ವಿಷಯಕ್ಕೆ ಹೋಗು

ಆಲಿಸೈಕ್ಲಿಕ್ ಸಂಯುಕ್ತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಆಲಿಸೈಕ್ಲಿಕ್ ಸಂಯುಕ್ತಗಳು ಚಕ್ರೀಯ ಸಾವಯವ ಸಂಯುಕ್ತಗಳ ಒಂದು ಗುಂಪು.[೧]

ಹಿನ್ನೆಲೆ[ಬದಲಾಯಿಸಿ]

ಚಕ್ರೀಯ ರಚನೆಯಿರುವ (ಸೈಕ್ಲಿಕ್ ಸ್ಟ್ರಕ್ಚರ್) ಸಾವಯವ ಸಂಯುಕ್ತಗಳಲ್ಲಿ ಮುಖ್ಯವಾಗಿ ಎರಡು ವಿಧ. ಅಣುರಚನೆಯಲ್ಲಿ ಇಂಗಾಲ (ಕಾರ್ಬನ್) ಪರಮಾಣುಗಳಿಂದಲೇ ಆದ ಚಕ್ರಗಳಿದ್ದರೆ ಅವನ್ನು ಬರೀ ಇಂಗಾಲಚಕ್ರೀಯ (ಕಾರ್ಬೊಸೈಕ್ಲಿಕ್) ಸಂಯುಕ್ತಗಳೆಂದೂ ಚಕ್ರಗಳನ್ನು ರೂಪಿಸಿರುವ ಪರಮಾಣುಗಳಲ್ಲಿ ಇಂಗಾಲೇತರ ಪರಮಾಣುಗಳೂ (ಸಾಮಾನ್ಯವಾಗಿ O, S, N) ಇದ್ದರೆ ಅವನ್ನು ವಿದೃಶಚಕ್ರೀಯ (ಹೆಟರೊಸೈಕ್ಲಿಕ್) ಸಂಯುಕ್ತಗಳೆಂದೂ ಕರೆಯುತ್ತಾರೆ. ಇಂಗಾಲಚಕ್ರೀಯ ಸಂಯುಕ್ತಗಳಲ್ಲಿ ಬೆಂಜ಼ೀನ್ ಮತ್ತು ಅದರಿಂದ ಜನ್ಯವಾದ ಸಂಯುಕ್ತಗಳು ತಮ್ಮದೇ ಆದ ವಿಶೇಷ ಗುಣಲಕ್ಷಣಗಳನ್ನು ತೋರುವುದರಿಂದ ಅವನ್ನೇ ಬೇರೊಂದು ಗುಂಪಾಗಿ ಪರಿಗಣಿಸಿ ಆರೊಮ್ಯಾಟಿಕ್ ಸಂಯುಕ್ತಗಳೆಂದು ಕರೆದು ಉಳಿದ ಎಲ್ಲ ಇಂಗಾಲ ಚಕ್ರೀಯ ಸಂಯುಕ್ತಗಳನ್ನೂ ಒಟ್ಟುಗೂಡಿಸಿ ಆಲಿಸೈಕ್ಲಿಕ್ ಸಂಯುಕ್ತಗಳೆಂದು ಕರೆಯುವುದು ಪದ್ಧತಿ.[೨]

ನಾಮಕರಣ[ಬದಲಾಯಿಸಿ]

ಇವು ರಾಸಾಯನಿಕವಾಗಿ ಬಲುಮಟ್ಟಿಗೆ ಆಲಿಫ್ಯಾಟಿಕ್ ಸಂಯುಕ್ತಗಳನ್ನೇ ಹೋಲುವ ಆದರೆ ಚಕ್ರೀಯ ರಚನೆಯಿರುವ ಸಂಯುಕ್ತಗಳಾದುದರಿಂದ ಇವುಗಳಿಗೆ ಈ ಹೆಸರು. ಈ ಸಂಯುಕ್ತಗಳಿಗೆ ಹೆಸರು ಕೊಡುವಾಗ ಸಹ ಚಕ್ರದಲ್ಲಿರುವ ಇಂಗಾಲ ಪರಮಾಣುಗಳ ಸಂಖ್ಯೆಯಷ್ಟೇ ಇಂಗಾಲ ಪರಮಾಣುಗಳಿರುವ ಆಲಿಫ್ಯಾಟಿಕ್ ಸಂಯುಕ್ತಗಳ ಹೆಸರನ್ನು ಆರಿಸಿಕೊಂಡು, ಅದಕ್ಕೆ ಸೈಕ್ಲೊ ಎಂಬ ಪೂರ್ವಪ್ರತ್ಯಯ ಸೇರಿಸುತ್ತಾರೆ.

ಸೈಕ್ಲೋಪ್ರೊಪೇನ್

ಚಕ್ರಗಳನ್ನು ಒಡೆಯುವ ಕ್ಲಿಷ್ಟತೆ[ಬದಲಾಯಿಸಿ]

ರಾಸಾಯನಿಕ ಗುಣಲಕ್ಷಣಗಳಲ್ಲಿ ಆಲಿಸೈಕ್ಲಿಕ್ ಸಂಯುಕ್ತಗಳು ಬಲುಮಟ್ಟಿಗೆ ಅವಕ್ಕೆ ಅನುರೂಪವಾದ ಆಲಿಫ್ಯಾಟಿಕ್ ಸಂಯುಕ್ತಗಳನ್ನೇ ಹೋಲುತ್ತವೆ. ಕೆಲವೊಂದು ಸಂಕಲನ ಕ್ರಿಯೆಗಳು (ಅಡಿಷನ್ ರಿಯಾಕ್ಷನ್ಸ್) ನಡೆದಾಗ ಚಕ್ರ ಒಡೆದು ತೆರೆದ ಸರಣಿ ಸಂಯುಕ್ತಗಳು ಉತ್ಪತ್ತಿಯಾಗುತ್ತವೆ. ಚಕ್ರದಲ್ಲಿ ಮೂರೇ ಇಂಗಾಲ ಪರಮಾಣುಗಳಿರುವ ಸೈಕ್ಲೊಪ್ರೋಪೇನ್ ಚಕ್ರ ಈ ರೀತಿ ಸುಲಭವಾಗಿ ಒಡೆಯುತ್ತದೆ. ನಾಲ್ಕು ಪರಮಾಣುಗಳಿರುವ ಚಕ್ರವನ್ನು ಒಡೆಯುವುದು ಹೆಚ್ಚು ಕಷ್ಟ. ಐದು ಪರಮಾಣುಗಳಿರುವ ಚಕ್ರವನ್ನೊಡೆಯುವುದು ಇನ್ನೂ ಕಷ್ಟ. ಕಡಿಮೆ ಸಂಖ್ಯೆಯ ಪರಮಾಣುಗಳಿರುವ ಚಕ್ರಗಳ ಇಂಥ ಹೆಚ್ಚಿನ ಅಸ್ಥಿರತೆಗೆ ಕಾರಣ ಏನೆಂದರೆ ಈ ಚಕ್ರಗಳು ರೂಪುಗೊಳ್ಳುವಾಗ ಇಂಗಾಲ ಪರಮಾಣುವಿನ ವೇಲೆನ್ಸಿ ಬಂಧಗಳು ಬಲವಂತವಾಗಿ ಒಂದರ ಕಡೆಗೊಂದು ಬಗ್ಗಿಕೊಂಡು ಅವುಗಳ ನಡುವಣ ಕೋನ ಸಹಜವಾಗಿರಬೇಕಾದ ಕೋನಕ್ಕಿಂತ ಕಡಿಮೆಯಿರುತ್ತದೆ.

ಉದಾಹರಣೆಗೆ ಸೈಕ್ಲೊಪ್ರೋಪೇನಿನಲ್ಲಿ ಚಕ್ರ ತ್ರಿಕೋನಾಕೃತಿ ಹೊಂದಿದ್ದು ಇಂಗಾಲ ಪರಮಾಣುವಿನ ಎರಡು ವೇಲೆನ್ಸಿ ಬಂಧಗಳ ನಡುವೆ ಇರುವ 600 ಕೋನ ಅವುಗಳ ಸಹಜ ಕೋನವಾದ 109º28'ಗಿಂತ ಬಲು ಕಡಿಮೆ ಇದೆ.

ಇದಕ್ಕೆ ಹೋಲಿಸಿದರೆ ಸೈಕ್ಲೊಬ್ಯೂಟೇನ್‌ನಲ್ಲಿರುವ 900 ಕೋನ ಅಷ್ಟು ಹೆಚ್ಚಿನ ಅಸ್ಥಿರತೆಯನ್ನುಂಟು ಮಾಡುವುದಿಲ್ಲ. ಸೈಕ್ಲೊಪೆಂಟೇನಿನಲ್ಲಿಯಾದರೂ ಇಂಗಾಲದ ವೇಲೆನ್ಸಿ ಬಂಧಗಳ ನಡುವಣ ಕೋನ 1080 ಇದ್ದು ಸಹಜ ಕೋನಕ್ಕೆ ಅತ್ಯಂತ ಸಮೀಪವಾಗಿದೆ.

ಸೈಕ್ಲೋಬ್ಯೂಟೇನ್
ಸೈಕ್ಲೋಪೆಂಟೇನ್

ಇಂಗಾಲ ಚಕ್ರ ಇನ್ನೂ ದೊಡ್ಡದಾಗುತ್ತ ಹೋದಂತೆ ಇನ್ನೊಂದು ಹೊಸ ಪರಿಸ್ಥಿತಿ ಉದ್ಭವಿಸುತ್ತದೆ; ಚಕ್ರ ಒಂದೇ ಸಮತಲದಲ್ಲಿ ಉಳಿಯದೆ ಮಡಿಸಿಕೊಳ್ಳುವ ಸಾಮರ್ಥ್ಯ ಪಡೆಯುತ್ತದೆ.

ಹಾಗೆ ಮಡಿಸಿಕೊಳ್ಳುವಾಗ ವೇಲೆನ್ಸಿ ಬಂಧಗಳು ತಮಗೆ ಸೂಕ್ತವಾದ ದಿಕ್ಕುಗಳಲ್ಲಿ ನೆಲೆಸುವಂತೆಯೇ ಚಕ್ರದ ಮಡಿಕೆ ಉಂಟಾಗುವುದರಿಂದ ಅಣುವಿನ ಸ್ಥಿರತೆಗೆ ಭಂಗ ಬರುವುದಿಲ್ಲ. ಆದ್ದರಿಂದ ದೊಡ್ಡ ಚಕ್ರಗಳುಳ್ಳ ಆಲಿಸೈಕ್ಲಿಕ್ ಸಂಯುಕ್ತಗಳು ಹೆಚ್ಚಿನ ಸ್ಥಿರತೆಯುಳ್ಳವು.

ಈ ಸಂದರ್ಭದಲ್ಲಿ ಪುನುಗು ಮತ್ತು ಕಸ್ತೂರಿಗಳ ಸುವಾಸನೆಗೆ ಕಾರಣವಾದ ಎರಡು ನಿಸರ್ಗದತ್ತವಾದ ವಿಶಾಲ ಚಕ್ರೀಯ (ಲಾರ್ಜ್ ರಿಂಗ್) ಸಂಯುಕ್ತಗಳನ್ನು ಹೆಸರಿಸಬಹುದು.

ಐದು ಮತ್ತು ಆರು ಪರಮಾಣುಗಳಿರುವ ಆಲಿಸೈಕ್ಲಿಕ್ ಹೈಡ್ರೊಕಾರ್ಬನ್ನುಗಳು ಕೆಲವು ಪ್ರದೇಶಗಳಲ್ಲಿ ದೊರೆಯುವ ಪೆಟ್ರೋಲಿಯಂನಲ್ಲಿ ದೊರೆಯುತ್ತವೆ.

ಇವು ಬಲುಮಟ್ಟಿಗೆ ಪರ್ಯಾಪ್ತ (ಸ್ಯಾಚುರೇಟೆಡ್) ಹೈಡ್ರೊಕಾರ್ಬನ್ನುಗಳಾದುದರಿಂದ ಇವುಗಳನ್ನು ಸೈಕ್ಲೊಪ್ಯಾರಾಫಿನ್ನುಗಳೆಂದು ಕರೆಯುತ್ತಾರೆ.

ಟರ್ಪೀನುಗಳು[ಬದಲಾಯಿಸಿ]

ನಿಸರ್ಗದಲ್ಲಿ ದೊರೆಯುವ ಅತ್ಯಂತ ಮುಖ್ಯವಾದ ಆಲಿಸೈಕ್ಲಿಕ್ ಸಂಯುಕ್ತಗಳೆಂದರೆ ಟರ್ಪೀನುಗಳು. ಸಸ್ಯಗಳ ತೊಗಟೆ, ಎಲೆ, ಹೂಗಳಲ್ಲಿ ಕಂಡುಬರುವ, ಸಾಮಾನ್ಯವಾಗಿ ಸುಲಭವಾಗಿ ಆವಿಯಾಗಬಲ್ಲ ಮತ್ತು ದಟ್ಟ ವಾಸನೆಯುಳ್ಳ ತೈಲಗಳನ್ನು ಚಂಚಲ ತೈಲಗಳು (ವಾಲಟೈಲ್ ಆಯಿಲ್ಸ್, ಎಸೆನ್ಷಿಯಲ್ ಆಯಿಲ್ಸ್) ಎಂದು ಕರೆಯುತ್ತಾರೆ. ಗಂಧದ ಎಣ್ಣೆ, ಟರ್ಪಂಟೈನ್, ನೀಲಗಿರಿ ಎಣ್ಣೆ, ಹೂಗಳಿಂದ ತೆಗೆಯುವ ಸುಗಂಧ ತೈಲಗಳು, ಮೊದಲಾದ ಈ ಬಗೆಯ ತೈಲಗಳಲ್ಲಿರುವ ಮುಖ್ಯ ರಾಸಾಯನಿಕ ಘಟಕಗಳೇ ಈ ಟರ್ಪೀನುಗಳು. ಟರ್ಪೀನುಗಳಲ್ಲಿ ಮೂರು, ನಾಲ್ಕು, ಐದು ಮತ್ತು ಆರು ಇಂಗಾಲ ಪರಮಾಣುಗಳುಳ್ಳ ಚಕ್ರಗಳು ಕಂಡುಬಂದಿವೆ. ಅಣುವಿನಲ್ಲಿ ಒಂದೇ ಚಕ್ರವಿರುವ ಟರ್ಪೀನುಗಳೂ ಇವೆ. ಎರಡು ಮತ್ತು ಮೂರು ಚಕ್ರಗಳು ಒಂದರೊಡನೊಂದು ಸೇರಿಕೊಂಡಿರುವ ದ್ವಿಚಕ್ರೀಯ ಮತ್ತು ತ್ರಿಚಕ್ರೀಯ (ಬೈಸೈಕ್ಲಿಕ್ ಮತ್ತು ಟ್ರೈಸೈಕ್ಲಿಕ್) ಟರ್ಪೀನುಗಳೂ ಇವೆ. ಈ ವಿವಿಧ ವರ್ಗಗಳ ಹೈಡ್ರೊಕಾರ್ಬನ್ನುಗಳೂ ಅವುಗಳಿಂದ ಜನ್ಯವಾದ ಆಲ್ಕೊಹಾಲ್, ಆಲ್ಡಿಹೈಡು ಮತ್ತು ಕೀಟೋನುಗಳೂ ಟರ್ಪೀನುಗಳಲ್ಲಿ ಕಂಡುಬರುತ್ತವೆ.

ಸ್ಟೆರಾಯ್ಡ್‌ಗಳು[ಬದಲಾಯಿಸಿ]

ನೈಸರ್ಗಿಕವಾಗಿ ದೊರೆಯುವ ಆಲಿಸೈಕ್ಲಿಕ್ ಸಂಯುಕ್ತಗಳ ಇನ್ನೊಂದು ಮುಖ್ಯ ಗುಂಪು ಸ್ಟೆರಾಯ್ಡ್‌ಗಳು. ಸಸ್ಯಮೂಲದಿಂದ ಬರುವ ಸ್ಥಿರತೈಲಗಳಲ್ಲಿ (ಫಿಕ್ಸೆಡ್ ಆಯಿಲ್ಸ್) ಕಾಣಬರುವ ಸ್ಟಿಗ್ಮ ಸ್ಟೆರಾಲ್, ಪ್ರಾಣಿಮೂಲ ಕೊಬ್ಬುಗಳಲ್ಲಿರುವ ಕೊಲೆಸ್ಟೆರಾಲ್ ಎರ್ಗೊಸ್ಟೆರಾಲ್‌ಗಳು, ವಿಟಮಿನ್ ಡಿ, ಲೈಂಗಿಕ ಹಾರ್ಮೋನುಗಳಾದ ಎಸ್ಟ್ರಡಯಾಲ್, ಟೆಸ್ಟೊಸ್ಟೆರೋನ್‌ಗಳು, ಸಂಧಿವಾತ ಮೊದಲಾದ ರೋಗಗಳ ಚಿಕಿತ್ಸೆಯಲ್ಲಿ ಬಳಸುವ ಕಾರ್ಟಿಸೋನ್ ಇವೆಲ್ಲವೂ ಸ್ಟೆರಾಯ್ಡ್‌ಗಳು.

ಉಲ್ಲೇಖಗಳು[ಬದಲಾಯಿಸಿ]

  1. Britannica, The Editors of Encyclopaedia. "alicyclic compound". Encyclopedia Britannica, 20 Jul. 1998, https://www.britannica.com/science/alicyclic-compound. Accessed 20 March 2023.
  2. IUPAC, Compendium of Chemical Terminology, 2nd ed. (the "Gold Book") (1997). Online corrected version: (1995) "Alicyclic compounds". doi:10.1351/goldbook.A00216