ಹಫ್ಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಉಮ್ಮುಲ್ ಮೂಮಿನೀನ್

ಹಫ್ಸ ಬಿಂತ್ ಉಮರ್
حفصة بنت عمر
ವೈಯಕ್ತಿಕ
ಜನನಕ್ರಿ.ಶ. 605
ಮರಣಕ್ರಿ.ಶ. 665
ಧರ್ಮಇಸ್ಲಾಂ ಧರ್ಮ
ಸಂಗಾತಿ
ಹೆತ್ತವರು
ವಂಶಾವಳಿಬನೂ ಅದೀ (ಕುರೈಷ್)

ಹಫ್ಸ ಬಿಂತ್ ಉಮರ್ (ಅರಬ್ಬಿ: حفصة بنت عمر) (604 – 665) ― ಮುಹಮ್ಮದ್ ಪೈಗಂಬರರ ನಾಲ್ಕನೇ ಪತ್ನಿ ಮತ್ತು ಇಸ್ಲಾಮೀ ಸಾಮ್ರಾಜ್ಯದ ಎರಡನೇ ಖಲೀಫ ಉಮರ್ ಬಿನ್ ಖತ್ತಾಬ್‌ರ ಪುತ್ರಿ. ಇವರನ್ನು ಮುಸಲ್ಮಾನರು ಉಮ್ಮುಲ್ ಮೂಮಿನೀನ್ (ಅರಬ್ಬಿ: أم المؤمنين - ಅನುವಾದ. ವಿಶ್ವಾಸಿಗಳ ಮಾತೆ) ಎಂದು ಕರೆಯುತ್ತಾರೆ.

ವಂಶಾವಳಿ:[ಬದಲಾಯಿಸಿ]

ಹಫ್ಸ ಬಿಂತ್ ಉಮರ್ ಬಿನ್ ಖತ್ತಾಬ್ ಬಿನ್ ನುಫೈಲ್ ಬಿನ್ ಅಬ್ದುಲ್ ಉಝ್ಝ ಬಿನ್ ರಿಯಾಹ್ ಬಿನ್ ಅಬ್ದುಲ್ಲಾ ಬಿನ್ ಕುರ್ತ್ ಬಿನ್ ರಿಝಾಹ್ ಬಿನ್ ಅದೀ ಬಿನ್ ಕಅಬ್ ಬಿನ್ ಲುಅಯ್ ಬಿನ್ ಗಾಲಿಬ್ ಬಿನ್ ಫಿಹ್ರ್ ಬಿನ್ ಮಾಲಿಕ್ ಬಿನ್ ನದ್ರ್ (ಕುರೈಷ್) ಬಿನ್ ಕಿನಾನ ಬಿನ್ ಖುಝೈಮ ಬಿನ್ ಮುದ್ರಿಕ ಬಿನ್ ಇಲ್ಯಾಸ್ ಬಿನ್ ಮುದರ್ ಬಿನ್ ನಿಝಾರ್ ಬಿನ್ ಮಅದ್ದ್ ಬಿನ್ ಅದ್ನಾನ್.

ಜನನ[ಬದಲಾಯಿಸಿ]

ಮುಹಮ್ಮದ್ ಪ್ರವಾದಿಯಾಗುವುದಕ್ಕೆ 5 ವರ್ಷ ಮುಂಚೆ ಹಫ್ಸ ಮಕ್ಕಾದಲ್ಲಿ ಉಮರ್ ಬಿನ್ ಖತ್ತಾಬ್ ಮತ್ತು ಝೈನಬ್ ಬಿಂತ್ ಮಝ್‌ಊನ್ ದಂಪತಿಯ ಪುತ್ರಿಯಾಗಿ ಕ್ರಿ.ಶ. 604 ರಲ್ಲಿ (ಹಿಜರಿ ಪೂರ್ವ 18) ಜನಿಸಿದರು. ಅವರು ಕುರೈಷ್ ಬುಡಕಟ್ಟಿನ ಬನೂ ಅದೀ ಗೋತ್ರಕ್ಕೆ ಸೇರಿದವರು. ಅವರು ಹುಟ್ಟಿದ್ದು ಕುರೈಷರು ಕಅಬಾಲಯವನ್ನು ಪುನರ್ ನಿರ್ಮಿಸುತ್ತಿದ್ದ ವರ್ಷದಲ್ಲಿ. ಹಫ್ಸ ಇಸ್ಲಾಮೀ ಸಾಮ್ರಾಜ್ಯದ ಎರಡನೇ ಖಲೀಫ ಉಮರ್ ಬಿನ್ ಖತ್ತಾಬ್‌ರ ಹಿರಿಯ ಮಗಳು. ಇವರ ತಂದೆ ಮತ್ತು ಚಿಕ್ಕಪ್ಪಂದಿರು ಮಹಾ ಶೂರರೂ ಧೈರ್ಯವಂತರೂ ಆಗಿದ್ದರು. ಬದ್ರ್ ಯುದ್ಧದಲ್ಲಿ ಇವರ ಕುಟುಂಬದ ಏಳು ಮಂದಿ ಪಾಲ್ಗೊಂಡಿದ್ದರು. ತಂದೆ ಉಮರ್ ಬಿನ್ ಖತ್ತಾಬ್, ಚಿಕ್ಕಪ್ಪ ಝೈದ್ ಬಿನ್ ಖತ್ತಾಬ್, ಗಂಡ ಖುನೈಸ್ ಬಿನ್ ಹುದಾಫ, ಮಾವಂದಿರಾದ ಉಸ್ಮಾನ್ ಬಿನ್ ಮಝ್‌ಊನ್, ಕುದಾಮ ಬಿನ್ ಮಝ್‌ಊನ್, ಅಬ್ದಲ್ಲಾ ಬಿನ್ ಮಝ್‌ಊನ್ ಮತ್ತು ಅವರ ಮಗ ಸಾಇಬ್ ಬಿನ್ ಅಬ್ದುಲ್ಲಾ ಬಿನ್ ಮಝ್‌ಊನ್.

ಇಸ್ಲಾಂ ಸ್ವೀಕಾರ[ಬದಲಾಯಿಸಿ]

ಪ್ರಬಲ ಅಭಿಪ್ರಾಯದ ಪ್ರಕಾರ ಮುಹಮ್ಮದ್ ಪ್ರವಾದಿಯಾದ 5ನೇ ವರ್ಷದಲ್ಲಿ ಹಫ್ಸ ತಂದೆ ಉಮರ್‌ರೊಂದಿಗೆ ಇಸ್ಲಾಂ ಧರ್ಮಕ್ಕೆ ಸೇರಿದರು. ಆಗ ಅವರಿಗೆ ಹತ್ತು ವರ್ಷ ಪ್ರಾಯ.

ಮೊದಲ ವಿವಾಹ[ಬದಲಾಯಿಸಿ]

ಹಫ್ಸ ಸಹ್ಮೀ ಗೋತ್ರದ ಖುನೈಸ್ ಬಿನ್ ಹುದಾಫರನ್ನು ವಿವಾಹವಾದರು. ಖುನೈಸ್ ಆರಂಭಕಾಲದಲ್ಲೇ ಇಸ್ಲಾಂ ಧರ್ಮಕ್ಕೆ ಸೇರಿದ್ದರು. ಮುಹಮ್ಮದ್ ದಾರುಲ್ ಅರ್ಕಂ ಪ್ರವೇಶಿಸುವುದಕ್ಕೆ ಮೊದಲೇ ಇವರು ಮುಸ್ಲಿಂ ಆಗಿದ್ದರು. ಕುರೈಷರ ಹಿಂಸೆ ತೀವ್ರವಾದಾಗ ಇಥಿಯೋಪಿಯಾಗೆ ಹಿಜ್ರ (ವಲಸೆ) ಹೋಗುವಂತೆ ಮುಹಮ್ಮದ್ ತಮ್ಮ ಅನುಯಾಯಿಗಳಿಗೆ ಆದೇಶ ನೀಡಿದಾಗ, ಖುನೈಸ್ ಕೂಡ ಅವರೊಡನೆ ಇಥಿಯೋಪಿಯಾಗೆ ಹೊರಟರು. ನಂತರ ಮುಹಮ್ಮದ್ ಮದೀನಕ್ಕೆ ಹಿಜ್ರ (ವಲಸೆ) ಹೋಗಲು ಆದೇಶಿಸಿದಾಗ ಅವರು ಮದೀನಕ್ಕೆ ಹಿಜ್ರ (ವಲಸೆ) ಹೋದರು. ಆಗ ಅವರ ಜೊತೆಗೆ ಪತ್ನಿ ಹಫ್ಸ ಇದ್ದರು ಎನ್ನಲಾಗುತ್ತದೆ. ಇದರ ಆಧಾರದಲ್ಲಿ ಖುನೈಸ್ ಇಥಿಯೋಪಿಯಾದಿಂದ ಹಿಂದಿರುಗಿದ ಬಳಿಕ ಹಫ್ಸರನ್ನು ವಿವಾಹವಾಗಿರಬಹುದೆಂದು ತೋರುತ್ತದೆ. ಖುನೈಸ್ ಬದ್ರ್ ಮತ್ತು ಉಹುದ್ ಯುದ್ಧಗಳಲ್ಲಿ ಪಾಲ್ಗೊಂಡಿದ್ದರು. ಉಹುದ್ ಯುದ್ಧದಲ್ಲಿ ಉಂಟಾದ ಗಾಯಗಳು ಉಲ್ಬಣಿಸಿ ಹಿಜರಿ 3 ರಲ್ಲಿ ಕೊನೆಯುಸಿರೆಳೆದರು. ಬದ್ರ್ ಯುದ್ಧದ ಗಾಯಗಳಿಂದ ಕೊನೆಯುಸಿರೆಳೆದರು ಎಂದು ಕೂಡ ಹೇಳಲಾಗುತ್ತದೆ. ಈ ದಂಪತಿಗೆ ಯಾವುದೇ ಮಕ್ಕಳಿರಲಿಲ್ಲ.

ಮುಹಮ್ಮದ್‌ರೊಂದಿಗೆ ವಿವಾಹ[ಬದಲಾಯಿಸಿ]

ಖುನೈಸ್ ನಿಧನರಾದ ಬಳಿಕ ವಿಧವೆಯಾದ ಮಗಳನ್ನು ಉಸ್ಮಾನ್ ಬಿನ್ ಅಫ್ಫಾನ್‌ರಿಗೆ ವಿವಾಹ ಮಾಡಿಕೊಡಲು ಉಮರ್ ನಿರ್ಧರಿಸಿದರು. ಆಗ ಉಸ್ಮಾನ್ ಪತ್ನಿ ರುಕಯ್ಯರನ್ನು ಕಳಕೊಂಡು ವಿರಹದಲ್ಲಿದ್ದರು. ಉಮರ್ ವಿವಾಹ ಪ್ರಸ್ತಾಪದೊಂದಿಗೆ ಬಂದಾಗ, ಉಸ್ಮಾನ್ ತಾನು ಈಗ ವಿವಾಹವಾಗುವ ಸ್ಥಿತಿಯಲ್ಲಿಲ್ಲ ಎನ್ನುತ್ತಾ ನಿರಾಕರಿಸಿದರು. ನಂತರ ಉಮರ್ ಅಬೂ ಬಕರ್‌ರ ಬಳಿಗೆ ಹೋಗಿ ಮಗಳನ್ನು ವಿವಾಹವಾಗುವಂತೆ ವಿನಂತಿಸಿದರು. ಆದರೆ ಅವರು ಕೂಡ ಸ್ಪಂದಿಸಲಿಲ್ಲ. ಇದರಿಂದ ಬೇಸತ್ತ ಉಮರ್ ನೇರವಾಗಿ ಮುಹಮ್ಮದ್‌ರ ಬಳಿಗೆ ಹೋಗಿ ವಿಷಯ ತಿಳಿಸಿದರು. ಮುಹಮ್ಮದ್ ನಗುತ್ತಾ ಹೇಳಿದರು, "ಉಮರ್! ಬೇಸರಪಡಬೇಡ, ಉಸ್ಮಾನ್‌ರಿಗೆ ನಿನ್ನ ಮಗಳಿಗಿಂತಲೂ ಉತ್ತಮ ಪತ್ನಿ ಸಿಗುತ್ತಾಳೆ ಮತ್ತು ನಿನ್ನ ಮಗಳಿಗೆ ಉಸ್ಮಾನ್‌ಗಿಂತಲೂ ಉತ್ತಮ ಗಂಡ ಸಿಗುತ್ತಾನೆ." ನಂತರ ಮುಹಮ್ಮದ್ ತಮ್ಮ ಪುತ್ರಿ ಉಮ್ಮು ಕುಲ್ಸೂಮ್‌ರನ್ನು ಉಸ್ಮಾನ್‌ರಿಗೆ ವಿವಾಹ ಮಾಡಿಕೊಟ್ಟು, ಹಫ್ಸರನ್ನು ಸ್ವತಃ ವಿವಾಹವಾದರು. ಮಗಳಿಗೆ ಪ್ರವಾದಿಪತ್ನಿಯ ಸ್ಥಾನಮಾನ ದೊರೆತದ್ದನ್ನು ಕಂಡು ಉಮರ್‌ರಿಗೆ ಮಹದಾನಂದವಾಯಿತು. ಮಗಳನ್ನು ಮುಹಮ್ಮದ್‌ರ ಮನೆಗೆ ಕಳುಹಿಸಿಕೊಡುವಾಗ, ಯಾವುದೇ ಕಾರಣಕ್ಕೂ ಮುಹಮ್ಮದ್‌ರ ಮನಸ್ಸಿಗೆ ನೋವಾಗುವಂತೆ ನಡೆದುಕೊಳ್ಳಬಾರದು ಎಂದು ಉಮರ್ ಮಗಳಿಗೆ ಉಪದೇಶ ನೀಡಿದರು.

ಸೂರ ತಹ್ರೀಮ್[ಬದಲಾಯಿಸಿ]

ಪವಿತ್ರ ಕುರ್‌ಆನ್‌ನ 66ನೇ ಅಧ್ಯಾಯ ಸೂರ ತಹ್ರೀಮ್‌ನ ಮೊದಲ ನಾಲ್ಕು ಶ್ಲೋಕಗಳು ಹಫ್ಸರ ಬಗ್ಗೆ ಅವತೀರ್ಣವಾಯಿತು ಎಂದು ಹೇಳಲಾಗುತ್ತದೆ. ಇದಕ್ಕೆ ಕಾರಣ ಮುಹಮ್ಮದ್ ಹೇಳಿದ ಒಂದು ಗುಟ್ಟನ್ನು ಹಫ್ಸ ರಟ್ಟು ಮಾಡಿದ್ದು. ಈ ಗುಟ್ಟು ಏನೆಂಬ ಬಗ್ಗೆ ಕುರ್‌ಆನ್ ವ್ಯಾಖ್ಯಾನಕಾರರ ನಡುವೆ ಭಿನ್ನಮತವಿದ್ದರೂ ಪ್ರಬಲ ಅಭಿಪ್ರಾಯ ಪ್ರಕಾರ ಅದು ಜೇನುತುಪ್ಪ ಸೇವಿಸಿದ್ದಕ್ಕೆ ಸಂಬಂಧಿಸಿದ ಘಟನೆಯಾಗಿದೆ. ಮುಹಮ್ಮದ್‌ರ ಪತ್ನಿಯರಲ್ಲಿ ಎರಡು ಗುಂಪುಗಳಿದ್ದವು. ಒಂದು ಗುಂಪಿನಲ್ಲಿ ಆಯಿಶ, ಹಫ್ಸ, ಸೌದ ಇದ್ದರೆ ಉಳಿದವರು ಇನ್ನೊಂದು ಗುಂಪಿನಲ್ಲಿದ್ದರು. ಒಮ್ಮೆ ಮುಹಮ್ಮದ್ ಆಯಿಶ, ಹಫ್ಸ ಮತ್ತು ಸೌದರ ಬಳಿಗೆ ಬರುವಾಗ ತಡವಾಯಿತು. ಇದು ಕೆಲವು ದಿನ ಮುಂದುವರಿದಾಗ ಇದಕ್ಕೆ ಕಾರಣ ಮುಹಮ್ಮದ್‌ರ ಇನ್ನೊಬ್ಬ ಪತ್ನಿ ಝೈನಬ್ ಬಿಂತ್ ಜಹ್ಶ್ ಎಂದು ಆಯಿಶಗೆ ತಿಳಿಯಿತು. ಝೈನಬ್ ತವರು ಮನೆಯಿಂದ ಜೇನುತುಪ್ಪ ತಂದಿದ್ದರು ಮತ್ತು ಮುಹಮ್ಮದ್‌ರಿಗೆ ಅದನ್ನು ದಿನಾಲೂ ಕುಡಿಯಲು ಕೊಡುತ್ತಿದ್ದರು. ಇದರಿಂದ ಮುಹಮ್ಮದ್ ಇತರ ಪತ್ನಿಯರ ಬಳಿಗೆ ಬರುವಾಗ ತಡವಾಗುತ್ತಿತ್ತು. ಮುಹಮ್ಮದ್ ಝೈನಬ್‌ರ ಮನೆಯಲ್ಲಿ ಹೆಚ್ಚು ಹೊತ್ತು ತಂಗುವುದು ಆಯಿಶ ಮತ್ತು ಹಫ್ಸರಿಗೆ ಇಷ್ಟವಾಗಲಿಲ್ಲ. ಆಯಿಶ ಒಂದು ಉಪಾಯ ಮಾಡಿದರು. ಮುಹಮ್ಮದ್ ಝೈನಬ್‌ರ ಬಳಿಯಿಂದ ನನ್ನ ಬಳಿಗೆ ಬಂದಾಗ, "ನಿಮ್ಮ ಬಾಯಿಂದ ಏನೋ ವಾಸನೆ ಬರುತ್ತಿದೆ" ಎಂದು ಹೇಳುತ್ತೇನೆ, ನೀವು ಕೂಡ ಹಾಗೆಯೇ ಹೇಳಿರಿ ಎಂದು ಹಫ್ಸ ಮತ್ತು ಸೌದರಿಗೆ ಹೇಳಿದರು. ಮೂವರ ಮನೆಯಲ್ಲೂ ಒಂದು ರೀತಿಯ ಅಪವಾದ ಕೇಳಿ ಬಂದಾಗ, ನನ್ನ ಪತ್ನಿಯರಿಗೆ ಇರಿಸುಮುರಿಸು ಉಂಟಾಗುವುದಾದರೆ ಇನ್ನೆಂದಿಗೂ ನಾನು ಜೇನುತುಪ್ಪ ಸೇವಿಸುವುದಿಲ್ಲ ಎಂದು ಮುಹಮ್ಮದ್ ಶಪಥ ಮಾಡಿದರು. ಇದೇ ಸಮಯದಲ್ಲಿ ಮುಹಮ್ಮದ್ ಹಫ್ಸರಿಗೆ ಒಂದು ಗುಟ್ಟು ಹೇಳಿದ್ದರು. ಅದನ್ನು ಯಾರಿಗೂ ತಿಳಿಸಬಾರದು ಎಂದಿದ್ದರು. ಆದರೆ ಹಫ್ಸ ಅದನ್ನು ಆಯಿಶರಿಗೆ ತಿಳಿಸಿದ್ದರು. ಇದು ಮುಹಮ್ಮದ್‌ರ ಸಿಟ್ಟಿಗೆ ಕಾರಣವಾಗಿತ್ತು.

ಇನ್ನೊಂದು ವರದಿಯ ಪ್ರಕಾರ ಸೂರ ತಹ್ರೀಮ್‌ನ ಶ್ಲೋಕಗಳು ಅವತೀರ್ಣವಾಗಲು ಕಾರಣ ಒಮ್ಮೆ ಹಫ್ಸ ತವರು ಮನೆಗೆ ಹೋಗಲು ಮುಹಮ್ಮದ್‌ರೊಡನೆ ಅನುಮತಿ ಕೇಳಿದರು. ಮುಹಮ್ಮದ್ ಅನುಮತಿ ಕೊಟ್ಟರು. ಹಫ್ಸ ಹೊರಟುಹೋದ ಮೇಲೆ ಮುಹಮ್ಮದ್ ಹಫ್ಸರ ಮನೆಯಲ್ಲಿ ತಮ್ಮ ಇನ್ನೊಬ್ಬ ಪತ್ನಿ ಮಾರಿಯಾರನ್ನು ಇರಿಸಿದರು. ಈ ವಿಷಯ ಹಫ್ಸರಿಗೆ ತಿಳಿದಾಗ ಅವರು ಕೋಪದಿಂದ ಮುಹಮ್ಮದ್‌ರನ್ನು ತರಾಟೆಗೆ ತೆಗೆದುಕೊಂಡರು. ಪತ್ನಿಯನ್ನು ಸಮಾಧಾನಪಡಿಸಲು ತಾನು ಇನ್ನು ಮುಂದೆ ಮಾರಿಯಾಳ ಜೊತೆಗೆ ಸಂಪರ್ಕ ಮಾಡುವುದಿಲ್ಲವೆಂದು ಮುಹಮ್ಮದ್ ಶಪಥ ಮಾಡಿದರು. ಈ ವಿಷಯವನ್ನು ಗುಟ್ಟಾಗಿಡಬೇಕು ಮತ್ತು ಯಾರೊಂದಿಗೂ ಹೇಳಬಾರದೆಂದು ಆದೇಶಿಸಿದರು. ಆದರೆ ಹಫ್ಸ ಈ ವಿಷಯವನ್ನು ಆಯಿಶರಿಗೆ ತಿಳಿಸಿದರು. ಇದು ಮುಹಮ್ಮದ್‌ರ ಸಿಟ್ಟಿಗೆ ಕಾರಣವಾಯಿತೆಂದು ಹೇಳಲಾಗುತ್ತದೆ.

ಹಫ್ಸ ಮತ್ತು ತಲಾಕ್:[ಬದಲಾಯಿಸಿ]

ಹಫ್ಸರ ಬಗ್ಗೆ ಬೇಸತ್ತು ವಿಚ್ಛೇದನ ನೀಡಲು ಮುಹಮ್ಮದ್ ನಿರ್ಧರಿಸಿದಾಗ, ದೇವದೂತ ಗೇಬ್ರಿಯಲ್ ಬಂದು, ಹಫ್ಸರಿಗೆ ವಿಚ್ಛೇದನ ಕೊಡಬೇಡಿ, ಅವಳು ಅತಿಹೆಚ್ಚು ಉಪವಾಸ ಆಚರಿಸುತ್ತಾಳೆ ಮತ್ತು ರಾತ್ರಿಯಲ್ಲಿ ಅತಿಹೆಚ್ಚು ನಮಾಝ್ ನಿರ್ವಹಿಸುವವಳು. ಅವಳು ಮಹಾನ್ ದೇವಭಕ್ತೆಯಾಗಿದ್ದು ಸ್ವರ್ಗದಲ್ಲೂ ತಮಗೆ ಪತ್ನಿಯಾಗಿಯೇ ಇರುತ್ತಾಳೆ ಎಂದು ಹೇಳಿದರೆಂದು ಹೇಳಲಾಗುತ್ತದೆ. ಈ ಕಾರಣದಿಂದ ಮುಹಮ್ಮದ್ ತಮ್ಮ ಅಭಿಪ್ರಾಯ ಬದಲಿಸಿದರೆಂದು ಹೇಳಲಾಗುತ್ತದೆ.

ಕುರ್‌ಆನ್ ಪ್ರತಿ:[ಬದಲಾಯಿಸಿ]

ಮುಹಮ್ಮದ್‌ರ ಮರಣಾನಂತರ ಅಬೂ ಬಕರ್ ಮತ್ತು ಉಮರ್ ಇತರ ಸಹಾಬಿಗಳೊಂದಿಗೆ ಸಮಾಲೋಚನೆ ಮಾಡಿ ಕುರ್‌ಆನನ್ನು ಗ್ರಂಥ ರೂಪದಲ್ಲಿ ಕ್ರೋಢೀಕರಿಸಲು ನಿರ್ಧರಿಸಿದರು. ಈ ಕಾರ್ಯವನ್ನು ಝೈದ್ ಬಿನ್ ಸಾಬಿತ್‌ರಿಗೆ ವಹಿಸಿಕೊಡಲಾಯಿತು. ಹೀಗೆ ಕ್ರೋಢೀಕರಿಸಲಾದ ಪ್ರತಿಯು ಅಬೂಬಕರ್ ನಿಧನರಾಗುವ ತನಕ ಅವರ ಬಳಿಯಲ್ಲಿತ್ತು. ಅನಂತರ ಅದು ಉಮರ್‌ರ ವಶಕ್ಕೆ ಬಂತು. ಉಮರ್ ನಿಧನರಾದಾಗ ಅದು ಹಫ್ಸರ ವಶವಾಯಿತು. ನಂತರ ಉಸ್ಮಾನ್‌ರ ಕಾಲದಲ್ಲಿ ಇಸ್ಲಾಮೀ ಸಾಮ್ರಾಜ್ಯವು ವಿಸ್ತರಿಸಿ ಜನರು ವಿಭಿನ್ನ ರೀತಿಯಲ್ಲಿ ಕುರ್‌ಆನ್ ಪಠಿಸತೊಡಗಿದಾಗ ಕುರ್‌ಆನ್ ಪಠಣದ ಸರಿಯಾದ ರೀತಿಯನ್ನು ಕಲಿಸಿಕೊಡಲು ಉಸ್ಮಾನ್ ಹಫ್ಸರಿಂದ ಆ ಪ್ರತಿಯನ್ನು ಪಡೆದುಕೊಂಡು ಅದರ ಅನೇಕ ನಕಲು ಪ್ರತಿಗಳನ್ನು ತಯಾರಿಸಿ ಎಲ್ಲಾ ಪಟ್ಟಣಗಳಿಗೆ ಕಳುಹಿಸಿಕೊಟ್ಟರು.

ವಿಶೇಷತೆಗಳು:[ಬದಲಾಯಿಸಿ]

ಹಫ್ಸ ಆ ಕಾಲದಲ್ಲಿ ಓದು-ಬರಹ ತಿಳಿದಿದ್ದ ಕೆಲವೇ ಮಹಿಳೆಯರಲ್ಲಿ ಒಬ್ಬರಾಗಿದ್ದರೆಂದು ಹೇಳಲಾಗುತ್ತದೆ. ಆಯಿಶ ಮತ್ತು ಹಫ್ಸ ಸವತಿಯರಾಗಿದ್ದರೂ ಬಹಳ ಅನ್ಯೋನ್ಯವಾಗಿದ್ದರು. ಆಯಿಶ ಹೇಳುತ್ತಿದ್ದರು, "ನಾನು ಹಫ್ಸಳಂತಹ ಮಹಿಳೆಯನ್ನು ಕಂಡೇ ಇಲ್ಲ. ಅವಳು ಅವಳ ತಂದೆಯ ಮಗಳೇ ಆಗಿದ್ದಾಳೆ." ಹಫ್ಸ ಅತಿಯಾಗಿ ಉಪವಾಸ ಆಚರಿಸುತ್ತಿದ್ದರು ಮತ್ತು ರಾತ್ರಿಯೆಲ್ಲಾ ನಮಾಝಿನಲ್ಲಿ ನಿರತರಾಗುತ್ತಿದ್ದರು. ದಾನ ಮಾಡುವುದರಲ್ಲೂ ಅವರ ಸದಾ ಮುಂಚೂಣಿಯಲ್ಲಿದ್ದರು. ಮುಹಮ್ಮದ್‌ರ ಪತ್ನಿಯರಲ್ಲಿ ನನಗೆ ಸಾಟಿಯಾಗಿ ನಿಲ್ಲುವವರು ಹಫ್ಸ ಮಾತ್ರವೆಂದು ಆಯಿಶ ಹೇಳುತ್ತಿದ್ದರು.

ಮರಣ:[ಬದಲಾಯಿಸಿ]

ಹಿಜರಿ 45ನೇ ವರ್ಷ (ಕ್ರಿ.ಶ. 665), ಜುಮಾದಾ ಊಲಾ ತಿಂಗಳಲ್ಲಿ ತಮ್ಮ 63ನೇ ವಯಸ್ಸಿನಲ್ಲಿ ಹಫ್ಸ ಇಹಲೋಕಕ್ಕೆ ವಿದಾಯ ಹೇಳಿದರು. ಆಗ ಮುಆವಿಯ ಖಲೀಫರಾಗಿದ್ದರು. ಅವರನ್ನು ಮದೀನದ ಬಕೀಅ್ ಕಬರಸ್ತಾನದಲ್ಲಿ ದಫನ ಮಾಡಲಾಯಿತು.

"https://kn.wikipedia.org/w/index.php?title=ಹಫ್ಸ&oldid=1158294" ಇಂದ ಪಡೆಯಲ್ಪಟ್ಟಿದೆ