ಗೋವಿಂದನಹಳ್ಳಿ
ಕರ್ನಾಟಕ ರಾಜ್ಯದ ಮಂಡ್ಯ ಜಿಲ್ಲೆಯಲ್ಲಿರುವ ಕೃಷ್ಣರಾಜಪೇಟೆ ತಾಲ್ಲೂಕಿನಲ್ಲಿ, ಕಿಕ್ಕೇರಿಯ ಈಶಾನ್ಯಕ್ಕೆ, ಅದರಿಂದ 6.5 ಕಿಮೀ ದೂರದಲ್ಲಿರುವ ಒಂದು ಹಳ್ಳಿ.
ಪಂಚಲಿಂಗ ದೇವಾಲಯ
[ಬದಲಾಯಿಸಿ]ಇಲ್ಲಿರುವ ಹೊಯ್ಸಳ ಶೈಲಿಯ ಪಂಚಲಿಂಗ ದೇವಾಲಯದಿಂದಾಗಿ ಇದು ಪ್ರಸಿದ್ಧ ವಾಗಿದೆ. 42 ಮೀ ಉದ್ದ, 13.5 ಮೀ ಅಗಲ ಇರುವ ದೇವಾಲಯವಿದು. ಪುರ್ವ ದಿಕ್ಕಿನಲ್ಲಿರುವ ಮುಖಮಂಟಪ ಮತ್ತು ನಂದಿಮಂಟಪವನ್ನೂ ಸೇರಿಸಿಕೊಂಡರೆ ಇದರ ಅಗಲ 19 ಮೀ. ಪುರ್ವದಿಕ್ಕಿಗೆ ಮುಖ ಮಾಡಿರುವ ಈ ದೇವಾಲಯದಲ್ಲಿ ಕಲ್ಲಿನ ಗೋಪುರಗಳಿರುವ ಐದು ಒಳಗೋಡೆಗಳು ಸಾಲಾಗಿವೆ. ಪೂರ್ವದಲ್ಲಿ ದ್ವಾರಪಾಲಕರಿಂದ ಕೂಡಿದ ಎರಡು ದ್ವಾರಗಳುಂಟು. ಇವು ದಕ್ಷಿಣದ ಕಡೆಯಿಂದ 2 ಮತ್ತು 3ನೆಯ ಒಳ ಗುಡಿಗಳ ಎದುರಿಗೆ ಇವೆ. ಇವುಗಳ ಮುಂದೆ ಚಾವಣಿಯಿಂದ ಕೂಡಿದ ಮುಖಮಂಟಪವೂ ಇದಕ್ಕೆ ಸೇರಿದಂತೆ ನಂದಿಮಂಟಪವೂ ಇವೆ. ಈ ಮಂಟಪಗಳಿಗೆ ಉತ್ತರದಲ್ಲೂ ದಕ್ಷಿಣದಲ್ಲೂ ದ್ವಾರಗಳುಂಟು. ಪ್ರತಿಯೊಂದು ಗುಡಿಗೂ ಸುಕನಾಸಿ ಮತ್ತು ಗರ್ಭಗೃಹ ಇವೆ. ಸುಕನಾಸಿಯ ಬಾಗಿಲುಗಳ ಕೆತ್ತನೆ ಬಹು ಸುಂದರವಾಗಿದೆ. ಬಾಗಿಲುವಾಡದ ಮೇಲೆ ಉಮಾಮಹೇಶ್ವರನ ಚಿತ್ರ ಕೆತ್ತಲಾಗಿದೆ. 36 ಮೀ ಉದ್ದ, 6 ಮೀ ಅಗಲ ಇರುವ, 18 ಅಂಕಣಗಳ, 17 ಕಂಬಗಳ, ಮೂರು ಸಾಲುಗಳಿಂದ ಕೂಡಿದ ಆಯಕಾರದ ವಿಶಾಲ ಅಂಗಳವೊಂದಿದೆ. ಇದರ ಮಧ್ಯೆ ಹೆಚ್ಚಿನ ಕಂಬವೊಂದಿದೆ. ಮುಂದೆ ಚಾಚಿರುವ ತೊಲೆಯೊಂದಕ್ಕೆ ಆಸರೆಯಾಗಿ ಇದನ್ನು ನಿಲ್ಲಿಸಲಾಗಿದೆ. ಈ ಅಂಗಳದ ಪೂರ್ವದ ಗೋಡೆ ಮತ್ತು ಅದಕ್ಕಂಟಿದಂತಿರುವ ಗೋಡೆಗಳಲ್ಲಿ ಹೊರಾಂಗಣದ ವರೆಗೆ ರಂಧ್ರಗಳನ್ನು ಕೊರೆಯಲಾಗಿದೆ.
ಒಳಗಿನ ಚಿಕ್ಕ ಗುಡಿಗಳ ಎರಡೂ ಪಕ್ಕಗಳಲ್ಲಿಯೂ ಸುಂದರವಾಗಿ ಕೆತ್ತಲಾಗಿರುವ ಗೂಡುಗಳಿದ್ದು ಒಂದರಲ್ಲಿ ಗಣಪತಿಯ ವಿಗ್ರಹವನ್ನೂ ಮತ್ತೊಂದರಲ್ಲಿ ಮಹಿಷಾಸುರಮರ್ದಿನಿಯ ವಿಗ್ರಹವನ್ನೂ ಇಡಲಾಗಿದೆ. ದಕ್ಷಿಣದ ಕಡೆಯಿಂದ ಐದನೆಯ ಗುಡಿಯ ಗೋಡೆಯ ಮೇಲಿನ ಗೂಡೊಂದರಲ್ಲಿದ್ದ ವಿಗ್ರಹ ಬದಲಾಗಿರುವುದಾಗಿ ತಿಳಿದುಬರುತ್ತದೆ. ಈಗ ಅದರ ಜಾಗದಲ್ಲಿ ಕುಳಿತ ಭಂಗಿಯ ಸರಸ್ವತಿಯ ವಿಗ್ರಹವನ್ನಿಡಲಾಗಿದೆ. ಅಲ್ಲಿದ್ದ ಮಹಿಷಾಸುರಮರ್ದಿನಿಯ ವಿಗ್ರಹವನ್ನು ಬೇರೆ ಕಡೆಗೆ ಸಾಗಿಸಲಾಗಿದೆಯೆಂದು ತಿಳಿದುಬರುತ್ತದೆ. ಇವಲ್ಲದೆ ಸುಬ್ರಹ್ಮಣ್ಯ, ಭೈರವ ಮುಂತಾದ ವಿಗ್ರಹಗಳು ಇಲ್ಲಿಯ ಗೂಡುಗಳಲ್ಲಿವೆ. ದಕ್ಷಿಣದ ಗೋಡೆಗೆ ಅಂಟಿದಂತಿರುವ ಒಂದು ಗೂಡಿನಲ್ಲಿ ವೀರಭದ್ರ ಮತ್ತು ಸಪ್ತಮಾತೃಕಾ ವಿಗ್ರಹಗಳಿವೆ. ಗುಡಿಗಳ ಮಧ್ಯದಲ್ಲಿ ಸರಸ್ವತಿ ಮತ್ತು ಸಪ್ತಮಾತೃಕೆಯರ ಎರಡು ಸುಂದರವಾದ ವಿಗ್ರಹಗಳೂ ಉಮಾಮಹೇಶ್ವರ ವಿಗ್ರಹವೂ ಇವೆ. ಎರಡು ಒಳಗುಡಿಗಳನ್ನುಳಿದು ಮಿಕ್ಕೆಲ್ಲ ಗುಡಿಗಳ ಮುಂದೆ ಮೂರನೆಯ ಅಂಕಣದಲ್ಲಿ ನಂದಿ ವಿಗ್ರಹಗಳಿವೆ. ಎರಡರಲ್ಲಿ ಮಾತ್ರ ಇವು ಗುಡಿಯ ಮುಂದಿನ ನಂದಿಮಂಟಪಗಳಲ್ಲಿವೆ. ಅಂಗಳದ ಮೇಲ್ಚಾವಣಿಯಲ್ಲಿ ತಾವರೆ ಮೊಗ್ಗುಗಳನ್ನೂ ಅರಳಿದ ತಾವರೆಗಳನ್ನೂ ಕೆತ್ತಲಾಗಿದೆ. ದೇವಾಲಯದ ಮುಖಮಂಟಪ ಮತ್ತು ನಂದಿಮಂಟಪಗಳ ಮೇಲ್ಚಾವಣಿಯಲ್ಲೂ ತಾವರೆಯ ಮೊಗ್ಗುಗಳನ್ನು ಕೊರೆಯಲಾಗಿದೆ. ಹೊರಗೋಡೆಯ ಮೇಲಿನ ಶಿಲ್ಪ ಕಿಕ್ಕೇರಿಯ ಬ್ರಹ್ಮೇಶ್ವರ ದೇವಾಲಯವನ್ನೇ ಹೋಲುತ್ತದೆ.
ಈ ದೇವಾಲಯದ ಅನೇಕ ವಿಗ್ರಹಗಳು ಒಡೆದುಹೋಗಿವೆ. ಗೋಡೆಯ ಮೇಲಿನ ಶಿಲ್ಪಗಳಿಗೆ ಸುಣ್ಣ ಬಳಿದು ಅವುಗಳ ಅಂದವೇ ಹಾಳಾಗಿದೆ. ಈ ಶಿಲ್ಪಗಳನ್ನು ಬಹು ಸುಂದರವಾಗಿ ಕೆತ್ತಲಾಗಿದೆಯಾದರೂ ಹಳೆಬೀಡು ಮತ್ತಿತರ ಹೊಯ್ಸಳ ದೇವಾಲಯಗಳಲ್ಲಿರುವಂತೆ ಸಾಲುಸಾಲಾಗಿ ಅವನ್ನು ಕಡೆದಿಲ್ಲ. ಆದರೆ ಕಿಕ್ಕೇರಿಯಲ್ಲಿರು ವಂತೆ ಅಳತೆಗೆ ಸರಿಯಾಗಿ ಸ್ಥಳ ಬಿಟ್ಟು ಕೆತ್ತಲಾಗಿದೆ. ಪೂರ್ವದಿಕ್ಕಿನ ಹೊರಗೋಡೆಯ ದಕ್ಷಿಣದ ತುದಿಯಲ್ಲಿ ಒಂದು ಸುಂದರವಾದ ಗಣಪತಿಯ ವಿಗ್ರಹವಿದೆ. ಉತ್ತರದ ಕೊನೆಯಲ್ಲಿ ಅಂಥದೇ ಮಹಿಷಾಸುರಮರ್ದಿನಿಯ ಶಿಲ್ಪವಿದೆ. ಗಣಪತಿಗೂ ಮೊದಲನೆಯ ಮುಖಮಂಟಪಕ್ಕೂ ಮಧ್ಯೆ 12 ವಿಷ್ಣುವಿನ ಶಿಲ್ಪಗಳಿವೆ. ಇಲ್ಲಿರುವ ಪ್ರತಿಯೊಂದು ಶಿಲ್ಪದ ಕೆಳಗೂ ಆಯಾ ಶಿಲ್ಪದ ಹೆಸರು ಬರೆಯಲಾಗಿದೆ. ಪ್ರತಿ ಎರಡು ವಿಷ್ಣು ವಿಗ್ರಹಗಳ ಮಧ್ಯೆ ಕೈ ಮುಗಿದು ನಿಂತಿರುವ ಗರುಡ ಶಿಲ್ಪವುಂಟು. ಅದರ ಹಿಂದೆ ಅನೇಕ ಸ್ತ್ರೀ ಶಿಲ್ಪಗಳನ್ನು ಕೆತ್ತಲಾಗಿದೆ. ಮೊದಲನೆಯ ಮತ್ತು ಎರಡನೆಯ ಮುಖಮಂಟಪದ ಮಧ್ಯೆ ವಿಷ್ಣುವಿನ ಹತ್ತು ಅವತಾರಗಳನ್ನು ಕೆತ್ತಲಾಗಿದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಈ ಭಾಗದ ಗೋಡೆ ಮತ್ತು ಪಶ್ಚಿಮದ ಗೋಡೆಯ ಅನೇಕ ಭಾಗಗಳ ಕೆತ್ತನೆ ಪೂರ್ಣವಾಗದಿರುವುದು. ಮೊದಲನೆಯ ಗುಡಿಯ ದಕ್ಷಿಣ ಗೋಡೆಯೂ ಸೇರಿದಂತೆ, ದಕ್ಷಿಣ ಗೋಡೆಯ ಪೂರ್ವದ ಕೊನೆಯಿಂದ ಪರವಾಸುದೇವ, ಚತುರ್ಬಾಹುಗಳುಳ್ಳ ನಿಂತ ಭಂಗಿಯಲ್ಲಿರುವ ಸರಸ್ವತಿ, ಐರಾವತರೂಡರಾದ ಇಂದ್ರ ಮತ್ತು ಶಚಿ, ಲಕ್ಷ್ಮೀನಾರಾಯಣರನ್ನು ಹೊತ್ತ ಗರುಡ, ವಾಮನನಿಗೆ ದಾನ ಕೊಡುತ್ತಿರುವ ಬಲಿ ಮುಂತಾದ ಶಿಲ್ಪಗಳಿವೆ. ಅರ್ಜುನ ಮತ್ಸ್ಯಕ್ಕೆ ಗುರಿಯಿಡುತ್ತಿರುವ ಕೆತ್ತನೆ ಇಲ್ಲಿದೆ.
ದೇವಾಲಯದ ಇತಿಹಾಸ
[ಬದಲಾಯಿಸಿ]ಕೃಷ್ಣರಾಜಪೇಟೆ 63ನೆಯ ಶಾಸನ ಈ ದೇವಾಲಯದಲ್ಲಿದೆ. ಇದು ದೇವಾಲಯದ ನಿರ್ಮಾಣದ ಬಗ್ಗೆ ಯಾವ ಸುಳಿವನ್ನೂ ನೀಡುವುದಿಲ್ಲವಾದರೂ ಇದು ನಿರ್ಮಾಣವಾದ ಕಾಲವನ್ನು ಊಹಿಸಲು ಅನುವು ಮಾಡಿಕೊಡುತ್ತದೆ. ಇದರಲ್ಲಿ ಹೊಯ್ಸಳ ದೊರೆಯ ದಂಡನಾಯಕರಿಬ್ಬರು, 1237ರಲ್ಲಿ ಬ್ರಾಹ್ಮಣರಿಗೆ ದತ್ತಿ ಬಿಟ್ಟ ವಿಷಯ ಹೇಳಲಾಗಿದೆ. ಈ ದೇವಾಲಯದ ಮುಖಮಂಟಪಗಳಲ್ಲಿರುವ ಎರಡು ದ್ವಾರಪಾಲಕ ಶಿಲ್ಪಗಳ ಪೀಠಗಳ ಮೇಲೆ ಅವನ್ನು ಕೆತ್ತಿದವನು ಮಲ್ಲಿತಮ್ಮ ಎಂದು ಬರೆಯಲಾಗಿದೆ. 1249ರಲ್ಲಿ ನುಗ್ಗೇಹಳ್ಳಿಯಲ್ಲಿ ಮತ್ತು 1268ರಲ್ಲಿ ಸೋಮನಾಥಪುರದಲ್ಲಿ ದೇವಾಲಯಗಳ ನಿರ್ಮಾಣಕಾರ್ಯದಲ್ಲಿ ನಿರತನಾಗಿದ್ದವನೀತ. ಆದ್ದರಿಂದ ಈ ದೇವಾಲಯ 13ನೆಯ ಶತಮಾನದ ಮಧ್ಯಭಾಗದಲ್ಲಿ ನಿರ್ಮಾಣವಾಗಿರಬೇಕು. ಮೇಲಿನ ಶಾಸನ ಸೋಮೇಶ್ವರನ ಆಳ್ವಿಕೆಯ ಕಾಲದ್ದು ಎಂಬುದರಲ್ಲಿ ಸಂದೇಹವಿಲ್ಲ. ಗೋವಿಂದನಹಳ್ಳಿಯ ಈ ದೇವಾಲಯ ಹೊಯ್ಸಳ ಕಲಾಮಾದರಿಯ ಒಂದು ಅತ್ಯಪೂರ್ವ ಕುರುಹಾಗಿ ಉಳಿದಿದೆ. ಇದರಂಥದೆ ಮತ್ತೊಂದು ದೇವಾಲಯ ಇದೇ ತಾಲ್ಲೂಕಿನ ಅಘಲಯದ ಮಲ್ಲೇಶ್ವರ ದೇವಾಲಯ ಎಂದು ತಿಳಿದುಬರುತ್ತದೆ. ಗೋವಿಂದನಹಳ್ಳಿಯಲ್ಲಿ ಪಂಚಲಿಂಗ ದೇವಾಲಯವಲ್ಲದೆ ಹೊಯ್ಸಳ ಶೈಲಿಯ ಇನ್ನೆರಡು ದೇವಾಲಯಗಳಿವೆ. ಒಂದು ಶಿವಾಲಯ, ಇನ್ನೊಂದು ಗೋಪಾಲಕೃಷ್ಣನದು. ಸರಿಯಾದ ರಕ್ಷಣೆಯಿಲ್ಲದೆ ಇವೆರಡೂ ಹಾಳಾಗಿವೆ. ಈ ಎಲ್ಲ ದೇವಾಲಯಗಳನ್ನೂ ಸಮೀಕ್ಷಿಸಿದಾಗ, ಗೋವಿಂದನಹಳ್ಳಿ ಒಂದು ಕಾಲಕ್ಕೆ ಉಚ್ಛ್ರಾಯ ಸ್ಥಿತಿಯಲ್ಲಿದ್ದು ಧಾರ್ಮಿಕ ಮತ್ತು ಸಾಂಸ್ಕೃತಿಕ ಕೇಂದ್ರವಾಗಿತ್ತೆನಿಸುತ್ತದೆ.