ಔರಾದ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಔರಾದ್ ಇಂದ ಪುನರ್ನಿರ್ದೇಶಿತ)
ಔರಾದ

ಔರಾದ
city
ಜನಸಂಖ್ಯೆ
 (2011)
 • ಒಟ್ಟು೧೯,೮೪೯

ಔರಾದ ಕರ್ನಾಟಕ ರಾಜ್ಯದ ಬೀದರ್ ಜಿಲ್ಲೆಯ ಒಂದು ತಾಲೂಕು ಕೇಂದ್ರ. ಔರಾದ್ ಬೀದರ್ ಜಿಲ್ಲಾ ಕೇಂದ್ರದಿಂದ ಸು.೪೨ ಕಿ.ಮಿ.ದೂರದಲ್ಲಿದ್ದು, ರಾಜಧಾನಿ ಬೆಂಗಳೂರಿನಿಂದ ಸು.೭೧೨ ಕಿ.ಮಿ.ದೂರದಲ್ಲಿದೆ. ಔರಾದ ಪಟ್ಟಣದ ಮಧ್ಯಭಾಗದಲ್ಲಿ ಪುರಾತನ ಅಮರೇಶ್ವರ ದೇವಾಲಯವಿದ್ದು ಅದು ಸರಿಸುಮಾರು ೧೦ನೇ ಶತಮಾನದ ದೇವಾಲಯವೆಂದು ಹೇಳಲಾಗಿದೆ. ಔರಾದದ ಅಮರೇಶ್ಫರ ದೇವಾಲಯದಲ್ಲಿ ದೊರೆತ ತುಂಡು ಶಾಸನ ಹಾಗೂ ಅಮರೇಶ್ಫರ ಕನ್ಯಾ ಶಾಲೆಯಲ್ಲಿ ದೊರೆತ ಇನ್ನೊಂದು ಶಾಸನದ ಪ್ರಕಾರ ಹಿಂದಿನ ಅವರವಾಡಿಯೇ ಅಮರೇಶ್ವರವಾಡಿ,ಅಮರವಾಡಿ,ಅವರವಾಡಿ, ಅವರಾದಿ, ಅವರಾದ, ಔರಾದ ಎಂದು ಬದಲಾಗಿದೆ.[೧]

ಔರಾದ ತಾಲೂಕಿನ ಸಾಹಿತಿಗಳು[ಬದಲಾಯಿಸಿ]

 • ಪೂಜ್ಯ ಶ್ರೀ. ಸಿದ್ದರಾಮ ಶರಣರು ಬೆಲ್ದಾಳ.
 • ದಿ.ನರಸಿಂಗ ಮಾಸ್ತರ
 • ಬಿ.ಜಿ.ಸಿದ್ದಬಟ್ಟೆ
 • ಯಶೋದಮ್ಮ ಸಿದ್ದಬಟ್ಟೆ
 • ಮಚ್ಚೇಂದ್ರನಾಥ ಸೋನಕಾಂಬಳೆ.
 • ವಿಠಲರಾವ ಯೋಗಿ
 • ದಿ.ಗುರುನಾಥ ಬೇಂದ್ರೆ
 • ಕಾಶಿನಾಥ ಮಹಿಮಾಕರ್
 • ಬಸವರಾಜ ಸ್ವಾಮಿ
 • ಸಿದ್ರಾಮಪ್ಪಾ ಮಾಸಿಮಾಡೆ
 • ಸಮಧಾನ ಬಲ್ಲೂರ
 • ಹಂಶಕವಿ.(ಹಣಮಂತಪ್ಪಾ ವಲ್ಲೇಪೂರೆ)
 • ನಾಗನಾಥ ಚಿಟಮೆ
 • ಪರಮೇಶ್ವರ ಶೆಟಗಾರ.
 • ವಿಜಯಕುಮಾರ ಎಸ್.ಗೌರೆ
 • ಸೋಮನಾಥ ಮುದ್ದಾ
 • ಗುರುನಾಥ ವಡ್ಡೆ.
 • ಶಿವರಾಜ ಪಾಟೀಲ್
 • ಡಾ.ಮನ್ಮಥ ಎಚ್ ಡೊಲೆ
 • ವಿದ್ಯಾವತಿ ಬಿ ಬಲ್ಲೂರ್
 • ರಮೇಶ ಬಿರಾದಾರ
 • ಸುನೀತಾ ಬಿರಾದಾರ
 • ಚನ್ನಮ್ಮಾ ವಲ್ಲೆಪೂರೆ
 • ಸಂಜೀವಕುಮಾರ ಜುಮ್ಮಾ
 • ಶಿವಕುಮಾರ ಕಟ್ಟೆ
 • ಡಾ.ಬಸವರಾಜ ಬಲ್ಲೂರ
 • ಮಲ್ಲೇಶ್ವರಿ ಉದಯಗಿರಿ
 • ಪ್ರಭು ಮಾಲೆ
 • ಡಾ.ಖಂಡೋಬಾ ಸಂಗಮ್
 • ದಿ.ಪಂಚಶೀಲ ಮಾಂಜ್ರೇಕರ್
 • ಶಾಂತಮ್ಮಾಸ ಬಲ್ಲೂರ್
 • ಅನೀಲಕುಮಾರ ಪಾಟೀಲ್
 • ಡಾ.ಶಿವಶರಣಯ್ಯಾ ಎಂ.ಮಠಪತಿ
 • ಬಿ.ಎಂ.ಅಮರವಾಡಿ
 • ನಾಗೇಶ ಸ್ವಾಮಿ
 • ಬಾಲಾಜಿ ಕುಂಬಾರ
 • ಸುರಬಿ (ಸುಧಾರಾಣಿ ಬಿರಾದಾರ)
 • ಅನೀಲ್ ಕುಮಾರ ಸೂರ್ಯವಂಶಿ

ಕೃಪೆ: 'ಬೀದರ ಜಿಲ್ಲಾ ಸಾಹಿತಿಗಳ ಪರಿಚಯ' ಎಂಬ ಪುಸ್ತಕದಿಂದ ಆರಿಸಿಕೊಳ್ಳುಲಾಗಿದೆ.

ಲೇಖಕರು: ಮಚ್ಚೇಂದ್ರ ಪಿ ಅಣಕಲ್.

ಇತಿಹಾಸ[ಬದಲಾಯಿಸಿ]

ಪ್ರಾಚೀನ ನಾಗರೀಕತೆ : ಹಳೆಯ ಮತ್ತು ಹೊಸ ಶಿಲಾಯುಗದಲ್ಲಿ ಈ ಭಾಗ ಜನರಿಂದ ವಾಸಿಸಲ್ಪಡುತ್ತಿತ್ತು ಎನ್ನುವುದು ಸಂಶೋಧನೆಗಳಿಂದ ತಿಳಿದುಬಂದಿದೆ. ಔರಾದ ತಾಲೂಕಿನ ಅನೇಕ ಹಳ್ಳಿಗಳಲ್ಲಿ ಹಳೆಯ ಶಿಲಾಯುಗದ ಕಲ್ಲಿನ ಆಯುಧಗಳು, ಮಡಿಕೆಗಳು ದೊರೆತಿವೆ. ಆಹಾರದ ಬೇಟೆಗಾಗಿ ಆಗ ಮನುಷ್ಯ ಆಯುಧಗಳನ್ನು ಉಪಯೋಗಿಸುತ್ತಿದ್ದುದು ಹಾಗೂ ಅವುಗಳ ಸಂಗ್ರಹಣೆ ಮತ್ತು ನಿರ್ವಹಣೆಗಾಗಿ ಮಡಿಕೆಗಳನ್ನು ಬಳಸಿರುತ್ತಾನೆ. ಹೀಗಾಗಿ ಈ ಭಾಗದಲ್ಲಿ ದೊರೆತ ಮಡಿಕೆಗಳ ತುಂಡುಗಳು ಆ ಶಿಲಾಯುಗದ ಅವಶೇಷಗಳೆಂದು ಸಂಶೋಧಕರು ಧೃಢಪಡಿಸಿರುತ್ತಾರೆ. ( ಡಾ.ಎಲ್.ಆರ್.ಕುಲಕರ್ಣಿ) ಮಧ್ಯ ಶಿಲಾಯುಗದ ಉಪಕರಣಗಳಾದ ಬೋರರ್ (ತೂತು ಮಾಡುವ ಆಯುಧ), ಬೈರಿಗೆ, ಸ್ಕೇಪರ್, ಪ್ಲೇಕ್‍ಗಳು (ಗಡಗಂಚಿ) ಮುಂತಾದವುಗಳು ಈ ಭಾಗದ ಔರಾದ, ಕಮಲನಗರ, ಸಂಗಮ, ಕೌಡಗಾಂವ್, ಮುಂಗನಾಳ, ವನಮಾರಪಳ್ಳಿ, ಮಮದಾಪುರ,ತೇಗಂಪೂರ, ಎಕಲಾರ, ಶೆಂಬೆಳ್ಳಿ, ನಾಗೂರು, ಬೆಳಕುಣಿ ಮುಂತಾದ ಪ್ರದೇಶಗಳಲ್ಲಿ ಸಿಕ್ಕಿವೆ. ( ಪುರಾತತ್ವ ಇಲಾಖೆಯ ಸಂಶೋಧನೆ)

ಹೆಸರು[ಬದಲಾಯಿಸಿ]

ಔರಾದ ಹೆಸರಿನ ಉಗಮ : ಔರಾದದ ಅಮರೇಶ್ವರ ದೇವಸ್ಥಾನದಲ್ಲಿ ದೊರೆತ ತುಂಡು ಶಾಸನ ಹಾಗೂ ಅಮರೇಶ್ವರ ಕನ್ಯಾ ಪ್ರೌಢ ಶಾಲೆಯ ಆವರಣದಲ್ಲಿರುವ ಪಾಶ್ರ್ವನಾಥ ತೀರ್ಥಂಕರರ ಒಡೆದ ಶಾಸನದ ಪೀಠದ ಕೆಳಗಿರುವ ಎರಡು ಸಾಲಿನ ಶಿಲಾಶಾಸನದಲ್ಲಿ “ವಿಖ್ಯಾತನಗರವರವಾಡಿ” ಎನ್ನುವ ಸಾಲು, ಔರಾದನ್ನು ‘ಅವರವಾಡಿ’ ಅಥವಾ "ಅಮರವಾಡಿ" ಎನ್ನುತ್ತಿದ್ದರೆಂದು ಔರಾದ ತಾಲೂಕು ದರ್ಶನದ ಲೇಖಕ ಶಿವಕುಮಾರ ಕಟ್ಟೆ ಯವರು ತಮ್ಮ ಪುಸ್ತಕದಲ್ಲಿ ಸ್ಪ್ಪಷ್ಟಪಡಿಸಿರುತ್ತಾರೆ. ಸುಮಾರು 10ನೇ ಶತಮಾನದ್ದೆನ್ನಬಹುದಾದ ಅಮರೇಶ್ವರ ದೇವಸ್ಥಾನದಲ್ಲಿ ದೊರೆತ ತುಂಡು ಶಾಸನದಲ್ಲೂ “ಅವರವಾಡಿ ನೂರರ ಗ್ರಾಮದ ಸಮಸ್ತ ಪ್ರಭುಗಾವುಂಡರು ಅವರವಾಡಿಯ ಶ್ರೀ ಅಮರೇಶ್ವರ ದೇವರಿಗೆ ಖಂಡಸ್ಪುಟಿತ ಜೀರ್ಣೋದ್ಧಾರಕ್ಕಾಗಿ ತನಾರ್ಥಂ ಧಾರಾಪೂರ್ವಕ ……………”

ಎನ್ನುವ ಸಾಲು ಉಲ್ಲೇಖಿಸಲಾಗಿದ್ದು, ಅಮರೇಶ್ವರ ದೇವರ ಅಸ್ತಿತ್ವ ಮಾತ್ರದಿಂದಲೇ ಇಂದಿನ ಔರಾದ ಎನ್ನುವ ಹೆಸರು ಈ ಹಿಂದೆ ಅಮರೇಶ್ವರವಾಡಿ, ಅಮರವಾಡಿ, ಅವರವಾಡಿ, ಅವರಾಡಿ, ಅವರಾದ, ಔರಾದ ಎಂದು ಬದಲಾಗಿದೆ.

ಮಹಾರಾಷ್ಟ್ರದ ನಾಂದೇಡ್ ಹಾಗೂ ಭಿಮ್ರಾ ಶಾಸನಗಳಲ್ಲೂ ‘ ಸಂತವೆನಿಪ್ಪ ಅವರವಾಡಿಯೊಳೆನ್ನ’ ಎನ್ನುವ ಸಾಲು ಬರೆಯಲಾಗಿದ್ದು, ಇದು ಇಲ್ಲಿಯ ಅಮರೇಶ್ವರ ದೇವರನ್ನು ‘ಸಂತ’ನೆಂದು ಬಣ್ಣಿಸಿದ ಹಾಗಿದೆ.

ಒಟ್ಟು ಔರಾದನಲ್ಲಿ 3 ಶಾಸನಗಳು ದೊರೆತಿವೆ.

1. ಅಮರೇಶ್ವರ ದೇವಸ್ಥಾನದಲ್ಲಿ ಒಂದು ಶಾಸನ. 2. ಅಮರೇಶ್ವರ ಕನ್ಯಾ ಪ್ರೌಢ ಶಾಲೆಯಲ್ಲಿ ಒಂದು ಶಾಸನ. 3. ಮುರ್ಕಿಯಲ್ಲಿ ಒಂದು ಶಾಸನ.

ಅವರವಾಡಿ ಎನ್ನುವ ಹೆಸರು ನಮಗೆ ಪ್ರಥಮವಾಗಿ ಸಿಕ್ಕಿದ್ದೆ, ವಿಕ್ರಮಾದಿತ್ಯನ ಕಾಲದ ಶಾಸನಗಳಲ್ಲಿ. ಕ್ರಿ.ಶ.1079ರಲ್ಲಿ ಚಾಲುಕ್ಯ ದೊರೆ ಆರನೆಯ ವಿಕ್ರಮಾದಿತ್ಯನ ಆಡಳಿತಾಧಿಕಾರಿ ಯಾಗಿದ್ದ ಮಹಾಮಂಡಳೇಶ್ವರ ಕರ್ಕರಸ ಕರಡಿಕಲ್ಲು ( ದೆಗಲೂರಿನ ಕರಡಖೇಢ) ಅಧಿಪತಿಯಾಗಿದ್ದ. ಕರಡಿಕಲ್ಲು ಸಹಸ್ರಮಂಡಲ ಪ್ರಾಂತ್ಯದ ಪ್ರಮುಖ ಕೇಂದ್ರವಾಗಿತ್ತು. ಅವರವಾಡಿ ಕೂಡ ಸಹಸ್ರಮಂಡಲದ ಪ್ರಾಂತ್ಯವಾಗಿತ್ತು ಎಂದು ಭಿಮ್ರಾ ಶಾಸನದಲ್ಲಿ ಉಲ್ಲೇಖವಾಗಿದೆ. ಈ ಕರ್ಕರಸನ ಕಾಲದಲ್ಲಿ ಸೋಮನಾಥ, ಧೋರೇಶ್ವರ, ಮತ್ತು ಕಾಳಿಚೋರೇಶ್ವರ ಹಾಗೂ ಪ್ರಸನ್ನ ಭೈರವದೇವ ಮಂದಿರಗಳನ್ನು ಕಟ್ಟಿಸಲಾಗಿತ್ತು. ಇವೆಲ್ಲ ದೆಗಲೂರು ಆಸುಪಾಸಿನ ದೇವಾಲಯಗಳು. ಇವುಗಳ ಮೇಲ್ವಿಚಾರಣೆಯನ್ನು ಚಂದ್ರಶೇಖರ ಪಂಡಿತ ಎನ್ನುವವರು ನೋಡಿಕೊಳ್ಳುತ್ತಿದ್ದರು. ಆಗ ಅವರವಾಡಿಯ ಕವಾಲಿಗಾಂವೆ, ಆಲೂರು, ಬೋರಿಗಾಂವೆ, ದಯಾಸವಲಿಗೆ, ಗೌಂಡಗಾಂವೆ, ಗುಕ್ಕಾವೆ, ಹಿಪ್ಪಳಗಾಂವೆ, ಭಾಯಿಗಾಂವೆ, ಎಕ್ಕಲಗಾಂವೆ, ತಡಕಲ್ಲು, ನೇರಿಲಿಗೆ ಮುಂತಾದ ಪ್ರದೇಶಗಳನ್ನು ಈ ದೇವಸ್ಥಾನಗಳ ಅಂಗಭೋಗ, ರಂಗಭೋಗ, ಅನ್ನದಾನ, ವಿದ್ಯಾದಾನಕ್ಕಾಗಿ ನೀಡಲಾಗಿತ್ತು.


ಪ್ರಾದೇಶಿಕತೆ[ಬದಲಾಯಿಸಿ]

ಔರಾದ ತಾಲೂಕು ಒಟ್ಟು 6 ಹೋಬಳಿಗಳು, 38 ಗ್ರಾಮಪಂಚಾಯತಿಗಳು ಒಳಗೊಂಡಂತೆ 149 ಹಳ್ಳಿಗಳನ್ನು ಮತ್ತು 177 ತಾಂಡಾಗಳನ್ನು ಒಳಗೊಂಡಿದೆ. ಇದು ಬೀದರ ಜಿಲ್ಲೆಯ ಬೇರೆಲ್ಲ ತಾಲೂಕುಗಳಿಗಿಂತಲೂ ಹೆಚ್ಚು ಹಳ್ಳಿಗಳನ್ನು ಹೊಂದಿರುವ ತಾಲೂಕು ಕೇಂದ್ರವಾಗಿದೆ. ತಾಲೂಕಿನ 149 ಹಳ್ಳಿಗಳ ಪೈಕಿ ಒಂದು ಗ್ರಾಮ “ಚೋಂಡಿ ಮುಖೇಡ” ಎನ್ನುವ ಗ್ರಾಮವು ಪ್ರದೇಶ ಹಂಚಿಕೆಯ ಸಮಯದಲ್ಲಿ ಮಹಾರಾಷ್ಟ್ರದಲ್ಲಿಯೇ ಉಳಿದುಕೊಂಡಿದೆ.

ಭೌಗೋಳಿಕ ಲಕ್ಷಣ, ಮೇಲ್ಮೆ ಮತ್ತು ಮಣ್ಣು[ಬದಲಾಯಿಸಿ]

ಔರಾದ ತಾಲೂಕು ಉತ್ತರ ಮತ್ತು ಪಶ್ಚಿಮದಲ್ಲಿ ಮಹಾರಾಷ್ಟ್ರದ ನಾಂದೇಡ ಮತ್ತು ಉಸ್ಮಾನಾಬಾದ ಪ್ರದೇಶಗಳಿಂದ ಹಾಗೂ ಪೂರ್ವದಲ್ಲಿ ತೆಲಂಗಾಣದ ನಿಜಾಮಾಬಾದ ಮತ್ತು ಮೆದಕ್ ಭಾಗಗಳಿಂದ ಹಾಗೂ ದಕ್ಷಿಣದಲ್ಲಿ ಮಾಂಜ್ರಾ ನದಿಯಾಚೆ ಬೀದರ ಮತ್ತು ಭಾಲ್ಕಿ ತಾಲೂಕಿನ ಭಾಗಗಳಿಂದ ಸುತ್ತುವರಿದಿದೆ. ಇದು ಉತ್ತರದಲ್ಲಿ 17.35 ಮತ್ತು 18.25 ಅಕ್ಷಾಂಶ ಮತ್ತು ಪಶ್ಚಿಮದಲ್ಲಿ 76.42 ಮತ್ತು 77.39 ರೇಖಾಂಶಗಳ ಮಧ್ಯದಲ್ಲಿದ್ದು, ಕರ್ನಾಟಕ ರಾಜ್ಯದ ಉತ್ತರಕ್ಕೆ ತುತ್ತ ತುದಿಯಲ್ಲಿದೆ. ಔರಾದದ ಸಂಪೂರ್ಣ ಪ್ರದೇಶವು ದಕ್ಷಿಣ ಪ್ರಸ್ಥಭೂಮಿಯ ಭಾಗದಲ್ಲಿ ಬರುತ್ತದೆ. ಹಾಗೆಯೇ ಕರ್ನಾಟಕದ ಮೈದಾನ ಪ್ರದೇಶಗಳಲ್ಲೂ ಇದನ್ನು ಗುರುತಿಸಲಾಗಿದ್ದು, ಅಲ್ಲಲ್ಲಿ ಸಣ್ಣಪುಟ್ಟ ಬೆಟ್ಟ ಗುಡ್ಡಗಳನ್ನು ಕಾಣಬಹುದಾಗಿದೆ.

ಔರಾದ ತಾಲೂಕು 1,228.6 ಚ.ಕಿ.ಮೀ. ವಿಸ್ತೀರ್ಣ ಹೊಂದಿದ್ದರೆ ಔರಾದ ಪಟ್ಟಣ ಮಾತ್ರ 19.01 ಚ.ಕಿ.ಮೀ. ವಿಸ್ತೀರ್ಣ ಹೊಂದಿದೆ. ವಿಸ್ತೀರ್ಣದ ದೃಷ್ಟಿಯಿಂದಲೂ ಜಿಲ್ಲೆಯಲ್ಲಿಯೇ ದೊಡ್ಡ ತಾಲೂಕು ಕೇಂದ್ರವೆನಿಸಿದೆ. ಈ ಪ್ರದೇಶವು ಘನ ಲಾವಾ ಮತ್ತು ಉಷ್ಣವಲಯದ ಕಪ್ಪು ಮಣ್ಣನ್ನು ಹೊಂದಿದೆ. ಈ ಪ್ರದೇಶದ ಹಲವೆಡೆ ಗಟ್ಟಿ ಕಪ್ಪು ಕಲ್ಲುಗಳು ದೊರೆಯುತ್ತವೆ. ಇಲ್ಲಿಯ ಸಾಕಷ್ಟು ಭೂ ಪ್ರದೇಶ ಸಮತಟ್ಟು ಹಾಗೂ ಬೆಂಗಾಡಿನಿಂದ ಕೂಡಿದೆ. ಇಲ್ಲಿಯ ಕಪ್ಪು ಮಣ್ಣು, ಸಡಿಲ ಜೇಡಿಮಣ್ಣಿನಂತೆಯೂ ದೊರೆಯುತ್ತದೆ. ಮಣ್ಣಿನ ಆಮ್ಲತೆ ಹಲವೆಡೆ ತಟಸ್ಥವಾಗಿದ್ದು, ಕಾರ್ಬನ್, ಪಾಸ್ಪರಸ್ ಕಡಿಮೆ ಇದ್ದು, ಪೋಟ್ಯಾಶಿಯಂ ಸಾಮಾನ್ಯ ಪ್ರಮಾಣದಲ್ಲಿದೆ. ನೀರನ್ನು ಹಿಡಿದಿಡುವ ಸಾಮಥ್ರ್ಯ ಕಡಿಮೆ ಇದೆ. ಈ ಭಾಗವು ಸಮುದ್ರ ಮಟ್ಟದಿಂದ ಸುಮಾರು 542 ಮೀ. (1778 ಫೀಟ್) ನಿಂದ 610 ಮೀ.(2001 ಫೀಟ್) ಎತ್ತರದಲ್ಲಿದೆ.

ನೀಲಗಾಯ್ ಪ್ರತ್ಯಕ್ಷ

ಇದೇ ಮೊದಲಬಾರಿಗೆ ಅಂದರೆ ಜೂನ್-2021 ರಲ್ಲಿ ಕಮಲನಗರ ತಾಲೂಕಿನ ನಂದಿ ಬಿಜಲಗಾಂವ್ ಅರಣ್ತ ಪ್ರದೇಶದಲ್ಲಿ ನೀಲಗಾಯ್ ಹಿಂಡು ಕಾಣಿಸಿವೆ. ಒಂದು ಗುಂಪಿನಲ್ಲಿ 15 ನೀಲಗಾಯ್ ಗಳು ಮತ್ತೊಂದು ಗುಂಪಿನಲ್ಲಿ 22, ಒಟ್ಟು 37 ನೀಲಗಾಯ್ ಕಂಡು ಬಂದಿವೆ.

ಭಾಷೆ[ಬದಲಾಯಿಸಿ]

ರಾಷ್ಟ್ರಕೂಟರು ಈ ಭಾಗದ ಅಧಿಪತ್ಯ ಹೊಂದಿದ್ದಾಗ ಅವರ ಆಡಳಿತ ಭಾಷೆ ಕನ್ನಡವೇ ಆಗಿತ್ತು. ನಂತರ ಬಂದ ಕಲ್ಯಾಣದ ಚಾಲುಕ್ಯರು ಕನ್ನಡ ಪ್ರೇಮಿಗಳು, ಅವರು ಕನ್ನಡವನ್ನು ಇನ್ನಷ್ಟು ಅಭಿವೃದ್ಧಿಪಡಿಸಿದರು. ಅವರ ಆಡಳಿತ ಭಾಷೆಯೂ ಸಹ ಕನ್ನಡವೇ ಆಗಿತ್ತು. 12ನೇ ಶತಮಾನದಲ್ಲಿ ನಡೆದ ಶರಣ ಚಳುವಳಿಯ ಪ್ರಯುಕ್ತ ಕನ್ನಡ ಸಾಹಿತ್ಯ ಲೋಕಕ್ಕೆ ದೊರಕಿದ್ದು ಅಮೂಲ್ಯವಾದ ಕನ್ನಡದ ವಚನಗಳು. ಆ ಕಾಲದಲ್ಲಿ ಕನ್ನಡ ಪ್ರವರ್ಧಮಾನಕ್ಕೆ ಬಂದುದು ಇತಿಹಾಸ. ನಂತರ 14ನೇ ಶತಮಾನದಲ್ಲಿ ಬಂದ ಬಹಮನಿ ಸುಲ್ತಾನರು ಪಾರ್ಸಿಯನ್ನು ಆಡಳಿತ ಭಾಷೆಯನ್ನಾಗಿ ಮಾಡಿದರು. ಆ ಸಮಯದಲ್ಲಿ ಕನ್ನಡ ಮಾತೃಭಾಷೆಯಾಗಿ ಮಾತ್ರ ಉಳಿದುಕೊಂಡಿತ್ತು. ಆಗ ಕನ್ನಡ ರಾಜಾಶ್ರಯ ಕಳೆದುಕೊಂಡು ಸಾಹಿತ್ಯ ಹೆಚ್ಚು ಪ್ರಚಾರಕ್ಕೆ ಬರಲಿಲ್ಲ. ನಂತರ 1884ರ ಹೊತ್ತಿಗೆ ಉರ್ದು ಬಹಮನಿ ಸುಲ್ತಾನರ ಆಡಳಿತ ಭಾಷೆಯಾಗಿ ಮಾರ್ಪಾಡಾಯಿತು. ಔರಾದ ತಾಲೂಕಿನ ಕಮಲನಗರದಲ್ಲಿ ಜನ್ಮ ತಾಳಿದ ಭಾಲ್ಕಿ ಹಿರೇಮಠ ಸಂಸ್ಥಾನದ ಲಿಂಗೈಕ್ಯ ಡಾ.ಚನ್ನಬಸವ ಪಟ್ಟದ್ದೇವರು ಶಾಲೆಯ ಹೊರಗಡೆ ಉರ್ದು ನಾಮಫಲಕ ಹಾಕಿ ಒಳಗೆ ಕನ್ನಡ ಕಲಿಸದೇ ಹೋಗಿದ್ದರೇ ಭಾಗಶಃ ಇಲ್ಲಿಯ ಕನ್ನಡದ ಸ್ಥಿತಿ ಏನಾಗಿರುತ್ತಿತ್ತೋ ನಾ ಕಾಣೆ. ತಾಲೂಕಿನ ಉತ್ತರ ಮತ್ತು ಪಶ್ಚಿಮ ಭಾಗದ ಬಹುತೇಕ ಗ್ರಾಮಗಳ ಜನರ ಮಾತೃಭಾಷೆ ಮರಾಠಿಯೇ ಆಗಿರುವುದರಿಂದ ಮರಾಠಿ ಭಾಷೆ ಕೂಡ ಇಲ್ಲಿ ತನ್ನ ಪ್ರಾಬಲ್ಯವನ್ನು ಮೆರೆದಿದೆ. ಈಗಲೂ ಕೂಡ ಔರಾದ ತಾಲೂಕಿನ ಸುಮಾರು 81 ಹಳ್ಳಿಗಳು ಮರಾಠಿ ಭಾಷಿಕರನ್ನು ಹೊಂದಿದೆ ಎಂದು ಮಹಾರಾಷ್ಟ್ರ ಸರ್ಕಾರದ ಮಹಾರಾಷ್ಟ್ರ ಕರ್ನಾಟಕ ಬೋರ್ಡ (ಎಂ.ಕೆ.ಬಿ.) ಏರಿಯಾ ತನ್ನ ವರದಿಯಲ್ಲಿ ಅಧಿಕೃತವಾಗಿ ಉಲ್ಲೇಖಿಸಿದೆ. ಪೂರ್ವಭಾಗದ ಕೆಲ ಗ್ರಾಮಗಳು ಆಂದ್ರಪ್ರದೇಶದ ಗಡಿಗೆ ಹೊಂದಿರುವುದರಿಂದ ಸ್ವಲ್ಪ ಪ್ರಮಾಣದ ತೆಲುಗು ಪ್ರಭಾವ ಕಂಡುಬರುತ್ತದೆಯಾದರೂ ತೆಲಂಗಾಣದ ಗಡಿ ಗ್ರಾಮಗಳಲ್ಲಿ ಕನ್ನಡ ಬಳಸುವ ಜನರೆ ಹೆಚ್ಚಾಗಿದ್ದಾರೆ. ಹೀಗಾಗಿ ಕನ್ನಡದ ಪ್ರಭಾವ ತೆಲಂಗಾಣದ ಅನೇಕ ಗ್ರಾಮಗಳಲ್ಲಿ ಕಂಡುಬರುತ್ತದೆ. ಭಾರತಕ್ಕೆ ಸ್ವಾತಂತ್ರ್ಯ ದೊರೆತು ಸುಮಾರು ಒಂದು ವರ್ಷದವರೆಗೂ ಔರಾದ ತಾಲೂಕು ಒಳಗೊಂಡಂತೆ ಹೈದ್ರಾಬಾದ-ಕರ್ನಾಟಕದ ಪ್ರದೇಶವು ಹೈದ್ರಾಬಾದಿನ ಮುಸ್ಲಿಂ ದೊರೆಗಳಾದ ನಿಜಾಮರ ಆಡಳಿತಕ್ಕೆ ಒಳಪಟ್ಟಿದ್ದರಿಂದ ಹಾಗೂ ಔರಾದದ ಅನೇಕ ಭಾಗಗಳಲ್ಲಿ ಈಗಲೂ ಮುಸ್ಲಿಂ ಜನರಿರುವುದರಿಂದ ಉರ್ದು ಕೂಡ ಸಹಜವಾಗಿಯೇ ಈ ಭಾಗದಲ್ಲಿ ವ್ಯಾವಹಾರಿಕವಾಗಿ ಬಳಕೆಯಲ್ಲಿದೆ. ಒಟ್ಟಾಗಿ ಕನ್ನಡ ಭಾಷೆಯ ಮೇಲೆ ಮರಾಠಿ ಮತ್ತು ಉರ್ದು ಭಾಷೆಗಳು ಹೆಚ್ಚಿನ ಪ್ರಮಾಣದಲ್ಲಿ ಪ್ರಭಾವ ಬೀರಿರುವುದರಿಂದ ಕನ್ನಡ ಭಾಷೆ ಮಿಶ್ರಿತಗೊಂಡಿದ್ದರೂ ತನ್ನತನವನ್ನು ಉಳಿಸಿಕೊಂಡಿದೆ.

ಮಹಾಮಂಡಳೇಶ್ವರ ಎರೆಯಮರಸ[ಬದಲಾಯಿಸಿ]

ಕ್ರಿ.ಶ.1130 ರಲ್ಲಿ ಈ ಪ್ರಾಂತ್ಯವು ಮೂರನೇ ಸೋಮೇಶ್ವರನ ಮಹಾಮಂಡಳೇಶ್ವರ ಎರೆಯಮರಸ ಎನ್ನುವವನ ಆಳ್ವಿಕೆಗೆ ಒಳಪಟ್ಟಿತ್ತು. ಈತನು ನಾಗರಹಾಳ (ನಾಗರಾಳ)ನ್ನು ರೇವಣೇಶ್ವರ ದೇವರಿಗೆ ಬಿಟ್ಟುಕೊಟ್ಟ ಉಲ್ಲೇಖ ಬರುತ್ತದೆ. ಮತ್ತು ಇದೇ ಸಂದರ್ಭದಲ್ಲಿ ಅವರವಾಡಿಯ ಹಲವಾರು ಗ್ರಾಮಗಳ ಉಸ್ತುವಾರಿ ನೋಡಿಕೊಳ್ಳುತ್ತಿದ್ದ, ಊಳಿಗಮಾನ್ಯ ಪದ್ದತಿಯಡಿ ಅಧೀನನಾಗಿದ್ದ ಹೆಮ್ಮಡಿಯರಸನು ಆಲೂರು, ಗೌಡಗಾಂವೆ (ಗೌಡಗಾಂವ್) ಕಾವಲಿಗಾಂವೆ (ಕೌಡಗಾಂವ್) ದಯಾಸವಳಿಗೆ, ಗುಕ್ಕಾವೆ, ಬೋರಿಗಾಂವೆ (ಬೋರಾಳ), ನೇರಿಲಿಗೆ (ನೇರ್ಲಿ), ಹಿಪ್ಪಳಗಾಂವೆ (ಹಿಪ್ಪಳಗಾಂವ್), ಮುಂತಾದ ಗ್ರಾಮಗಳ ತೆರಿಗೆಯನ್ನು ಸಹ ನೀಡಿರುತ್ತಾನೆಂದು ಶಾಸನವೊಂದರಲ್ಲಿ ಉಲ್ಲೇಖಗೊಂಡಿದೆ.

ದಂಡನಾಯಕ ಶ್ರೀಧರಯ್ಯ[ಬದಲಾಯಿಸಿ]

ಮಹಾಮಂಡಳೇಶ್ವರ ಎರೆಯಮರಸನ ನಂತರ ಪ್ರಖ್ಯಾತಿಗೆ ಬಂದವನು ದಂಡನಾಯಕ ಶ್ರೀಧರಯ್ಯ. ಕ್ರಿ.ಶ. 1133ರಲ್ಲಿ ಅವರವಾಡಿಯು ಮೂರನೇ ಸೋಮೇಶ್ವರನ ಸಾಮಂತನಾಗಿದ್ದ ದಂಡನಾಯಕ ಶ್ರೀಧರಯ್ಯನ ಆಳ್ವಿಕೆಗೆ ಒಳಪಡುತ್ತದೆ. ಈತ ಪೋತನ (ಬೋಧನ) ಪ್ರಾಂತ್ಯದ ಅಧಿಪತಿಯೂ ಆಗಿದ್ದ. ಈತನ ಅವಧಿಯಲ್ಲಿ ಅವರವಾಡಿಯ ಉಪವಿಭಾಗವಾದ ಸಕ್ಕರ್ಗೆ-80ರ ಭಾಯಿಗಾಂವೆ ಎನ್ನುವ ಹೆಸರಿನ ಗ್ರಾಮವನ್ನು ರಾಣಿ ಪಟ್ಟಮಹಾದೇವಿ ಸೋಮನಾಥ ದೇವರ (ಬಹುಶಃ ಕರಾಡಖೇಡದ ಸೋಮನಾಥ ದೇವರು) ಹೆಸರಿನಲ್ಲಿ ಗುಡಿಗುಂಡಾರಗಳ ಜೀರ್ಣೋದ್ಧಾರ ಮತ್ತು ಶಿಕ್ಷಣ ಸುಧಾರಣೆಗೆಂದು ದಾನ ನೀಡಿರುತ್ತಾಳೆ. ಹೀಗಾಗಿ ಈತನ ಅವಧಿಯಲ್ಲಿ ಈ ಭಾಗದಲ್ಲಿ ಒಂದಿಷ್ಟು ಕಲೆ, ಸಾಹಿತ್ಯ ಮತ್ತು ಶಿಕ್ಷಣ ಸುಧಾರಣೆಗಳಾಗಿವೆ ಎನ್ನಬಹುದು. ನಾಂದೇಡ ಜಿಲ್ಲೆಯ ಕರಾಡಖೇಡ ಶಾಸನದಲ್ಲಿ “ಶ್ರೀಧರಯ್ಯಂಗಳು ಅವರವಾಡಿ-700, ಪೋತನ-700ನ ಸಾಮಂತಿಕೆಯನ್ನಾಳುತ್ತಿರೆ” ಎನ್ನುವ ಉಲ್ಲೇಖ ಬರುತ್ತದೆ. ಈತನು ಅವರವಾಡಿ ಮತ್ತು ಬೋಧನಗಳ ಸಾಮಂತಿಕೆಯನ್ನಾಳುತ್ತಿರುವಾಗ ಕರಡಿಕಲ್ಲ ಸ್ವಯಂಭೂ ಸೋಮನಾಥ ದೇವರ ಅಂಗಭೋಗ, ರಂಗಭೋಗಕ್ಕೆ, ವಿದ್ಯಾದಾನಕ್ಕಾಗಿ ಖಂಡಸ್ಪುಟಿತ ಜೀರ್ಣೋದ್ಧಾರಕ್ಕೆಂದು ಅವರವಾಡಿಯ ಉಪವಿಭಾಗವಾದ ಸಕ್ಕರ್ಗೆ-80ರ ಬಳಿಯ ಭಾಯಿಗಾಂವೆಯನ್ನು ಸಾಮಂತಭೋಗಕ್ಕೆ ಬಿಟ್ಟ ಉಲ್ಲೇಖವಿದೆ.

ರಾಣಿ ಮಚ್ಛಲದೇವಿ[ಬದಲಾಯಿಸಿ]

ಮೂರನೆ ಸೋಮೇಶ್ವರನ ನಂತರ ಆತನ ಮಗ ಜಗದೇಕಮಲ್ಲ ಅಧಿಕಾರಕ್ಕೆ ಬರುತ್ತಾನೆ. ಜಗದೇಕ ಮಲ್ಲನ ರಾಣಿ ಮಚ್ಛಲದೇವಿ ಅವರವಾಡಿಯನ್ನು ಆಳಿದಳೆಂದು ತಿಳಿದುಬರುತ್ತದೆ.

ನಾಲ್ಕನೇ ಸೋಮೇಶ್ವರ[ಬದಲಾಯಿಸಿ]

ಜಗದೇಕಮಲ್ಲನ ನಂತರ ಮೂರನೇ ಸೋಮೇಶ್ವರನ ಇನ್ನೋರ್ವ ಮಗ ನಾಲ್ಕನೇ ಸೋಮೇಶ್ವರ ಈ ಭಾಗದ ಅಧಿಪತ್ಯ ಹೊಂದುತ್ತಾನೆ. ಈತ ಕ್ರಿ.ಶ.1184 ರಿಂದ ಕ್ರಿ.ಶ.1200 ವರೆಗೆ ಮಾತ್ರ ರಾಜ್ಯಭಾರ ನಡೆಸುತ್ತಾನೆ.

ಚೆಂದವೆಟ್ಟ[ಬದಲಾಯಿಸಿ]

ಔರಾದ ಅಮರೇಶ್ವರ ದೇವಸ್ಥಾನದಲ್ಲಿ ದೊರೆತ ತುಂಡು ಶಾಸನದ ಒಂದು ಮಗ್ಗುಲಲ್ಲಿ ‘ಚೆಂದವೆಟ್ಟದಿಂದ ಪಶ್ಚಿಮ ಭಾಗಕ್ಕೆ 15 ಘಳೆಯ ಭೂಮಿಯನ್ನು ಸರ್ವ ಸುಂಕಗಳಿಂದ ಹೊರತುಪಡಿಸಿ ದಾನ ನೀಡಿದ ಉಲ್ಲೇಖವಿದೆ’ ಇದು ಭೂದಾನದ ಶಾಸನವಾಗಿದೆ. ಆದರೆ ಭೂದಾನದ ಮೇರೆಗಳು ಅಳಿಸಿಹೋಗಿವೆ.

ಜೈನರ ವಸತಿ[ಬದಲಾಯಿಸಿ]

ಔರಾದದ ಅಮರೇಶ್ವರ ಕನ್ಯಾ ಪ್ರೌಢ ಶಾಲೆಯಲ್ಲಿ ದೊರೆತ ಪಾಶ್ರ್ವನಾಥ ತೀರ್ಥಂಕರರ ಪೀಠದ ಕೆಳಗಡೆ ಎರಡು ಸಾಲಿನ ಶಾಸನವೊಂದಿದ್ದು, “ನಾಗಾಂಬಿಕೇತಿ ವಿಖ್ಯಾತನಗರಮರವಾಡಿಕೇ ಪಾಶ್ರ್ವ ಚನ್ದ್ರ ಜಿನೇಂದ್ರಸ್ಯ ಕೂಟಂ” ಎಂದು ಬರೆಯಲಾಗಿದೆ. ಈ ಶಾಸನ ಕಾಲ 10ನೆಯ ಶತಮಾನವೆಂದು ಊಹಿಸಲಾಗಿದೆ. ಶಾಸನದ ಪಠ್ಯವನ್ನು ಗ್ರಹಿಸಲಾಗಿ, ‘ನಾಗಾಂಬಿಕೆ ಎನ್ನುವವಳು ವಿಖ್ಯಾತ ನಗರ ಅಮರವಾಡಿಯಲ್ಲಿ ಪಾಶ್ರ್ವನಾಥ ಬಸದಿಯನ್ನು ಕಟ್ಟಿಸಿದಂತೆ’ ತಿಳಿಸುತ್ತದೆ. ಔರಾದದ ಕೆರೆಯ ಹೂಳೆತ್ತುವ ಸಮಯದಲ್ಲಿ ದೊರೆತ ಪಾಶ್ರ್ವನಾಥ ತೀರ್ಥಂಕರರ ವಿಗ್ರಹವು ಬಹುಶಃ ಶಾಸನದಲ್ಲಿ ತಿಳಿಸಿದ ಬಸದಿಗೂ ಸಂಬಂಧವಿರುವಂತೆ ತೋರುತ್ತದೆ. ಹಾಗಿದ್ದಲ್ಲಿ, ಅಮರವಾಡಿಯು ಜೈನರ ವಸತಿ ಕೇಂದ್ರವೂ ಆಗಿರಬಹುದಾದ ಸಾಧ್ಯತೆಗಳಿವೆ.

ಕನ್ನಡ ಸಾಹಿತ್ಯ ಸಮ್ಮೇಳನ[ಬದಲಾಯಿಸಿ]

 • ಔರಾದ ತಾಲೂಕಿನ ಮೊದಲ ಕನ್ನಡ ಸಾಹಿತ್ಯ ಸಮ್ಮೇಳನವು 2004ರಲ್ಲಿ ಸಿದ್ದರಾಮ ಶರಣರು ಬೆಲ್ದಾಳ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
 • 2011ರಲ್ಲಿ ಎರಡನೇ ಸಮ್ಮೇಳನವು ಡಾ.ರಾಜೇಂದ್ರ ಯರನಾಳೆಯವರ ಅಧ್ಯಕ್ಷತೆಯಲ್ಲಿ ಜರುಗಿತ್ತು.

ಉಲ್ಲೇಖಗಳು[ಬದಲಾಯಿಸಿ]

2. Shivakumar Katte book Aurad taluka Darshan.

"https://kn.wikipedia.org/w/index.php?title=ಔರಾದ&oldid=1125798" ಇಂದ ಪಡೆಯಲ್ಪಟ್ಟಿದೆ