ಉಮರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಉಮರ್
عمر
ಫಾರೂಕ್, ಅಮೀರುಲ್ ಮೂಮಿನೀನ್

ಅರಬ್ಬೀ ಭಾಷೆಯಲ್ಲಿರುವ ಉಮರ್‌ರ ಹೆಸರು
ದ್ವಿತೀಯ ಖಲೀಫ
ಆಡಳಿತ ಆಗಸ್ಟ್ 23, 634 ರಿಂದ ನವೆಂಬರ್ 3, 644
ಪೂರ್ವಾಧಿಕಾರಿ ಅಬೂ ಬಕರ್ ಬಿನ್ ಅಬೂ ಕುಹಾಫ
ಉತ್ತರಾಧಿಕಾರಿ ಉಸ್ಮಾನ್ ಬಿನ್ ಅಫ್ಫಾನ್
ಪತ್ನಿಯರು
  • ಕುರೈಬ ಬಿನ್ತ್ ಅಬೂ ಉಮಯ್ಯ (ಉಮ್ಮು ಸಲಮರ ಸಹೋದರಿ)
  • ಉಮ್ಮು ಕುಲ್ಸೂಮ್ ಮುಲೈಕ ಬಿನ್ತ್ ಜರ್ವಲ್ ಅಲ್-ಖುಝಾಇಯ್ಯ
  • ಝೈನಬ್ ಬಿನ್ತ್ ಮಝ್‌ಊನ್ (ಉಸ್ಮಾನ್ ಬಿನ್ ಮಝ್‌ಊನ್‌ರ ಸಹೋದರಿ)
  • ಜಮೀಲ ಬಿನ್ತ್ ಸಾಬಿತ್ ಅಲ್-ಅನ್ಸಾರಿಯ್ಯ (ಆಸಿಯ)
  • ಆತಿಕ ಬಿನ್ತ್ ಝೈದ್ (ಸಈದ್ ಬಿನ್ ಝೈದ್‌ರ ಸಹೋದರಿ)
  • ಉಮ್ಮು ಹಕೀಮ್ ಬಿನ್ತ್ ಹಾರಿಸ್
  • ಉಮ್ಮು ಕುಲ್ಸೂಮ್ ಬಿನ್ತ್ ಅಲೀ
  • ಸಈದ ಬಿನ್ತ್ ರಾಫಿಅ್ ಅಲ್-ಮಖ್‌ಝೂಮಿಯ್ಯ
  • ಲುಹ್ಯ (ಉಮ್ಮು ವಲದ್)
ಗೋತ್ರ ಬನೂ ಅದೀ (ಕುರೈಷ್)
ತಂದೆ ಖತ್ತಾಬ್ ಬಿನ್ ನುಫೈಲ್
ತಾಯಿ ಹಂತಮ ಬಿಂತ್ ಹಿಶಾಂ
ಜನನ 583
ಮಕ್ಕಾ, ಅರೇಬಿಯನ್ ಪರ್ಯಾಯ ದ್ವೀಪ ಈಗಿನ ಸೌದಿ ಅರೇಬಿಯಾ
ಮರಣ 644
ಮದೀನಾ, ಅರೇಬಿಯನ್ ಪರ್ಯಾಯ ದ್ವೀಪ ಈಗಿನ ಸೌದಿ ಅರೇಬಿಯಾ
Burial ಮದೀನಾ, ಅರೇಬಿಯನ್ ಪರ್ಯಾಯ ದ್ವೀಪ ಈಗಿನ ಸೌದಿ ಅರೇಬಿಯಾ
ಕೆಲಸ ವ್ಯಾಪಾರಿ, ಆಡಳಿತಗಾರ
ಧರ್ಮ ಇಸ್ಲಾಂ ಧರ್ಮ

ಉಮರ್ ಬಿನ್ ಖತ್ತಾಬ್ (ಅರಬ್ಬಿ: عمر بن الخطاب) (ಕ್ರಿ.ಶ. 584 – 644) — ಮುಹಮ್ಮದ್‌ರ ಆಪ್ತ ಸಂಗಡಿಗ ಮತ್ತು ಪ್ರಮುಖ ಅನುಯಾಯಿಗಳಲ್ಲೊಬ್ಬರು. ಇಸ್ಲಾಮೀ ಸಾಮ್ರಾಜ್ಯದ ದ್ವಿತೀಯ ಖಲೀಫ. ಮುಸಲ್ಮಾನರ ನಂಬಿಕೆ ಪ್ರಕಾರ ಬದುಕಿರುವಾಗಲೇ ಸ್ವರ್ಗದ ಸುವಾರ್ತೆ ಪಡೆದ ಹತ್ತು ಸಹಾಬಿಗಳಲ್ಲಿ ಒಬ್ಬರು. ಮುಹಮ್ಮದ್‌ರ ಪತ್ನಿ ಹಫ್ಸರ ತಂದೆ. ತನ್ನ ನ್ಯಾಯಸಮ್ಮತ ಮತ್ತು ನಿಷ್ಪಕ್ಷ ಆಡಳಿತದ ಮೂಲಕ ಜಗದ್ವಿಖ್ಯಾತಿ ಪಡೆದ ಆಡಳಿತಗಾರ.

ಉಮರ್ ಆರಂಭಕಾಲದಲ್ಲಿ ಮುಹಮ್ಮದ್‌ರ ಬದ್ಧ ವೈರಿಯಾಗಿದ್ದರು. ಮುಹಮ್ಮದ್‌ರ ಧರ್ಮದಿಂದಾಗಿ ಕುರೈಷ್ ಬುಡಕಟ್ಟಿನಲ್ಲಿ ಮತ್ತು ಮಕ್ಕಾದಲ್ಲಿ ಜನರ ಮಧ್ಯೆ ಒಡುಕು ಮೂಡುತ್ತಿರುವುದನ್ನು ಕಂಡು ರೋಷಾಕುಲರಾಗಿ ಖಡ್ಗವನ್ನು ಬೀಸಿಕೊಂಡು ಮುಹಮ್ಮದ್‌ರನ್ನು ಹತ್ಯೆಗೈಯಲು ತೆರಳಿದಾಗ, ತನ್ನ ತಂಗಿ ಕೂಡ ಇಸ್ಲಾಂ ಧರ್ಮಕ್ಕೆ ಸೇರಿದ ಸುದ್ದಿಯನ್ನು ತಿಳಿದು ತಂಗಿಯ ಮನೆಯತ್ತ ಧಾವಿಸಿದರು. ಅಲ್ಲಿ ಅನಿರೀಕ್ಷಿತವಾಗಿ ಅವರು ಕುರ್‌ಆನ್ ಶ್ಲೋಕಗಳಿಗೆ ಕಿವಿಗೊಟ್ಟರು. ಇದರಿಂದ ಅವರ ಮನಪರಿವರ್ತನೆಯಾಯಿತೆಂದು ಹೇಳಲಾಗುತ್ತದೆ. ಆ ಕ್ಷಣದಲ್ಲೇ ಅವರು ಮುಹಮ್ಮದ್‌ರ ಬಳಿಗೆ ಹೋಗಿ ಇಸ್ಲಾಂ ಧರ್ಮಕ್ಕೆ ಮತಾಂತರವಾದರು.

ಪ್ರಥಮ ಖಲೀಫ ಅಬೂ ಬಕರ್‌ರ ಮರಣಾನಂತರ ಉಮರ್ ಇಸ್ಲಾಮೀ ಸಾಮ್ರಾಜ್ಯದ ದ್ವಿತೀಯ ಖಲೀಫರಾದರು. ಅವರ ಆಡಳಿತಕಾಲದಲ್ಲಿ ಇಸ್ಲಾಮೀ ಸಾಮ್ರಾಜ್ಯವು ಊಹಿಸಲಾಗದಷ್ಟು ವೇಗದಲ್ಲಿ ವಿಸ್ತರಿಸಿತು. ಸಂಪೂರ್ಣ ಸಾಸಾನಿ ಸಾಮ್ರಾಜ್ಯ ಮತ್ತು ಬೈಝಾಂಟೈನ್ ಸಾಮ್ರಾಜ್ಯದ ಮೂರರಲ್ಲಿ ಎರಡು ಭಾಗ ಇಸ್ಲಾಮಿನ ತೆಕ್ಕೆಗೆ ಬಂದವು. ಅವರು ಸಾಸಾನಿಗಳ ವಿರುದ್ಧ ಹೋರಾಡಿ ಕೇವಲ ಎರಡು ವರ್ಷಗಳಲ್ಲಿ ಪರ್ಶಿಯಾ ಪತನದ ಮೂಲಕ ಸಾಸಾನಿ ಸಾಮ್ರಾಜ್ಯವನ್ನು ಸಂಪೂರ್ಣವಾಗಿ ನಾಶ ಮಾಡಿದರು. ಅವರು ಯಹೂದರ ಮೇಲಿದ್ದ ಕ್ರೈಸ್ತ ಬಹಿಷ್ಕಾರವನ್ನು ಕೊನೆಗೊಳಿಸಿ ಅವರಿಗೆ ಜೆರುಸಲೇಮ್ ಪ್ರವೇಶಿಸಿ ಆರಾಧನೆ ಮಾಡಲು ಅವಕಾಶ ನೀಡಿದರು. ಕ್ರಿ.ಶ. 644 ರಲ್ಲಿ ಅವರು ಪರ್ಶಿಯನ್ ಗುಲಾಮ ಅಬೂ ಲುಅಲುಅ ಫೈರೂಝ್‌ನಿಂದ ಕೊಲೆಯಾದರು.

ವಂಶ[ಬದಲಾಯಿಸಿ]

ಉಮರ್ ಬಿನ್ ಖತ್ತಾಬ್ ಬಿನ್ ನುಫೈಲ್ ಬಿನ್ ಅಬ್ದುಲ್ ಉಝ್ಝ ಬಿನ್ ರಿಯಾಹ್ ಬಿನ್ ಅಬ್ದುಲ್ಲಾ ಬಿನ್ ಕುರ್ತ್ ಬಿನ್ ರಿಝಾಹ್ ಬಿನ್ ಅದೀ ಬಿನ್ ಕಅಬ್ ಬಿನ್ ಲುಅಯ್ ಬಿನ್ ಗಾಲಿಬ್ ಬಿನ್ ಫಿಹ್ರ್ ಬಿನ್ ಮಾಲಿಕ್ ಬಿನ್ ನದ್ರ್ (ಕುರೈಷ್) ಬಿನ್ ಕಿನಾನ ಬಿನ್ ಖುಝೈಮ ಬಿನ್ ಮುದ್ರಿಕ ಬಿನ್ ಇಲ್ಯಾಸ್ ಬಿನ್ ಮುದರ್ ಬಿನ್ ನಿಝಾರ್ ಬಿನ್ ಮಅದ್ದ್ ಬಿನ್ ಅದ್ನಾನ್.

ಜನನ ಮತ್ತು ಬೆಳವಣಿಗೆ[ಬದಲಾಯಿಸಿ]

ಉಮರ್ ಕ್ರಿ.ಶ. 584 ರಲ್ಲಿ ಖತ್ತಾಬ್ ಬಿನ್ ನುಫೈಲ್ ಮತ್ತು ಹಂತಮ ಬಿಂತ್ ಹಿಶಾಂ ದಂಪತಿಯ ಮಗನಾಗಿ ಮಕ್ಕಾದಲ್ಲಿ ಹುಟ್ಟಿದರು. ಅಲ್ಲಿಯೇ ಬೆಳೆದು ದೊಡ್ಡವರಾದರು. ಅವರು ಕುರೈಷ್ ಬುಡಕಟ್ಟಿನ ಬನೂ ಅದೀ ಗೋತ್ರಕ್ಕೆ ಸೇರಿದವರು. ಇತರ ಕುರೈಷರಿಗೆ ಭಿನ್ನವಾಗಿ ಇವರು ಓದು-ಬರಹ ಬಲ್ಲವರಾಗಿದ್ದರು. ಅವರ ತಂದೆ ಬಹಳ ಒರಟು ಸ್ವಭಾವದವರು. ಉಮರ್ ಚಿಕ್ಕಂದಿನಲ್ಲೇ ಒಂಟೆಗಳನ್ನು ಮೇಯಿಸುವ ಕೆಲಸವನ್ನು ಮಾಡುತ್ತಿದ್ದರು. ಅವರು ಕುದುರೆ ಸವಾರಿ, ಕುಸ್ತಿ ಮುಂತಾದ ಕ್ರೀಡೆಗಳಲ್ಲಿ ಪರಿಣತರಾಗಿದ್ದರು.

ವೃತ್ತಿಜೀವನ[ಬದಲಾಯಿಸಿ]

ಅವರು ಉಕ್ಕಾಝ್, ಮಜನ್ನ, ದುಲ್-ಮಜಾಝ್ ಮುಂತಾದ ಅರಬ್ ಮಾರುಕಟ್ಟೆಗಳಿಗೆ ತೆರಳಿ ವ್ಯಾಪಾರ ಕಲಿತು ನಂತರ ಅದರಿಂದಲೇ ಧನಿಕರಾದರು. ಅವರು ವ್ಯಾಪಾರ ನಿಮಿತ್ತ ಬೇಸಿಗೆಕಾಲದಲ್ಲಿ ಸಿರಿಯಾ ಮತ್ತು ಚಳಿಗಾಲದಲ್ಲಿ ಯಮನ್‌ಗೆ ತೆರಳುತ್ತಿದ್ದರು. ಅವರಿಗೆ ಕುರೈಷರ ಮಧ್ಯೆ ಪ್ರಮುಖ ಸ್ಥಾನಮಾನವಿತ್ತು. ಕುರೈಷರು ಮತ್ತು ಇತರ ಅರಬ್ ಗೋತ್ರಗಳ ನಡುವೆ ಯುದ್ಧವಾದರೆ ಕುರೈಷರು ಇವರನ್ನು ರಾಯಭಾರಿಯಾಗಿ ಕಳುಹಿಸುತ್ತಿದ್ದರು.

ಮುಹಮ್ಮದ್‌ರ ಬದ್ಧ ಶತ್ರು[ಬದಲಾಯಿಸಿ]

ಇತರ ಕುರೈಷರಂತೆ ಉಮರ್ ಕೂಡ ವಿಗ್ರಹಾರಾಧಕರಾಗಿದ್ದರು. ಅವರು ಮುಹಮ್ಮದ್‌ರ ಬದ್ಧ ವೈರಿಯಾಗಿದ್ದರು. ಮುಸ್ಲಿಮರನ್ನು ತೀವ್ರವಾಗಿ ಹಿಂಸಿಸಿದವರಲ್ಲಿ ಅವರೂ ಒಬ್ಬರು. ಕುರೈಷರ ಹಿಂಸೆ ಸಹಿಸಲಸಾಧ್ಯವಾದಾಗ ಮುಹಮ್ಮದ್ ತಮ್ಮ ಅನುಯಾಯಿಗಳಿಗೆ ಇಥಿಯೋಪಿಯಾಗೆ ವಲಸೆ ಹೋಗಲು ಆದೇಶಿಸಿದರು. ಆಗ ಉಮರ್‌ರ ರೋಷಾಗ್ನಿ ಕಟ್ಟೆಯೊಡೆಯಿತು. ಮುಹಮ್ಮದ್‌ರ ಧರ್ಮದಿಂದಾಗಿ ಕುರೈಷ್ ಸಮಾಜವು ಇಬ್ಭಾಗವಾಗುವುದು ಅವರಿಗೆ ಸಹಿಸಲಾಗಲಿಲ್ಲ. ಮುಹಮ್ಮದ್‌ರನ್ನು ಕೊಲ್ಲುವುದೇ ಈ ಎಲ್ಲಾ ಸಮಸ್ಯೆಗಳಿಗೂ ಪರಿಹಾರವೆಂದು ಅವರು ತೀರ್ಮಾನಿಸಿದರು.

ಇಸ್ಲಾಮ್ ಸ್ವೀಕಾರ[ಬದಲಾಯಿಸಿ]

ಮುಹಮ್ಮದ್‌ರ ಧರ್ಮದಿಂದ ಮಕ್ಕಾದಲ್ಲಿ ಉಂಟಾಗಿದ್ದ ಕ್ರಾಂತಿ ಮಾತ್ರವಲ್ಲದೆ, ಮುಹಮ್ಮದ್‌ರ ಚಿಕ್ಕಪ್ಪ ಹಂಝ ಬಿನ್ ಅಬ್ದುಲ್ ಮುತ್ತಲಿಬ್ ಉಮರ್‌ರ ಮಾವಂದಿರಲ್ಲಿ ಒಬ್ಬನಾದ ಅಬೂ ಜಹಲ್‌ನನ್ನು ಅವಮಾನಿಸಿದ್ದು ಕೂಡ ಉಮರ್‌ರ ರೋಷಕ್ಕೆ ಕಾರಣವೆಂದು ಹೇಳಲಾಗುತ್ತದೆ. ಕಾರಣ ಏನೇ ಆದರೂ ಅವರು ಕೈಯಲ್ಲಿ ಖಡ್ಗ ಹಿಡಿದು ಮುಹಮ್ಮದ್‌ರನ್ನು ಹುಡುಕುತ್ತಾ ಹೊರಟರು. ದಾರಿ ಮಧ್ಯೆ ನುಐಮ್ ಬಿನ್ ಅಬ್ದುಲ್ಲಾ ಅವರನ್ನು ಭೇಟಿಯಾದರು. ನುಐಮ್ ಈಗಾಗಲೇ ಇಸ್ಲಾಮ್‌ಗೆ ಮತಾಂತರವಾಗಿದ್ದರೂ ಅದನ್ನು ಬಹಿರಂಗಪಡಿಸಿರಲಿಲ್ಲ. “ತಾವು ಎಲ್ಲಿಗೆ ಹೊರಟಿರಿ?” ಎಂದು ಅವರು ಕೇಳಿದಾಗ, “ಮುಹಮ್ಮದ್‌ನನ್ನು ಕೊಲ್ಲಲು!” ಎಂದು ಉಮರ್ ರೋಷದಿಂದ ಉತ್ತರಿಸಿದರು. “ಆದರೆ ಅದಕ್ಕೆ ಮುಂಚೆ ನಿನ್ನ ಕುಟುಂಬವನ್ನು ಸರಿಮಾಡಬಾರದೇ? ನಿನ್ನ ಸೋದರ ಸಂಬಂಧಿ ಸಈದ್ ಬಿನ್ ಝೈದ್ ಮತ್ತು ನಿನ್ನ ತಂಗಿ ಫಾತಿಮ ಈಗಾಗಲೇ ಇಸ್ಲಾಮ್ ಸ್ವೀಕರಿಸಿದ್ದಾರೆ. ಮೊದಲು ಅವರನ್ನು ಸರಿಮಾಡಿ ನಂತರ ಮುಹಮ್ಮದ್‌ರನ್ನು ಕೊಲ್ಲಲು ಹೋಗಿ” ಎಂದು ನುಐಮ್ ಹೇಳಿದಾಗ, ಉಮರ್‌ಗೆ ಅದು ಸರಿಯೆಂದು ಕಂಡಿತು.

ಉಮರ್ ನೇರವಾಗಿ ತಂಗಿಯ ಮನೆಗೆ ಹೋದರು. ಅಲ್ಲಿ ಖಬ್ಬಾಬ್ ಬಿನ್ ಅರತ್ ಅವರಿಬ್ಬರಿಗೆ ಕುರ್‌ಆನ್ ಕಲಿಸುತ್ತಿದ್ದರು. ಉಮರ್ ಸಈದ್‌ರಿಗೆ ತೀವ್ರವಾಗಿ ಥಳಿಸಿದರು. ತಂಗಿ ಫಾತಿಮರ ಕೆನ್ನೆಗೆ ಬಲವಾಗಿ ಬಾರಿಸಿದರು. ಆಗ ಆಕೆಯ ಕೈಯಲ್ಲಿದ್ದ ಕುರ್‌ಆನ್ ಪ್ರತಿ ಕೆಳಗೆ ಬಿತ್ತು. ಉಮರ್ ಅದನ್ನು ತೆಗೆದು ಓದತೊಡಗಿದರು. ಅದರಲ್ಲಿ ಪವಿತ್ರ ಕುರ್‌ಆನ್‌ನ 20ನೇ ಅಧ್ಯಾಯ ಸೂರ ತಾಹಾದ ಪ್ರಾರಂಭದ ಆರು ಶ್ಲೋಕಗಳಿದ್ದವು. ಅದನ್ನು ಓದುತ್ತಿದ್ದಂತೆ ಉಮರ್‌ರ ಅಂತರಾಳದಲ್ಲಿ ಏನೋ ಒಂದು ಬದಲಾವಣೆ ಗೋಚರಿಸಿತು. ಅವರು ನೇರವಾಗಿ ಮುಹಮ್ಮದ್‌ರ ಬಳಿಗೆ ತೆರಳಿ ಇಸ್ಲಾಂ ಧರ್ಮಕ್ಕೆ ಮತಾಂತರವಾದರು.

ಧರ್ಮಪ್ರಚಾರ[ಬದಲಾಯಿಸಿ]

ಉಮರ್ ಇಸ್ಲಾಂ ಸ್ವೀಕರಿಸುವುದಕ್ಕೆ ಮುನ್ನ ಮುಸ್ಲಿಮರು ರಹಸ್ಯವಾಗಿ ಧರ್ಮಪ್ರಚಾರ ಮಾಡುತ್ತಿದ್ದರು. ಅವರಿಗೆ ಕುರೈಷರ ವಿರುದ್ಧ ಧ್ವನಿಯೆತ್ತುವವರಾರೂ ಇರಲಿಲ್ಲ. ಆದರೆ ಉಮರ್ ಇಸ್ಲಾಂ ಸ್ವೀಕರಿಸಿದ ಬಳಿಕ ಮುಸ್ಲಿಮರು ಬಹಿರಂಗವಾಗಿ ನಮಾಝ್ ಮಾಡಲು ಮತ್ತು ಧರ್ಮ ಪ್ರಚಾರ ಮಾಡಲು ಆರಂಭಿಸಿದರು.

ಹಿಜ್ರ[ಬದಲಾಯಿಸಿ]

ಮುಹಮ್ಮದ್ ಮದೀನಕ್ಕೆ ಹಿಜ್ರ ಹೋಗಲು ಆದೇಶಿಸಿದಾಗ ಹೆಚ್ಚಿನ ಮುಸ್ಲಿಮರು ಶತ್ರುಗಳ ಭಯದಿಂದ ಕದ್ದು ಮುಚ್ಚಿ ಹಿಜ್ರ ಮಾಡಿದರೆ ಉಮರ್ ಬಹಿರಂಗವಾಗಿಯೇ ಹಿಜ್ರ ಮಾಡಿದರು. ಅವರು ಕೈಯಲ್ಲಿ ಖಡ್ಗವನ್ನು ಹಿಡಿದು, ಬಿಲ್ಲನ್ನು ಹೆಗಲಿಗೇರಿಸಿದರು. ನಂತರ ಕಅಬಾ ತವಾಫ್ ಮಾಡಿ ಮಕಾಮ್ ಇಬ್ರಾಹೀಮ್ ಹಿಂದೆ ನಮಾಝ್ ಮಾಡಿದರು. ನಂತರ ಅಲ್ಲಿದ್ದ ಕುರೈಷರೊಂದಿಗೆ, “ನೋಡಿ, ನಾನು ಹಿಜ್ರ ಹೋಗುತ್ತಿದ್ದೇನೆ. ಯಾರ ತಾಯಿಗೆ ತನ್ನ ಮಗನನ್ನು ಕಳೆದುಕೊಳ್ಳಲು, ಯಾರಿಗೆ ತನ್ನ ಮಕ್ಕಳನ್ನು ಅನಾಥರನ್ನಾಗಿ ಮಾಡಲು ಮತ್ತು ಯಾರಿಗೆ ತನ್ನ ಹೆಂಡತಿಯನ್ನು ವಿಧವೆಯನ್ನಾಗಿ ಮಾಡಲು ಇಷ್ಟವಿದೆಯೋ ಅವರು ನನ್ನನ್ನು ತಡೆಯಲಿ” ಎಂದರು. ಆದರೆ ಅಲ್ಲಿದ್ದ ಯಾರೂ ಅವರನ್ನು ತಡೆಯಲು ಮುಂದಾಗಲಿಲ್ಲ. ಸುಮಾರು ಇಪ್ಪತ್ತರಷ್ಟು ಮುಸಲ್ಮಾನರೊಂದಿಗೆ ಅವರು ಕುರೈಷರ ಸಮ್ಮುಖದಲ್ಲೇ ಮದೀನಕ್ಕೆ ಹಿಜ್ರ ಹೊರಟರು.

ಯುದ್ಧಗಳು[ಬದಲಾಯಿಸಿ]

ಜೆರುಸಲೇಮ್‌ನಲ್ಲಿರುವ ಉಮರ್ ಬಿನ್ ಖತ್ತಾಬ್ ಮಸೀದಿ. ಉಮರ್ ಜೆರುಸಲೇಮ್‌ಗೆ ಭೇಟಿ ನೀಡಿದಾಗ ಅಲ್ಲಿ ನಮಾಝ್ ನಿರ್ವಹಿಸುತ್ತಿದ್ದ ಸ್ಥಳದಲ್ಲಿ ಈ ಮಸೀದಿಯನ್ನು ನಿರ್ಮಿಸಲಾಗಿದೆ.

ಉಮರ್ ಮುಹಮ್ಮದ್‌ರೊಡನೆ ಎಲ್ಲಾ ಯುದ್ಧಗಳಲ್ಲೂ ಪಾಲ್ಗೊಂಡಿದ್ದರು. ಬದ್ರ್ ಯುದ್ಧಕ್ಕೆ ಮುನ್ನ ಮುಹಮ್ಮದ್ ಸಮಾಲೋಚನೆ ಮಾಡಿದಾಗ ಕುರೈಷರೊಂದಿಗೆ ಯುದ್ಧ ಮಾಡಬೇಕೆಂಬ ಅಭಿಪ್ರಾಯ ಹೇಳಿದ ಎರಡನೇ ವ್ಯಕ್ತಿ ಉಮರ್ ಆಗಿದ್ದರು. ಬದ್ರ್ ಯುದ್ಧದಲ್ಲಿ ಅವರು ತಮ್ಮ ಸೋದರ ಮಾವ ಆಸ್ ಬಿನ್ ಹಿಶಾಮ್‌ರನ್ನು ಕೊಂದರು. ಉಹುದ್ ಯುದ್ಧದಲ್ಲಿ ಮುಹಮ್ಮದ್‌ರನ್ನು ಕೊಲೆ ಮಾಡಲಾಯಿತೆಂಬ ವದಂತಿ ಹಬ್ಬಿದಾಗ ಉಮರ್ ತಬ್ಬಿಬ್ಬಾದರು. ಆದರೆ ಮುಹಮ್ಮದ್ ಉಹುದ್ ಪರ್ವತದ ಹಿಂದೆ ಜೀವಂತವಿದ್ದಾರೆಂಬ ಸುದ್ದಿ ತಿಳಿದಾಗ ಉಮರ್ ಆವೇಶದಿಂದ ಅಲ್ಲಿಗೆ ತೆರಳಿ ಅವರಿಗೆ ಬೆಂಗಾವಲಾಗಿ ನಿಂತರು. ಹುದೈಬಿಯಾ ಸಂಧಿಯ ಸಂದರ್ಭದಲ್ಲೂ ಉಮರ್ ಉಪಸ್ಥಿತರಿದ್ದರು.

ಮುಹಮ್ಮದ್‌ರ ಮರಣ:[ಬದಲಾಯಿಸಿ]

ಮುಹಮ್ಮದ್‌ರ ಮರಣವಾರ್ತೆ ಮದೀನದಾದ್ಯಂತ ಹಬ್ಬಿದಾಗ ಉಮರ್ ಸೇರಿದಂತೆ ಅನೇಕ ಮಂದಿ ಸಹಾಬಿಗಳಿಗೆ ಅದನ್ನು ನಂಬಲಾಗಲಿಲ್ಲ. ಉಮರ್ ಎದ್ದು ನಿಂತು ಹೇಳಿದರು: “ದೇವರಾಣೆ! ಮುಹಮ್ಮದ್ ಮರಣಹೊಂದಿಲ್ಲ. ಅವರು ಖಂಡಿತವಾಗಿಯೂ ಎದ್ದು ಬರುತ್ತಾರೆ. ಮುಹಮ್ಮದ್ ನಿಧನರಾದರೆಂದು ಯಾರಾದರೂ ಹೇಳಿದರೆ ನಾನು ಅವರನ್ನು ಸುಮ್ಮನೆ ಬಿಡುವುದಿಲ್ಲ.” ಜನರೆಲ್ಲರೂ ಗೊಂದಲದಲ್ಲಿದ್ದರು. ಯಾರಿಗೆ ಏನು ಮಾಡಬೇಕೆಂದು ತೋಚುತ್ತಿರಲಿಲ್ಲ.

ಕೊನೆಗೆ ಅಬೂ ಬಕರ್ ಬಂದು ಉಮರ್ ರನ್ನು ಸಮಾಧಾನಪಡಿಸಿ ಜನರ ಕಡೆಗೆ ತಿರುಗಿ ಹೇಳಿದರು: “ಓ ಜನರೇ, ನಿಮ್ಮಲ್ಲಿ ಯಾರಾದರೂ ಮುಹಮ್ಮದ್‌ರನ್ನು ಆರಾಧಿಸುತ್ತಿದ್ದರೆ, ಇಗೋ ಮುಹಮ್ಮದ್ ಮರಣಹೊಂದಿದ್ದಾರೆ. ಆದರೆ ನಿಮ್ಮಲ್ಲಿ ಯಾರಾದರೂ ದೇವರನ್ನು ಆರಾಧಿಸುವುದಾದರೆ ಅವನೆಂದೂ ಮರಣಹೊಂದಲಾರ. ಅವನು ಎಂದೆಂದೂ ಜೀವಿಸಿರುವವನು.”

ನಂತರ ಅವರು ಈ ಪವಿತ್ರ ಕುರ್‌ಆನ್‌ನ ಈ ಶ್ಲೋಕವನ್ನು ಪಠಿಸಿದರು:

"ಮುಹಮ್ಮದ್ ಒಬ್ಬ ಪ್ರವಾದಿಯಲ್ಲದೆ ಇನ್ನೇನೂ ಅಲ್ಲ. ಅವರಿಗಿಂತ ಮೊದಲು ಅನೇಕ ಪ್ರವಾದಿಗಳು ಬಂದು ಹೋಗಿದ್ದಾರೆ. ಹೀಗಿರುವಾಗ, ಅವರು ನಿಧನರಾದರೆ ಅಥವಾ ಕೊಲೆಗೈಯಲ್ಪಟ್ಟರೆ ನೀವು ನಿಮ್ಮ ಹಿಮ್ಮಡಿಗಳಲ್ಲಿ ಓಡುವಿರಾ? ಯಾರಾದರೂ ಅವರ ಹಿಮ್ಮಡಿಗಳಲ್ಲಿ ಓಡಿ ಹೋದರೆ ಅದರಿಂದ ದೇವರಿಗೇನೂ ನಷ್ಟವಿಲ್ಲ. ಕೃತಜ್ಞರಾಗಿರುವವರಿಗೆ ದೇವರು ಸೂಕ್ತ ಪ್ರತಿಫಲವನ್ನು ನೀಡುವನು."

ಇದನ್ನು ಕೇಳಿದಾಗ ಮುಹಮ್ಮದ್ ನಿಧನರಾಗಿದ್ದಾರೆ ಎಂದು ಉಮರ್ ರಿಗೆ ಖಾತ್ರಿಯಾಯಿತು. ಅವರು ತಮ್ಮ ಮಂಡಿಯ ಮೇಲೆ ಬಿದ್ದು ಅಳತೊಡಗಿದರು.

ಖಲೀಫ[ಬದಲಾಯಿಸಿ]

ಉಮರ್ ಬಿನ್ ಖತ್ತಾಬ್ ಬಳಸುತ್ತಿದ್ದ ಖಡ್ಗ

ಅಬೂ ಬಕರ್ ಮರಣಶಯ್ಯೆಯಲ್ಲಿದ್ದಾಗ ಪ್ರಮುಖ ಸಹಾಬಿಗಳೊಡನೆ ಸಮಾಲೋಚನೆ ಮಾಡಿ ತಮ್ಮ ನಂತರ ಉಮರ್‌ರನ್ನು ಖಲೀಫರಾಗಿ ಆಯ್ಕೆ ಮಾಡಿದರು. ಮುಸ್ಲಿಮರೆಲ್ಲರೂ ಇದನ್ನು ಸರ್ವಾನುಮತದಿಂದ ಒಪ್ಪಿಕೊಂಡರು. ಅಬೂಬಕರ್ ನಿಧನರಾದಾಗ ಉಮರ್ ಎದ್ದು ನಿಂತು ಹೇಳಿದರು: “ಓ ಜನರೇ, ಅರಬ್ಬರು ಹೇಗೆಂದರೆ ತನ್ನ ಯಜಮಾನನನ್ನು ಹಿಂಬಾಲಿಸುವ ಒಂಟೆಯಂತೆ. ಆದ್ದರಿಂದ ನಿಮ್ಮನ್ನು ನಿಮ್ಮ ನಾಯಕರು ಎಲ್ಲಿಗೆ ಒಯ್ಯುತ್ತಿದ್ದಾರೆಂಬ ಬಗ್ಗೆ ನೀವು ಹುಷಾರಾಗಿರಬೇಕು. ದೇವರಾಣೆ! ನಾನು ನಿಮ್ಮನ್ನು ಸತ್ಯಮಾರ್ಗಕ್ಕಲ್ಲದೆ ಇನ್ನೆಲ್ಲಿಗೂ ಒಯ್ಯುವುದಿಲ್ಲ.”

ಸಾಮ್ರಾಜ್ಯ ವಿಸ್ತರಣೆ[ಬದಲಾಯಿಸಿ]

ಉಮರ್ ಬಿನ್ ಖತ್ತಾಬ್‌ರ ಕಾಲದ ಇಸ್ಲಾಮೀ ಸಾಮ್ರಾಜ್ಯ

ಉಮರ್‌ರ ಆಡಳಿತಕಾಲದಲ್ಲಿ ಇಸ್ಲಾಮೀ ಸಾಮ್ರಾಜ್ಯವು ದೂರ ದೂರದ ದೇಶಗಳ ತನಕ ವಿಸ್ತರಿಸಿತು. ಸಂಪೂರ್ಣ ಇರಾಕ್, ಈಜಿಪ್ಟ್, ಲಿಬಿಯ, ಸಿರಿಯಾ, ಜೋರ್ಡಾನ್, ಪ್ಯಾಲಸ್ತೀನ್, ಲೆಬನಾನ್, ಇರಾನ್, ಖುರಾಸಾನ್, ಏಷ್ಯಾ ಮೈನರ್, ಅರ್ಮೇನಿಯಾದ ದಕ್ಷಿಣ ಭಾಗ, ಸಿಜಿಸ್ತಾನ್ ಮುಂತಾದ ಎಲ್ಲಾ ಪ್ರದೇಶಗಳು ಇಸ್ಲಾಮೀ ಸಾಮ್ರಾಜ್ಯದ ವಶಕ್ಕೆ ಬಂದವು. ಉಮರ್‌ರ ಆಡಳಿತ ಕಾಲದಲ್ಲಿ ಜೆರುಸಲೇಮ್‌ನ ಬೈತುಲ್ ಮುಕದ್ದಿಸ್ (ಅಕ್ಸಾ ಮಸೀದಿ) ಮೊದಲ ಬಾರಿ ವಶಪಡಿಸಲಾಯಿತು. ಸಂಪೂರ್ಣ ಸಾಸಾನಿ ಸಾಮ್ರಾಜ್ಯ ಉಮರ್‌ರಿಗೆ ಶರಣಾದರೆ ಬೈಝಾಂಟೈನ್ ಸಾಮ್ರಾಜ್ಯದ ಮೂರನೇ ಎರಡು ಭಾಗವು ಇಸ್ಲಾಮಿನ ತೆಕ್ಕೆಗೆ ಬಂತು. ಉಮರ್ ಖಲೀಫ ಆಗಿ ಕೇವಲ ಎರಡು ವರ್ಷಗಳಲ್ಲಿ ಸಂಪೂರ್ಣ ಸಾಸಾನಿ ಸಾಮ್ರಾಜ್ಯವನ್ನು ವಶಪಡಿಸಿದರು.

ಮರಣ[ಬದಲಾಯಿಸಿ]

ತಮ್ಮ ಸಾಮ್ರಾಜ್ಯವನ್ನು ನಾಶ ಮಾಡಿದ ಉಮರ್‌ರನ್ನು ಹತ್ಯೆ ಮಾಡಲು ಪರ್ಶಿಯನ್ನರು ಸಂಚು ಹೂಡಿದ್ದರು. ಅವರು ಅದಕ್ಕಾಗಿ ಸಮಯ ಕಾಯುತ್ತಿದ್ದರು. ಕ್ರಿ.ಶ. 644 ರಲ್ಲಿ ಉಮರ್ ಹಜ್ಜ್ ನಿರ್ವಹಿಸಲು ಮಕ್ಕಾಗೆ ಬಂದಾಗ, ಅವರನ್ನು ಅಲ್ಲೇ ಮುಗಿಸಲು ಶತ್ರುಗಳು ಸಂಚು ರೂಪಿಸಿದ್ದರು. ಆದರೆ ಅವರು ಯಶಸ್ವಿಯಾಗಲಿಲ್ಲ. ನಂತರ ಉಮರ್ ಮದೀನಕ್ಕೆ ಮರಳಿ ಒಂದಿನ ಬೆಳಗ್ಗೆ ಮಸ್ಜಿದ್ ನಬವಿಯಲ್ಲಿ ಫಜ್ರ್ ನಮಾಝ್ ಮಾಡುತ್ತಿದ್ದಾಗ ಅಬೂ ಲುಅಲುಅ ಫೈರೋಝ್ ಎಂಬ ಪರ್ಶಿಯನ್ ಗುಲಾಮ ಅವರಿಗೆ ಆರು ಸಲ ಇರಿದನು. ಅದು 23 ಆಗಸ್ಟ್, 644 ಬುಧವಾರ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಉಮರ್‌ರನ್ನು ಸೂರ್ಯೋದಯಕ್ಕೆ ಮೊದಲೇ ಮನೆಗೆ ಒಯ್ಯಲಾಯಿತು. ಕೊಲೆಗಾರನನ್ನು ಜನರು ಸೆರೆಹಿಡಿಯುವ ಮೊದಲೇ ಆತ ಚೂರಿಯಿಂದ ಇರಿದು ಆತ್ಮಹತ್ಯೆ ಮಾಡಿಕೊಂಡ. ಮರಣಶಯ್ಯೆಯಲ್ಲಿದ್ದ ಉಮರ್ ತಮ್ಮ ನಂತರ ಖಲೀಫ ಸ್ಥಾನಕ್ಕೆ ಉಸ್ಮಾನ್, ಅಲಿ, ತಲ್ಹ, ಝುಬೈರ್, ಅಬ್ದುರ್‍ರಹ್ಮಾನ್ ಬಿನ್ ಔಫ್ ಮತ್ತು ಸಅದ್ ಬಿನ್ ಅಬೂ ವಕ್ಕಾಸ್ ಮುಂತಾದ ಆರು ಸಹಾಬಿಗಳನ್ನು ಆರಿಸಿದರು.

ಉಮರ್‌ರ ಪಾರ್ಥಿವ ಶರೀರವನ್ನು ಮದೀನಾದಲ್ಲಿ ಮುಹಮ್ಮದ್ ಮತ್ತು ಅಬೂಬಕರ್‌ರ ಸಮಾಧಿಗಳ ಬಳಿಯಲ್ಲೇ ಸಮಾಧಿ ಮಾಡಲಾಯಿತು.

ಪತ್ನಿಯರು[ಬದಲಾಯಿಸಿ]

  1. ಕುರೈಬ ಬಿನ್ತ್ ಅಬೂ ಉಮಯ್ಯ (ಉಮ್ಮು ಸಲಮರ ಸಹೋದರಿ)
  2. ಉಮ್ಮು ಕುಲ್ಸೂಮ್ ಮುಲೈಕ ಬಿನ್ತ್ ಜರ್ವಲ್ ಅಲ್-ಖುಝಾಇಯ್ಯ
  3. ಝೈನಬ್ ಬಿನ್ತ್ ಮಝ್‌ಊನ್ (ಉಸ್ಮಾನ್ ಬಿನ್ ಮಝ್‌ಊನ್‌ರ ಸಹೋದರಿ)
  4. ಜಮೀಲ ಬಿನ್ತ್ ಸಾಬಿತ್ ಅಲ್-ಅನ್ಸಾರಿಯ್ಯ (ಆಸಿಯ)
  5. ಆತಿಕ ಬಿನ್ತ್ ಝೈದ್ (ಸಈದ್ ಬಿನ್ ಝೈದ್‌ರ ಸಹೋದರಿ)
  6. ಉಮ್ಮು ಹಕೀಮ್ ಬಿನ್ತ್ ಹಾರಿಸ್
  7. ಉಮ್ಮು ಕುಲ್ಸೂಮ್ ಬಿನ್ತ್ ಅಲೀ
  8. ಸಈದ ಬಿನ್ತ್ ರಾಫಿಅ್ ಅಲ್-ಮಖ್‌ಝೂಮಿಯ್ಯ
  9. ಲುಹ್ಯ (ಉಮ್ಮು ವಲದ್)

ಮಕ್ಕಳು[ಬದಲಾಯಿಸಿ]

ಗಂಡು ಮಕ್ಕಳು[ಬದಲಾಯಿಸಿ]

  1. ಝೈದ್ ಅಸ್ಗರ್ (ತಾಯಿ: ಉಮ್ಮು ಕುಲ್ಸೂಮ್ ಮುಲೈಕ ಬಿನ್ತ್ ಜರ್ವಲ್)
  2. ಉಬೈದುಲ್ಲಾ (ತಾಯಿ: ಉಮ್ಮು ಕುಲ್ಸೂಮ್ ಮುಲೈಕ ಬಿನ್ತ್ ಜರ್ವಲ್)
  3. ಅಬ್ದುಲ್ಲಾ (ತಾಯಿ: ಝೈನಬ್ ಬಿನ್ತ್ ಮಝ್‌ಊನ್)
  4. ಅಬ್ದುರ್‍ರಹ್ಮಾನ್ (ತಾಯಿ: ಝೈನಬ್ ಬಿನ್ತ್ ಮಝ್‌ಊನ್)
  5. ಆಸಿಮ್ (ತಾಯಿ: ಜಮೀಲ ಬಿನ್ತ್ ಸಾಬಿತ್)
  6. ಇಯಾದ್ (ತಾಯಿ: ಆತಿಕ ಬಿನ್ತ್ ಝೈದ್)
  7. ಝೈದ್ ಅಕ್ಬರ್ (ತಾಯಿ: ಉಮ್ಮು ಕುಲ್ಸೂಮ್ ಬಿನ್ತ್ ಅಲೀ)
  8. ಅಬ್ದುಲ್ಲಾ ಅಸ್ಗರ್ (ತಾಯಿ: ಸಈದ ಬಿನ್ತ್ ರಾಫಿಅ್)

ಹೆಣ್ಣು ಮಕ್ಕಳು[ಬದಲಾಯಿಸಿ]

  1. ಹಫ್ಸ (ತಾಯಿ: ಝೈನಬ್ ಬಿನ್ತ್ ಮಝ್‌ಊನ್)
  2. ಫಾತಿಮ (ತಾಯಿ: ಉಮ್ಮು ಹಕೀಮ್ ಬಿನ್ತ್ ಹಾರಿಸ್)
  3. ರುಕಯ್ಯ (ತಾಯಿ: ಉಮ್ಮು ಕುಲ್ಸೂಮ್ ಬಿನ್ತ್ ಅಲೀ)
  4. ಝೈನಬ್ (ತಾಯಿ: ರುಕಯ್ಯ)

ಉಲ್ಲೇಖಗಳು[ಬದಲಾಯಿಸಿ]

"https://kn.wikipedia.org/w/index.php?title=ಉಮರ್&oldid=1158301" ಇಂದ ಪಡೆಯಲ್ಪಟ್ಟಿದೆ