ವಿಷಯಕ್ಕೆ ಹೋಗು

ಗಂಧಹಾರಕ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಫ಼ೆಬ್ರೀಜ಼್ ಬ್ರ್ಯಾಂಡ್‍ನ ಗಂಧಹಾರಕಗಳು

ಗಂಧಹಾರಕ ಎಂದರೆ ಅಸಹ್ಯ ವಾಸನೆಗಳನ್ನು ನಾಶಪಡಿಸುವ, ಅವುಗಳ ಉತ್ಪತ್ತಿಯನ್ನು ತಡೆಗಟ್ಟುವ ಇಲ್ಲವೇ ಅವನ್ನು ಮರೆಸುವ ವಸ್ತು (ಡೀಓಡರೈಸರ್). ಸಾಮಾನ್ಯವಾಗಿ ಗಂಧಹಾರಕಗಳಿಗೆ ಪೂತಿನಾಶಕ ಅಥವಾ ಸೋಂಕುನಿವಾರಕ ಸಾಮರ್ಥ್ಯವಿರುವುದುಂಟು. ಆದರೆ ಹೀಗಿರಲೇಬೇಕೆಂಬ ನಿಯಮವಿಲ್ಲ.

ದುರ್ಗಂಧಗಳು ಉತ್ಪತ್ತಿಯಾಗದಂತೆ ತಡೆಯುವುದು

[ಬದಲಾಯಿಸಿ]

ದುರ್ಗಂಧಗಳ ವಿರುದ್ಧ ಹೋರಾಡುವುದರ ಬದಲು ಅವು ಉತ್ಪತ್ತಿಯಾಗದಂತೆ ತಡೆಯುವುದೇ ಜಾಣತನ. ಇದಕ್ಕಾಗಿ ನಾವು ಅನುಸರಿಸಬಹುದಾದ ಸರಳ ಕ್ರಮಗಳೆಂದರೆ ನಮ್ಮ ಪರಿಸರವನ್ನು ಸ್ವಚ್ಛವಾಗಿಟ್ಟಿರುವುದು, ಬೆವರು, ಹೇನು, ಸೀರುಗಳು ಸೇರದಂತೆ ದೇಹವನ್ನು, ತಲೆಗೂದಲನ್ನು ದಿನವೂ ತೊಳೆದು ಶುಚಿಯಾಗಿಟ್ಟುಕೊಳ್ಳುವುದು, ಬೆವರು, ದೂಳು, ಹತ್ತಿ, ಕೊಳೆಯಾದ ಬಟ್ಟೆ ಬರೆಗಳನ್ನು ಆಗಾಗಲೇ ಒಗೆದು ಶುಭ್ರಗೊಳಿಸುವುದು, ಬಾಯಿ ದುರ್ಗಂಧವಾಗದಂತೆ ನೋಡಿಕೊಳ್ಳುವುದು, ಮನೆಯ ಒಳ ಹೊರ ಜಾಗಗಳನ್ನು ಪದೇ ಪದೇ ತೊಳೆದು ಶುಚಿಗೊಳಿಸುವುದು. ಮುಖ್ಯವಾಗಿ ಬಚ್ಚಲು ಮತ್ತು ಕಕ್ಕಸುಗಳನ್ನು ಫಿನೈಲು ಮೊದಲಾದವುಗಳಿಂದ ದಿನವೂ ತೊಳೆಯುವುದು- ಈ ಎಲ್ಲ ಎಚ್ಚರಿಕೆ ಕ್ರಮಗಳಿಂದ ಸಾಮಾನ್ಯವಾಗಿ ದುರ್ಗಂಧವನ್ನು ತಡೆಗಟ್ಟಬಹುದು. ಮೇಲಾಗಿ ದುರ್ಗಂಧಕಾರಕಗಳಾದ ಗೊಬ್ಬರ, ಕೊಳೆತ ಆಹಾರ ಪದಾರ್ಥ ಮೊದಲಾದವುಗಳ ಯುಕ್ತ ವಿಲೇವಾರಿ ಅಷ್ಟೇ ಅಗತ್ಯ. ಆಹಾರ ಪದಾರ್ಥಗಳನ್ನು ಶೈತ್ಯಕಾರಕ ಯಂತ್ರದಲ್ಲಿಟ್ಟಿದ್ದರೆ ಅವು ಕೆಟ್ಟು ದುರ್ವಾಸನೆ ಬೀರುವುದಿಲ್ಲ. ಕಸಕುಪ್ಪೆಗಳ ಸಕಾಲಿಕ ವಿನಿಯೋಗದಿಂದ ವಾತಾವರಣ ದುರ್ಗಂಧಮಯವಾಗುವುದು ತಪ್ಪುತ್ತದೆ. ಧಾರಾಳವಾಗಿ ಗಾಳಿ ಸಂಚರಿಸುವ ಮತ್ತು ಸೂರ್ಯ ಪ್ರಕಾಶವಿರುವ ಸ್ಥಳಗಳಲ್ಲಿ ಕೆಟ್ಟವಾಸನೆಗಳಿಗೆ ಅವಕಾಶವಿಲ್ಲ.

ಗಂಧಹಾರಕಗಳ ಅವಶ್ಯಕತೆ

[ಬದಲಾಯಿಸಿ]

ಮೀನು ಮಾಂಸ ಮೊದಲಾದ ಆಹಾರ ಪದಾರ್ಥಗಳನ್ನು ಬೇಯಿಸುವಾಗ, ತಂಬಾಕಿನ ಚಟವಿರುವವರು ಬೀಡಿ, ಸಿಗರೇಟು, ಚುಟ್ಟ ಇತ್ಯಾದಿಗಳನ್ನು ಸೇದುವಾಗ ಮತ್ತು ರೋಗರುಜಿನಗಳ ದೆಸೆಯಿಂದ ಉದ್ಭವಿಸುವ ವಾಸನೆಗಳು ಅನಿವಾರ್ಯವಷ್ಟೆ.. ತಂಬಾಕಿನ ಮತ್ತು ಕೆಲವು ಆಹಾರ ಪದಾರ್ಥಗಳ ವಾಸನೆ ಅವುಗಳ ಹವ್ಯಾಸಿಗಳಿಗೆ ಹಿತವೆನಿಸಿದರೆ ಇತರರಿಗೆ ಅಸಹ್ಯವಾಗಿರಬಹುದು. ಹೀಗಾಗಿ ನಿರ್ದಿಷ್ಟ ವಾಸನೆಯನ್ನು ಸಹಿಸಲು ಸಾಧ್ಯವಿಲ್ಲದವರು ಅದರ ವಿರುದ್ಧ ಬಳಸಲು ಅನುಕೂಲಿಸುವಂತೆ ಅನೇಕಾನೇಕ ಗಂಧಹಾರಕಗಳು ಮಾರುಕಟ್ಟೆಯಲ್ಲಿವೆ.

ಕೆಲವು ಗಂಧಹಾರಕಗಳು

[ಬದಲಾಯಿಸಿ]

ಇವುಗಳಲ್ಲಿ ಗ್ಲೈಕಾಲುಗಳ ಪಾತ್ರ ವಿಶಿಷ್ಟ. ವಾಯುಗತವಾಗಿರುವ ಹಲವು ಗಂಧಯುಕ್ತ ವಸ್ತುಗಳನ್ನು ಇವು ವಿಲೀನ ಮಾಡಿಕೊಳ್ಳಬಲ್ಲವು. ಇವನ್ನು ಸಿಂಪಡಿಸಿದಾಗ ಉಂಟಾಗುವ ಗ್ಲೈಕಾಲಿನ ಸಣ್ಣ ಹನಿಗಳು ಗಂಧ ಬೀರುವ ವಸ್ತುಗಳ ಅಣುಗಳನ್ನು ಹೀರಿಕೊಂಡು ನಿಷ್ಕ್ರಿಯಗೊಳಿಸುತ್ತವೆ.[] ಆವಿರೂಪದಲ್ಲಿ ಬಳಸಿದಾಗ ಅವು ಕ್ರಿಮಿನಾಶಕಗಳಂತೆ ವರ್ತಿಸಿ ವಾಸನೆಗೆ ಕಾರಣವಾದ ಸೂಕ್ಷ್ಮಜೀವಾಣುಗಳನ್ನೇ ನಾಶಪಡಿಸುವುವು.[] ಅಲ್ಪ ಪರಿಮಾಣದಲ್ಲಿ ಪ್ರಯೋಗಿಸಿದಾಗ್ಗೂ ಗ್ಲೈಕಾಲುಗಳು ವಾಯುಗತ ಬ್ಯಾಕ್ಟೀರಿಯಗಳಿಗೆ ಮಾರಕವಾಗಿರುವುದು ವ್ಯಕ್ತಪಟ್ಟಿದೆ.

ದುರ್ಗಂಧಯುಕ್ತ ಅನಿಲಗಳು ಮತ್ತು ಆವಿಗಳನ್ನು ಹೀರಲು ಪಟುಗೊಳಿಸಿದ ಇಂಗಾಲ ಅತಿ ಪ್ರಶಸ್ತ. ಇದರಲ್ಲಿರುವ ಅಸಂಖ್ಯಾತ ರಂಧ್ರಗಳಲ್ಲಿ ಗಂಧಕಾರಕ ಅಣುಗಳು ಸೆರೆಯಾಗಿ ವಾಸನೆ ಮಾಯವಾಗಿ ಬಿಡುತ್ತದೆ. ಹೀಗೆ ವಾಸನೆಯನ್ನು ಗ್ರಹಿಸಬಲ್ಲ ಇತರ ವಸ್ತುಗಳೆಂದರೆ ಸಿಲಿಕ ಜೆಲ್,[] ಕೀಸಲ್‌ಗರ್ ಮತ್ತು ಫುಲ್ಲರ್ ಮೃತ್ತಿಕೆ.[][] ಫಾರ್ಮಲ್ಡಿಹೈಡ್, ಅಸಿಟಾಲ್ಡಿಹೈಡ್ ಮುಂತಾದ ಆವಿಶೀಲ ವಸ್ತುಗಳ ನೀರಿನ ದ್ರಾವಣಗಳಿಗೂ ಗಂಧಗ್ರಹಣ ಗುಣ ಉಂಟು. ಆದರೆ ಇವುಗಳ ಕಾರ್ಯವಿಧಾನವೇ ಬೇರೆ. ಈ ಸಂಯುಕ್ತಗಳ ಅಣುಗಳು ಗಂಧಜನಕ ಅಣುಗಳನ್ನು ವೈಯಕ್ತಿಕವಾಗಿ ಆಕರ್ಷಿಸುತ್ತವೆ. ಅವೆರಡರ ಮಿಲನದಿಂದ ಪರಿಮಳದ ಸಂಕೀರ್ಣ ಅಣುವೊಂದು ರೂಪುಗೊಳ್ಳುವುದು. ಇಲ್ಲದಿದ್ದರೆ ಈ ರಾಸಾಯನಿಕಗಳು ಮೂಗಿನ ಒಳಪೊರೆಯನ್ನು ಉದ್ರೇಕಿಸಬಲ್ಲವಾದ್ದರಿಂದ ಗಂಧವಾಹಕ ನರ ನಿಶ್ಚೇಷ್ಟಿತವಾಗಬಹುದು. ಆಗ ಎಂಥ ತೀಕ್ಷ್ಣ ವಾಸನೆಯೂ ನಮ್ಮ ಮೂಗಿಗೆ ಹತ್ತುವುದಿಲ್ಲ. ಮಾರುಕಟ್ಟೆಯಲ್ಲಿರುವ ಗಂಧಹಾರಕಗಳಲ್ಲಿ ಇಷ್ಟು ಪರಿಮಾಣದಲ್ಲಿ ಈ ರಾಸಾಯನಿಕಗಳನ್ನು ಸೇರಿಸಿರುವುದಿಲ್ಲ. ಅಲ್ಲದೆ ಗಂಧಹಾರಕಗಳೊಡನೆ ಚಂಚಲ ತೈಲಗಳನ್ನು ಕೂಡಿಸಿ ಅವುಗಳಿಗೆ ಸುವಾಸನೆ ಉಂಟಾಗುವಂತೆ ಮಾಡಿರುತ್ತಾರೆ. ಪರಿಮಳಗಳ ಉಪಯೋಗಕ್ಕೆ ನಾಂದಿಯಾದುದು ಹೀಗೆ. ಆದರೆ ಇವು ದುರ್ನಾತವನ್ನು ಮರೆ ಮಾಡಬಲ್ಲುವೇ ವಿನಾ ನಿವಾರಿಸುವುದಿಲ್ಲ.

ದುರ್ಗಂಧವನ್ನು ಹುಟ್ಟಿಸುತ್ತಿರುವ ಸೂಕ್ಷ್ಮಜೀವಾಣುಗಳನ್ನು ಕೊಂದು ಮೂಲವನ್ನೇ ಚಿವುಟಿ ಹಾಕವುದು ಯೋಗ್ಯಕ್ರಮ. ಪೂತಿನಾಶಕಗಳು ಮತ್ತು ಸೋಂಕುನಿವಾರಕಗಳು ಕಾರ್ಯನಿರ್ವಹಿಸುವುದು ಹೀಗೆ. ಉದಾಹರಣೆಗಳು ಹಲವು. ಇವುಗಳಲ್ಲಿ ಕಲ್ಲಿದ್ದಲ ಡಾಂಬರಿನಿಂದ ಪಡೆಯಬಹುದಾದ ಫೀನಾಲ್ ಮತ್ತು ಕ್ರೆಸಾಲ್, ಹೈಡ್ರೊಜನ್ ಪೆರಾಕ್ಸೈಡ್ ಮತ್ತು ಪೊಟ್ಯಾಸಿಯಂ ಪರ್ಮ್ಯಾಂಗನೇಟುಗಳಂಥ ಉತ್ಕರ್ಷಣಕಾರಿಗಳು, ಬೋರಿಕ್ ಮತ್ತು ಸ್ಯಾಲಿಸಿಲಿಕ್ ಆಮ್ಲಗಳು,[][] ಹ್ಯಾಲೋಜನ್ನುಗಳಾದ ಕ್ಲೋರಿನ್, ಬ್ರೋಮಿನ್ ಮತ್ತು ಅಯೊಡೀನುಗಳು;[] ಬೆಳ್ಳಿಯ ನೈಟ್ರೇಟ್, ರಸಕರ್ಪೂರ (ಮರ್ಕ್ಯೂರಿಕ್ ಕ್ಲೋರೈಡ್) ಮುಂತಾದ ಲೋಹ ಲವಣಗಳು ಮುಖ್ಯವಾದವು.[]

ಪ್ರತಿನಿತ್ಯ ದಂತಧಾವನಕ್ಕೆ ನಾವು ಬಳಸುವ ಹಲ್ಲುಸರಿ (ಟೂತ್‌ಪೇಸ್ಟು) ಗಳಲ್ಲಿ ಒಂದಲ್ಲ ಒಂದು ಗಂಧಹಾರಕ ಇದ್ದೇ ಇರುತ್ತದೆ. ಹೆಕ್ಸಕ್ಲೋರೊಫಿನ್ ಇರುವ ಸರಿಯಿಂದ ಹಲ್ಲುಜ್ಜಿದರೆ ಬಾಯವಾಸನೆ ತಾತ್ಕಾಲಿಕವಾಗಿ ಹೋಗುತ್ತದೆ.

ಉಲ್ಲೇಖಗಳು

[ಬದಲಾಯಿಸಿ]
  1. https://www.infoplease.com/encyclopedia/medicine/drug/pharmacology/deodorizer
  2. https://www.towerwater.com/preventing-microbiological-growth-corrosion-with-glycol-filling-cleaning-services/
  3. https://www.goodhousekeeping.com/uk/house-and-home/declutter-your-home/a562684/what-are-silica-gel-pouches/
  4. Hosterman, John W.; Sam H. Patterson (1992). "Bentonite and Fuller's Earth Resources of the United States". U.S. Geological Survey Professional Paper. Professional Paper (1522). doi:10.3133/pp1522.
  5. Lotha, Gloria (13 September 2007). "Fuller's earth". Encyclopædia Britannica. Vol. Encyclopædia Britannica Online. Retrieved 7 July 2015.
  6. "Definition of Salicylic acid". MedicineNet.com. Archived from the original on 2011-12-09. Retrieved 2010-10-12.
  7. Greene SA (2013). Sittig's Handbook of Pesticides and Agricultural Chemicals. William Andrew. ISBN 978-0-8155-1903-4.
  8. World Health Organization (2009). Stuart MC, Kouimtzi M, Hill SR (eds.). WHO Model Formulary 2008. World Health Organization. p. 499. hdl:10665/44053. ISBN 978-92-4-154765-9.
  9. "Measles Kills Many Children". The Star and Sentinel. Gettysburg, PA. 1908-01-29. Retrieved 2021-09-25.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಗಂಧಹಾರಕ&oldid=1242338" ಇಂದ ಪಡೆಯಲ್ಪಟ್ಟಿದೆ