಿಂದ ಆಕ್ರಮಣ ಮಾಡುವ ಶತ್ರುಗಳನ್ನು ನಿಗ್ರಹಿಸಲು ಸಕಲ ಅನುಕೂಲತೆಗಳನ್ನು ಕಲ್ಪಿಸಲಾಗಿದೆ. ಅನಿವಾರ್ಯ ಪರಿಸ್ಥಿತಿಯಲ್ಲಿ ತಪ್ಪಿಸಿಕೊಳ್ಳಲು ತುರ್ತು ಮಾರ್ಗವೂ ಇದೆ. ಕೋಟೆಯ ಮೇಲೆ ಕಾವಲು ಗೋಪುರಗಳಿದ್ದು, ಇಲ್ಲಿ ಕಾವಲುಗಾರರ ನಿವಾಸಗಳೂ ಇವೆ. ಈಗ ಈ ಕಾವಲು ನಿವಾಸಗಳು ಊರಿನವರಿಗೆ ಶೌಚಗೃಹವಾಗಿ ಮಾರ್ಪಟ್ಟಿರುವುದು, ಪೋಲಿ ಹುಡುಗರ ಜೂಜಾಟದ ಕೇಂದ್ರವಾಗಿರುವುದು ದುರ್ದೈವ. ಈ ಐತಿಹಾಸಿಕ ಕೋಟೆಯನ್ನು ಸಂರಕ್ಷಿಸಿ, ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸುವ ಬದಲು ಸಂಪೂರ್ಣವಾಗಿ ನಿರ್ಲಕ್ಷಿಸಿರುವುದು ಆಗೊಮ್ಮೆ ಈಗೊಮ್ಮೆ ಬರುವ ಪ್ರವಾಸಿಗರಿಗೆ ವ್ಯಥೆಯನ್ನುಂಟು ಮಾಡುತ್ತದೆ.

ಕೋಟೆಯ ಸುತ್ತ ರಕ್ಷಣಾರ್ಥ ಕಂದಕ ತೋಡಿ ಅದರಲ್ಲಿ ನೀರು ತುಂಬಿಸಿ ಅದರಲ್ಲಿ ಮೊಸಳೆಗಳನ್ನು ಬಿಟ್ಟಿದ್ದರು ಎಂದು ಊರಿನ ಹಿರೀಕರು ಹೇಳುತ್ತಾರೆ. ಇಲ್ಲಿ ಕಂದಕ ಇತ್ತು ಎಂಬುದಕ್ಕೆ ಕುರುಹುಗಳೂ ಇವೆ. ಹಳೆಯ ನಂಜುಂಡೇಶ್ವರ ದೇವಾಲಯ, ವೇಣುಗೋಪಾಲಸ್ವಾಮಿ ದೇಗುಲ, ಸುಲ್ತಾನ್‌ಪೇಟೆ, ಪೂರ್ಣಯ್ಯನವರ ಸರೋವರ, ವೇಣುಗೋಪಾಲಸ್ವಾಮಿ ದೇವಾಲಯ, ಆವತಿಯಲ್ಲಿ ಚೆನ್ನಕೇಶವ ದೇವಾಲಯವಿದೆ.

೧೯೯೭ರಲ್ಲಿ ನಡೆದ ದೇವನಹಳ್ಳಿ ವಿಜಯಪುರ - ಟಿಪ್ಪೂ ಉತ್ಸವ ಕಾಲದಲ್ಲಿ ಇಲ್ಲಿ ಟಿಪ್ಪೂ ಪ್ರತಿಮೆಯನ್ನು ಅಂದಿನ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಉದ್ಘಾಟಿಸಿದ್ದರು. ಇಂದು ಈ ಪ್ರತಿಮೆ ತೀವ್ರ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಸರ್ಕಾರ ಮನಸ್ಸು ಮಾಡಿದರೆ ದೇವನಹಳ್ಳಿಯನ್ನು ಸುಂದರ ಪ್ರವಾಸಿ ತಾಣವಾಗಿ ಪರಿವರ್ತಿಸಬಹುದು. ಅದು ಆಗುತ್ತದೆಯೇ ಕಾದು ನೋಡಬೇಕು.