ಅಕ್ಕಿಹೆಬ್ಬಾಳು

ವಿಕಿಪೀಡಿಯ ಇಂದ
Jump to navigation Jump to search

ಎ.ಎನ್.ಮೂರ್ತಿರಾಯರ "ಅಕ್ಕಿಹೆಬ್ಬಾಳು," : ಮೂರ್ತಿರಾಯರ ಪ್ರಿಯಓದುಗರಲ್ಲೇನಕರು, ಆ ಸ್ಥಳದ ಬಗ್ಗೆ ತಿಳಿಯಲು ಉತ್ಸುಕರಾಗಿದ್ದಾರೆ. ಅವರ ಲಲಿತ ಪ್ರಬಂಧಗಳಿಂದ ಆಯ್ದ ಕೆಲವು ಲೇಖನಗಳು ಹಲವರ "ಬ್ಲಾಗ್" ಗಳಲ್ಲಿ ಪ್ರಕಟವಾಗಿವೆ. ಆರ್. ಕೆ. ನಾರಾಯಣ್ ತಮ್ಮ ಬರವಣಿಗೆಯಿಂದ "ಮಾಲ್ಗುಡಿ," ಯನ್ನು ಪ್ರಸಿದ್ಧಿಪಡಿಸಿದಂತೆ, ರಾಯರ ಪ್ರಭಾವೀ ಹಾಗೂ ಆಕರ್ಷಕ ಪ್ರಬಂಧಗಳಿಂದ ಅಂತಹದೇ ಒಂದು "ಫ್ಯಾನ್ ತಂಡ," ಸೃಷ್ಟಿಯಾಗಿದೆ. ಇಂದಿಗೂ ಅನೇಕರಿಗೆ ಅಕ್ಕಿಹೆಬ್ಬಾಳಿನ ಪೂರ್ಣ ವಿಚಾರಗಳನ್ನು ತಿಳಿಯುವ ಕುತೂಹಲ. ಮೂರ್ತಿರಾಯರಿಗೆ ಅಕ್ಕಿಹೆಬ್ಬಾಳು, ಪ್ರಿಯವಾಗಲು ಇರುವ ಕೆಲವಾರು ಕಾರಣಗಳಲ್ಲಿ, ಮೊದಲನೆಯದಾಗಿ, ಅವರ ತಂದೆತಾಯಿಗಳು ಅವರಿಗಿಟ್ಟ ಹೆಸರಿನಲ್ಲಿ, ಅದು ಮೊದಲೇ ಕಾಣಿಸಿಕೊಳ್ಳುತ್ತದೆ. ಹುಟ್ಟಿದ ಊರು ಬೇರೆ ; ಸ್ವಾಭಾವಿಕವಾಗಿಯೇ ಅದು ರಾಯರಿಗೆ ಅತ್ಯಂತ ಪ್ರಿಯವಾದ ಸ್ಥಳವಾಗುತ್ತದೆ. 'ಪ್ರೊ. ಆ. ರಾ. ಮಿತ್ರ,' ಮತ್ತೊಬ್ಬ, ಅಕ್ಕಿ ಹೆಬ್ಬಾಳಿನ ನಿವಾಸಿ.

ಡಾ. ಎ. ಎನ್. ಮೂರ್ತಿರಾಯರ ವಿವರಣೆ ಹೀಗಿದೆ[ಬದಲಾಯಿಸಿ]

ಹಾಸನದ ರಸ್ತೆಯಲ್ಲಿ ಹೊರಟು, 'ಭೇರ್ಯ,' ದ ಬಳಿ ತಿರುಗುವ ಹಳ್ಳಿಯ ರಸ್ತೆಯನ್ನು ಹಿಡಿದು ನಾಲ್ಕು ಮೈಲಿ ನಡೆಯಬೇಕು. "ಹೊಸ ಅಗ್ರಹಾರ." ರೈಲ್ವೆ ಸ್ಟೇಶನ್ ಗೆ ಹತ್ತಿರ. ಕೃಷ್ಣರಾಜಪೇಟೆ ಕಡೆಯಿಂದಲೂ ಅಲ್ಲಿಗೆ ಹೋಗಬಹುದು. ಮಲೇರಿಯ ರೋಗದಿಂದ ಊರಿನ ಅರ್ಧದಷ್ಟು ಜನ ಮರಣಹೊಂದಿದ ತರುವಾಯ, ಆ ಹಳ್ಳಿಯನ್ನು ಅಲ್ಲಿಂದ ವರ್ಗಾಯಿಸುವುದು ಅನಿವಾರ್ಯವಾಯಿತಂತೆ. ಅದೇ ಊರಿನಿಂದ ಸ್ವಲ್ಪಹತ್ತಿರದಲ್ಲೇ ಒಂದೂವರೆ ಮೈಲಿದೂರದಲ್ಲಿರುವ ಬೋರೆಯಮೇಲೆ ಹೊಸಊರು ಅಸ್ತಿತ್ವಕ್ಕೆ ಬಂತಂತೆ. ಇದು ಅವರಿಗೆ ಯಾರೋ ಹೇಳಿರುವ ವಿಚಾರ.

ಇದು ಮೂರ್ತಿರಾಯರ ಕಾಲದ ವರ್ಣನೆ[ಬದಲಾಯಿಸಿ]

ಊರಿಗೆ ಕಾಲಿಟ್ಟಕೂಡಲೇ ಮೊದಲು ಕಾಣಿಸುವುದು, ಚೆನ್ನಿಗರಾಯಸ್ವಾಮಿಯ ಪಾಳುಗುಡಿ. ಊರಿನ ಚಾವಡಿ, ಹನುಮಂತರಾಯನ ಗುಡಿ, ತೆಂಗಿನಮರಗಳು, ಸಿಹಿನೀರಿನ ಬಾವಿ, ಅದರ ಬಳಿ ತೊಳೆದಿಟ್ಟಿರುವ ಬಿಂದಿಗೆಗಳು, ನೀರೆಳೆಯುವ ಹೆಂಗೆಳೆಯರು, ಎಲ್ಲರ ಮನೆಯಮುಂದೆಯೂ ಹಾಕಿದ ವೈವಿಧ್ಯಮಯ ರಂಗವಲ್ಲಿ ಚಿತ್ತಾರ, ದೇವಾಲಯದ ಗೋಪುರಗಳು, ಮತ್ತು ಒಡನಾಡಿಗಳ ತಂಡ. ಅವರಲ್ಲಿ ಕೆಲವರು ಮೂರ್ತಿರಾಯರ ಸಂಗಡ ಕೊಪ್ಪರಿಗೆ ಮಡುವಿನಲ್ಲಿ ಈಜಿದವರು, ತೋಟದಲ್ಲಿ ಎಳನೀರುಕದ್ದವರು, ಕಂಡವರ ತೋಟದಲ್ಲಿ ಸೌತೆಕಾಯಿಕದ್ದವರು, ಇತ್ಯಾದಿ. ಅಕ್ಕಿಹೆಬ್ಬಾಳಿನ ದಾರಿಯಲ್ಲಿ ಯಾವದಿನವಾದರೂ ಹೋಗಲಿ, ಬೆಳಗಿನ ಹೊತ್ತು ತಲೆಯ ಮೆಲೊಂದು ನೀರುತುಂಬಿದ ಕೊಡ, ಅದರಮೇಲೊಂದು ಚೆಂಬು, ಎಡಸೊಂಟದಮೇಲೆ ಮತ್ತೊಂದು ಕೊಡ, ಬಲಗೈಯಲ್ಲೊಂದು ತಾಲಿ- ಇಷ್ಟನ್ನೂ ಹೊತ್ತು, ಸ್ತೋತ್ರಗಳನ್ನು ಹಾಡುತ್ತಾಬರುವ ಹೆಂಗಸರ ಸಾಲನ್ನು ನೋಡುವುದು ಕಣ್ಣಿಗೊಂದು ಹಬ್ಬ. ಆ ನಡಗೆಯ ಲಯದಲ್ಲಿ, ಯಾವ ನಾಟ್ಯರಾಣಿಯ ಕಲೆಯಲ್ಲೂ ಕಾಣದ ಸೊಬಗಿತ್ತು. ನಾಟ್ಯರಾಣಿ ಪ್ರದರ್ಶನಕ್ಕಾಗಿ ಸೌಂದರ್ಯಸೃಷ್ಟಿ ಮಾಡುತ್ತಾಳೆ. ಇವರ ಸೊಬಗು ಅಪ್ರಯತ್ನತಃ ದೇಹದ ಸೌಷ್ಠವದಿಂದ, ಮನಸ್ಸಿನ ಅನುದ್ರಿಕ್ತ ಗೆಲುವಿನಿಂದ ತಾನಾಗಿ ಹೊರಹೊಮ್ಮುತ್ತಿತ್ತು.

ಬಾಲ್ಯದ ನಂಟು[ಬದಲಾಯಿಸಿ]

೩೦ ವರ್ಷಗಳಕಾಲ, ಮೂರ್ತಿರಾಯರಿಗೆ ಅಕ್ಕಿಹೆಬ್ಬಾಳಿನ ನಂಟು. ಅಕ್ಕಿಹೆಬ್ಬಾಳಿನ ಬಳಿಯಲ್ಲೇ, ಹೇಮಗಿರಿ, ಹೇಮಾವತಿ ನದಿ, ಮತ್ತು ಅಲ್ಲಿನ ದೇವರು ನರಸಿಂಹ. ಪ್ರಸನ್ನಮೂರ್ತಿ,ಲಕ್ಷ್ಮೀ ನರಸಿಂಹ. ಲಕ್ಷ್ಮೀ ನರಸಿಂಹಸ್ವಾಮಿಯ ಕೃಪೆಯಿಂದ ಅವರ ವಂಶದ ಎಲ್ಲರೂ ಕಷ್ಟ, ಕೋಟಲೆಗಳಿಂದ ಉಳಿದು ಬದುಕಿದರಂತೆ. ಅಕ್ಕಿಹೆಬ್ಬಾಳಿನಲ್ಲಿ ಲಕ್ಷ್ಮೀನರಸಿಂಹಸ್ವಾಮಿಯ ತೇರು/ರಥೋತ್ಸವಕ್ಕೆ ಪ್ರಾಶಸ್ತ್ಯ ಹೆಚ್ಚು. ಒಮ್ಮೆ, ತಂದೆಯವರು, ಖಾಯಿಲೆಯಿಂದ ನರಳುತ್ತಿದ್ದಾಗ, ಕಾಣಲು ಅಕ್ಕಿಹೆಬ್ಬಾಳಿಗೆ ಹೋಗುತ್ತಾರೆ. ಅವರಿಗೆ ಲಭ್ಯವಾದದ್ದು ತಂದೆಯವರ ನೆನಪು ಮಾತ್ರ ! ಅವರು ಅಲ್ಲಿಗೆ ತಲುಪುವ ವೇಳೆಗೆ, ತಂದೆಯವರು ಮೃತರಾಗಿದ್ದು "ಅಂತ್ಯಕ್ರಿಯೆ" ಗಳೆಲ್ಲಾ ನಡೆದುಹೋಗಿರುತ್ತದೆ. ರಾಯರು ಬಹಳವಾಗಿ ನೊಂದುಕೊಳ್ಳುತ್ತಾರೆ. ಅಕ್ಕಿಹೆಬ್ಬಾಳಿಗೆ ಅವರ ಮುಂದಿನ ಭೇಟಿ, ಸುಮಾರು ೧೫ ವರ್ಷಗಳ ನಂತರದ್ದು. ಆ ಹೊತ್ತಿಗೆ, ಬಾಲ್ಯದಲ್ಲಿ ನೋಡಿದ್ದ ಅಕ್ಕಿಹೆಬ್ಬಾಳು ಅವರಿಗೆ ಮತ್ತೆ, ಗೋಚರಿಸಲೇಯಿಲ್ಲ. ಆಗಿನ ಅಕ್ಕಿಹೆಬ್ಬಾಳಿಗೂ, ಅವರ ಬಾಲ್ಯದ ಅಕ್ಕಿಹೆಬ್ಬಾಳಿಗೂ, ಅಜ- ಗಜಾಂತರ ವ್ಯತ್ಯಾಸ. ಇವುಗಳನ್ನು ವಿಶ್ಲೇಶಿಸಿ ತಮ್ಮ "ಲಲಿತ ಪ್ರಬಂಧ," ಗಳಲ್ಲಿ ಅದರ ಬಗ್ಗೆ ಒಂದು "ಪುಟಾಣಿ ಪರಿಚ್ಛೇದ" ವನ್ನೇ ಬರೆದಿದ್ದಾರೆ.