ಆಯಿಶ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಉಮ್ಮುಲ್ ಮೂಮಿನೀನ್

ಆಯಿಶ ಬಿಂತ್ ಅಬೂ ಬಕರ್
عائشة بنت أبي بكر
ವೈಯಕ್ತಿಕ
ಜನನಕ್ರಿ.ಶ. 613
ಮರಣಕ್ರಿ.ಶ. 678
ಧರ್ಮಇಸ್ಲಾಂ ಧರ್ಮ
ಸಂಗಾತಿಮುಹಮ್ಮದ್ ಬಿನ್ ಅಬ್ದುಲ್ಲಾ
ಹೆತ್ತವರು
ವಂಶಾವಳಿಬನೂ ತೈಮ್ ಗೋತ್ರ

ಆಯಿಶ ಬಿಂತ್ ಅಬೂ ಬಕರ್ (ಅರಬ್ಬಿ: عائشة بنت أبي بكر) (ಕ್ರಿ.ಶ 613 – 678) — ಮುಹಮ್ಮದ್ ಪೈಗಂಬರರ ಮೂರನೇ ಮತ್ತು ಅತಿ ಕಿರಿಯ ಪತ್ನಿ. ಇಸ್ಲಾಮೀ ಆಡಳಿತದ ಮೊದಲ ಖಲೀಫ ಅಬೂ ಬಕರ್‌ರ ಪುತ್ರಿ. ಇವರನ್ನು ಮುಸಲ್ಮಾನರು ಉಮ್ಮುಲ್ ಮೂಮಿನೀನ್ (ಅರಬ್ಬಿ: أم المؤمنين - ಅನುವಾದ. ವಿಶ್ವಾಸಿಗಳ ಮಾತೆ) ಎಂದು ಕರೆಯುತ್ತಾರೆ.

ವಂಶಾವಳಿ[ಬದಲಾಯಿಸಿ]

ಆಯಿಶ ಬಿಂತ್ ಅಬೂ ಬಕರ್ ಬಿನ್ ಅಬೂ ಕುಹಾಫ ಉಸ್ಮಾನ್ ಬಿನ್ ಆಮಿರ್ ಬಿನ್ ಅಮ್ರ್ ಬಿನ್ ಕಅಬ್ ಬಿನ್ ಸಅದ್ ಬಿನ್ ತೈಮ್ ಬಿನ್ ಮುರ್‍ರ ಬಿನ್ ಕಅಬ್ ಬಿನ್ ಲುಅಯ್ ಬಿನ್ ಗಾಲಿಬ್ ಬಿನ್ ಫಿಹ್ರ್ ಬಿನ್ ಮಾಲಿಕ್ ಬಿನ್ ನದ್ರ್ (ಕುರೈಷ್) ಬಿನ್ ಕಿನಾನ ಬಿನ್ ಖುಝೈಮ ಬಿನ್ ಮುದ್ರಿಕ ಬಿನ್ ಇಲ್ಯಾಸ್ ಬಿನ್ ಮುದರ್ ಬಿನ್ ನಿಝಾರ್ ಬಿನ್ ಮಅದ್ದ್ ಬಿನ್ ಅದ್ನಾನ್.

ಜನನ[ಬದಲಾಯಿಸಿ]

ಹಿಜರಿ ಪೂರ್ವ 9ರಲ್ಲಿ (ಕ್ರಿ.ಶ. 613) ಆಯಿಶ ಮಕ್ಕಾದಲ್ಲಿ ಅಬೂ ಬಕರ್ ಬಿನ್ ಅಬೂ ಕುಹಾಫ ಮತ್ತು ಉಮ್ಮು ರೂಮಾನ್ ಬಿಂತ್ ಆಮಿರ್ ದಂಪತಿಯ ಮಗಳಾಗಿ ಹುಟ್ಟಿದರು. ಅವರು ಮಕ್ಕಾದಲ್ಲೇ ಬೆಳೆದು ದೊಡ್ಡವರಾದರು. ಅವರು ಕುರೈಷ್ ಬುಡಕಟ್ಟಿನ ಬನೂ ತೈಮ್ ಗೋತ್ರಕ್ಕೆ ಸೇರಿದವರು. ಅತ್ಯಂತ ಬುದ್ಧಿವಂತೆ ಮತ್ತು ಅಪಾರ ಜ್ಞಾಪಕಶಕ್ತಿಯುಳ್ಳವರಾಗಿದ್ದರು. ಚಿಕ್ಕಂದಿನಲ್ಲಿ ಜೋಕಾಲಿ ಆಡುವುದು ಮತ್ತು ಗೊಂಬೆಗಳೊಂದಿಗೆ ಆಟವಾಡುವುದು ಅವರ ನೆಚ್ಚಿನ ಹವ್ಯಾಸವಾಗಿತ್ತು.

ವಿವಾಹ[ಬದಲಾಯಿಸಿ]

ಖದೀಜರ ಮರಣದಿಂದ ಮುಹಮ್ಮದ್ ಬಹಳ ದುಃಖಿತರಾಗಿದ್ದರು. ಒಮ್ಮೆ ಖೌಲ ಬಿಂತ್ ಹಕೀಮ್ (ಉಸ್ಮಾನ್ ಬಿನ್ ಮಝ್‌ಊನ್‌ರ ಪತ್ನಿ) ಮುಹಮ್ಮದ್‌ರ ಬಳಿಗೆ ಬಂದು: "ಓ ಪ್ರವಾದಿಯವರೇ! ತಾವು ಬಹಳ ಖಿನ್ನರಾಗಿದ್ದೀರಿ" ಎಂದು ಹೇಳಿದಾಗ, ಮುಹಮ್ಮದ್: "ಹೌದು! ಖದೀಜಳ ಮರಣದಿಂದ ನನಗೆ ಬಹಳ ದುಃಖವಾಗಿದೆ. ಆಕೆ ನನಗೆ ಎಲ್ಲವೂ ಆಗಿದ್ದಳು" ಎಂದು ಉತ್ತರಿಸಿದರು. ಖೌಲ ಕೇಳಿದರು: "ಪ್ರವಾದಿಯವರೇ, ತಾವೇಕೆ ಮದುವೆಯಾಗಬಾರದು? ತಾವು ಒಪ್ಪಿದರೆ ನಾನು ತಮಗೆ ಒಬ್ಬ ಕನ್ಯೆ ಮತ್ತು ಒಬ್ಬ ವಿಧವೆಯನ್ನು ನೋಡಿದ್ದೇನೆ." ಕನ್ಯೆ ಮತ್ತು ವಿಧವೆ ಯಾರೆಂದು ಕೇಳಿದಾಗ, ಕನ್ಯೆ ಆಯಿಶ ಮತ್ತು ವಿಧವೆ ಸೌದ ಎಂದು ಖೌಲ ಉತ್ತರಿಸಿದರು. ಮುಹಮ್ಮದ್ ಇಬ್ಬರಿಗೂ ವಿವಾಹಪ್ರಸ್ತಾಪ ಕಳುಹಿಸಲು ಹೇಳಿದರು.

ಖೌಲ ಆಯಿಶರ ತಾಯಿ ಉಮ್ಮು ರೂಮಾನ್‌ರ ಬಳಿಗೆ ಹೋಗಿ ವಿಷಯ ತಿಳಿಸಿದರು. ಆದರೆ ಮಕ್ಕಾದ ಮುಖಂಡ ಮುತ್‌ಇಮ್ ಬಿನ್ ಅದೀ ತನ್ನ ಮನೆಗೆ ಆಯಿಶರನ್ನು ಸೊಸೆಯಾಗಿ ತರಲು ಬಯಸಿದ್ದರು. ಅವರು ಈ ಬಗ್ಗೆ ಅಬೂ ಬಕರ್‌ರೊಡನೆ ಮಾತುಕತೆ ನಡೆಸಿದ್ದರು ಮತ್ತು ಅಬೂ ಬಕರ್ ಮಾತು ಕೊಟ್ಟಿದ್ದರು. ಮುಹಮ್ಮದ್ ಆಯಿಶರಿಗೆ ವಿವಾಹ ಪ್ರಸ್ತಾಪ ಕಳುಹಿಸಿದ್ದಾರೆಂಬ ವಿಷಯ ತಿಳಿದು ಅಬೂ ಬಕರ್ ಮುತ್‌ಇಮ್‌ರ ಬಳಿಗೆ ಹೋದರು. "ನನ್ನ ಮಗ ನಿನ್ನ ಮಗಳನ್ನು ಮದುವೆಯಾದರೆ ಅವನು ನಿನ್ನ ಧರ್ಮಕ್ಕೆ ಹೋಗುವ ಅಪಾಯವಿದೆ, ನನಗೆ ಈ ಸಂಬಂಧ ಬೇಡ" ಎಂದು ಮುತ್‌ಇಮ್‌ರ ಪತ್ನಿ ಕಡ್ಡಿ ಮುರಿದಂತೆ ಹೇಳಿ ನಿರಾಕರಿಸಿದರು. ಮುತ್‌ಇಮ್ ಕೂಡ ಇದೇ ಮಾತನ್ನು ಹೇಳಿದರು. ನಂತರ ಅಬೂ ಬಕರ್ ತಮ್ಮ ಮಗಳನ್ನು ಮುಹಮ್ಮದ್‌ರಿಗೆ ವಿವಾಹ ಮಾಡಿಕೊಟ್ಟರು.

ವಿವಾಹಪ್ರಾಯ[ಬದಲಾಯಿಸಿ]

ಇಸ್ಲಾಮೀ ಮೂಲಗಳ ಪ್ರಕಾರ ವಿವಾಹವಾಗುವಾಗ ಆಯಿಶರ ಪ್ರಾಯ ಆರು ಅಥವಾ ಏಳು ಮತ್ತು ದಾಂಪತ್ಯವನ್ನು ಆರಂಭಿಸುವಾಗ ಒಂಬತ್ತು ಅಥವಾ ಹತ್ತು. ಪ್ರಮುಖ ಹದೀಸ್ ಗ್ರಂಥ ಸಹೀಹುಲ್ ಬುಖಾರಿಯಲ್ಲಿರುವಂತೆ, ನಾನು ವಿವಾಹವಾಗುವಾಗ ನನಗೆ ಆರು ವಯಸ್ಸು ಎಂದು ಆಯಿಶ ಹೇಳಿದ್ದು ವರದಿಯಾಗಿದೆ. ಇಬ್ನ್ ಸಅದ್‌ರ ಚರಿತ್ರೆಯಲ್ಲಿರುವಂತೆ ಆಯಿಶ ಆರು ಅಥವಾ ಏಳನೇ ವಯಸ್ಸಿನಲ್ಲಿ ವಿವಾಹವಾದರು ಮತ್ತು ಒಂಬತ್ತನೇ ವಯಸ್ಸಿನಲ್ಲಿ ದಾಂಪತ್ಯವನ್ನು ಆರಂಭಿಸಿದರು. ದಾಂಪತ್ಯ ಆರಂಭಿಸುವಾಗ ಅವರ ವಯಸ್ಸು ಹತ್ತು ಎಂದು ಇಬ್ನ್ ಹಿಶಾಂ ಉಲ್ಲೇಖಿಸಿದ್ದಾರೆ. ವಿವಾಹದ ಬಳಿಕ ಆಯಿಶ ತಮ್ಮ ಹೆತ್ತವರೊಂದಿಗೆ ವಾಸಿಸುತ್ತಿದ್ದರು ಮತ್ತು ಹತ್ತು ಪೂರ್ತಿಯಾದಾಗ ಅವರು ಮುಹಮ್ಮದ್‌ರೊಂದಿಗೆ ದಾಂಪತ್ಯ ಆರಂಭಿಸಿದರು ಎಂದು ತಬರಿ ಹೇಳುತ್ತಾರೆ. ಆಯಿಶರ ಹಿರಿಯ ಸಹೋದರಿ ಅಸ್ಮಾರ ವಯಸ್ಸನ್ನು ಆಧಾರವಾಗಿಟ್ಟು, ವಿವಾಹದ ಸಂದರ್ಭ ದಾಂಪತ್ಯ ಆರಂಭಿಸುವಾಗ ಆಯಿಶರ ವಯಸ್ಸು 18 ಅಥವಾ 19 ಎಂದು ತೋರಿಸಲು ಕೆಲವರು ಪ್ರಯತ್ನಿಸಿದ್ದಾರೆ.

ಹಿಜ್ರ[ಬದಲಾಯಿಸಿ]

ಮುಹಮ್ಮದ್ ಮತ್ತು ಅಬೂ ಬಕರ್ ಮದೀನಕ್ಕೆ ಹಿಜ್ರ ಮಾಡಿದ ಬಳಿಕ ತಲ್‌ಹ ಬಿನ್ ಉಬೈದುಲ್ಲಾ, ಸಹೋದರ ಅಬ್ದುರ್‍ರಹ್ಮಾನ್, ತಾಯಿ ಉಮ್ಮು ರೂಮಾನ್, ಸಹೋದರಿ ಅಸ್ಮಾ, ಝೈದ್ ಬಿನ್ ಹಾರಿಸ್, ಉಮ್ಮು ಕುಲ್ಸೂಮ್, ಫಾತಿಮ, ಸೌದ, ಉಮ್ಮು ಐಮನ್, ಉಸಾಮ ಬಿನ್ ಝೈದ್ ಮುಂತಾದವರೊಡನೆ ಆಯಿಶ ಮದೀನಕ್ಕೆ ಹಿಜ್ರ ಮಾಡಿದರು. ಬದ್ರ್ ಯುದ್ಧದ ಬಳಿಕ ಹಿಜರಿ 2ನೇ ವರ್ಷ (ಕ್ರಿ.ಶ. 623) ಶವ್ವಾಲ್ ತಿಂಗಳಲ್ಲಿ ಮುಹಮ್ಮದ್ ಆಯಿಶರೊಡನೆ ದಾಂಪತ್ಯ ಜೀವನವನ್ನು ಆರಂಭಿಸಿದರು.

ಸುಳ್ಳಾರೋಪ[ಬದಲಾಯಿಸಿ]

ಒಮ್ಮೆ ಮುಹಮ್ಮದ್ ಮತ್ತು ಸಹಾಬಿಗಳು ಬನೂ ಮುಸ್ತಲಕ್ ಯುದ್ಧದಿಂದ ಹಿಂದಿರುಗಿ ಬರುತ್ತಿದ್ದರು. ಆಯಿಶ ಕೂಡ ಅವರ ಜೊತೆಗಿದ್ದರು. ದಾರಿ ಮಧ್ಯೆ ಅವರು ವಿಶ್ರಾಂತಿ ಪಡೆದುಕೊಳ್ಳುತ್ತಿದ್ದಾಗ ಬಹಿರ್ದೆಸೆಗಾಗಿ ಆಯಿಶ ಒಂಟೆಯಿಂದ ಇಳಿದು ದೂರ ಹೋದರು. ದಾರಿಯಲ್ಲಿ ಆಕೆಯ ಸರ ಕಳೆದುಹೋಯಿತು. ಆಕೆ ಸರವನ್ನು ಹುಡುಕಿ ತರುವಷ್ಟರಲ್ಲಿ ಮುಹಮ್ಮದ್ ಮತ್ತು ಸಹಾಬಿಗಳು ಅಲ್ಲಿಂದ ತೆರಳಿದ್ದರು. ಆಕೆಯ ಪಲ್ಲಕ್ಕಿಯನ್ನು ಹೊತ್ತಿರುವ ಒಂಟೆ ಕೂಡ ಅಲ್ಲಿರಲಿಲ್ಲ. ಆಯಿಶ ಪಲ್ಲಕ್ಕಿಯಲ್ಲೇ ಇದ್ದಾರೆಂದು ಭಾವಿಸಿ ಅವರು ಅದನ್ನು ಒಯ್ದಿದ್ದರು. ತಾವು ವಿಶ್ರಾಂತಿ ಪಡೆಯುವ ಸ್ಥಳಗಳಲ್ಲೆಲ್ಲಾ ಏನಾದರೂ ಬಿಟ್ಟುಹೋಗಿರಬಹುದೇ ಎಂದು ಬಹಳ ಹಿಂದಿನಿಂದ ಹಿಂಬಾಲಿಸುತ್ತಾ ಬರಲು ಸಫ್ವಾನ್ ಬಿನ್ ಮುಅತ್ತಲ್ ರನ್ನು ನೇಮಿಸಲಾಗಿತ್ತು. ಬೆಳಗಾದಾಗ ಅವರು ಆ ಸ್ಥಳಕ್ಕೆ ತಲುಪಿದರು. ಅಲ್ಲಿ ಒಬ್ಬ ಮಹಿಳೆ ಪರದೆ ಹೊದ್ದು ಕುಳಿತಿರುವುದನ್ನು ಕಂಡರು. ಸಫ್ವಾನ್ ಒಂಟೆಯಿಂದ ಇಳಿದರು. ಆಯಿಶ ಒಂಟೆಯೇರಿದಾಗ ಅವರು ಅದರ ಕಡಿವಾಣವನ್ನು ಹಿಡಿದು ಮುಂದಿನಿಂದ ಸಾಗಿದರು. ಆಯಿಶ‍ ಸಫ್ವಾನ್‌ರೊಂದಿಗೆ ಬರುವುದನ್ನು ಕಂಡಾಗ ಅಬ್ದುಲ್ಲಾ ಬಿನ್ ಉಬೈನ ಮುಖಂಡತ್ವದಲ್ಲಿ ಮದೀನಾದ ಕಪಟವಿಶ್ವಾಸಿಗಳು ರೋಚಕ ಕಥೆ ಕಟ್ಟಿ ಪ್ರಚಾರ ಮಾಡಿದರು. ವಿಷಯ ತಿಳಿದಾಗ ಆಯಿಶ ಆಘಾತಕ್ಕೊಳಗಾದರು. ಅವರು ಇಂತಹ ಕೃತ್ಯವನ್ನು ಕನಸು-ಮನಸಿನಲ್ಲೂ ಊಹಿಸಿದವರಲ್ಲ. ಮುಹಮ್ಮದ್‌ರಿಗೂ ಸತ್ಯವೇನೆಂದು ತಿಳಿದಿರಲಿಲ್ಲ. ತಪ್ಪು ಮಾಡಿದ್ದರೆ ದೇವರಲ್ಲಿ ಕ್ಷಮೆ ಕೇಳಲು ಮುಹಮ್ಮದ್ ಸಲಹೆ ನೀಡಿದರು. ಆದರೆ ಆಯಿಶರಿಗೆ ದೇವರಲ್ಲಿ ಭರವಸೆಯಿತ್ತು. ತನ್ನ ನಿರಪರಾಧಿತ್ವವನ್ನು ದೇವರು ಬಹಿರಂಗಪಡಿಸಿಯೇ ತೀರುತ್ತಾನೆಂದು ಅವರು ಬಲವಾಗಿ ನಂಬಿದ್ದರು. ಕೊನೆಗೆ ದೇವರು ಕುರ್‌ಆನ್ ಸೂಕ್ತಿಯನ್ನು ಅವತೀರ್ಣಗೊಳಿಸುವ ಮೂಲಕ ಅವರ ನಿರಪರಾಧಿತ್ವವನ್ನು ಘೋಷಿಸಿದನು.

ತಯಮ್ಮುಮ್[ಬದಲಾಯಿಸಿ]

ಒಮ್ಮೆ ಒಂದು ದಂಡಯಾತ್ರೆಯಿಂದ ಹಿಂದಿರುಗುತ್ತಿದ್ದಾಗ ಮುಹಮ್ಮದ್ ಮತ್ತು ಸಂಗಡಿಗರು ಒಂದು ಕಡೆ ವಿಶ್ರಾಂತಿಗಾಗಿ ತಂಗಿದರು. ಆಗ ಆಯಿಶ ತನ್ನ ಸರವನ್ನು ಕಳೆದುಕೊಂಡರು. ಮುಹಮ್ಮದ್ ಸಂಗಡಿಗರೊಂದಿಗೆ ಸರವನ್ನು ಹುಡುಕಲು ಹೇಳಿದರು. ದೀರ್ಘ ಹುಡುಕಾಟದ ನಂತರ ಸರ ಸಿಕ್ಕಿತು. ಆದರೆ ಆಗಲೇ ತಡವಾಗಿತ್ತು. ಫಜ್ರ್ ನಮಾಝಿನ ಸಮಯವಾಯಿತು. ಸಹಾಬಿಗಳ ಬಳಿ ನೀರಿರಲಿಲ್ಲ. ನಮಾಝ್ ಕಝಾ ಆಗಬಹುದೋ ಎಂದು ಅವರು ಭಯಪಟ್ಟರು. ಇಷ್ಟೆಲ್ಲಾ ಆದದ್ದು ಆಯಿಶರಿಂದ ಎಂದು ಅಬೂ ಬಕರ್ ಮಗಳನ್ನು ಗದರಿಸಿದರು. ಆಗ ನೀರು ಸಿಗದಿದ್ದರೆ ತಯಮ್ಮುಮ್ ಮಾಡುವ ಶ್ಲೋಕ ಅವತೀರ್ಣವಾಯಿತು.

ಸುಮಧುರ ದಾಂಪತ್ಯ[ಬದಲಾಯಿಸಿ]

ಮುಹಮ್ಮದ್ ಮತ್ತು ಆಯಿಶರ ದಾಂಪತ್ಯವು ಅತ್ಯಂತ ಸುಮಧುರವೂ ಯಶಸ್ವಿಯೂ ಆಗಿತ್ತು. ಮುಹಮ್ಮದ್ ಇತರೆಲ್ಲಾ ಪತ್ನಿಯರಿಗಿಂತಲೂ ಆಯಿಶರನ್ನು ಹೆಚ್ಚು ಪ್ರೀತಿಸುತ್ತಿದ್ದರು. ಒಮ್ಮೆ ಅಮ್ರ್ ಬಿನ್ ಆಸ್ ಮುಹಮ್ಮದ್‌ರೊಡನೆ, "ನೀವು ಅತಿಹೆಚ್ಚು ಪ್ರೀತಿಸುವ ವ್ಯಕ್ತಿ ಯಾರು?" ಎಂದು ಕೇಳಿದಾಗ, ಅವರು "ಆಯಿಶ" ಎಂದು ಉತ್ತರಿಸಿದ್ದರು. ಒಮ್ಮೆ ಮುಹಮ್ಮದ್ ಸಂತೋಷದಲ್ಲಿದ್ದಾಗ, ತನಗಾಗಿ ಪ್ರಾರ್ಥಿಸಿರಿ ಎಂದು ಆಯಿಶ ವಿನಂತಿಸಿದರು. ಮುಹಮ್ಮದ್ ಪ್ರಾರ್ಥಿಸಿದರು: "ದೇವರೇ, ಆಯಿಶ ಈಗಾಗಲೇ ಮಾಡಿದ, ಮುಂದೆ ಮಾಡಲಿರುವ, ಬಹಿರಂಗವಾಗಿ ಮಾಡಿದ ಮತ್ತು ಗುಟ್ಟಾಗಿ ಮಾಡಿದ ಎಲ್ಲಾ ತಪ್ಪುಗಳನ್ನೂ ಕ್ಷಮಿಸು." ಇದನ್ನು ಕೇಳಿ ಆಯಿಶ ತಲೆ ಮಡಿಲಿಗೆ ಬೀಳುವವರೆಗೂ ನಗುತ್ತಿದ್ದರು. ಮುಹಮ್ಮದ್ ಕೇಳಿದರು: "ಆಯಿಶ ನನ್ನ ಪ್ರಾರ್ಥನೆ ನಿನಗೆ ಇಷ್ಟವಾಯಿತೇ?" ಆಯಿಶ ಉತ್ತರಿಸಿದರು: "ನಿಮ್ಮ ಪ್ರಾರ್ಥನೆ ನನಗೆ ಇಷ್ಟವಾಗದಿರುವುದಾದರೂ ಹೇಗೆ?" ಆಯಿಶ ಮುಹಮ್ಮದ್‌ರನ್ನು ಅತಿಯಾಗಿ ಪ್ರೀತಿಸುತ್ತಿದ್ದರು. ಒಂದು ಕ್ಷಣ ಕೂಡ ಅವರಿಂದ ದೂರವಾಗಲು ಇಷ್ಟಪಡುತ್ತಿರಲ್ಲಿಲ್ಲ. ಕೆಲವೊಮ್ಮೆ ಅವರು ಮುಹಮ್ಮದ್‌ರನ್ನು ಪ್ರೀತಿಯಿಂದ ನಯವಾಗಿ ಕೆಣಕುತ್ತಲೂ ಇದ್ದರು. ತನ್ನ ಮುಂದೆ ಇತರ ಪತ್ನಿಯರ ಪ್ರಶಂಸೆ ಮಾಡುವುದು ಅವರಿಗೆ ಇಷ್ಟವಿರಲಿಲ್ಲ. ಒಮ್ಮೆ ಮುಹಮ್ಮದ್ ಖದೀಜರನ್ನು ಹೊಗಳಿದಾಗ ಆಯಿಶ ಆಕ್ಷೇಪ ವ್ಯಕ್ತಪಡಿಸಿದ್ದರು. ನಂತರ ಮುಹಮ್ಮದ್ ಕಾರಣವನ್ನು ತಿಳಿಸಿದಾಗ ಇನ್ನು ಮುಂದೆ ಹಾಗೆ ಮಾಡುವುದಿಲ್ಲವೆಂದು ಹೇಳಿದ್ದರು. ಒಮ್ಮೆ ಮುಹಮ್ಮದ್ ಆಯಿಶರೊಂದಿಗೆ ಓಟದ ಸ್ಪರ್ಧೆ ಮಾಡೋಣ ಎಂದರು. ಆಯಿಶ ಒಪ್ಪಿದರು. ಆಯಿಶ ಆಗ ಹೆಚ್ಚು ದಪ್ಪಗಿರಲಿಲ್ಲ. ಓಟದಲ್ಲಿ ಅವರೇ ಗೆದ್ದರು. ಇನ್ನೊಂದು ಸಲ ಮುಹಮ್ಮದ್ ಆಯಿಶರನ್ನು ಓಟದ ಸ್ಪರ್ಧೆಗೆ ಕರೆದರು. ಆಗ ಆಯಿಶ ದಪ್ಪಗಾಗಿದ್ದರು. ಸ್ಪರ್ಧೆಯಲ್ಲಿ ಸೋತರು. ಆಗ ಮುಹಮ್ಮದ್ ಹೇಳಿದರು: "ಇದು ಅಂದಿನ ಸೋಲಿಗೆ ಪ್ರತೀಕಾರ." ಆಯಿಶ ಹೇಳುತ್ತಿದ್ದರು: "ಮುಹಮ್ಮದ್‌ರ ಪತ್ನಿಯರಲ್ಲಿ ನನಗಿಂತಲೂ ಹೆಚ್ಚು ಅದೃಷ್ಟವಂತರು ಯಾರೂ ಇಲ್ಲ." ಒಮ್ಮೆ ಒಬ್ಬ ಯಹೂದಿ ಮುಹಮ್ಮದ್‌ರ ಬಳಿಗೆ ಬಂದು "ಅಸ್ಸಾಮು ಅಲೈಕುಂ" (ನಿಮಗೆ ಮರಣ ಉಂಟಾಗಲಿ) ಎಂದರು. ಇದನ್ನು ಕೇಳಿದಾಗ ಆಯಿಶ ಕೋಪೋದ್ರಿಕ್ತರಾದರು. ಅವರು ಬಹಳ ಖಾರವಾಗಿಯೇ ಪ್ರತಿಕ್ರಿಯಿಸಿದರು. ಮುಹಮ್ಮದ್ ಆಯಿಶರನ್ನು ಸಮಾಧಾನ ಪಡಿಸಿದರು. ಆಯಿಶ ಮುಹಮ್ಮದ್‌ರೊಂದಿಗೆ ಬಹಳ ಸಲುಗೆಯಿಂದಿದ್ದರು. ಮುಹಮ್ಮದ್ ಕೂಡ ಆಕೆಯ ಉಪಸ್ಥಿತಿಯನ್ನು ಬಹಳ ಇಷ್ಟಪಡುತ್ತಿದ್ದರು.

ಸರಳ ಜೀವನ[ಬದಲಾಯಿಸಿ]

ಮುಹಮ್ಮದ್‌ರ ಜೀವನ ಬಹಳ ಸರಳವಾಗಿತ್ತು. ಅವರು ಆಡಂಬರ ಪ್ರಿಯರಾಗಿರಲಿಲ್ಲ. ಆಯಿಶ ಕೂಡ ಈ ಜೀವನಕ್ಕೆ ಒಗ್ಗಿಕೊಂಡಿದ್ದರು. ಕೆಲವೊಮ್ಮೆ ಅವರ ಒಲೆಯಲ್ಲಿ ತಿಂಗಳುಗಳ ಕಾಲ ಬೆಂಕಿ ಉರಿಯುತ್ತಿರಲಿಲ್ಲ. ನೀರು ಮತ್ತು ಖರ್ಜೂರ ಸೇವಿಸಿ ಅವರು ಮಲಗುತ್ತಿದ್ದರು. ಯಾರಾದರೂ ಏನಾದರೂ ಕೊಡುಗೆಯಾಗಿ ನೀಡಿದರೆ ಅದನ್ನು ಸೇವಿಸಿ ಹಸಿವು ಇಂಗಿಸಿಕೊಳ್ಳುತ್ತಿದ್ದರು. ಅವರ ಮನೆಯಲ್ಲಿ ದೀಪ ಉರಿಸಲು ಕೂಡ ಎಣ್ಣೆಯಿರುತ್ತಿರಲಿಲ್ಲ. ರಾತ್ರಿಗಳನ್ನು ಕತ್ತಲಲ್ಲಿಯೇ ಕಳೆಯಬೇಕಾಗುತ್ತಿತ್ತು. ಅವರ ಮನೆ ಯಾವುದೇ ಬಡವನ ಮನೆಗಿಂತ ಉತ್ತಮವಾಗಿರಲಿಲ್ಲ. ಒಂದು ಚಾಪೆ, ಒಂದು ತೆಳ್ಳಗಿನ ಚಾದರ, ಖರ್ಜೂರದ ಎಲೆಗಳನ್ನು ತುಂಬಿಸಿ ತಯಾರಿಸಿದ ದಿಂಬು, ಒಂದು ಚರ್ಮದ ಚೀಲ, ಒಂದು ಬಟ್ಟಲು ಮತ್ತು ನೀರು ಕುಡಿಯಲು ಒಂದು ಲೋಟ ಇವುಗಳೇ ಅವರ ಆಸ್ತಿ. ಮುಹಮ್ಮದ್‌ರ ಮರಣಾನಂತರವೂ ಆಯಿಶ ಸರಳವಾಗಿಯೇ ಬದುಕಿದರು. ಅವರು ಅತಿಹೆಚ್ಚು ಉಪವಾಸ ಆಚರಿಸುತ್ತಿದ್ದರು.

ಕೊಡುಗೈ ದಾನಿ[ಬದಲಾಯಿಸಿ]

ಆಯಿಶ ಕೊಡುಗೈ ದಾನಿಯಾಗಿದ್ದರು. ತಮ್ಮ ಬಳಿಯಿದ್ದದ್ದನ್ನೆಲ್ಲಾ ಅವರು ದಾನ ಮಾಡುತ್ತಿದ್ದರು. ಒಮ್ಮೆ ಒಂದೇ ಉಸಿರಿನಲ್ಲಿ ಅವರು 70,000 ದಿರ್ಹಂ ದಾನ ಮಾಡಿದರು. ಇನ್ನೊಮ್ಮೆ ಅವರಿಗೆ ಖಲೀಫ ಮುಆವಿಯ ಸಿರಿಯಾದಿಂದ 1,00,000 ದಿರ್ಹಂ ಕಳುಹಿಸಿಕೊಟ್ಟರು. ಆಯಿಶ ಅವುಗಳನ್ನೆಲ್ಲಾ ದಾನ ಮಾಡಿಬಿಟ್ಟರು. ಇನ್ನೊಂದು ಸಲ ಅವರ ಸೋದರಿ ಪುತ್ರ ಅಬ್ದುಲ್ಲಾ ಬಿನ್ ಝುಬೈರ್ ಅವರಿಗೆ 1,00,000 ದಿರ್ಹಂ ಕೊಟ್ಟರು. ಆಯಿಶ ಒಂದು ನಾಣ್ಯವನ್ನೂ ಇಟ್ಟುಕೊಳ್ಳದೆ ಎಲ್ಲವನ್ನೂ ದಾನ ಮಾಡಿದರು. ಒಮ್ಮೆ ಒಬ್ಬ ಮಹಿಳೆ ಇಬ್ಬರು ಮಕ್ಕಳೊಂದಿಗೆ ಆಯಿಶರ ಬಳಿಗೆ ಬಂದು ತಿನ್ನಲು ಏನಾದರೂ ಕೊಡಬೇಕೆಂದು ಬೇಡಿದಳು. ಅವರ ಮನೆಯಲ್ಲಿ ಮೂರು ಖರ್ಜೂರಗಳ ಹೊರತು ಬೇರೇನೂ ಇರಲಿಲ್ಲ. ಅವರು ಆ ಮೂರು ಖರ್ಜೂರಗಳನ್ನು ಆ ಮಹಿಳೆಗೆ ಕೊಟ್ಟರು. ಆಕೆ ಎರಡು ಖರ್ಜೂರಗಳನ್ನು ಮಕ್ಕಳಿಗೆ ಕೊಟ್ಟು ಮೂರನೆಯದನ್ನು ತಿನ್ನಲು ಬಾಯಿಗೆ ಹಾಕುವಾಗ ಮಕ್ಕಳು ಆ ಖರ್ಜೂರ ಬೇಕೆಂದು ಹೇಳಿದರು. ಮಹಿಳೆ ಆ ಖರ್ಜೂರವನ್ನು ಎರಡು ಹೋಳು ಮಾಡಿ ಇಬ್ಬರು ಮಕ್ಕಳಿಗೆ ಕೊಟ್ಟು ಅಲ್ಲಿಂದ ಹೊರಟು ಹೋದರು. ಈ ದೃಶ್ಯವನ್ನು ಕಂಡು ಆಯಿಶರ ಕರುಳು ಹಿಂಡಿದಂತಾಯಿತು.

ಮುಹಮ್ಮದ್‌ರ ಕೊನೆಯ ದಿನಗಳು[ಬದಲಾಯಿಸಿ]

ಮುಹಮ್ಮದ್ ತಮ್ಮ ಕೊನೆಯ ದಿನಗಳನ್ನು ಆಯಿಶರ ಮನೆಯಲ್ಲೇ ಕಳೆದರು. ಆಯಿಶ ಹೇಳುತ್ತಾರೆ: "ನನ್ನ ಮನೆಯಲ್ಲಿ, ನನ್ನ ಸರದಿಯಲ್ಲಿ, ನನ್ನ ಎದೆ ಮತ್ತು ಮಡಿಲಲ್ಲಿ ಮಲಗಿ ಮುಹಮ್ಮದ್ ಪ್ರಾಣ ಬಿಟ್ಟದ್ದು ದೇವರು ನನಗೆ ಕರುಣಿಸಿದ ಅತಿದೊಡ್ಡ ಅನುಗ್ರಹವಾಗಿದೆ." ಮುಹಮ್ಮದ್ ಆಯಿಶರ ಮನೆಯಲ್ಲಿ ಕೊನೆಯುಸಿರೆಳೆದರು. ಅಲ್ಲಿಯೇ ಅವರನ್ನು ಸಮಾಧಿ ಮಾಡಲಾಯಿತು.

ಹದೀಸ್ ವರದಿ[ಬದಲಾಯಿಸಿ]

ಅಬೂಹುರೈರ ಮತ್ತು ಅಬ್ದುಲ್ಲಾ ಬಿನ್ ಉಮರ್ ರನ್ನು ಬಿಟ್ಟರೆ ಅತಿಹೆಚ್ಚು ಹದೀಸ್ ವರದಿ ಮಾಡಿದ ಹೆಗ್ಗಳಿಕೆ ಆಯಿಶರಿಗೆ ಸಲ್ಲುತ್ತದೆ. ಇವರು ಒಟ್ಟು 2,210 ಹದೀಸ್‌ಗಳನ್ನು ವರದಿ ಮಾಡಿದ್ದಾರೆ. ದಾಂಪತ್ಯ ಜೀವನದ ಅತಿಸೂಕ್ಷ್ಮ ವಿಷಯಗಳ ಕುರಿತು ಆಯಿಶ ಹದೀಸ್‌ಗಳನ್ನು ವರದಿ ಮಾಡಿದ್ದಾರೆ. ಮುಹಮ್ಮದ್‌ರ ಮರಣಾನಂತರ ಹಿರಿಯ ಸಹಾಬಿಗಳು ಕೂಡ ಆಕೆಯ ಬಳಿ ಸಂಶಯಗಳನ್ನು ನಿವಾರಿಸುತ್ತಿದ್ದರು. ಮುಹಮ್ಮದ್‌ರ ಸಂಗಡಿಗರಾದ ನಮಗೆ ಯಾವುದೇ ವಿಷಯದ ಬಗ್ಗೆ ಸಂದೇಹ ಉಂಟಾದರೆ ನಾವು ಅದನ್ನು ಆಯಿಶಾ ರಲ್ಲಿ ಕೇಳಿ ಸಂಶಯ ನಿವಾರಿಸಿಕೊಳ್ಳುತ್ತಿದ್ದೆವು ಎಂದು ಅಬೂ ಮೂಸಾ ಅಲ್-ಅಶ್ಅರಿ ಹೇಳುತ್ತಿದ್ದರು.

ಮರಣ[ಬದಲಾಯಿಸಿ]

ಹಿಜರಿ 58 ನೇ ವರ್ಷ (ಕ್ರಿ.ಶ. 678), ರಮದಾನ್ 17ರಂದು ತಮ್ಮ 66ನೇ ವಯಸ್ಸಿನಲ್ಲಿ ಆಯಿಶ ಇಹಲೋಕಕ್ಕೆ ವಿದಾಯಕೋರಿದರು. ಅವರನ್ನು ಮದೀನದ ಬಕೀಅ್ ಕಬರಸ್ತಾನದಲ್ಲಿ ಸಮಾಧಿ ಮಾಡಲಾಯಿತು.

"https://kn.wikipedia.org/w/index.php?title=ಆಯಿಶ&oldid=1158297" ಇಂದ ಪಡೆಯಲ್ಪಟ್ಟಿದೆ