ಶಕ್ತಿ ಚಿಕಿತ್ಸೆ
ಶಕ್ತಿ ಚಿಕಿತ್ಸೆ ಎಂಬುದು ಔಷಧಿಗಳ ಬಳಕೆ ಇಲ್ಲದೆ, ಚಿಕಿತ್ಸಕನಿಂದ ರೋಗಿಗೆ ಪ್ರಾಣಶಕ್ತಿಯ ವರ್ಗಾವಣೆ ಮೂಲಕ ಖಾಯಿಲೆಗಳನ್ನು ಗುಣಪಡಿಸುವ ವಿಧಾನ (ಎನರ್ಜಿ ಹೀಲಿಂಗ್, ಪ್ರಾಣಚಿಕಿತ್ಸೆ). ರೋಗಿಯ ಶಕ್ತಿಶರೀರದಲ್ಲಿ ಹರಿಯುತ್ತಿರುವ ಪ್ರಾಣಶಕ್ತಿಯ ಅಸಮತೋಲನವನ್ನೂ ಅಡ್ಡಿ ಆತಂಕಗಳನ್ನೂ ನಿವಾರಿಸಿ ಮಲಿನ ಶಕ್ತಿಯನ್ನು ಹೊರತೆಗೆಯುತ್ತ ಶಕ್ತಿಶರೀರವನ್ನು ಶುದ್ಧೀಕರಿಸಿ, ಆರೋಗ್ಯಕರ ನವಚೈತನ್ಯ ನೀಡುವುದು ಶಕ್ತಿ ಚಿಕಿತ್ಸೆಯ ಮುಖ್ಯ ಹಂತಗಳು.[೧][೨][೩]
ಶಕ್ತಿಚಿಕಿತ್ಸೆಯ ಮೂಲ ತತ್ತ್ವಗಳು
[ಬದಲಾಯಿಸಿ]ಶಕ್ತಿಚಿಕಿತ್ಸೆ ಎರಡು ಮೂಲ ತತ್ತ್ವಗಳನ್ನು ಆಧರಿಸಿದೆ:
- ಮನುಷ್ಯನಿಗೆ ಜೀವ (ವೈಟಲ್ ಫೋರ್ಸ್) ಇದೆ. ಜೀವವಿರುವವರೆಗೆ ದೇಹದಲ್ಲಿ ಪಚನಕ್ರಿಯೆ, ಶ್ವಾಸಕ್ರಿಯೆ, ರಕ್ತಪರಿಚಲನೆ ಮುಂತಾದ ಜಟಿಲ ಜೀವರಾಸಾಯನಿಕ ಕ್ರಿಯೆಗಳು ಸಾಮರಸ್ಯದಿಂದ ನಡೆಯುತ್ತಿರುತ್ತವೆ. ಜೀವ ಹೋದಾಗ ಇವು ನಿಲ್ಲುತ್ತವೆ.
- ಮನುಷ್ಯನಿಗೆ ಅನಾರೋಗ್ಯ ಸ್ಥಿತಿಯಿಂದ ಆರೋಗ್ಯ ಸ್ಥಿತಿಗೆ ಮರಳುವ ಸ್ವಚಿಕಿತ್ಸಾಸಾಮರ್ಥ್ಯ ನೈಸರ್ಗಿಕವಾಗಿಯೇ ಇದೆ. ಗಾಯಗಳು, ಅಲ್ಪಕಾಲದ ಖಾಯಿಲೆಗಳು ತಮ್ಮಷ್ಟಕ್ಕೆ ತಾವೇ ವಾಸಿಯಾಗುವುದು ಇದಕ್ಕೆ ನಿದರ್ಶನಗಳು. ಹೀಗೆ ನಮ್ಮಲ್ಲೇ ಇರುವ ಸ್ವಚಿಕಿತ್ಸಾಸಾಮರ್ಥ್ಯಕ್ಕೆ ಪ್ರಾಣಶಕ್ತಿ ಚಿಕಿತ್ಸೆಯಲ್ಲಿ ಪ್ರಚೋದನೆ ಕೊಟ್ಟು ಬೇನೆಯನ್ನು ಗುಣಪಡಿಸಲಾಗುತ್ತದೆ.
ಭೌತಿಕ ಶರೀರ, ಶಕ್ತಿ ಶರೀರ
[ಬದಲಾಯಿಸಿ]ಮಾನವನು ಜೀವಿಸಿರಲು ಆಹಾರ, ನೀರು ಮತ್ತು ವಾಯು ಬೇಕು. ಇವಲ್ಲದೆ ಇವೆಲ್ಲಕ್ಕೂ ಸೂಕ್ಷ್ಮವಾದ ಪ್ರಾಣ ಶಕ್ತಿಯೂ ಬೇಕು. ಈ ವಿಷಯ ಹೆಚ್ಚು ಜನರಿಗೆ ತಿಳಿದಿಲ್ಲ. ಪ್ರಾಣ ಶಕ್ತಿ ಗಾಳಿ, ನೆಲ, ಜಲ, ಬಿಸಿಲು ಎಲ್ಲೆಲ್ಲೂ ಇರುವುದು. ಇದನ್ನು ಅರಿವಿಲ್ಲದೆಯೂ ಮನುಷ್ಯ ಯಾವಾಗಲೂ ಹೀರಿಕೊಳ್ಳುತ್ತಿರುತ್ತಾನೆ. ಉಪಯೋಗಿಸಿದ ಮಲಿನ ಪ್ರಾಣಶಕ್ತಿಯನ್ನು ವಿಸರ್ಜಿಸುತ್ತಲೂ ಇರುತ್ತಾನೆ. ಈ ಕೆಲಸವನ್ನು ಪ್ರಾಣಶರೀರ ಮಾಡುತ್ತಿರುತ್ತದೆ. ಮಾನವನಿಗಿರುವುದು ಕೇವಲ ಭೌತಿಕಶರೀರವೊಂದೇ ಅಲ್ಲ. ಭೌತಿಕ ಶರೀರವನ್ನು ಸಂಪೂರ್ಣವಾಗಿ ಆವರಿಸಿರುವ ಶಕ್ತಿಶರೀರವೂ ಇದೆ. ಈ ಶಕ್ತಿಶರೀರಕ್ಕೆ ಪ್ರಭಾವಳಿ, ತೇಜೋಮಂಡಲ, ಪ್ರಭಾಮಂಡಲ (ಇಂಗ್ಲಿಷಿನಲ್ಲಿ ಔರಾ, ಬಯೋಪ್ಲಾಸ್ಮಿಕ್ ಬಾಡಿ) ಎಂಬ ಹೆಸರುಗಳಿವೆ. ಇದು ಸಾಮಾನ್ಯ ಜನರಲ್ಲಿ ಸುಮಾರು 2 ಮೀಟರ್ಗಳವರೆಗೆ ಶರೀರದ ಸುತ್ತಲೂ ಪ್ರಸರಿಸಿರುತ್ತದೆ.
ಶಕ್ತಿ ಶರೀರವನ್ನು ಚಿಕಿತ್ಸೆಯ ದೃಷ್ಟಿಯಿಂದ ಮೂರು ವಲಯಗಳಾಗಿ ವಿಭಾಗಿಸಿದೆ. ಭೌತಿಕಶರೀರದ ಆಕಾರದಲ್ಲೇ ಸುಮಾರು 8-10 ಸೆಂಮೀ ದೂರದವರೆಗೆ ಶರೀರದ ಸುತ್ತಲೂ ಆವರಿಸುರುವ ಶಕ್ತಿ ಶರೀರಕ್ಕೆ ಪ್ರಾಣಶರೀರ ಅಥವಾ ಒಳವಲಯ ಎಂದು ಹೆಸರು. ಪತಂಜಲಿ ಯೋಗದಲ್ಲಿ ಇದಕ್ಕೆ ಪ್ರಾಣಮಯ ಕೋಶ (ಎಥರಿಕ್ ಬಾಡಿ) ಎನ್ನುತ್ತಾರೆ. ಸುಮಾರು 75 ಸೆಂಮೀ ದೂರದವರೆಗೆ ಪ್ರಸರಿಸಿರುವ ಶಕ್ತಿ ಶರೀರಕ್ಕೆ ಆರೋಗ್ಯಶರೀರ ಎಂದು ಹೆಸರು. ಇದರಲ್ಲಿ ದೇಹದಿಂದ ಲಂಬವಾಗಿ ಶಕ್ತಿಕಿರಣಗಳು ಹೊರಬರುತ್ತಿರುತ್ತವೆ. ಇದಾದ ಅನಂತರ ಇರುವ ಸಾಂದ್ರತೆಯಲ್ಲಿ ವಿರಳವಾದ ಶಕ್ತಿಶರೀರಕ್ಕೆ ಹೊರವಲಯ ಎಂದು ಹೆಸರು.
ಆರೋಗ್ಯ ಚೆನ್ನಾಗಿರುವಾಗ, ಮಾನವನನ್ನು ಆವರಿಸಿಕೊಂಡಿರುವ ಪ್ರಾಣಶಕ್ತಿ ಸುಗಮವಾಗಿ ನಾಡಿಗಳ ಮೂಲಕ ಹರಿಯುತ್ತಿರುತ್ತದೆ. ಅನಾರೋಗ್ಯವಾಗಿರುವ ಸಂದರ್ಭಗಳಲ್ಲಿ ಪ್ರಾಣಶರೀರ ಸಮರೂಪದಲ್ಲಿರುವುದಿಲ್ಲ. ತೊಂದರೆ ಇರುವ ಭಾಗಗಳಲ್ಲಿ ಮಲಿನ ಶಕ್ತಿ ಪೂರ್ಣವೇಗದಲ್ಲಿ ವಿಸರ್ಜಿತವಾಗದೆ ಕಟ್ಟಿಕೊಂಡು ಆ ಭಾಗದಲ್ಲಿ ಪ್ರಾಣಶಕ್ತಿ ಹೆಚ್ಚಿನ ಒತ್ತಡದಲ್ಲಿರುತ್ತದೆ. ಅಥವಾ ಪ್ರಾಣಶಕ್ತಿ ಯುಕ್ತ ಪ್ರಮಾಣದಲ್ಲಿ ನಿರ್ದಿಷ್ಟ ಭಾಗಕ್ಕೆ ಪ್ರವಹಿಸಲಾಗದೆ, ಆ ಭಾಗದಲ್ಲಿ ಶಕ್ತಿ ಕಡಿಮೆ ಒತ್ತಡದಲ್ಲಿರುತ್ತದೆ.
ಉದಾಹರಣೆಗೆ ಹೊಟ್ಟೆ ತೊಂದರೆ ಅನುಭವಿಸುತ್ತರುವ ವ್ಯಕ್ತಿಯೊಬ್ಬನ ಪ್ರಾಣಶರೀರದಲ್ಲಿ ಹೆಚ್ಚಿನ ಒತ್ತಡ ಮತ್ತು ಕಡಿಮೆ ಒತ್ತಡದ ಸ್ಥಿತಿಯಿರುತ್ತದೆ. ಉಭಯ ಸಂದರ್ಭಗಳಲ್ಲೂ ಅನಾರೋಗ್ಯವುಂಟಾಗುತ್ತದೆ.
ವ್ಯಕ್ತಿಯೊಬ್ಬನ ಪ್ರಾಣಶರೀರದ ಎಲ್ಲೆಯನ್ನು ಸ್ಪರ್ಶಜ್ಞಾನದಿಂದ ಅರಿತುಕೊಳ್ಳುವುದು ಸುಲಭ. ಇದಕ್ಕಾಗಿ ವಿಧಿಸಿರುವ ಕೆಲವು ವ್ಯಾಯಾಮ ಮಾಡುವುದರಿಂದ, ಕೈಗಳು ಪ್ರಾಣಶಕ್ತಿಯ ಇರವನ್ನು ಅರಿಯುವಷ್ಟು ಸೂಕ್ಷ್ಮತೆ ಗಳಿಸುತ್ತವೆ. ಇಂಥ ಸ್ಪರ್ಶೀ ಕೈಗಳನ್ನು ರೋಗಿಯ ಪ್ರಾಣ ಶರೀರದ ಹತ್ತಿರ ತಂದಾಗ ಅಲ್ಲಿ ಪ್ರಾಣಶಕ್ತಿ ಒತ್ತಡ ಹೆಚ್ಚಾಗಿದೆಯೋ ಕಡಿಮೆಯಾಗಿದೆಯೋ ಎಂಬುದು ಚಿಕಿತ್ಸಕನಿಗೆ ತಿಳಿಯುತ್ತದೆ.
ಚಿಕಿತ್ಸೆ
[ಬದಲಾಯಿಸಿ]ಚಿಕಿತ್ಸೆಯಲ್ಲಿ ಎರಡು ಸರಳ ಹಂತಗಳಿವೆ.
- ಒಂದು, ಮಲಿನ ಶಕ್ತಿಯನ್ನು ರೋಗಿಯ ಪ್ರಾಣಶರೀರದಿಂದ ತೆಗೆದು ಶುದ್ಧೀಕರಿಸುವುದು.
- ಎರಡು, ಆರೋಗ್ಯಕರ ಚೈತನ್ಯಪೂರ್ಣ ಪ್ರಾಣಶಕ್ತಿಯನ್ನು ವಾತಾವರಣದಿಂದ ಸ್ವೀಕರಿಸಿ ರೋಗಿಗೆ ನೀಡುವುದು.
ಶುದ್ಧೀಕರಿಸಲು ಚಿಕಿತ್ಸಕ ತನ್ನ ಕೈಗಳನ್ನೇ ಉಪಯೋಗಿಸುತ್ತಾನೆ. ತಲೆಯಿಂದ ಕಾಲಿನವರೆಗೆ ದೇಹದ ಮುಂಭಾಗ, ಹಿಂಭಾಗ ಮತ್ತು ಪಕ್ಕಗಳಲ್ಲಿ ಸಾಮಾನ್ಯ ಶುದ್ಧೀಕರಣಮಾಡುತ್ತಾನೆ. ಅನಂತರ ನೋವು, ಉರಿ, ಕಡಿತ ಮುಂತಾದ ತೊಂದರೆಗಳಿರುವ ಭಾಗದಲ್ಲಿ ಸ್ಥಳೀಯ ಶುದ್ಧೀಕರಣ ಮಾಡುತ್ತಾನೆ. ಶುದ್ಧೀಕರಣದಿಂದ ಬಿಡುಗಡೆಯಾದ ರೋಗಪೀಡಿತ ಮಲಿನಶಕ್ತಿಯನ್ನು ವಿಸರ್ಜಿಸಲು ಉಪ್ಪಿನ ನೀರನ್ನು ಚಿಕಿತ್ಸಕ ಸಾಮಾನ್ಯವಾಗಿ ಬಳಸುತ್ತಾನೆ. ನೀರಿಗೆ ಶಕ್ತಿಯನ್ನು ಹೀರುವ ಮತ್ತು ಉಪ್ಪಿಗೆ ಮಲಿನ ಶಕ್ತಿಯನ್ನು ವಿಚ್ಛಿದ್ರಗೊಳಿಸುವ ಗುಣವಿದೆ. ರೋಗಿಗೆ ಆರೋಗ್ಯಕರ ಶಕ್ತಿ ನೀಡುವಾಗ ಚಿಕಿತ್ಸಕ, ವಾತಾವರಣದಲ್ಲಿರುವ ಪ್ರಾಣಶಕ್ತಿಯನ್ನು ತನ್ನ ಉಸಿರಾಟದಿಂದ ಮತ್ತು ಚಕ್ರಗಳ ಮೂಲಕ ಹೀರಿ, ಯುಕ್ತವಾಗಿ ಮಾರ್ಪಡಿಸಿ ರೋಗಿಗೆ ನೀಡುತ್ತಾನೆ.
ಅನಂತರ ತನ್ನ ಮೂಲಕ ಹರಿದು ಬಂದ ಆರೋಗ್ಯಕರ ಶಕ್ತಿ ವಾತಾವರಣಕ್ಕೆ ಮತ್ತೆ ತತ್ಕ್ಷಣವೇ ಚದರಿಹೋಗದೆ, ಆ ಭಾಗದಲ್ಲೇ ಉಳಿಯುವಂತೆ ಮಾಡಲು ಶಕ್ತಿಯನ್ನು ಸ್ಥಿರಗೊಳಿಸುತ್ತಾನೆ. ಚಿಕಿತ್ಸೆಯ ಕೊನೆಯ ಹಂತದಲ್ಲಿ ಶಕ್ತಿ ನೀಡಿ, ರೋಗಿಯ ಶಕ್ತಿಶರೀರದಿಂದ ತನ್ನ ಶಕ್ತಿಶರೀರವನ್ನು ಬೇರ್ಪಡಿಸಿ ಚಿಕಿತ್ಸೆ ಮುಗಿಸುತ್ತಾನೆ.
ವೈಜ್ಞಾನಿಕ ಆಧಾರ
[ಬದಲಾಯಿಸಿ]ಪ್ರಾಣಶರೀರದ ಛಾಯಾಚಿತ್ರವನ್ನು ಕಿರ್ಲಿಯನ್ ಕ್ಯಾಮರಾದಿಂದ ತೆಗೆಯಬಹುದು. ಗಣಕಯಂತ್ರ ಮತ್ತು ಆಧುನಿಕ ತಂತ್ರವಿದ್ಯೆ ಉಪಯೋಗಿಸಿಕೊಂಡು ಬಂದಿರುವ ಜಿಡಿವಿ (ಗ್ಯಾಸ್ ಡಿಸ್ಛಾರ್ಜ್ ವಿಷುವಲೈಸೇಷನ್) ತಂತ್ರದಿಂದ ಶಕ್ತಿಶರೀರದ ಉತ್ತಮ ಹಾಗೂ ನಿಖರ ಛಾಯಾಚಿತ್ರವನ್ನು ಪಡೆಯಬಹುದು. ಶಕ್ತಿಚಿಕಿತ್ಸೆಗೆ ಮೊದಲು ಮತ್ತು ಶಕ್ತಿಚಿಕಿತ್ಸೆಯ ಅನಂತರ ರೋಗಿಯೊಬ್ಬನ ಶಕ್ತಿಶರೀರದ ಛಾಯಾಚಿತ್ರಗಳನ್ನು ತೆಗೆಯುವುದರಿಂದ, ಪ್ರಾಣಶರೀರದಲ್ಲಾದ ಬದಲಾವಣೆಗಳನ್ನು ವೈಜ್ಞಾನಿಕವಾಗಿ ಸಾಧಿಸಬಹುದು.
ಚಿಕಿತ್ಸೆಯ ತರಬೇತಿ
[ಬದಲಾಯಿಸಿ]ಶಕ್ತಿಚಿಕಿತ್ಸೆ ನಡೆಸುವ ವಿದ್ಯೆಯನ್ನು ಪ್ರಾಣಚಿಕಿತ್ಸೆ ತರಬೇತಿ ಶಿಬಿರದಲ್ಲಿ ಹೇಳಿ ಕೊಡುತ್ತಾರೆ. 16 ವರ್ಷಕ್ಕೆ ಮೇಲ್ಪಟ್ಟ ಆಸಕ್ತರು ಇದನ್ನು ಕಲಿತು ತಮ್ಮ ರೋಗಗಳಿಗೆ ತಾವೇ ಚಿಕಿತ್ಸೆ ಮಾಡಿಕೊಳ್ಳುವುದನ್ನು ಮತ್ತು ಬೇರೆಯವರಿಗೆ ಚಿಕಿತ್ಸೆ ಮಾಡುವುದನ್ನು ಕೂಡ ಕಲಿಯಬಹುದು. ಪ್ರಾಣಚಿಕಿತ್ಸೆ ಹಂತ ಹಂತವಾಗಿ ಪ್ರಾಥಮಿಕ ಚಿಕಿತ್ಸೆ, ಉನ್ನತ ಚಿಕಿತ್ಸೆ, ಮನೋರೋಗ ಚಿಕಿತ್ಸೆ, ಹರಳುಗಳಿಂದ ಚಿಕಿತ್ಸೆ ಎಂದು ಬೇರೆಬೇರೆ ಶಿಬಿರಗಳಲ್ಲಿ ಕಲಿಸಿಕೊಡುತ್ತಾರೆ.
ಚೋವಾ ಕೊಕ್ ಸುಯಿ
[ಬದಲಾಯಿಸಿ]ಪ್ರಾಣಚಿಕಿತ್ಸೆಯ ತತ್ತ್ವಗಳನ್ನು ಇಂದಿನ ವೈಜ್ಞಾನಿಕ ಮನೋಭಾವದ ಜನರಿಗೆ ಅರ್ಥವಾಗುವಂತೆ ಶಿಕ್ಷಣ ವ್ಯವಸ್ಥೆ ರೂಪಿಸಿ, ಆಡಳಿತಾತ್ಮಕ ಚೌಕಟ್ಟನ್ನು ನೀಡಿ ಜನಪ್ರಿಯಗೊಳಿಸುತ್ತಿರುವವರು ಮಾಸ್ಟರ್ ಚೋವಾ ಕೊಕ್ ಸುಯಿ. ಇವರು ಚೀನ ಮೂಲದವರು ಮತ್ತು ಫಿಲಿಪೀನ್ಸ್ನಲ್ಲಿ ವಾಸಿಸುತ್ತಿದ್ದರು. ವೃತ್ತಿಯಲ್ಲಿ ರಾಸಾಯನಿಕ ಎಂಜಿನಿಯರ್ ಮತ್ತು ಉದ್ಯಮಿ. ಬಾಲ್ಯದಿಂದಲೂ ಆಧ್ಯಾತ್ಮಿಕ ಚಿಕಿತ್ಸಾ ವಿಷಯಗಳಲ್ಲಿ ಆಸಕ್ತಿ ಇದ್ದುದರಿಂದ ಅದರಲ್ಲಿ ವಿಶೇಷ ಪರಿಣತಿ ಪಡೆದು 16 ವರ್ಷಗಳ ಕಾಲ ಸತತ ಪರಿಶ್ರಮಪಟ್ಟು ಭಾರತ, ಟಿಬೆಟ್, ಚೀನದಲ್ಲಿರುವ ಸಿದ್ಧಪುರುಷರನ್ನು ಭೇಟಿಮಾಡಿ, ವಿದ್ಯೆ ಕಲಿತು ಪ್ರಚಾರಕ್ಕೆ ತಂದರು. ಇಂದು ಪ್ರಪಂಚದಲ್ಲಿ ಸುಮಾರು ಎಲ್ಲ ದೇಶಗಳಲ್ಲೂ ಪ್ರಾಣಚಿಕಿತ್ಸೆ ವ್ಯಾಪಿಸಿದೆ. ಭಾರತಕ್ಕೆ ಇವರು ಪ್ರತಿವರ್ಷ ಭೇಟಿಕೊಟ್ಟು ಯೋಗ, ಧ್ಯಾನ ಮತ್ತು ಚಿಕಿತ್ಸೆಗಳ ಬಗೆಗೆ ಶಿಕ್ಷಣ ನೀಡುತ್ತಿದ್ದರು. ಕ್ಲಿಷ್ಟವಾದ ಖಾಯಿಲೆಗಳನ್ನೂ ಪ್ರಾಣಚಿಕಿತ್ಸೆ ಮೂಲಕ ಶೀಘ್ರವಾಗಿ ವಾಸಿಮಾಡುತ್ತಿದ್ದರು. ಪುಣೆ ಬಳಿ ಮುಲ್ಷಿಯಲ್ಲಿ ಮೊದಲನೆಯ ಅಂತಾರಾಷ್ಟ್ರೀಯ ಪ್ರಾಣಚಿಕಿತ್ಸೆ ಮತ್ತು ಅರ್ಹತಾಯೋಗದ ಆಶ್ರಮ ಕಟ್ಟಿದ್ದಾರೆ.
ಉಲ್ಲೇಖಗಳು
[ಬದಲಾಯಿಸಿ]- ↑ https://timesofindia.indiatimes.com/life-style/health-fitness/home-remedies/5-most-effective-energy-healing-techniques-and-how-they-work/articleshow/70698807.cms
- ↑ https://pranichealing.com/
- ↑ National Center for Complementary and Integrative Health (2005). "Energy Medicine: An Overview". Archived from the original on May 22, 2016. Retrieved May 26, 2015.
ಹೊರಗಿನ ಕೊಂಡಿಗಳು
[ಬದಲಾಯಿಸಿ]- NIH Energy medicine: overview.
- Miracle Machines: The 21st-Century Snake Oil: a Seattle Times series on fraudulent energy medicine devices
- What Is Complementary and Alternative Medicine? Other CAM Practices "biofield".
- An overview of the pseudoscience behind "bioresonance therapy": "Electrodiagnostic" Devices