ಚಕ್ರಕೋಡಿ ನಾರಾಯಣ ಶಾಸ್ತ್ರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚಕ್ರಕೋಡಿ ನಾರಾಯಣ ಶಾಸ್ತ್ರಿಗಳು
ಜನನಜುಲೈ ೪ ೧೯೧೩
ಮರಣಸೆಪ್ಟೆಂಬರ್ ೬ ೧೯೯೩
ವೃತ್ತಿಶಾಸ್ತ್ರೀಯ ಸಂಗೀತಗಾರರು
ರಾಷ್ಟ್ರೀಯತೆಭಾರತೀಯ

ಚಕ್ರಕೋಡಿ ನಾರಾಯಣ ಶಾಸ್ತ್ರಿಗಳು ಸಿ. ಎನ್. ಶಾಸ್ತ್ರಿ ಎಂದು ಪರಿಚಿತರು.[೧] ಇವರು ಕರ್ಣಾಟಕ ಶಾಸ್ತ್ರೀಯ ಸಂಗೀತಗಾರರು ಹಾಗೂ ವಚನ ಗಾಯನದ ಪ್ರವರ್ತಕರು. ಕರ್ಣಾಟಕ ಸಂಗೀತವಲ್ಲದೆ ಹಿಂದೂಸ್ಥಾನಿ ಸಂಗೀತ, ಹಾರ್ಮೋನಿಯಂ, ಪಿಟೀಲು , ಜಲತರಂಗ ಮೊದಲಾದ ವಾದ್ಯ ಸಂಗೀತಗಳಲ್ಲೂ ಪರಿಣತಿಯಿದ್ದವರು.

ಜನನ[ಬದಲಾಯಿಸಿ]

ದಕ್ಷಿಣ ಕನ್ನಡ ಜಿಲ್ಲೆಯ ಕೋಳ್ಯೂರು ಗ್ರಾಮದ ಚಕ್ರಕೋಡಿ ಎಂಬಲ್ಲಿ ಖ್ಯಾತ ಸಂಸ್ಕೃತ ವಿದ್ವಾಂಸರಾಗಿದ್ದ ಚಕ್ರಕೋಡಿ ಶ್ಯಾಮ ಶಾಸ್ತ್ರಿ - ಸರಸ್ವತಿ ಅಮ್ಮದಂಪತಿಯರ ನಾಲ್ಕು ಮಕ್ಕಳಲ್ಲಿ ಮೂರನೆಯವರಾಗಿ ೧೯೧೩ ರ ಜುಲೈ ೪ ರಂದು ಜನಿಸಿದರು.

ಬಾಲ್ಯ[ಬದಲಾಯಿಸಿ]

ಚಿಕ್ಕ ಮಗುವಾಗಿದ್ದಾಗ ಹಠ ಮಾಡುತ್ತಿದ್ದ ಇವರನ್ನು ಸುಮ್ಮನಾಗಿಸಲು ತಟ್ಟೆ - ಪಾತ್ರೆ - ಬಟ್ಟಲುಗಳ ಮಧ್ಯೆ ಒಂದು ಚಮಚವನ್ನು ಕೊಟ್ಟುಬಿಡುತ್ತಿದ್ದರಂತೆ. ಆಗ ಈ ಪುಟ್ಟ ಮಗು ಪಾತ್ರೆಗಳಿಗೆ ಚಮಚದಿಂದ ಬಡಿದು ಅದರಿಂದ ಹೊರಹೊಮ್ಮುವ ನಾದವನ್ನು ಆಲಿಸುತ್ತಾ ಕುಳಿತಿರುತ್ತಿದ್ದನಂತೆ. ಸ್ವಲ್ಪ ದೊಡ್ಡವನಾದಾಗ ಗಿಡಮರಗಳಲ್ಲಿನ ಹಕ್ಕಿಗಳ ಕಲರವವನ್ನು ಕೇಳುತ್ತಾ ಅದಕ್ಕೆ ಮಾರು ಹೋಗುತ್ತಿದ್ದನಂತೆ. ಸದಾ ಹಾಡುಗಳನ್ನು ಗುನುಗುನಿಸುತ್ತಾ ಇರುತ್ತಿದ್ದ ಈ ಹುಡುಗನನ್ನು "ಹುಚ್ಚು ನಾರಾಯಣ" ಎಂದೇ ಕರೆಯುತ್ತಿದ್ದರಂತೆ.[ಸೂಕ್ತ ಉಲ್ಲೇಖನ ಬೇಕು]

ಸಂಗೀತ ಶಿಕ್ಷಣ[ಬದಲಾಯಿಸಿ]

ತನ್ನ ತಂದೆಯಿಂದಲೇ ಬಾಲ್ಯ ಪಾಠ. ಹಾಗಾಗಿ ತಂದೆಯೇ ಮೊದಲ ಗುರು. ನಾಲ್ಕು ವರುಷದವರಾಗಿದ್ದಾಗ ತಾಯಿಯನ್ನು ಕಳಕೊಂಡರು. ಇವರು ಸುಮಾರು ಏಳೋ ಎಂಟೋ ವರುಷದವರಾಗಿದ್ದಾಗ ಇವರ ತಂದೆಯವರು ಅಡಿಕೆ ಮಂಡಿಯಲ್ಲಿ ಭಾರೀ ನಷ್ಟ ಅನುಭವಿಸಿ, ಉತ್ತರ ಭಾರತದ ಕಡೆಗೆ ದೇಶಾಂತರ ಹೋದರು. ಬಾಲಕರಾಗಿದ್ದ ಇವರೂ ತಂದೆಯವರೊಡನೆ ಹೊರಟರು. ಕೋಲ್ಕತ್ತಾ ತಲುಪುವಷ್ಟರಲ್ಲಿ ತಂದೆಯವರ ಕೈಲಿದ್ದ ಹಣ ಮುಗಿಯಿತು.ಆಗ ಈ ಹುಡುಗ ಸಂಗೀತ ಕಚೇರಿ ಮಾಡಿ ದುಡ್ಡು ಸಂಪಾದಿಸುತ್ತಿದ್ದರು. ತಂದೆಯವರು ಅಲ್ಲೇ ನೆಲೆಯೂರಿದಾಗ ಕೆಲವು ಬಂಗಾಳೀ ಮಕ್ಕಳಿಗೆ ಸಂಗೀತ ಪಾಠ ಹೇಳಿಕೊಡಲು ಆರಂಭಿಸಿದರು. ಅಲ್ಲಿಂದ ತಂದೆಯವರೊಡನೆ ಮುಂಬಯಿಗೆ ಹೋಗಿ ಅಲ್ಲಿಯೂ ಸಂಗೀತ ಕಚೇರಿಗಳನ್ನು ನಡೆಸಿದರು. ಮುಂದೆ ಬಳ್ಳಾರಿಗೆ ಇಬ್ಬರೂ ಬಂದರು. ಅಲ್ಲಿ ಆಸ್ಥಾನ ವಿದ್ವಾಂಸ ಡಾ. ಬಿ. ದೇವೇಂದ್ರಪ್ಪನವರ ಸಂಗೀತ ಕೇಳುವ ಅವಕಾಶ ದೊರಕಿತು. ಅವರ ಸಂಗೀತಕ್ಕೆ ಮಾರು ಹೋಗಿ, ನಂತರ ಮೈಸೂರಿಗೆ ಬಂದು ದೇವೇಂದ್ರಪ್ಪನವರ ಶಿಷ್ಯರಾದರು. ಹತ್ತು ವರುಷದ ವಿದ್ಯಾಭ್ಯಾಸದೊಡನೆ ಗುರುಗಳ ಎಲ್ಲಾ ಸಂಗೀತ ಕಚೇರಿಗಳಲ್ಲಿ ಅವರೊಡನಿದ್ದು, ಅವರ ಎಲ್ಲಾ ಸೂಕ್ಷ್ಮತೆಗಳನ್ನು ಕರಗತ ಮಾಡಿಕೊಂಡರು. ಒಂದು ದಿನ ಅವರು ಗುರುಗಳಲ್ಲಿ "ನೀವು ಶಿವಶರಣರ ವಚನಗಳನ್ನೇಕೆ ಹಾಡುವುದಿಲ್ಲ?" ಎಂದು ಪ್ರಶ್ನಿಸಿದರಂತೆ. ಆಗ ಗುರುಗಳು "ಅವಕ್ಕೆ ರಾಗ ಹಾಕಿ ಹಾಡಬಹುದಾಗಿದ್ದರೆ ಇಷ್ಟು ದಿನ ಯಾರೂ ಸುಮ್ಮನಿರುತ್ತಿರಲಿಲ್ಲ" ಎಂದರಂತೆ. ವಚನಗಳಿಗೆ ರಾಗ ಸಂಯೋಜಿಸಲು ಇದುವೇ ಸವಾಲಾಯಿತೇನೋ ?. ಸತತ ಪ್ರಯತ್ನದಿಂದ ಒಂದು ದಿನ ಗುರುಗಳ ಮುಂದೆ ನಾಲ್ಕಾರು ವಚನಗಳಿಗೆ ರಾಗ ಸಂಯೋಜಿಸಿ ಹಾಡಿಯೇ ಬಿಟ್ಟರು. ಇದುವರೆವಿಗೆ ಯಾರೂ ಮಾಡದಿದ್ದುದನ್ನು ತನ್ನ ಶಿಷ್ಯ ಸಾಧಿಸಿದನಲ್ಲಾ ಎಂದು ಗುರುಗಳಿಗೆ ಮಹದಾನಂದವಾಯಿತು. ದಿನಾ ತಾನು ಕುಡಿಯುತ್ತಿದ್ದ ಬಾದಾಮಿ ಹಾಲನ್ನು ಆ ದಿನ ತನ್ನ ಶಿಷ್ಯನಿಗೆ ನೀಡಿ, ತಾವೇ ಕುಡಿಸಿ ಆಶೀರ್ವದಿಸಿದರು. ಮುಂದೆ ದೇವೇಂದ್ರಪ್ಪನವರು ವಚನ ಗಾಯನದ ಪುಸ್ತಕ ಬರೆದಾಗ ಸುಮಾರು ಇನ್ನೂರಕ್ಕೂ ಮೇಲ್ಪಟ್ಟ ವಚನಗಳಿಗೆ ಕರ್ಣಾಟಕ ಹಾಗೂ ಹಿಂದೂಸ್ಥಾನೀ ಶೈಲಿಯಲ್ಲಿ ರಾಗ ಸಂಯೋಜಿಸಿಕೊಟ್ಟರು. ಹೀಗೆ ವಚನ ಗಾಯನದ ಪ್ರವರ್ತಕರೆಂದು ಹೆಸರು ಗಳಿಸಿದರು.

ಸಂಸಾರ[ಬದಲಾಯಿಸಿ]

೧೯೩೩ ರಲ್ಲಿ ವಿಟ್ಲ ಸಮೀಪದ ಉಗ್ಗಪ್ಪಕೋಡಿ ಈಶ್ವರ ಭಟ್ಟ-ಪಾರ್ವತಿ ದಂಪತಿಯರ ಪುತ್ರಿ ಕುಸುಮಾಂಬಿಕೆಯನ್ನು ವಿವಾಹವಾದರು. ನಾಲ್ಕು ಗಂಡು ಹಾಗೂ ನಾಲ್ಕು ಹೆಣ್ಣು ಮಕ್ಕಳು.

ಸಂಗೀತ ಕ್ಷೇತ್ರದಲ್ಲಿ[ಬದಲಾಯಿಸಿ]

ಬೆಂಗಳೂರಿನ ಶ್ರೀ ವೀರಶೈವ ಸಮಾಜ ಸೇವಾ ಸಂಘದವರು ದಿನಾಂಕ ೦೭-೦೭-೧೯೩೭ ರಂದು ಶಿವಶರಣರ ವಚನ ಸಂಗೀತ ಕಚೇರಿಯನ್ನೇರ್ಪಡಿಸಿದ್ದರು. ಮುಖ್ಯ ಅತಿಥಿಗಳಾಗಿದ್ದ [[ಅ. ನ. ಕೃಷ್ಣರಾವ್] ಅವರ ಭಾಷಣದ ತುಣುಕೊಂದು ಆಗಿನ "ಶರಣ ಸಂದೇಶ" ಪತ್ರಿಕೆಯಲ್ಲಿ (೧೨-೦೭-೧೯೩೭) ಈ ರೀತಿ ಪ್ರಕಟವಾಗಿತ್ತು. "ಗದ್ಯ ಸಾಹಿತ್ಯವೆನಿಸಿಕೊಂಡಿದ್ದ ವಚನ ವಾಙ್ಮಯವನ್ನು ಶ್ರೀ ಶಾಸ್ತ್ರಿಗಳು ರಾಗ- ತಾಳ- ಸ್ವರಗಳಿಂದಲಂಕರಿಸಿ ಭಾರತೀಯ ಸಂಗೀತ ಪ್ರಪಂಚಕ್ಕೊಂದು ನೂತನ ಕಾಣಿಕೆಯನ್ನು ಸಮರ್ಪಿಸಿರುವರು. ನಮ್ಮ ನಾಡಿನ ಶ್ರೀಮಂತರೆಲ್ಲರೂ ವಿವಾಹಾದಿ ಶುಭ ಕಾರ್ಯಗಳಲ್ಲಿ ಇಂತಹ ವಿದ್ವಾಂಸರುಗಳನ್ನೇ ಕರೆಯಿಸಿ, ಪ್ರೋತ್ಸಾಹಿಸಿ ಕನ್ನಡ ಸಂಗೀತ ಕಚೇರಿಗಳನ್ನೇರ್ಪಡಿಸಿರಿ" ಎಂದು. ೧೯೫೦ ರಲ್ಲಿ ಮೈಸೂರು ಆಕಾಶವಾಣಿಯಲ್ಲಿ ನಿಲಯ ಕಲಾವಿದರಾಗಿ ನಿಯುಕ್ತಿಗೊಂಡರು. ೧೯೫೧ ರಲ್ಲಿ ಧಾರವಾಡಕ್ಕೆ ವರ್ಗಾವಣೆ ಗೊಂಡರು. ಸುಮಾರು ಇಪ್ಪತ್ತು ವರುಷಗಳ ಕಾಲ ಧಾರವಾಡ ಕೇಂದ್ರದಲ್ಲಿ ನಿಲಯ ಕಲಾವಿದರಾಗಿ ಕರ್ಣಾಟಕ ಹಾಗೂ ಹಿಂದೂಸ್ಥಾನೀ ಸಂಪ್ರದಾಯಗಳ ನಡುವೆ ಒಂದು ಕೊಂಡಿಯಂತಿದ್ದರು. ಹಲವಾರು ರೂಪಕಗಳಿಗೆ, ದೇಶಭಕ್ತಿ ಗೀತೆಗಳಿಗೆ ರಾಗ ಸಂಯೋಜಿಸಿದ್ದರು. ೧೯೫೭ ರಲ್ಲಿ ಆಕಾಶವಾಣಿಯವರು ಏರ್ಪಡಿಸಿದ್ದ ಅಖಿಲ ಭಾರತ ಸಂಗೀತ ಸಮ್ಮೇಳನದಲ್ಲಿ ಭಾಗವಹಿಸಿ ವಚನ ಸಂಗೀತ ಹಾಡಿರುವರು. ೧೯೭೧ ರ ಸುಮಾರಿಗೆ ಆಕಾಶವಾಣಿಯವರು ಪ್ರಸ್ತುತಪಡಿಸಿದ " ಸಮಾನ ರಾಗ ದರ್ಶನ" ಎಂಬ ಕಾರ್ಯಕ್ರಮದಲ್ಲಿ ಎಂ. ಆರ್. ಗೌತಮರು ಹಿಂದೂಸ್ಥಾನೀ ರಾಗಗಳನ್ನು ಹಾಡಿದರೆ ಅದಕ್ಕೆ ಸಮನಾದ ಕರ್ಣಾಟಕ ರಾಗಗಳನ್ನು ಶಾಸ್ತ್ರಿಗಳು ಹಾಡುತ್ತಿದ್ದರು. ವಸಂತ ಕವಲಿಯವರು ರಚಿಸಿದ ರೇಡಿಯೋ ರೂಪಕ "ಪುರಂದರ ದರ್ಶನ" ಕ್ಕೆ ಸಂಗೀತ ಸಂಯೋಜನೆಯೊಂದಿಗೆ ಅದರ ಮುಖ್ಯ ಭೂಮಿಕೆಯಲ್ಲಿ ಪುರಂದರ ದಾಸರಾಗಿ ಹಾಡಿದ್ದರು. ಮೈಸೂರು, ಧಾರವಾಡವಷ್ಟೇ ಅಲ್ಲದೆ ನವದೆಹಲಿ, ಮುಂಬಯಿ, ಹೈದರಾಬಾದ್, ಕಲ್ಕತ್ತಾ, ವಿಜಯವಾಡ, ಚೆನ್ನೈ ಮತ್ತು ಇತರ ನಿಲಯಗಳಿಂದಲೂ ಹಾಡಿದ್ದಾರೆ. ಮಂಗಳೂರು ಆಕಾಶವಾಣಿಯ "ವಂದನಾ" ಕಾರ್ಯಕ್ರಮದಲ್ಲಿ ಕೆಲವೊಮ್ಮೆ ಈಗಲೂ ಇವರ ಗಾಯನವನ್ನು ಕೇಳಬಹುದು.

ಸಂಗೀತ ಶಿಕ್ಷಕರಾಗಿ[ಬದಲಾಯಿಸಿ]

೧೯೩೮ ರಿಂದ ೧೯೫೦ ರ ವರೆಗೆ ಮಂಗಳೂರು, ಮಡಿಕೇರಿ ಮುಂತಾದ ಕಡೆ ಖಾಸಗಿ ಸಂಗೀತ ಶಿಕ್ಷಕರಾಗಿದ್ದರು. ಧಾರವಾಡದಲ್ಲಿದ್ದಾಗ ಅಲ್ಲಿನ ಕರ್ಣಾಟಕ ಕಾಲೇಜಿನಲ್ಲಿ ಸಂಗೀತ ಅಧ್ಯಾಪಕರಾಗಿದ್ದರು. ಮಡಿಕೇರಿಯ ಸರಕಾರೀ ಹೈಸ್ಕೂಲಿನಲ್ಲಿ ಸಂಗೀತ ಕಲಿಸಿದ ಮೊದಲ ಅಧ್ಯಾಪಕರು ಇವರು. ಮೈಸೂರಿನ ಹೆಸರಾಂತ ಕವಿ ಹಾಗೂ ಗಮಕಿಗಳಾಗಿದ್ದ ಮೈ. ಶೇ. ಅನಂತಪದ್ಮನಾಭ ರಾವ್ ಅವರು ಇವರ ವಿದ್ವತ್ತನ್ನು ಮೆಚ್ಚಿ ಆಗಿನ ಕೊಡಗು ರಾಜ್ಯ ಸಂಗೀತ ಅಕಾಡೆಮಿಯ ಆಶ್ರಯದಲ್ಲಿ ಆಸಕ್ತರಿಗೆ ಸಂಗೀತ ಶಿಕ್ಷಣ ನೀಡಲು ಇವರನ್ನು ಮಡಿಕೇರಿಗೆ ಕರೆಸಿಕೊಂಡಿದ್ದರು. ಖ್ಯಾತ ಸಾಹಿತಿ, ಅಂಕಣಕಾರ, ಗಮಕಿಗಳಾದ ಶ್ರೀ ಎಂ.ಎ.ಜಯರಾಮ ರಾವ್ ಅವರು ಇವರ ಶಿಷ್ಯರು. [೨]ಇವರಿಂದ ಪ್ರೌಢಮಟ್ಟದವರೆಗಿನ ಸಂಗೀತ ಪಾಠ ಹೇಳಿಸಿಕೊಂಡಿದ್ದ ಶ್ರೀ ವೆಂಕಟಸುಬ್ರಹ್ಮಣ್ಯ ಅಯ್ಯರ್ ಅವರು ಕಾಂಚನದಲ್ಲಿ ಸ್ಥಾಪಿಸಿದ ಸಂಗೀತ ಶಾಲೆ ಪ್ರಸಿಧ್ಧಿ ಹೊಂದಿ, ಸಂಗೀತ ಕಲಾ ಸೇವೆಯಲ್ಲಿ ನಿರತವಾಗಿದೆ. ಶ್ರೀಮತಿ ಶಾರದಾ ಕನ್ಯಾಡಿ, ಶ್ರೀಮತಿ ಶಕುಂತಲಾ ಭಟ್ ಕುಂಚಿನಡ್ಕ ಇವರ ಶಿಷ್ಯರು.ಶ್ರೀಮತಿ ಜಯಲಕ್ಷ್ಮಿ ರಮೇಶ್, ಶ್ಯಾಮಸುಂದರಿ ಮಡಿಯಾಲ ಇವರೂ ಕೂಡ ಶಾಸ್ತ್ರಿಗಳಿಂದ ಬಹಳಷ್ಟು ಮಾರ್ಗದರ್ಶನ ಪಡಕೊಂಡು ಶಿಷ್ಯೆಯರೆಂದೇ ಪರಿಗಣಿಸಲ್ಪಡುತ್ತಾರೆ. ಪ್ರಖ್ಯಾತ ಹಿಂದೂಸ್ಥಾನೀ ಗಾಯಕರಾದ ಪಂಡಿತ್ ಮಲ್ಲಿಕಾರ್ಜುನ ಮನ್ಸೂರರು ಹಲವು ಬಾರಿ ಧಾರವಾಡದಲ್ಲಿದ್ದ ಇವರ ಮನೆಗೆ ಬಂದು ವಚನಗಳನ್ನು ಇವರಿಂದ ಹಾಡಿಸಿ ಕೇಳಿಸಿಕೊಳ್ಳುತ್ತಿದ್ದುದನ್ನು ಶಾಸ್ತ್ರಿಗಳ ಮಕ್ಕಳು ನೆನಪಿಸಿಕೊಳ್ಳುತ್ತಾರೆ. ಹೀಗೆ ತಮ್ಮ ಜೀವಿತಾವಧಿಯಲ್ಲಿ ಅನೇಕರಿಗೆ ಸಂಗೀತ ಶಿಕ್ಷಣವನ್ನು ನೀಡಿದ್ದಾರೆ. ಇವರ ಆ ದಿನಗಳಲ್ಲಿ ಹೆಚ್ಚಿನ ಸಂಗೀತಗಾರರು ತ್ಯಾಗರಾಜಮುತ್ತುಸ್ವಾಮಿ ದೀಕ್ಷಿತರ ಕೃತಿಗಳನ್ನೇ ಹೆಚ್ಚಾಗಿ ಸಭಾ ಕಚೇರಿಗಳಲ್ಲಿ ಹಾಡುತ್ತಿದ್ದರು. ಇವರು ತ್ಯಾಗರಾಜರ ಕೃತಿಗಳಿಗೆ ಸರಿಸಮನಾಗಿ ಆಲಾಪನೆ, ರಾಗ, ವಿಸ್ತಾರ, ನೆರವಲುಗಳಿಂದ ಕೂಡಿದ ಪಾಂಡಿತ್ಯಪೂರ್ಣ ಗಾನ ವೈಖರಿಗಳಿಂದ ಚೆನ್ನೈ, ಕೇರಳ, ಆಂಧ್ರಪ್ರದೇಶಗಳಲ್ಲಿ ಕೂಡ ಪ್ರಸಿಧ್ಧಿ ತಂದುಕೊಟ್ಟು ದಾಸರ ಪದಗಳಿಗೆ ಕೀರ್ತನೆಗಳ ಸ್ಥಾನ ದೊರಕಲು ಕಾರಣರಾದರು. ತೋಡಿ, ಬಹುಧಾರಿ, ಹಿಂದೋಳ, ಮಲಹರಿ, ಭೈರವಿ, ಖರಹರಪ್ರಿಯ, ಷಣ್ಮುಖಪ್ರಿಯದಂತಹ ರಾಗಗಳು ಇವರಿಗೆ ಬಲು ಇಷ್ಟವಾಗಿದ್ದುವು.

ದೈವಭಕ್ತಿ[ಬದಲಾಯಿಸಿ]

ನಾಲ್ಕು ವರುಷದವರಾಗಿದ್ದಾಗಲೇ ತಾಯಿಯನ್ನೂ ಹರೆಯದಲ್ಲೇ ತಂದೆಯನ್ನೂ ಕಳಕೊಂಡಿದ್ದರಿಂದಲೋ ಏನೋ ಯಾವಾಗಲೂ ವ್ಯಾಕುಲಚಿತ್ತರಾಗಿರುತ್ತಿದ್ದರು. ಆಗ ಅವರಿಗೆ ಕನಸಿನಲ್ಲಿ ಒಬ್ಬ ಗಡ್ಡ ಧರಿಸಿದ ಯೋಗಿಯ ಮುಖ ಕಂಡುಬರುತ್ತಿತ್ತು. ಮುಂದೆ ಆ ಯೋಗಿಯೇ ಭಗವಾನ್ ಶ್ರೀ ರಮಣ ಮಹರ್ಷಿಗಳೆಂದು ಹಳೆಯ ಪೇಪರಿನ ವರದಿಯಿಂದ ತಿಳಿದು ಕೂಡಲೇ ರಮಣಾಶ್ರಮಕ್ಕೆ ಹೋಗಿ ಬಂದರು.ಅಂದಿನಿಂದ ಕೊನೆಯವರೆವಿಗೂ ಶ್ರೀ ರಮಣ ಮಹರ್ಷಿಗಳ ಭಕ್ತರಾಗಿದ್ದರು. ವರುಷಕ್ಕೊಮ್ಮೆಯಾದರೂ ತಮಿಳುನಾಡಿನತಿರುವಣ್ಣಾಮಲೈಯಲ್ಲಿರುವ ರಮಣಾಶ್ರಮಕ್ಕೆ ಹೋಗಿ ಬರುತ್ತಿದ್ದರು. ಸುಮಾರು ಕೀರ್ತನೆಗಳನ್ನು ಶ್ರೀ ರಮಣರ ಸ್ತುತಿಯಲ್ಲಿ ಬರೆದುದಲ್ಲದೇ ತಾವೇ ರಾಗ ಸಂಯೋಜಿಸಿ ಹಾಡುತ್ತಿದ್ದರು. ಇವರು ಬಹಳಷ್ಟು ಭಾವಪೂರ್ಣವಾಗಿ ಹಾಡುತ್ತಿದ್ದರು. ಇವರು ರಚಿಸಿದ ಕೀರ್ತನೆಗಳ ಕೊನೆಯಲ್ಲಿ ರಮಣದಾಸ, ಚರಣದಾಸ, ದಾಸ ನಾರಾಯಣ ಮುಂತಾದ ಅಂಕಿತಗಳಿವೆ.

ಇನ್ನಷ್ಟು[ಬದಲಾಯಿಸಿ]

ಶಾಸ್ತ್ರಿಗಳು ಕನ್ನಡ, ತುಳು, ಹಿಂದಿ, ಇಂಗ್ಲಿಷ್, ತೆಲುಗು, ಮರಾಠಿ ಭಾಷೆಗಳನ್ನು ಬಲ್ಲವರಾಗಿದ್ದರು. ಪ್ರತಿಯೊಂದು ವಿಷಯದಲ್ಲಿಯೂ ಕಲೆಗಾರಿಕೆ, ಸೌಂದರ್ಯ ಪ್ರಜ್ಞೆ, ಅಚ್ಚುಕಟ್ಟುತನವನ್ನು ಮೈಗೂಡಿಸಿಕೊಂಡಿದ್ದರು."ಪರಿಪೂರ್ಣತೆ" ಅವರಿಗೆ ಮುಖ್ಯವಾಗಿತ್ತು. "ಒಂದು ಹಾಡು ಸಣ್ಣದೇ ಇರಬಹುದು, ಅದರ ಒಂದೊಂದು ಸ್ವರವೂ ಸರಿಯಾದ ಜಾಗದಲ್ಲೇ ಇರಬೇಕು. ಯಾವ ಸ್ವರಗಳಲ್ಲಿ ಹಾಡುತ್ತೇವೋ ಆ ಸ್ವರಗಳು ಮೆದುಳಿನಲ್ಲಿ ಹಾಡುತ್ತಾ ಇರಬೇಕು. ಅದುವೇ ನಾದ ಶುಧ್ಧಿ" ಎನ್ನುತ್ತಿದ್ದರು. ಅವರಿಗೆ ಒಮ್ಮೆ ಗಂಟಲು ನೋವಾಗಿ ಹಾಡುಗಾರಿಕೆಯನ್ನೇ ಬಿಟ್ಟು ಬಿಡಬೇಕಾದ ಸಂದಿಗ್ಢತೆ ಉಂಟಾಯಿತು. ಆಗ ಅವರು ಧೃತಿಗೆಡದೆ ಕೊಳಲು, ಪಿಟೀಲು ವಾದನದ ಅಭ್ಯಾಸ ಕೈಗೊಂಡರು. ಮುಂದೆ ಒಂದೆರಡು ವರುಷಗಳಲ್ಲಿ ತಮ್ಮ ಕಂಠಸಿರಿಯನ್ನು ಮರಳಿ ಪಡಕೊಂಡು ಹಾಡುವಂತಾದರು.

ಅವರ ಸೊಸೆ-ಶಿಷ್ಯೆಯಾದ ಶಕುಂತಲಾ ಕುಂಚಿನಡ್ಕ ಅವರು ಶಾಸ್ತ್ರಿಗಳ ಎಲ್ಲಾ ಬಂಧುಗಳಿಂದ ಸಂಗ್ರಹಿಸಿ, ಶಾಸ್ತ್ರಿಗಳೇ ಹಾಕಿದ ರಾಗ- ತಾಳಗಳಲ್ಲಿ ಸ್ವರ ಸಂಯೋಜಿಸಿ "ಚಕ್ರಕೋಡಿ ನಾರಾಯಣ ಶಾಸ್ತ್ರಿಗಳ ಕೃತಿಗಳು" ಎಂಬ ಪುಸ್ತಕ ಸಿಧ್ಧಪಡಿಸಿ ೨೦೦೪ ರಲ್ಲಿ ಗುರುಚರಣಕ್ಕರ್ಪಿಸಿದ್ದರು. ಅವರ ಶಿಷ್ಯೆಯರು ಹಾಗೂ ಮನೆಯವರ ನೆರವಿನಿಂದ ಶಾಸ್ತ್ರಿಗಳ ಆರಾಧನೋತ್ಸವವನ್ನು ಮಾಡಿ, ಶಾಸ್ತ್ರಿಗಳ ಬಗ್ಗೆ ಅರಿತವರನ್ನು ಕರೆಯಿಸಿ, ಅವರ ಬಗ್ಗೆ ಈಗಿನ ಜನರಿಗೆ ಹಾಗೂ ಮಕ್ಕಳಿಗೆ ಶಾಸ್ತ್ರಿಗಳ ಬಗ್ಗೆ ತಿಳಿಯಪಡಿಸುತ್ತಿದ್ದಾರೆ.[೩] ಮುಳಿಯ ರಾಘವಯ್ಯ, ಪ್ರೊ|ವಿ.ಬಿ.ಅರ್ತಿಕಜೆ, ಡಾ|ಎಸ್.ಆರ್.ವಿಘ್ನರಾಜ ಇವರೊಂದಿಗೆ ಡಾ|ಅರುಣ್ ಕುಮಾರ್ ಎಸ್.ಆರ್.ಕನ್ಯಾಡಿಯವರ ಪ್ರಧಾನ ಸಂಪಾದಕತ್ವದಲ್ಲಿ ೨೦೧೪ ರಲ್ಲಿ ಸಿ.ಎನ್.ಶಾಸ್ತ್ರಿ ಜನ್ಮ ಶತಮಾನೋತ್ಸವ ಸಮಿತಿಯು "ವಚನ ಕೋಗಿಲೆ" ಎಂಬ ಪುಸ್ತಕವನ್ನು ಪ್ರಕಟಿಸಿ, ಶಾಸ್ತ್ರಿಗಳಿಗೆ ಅಕ್ಷರ ನಮನವನ್ನು ಸಲ್ಲಿಸಿದೆ. ಡಾ| ಎಸ್.ಆರ್.ವಿಘ್ನರಾಜರು ಲೇಖಕರಾಗಿರುವ "ಸಂಗೀತ ವಿದ್ವಾಂಸ ಚಕ್ರಕೋಡಿ ನಾರಾಯಣ ಶಾಸ್ತ್ರಿ" ಎಂಬ ಪುಸ್ತಕವನ್ನು ಕಾಂತಾವರ ಕನ್ನಡ ಸಂಘ - ಕಾಂತಾವರವು ೨೦೦೯ ರಲ್ಲಿ ಪ್ರಕಟಿಸಿದೆ. ಮೈಸೂರಿನ ಗಾನಭಾರತೀ(ರಿ) ಯಿಂದ ಪ್ರಕಾಶನಗೊಳ್ಳುವ "ತಿಲ್ಲಾನ" ಮಾಸ ಪತ್ರಿಕೆ ೨೦೧೦ ರ ಜುಲೈ ಸಂಚಿಕೆಯಲ್ಲಿ ಮುಳಿಯ ರಾಘವಯ್ಯನವರು ಬರೆದಿರುವ "ವಚನ ಗಾಯನ ಪ್ರವರ್ತಕ ಚಕ್ರಕೋಡಿ ನಾರಾಯಣ ಶಾಸ್ತ್ರಿ" ಎಂಬ ಲೇಖನ ಪ್ರಕಟಗೊಂಡಿದೆ. ಬೆಂಗಳೂರಿನ ಕರ್ನಾಟಕ ನೃತ್ಯ ಅಕಾಡೆಮಿ ಯವರಿಂದ ಪ್ರಕಾಶನಗೊಳ್ಳುವ "ಕಲಾ ಚೇತನ" ೨೦೦೪ ರಲ್ಲಿ "ಚಕ್ರಕೋಡಿ ನಾರಾಯಣ ಶಾಸ್ತ್ರಿ" ಎಂಬ ಲೇಖನವನ್ನು ಮುಳಿಯ ಸರಸ್ವತಿಯವರು ಬರೆದಿದ್ದಾರೆ. ಶಾಸ್ತ್ರಿಗಳ ಪುತ್ರಿ-ಅಳಿಯ ಹಾಗೂ ಅವರ ಮಕ್ಕಳೆಲ್ಲರೂ ಸೇರಿಕೊಂಡು ಮೈಸೂರಿನ ನ ಗಾನಭಾರತೀ ಸಂಸ್ಠೆಯ ವೀಣೆ ಶೇಷಣ್ಣ ಭವನದಲ್ಲಿ ಗಾಯನ, ವಾದ್ಯ ಸಂಗೀತ ಕಚೇರಿಗಳನ್ನು ಪ್ರತೀ ವರ್ಷವೂ ಏರ್ಪಡಿಸುತ್ತಿದ್ದಾರೆ. ಶಾಸ್ತ್ರಿಗಳ ಮಕ್ಕಳು, ಬಂಧುಗಳು, ಅಭಿಮಾನಿಗಳು ಎಲ್ಲರೂ ಸೇರಿಕೊಂಡು ಅವರ ಶತಮಾನೋತ್ಸವವನ್ನು ಕ್ರಮವತ್ತಾಗಿ ಆಚರಿಸಿದ್ದಾರೆ.

ವೃಧ್ಧಾಪ್ಯದಲ್ಲಿ ಅವರಿಗೆ ಕಾಯಿಲೆಯುಂಟಾಗಿತ್ತು. ಹಿತ- ಮಿತವಾಗಿ ಆಹಾರ ಸೇವಿಸುತ್ತಿದ್ದ ಅವರು ಕೊನೆಕೊನೆಗೆ ದ್ರವಾಹಾರವನ್ನಷ್ಟೇ ಸೇವಿಸುತ್ತಿದ್ದರು. ಹುಬ್ಬಳ್ಳಿಯಲ್ಲಿ ೧೯೯೩ ರ ಸೆಪ್ಟೆಂಬರ್ ೬ ರ ಮಧ್ಯಾಹ್ನದಂದು ದೈವಾಧೀನರಾದರು.[೪]

ರಚಿಸಿದ ಕೃತಿಗಳು[ಬದಲಾಯಿಸಿ]

ಹಾಡುಗಾರರಾಗಿದ್ದಂತೆ ಉತ್ತಮ ಕೃತಿ ರಚನಕಾರರೂ ಆಗಿದ್ದರು. ಸಂಸ್ಕೃತ ಹಾಗೂ ಕನ್ನಡ ಎರಡರಲ್ಲೂ ಕೃತಿಗಳನ್ನು ರಚಿಸಿದ್ದಾರೆ. "ಕರ್ನಾಟಕ ಸಂಗೀತ ವೈಭವ" ಎಂಬುದು ಶಾಸ್ತ್ರಿಗಳ ಸಂಗೀತ ಶಾಸ್ತ್ರ ಗ್ರಂಥ. ಸಂಗೀತ ಶಾಸ್ತ್ರದ ಉಗಮ,ರಾಗ, ತಾಳ, ಲಕ್ಷಣ ಮುಂತಾದ ಪ್ರೌಢ ವಿಚಾರಗಳ ಕುರಿತಾದ ಗ್ರಂಥ. ೧೯೭೬ ರಲ್ಲಿ ಕರ್ಣಾಟಕ ವಿಶ್ವವಿದ್ಯಾನಿಲಯವು ಅದನ್ನು ಪಠ್ಯಪುಸ್ತಕವಾಗಿ ಅಂಗೀಕರಿಸಿದೆ.[ಸೂಕ್ತ ಉಲ್ಲೇಖನ ಬೇಕು]

ಕಾವ್ಯ ಕೃತಿಗಳು[ಬದಲಾಯಿಸಿ]

  • ಶ್ರೀ ರಮಣ ಧ್ಯಾನ ಶ್ಲೋಕಂ
  • ಶ್ರೀ ರಮಣ ದ್ವಾದಶಾಕ್ಷರಮಾಲಾ ಸ್ತವ (ಹನ್ನೆರಡು ಚೌಪದಿಗಳ ಗುಚ್ಛ )
  • ಶ್ರೀ ರಮಣ ಭಕ್ತಿ ಸುಧಾರಸ (ಇಪ್ಪತ್ತೊಂದು ಷಟ್ಪದಿಗಳ ಗುಚ್ಛ )
  • ರಮಣ ಮಹರ್ಷಿಗಳ ಪ್ರಾರ್ಥನೆ (ಸಂಸ್ಕೃತದಲ್ಲಿ )
  • ಗುರುಕೃತಿ (ಚೌಪದಿ- ಸಂಸ್ಕೃತದಲ್ಲಿ. ಮಾಯಾಮಾಳವಗೌಳ- ಆದಿತಾಳ.)

ಸಂಗೀತ ಕೀರ್ತನೆಗಳು[ಬದಲಾಯಿಸಿ]

ವಿನಾಯಕನ ಕುರಿತಾಗಿ

  • ಭಜರೇ ಶ್ರೀ ವಾತಾಪಿ ಗಣಪತಿಂ (ಹಂಸಧ್ವನಿ- ಆದಿತಾಳ )
  • ಭಜರೇ ಶ್ರೀ ವಿಘ್ನರಾಜಂ (ನಾಟಿಕುರಂಜಿ- ಛಾಪುತಾಳ )
  • ಶ್ರೀ ವಿಘ್ಹ್ನೇಶ ಸಂಕಟನಾಶ ( ಹಂಸಧ್ವನಿ- ಆದಿತಾಳ )
  • ಭಜರೇ ಮಾನಸ ಶ್ರೀ ವಿಘ್ಹ್ನರಾಜಂ ( ಕಾನಡ- ಆದಿತಾಳ )

ಪಾರ್ವತಿಯ ಕುರಿತಾಗಿ

  • ಭಜಾಮ್ಯಹಂ ಶ್ರೀ ಶೂಲಿನೀಂ (ಶೂಲಿನಿ- ಆದಿತಾಳ )

ಗೋವಿಂದನ ಕುರಿತಾಗಿ

  • ಭಜ ಮಾನಸ ಗೋವಿಂದಂ (ಕಲ್ಯಾಣ ವಸಂತ- ಆದಿತಾಳ )

ಮಾರುತಿಯ ಕುರಿತಾಗಿ

  • ಶ್ರೀ ಮಾರುತಿಯ ಸ್ಮರಿಸಿ (ಧರ್ಮವತಿ- ಝಂಪೆತಾಳ )

ತ್ಯಾಗರಾಜರ ಕುರಿತಾಗಿ

  • ನಾದಯೋಗಿ ತ್ಯಾಗರಾಜ (ಬಹುಧಾರಿ- ರೂಪಕ )
  • ತ್ಯಾಗರಾಜಂ ಭಜರೇ ಮಾನಸ (ಹಿಂದೋಳ- ಆದಿತಾಳ )

ಶ್ರೀ ರಮಣ ಮಹರ್ಷಿಗಳ ಕುರಿತಾಗಿ

  • ಅಹಮಹಮಿತಿ ಭಾಸಕ ಗುರುಮಂತ್ರಂ ( ಸಿಂಧುಭೈರವಿ-ಮಧ್ಯಮಾವತಿ-ಆದಿತಾಳ )
  • ಭಜರೇ ಗುರುರಮಣಂ (ಚಾರುಕೇಶಿ- ಆದಿತಾಳ )
  • ಅರುಣಾಚಲ ರಮಣ ಮಾಂ ಪಾಹಿ (ಸಾರಂಗ- ಆದಿತಾಳ- ವಿಳಂಬಕಾಲ ಕೃತಿ )
  • ಸದಾ ಪಾಹಿ ಮಾಂ ಸದ್ಗುರು ರಮಣ (ಶುಧ್ಧ ಸಾವೇರಿ - ಆದಿತಾಳ )
  • ಶ್ರೀ ಮಾತೃಭೂತೇಶ್ವರಂ ವಂದೇ (ಬೇಗಡೆ- ಆದಿತಾಳ - ವಿಳಂಬಕಾಲ )
  • ಓಂ ನಮೋ ಭಗವತೇ ಅರುಣಾಚಲ ರಮಣಾಯ (ಕಾನಡ- ರೂಪಕತಾಳ )
  • ಭಾವಯಾಮ್ಯಹಂ (ಖರಹರಪ್ರಿಯ - ಆದಿತಾಳ )
  • ಭಜರೇ ತಿರುಚುಳಿ ವೆಂಕಟರಮಣಂ ( ಶಂಕರಾಭರಣ - ಆದಿತಾಳ )
  • ಶ್ರೀ ರಮಣ ಮಹಾಮಹಿಮ ( ಕಲ್ಯಾಣಿ - ಆದಿತಾಳ )
  • ಯೋಗಿವರ ಶ್ರೀ ರಮಣ ( ಹಿಂದೋಳ - ಆದಿತಾಳ )
  • ಅರುಣಾಚಲ ಶಿವ ಅರುಣಾಚಲ ( ಪೂರ್ವಿಕಲ್ಯಾಣಿ - ಆದಿತಾಳ )
  • ಶ್ರೀ ಅರುಣಾಚಲ ರಮಣಂ ( ಶಹನ - ರೂಪಕತಾಳ )
  • ಶ್ರೀ ಗುರು ರಮಣಂ ಭಜಾಮ್ಯಹಂ ( ಬಹುಧಾರಿ - ಆದಿತಾಳ )
  • ಅರುಣಾಚಲ ರಮಣ ಪಾಹಿ ಮಾಂ ( ಮೋಹನ ಆದಿತಾಳ )
  • ಭಜರೇ ಮಾನಸ ಶ್ರೀ ಗುರು ( ಸರಸಾಂಗಿ - ಆದಿತಾಳ )
  • ಶ್ರೀ ರಮಣೇಶ್ವರ ಮಹಾಲಿಂಗಂ ( ಖರಹರಪ್ರಿಯ - ಆದಿತಾಳ )
  • ಓಂ ನಮೋ ಭಗವತೇ ( ಹಿಂದೋಳ - ಆದಿತಾಳ )
  • ಕಮಲನಯನ ಸದಾನಂದ ( ಕಲ್ಯಾಣಿ - ರೂಪಕತಾಳ )
  • ಮಂಗಳಕರ ಶ್ರೀ ರಮಣ ಸುನಾಮಂ ( ಹಿಂದೋಳ - ಆದಿತಾಳ )
  • ಸಕಲ ಲೋಕ ನಾಯಕ ( ಬೆಹಾಗ್ - ರೂಪಕತಾಳ )
  • ನಮೋ ನಮೋ ಭವತಾರಕ ರಮಣಾ ( ಸಿಂಧುಭೈರವಿ - ಆದಿತಾಳ )
  • ಅಹಮಹಮಿತಿ ಗುರು ಮಂತ್ರಂ ( ಹಂಸಾನಂದಿ - ಆದಿತಾಳ )
  • ಯೋಗೀ ರಮಣ ಪರಮ ಗುರುವೇ ( ಅಭೇರಿ - ಆದಿತಾಳ )
  • ಸ್ಮರಿಸು ನಿರಂತರ ಸದ್ಗುರು ರಮಣನ ( ಸಿಂಧುಭೈರವಿ - ಆದಿತಾಳ )
  • ಶ್ರೀ ಗುರುದೇವ ಪಾಹಿಮಾಂ ( ತೋಡಿ - ಆದಿತಾಳ )
  • ಶ್ರಿತಜನ ಪಾಲಕ ಶ್ರೀ ಗುರುದೇವ ( ಶಂಕರಾಭರಣ - ಆದಿತಾಳ )
  • ಭಜಾಮ್ಯಹಂ ಶ್ರೀ ರಮಣೇಶ್ವರ ( ದೇಶ್ - ಆದಿತಾಳ )
  • ಭಜರೇ ಗುರು ರಮಣಂ ( ರಾಮಪ್ರಿಯ - ತ್ರಿಶ್ರತ್ರಿಪುಟ )
  • ಪರಮಾತ್ಮ ಆರೆಂದರಿವೆ ( ಮಾಂಡ್ - ಆದಿತಾಳ ) (ಇದು ಅನುವಾದ )

ಗೌರವಗಳು[ಬದಲಾಯಿಸಿ]

  • ಕೇವಲ ಹದಿನೆಂಟನೆಯ ವಯಸ್ಸಿನಲ್ಲಿ ಶಿವಶರಣರ ವಚನಗಳಿಗೆ ಅತಿ ಶಾಸ್ತ್ರೀಯವೂ- ಅತಿ ಲಘುವೂ ಅಲ್ಲದ ಆಕರ್ಷಕ ಧಾತುಗಳನ್ನು ಸಂಯೋಜಿಸಿ ಹಾಡುವುದರಲ್ಲಿ ಕೀರ್ತಿಯನ್ನು ಗಳಿಸಿ "ವಚನ ಗಾಯನ ಆದ್ಯ ಪ್ರವರ್ತಕ" ಎಂಬ ಬಿರುದನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಸಾಹಿತ್ಯ ಸಮ್ಮೇಳನದಲ್ಲಿ (೧೯೩೧ ) ಅ.ನ.ಕೃ.ರವರಿಂದ ಗಳಿಸಿದರು.[೫]
  • ೧೯೭೧ ರಲ್ಲಿ ಕಾರ್ಕಳದಲ್ಲಿ ಜರುಗಿದ ಅವಿಭಜಿತ ದ. ಕ.ಜಿಲ್ಲಾ ಪ್ರಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಗೌರವ ಪುರಸ್ಕಾರ ಪಡಕೊಂಡರು.
  • ೧೯೭೨ ರಲ್ಲಿ ಮೈಸೂರಿನಲ್ಲಿ ಹನುಮಜ್ಜಯಂತಿಯಂದು ನಡೆದ ವಿದ್ವತ್ ಸಭೆಯಲ್ಲಿ "ಗಾನಾಲಂಕಾರ" ಬಿರುದನ್ನು ಪಡಕೊಂಡರು.
  • ೧೯೭೯ ರಲ್ಲಿ ಉಡುಪಿಯ ಎಂ.ಜಿ.ಎಂ.ಕಾಲೇಜಿನಲ್ಲಿ ನಡೆದ ವಾದಿರಾಜ - ಕನಕದಾಸ ಸಂಗೀತೋತ್ಸವದಲ್ಲಿ ಕರ್ಣಾಟಕ ಸಂಗೀತ ನಾಟಕ ಅಕಾಡೆಮಿ ವತಿಯಿಂದ "ಹರಿದಾಸ ಸಂಗೀತ ಸುಧಾಕರ"ಬಿರುದು ಗಳಿಸಿಕೊಂಡರು.
  • ೧೯೯೧ ರಲ್ಲಿ ಕರ್ಣಾಟಕ ಸಂಗೀತ ನೃತ್ಯ ಅಕಾಡೆಮಿ ವತಿಯಿಂದ "ಕರ್ಣಾಟಕ ಕಲಾ ತಿಲಕ " ಪ್ರಶಸ್ತಿ ಪಡಕೊಂಡರು.
  • ೧೯೭೦ ರಲ್ಲಿ ಬೆಂಗಳೂರಿನ ಗಾಯನ ಕಲಾ ಪರಿಷತ್ತಿನಿಂದ, ೧೯೭೪ ರಲ್ಲಿ ಪುತ್ತೂರಿನ ಉಮಾಮಹೇಶ್ವರ ಕಲಾಶಾಲೆಯಲ್ಲಿ, ೧೯೭೭ ರಲ್ಲಿ ದೆಹಲಿಯ ಶ್ರೀ ರಮಣ ಕೇಂದ್ರದಲ್ಲಿ, ೧೯೮೦ ರಲ್ಲಿ ಕಲಾದರ್ಶನದ ದಶಮಾನೋತ್ಸವ ಉದ್ಘಾಟನಾ ಸಮಾರಂಭದಲ್ಲಿ, ೧೯೯೧ ರಲ್ಲಿ ಮೈಸೂರಿನ ಗಾನಭಾರತೀ ಸಂಸ್ಥೆಯಿಂದ ಸನ್ಮಾನಗಳನ್ನು ಪಡಕೊಂಡರು.[೬]

ಬಾಹ್ಯ ಸಂಪರ್ಕ[ಬದಲಾಯಿಸಿ]

ಸಂಗೀತ ಅಧ್ಯಾತ್ಮಗಳ ಬೆಸುಗೆ


ಉಲ್ಲೇಖಗಳು[ಬದಲಾಯಿಸಿ]

  1. http://www.kanaja.in/%E0%B2%9A%E0%B2%95%E0%B3%8D%E0%B2%B0%E0%B2%95%E0%B3%8B%E0%B2%A1%E0%B2%BF-%E0%B2%A8%E0%B2%BE%E0%B2%B0%E0%B2%BE%E0%B2%AF%E0%B2%A3-%E0%B2%B6%E0%B2%BE%E0%B2%B8%E0%B3%8D%E0%B2%A4%E0%B3%8D%E0%B2%B0%E0%B2%BF/[ಶಾಶ್ವತವಾಗಿ ಮಡಿದ ಕೊಂಡಿ]
  2. http://www.kanaja.in/%E0%B2%8E%E0%B2%82-%E0%B2%8E-%E0%B2%9C%E0%B2%AF%E0%B2%B0%E0%B2%BE%E0%B2%AE-%E0%B2%B0%E0%B2%BE%E0%B2%B5%E0%B3%8D/[ಶಾಶ್ವತವಾಗಿ ಮಡಿದ ಕೊಂಡಿ]
  3. http://epaper.udayavani.com/Display.aspx?Pg=A&Edn=MN&DispDate=2016-4-19
  4. ಚಕ್ರಕೋಡಿ ನಾರಾಯಣ ಶಾಸ್ತ್ರಿ ಒಂದು ಆತ್ಮೀಯ ಸ್ಮರಣೆ .-ಕೆ.ಎಸ್.ಸುಬ್ರಾಯ ಭಟ್. (ಹೊಸದಿಗಂತ ೧೫-೦೯-೧೯೯೩)
  5. ಅವ್ಯಕ್ತ ನಾದಕ್ಕೆ ಶ್ರುತಿಯಾದ ಶಾಸ್ತ್ರಿ - ಪ್ರೊ| ಜಿ.ಟಿ.ನಾರಾಯಣ ರಾವ್.(ಪ್ರಜಾವಾಣಿ ದೈನಿಕ ೨೬-೦೯-೧೯೯೩)
  6. The Unheard melodies of C.N.Shasthri by G.T.Narayana Rao (Star of Mysore 14-09-1993)