ಕೃಷ್ಣರಾಜಪೇಟೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಕೃಷ್ಣರಾಜ ಪೇಟೆ ಇಂದ ಪುನರ್ನಿರ್ದೇಶಿತ)
ಕೃಷ್ಣರಾಜಪೇಟೆ
ಕೃಷ್ಣರಾಜಪೇಟೆ
city
Population
 (೨೦೧೧)
 • Total೨೫,೯೪೨

ಕೃಷ್ಣರಾಜಪೇಟೆಯು ಸಕ್ಕರೆಯ ಸೀಮೆ ಎಂದು ಹೆಸರಾಗಿರುವ ಮಂಡ್ಯ ಜಿಲ್ಲೆಯ ಏಳು ತಾಲ್ಲೂಕುಗಳಲ್ಲಿ ಪ್ರಮುಖ ಸ್ಥಾನವನ್ನು ಹೊಂದಿದೆ. ಪಾಂಡವಪುರ ಉಪವಿಭಾಗಕ್ಕೆ ಸೇರಿರುವ ಈ ತಾಲ್ಲೂಕು ಸಾಂಸ್ಕೃತಿಕ, ಸಾಹಿತ್ಯಿಕ, ಜಾನಪದ ಕಣಜವಾಗಿದ್ದು, ಜಿಲ್ಲೆಯ ಭೂಪಟದಲ್ಲಿ ವಿಶಿಷ್ಠ ಛಾಪನ್ನು ಮೂಡಿಸಿದೆ. ವಿಸ್ತೀರ್ಣದ ದೃಷ್ಟಿಯಲ್ಲಿ ಜಿಲ್ಲೆಯಲ್ಲಿ ಎರಡನೇ ದೊಡ್ಡ ತಾಲ್ಲೂಕಾಗಿದ್ದು, ೧೯೩೯ ರಲ್ಲಿ ನೂತನ ಮಂಡ್ಯ ಜಿಲ್ಲೆ ಉದಯವಾಗುವವರೆಗೆ ಈ ತಾಲ್ಲೂಕು ಮೈಸೂರು ಜಿಲ್ಲೆಗೆ ಸೇರಿತ್ತು. ಅದಕ್ಕೂ ಮುನ್ನ ಈ ತಾಲ್ಲೂಕು ಹಾಸನ ಜಿಲ್ಲೆಗೆ ಸೇರಿತ್ತು. ಒಟ್ಟು ೯೦೪.೪೨ ಚದರ ಕಿ.ಮೀ ವಿಸ್ತೀರ್ಣವನ್ನು ಹೊಂದಿರುವ ಈ ತಾಲ್ಲೂಕು ಸಮುದ್ರ ಮಟ್ಟದಿಂದ ೮೧೨.೨೮ ಮೀ. ಎತ್ತರದಲ್ಲಿದೆ. ೧೨’ ೩೫ ಅಕ್ಷಾಂಶದಿಂದ ೭೬’ ೧೯ ೫೦ ರೇಖಾಂಶದವರೆಗೆ ತಾಲ್ಲೂಕು ಸ್ಥಿತಗೊಂಡಿದೆ. ಪೂರ್ವ, ಈಶಾನ್ಯ, ಆಗ್ನೇಯ ದಿಕ್ಕುಗಳಲ್ಲಿ ನಾಗಮಂಗಲ ಮತ್ತು ಪಾಂಡವಪುರ ತಾಲ್ಲೂಕುಗಳು, ದಕ್ಷಿಣ ಮತ್ತು ನೈರುತ್ಯ ದಿಕ್ಕುಗಳಲ್ಲಿ ಮೈಸೂರು ಜಿಲ್ಲೆಯ ಹಾಗೂ ಉತ್ತರ ಮತ್ತು ವಾಯುವ್ಯ ದಿಕ್ಕುಗಳಲ್ಲಿ ಹಾಸನ ಜಿಲ್ಲೆಯ ಪ್ರದೇಶಗಳು ತಾಲ್ಲೂಕನ್ನು ಸುತ್ತುವರೆದಿವೆ. ನಾಗಮಂಗಲ ತಾಲ್ಲೂಕಿನ ಆದಿಚುಂಚನಗಿರಿ, ಪಾಂಡವಪುರ ತಾಲ್ಲೂಕಿನ ಕೆರೆತೊಣ್ಣೂರು ಮತ್ತು ಮೇಲುಕೋಟೆ, ಚನ್ನರಾಯಪಟ್ಟಣ ತಾಲ್ಲೂಕಿನ ಶ್ರವಣಬೆಳಗೊಳ ಇವು ಸಮೀಪದಲ್ಲಿರುವ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಾಗಿವೆ. ತಾಲ್ಲೂಕಿನಲ್ಲಿ ಅಕ್ಕಿಹೆಬ್ಬಾಳು, ಬೂಕನಕೆರೆ, ಕಸಬಾ, ಕಿಕ್ಕೇರಿ, ಶೀಳನೆರೆ ಮತ್ತು ಸಂತೇಬಾಚಹಳ್ಳಿ ಎಂಬ ೬ ಹೋಬಳಿಗಳಿವೆ. ಒಟ್ಟು ೩೧೬ ಗ್ರಾಮಗಳನ್ನು ಹೊಂದಿರುವ ಈ ತಾಲ್ಲೂಕಿನಲ್ಲಿ ೨ ನಾಡಕಚೇರಿಗಳು, ೬೬ ಗ್ರಾಮ ಲೆಕ್ಕಾಧಿಕಾರಿಗಳ ವೃತ್ತಗಳು, ೩೪ ಗ್ರಾಮಪಂಚಾಯ್ತಿಗಳಿವೆ. ೬ ಜಿ.ಪಂ ಕ್ಷೇತ್ರಗಳು ಮತ್ತು ೨೩ ತಾ.ಪಂ ಕ್ಷೇತ್ರಗಳಿದ್ದವು ೨೦೧೬ರಲ್ಲಿ ಹೊಸದಾಗಿ ಮುರುಕನಹಳ್ಳಿ ಕ್ಷೇತ್ರವನ್ನು ಹೊಸ ತಾಲೂಕು ಪಂಚಾಯಿತಿ ಕ್ಷೇತ್ರ ವನ್ನಾಗಿ ಸೃಷ್ಠಿಸಲಾಗಿದೆ ಅಲ್ಲಿಗೆ ಈಗ ಒಟ್ಟು ೨೪ ತಾ.ಪಂ.ಕ್ಷೇತ್ರಗಳಿವೆ. ಒಂದು ಪುರಸಭೆಯಿದೆ.

ಸ್ಥಳಪುರಾಣ ಮತ್ತು ಇತಿಹಾಸ[ಬದಲಾಯಿಸಿ]

ಕೃಷ್ಣರಾಜಪೇಟೆ ತಾಲ್ಲೂಕು ವಿವಿಧ ಕಾಲಘಟ್ಟಗಳಲ್ಲಿ ಹೊಯ್ಸಳರ, ಜೈನರ, ಮೈಸೂರು ಒಡೆಯರ ಮತ್ತು ವಿಜಯನಗರದ ಅರಸರ ಪ್ರಭಾವಕ್ಕೆ ಒಳಗಾಗಿದೆ. ಹೊಯ್ಸಳರ ಆಡಳಿತದಲ್ಲಿ ‘ಸಿಂಧಘಟ್ಟ ಸೀಮೆ’ ಎಂಬ ಆಡಳಿತ ವಿಭಾಗವಿದ್ದ ಬಗ್ಗೆ ಉಲ್ಲೇಖಗಳಿವೆ.

ತಾಲ್ಲೂಕು ಕೇಂದ್ರವಾಗಿರುವ ಕೃಷ್ಣರಾಜಪೇಟೆ ಮೊದಲು ‘ಅತ್ತಿಗುಪ್ಪೆ’ ಎಂಬ ಹೆಸರನ್ನು ಹೊಂದಿತ್ತು. ಉತ್ತರ ಕರ್ನಾಟಕದ ಕಡೆಯಿಂದ ಮೈಸೂರಿಗೆ ಹತ್ತಿಯನ್ನು ಮಾರಲು ಬರುತ್ತಿದ್ದವರು ಇಲ್ಲಿ ಬೀಡು ಬಿಡುತ್ತಿದ್ದರಂತೆ. ಹತ್ತಿ ತುಂಬಿಕೊಂಡು ನಿಂತಿದ್ದ ಎತ್ತಿನ ಗಾಡಿಗಳು ನೋಡುಗರಿಗೆ ಹತ್ತಿಯ ಗುಪ್ಪೆಯಾಗಿ ಕಾಣುತ್ತಿದ್ದವು. ಆದ್ದರಿಂದ ಈ ಸ್ಥಳ ‘ಹತ್ತಿಗುಪ್ಪೆ’ ಎನಿಸಿಕೊಂಡು ಕ್ರಮೇಣ ‘ಅತ್ತಿಗುಪ್ಪೆ’ಯಾಯಿತು. ಹಿಂದೆ ಗ್ರಾಮದಿಂದ ಮೈಸೂರಿಗೆ ಹೋಗುವ ರಸ್ತೆಯಲ್ಲಿ ಹೆಚ್ಚಿನ ಸಂಖ್ಯೆಯ ಅತ್ತಿಮರಗಳಿದ್ದವು. ರಸ್ತೆಯ ತುಂಬೆಲ್ಲಾ ಅತ್ತಿಯ ಹಣ್ಣುಗಳ ರಾಶಿ ಬಿದ್ದಿರುತ್ತಿತ್ತು. ಈ ಹಿನ್ನೆಲೆಯಲ್ಲಿ ಅತ್ತಿಗುಪ್ಪೆ ಎಂಬ ಹೆಸರು ಬಂತು ಎಂಬ ಸ್ಥಳಗಥೆಗಳಿವೆ. ಅಲ್ಲದೆ ಈ ಪ್ರದೇಶವು ಜೈನ ಸಂಸ್ಕೃತಿಯ ಪ್ರಭಾವಕ್ಕೆ ಒಳಗಾಗಿದ್ದು, ಅತ್ತಿಮಬ್ಬೆ, ಅತ್ತಿಗ ಮುಂತಾದ ಪದಗಳ ಬಳಕೆಯಂತೆ ಇದೂ ಅತ್ತಿಗುಪ್ಪೆಯಾಯಿತು ಎಂದೂ ಸಹ ಹೇಳಲಾಗುತ್ತದೆ. ೧೭೨೨ರ ತೊಂಡನೂರು ತಾಮ್ರ ಶಾಸನವು ಅತ್ತಿಗುಪ್ಪೆಯನ್ನು ಅಗ್ರಹಾರವಾಗಿ ಮಾಡಿದ ಬಗ್ಗೆ ಮಾಹಿತಿ ನೀಡುತ್ತದೆ. ಕೃಷ್ಣರಾಜ ಒಡೆಯರ ವರ್ಧಂತಿಯ ಅಂಗವಾಗಿ ಎಡತೊರೆ ಕೃಷ್ಣರಾಜನಗರವಾಗಿ, ಅತ್ತಿಗುಪ್ಪೆಯು ಕೃಷ್ಣರಾಜಪೇಟೆಯಾಯಿತು ಎಂದು ದಾಖಲೆಗಳಿವೆ. ೧೮೯೦ ರವರೆಗೆ ಕಿಕ್ಕೇರಿಯು ತಾಲ್ಲೂಕು ಕೇಂದ್ರವಾಗಿತ್ತು. ತರುವಾಯ ೧೮೯೧ರಿಂದ ಕೃಷ್ಣರಾಜಪೇಟೆ ತಾಲ್ಲೂಕು ಕೇಂದ್ರವಾಗಿದೆ. ಈ ಪಟ್ಟಣವು ಪುರಸಭೆಯನ್ನು ಸಹ ಹೊಂದಿದೆ. ಜಿಲ್ಲಾ ಕೇಂದ್ರದಿಂದ ೬೦ ಕಿ.ಮೀ ದೂರದಲ್ಲಿರುವ ಪಟ್ಟಣದ ಮೂಲಕ ಚನ್ನರಾಯಪಟ್ಟಣ -ಮೈಸೂರು ಹೆದ್ದಾರಿ ಹಾಗೂ ಬೆಂಗಳೂರು - ಜಲಸೂರು ಹೆದ್ದಾರಿಗಳು ಹಾದು ಹೋಗುತ್ತವೆ.

ಕೃಷ್ಣರಾಜ ಒಡೆಯರಿಗೂ ತಾಲ್ಲೂಕಿಗೂ ಅವಿನಾಭಾವ ಸಂಬಂಧವಿದೆ. ನಾಗಮಂಗಲ ಸೀಮೆಗೆ ಹೋಗುವಾಗಲೆಲ್ಲ ಈ ಮಾರ್ಗವಾಗಿಯೇ ಹೋಗುತ್ತಿದ್ದರು. ತಮ್ಮ ದಾರಿ ಮಧ್ಯೆ ವಿಶ್ರಾಂತಿ ಪಡೆಯಲು ಜಾಗಿನಕೆರೆಯ ಛತ್ರದಟ್ಟಿಯಲ್ಲಿ ಬೀಡು ಬಿಡುತ್ತಿದ್ದರು. ಈ ಬಗ್ಗೆ ದಾಖಲೆ ಒದಗಿಸುವ ಕುದುರೆ ಲಾಯ, ಅಪರೂಪದ ಕೆತ್ತನೆ, ಚಿತ್ರಕಲೆಗಳನ್ನು ಹೊಂದಿರುವ ಮನೆ ಈಗಲೂ ಕಾಣಸಿಗುತ್ತವೆ. ತಾಲ್ಲೂಕಿನಿಂದ ಮೈಸೂರಿನ ಅರಮನೆಗೆ ಹಣ್ಣು, ತರಕಾರಿಗಳು ಸೇರಿದಂತೆ ಅನೇಕ ಅಮೂಲ್ಯ ವಸ್ತುಗಳು ಹೋಗಿ ತಲುಪುತ್ತಿದ್ದ ಬಗ್ಗೆ, ಮಹಾರಾಜರ ಸೇವೆಗೆ ಅವಕಾಶ ಲಭ್ಯವಾದ ಬಗ್ಗೆ ಹಿರಿಯರು ಈಗಲೂ ಹೆಮ್ಮೆಯಿಂದ ಸ್ಮರಿಸುತ್ತಾರೆ. ಕೃಷ್ಣರಾಜಪೇಟೆ ಮತ್ತು ನಾಗಮಂಗಲ ನಡುವಿನ ರಸ್ತೆ ನಿರ್ಮಾಣಕ್ಕೆ, ಪಟ್ಟಣದ ಮುನ್ಸಿಪಲ್ ಹೈಸ್ಕೂಲ್‌ನ ಸ್ಥಾಪನೆಗೆ, ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಸ್ಥಾಪನೆಗೆ ಇವರೇ ಕಾರಣಕರ್ತರು. ಅಲ್ಲದೆ ನೀರಾವರಿ ಸೌಲಭ್ಯದ ಉದ್ದೇಶದಿಂದ ಕಟ್ಟಹಳ್ಳಿ ಅಣೆ (ಕೃಷ್ಣರಾಜಸಾಗರದ ಹಿನ್ನೀರಿನಲ್ಲಿ ಮುಳುಗಿಹೋಗಿದೆ), ಮಂದಗೆರೆ ಅಣೆ ಮತ್ತು ಹೇಮಗಿರಿ ಅಣೆ (೧೮೮೦ರಲ್ಲಿ ನಿರ್ಮಾಣ, ೧೪೫ಮೀ. ಉದ್ದ, ೯೯೨ ಹೆಕ್ಟೇರ್ ಭೂಮಿಗೆ ನೀರು) ಇವುಗಳ ನಿರ್ಮಾಣಕ್ಕೆ ಒಡೆಯರೇ ಕಾರಣ. ತಮ್ಮ ಪತ್ನಿ ದೇವೀರಮ್ಮಣ್ಣಿಯವರ ಹೆಸರಿನಲ್ಲಿ ಪಟ್ಟಣದಲ್ಲಿ ಕಟ್ಟಿಸಿರುವ ಕೆರೆಯು ಇಂದಿಗೂ ಇದೆ. ಹೀಗಾಗಿ ಹಿಂದಿನ ಅತ್ತಿಗುಪ್ಪೆ ಈಗಿನ ಕೃಷ್ಣರಾಜಪೇಟೆಯಾಯಿತು.


ಸ್ವಾತಂತ್ರ್ಯ ಹೋರಾಟದ ಹೆಜ್ಜೆಗಳು : ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತಾಲ್ಲೂಕಿನ ಪಾಲು ಗಮನಾರ್ಹವಾದುದು. ೧೯೪೨ ರಲ್ಲಿ ಗಾಂಧೀಜಿಯವರು ಕರೆನೀಡಿದ ಕ್ವಿಟ್‌ಇಂಡಿಯಾ ಚಳುವಳಿಗೆ ತಾಲ್ಲೂಕಿನ ಜನರು ಪ್ರತ್ಯಕ್ಷವಾಗಿ ಪರೋಕ್ಷವಾಗಿ ಭಾಗವಹಿಸಿ ಬೆಂಬಲ ನೀಡಿದ್ದು, ಐತಿಹಾಸಿಕ ಸಂಗತಿಯಾಗಿದೆ. ಈ ಚಳುವಳಿ ಸೆಪ್ಟೆಂಬರ್ ತಿಂಗಳಲ್ಲಿ ತನ್ನ ತೀವ್ರತೆಯನ್ನು ಹೆಚ್ಚಿಸಿಕೊಂಡಾಗ ಎಲ್ಲೆಡೆ ಕಾನೂನನ್ನು ಉಲ್ಲಂಘಿಸುವ, ಸಾರ್ವಜನಿಕ ಆಸ್ತಿಪಾಸ್ತಿಗಳನ್ನು ಹಾಳುಮಾಡುವ ಕೃತ್ಯಗಳು ಹೆಚ್ಚಾದವು. ಸೆಪ್ಟೆಂಬರ್ ೧೯ರ ರಾತ್ರಿ ತಾಲ್ಲೂಕಿನ ಆನೆಗೊಳ ಮತ್ತು ಕಿಕ್ಕೇರಿ ನಡುವಿನ ಟೆಲಿಗ್ರಾಫ್ ತಂತಿಯನ್ನು ಕತ್ತರಿಸಿ, ನಾಲ್ಕು ಕಂಬಗಳನ್ನು ಮುರಿದುಹಾಕಲಾಯಿತು. ಚನ್ನರಾಯಪಟ್ಟಣ ಮಾರ್ಗದಲ್ಲಿ ಒಂದು ಸಾವಿರ ಅಡಿಗಳಷ್ಟು ಉದ್ದದ ಟೆಲಿಗ್ರಾಫ್ ತಂತಿಯನ್ನು ಕಿತ್ತುಹಾಕಲಾಯಿತು. ಇದಲ್ಲದೆ ಮತ್ತಷ್ಟು ತೀವ್ರಗೊಂಡ ಚಳುವಳಿಯ ಪರಿಣಾಮವಾಗಿ ನೆರೆಯ ಹಾಸನ ಜಿಲ್ಲೆಯಲ್ಲಿ ನಡೆಸಿದಂತೆ ಇಲ್ಲಿಯೂ ಸಂತೆ ಸುಂಕವನ್ನು ವಿರೋಧಿಸುವ ಚಳುವಳಿ ಆರಂಭವಾಯಿತು. ಈ ನಿಟ್ಟಿನಲ್ಲಿ ಸೆಪ್ಟೆಂಬರ್ ೨೧ರಂದು ತಾಲ್ಲೂಕಿನ ಐತಿಹಾಸಿಕ ಸಂತೆಯಾದ ತೆಂಡೆಕೆರೆಯ ಸಂತೆಯಲ್ಲಿ ಪಿಕೆಟಿಂಗ್ ನಡೆಸಲಾಯಿತು. ಇದರ ಪರಿಣಾಮವಾಗಿ ೮ ಜನರನ್ನು ಪೋಲೀಸರು ಬಂಧಿಸಿದರು. ಹೀಗೆ ಅನೇಕ ಮಂದಿ ದೇಶಾಭಿಮಾನದ ಹೆಸರಿನಲ್ಲಿ ತಮ್ಮ ಮನೆ ಮಠಗಳನ್ನು ತೊರೆದು, ಕೌಟುಂಬಿಕ ಸುಖಗಳಿಗೆ ತಿಲಾಂಜಲಿಯಿತ್ತು, ಸ್ವಾತಂತ್ರ್ಯ ಹೋರಾಟಗಳಲ್ಲಿ ಭಾಗವಹಿಸಿ ಜೈಲುವಾಸ ಅನುಭವಿಸಿದವರಿದ್ದಾರೆ. ಹೊಸಹೊಳಲು ಗೋವಿಂದೇಗೌಡ, ಬಳ್ಳೇಕೆರೆಯ ಬಿ.ಆರ್. ರಂಗೇಗೌಡ ಉರುಪ್ ಪುಟ್ಟಸ್ವಾಮಿಗೌಡ, ಕೆ.ಎಸ್. ಬೋರೇಗೌಡ ಶೀಳನೆರೆ, ಕಾಗೇಪುರದ ಸುಬ್ಬೇಗೌಡ, ಮಡುವಿನಕೋಡಿ ಸಿದ್ದೇಗೌಡ, ಬೊಮ್ಮನಾಯಕನಹಳ್ಳಿ ಮಾಯಣ್ಣಗೌಡ, ಅಘಲಯದ ವೀರಭದ್ರಯ್ಯ, ಜವರೇಗೌಡ, ಮರಡಹಳ್ಳಿಯ ಗಿರೀಗೌಡ, ಎಂ.ಬಿ.ಬೋರೇಗೌಡ, ಮೊಸಳೆಕೊಪ್ಪಲು ನಿಂಗೇಗೌಡ, ಬೂಕನಕೆರೆ ಬೋರೇಗೌಡ, ಹೊಸಹೊಳಲು ಗೋವಿಂದಶೆಟ್ಟಿ, ಮಡುವಿನಕೋಡಿ ಎಂ.ಪಿ.ಹಾಳೇಗೌಡ, ಬಿದರಹಳ್ಳಿಯ ಶಿವರಾಮಯ್ಯ, ಕಿಕ್ಕೇರಿಯ ನರಸೇಗೌಡ, ಸೊಳ್ಳೇಪುರದ ಕಂಬೇಗೌಡ, ಸಿಂಧಘಟ್ಟದ ದೇವೇಗೌಡ, ಎಸ್.ಎಂ.ಮಲ್ಲಿಕಾರ್ಜುನಪ್ಪ , ರಾಮೇಗೌಡ, ಸಿದ್ದೇಗೌಡ, ಎಸ್.ಕೆ.ಲಿಂಗೇಗೌಡ, ಕಾಳೇಗೌಡ, ಎಸ್.ಸಿ.ಸದಾಶಿವಯ್ಯ, ನಂಜೇಗೌಡ, ಕಾಗೇಪುರದ ಮರೀಗೌಡ, ಪಟ್ಟಣದ ಮುದಲಿಂಗೇಗೌಡ ಸೇರಿದಂತೆ ೩೦ಕ್ಕೂ ಹೆಚ್ಚು ಸ್ವಾತಂತ್ರ್ಯ ಹೋರಾಟಗಾರರು ತಾಲ್ಲೂಕಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ

೨೦೧೧ರ ಜನಗಣತಿಯಂತೆ ತಾಲ್ಲೂಕಿನಲ್ಲಿ ೧,೩೦,೭೪೪ ಪುರುಷರು ಮತ್ತು ೧,೨೯,೯೧೩ ಮಹಿಳೆಯರು ಸೇರಿ ಒಟ್ಟು ೨,೬೦,೬೫೭ ಜನರಿದ್ದಾರೆ. ಪ್ರತಿ ಚದರ ಕಿ.ಮೀ.ಗೆ ಜನಸಾಂದ್ರತೆ ೨೭೫ ರಷ್ಟಿದೆ.

ಭೌಗೋಳಿಕ ವಿವರ[ಬದಲಾಯಿಸಿ]

ತಾಲ್ಲೂಕಿನಲ್ಲಿ ಕೆಂಪು ಮಿಶ್ರಿತ ಮಣ್ಣು ಮತ್ತು ಕೆಂಪು ಜೇಡಿಮಣ್ಣು ಹೆಚ್ಚಾಗಿ ಕಂಡುಬರುತ್ತದೆ. ಇಲ್ಲಿ ೫೭೬೭ ಹೆಕ್ಟೇರ್‌ನಷ್ಟು ಕಾಡು, ೧೫,೪೨೩ ಹೆಕ್ಟೇರ್‌ಗಳಷ್ಟು ಗೋಮಾಳ ಕಂಡುಬರುತ್ತದೆ. ೨೪,೩೪೪ ಎಕರೆಗಳಷ್ಟು ಕೃಷಿಯೋಗ್ಯ ಭೂಮಿಯಿದ್ದರೆ, ೧೨೨೧೧ ಹೆಕ್ಟೇರ್‌ಗಳಷ್ಟು ಭೂಮಿ ಕೃಷಿಯೋಗ್ಯವಲ್ಲದ ಪ್ರದೇಶವಾಗಿದೆ. ಸಾಮಾನ್ಯವಾಗಿ ವರ್ಷದ ಏಪ್ರಿಲ್‌ನಿಂದ ನವೆಂಬರ್ ತಿಂಗಳವರೆಗೆ ನೈರುತ್ಯ ಮಾರುತಗಳಿಂದಾಗಿ ಮಳೆಯಾಗುತ್ತದೆ. ಅಕ್ಟೋಬರ್ ತಿಂಗಳಲ್ಲಿ ಹೆಚ್ಚು ಮಳೆ ಸುರಿಯುತ್ತದೆ. ವಾಡಿಕೆಯಂತೆ ಪ್ರತಿವರ್ಷ ಸರಾಸರಿ ೬೫೦ಮಿ.ಮೀ ಮಳೆಯಾಗುತ್ತದೆ. ತಾಲ್ಲೂಕಿನ ಶೇ.೯೦ ರಷ್ಟು ಜನರು ವ್ಯವಸಾಯದಲ್ಲಿ ತೊಡಗಿದ್ದಾರೆ. ಇಲ್ಲಿನ ಕಸಬಾ, ಕಿಕ್ಕೇರಿ, ಅಕ್ಕಿಹೆಬ್ಬಾಳು ಹೋಬಳಿಗಳಲ್ಲಿ ನೀರಾವರಿ ಸೌಲಭ್ಯವಿದ್ದು, ಒಟ್ಟು ೨೦೫೦೧ ಹೆಕ್ಟೇರ್ ಭೂಮಿ ನೀರಾವರಿಗೆ ಒಳಪಟ್ಟಿದೆ. ಉಳಿದ ಬೂಕನಕೆರೆ, ಸಂತೇಬಾಚಹಳ್ಳಿ, ಶೀಳನೆರೆ ಹೋಬಳಿಗಳಲ್ಲಿ ಕೊಳವೆಬಾವಿ ಆಧಾರಿತ ಅರೆನೀರಾವರಿ ಮತ್ತು ಮಳೆಯಾಧಾರಿತ ಬೇಸಾಯ ವ್ಯವಸ್ಥೆಯಿದೆ. ಇಲ್ಲಿ ಪ್ರಮುಖವಾಗಿ ಹುರಳಿ, ರಾಗಿ, ಬತ್ತ, ಕಬ್ಬು, ಬಾಳೆ ತೆಂಗಿನ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಇದಲ್ಲದೆ ಹೈನುಗಾರಿಕೆ, ರೇಷ್ಮೆ ಸಾಕಣೆ ಅಲ್ಲದೆ ಮಣ್ಣಿನ ಮಡಿಕೆ ತಯಾರಿಕೆ, ಕೈಮಗ್ಗದ ನೇಯ್ಗೆಯಂತಹ ಗುಡಿಕೈಗಾರಿಕೆಗಳ ಮೇಲೂ ಸಹ ಕೆಲವರು ಅವಲಂಭಿತರಾಗಿದ್ದಾರೆ.

ತಾಲ್ಲೂಕಿನಲ್ಲಿ ಒಟ್ಟು ೨೦ ಕಿ.ಮೀ.ಗಳಷ್ಟು ಬ್ರಾಡ್‌ಗೇಜ್ ರೈಲ್ವೆ ಮಾರ್ಗವಿದ್ದು, ಅಕ್ಕಿಹೆಬ್ಬಾಳು, ಬೀರವಳ್ಳಿ ಮತ್ತು ಮಂದಗೆರೆಗಳಲ್ಲಿ ರೇಲ್ವೆ ನಿಲ್ದಾಣಗಳಿವೆ. ೮೮.೪೦ ಕಿ.ಮೀ.ಗಳಷ್ಟು ರಾಜ್ಯ ಹೆದ್ದಾರಿ, ೫೭೦.೫೨ ಕಿ.ಮೀ.ಗಳಷ್ಟು ಜಿಲ್ಲಾ ಮುಖ್ಯರಸ್ತೆ, ೧೭೧.೫೦ ಕಿ.ಮೀ.ಗಳಷ್ಟು ಜಿಲ್ಲಾ ಇತರೆ ರಸ್ತೆ ಸೇರಿ ಒಟ್ಟು ೧೮೬೮.೯೪ ಕಿ.ಮೀ.ಗಳಷ್ಟು ರಸ್ತೆ ಸೌಲಭ್ಯ ಇದೆ.

ಖನಿಜ, ನಿಕ್ಷೇಪಗಳು : ತಾಲ್ಲೂಕಿನ ಕತ್ತರಘಟ್ಟದ ಬಳಿ ಬೆಳ್ಳಿ ಬೆಟ್ಟದ ಸಾಲಿನಲ್ಲಿ ಅಲ್ಪ ಪ್ರಮಾಣದ ಚಿನ್ನದ ಮತ್ತು ಬೆಳ್ಳಿಯ ಅದಿರು ಪತ್ತೆಯಾಗಿತ್ತು. ಬಹಳ ವರ್ಷಗಳ ಕಾಲ ಅದನ್ನು ಹೊರತೆಗೆಯುವ ಪ್ರಯತ್ನ ನಡೆಯಿತಾದರೂ, ಉತ್ಪಾದನಾ ವೆಚ್ಚವು ದುಬಾರಿಯಾದ ಹಿನ್ನೆಲೆಯಲ್ಲಿ ಯೋಜನೆಯನ್ನು ಕೈಬಿಡಲಾಗಿದೆ. ಹೇಮಗಿರಿಯಲ್ಲಿಯೂ ಚಿನ್ನದ ನಿಕ್ಷೇಪಗಳಿಗಾಗಿ ಹಿಂದೆ ಹುಡುಕಾಟ ನಡೆದಿತ್ತು ಎಂದು ಹೇಳಲಾಗುತ್ತದೆ. ಶೀಳನೆರೆ ಹೋಬಳಿಯಲ್ಲಿ ಮತ್ತು ಗಜರಾಜಗಿರಿಯಲ್ಲಿ ಕ್ರೋಮೈಟ್, ಬೆಣಚುಕಲ್ಲು, ಬೂದು ಬಣ್ಣದ ಶಿಲೆ, ಬೆಳ್ಳಿಬೆಟ್ಟದ ಸಾಲಿನಲ್ಲಿ ಕಲ್ನಾರು ಹಾಗೂ ಬೂಕನಕೆರೆ ಹೋಬಳಿಯ ವಿವಿಧೆಡೆ ಆಭ್ರಕದ ಅದಿರುಗಳು ದೊರಕಿವೆ

ಪ್ರಮುಖ ಕೆರೆಗಳು, ನಾಲೆಗಳು ಮತ್ತು ಸೇತುವೆಗಳು[ಬದಲಾಯಿಸಿ]

ತಾಲ್ಲೂಕಿನಲ್ಲಿ ಒಟ್ಟು ೧೦೪ ಕೆರೆಗಳಿದ್ದವು ಎಂದು ದಾಖಲೆಗಳು ತಿಳಿಸುತ್ತವೆ. ಬಹುತೇಕ ಕೆರೆಗಳನ್ನು ಒತ್ತುವರಿ ಮಾಡಿಕೊಳ್ಳಲಾಗಿದ್ದು, ಮುಚ್ಚಿಹೋಗಿವೆ. ಪ್ರಮುಖ ಕೆರೆಗಳೆಂದರೆ ವಳಗೆರೆಮೆಣಸ, ಅಗ್ರಹಾರಬಾಚಹಳ್ಳಿ, ಅಘಲಯ, ಬಳ್ಳೇಕೆರೆ, ಸಿಂಧಘಟ್ಟ, ಕಿಕ್ಕೇರಿ, ಸಂತೇಬಾಚಹಳ್ಳಿ, ಬೀರವಳ್ಳಿಗಳಲ್ಲಿನ ಕೆರೆಗಳು, ಪಟ್ಟಣದ ದೇವೀರಮ್ಮಣ್ಣಿ ಕೆರೆ, ಹೊಸಹೊಳಲು ಗ್ರಾಮದ ದೊಡ್ಡಕೆರೆ ಸೇರಿದಂತೆ ವಿವಿಧ ಕೆರೆಗಳು ಇಂದಿಗೂ ಉಳಿದುಕೊಂಡಿದ್ದು, ಜನ ಜಾನುವಾರುಗಳಿಗಲ್ಲದೆ, ಸುಮಾರು ೫೫೦೦ ಹೆಕ್ಟೇರ್ ಭೂಪ್ರದೇಶದಲ್ಲಿರುವ ವಿವಿಧ ಬೆಳೆಗಳಿಗೆ ನೀರೊದಗಿಸುತ್ತಿವೆ. ಅಕ್ಕಿಹೆಬ್ಬಾಳು ನಾಲೆ, ಹೇಮಗಿರಿ ನಾಲೆ, ಮಂದಗೆರೆ ನಾಲೆ ಮತ್ತು ಶ್ರೀರಾಮದೇವರ ನಾಲೆ ತಾಲ್ಲೂಕಿನ ಪ್ರಮುಖ ನಾಲೆಗಳಾಗಿದ್ದು, ಸುಮಾರು ೧೧೯೫೦ ಹೆಕ್ಟೇರ್ ಪ್ರದೇಶಕ್ಕೆ ನೀರನ್ನುಣಿಸುತ್ತಿವೆ. ಪ್ರಾಚೀನವಾದ ಅಕ್ಕಿಹೆಬ್ಬಾಳು ಸೇತುವೆ, ಕಟ್ಟಹಳ್ಳಿ ಸೇತುವೆ, ಬಂಡಿಹೊಳೆ ಸೇತುವೆ, ಮಂದಗೆರೆ ಸೇತುವೆ, ಗೊಂದಿಹಳ್ಳಿ ಸೇತುವೆ, ಒಡೆಯರ ಕಾಲದ ಹೇಮಗಿರಿ ಅಣೆ, ಕೃಷ್ಣರಾಜಸಾಗರದ ಹಿನ್ನೀರಿನಲ್ಲಿ ಮುಳುಗಿಹೋದ ಕಟ್ಟಹಳ್ಳಿ ಅಣೆ ಪ್ರಮುಖವಾಗಿವೆ. ಚಟ್ಟಂಗೆರೆ ಬಳಿ ನಿರ್ಮಿಸಿರುವ ಸುಮಾರು ೨ ಕಿ.ಮೀ ಉದ್ದದ ತಾಲ್ಲೂಕಿನ ಏಕೈಕ ಸುರಂಗ ಈ ಭಾಗದ ನೂರಾರು ಎಕರೆ ಭೂಮಿಗೆ ನೀರೊದಗಿಸುತ್ತಿದೆ ಮತ್ತು ಪಾಂಡವಪುರ ತಾಲ್ಲೂಕಿಗೆ ಹೇಮಾವತಿಯನ್ನು ಒಯ್ಯುತ್ತದೆ. ಜೊತೆಗೆ ಸಾರಂಗಿ ಬಳಿ ನಿರ್ಮಿಸಲಾಗಿರುವ ಸುಮಾರು ೪೦೦ ಮೀ. ಉದ್ದದ ಮೇಲ್ಗಾಲುವೆ ಈ ಭಾಗದ ಭೂಮಿಗೆ ನೀರುಣಿಸುತ್ತಿದೆ.

ಸರ್ಕಾರಿ ಸಂಸ್ಥೆಗಳು[ಬದಲಾಯಿಸಿ]

ತಾಲ್ಲೂಕಿನಲ್ಲಿ ಗ್ರಾಮೀಣ ಅಂಚೆ ವ್ಯವಸ್ಥೆ ಸೇರಿ ೫೮ ಅಂಚೆ ಕಛೇರಿಗಳು, ಉಪಠಾಣೆ ಸೇರಿ ೫ ಪೋಲಿಸ್ ಠಾಣೆಗಳು, ವಿವಿಧ ವಾಣಿಜ್ಯ ಬ್ಯಾಂಕ್‌ಗಳ ೧೨ ಶಾಖೆಗಳು, ವಿಶ್ವೇಶ್ವರಯ್ಯ ಗ್ರಾಮೀಣ ಬ್ಯಾಂಕ್‌ನ ೮ ಶಾಖೆಗಳು, ೧೦ ವಿವಿಧ ಸಹಕಾರಿ ಬ್ಯಾಂಕ್‌ಗಳು, ೩೦ ವ್ಯವಸಾಯ ಆಧಾರಿತ, ೫೭ ಇತರೆ ಮತ್ತು ೧೬೦ ಹಾಲು ಉತ್ಪಾದಕರ ಸಹಕಾರ ಸಂಘಗಳು ಇವೆ. ಮೂವರು ಸಹಾಯಕ ನಿರ್ದೇಶಕರನ್ನು ಸೇರಿ ಒಟ್ಟು ೨೪ ಪಶುವೈದ್ಯ ಆಸ್ಪತ್ರೆಗಳು ಇವೆ. ತಾಲ್ಲೂಕು ಕೇಂದ್ರದಲ್ಲಿರುವ ಲಕ್ಷ್ಮಮ್ಮ ದುಂಡಶೆಟ್ಟಿ ಸಾರ್ವಜನಿಕ ಆಸ್ಪತ್ರೆ (೧), ಗ್ರಾಮೀಣ ಭಾಗಗಳಲ್ಲಿರುವ ಭಾರತೀಯ ವೈದ್ಯ ಪದ್ದತಿ ಆಸ್ಪತ್ರೆಗಳು(೫), ಪ್ರಾಥಮಿಕ ಆರೋಗ್ಯ ಕೇಂದ್ರಗಳು (೨೫), ಕುಟುಂಬ ಕಲ್ಯಾಣ ಕೇಂದ್ರಗಳು (೨), ಉಪಕೇಂದ್ರಗಳು (೬೩) ತಾಲ್ಲೂಕಿನಲ್ಲಿ ಇವೆ

ರಾಜಕೀಯ ಮತ್ತು ಜನಪ್ರತಿನಿಧಿಗಳು[ಬದಲಾಯಿಸಿ]

ದೇಶವು ಸ್ವತಂತ್ರಗೊಂಡ ನಂತರ ಈವರೆಗೆ ೭ ಮಂದಿ ಕೃಷ್ಣರಾಜಪೇಟೆ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. ಹಿರಿಯ ಸಹಕಾರಿ ಧುರೀಣ ಎಸ್.ಎಂ.ಲಿಂಗಪ್ಪನವರು ಮೊಟ್ಟ ಮೊದಲ ಪ್ರತಿನಿಧಿಯಾಗಿ ಆಯ್ಕೆಯಾಗಿದ್ದಲ್ಲದೆ ಒಟ್ಟು ಮೂರು ಅವಧಿಗೆ (೧೯೫೨, ೧೯೭೨, ೧೯೭೮) ಶಾಸಕರಾಗಿದ್ದರು. ಜಿಲ್ಲೆಯ ಏಕೈಕ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜನ್ನು ತಾಲ್ಲೂಕಿಗೆ ತಂದ ಖ್ಯಾತಿಯ ಎಂ.ಕೆ.ಬೊಮ್ಮೇಗೌಡರು ಎರಡು ಅವಧಿಗೆ (೧೯೫೭, ೧೯೬೭) ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಹೇಮಗಿರಿಯ ಶಿಕ್ಷಣ ಸಂಸ್ಥೆಯ ನಿರ್ಮಾತೃಗಳಲ್ಲಿ ಒಬ್ಬರಾದ ಲಕ್ಷ್ಮೀಪುರದ ಎನ್.ನಂಜೇಗೌಡರು (೧೯೬೨), ಬಳ್ಳೇಕೆರೆಯ ಎಂ.ಪುಟ್ಟಸ್ವಾಮಿಗೌಡರು (೧೯೮೩, ೧೯೮೯) ಬೊಮ್ಮೇನಹಳ್ಳಿಯ ಬಿ.ಪ್ರಕಾಶ್ (೧೯೯೬) ಶಾಸಕರಾಗಿದ್ದರು. ೨೦೦೪-೨೦೦೮ ರ ಅವಧಿಯಲ್ಲಿ ರಾಜ್ಯ ವಿಧಾನಸಭೆಯ ಸ್ಪೀಕರ್ ಕೂಡಾ ಆಗಿದ್ದ ಕೊತ್ತಮಾರನಹಳ್ಳಿ ಕೃಷ್ಣ ಅವರು ರಾಜ್ಯದ ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವರಾಗಿ, ಮಂಡ್ಯದ ಸಂಸದರಾಗಿದ್ದವರು ತಾಲ್ಲೂಕನ್ನು ಮೂರು ಬಾರಿ (೧೯೮೫, ೧೯೯೪, ೨೦೦೪) ಪ್ರತಿನಿಧಿಸಿದ್ದಾರೆ. ಕೆ.ಬಿ.ಚಂದ್ರಶೇಖರ್ ಅವರು ಎರಡು ಅವಧಿಗೆ (೧೯೯೯, ೨೦೦೯) ಶಾಸಕರಾಗಿದ್ದಾರೆ. ಪ್ರಸ್ತುತ ಉದ್ಯಮಿ ಶ್ರೀ ಕೆ.ಸಿ.ನಾರಾಯಣಗೌಡ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ (೨೦೧೩)[೧] .

ಇದಕ್ಕಿಂತ ಮಿಗಿಲಾಗಿ ದೇಶದ ಪ್ರಸ್ತುತ ರಾಜ್ಯಸಭೆಯ ಉಪ ಸಭಾಪತಿಗಳಾಗಿರುವ ಕೆ.ರೆಹಮಾನ್‌ಖಾನ್‌ರವರು ಇದೇ ತಾಲ್ಲೂಕಿನವರು. ವಿಧಾನಪರಿಷತ್ ಸದಸ್ಯರಾಗಿ, ಸಭಾಪತಿಯಾಗಿ, ರಾಜ್ಯಸಭಾ ಸದಸ್ಯರಾಗಿ, ಕೇಂದ್ರ ಸರ್ಕಾರದ ಮಂತ್ರಿಯಾಗಿ ಅನುಭವ ಹೊಂದಿದ್ದಾರೆ. ಜೊತೆಗೆ ರಾಜ್ಯದ ಮಾಜಿ ಮುಖ್ಯಮಂತ್ರಿಯವರಾದ ಬಿ.ಎಸ್.ಯಡಿಯೂರಪ್ಪನವರು ಸಹ ಇದೇ ತಾಲ್ಲೂಕಿನ ಬೂಕನಕೆರೆ ಗ್ರಾಮದಲ್ಲಿ ಜನಿಸಿದವರು. ನಂತರ ಅವರು ಶಿಕಾರಿಪುರ ಕ್ಷೇತ್ರದಲ್ಲಿ ತಮ್ಮ ರಾಜಕೀಯ ಉನ್ನತಿ ಪಡೆದರು.

ಶಿಕ್ಷಣ ಕ್ಷೇತ್ರ[ಬದಲಾಯಿಸಿ]

ತಾಲ್ಲೂಕಿನಲ್ಲಿ ಶಿಕ್ಷಣಕ್ಕೆ ಉತ್ತಮವಾದ ಅವಕಾಶಗಳಿದ್ದು, ಶಿಕ್ಷಣಕಾಶಿ ಎಂದು ಕರೆದರೆ ತಪ್ಪಾಗಲಾರದು. ಗ್ರಾಮೀಣ ಮಕ್ಕಳ ಮನೆ ಬಾಗಿಲಿನಲ್ಲಿಯೇ ಉನ್ನತ ಶಿಕ್ಷಣ ಸೇರಿದಂತೆ ವಿವಿಧ ಅವಕಾಶಗಳಿಗೆ ಕಾರಣರಾದ ನಮ್ಮ ಪ್ರತಿನಿಧಿಗಳು ಪ್ರಾಥಃಸ್ಮರಣೀಯರು. ಸರ್ಕಾರಿ ಎಂಜಿನೀಯರಿಂಗ್ ಕಾಲೇಜು (೧), ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು(೧), ಸ್ನಾತಕೋತ್ತರ ಪದವಿ ಕೋರ್ಸ್‌ಗಳು(೩), ಸರ್ಕಾರಿ, ಅನುದಾನಿತ, ಖಾಸಗಿ ಸೇರಿದಂತೆ ಬಿಎಡ್ ಕಾಲೇಜು(೧), ಪದವಿ ಕಾಲೇಜುಗಳು(೩), ಡಿಎಡ್ ಕಾಲೇಜುಗಳು(೩), ಐಟಿಐ ಕಾಲೇಜುಗಳು(೯), ಪಿಯುಸಿ ಕಾಲೇಜುಗಳು (೧೯) ಇವೆ. ಅಲ್ಲದೆ ೫೬ ಪ್ರೌಢಶಾಲೆಗಳು, ೩೮೧ ಪ್ರಾಥಮಿಕ ಶಾಲೆಗಳು ಇವೆ.

ತಾಲ್ಲೂಕಿನಲ್ಲಿ ಒಂದು ಮಾದರಿ ಶಿಕ್ಷಣ ಸಂಸ್ಥೆಯನ್ನು ಹುಟ್ಟುಹಾಕಿದ ಕೀರ್ತಿ ಮಾಜಿ ಶಾಸಕ, ಜಿಲ್ಲೆಯ ಹಿರಿಯ ಸಹಕಾರಿ ಧುರೀಣ, ನಿಷ್ಠುರವಾದಿ, ಶಿಸ್ತಿನ ಸಿಪಾಯಿ, ದಿ.ಎಸ್.ಎಂ.ಲಿಂಗಪ್ಪ ಅವರಿಗೆ ಸಲ್ಲುತ್ತದೆ. ಇವರು ಆರಂಭಿಸಿದ ತಾಲ್ಲೂಕಿನ ಪ್ರತಿಷ್ಠಿತ ‘ಗ್ರಾಮಭಾರತಿ ಶಿಕ್ಷಣ ಸಂಸ್ಥೆ’ ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ. ಇವರ ನಂತರ ಸಂಸ್ಥೆಯನ್ನು ಮತ್ತಷ್ಟು ಬೆಳೆಸಿದ ದಿ.ಎಸ್.ಸಿ.ಚಿಕ್ಕಣ್ಣಗೌಡ ಮೂಲ ಪ್ರೌಢಶಾಲೆಯನ್ನು ಇಂದಿನ ಬೃಹತ್ ರೂಪಕ್ಕೆ ಕೊಂಡೊಯ್ದಿದ್ದಾರೆ. ತಾಲ್ಲೂಕಿನ ಅಘಲಯ ಗ್ರಾಮದ ಎ.ಶೇಷಯ್ಯಂಗಾರ್ ಶಿಕ್ಷಣ ತಜ್ಞರಾಗಿದ್ದವರು. ರಾಜ್ಯ ಪಠ್ಯಪುಸ್ತಕ ಸಮಿತಿ ಸದಸ್ಯರಾಗಿದ್ದರು. ‘ವಿದ್ಯಾಧಾಯಿನಿ’ ಎಂಬ ಮಾಸ ಪತ್ರಿಕೆಯ ಸಂಪಾದಕರಾಗಿದ್ದರು. ತಾಲ್ಲೂಕಿನ ದೊಡ್ಡಕ್ಯಾತನಹಳ್ಳಿ ಗ್ರಾಮದವರಾದ ಎಂ.ಆರ್.ರಾಮಯ್ಯ ಶಿಕ್ಷಣ ಇಲಾಖೆಯ ವಿವಿಧ ಉನ್ನತ ಸ್ಥರಗಳಲ್ಲಿ ಕಾರ್ಯ ನಿರ್ವಹಿಸಿ ಖ್ಯಾತಿ ಪಡೆದಿದ್ದಾರೆ. ರಾಜ್ಯದ ಶೈಕ್ಷಣಿಕ ಸರ್ವೇಕ್ಷಣಾಧಿಕಾರಿಯಾಗಿ ಇವರು ನೀಡಿರುವ ವರದಿ ಇಡೀ ರಾಷ್ಟ್ರಕ್ಕೆ ಮಾದರಿಯಾದುದು. ತಾಲ್ಲೂಕಿನ ಅಂಬಿಗರಹಳ್ಳಿಯವರಾದ ಅಂ.ಚಿ.ಸಣ್ಣಸ್ವಾಮಿಗೌಡ ರಾಜ್ಯ, ರಾಷ್ಟೃ ಮತ್ತು ಅಂತರ ರಾಷ್ಟ್ರೀಯ ಮಟ್ಟದ ಉತ್ತಮ ಶಿಕ್ಷಕ ಪುರಸ್ಕಾರಕ್ಕೆ ಭಾಜನರಾದ ಏಕೈಕ ಶಿಕ್ಷಕರಾಗಿ ಆ ಮೂಲಕ ತಾಲ್ಲೂಕಿಗೆ ಕೀರ್ತಿ ತಂದವರು. ಶಿಕ್ಷಣ ಇಲಾಖೆಯ ವಿವಿಧ ಸ್ಥರಗಳಲ್ಲಿ ಕಾರ್ಯ ನಿರ್ವಹಿಸಿ ಪ್ರಸ್ತುತ ಜಿಲ್ಲಾ ಲೋಕಶಿಕ್ಷಣ ಇಲಾಖೆ ಕಾರ್ಯಕ್ರಮ ಅಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ತಾಲ್ಲೂಕಿನ ಜೈನಹಳ್ಳಿಯ ಸತ್ಯನಾರಾಯಣಗೌಡ ಮೈಸೂರಿನಲ್ಲಿ ‘ಜ್ಞಾನಬುತ್ತಿ’ ಎಂಬ ತರಬೇತಿ ಸಂಸ್ಥೆಯನ್ನು ಆರಂಭಿಸಿ ಖ್ಯಾತರಾಗಿದ್ದಾರೆ. ಇಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಪಡೆದ ಸಾವಿರಾರು ಮಂದಿ ಇಂದು ಸಮಾಜದ ವಿವಿಧ ಸ್ಥರಗಳಲ್ಲಿ ಉನ್ನತ ಅಧಿಕಾರಿಗಳಾಗಿದ್ದಾರೆ, ಸರ್ಕಾರಿ ನೌಕರಿಯಲ್ಲಿದ್ದಾರೆ. ಮೈಸೂರಿನಲ್ಲಿ ಹೇಮಾವತಿ ಶಿಕ್ಷಣ ಸಂಸ್ಥೆ ಕಟ್ಟಿ ಬೆಳೆಸುತ್ತಿರುವ ಆಲೇನಹಳ್ಳಿ ರಾಮೇಗೌಡರ ಹೆಸರು ಉಲ್ಲೇಖನಾರ್ಹ. ತಾಲ್ಲೂಕಿನ ಹೇಮಗಿರಿಯಲ್ಲಿ ವಸತಿ ಸಹಿತ ಶಾಲೆಯೊಂದನ್ನು ಆರಂಭಿಸಿದ ಕೀರ್ತಿ ಗದ್ದೆಹೊಸೂರಿನವರಾದ ಶಿಕ್ಷಣ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ಜಿ.ಪಿ.ಶಿವರಾಂ, ಮಾಜಿ ಶಾಸಕ ಲಕ್ಷ್ಮೀಪುರ ನಂಜೇಗೌಡ ಮತ್ತು ಸ್ನೇಹಿತರಿಗೆ ಸೇರಬೇಕು. ಗ್ರಾಮೀಣ ಪ್ರದೇಶದಲ್ಲಿ ಒಂದು ಉತ್ತಮವಾದ ಶೈಕ್ಷಣಿಕ ವಾತಾವರಣವನ್ನು ಸೃಷ್ಠಿಸುವಲ್ಲಿ ಅವರು ಯಶಸ್ವಿಯಾಗಿದ್ದರು. ಒಂದು ಕಾಲಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಮಕ್ಕಳನ್ನು ಇಲ್ಲಿಗೆ ಸೇರಿಸಲಾಗುತ್ತಿತ್ತು. ಇದೇ ರೀತಿ ತಾಲ್ಲೂಕಿನ ಬೀರವಳ್ಳಿಯಲ್ಲಿ ಶ್ರೀಯುತ ಕಿವುಡಪ್ಪನವರ ನೇತೃತ್ವದ ತಂಡ ಆರಂಭಿಸಿದ ಬಾಬು ರಾಜೇಂದ್ರಪ್ರಸಾದ್ ಸ್ಮಾರಕ ಶಿಕ್ಷಣ ಸಂಸ್ಥೆ, ಮಂದಗೆರೆಯಲ್ಲಿ ಜಿ.ಪಿ.ಶಿವರಾಂರಿಂದ ಆರಂಭಗೊಂಡ ಹೇಮಾವತಿ ಶಿಕ್ಷಣ ಸಂಸ್ಥೆ, ಸೋಮನಹಳ್ಳಿಯ ಕುಂಟೇಗೌಡರು ಆರಂಭಿಸಿದ ಸಂಗಮೇಶ್ವರ ಶಿಕ್ಷಣ ಸಂಸ್ಥೆ, ಮಾರೇನಹಳ್ಳಿ (ಹರಿಯಾಲದಮ್ಮನ ದೇವಸ್ಥಾನ) ಬಳಿಯಿರುವ ಕೆ.ಎನ್.ಜವರೇಗೌಡರು ಸ್ಥಾಪಿಸಿದ eನದೇಗುಲ ಶಿಕ್ಷಣ ಸಂಸ್ಥೆ, ಬೊಮ್ಮೇನಹಳ್ಳಿ ಬಳಿಯಿರುವ ಡಾ.ಎಂ.ಎನ್ ದೇವರಾಜ್ ಆರಂಭಿಸಿರುವ ವಿವೇಕಾನಂದ ಶಿಕ್ಷಣ ಸಂಸ್ಥೆ, ನೀತಿಮಂಗಲ ಬಳಿ ಸ್ಥಾಪನೆಗೊಂಡಿರುವ ಆದರ್ಶ ಶಿಕ್ಷಣ ಸಂಸ್ಥೆ, ಸಾಸಲಿನಲ್ಲಿರುವ ಬೇಬಿಬೆಟ್ಟದ ಆಶ್ರಯದಲ್ಲಿ ನಡೆಯುತ್ತಿರುವ ಶಿಕ್ಷಣ ಸಂಸ್ಥೆ ಸೇರಿದಂತೆ ಅನೇಕ ಶಾಲೆಗಳು ಗ್ರಾಮೀಣ ಪ್ರದೇಶದ ಮಕ್ಕಳ ಶೈಕ್ಷಣಿಕ ಅಗತ್ಯಗಳನ್ನು ಇಂದಿಗೂ ಪೂರೈಸುತ್ತಿವೆ.

ಉದ್ಯೋಗ ಮತ್ತು ಕೈಗಾರಿಕೆ[ಬದಲಾಯಿಸಿ]

ಕೃಷ್ಣರಾಜಪೇಟೆ ತಾಲ್ಲೂಕು ಕೇಂದ್ರದಲ್ಲಿ ಟಿಎಪಿಸಿಎಂಎಸ್ (೧), ಎಪಿಎಂಸಿ (೧) , ಹಾಲು ಶೀಥಲೀಕರಣ ಕೇಂದ್ರ (೧) ಇವೆ. ಒಂದು ಕಾಲದಲ್ಲಿ ಈ ತಾಲ್ಲೂಕು ಬೈವೋಲ್ಟಿನ್ ರೇಷ್ಮೆ ಬಿತ್ತನೆಗೆ ರಾಜ್ಯದಲ್ಲಿಯೇ ಪ್ರಸಿದ್ಧಿ ಪಡೆದಿತ್ತು. ಚಿಕ್ಕೋನಹಳ್ಳಿಯಲ್ಲಿ ರೇಷ್ಮೆ ಕೃಷಿ ತರಬೇತಿ ಕಾಲೇಜು, ಪಟ್ಟಣದಲ್ಲಿ ರೇಷ್ಮೆಗೂಡಿನ ಮಾರುಕಟ್ಟೆಗಳೂ ಇವೆ. ಬಲ್ಲೇನಹಳ್ಳಿಯಲ್ಲಿ ಈ ಭಾಗದಲ್ಲಿ ಅಪರೂಪ ಎನಿಸುವ ಸೇವಂತಿಗೆ ಹೂವಿನ ಮಾರುಕಟ್ಟೆಯಿದ್ದು, ಉತ್ತರ ಕರ್ನಾಟಕ ಸೇರಿದಂತೆ ವಿವಿಧ ಭಾಗಗಳಿಗೆ ಇಲ್ಲಿಂದ ಹೂವಿನ ಪೂರೈಕೆಯಾಗುತ್ತದೆ. ತಾಲ್ಲೂಕಿನ ಮಂದಗರೆಯಲ್ಲಿ ಭರೂಕಾ, ಅಕ್ಕಿಹೆಬ್ಬಾಳು ಬಳಿ ಕಾವೇರಿ ಹೈಡ್ರೋಎಲೆಕ್ಟ್ರಿಕ್ ಪ್ರಾಜೆಕ್ಟ್ ಮತ್ತು ಹೇಮಗಿರಿ ಬಳಿ ತ್ರಿಶೂಲ್ ಪವರ್ ಕಾರ್ಪೋರೇಷನ್ ಎಂಬ ಮೂರು ಖಾಸಗಿ ಮಾಲೀಕತ್ವದ ವಿದ್ಯುತ್ ಉತ್ಪಾದನಾ ಕೇಂದ್ರಗಳು ಇವೆ. ಉಯ್ಗೋನಹಳ್ಳಿ ಬಳಿ ೨೨೦ ಕೆವಿ ಸಾಮರ್ಥ್ಯದ ವಿದ್ಯುತ್ ಸ್ವೀಕರಣಾ ಕೇಂದ್ರ ಸಹ ಇದೆ. ಮಾಕವಳ್ಳಿಯಲ್ಲಿ ಖಾಸಗಿ ಒಡೆತನದ ಕೋರಮಂಡಲ್ ಸಕ್ಕರೆ ಕಾರ್ಖಾನೆ (ಹಿಂದಿನ ಐಸಿಎಲ್) ಪ್ರಾರಂಭಗೊಂಡ ನಂತರ ತಾಲ್ಲೂಕಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಬ್ಬನ್ನು ಬಳೆಯಾಗುತ್ತಿದೆ. ಅಲ್ಲದೆ ಕಬ್ಬಿನ ಕ್ರಷರ್‌ಗಳು (ಯಾಂತ್ರಿಕ ಗಾಣಗಳು) ಸಹ ಇವೆ.

ಧಾರ್ಮಿಕ ಹಿನ್ನಲೆ[ಬದಲಾಯಿಸಿ]

ತಾಲ್ಲೂಕಿನಲ್ಲಿ ಪ್ರಮುಖವಾಗಿ ಹಿಂದೂ, ಇಸ್ಲಾಂ, ಜೈನ, ಕ್ರೈಸ್ತ, ಮತ್ತು ಸಿಖ್ ಧರ್ಮೀಯರನ್ನು ಕಾಣಬಹುದಾಗಿದೆ. ಅವರವರ ಧರ್ಮದ ಆಚರಣೆಗಳು, ಪೂಜಾ ಸ್ಥಳಗಳನ್ನು ಸಹ ಇಲ್ಲಿ ಕಾಣಬಹುದಾಗಿದೆ. ಹಿಂದೂ ಧರ್ಮಕ್ಕೆ ಸಂಬಂಧಿಸಿದಂತೆ ತಾಲ್ಲೂಕಿನ ಕಾಪನಹಳ್ಳಿ ಗವಿಮಠದಲ್ಲಿ ೧೩ನೆಯ ಶತಮಾನದಲ್ಲಿದ್ದ ಪವಾಡಪುರುಷ ಎನಿಸಿಕೊಂಡಿದ್ದ ಸ್ವತಂತ್ರ ಸಿದ್ದಲಿಂಗೇಶ್ವರರು ಇಲ್ಲಿ ಐಕ್ಯವಾಗಿದ್ದಾರೆ ಎನ್ನಲಾಗಿದ್ದು, ಅವರ ಗದ್ದುಗೆ ಸಹ ಇಲ್ಲಿದೆ. ಈ ಗದ್ದುಗೆ ಒಮ್ಮೆ ಅತಿವೃಷ್ಟಿಯಿಂದಾದ ಪ್ರವಾಹದಿಂದ ನಾಶವಾಗಿದ್ದು, ಇದೀಗ ಪುನರ್‌ನವೀಕರಣ ಗೊಂಡಿದೆ. ೧೫೦ ಅಂಕಣದ ಮೂಲ ಮಂಟಪವನ್ನು ಹೈದರಾಲಿ ಕಟ್ಟಿಸಿಕೊಟ್ಟ ಮತ್ತು ಸುಮಾರು ೯೦೦ ಎಕರೆಯಷ್ಟು ಭೂಮಿಯನ್ನು ಈ ಗದ್ದುಗೆಗೆ ಬಿಟ್ಟುಕೊಟ್ಟ ಎಂಬ ಬಗ್ಗೆ ದಾಖಲೆಗಳಿವೆ. ಪ್ರತಿವರ್ಷ ಮಾಘಮಾಸದಲ್ಲಿ ಇಲ್ಲಿ ಜಾತ್ರೆ ಮತ್ತು ರಥೋತ್ಸವಗಳು ನಡೆಯುತ್ತದೆ. ತಾಲ್ಲೂಕು ಕೇಂದ್ರಕ್ಕೆ ಸಮೀಪದಲ್ಲಿ ತಾಲ್ಲೂಕಿನ ಜೀವನದಿ ಹೇಮಾವತಿಯ ತಟದಲ್ಲಿಯೇ ಇರುವ ಹೇಮಗಿರಿ ಕ್ಷೇತ್ರ ಪ್ರಸಿದ್ಧವಾದುದು. ವಿಷ್ಣುವು ವೈಕುಂಠದಲ್ಲಿ ಬೇಸರವಾದಾಗ ವಿಶ್ರಾಂತಿ ಪಡೆಯಲು ಇಲ್ಲಿಗೆ ಬರುತ್ತಿದ್ದ ಎಂಬ ಸ್ಥಳಗಥೆ ಇದೆ. ಜೊತೆಗೆ ಭೃಗು ಮಹರ್ಷಿಗಳು ಸಹ ಇಲ್ಲಿನ ಪ್ರಶಾಂತ ವಾತಾವರಣಕ್ಕೆ ಮನಸೋತು, ಕೆಲಕಾಲ ತಪೋನಿರತರಾಗಿದ್ದರು ಎಂದು ಪುರಾಣಕಥೆಗಳು ಹೇಳುತ್ತವೆ. ಪ್ರತಿವರ್ಷ ರಥಸಪ್ತಮಿಯ ದಿನ ಇಲ್ಲಿ ಕಲ್ಯಾಣ ವೆಂಕಟರಮಣ ಸ್ವಾಮಿಯ ರಥೋತ್ಸವ ಜರುಗುತ್ತದೆ. ಒಂದು ವಾರದ ಕಾಲ ಜಾತ್ರೆ ನಡೆಯುತ್ತದೆ. ಆದಿಚುಂಚನಗಿರಿ ಮಠದ ಶಾಖೆಯೊಂದು ಇಲ್ಲಿದೆ. ಇಲ್ಲಿನ ಕಲ್ಯಾಣ ವೆಂಕಟರಮಣಸ್ವಾಮಿ ಪ್ರೌಢಶಾಲೆಯ ನಿರ್ವಹಣೆಯನ್ನು ಮಠದ ವತಿಯಿಂದ ನಡೆಸಲಾಗುತ್ತಿದೆ. ಸಮೀಪದಲ್ಲಿ ಒಡೆಯರ ಕಾಲದಲ್ಲಿ ನಿರ್ಮಾಣವಾದ ಅಣೆಯ ಮೇಲಿಂದ ಧುಮ್ಮಿಕ್ಕುವ ಹೇಮಾವತಿ ಪುಟ್ಟ ಜಲಪಾತವನ್ನು ಸೃಷ್ಟಿಸಿದ್ದು, ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದ್ದಾಳೆ. ಇಲ್ಲಿನ ನದಿಯ ಮಧ್ಯದ ನಡುಗಡ್ಡೆಯಲ್ಲಿ ಸಣ್ಣ ಪ್ರಮಾಣದ ಪಕ್ಷಿಧಾಮವೇ ಕಂಡುಬರುತ್ತದೆ. ದೇಶ ವಿದೇಶಗಳ ವಿವಿಧ ಜಾತಿಯ ಪಕ್ಷಿಗಳು ಇಲ್ಲಿಗೆ ವಲಸೆ ಬಂದು ಗೂಡುಕಟ್ಟಿ ಮರಿಗಳನ್ನು ಮಾಡುತ್ತವೆ.

ಬೆಂಗಳೂರಿನ ಕೆಂಗೇರಿಯ ಬಳಿ ವಿಶ್ವ ಒಕ್ಕಲಿಗರ ಮಠವನ್ನು ಸ್ಥಾಪಿಸಿಕೊಂಡು, ಶಿಕ್ಷಣ, ದಾಸೋಹ ಮತ್ತಿತರ ಕ್ಷೇತ್ರಗಳಲ್ಲಿ ತೊಡಗಿರುವ ಶ್ರೀ ಕುಮಾರ ಚಂದ್ರಶೇಖರನಾಥ ಸ್ವಾಮೀಜಿಗಳು ಈ ತಾಲ್ಲೂಕಿನವರು. ಗೋವಿಂದೇಗೌಡ ಎಂಬ ಪೂರ್ವಾಶ್ರಮದ ಹೆಸರಿನ ಇವರು ತಾಲ್ಲೂಕಿನಲ್ಲಿ ಮೊದಲಿಗರಾಗಿ ಖಾಸಗಿ ಬಸ್ ಓಡಿಸಿದ ಶ್ರೀನಿವಾಸ ಬಸ್ ತಿಮ್ಮೇಗೌಡ ಮತ್ತು ಸಣ್ಣಮ್ಮ ದಂಪತಿಯ ಪುತ್ರರು. ಬೇಬಿಮಠದ ಈಗಿನ ಪೀಠಾಧಿಪತಿಗಳಾದ ಶ್ರೀ ತ್ರಿನೇತ್ರ ಮಹಾಂತ ಸ್ವಾಮೀಜಿ ಇದೇ ತಾಲ್ಲೂಕಿನ ತೆಂಡೆಕೆರೆ ಗ್ರಾಮದವರು. ಮಂಜುನಾಥ ಎಂಬ ಪೂರ್ವಾಶ್ರಮದ ಹೆಸರಿನ ಇವರು ಇಲ್ಲಿನ ಪಂಚಾಕ್ಷರಯ್ಯ ಮತ್ತು ನಾಗರತ್ನಮ್ಮ ದಂಪತಿಯ ಪುತ್ರರಾಗಿದ್ದಾರೆ. ತಾಲ್ಲೂಕಿನ ನಾಟನಹಳ್ಳಿ ಗ್ರಾಮದ ಸಿದ್ದಲಿಂಗೇಗೌಡರು ಗೃಹಸ್ಥಾಶ್ರಮದ ನಂತರ ಸನ್ಯಾಸತ್ವ ಪಡೆದವರು. ಆದಿಚುಂಚನಗಿರಿ ಮಠವನ್ನು ಸೇರಿದ ಇವರು ಪ್ರಸ್ತುತ ಶ್ರೀ ಸಿದ್ದೇಶ್ವರ ಸ್ವಾಮೀಜಿಯಾಗಿ ಮಠದ ಚಿಕ್ಕಬಳ್ಳಾಪುರ ಶಾಖೆಯ ಮುಖ್ಯಸ್ಥರಾಗಿದ್ದಾರೆ. ಬಾಳೆಹೊನ್ನೂರಿನ ಜಗದ್ಗುರು ರಂಬಾಪುರಿ ಮಠದ ಖಾಸಾ ಶಾಖಾಮಠವು ಸಹ ತಾಲ್ಲೂಕಿನ ತೆಂಡೆಕೆರೆ ಗ್ರಾಮದಲ್ಲಿದೆ.

ಇಸ್ಲಾಂ ಧರ್ಮಕ್ಕೆ ಸಂಬಂಧಿಸಿದಂತೆ ಪ್ರಮುಖವಾಗಿ ತಾಲ್ಲೂಕಿನ ಕುಂದೂರು ಬಳಿ ಬಾಬಯ್ಯನ ಗುಡ್ಡ ಇದ್ದು, ಇದರಲ್ಲಿ ಮೌಲ್ವಿಯೊಬ್ಬ ವಾಸಿಸುತ್ತಿದ್ದ ಎಂಬ ಸ್ಥಳಪುರಾಣ ಇದೆ. ಇಲ್ಲಿ ಜನಾಂಗದ ಬಂಧುಗಳು ಆಗಾಗ ಹಬ್ಬದ ಆಚರಣೆಗಳನ್ನು ನಡೆಸುತ್ತಾರೆ. ಸಮೀಪದ ಭಾರತೀಪುರದಲ್ಲಿ ಹಜರತ್ ನಿಜಾಮುದ್ದೀನ್ ಔಲಿಯಾ ದರ್ಗಾ ಇದ್ದು, ಹಿಂದೂ ಮತ್ತು ಮುಸ್ಲಿಮರು ಗ್ರಾಮದ ಒಂದೇ ರಂಗಸ್ಥಳದಲ್ಲಿ ತಮ್ಮ ತಮ್ಮ ಧರ್ಮಗಳ ಆಚರಣೆಯನ್ನು ಮಾಡುತ್ತಾ ಕೋಮು ಸೌಹಾರ್ಧಕ್ಕೆ ಹೆಸರಾಗಿರುವುದು ವಿಶೇಷ. ಮುರುಕನಹಳ್ಳಿ ಬಳಿಯಿರುವ ಹಜರತ್ ಜಂಗ್ಲಿಪೀರ್ ದರ್ಗಾ, ಆಲಂಬಾಡಿ ಕಾವಲ್‌ನಲ್ಲಿರುವ ಸೈಯದ್ ಗೌಸ್‌ಪೀರ್ ಷಾ ಖಾದ್ರಿ ಮತ್ತು ಸೈಯದ್ ಹಫೀಜುಲ್ಲಾ ಷಾ ಖಾದ್ರಿ, ಸಿಂಗನಹಳ್ಳಿ ಬಳಿಯಿರುವ ಹಜರತ್ ಫಕ್ರುದ್ದೀನ್ ಔಲಿಯಾ, ಹರಿಹರಪುರ ಬಳಿಯಿರುವ ಜಷ್ನೆ ಸೊಂದಲ್- ಓ- ಉರುಸೆ ಷರೀಫ್ ಹಜ್ರತ್, ಸೈಯದ್ ಸಫ್ದರ್ ಆಲಿಷಾ ಔಲಿಯಾ, ಹಜ್ರತ್ ಸೈಯದ್ ಶಿರಾಜ್ ಆಲಿಷಾ ಔಲಿಯಾ, ಸಿಂಧಘಟ್ಟ ಬಳಿಯಿರುವ ದರ್ಗಾ ಪ್ರಮುಖ ಸ್ಥಳಗಳಾಗಿವೆ. ಇಲ್ಲೆಲ್ಲಾ ಪ್ರತಿ ವರ್ಷ ಸೋಂದಲ್ ಇಲ್ಲವೇ ಖವ್ವಾಲಿ ಎಂಬ ಆಚರಣೆಗಳು ನಡೆಯುತ್ತಿವೆ.

ಜೈನ ಧರ್ಮಕ್ಕೆ ಸಂಬಂಧಿಸಿದಂತೆ ತಾಲ್ಲೂಕಿನ ಹೊಸಹೊಳಲು ಗ್ರಾಮದಲ್ಲಿ ಪಾಶ್ವನಾಥ ತೀರ್ಥಂಕರರ ಬಸದಿಯಿದೆ. ಸಮೀಪದ ಕತ್ತರಘಟ್ಟ ಗ್ರಾಮದಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜೈನಧರ್ಮದ ಅನುಯಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು, ಕತ್ತರಘಟ್ಟದಲ್ಲಿ ತ್ರಿಕೂಟ ಜಿನಾಲಯವಿತ್ತು ಎಂಬ ಬಗ್ಗೆ ದಾಖಲೆಗಳಿವೆ. ವಿವಿಧ ತೀರ್ಥಕರರ ಮೂರ್ತಿಗಳು ಇತ್ತೀಚಿನವರೆಗೂ ಇಲ್ಲಿ ಸಿಗುತ್ತಲೇ ಇವೆ. ತಾಲ್ಲೂಕಿನ ಬಸ್ತಿ ಹೊಸಕೋಟೆಯ ಬಳಿ ಕಾವೇರಿ ನದಿತೀರದಲ್ಲಿ ೧೮ ಅಡಿ ಎತ್ತರದ ಗೊಮ್ಮಟನ ಏಕಶಿಲಾ ವಿಗ್ರಹವಿದೆ. ಇತ್ತೀಚಿನವರೆಗೂ ಯಾವುದೇ ರಕ್ಷಣೆಯಿಲ್ಲದೆ ಉಪೇಕ್ಷೆಗೆ ಒಳಗಾಗಿದ್ದ ಈ ಕ್ಷೇತ್ರಕ್ಕೆ ಇತ್ತೀಚೆಗೆ ಜನರು ಬರಲಾರಂಭಿಸಿದ್ದಾರೆ. ಪ್ರತಿವರ್ಷ ಈ ಗೊಮ್ಮಟನಿಗೆ ಅಭಿಷೇಕ ಮಾಡುವ ಪದ್ದತಿ ಆರಂಭಗೊಂಡಿದೆ. ತಾಲ್ಲೂಕಿನ ಮುರುಕನಹಳ್ಳಿ ಗ್ರಾಮದಲ್ಲಿ ಪಾರ್ಶ್ವನಾಥ ದಿಗಂಬರ ಬಸದಿ ಇದೆ. ತಾಲ್ಲೂಕಿನ ಶ್ರವಣನಹಳ್ಳಿ ಗ್ರಾಮದಲ್ಲಿಯೂ ಜೈನರ ಇತಿಹಾಸಕ್ಕೆ ಸಂಬಂಧಿಸಿದ ಮಾಹಿತಿಗಳಿವೆ. ಕ್ರೈಸ್ತ ಧರ್ಮಕ್ಕೆ ಸಂಬಂಧಿಸಿದಂತೆ ಕೃಷ್ಣರಾಜಪೇಟೆ ತಾಲ್ಲೂಕು ಕೇಂದ್ರದಲ್ಲಿರುವ ಬಾಲ ಏಸುವಿನ ದೇವಾಲಯ ಪ್ರಮುಖ ಆರಾಧನಾ ಸ್ಥಳವಾಗಿದೆ. ಪಟ್ಟಣದಲ್ಲಿ ಸಿಸ್ಟರ್ ಆಫ್ ಚಾರಿಟೀಸ್ ಸಂಸ್ಥೆಯ ವತಿಯಿಂದ ಮತ್ತು ಕ್ರಿಸ್ತಾಲಯದ ವತಿಯಿಂದ ಒಂದೊಂದು ಶಿಕ್ಷಣ ಸಂಸ್ಥೆಗಳು ಸಹ ಇಲ್ಲಿ ನಡೆಯುತ್ತಿದೆ. ಇದಲ್ಲದೆ ಕೋಡೀಮಾರನಹಳ್ಳಿಯಲ್ಲಿ ಒಂದು ಶಿಕ್ಷಣ ಸಂಸ್ಥೆ, ಹಾದನೂರು ಬಳಿ ಒಂದು ಹಾವು ಕಡಿತದ ಚಿಕಿತ್ಸಾ ಕೇಂದ್ರ ಸಹ ಸೇವೆ ನೀಡುತ್ತಿವೆ.

ತಾಲ್ಲೂಕಿನ ಪ್ರಮುಖ ದೇವಾಲಯಗಳು ಮತ್ತು ಪ್ರೇಕ್ಷಣೀಯ ಸ್ಥಳಗಳು[ಬದಲಾಯಿಸಿ]

ಲಕ್ಷ್ಮೀನಾರಾಯಣ ದೇವಸ್ಥಾನ, ಹೊಸಹೊಳಲು

ತಾಲ್ಲೂಕಿನಲ್ಲಿ ಅನೇಕ ಸುಂದರ ದೇವಾಲಯಗಳಿದ್ದು, ಅವುಗಳಲ್ಲಿ ೧೨-೧೩ನೆಯ ಶತಮಾನಕ್ಕೆ ಸೇರಿದ ಹೊಯ್ಸಳರ ಕಾಲದಲ್ಲಿ ನಿರ್ಮಾಣಗೊಂಡಿರುವ ಕೆಲವು ದೇವಾಲಯಗಳಿವೆ. ಅಗ್ರಹಾರಬಾಚಹಳ್ಳಿ, ಅಘಲಯ, ಕಿಕ್ಕೇರಿ, ಗೋವಿಂದನಹಳ್ಳಿ, ತೆಂಗಿನಘಟ್ಟ, ತೊಣಚಿ, (ತೊಳಸಿ), ಮಾದಾಪುರ, ಸಂತೇಬಾಚಹಳ್ಳಿ, ಸಿಂಧಘಟ್ಟಗಳಲ್ಲಿ ಹೊಯ್ಸಳ ದೇವಾಲಯಗಳನ್ನು ಕಾಣಬಹುದು.

ಇವುಗಳಲ್ಲಿ ಶಿಖರಪ್ರಾಯವಾದದು ಹೊಸಹೊಳಲು ಗ್ರಾಮದ ಲಕ್ಷ್ಮೀನಾರಾಯಣ ಸ್ವಾಮಿ ದೇವಾಲಯ. ಇದು ತ್ರಿಕೂಟಾಚಲ ದೇವಾಲಯವಾಗಿದ್ದು, ಲಕ್ಷ್ಮೀನರಸಿಂಹ ಮತ್ತು ಗೋಪಾಲಕೃಷ್ಣ ಸಹ ಇಲ್ಲಿದ್ದಾರೆ. ಅನುಪಮವಾದ ಕೆತ್ತನೆ, ಹೊರಗೋಡೆಗಳ ಮೇಲಿನ ರಾಮಾಯಣ, ಮಹಾಭಾರತ, ಭಗವತಗಳ ಕಥಾಪ್ರಸಂಗಗಳು, ದಶಾವತಾರ, ಸಮುದ್ರಮಥನ, ತ್ರಿಪುರ ದಹನ, ಅಹಲ್ಯೋದ್ದಾರ ಮತ್ತಿತರ ಪ್ರಸಂಗಗಳ ಕೆತ್ತನೆಗಳನ್ನು ಇಲ್ಲಿ ಕಾಣಬಹುದು. ಹೆಬ್ಬೆರಳಿನ ಗಾತ್ರದ ಕೋತಿಯೊಂದು ಎಳನೀರು ಕುಡಿಯುತ್ತಿರುವ ಕೆತ್ತನೆ ಶಿಲ್ಪಿಗಳ ಕೈಚಳಕಕ್ಕೆ ಕನ್ನಡಿಯಂತಿದೆ.

ಗೋವಿಂದನಹಳ್ಳಿಯ ಪಂಚಲಿಂಗೇಶ್ವರ ದೇವಾಲಯ ಸಹ ಉತ್ತಮವಾದ ಕಲಾಕೌಶಲಕ್ಕೆ ಸಾಕ್ಷಿಯಾಗಿದೆ. ಇಲ್ಲಿ ಸದ್ಯೋಜಾತೇಶ್ವರ, ವಾಮದೇವೇಶ್ವರ, ಅಘೋರೇಶ್ವರ, ತತ್ಪುರುಷೇಶರ ಮತ್ತು ಈಶಾನೇಶ್ವರ ಎಂಬ ಐದು ಲಿಂಗಗಳುಳ್ಳ ಪ್ರತ್ಯೇಕ ಗರ್ಭಗುಡಿಗಳಿವೆ. ೧೩ನೆಯ ಶತಮಾನದಲ್ಲಿ ನಿರ್ಮಾಣವಾದ ಇದನ್ನು ಮಲ್ಲಿತಮ್ಮ ಎಂಬ ವ್ಯಕ್ತಿ ನಿರ್ಮಿಸಿದನು ಎಂದು ದಾಖಲೆಗಳು ತಿಳಿಸುತ್ತವೆ. ಆದರೆ ಸೂಕ್ತ ನಿರ್ವಹಣೆಯಿಲ್ಲದೆ ಈ ದೇವಾಲಯದ ಸೌಂದರ್ಯವು ಸೊರಗುತ್ತಿದೆ.

ಕಿಕ್ಕೇರಿಯ ಬ್ರಹ್ಮೇಶ್ವರ ದೇವಾಲಯ ಹೊಯ್ಸಳ ಶಿಲ್ಪ ಲಕ್ಷಣವುಳ್ಳ ಏಕಕೂಟ ದೇವಾಲಯವಾಗಿದ್ದು, ಒಂದನೇ ನರಸಿಂಹನ ಕಾಲದ್ದು ಎಂದು ತಿಳಿದುಬಂದಿದೆ. ಬಮ್ಮವ್ವೆ ನಾಯಕಿತಿ ಎಂಬಾಕೆ ಕ್ರಿ.ಶ.೧೧೭೧ರಲ್ಲಿ ಈ ದೇವಾಲಯವನ್ನು ಕಟ್ಟಿಸಿದಳು ಎಂಬ ಬಗ್ಗೆ (ಶಾಸನ ಕೃಪೇ.೨೭) ದಾಖಲೆಯಿದೆ. ಇದೇ ಗ್ರಾಮದಲ್ಲಿ ಮಲ್ಲೇಶ್ವರ ದೇವಾಲಯ (ಶಾಸನ ಕೃಪೇ.೪೯, ಕಾಲ ಕ್ರಿ.ಶ.೧೧೧೧), ಲಕ್ಷ್ಮೀ ನರಸಿಂಹ ಸ್ವಾಮಿ ಮತ್ತು ಯೋಗಾನರಸಿಂಹ ಸ್ವಾಮಿ ದೇವಾಲಯಗಳು ಹಾಗೂ ವಿಜಯನಗರದ ಹರಿಹರ- ಬುಕ್ಕರಾಯರ ಕಾಲದ್ದು ಎನ್ನಲಾದ ಗ್ರಾಮದೇವತೆ ಕಿಕ್ಕೇರಮ್ಮನ ದೇವಾಲಯ ಸಹ ಇವೆ. ಕಿಕ್ಕೇರಮ್ಮನ ಹಬ್ಬದ ಸಂದರ್ಭದಲ್ಲಿನ ಕೊಂತವನ್ನು ಕುಣಿಸುವ ಆಚರಣೆ ವಿಶಿಷ್ಠವಾದದ್ದು.

ಅಗ್ರಹಾರಬಾಚಹಳ್ಳಿಯಲ್ಲಿ ಹುಣಸೇಶ್ವರ ದೇವಾಲಯವಿದೆ. ಇಲ್ಲಿರುವ ಮೂರು ಗರುಡಗಲ್ಲುಗಳು ಹೆಚ್ಚು ಮಹತ್ವವನ್ನು ಹೊಂದಿವೆ. ಈ ಬಗೆಯ ಗರುಡಗಲ್ಲುಗಳು ಅಪರೂಪವಾಗಿದ್ದು, ಗರುಡ ಸಂಪ್ರದಾಯದ ಬಗ್ಗೆ ಮಾಹಿತಿಯನ್ನು ಹೊಂದಿದ್ದು, ಹೆಚ್ಚಿನ ಅಧ್ಯಯನಕ್ಕೆ ಒಳಗಾಗಿವೆ. ಇಲ್ಲಿರುವ ೧೨೫೭ರ ಸ್ಮಾರಕಗಳು ‘ಮುಗಿಲಕುಲ’ ಎಂಬ ಮನೆತನಕ್ಕೆ ಸೇರಿದ ಸಿವನೆನಾಯಕ, ಲಖ್ಖಯನಾಯಕ, ಕಂನೆಯ ನಾಯಕ, ಸಿಂಗನಾಯಕ ಎಂಬುವವರು ಬೇರೆ ಬೇರೆ ಸಂದರ್ಭಗಳಲ್ಲಿ ತಮ್ಮ ಆಶ್ರಯದಾತರಾದ ಹೊಯ್ಸಳ ದೊರೆಗಳಿಗಾಗಿ ಪತ್ನಿಯರು ಮತ್ತು ಪರಿವಾರದ ಸಮೇತ ಪ್ರಾಣವನ್ನೇ ತೆತ್ತರು ಎಂದು ತಿಳಿಸುತ್ತದೆ.

ಸಿಂಧಘಟ್ಟದದಲ್ಲಿ ಹೊಯ್ಸಳ ಶಿಲ್ಪಕಲೆಯ ದ್ವಿಕೂಟಾಚಲ ದೇವಾಲಯವಿದೆ. ಇಲ್ಲಿ ಸಂಗಮೇಶ್ವರ ಮತ್ತು ಜನ್ನೇಶ್ವರ ಎಂಬ ಎರಡು ಗರ್ಭಗುಡಿಗಳನ್ನು ಕಾಣಬಹುದಾಗಿದೆ. ಕ್ರಿ.ಶ ೧೧೭೯ರ ಶಾಸನದಲ್ಲಿ ಈ ಗ್ರಾಮವನ್ನು ಸಂಗಮೇಶ್ವರ ಪುರ ಎಂದು ಉಲ್ಲೇಖಿಸಲಾಗಿದೆ. ಕ್ರಿ.ಶ ೧೨೯೯ರ ಹೊಯ್ಸಳ ವೀರಬಲ್ಲಾಳನ ಶಾಸನ ಇಲ್ಲಿ ದೊರೆತಿದೆ. ಹಿಂದೂಗಳು ಕಟ್ಟಿಸಿದ್ದು ಎಂಬ ದಾಖಲೆಯಿರುವ ಇಲ್ಲಿನ ಮಸೀದಿಯೊಂದು ತಾಲ್ಲೂಕಿನ ಹಿಂದೂಗಳ ಉದಾರತೆಗೆ ಸಾಕ್ಷಿಯಾಗಿ ನಿಂತಿದೆ. ೧೫೩೭ರ ಶಾಸನ ಸಮೀಪದ ಶಿವಪುರವನ್ನು ಈ ಮಸೀದಿಗೆ ದತ್ತಿಯಾಗಿ ನೀಡಿದ ಬಗ್ಗೆ ಮಾಹಿತಿ ನೀಡುತ್ತದೆ. ಲಕ್ಷ್ಮೀನಾರಾಯಣಸ್ವಾಮಿ ದೇವಾಲಯವೂ ಇಲ್ಲಿದೆ. ‘ಸಿಂಧಘಟ್ಟದ ದೇವರು ಹಿಂದುಮುಂದು’ ಎಂಬ ಪ್ರಚಾರಕ್ಕೆ ಕಾರಣವಾದ ತಿರುಮಲ ದೇವರ ಗುಡಿ ಸಹ ಇದ್ದು, ವಿಗ್ರಹ ಹಿಂದುಮುಂದಾಗಿದೆ.

ಅಘಲಯ ಗ್ರಾಮದಲ್ಲಿರುವ ಮಲ್ಲೇಶ್ವರನಾಥ ದೇವಾಲಯವು ಹೊಯ್ಸಳರ ಶೈಲಿಯ ತ್ರಿಕೂಟಾಚಲ ದೇವಾಲಯವಾಗಿದೆ. ಮೂರನೇ ನರಸಿಂಹನ ಕಾಲದಲ್ಲಿ ನಿರ್ಮಿಸಿದ್ದು ಎನ್ನಲಾಗಿದ್ದು ಇತ್ತೀಚೆಗೆ ಜೀರ್ಣೋದ್ಧಾರಗೊಂಡು ಸುಂದರವಾಗಿ ಕಂಗೊಳಿಸುತ್ತಿದೆ. ಈ ಸ್ಥಳಕ್ಕೆ ಪಾಪವನ್ನು ನಾಶಮಾಡುವ ಶಕ್ತಿಯಿದೆ ಎಂಬ ಹಿನ್ನೆಲೆಯಲ್ಲಿ ‘ಅಘಲಯ’ (ಅಘ-ಪಾಪ, ಲಯ-ನಾಶ) ಸ್ಥಳಗಥೆಯೊಂದು ಕೇಳಿಬರುತ್ತದೆ.

ಸಂತೇಬಾಚಹಳ್ಳಿ ಗ್ರಾಮದಲ್ಲಿರುವ ಮಾಲಿಂಗೇಶ್ವರ ದೇವಾಲಯ ಹೊಯ್ಸಳರ ಶಿಲ್ಪಕಲೆಯ ಸ್ಪರ್ಶವನ್ನು ಹೊಂದಿದೆ. ಗ್ರಾಮದ ಮುಂಭಾಗದ ದ್ಯಾವನಕೆರೆಯ ಎದುರಿಗೆ ಪೂರ್ವಾಭಿಮುಖವಾಗಿ ಇರುವ ದೇವಾಲಯ ಪೂರ್ಣವಾಗಿ ಶಿಥಿಲಾವಸ್ಥೆ ತಲುಪಿತ್ತು. ಇದೀಗ ಜೀರ್ಣೋದ್ಧಾರಗೊಂಡು ದರ್ಶನಯೋಗ್ಯವಾಗಿದೆ. ಗ್ರಾಮದೇವತೆ ಪಟಲದಮ್ಮ ಸೇರಿದಂತೆ ಅನೇಕ ದೇವಾಲಯಗಳು ಇಲ್ಲಿವೆ.

ಮಾಳಗೂರಿನ ಪಂಚಲಿಂಗಗಳ ದೇವಾಲಯ ಸಹ ಪ್ರಮುಖ ದೇವಾಲಯವಾಗಿದೆ. ಒಂದೇ ಸ್ಥಳದಲ್ಲಿ ಐದು ಪ್ರತ್ಯೇಕ ಲಿಂಗಗಳಿರುವ ಐದು ದೇವಾಲಯಗಳಿದ್ದು, ಪಂಚಲಿಂಗಗಳ ದೇವಾಲಯ ಎನ್ನಲಾಗುತ್ತದೆ. ಹೊಯ್ಸಳ ದೊರೆ ವಿಷ್ಣುವರ್ಧನನ ಪತ್ನಿ ನಾಟ್ಯರಾಣಿ ಶಾಂತಲೆ ಇದೇ ಗ್ರಾಮದವಳು ಎಂಬುದು ವಿಧ್ವಾಂಸರ ಅಭಿಪ್ರಾಯ. ತೆಂಗಿನಘಟ್ಟದ ಹೊಯ್ಸಳೇಶ್ವರ, ಮಾದಾಪುರದ ತ್ರಯಂಬಕೇಶ್ವರ, ತೊಣಚಿಯ (ತೊಳಸಿ) ಬಸವೇಶ್ವರ ಸಹ ಹೊಯ್ಸಳ ಶೈಲಿಯ ದೇವಾಲಯಗಳಾಗಿವೆ.

ಅಕ್ಕಿಹೆಬ್ಬಾಳು ಗ್ರಾಮದಲ್ಲಿರುವ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯ ಅಪರೂಪದ ಕಲಾವಂತಿಕೆಯನ್ನು ಒಳಗೊಂಡಿರುವ ದೇವಾಲಯವಾಗಿದೆ. ಹೊಯ್ಸಳರ ಕಾಲದ್ದು ಎನ್ನಲಾದ ಶಿವಾಲಯ, ಕೊಂಗಳೇಶ್ವರ ದೇವಾಲಯ ಸೇರಿದಂತೆ ವಿವಿಧ ದೇವಾಲಯಗಳು ಇಲ್ಲಿವೆ. ಒಂದು ಕಾಲಕ್ಕೆ ಮೈಸೂರು ಅರಸರ ಆಳ್ವಿಕೆಗೆ ಒಳಪಟ್ಟಿದ್ದ ಈ ಪ್ರದೇಶ ಬತ್ತದ ಗದ್ದೆಗಳ ಕಣಜ ಎನಿಸಿದೆ, ಪ್ರತಿಭಾವಂತರ ಆಗರವಾಗಿದೆ.

ಮೋದೂರಿನ ರಾಮಲಿಂಗೇಶ್ವರ ದೇವಾಲಯ ಸುಂದರ ದೇವಾಲಯವಾಗಿದೆ. ಇಲ್ಲಿ ಶ್ರೀರಾಮಚಂದ್ರ ಒಮ್ಮೆ ಯಾಗವನ್ನು ಮಾಡಿದ್ದ ಎಂದು ಸ್ಥಳಗಥೆಯೊಂದು ಹೇಳುತ್ತದೆ. ಇಲ್ಲಿನ ಮಣ್ಣಿನಿಂದ ವಿಭೂತಿಯನ್ನು ತಯಾರಿಸಲಾಗುತ್ತಿತ್ತು ಎಂದು ಸಹ ಹೇಳುತ್ತಾರೆ. ಇಲ್ಲಿನ ದೇವಾಲಯ ಚೋಳರ ಕಾಲದ್ದು ಎನ್ನಲಾಗಿದ್ದು, ಮೈಸೂರು ಒಡೆಯರಿಂದ ನಿರ್ಮಾಣಗೊಂಡದ್ದು ಎಂಬ ಅಭಿಪ್ರಾಯಗಳೂ ಇವೆ.

ವರಾಹನಾಥ ಕಲ್ಲಹಳ್ಳಿ ಎಂಬ ಗ್ರಾಮ ಹೇಮಾವತಿ ನದಿಯ ತಟದಲ್ಲಿದ್ದು, ಇಲ್ಲಿ ದಕ್ಷಿಣ ಭಾರತದಲ್ಲಿಯೇ ವಿಶಿಷ್ಠವಾದದ್ದು, ಅಪರೂಪದ್ದು ಎನ್ನಲಾದ ಭೂವರಾಹನಾಥಸ್ವಾಮಿ ದೇವಾಲಯ ಇದೆ. ವಿಷ್ಣುವಿನ ಅವತಾರಗಳಲ್ಲಿ ಒಂದಾಗಿರುವ ವರಾಹಾವತಾರದ ಭವ್ಯವಾದ ೧೪ ಅಡಿ ಎತ್ತರದ ಮೂರ್ತಿ ಭೂದೇವಿಯ ಸಹಿತವಾಗಿ ಇಲ್ಲಿದೆ. ಹೊಯ್ಸಳ ದೊರೆ ೩ನೇ ಬಲ್ಲಾಳ ತನ್ನ ಪತ್ನಿಯ ನೆನಪಿಗೆ ಅಗ್ರಹಾರವನ್ನಾಗಿ ಮಾಡಿದ್ದ ದೇಮಲಾಪುರ ಈಗಿನ ಕಲ್ಲಹಳ್ಳಿಯಾಗಿದೆ ಎಂದು ಹೇಳಲಾಗುತ್ತದೆ. ಮೈಸೂರಿನ ಪರಕಾಯ ಮಠದ ನಿರ್ವಹಣೆ ನಡುವೆಯೂ ಉಪೇಕ್ಷೆಗೆ ಒಳಗಾಗಿದ್ದ ಈ ದೇವಾಲಯ ಇದೀಗ ಪುನರ್ ನವೀಕರಣಗೊಳುತ್ತಿದೆ.

ಸಂಗಾಪುರದ ಬಳಿ ತ್ರಿವೇಣಿ ಸಂಗಮ ಸ್ಥಳದಲ್ಲಿರುವ ಸಂಗಮೇಶ್ವರ ದೇವಾಲಯ ಒಂದು ಪ್ರಮುಖ ದೇವಾಲಯ. ಗೂಡೇಹೊಸಳ್ಳಿಯಿಂದ ತಾಲ್ಲೂಕಿನಲ್ಲಿ ಮುಂದೆ ಸಾಗಿ ಬರುವ ಹೇಮಾವತಿಯು, ಇಲ್ಲಿ ಕಾವೇರಿಯಲ್ಲಿ ಐಕ್ಯವಾಗುತ್ತಾಳೆ. ಇವೆರಡರ ಜೊತೆಗೆ ಇಲ್ಲಿಗೇ ಹರಿದು ಬರುವ ಲಕ್ಷ್ಮಣತೀರ್ಥ ಸೇರಿ ಮೂರು ನದಿಗಳ ತ್ರಿವೇಣಿ ಸಂಗಮ ಉಂಟಾಗಿದೆ. ಕೃಷ್ಣರಾಜಸಾಗರದ ಹಿನ್ನೀರಿನಲ್ಲಿ ಕಂಗಳಿಸುವ ಇಲ್ಲಿನ ಸುಂದರ, ಪ್ರಶಾಂತವಾದ ಸ್ಥಳದಲ್ಲಿ ದೇವಾಲಯವಿದ್ದು, ಅಪಾರ ಸಂಖ್ಯೆಯಲ್ಲಿ ಜನರು ಇಲ್ಲಿಗೆ ಬರುತ್ತಾರೆ. ತಿಪ್ಪೂರಿನ ಪಾಳಯಗಾರ ಮಾಚನಾಯಕ ಎಂಬಾತ ಇಲ್ಲಿನ ಮೂಲ ದೇವಾಲಯವನ್ನು ನಿರ್ಮಿಸಿದ ಎಂದು ಹೇಳಲಾಗುತ್ತದೆ. ಪ್ರತಿ ಶಿವರಾತ್ರಿ ಸಂದರ್ಭದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ಇಲ್ಲಿ ನಡೆಯುತ್ತವೆ. ಸಾಸಲಿನ ಸೋಮೇಶ್ವರ ಮತ್ತು ಶಂಭುಲಿಂಗೇಶ್ವರ ದೇವಾಲಯಗಳು ಬಯಲು ಸೀಮೆಯ ಕುಕ್ಕೆ ಸುಬ್ರಹ್ಮಣ್ಯ ಎಂಬ ಖ್ಯಾತಿ ಪಡೆದಿವೆ. ಕಾರ್ತೀಕ ಮಾಸ ಸೇರಿದಂತೆ ಪ್ರತಿ ಸೋಮವಾರ ಇಲ್ಲಿಗೆ ನಾಡಿನ ವಿವಿಧ ಭಾಗಗಳಿಂದ ಅಪಾರ ಪ್ರಮಾಣದ ಭಕ್ತರು ಆಗಮಿಸಿ ನಾಗಾರಾಧನೆಯನ್ನು ನೆರವೇರಿಸುತ್ತಾರೆ. ವಿಷದ ಹಾವಿನ ಕಡಿತಕ್ಕೆ ಸಿಗುವ ಚಿಕಿತ್ಸೆ, ಚರ್ಮರೋಗಗಳನ್ನು ವಾಸಿಮಾಡುವ ಶಕ್ತಿಯನ್ನು ಹೊಂದಿದೆ ಎನ್ನಲಾದ ಇಲ್ಲಿನ ಕಲ್ಯಾಣಿ ಪ್ರಸಿದ್ಧಿಯನ್ನು ಪಡೆದಿವೆ. ಕುದುರೆ ಮಂಡಮ್ಮ ಇಲ್ಲಿನ ಗ್ರಾಮದೇವತೆ. ಮಾನಿಗ ಶೆಟ್ಟಿಯ (ಕತ್ತೆಯ) ಮೆರವಣಿಗೆ ಇಲ್ಲಿನ ಪ್ರಮುಖ ಆಚರಣೆಯಾಗಿದೆ.

ಬಿಲ್ಲೇನಹಳ್ಳಿ ಬಳಿಯಿರುವ ಗವಿರಂಗನಾಥಸ್ವಾಮಿ ದೇವಾಲಯ ಗ್ರಾಮೀಣರ ಪಾಲಿನ ಪ್ರಮುಖ ಯಾತ್ರಾ ಸ್ಥಳವಾಗಿದೆ. ಜನ- ಜಾನುವಾರುಗಳ ರಕ್ಷಣೆಗೆ ಇಲ್ಲಿನ ಗುಡ್ಡದ ಮೇಲಿರುವ ಗವಿರಂಗನಾಥ ಸಿದ್ಧಹಸ್ತ ಎಂಬುದು ಜನರ ನಂಬಿಕೆ. ಪುಟ್ಟ ಮಕ್ಕಳಿಗೆ ಕಿವಿ ಚುಚ್ಚಿಸುವುದು, ಹರಕೆಗಳನ್ನು ಹೊತ್ತವರು ಮಾಂಸಾಹಾರದ ಪರಗಳನ್ನು ಮಾಡುವುದು ಇಲ್ಲಿನ ವಿಶೇಷ. ವಿಷ್ಣುವು ಋಷಿಯ ರೂಪದಲ್ಲಿ ಇಲ್ಲಿ ಒಮ್ಮೆ ತಪಸ್ಸು ಮಾಡಿದ್ದ ಎಂಬ ಸ್ಥಳಗಥೆಯಿದೆ.

ಇವುಗಳಲ್ಲದೆ ಭಾರತೀಪುರದ ಗೋಪಾಲಕೃಷ್ಣ, ಭೈರಾಪುರದ ಭೈರವೇಶ್ವರ, ಹಿರಿಕಳಲೆ ಅರ್ಕೇಶ್ವರ, ನಾಯಕನಹಳ್ಳಿಯ ಭೈರವೇಶ್ವರ, ಕೃಷ್ಣರಾಜಪೇಟೆಯ ಕೈಲಾಸೇಶ್ವರ, ನಾಗರಘಟ್ಟದ ಮಲ್ಲೇಶ್ವರ, ಆಲೇನಹಳ್ಳಿಯ ಶಂಭುಲಿಂಗೇಶ್ವರ, ಹರಿಹರಪುರದ ಹರಿಹರೇಶ್ವರ, ಪ್ರಮುಖ ದೇವಾಲಯಗಳಾಗಿವೆ. ನಾಡಿನ ಉದ್ದಗಲಕ್ಕೂ ಅಪಾರ ಸಂಖ್ಯೆಯ ಭಕ್ತರನ್ನು ಹೊಂದಿರುವ ತಾಲ್ಲೂಕಿನ ಶಕ್ತಿದೇವತೆ ಚಂದುಗೋನಹಳ್ಳಿಯ ಅಮ್ಮನ ದೇವಾಲಯ ಉಲ್ಲೇಖನಾರ್ಹ. ಹಂದಿ, ಕುರಿ, ಕೋಳಿಗಳ ಬಲಿಗೆ ಮತ್ತು ಪರಗಳಿಗೆ ಹೆಸರಾದ ಸ್ಥಳ.

ತಾಲ್ಲೂಕಿನ ಪ್ರಮುಖ ಶಾಸನಗಳು, ವೀರಗಲ್ಲುಗಳು ಮತ್ತು ಮಾಸ್ತಿಗಲ್ಲುಗಳು[ಬದಲಾಯಿಸಿ]

ಈ ತಾಲ್ಲೂಕಿನಲ್ಲಿ ಈವರೆಗೆ ೧೧೪ ಶಾಸನಗಳು ದಾಖಲಾಗಿದ್ದು, ಶಾಸನಗಳ ಇತಿಹಾಸದಲ್ಲಿ ಶ್ರೀಮಂತಿಕೆಯನ್ನು ತೋರಿಸುತ್ತದೆ. ತಾಲ್ಲೂಕಿನಲ್ಲಿ ಹೆಚ್ಚಿನ ಶಾಸನಗಳು ಕಿಕ್ಕೇರಿಯಲ್ಲಿ ದೊರೆತಿದ್ದು, ಬಹುಪಾಲು ಶಾಸನಗಳು ಕನ್ನಡದಲಿ, ಕೆಲವು ಕನ್ನಡ ಮತ್ತು ಸಂಸ್ಕೃತ ಭಾಷೆಗಳ ಮಿಶ್ರಣದಲ್ಲಿ ಬರೆಯಲ್ಪಟ್ಟಿವೆ. ಇವುಗಳಲ್ಲಿ ದಾನ ಶಾಸನ, ವೀರ ಶಾಸನಗಳು ಮತ್ತು ವಿಶೇಷ ಶಾಸನಗಳು ಸೇರಿವೆ. ಇವುಗಳಲ್ಲದೆ ವೀರಗಲ್ಲುಗಳು ಹಾಗೂ ಮಾಸ್ತಿಗಲ್ಲುಗಳು ಸಹ ಕಂಡುಬಂದಿವೆ. ಅಗ್ರಹಾರಬಾಚಹಳ್ಳಿಯ ೧೧೭೯ರ ವೀರಬಲ್ಲಾಳನ ಕಾಲದ ವೀರಗಲ್ಲು ಸಾಮಂತ ಬಬ್ಬೆಯ ನಾಯಕ ತನ್ನ ರಾಜನ ಪರವಾಗಿ ಕಾದಾಡಿದ್ದನ್ನು ಹೇಳುತ್ತದೆ. ಇದೇ ಗ್ರಾಮದ ೧೨೨೪ರ ವೀರಗಲ್ಲು ಸೆರೆಸಿಕ್ಕ ಹೆಣ್ಣುಮಕ್ಕಳನ್ನು ಸೆರೆಯಿಂದ ಬಿಡಿಸಲು ಕೇತಣನೆಂಬುವನು ಹೋರಾಡಿ ಸತ್ತನೆಂದು ತಿಳಿಸುತ್ತದೆ. ತೆಂಗಿನಘಟ್ಟದ ವೀರಗಲ್ಲಿನಲ್ಲಿ, (ಶಾಸನ ಕೃಪೇ ೪೩, ಕಾಲ ೧೧೧೭) ಹೋರಾಡಿ ಸತ್ತ ಸಾವಂತ ಕಾಳಯ್ಯನನ್ನು ಕಲಿಯುಗ ಮಾರ್ತಾಂಡ, ಸಂಗ್ರಾಮ ಸಹಸ್ರಬಾಹು, ಕದನ ತ್ರಿನೇತ್ರ, ಪರನಾರಿದೂರ ಎಂದು ಬಣ್ಣಿಸಲಾಗಿದೆ. ಮೆಳ್ಳಹಳ್ಳಿಯ ವೀರಗಲ್ಲಿನಲ್ಲಿ, (ಶಾಸನ ಕೃಪೇ ೧೧೧೪ರಲ್ಲಿ) ಬಿಟ್ಟಿಯ ಮಾರಯ್ಯನ ಮಗ ಸೆಟ್ಟಿಯಣ್ಣನು ಕಳ್ಳರಿಂದ ತುರುಗಳನ್ನು ರಕ್ಷಿಸಲು, ಹಲವು ಕಳ್ಳರನ್ನು ಕೊಂದು ತಾನೂ ಸತ್ತನೆಂದು ತಿಳಿಸಲಾಗಿದೆ. ಸಿಂಧಘಟ್ಟದಲ್ಲಿ ದೊರೆತಿರುವ ದಾಖಲೆಯಲ್ಲಿ (ಶಾಸನ ಕೃಪೇ ೯೨, ಕಾಲ ೧೫೩೭) ರಂಗಯ್ಯನಾಯಕ ಮತ್ತು ಬಾಬುಸೆಟ್ಟಿ ಎಂಬುವವರು ಇಲ್ಲಿನ ಮುಸ್ಲಿಂ ಬಾಂಧವರಿಗಾಗಿ ‘ಕಲ್ಲ ಮಸೀತಿ ದೇವಸ್ಥಾನ’ ಎಂಬ ಮಸೀದಿಯನ್ನು ಕಟ್ಟಿಸಿಕೊಟ್ಟರು ಎಂಬ ಉಲ್ಲೇಖಗಳಿದ್ದು, ಇದು ಧರ್ಮ ಸಹಿಷ್ಣುತೆಯನ್ನು ಪ್ರತಿಬಿಂಬಿಸುತ್ತಿದೆ. ಹೈದರಾಲಿಯು ಖಾದ್ರಿದರ್ಗಾಕ್ಕೆ ತಾಲ್ಲೂಕಿನ ಚಟ್ಟಂಗೆರೆ ಗ್ರಾಮವನ್ನು ದತ್ತಿಯಾಗಿ ನೀಡಿದ್ದ ಎಂಬ ಬಗ್ಗೆ ೧೭೫೯ರ ಚಟ್ಟಂಗೆರೆ ಶಾಸನ (ಕೃಪೇ ೧೦೨) ತಿಳಿಸುತ್ತದೆ. ಗೋವಿಂದನಹಳ್ಳಿಯ ದೇವಾಲಯದ ೧೨೩೬ರ ಶಾಸನ (ಕೃಪೇ ೩೯) ಹೊಯ್ಸಳ ವಂಶದ ಆರಂಭದ ಬಗ್ಗೆ ಮಾಹಿತಿ ನಿಡುತ್ತದೆ. ಆಲೇನಹಳ್ಳಿಯ ಕ್ರಿ.ಶ ೯ನೇ ಶತಮಾನದ ಶಾಸನ (ಕೃಪೇ ೧೯) ನೀತಿವಾಕ್ಯ ಪೆರ್ಮಾನಡಿಯು ನಡೆಸಿದ ಕಲವೂರ ಕಾಳಗದಲ್ಲಿ ಬಮ್ಯನು ಪ್ರಾಣಕೊಟ್ಟ ಎಂದು ತಿಳಿಸುತ್ತದೆ. ನಾಯಕನಹಳ್ಳಿಯ ಕ್ರಿ.ಶ ೧೨ನೇ ಶತಮಾನದ ಶಾಸನ (ಕೃಪೇ ೬೭) ಗುಳೆಯ ನಾಯಕ ಎಂಬುವವನ ಆಳು ಕುರುಳೆಯ ನಾಯಕನ ಮಗ ಮಚನ ಎಂಬಾತ ಸಿಂಗಕಟ್ಟಕದ ಜವರದಲ್ಲಿ ಬಿದ್ದ ಎಂದು ಮಾಹಿತಿ ನೀಡುತ್ತದೆ. ಮಡುವಿನಕೋಡಿಯ ಕ್ರಿ.ಶ ೧೨೦೦ರ ಶಾಸನ (ಕೃಪೇ ೧೧೧) ಮಹಾಪ್ರಭು ಮಲ್ಲಿಯಣ್ಣ ಮತ್ತು ಆತನ ತಮ್ಮ, ಬೀರವನ್ನು ಕೈಗೊಂಡು ಒಂದೇ ದಿನ ಕೈಲಾಸಪ್ರಾಪ್ತರಾದ ಬಗ್ಗೆ ಮಾಹಿತಿ ನೀಡುತ್ತದೆ. ಬಸ್ತಿ ಹೊಸಕೋಟೆಗೆ ಸಂಬಂಧಿಸಿದ ಶಾಸನದಲ್ಲಿ (ಕೃಪೇ ೧೦೭) ಇಲ್ಲಿನ ಜೈನ ಬಸದಿಯನ್ನು ನಿರ್ಮಾಣ ಮಾಡಿದ ಬಗ್ಗೆ ಮತ್ತು ಸಮೀಪದ ಮಾವಿನಕೆರೆಯನ್ನು ದತ್ತಿಯಾಗಿ ನೀಡಿದ ಬಗ್ಗೆ ಮಾಹಿತಿ ಇದೆ. ಹೊಸಹೊಳಲು ಗ್ರಾಮದ ಪಾರ್ಶ್ವನಾಥ ಬಸದಿಯಲ್ಲಿರುವ ೧೧೨೫ರ ಕಾಲದ ಶಾಸನವು ನೊಣಬಸೆಟ್ಟಿಯು ಶ್ರೀ ಶುಭಚಂದ್ರ ಸಿದ್ದಾಂತ ದೇವರಿಗೆ ಬಸದಿಗಾಗಿ ಅರುಹನಹಳ್ಳಿ ಗ್ರಾಮವನ್ನು ದತ್ತಿ ನೀಡಿದ ಬಗ್ಗೆ ತಿಳಿಸುತ್ತದೆ. ಹೊನ್ನೇನಹಳ್ಳಿಯಲ್ಲಿ ೯ನೇ ಶತಮಾನದ ಶಾಸನ (ಕೃಪೇ ೨೦) ಪತ್ತೆಯಾಗಿದ್ದು, ವಿವರಗಳು ಅಳಿಸಿಹೋಗಿವೆ.

ಶಾಸನಗಳಲ್ಲಿ ಮಹಿಳೆಯರು[ಬದಲಾಯಿಸಿ]

ಅಗ್ರಹಾರಬಾಚಹಳ್ಳಿಯ ದಾಖಲೆಯಲ್ಲಿ (ಶಾಸನ ಕೃಪೇ ೮೨, ಕಾಲ ೧೧೪೨) ಗರುಡ ಸಂಪ್ರದಾಯವನ್ನು ಅನುಸರಿಸಿ ತಮ್ಮ ಒಡೆಯರಿಗಾಗಿ ಪ್ರಾಣತೆತ್ತ ವೀರರ ಪತ್ನಿಯರಾದ ಕಲ್ಲವ್ವೆ, ಜವನವ್ವೆ, ಉಮ್ಮವ್ವೆ ಎಂಬುವವರು ಸಹ ಗಂಡಂದಿರನ್ನು ಅನುಸರಿಸಿ ವೀರಮರಣವನ್ನಪ್ಪಿದ ಬಗ್ಗೆ ಮಾಹಿತಿ ನೀಡುತ್ತದೆ. ಕಿಕ್ಕೇರಿಯ ಶಾಸನವೊಂದರಲ್ಲಿ ಬಮ್ಮವ್ವೆ ನಾಯಕಿತಿ ಎಂಬಾಕೆಯ ಕುರಿತು ವರ್ಣನೆಯಿದೆ. ‘ಭಕ್ತಿ ಚಿಂತಾಮಣಿ ಬ್ರಹ್ಮೇಶನ ಪಾದಕಮಳಭೃಂಗೆ ಎನಲು ಧಾರಿಣಿಯಲು ಬಮ್ಮವ್ವೆಯಂತೆ ನೋಂತವರೊಳರೇ’ ಎಂದು ಆಕೆಯನ್ನು ಬಣ್ಣಿಸಲಾಗಿದೆ.

ಹೊಸಹೊಳಲು ಗ್ರಾಮದ ದಾಖಲೆಯಲ್ಲಿ (ಶಾಸನ ಕೃಪೇ ೩) ನೊಣಂಬಿಶೆಟ್ಟಿ ಎಂಬಾತನ ಪತ್ನಿ, ಪ್ರಭುವಿನ ಮನೋನಯನವಲ್ಲಭೆ ದಾನವಿನೋದೆ ದೇಮಿಕಬ್ಬೆ, ಕತ್ತರಘಟ್ಟದಲ್ಲಿ ಬಸದಿಯನ್ನು ಕಟ್ಟಿಸಿ, ಕೆರೆಯ ಕೆಳಗಿನ ಗದ್ದೆ, ತೋಟ, ಮನೆಗಳನ್ನು ದತ್ತಿಯಾಗಿ ಬಿಟ್ಟಳು ಎಂಬ ಮಾಹಿತಿ ನೀಡುತ್ತದೆ. ಶ್ರವಣನಹಳ್ಳಿಯ ಶಾಸನ (ಕೃಪೇ ೨೧) ಹೊಯ್ಸಳ ವಿಷ್ಣುವರ್ಧನನ ಹಿರಿಯ ರಾಣಿ ಚಂದಲದೇವಿ, ಮಂದಗೆರೆಯ ಉಪಗ್ರಾಮ ಕಾವನಹಳ್ಳಿಯನ್ನು ವೀರ ಕೊಂಗಾಳ್ವ ಜಿನಾಲಯ ದೇವರ ಅಂಗಭೋಗಕ್ಕೆ ದತ್ತಿಬಿಟ್ಟ ವಿಷಯ ತಿಳಿಸುತ್ತದೆ.

ತೆಂಗಿನಘಟ್ಟದ ಶಾಸನ (ಕೃಪೇ ೪೨) ವೀರನಾರಸಿಂಹನ ಹಡವಳಕೊಳ್ಳಿ ಅಯ್ಯನ ಸಭಾಂಗ ಲಕ್ಷುಮಿ ಚಾವುಂಡವ್ವೆಯ ಸುಪುತ್ರರಾದ ಹಡವಳ ಕಾವಣ್ಣ, ಕಂಚ, ಕಾಳಯ, ಚಿಕ್ಕಾಟಯ ಮತ್ತಿತರರು ‘ಹೊಯ್ಸಳೇಶ್ವರ ದೇವಾಲ್ಯವ ಮಾಡಿಸಿ, ಕೆರೆಯಂ ಕಟ್ಟಿಸಿ, ಹೊಯ್ಸಳೇಶ್ವರ ದೇವರ್ಗೆ ದತ್ತಿ ಬಿಟ್ಟರು’ ಎಂಬ ಮಾಹಿತಿ ನೀಡುತ್ತದೆ. ಭೈರಾಪುರದ ಶಾಸನ (ಕೃಪೇ ೯೬, ೧೪೨೪) ಚಾಮಾಂಬಿಕೆಯ ಗರ್ಭದುಗ್ಧಾಬ್ಧಿಚಂದ್ರ ಶ್ರೀಮನ್ನಹಾ ಪ್ರಧಾನಂ ಚಿಕ್ಕೊಡೆಯ ಮತ್ತು ಮಲ್ಲಾಂಬಿಕೆಯ ಮಗ ಸೇರಿ ಈ ಭೈರವೇಶ್ವರ ಪುರದಲ್ಲಿ ಬ್ರಾಹ್ಮಣರ ಭೋಜನಕ್ಕಾಗಿ ಐಗಂಡುಗ ಗದ್ದೆಯನ್ನು ದತ್ತಿಬಿಟ್ಟ ವಿಷಯವನ್ನು ತಿಳಿಸುತ್ತದೆ.

ಇದೇ ಊರಿನ ಮತ್ತೊಂದು ಶಾಸನದಲ್ಲಿ (ಕೃಪೇ ೯೮) ರೇಕವ್ವೆ ಆಕೆಯ ತಾಯಿ ರೇಖಾದೇವಿ ಮಗಳು ತಿಪ್ಪವ್ವೆ ಮೊಮ್ಮಗಳು ಸೋಯಕ್ಕ ಎಂಬ ನಾಲ್ವರು ಮಹಿಳೆಯರ ಪ್ರಸ್ತಾಪವಿದ್ದು, ರೇಕವ್ವೆ ದಣ್ನಾಯಕಿತ್ತಿ ‘ತಾವು ಮಾಡಿದ ಅಗ್ರಹಾರ ಹೊಸವಾಡದ ಭೈರಾಪುರವಾದ ಬೊಂಮನಾಯ್ಕನಹಳ್ಳಿಯ ಊರ ಈಶಾಂನ್ಯದಲ್ಲಿ ತಾವು ಮಾಡಿಸಿದ ಶಿವಾಲ್ಯ ಭೈರವೇಶ್ವರ ದೇವಸ್ಥಾನವನೂ ಆ ದೇವರ ನಾಲ್ಕು ವ್ರಿತ್ರಿಗಳನೂ ಪ್ರೀತಿಯಿಂದ ದಾನವಾಗಿ ಕೊಟ್ಟ ವಿವರಗಳು ಕಂಡುಬರುತ್ತವೆ. ಮಡುವಿನಕೋಡಿಯ ಶಾಸನ (ಕೃಪೇ ೧೧೦) ಮಾದಗೌಡಿ ಎಂಬ ಮಹಿಳೆಯನ್ನು ಧರ್ಮದ ಮೇರು ಪಾರ್ಬತಿ ಗಉರಿ ಅಭಿಮಾನ ಸುಗ್ಗಲದೇವಿ ಗೋತ್ರಚಿಂತಾಮಣಿ ರಾಣಿಮೊಖಜ್ಯೋತಿ ಎಂದು ಸ್ಥುತಿಸಿದೆ. ಇದೇ ಊರಿನ ಶಾಸನಗಳು (ಕೃಪೇ ೧೧೧ ಮತ್ತು ಕೃಪೇ ೧೧೨) ದುಬಿಗೌಡಿ ಮತ್ತು ಮಾಚವ್ವೆ ಎಂಬ ಮಹಿಳೆಯರ ಬಗ್ಗೆ ತಿಳಿಸುತ್ತವೆ. ರಾಣಿಮೊಖಜ್ಯೋತಿ ದಬಿಗಾವುಂಡಿಯ ಸುಪುತ್ರ ಮಲ್ಲಿಯಂಣ ತುರುಗಾಳಗದಲ್ಲಿ ಮತ್ತು ಮಾಚವ್ವೆಯ ಮಗ ಬಿಕೆಯನಾಯಕ ದಾಳಿಕೋರರೊಂದಿಗೆ ಕಾದು ಪ್ರಾಣತೆತ್ತರು ಎಂಬ ಉಲ್ಲೇಖವಿದೆ. ಅಂಕನಹಳ್ಳಿಯಲ್ಲಿ ವ್ಯಾಸನ ತೋಳುಗಲ್ಲು ಮಾದರಿಯ ಮಾಸ್ತಿಕಲ್ಲು ಇದೆ.

ಸಾಹಿತ್ಯ ಕ್ಷೇತ್ರ[ಬದಲಾಯಿಸಿ]

‘ನಿಜಗುರು ಸ್ವತಂತ್ರ ಸಿದ್ದಲಿಂಗೇಶ್ವರ’ ಎಂಬ ಅಂಕಿತನಾಮದೊಂದಿಗೆ ಅನೇಕ ವಚನಗಳನ್ನು ಬರೆದಿರುವ ಸ್ವತಂತ್ರ ಸಿದ್ದಲಿಂಗೇಶ್ವರರು ತಾಲ್ಲೂಕಿನ ಕಾಪನಹಳ್ಳಿ ಗವಿಮಠದಲ್ಲಿ ೧೩ನೆ ಶತಮಾನದಲ್ಲಿ ಬದುಕಿದ್ದವರು. ತಮ್ಮ ‘ಭೈರವೇಶ್ವರ ಕಾವ್ಯ’ದಿಂದ ನಾಡಿಗೆ ಪರಿಚಿತರಾದವರು ತಾಲ್ಲೂಕಿನ ಕಿಕ್ಕೇರಿಯ ನಂಜುಂಡಾರಾಧ್ಯ. ಸುಮಾರು ೧೫೫೦ರ ವೇಳೆಯಲ್ಲಿ ಬದುಕಿದ್ದ ಇವರು ಜಿಲ್ಲೆಯ ಪ್ರಾಚೀನ ಕವಿಗಳಲ್ಲಿ ಒಬ್ಬರು. ‘ಚಿತ್ರಗಳು-ಪತ್ರಗಳು’ ಖ್ಯಾತಿಯ ಶತಾಯುಷಿ ಸಾಹಿತಿ ಎ.ಎನ್.ಮೂರ್ತಿರಾಯರು ತಾಲ್ಲೂಕಿನ ಅಕ್ಕಿಹೆಬ್ಬಾಳು ಗ್ರಾಮದವರು. ಕನ್ನಡ ಪ್ರಬಂಧದ ಆದ್ಯ ಪ್ರವರ್ತಕರು ಎನಿಸಿರುವ ಇವರ ವೈಚಾರಿಕ ಕೃತಿ ‘ದೇವರು’ ಓದುಗರ ಸಮೂಹದಲ್ಲಿ ತಲ್ಲಣವನ್ನೇ ಉಂಟುಮಾಡಿದೆ. ದಕ್ಷಿಣ ಭಾರತದಲ್ಲಿಯೇ ಮೊದಲಿಗರಾಗಿ ಹಿಂದಿ ಭಾಷೆಯಲ್ಲಿ ಎಂ.ಎ ಪದವಿ ಪಡೆದ, ವಿವಿಧ ಕೃತಿಗಳನ್ನು ರಚಿಸಿರುವ ಡಾ.ನಾ.ನಾಗಪ್ಪ, ಬೆಂಗಳೂರಿನಲ್ಲಿ ಪ್ರಥಮ ಕಲಾಮಂದಿರ ನಿರ್ಮಿಸಿದ ಖ್ಯಾತಿಯ ಅ.ನಾ.ಸುಬ್ಬರಾಯರು, ವಿನೋದ ಸಾಹಿತಿ ಅ.ರಾ.ಮಿತ್ರ, ‘ಆಕಾಶವಾಣಿ ಈರಣ್ಣ’ ಎಂಬ ಖ್ಯಾತಿಯ ಎ.ಎಸ್.ಮೂರ್ತಿ, ವಿಡಂಬನಾ ಸಾಹಿತಿ ಅ.ರಾ.ಶೇಷಗಿರಿ, ಪತ್ರಿಕೋದ್ಯಮಕ್ಕೆ ಕೀರ್ತಿ ತಂದ ಕೃ.ನ.ಮೂರ್ತಿ, ಕಾದಂಬರಿಕಾರ ಅ.ರಾ.ಆನಂದ, ಶಿಶುಸಾಹಿತಿ ಅ.ರಾ.ಚಂದ್ರ, ಕರ್ನಾಟಕ ನಾಟಕ ಅಕಾಡೆಮಿ ಸದಸ್ಯರಾಗಿದ್ದ ಎ.ಆರ್.ಶಶಿಧರ್ ಭಾರಿಘಾಟ್, ಭರತನಾಟ್ಯ ಪ್ರವೀಣರಾದ ಶ್ರೀಧರ್ ಸಹ ಇದೇ ಗ್ರಾಮದವರು. ಕನ್ನಡ ಜಾನಪದ ಸಂಗ್ರಹಣೆಯ ಆದ್ಯ ಪ್ರವರ್ತಕರೆನಿಸಿದ ಅರ್ಚಕ ರಂಗಸ್ವಾಮಿಭಟ್ಟರು ತಾಲ್ಲೂಕಿನ ಬಂಡಿಹೊಳೆ ಗ್ರಾಮದವರು. ವೈಖಾಸಾಗಮ ಪಂಡಿತರಾಗಿದ್ದ ಇವರು ೧೯೩೦ರಲ್ಲಿ ಪ್ರಕಟಿಸಿದ ‘ಹುಟ್ಟಿದ ಹಳ್ಳಿ’ (ಹುಟ್ಟಿದಹಳ್ಳಿಯ ಹಳ್ಳಿಯ ಹಾಡು) ಕೃತಿಯು ಮೈಸೂರು ವಿಶ್ವವಿದ್ಯಾಲಯದ ಪಠ್ಯಪುಸ್ತಕವೂ ಆಗಿದೆ. ತಮ್ಮ ಈ ಅದ್ವಿತೀಯ ಜನಪದ ಸಾಹಿತ್ಯ ಕೃತಿಯಲ್ಲಿ ಪುರಾಣ, ಇತಿಹಾಸ, ಗ್ರಾಮೀಣ ಜನಜೀವನ, ಹಾಡುಗಳು, ಹಬ್ಬಗಳು, ಗಾದೆಗಳು, ನಡವಳಿಕೆಗಳು ಮತ್ತಿತರ ಅಂಶಗಳ ಚಿತ್ರಣವನ್ನು ನೀಡಿದ್ದಾರೆ. ಉತ್ತರ ಕರ್ನಾಟಕದ ಹಲಸಂಗಿ ಸಹೋದರರನ್ನು ಹೊರತುಪಡಿಸಿದರೆ ಆ ಕಾಲಕ್ಕೆ ಜಾನಪದ ಸಂಗ್ರಹಣೆಯ ಪ್ರಮುಖ ಹೆಸರು ಭಟ್ಟರದ್ದು. ‘ಮೈಸೂರು ಮಲ್ಲಿಗೆ’ಯ ಕಂಪನ್ನು ನಾಡಿನ ಉದ್ದಗಲಕ್ಕೂ ಪಸರಿಸಿದ ಪ್ರೇಮಕವಿ ಕೆ.ಎಸ್.ನರಸಿಂಹಸ್ವಾಮಿ ತಾಲ್ಲೂಕಿನ ಕಿಕ್ಕೇರಿಯವರು. ಇವರ ಕವನಸಂಕಲನವನ್ನು ಆಧರಿಸಿದ ‘ಮೈಸೂರು ಮಲ್ಲಿಗೆ’ ಹೆಸರಿನ ಚಲನಚಿತ್ರ ಚಿತ್ರರಂಗದ ಒಂದು ಅಪೂರ್ವ ಕೃತಿಯಾಗಿದೆ. ರಸಋಷಿ ಕುವೆಂಪುರವರ ಅಕ್ಕರೆಯ ಶಿಷ್ಯರಾಗಿದ್ದ, ಅತ್ಯಂತ ಸರಳ ನಡೆನುಡಿಯ ಡಾ.ಸುಜನಾ (ಎಸ್.ನಾರಾಯಣಶೆಟ್ಟಿ) ತಾಲ್ಲೂಕಿನ ಹೊಸಹೊಳಲು ಗ್ರಾಮದವರು. ತಮ್ಮ ಯುಗಸಂಧ್ಯಾ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರವನ್ನು ಪಡೆದ ಇವರು ತಮ್ಮ ಜೀವನದ ಆದರ್ಶಗಳ ಮೂಲಕ ಅಪಾರ ಶಿಷ್ಯಕೋಟಿಯನ್ನು ಸಂಪಾದಿಸಿದ ‘ಮೇಷ್ಟು’. ನಿಘಂಟು ತಜ್ಞ ಗಂಜಾಂ ವೆಂಕಟಸುಬ್ಬಯ್ಯ (ಜಿ.ವಿ) ಈ ತಾಲ್ಲೂಕಿನ ಕೈಗೋನಹಳ್ಳಿ ಗ್ರಾಮದ ಹೆಮ್ಮೆಯ ಮೊಮ್ಮಗ ಮತ್ತು ಅಳಿಯ. ಅವರು ತಮ್ಮ ಬಾಲ್ಯವನ್ನು ಇಲ್ಲಿಯೇ ಹೆಚ್ಚಾಗಿ ಕಳೆದಿದ್ದಾರೆ. ಆಧುನಿಕ ಸಂದರ್ಭದಲ್ಲಿ ಮಹಾಕಾವ್ಯಗಳನ್ನು ಬರೆದು ತಾಲ್ಲೂಕಿನ ಕೀರ್ತಿಯನ್ನು ಹೆಚ್ಚಿಸಿದ ಅಂಬಿಗರಹಳ್ಳಿ ಗ್ರಾಮದಲ್ಲಿ ಜನಿಸಿರುವ ಡಾ.ಲತಾರಾಜಶೇಖರ್ ಹೆಸರು ಉಲ್ಲೇಖನಾರ್ಹವಾದುದು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರೂ ಆದ ಇವರು ಬುದ್ದ ಮಹಾದರ್ಶನ, ಬಸವ ಮಹಾದರ್ಶನ ಮಹಾಕಾವ್ಯಗಳು ಸೇರಿದಂತೆ ಅನೇಕ ರಚನೆಗಳಿಂದ ಹೆಸರಾಗಿದ್ದಾರೆ. ಪಟ್ಟಣದ ಶಾರದಾ ಜಡೆ ಎಂಬುವವರು ಹಿಂದಿ ವಿದ್ವಾಂಸರಾಗಿದ್ದು, ಕನ್ನಡದಲ್ಲಿ ‘ನವರತ್ನ ಕಡಗ’ (ಕಥಾ ಸಂಕಲನ) ಮತ್ತು ‘ಸಾಗರ ದೀಪ’ (ಕವನ ಸಂಕಲನ) ತಂದಿದ್ದಾರೆ. ಮೈಸೂರು ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಅನೇಕ ಕೃತಿಗಳ ಕರ್ತೃ ಡಾ.ಶಿವಣ್ಣ (ಮಾವಿನಕೆರೆ), ಭಾಷಾ ವಿಜ್ಞಾನಿ ಡಾ.ಸೋಮಶೇಖರಗೌಡ, ಪತ್ನಿ ಜೈನಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ಪದ್ಮಾಶೇಖರ್ ತಾಲ್ಲೂಕಿನ ಅಂಬಿಗರಹಳ್ಳಿ ಗ್ರಾಮದವರು. ‘ಪರಪುಟ್ಟ’ ಸೇರಿದಂತೆ ಅನೇಕ ಕೃತಿಗಳ ಕರ್ತೃ ವಿರೂಪಾಕ್ಷ ರಾಜಯೋಗಿಗಳು, ಕಾದಂಬರಿಗಾರ್ತಿಯರಾದ ಆಲೇನಹಳ್ಳಿ ಪ್ರೇಮಾ, ಹೊಸಹೊಳಲು ವಿಜಯಶ್ರೀ, ಸ್ತ್ರೀ ಅಶ್ರುಧಾರೆ ಕಾದಂಬರಿ ಕರ್ತೃ ಅಗ್ರಹಾರಬಾಚಹಳ್ಳಿ ಸತ್ಯನಾರಾಯಣ, ಆಶುಕವಿ ಅಂಬಿಗರಹಳ್ಳಿಯ ಅಂ.ಚಿ.ಸುಬ್ಬಣ್ಣ ಇದೇ ತಾಲ್ಲೂಕಿನವರು. ಲೇಖಕರಾಗಿ, ಸಾಹಿತಿಗಳಾಗಿ ನೂರಾರು ಲೇಖನಗಳು, ಹಲವು ಕವನ ಸಂಕಲನಗಳನ್ನು ಹೊರತಂದಿರುವ ಬಮನಾ ಎಂಬ ಖ್ಯಾತಿಗೆ ಬಾಜನರಾಗಿರುವ ಮಂಜುನಾಥ್ ಅವರು ತಾಲೂಕಿನ ಬೂಕನಕೆರೆ ಹೋಬಳಿಯ ಬಲ್ಲೇನಹಳ್ಳಿ ಗ್ರಾಮದವರು‌.ಮಾರೇನಹಳ್ಳಿ ಲೋಕೇಶ್ ಅವರು ಮಕ್ಕಳ ಸಾಹಿತ್ಯಕ್ಕೇ ಅಪಾರ ಸಾಹಿತ್ಯ ಸೇವೆ ಸಲ್ಲಿಸಿದ್ದಾರೆ. ಪುಟ್ಟನ ಪ್ರಾಸಗಳು, ಈ ಹಾಡು ನಿಮಗಾಗಿ, ಬೆಕ್ಕಿನ ಬೆಟ್ಟ, ನನ್ನ ದೇಶ ನನ್ನ ಜನ, ಆಧುನಿಕ ವಚನ ಸಂಕಲನ ಬಸವ ಗುರು, ಲೋಕಾನುಭವ ಶತಕ, ಬಸವ ಗೀತೆಗಳು, ಸಾಸಲು ಶಂಭುಲಿಂಗೇಶ್ವರ ಭಕ್ತಿಗೀತೆಗಳು ಮುಂತಾದ ಇಪ್ಪತ್ತಕ್ಕೂ ಹೆಚ್ಚು ಕೃತಿ ರಚಿಸಿದ್ದಾರೆ. ಸಂತೇಬಾಚಹಳ್ಳಿ ಹೋಬಳಿ ಹರಿಯಾಲದಮ್ಮಗುಡಿ ಮಾರೇನಹಳ್ಳಿ ಗ್ರಾಮದವರು. ವೃತ್ತಿಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಕ್ಕಳ ಸಾಹಿತ್ಯಕ್ಕೇ ಮೀಸಲಾದ ಚಿಣ್ಣರ ನುಡಿ ತ್ರೈ ಮಾಸಿಕ ಪತ್ರಿಕೆ ಹೊರತರುತ್ತಿದ್ದಾರೆ. ಅಕ್ಕಿಹೆಬ್ಬಾಳು ಗ್ರಾಮದ ಮೊಹಮ್ಮದ್ ಅಜರುದ್ದೀನ್ ತನ್ನ "ಅಕ್ಕಿ-ಚುಕ್ಕಿ" ಮತ್ತು "ನಿಸರ್ಗ ನಾದ" ಎಂಬ ಎರಡು ಕವನ ಸಂಕಲನದಿಂದ ಸಾಹಿತ್ಯ ಕ್ಷೇತ್ರಕ್ಕೆ ಯುವಸಾಹಿತಿ ಎಂದು ಹೆಸರು ಪಡೆದಿದ್ಧಾರೆ.ಮೊಹಮ್ಮದ್ ಅಜರುದ್ದೀನ್ ಅವರು ಕಾವ್ಯಶ್ರೀ ಪ್ರಶಸ್ತಿ ಪಡೆದಿದ್ದಾರೆ.

ಪತ್ರಿಕೋದ್ಯಮ[ಬದಲಾಯಿಸಿ]

ತಾಲ್ಲೂಕಿನಲ್ಲಿ ಮೊಟ್ಟಮೊದಲ ಪತ್ರಿಕೆಯನ್ನು ಆರಂಭಿಸಿದವರು ಮತ್ತಿಘಟ್ಟದ ದಿ.ಎಂ.ಎನ್.ಸುಬ್ಬರಾಜೇಗೌಡರು. ಇವರ ಸಂಪಾದಕತ್ವದ ‘ಆರ್ಯ ಪತ್ರಿಕೆ’ಯೊಂದಿಗೆ ಇಲ್ಲಿ ಪತ್ರಿಕೋದ್ಯಮಕ್ಕೆ ಚಾಲನೆ ದೊರೆಯಿತು. ನಂತರ ಕೆ.ಆರ್.ನೀಲಕಂಠ ಸಂಪಾದಕತ್ವದ ‘ಹೇಮಾವತಿ ಬಯಲು’, ಎಂ.ಕೆ.ಹರಿಚರಣ್ ತಿಲಕ್ ಸಂಪಾದಕತ್ವದ ‘ಅತ್ತಿಗುಪ್ಪೆ’, ಜಿ.ಅರವಿಂದ್ ಸಂಪಾದಕತ್ವದ ‘ಸುದ್ದಿಸಮರ’, ಸಾದುಗೋನಹಳ್ಳಿ ಮಹದೇವ್ ಸಂಪಾದಕತ್ವದ ‘ಸಾಕ್ಷಿಬೀಡು’, ಶ್ರೀಮತಿ ಶೈಲಜಾ ಕಾಳೇಗೌಡ ಸಂಪಾದಕತ್ವದ ‘ಸಮೂಹ ಧ್ವನಿ’, ಮಾರೇನಹಳ್ಳಿ ಲೋಕೇಶ್ ಸಂಪಾದಕತ್ವದ ‘ಚಿಣ್ಣರ ನುಡಿ’ (ಶಿಶು ಸಾಹಿತ್ಯ ಪತ್ರಿಕೆ), ಅ.ಮ.ಶ್ಯಾಮೇಶ್ ಸಂಪಾದಕತ್ವದ ‘ಹನಿ ಹನಿ’ ಬೆಳಕು ಕಂಡಿವೆ. ಇವುಗಳಲ್ಲಿ ಕೆಲವು ಪ್ರಸಾರವಾಗುತ್ತಿದ್ದು, ಮತ್ತೆ ಕೆಲವು ಸ್ಥಬ್ಧವಾಗಿವೆ. ಇದಲ್ಲದೆ ಪಟ್ಟಣದ ಸರ್ಕಾರಿ ಪದವಿ ಕಾಲೇಜಿನ ಪತ್ರಿಕೋದ್ಯಮ ವಿಭಾಗ ‘ಸ್ಟೂಡೆಂಟ್ಸ್ ವಾಯ್ಸ್’ ಮತ್ತು ಮಹಿಳಾ ಸರ್ಕಾರಿ ಪದವಿ ಕಾಲೇಜಿನ ಪತ್ರಿಕೋದ್ಯಮ ವಿಭಾಗ ‘ಮಹಿಳಾ ಧ್ವನಿ’ ಪತ್ರಿಕೆಗಳನ್ನು ಹೊರತರುತ್ತಿವೆ. ತಾಲ್ಲೂಕಿನ ಗಡಿ ಗ್ರಾಮ ಮಾರೇನಹಳ್ಳಿ ಗ್ರಾಮದ ಯೋಗೇಶ್‌ ಮಾರೇನಹಳ್ಳಿಯವರು ಪ್ರಜಾವಾಣಿ ಪತ್ರಿಕೆಯಲ್ಲಿ ಹಿರಿಯ ವರದಿಗಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮೈಸೂರು, ಮಂಡ್ಯ, ಬೆಂಗಳೂರು, ಹುಬ್ಬಳ್ಳಿ–ಧಾರವಾಡದಲ್ಲಿ ಕೆಲಸ ಮಾಡಿದ ಅನುಭವ ಅವರಿಗಿದೆ. ಉದಯವಾಣಿ, ಈ ಸಂಜೆ ಸೇರಿ ವೀಕ್‌ ಎಂಡ್‌ ಡೈರಿ ಇಂಗ್ಲಿಷ್‌ ವಾರಪತ್ರಿಕೆಯಲ್ಲಿ ಕೆಲಸ ಮಾಡಿದ್ದಾರೆ. ಸಾಹಿತಿಯೂ ಆಗಿರುವ ಇವರು ‘ಜೀವ ಸೆಲೆ ಕಾಮೇಗೌಡ’ ಕೃತಿ ಬರೆದಿದ್ದಾರೆ. ಇದು ಮಂಡ್ಯ ವಿಶ್ವವಿದ್ಯಾಲಯದ ಪಠ್ಯವೂ ಆಗಿದೆ. ಕೃಷ್ಣರಾಜಪೇಟೆ ತಾಲ್ಲೂಕಿನ ಪತ್ರಿಕಾ ರಂಗದಲ್ಲಿ ವಿವಿಧ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿ ತಾಲ್ಲೂಕಿನ ಕೀರ್ತಿಯನ್ನು ತಂದಿದ್ದಾರೆ. ಬಳ್ಳೆಕೆರೆ ಮಂಜುನಾಥ್, ವಿಜಯಕರ್ನಾಟಕ, ಬಲ್ಲೇನಹಳ್ಳಿ ಮಂಜುನಾಥ್, ಪ್ರಜಾವಾಣಿ, ಕೆ.ಆರ್.ನೀಲಕಂಠ, ಸಂಯುಕ್ತ ಕರ್ನಾಟಕ, ಆರ್. ಶ್ರೀನಿವಾಸ, ಮೈಸೂರು ಮಿತ್ರ, ಅಪ್ಪನಹಳ್ಳಿ ಅರುಣ್ ಕುಮಾರ್, ಉದಯವಾಣಿ, ಹೆಚ್.ಆರ್.ಲೋಕೇಶ್ ಆಂದೋಲನ,ಕಾಡುಮೆಣಸ ಚಂದ್ರು ಸಂಜೆ ಮಿತ್ರ, ಎಚ್.ಬಿ.ಮಂಜುನಾಥ,ಶಿಂಷಾಪ್ರಭಾ, ಕಿಕ್ಕೇರಿ ಶಂಭು ಜನಮಿತ್ರ ಪತ್ರಿಕೆ ಮತ್ತು ಸ್ಥಳಿಯ ದೃಶ್ಯ ಮಾಧ್ಯಮದಲ್ಲಿ ಕಾರ್ಯನಿರತರಾಗಿದ್ದಾರೆ, ಅಲ್ಲದೆ ಮಾಕವಳ್ಳಿ ರವಿ ವಿಜಯವಾಣಿ,ಬಸವರಾಜು ಜನಮಿತ್ರ,ಕಿಕ್ಕೇರಿ ಗೋವಿಂದರಾಜು ಪ್ರಜಾವಾಣೆ,ಟಿವೈ ಆನಂದ್ ಕನ್ನಬಾಡಿ, ದಿನ ಪತ್ರಿಕೆಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ.

ಸಾಧಕರು[ಬದಲಾಯಿಸಿ]

ವೈದ್ಯಕೀಯ ಕ್ಷೇತ್ರ : ಖ್ಯಾತ ಮಕ್ಕಳ ತಜ್ಞರಾದ ಐಚನಹಳ್ಳಿಯ ಡಾ.ಅಂಕೇಗೌಡ, ರಾಯಸಮುದ್ರದ ಡಾ.ವಿಜಯಕುಮಾರ್, ಖ್ಯಾತ ಮನೋವೈದ್ಯ ಸೊಳ್ಳೇಪುರದ ಡಾ.ಎಸ್.ಕೆ.ಸುಬ್ಬೇಗೌಡ, ಪ್ರಸೂತಿ ತಜ್ಞೆ ಮಾಂಬಳ್ಳಿಯ ಡಾ.ಆಶಾ, ಖ್ಯಾತ ಪ್ಲಾಸ್ಟಿಕ್ ಸರ್ಜರಿ ತಜ್ಞರಾದ ಸಂತೇಬಾಚಹಳ್ಳಿಯ ಡಾ.ಮೂರ್ತಿ, ಪಟ್ಟಣದ ಡಾ.ಮಧುಸೂಧನ್ ವೆಸ್ಟ್‌ಇಂಡೀಸ್‌ನಲ್ಲಿರುವ ಖ್ಯಾತ ವೈದ್ಯ ಬೊಮ್ಮೇನಹಳ್ಳಿ ಗ್ರಾಮದ ಡಾ.ಬಿ.ಬಸವರಾಜ್, ಅಮೆರಿಕಾದಲ್ಲಿರುವ ಖ್ಯಾತ ವೈದ್ಯ ಲೋಕನಹಳ್ಳಿಯ ಡಾ.ಎಲ್.ಎಸ್.ಬೋರೇಗೌಡ, ಮೈಸೂರಿನ ಖ್ಯಾತ ಹೃದಯ ತಜ್ಞ ಅಪ್ಪನಹಳ್ಳಿಯ ಡಾ.ಬಸಪ್ಪ, ಅಮೆರಿಕಾದಲ್ಲಿದ್ದು ಅಕಾಲ ಮೃತ್ಯುವಶನಾದ ವಳಗೆರೆ ಮೆಣಸ ಗ್ರಾಮದ ಡಾ.ಎಂ.ಎಸ್.ಕೃಷ್ಣಕುಮಾರ್ ಈ ತಾಲ್ಲೂಕಿನವರು. ಕಾನೂನು ಕ್ಷೇತ್ರದಲ್ಲಿ ತಾಲ್ಲೂಕಿನ ಮಂದಗೆರೆ ಗ್ರಾಮದ ಎಂ.ಡಿ.ಅನುರೇವ್ ಅವರು (public prosecutor) ಸರಕಾರಿ ವಕೀಲರಾಗಿ ಬೆಂಗಳೂರು ಹೈಕೋರ್ಟಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಪಟ್ಟಣದ ಟಿ.ಬಿ.ಬಡಾವಣೆಯ ಎಂ.ಆರ್.ಪ್ರಸನ್ನಕುಮಾರ್ ಅವರ ಪತ್ನಿ ಪಲ್ಲವಿ ಅವರು ಮಂಗಳೂರಿನಲ್ಲಿ ಜಿಲ್ಲಾ ನ್ಯಾಯಾಧೀಶರಾಗಿ ಆಯ್ಕೆಯಾಗಿ ಸೇವೆೆೆ ಸಲ್ಲಿಸುತ್ತಿದ್ದು ತಾಲ್ಲೂಕಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ.

ಮಹಿಳಾ ಸಾಧಕರು : ತಾಲ್ಲೂಕಿನ ಗೌರವವನ್ನು ಹೆಚ್ಚಿಸುವಲ್ಲಿ ಮಹಿಳೆಯರು ಸಹ ಹಿಂದೆ ಬಿದ್ದಿಲ್ಲ. ಅನೇಕ ಉನ್ನತವಾದ ಹುದ್ದೆಗಳನ್ನು ವಿವಿಧ ಸಂದರ್ಭಗಳಲ್ಲಿ ಅಲಂಕರಿಸಿ, ಸಮರ್ಥವಾಗಿ ನಿರ್ವಹಿಸಿದ್ದಾರೆ. ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ನಿರ್ದೇಶಕರಾಗಿದ್ದ ಡಾ.ವಿಜಯಲಕ್ಷ್ಮಿ ಬಸವರಾಜ್ ತಾಲ್ಲೂಕಿನ ಅಕ್ಕಿಹೆಬ್ಬಾಳು ಗ್ರಾಮದವರು. ವಾಕ್ ಶ್ರವಣ ದೋಷ ಪತ್ತೆಗೆ ರಾಜ್ಯದಲ್ಲಿಯೇ ಮೊದಲ ಬಾರಿಗೆ ಅಕ್ಕಿಹೆಬ್ಬಾಳಿನಲ್ಲಿ ಪರೀಕ್ಷಾ ಕೇಂದ್ರ ತೆರೆಯಲು ಕಾರಣರಾದವರು. ರಾಜಕೀಯ ಕ್ಷೇತ್ರದಲ್ಲಿ ತಾಲ್ಲೂಕಿನ ಶ್ರೀಮತಿ ಜೆ.ಪ್ರೇಮಕುಮಾರಿ ರಂಗಪ್ಪ ಮಂಡ್ಯ ಜಿ.ಪಂ.ನ ಪ್ರಭಾರ ಅಧ್ಯಕ್ಷರಾಗಿ ಕೆಲಕಾಲ ಕಾರ್ಯ ನಿರ್ವಹಿಸಿದ್ದಾರೆ. ಜಿಲ್ಲೆಯ ಲೋಕಪಾವನಿ ಮಹಿಳಾ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷರಾಗಿ ವಿಠಲಾಪುರದ ಶ್ರೀಮತಿ ಲೀಲಾ ದೇವೇಗೌಡ ಮತ್ತು ಶೀಳನೆರೆಯ ಯಶೋಧಾ ರಮಶ್ ಕಾರ್ಯ ನಿರ್ವಹಿಸಿದ್ದಾರೆ. ಮಹಿಳಾ ಸಂಘಟನಾ ಕ್ಷೇತ್ರದಲ್ಲಿ ಹೊಸಹೊಳಲು ಗ್ರಾಮದ ಶ್ರೀಮತಿ ಮಂಜುಳಾ ಚನ್ನಕೇಶವ ಗಮನಾರ್ಹ ಕೆಲಸಗಳನ್ನು ಮಾಡಿದ್ದು, ಅನೇಕ ಪ್ರಶಸ್ತಿ, ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. ಪ್ರಸ್ತುತ ಜಿಲ್ಲಾ ರೈತ ಸಂಘದ ಮಹಿಳಾ ವಿಭಾಗದ ಅಧ್ಯಕ್ಷರಾಗಿರುವ ಶ್ರೀಮತಿ ನಂದಿನಿಜಯರಾಂ, ಏಷ್ಯಾ ಖಂಡದ ಪ್ರತಿನಿಧಿಯಾಗಿ ಕಳೆದ ಡಿಸೆಂಬರ್‌ನಲ್ಲಿ ವೆಸ್ಟ್ ಇಂಡೀಸ್‌ನಲ್ಲಿ ನಡೆದ ಅಂತರರಾಷ್ಟ್ರೀಯ ರೈತ ಸಮಾವೇಶದಲ್ಲಿ ಪಾಲ್ಗೊಂಡು ತಾಲ್ಲೂಕಿಗೆ ಕೀರ್ತಿ ತಂದಿದ್ದಾರೆ.

ತಾಲ್ಲೂಕಿನಲ್ಲಿ ಮಹಿಳಾ ಸಂಘಟನೆ ಬೆಳೆಯುವಲ್ಲಿ ಪ್ರಧಾನ ಪಾತ್ರ ವಹಿಸಿದ್ದ ಕಾದಂಬರಿಗಾರ್ತಿ ಸಿ.ಎನ್.ಜಯಲಕ್ಷ್ಮೀದೇವಿ ಅವರ ಹೆಸರು ಇಲ್ಲಿ ಉಲ್ಲೇಖನಾರ್ಹ.

ಚಲನಚಿತ್ರ –ಕಿರುತೆರೆ :

ಹಳೆಯ ಸಿನೆಮಾಗಳ ಚಿತ್ರನಟ ನಿರಂಜನ ತಾಲ್ಲೂಕಿನ ಸಂತೇಬಾಚಹಳ್ಳಿಯವರು. ಖ್ಯಾತ ಕನ್ನಡ ಚಲನಚಿತ್ರ ನಿರ್ದೇಶಕ ಮತ್ತು ಹಿರಿಯ ನಟ ಕೆ.ಎಸ್.ಎಲ್.ಸ್ವಾಮಿ ತಾಲ್ಲೂಕಿನ ಕಿಕ್ಕೇರಿಯವರು. ಚಲನಚಿತ್ರ ಮತ್ತು ಕಿರುತೆರೆ ನಟ ಜಿ.ಅರವಿಂದ್ ಪಟ್ಟಣದವರು. ಸುವರ್ಣ ಚಾನೆಲ್‌ನ ‘ಹಳ್ಳಿ ಹುಡ್ಗೀರ್ ಪ್ಯಾಟೆ ಲೈಫು’ ಖ್ಯಾತಿಯ ಪದ್ಮನಾಭ್ ತಾಲ್ಲೂಕಿನ ರಾಯಸಮುದ್ರದವರು. ಕಿರುತೆರೆ ನಿರ್ದೇಶಕ ರವಿಶ್ರೀವತ್ಸ ತಾಲ್ಲೂಕಿನ ಮಂದಗೆರೆ ಗ್ರಾಮದವರು. ಕಿರುತೆರೆ ನಟ ಅನಂತವೇಲು ತಾಲ್ಲೂಕಿನ ಅಘಲಯ ಗ್ರಾಮದವರು. ಜೀಟೀವಿ ವಾಹಿನಿಯ ಕಾಮಿಡಿಕಿಲಾಡಿಗಳು ಖ್ಯಾತಿಯ

ಶಿವರಾಜ್ ಕೆ.ಆರ್.ಪೇಟೆ ಅವರು ತಾಲೂಕಿನ ರಾಜಘಟ್ಟ ಗ್ರಾಮದವರು. ಸುಮಾರು 40 ಕನ್ನಡ ಸಿನಿಮಾ, ತಮಿಳು, ತೆಲುಗು ಭಾಷೆಗಳ ಹಲವು ಚಿತ್ರಗಳಲ್ಲಿ ನಟಿಸಿರುವ ಮಧು ಮಂದಗೆರೆ ಇವರು ತಾಲೂಕಿನ ಮಂದಗೆರೆ ಗ್ರಾಮದವರು.


ಸಂಗೀತ -ಸುಗಮ ಸಂಗೀತ : ಮೈಸೂರಿನ ಅರಸರಾದ ಜಯಚಾಮರಾಜ ಒಡೆಯರ ಆಸ್ಥಾನದಲ್ಲಿ ಸಂಗೀತ ವಿಧ್ವಾಂಸರಾಗಿದ್ದ ಎಸ್.ಚನ್ನಕೇಶವಯ್ಯ ತಾಲ್ಲೂಕಿನ ನಾಟನಹಳ್ಳಿ (ಹೇಮಗಿರಿ) ಗ್ರಾಮದವರು. ಪ್ರಸ್ತುತ ಸುಗಮ ಸಂಗೀತ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿರುವ ಕಿಕ್ಕೇರಿ ಕೃಷ್ಣಮೂರ್ತಿ ಈ ತಾಲ್ಲೂಕಿನವರು. ನಾಡಿನ ವಿವಿಧ ಭಾಗಗಳಲ್ಲಿ ತಮ್ಮ ಸುಶ್ರಾವ್ಯ ಕಂಠದಿಂದ ಜನಮನ ಸೂರೆಗೊಂಡಿರುವ ನಾಡಿಗ್ ಸಹೋದರಿಯರು ಇದೇ ತಾಲ್ಲೂಕಿನವರು.

ಕ್ರೀಡಾಕ್ಷೇತ್ರ : ತಾಲ್ಲೂಕಿನ ವಿವಿಧ ಕ್ರೀಡಾಪಟುಗಳು ರಾಜ್ಯ, ರಾಷ್ಟ್ರ ಮತ್ತು ಅಂತರ ರಾಷ್ಟ್ರೀಯ ಮಟ್ಟದಲ್ಲಿ ಆಟವಾಡಿ ತಾಲ್ಲೂಕಿನ ಹಿರಿಮೆಯನ್ನು ಹೆಚ್ಚಿಸಿದ್ದಾರೆ. ಬಂಡಿಹೊಳೆಯ ಬಿ.ಆರ್.ಪ್ರಮಿಳಾ ನೆಟ್‌ಬಾಲ್‌ನಲ್ಲಿ ಅತ್ಯುತ್ತಮ ಸಾಧನೆ ಮಾಡಿ ೨೦೦೮ರ ‘ಏಕಲವ್ಯ ಪ್ರಶಸ್ತಿ’ಯನ್ನು ಪಡೆದುಕೊಂಡಿದ್ದಾರೆ. ಜೊತೆಗೆ ೨೦೦೫ರಲ್ಲಿ ಪಾರ್ವತಮ್ಮ ಮಲ್ಲಾರಾಧ್ಯ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಶ್ರೀಲಂಕಾದಲ್ಲಿನ ೨೦೦೪ರ ೪ನೇ ಏಷ್ಯನ್ ಬಾಲಕಿಯರ ನೆಟ್‌ಬಾಲ್ ಚಾಂಪಿಯನ್ ಶಿಪ್‌ನಲ್ಲಿ ದೇಶವನ್ನು ಪ್ರತಿನಿಧಿಸಿದ್ದಾರೆ. ಇದಲ್ಲದೆ ಹತ್ತಕ್ಕೂ ಹೆಚ್ಚು ಸಂದರ್ಭದಲ್ಲಿ ರಾಜ್ಯವನ್ನು, ಬೆಂಗಳೂರು ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿದ್ದಾರೆ. ಸಿಂಧಘಟ್ಟದ ಎಸ್.ಎನ್.ಮಂಜುನಾಥ್ ಕಬಡ್ಡಿಯಲ್ಲಿ ರಾಷ್ಟ್ರೀಯ ಆಟಗಾರರಾಗಿದ್ದು, ಹತ್ತಕ್ಕೂ ಹೆಚ್ಚು ಸಂದರ್ಭಗಳಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದಾರೆ. ಪ್ರಸ್ತುತ ಭೂಪಾಲ್‌ನಲ್ಲಿ ಮಿಲಿಟರಿಯಲ್ಲಿದ್ದಾರೆ. ರಾಜೇನಹಳ್ಳಿ ಗ್ರಾಮದ ರೇವಣ್ಣ ವಾಲೀಬಾಲ್‌ನಲ್ಲಿ ರಾಷ್ಟ್ರೀಯ ಆಟಗಾರರಾಗಿದ್ದು, ಅನೇಕ ಕ್ರೀಡಾಕೂಟಗಳಲ್ಲಿ ಪಾಲ್ಗೊಂಡು ಸಾಧನೆ ಮಾಡಿದ್ದಾರೆ. ಪ್ರಸ್ತುತ ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯ ಉದ್ಯೋಗಿಯಾಗಿದ್ದಾರೆ. ಪಟ್ಟಣದ ಕೆ.ವಿ.ಪವಿತ್ರ ವಾಲೀಬಾಲ್, ಹರಿಹರಪುರದ ಐಶ್ವರ್ಯ ಈಜು ಸೇರಿದಂತೆ ವಿವಿಧ ಪ್ರತಿಭೆಗಳು ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ತಾಲ್ಲೂಕಿಗೆ ಗೌರವ ತಂದಿದ್ದಾರೆ. ತಾಲೂಕಿನ ಕಿಕ್ಕೇರಿ ಹೋಬಳಿಯ ಗೌಡೇನಹಳ್ಳಿ ಗ್ರಾಮದ ವಿಜಯಕುಮಾರಿ ಎಂಬಾಕೆ ಅಂತಾರಾಷ್ಟ್ರೀಯ ಕ್ರೀಡಾ ಪಟುವಾಗಿದ್ದಾರೆ. ಅಮೇರಿಕಾದಲ್ಲಿ ನಡೆದ ಅಥ್ಲೆಟಿಕ್ ಸ್ಪರ್ಧೆಯನ್ನು ಭಾಗವಹಿಸಿ ಪದಕ ಗಳಿಸಿದ್ದಾರೆ‌. ತಾಲೂಕಿನ ಚಟ್ಟಂಗೆರೆ ಗ್ರಾಮದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಮಂಜುಗೌಡ ಅವರು ಅಮೇರಿಕಾದಲ್ಲಿ ನಡೆದ ವಿಶ್ವ ಪೊಲೀಸ್ ಕ್ರೀಡಾಕೂಟದಲ್ಲಿ ಭಾಗವಹಿಸಿ ನಾಲ್ಕು ಚಿನ್ನದ ಪದಕ, ಒಂದು ಬೆಳ್ಳಿಯ ಪದಕ ಗಳಿಸುವ ಮೂಲಕ ವಿಶ್ವ ಮಟ್ಟದಲ್ಲಿ ತಾಲೂಕಿನ ಕೀರ್ತಿಯನ್ನು ಬೆಳಗಿದ್ದಾರೆ‌.

ಜಾನಪದ ಕಲೆ, ವೈದ್ಯ ಮತ್ತು ಸಂಸ್ಕೃತಿ[ಬದಲಾಯಿಸಿ]

ತಾಲ್ಲೂಕು ಜಾನಪದ ಕಲೆಗಳ ತವರೂರಾಗಿದೆ. ಇಲ್ಲಿ ಭಜನೆ ಮೇಳಗಳು, ಮೂಡಲಪಾಯ ಯಕ್ಷಗಾನ, ಸೋಬಾನೆ ಪದಗಳು, ಹುಲಿವೇಷ, ಕೋಲಾಟ, ರಂಗಕುಣಿತ, ಸೋಮನಕುಣಿತ ಸೇರಿದಂತೆ ವಿವಿಧ ಪ್ರಕಾರದ ಜಾನಪದ ಕಲೆಗಳು ಕಾಣಸಿಗುತ್ತವೆ. ಅಕ್ಕಿಹೆಬ್ಬಾಳು, ಹೊಸಹೊಳಲು, ದೊಡ್ಡಯಾಚೇನಹಳ್ಳಿ, ಮಡುವಿನಕೋಡಿ ಗ್ರಾಮಗಳಲ್ಲಿನ ಮೂಡಲಪಾಯ ಯಕ್ಷಗಾನದ ಕಲಾವಿದರು ಹಿಂದೆ ಉತ್ತಮ ಪ್ರದರ್ಶನ ನೀಡುತ್ತಿದ್ದರು. ಈಗಲೂ ಕೆಲವು ಹಿರಿಯ ಕಲಾವಿದರು ಇದ್ದಾರೆ. ಜೈನಹಳ್ಳಿಯಲ್ಲಿ ಅಪರೂಪದ ನೀಲಗಾರರ ಕುಣಿತದ ಕಲಾವಿದರಿದ್ದು, ರಾಜ್ಯ ಮಟ್ಟದ ಅನೇಕ ಕಾರ್ಯಕ್ರಮಗಳಲ್ಲಿ ಉತ್ತಮ ಪ್ರದರ್ಶನ ನೀಡಿ ಪ್ರಶಂಸೆ ಗಳಿಸಿದ್ದಾರೆ. ಬೋಳಮಾರನಹಳ್ಳಿಯ ತತ್ವಪದಗಳ ಸಾಕಮ್ಮ, ಹರಿಹರಪುರದ ಚೌಡಿಕೆ ಎಲ್ಲಯ್ಯ ಮತ್ತು ಚೌಡಿಕೆ ಕೋಡಿಯಮ್ಮ, ಸಿಂಗನಹಳ್ಳಿಯ ಮರಗಾಲು ಕುಣಿತದ ಕೃಷ್ಣೇಗೌಡ, ಎ.ಎನ್.ಮೂರ್ತಿರಾಯರ ಅಕ್ಕಿಹೆಬ್ಬಾಳು ಪ್ರಬಂಧದಲ್ಲಿ ಬರುವ ಯಕ್ಷಗಾನದ ಪ್ರತಿಭೆಗಳಾದ ಕಾಳೇಗೌಡ -ಕೆಂಚೇಗೌಡ (ಮದ್ದಲೆ), ಚಲುವನಾಯಕ (ಬಹುರೂಪಿ -ಸ್ತ್ರೀವೇಷ), ಕಮಲನಾಯಕ, ಸುಬ್ಬಶೆಟ್ಟಿ, ನಂಜಪ್ಪಶೆಟ್ಟಿ, ಹಾಲೇಗೌಡ, ನರಸಿಂಹನಾಯಕ, ದೊಡ್ಡಯಾಚೇನಹಳ್ಳಿಯ ಮೂಡಲಪಾಯದ ಯಕ್ಷಗಾನ ಕಲಾವಿದ, ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ದೊಡ್ಡಟ್ಟಿ ರಾಮಪ್ಪ, ಹರಿಹರಪುರದ ಸೋಬಾನೆ ಚನ್ನಮ್ಮ, ಅಂಬಿಗರಹಳ್ಳಿಯ ಕೊರವಂಜಿ ವೇಷದ ಕಲ್ಯಾಣಯ್ಯ ಅಲ್ಲದೆ ಅನೇಕ ಅeತ ಪ್ರತಿಭೆಗಳು ತಾಲ್ಲೂಕಿನಲ್ಲಿವೆ. ಪೂಜೆಕೊಪ್ಪಲು ಗ್ರಾಮದ ಪೂಜಾ ಕುಣಿತ, ಸಾಕ್ಷಿಬೀಡಿನ ವೀರಭದ್ರನ ಕುಣಿತ, ಬೀರವಳ್ಳಿಯ ಜಡೆಕೋಲಾಟ, ನಗರೂರು, ಮಾರ್ಗೋನಹಳ್ಳಿ ಗುಡ್ಡರ ಕುಣಿತ, ನಂದಿಕಂಬದ ಕುಣಿತ, ಹೊಸಹೊಳಲಿನ ರಂಗದ ಕುಣಿತ, ಚಿಕ್ಕೋನಹಳ್ಳಿ ಪುರದ ಮರಗಾಲು ಸಹಿತ ಜಡೆಕೋಲಾಟ, ಜಾಗಿನಕೆರೆಯ ಸೋಮನ ಕುಣಿತ, ಬೆಳ್ತೂರಿನ ರಂಗಕುಣಿತ, ಅಗ್ರಹಾರಬಾಚಹಳ್ಳಿಯ ಕೊರವಂಜಿ ಕೋಲಾಟ, ಸಂತೇಬಾಚಹಳ್ಳಿಯ ಗಾರುಡಿಕುಣಿತ, ಕಡಹೆಮ್ಮಿಗೆಯ ಜಾನಪದ ನೃತ್ಯ, ಸೇರಿದಂತೆ ತಾಲ್ಲೂಕಿನಾದ್ಯಂತ ನಡೆಯುವ ಗ್ರಾಮದೇವತೆಗಳ ಹಬ್ಬಗಳ ಸಂದರ್ಭದಲ್ಲಿ ಪ್ರದರ್ಶಿತವಾಗುವ ಬೆಂಕಿಭರಾಟೆ ಪ್ರದರ್ಶನ, ಬಿಜಲಿ ವರಸೆ, ಪಾಳೆಗಾರಿಕೆ ವೇಷ, ಹುಲಿವೇಷ ಅಲ್ಲದೆ ವಿವಿಧ ಕಲೆಗಳನ್ನು ಕಾಣಬಹುದಾಗಿದೆ. ಜಾನಪದ ಸಂಗ್ರಹಕಾರರಾಗಿಯೂ ಹಲವರು ಕೆಲಸ ಮಾಡಿದ್ದು, ಕಿಕ್ಕೇರಿ ನಾರಾಯಣ, ಸಿಂಗನಹಳ್ಳಿ ಸ್ವಾಮಿಗೌಡ, ಪಿ.ಶಂಕರ ಬಳ್ಳೇಕೆರೆ,(ಮಂಡ್ಯ ಜಿಲ್ಲೆಯ ಪ್ರದಶ೵ನ ಕಲೆಗಳು, ಹ.ಕ.ರಾಜೇಗೌಡರೊಂದಿಗೆ) ಶಿ.ಕುಮಾರಸ್ವಾಮಿ, ಎಂ.ಕೆ.ಹರಿಚರಣ್‌ತಿಲಕ್, ಮಾರೇನಹಳ್ಳಿ ಲೋಕೇಶ್, ಲಾವಣಿ ಸಂಗ್ರಹಕಾರ ಅಕ್ಕಿಹೆಬ್ಬಾಳು ಎ.ಕೆ.ಪುಟ್ಟರಾಮು ಅನೇಕ ಕ್ಷೇತ್ರ ಕಾರ್ಯಗಳನ್ನು ಮಾಡಿದ್ದಾರೆ. ಇಂಗ್ಲಿಷ್ ವೈದ್ಯದ ಸೌಲಭ್ಯ ಲಭ್ಯವಿಲ್ಲದ ಸಂದರ್ಭಗಳಿಂದ ಹಿಡಿದು, ಇಂದಿನವರೆಗೂ ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಜನ- ಜಾನುವಾರುಗಳಿಗೆ ನಾಟಿ ಔಷಧಿ ನೀಡುವ ಕಾಯಕ ಮಾಡುತ್ತಿದ್ದಾರೆ. ಹಲವರು ಇಂತಹ ವಿಶಿಷ್ಠ ಜೀವರಕ್ಷಕ ಪರಂಪರೆಗೆ ನಾಂದಿಹಾಡಿ ಕಾಲವಾಗಿದ್ದಾರೆ.

ಗ್ರಾಮ ದೇವತೆಗಳು ಹಾಗು ಗ್ರಾಮೀಣ ಹಬ್ಬಗಳು[ಬದಲಾಯಿಸಿ]

ಗ್ರಾಮದೇವತೆಗಳ ಪರಿಕಲ್ಪನೆ ಮನುಷ್ಯನ ಇತಿಹಾಸದಷ್ಟೇ ಪುರಾತನವಾದುದು. ಪ್ರಕೃತಿಯೆಡೆಗಿನ ಮನುಷ್ಯನ ಭಯ, ಮೌಢ್ಯತೆ, ಜನ-ಜಾನುವಾರುಗಳ ರಕ್ಷಣೆಯ ಅಗತ್ಯ, ಅರ್ಪಣಾ ಮನೋಭಾವಗಳ ಪರಿಣಾಮವಾಗಿ ಅಪಾರ ಸಂಖ್ಯೆಯ ದೇವತೆಗಳು ಹುಟ್ಟಲು ಕಾರಣವಾಗಿದೆ. ಗ್ರಾಮೀಣರಿಗೆ ಅದರಲ್ಲೂ ಶೂದ್ರ ವರ್ಗದವರಿಗೆ ಹೆಚ್ಚು ಪ್ರಿಯವಾಗುವ ಗ್ರಾಮದೇವತೆಗಳು ಸಂಖ್ಯೆಯ ದೃಷ್ಟಿಯಿಂದ ಹೆಚ್ಚಾಗಿಯೇ ಇರುತ್ತವೆ. ಕೆಲವೆಡೆ ಗ್ರಾಮಕ್ಕೊಂದು, ಕೆಲವೊಮ್ಮೆ ಅದಕ್ಕಿಂತ ಹೆಚ್ಚೂ ಇರುತ್ತವೆ. ಆದರೆ ಪ್ರಧಾನವಾಗಿ ಒಂದು ದೇವತೆಯನ್ನು ಪೂಜಿಸುವುದು ಹೆಚ್ಚಾಗಿ ಕಂಡುಬರುತ್ತದೆ. ಶಿವ ಮತ್ತು ಪಾರ್ವತಿಯನ್ನು ಹೆಚ್ಚಾಗಿ ಬೇರೆ ಬೇರೆ ಹೆಸರುಗಳಿಂದ ಗ್ರಾಮದೇವತೆಯಾಗಿ ಪೂಜಿಸುವುದು, ಜಾತಿಗಳ ಹಿನ್ನೆಲೆಯಲ್ಲಿ ಒಂದೇ ದೇವತೆಯನ್ನು ವಿಭಿನ್ನ ಹೆಸರುಗಳಿಂದ ಕರೆಯುವುದು ಕಂಡುಬರುತ್ತದೆ. ಕೆಲವು ದೇವತೆಗಳಿಗೆ ಗುಡಿಗಳಿದ್ದರೆ, ಮತ್ತೆ ಕೆಲವಕ್ಕೆ ಬಯಲೇ ಆಲಯ. ಒಂದೊಂದು ದೇವತೆಯೂ, ಒಂದೊಂದು ಕಥೆಯನ್ನು ಹೊಂದಿರುತ್ತವೆ. ಸಾಮಾನ್ಯವಾಗಿ ಕಟ್ಟುನಿಟ್ಟಿನ ಸಸ್ಯಾಹಾರದ ಮತ್ತು ಹಲವು ಮಾಂಸಾಹಾರದ ದೇವತೆಗಳೂ ಕಂಡುಬರುತ್ತವೆ. ತಾಲ್ಲೂಕಿನಲ್ಲಿ ಅನೇಕ ಗ್ರಾಮದೇವತೆಗಳಿದ್ದು, ಪ್ರಮುಖವಾಗಿ ಬಂಡಿಹೊಳೆಯ ದೊಡ್ಡಮ್ಮ, ಏಳೂರಮ್ಮ, ಸಿಂಗನಹಳ್ಳಿ ಲಕ್ಷ್ಮೀದೇವಮ್ಮ, ಅಗ್ರಹಾರಬಾಚಳ್ಳಿಯ ಲಕ್ಷ್ಮೀದೇವಮ್ಮ, ಹೊಸಹೊಳಲಿನ ಸಿಂಗಮ್ಮ, ಹರಿಹರಪುರದ ಗಿಡ್ಡಮ್ಮ, ಕಿಕ್ಕೇರಮ್ಮ, ಸಾಸಲಿನ ಕುದುರೆ ಮಂಡಮ್ಮ ಮುಂತಾದವನ್ನು ಗಮನಿಸಬಹುದು. ಸಿಡಿ ಆಚರಣೆ, ಬಾಯಿಬೀಗದ ಹರಕೆ, ಓಕಳಿ, ತೇರುಗಳಿಂದ ಖ್ಯಾತಿಯನ್ನು ಪಡೆದಿರುವ ಕೃಷ್ಣರಾಜಪೇಟೆಯ ದೊಡ್ಡಕೇರಮ್ಮ, ಮತ್ತು ಅಗ್ರಹಾರ ಬಾಚಹಳ್ಳಿಯ ಬಾಚಳ್ಳಮ್ಮನ ಹಬ್ಬ ಸಾಮಾನ್ಯವಾಗಿ ಯುಗಾಧಿ ಸಂದರ್ಭದಲ್ಲಿ ನಡೆಯುತ್ತದೆ. ಕೋಣನ ಬಲಿಗೆ ಖ್ಯಾತಿ ಪಡೆದಿರುವ ಬಂಡಿಹೊಳೆಯ ದೊಡ್ಡಮ್ಮನ ಹಬ್ಬ ಗ್ರಾಮದ ಮುಖಂಡರು ತೀರ್ಮಾನಿಸಿದಂತೆ, ಸಮೃದ್ಧ ಫಸಲು ಕೈಗೆ ಬಂದ ಹಿನ್ನೆಲೆಯಲ್ಲಿ ಎರಡೋ ಮೂರೋ ವರ್ಷಗಳಿಗೊಮ್ಮೆ ನಡೆಯುತ್ತದೆ. ಅಲ್ಲದೆ ಇಲ್ಲಿನ ಏಳೂರಮ್ಮನ ಹಬ್ಬ ಪ್ರತಿವರ್ಷ ಗೌರಿ ಹಬ್ಬದ ಸಂದರ್ಭದಲ್ಲಿ ನಡೆಯುತ್ತದೆ. ಯುಗಾಧಿ ಸಂದರ್ಭದಲ್ಲಿ ನಡೆಯುವ ಹರಿಹರಪುರದ ಗಿಡ್ಡಮ್ಮನ ಹಬ್ಬ ಜನಪದ ಸಂಸ್ಕೃತಿಯನ್ನು ಅನಾವರಣಗೊಳಿಸುತ್ತದೆ. ಕರಗ, ಬಂಡಿ-ಕೊಂಡ, ದೇವರ ಗುಡ್ಡರ ಅಶ್ಲೀಲ ಹಾಡುಗಳ ಮೂಲಕ ದೇವತೆಯ ಓಲೈಕೆ ಇವು ಇಲ್ಲಿನ ವಿಶೇಷಗಳು. ಹೋಬಳಿ ಕೇಂದ್ರ ಕಿಕ್ಕೇರಿಯ ಗ್ರಾಮದೇವತೆ ಕಿಕ್ಕೇರಮ್ಮನ ಹಬ್ಬ ಪ್ರತಿವರ್ಷ ನಡೆಯುತ್ತದೆ. ಹಬ್ಬದ ಸಂದರ್ಭದಲ್ಲಿ ದಿಮ್ಮಸಾಲೆ ಎಂಬ ಗುಡ್ಡನು ಲೈಂಗಿಕ ಭಾವನೆಗಳನ್ನು ಸಾಂಕೇತೀಕರಿಸಿ ಅಶ್ಲೀಲ ಪದಗಳನ್ನು ಹಾಡುತ್ತಾ ಕೊಂತವನ್ನು ಕುಣಿಸುವ ಆಚರಣೆ ವಿಶಿಷ್ಠವಾದದ್ದು. ಶ್ರವಣಬೆಳಗೊಳ ಮಾರ್ಗದಲ್ಲಿ ಸಿಗುವ ಹರಿಯಾಲದಮ್ಮ ಈ ಭಾಗದ ಪ್ರಮುಖ ಶಕ್ತಿದೇವತೆ. ಹರಕೆ ಹೊತ್ತ ಭಕ್ತರಿಂದ ಎಲೆಪೂಜೆ, ಕುರಿ, ಕೋಳಿಗಳ ಬಲಿ ಇಲ್ಲಿನ ಪ್ರಧಾನ ಆಕರ್ಷಣೆ. ಹೊಸಹೊಳಲು ಸಿಂಗಮ್ಮನ ಹಬ್ಬವು ಪ್ರತಿವರ್ಷ ಗೌರಿಹಬ್ಬದ ನಂತರ ನಡೆಯುತ್ತದೆ. ಈ ಭಾಗದ ಶಕ್ತಿದೇವತೆಯ ದರ್ಶನಕ್ಕೆ ನಾಡಿನ ಉದ್ದಗಲದಿಂದ ಜನರು ಬರುತ್ತಾರೆ. ಇಲ್ಲಿರುವ ಪೋಲೀಸ್ ಕಲ್ಲು ದೇವಿಯ ಮಹಿಮೆಯನ್ನು ತಿಳಿಸುತ್ತದೆ. ಕುರಿ, ಕೋಳಿಗಳ ಬಲಿ ಇಲ್ಲಿ ಹೆಚ್ಚು. ಸಂತೇಬಾಚಹಳ್ಳಿಯ ಗ್ರಾಮದೇವತೆ ಪಟಲದಮ್ಮ, ಈಕೆಯ ಹಬ್ಬ ಪ್ರತಿವರ್ಷ ಶಿವರಾತ್ರಿ ನಂತರ ನಾಲ್ಕು ದಿನ ನಡೆಯುತ್ತದೆ. ಜಾತ್ರೆ, ಹಸಿರುಬಂಡಿ ಇಲ್ಲಿನ ವಿಶೇಷ. ದೊದ್ದನಕಟ್ಟೆ – ಕಾಪನಹಳ್ಳಿ ಬಳಿಯ ಮಡಿಲಮ್ಮ ಈ ಭಾಗದ ಶಕ್ತಿದೇವತೆ. ಕುರಿ, ಕೋಳಿಗಳಲ್ಲದೆ ಕೋಣನ ಬಲಿ ಸಹ ಇಂದಿನ ಆಧುನಿಕ ಕಾಲದಲ್ಲೂ ನಡೆಯುತ್ತವೆ. ಇವರಲ್ಲದೆ ಮುರುಕನಹಳ್ಳಿ ಬಳಿಯ ತೊರೆಯಮ್ಮ, ಪಟ್ಟಣದ ತೋಟದಮ್ಮ, ಬಿಸಿಲುಮಾರಿ, ಹೆತ್ತಗೋನಹಳ್ಳಿಯಮ್ಮ, ಹುಬ್ಬನಹಳ್ಳಿಯಮ್ಮ, ಹಿಳ್ಳಳ್ಳಮ್ಮ, ಸೇರಿದಂತೆ ಅನೇಕ ಗ್ರಾಮದೇವತೆಯರು ಕಾಣಸಿಗುತ್ತಾರೆ. ಇವರಿಗೆಲ್ಲಾ ವಿಶಿಷ್ಟ ರೀತಿಯ ಹಬ್ಬಗಳು, ಆಚರಣೆಗಳು ನಡೆಯುತ್ತಲೇ ಇವೆ.

ಜಾತ್ರೆಗಳು ಮತ್ತು ಸಂತೆಗಳು[ಬದಲಾಯಿಸಿ]

ಗ್ರಾಮೀಣ ಪ್ರದೇಶಗಳಲ್ಲಿ ನಡೆಯುವ ಜಾತ್ರೆಗಳು ಮತ್ತು ಸಂತೆಗಳು ನಮ್ಮ ಸ್ಥಳೀಯ ಸಂಸ್ಕೃತಿಯನ್ನು ಅನಾವರಣಗೊಳಿಸುತ್ತವೆ. ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಪ್ರಮುಖವಾದ ಜಾತ್ರೆಗಳು ನಡೆಯುವುದನ್ನು ನೋಡಬಹುದು. ಹೇಮಗಿರಿಯಲ್ಲಿ ಪ್ರತಿ ವರ್ಷ ರಥಸಪ್ತಮಿಯ ದಿನದಂದು ಕಲ್ಯಾಣ ವೆಂಕಟರಮಣಸ್ವಾಮಿಯ ರಥೋತ್ಸವ ಜರುಗುತ್ತದೆ. ಇಲ್ಲಿ ನೆರೆಯುವ ಭಾರಿ ದನಗಳ ಜಾತ್ರೆಗೆ ಉತ್ತರ ಕರ್ನಾಟಕದ ಸೀಮೆಯ ವ್ಯಾಪಾರಿಗಳು ಸೇರಿದಂತೆ ರಾಜ್ಯದ ವಿವಿಧ ಭಾಗಗಳ ಜನರು, ಭರ್ಜರಿಯಾಗಿ ಸಾಕಲ್ಪಟ್ಟ ಲಕ್ಷ ರೂಪಾಯಿಗೂ ಅಧಿಕ ಮೌಲ್ಯದ ದನಗಳು ಬರುತ್ತವೆ. ಹೇಮಾವತಿ ನದಿಯಲ್ಲಿ ತೆಪ್ಪೋತ್ಸವವೂ ನಡೆಯುತ್ತದೆ. ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ನಡೆಯುವ ಗವಿರಂಗನಾಥಸ್ವಾಮಿ ಜಾತ್ರೆ ಈ ಭಾಗದ ಮತ್ತೊಂದು ಪ್ರಮುಖ ದನಗಳ ಜಾತ್ರೆಯಾಗಿದೆ. ಕಲ್ಲುಬಂಡೆಯ ರೂಪದಲ್ಲಿರುವ ಗವಿರಂಗನಾಥನನ್ನು ಪೂಜಿಸಲು ನಾಡಿನ ವಿವಿಧ ಭಾಗಗಳಿಂದಲ್ಲದೆ ಹೊರರಾಜ್ಯಗಳಿಂದಲೂ ಜನರು ಆಗಮಿಸುತ್ತಾರೆ. ಪ್ರತಿ ವರ್ಷ ಫೆಬ್ರವರಿಯಲ್ಲಿ ನಡೆಯುವ ಹೊಸಹೊಳಲು ಜಾತ್ರೆ ಗ್ರಾಮೀಣ ಸಂಸ್ಕೃತಿಯನ್ನು ಅನಾವರಣಗೊಳಿಸುತ್ತದೆ. ಇಲ್ಲಿನ ಲಕ್ಷ್ಮೀನಾರಾಯಣಸ್ವಾಮಿ ರಥೋತ್ಸವ, ರಂಗದ ಕುಣಿತ, ಓಕಳಿ ಆಚರಣೆ, ಜಾನಪದ ಕಲೆಗಳ ಪ್ರದರ್ಶನ ಜನರನ್ನು ಸಂಭ್ರಮದಲ್ಲಿ ತೇಲಾಡಿಸುತ್ತವೆ. ಪ್ರತಿ ವರ್ಷ ಮಾಘ ಮಾಸದಲ್ಲಿ ನಡೆಯುವ ಗವಿಮಠದ ಜಾತ್ರೆ ಪ್ರಮುಖವಾದ್ದು. ಇಲ್ಲಿ ಸ್ವತಂತ್ರ ಸಿದ್ದಲಿಂಗೇಶ್ವರರ ರಥೋತ್ಸವ ಮತ್ತು ತೆಪ್ಪೋತ್ಸವಗಳು ನಡೆಯುತ್ತವೆ. ಅಕ್ಕಿಹೆಬ್ಬಾಳಿನ ಲಕ್ಮೀನರಸಿಂಹಸ್ವಾಮಿಯ ಜಾತ್ರೆ ವಿಶಿಷ್ಠವಾದದ್ದು, ವೈಖಾಸಾಗಮ ವಿಧಾನದಲ್ಲಿ ಇಲ್ಲಿ ನಡೆಯುವ ಪೂಜಾ ಆಚರಣೆಗಳು ಪ್ರಸಿದ್ಧಿಯಾಗಿವೆ. ಸಂತೇಬಾಚಹಳ್ಳಿ ಬಳಿಯಿರುವ ತಿಮ್ಮಪ್ಪನ ಗುಡ್ಡದಲ್ಲಿ ನಗರೂರು- ಮಾರ್ಗೋನಹಳ್ಳಿಯ ಬಳಿಯ ಮರಡಿಲಿಂಗೇಶ್ವರನ ಜಾತ್ರೆ ಈ ಭಾಗದ ಪ್ರಮುಖ ಜಾತ್ರೆಯಾಗಿದೆ. ಪ್ರತಿವರ್ಷ ಶಿವರಾತ್ರಿ ನಂತರ ನಡೆಯವ ಇಲ್ಲಿನ ಜಾತ್ರೆಯಲ್ಲಿ ಚಿಕ್ಕಯ್ಯ- ದೊಡ್ಡಯ್ಯನ ರಥ ಎಂಬ ಜೋಡಿ ರಥಗಳು ಎಳೆಯಲ್ಪಡುತ್ತವೆ. ದೆವ್ವ ಬಿಡಿಸುವ ಸಲುವಾಗಿ ನಡೆಯುತ್ತದೆ ಎನ್ನುವ ‘ಬಸವ ತುಳಿಯುವ ಆಚರಣೆ’, ಜನರು ತಮ್ಮ ಜಾನುವಾರುಗಳನ್ನು ದೇವಾಲಯದ ಸುತ್ತ ಪ್ರದಕ್ಷಿಣೆ ಹಾಕಿಸುವುದು, ಹಲ್ಲುಮರಿಯನ್ನು ಸಿಗಿಯುವುದು ಜಾತ್ರೆಯ ವಿಶೇಷ. ಬೊಮ್ಮೇನಹಳ್ಳಿಯ ಬಳಿಯ ಮುತ್ತುರಾಯನಿಗೆ ನಡೆಯುವ ‘ನಾಡು’ ಎಂಬ ಹೆಸರಿನ ಜಾತ್ರೆ ವಿಶೇಷವಾದುದು. ಆಷಾಢ ದ್ವಾದಶಿಯ ದಿನದಂದು ಸುತ್ತಲ ಏಳೂರಿನ ಜನರು ಇಲ್ಲಿ ಸೇರುತ್ತಾರೆ. ಕುರಿಗಳನ್ನು ದೇವಾಲಯದ ಸುತ್ತ ಪ್ರದಕ್ಷಿಣೆ ಹಾಕಿಸುವುದು, ಹಲ್ಲುಮರಿಯನ್ನು ಸಿಗಿಯುವುದು ಇಲ್ಲಿನ ವಿಶೇಷ. ಆದರೆ ಈ ವರ್ಷದಿಂದ ಈ ಕ್ರೂರ ಪದ್ದತಿಯನ್ನು ನಿಲ್ಲಿಸಲಾಗಿದೆ. ಹೊಸಹೊಳಲು ಸಿಂಗಮ್ಮನ ಜಾತ್ರೆ ಪ್ರತಿ ವರ್ಷ ಗೌರಿಹಬ್ಬದ ತರುವಾಯ ನಡೆಯುತ್ತದೆ. ಂತೇಬಾಚಹಳ್ಳಿ ಬಳಿಯಿರುವ ತಿಮ್ಮಪ್ಪನ ಗುಡ್ಡದಲ್ಲಿ ಪ್ರತಿವರ್ಷ ಕಡೆಯ ಕಾರ್ತೀಕ ಸೋಮವಾರದಂದು ವೆಂಕಟರಮಣಸ್ವಾಮಿಯ ಜಾತ್ರೆ ನಡೆಯುತ್ತದೆ. ಅಲಂಕೃತ ದನಕರುಗಳನ್ನು ದೇವಾಲಯದ ಸುತ್ತ ಪ್ರದಕ್ಷಿಣೆ ಹಾಕಿಸುವುದು, ಉತ್ತಮ ದನಗಳಿಗೆ ಬಹುಮಾನ ಕೊಡುವುದು ನಡೆಯುತ್ತದೆ. ಈ ಭಾಗದಲ್ಲಿ ಅಪರೂಪ ಎನಿಸುವ ಗರುಡೋತ್ಸವ ಇಲ್ಲಿನ ಪ್ರಮುಕ ಆಚರಣೆ. ಇದೇ ಹೋಬಳಿಯ ಕೊಡಗಳ್ಳಿಯ ಬಳಿ ಬೀರೇದೇವರ ಗುಡಿಯಿದೆ. ಶಿವರಾತ್ರಿ ಸಂದರ್ಭದಲ್ಲಿ ಇಲ್ಲಿ ಜಾತ್ರೆ ನಡೆಯುತ್ತದೆ. ನವ ದಂಪತಿಗಳು ಇಲ್ಲಿ ಪೂಜೆ ಸಲ್ಲಿಸಿ, ಮಕ್ಕಳಿಗಾಗಿ ಬೇಡಿಕೊಳ್ಳುವುದು ವಾಡಿಕೆ. ಹಲ್ಲಿನಿಂದ ಮರಿಯನ್ನು ಸಿಗಿಯುವ ಸಂಪ್ರದಾಯ ಇಲ್ಲಿಯೂ ಕಾಣುತ್ತದೆ. ಊಗಿನಹಳ್ಳಿಯ ಕಾರೆಮೆಳೆ ಸಿಂಗಮ್ಮ ಈ ಭಾಗದ ಶಕ್ತಿದೇವತೆ. ಕಡೆಯ ಕಾರ್ತಿಕ ಸೋಮವಾರದ ಮರುದಿನ ಇಲ್ಲಿ ಜಾತ್ರೆ ನಡೆಯುತ್ತದೆ. ಕುರಿ, ಕೋಳಿಗಳ ಬಲಿಯು ಹೆಚ್ಚಾಗಿ ನಡೆಯುತ್ತದೆ. ವಿಠಲಾಪುರ ಮತ್ತು ಚಿಕ್ಕಗಾಡಿನಹಳ್ಳಿ ನಡುವೆ ಕಾಡು ಬಸವಣ್ಣನ ದೇವಾಲಯವಿದೆ. ಇಲ್ಲಿಯೂ ಪ್ರತಿವರ್ಷ ಜಾತ್ರೆ ನಡೆಯುತ್ತದೆ. ಇದಲ್ಲದೆ ಮಡುವಿನಕೋಡಿಯ ಆಂಜನೇಯನ ಜಾತ್ರೆ, ಹರಿಹರಪುರದ ಆಂಜನೇಯನ ಜಾತ್ರೆ, ಪಟ್ಟಣದ ಮುತ್ತುರಾಯನ ಜಾತ್ರೆ ಸೇರಿದಂತೆ ವಿವಿಧ ಜಾತ್ರೆಗಳನ್ನು ಕಾಣಬಹುದು. ತಾಲ್ಲೂಕಿನಲ್ಲಿಯೇ ಪ್ರಸಿದ್ಧವಾದ ಜಾನುವಾರಗಳ ಸಂತೆ ಸೋಮವಾರ ತೆಂಡೆಕೆರೆಯಲ್ಲಿ ನಡೆಯುತ್ತದೆ. ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಸಾಕ್ಷಿಯಾದ ಐತಿಹಾಸಿಕ ಸಂತೆಯಿದು. ಪಟ್ಟಣದ ಎಪಿಎಂಸಿ ಆವರಣದಲ್ಲಿ ಸೋಮವಾರ ನಡೆಯುವ ಕಾಯಿಸಂತೆ, ಬುಧವಾರ ಮತ್ತು ಶನಿವಾರ ತರಕಾರಿ ಸಂತೆ, ಸಂತೇಬಾಚಹಳ್ಳಿಯಲ್ಲಿ ಗುರುವಾರ ನಡೆಯುವ ಕಾಯಿಸಂತೆ, ಕಿಕ್ಕೇರಿಯಲ್ಲಿ ಶುಕ್ರವಾರ ನಡೆಯುವ ಕಾಯಿಸಂತೆ ಪ್ರಮುಖವಾದವು. ಜೊತೆಗೆ ಪ್ರತಿದಿನ ಪಟ್ಟಣದ ಎಪಿಎಂಸಿ ಆವರಣದಲ್ಲಿ ಎಳನೀರು ಮಾರಾಟ ನಡೆಯುತ್ತದೆ. ಇವುಗಳಲ್ಲದೆ, ಭಾನುವಾರ ನಡೆಯುವ ಅಕ್ಕಿಹೆಬ್ಬಾಳು ಸಂತೆ, ಹೊಸಹೊಳಲು ಸಂತೆ, ಹರಿಯಾಲದಮ್ಮನಗುಡಿ ಸಂತೆ, ಬುಧವಾರದ ಸೋಮನಹಳ್ಳಿ ಸಂತೆ, ಗುರುವಾರದ ಹರಿಹರಪುರ ಸಂತೆ ಪ್ರಮುಖವಾಗಿವೆ.

ಕೋಟೆ ಕೊತ್ತಲಗಳು, ಬೆಟ್ಟಗಳು[ಬದಲಾಯಿಸಿ]

ಕೃಷ್ಣರಾಜಪೇಟೆ ತಾಲ್ಲೂಕಿನ ಮೇಲೆ ಹೊಯ್ಸಳರ, ಜೈನರ, ಮೈಸೂರು ಒಡೆಯರ ಮತ್ತು ವಿಜಯನಗರದ ಅರಸರ ಪ್ರಭಾವವು ವಿವಿಧ ಕಾಲಘಟ್ಟಗಳಲ್ಲಿ ಆಗಿರುವುದನ್ನು ಇತಿಹಾಸ ತಿಳಿಸುತ್ತದೆ. ಇದಕ್ಕೆ ಪೂರಕವಾಗಿ ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಕೋಟೆಗಳ ಕೆಲವು ಅವಶೇಷಗಳನ್ನು ಇಂದಿಗೂ ಕಾಣಬಹುದಾಗಿದೆ. ರಾಯಸಮುದ್ರದ ಸಮೀಪವಿರುವ ನಾರಾಯಣದುರ್ಗದಲ್ಲಿ ಏಳು ಸುತ್ತಿನ ಕೋಟೆಯಿದ್ದ ಬಗ್ಗೆ ಮಾಹಿತಿ ನೀಡಲು ಈಗಲೂ ಅವಶೇಷಗಳಿವೆ. ಹಿಂದೆ ಪಾಳೆಯಗಾರನೊಬ್ಬ ತನ್ನ ಸಂಪತ್ತನ್ನೆಲ್ಲಾ ಅಡಗಿಸಿಟ್ಟುಕೊಂಡು ರಕ್ಷಿಸಿಕೊಳ್ಳಲು ಇಲ್ಲಿ ಕೋಟೆ ಕಟ್ಟಿದ ಎಂದು ಸ್ಥಳಗಥೆಯಿದೆ. ದುರ್ಗದ ತುದಿಯಲ್ಲಿ ಮದ್ದಿನ ಮನೆ ಮತ್ತು ಕೈವಲ್ಯೇಶ್ವರ ದೇವಾಲಯ ಇದೆ. ತಮ್ಮ ವನವಾಸದ ಕಾಲದಲ್ಲಿ ರಾಮ, ಲಕ್ಷ್ಮಣರು ಮತ್ತು ಪಾಂಡವರೂ ಸಹ ಇಲ್ಲಿಗೆ ಬಂದಿದ್ದರು ಎಂದು ಹೇಳಲಾಗುತ್ತದೆ. ನೀರಿಗಾಗಿ ಭೀಮ ತನ್ನ ಮಂಡಿಯನ್ನು ತಿರುಗಿಸಿ ಮಾಡಿದ್ದು ಎನ್ನಲಾದ ಹಳ್ಳವೊಂದು ಇಲ್ಲಿನ ಬಂಡೆಯ ಮೇಲೆ ಇಂದಿಗೂ ಕಾಣಸಿಗುತ್ತದೆ. ಅಕ್ಕಿಹೆಬ್ಬಾಳು ಸಮೀಪದ ಹೇಮಾವತಿ ನದಿಯ ಮಧ್ಯೆ ಇರುವ ನಡುಗಡ್ಡೆಯಂತಿರುವ ಹೊಸಪಟ್ಟಣದಲ್ಲಿ ತನ್ನ ಶಸ್ತ್ರಾಗಾರವನ್ನು ನಿರ್ಮಿಸಲು ಟಿಪ್ಪುಸುಲ್ತಾನ್ ಉದ್ದೇಶಿಸಿದ್ದ. ಆದರೆ ರಕ್ಷಣಾ ದೃಷ್ಟಿಯಿಂದ ಈ ಸ್ಥಳವು ಸುರಕ್ಷಿತವಲ್ಲ ಎಂದು ಮನಗಂಡು ಆ ಯೋಜನೆಯನ್ನು ಕೈಬಿಟ್ಟ ಎಂದು ಹೇಳಲಾಗುತ್ತದೆ. ಇಂದಿಗೂ ಪೂರ್ಣವಾಗದ ಕಟ್ಟಡದ ಅವಶೇಷಗಳು ಕಾಣಸಿಗುತ್ತವೆ. ಬಳ್ಳೇಕೆರೆ ಸಮೀಪ ಕಂಡುಬರುವ ಕಪ್ಪೆ ಚೆನ್ನಿಗರಾಯನ ಕಾಲದ್ದು ಎನ್ನಲಾದ ಕೋಟೆಯ ಪಳಯುಳಿಕೆಗಳು, ಹೊಸಹೊಳಲು ಗ್ರಾಮದಲ್ಲಿ ಕಂಡುಬರುವ ಕೋಟೆ ಬಾಗಿಲು, ಕಿಕ್ಕೇರಿ ಗ್ರಾಮದ ಸುತ್ತಲೂ ಇದ್ದ ಕೋಟೆಯ ಅವಶೇಷಗಳು, ಅಘಲಯ ಗ್ರಾಮದಲ್ಲಿ ಕಂಡುಬರುವ ಕೋಟೆಯ ಪಳೆಯುಳಿಕೆಗಳು ಇನ್ನಷ್ಟು ಮಾಹಿತಿ ನೀಡುತ್ತವೆ. ತಾಲ್ಲೂಕಿನಲ್ಲಿ ವಿಶಾಲವಾಗಿ ಹರಡಿಕೊಂಡಿರುವ ಬೆಳ್ಳಿಬೆಟ್ಟದ ಸಾಲು, ಅಪಾರ ಪ್ರಮಾಣದ ಶಿಲಾಸಂಪತ್ತನ್ನು ಹೊಂದಿರುವ ಕಾಪನಹಳ್ಳಿ ಗವಿಮಠದ ಗಜರಾಜಗಿರಿ, ಮೇಲುಕೋಟೆ ಬೆಟ್ಟದ ಶ್ರೇಣಿಗೆ ಹೊಂದಿಕೊಂಡಂತಿರುವ ನಾರಾಯಣದುರ್ಗ, ಇದಕ್ಕೆ ಹೊಂದಿಕೊಂಡಿರುವ ಮಾದಗಿತ್ತಿ ಬೆಟ್ಟ, ಹಂದಿಬೆಟ್ಟ, ಮುದಿಬೆಟ್ಟಗಳು, ಹಾದನೂರು ದಿಣ್ಣೆ ಸಾಲು, ಹೇಮಗಿರಿ ಬೆಟ್ಟ, ಸಂತೇಬಾಚಹಳ್ಳಿ ಹೋಬಳಿಯ ತಿಮ್ಮಪ್ಪನ ಬೆಟ್ಟ, ಪ್ರಮುಖವಾದ ಬೆಟ್ಟಗಳಾಗಿವೆ.

ಚಿತ್ರಶಾಲೆ[ಬದಲಾಯಿಸಿ]

ಆಕರಗಳು[ಬದಲಾಯಿಸಿ]

ಬಾಹ್ಯ ಸಂಪರ್ಕಗಳು[ಬದಲಾಯಿಸಿ]