ವಿಷಯಕ್ಕೆ ಹೋಗು

ಜೋಧಪುರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜೋಧಪುರ್
Jodhpur
city
Location of ಜೋಧಪುರ್
Government
 • MayorDr. Om Kumari Gehlot
Population
 (2001)
 • city೮,೪೬,೪೦೮
 • Metro
೯,೫೧,೦೦೦

ಜೋಧಪುರ್(जोधपुर)ಇದು ರಾಜಸ್ಥಾನದ ಎರಡನೇಯ ದೊಡ್ಡ ನಗರ ಮತ್ತು ಪ್ರವಾಸಿ ತಾಣ. ಇದೇ ಹೆಸರಿನ ರಾಜ ಮನೆತನದ ರಾಜಧಾನಿಯು ಇದಾಗಿತ್ತು, ಈ ರಾಜ ಮನೆತನವನ್ನು 'ಮಾರ್ವಾರ್' ಎಂದೂ ಕರೆಯಲಾಗುತ್ತಿತ್ತು. ಇದು ಪ್ರಸಿದ್ಧ ಪ್ರವಾಸಿ ತಾಣವಾಗಿದ್ದು, ಇಲ್ಲಿ ಮತ್ತು ಹತ್ತಿರದಲ್ಲಿ ಅನೇಕ ಮಂದಿರಗಳು, ಅರಮನೆಗಳು, ಮತ್ತು ಕೋಟೆಗಳಿವೆ. ಅಲ್ಲದೇ ಥಾರ್ ಮರುಭೂಮಿಯ ಸುಂದರ ದೃಶ್ಯವನ್ನೂ ನೋಡಬಹುದು.

ಜೋಧಪುರ ಜಿಲ್ಲೆ[ಬದಲಾಯಿಸಿ]

ಜೋಧಪುರ ರಾಜಸ್ಥಾನದ ಒಂದು ಜಿಲ್ಲೆ; ಒಂದು ವಿಭಾಗ; ಅವುಗಳ ಆಡಳಿತ ಕೇಂದ್ರ. ಜಿಲ್ಲೆಯ ವಿಸ್ತೀರ್ಣ 22,860 ಚ. ಕಿಮೀ. ಜನಸಂಖ್ಯೆ 11,52,712 (1971). ರಾಜಸ್ಥಾನದ 6.6% ಭಾಗವನ್ನು ಆವರಿಸಿರುವ ಈ ಜಿಲ್ಲೆ ವಿಸ್ತಾರದಲ್ಲಿ ರಾಜ್ಯದ ಜಿಲ್ಲೆಗಳಲ್ಲಿ ನಾಲ್ಕನೆಯದು. ಅಲ್ಲಲ್ಲಿ ಉಸುಕಿನ ದಿಣ್ಣೆಗಳಿಂದ ಕೂಡಿರುವ ಈ ಪ್ರದೇಶದಲ್ಲಿ ಕಂದು ಮತ್ತು ಬೂದು ಬಣ್ಣದ ಮರಳು ಹರಡಿಕೊಂಡಿದೆ. ವಾರ್ಷಿಕ ಸರಾಸರಿ ಮಳೆ 25". ಇಲ್ಲಿಯದು ಆರೋಗ್ಯಕರವಾದ ಒಣ ಹವೆ. ಸರಾಸರಿ ಉಷ್ಣತೆ ಸು.12.5º ಅ. ನಿಂದ ಸು. 32.5º ಅ ವರೆಗೆ. ವಿಶಾಲವಾದ ಥಾರ್ ಮರುಭೂಮಿಯ ಭಾಗವಾಗಿರುವ ಈ ಪ್ರದೇಶದಲ್ಲಿ ಅಲ್ಲಲ್ಲಿ ಕಪ್ಪು ಬಣ್ಣದ ಮರಳುಗಲ್ಲು ರಾಶಿಗಳು ಕಾಣಸಿಗುತ್ತವೆ. ಫಿದುಸಾರದ ಹತ್ತಿರ ಮರಳುಗಲ್ಲುಗಳ ಗಣಿಗಳಿವೆ. ಮನೆಗಳ ಚಾವಣಿಗೆ ಹಾಸಲು ಇವನ್ನು ಬಳಸುತ್ತಾರೆ. ಪಿಪಾರ ಪಟ್ಟಣದ ಬಳಿ ಬಿಳಿ ಮಣ್ಣೂ ಬಿಲಾರಾ ತಹಸೀಲಿನಲ್ಲಿ ಸುಣ್ಣದ ಕಲ್ಲೂ ಚಿರೀ ಮತ್ತು ಮೋಟಾಯಿ ಗ್ರಾಮಗಳ ಬಿಳಿ ಜಿಪ್ಸಮ್ ಹುಡಿಯೂ ಹೇರಳವಾಗಿ ದೊರೆಯುತ್ತವೆ.

ಗೋಧಿ, ಜೋಳ, ಸಜ್ಜೆ, ಎಣ್ಣೆಕಾಳು ಇಲ್ಲಿಯ ಮುಖ್ಯ ಬೆಳೆಗಳು. ನೆಯ್ಗೆ, ಹಿತ್ತಾಳೆ ಪಾತ್ರೆಗಳ ತಯಾರಿಕೆ. ದಂತದ ಕುಸುರಿ ಮತ್ತು ಅಮೃತಶಿಲೆಯ ಆಟಿಕೆಗಳಿಗಾಗಿ ಈ ಜಿಲ್ಲೆ ಪ್ರಸಿದ್ಧವಾಗಿದೆ.

ಜೋಧಪುರ ನಗರ[ಬದಲಾಯಿಸಿ]

ಜೋಧಪುರ ಸಂಸ್ಥಾನವು ಜಿಲ್ಲೆಯ ಆಡಳಿತ ಕೇಂದ್ರ. ಹಿಂದೆ ಜೋಧಪುರ ಸಂಸ್ಥಾನದ ರಾಜಧಾನಿಯಾಗಿತ್ತು. ರಾಜಸ್ಥಾನ ರಾಜ್ಯದ ಎರಡನೆಯ ದೊಡ್ಡ ನಗರ. ಜನಸಂಖ್ಯೆ 4,76,695 (1971). ಪುಷ್ಕರ ಸರೋವರದ ಹತ್ತಿರ ಉಗಮ ಹೊಂದಿ ಕಚ್ಛ್ ರಣದ ಕಡೆಗೆ ಹರಿಯುವ ಲೂನೀ ನದಿಯ ಆಚೀಚೆ ದಂಡೆಗಳ ಮೇಲೆ ಜೋಧಪುರ ನಗರ ಹಬ್ಬಿದೆ. ನಗರದ ಸುತ್ತಲೂ ಕಲ್ಲಿನ ಗೋಡೆ ಇದೆ. ಸು. 6 ಮೈ. ಉದ್ದದ ಈ ಗೋಡೆಗೆ ಏಳು ದ್ವಾರಗಳಿವೆ. ಅವುಗಳಲ್ಲಿ ಸಾಗೋರಿ, ಸಜೋತಿ, ಮೇರ್ತಿಯಾ, ಜಾಲೋರಿ ಮತ್ತು ಶಿವಾಂಚಿ ದ್ವಾರಗಳು ಮುಖ್ಯವಾದುವು. ಈ ವಿಶಾಲವಾದ ಕೋಟೆಯೊಳಗೆ ಒಂದು ಕೋಟೆಯುಂಟು. ಅದರಲ್ಲಿ ವಿಶಾಲವಾದ ಬಂಡೆಗಲ್ಲಿನ ಮೇಲೆ ಒಂದು ಅರಮನೆ ಇದೆ. ಆಯಪೋಲ, ಲೋಹಾಪೋಲ, ಫತೇಹಜಪೋಲ ಎಂಬ ಮೂರು ಮಹಾದ್ವಾರಗಳುಳ್ಳ, ಸೂರಸಿಂಗ್ ಕಟ್ಟಿಸಿದ ಮೋತೀ ಮಹಲ್, ಮತ್ತು ಅಭಯಸಿಂಗ್ ಕಟ್ಟಿಸಿದ ಪೂಲ್ ಮಹಲ್ ಸುಂದರವಾಗಿದೆ. ನಗರದಲ್ಲಿರುವ ಸಿಂಗಘರ್ ಚೌತ್, ಫತೇಹ ಮಹಲ್, ಗುಲಾಬ್ ಸಾಗರ ತೀರದಲ್ಲಿರುವ ರಾಜಮಹಲ್ ಮತ್ತು ತಲ್ಹಾಟಿಕಾ ಮಹಲ್‍ಗಳೂ ಭಿನ್ನವಾಗಿವೆ. ಚಿತಾರ ಗುಡ್ಡದ ಮೇಲೆ ಸುಯೋಜಿತವಾದ ಉದ್ಯಾನ, ಈಜುಕೊಳ ಮತ್ತು ಮಹಾದ್ವಾರಗಳುಳ್ಳ ಉಮೇಡ್ ಭವನ ಇಲ್ಲಿಯ ಇನ್ನೊಂದು ಒಳ್ಳೆಯ ಕಟ್ಟಡ, ಸಾರ್ವಜನಿಕ ವಾಚನಾಲಯ, ಸರ್ದಾರ್ ವಸ್ತುಸಂಗ್ರಹಾಲಯ, ಜಸವಂತ್‍ಧಾರ ಸ್ಮಾರಕ ಇವು ಪ್ರೇಕ್ಷಣೀಯ. ಇಲ್ಲಿ ಅನೇಕ ಕಾಲೇಜುಗಳೂ ಒಂದು ವಿಶ್ವವಿದ್ಯಾಲಯವೂ (1962) ಇವೆ. ಚುಂದ್ರಿಸೀರೆ, ನಕ್ಷೆಗಳಿರುವ ಹಿತ್ತಾಳೆ ಪಾತ್ರೆ, ಬಟ್ಟೆಯ ಮೇಲೆ ನಕಾಸೆ, ಚರ್ಮದ ಪಟ್ಟೆ, ರುಮಾಲು, ಬಗೆಬಗೆಯ ನಕಾಸೆಗಳ ಪಾದರಕ್ಷೆ ಇವುಗಳಿಗೆ ಜೋಧಪುರ ಪ್ರಸಿದ್ಧ.

ಮಾರವಾಡ ಸಂಸ್ಥಾನದ ರಾಜಧಾನಿಯಾಗಿದ್ದ ಮಾಂಡೋರ್ ಜೋಧಪುರದಿಂದ 8 ಕಿ. ಮೀ. ದೂರದಲ್ಲಿದೆ. ಇದು ಜೋಧಪುರ ಸಂಸ್ಥಾನಿಕರ ಸ್ಮಾರಕ ಪ್ರತಿಮೆಗಳ ಆಗರ. ಇದಲ್ಲದೆ ತೆತ್ತೀಸ್ ಕೋಟಿ ದೇವತೆಗಳ ಮಂದಿರ. ವೀರ ಪುತ್ರರ ಭವನ ಮತ್ತು ಪಠಾಣ ಗುಲಾಮ ಕಲಂದರ ಖಾನ್ ಮತ್ತು ಗಾಮಾಗಾಜಿ ಎಂಬ ಮುಸ್ಲಿಮ್ ಸಂತರ ಗೋರಿಗಳು ಇಲ್ಲಿಯ ಕ್ಷಾತ್ರತೇಜಸ್ಸಿಗೂ ಧರ್ಮ ಸಹಿಷ್ಣುತೆಗೂ ಸಾಕ್ಷಿಗಳಾಗಿ ನಿಂತಿವೆ.

ಜೋಧಪುರ ಸಂಸ್ಥಾನದ ಇತಿಹಾಸ[ಬದಲಾಯಿಸಿ]

ಜೋಧಪುರ ಸಂಸ್ಥಾನವು ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ಜೋಧಪುರ ಅಥವಾ ಮಾರವಾಡ ಭಾರತದ ಒಂದು ಆಶ್ರಿತ ಸಂಸ್ಥಾನವಾಗಿತ್ತು. ಈಗಿನ ಜಿಲ್ಲೆ ಅದರ ಒಂದು ಭಾಗ ಮಾತ್ರ. ಸಂಸ್ಥಾನಾಧೀಶರು ರಜಪೂತ ರಾಥೋಢ ವಂಶದವರು. ರಾಥೋಡ್ ವಂಶದ ಆಳ್ವಿಕೆ ಕನೌಜಿಯಲ್ಲಿ ಕೊನೆಗೊಂಡ (1194) ಮೇಲೆ ಕೊನೆಯ ಕನೌಜ್ ದೊರೆ ಜಯಚಂದನ ಮೊಮ್ಮಗನಾದ ಶಿವಾಜಿ ದ್ವಾರಕಾಯಾತ್ರೆಗಾಗಿ ಮಾರವಾಡಕ್ಕೆ ಬಂದು ಅಲ್ಲಿ ರಾಜ್ಯದ ಅಸ್ತಿಭಾರ ಸ್ಥಾಪಿಸಿದ. ಶಿವಾಜಿಯ ವಂಶದಲ್ಲಿ ಹತ್ತನೆಯವನಾದ ರಾಯ್‍ಚಂದನ ಕಾಲದಲ್ಲಿ ಮಾರವಾಡ ಅವನ ವಶವಾಯಿತು. ಅವನ ಮೊಮ್ಮಗ ಜೋಧ ಎಂಬುವನು ಜೋಧಪುರ ನಗರವನ್ನು ಸ್ಥಾಪಿಸಿದ. ಇದು ಅವನ ರಾಜಧಾನಿಯಾಯಿತು. 1561ರಲ್ಲಿ ಅಕ್ಬರ್ ಇದರ ಮೇಲೆ ಆಕ್ರಮಣ ನಡೆಸಿದ. 1679ರಲ್ಲಿ ಔರಂಗಜೇಬ್ ಮಾರವಾಡದ ಮೇಲೆ ದಂಡೆತ್ತಿಹೋಗಿ ಜೋಧಪುರವನ್ನು ಕೊಳ್ಳೆಯೊಡೆದನಲ್ಲದೆ ರಾಥೋಡರನ್ನು ಇಸ್ಲಾಂ ಧರ್ಮಕ್ಕೆ ಪರಿವರ್ತಿಸಲು ಯತ್ನಿಸಿದ. ಜೋಧಪುರ, ಉದಯಪುರ ಮತ್ತು ಜಯಪುರಗಳು ಒಂದಾಗಿ ಮೊಗಲರ ಆಳ್ವಿಕೆಯನ್ನು ತೆರವು ಮಾಡಲು ಯತ್ನಿಸಿದವು. ಆದರೆ ಅನಂತರ ಈ ಒಗ್ಗಟ್ಟು ಕ್ಷೀಣಿಸಿತು. ಮರಾಠರು ರಜಪೂತರನ್ನು ಸೋಲಿಸಿದರು. 1818ರಲ್ಲಿ ಜೋಧಪುರ ಬ್ರಿಟಿಷರ ಆಶ್ರಿತಸಂಸ್ಥಾನವಾಯಿತು. 1949ರಲ್ಲಿ ಜೋಧಪುರ ರಾಜಸ್ಥಾನ ರಾಜ್ಯದಲ್ಲಿ ವಿಲೀನಗೊಂಡಿತು.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
Jodhpur Panorama, seen from the Mehrangarh Fort.
View of the Rajasthan High Court, Sardar museum in Umaid Park and upper right is Jodhpur fort in 1960.

ಬಾಹ್ಯ ಸಂಪರ್ಕ[ಬದಲಾಯಿಸಿ]

  1. Indian Census
  2. United Nations World Urbanization Prospects
"https://kn.wikipedia.org/w/index.php?title=ಜೋಧಪುರ್&oldid=1082581" ಇಂದ ಪಡೆಯಲ್ಪಟ್ಟಿದೆ