ಗೂಳಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗೂಳಿಯು ಬೋಸ್ ಟಾರಸ್ ಪ್ರಜಾತಿಯ ಒಂದು ಅಖಂಡ (ಬೀಜ ಒಡೆಯದ) ವಯಸ್ಕ ಗಂಡು. ಇದೇ ಪ್ರಜಾತಿಯ ಹೆಣ್ಣಾದ ಹಸುವಿಗಿಂತ ಹೆಚ್ಚು ಮಾಂಸಲ ಮತ್ತು ಆಕ್ರಮಣಕಾರಿಯಾದ ಗೂಳಿಯು ದೀರ್ಘಕಾಲದಿಂದ ಅನೇಕ ಸಂಸ್ಕೃತಿಗಳಲ್ಲಿ ಒಂದು ಪ್ರಮುಖ ಸಂಕೇತವಾಗಿದೆ, ಮತ್ತು ಗೋಮಾಂಸ ಹಾಗು ಹೈನುಗಾರಿಕೆ ಮತ್ತು ಇತರ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಮಹತ್ವದ ಪಾತ್ರವಹಿಸುತ್ತದೆ. ದನಗಳಲ್ಲಿ ಬೀಜದ ಹೋರಿಗೆ ಈ ಹೆಸರುಂಟು (ಬುಲ್). ಬೀಜ ಒಡೆದದ್ದು ಎತ್ತು ಅನ್ನಿಸಿಕೊಳ್ಳುತ್ತದೆ. ವ್ಯವಹಾರದಲ್ಲಿ ತಳಿ ಉತ್ಪನ್ನಕ್ಕೆಂದೇ ಸಾಕಿರುವ ಹೋರಿಯನ್ನು ಅದೇ ಹೆಸರಿನಿಂದಲೂ ಗೂಳಿ ಎಂಬ ಹೆಸರಿನಿಂದಲೂ ನಿರ್ದೇಶಿಸುತ್ತಾರೆ. ಈ ಪದ ಸಾಮಾನ್ಯವಾಗಿ ಆರ್ಟಿಯೋಡ್ಯಾಕ್ಟಿಲ ಉಪಗಣದ ಬೋವಿಡೀ ಕುಟುಂಬಕ್ಕೆ ಸೇರಿದ ದನದ (ಬಾಸ್) ಜಾತಿಯ ಪ್ರಾಣಿಗಳ ಗಂಡುಗಳಿಗೆ ಅನ್ವಯಿಸುತ್ತದಾದರೂ ಆನೆ ಮತ್ತು ತಿಮಿಂಗಿಲಗಳ ಗಂಡುಗಳಿಗೂ ಇದೇ ಹೆಸರಿದೆ.

ಲಕ್ಷಣಗಳು[ಬದಲಾಯಿಸಿ]

ಸಾಮಾನ್ಯವಾಗಿ ಗೂಳಿಯ ಎತ್ತರ 1.5 ಮೀ. ತೂಕ 200-500 ಕಿಗ್ರಾಂ. ಮೈ ಮೇಲೆ ಸಣ್ಣಗಿನ ಹಾಗೂ ನಯವಾದ ಕೂದಲು ಬಾಲದ ತುದಿಯಲ್ಲಿ ಕೂದಲಿನ ಕುಚ್ಚೂ ಇವೆ. ದನಗಳಲ್ಲಿ ಹಿಳಲು ಇರುವ ಮತ್ತು ಇಲ್ಲದಿರುವ, ಎಂಬ ಎರಡು ವಿಧಗಳನ್ನು ಗುರುತಿಸಬಹುದು. ಭಾರತ ಮತ್ತು ಇನ್ನು ಕೆಲವು ದೇಶಗಳಲ್ಲಿ ಹಿಳಲು ಜಾತಿಯ ದನಗಳು ಕಾಣಬರುತ್ತವೆ. ಇಂಥವುಗಳಲ್ಲಿ ಗೂಳಿಯ ಹಿಳಲು, ಎತ್ತು ಮತ್ತು ಹಸುಗಳ ಹಿಳಲಿಗಿಂತ ಪುಷ್ಟವಾಗಿಯೂ ಎತ್ತರವಾಗಿಯೂ ಇದ್ದು ಶೋಭಾಯಮಾನವಾಗಿರುತ್ತದೆ.

ತಳಿಗಳು[ಬದಲಾಯಿಸಿ]

ಪಾಶ್ಚಾತ್ಯ ದೇಶಗಳಲ್ಲಿ ಫ್ರೀಸಿಯನ್ಸ್‌, ಐರ್ಷೈರ್, ಶಾರ್ಟ್‌ಹಾರ್ನ್‌, ಜರ್ಸಿ, ಬ್ರೌನ್ ಸ್ವಿಸ್ ಮತ್ತು ಗಯರನ್ಸೆ ತಳಿಗಳಿವೆ. ಮಾಂಸಕ್ಕೋಸ್ಕರ ಬೆಳೆಸುವ ತಳಿಗಳಲ್ಲಿ ಅದರ ಒಟ್ಟು ಲಕ್ಷಣಗಳು ಮುಖ್ಯ. ಆಬರ್ಡೀನ್ ಮತ್ತು ಶಾರ್ಟ್‌ಹಾರ್ನ್‌ ತಳಿಗಳು ಮಾಂಸಕ್ಕಾಗಿ ಸಾಕುವ ತಳಿಗಳಲ್ಲಿ ಹೆಸರಾದವು. ತಳಿ ಪ್ರಯೋಗಗಳಿಂದ ಒಳ್ಳೆಯ ರಾಸುಗಳನ್ನು ಬೆಳೆಸಲು ಸಾಧ್ಯವಾಗಿದೆ. ಭಾರತದಲ್ಲೂ ಕೆಲವು ಪಶುಸಂಗೋಪನ ಕೇಂದ್ರಗಳಲ್ಲಿ ಪಾಶ್ಚಾತ್ಯ ಮತ್ತು ಸ್ಥಳೀಯ ತಳಿಗಳ ಸಂಕರಗಳಿಂದ ಹೆಚ್ಚು ಹಾಲು ಕೊಡುವ ತಳಿಗಳನ್ನು ಪಡೆದಿದ್ದಾರೆ.

ಭಾರತದಲ್ಲಿರುವ ತಳಿಗಳು[ಬದಲಾಯಿಸಿ]

ಭಾರತದಲ್ಲಿ ಸುಮಾರು 26 ತಳಿಗಳಿವೆ. ಇವನ್ನು ಹಾಲು ಉತ್ಪಾದಕ, ಬೇಸಾಯದ ಮತ್ತು ಸಾಮಾನ್ಯ ಬಳಕೆಯ ತಳಿಗಳೆಂದು 3 ವಿಧಗಳಾಗಿ ವಿಂಗಡಿಸಬಹುದು.

  • ಹಾಲು ಉತ್ಪಾದಕ ಹಸುಗಳನ್ನು ಪಡೆಯಲು ಬಳಸುವ ತಳಿಗಳು ; ಈ ಗುಂಪಿನಲ್ಲಿ [[ಗಿರ್], ಸಾಹಿವಾಲ್, ಕೆಂಪು ಸಿಂಧಿ ಮತ್ತು ದೇವೊನಿ ತಳಿಗಳು ಉತ್ಕೃಷ್ಟವಾದುವು. ಗಿರ್ ತಳಿ ದಕ್ಷಿಣ ಕಾಠಿಯಾವಾಡಿನ ಗಿರ್ ಪ್ರದೇಶ, ದಕ್ಷಿಣ [[ರಾಜಸ್ಥಾನರಾಜಸ್ಥಾನ]], ವಡೋದರ ಪ್ರದೇಶಗಳಲ್ಲಿ ಕಾಣಬರುತ್ತದೆ. ಸಾಹಿವಾಲ್ ತಳಿ ಪಂಜಾಬ್ ಮತ್ತು ಉತ್ತರ ಪ್ರದೇಶಗಳಲ್ಲಿದೆ. ಕೆಂಪು ಸಿಂಧಿ ತಳಿ ಅಸ್ಸಾಂ, ಒರಿಸ್ಸ, ಕೇರಳ ಮತ್ತು ತಮಿಳುನಾಡು ಪ್ರಾಂತ್ಯದ ಕೆಲವು ಸ್ಥಳಗಳಲ್ಲಿದೆ. ದೇವೊನಿ ತಳಿ ಆಂಧ್ರ ಪ್ರದೇಶದ ಪಶ್ಚಿಮ ಮತ್ತು ಉತ್ತರ ಭಾಗಗಳಲ್ಲಿ ಕಾಣಬರುತ್ತದೆ. ಇದು ಗಾತ್ರದಲ್ಲಿ ಗಿರ್ ರಾಸನ್ನು ಹೋಲುತ್ತದೆ.
  • ಬೇಸಾಯದ ತಳಿಗಳು : ಇವುಗಳಲ್ಲಿ ಮೋಟು ಕೊಂಬಿನವು, ಲೈರ್ ರೀತಿ ಕೊಂಬಿನವು, ಮೈಸೂರು ಮಾದರಿಯವು ಮತ್ತು ಚಿಕ್ಕ ಗಾತ್ರದ ಕೆಂಪು ಬಿಳಿ ಮಚ್ಚೆಗಳಿರುವ ಮೋಟು ಅಥವಾ ಲೈರ್ ರೀತಿ ಕೊಂಬಿನವು ಎಂಬ 4 ವಿಧಗಳುಂಟು.

ಮೋಟು ಕೋಡಿನ ಗುಂಪಿನ ನಾಗೋರಿ ಬಚೌರ್ ತಳಿ ದರ್ಭಾಂಗದ ಬಚೌರ್ ಪರಗಣ, ಭಾಗಲ್ಪುರ್ ಮತ್ತು ರಾಜಸ್ತಾನದ ಕೆಲವು ಪ್ರದೇಶಗಳಲ್ಲೂ ಬಿಹಾರಿನ ಚಂಪಾರಣ್ಯ ಪ್ರದೇಶಗಳಲ್ಲೂ ಇವೆ. ಲೈರ್ ರೀತಿ ಕೊಂಬಿನ ತಳಿಯಲ್ಲಿ ಹೆಸರು ಪಡೆದ ಕೆಂಕಾಥ ಅಥವಾ ಕೆನ್ವಾರಿ ರಾಸುಗಳು ಉತ್ತರ ಪ್ರದೇಶದ ಬಂಡ ಜಿಲ್ಲೆಯ ಕೆನ್ ನದಿ ಪ್ರದೇಶದಲ್ಲಿ ಮತ್ತು ಮಧ್ಯ ಪ್ರದೇಶದ ಕೆಲವು ಭಾಗಗಳಲ್ಲಿ, ಮಾಳ್ವಿ ತಳಿ ರಾಸುಗಳು ಮಧ್ಯ ಪ್ರದೇಶದ ಮಾಳ್ವ ಮತ್ತು ಹೈದರಾಬಾದ್ನಲ್ಲಿ ಮತ್ತು ಖೇರಿಫರ್ ತಳಿ ರಾಸುಗಳು ಲಖಿಂಪುರ್ ಮತ್ತು ಖೇರಿ ಜಿಲ್ಲೆಗಳಲ್ಲೂ (ಉತ್ತರ ಪ್ರದೇಶ) ವಿಶೇಷವಾಗಿವೆ. ಮೈಸೂರು ಮಾದರಿ ತಳಿಯಲ್ಲಿ 5 ಮುಖ್ಯ ಬಗೆಯ ರಾಸುಗಳಿವೆ. ಅಮೃತಮಹಲ್ ತಳಿ ಭಾರತದಲ್ಲೆಲ್ಲ ಬಹಳ ಉತ್ತಮವಾದ ಬೇಸಾಯದ ರಾಸು. ಇದು ಚುರುಕಾದ ಮುಂಗೋಪಿ ರಾಸುವಾದರೂ ಕಷ್ಟಸಹಿಷ್ಣುತೆಗೆ ಹೆಸರಾಗಿದೆ. ಇದರ ತಲೆ ಮತ್ತು ಕೊಂಬುಗಳ ಆಕಾರವೇ ಒಂದು ವೈಶಿಷ್ಟ್ಯ. ಇವುಗಳ ಗೂಳಿಗಳಲ್ಲಿ ದೇಹದ ಪ್ರಮಾಣಕ್ಕೆ ಹೊಂದುವ ಪುಷ್ಟವಾದ ಗಾತ್ರದ ಹಿಳಲು ಇದೆ. ಇದು ಸ್ವಲ್ಪ ಮಟ್ಟಿಗೆ ಹಳ್ಳಿಕಾರ್, ಖಿಲಾರಿ ಮತ್ತು ಕಂಗಾಯಂ ತಳಿಗಳನ್ನು ಹೋಲುತ್ತದೆ. ಹಳ್ಳಿಕಾರ್ ತಳಿ ತುಮಕೂರು, ಹಾಸನ ಮತ್ತು ಮೈಸೂರು ಜಿಲ್ಲೆಗಳಲ್ಲಿ ಕಾಣಬರುತ್ತದೆ. ಖಿಲಾರಿ ತಳಿ ಸೊಲ್ಲಾಪುರ ಮತ್ತು ಸತಾರ ಜಿಲ್ಲೆಗಳಲ್ಲಿದೆ. ಬರಗೂರು ತಳಿ ಕೊಯಮತ್ತೂರು ಜಿಲ್ಲೆಭವಾನಿ ತಾಲ್ಲೂಕಿನಲ್ಲಿದೆ. ಇದು ಹಳ್ಳಿಕಾರ್ ರಾಸುಗಳನ್ನು ಹೋಲುತ್ತದೆ. ಕಂಗಾಯಂ ತಳಿ ಸಹ ಕೊಯಮತ್ತೂರು ಜಿಲ್ಲೆಯಲ್ಲಿ ಕಾಣಬರುತ್ತದೆ. ಚಿಕ್ಕ ಗಾತ್ರದ ಕೆಂಪು ಬಿಳುಪು ಮಚ್ಚೆಗಳಿರುವ ಮೋಟು ಅಥವಾ ಲೈರ್ ರೀತಿಯ ಕೊಂಬಿರುವ ಗುಂಪಿನ ಪೊನ್ವಾರ್ ತಳಿ ಉತ್ತರ ಪ್ರದೇಶದ ಕೆಲವು ಕಡೆಗಳಲ್ಲಿದೆ. ಸಿರಿ ತಳಿ ಡಾರ್ಜಿಲಿಂಗ್ ಗುಡ್ಡ ಪ್ರದೇಶಗಳಲ್ಲಿ ಕಾಣಬರುತ್ತದೆ. ಚಳಿ ಮತ್ತು ಮಳೆಗಳಿಂದ ರಕ್ಷಣೆ ಪಡೆಯಲು ಇವುಗಳಿಗೆ ದಪ್ಪವಾದ ಕೂದಲಿನ ಹೊದಿಕೆ ಇದೆ. ಸಾಮಾನ್ಯವಾಗಿ ಬಳಕೆಯ ತಳಿಗಳನ್ನು ಮೋಟು ಕೊಂಬಿನವು ಮತ್ತು ಲೈರ್ ರೀತಿಯ ಕೊಂಬಿನವು ಎಂದು ಎರಡು ವಿಧಗಳಾಗಿ ವಿಂಗಡಿಸಬಹುದು. ಮೋಟು ಕೊಂಬಿನ ಗುಂಪಿನಲ್ಲಿ 8 ತಳಿಗಳಿವೆ. ನಿಮಾರಿ ತಳಿ ನಿಮಾರಿ ಮತ್ತು ಇಂದೂರು ಜಿಲ್ಲೆಯ ನಿವಾಸಿ. ಡಂಗಿ ತಳಿ ಅಹಮದ್ನಗರ, ಖಾಂದೇಶ್ ಜಿಲ್ಲೆ (ಮಹಾರಾಷ್ಟ್ರ) ಮತ್ತು ಡಂಗ್ಸ್‌ ಮುಂತಾದೆಡೆಗಳಲ್ಲಿದೆ. ಹರಿಯಾಣ ತಳಿ ಹರಿಯಾಣದಲ್ಲೂ ಮೇವತಿ ತಳಿ ಮಥುರಾ ಜಿಲ್ಲೆಯಲ್ಲೂ (ಉತ್ತರ ಪ್ರದೇಶ) ರಾತ್ ತಳಿ ಅಲ್ವಾರ್ನಲ್ಲೂ ಓಂಗೋಲ್ ತಳಿ ನೆಲ್ಲೂರು ಮತ್ತು ಗುಂಟೂರು ಪ್ರದೇಶಗಳಲ್ಲೂ ಗೊವಲಾವೊ ತಳಿ ಮಧ್ಯ ಪ್ರದೇಶ ಮತ್ತು ನಾಗಪುರಗಳಲ್ಲೂ ಕೃಷ್ಣಾ ಕಣಿವೆ ತಳಿ ಕೃಷ್ಣಾನದಿ ಪ್ರದೇಶದಲ್ಲೂ ಕಾಣಬರುತ್ತವೆ. ಲೈರ್ ರೀತಿ ಕೋಡಿನ ರಾಸುಗಳಲ್ಲಿ ತಾರ್ಪಾರ್ಕರ್ (ತಾರಿ) ತಳಿ ಜೋಧಪುರ, ಜೈಸಲ್ಮೆರ್ ಮತ್ತು ಕರ್ನಾಲ್ಗಳಲ್ಲಿ ವಾಸಿಸುತ್ತದೆ. ಕಂಕರೆಜ್ ತಳಿ ಕಚ್ಛ್‌ ಮತ್ತು ಸರಸ್ವತಿ ನದಿ ಪ್ರದೇಶಗಳಲ್ಲಿದೆ ದನಗಳು.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಗೂಳಿ&oldid=1093796" ಇಂದ ಪಡೆಯಲ್ಪಟ್ಟಿದೆ