ಗಜೇಂದ್ರಗಡ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹಿನ್ನೆಲೆ:ಮರಾಠರ ಪೇಶ್ವೆಗಳ ಆಡಳಿತಕ್ಕೆ ಒಳಪಟ್ಟ ಗಜೇಂದ್ರಗಡವನ್ನು ಪ್ರಥಮ ಪೇಶ್ವೆ ದೊರೆ ಬಾಳಾಜಿ ಬಾಜಿರಾವ್ ಆಳಿದನು. ಅವರ ಆಳ್ವಿಕೆ ಸಂದರ್ಭದಲ್ಲಿ ಕೋಟೆ, ದೇವಾಲಯಗಳು, ಸ್ಮಾರಕಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಯಿತು. 15 ವರ್ಷ ಕಾಲ ನಿರಂತರ ಪರಿಶ್ರಮದಿಂದ 800 ಅಡಿ ಎತ್ತರದ ಬೆಟ್ಟದ ತುದಿಯಲ್ಲಿ ಅತ್ಯಾಕರ್ಷಣೀಯ ಕೋಟೆ ನಿರ್ಮಿಸಲಾಗಿದೆ. ಸುಮಾರು ಮುಕ್ಕಾಲು ಭಾಗ ಬೆಟ್ಟವನ್ನು ಏರಿದ ಬಳಿಕ ನೀರ ಹನುಮಾನ ದೇವಾಲಯ ಸಂಜೀವಿನಿ ಪರ್ವತವನ್ನು ಎತ್ತಿ ಹಿಡಿದು ಭಕ್ತರಿಗೆ ಬೆಟ್ಟ ಹಾಗೂ ಕೋಟೆ ನೋಡುಗರಿಗೆ ಸ್ಪೂರ್ತಿ ತುಂಬುತ್ತಿದ್ದಾನೆ. ನಂತರ ಪೂರ್ವಾಭಿಮುಖ ಇರುವ ಮೆಟ್ಟಿಲುಗಳನ್ನು ಏರಿದ ನಂತರ ತೊಟ್ಟಿಲು ಹುಡೆ ಹಾಗೂ ಅಗಸಿ ಬಾಗಿಲ ಮೂಲಕ ಕೋಟೆ ಪ್ರವೇಶಿಸುವ ಮಾರ್ಗ ನಿರ್ಮಿಸಲಾಗಿದೆ. ಕೋಟೆ ಪ್ರವೇಶಿಸುತ್ತಿದ್ದಂತೆ ಕುದುರೆ ಮೇಲೆ ಕುಳಿತು ಖಡ್ಗ ಬೀಸಿದ ಭಂಗಿಯ ಬಾಳಜಿ ಬಾಜಿರಾವ್ ಪೇಶ್ವೆಯರ ಚಿತ್ರ ಕಲ್ಲಿನಲ್ಲಿ ಕೆತ್ತಲ್ಪಟ್ಟಿದೆ.

ಮದ್ದಿನ ಮನೆ, ತೊಟ್ಟಿಲು ಹುಡೆ: ವೈರಿ ಪಡೆ ದಾಳಿ ಎದುರಿಸಲು ಕೋಟೆಯ ಪ್ರವೇಶ ದ್ವಾರದ ಬಳಿ ಪಶ್ಚಿಮಕ್ಕೆ ಮದ್ದಿನ ಮನೆ ಹಾಗೂ ತೊಟ್ಟಿಲು ಹುಡೆ ನಿರ್ಮಿಸಲಾಗಿದೆ. ಕೋಟೆಯ ಒಳಗಿನಿಂದ ಪಿರಂಗಿ ಹಾರಿಸಿ ವೈರಿ ಗಳನ್ನು ಸೆದೆ ಬಡಿಯಲು ಮದ್ದು, ಗುಂಡುಗಳ ಸಂಗ್ರಹಕ್ಕಾಗಿ ಮದ್ದಿನ ಮನೆ ನಿರ್ಮಿಸಲಾಗಿದೆ. ವೈರಿ ಸೆನ್ಯ ಗಜೇಂದ್ರಗಡ ಪ್ರವೇಶಕ್ಕೆ ನಾಲ್ಕು ದಿಕ್ಕಿನಲ್ಲೂ 10 ರಿಂದ 15 ಕಿ.ಮೀ ದೂರವಿರುವಾಗ ನೋಡಲು ದಕ್ಷಿಣಕ್ಕೆ ತೊಟ್ಟಿಲು ಹುಡೆ ನಿರ್ಮಿಸಿದ್ದು, ಕಾವಲು ಪಡೆ ಸಿಬ್ಬಂದಿ ಇದರ ಮೇಲೆ ನಿಂತು ವೈರಿ ಪಡೆಯ ಪ್ರವೇಶ ಖಚಿತ ಪಡಿಸಿಕೊಳ್ಳುತ್ತಿದ್ದರು. ತೊಟ್ಟಿಲು ಹುಡೆದ ಹಿಂಭಾಗದಲ್ಲಿ ಹುಲಿ ಹೊಂಡವಿದೆ. ಈ ಹೊಂಡದ ಪಶ್ಚಿಮ ದಿಕ್ಕಿಗೆ ಹುಲಿ, ಪೂರ್ವ ದಿಕ್ಕಿಗೆ ಬಸವಣ್ಣನ ಪ್ರತಿಮೆ ಇದೆ. ಹುಲಿಯ ಪ್ರತಿಮೆ ಪರಾಕ್ರಮದ ಸಂಕೇತವಾದರೆ, ನಂದಿ ಪೂಜ್ಯತೆ ಹಾಗೂ ನಮ್ರತೆಯ ಸಂಕೇತವಾಗಿದೆ. ಅಕ್ಕ-ತಂಗಿಯರ ಹೊಂಡಗಳಿವೆ. ಮಳೆಗಾಲದಲ್ಲಿ ಈ ಹೊಂಡಗಳ ಸೌಂದರ್ಯ ಇಂದಿಗೂ ಅಮೋಘ.