ಕೊಂಗಾಳ್ವರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕೊಂಗಾಳ್ವರು ಮೈಸೂರು ರಾಜ್ಯದಲ್ಲಿ ಅರಕಲಗೂಡು-ಕೊಡಗು ಪ್ರದೇಶಗಳನ್ನೊಳಗೊಂಡಿದ್ದ ಕೊಂಗನಾಡಿನ ಅರಸರು. ಇವರ ಮೂಲ ಪುರುಷ ಪಂಚವ. ಸು.1004ರಲ್ಲಿ ಹನಸೋಗೆಯ ಕದನದಲ್ಲಿ ಚೆಂಗಾಳ್ವರನ್ನು ಸೋಲಿಸಿದ ಪಂಚವ ಮಹಾರಾಯನಿಗೆ `ಕ್ಷತ್ರಿಯ ಶಿಖಾಮಣಿ ಕೊಂಗಾಳ್ವನೆಂಬ ಬಿರುದಿನೊಂದಿಗೆ ಈ ಪ್ರದೇಶದ ಆಳ್ವಿಕೆಯನ್ನು ಚೋಳ ಚಕ್ರವರ್ತಿ ರಾಜರಾಜ ವಹಿಸಿ ಕೊಟ್ಟುದರಿಂದ ಈ ವಂಶದ ಅರಸರಿಗೆ ಕೊಂಗಾಳ್ವರೆಂದು ಹೆಸರಾಯಿತು. ವೆಂಗಿ ಮತ್ತು ಗಂಗ ಮಂಡಲಗಳ ಮಹಾದಂಡನಾಯಕ ಪದವಿಯನ್ನೂ ಈತನಿಗೆ ನೀಡಲಾಗಿತ್ತು. ಇವನು ಮಲಬಾರ್ ಪ್ರದೇಶದಲ್ಲಿ ಚೇರಮನನ್ನೂ ಸೋಲಿಸಿದುದಾಗಿ ಹೇಳಿಕೊಂಡಿದ್ದಾನೆ. ಇವನ ಅನಂತರದ ದೊರೆಗಳಲ್ಲಿ ತ್ರಿಭುವನಮಲ್ಲ ಕೊಂಗಾಳ್ವ (ಆ.1079-1105) ಚೆಂಗಾಳ್ವರನ್ನು ಸದೆಬಡಿದ. ದೊಡ್ಡ ಮಲ್ಲದೇವ ದೇವಾಲಯವನ್ನು ನಿರ್ಮಿಸಿ ದಾನಧರ್ಮಗಳನ್ನು ಮಾಡಿ ಹೆಸರುಗಳಿಸಿದ್ದ. ಸು.1115ರಲ್ಲಿ ಆಳುತ್ತಿದ್ದ ವೀರ ಕೊಂಗಾಳ್ವ ಸತ್ಯವಾಕ್ಯನೇ ಜಿನಾಲಯದ ನಿರ್ಮಾತ. ಈ ವಂಶದ ತ್ರಿಭುವನಮಲ್ಲ ವೀರ ದೊಡ್ಡ ಕೊಂಗಾಳ್ವ (ಆ.1171-1177) ಹೊಯ್ಸಳರ ಆಕ್ರಮಣವನ್ನು ಹಿಮ್ಮೆಟ್ಟಿಸಿದ.

ಕೊಂಗಾಳ್ವರು ಜೈನಧರ್ಮೀಯರು. ಆ ಮತಕ್ಕೆ ಪ್ರೋತ್ಸಾಹ ನೀಡುತ್ತಿದ್ದರು. ಪಂಚಮಹಾಶಬ್ದ, ಪೂರ್ವಶೈಲಸೂರ್ಯ, ಚೋಳಕುಲ ಘರಟ್ಟ, ಸೂರ್ಯವಂಶ ಚೂಡಾಮಣಿ-ಇವು ಇವರ ಕೆಲವು ಬಿರುದುಗಳು. 1390ರ ಸುಮಾರಿನಲ್ಲಿ ಈ ವಂಶದ ರಾಜರು ವಿಜಯನಗರ ಸಾಮ್ರಾಜ್ಯದಲ್ಲಿ ವಿಲೀನರಾಗಿರಬಹುದು.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: