ವಿಷಯಕ್ಕೆ ಹೋಗು

ಕೃಷ್ಣಾ (ಗೋವಿನ ತಳಿ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕೃಷ್ಣಾ
ತಳಿಯ ಹೆಸರುಕೃಷ್ಣಾ
ಮೂಲಮಹಾರಾಷ್ಟ್ರ ಮತ್ತು ಕರ್ನಾಟಕದ ಗಡಿಪ್ರದೇಶಗಳು
ವಿಭಾಗಕೆಲಸಗಾರ ಹಾಗೂ ಹಾಲಿನ ತಳಿ
ಮುಖಅಗಲ ಹಣೆ
ಕೊಂಬುಒಳಚಾಚಿದೆ

ಕೃಷ್ಣಾ ಅಥವಾ ಕೃಷ್ಣಾತೀರಿ ತಳಿಯ ಗೋವುಗಳು ಹತ್ತೊಂಬತ್ತನೆ ಶತಮಾನದ ಆದಿಯಿಂದಲೂ ಮಲಪ್ರಭಾ, ಘಟಪ್ರಭಾ ಹಾಗೂ ಕೃಷ್ಣಾ ನದಿತೀರಪ್ರದೇಶ ಅಂದರೆ ಮಹಾರಾಷ್ಟ್ರಮೀರಜ್, ಸಾಂಗ್ಲಿ, ಕೊಲ್ಲಾಪುರ, ಕರ್ನಾಟಕದ ಜಮಖಂಡಿ, ಬೆಳಗಾವಿ, ರಾಯಚೂರು ಪ್ರದೇಶದ ಜೀವನಾಡಿಯಾಗಿದ್ದವು. ಮಹಾರಾಷ್ಟ್ರದ ಸಾಂಗ್ಲಿ ಮಹಾರಾಜ ಇದರ ಮುಖ್ಯ ಪೋಷಕರಾಗಿದ್ದವರು. ಕೃಷ್ಣಾ ನದಿಯ ದಂಡೆಗುಂಟ ಇರುವ ವಿಶಿಷ್ಟ ಕಪ್ಪು ಕಲ್ಲು ಮಣ್ಣಿಗೆ, ಘೋರ ಬಿಸಿಲಿಗೆ ಹೂಟೆ ಮಾಡುವುದೇ ಒಂದು ಸಮಸ್ಯೆ ಅಂತಾಗಿ ಕಷ್ಟಸಹಿಷ್ಣು ತಳಿಯೊಂದರ ಹುಡುಕಾಟದಲ್ಲಿ ದೊರಕಿದ್ದು ಕೃಷ್ಣಾ.

ಅತಿ ಉಷ್ಣ ಹವಾಮಾನದಲ್ಲೂ ವಿರಾಮವಿಲ್ಲದೆ ೨೫-೩೦ ಕಿ.ಮಿ. ನಡೆಯಬಲ್ಲ ಇವುಗಳ ಕಷ್ಟಸಹಿಷ್ಣುತೆ, ೨ ಟನ್ನಿನವರೆಗೂ ಭಾರ ಎಳೆಯಬಲ್ಲ ಸಾಮರ್ಥ್ಯ, ಅತಿ ಕಡಿಮೆ ಆಹಾರ ಸೇವಿಸಿ ದಿನಕ್ಕೆ ೮-೧೦ ತಾಸು ದುಡಿಯಬಲ್ಲ ಗುಣಗಳಿಂದ ಕೃಷ್ಣಾ, ಇಂದಿಗೂ ಸಣ್ಣ ಮತ್ತು ಮಧ್ಯಮ ರೈತರಿಗೆ ವರದಾನ. ಬೆವರಿನ ಗ್ರಂಥಿಗಳ ಸಾಂದ್ರತೆ, ಶರೀರ ರಚನೆ ಮುಖ್ಯವಾಗಿ ಗೊರಸಿನ ರಚನೆ ಈ ಭಾಗದ ನೆಲಕ್ಕೆ, ಹವಾಗುಣಕ್ಕೆ ಅತ್ಯಂತ ಸೂಕ್ತ. ಸಂತಾನದ ಅವಧಿ ಕೂಡ ದೊಡ್ಡದೇ, ವರ್ಷಕ್ಕೊಂದರಂತೆ ೯-೧೨ ಕರು ಈಯಬಲ್ಲವು. ಹಾಲು ದಿನಕ್ಕೆ ನಾಲ್ಕರಿಂದ ಐದು ಲೀಟರ್. ನೆಲ ಮುಟ್ಟುವಂತಿರುವ ಬಾಲ, ಸಣ್ಣ ಕಿವಿ, ಅಗಲ ಹಣೆ, ಒಳಚಾಚಿಕೊಂಡಂತಿರುವ ಕೊಂಬು ಹೊಂದಿದೆ ಕೃಷ್ಣಾ.

ಒಂದು ಕಾಲದಲ್ಲಿ ಕೃಷ್ಣಾತೀರಪ್ರದೇಶದ ಕಲ್ಲು ಮಿಶ್ರಿತ ಕಪ್ಪು ಮಣ್ಣಿನಲ್ಲಿ ಬೇಸಾಯ ಮಾಡುವುದೇ ಒಂದು ಸವಾಲು ಎಂದೆನಿಸಿದ್ದಾಗ ರೈತರ ಜೀವನನಿರ್ವಹಣೆಯ ನೊಗಕ್ಕೆ ತಾವೂ ಹೆಗಲು ಕೊಟ್ಟು, ಅಲ್ಲಿನ ಕೃಷಿಪದ್ಧತಿಯ ಜೀವನಾಡಿ ಎನಿಸಿದ್ದ ಕೃಷ್ಣಾ ತಳಿ ವಿನಾಶದ ಅಂಚಿಗೆ ಸರಿದು ಈಗ ನೂರಕ್ಕಿಂತಲೂ ಕಡಿಮೆ ಸಂಖ್ಯೆಯಲ್ಲಿವೆ. ತಮ್ಮ ವೈಶಿಷ್ಟ್ಯತೆಗಳಿಂದ ವಿದೇಶಿಯರನ್ನೂ ಸೆಳೆದ ಇವು ಬ್ರೆಜಿಲ್, ದಕ್ಷಿಣ ಅಮೆರಿಕದ ದೇಶಗಳಿಗೆ ದೊಡ್ಡ ಸಂಖ್ಯೆಯಲ್ಲಿ ರಫ್ತಾಗಿವೆ.

ಚಿತ್ರಗಳು

[ಬದಲಾಯಿಸಿ]

ಆಧಾರ/ಆಕರ

[ಬದಲಾಯಿಸಿ]

'ಗೋವಿಶ್ವಲೋಕ' ಜಾಲತಾಣದ 'ಗೋವಿಶ್ವ' ಇ-ಪತ್ರಿಕೆ Archived 2018-11-24 ವೇಬ್ಯಾಕ್ ಮೆಷಿನ್ ನಲ್ಲಿ.