ವಿಷಯಕ್ಕೆ ಹೋಗು

ನಂಗಾ ಪರ್ಬತ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಔನ್ನತ್ಯ ಮತ್ತು ಗಾಂಭೀರ್ಯದ ನೆಲೆ - ನಂಗಾ ಪರ್ಬತ್

ನಂಗಾ ಪರ್ಬತ್ ವಿಶ್ವದ ೯ನೆಯ ಅತಿ ಎತ್ತರದ ಪರ್ವತವಾಗಿದೆ. ಇದರ ಹೆಸರು ಉರ್ದು ಭಾಷೆಯಲ್ಲಿ ನಗ್ನ ಪರ್ವತ ಎಂಬ ಅರ್ಥ ನೀಡುತ್ತದೆ. ೮೧೨೫ ಮೀ. ಎತ್ತರವಿರುವ ನಂಗಾ ಪರ್ಬತ್ ಜಗತ್ತಿನ ಅತ್ಯುನ್ನತ ಶಿಖರಗಳ ಪೈಕಿ ಏರಲು ಅತಿ ಕಠಿಣವಾದುದೆಂದು ಖ್ಯಾತಿ ಗಳಿಸಿದೆ.

ನಂಗಾ ಪರ್ಬತ್ ಹಿಮಾಲಯ ಪರ್ವತಗಳ ಪಶ್ಚಿಮ ಭಾಗದಲ್ಲಿದೆ. ೮೦೦೦ ಮೀ. ಗಳಿಗಿಂತ ಎತ್ತರವಿರುವ ಶಿಖರಗಳ ಪೈಕಿ ಇದು ಅತ್ಯಂತ ಪಶ್ಚಿಮದಲ್ಲಿರುತ್ತದೆ. ಸಿಂಧೂ ನದಿಯ ದಕ್ಷಿಣ ಮಗ್ಗುಲಲ್ಲಿರುವ ನಂಗಾ ಪರ್ಬತ್ ಕರಾಕೋರಮ್ ಶ್ರೇಣಿಯ ಪಶ್ಚಿಮ ಅಂಚಿನಿಂದ ಕೊಂಚ ದಕ್ಷಿಣದಲ್ಲಿದೆ. ಇಂದು ಪಾಕಿಸ್ತಾನದ ಆಡಳಿತದಲ್ಲಿರುವ ಕಾಶ್ಮೀರದ ಭಾಗದಲ್ಲಿದೆ.

ಸ್ಥಳೀಯ ಮಟ್ಟಸ ಭೂಮೇಲ್ಮೈಯಿಂದ ಒಮ್ಮೆಲೇ ಮೇಲೆದ್ದು ನಿಂತಿರುವಂತೆ ಭಾಸವಾಗುವ ನಂಗಾ ಪರ್ಬತ್ ಅತಿ ಕಡಿದಾದ ಮಗ್ಗುಲನ್ನು ಹೊಂದಿದೆ. ಸಿಂಧೂ ನದಿಯ ಪಾತಳಿಯಿಂದ ಕೇವಲ ೨೭ ಕಿ.ಮೀ. ದೂರದೊಳಗಿರುವ ಪರ್ವತ ಶಿಖರವು ೭೦೦೦ ಮೀ. ಗಳಷ್ಟು ಎತ್ತರ ಹೊಂದಿ ಜಗತ್ತಿನಲ್ಲಿಯೇ ಅತಿ ತೀವ್ರ ಕಡಿದಾದ ಪ್ರದೇಶಗಳಲ್ಲಿ ಒಂದಾಗಿದೆ.

ನಂಗಾ ಪರ್ವತದ ಮುಖ್ಯ ಭೂರಾಶಿಯು ನೈಋತ್ಯದಿಂದ ಆಗ್ನೇಯದ ಕಡೆಗೆ ಚಾಚಿದ್ದು ಮೂಲವಾಗಿ ಕಲ್ಲುಬಂಡೆ ಮತ್ತು ಹಿಮದ ಒಂದು ಬೃಹತ್ ರಾಶಿಯಾಗಿದೆ. ಪರ್ವತರಚನೆಯು ಮೂರು ಮುಖಗಳನ್ನು ಹೊಂದಿರುತ್ತದೆ. ಇವೆಂದರೆ ಡಿಯಾಮೀರ್, ರಾಯ್ ಕೋಟ್ ಮತ್ತು ರೂಪಾಲ್ ಮುಖಗಳು. ಈ ಮುಖಗಳಲ್ಲಿ ಹಲವು ಉಪಶಿಖರಗಳಿದ್ದು ಇವುಗಳ ಪೈಕಿ ಉತ್ತರ ಶಿಖರವೆಂಬುದು ೭೮೧೬ ಮೀ. ಗಳಷ್ಟು ಎತ್ತರವಾಗಿದೆ. ರೂಪಾಲ್ ಮುಖದ ಬುಡದಲ್ಲಿ ಲಾಬ್ಟೋ ಎಂಬ ಹೆಸರಿನ ಒಂದು ಸುಂದರ ಹಿಮಸರೋವರವಿದೆ.


ಜುಲೈ ೩ , ೧೯೫೩ರಂದು ಜರ್ಮನಿ-ಆಸ್ಟ್ರಿಯಾ ಪರ್ವತಾರೋಹಿ ತಂಡದ ಸದಸ್ಯನಾಗಿದ್ದ ಆಸ್ಟ್ರಿಯಾದ ಹೆಮನ್ ಬುಹ್ಲ್ ಎಂಬಾತನು ನಂಗಾ ಪರ್ವತದ ಶಿಖರವನ್ನು ಮೊಟ್ಟಮೊದಲ ಬಾರಿಗೆ ತಲುಪಿದನು. ಆದರೆ ಈ ವೇಳೆಗಾಗಲೇ ೩೧ ಪರ್ವತಾರೋಹಿಗಳು ಈ ಪರ್ವತವನ್ನು ಏರುವ ಯತ್ನದಲ್ಲಿ ಜೀವ ತೆತ್ತಿದ್ದರು.

ಪರ್ವತದ ಇನ್ನೊಂದು ದೃಶ್ಯ

ಬಾಹ್ಯ ಸಂಪರ್ಕಕೊಂಡಿಗಳು[ಬದಲಾಯಿಸಿ]