ನಾಂದೇಡ್
ನಾಂದೇಡ್ - ಭಾರತ ಗಣರಾಜ್ಯದ ಮಹಾರಾಷ್ಟ್ರ ರಾಜ್ಯದಲ್ಲಿ ಪಶ್ಚಿಮ ಭಾಗದ ಒಂದು ಜಿಲ್ಲೆ; ಆ ಜಿಲ್ಲೆಯ ಮುಖ್ಯಸ್ಥಳ. ನಾಂದೇಡ್ ಜಿಲ್ಲೆಯ ವಿಸ್ತೀರ್ಣ 10,492 ಚ.ಕಿ.ಮೀ. ಜನಸಂಖ್ಯೆ 13,97,762 (1971). ಜಿಲ್ಲೆಯಲ್ಲಿ ನಾಂದೇಡ್ (ಜನಸಂಖ್ಯೆ 2,71,155), ಹದಗಾಂವ್ (1,70,307), ಕಿಂವಟ್ (1,56,050), ಭೋಕರ್ (1,09,809), ಬಿಲೋಲಿ (2,22,566), ದೇಗಲೂರ್ (1,10,974), ಮುಖೇಡ್ (1,34,417) ಮತ್ತು ಕಂಧಾರ್ (2,22,484) ತಾಲ್ಲೂಕುಗಳಿವೆ. ಗೋದಾವರಿ ನದೀಕಣಿವೆಯ ಮರಾಠವಾಡಾ ವಿಭಾಗದಲ್ಲಿರುವ ನಾಂದೇಡ್ ಮಹಾರಾಷ್ಟ್ರದ ಹಿಂದುಳಿದ ಜಿಲ್ಲೆಗಳಲ್ಲೊಂದು. ಕೃಷಿ ಇಲ್ಲಿಯ ಜನರ ಮುಖ್ಯ ಕಸುಬು. ಜೋಳ, ಬತ್ತ ಮುಖ್ಯ ಬೆಳೆಗಳು. ಹತ್ತಿ ಒಂದು ಮುಖ್ಯ ಹಣಬೆಳೆ. ಇಲ್ಲಿಯ ಜನ ದನಕರುಗಳನ್ನು ಹೆಚ್ಚಾಗಿ ಸಾಕುತ್ತಾರೆ. ಹತ್ತಿ ಹಿಂಜುವುದು ಮತ್ತು ಎಣ್ಣೆ ತೆಗೆಯುವುದು ಪ್ರಮುಖ ಕೈಗಾರಿಕೆಗಳು.
ಇಲ್ಲಿ ಮರಾಠವಾಡಾ ವಿಶ್ವವಿದ್ಯಾಲಯಕ್ಕೆ ಸೇರಿದ ನಾಲ್ಕು ಕಾಲೇಜುಗಳು ಇವೆ. ಈ ನಗರದ ಜನಸಂಖ್ಯೆ 1,26,538 (1971). ನಾಂದೇಡದಲ್ಲಿ ಉತ್ತಮ ಮಲ್‍ಮಲ್ ಮತ್ತು ಜರಿ ಬಟ್ಟೆಗಳನ್ನು ನೇಯುತ್ತಾರೆ.
ಇತಿಹಾಸ
[ಬದಲಾಯಿಸಿ]ಈ ಜಿಲ್ಲೆಯ ಭೂಭಾಗವನ್ನು ವಾಕಾಟಕ, ಬಾದಾಮಿ ಚಾಳುಕ್ಯ, ರಾಷ್ಟ್ರಕೂಟ, ಕಲ್ಯಾಣಿ ಚಾಳುಕ್ಯ, ಸೇಉಣ, ತುಗಲಕ್, ಬಹಮನಿ ಬರೀದ್‍ಶಾಹಿ, ಕುತುಬ್‍ಶಾಹಿ, ಮೊಗಲ್ ಮತ್ತು ಅಸಿಫ್‍ಜಾಹಿ ರಾಜರು ಆಳಿದರು. ನಿಜಾóಮನ ಆಡಳಿತದ ಕಾಲದಲ್ಲಿ ನಾಂದೇಡ್ ಜಿಲ್ಲೆಗೆ ಈಗಿನ ಮೇರೆಗಳು ಬಂದುವು.
ನಾಂದೇಡ್ ನಗರ ಗೋದಾವರಿ ನದಿಯ ಉತ್ತರ ದಡದಲ್ಲಿದೆ. ಪ್ರಾಚೀನ ಕಾಲದಿಂದಲೂ ಅದೊಂದು ಪ್ರಸಿದ್ಧ ಧಾರ್ಮಿಕ ತೀರ್ಥಕ್ಷೇತ್ರ. ನಾಂದೀತಟ ಎಂಬುದು ಅದರ ಪುರಾತನ ಹೆಸರು. ಗೋದಾವರಿ ಮಹಾತ್ಮೆ, ಬಾಸಿಮ್ ತಾಮ್ರಪಟಗಳು, ಕಂಧಾರದ ರಾಷ್ಟ್ರಕೂಟ ಶಿಲಾಶಾಸನ ಇವುಗಳಲ್ಲಿ ನಾಂದೀತಟದ ಉಲ್ಲೇಖವಿದೆ. ಕಲ್ಯಾಣದ ರಾಜಾ ಆನಂದ ದೊರೆಯೆಂಬವನು ರಾಜಧಾನಿಯನ್ನು ಕಲ್ಯಾಣದಿಂದ ಇಲ್ಲಿಗೆ ವರ್ಗಾಯಿಸುವ ಉದ್ದೇಶದಿಂದ ಇಲ್ಲೊಂದು ಕೋಟೆಯನ್ನು ಕಟ್ಟಿಸಿ, ತಟಾಕವನ್ನು ಮಾಡಿಸಿ ಇಲ್ಲಿ ಜನವಸತಿ ಏರ್ಪಡಿಸಿದನೆಂದು ಪ್ರತೀತಿ. ಗೋದಾವರಿ ನದಿಯ ನಾಭಿಸ್ಥಾನವೆಂದು ಇದಕ್ಕೆ ವಿಶೇಷ ಮಾನ್ಯತೆಯಿದೆ. ಪುಣ್ಯೋದಯ, ನಂದಿಗಿರಿ, ನಂದೇಡ್ ಎಂಬ ಹೆಸರುಗಳೂ ಈ ನಗರಕ್ಕೆ ಇದ್ದುದಾಗಿ ತಿಳಿದುಬರುತ್ತದೆ. ಪ್ರಾಚೀನ ಕಾಲದಲ್ಲಿ ಇದೊಂದು ವಿದ್ಯಾಕೇಂದ್ರವಾಗಿತ್ತು. ಇಲ್ಲಿಯ ಶೇಷ ಘರಾಣೆ ಪ್ರಸಿದ್ಧವಾದುದ್ದು. ವಾಮನ ಪಂಡಿತ, ರಘುನಾಥ ಶೇಷ ಮುಂತಾದ ಪ್ರಸಿದ್ಧ ಲೇಖಕರು ಇಲ್ಲಿಯವರು. ಮಹಾನುಭಾವ ಪಂಥದ ಚಕ್ರಧರಸ್ವಾಮಿ ಸ್ವಲ್ಪ ಕಾಲ ಇಲ್ಲಿದ್ದುದಾಗಿ ಹೇಳಲಾಗಿದೆ. ನರಸಿಂಹಸ್ವಾಮಿ ದೇವಸ್ಥಾನ, ಸಿದ್ಧನಾಥಪುರಿಯಲ್ಲಿರುವ ಶೃಂಗೇರಿ ಪೀಠದ ಒಂದು ಶಾಖಾ ಮಠ ಇವು ಇಲ್ಲಿರುವ ಹಿಂದೂ ಧಾರ್ಮಿಕ ಕೇಂದ್ರಗಳು. ವೈದಿಕ, ಬೌದ್ಧ, ಜೈನ ಮಂದಿರಗಳು ಮಧ್ಯಕಾಲದ ಕುರುಹುಗಳಾಗಿ ಇನ್ನೂ ಉಳಿದಿವೆ.
ಅಲ್ಲಾ-ಉದ್-ದೀನ್ ಖಲ್ಜಿ, ಮುಹಮ್ಮದ್ ತುಗಲಕ್ ಮತ್ತು ಬಹಮನಿ ರಾಜರುಗಳ ಕಾಲದಲ್ಲಿ ಉತ್ತರ ಹಾಗೂ ದಕ್ಷಿಣ ಭಾರತದ ಮಧ್ಯೆ ಸಂಪರ್ಕ ಕಲ್ಪಿಸುವ ಸ್ಥಳಗಳ ಪೈಕಿ ನಾಂದೇಡಕ್ಕೆ ಹೆಚ್ಚು ಪ್ರಾಮುಖ್ಯವಿತ್ತು. ಈ ಕಾಲದಲ್ಲಿ ಅನೇಕ ಮುಸಲ್ಮಾನ ಸಂತರು ಇಲ್ಲಿದ್ದರು. ಕುತುಬ್‍ಶಾಹಿ ದೊರೆಗಳು ಕಟ್ಟಿಸಿದ ಎರಡು ಮಸೀದಿಗಳು ಇನ್ನೂ ಇಲ್ಲಿ ಸುಸ್ಥಿತಿಯಲ್ಲಿವೆ.
ಸಿಖ್ಖರ ಪವಿತ್ರಕ್ಷೇತ್ರ ನಾಂದೇಡ್, ಔರಂಗ್‍ಜೇಬ್ ಚಕ್ರವರ್ತಿಯ ತರುವಾಯ 1ನೆಯ ಬಹಾದುರ್ ಶಾಹನ ಕಾಲದಲ್ಲಿ ಸಿಖ್ ಗುರು ಗೋವಿಂದ ಸಿಂಹ ದಕ್ಷಿಣ ಭಾರತಕ್ಕೆ ಬಂದಿದ್ದ. ಆತ ನಾಂದೇಡದಲ್ಲಿ ಬಂದಾ ಬೈರಾಗಿಯನ್ನು (ಮಾಧೊದಾಸ್ ಬೈರಾಗಿ) ಭೇಟಿಯಾದ. ಗೋವಿಂದಸಿಂಹ ಆ ಗುರುವಿನ ಸಂಗದಲ್ಲೇ ತನ್ನ ಅಂತ್ಯಕಾಲದವರೆಗೆ ವಾಸಿಸುದ್ದ. 1708ರಲ್ಲಿ ಗುರು ಗೋವಿಂದಸಿಂಹ ಪಠಾಣನೊಬ್ಬನಿಂದ ಹತ್ಯೆಗೆ ಒಳಗಾದ. ಸಿಖ್ಖರು ಆತನ ದೇಹಕ್ಕೆ ಸಂಸ್ಕಾರ ಮಾಡಿದ ಸ್ಥಳದಲ್ಲಿ ಒಂದು ಸಮಾಧಿಯನ್ನು ಕಟ್ಟಿದರು. 1831ರಲ್ಲಿ ಮಹಾರಾಜ ರಣಜಿತ ಸಿಂಗ್ ಇಲ್ಲಿ ಅಮೃತಶಿಲೆಯ ಒಂದು ದೊಡ್ಡ ಗುರುದ್ವಾರವನ್ನು ನಿರ್ಮಿಸಿದ. ಇದರ ಮೇಲೆ ಶ್ರೀ ಹುಜûೂರ್ ಎಂದು ಬರೆದಿದೆ. ಖಾಲ್‍ಸಾ ಪಂಥದ ನಾಲ್ಕನೆಯ ಪೀಠ (ತಖ್ತ) ಎಂದು ನಾಂದೇಡನ್ನು ಸಿಖ್ ಜನ ಪರಿಗಣಿಸುತ್ತಾರೆ. ಗುರು ಗೋವಿಂದಸಿಂಹನಿಗೆ ಸಂಬಂಧಪಟ್ಟ ಇಲ್ಲಿಯ ಇತರ ಮುಖ್ಯ ಸ್ಥಳಗಳೆಂದರೆ ಹೀರಾಘಾಟ್, ಶಿಖರಘಾಟ್, ಮಾತಾ ಸಾಹಿಬಾ, ಸಂಗತ್ ಸಾಹೇಬ್, ಮಾಲ್ ಟೇಕರಿ, ಬಂದಾ ಘಾಟ್, ನಗೀನ್ ಘಾಟ್.
ಇತರ ಮುಖ್ಯ ಐತಿಹಾಸಿಕ ಸ್ಥಳಗಳು
[ಬದಲಾಯಿಸಿ]ನಾಂದೇಡ್ ಜಿಲ್ಲೆಯ ಇತರ ಮುಖ್ಯ ಐತಿಹಾಸಿಕ ಸ್ಥಳಗಳು ಕಂಧಾರ್, ತಡ್‍ಖೇಲ್, ಏಕ್ಲಾರಾ, ಕರಡ್‍ಖೇಡ್, ಯೇರಗಿ, ಉಂಕೇಶ್ವರ್ ಮತ್ತು ಅರ್ಧಾಪುರ್.
ಕಂಧಾರ್ (ಜನಸಂಖ್ಯೆ 9,221) ರಾಷ್ಟ್ರಕೂಟರ ಒಂದು ರಾಜಧಾನಿಯಾಗಿತ್ತು. ಸೌಂದತ್ತಿಯ ರಟ್ಟರ ಶಾಸನವೊಂದರಲ್ಲಿ ಬರುವ ಕಂಧಾರಪುರವೇ ಇದು. ಆಗಿನ ಕಾಲದಲ್ಲಿ ಇದೊಂದು ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿತ್ತು. ಕಾಲಪ್ರಿಯ, ಕೃಷ್ಣೇಶ್ವರ, ಬಂಕೇಶ್ವರ, ಚಲ್ಲೇಶ್ವರ, ತುಡಿಗೇಶ್ವರ, ಗೊಜ್ಜಿಗ ಸೋಮನಾಥ, ತುಂಬೇಶ್ವರ, ಕಾಮದೇವಾಯತನ ಮುಂತಾಗಿ ಅನೇಕ ದೇವಾಲಯಗಳು ಇಲ್ಲಿದ್ದುವು. ಇಲ್ಲಿಯ ಕಾಲಪ್ರಿಯನಾಥ ದೇವಸ್ಥಾನ ಬಹು ಪ್ರಸಿದ್ಧ. ಭವಭೂತಿ ಕವಿ ತನ್ನ ಮೂರು ನಾಟಕಗಳನ್ನು ಈ ದೇವರ ಜಾತ್ರೆಯಲ್ಲಿ ಪ್ರದರ್ಶಿಸಿದುದಾಗಿ ಹೇಳಲಾಗಿದೆ. ಪಂಪನ ವಿಕ್ರಮಾರ್ಜುನ ವಿಜಯ ಗ್ರಂಥದಲ್ಲೂ ಕಾಳಪ್ರಿಯ ದೇವಸ್ಥಾನದ ಉಲ್ಲೇಖವಿದೆ.
ತಡ್‍ಖೇಲದ ಮೂಲ ಹೆಸರು ತಡಕಲ್ಲು. ಕಲ್ಯಾಣಿ ಚಾಳುಕ್ಯ ದೊರೆ 1ನೆಯ ಸೋಮೇಶ್ವರನ ಕಾಲದಲ್ಲಿ ದಂಡನಾಯಕ ನಾಗವರ್ಮನಿಗೆ ಇದನ್ನೂ ಇದರ ಸುತ್ತಮುತ್ತಲ ಪ್ರದೇಶವನ್ನೂ ಮಾನ್ಯವಾಗಿ ಕೊಡಲಾಗಿತ್ತು. ಆತ ಇಲ್ಲಿ ನಾರಾಯಣ, ಆದಿತ್ಯ, ಐಚೇಶ್ವರ, ನಾಗೇಶ್ವರ, ಭೈರವ, ಗಣಪತಿ, ನಂದಿ, ನಾಗ, ಸಪ್ತಮಾತೃಕೆಯರು ಮುಂತಾಗಿ ಅನೇಕ ದೇವತೆಗಳನ್ನು ಪ್ರತಿಷ್ಠಾಪಿಸಿ ದೇವಾಲಯಗಳನ್ನು ಕಟ್ಟಿಸಿ ಅವನ್ನು ನಡೆಸಿಕೊಂಡು ಹೋಗಲು ಅನೇಕ ದಾನಗಳನ್ನು ಬಿಟ್ಟುದಾಗಿ ತಿಳಿದುಬರುತ್ತದೆ. ಈಗ ಮಲ್ಲಯ್ಯನ ದೇವಸ್ಥಾನವೊಂದು ಉಳಿದಿದೆ. ಅದು ಭಗ್ನಾವಸ್ಥೆಯಲ್ಲಿದೆ.
ಏಕೂರಾದ ಮೂಲ ಹೆಸರು ವೊಕ್ಕಲಗಾವೆ. ಇಲ್ಲಿ ಮಲ್ಲಗಾವುಂಡ ಎಂಬ ವ್ಯಕ್ತಿ ಮಲ್ಲೇಶ್ವರ ದೇವಸ್ಥಾನವನ್ನು 1049ರಲ್ಲಿ ಕಟ್ಟಿಸಿದ. ಕರಡ್‍ಖೇಡದ ಮೂಲ ಹೆಸರು ಕರಡಿಕಲ್ಲು. ಇಲ್ಲಿಯ ಪ್ರಸಿದ್ಧ ಸೋಮೇಶ್ವರ ದೇವಾಲಯವನ್ನು ವಹ್ನಿ ಕುಲದ ಕರ್ಕದೊರೆ 1079ರಲ್ಲಿ ಕಟ್ಟಿಸಿದ. ಆತ ತನ್ನ ಪಿತೃಗಳ ಹೆಸರಿನಲ್ಲಿ ಧೋರೇಶ್ವರ ಕಲಿಚೋರೇಶ್ವರ ದೇವಸ್ಥಾನಗಳನ್ನೂ ಕಟ್ಟಿಸಿದ. ಭೈರವೇಶ್ವರ ಹಾಗೂ ನಿಗಳಂಕಮಲ್ಲ ಜಿನಾಲಯಗಳು ಇಲ್ಲಿದ್ದುದಾಗಿ ತಿಳಿದುಬಂದಿದೆ.
ಯೇರಗಿ ದೇಗಲೂರ್ ತಾಲ್ಲೂಕಿನಲ್ಲಿದೆ. ಕಲ್ಯಾಣಿ ಚಾಳುಕ್ಯ ದೊರೆ ಭೂಲೋಕಮಲ್ಲನ ಕಾಲಕ್ಕೆ ಇದೊಂದು ದೊಡ್ಡ ವಿದ್ಯಾಕೇಂದ್ರವಾಗಿತ್ತು. ಇಲ್ಲಿಯ ಕೇಶವ ದೇವಸ್ಥಾನ ಒಂದು ಘಟಿಕಾಸ್ಥಾನವಾಗಿತ್ತು. ಈ ಊರು ಒಂದು ಮಹಾಗ್ರಹಾರವಾಗಿತ್ತು.
ಪೌರಾಣಿಕ ಕಥೆಯೊಂದರ ಪ್ರಕಾರ ಉಂಕೇಶ್ವರದಲ್ಲಿ ತ್ರೇತಾಯುಗದಲ್ಲಿ ಶರಭಂಗ ಮುನಿಯ ಆಶ್ರಮವಿತ್ತು. ಈ ವಿಷಯ ಇಲ್ಲಿನ ಮರಾಠಿ ಶಾಸನದಲ್ಲೂ ಬಂದಿದೆ. ಸೇಉಣ ರಾಮಚಂದ್ರನ ಅಧಿಕಾರಿಯೊಬ್ಬ ಇಲ್ಲಿ ದೇವಾಲಯ ಕಟ್ಟಿಸಿದುದಾಗಿ ತಿಳಿದುಬರುತ್ತದೆ.
ಅರ್ಧಾಪುರ ಸೇಉಣರ ಕಾಲದಲ್ಲಿ ಪ್ರಸಿದ್ಧ ಧಾರ್ಮಿಕ ಕೇಂದ್ರವಾಗಿತ್ತು. ರಾಷ್ಟ್ರಕೂಟ ಮಾಂಡಲಿಕ ಮನೆತನವೊಂದು ಇಲ್ಲಿತ್ತು. ಇವರನ್ನು ಅಮರ್ದಕಪುರವರಾಧೀಶ್ವರರೆಂದು ಇಲ್ಲಿಯ ಶಾಸನವೊಂದರಲ್ಲಿ ಬರೆದಿದೆ. ಮಲ್ಲಿಕಾರ್ಜುನ, ಸಿದ್ಧೇಶ್ವರ, ಇಂದ್ರೇಶ್ವರ, ಕೇದಾರದೇವ, ಭೀಮೇಶ್ವರ, ವಿಶ್ವೇಶ್ವರ, ನಾಗೇಶ್ವರ, ಸಕಲೇರ್ಶವರ, ರಾಜೇಶ್ವರ, ಸೋಮನಾಥ, ನರಸಿಂಹ, ಶುಭನಾರಾಯಣ, ವಿನಾಯಕ, ಚಂಡಿಕಾದೇವಿ ದೇವಸ್ಥಾನಗಳು ಇಲ್ಲಿದ್ದುವೆಂದು ಶಾಸನಗಳಲ್ಲಿ ಬರೆದಿದೆ. 16 ಕಂಬಗಳ ಕೇಶವ ದೇವಸ್ಥಾನ ಈಗಿರುವ ದೇವಸ್ಥಾನಗಳಲ್ಲಿ ಅತ್ಯಂತ ಸುಂದರವಾದ್ದು. ಇಲ್ಲಿಯ ವಿಷ್ಣುವಿಗ್ರಹವನ್ನು ಕರಿಯ ಕಲ್ಲಿನಲ್ಲಿ ಕಂಡರಿಸಿದೆ. ಮೂರ್ತಿ 4 ಅಡಿ ಎತ್ತರ ಇದೆ. ಪೀಠದಲ್ಲಿ ವಿಷ್ಣುವಿನ ಅವತಾರಗಳನ್ನು ಬಹು ಸುಂದರವಾಗಿ ಕೆತ್ತಿದ್ದಾರೆ. ಅಕ್ಕಪಕ್ಕದಲ್ಲಿ ಸ್ತ್ರೀ ಸೇವಕಿಯರನ್ನೂ ಮಧ್ಯದಲ್ಲಿ ಗರುಡ ಹಾಗೂ ಆಂಜನೇಯರನ್ನೂ ಕೆತ್ತಿದೆ. ಈ ಹಿಂದೂ ದೇವತೆಗಳಲ್ಲದೆ ಜೈನರ ಋಷಭ ತೀರ್ಥಂಕರನ 5 ಅಡಿ ಎತ್ತರದ ವಿಗ್ರಹವೊಂದಿದೆ.