ಜಾರ್ಜ್ ಲೂಯಿ ಲಕ್ಲರ್ಕ್ ಕಾಮ್ಟಡ ಬ್ಯೂಫೊ
ಜಾರ್ಜ್ ಲೂಯಿ ಲಕ್ಲರ್ಕ್ ಕಾಮ್ಟಡ ಬ್ಯೂಫೊ (1707-88) 18ನೆಯ ಶತಮಾನದ ಫ್ರೆಂಚ್ ನಿಸರ್ಗವಿಜ್ಞಾನದ ಹಲವು ಅತಿ ಮುಖ್ಯ ಸಂಶೋಧನೆಗಳು ಹಾಗೂ ಬರೆಹಗಳಿಂದಾಗಿ ಪ್ರಸಿದ್ಧಿಗೆ ಬಂದ ವ್ಯಕ್ತಿ.
ಆರಂಭಿಕ ಜೀವನ
[ಬದಲಾಯಿಸಿ]1707ನೆಯ ಇಸವಿ ಸೆಪ್ಟೆಂಬರ್ 7ರಂದು ಈತ ಬರ್ಗಂಡಿಯ ಮಾಂಟ್‌ಬಾರ್ಡ್ ಎಂಬಲ್ಲಿ ಜನಿಸಿದ. ತಂದೆ ಬೆಂಜಮಿನ್ ಲಕ್ಲರ್ಕ್ ಬರ್ಗಂಡಿಯ ಅಧಿಕಾರಿಯಾಗಿದ್ದ. ಈತನ ತಾಯಿ ಅತಿ ಬುದ್ಧಿವಂತೆ, ಭಾವನಾಮಯಿ ಹಾಗೂ ವಿದ್ಯೆಗೆ ಪ್ರೋತ್ಸಾಹ ನೀಡುವಂಥ ಮನೋಭಾವ ಹೊಂದಿದವಳು. ತಾನು ತನ್ನ ಬುದ್ಧಿಯನ್ನು ತಾಯಿಯಿಂದ ಪಡೆದೆ ಎಂದು ಆಗಾಗ ಹೇಳುತ್ತಿದ್ದ ಈತನ ಮಾತು ನಿಜವೆಂದು ತೋರುತ್ತದೆ. ಬಾಲಕನಾಗಿದ್ದಾಗ ಈತ ಸಾಧಾರಣ ವಿದ್ಯಾರ್ಥಿ, ಆದರೆ ಗಣಿತದಲ್ಲಿ ವಿಶೇಷ ಅಭಿರುಚಿಯಿತ್ತು. ತಂದೆಯ ಆಸೆಯಂತೆಯೇ ಈತ 1723ರಲ್ಲಿ ವಕೀಲ ಕಲಿಯಲು ಪ್ರಾರಂಭಿಸಿದನಾದರೂ ಅದರಲ್ಲಿ ಯಶಸ್ಸು ಪಡೆಯಲಿಲ್ಲ. 1728ರಲ್ಲಿ ಆಂಗರ್ ಎಂಬಲ್ಲಿ ವೈದ್ಯಕೀಯಶಾಸ್ತ್ರ, ಸಸ್ಯಶಾಸ್ತ್ರ ಹಾಗೂ ಗಣಿತ ಕಲಿಯಲು ಪ್ರಾರಂಭಿಸಿದ. ದುರದೃಷ್ಟವಶಾತ್ ಈತ ಆಂಗರನ್ನು ಬಿಡಬೇಕಾಗಿ ಬಂದುದರಿಂದ ವಿದ್ಯಾಬ್ಯಾಸ ಅಲ್ಲಿಗೇ ನಿಂತಿತು.
ಶಾಸ್ತ್ರಗಳ ಅಧ್ಯಯನ ಮತ್ತು ಕೃತಿಗಳ ರಚನೆ
[ಬದಲಾಯಿಸಿ]ಈ ವೇಳೆಗೆ ಬ್ಯೂಫೊ ಕಿಂಗ್ಸ್‌ಟನ್‌ನ ತರುಣ ಡ್ಯೂಕನೊಂದಿಗೆ ಕೆಲವು ಕಾಲ ಇರಬೇಕಾಯಿತು. ಅನಂತರ ಇಬ್ಬರೂ ಸೇರಿ ಇಟಲಿ, ಇಂಗ್ಲೆಂಡ್ ಹಾಗೂ ಯೂರೊಪಿನ ಕೆಲವು ರಾಜ್ಯಗಳಿಗೆ ಭೇಟಿಯಿತ್ತರು.[೧] ಇಂಗ್ಲೆಂಡಿನಲ್ಲಿದ್ದಾಗ ರಾಯಲ್ ಸೊಸೈಟಿಯ ಸದಸ್ಯನಾಗಿ ಬ್ಯೂಫೊ ಆಯ್ಕೆಯಾದ.
ತಾಯಿಯ ನಿಧನದಿಂದಾಗಿ ಫ್ರಾನ್ಸ್‌ಗೆ ಹಿಂತಿರುಗಿದ ಜಾರ್ಜ್ ಮಾಂಟಬಾರ್ಡ್‌ದ ತನ್ನ ತೋಟದಲ್ಲಿ ವಾಸಿಸತೊಡಗಿದ. ಆತನಿಗೆ ಅಲ್ಲಿ ಸಾಕಷ್ಟು ಬಿಡುವು ದೊರೆಯುತ್ತಿದ್ದುದರಿಂದ ಕಲನಶಾಸ್ತ್ರ ಹಾಗೂ ಭೌತವಿಜ್ಞಾನದ ಸಂಶೋಧನೆಗಳನ್ನು ಪ್ರಾರಂಭಿಸಿದ. ಹಾಗೆಯೇ ಶರೀರಶಾಸ್ತ್ರಕ್ಕೆ ಸಂಬಂಧಪಟ್ಟಂತೆ ಸಸ್ಯಗಳ ಕೆಲವು ಗುಣಗಳ ಕಡೆಗೂ ದೃಷ್ಟಿ ಹರಿಸಿದ. 1735ರಲ್ಲಿ ಸ್ಟೀಫನ್ ಹೇಲ್ಸ್ ಎಂಬಾತನ ವೆಜಿಟಬಲ್ ಸ್ಟ್ಯಾಟಿಕ್ಸ್ ಎಂಬ ಪುಸ್ತಕವನ್ನು ಇಂಗ್ಲಿಷಿಗೆ ಭಾಷಾಂತರಿಸಿದ. 1746ರಲ್ಲಿ ನ್ಯೂಟನ್ನನ ಫ್ಲುಕ್ಸಿಯಾನ್ ಎಂಬ ಪುಸ್ತಕವನ್ನು ಪ್ರಕಟಿಸಿದ. ಅದರ ಮುನ್ನುಡಿಯಲ್ಲಿ ಶೂನ್ಯಕಲನಶಾಸ್ತ್ರವನ್ನು ಕುರಿತಂತೆ ನ್ಯೂಟನ್ ಹಾಗೂ ಲಿಬ್ನಿಸ್ ಇವರ ನಡುವಿನ ಕೆಲವು ಭಿನ್ನಾಭಿಪ್ರಾಯಗಳನ್ನು ಕುರಿತು ಚರ್ಚಿಸಿದ. ಬರ್ಗಂಡಿಯ ಕಾಡುಗಳಲ್ಲಿಯ ಮರಗಳ ಗುಣಧರ್ಮಗಳ ಬಗ್ಗೆ ಕೆಲವು ಸಂಶೋಧನೆಗಳನ್ನು ನಡೆಸಿ ಮರಗಳ ಅಭಿವೃದ್ಧಿಗೆ ಕೆಲವು ಸಲಹೆಗಳನ್ನೂ ಸೂಚಿಸಿದ. ಮಾರೆಪಾಸ್ ಎಂಬ ಫ್ರೆಂಚ್ ಮಂತ್ರಿಯೊಬ್ಬ ಬ್ಯೂಫೋನ ಪ್ರತಿಭೆಯನ್ನು ಗುರುತಿಸಿ ಬ್ಯೂಫೊ 32 ವರ್ಷದವನಿದ್ದಾಗ (1739), ಈತನನ್ನು ಜೋರ್ಡಿನ್ ಡು ರಾಯಿಗೆ ಸಂಬಂಧಿಸಿದ ಸಂಗ್ರಹಾಲಯವೊಂದಕ್ಕೆ ವ್ಯವಸ್ಥಾಪಕನೆಂದು ನೇಮಿಸಿದ. ಬ್ಯೂಫೋನ ಅರಣ್ಯ ವಿಜ್ಞಾನದ ತಿಳಿವಳಿಕೆಯನ್ನು ಉಪಯೋಗಿಸಿಕೊಂಡು ಫ್ರೆಂಚ್ ಸರ್ಕಾರದ ಹಡಗು ನಿರ್ಮಾಣಯೋಜನೆಯಲ್ಲಿ ಕೆಲವು ಸುಧಾರಣೆಗಳನ್ನು ತರಬೇಕೆಂಬುದು ಮಾರೆಪಾಸ್‌ನ ಬಯಕೆಯಾಗಿತ್ತು. ಅದರೊಂದಿಗೆ ಕಿಂಗ್ಸ್ ಮ್ಯೂಸಿಯಮ್ಮಿನ ವರ್ಗೀಕರಣ ಕೆಲಸವನ್ನೂ ನಿರ್ವಹಿಸುವಂತೆ ಆಜ್ಞಾಪಿಸಿದ. ಇದರ ಪರಿಣಾಮವಾಗಿ ಬ್ಯೂಫೋನ ಬಹು ಮುಖ್ಯ ಕೃತಿ "ಹಿಸ್ಟರಿ ನ್ಯಾಚುರೆಲ್ಲೆ, ಜನರಲ್ ಎಟ್ ಪರ್ಟಿಕ್ಯುಲಿಯರ್" ಪ್ರಕಟವಾಯಿತು.
ಸುಪ್ರಸಿದ್ಧವಾದ "ಹಿಸ್ಟರಿ ನ್ಯಾಚುರೆಲ್ಲೆ" ಸಂಪುಟಗಳ ರಚನೆಗೆ ಈತ ದಿನವೊಂದಕ್ಕೆ 12 ಗಂಟೆಯಂತೆ ಹಾಗೂ ವರ್ಷದಲ್ಲಿ ಎಂಟು ತಿಂಗಳು ಸತತವಾಗಿ ಕೆಲಸ ಮಾಡುತ್ತಿದ್ದರೂ ಪ್ರಕಟಗೊಳ್ಳಬೇಕಾಗಿದ್ದ ಒಟ್ಟು 50 ಸಂಪುಟಗಳ ಕೃತಿ ಕೇವಲ 36 ಮಾತ್ರ ಈತ ಬದುಕಿದ್ದಾಗ ಪ್ರಕಟವಾದುವು. ಇವುಗಳ ಪೈಕಿ 15 ಸಂಪುಟಗಳು 1749-67ರ ಅವಧಿಯಲ್ಲೂ ಮುಂದಿನ ಏಳು ಸಂಪುಟಗಳು 1774-89ರ ಅವಧಿಯಲ್ಲೂ ಪ್ರಕಟವಾದುವು. ಇವುಗಳ ಪೈಕಿ ಅತಿಪ್ರಸಿದ್ಧವಾದ್ದು ಎರಡನೆಯ ಕಂತಿನ ಐದನೆಯ ಸಂಪುಟವಾದ ಇಪೋಕ್ಸ್ ಡ ಲ ನೇಚರ್ (1778). ಮೂರನೆಯ ಕಂತಿನಲ್ಲಿ 9 ಪುಸ್ತಕಗಳಿದ್ದು ಅವುಗಳಲ್ಲಿ ಪಕ್ಷಿಗಳನ್ನು ಕುರಿತ ವಿವರಣೆಯಿದೆ. ನಾಲ್ಕನೆಯ ಕಂತಿನಲ್ಲಿ ಐದು ಸಂಪುಟಗಳಿದ್ದು ಅವುಗಳಲ್ಲಿ ಲವಣಗಳ ಗುಣಧರ್ಮಗಳ ಬಗ್ಗೆ ವಿವರಿಸಲಾಗಿದೆ. ಇವು 1783ರಿಂದ 1778 ಅವಧಿಯಲ್ಲಿ ಪ್ರಕಟವಾದುವು. ಉಳಿದ ಎಂಟು ಸಂಪುಟಗಳು ಬ್ಯೂಫೊ ಸತ್ತ ತರುವಾಯ ಪ್ರಕಟವಾದುವು.[೨] ಸರೀಸೃಪಗಳು, ಮೀನುಗಳು, ತಿಮಿಂಗಿಲಗಳು ಈ ಸಂಪುಟಗಳ ವಸ್ತು. ಬ್ಯೂಫೋನ ಬರೆವಣೆಗೆಗಳಲ್ಲಿ ವಿಜ್ಞಾನದ ಕೌತುಕದೊಡನೆ ಸಾಹಿತ್ಯದ ಸೊಗಡೂ ಸೇರಿಕೊಂಡಿದ್ದು ನಿಸರ್ಗವನ್ನು ಕುರಿತ ತಾತ್ತ್ವಿಕ ಚರ್ಚೆಗಳನ್ನೂ ಅಳವಡಿಸಲಾಗಿದೆ.
ಬ್ಯೂಫೊ 1763ರಲ್ಲಿ ಫ್ರೆಂಚ್ ಅಕ್ಯಾಡೆಮಿಗೆ ಆಯ್ಕೆಯಾದಾಗ ತನ್ನ ಇನ್ನೊಂದು ಸುಪ್ರಸಿದ್ಧ ಕೃತಿ "ಡಿಸ್ಕೊರ್ಸ ಸರ್ ಸ್ಟೈಲ್" ಪ್ರಕಟಿಸಿದ.
ಬ್ಯೂಫೋನ ಸಮಕಾಲೀನರಲ್ಲಿ ಆತನ ಬಗೆಗೆ ಒಮ್ಮತದ ಅಭಿಪ್ರಾಯವಿರಲಿಲ್ಲ. ಕೆಲವರು ಬ್ಯೂಫೊ ಮೇಧಾವಿ ಎಂದರೆ ಕೆಲವರು ಈತನ ವಿವರಣೆಗಳನ್ನು ವಿರೋಧಿಸಿದ್ದಾರೆ. ಕೆಲವರು ಬ್ಯೂಫೋನನ್ನು ಕೇವಲ ತಾರ್ಕಿಕ ಎಂದರೆ ಇನ್ನೂ ಕೆಲವರು ದಾರ್ಶನಿಕ, ನಿಜವಾದ ವಿಜ್ಞಾನಿ ಎಂದಿದ್ದಾರೆ. ಆತನ ಬಗ್ಗೆ ಅಭಿಪ್ರಾಯಗಳು ಏನೇ ಇದ್ದರೂ ಆತನ ಸಂಶೋಧನೆಗಳು ನಿಸರ್ಗ ಜ್ಞಾನದಲ್ಲಿ ಮೈಲಿಗಲ್ಲುಗಳಾಗಿವೆ. "ಇಪೊಕ್ಸ್ ಡಲ ನೇಚರ್"ನಲ್ಲಿ ಈತ ಪ್ರಾಗೈತಿಹಾಸವನ್ನು ಹಲವಾರು ಸ್ತರಗಳಾಗಿ ವಿಂಗಡಿಸಿದ್ದಾನೆ. ಇಂದಿಗೂ ಭೂವಿಜ್ಞಾನಿಗಳು ಇದೇ ಮಾದರಿಯಲ್ಲಿ ಭೂಪದರಗಳನ್ನು ಸ್ತರಗಳಾಗಿ ವಿಂಗಡಿಸಿ ಪ್ರಾಗೈತಿಹಾಸವನ್ನು ಅಧ್ಯಯನ ಮಾಡುತ್ತಾರೆ. "ಹಿಸ್ಟರಿ ನ್ಯಾಚುರೆಲ್ಲೆ" ನಿಸರ್ಗ ವಿಜ್ಞಾನದ ಹಲವಾರು ಸಂಶೋಧನೆಗಳನ್ನು ಒಂದೆಡೆ ಕ್ರೋಡೀಕರಿಸುವ ಪ್ರಪ್ರಥಮ ಪ್ರಯತ್ನ ಇದರಿಂದಾಗಿ ಬ್ಯೂಫೋನ ಹೆಸರು ನಿಸರ್ಗವಿಜ್ಞಾನದಲ್ಲಿ ಇಂದಿಗೂ ಚಿರಸ್ಥಾಯಿಯಾಗಿ ಉಳಿದಿದೆ.
ಉಲ್ಲೇಖಗಳು
[ಬದಲಾಯಿಸಿ]- ↑ Otis E. Fellows and Stephen F. Milliken, Buffon, Twayne’s World Authors Series; TWAS 243 (New York: Twayne Publishers, 1972), 41-43.
- ↑ Farber, Paul (2000). Finding Order in Nature. Baltimore: Johns Hopkins University Press. p. 14.
ಹೊರಗಿನ ಕೊಂಡಿಗಳು
[ಬದಲಾಯಿಸಿ]- Works by ಜಾರ್ಜ್ ಲೂಯಿ ಲಕ್ಲರ್ಕ್ ಕಾಮ್ಟಡ ಬ್ಯೂಫೊ at Project Gutenberg
- Works by ಜಾರ್ಜ್ ಲೂಯಿ ಲಕ್ಲರ್ಕ್ ಕಾಮ್ಟಡ ಬ್ಯೂಫೊ at LibriVox (public domain audiobooks)
- Works by or about ಜಾರ್ಜ್ ಲೂಯಿ ಲಕ್ಲರ್ಕ್ ಕಾಮ್ಟಡ ಬ್ಯೂಫೊ at Internet Archive
- (in French) The Buffon project : L'histoire naturelle
- The same, in English: L'histoire naturelle
- Buffon's Hypothesis about the Origin of the Earth Archived 2023-04-19 ವೇಬ್ಯಾಕ್ ಮೆಷಿನ್ ನಲ್ಲಿ.
- Buffon's View of Domestic Cats
- Digital text Kyoto University Archived 2011-10-01 ವೇಬ್ಯಾಕ್ ಮೆಷಿನ್ ನಲ್ಲಿ.
- O'Connor, John J.; Robertson, Edmund F., "ಜಾರ್ಜ್ ಲೂಯಿ ಲಕ್ಲರ್ಕ್ ಕಾಮ್ಟಡ ಬ್ಯೂಫೊ", MacTutor History of Mathematics archive, University of St Andrews
- Buffon's American Degeneracy, from The Academy of Natural Sciences
- William Smellie's English Translation of Buffon's Natural History, General and Particular, 3rd Edition