ಹಿಮಾಲಯ
ಹಿಮಾಲಯ | ||
ಪರ್ವತಶ್ರೇಣಿ | ||
[[Image:| 256px|none |
]] | |
Kintras | ಭೂತಾನ್, ಚೀನಾ, ಭಾರತ, ನೇಪಾಳ, ಪಾಕಿಸ್ತಾನ, ಮ್ಯಾನ್ಮಾರ್, ಅಫ್ಘಾನಿಸ್ತಾನ | |
---|---|---|
Heichest pynt | ಮೌಂಟ್ ಎವರೆಸ್ಟ್ | |
- elevation | ೮,೮೭೪ m (೨೯,೧೧೪ ft) | |
ಹಿಮಾಲಯ ಭಾರತೀಯ ಉಪಖಂಡವನ್ನು ಟಿಬೆಟ್ ಪ್ರಸ್ಥಭೂಮಿಯಿಂದ ಪ್ರತ್ಯೇಕಿಸುವ ಒಂದು ಬೃಹತ್ ಪರ್ವತ ಶ್ರೇಣಿ. ಎವರೆಸ್ಟ್ ಶಿಖರವನ್ನೂ ಒಳಗೊಂಡಂತೆ ಪ್ರಪಂಚದ ಅತಿ ಎತ್ತರದ ಹಲವಾರು ಪರ್ವತಶಿಖರಗಳು ಇಲ್ಲಿವೆ. ಹಾಗೆಯೇ ಎರಡು ಮುಖ್ಯ ನದಿ-ವ್ಯವಸ್ಥೆಗಳ ತವರು ಸಹ ಹಿಮಾಲಯ ಶ್ರೇಣಿ. ಸಂಸ್ಕೃತದಲ್ಲಿ "ಹಿಮಾಲಯ" ಎಂದರೆ "ಹಿಮದ ಮನೆ" ಎಂದರ್ಥ (ಹಿಮ+ಆಲಯ=ಹಿಮಾಲಯ). ಹಿಮಾಲಯ ಶ್ರೇಣಿಯ ಎತ್ತರದ ಪ್ರದೇಶಗಳು ಅನೇಕ ದೊಡ್ಡ ಹಿಮಾವೃತವಾಗಿರುತ್ತದೆ. ಈ ಪ್ರದೇಶಗಳು ಅನೇಕ ದೊಡ್ಡ ನದಿಗಳ ಆಚೆಯಲ್ಲಿರುವ
ಜೀವಿ ಪರಿಸರ ವಿಜ್ಞಾನ
[ಬದಲಾಯಿಸಿ]ಉಗಮ ಮತ್ತು ಬೆಳವಣಿಗೆ
[ಬದಲಾಯಿಸಿ]ಹಿಮಾಲಯ ಭೂಮಿಯ ಅತ್ಯಂತ ನವೀನ ಪರ್ವತಶ್ರೇಣಿಗಳಲ್ಲಿ ಒಂದು. ಸುಮಾರು ೨೫ ಕೋಟಿ ವರ್ಷಗಳ ಹಿಂದೆ "ಪ್ಯಾಂಜಿಯ" ಭೂಭಾಗ ಒಡೆದು ಇಂಡೋ-ಆಸ್ಟ್ರೇಲಿಯನ್ ಭೂಭಾಗ ಯೂರೇಷ್ಯನ್ ಭೂಭಾಗದತ್ತ ತೇಲಲಾರಂಭಿಸಿತು. ಸುಮಾರು ೪-೭ ಕೋಟಿ ವರ್ಷಗಳ ಹಿಂದೆ ಈ ಎರಡು ಭೂಭಾಗಗಳು ಒಂದಕ್ಕೊಂದು ಗುದ್ದಿದಾಗ ಹಿಮಾಲಯ ಪರ್ವತಗಳು ಸೃಷ್ಟಿಯಾದವು. ಸುಮಾರು ೨-೩ ಕೋಟಿ ವರ್ಷಗಳ ಹಿಂದೆ ಇಂದಿನ ಭಾರತದ ಪ್ರದೇಶದಲ್ಲಿದ್ದ ಟೆತಿಸ್ ಸಾಗರ ಸಂಪೂರ್ಣವಾಗಿ ಮುಚ್ಚಿ ಹೋಯಿತು. ಇಂಡೋ-ಆಸ್ಟ್ರೇಲಿಯನ್ ಭೂಭಾಗ ಇಂದಿಗೂ ನಿಧಾನವಾಗಿ ಟಿಬೆಟ್ ಭೂಭಾಗದ ಅಡಿಯಲ್ಲಿ ಚಲಿಸುತ್ತಿದೆ (ಸುಮಾರು ವರ್ಷಕ್ಕೆ ೨ ಸೆಮೀ), ಮತ್ತು ಮುಂದಿನ ಕೋಟಿ ವರ್ಷಗಳಲ್ಲಿ ಸುಮಾರು ೧೮೦ ಕಿಮೀ ನಷ್ಟು ಚಲಿಸಿರುತ್ತದೆ! ಈ ಚಲನೆಯಿಂದ ಹಿಮಾಲಯ ಶ್ರೇಣಿ ವರ್ಷಕ್ಕೆ ಅರ್ಧ ಸೆಮೀ ನಷ್ಟು ಬೆಳೆಯುತ್ತಿದೆ. ಇದೇ ಚಲನೆಯಿಂದ ಈ ಪ್ರದೇಶ ಸಾಕಷ್ಟು ಭೂಕಂಪಗಳನ್ನು ಸಹ ಕಂಡಿದೆ.
ಭೂಗೋಳ
[ಬದಲಾಯಿಸಿ]ಹಿಮಾಲಯ ಶ್ರೇಣಿ ಪಶ್ಚಿಮದಲ್ಲಿ "ನಂಗಾ ಪರ್ಬತ್" ಇಂದ ಪೂರ್ವದಲ್ಲಿ "ನಾಮ್ಚೆ ಬರ್ವಾ" ದ ವರೆಗೆ ಸುಮಾರು ೨೪೦೦ ಕಿಮೀ ಉದ್ದವಿದೆ. ಅಗಲ ೨೫೦-೩೦೦ ಕಿಮೀ. ಹಿಮಾಲಯn ಶ್ರೇಣಿಯಲ್ಲಿ ಸಮಾನಾಂತರವಾಗಿ ಸಾಗುವ ಮೂರು ವಿಭಿನ್ನ ಶ್ರೇಣಿಗಳನ್ನು ಕಾಣಬಹುದು:
- "ಉಪ-ಹಿಮಾಲಯ": ಇದನ್ನು ಭಾರತದಲ್ಲಿ "ಶಿವಾಲಿಕ್ ಹಿಲ್ಸ್ "ಎಂದು ಕರೆಯಲಾಗುತ್ತದೆ. ಈ ಶ್ರೇಣಿ ಅತ್ಯಂತ ಇತ್ತೀಚೆಗೆ ಸೃಷ್ಟಿಯಾದದ್ದು ಮತ್ತು ಸರಾಸರಿ ೧೨೦೦ ಮೀ ಎತ್ತರ ಹೊಂದಿದೆ. ಮುಖ್ಯವಾಗಿ, ಇನ್ನೂ ಬೆಳೆಯುತ್ತಿರುವ ಹಿಮಾಲಯ ಪರ್ವತಗಳಿಂದ ಜಾರುವ ಭೂಭಾಗದಿಂದ ಈ ಶ್ರೇಣಿ ಸೃಷ್ಟಿಯಾಗಿದೆ.
- "ಕೆಳಗಿನ ಹಿಮಾಲಯ": ಸರಾಸರಿ ೨೦೦೦-೫೦೦೦ ಮೀ ಎತ್ತರವಿದ್ದು ಇದು ಭಾರತದ ಹಿಮಾಚಲ ಪ್ರದೇಶ, ನೇಪಾಳದ ದಕ್ಷಿಣ ಪ್ರದೇಶಗಳ ಮೂಲಕ ಸಾಗುತ್ತದೆ. ಡಾರ್ಜೀಲಿಂಗ್, ಶಿಮ್ಲಾ, ನೈನಿತಾಲ್, ಮೊದಲಾದ ಭಾರತದ ಅನೇಕ ಪ್ರಸಿದ್ಧ ಗಿರಿಧಾಮಗಳು ಈ ಶ್ರೇಣಿಯಲ್ಲಿಯೇ ಇರುವುದು.
- "ಮೇಲಿನ ಹಿಮಾಲಯ": ಈ ಶ್ರೇಣಿ ಎಲ್ಲಕ್ಕಿಂತ ಉತ್ತರದಲ್ಲಿದ್ದು ನೇಪಾಳದ ಉತ್ತರ ಭಾಗಗಳು ಮತ್ತು ಟಿಬೆಟ್ ನ ದಕ್ಷಿಣ ಭಾಗಗಳ ಮೂಲಕ ಸಾಗುತ್ತದೆ. ೬೦೦೦ ಮೀ ಗಿಂತಲೂ ಹೆಚ್ಚಿನ ಸರಾಸರಿ ಎತ್ತರವನ್ನು ಹೊಂದಿರುವ ಈ ಶ್ರೇಣಿ ಪ್ರಪಂಚದ ಅತಿ ಎತ್ತರದ ಮೂರು ಶಿಖರಗಳನ್ನು ಒಳಗೊಂಡಿದೆ - ಎವರೆಸ್ಟ್, ಕೆ-೨, ಮತ್ತು ಕಾಂಚನಜುಂಗಾ.
ಹಿಮನದಿಗಳು
[ಬದಲಾಯಿಸಿ]ಹಿಮಾಲಯ ಶ್ರೇಣಿಗಳಲ್ಲಿ ಅನೇಕ ಹಿಮನದಿಗಳನ್ನು (glacier) ಕಾಣಬಹುದು. ಧ್ರುವ ಪ್ರದೇಶಗಳನ್ನು ಬಿಟ್ಟರೆ ಪ್ರಪಂಚದ ಅತಿ ದೊಡ್ಡ ಹಿಮನದಿಯಾದ ಸಿಯಾಚೆನ್ ಇಲ್ಲಿಯೇ ಇರುವುದು. ಇಲ್ಲಿರುವ ಹಿಮನದಿಗಳಲ್ಲಿ ಪ್ರಸಿದ್ಧವಾದ ಇತರ ಕೆಲವೆಂದರೆ ಗಂಗೋತ್ರಿ, ಯಮುನೋತ್ರಿ, ನುಬ್ರಾ ಮತ್ತು ಖುಂಬು.
ನದಿಗಳು
[ಬದಲಾಯಿಸಿ]ಹಿಮಾಲಯ ಶ್ರೇಣಿಯ ಎತ್ತರದ ಪ್ರದೇಶಗಳು ವರ್ಷವಿಡೀ ಹಿಮಾವೃತವಾಗಿರುತ್ತವೆ. ಈ ಪ್ರದೇಶಗಳು ಅನೇಕ ದೊಡ್ಡ ನದಿಗಳ ತವರು. ಸಿಂಧೂ ನದಿ ಟಿಬೆಟ್ ನಲ್ಲಿ ಸೆಂಗೆ ಮತ್ತು ಗಾರ್ ನದಿಗಳ ಸಂಗಮದಲ್ಲಿ ಹುಟ್ಟಿ ಪಾಕಿಸ್ತಾನದ ಮೂಲಕ ಸಾಗಿ ಅರಬ್ಬೀ ಸಮುದ್ರವನ್ನು ಸೇರುತ್ತದೆ. ಗಂಗಾ ನದಿ ಭಾಗೀರಥಿಯಾಗಿ ಗಂಗೋತ್ರಿ ಹಿಮನದಿಯಲ್ಲಿ ಜನ್ಮ ತಾಳಿ ಅಲಕನಂದಾ, ಯಮುನಾ ನದಿಗಳನ್ನು ಸೇರಿ ಭಾರತ ಮತ್ತು ಬಾಂಗ್ಲಾದೇಶಗಳ ಮೂಲಕ ಬಂಗಾಳ ಕೊಲ್ಲಿಗೆ ಸೇರುತ್ತದೆ. ಬ್ರಹ್ಮಪುತ್ರ ನದಿ ಪಶ್ಚಿಮ ಟಿಬೆಟ್ ನಲ್ಲಿ ಹುಟ್ಟಿ, ದಕ್ಷಿಣಪೂರ್ವಕ್ಕೆ ಹರಿದು ನಂತರ ತನ್ನ ದಿಕ್ಕನ್ನು ಸಂಪೂರ್ಣವಾಗಿ ಬದಲಿಸಿ ಭಾರತ ಮತ್ತು ಬಾಂಗ್ಲಾದೇಶಗಳ ಮೂಲಕ ಬಂಗಾಳ ಕೊಲ್ಲಿಗೆ ಹರಿಯುತ್ತದೆ. ಇನ್ನಿತರ ಕೆಲವು ಹಿಮಾಲಯ ನದಿಗಳೆಂದರೆ ಇರವಡ್ಡಿ, ಸಲ್ವೀನ್ ಮೊದಲಾದವು (ಬರ್ಮಾ ದತ್ತ ಹರಿಯುತ್ತವೆ).
ಸರೋವರಗಳು
[ಬದಲಾಯಿಸಿ]ಹಿಮಾಲಯ ಪ್ರದೇಶದಲ್ಲಿ ನೂರಾರು ಸರೋವರಗಳು ಕಂಡುಬರುತ್ತವೆ. ಈ ಸರೋವರಗಳಲ್ಲಿ ಹೆಚ್ಚಿನವು ೫,೦೦೦ ಮೀ. ಗಿಂತ ಕಡಿಮೆ ಎತ್ತರದಲ್ಲಿ ಸಿಗುತ್ತವೆ, ಹಾಗೂ ಈ ಸರೋವರಗಳ ವಿಸ್ತಾರವು ಎತ್ತರದೊಂದಿಗೆ ಕಡಿಮೆಯಾಗುತ್ತದೆ. ಇವುಗಳಲ್ಲಿ ಪ್ಯಾಂಗಾಂಗ್ ತ್ಸೋ ಸರೋವರ ಅತಿ ದೊಡ್ಡದು. ಭಾರತ/ಟಿಬೆಟ್ ಸರಹದ್ದಿನ ಬಳಿಯಿರುವ ಈ ಸರೋವರವು ಸುಮಾರು ೮ ಕಿ.ಮೀ. ಅಗಲ ಹಾಗೂ ೧೩೪ ಕಿ.ಮೀ. ಉದ್ದವಿದ್ದು, ೪,೬೦೦ ಮೀ. ಎತ್ತರದಲ್ಲಿದೆ. ಎತ್ತರದಲ್ಲಿರುವ ಒಂದು ಮುಖ್ಯವಾದ ಸರೋವರ ಗುರುಡೋಗ್ಮಾರ್. ಉತ್ತರ ಸಿಕ್ಕಿಂನಲ್ಲಿರುವ ಗುರುಡೋಗ್ಮಾರ್ ೫,೧೪೮ ಮೀ. (೧೬,೮೯೦ ಅಡಿ) ಎತ್ತರದಲ್ಲಿದೆ. ಇನ್ನಿತರ ದೊಡ್ಡ ಸರೋವರಗಳಲ್ಲಿ ಭಾರತ/ಚೀನಾ ಸರಹದ್ದಿನ ಬಳಿ ಸಿಕ್ಕಿಂನಲ್ಲಿರುವ ಛಾಂಗು ಸರೋವರವೂ ಸೇರಿದೆ. ಹಿಮನದಿಗಳ ಚಟುವಟಿಕೆಯಿಂದ ಸೃಷ್ಟಿಯಾದ ಸರೋವರಗಳಿಗೆ ಭೂವಿಜ್ಞಾನಿಗಳು ಟಾರ್ನ್‍ಗಳೆಂದು ಕರೆಯುತ್ತಾರೆ. ಹೆಚ್ಚಿನ ಟಾರ್ನ್‍ಗಳು ಹಿಮಾಲಯದಲ್ಲಿ ೫,೫೦೦ ಮೀ. ಗಿಂತ ಹೆಚ್ಚು ಎತ್ತರದಲ್ಲಿ ಕಂಡುಬರುತ್ತವೆ.
ಹವಾಮಾನದ ಮೇಲಿನ ಪ್ರಭಾವ
[ಬದಲಾಯಿಸಿ]ಭಾರತೀಯ ಉಪಖಂಡ ಮತ್ತು ಟಿಬೆಟ್ ಪ್ರಸ್ಥಭೂಮಿಗಳ ಹವಾಮಾನದ ಮೇಲೆ ಹಿಮಾಲಯ ಶ್ರೇಣಿ ಆಳವಾದ ಪ್ರಭಾವವನ್ನು ಬೀರುತ್ತದೆ. ಆರ್ಟಿಕ್ ಪ್ರದೇಶದಿಂದ ಚಳಿ ಗಾಳಿ ಭಾರತದೊಳಕ್ಕೆ ಬೀಸುವುದನ್ನು ಹಿಮಾಲಯ ಶ್ರೇಣಿ ತಡೆಯುತ್ತದೆ. ಇದರಿಂದಾಗಿ ದಕ್ಷಿಣ ಏಷ್ಯಾ - ಟಿಬೆಟ್ ಮೊದಲಾದ ಪ್ರದೇಶಗಳಿಗಿಂತ ಬೆಚ್ಚಗಿರುತ್ತದೆ. ಹಾಗೆಯೇ ಮಾನ್ಸೂನ್ ಮಾರುತಗಳನ್ನು ತಡೆದು ಭಾರತದ ಪೂರ್ವ ರಾಜ್ಯಗಳಲ್ಲಿ (ಮಿಜೋರಂ, ಮೇಘಾಲಯ, ಇತ್ಯಾದಿ) ಬಹಳಷ್ಟು ಮಳೆಯಾಗುವಂತೆ ಮಾಡುತ್ತದೆ. ಮಾನ್ಸೂನ್ ಮಾರುತಗಳು ಹಿಮಾಲಯವನ್ನು ದಾಟಲಾಗದೆ ಇರುವುದೂ ಸಹ ಟಿಬೆಟ್/ಚೀನಾಗಳಲ್ಲಿನ ಗೋಬಿ ಮರುಭೂಮಿ ಮತ್ತು ತಕ್ಲಮಕಾನ್ ಮರುಭೂಮಿಗಳ ಸೃಷ್ಟಿಗೆ ಒಂದು ಕಾರಣ ಎಂದು ಊಹಿಸಲಾಗಿದೆ. ಚಳಿಗಾಲದಲ್ಲಿ ಪಶ್ಚಿಮದ ಇರಾನ್‍ನ ಕಡೆಯಿಂದ ಉಂಟಾಗುವ ಹವಾಮಾನದ ಪ್ರಕ್ಷುಬ್ಧತೆಗಳನ್ನು ಈ ಶ್ರೇಣಿಗಳು ಮುನ್ನುಗ್ಗದಂತೆ ತಡೆಯುತ್ತವೆ. ಈ ರೀತಿಯ ತಡೆಯುವಿಕೆಯಿಂದಾಗಿ ಕಾಶ್ಮೀರದಲ್ಲಿ ಹಿಮಪಾತವುಂಟಾಗುತ್ತದೆ ಹಾಗೂ ಉತ್ತರ ಭಾರತದ ಮತ್ತು ಪಂಜಾಬ್‍ನ ಕೆಲವು ಭಾಗಗಳಲ್ಲಿ ಮಳೆ ಬೀಳುತ್ತದೆ. ಹಿಮಾಲಯ ಶ್ರೇಣಿಗಳು ಉತ್ತರದಿಂದ ಆರ್ಕ್‍ಟಿಕ್ ಕಡೆಯಿಂದ ಬೀಸುವ ಚಳಿಗಾಳಿಯನ್ನು ಬಹುಮಟ್ಟಿಗೆ ತಡೆದರೂ, ಬ್ರಹ್ಮಪುತ್ರ ಕಣಿವೆಯಲ್ಲಿ ಈ ಚಳಿಗಾಳಿಯ ಸ್ವಲ್ಪ ಪಾಲು ನುಸುಳಿ ಬರುತ್ತದೆ. ಇದರಿಂದಾಗಿ ಬಾಂಗ್ಲಾದೇಶದಲ್ಲಿ ಮತ್ತು ಭಾರತದ ಈಶಾನ್ಯ ರಾಜ್ಯಗಳಲ್ಲಿ ಚಳಿಗಾಲದ ಉಷ್ಣತೆ ಸಾಕಷ್ಟು ಮಟ್ಟಿಗೆ ಕೆಳಗಿಳಿಯುತ್ತದೆ. ಇದೇ ಗಾಳಿಯು ಈ ಈಶಾನ್ಯ ಪ್ರಾಂತ್ಯಗಳಲ್ಲಿ ಈಶಾನ್ಯ ಮುಂಗಾರನ್ನೂ ಉಂಟುಮಾಡುತ್ತದೆ.
ರಾಜಕಾರಣ ಮತ್ತು ಸಂಸ್ಕೃತಿಗಳ ಮೇಲಿನ ಪ್ರಭಾವ
[ಬದಲಾಯಿಸಿ]ಹಿಮಾಲಯ ಶ್ರೇಣಿಯು ಸಾವಿರಾರು ವರ್ಷಗಳಿಂದ ಜನರ ಚಲವಲನಗಳಿಗ ಸ್ವಾಭಾವಿಕವಾಗಿಯೇ ಅಡಚಣೆಯನ್ನು ಉಂಟುಮಾಡಿದೆ. ಇದಕ್ಕೆ ಕಾರಣ ಹಿಮಾಲಯದ ದೊಡ್ಡ ಗಾತ್ರ, ಎತ್ತರ ಮತ್ತು ವೈಶಾಲ್ಯತೆ. ಮುಖ್ಯವಾಗಿ ಈ ಅಡಚಣೆಯು, ಭಾರತ ಉಪಖಂಡದ ಜನರು ಚೆನಾ ಮತ್ತು ಮಂಗೋಲಿಯಾದ ಜನರ ಜೊತೆ ಸುಲಭವಾಗಿ ಬೆರೆಯದಂತೆ ಮಾಡಿದೆ. ಇದರಿಂದಾಗಿ ಇಂದಿಗೂ ಈ ಎರಡು ಪ್ರದೇಶಗಳ ಭಾಷೆಗಳಲ್ಲಿ ಮತ್ತು ಆಚಾರಗಳಲ್ಲಿ ಬಹಳಷ್ಟು ವ್ಯತ್ಯಾಸಗಳನ್ನು ಕಾಣಬಹುದು. ಇದಲ್ಲದೆ ಹಿಂದಿನಿಂದಲೂ ಹಿಮಾಲಯವು ವಾಣಿಜ್ಯ ಮಾರ್ಗಗಳಿಗೆ ಹಾಗೂ ಸಾಮ್ರಾಜ್ಯ ವಿಸ್ತರಣೆಗಳಿಗೆ ಪ್ರತಿಭಂದವೊಡ್ಡಿದೆ. ಉದಾ:. ಜೆಂಘಿಜ್ ಖಾನ್‍ನಿಗೆ ತನ್ನ ಸಾಮ್ರಾಜ್ಯವನ್ನು ಹಿಮಾಲಯ ಶ್ರೇಣಿಯ ದಕ್ಷಿಣಕ್ಕೆ ಹಾಗೂ ಭಾರತ ಉಪಖಂಡಕ್ಕೆ ವಿಸ್ತಾರ ಮಾಡಲು ಆಗಲಿಲ್ಲ.
ಶಿಖರದ ಹೆಸರು | ಇತರ ಹೆಸರುಗಳು ಮತ್ತು ಅರ್ಥ | ಎತ್ತರ (ಮೀ.) | ಎತ್ತರ (ಅಡಿ) | ಮೊದಲನೆ ಆರೋಹಣ | ಟಿಪ್ಪಣಿ |
---|---|---|---|---|---|
ಎವರೆಸ್ಟ್ | ಸಾಗರ್‍ಮಾಥಾ -"ಆಕಾಶದ ಹಣೆ", ಚೋಮೋಲಂಗ್ಮಾ ಅಥವಾ ಕೋಮೋಲಂಗ್ಮಾ -"ವಿಶ್ವದ ಮಾತೆ" ಗೌರಿಶಂಕರ |
೮,೮೪೮ | ೨೯,೦೨೮ | ೧೯೫೩ | ಪ್ರಪಂಚದ ಅತಿ ಎತ್ತರದ ಪರ್ವತ. ಇದು ಚೀನಾ/ನೇಪಾಳದ ಗಡಿ ಭಾಗದಲ್ಲಿದೆ. |
ಕೆ-೨ | ಛೋಗೋ ಗಾಂಗ್ರಿ , ಗಾಡ್ವಿನ್ ಆಸ್ಟಿನ್ | ೮,೬೧೧ | ೨೮,೨೫೧ | ೧೯೫೪ | ಪ್ರಪಂಚದ ೨ನೇ ಅತಿ ಎತ್ತರದ ಶಿಖರ. ಇದು ಪಾಕೀಸ್ತಾನ ಮತ್ತು ಚೀನಾದ ಗಡಿಭಾಗದಲ್ಲಿದೆ. ಏರುವುದಕ್ಕೆ ಪ್ರಪಂಚದಲ್ಲೇ ಅತಿ ಕಷ್ಟಕರವಾದ ಪರ್ವತ. |
ಕಾಂಚನಜುಂಗಾ | ಕಾಂಗ್‍ಚೆನ್ ಡ್ಜೋಂಗ, "ಅದ್ಭುತ ಹಿಮದ ಐದು ನಿಧಿಗಳು" | ೮,೫೮೬ | ೨೮,೧೬೯ | ೧೯೫೫ | ಪ್ರಪಂಚದ ೩ನೇ ಅತಿ ಎತ್ತರದ ಶಿಖರ. ಭಾರತದಲ್ಲಿ ಅತಿ ಎತ್ತರದ್ದು ಮತ್ತು ನೇಪಾಳದಲ್ಲಿ ೨ನೇ ಅತಿ ಎತ್ತರದ್ದು. |
ಮಕಾಲು | - | ೮,೪೬೨ | ೨೭,೭೬೫ | ೧೯೫೫ | ಪ್ರಪಂಚದಲ್ಲಿ ೫ನೇ ಅತಿ ಎತ್ತರದ್ದು. ನೇಪಾಳದಲ್ಲಿದೆ. |
ಧವಳಗಿರಿ | ಬಿಳಿ ಪರ್ವತ | ೮,೧೬೭ | ೨೬,೭೬೪ | ೧೯೬೦ | ಪ್ರಪಂಚದಲ್ಲಿ ೭ನೇ ಅತಿ ಎತ್ತರದ್ದು. ನೇಪಾಳದಲ್ಲಿದೆ. |
ನಂಗಾ ಪರ್ಬತ್ | ನಂಗಾ ಪರ್ಬತ್ ಶಿಖರ ಅಥವಾ ಡಿಯಾಮಿರ್, "ನಗ್ನ ಪರ್ವತ" | ೮,೧೨೫ | ೨೬,೬೫೮ | ೧೯೫೩ | ಫ್ರಪಂಚದಲ್ಲಿ ೯ನೇ ಅತಿ ಎತ್ತರದ್ದು, ಪಾಕಿಸ್ತಾನದಲ್ಲಿದೆ. ಏರಲು ಅತಿ ಅಪಾಯಕಾರಿಯಾದ ಶಿಖರವೆಂದು ಪರಿಗಣಿಸಲ್ಪಟ್ಟಿದೆ. |
ಅನ್ನಪೂರ್ಣ | "ಅನ್ನಪೂರ್ಣ ದೇವಿ" | ೮,೦೯೧ | ೨೬,೫೪೫ | ೧೯೫೦ | ಪ್ರಪಂಚದಲ್ಲಿ ೧೦ನೇ ಅತಿ ಎತ್ತರದ್ದು. ನೇಪಾಳದಲ್ಲಿದೆ. |
ನಂದಾದೇವಿ | ೭,೮೧೭ | ೨೫,೬೪೫ | ೧೯೩೬ |
ಧಾರ್ಮಿಕ ಹಾಗೂ ಪೌರಾಣಿಕ ಪ್ರಾಮುಖ್ಯತೆ
[ಬದಲಾಯಿಸಿ]ಹಿಂದೂ ಪುರಾಣಗಳಲ್ಲಿ ಹಿಮಾಲಯವನ್ನು ಹಿಮವತ (ಪಾರ್ವತಿಯ ತಂದೆ) ಎಂಬ ದೇವನನ್ನಾಗಿ ವ್ಯಕ್ತಿತ್ವಾರೋಪಣೆ ಮಾಡಲಾಗಿದೆ. ಇದಲ್ಲದೆ, ಹಿಂದೂ ಮತ್ತು ಬೌದ್ಧ ಧರ್ಮಗಳಲ್ಲಿ ಹಿಮಾಲಯದ ಹಲವಾರು ಸ್ಥಳಗಳಿಗೆ ಪ್ರಾಮುಖ್ಯತೆ ನೀಡಲಾಗಿದೆ.
- ಹರಿದ್ವಾರ - ಇಲ್ಲಿ ಗಂಗಾ ನದಿಯು ಪರ್ವತಗಳಿಂದಾಚೆಗೆ ಬಂದು ಸಮತಳ ಭೂಮಿಯನ್ನು ಹೊಕ್ಕುತ್ತದೆ.
- ಬದರೀನಾಥ್ - ಇಲ್ಲಿ ವಿಷ್ಣುವಿಗೆ ಮುಡಿಪಾದ ಮಂದಿರವಿದೆ.
- ಕೇದಾರನಾಥ್ - ೧೨ ಜ್ಯೋತಿರ್ಲಿಂಗಗಳಲ್ಲಿ ಒಂದನ್ನು ಇಲ್ಲಿ ಕಾಣಬಹುದು.
- ಗೋಮುಖ್ - ಇದು ಭಾಗೀರಥಿಯ ಉಗಮ ಸ್ಥಳ. ಗಂಗೋತ್ರಿ ನಗರದಿಂದ ಕೆಲವೇ ಮೈಲಿಗಳ ಅಂತರದಲ್ಲಿದೆ.
- ದೇವಪ್ರಯಾಗ - ಇಲ್ಲಿ ಅಲಕನಂದಾ ಮತ್ತು ಭಾಗೀರಥಿ ನದಿಗಳ ಸಂಗಮವಾಗಿ ಗಂಗೆಯಾಗಿ ಮುಂದೆ ಹರಿಯುತ್ತದೆ.
- ಹೃಷಿಕೇಶ - ಇಲ್ಲಿ ಲಕ್ಷ್ಮಣನ ದೇವಸ್ಥಾನವಿದೆ.
- ಕೈಲಾಸ ಪರ್ವತ - ಇದು ೬,೬೩೮ ಮೀ. ಎತ್ತರದ ಶಿಖರ. ಹಿಂದೂ ಧರ್ಮೀಯರು ಇದನ್ನು ಶಿವನ ವಾಸಸ್ಥಾನ ಎಂದು ಪರಿಗಣಿಸುತ್ತಾರೆ. ಈ ಶಿಖರವನ್ನು ಬೌದ್ಧ ಧರ್ಮೀಯರೂ ಪೂಜ್ಯ ಭಾವನೆಯಿಂದ ನೋಡುತ್ತಾರೆ. ಬ್ರಹ್ಮಪುತ್ರ ನದಿಯ ಉಗಮ ತಾಣವಾದ ಈ ಪರ್ವತವು ಮಾನಸ ಸರೋವರವನ್ನು ತನ್ನ ತಪ್ಪಲಿನಲ್ಲಿ ಹೊಂದಿದೆ.
- ಅಮರನಾಥ - ಇಲ್ಲಿ ಹಿಮದಿಂದ ಸ್ವಾಭಾವಿಕವಾಗಿ ಶಿವಲಿಂಗವು ಮೂಡುತ್ತದೆ. ಈ ಲಿಂಗವು ಪ್ರತಿ ವರ್ಷವೂ ಚಳಿಗಾಲದಲ್ಲಿ ಕೆಲವು ವಾರಗಳಲ್ಲಿ ಕಂಡುಬರುತ್ತದೆ. ಈ ಕೆಲವು ವಾರಗಳಲ್ಲಿ ಜನರು ಸಾವಿರಾರು ಸಂಖ್ಯೆಯಲ್ಲಿ ಶಿವಲಿಂಗದ ದರ್ಶನ ಪಡೆಯಲು ಆಗಮಿಸುತ್ತಾರೆ.
- ವೈಷ್ಣೋದೇವಿ - ದುರ್ಗಾ ಭಕ್ತರಲ್ಲಿ ಈ ಮಂದಿರವು ಪ್ರಸಿದ್ಧಿಯನ್ನು ಹೊಂದಿದೆ.
- ದಲೈಲಾಮಾ ಅವರ ನಿವಾಸ ಸೇರಿದಂತೆ ಟಿಬೆಟ್ಟಿನ ಬೌದ್ಧ ಧರ್ಮದ ಹಲವಾರು ಸ್ಥಳಗಳು ಹಿಮಾಲಯದಲ್ಲಿ ಕಾಣಸಿಗುತ್ತವೆ.
- ಯೆತಿ - ಇದು ವಾನರ ಜಾತಿಗೆ ಸೇರಿದ ಅತಿ ದೊಡ್ಡ ಹಾಗೂ ಪ್ರಸಿದ್ಧ ಪ್ರಾಣಿ. ಇದು ಹಿಮಾಲಯದಲ್ಲಿ ನೆಲೆಸಿದೆಯೆಂದು ಹಲವಾರು ಗಾಳಿಸುದ್ದಿಗಳಿವೆ. ಆದರೆ ಪ್ರಾಚಲಿತ್ಯದಲ್ಲಿರುವ ವಿಜ್ಞಾನಿಗಳು ಯೆತಿಯ ಇರುವಿಕೆಯ ಬಗ್ಗೆ ಸಿಕ್ಕಿರುವ ಪುರಾವೆಗಳನ್ನು ಅವೈಜ್ಞಾನಿಕವೆಂದೋ, ಕೀಟಲೆ/ಸುಳ್ಳಿನ ವದಂತಿಯೆಂದೋ ಅಥವಾ ಬೇರಾವುದೋ ಸಾಮಾನ್ಯವಾದ ಪ್ರಾಣಿಯನ್ನು ಗುರುತು ಹಿಡಿಯುವಾಗ ಆಗಿರಬಹುದಾದಂಥ ತಪ್ಪೆಂದೋ ಪರಿಗಣಿಸುತ್ತಾರೆ.
- ಶಂಭಾಲ - ಇದು ಬೌದ್ಧ ಧರ್ಮದಲ್ಲಿ ಸಿಗಬರುವ ಒಂದು ದೈವಿಕ ನಗರಿ. ಈ ನಗರಿಯ ಬಗ್ಗೆ ಹಲವಾರು ಐತಿಹ್ಯಗಳಿವೆ. ಕೆಲವು ಐತಿಹ್ಯಗಳ ಪ್ರಕಾರ ಇದೊಂದು ನಿಜವಾದ ಭೌತಿಕ ನಗರ ಮತ್ತು ಇಲ್ಲಿ ಪುರಾತನವಾದ ಮತ್ತು ರಹಸ್ಯವಾದ ಬೌದ್ಧಿಕ ಉಪದೇಶಗಳನ್ನು ರಕ್ಷಿಸಲಾಗುತ್ತಿದೆ. ಇನ್ನು ಕೆಲವು ನಂಬಿಕೆಗಳ ಪ್ರಕಾರ ಈ ನಗರವು ಭೌತಿಕ ಅಸ್ತಿತ್ವದಲಿಲ್ಲ ಹಾಗೂ ಇದನ್ನು ಮಾನಸಿಕವಾಗಿ ಮಾತ್ರ ಎಟುಕಿಸಿಕೊಳ್ಳಬಹುದು.
- ಶ್ರೀ ಹೇಮಕುಂಡ ಸಾಹೇಬ್ - ಇದು ಸಿಖ್ ಧರ್ಮದ ಒಂದು ಗುರುದ್ವಾರ. ಸಿಖ್ಖರ ಗುರುಗಳಾದ ಗುರು ಗೋಬಿಂದ್ ಸಿಂಗ್ ಅವರು ತಮ್ಮ ಹಿಂದಿನ ಒಂದು ಅವತಾರದಲ್ಲಿ ಈ ಸ್ಥಳದಲ್ಲಿ ತಪಸ್ಸು ಮಾಡಿ ಮೋಕ್ಷ ಪಡೆದರೆಂಬ ನಂಬಿಕೆಗಳಿವೆ.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- ಹಿಮಾಲಯ ಪರ್ವತಗಳ ಬಗ್ಗೆ ಭೌಗೋಳಿಕ ಮಾಹಿತಿ Archived 2005-04-04 ವೇಬ್ಯಾಕ್ ಮೆಷಿನ್ ನಲ್ಲಿ.
- ಹಿಮಾಲಯಗಳ ಉಗಮ