ವಿಷಯಕ್ಕೆ ಹೋಗು

ಸೌದ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಉಮ್ಮುಲ್ ಮೂಮಿನೀನ್

ಸೌದ ಬಿಂತ್ ಝಮ್‌ಅ
سودة بنت زمعة
ವೈಯಕ್ತಿಕ
ಜನನ
ಮರಣಕ್ರಿ.ಶ. 674
ಧರ್ಮಇಸ್ಲಾಂ ಧರ್ಮ
ಸಂಗಾತಿ
ಮಕ್ಕಳುಅಬ್ದುಲ್ಲಾ ಬಿನ್ ಸಕ್ರಾನ್
ಹೆತ್ತವರು
  • ಝಮ್‌ಅ ಬಿನ್ ಕೈಸ್ (father)
  • ಶಮ್ಮೂಸ್ ಬಿಂತ್ ಕೈಸ್ (mother)
ವಂಶಾವಳಿಬನೂ ಆಮಿರ್

ಸೌದ್ ಬಿಂತ್ ಝಮ್‌ಅ (ಅರಬ್ಬಿ: سودة بنت زمعة) (ಮರಣ: ಕ್ರಿ.ಶ. 674) — ಮುಹಮ್ಮದ್ ಪೈಗಂಬರರ ಎರಡನೇ ಪತ್ನಿ. ಇವರನ್ನು ಮುಸಲ್ಮಾನರು ಉಮ್ಮುಲ್ ಮೂಮಿನೀನ್ (ಅರಬ್ಬಿ: أم المؤمنين - ಅನುವಾದ. ವಿಶ್ವಾಸಿಗಳ ಮಾತೆ) ಎಂದು ಕರೆಯುತ್ತಾರೆ.

ವಂಶಾವಳಿ[ಬದಲಾಯಿಸಿ]

ಸೌದ ಬಿಂತ್ ಝಮ್‌ಅ ಬಿನ್ ಕೈಸ್ ಬಿನ್ ಅಬ್ದುಶಂಸ್ ಬಿನ್ ಅಬ್ದುವುದ್ದ್ ಬಿನ್ ನಸ್ರ್ ಬಿನ್ ಮಾಲಿಕ್ ಬಿನ್ ಹಿಸ್ಲ್ ಬಿನ್ ಆಮಿರ್ ಬಿನ್ ಲುಅಯ್ ಬಿನ್ ಗಾಲಿಬ್ ಬಿನ್ ಫಿಹ್ರ್ ಬಿನ್ ಮಾಲಿಕ್ ಬಿನ್ ನದ್ರ್ (ಕುರೈಷ್) ಬಿನ್ ಕಿನಾನ ಬಿನ್ ಖುಝೈಮ ಬಿನ್ ಮುದ್ರಿಕ ಬಿನ್ ಇಲ್ಯಾಸ್ ಬಿನ್ ಮುದರ್ ಬಿನ್ ನಿಝಾರ್ ಬಿನ್ ಮಅದ್ದ್ ಬಿನ್ ಅದ್ನಾನ್.

ಜನನ ಮತ್ತು ಬೆಳವಣಿಗೆ[ಬದಲಾಯಿಸಿ]

ಸೌದ ಮಕ್ಕಾದಲ್ಲಿ ಕುರೈಷ್ ಬುಡಕಟ್ಟಿನ ಬನೂ ಆಮಿರ್ ಗೋತ್ರದಲ್ಲಿ ಝಮ್‌ಅ ಬಿನ್ ಕೈಸ್ ಮತ್ತು ಶಮ್ಮೂಸ್ ಬಿಂತ್ ಕೈಸ್ ದಂಪತಿಯ ಮಗಳಾಗಿ ಹುಟ್ಟಿದರು. ಅವರು ಹುಟ್ಟಿದ್ದು ಯಾವಾಗ ಎಂಬ ಬಗ್ಗೆ ನಿಖರ ದಾಖಲೆಗಳಿಲ್ಲ. ಮಕ್ಕಾದಲ್ಲೇ ಬೆಳೆದು ದೊಡ್ಡವರಾದರು. ವಿವಾಹಪ್ರಾಯವಾದಾಗ ತನ್ನ ಸೋದರ ಸಂಬಂಧಿ ಸಕ್ರಾನ್ ಬಿನ್ ಅಮ್ರ್‌ರನ್ನು (ಇವರು ಸುಹೈಲ್ ಬಿನ್ ಅಮ್ರ್‌ರ ಸಹೋದರ) ವಿವಾಹವಾದರು.[೧] ಈ ದಾಂಪತ್ಯದಲ್ಲಿ ಇವರಿಗೆ ಅಬ್ದುಲ್ಲಾ ಎಂಬ ಗಂಡು ಮಗು ಹುಟ್ಟಿತು. ಮುಹಮ್ಮದ್ ಪ್ರವಾದಿಯಾದ ಪ್ರಾರಂಭ ಕಾಲದಲ್ಲೇ ಸೌದ ಮತ್ತು ಸಕ್ರಾನ್ ಇಸ್ಲಾಂ ಸ್ವೀಕರಿಸಿದರು. ಮಕ್ಕಾದಲ್ಲಿ ಕುರೈಷರ ಕಾಟ ಮಿತಿ ಮೀರಿದಾಗ ಮುಹಮ್ಮದ್‌ರ ಆಜ್ಞೆಯಂತೆ ಇವರಿಬ್ಬರೂ ಇಥಿಯೋಪಿಯಾಗೆ ಹಿಜ್ರ (ವಲಸೆ) ಮಾಡಿದರು. ಇಥಿಯೋಪಿಯಾದಲ್ಲಿ ಸಕ್ರಾನ್ ನಿಧನರಾದರು. ಮಕ್ಕಾಗೆ ಮರಳಿದ ನಂತರ ನಿಧನರಾದರು ಎಂದು ಕೂಡ ಹೇಳಲಾಗುತ್ತದೆ.

ಮುಹಮ್ಮದ್‌ರೊಂದಿಗೆ ವಿವಾಹ[ಬದಲಾಯಿಸಿ]

ಒಮ್ಮೆ ಇಥಿಯೋಪಿಯಾದಲ್ಲಿದ್ದಾಗ ಮುಹಮ್ಮದ್ ಹಿಂದಿನಿಂದ ಬಂದು ತನ್ನ ಕುತ್ತಿಗೆಯನ್ನು ಹಿಡಿದಂತೆ ಸೌದ ಕನಸು ಕಂಡರು. ಅವರು ಕನಸನ್ನು ಗಂಡ ಸಕ್ರಾನ್‌ಗೆ ತಿಳಿಸಿದಾಗ ಸಕ್ರಾನ್ ಹೇಳಿದರು: "ನಿನ್ನ ಈ ಕನಸು ನಿಜವಾಗಿದ್ದರೆ ನನ್ನ ಮರಣಾನಂತರ ನೀನು ಮುಹಮ್ಮದ್‌ರನ್ನು ವಿವಾಹವಾಗುವೆ." ಆದರೆ ಸೌದರಿಗೆ ನಂಬಿಕೆ ಬರಲಿಲ್ಲ. ಆದರೆ ಮತ್ತೊಮ್ಮೆ ಆಕೆ ಚಂದ್ರ ಆಕಾಶದಿಂದ ತನ್ನ ಮಡಿಲಿಗೆ ಬಿದ್ದಂತೆ ಕನಸು ಕಂಡರು. ಅದರ ಬಗ್ಗೆ ಗಂಡನಲ್ಲಿ ವಿಚಾರಿಸಿದಾಗಲೂ, "ನಿನ್ನ ಕಸನು ನಿಜವಾಗಿದ್ದರೆ ನಾನು ಶೀಘ್ರವೇ ಮರಣಹೊಂದುತ್ತೇನೆ ಮತ್ತು ನೀನು ಮುಹಮ್ಮದ್‌ರನ್ನು ವಿವಾಹವಾಗುವೆ" ಎಂದು ಗಂಡ ಹೇಳಿದರು. ಈ ಘಟನೆ ನಡೆದ ಕೆಲವೇ ದಿನಗಳಲ್ಲಿ ಸಕ್ರಾನ್ ನಿಧನರಾದರೆಂದು ಹೇಳಲಾಗುತ್ತದೆ.[೨]

ಗಂಡನ ನಿಧನದ ಬಳಿಕ ಸೌದ ಒಂಟಿಯಾದರು. ಅವರಿಗೆ ಆಸರೆಯಾಗಿ ಯಾರೂ ಇರಲಿಲ್ಲ. ಇತ್ತ ಖದೀಜರ ಮರಣದಿಂದ ಮುಹಮ್ಮದ್ ಬಹಳ ದುಃಖಿತರಾಗಿದ್ದರು. ಒಂದಿನ ಸೌದರ ಗೆಳತಿ ಖೌಲ ಬಿಂತ್ ಹಕೀಮ್ (ಉಸ್ಮಾನ್ ಬಿನ್ ಮಝ್‌ಊನ್‌ರ ಪತ್ನಿ) ಮುಹಮ್ಮದ್‌ರ ಬಳಿಗೆ ಹೋಗಿ: ಓ ಪ್ರವಾದಿಯವರೇ! ತಾವು ಬಹಳ ಖಿನ್ನರಾಗಿದ್ದೀರಿ" ಎಂದರು. "ಹೌದು! ಖದೀಜರ ಮರಣದಿಂದ ನನಗೆ ಬಹಳ ದುಃಖವಾಗಿದೆ. ಆಕೆ ನನಗೆ ಎಲ್ಲವೂ ಆಗಿದ್ದಳು" ಮುಹಮ್ಮದ್ ಉತ್ತರಿಸಿದರು. ಖೌಲ ಕೇಳಿದರು: ಪ್ರವಾದಿಯವರೇ, ತಾವು ಒಪ್ಪಿದರೆ ನಾನು ತಮಗೆ ಒಬ್ಬ ಕನ್ಯೆಯನ್ನು ಮತ್ತು ಒಬ್ಬ ವಿಧವೆಯನ್ನು ತೋರಿಸಲೇ? ಅವರು ಯಾರೆಂದು ಮುಹಮ್ಮದ್ ಕೇಳಿದಾಗ, ಅದು ಆಯಿಶ ಮತ್ತು ಸೌದ ಎಂದು ಖೌಲ ಉತ್ತರಿಸಿದರು. ಮುಹಮ್ಮದ್ ಒಪ್ಪಿಕೊಂಡರು.[೩] ನಂತರ ಖೌಲ ಸೌದರ ಬಳಿಗೆ ಹೋಗಿ ವಿಷಯ ತಿಳಿಸಿದರು. ಮುಹಮ್ಮದ್ ಒಪ್ಪಿಕೊಂಡರೆ ನಾನು ವಿವಾಹಕ್ಕೆ ಸಿದ್ಧ ಎಂದು ಸೌದ ಹೇಳಿದರು. ಎರಡೂ ಕಡೆಯವರು ಒಪ್ಪಿದರು. ಮುಹಮ್ಮದ್ 400 ಬೆಳ್ಳಿ ನಾಣ್ಯಗಳನ್ನು ವಧುದಕ್ಷಿಣೆಯಾಗಿ ಕೊಟ್ಟರು.[೩] ಸೌದರ ಚಿಕ್ಕಪ್ಪ ಹಾತಿಬ್ ಬಿನ್ ಅಮ್ರ್ ವಿವಾಹ ನೆರವೇರಿಸಿಕೊಟ್ಟರು.

ಮದೀನಕ್ಕೆ ಹಿಜ್ರ[ಬದಲಾಯಿಸಿ]

ಮಕ್ಕಾದಲ್ಲಿ ಕುರೈಷರ ಹಿಂಸೆ ಅತಿಯಾದಾಗ ದೇವರ ಆದೇಶದಂತೆ ಮುಹಮ್ಮದ್ ಅಬೂ ಬಕರ್‌ರ ಜೊತೆಗೆ ಮದೀನಕ್ಕೆ ಹಿಜ್ರ ಮಾಡಿದರು. ಅಲ್ಲಿ ಅವರು ಅಬೂ ಅಯ್ಯೂಬ್‌ರ ಮನೆಯಲ್ಲಿ ತಂಗಿದರು. ಬಳಿಕ ಮಕ್ಕಾದಲ್ಲಿರುವ ತಮ್ಮ ಕುಟುಂಬದವರನ್ನು ಕರೆತರಲು ಝೈದ್ ಬಿನ್ ಹಾರಿಸ ಮತ್ತು ಅಬೂ ರಾಫಿ ಅನ್ಸಾರಿ ರನ್ನು ಮಕ್ಕಾಗೆ ಕಳುಹಿಸಿದರು. ಹೀಗೆ ಅವರ ಜೊತೆಗೆ ಸೌದ, ಫಾತಿಮ, ರುಕಯ್ಯ, ಉಮ್ಮು ಕುಲ್ಸೂಮ್ ಮತ್ತು ಝೈದ್‌ರ ಪತ್ನಿ ಉಮ್ಮು ಐಮನ್ ಮತ್ತು ಮಗ ಉಸಾಮ ಮದೀನಕ್ಕೆ ಪ್ರಯಾಣ ಮಾಡಿದರು.[೪]

ಗುಣನಡತೆ[ಬದಲಾಯಿಸಿ]

ಮದೀನಕ್ಕೆ ಹಿಜ್ರ ಬಂದ ಬಳಿಕ ಮುಹಮ್ಮದ್ ಆಯಿಶರನ್ನು ವಿವಾಹವಾದರು. ಸೌದ ಮತ್ತು ಆಯಿಶ ಬಹಳ ಅನ್ಯೋನ್ಯತೆಯಿಂದಿದ್ದರು. ಆಯಿಶ ಸೌದರನ್ನು ಬಹಳ ಇಷ್ಟಪಡುತ್ತಿದ್ದರು. ಏಕೆಂದರೆ ಅವರ ಸ್ವಭಾವ ಬಹಳ ಉದಾತ್ತವಾಗಿತ್ತು. ನಂತರ ಮುಹಮ್ಮದ್ ಹಫ್ಸ, ಝೈನಬ್, ಉಮ್ಮು ಸಲಮಾ ಮುಂತಾದವರನ್ನು ವಿವಾಹವಾದರು.

ಸೌದ ಮುಹಮ್ಮದ್‌ರನ್ನು ಅತಿಯಾಗಿ ಪ್ರೀತಿಸುತ್ತಿದ್ದರು. ಮುಹಮ್ಮದ್ ತನಗಿಂತಲೂ ಹೆಚ್ಚು ಆಯಿಶರನ್ನು ಪ್ರೀತಿಸುತ್ತಾರೆ ಎಂದು ಅವರಿಗೆ ತಿಳಿದಿತ್ತು. ಮುಹಮ್ಮದ್‌ರ ಇಷ್ಟಕ್ಕಾಗಿ ಅವರು ಏನನ್ನೂ ತ್ಯಾಗ ಮಾಡಲು ಸನ್ನದ್ಧರಾಗಿದ್ದರು. ಆದ್ದರಿಂದ ಅವರು ತಮ್ಮ ಸರದಿಯನ್ನು ಆಯಿಶರಿಗೆ ಬಿಟ್ಟುಕೊಟ್ಟರು. ಆಯಿಶ ಹೇಳುತ್ತಾರೆ: "ಸೌದರಿಗಿಂತ ಹೆಚ್ಚು ಪ್ರೀತಿಯುಳ್ಳ ಒಬ್ಬ ಮಹಿಳೆಯನ್ನು ನಾನು ಕಂಡಿಲ್ಲ. ಆಕೆ ಬಹಳ ಭಾವೋದ್ರೇಕವುಳ್ಳವರು. ನಾನು ಆಕೆಯೆಂತೆಯೇ ಆಗಲು ಬಯಸುತ್ತಿದ್ದೆ. ವಯಸ್ಸಾದಾಗ ಆಕೆ ಮುಹಮ್ಮದ್‌ರೊಂದಿಗಿನ ತನ್ನ ಸರದಿಯನ್ನು ನನಗೆ ನೀಡಿದಳು. ಆಕೆ ಹೇಳಿದಳು, ಪ್ರವಾದಿಯವರೇ, ನಾನು ನನ್ನ ಸರದಿಯನ್ನು ಆಯಿಶಳಿಗೆ ನೀಡುತ್ತೇನೆ. ಇದರಿಂದ ನನಗೆ ಮುಹಮ್ಮದ್‌ರೊಂದಿಗೆ ಎರಡು ಸರದಿಗಳಿದ್ದವು."

ಸೌದ ಬಹಳ ಧರ್ಮಿಷ್ಠೆಯಾಗಿದ್ದರು. ಮುಹಮ್ಮದ್‌ರ ಮರಣಾನಂತರ ಒಮ್ಮೆ ಉಮರ್ ಬಿನ್ ಖತ್ತಾಬ್ ಅವರಿಗೆ ಒಂದು ಚೀಲ ತುಂಬಾ ಚಿನ್ನದ ನಾಣ್ಯಗಳನ್ನು ಕಳುಹಿಸಿಕೊಟ್ಟರು. ಸೌದ ಅದರಲ್ಲಿ ಒಂದು ನಾಣ್ಯವನ್ನೂ ಇಟ್ಟುಕೊಳ್ಳದೆ ಎಲ್ಲವನ್ನೂ ದಾನ ಮಾಡಿದರು. ಸೌದ ಅತೀವ ದೇವಭಕ್ತಿಯನ್ನೂ ಹೊಂದಿದ್ದರು.[೫]

ಸೌದ ಹಾಸ್ಯಪ್ರಿಯೆಯಾಗಿದ್ದರು. ಅವರು ತಮ್ಮ ಮಾತಿನ ಮೂಲಕ ಮುಹಮ್ಮದ್‌ರನ್ನು ನಗಿಸುತ್ತಿದ್ದರು. ಒಂದು ರಾತ್ರಿ ಅವರು ಮುಹಮ್ಮದ್‌ರ ಹಿಂದೆ ದೀರ್ಘ ಹೊತ್ತು ನಮಾಝ್ ಮಾಡಿದರು. ಮರುದಿನ ಅವರು ಹೇಳಿದರು: "ಪ್ರವಾದಿಯವರೇ, ನಿನ್ನೆ ರಾತ್ರಿ ನಾನು ನಿಮ್ಮ ಜೊತೆಗೆ  ನಮಾಝ್ ಮಾಡಿದೆನಲ್ಲವೇ! ಆಗ ನೀವು ಎಷ್ಟು ದೀರ್ಘವಾಗಿ ರುಕೂ ಮಾಡಿದಿರಿ ಎಂದರೆ ನಾನು ನನ್ನ ಮೂಗನ್ನು ರಕ್ತ ಸೋರದಂತೆ ಗಟ್ಟಿಯಾಗಿ ಹಿಡಿದುಕೊಂಡಿದ್ದೆ." ಇದನ್ನು ಕೇಳಿ ಮುಹಮ್ಮದ್ ಬಹಳ ಹೊತ್ತು ನಗುತ್ತಿದ್ದರು.[೬]

ಸೌದರಿಗೆ ಹೆದರಿಕೆ ಸ್ವಲ್ಪ ಹೆಚ್ಚು. ಮುಹಮ್ಮದ್ ಮೊದಲ ಬಾರಿ ದಜ್ಜಾಲ್‌ನ ಕುರಿತು ಹೇಳಿದಾಗ ಅವರು ಬಹಳ ಹೆದರಿದ್ದರು. ಇದರ ನಂತರ ಮುಹಮ್ಮದ್‌ರ ಇತರ ಪತ್ನಿಯರು ದಜ್ಜಾಲ್‌ನ ಬಗ್ಗೆ ಹೇಳಿ ಸೌದರನ್ನು ಹೆದರಿಸುತ್ತಿದ್ದರು. ಒಮ್ಮೆ ಸೌದರ ಮುಂದೆ ಆಯಿಶ ಮತ್ತು ಹಫ್ಸ ದಜ್ಜಾಲ್‌ನ ಕುರಿತು ಮಾತನಾಡತೊಡಗಿದರು. ಆಗ ಸೌದ ಹೆದರಿಕೆಯಿಂದ ಕೋಣೆಯೊಳಗೆ ಹೋಗಿ ಕುಳಿತರು. ಬಹಳ ಹೊತ್ತಿನ ತನಕ ಅವರು ಹೊರ ಬರಲೇ ಇಲ್ಲ. ಮುಹಮ್ಮದ್ ಬಂದು ಅವರನ್ನು ಕರೆದ ನಂತರವೇ ಅವರು ಹೊರಗೆ ಬಂದರು.[೭]

ಹಿಜಾಬ್‌ನ ಶ್ಲೋಕ[ಬದಲಾಯಿಸಿ]

ಮುಹಮ್ಮದ್‌ರ ಪತ್ನಿಯರು ರಾತ್ರಿ ಹೊತ್ತು ಬಹಿರ್ದೆಸೆಗಾಗಿ ಬಕೀಅ್‌ನ ಸಮೀಪವಿರುವ ಮನಾಸಿ ಎಂಬ ಸ್ಥಳಕ್ಕೆ ಹೋಗುತ್ತಿದ್ದರು. ಅದೊಂದು ಬಯಲು ಪ್ರದೇಶ. ಅವರು ರಾತ್ರಿ ಹೊತ್ತಿನಲ್ಲಿ ಮಾತ್ರ ಅಲ್ಲಿಗೆ ಹೋಗುತ್ತಿದ್ದರು. ಉಮರ್  ಮುಹಮ್ಮದ್‌ರೊಡನೆ ತಮ್ಮ ಪತ್ನಿಯರಿಗೆ ಪರದೆ ಹಾಕುವಂತೆ ಪದೇ ಪದೇ ಒತ್ತಾಯಿಸುತ್ತಿದ್ದರು. ಆದರೆ ಮುಹಮ್ಮದ್ ಅತ್ತ ಗಮನಕೊಟ್ಟಿರಲಿಲ್ಲ. ಏಕೆಂದರೆ ಅವರಿಗೆ ಈ ವಿಷಯದಲ್ಲಿ ದೇವರಿಂದ ಯಾವುದೇ ಆಜ್ಞೆ ಬಂದಿರಲಿಲ್ಲ. ಒಂದು ರಾತ್ರಿ ಸೌದ ಬಹಿರ್ದೆಸೆಗಾಗಿ ಬಯಲಿಗೆ ಹೋದರು. ಸೌದ್ ಬಹಳ ಎತ್ತರವಾಗಿದ್ದು ದಪ್ಪ ಶರೀರವನ್ನು ಹೊಂದಿದ್ದರು. ಮಹಿಳೆಯರ ಮಧ್ಯೆ ಅವರನ್ನು ಸುಲಭವಾಗಿ ಗುರುತು ಹಚ್ಚಬಹುದಾಗಿತ್ತು. ಸೌದರನ್ನು ನೋಡಿ ಉಮರ್ ಗಟ್ಟಿಯಾಗಿ ಕೂಗಿ ಹೇಳಿದರು: "ಓ ಸೌದ! ನನಗೆ ನಿಮ್ಮ ಗುರುತು ಸಿಕ್ಕಿದೆ." ಉಮರ್ ಹೀಗೆ ಹೇಳಿದ್ದು ಈ ಕಾರಣದಿಂದಲಾದರೂ ಹಿಜಾಬ್ ಜಾರಿಗೆ ಬರಲಿ ಎಂಬ ಉದ್ದೇಶದಿಂದ. ಇದರ ನಂತರ ಹಿಜಾಬ್‌ನ ಶ್ಲೋಕ ಅವತೀರ್ಣವಾಯಿತು. ಆಯಿಶ ಹೇಳುವಂತೆ ಇದರ ನಂತರ ಬಹಿರ್ದೆಸೆಗಾಗಿ ಮುಹಮ್ಮದ್‌ರ ಮನೆಯ ಸಮೀಪವೇ ಶೌಚಾಲಯವನ್ನು ನಿರ್ಮಿಸಲಾಯಿತು.

ಮುಹಮ್ಮದ್‌ರ ಜೊತೆಗೆ ಪ್ರಯಾಣ[ಬದಲಾಯಿಸಿ]

ಸೌದ ಮುಹಮ್ಮದ್‌ರ ಜೊತೆ ಖೈಬರ್ ಯುದ್ಧದಲ್ಲಿ ಭಾಗವಹಿಸಿದ್ದರು. ಅವರಿಗೆ ಯುದ್ಧಾರ್ಜಿತ ಸೊತ್ತಿನಲ್ಲಿ ಪಾಲೂ ಸಿಕ್ಕಿತ್ತು. ಮುಹಮ್ಮದ್ ವಿದಾಯದ ಹಜ್ಜ್ ನಿರ್ವಹಿಸಿದಾಗ ಸೌದ ಕೂಡ ಅವರ ಜೊತೆಗಿದ್ದರು. ಅರಫದಿಂದ ಹಿಂದಿರುಗಿ ಮಗ್ರಿಬ್, ಇಶಾ ಮತ್ತು ಫಜ್ರ್ ನಮಾಝ್‌ಗಳನ್ನು ಮುಝ್ದಲಿಫದಲ್ಲಿ ನಿರ್ವಹಿಸಬೇಕಾಗಿದೆ. ಆದರೆ ಸೌದ ಮಿನಾಗೆ ತೆರಳಿ ಅಲ್ಲಿ ಫಜ್ರ್ ನಮಾಝ್ ನಿರ್ವಹಿಸಲು ಮುಹಮ್ಮದ್‌ರೊಡನೆ ಅನುಮತಿ ಕೇಳಿದರು. ಏಕೆಂದರೆ ಅವರಿಗೆ ವೇಗವಾಗಿ ನಡೆಯಲಾಗುತ್ತಿರಲಿಲ್ಲ. ಮುಹಮ್ಮದ್ ಅನುಮತಿ ಕೊಟ್ಟರು. ಆಯಿಶ ಹೇಳುತ್ತಾರೆ: "ಮುಹಮ್ಮದ್ ನನಗೂ ಅನುಮತಿ ಕೊಟ್ಟಿದ್ದರೆ ಎಷ್ಟು ಚೆನ್ನಾಗಿತ್ತು. ಏಕೆಂದರೆ ನನಗೆ ಸೌದರ ಜೊತೆಗಿರುವುದು ಎಂದರೆ ಬಹಳ ಇಷ್ಟ."[೬]

ಸೌದ ಮುಹಮ್ಮದ್‌ರ ಜೊತೆಗೆ ಹಜ್ಜ್ ನಿರ್ವಹಿಸಿದ್ದರು. ಅದರ ನಂತರ ಅವರು ಹಜ್ಜ್ ನಿರ್ವಹಿಸಲಿಲ್ಲ. ಸೌದ ಮತ್ತು ಝೈನಬ್ ಬಿಂತ್ ಜಹ್ಶ್ ರನ್ನು ಬಿಟ್ಟು ಉಳಿದ ಎಲ್ಲಾ ಪತ್ನಿಯರು ಮುಹಮ್ಮದ್‌ರ ಮರಣಾನಂತರ ಅನೇಕ ಬಾರಿ ಹಜ್ಜ್ ನಿರ್ವಹಿಸಿದ್ದರು. ಆದರೆ ಸೌದ ಮುಹಮ್ಮದ್ ನಿಧನರಾದ ಬಳಿಕ ತಮ್ಮ ಮರಣದ ತನಕ ಮದೀನದ ತಮ್ಮ ಮನೆಯಿಂದ ಕದಲಲಿಲ್ಲ.[೫] ಅವರು ಹೇಳುತ್ತಾರೆ: "ಮುಹಮ್ಮದ್‌ರ ಮರಣಾನಂತರ ನಾನು ವಾಹವನ್ನೇರಿಯೇ ಇಲ್ಲ."

ಮರಣ[ಬದಲಾಯಿಸಿ]

ಹಿಜರಿ ಶಕೆ 54 ಶವ್ವಾಲ್ ತಿಂಗಳಲ್ಲಿ (ಕ್ರಿ.ಶ. 674) ಸೌದ ಮದೀನಾದಲ್ಲಿ ನಿಧನರಾದರು. ಆಗ ಅವರಿಗೆ 80 ವರ್ಷ ಪ್ರಾಯ. ಮುಆವಿಯ ಖಲೀಫರಾಗಿದ್ದ ಕಾಲ. ಅವರನ್ನು ಮದೀನಾದ ಬಕೀಅ್ ಕಬರಸ್ಥಾನದಲ್ಲಿ ದಫನ ಮಾಡಲಾಯಿತು.

ಉಲ್ಲೇಖಗಳು[ಬದಲಾಯಿಸಿ]

  1. Ghadanfar, Mahmood Ahmad. Great Women of Islam (in English). Darussalam Publishers. p. 33.{{cite book}}: CS1 maint: unrecognized language (link)
  2. Ghadanfar, Mahmood Ahmad. Great Women of Islam (in English). Darussalam Publishers. pp. 33–34.{{cite book}}: CS1 maint: unrecognized language (link)
  3. ೩.೦ ೩.೧ Ghadanfar, Mahmood Ahmad. Great Women of Islam (in English). Darussalam Publishers. p. 34.{{cite book}}: CS1 maint: unrecognized language (link)
  4. Ghadanfar, Mahmood Ahmad. Great Women of Islam (in English). Darussalam Publishers. p. 35.{{cite book}}: CS1 maint: unrecognized language (link)
  5. ೫.೦ ೫.೧ Ghadanfar, Mahmood Ahmad. Great Women of Islam (in English). Darussalam Publishers. p. 38.{{cite book}}: CS1 maint: unrecognized language (link)
  6. ೬.೦ ೬.೧ Ghadanfar, Mahmood Ahmad. Great Women of Islam (in English). Darussalam Publishers. p. 36.{{cite book}}: CS1 maint: unrecognized language (link)
  7. Ghadanfar, Mahmood Ahmad. Great Women of Islam (in English). Darussalam Publishers. p. 37.{{cite book}}: CS1 maint: unrecognized language (link)
"https://kn.wikipedia.org/w/index.php?title=ಸೌದ&oldid=1158374" ಇಂದ ಪಡೆಯಲ್ಪಟ್ಟಿದೆ