ವಿಷಯಕ್ಕೆ ಹೋಗು

ಶನಿ (ಗ್ರಹ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಶನಿ ♄
The planet Saturn
The planet Saturn

ವಾಯೇಜರ್ ೨ ನೋಡಿದಂತೆ ಶನಿಗ್ರಹ
ಕಕ್ಷೆಯ ಗುಣಗಳು
ದೀರ್ಘಾರ್ಧ ಅಕ್ಷ ೧,೪೨೬,೭೨೫,೪೧೩ ಕಿ.ಮೀ.
೯.೫೩೭ ೦೭೦ ೩೨ AU
Orbital ಪರಿಧಿ ೮.೯೫೮ x ೧೦೧೨
೫೯.೮೭೯ AU
ಕಕ್ಷೀಯ ಕೇಂದ್ರ ಚ್ಯುತಿ ೦.೦೫೪ ೧೫೦ ೬೦
ಸೂರ್ಯನಿಂದ ಕನಿಷ್ಠ ದೂರ ೧,೩೪೯,೪೬೭,೩೭೫ ಕಿ.ಮೀ.
೯.೦೨೦ ೬೩೨ ೨೪ AU
ಸೂರ್ಯನಿಂದ ಗರಿಷ್ಠ ದೂರ ೧,೫೦೩,೯೮೩,೪೪೯ ಕಿ.ಮೀ.
೧೦.೦೫೩ ೫೦೮ ೪೦ AU
ಕಕ್ಷೀಯ ಪರಿಭ್ರಮಣ ಕಾಲ ೧೦,೭೫೬.೧೯೯೫ ದಿನ
(೨೯.೪೫ a)
Synodic period ೩೭೮.೧೦ d
ಸರಾಸರಿ ಕಕ್ಷಾ ವೇಗ ೯.೬೩೯ ಕಿ.ಮೀ./ಪ್ರತಿ ಕ್ಷಣ
ಗರಿಷ್ಠ ಕಕ್ಷಾ ವೇಗ ೧೦.೧೮೩ ಕಿ.ಮೀ./ಪ್ರತಿ ಕ್ಷಣ
ಕನಿಷ್ಠ ಕಕ್ಷಾ ವೇಗ ೯.೧೩೭ ಕಿ.ಮೀ./ಪ್ರತಿ ಕ್ಷಣ
ಓರೆ ೨.೪೮೪ ೪೬°
(ಸೂರ್ಯನ ಸಮಭಾಜಕ ರೇಖೆಗೆ ೫.೫೧°)
Longitude of the
ascending node
೧೧೩.೭೧೫ ೦೪°
Argument of the
perihelion
೩೩೮.೭೧೬ ೯೦°
ನೈಸರ್ಗಿಕ ಉಪಗ್ರಹಗಳ ಸಂಖ್ಯೆ ೫೬ confirmed []
ಭೌತಿಕ ಗುಣಲಕ್ಷಣಗಳು
ಸಮಭಾಜಕ ರೇಖೆಯ ವ್ಯಾಸ ೧೨೦,೫೩೬ ಕಿ.ಮೀ. []
(ಭೂಮಿಯ ೯೪೪.೯%)
ಧ್ರುವಗಳ ಮೂಲಕ ವ್ಯಾಸ ೧೦೮,೭೨೮ ಕಿ.ಮೀ.
(ಭೂಮಿಯ ೮೫೫.೨%)
Oblateness ೦.೦೯೭ ೯೬
ಮೇಲ್ಮೈ ವಿಸ್ತೀರ್ಣ ೪.೨೭×೧೦೧೦ ಕಿ.ಮೀ.
(ಭೂಮಿಯ ೮೩೭೦.೩%)
ಗಾತ್ರ ೮.೨೭×೧೦೧೪ ಕಿ.ಮೀ.
(ಭೂಮಿಯ ೭೬೩೫೯%)
ದ್ರವ್ಯರಾಶಿ ೫.೬೮೪೬×೧೦೨೬ ಕಿ.ಗ್ರಾಂ
(ಭೂಮಿಯ ೯೫೧೬.೨%)
ಸರಾಸರಿ ಸಾಂದ್ರತೆ ೦.೬೮೭೩ ಗ್ರಾಂ/ಪ್ರತಿ ಸೆ.ಮೀ.
(ನೀರಿಗಿಂತ ಕಡಿಮೆ)
ಸಮಭಾಜಕದ ಬಳಿ ಗುರುತ್ವ ೮.೯೬ ಮೀ/ಕ್ಷಣ
(ಭೂಮಿಯ ೯೧.೪%)
ಮುಕ್ತಿ ವೇಗ ೩೫.೪೯ ಕಿ.ಮೀ./ಪ್ರತಿ ಕ್ಷಣ
ಅಕ್ಷೀಯ ಪರಿಭ್ರಮಣ ಕಾಲ ೦.೪೪೯ ೩೭೫ ದಿನ
(೧೦ ಘಂ ೪೭ ನಿ ೬ ಕ್ಷ)
ಅಕ್ಷೀಯ ಪರಿಭ್ರಮಣ ವೇಗ ೯.೮೭ ಕಿ.ಮೀ./ಪ್ರತಿ ಕ್ಷಣ = ೩೫,೫೦೦ ಕಿ.ಮೀ./ಘಂ.
(ಸಮಭಾಜಕದಲ್ಲಿ)
ಅಕ್ಷದ ಓರೆ ೨೬.೭೩°
Right ascension
of North pole
೪೦.೫೯° (೨ h ೪೨ min ೨೧ s)
Declination ೮೩.೫೪°
ಪ್ರತಿಫಲನಾಂಶ ೦.೪೭
ಮೋಡದ ಪದರದ ಮೇಲೆ ಸರಾಸರಿ ತಾಪಮಾನ ೯೩ K
ಮೇಲ್ಮೈ ತಾಪಮಾನ
min mean max
೮೨ K ೧೪೩ K N/A
Adjective Saturnian
ವಾಯುಮಂಡಲದ ಗುಣಲಕ್ಷಣಗಳು
ವಾತಾವರಣದ ಒತ್ತಡ ೧೪೦ kPa
ಜಲಜನಕ >೯೩%
ಹೀಲಿಯಂ >೫%
ಮೀಥೇನ್ ೦.೨%
ನೀರಾವಿ ೦.೧%
ಅಮೋನಿಯ ೦.೦೧%
ಈಥೇನ್ ೦.೦೦೦೫%
ಫಾಸ್ಫೀನ್ ೦.೦೦೦೧%

ಶನಿ - ಸೂರ್ಯನಿಂದ ೬ನೆಯ ಗ್ರಹ. ಅನಿಲ ರೂಪಿಯಾದ ಶನಿಯು ಗುರು ಗ್ರಹದ ನಂತರ ಸೌರಮಂಡಲದಲ್ಲಿ ೨ನೇ ಅತಿ ದೊಡ್ಡ ಗ್ರಹ. ಶನಿಯು ಎದ್ದುಕಾಣುವಂಥ ಉಂಗುರ ವ್ಯವಸ್ಥೆಯನ್ನು ಹೊಂದಿದೆ. ಈ ಉಂಗುರಗಳು ಮುಖ್ಯವಾಗಿ ಮಂಜಿನ ಪುಡಿಯಿಂದ ರಚಿತವಾಗಿದ್ದು, ಸ್ವಲ್ಪ ಕಲ್ಲಿನ ಚೂರುಗಳು ಮತ್ತು ಧೂಳು ಸಹ ಇವುಗಳಲ್ಲಿ ಕಂಡುಬರುತ್ತವೆ.ಟೈಟನಾ ಇದರ ದೊಡ ಉಪಗ್ರಹ

ಭೌತಿಕ ಗುಣಲಕ್ಷಣಗಳು

[ಬದಲಾಯಿಸಿ]

ಶನಿಯು ಭೂಮಿಯಂತೆಯೇ ಧ್ರುವಗಳಲ್ಲಿ ಸ್ವಲ್ಪ ಚಪ್ಪಟೆಯಾಗಿದ್ದು, ಸಮಭಾಜಕದಲ್ಲಿ ಉಬ್ಬಿಕೊಂಡಿದೆ; ಅದರ ಸಮಭಾಜಕ ಮತ್ತು ಧ್ರುವಗಳ ಮೂಲಕ ವ್ಯಾಸಗಳು ಸುಮಾರು ೧೦% ವ್ಯತ್ಯಾಸವನ್ನು ಹೊಂದಿವೆ (೧೨೦,೫೩೬ ಕಿ.ಮೀ. ಮತ್ತು ೧೦೮,೭೨೮ ಕಿ.ಮೀ.). ಶನಿಯ ಈ ಆಕಾರಕ್ಕೆ ಅದರ ಅನಿಲರೂಪ ಮತ್ತು ತ್ವರಿತವಾದ ಅಕ್ಷೀಯ ಪರಿಭ್ರಮಣಗಳು ಕಾರಣ. ಉಳಿದ ಅನಿಲರೂಪಿ ಗ್ರಹಗಳೂ ಈ ರೀತಿಯ ಆಕಾರವನ್ನು ಹೊಂದಿದ್ದರೂ, ಶನಿಯಲ್ಲಿ ಇದು ಎದ್ದು ಕಾಣುತ್ತದೆ. ಸೌರಮಂಡಲದಲ್ಲಿ ನೀರಿಗಿಂತ ಕಡಿಮೆ ಸಾಂದ್ರತೆಯುಳ್ಳ ಏಕೈಕ ಗ್ರಹ ಶನಿ. ಶನಿಯ ಸರಾಸರಿ ಸಾಂದ್ರತೆಯು ನೀರಿನ ೬೯% ರಷ್ಟಿದೆ. ಇದು ಕೇವಲ ಸರಾಸರಿ ಪ್ರಮಾಣ; ಶನಿಯು ವಾಯುಮಂಡಲವು ನೀರಿಗಿಂತ ಹಗುರವಾಗಿದೆ ಮತ್ತು ಗ್ರಹದ ಒಳಭಾಗವು ಗಮನಾರ್ಹವಾಗಿ ಹೆಚ್ಚು ಸಾಂದ್ರತೆಯನ್ನು ಹೊಂದಿದೆ.

ಶನಿಯ ತಾಪಮಾನದ ಹೊರಸೂಸುವಿಕೆ. ಚಿತ್ರದ ಕೆಳಭಾಗದಲ್ಲಿ ಎದ್ದು ಕಾಣುವ ಬಿಸಿಯಾದ ಪ್ರದೇಶವು ಶನಿಯ ದಕ್ಷಿಣ ಧ್ರುವದಲ್ಲಿದೆ.

ಶನಿಯ ಒಳಭಾಗವು ಗುರುವಿನ ಒಳಭಾಗದಂತೆಯೇ ರಚಿತವಾಗಿದೆ. ಒಳಭಾಗದ ಮಧ್ಯವು ಸಣ್ಣ ಶಿಲೆಗಳಿಂದ ಕೂಡಿದ್ದು, ಅದರ ಸುತ್ತ ದ್ರವೀಕೃತ ಲೋಹರೂಪಿ ಜಲಜನಕದ ಒಂದು ಪದರವಿದೆ. ಇದರ ಮೇಲೆ ಅನಿಲರೂಪಿ ಜಲಜನಕದ ಇನ್ನೊಂದು ಪದರವಿದೆ. ನಾನಾರೀತಿಯ ಹಿಮದ ಜಾಡುಗಳನ್ನೂ ಇಲ್ಲಿ ಕಾಣಬಹುದು. ಶನಿಯು ೧೨,೦೦೦ Kelvin (೧೧,೭೦೦° ಸೆ.) ತಾಪಮಾನದಲ್ಲಿರುವ ಒಳಭಾಗವನ್ನು ಹೊಂದಿದ್ದು, ತಾನು ಸೂರ್ಯನಿಂದ ಪಡೆಯುವ ಶಾಖಕ್ಕಿಂತ ಹೆಚ್ಚು ಶಾಖವನ್ನು ಬಾಹ್ಯಾಕಾಶಕ್ಕೆ ಹೊರಹಾಕುತ್ತದೆ. ಈ ಹೆಚ್ಚುವರಿ ಶಾಖದ ಬಹುತೇಕ ಪಾಲು ಕೆಲ್ವಿನ್-ಹೆಲ್ಮ್‌ಹೋಲ್ಟ್‌ಜ್ ಪ್ರಕ್ರಿಯೆಯಿಂದ (Kelvin-Helmholtz mechanism - ಗುರುತ್ವ ಬಲದಿಂದ ಗ್ರಹವು ಸಂಕುಚಿಸುತ್ತದೆ) ಉದ್ಭವವಾಗುತ್ತದೆ. ಆದರೆ, ಹೆಚ್ಚುವರಿ ಶಾಖವನ್ನು ಉತ್ಪಾದಿಸಲು ಈ ಪ್ರಕ್ರಿಯೆಯೊಂದೇ ಸಾಲದು. ಶನಿಯ ಒಳಭಾಗದಲ್ಲಿ ಹಗುರವಾದ ಜಲಜನಕದ ಅಣುಗಳ ಮೂಲಕ ಹೆಚ್ಚು ಭಾರವಾದ ಹೀಲಿಯಂ ಅಣುಗಳು ಕೆಳಗೆ ಬಿದ್ದಾಗ ಉಂಟಾಗುವ ಘರ್ಷಣೆಯಿಂದಲೂ ಸ್ವಲ್ಪ ಶಾಖೋತ್ಪನ್ನವಾಗುತ್ತದೆಯೆಂದು ಪ್ರತಿಪಾದಿಸಲಾಗಿದೆ.

ಗುರುವಿನಂತೆಯೇ ಶನಿಯ ವಾಯುಮಂಡಲದ (celestial body atmosphere) ಮೇಲೆ ಪಟ್ಟಿಗಳಂಥ ವಿನ್ಯಾಸವನ್ನು ಕಾಣಬಹುದು. ಆದರೆ, ಶನಿಯ ಪಟ್ಟಿಗಳು ಹೆಚ್ಚು ಕ್ಷೀಣವಾಗಿಯೂ ಮತ್ತು ಸಮಭಾಜಕದ ಬಳಿ ಹೆಚ್ಚು ಅಗಲವಾಗಿಯೂ ಇವೆ. ಶನಿಯ ಮೇಲುಂಟಾಗುವ ಮಾರುತಗಳು ಸೌರಮಂಡಲದಲ್ಲಿ ಅತಿ ಹೆಚ್ಚು ವೇಗದ ಮಾರುತಗಳಲ್ಲೊಂದು; ವಾಯೇಜರ್‌ನ ಮಾಹಿತಿಯು ೫೦೦ ಮೀ/ಪ್ರತಿ ಕ್ಷಣ (೧೧೧೬ ಮೈಲಿ/ಪ್ರತಿ ಘಂಟೆ) ಗರಿಷ್ಠ ವೇಗವನ್ನು ಸೂಚಿಸುತ್ತದೆ.[]. ಶನಿಯ ಮೋಡಗಳ ವಿನ್ಯಾಸವನ್ನು ವಾಯೇಜರ್ ಯಾನಗಳ ನಂತರವೇ ವಿವರವಾಗಿ ಅವಲೋಕಿಸಲು ಸಾಧ್ಯವಾಯಿತು. ಆದರೆ, ಈ ಯಾನವಾದ ಬಳಿಕ, ಭೂಮಿಯ ಮೇಲಿನ ದೂರದರ್ಶಕಗಳು ಬಹಳಷ್ಟು ಅಭಿವೃದ್ಧಿಯಾಗಿರುವುದರಿಂದ, ಈ ವಿನ್ಯಾಸಗಳನ್ನು ಈಗ ಭೂಮಿಯಿಂದಲೇ ನೋಡಬಹುದು.

ಗುರುಗ್ರಹದ ಮೇಲೆ ಸಾಮನ್ಯವಾಗಿ ಕಾಣುವಂಥ ಅಂಡಾಕೃತಿಗಳು ಮತ್ತು ವೈಶಿಷ್ಟ್ಯಗಳು ಬಹುತೇಕ ಸೌಮ್ಯವಾದ ಶನಿಯ ವಾಯುಮಂಡಲದಲ್ಲಿ ಒಮ್ಮೊಮ್ಮೆ ಕಂಡುಬರುತ್ತವೆ; ೧೯೯೦ರಲ್ಲಿ ಹಬಲ್ ದೂರದರ್ಶಕವು ಶನಿಯ ಸಮಭಾಜಕದ ಬಳಿ ಒಂದು ಬೃಹದಾಕಾರದ ಬಿಳಿ ಮೋಡದ ಚಿತ್ರವನ್ನು ತೆಗೆಯಿತು. ಈ ಮೋಡವು ವಾಯೇಜರ್ ಯಾತ್ರೆಯ ಸಮಯದಲ್ಲಿ ಅಸ್ತಿತ್ವದಲ್ಲಿರಲಿಲ್ಲ. ೧೯೯೪ರಲ್ಲಿ ಮತ್ತೊಂದು ಸಣ್ಣ ಚಂಡಮಾರುತವನ್ನು ವೀಕ್ಷಿಸಲಾಯಿತು. ೧೯೯೦ರ ಚಂಡಮಾರುತವು ಬೃಹತ್ ಬಿಳಿ ಚುಕ್ಕೆಯ ಒಂದು ಉದಾಹರಣೆ. ಅದ್ವಿತೀಯವಾದ, ಆದರೆ ಅಲ್ಪಾಯುಷಿಯಾದ ಈ ಚುಕ್ಕೆಗಳು ಸುಮಾರು ೩೦ ವರ್ಷಗಳಿಗೊಮ್ಮೆ ಉಂಟಾಗುತ್ತವೆ. ಇದಕ್ಕೆ ಮುನ್ನ ೧೮೭೬, ೧೯೦೩, ೧೯೩೩ ಮತ್ತು ೧೯೬೦ರಲ್ಲಿ ಈ ಬೃಹತ್ ಬಿಳಿ ಚುಕ್ಕೆಗಳು ಕಾಣಿಸಿದ್ದವು. ೧೯೩೩ಯ ಚುಕ್ಕೆಯು ಬಹಳ ಪ್ರಸಿದ್ಧಿಯನ್ನು ಹೊಂದಿತ್ತು. ಈ ಘಟನೆಗಳ ಕೂಲಂಕುಷ ಅಧ್ಯಯನವು ಆಸಕ್ತಿಯುತವಾದ ಒಂದು ವಿನ್ಯಾಸವನ್ನು ತಿಳಿಸುತ್ತದೆ. ಈ ವಿನ್ಯಾಸವು ಕರಾರುವಾಕ್ಕಾಗಿದ್ದರೆ, ಮುಂದಿನ ಚುಕ್ಕೆಯು ೨೦೨೦ರಲ್ಲಿ ಉಂಟಾಗುತ್ತದೆ.(Kidger 1992)

ಕ್ಯಾಸಿನಿ ಗಗನನೌಕೆಯಿಂದ ಬಂದ ಇತ್ತೀಚೆಗಿನ ಛಾಯಾಚಿತ್ರಗಳಿಂದ, ಶನಿಯ ಉತ್ತರಾರ್ಧ ಗೋಳದ ಬಣ್ಣಗಳು ಬದಲಾಗುತ್ತಿರುವಂತೆ ಕಂಡುಬರುತ್ತವೆ. ಕೆಳಗಿನ ಚಿತ್ರದಲ್ಲಿ ಕಾಣುವಂತೆ, ಈ ಗೋಳಾರ್ಧವು ಯುರೇನಸ್‌ನಂತೆ ನೀಲಿ ಬಣ್ಣವಾಗಿ ಕಾಣುತ್ತದೆ. ಶನಿಯ ಉಂಗುರಗಳು ಸಧ್ಯಕ್ಕೆ ಅದರ ಉತ್ತರಾರ್ಧ ಗೋಳವನ್ನು ಮರೆ ಮಾಡಿರುವುದರಿಂದ, ಈ ನೀಲಿ ಬಣ್ಣವು ಭೂಮಿಯಿಂದ ಕಾಣುವುದಿಲ್ಲ. ಒಂದು ವಾದದ ಪ್ರಕಾರ, ಶನಿಯ ಉಂಗುರಗಳು ಸೂರ್ಯನ ಬೆಳಕನ್ನು ತಡೆಯುತ್ತಿರುವುದರಿಂದ, ಶನಿಯ ಮೇಲೆ ತಾಪಮಾನವು ತಗ್ಗಿ, ಬಣ್ಣದಲ್ಲಿ ಈ ರೀತಿಯ ಬದಲಾವಣೆ ಉಂಟಾಗಿರಬಹುದು. ಇದರ ಪರಿಣಾಮವಾಗಿ ಶನಿಯ ಹಳದಿ ಬಣ್ಣದ ಮೋಡಗಳು ಸಂಕುಚಿಸಿ, ಅದರ ನೀಲಿ ಬಣ್ಣದ ವಾಯುಮಂಡಲವು ಹೊರಗೆ ಕಾಣುತ್ತಿರಬಹುದು.

ಶನಿ ಮತ್ತು ಭೂಮಿಯ ಹೋಲಿಕೆ

ನಸುಗೆಂಪು (infrared) ಚಿತ್ರೀಕರಣವನ್ನು ಉಪಯೋಗಿಸುತ್ತಿದ್ದ ಖಗೋಳಶಾಸ್ತ್ರಜ್ಞರು ಶನಿಯ ಧ್ರುವದಲ್ಲಿ ಬೆಚ್ಚಗಿನ ಒಂದು ಸುಳಿಯಿದೆ (vortex) ಎಂದು ಕಂಡುಹಿಡಿದಿದ್ದಾರೆ. ಸೌರಮಂಡಲದಲ್ಲಿ ಇನ್ನಾವ ಗ್ರಹದ ಮೇಲೂ ಈ ರೀತಿಯ ಸುಳಿಯ ಇರುವಿಕೆಯು ತಿಳಿದು ಬಂದಿಲ್ಲ.

೭೮° ಉತ್ತರದಲ್ಲಿ ವಾಯುಮಂಡಲದ ಧ್ರುವದ ಸುಳಿಯ ಸುತ್ತಲೂ ಶಾಶ್ವತವಾಗಿ ಕಾಣಿಸುವ ಷಟ್‌ಭುಜದ ಆಕಾರದ ಅಲೆಗಳ ವಿನ್ಯಾಸವೊಂದನ್ನು ಮೊದಲ ಬಾರಿಗೆ ವಾಯೇಜರ್ ಚಿತ್ರಗಳಲ್ಲಿ ಗುರುತಿಸಲಾಯಿತು.[][]. ಹಬಲ್ ದೂರದರ್ಶಕವು ತೆಗೆದ ದಕ್ಷಿಣ ಧ್ರುವ ವಲಯದ ಚಿತ್ರಗಳು ಒಂದು "ಧಾರಾಪ್ರವಾಹ"ದ (jet stream) ಅಸ್ತಿತ್ವವನ್ನು ಸೂಚಿಸಿದರೂ, ಪ್ರಬಲವಾದ ಸುಳಿಯಾಗಲಿ, ಷಟ್‌ಭುಜಾಕಾರದ ಅಲೆಯಾಗಲಿ, ಕಂಡುಬರುವುದಿಲ್ಲ.[]. ಆದರೆ, ೨೦೦೬ರಲ್ಲಿ ಕ್ಯಾಸಿನಿ ನೌಕೆಯು ದಕ್ಷಿಣಧ್ರುವದಲ್ಲಿ 'ಚಂಡಮಾರುತದಂತಹ' ಒಂದು ಸುಳಿಯನ್ನು ಕಂಡುಹಿಡಿದಿದೆಯೆಂದು ನಾಸಾ ಘೋಷಿಸಿತು. ಈ ರೀತಿ ಶಾಂತಕ್ಷೇತ್ರವಿರುವ (eyewall) ಮೋಡಗಳನ್ನು ಭೂಮಿಯನ್ನುಳಿದು ಇನ್ನಾವ ಗ್ರಹದ ಮೇಲೂ ಇದಕ್ಕೆ ಮುಂಚೆ ನೋಡಿರಲಿಲ್ಲವಾದ್ದರಿಂದ, ಇದು ಒಂದು ಗಮನಾರ್ಹವಾದ ಘೋಷಣೆ.[].

ಅಕ್ಷೀಯ ಪರಿಭ್ರಮಣೆ

[ಬದಲಾಯಿಸಿ]

ಗುರುವಿನಂತೆ, ಶನಿ ಗ್ರಹದ ಎಲ್ಲಾ ಭಾಗಗಳೂ ಒಂದೇ ವೇಗದಲ್ಲಿ ಅಕ್ಷದ ಸುತ್ತ ಸುತ್ತುವುದಿಲ್ಲ. ಹೀಗಾಗಿ, ಶನಿಗ್ರಹಕ್ಕೆ ಎರಡು ಅಕ್ಷೀಯ ಪರಿಭ್ರಮಣ ಕಾಲಗಳನ್ನು ನಿಗದಿ ಮಾಡಲಾಗಿದೆ: "ಸಿಸ್ಟಮ್ ೧" ರ ಕಾಲವು ೧೦ ಘಂಟೆ ೧೪ ನಿಮಿಷ ೦೦ ಕ್ಷಣಗಳು (೮೪೪.೩°/ಪ್ರತಿ ದಿನ). ಇದು ಸಮಭಾಜಕ ಮತ್ತು ಸುತ್ತುಮುತ್ತಲ ವಲಯಗಳನ್ನು ಒಳಗೊಂಡಿದೆ. ಬೇರೆಲ್ಲಾ ಅಕ್ಷಾಂಶ ವಲಯಗಳಿಗೂ (ಇವನ್ನು "ಸಿಸ್ಟಮ್ ೨" ಎಂದು ಕರೆಯಲಾಗುತ್ತದೆ) ೧೦ ಘಂಟೆ ೩೯ ನಿಮಿಷ ೨೪ ಕ್ಷಣಗಳ (೮೧೦.೭೬°/ಪ್ರತಿ ದಿನ) ಕಾಲವನ್ನು ನಿಗದಿಪಡಿಸಲಾಗಿದೆ. ಶನಿಯು ಹೊರಸೂಸುವ ರೇಡಿಯೋ ತರಂಗಗಳನ್ನಾಧರಿಸಿದ "ಸಿಸ್ಟಮ್ ೩", ೧೦ ಘಂ, ೩೯ ನಿ, ೨೨.೪ ಕ್ಷ(೮೧೦.೮°/ಪ್ರತಿದಿನ)ಗಳ ಕಾಲವನ್ನು ಹೊಂದಿದೆ.

೨೦೦೪ರಲ್ಲಿ ಶನಿಯನ್ನು ಸಮೀಪಿಸುತ್ತಿದ್ದಾಗ ಕ್ಯಾಸಿನಿ ಗಗನನೌಕೆಯು ಶನಿಯ ರೇಡಿಯೋ ಪರಿಭ್ರಮಣ ಕಾಲವು ಸ್ವಲ್ಪ ಹೆಚ್ಚಾಗಿ, ಸುಮಾರು ೧೦ ಘಂ ೪೫ ನಿ ೪೫ ಕ್ಷ (± ೩೬ ಕ್ಷ) ಗಳಾಗಿದೆಯೆಂದು ಕಂಡುಹಿಡಿಯಿತು.[] ಈ ಬದಲಾವಣೆಯ ಕಾರಣ ಇನ್ನೂ ತಿಳಿದುಬಂದಿಲ್ಲ — ಆದರೆ, ಇದು ಶನಿಯ ಪರಿಭ್ರಮಣ ಕಾಲದ ವಾಸ್ತವಿಕ ಬದಲಾವಣೆಯಾಗಿರದೆ, ರೇಡಿಯೋ ಮೂಲವು ಬೇರೆ ಅಕ್ಷಾಂಶದೆಡೆಗೆ ಚಲಿಸಿದ್ದರಿಂದ ಉಂಟಾಗಿರಬಹುದೆಂದು ನಂಬಲಾಗಿದೆ.

ಉಂಗುರಗಳು

[ಬದಲಾಯಿಸಿ]

ತನ್ನ ಉಂಗುರಗಳ ಕಾರಣವಾಗಿಯೇ ಶನಿ ಗ್ರಹವು ಬಹಳಷ್ಟು ಪ್ರಸಿದ್ದಿಯನ್ನು ಹೊಂದಿದೆ. ಈ ಉಂಗುರಗಳ ಕಾರಣದಿಂದ, ಶನಿಯು ನೋಟದಲ್ಲಿ ಮನಸೆಳೆಯುವ ಒಂದು ಗ್ರಹವಾಗಿದೆ.

ಇತಿಹಾಸ

[ಬದಲಾಯಿಸಿ]

೧೬೧೦ರಲ್ಲಿ ಮೊದಲ ಬಾರಿಗೆ ಗೆಲಿಲಿಯೋ ಗೆಲಿಲೈ ತನ್ನ ದೂರದರ್ಶಕದ ಸಹಾಯದಿಂದ ಈ ಉಂಗುರಗಳನ್ನು ವೀಕ್ಷಿಸಿದನು. ಆದರೆ, ಇವು ಉಂಗುರಗಳೆಂದು ಅವನಿಗೆ ಗುರುತು ಹಿಡಿಯಲಾಗಲಿಲ್ಲ. ಅವನು ಟಸ್ಕನಿಯ ರಾಜನಿಗೆ ಈ ರೀತಿ ಕಾಗದ ಬರೆದು ಕಳುಹಿಸಿದನು: "ಶನಿಗ್ರಹವು ಒಂದೇ ಗ್ರಹವಾಗಿರದೆ, ಮೂರು ಗ್ರಹಗಳಿಂದ ಕೂಡಿದೆ. ಈ ಮೂರು ಒಂದನ್ನೊಂದು ಮುಟ್ಟುವುದಿಲ್ಲ ಮತ್ತು ಒಂದಿನ್ನೊಂದರಿಂದ ಚಲಿಸುವುದೂ ಇಲ್ಲ. ಇವು ನಕ್ಷತ್ರ ರಾಶಿಯ (zodiac) ರೇಖೆಗೆ ಸಮಾನಾಂತರವಾಗಿ ಸ್ಥಿತವಾಗಿವೆ. ಮಧ್ಯದ ಕಾಯವು (ಶನಿ ಗ್ರಹ) ಪಕ್ಕದವುಗಳಿಗಿಂತ [ಉಂಗುರಗಳ ತುದಿಗಳು] ೩ ಪಟ್ಟು ದೊಡ್ಡದಾಗಿದೆ." ಶನಿಗೆ "ಕಿವಿ"ಗಳು ಇವೆಯೆಂದೂ ಅವನು ವಿವರಿಸಿದನು. ೧೬೧೨ರಲ್ಲಿ ಉಂಗುರಗಳ ಸಮತಳವು ಭೂಮಿಯತ್ತ ನೇರವಾಗಿ ಹೊಂದಿಕೊಂಡಿದ್ದರಿಂದ ಉಂಗುರಗಳು ಮಾಯವಾದಂತೆ ಕಂಡವು. ಆದರೆ ೧೬೧೩ರಲ್ಲಿ ಈ ಉಂಗುರಗಳು ಮತ್ತೆ ಗೋಚರಿಸಿದವು. ಇದರಿಂದ ಗೆಲಿಲಿಯೋ ಮತ್ತಷ್ಟು ಗೊಂದಲಕ್ಕೆ ಈಡಾದನು.

ಕ್ರಿಸ್ಟಿಯಾನ್ ಹಯ್ಗನ್ಸ್ನು (Christiaan Huygens) ೧೬೫೫ರಲ್ಲಿ ಮೊದಲಬಾರಿಗೆ ಶನಿಯು ಉಂಗುರಗಳಿಂದ ಆವೃತವಾಗಿರಬಹುದೆಂದು ಸೂಚಿಸಿದನು. ಗೆಲಿಲಿಯೋಗೆ ಲಭ್ಯವಿದ್ದುದಕ್ಕಿಂತ ಬಹಳ ಉತ್ತಮ ದರ್ಜೆಯ ದೂರದರ್ಶಕವನ್ನು ಬಳಸಿ ಅವನು ಶನಿಯನ್ನು ಅವಲೋಕಿಸಿ, ಈ ರೀತಿ ಬರೆದನು: "[ಶನಿಯು] ತೆಳುವಾದ ಮತ್ತು ಚಪ್ಪಟೆಯಾದ ಉಂಗುರಗಳಿಂದ ಆವೃತವಾಗಿದೆ. ಈ ಉಂಗುರಗಳು ಗ್ರಹವನ್ನು ಎಲ್ಲೂ ಮುಟ್ಟದೆ, ಗ್ರಹದ ಕಕ್ಷೆಯ ಸಮತಳಕ್ಕೆ ಓರೆಯಲ್ಲಿವೆ." []

ಶನಿಯ ಉಂಗುರಗಳು ಹಲವಾರು ಸಣ್ಣ ಉಂಗುರಗಳಿಂದ ಕೂಡಿದ್ದು, ಇವುಗಳ ನಡುವೆ ಸಂದುಗಳು (ಅಂತರಗಳು) ಇವೆಯೆಂದು, ಜಿಯೋವಾನಿ ಡೊಮೆನಿಕೋ ಕ್ಯಾಸಿನಿಯು ೧೬೭೫ರಲ್ಲಿ ಕಂಡುಹಿಡಿದನು; ಇವುಗಳಲ್ಲಿ ಅತಿದೊಡ್ಡ ಅಂತರಕ್ಕೆ ತದನಂತರ ಕ್ಯಾಸಿನಿ ಅಂತರವೆಂದು ಹೆಸರಿಡಲಾಯಿತು.

ಈ ಉಂಗುರಗಳು ಘನರೂಪದಲ್ಲಿಲ್ಲವೆಂದೂ, ಮತ್ತು ಇವು ಘನರೂಪದಲ್ಲಿದ್ದದ್ದೇ ಆದರೆ, ಅಸ್ಥಿರವಾಗಿ ಮುರಿದುಹೋಗುವವೆಂದೂ ೧೮೫೯ರಲ್ಲಿ ಜೇಮ್ಸ್ ಕ್ಲರ್ಕ್ ಮ್ಯಾಕ್ಸ್‌ವೆಲ್ನು ತೋರಿಸಿದನು. ಸ್ವತಂತ್ರವಾಗಿ ಶನಿಯನ್ನು ಪರಿಭ್ರಮಿಸುತ್ತಿರುವ ಹಲವಾರು ಸಣ್ಣ ತುಣುಕುಗಳಿಂದ ಉಂಗುರಗಳು ಉಂಟಾಗಿವೆಯೆಂದು ಅವನು ಪ್ರತಿಪಾದಿಸಿದನು.[೧೦] ೧೮೯೫ರಲ್ಲಿ ಲಿಕ್ ಖಗೋಳವೀಕ್ಷಣಾಲಯಜೇಮ್ಸ್ ಕೀಲರ್ ಅವರು ಈ ಉಂಗುರಗಳನ್ನು ವರ್ಣಪಟಲಮಾಪಕದಿಂದ ಅಧ್ಯಯನ ಮಾಡಿದರು. ಈ ಅಧ್ಯಯನದಿಂದ ಮ್ಯಾಕ್ಸ್‌ವೆಲ್‌ನ ವಾದವು ಸಾಬೀತಾಯಿತು.

ಭೌತಿಕ ಗುಣಲಕ್ಷಣಗಳು

[ಬದಲಾಯಿಸಿ]

ಆಧುನಿಕ ದೂರದರ್ಶಕಗಳಿಂದ ಅಥವಾ ಮೇಲ್ದರ್ಜೆಯ ದುರ್ಬೀನಿನ ಸಹಾಯದಿಂದ ಈ ಉಂಗುರಗಳನ್ನು ನೋಡಬಹುದು. ಶನಿಯ ಸಮಭಾಜಕದಿಂದ ೬,೬೩೦ - ೧೨೦,೭೦೦ ಕಿ.ಮೀ. ದೂರದ ವ್ಯಾಪ್ತಿಯಲ್ಲಿದ್ದು ಸರಾಸರಿ ಸುಮಾರು ೧ ಕಿ.ಮೀ. ದಪ್ಪವಿರುವ ಉಂಗುರಗಳು ಸಿಲಿಕಾ ಕಲ್ಲು, ಕಬ್ಬಿಣದ ಆಕ್ಸೈಡ್, ಮತ್ತು ಧೂಳಿನಷ್ಟು ಚಿಕ್ಕದಾದ ಹಾಗೂ ಸಣ್ಣಕಾರಿನಷ್ಟು ದೊಡ್ಡದಾದ ಹಿಮದ ತುಣುಕುಗಳಿಂದ ಕೂಡಿವೆ. ಈ ಉಂಗುರಗಳ ಉದ್ಭವದ ಬಗ್ಗೆ ಎರಡು ಮುಖ್ಯ ವಾದಗಳಿವೆ. ೧೯ನೇ ಶತಮಾನದಲ್ಲಿ ಎಡ್ವರ್ಡ್ ರೋಶೆ ಪ್ರತಿಪಾದಿಸಿದ ಒಂದು ವಾದದ ಪ್ರಕಾರ ಈ ಉಂಗುರಗಳು ಹಿಂದೊಮ್ಮೆ ಶನಿಯ ಉಪಗ್ರಹವಾಗಿದ್ದವು. ಈ ಉಪಗ್ರಹವು ಶನಿಗೆ ಬಹಳ ಹತ್ತಿರ ಬಂದು ಅದರ ಉಬ್ಬರ ಬಲದಿಂದ (tidal force) ಪುಡಿಯಾಗಿಹೋಯಿತು (ರೋಶೆ ಮಿತಿಯನ್ನು ನೋಡಿ). ಈ ವಾದದ ಇನ್ನೊಂದು ಪ್ರತಿಪಾದನೆಯ ಪ್ರಕಾರ, ಶನಿಯ ಉಪಗ್ರಹದ ಮೇಲೆ ದೊಡ್ಡದೊಂದು ಧೂಮಕೇತು ಅಥವಾ ಆಕಾಶಕಾಯವು (asteroid) ಅಪ್ಪಳಿಸಿ ಅದನ್ನು ಪುಡಿಮಾಡಿದ್ದಿರಬಹುದು. ಬೇರೊಂದು ವಾದವು ಪ್ರತಿಪಾದಿಸುವಂತೆ, ಈ ಉಂಗುರಗಳು ಉಪಗ್ರಹದಿಂದ ಹುಟ್ಟಲೇ ಇಲ್ಲ. ಬದಲಿಗೆ, ಶನಿಯನ್ನು ನಿರ್ಮಿಸಿದ ಜ್ಯೋತಿಪಟಲದ (nebula) ಅವಶೇಷದಿಂದ ಉಂಗುರಗಳು ಉಂಟಾದವು. ಶನಿಯ ಉಂಗುರಗಳು ಲಕ್ಷಾಂತರ ವರ್ಷಗಳ ಅವಧಿಯಲ್ಲಿ ಅಸ್ಥಿರವಾಗುವವು ಮತ್ತು ಅವು ಇತ್ತೀಚೆಗೆ ಹುಟ್ಟಿದವೆಂದು ತಿಳಿದುಬಂದಿರುವುದರಿಂದ, ಈ ಎರಡನೆಯ ವಾದಕ್ಕೆ ಪ್ರಸ್ತುತದಲ್ಲಿ ಸಾಕಷ್ಟು ಬೆಂಬಲವಿಲ್ಲ.

ಉಂಗುರಗಳಲ್ಲಿ ಕ್ಯಾಸಿನಿ ಮತ್ತು ಎನ್ಕೆಗಳಂಥ ದೊಡ್ಡ ಅಂತರಗಳನ್ನು ಭೂಮಿಯಿಂದ ನೋಡಬಹುದಾದರೂ, ಈ ಉಂಗುರಗಳು ಸಾವಿರಾರು ತೆಳುವಾದ ಸಂದುಗಳು ಮತ್ತು ಅಲಕಗಳಿಂದ ಕೂಡಿದ ಜಟಿಲವಾದ ರಚನೆಯನ್ನು ಹೊಂದಿವೆಯೆಂದು ವಾಯೇಜರ್ ನೌಕೆಯು ಕಂಡುಹಿಡಿಯಿತು. ಶನಿಯ ಹಲವಾರು ಉಪಗ್ರಹಗಳು ಬೇರೆ ಬೇರೆ ದಿಕ್ಕುಗಳಲ್ಲಿ ತಮ್ಮ ಗುರುತ್ವ ಬಲವನ್ನು ಪ್ರಯೋಗಿಸುವುದರಿಂದ ಈ ಜಟಿಲ ವಿನ್ಯಾಸವು ಉಂಟಾಗುತ್ತದೆಂದು ಅನುಮಾನಿಸಲಾಗಿದೆ. ಪ್ಯಾನ್ನಂತಹ ಸಣ್ಣ ಉಪಗ್ರಹಗಳು ಹಾದುಹೋಗುವುದರಿಂದ ಕೆಲವು ಅಂತರಗಳು ನಿರ್ಮಾಣವಾಗುತ್ತವೆ. ಇನ್ನು ಕೆಲವು ಅಂತರಗಳನ್ನು ಪ್ರೊಮೇಥಿಯಸ್ ಮತ್ತು ಪ್ಯಾಂಡೋರದಂತಹ ಕಾವಲು ಉಪಗ್ರಹಗಳು ಪೋಷಿಸಿಕೊಂಡು ಬರುತ್ತಿವೆಯೆಂದು ಕಂಡುಬರುತ್ತದೆ. ಅಂತರದಲ್ಲಿರುವ ಸೂಕ್ಷ್ಮ ಕಣಗಳು ಮತ್ತು ನಿಕಟದಲ್ಲಿರುವ ಒಂದು ಭಾರಿ ಉಪಗ್ರಹದ ನಡುವೆ ಉಂಟಾಗುವ ಅನುರಣನವು ಮತ್ತೂ ಕೆಲವು ಅಂತರಗಳಿಗೆ ಎಡೆಮಾಡುತ್ತದೆ; ಮಿಮಾಸ್ ಉಪಗ್ರಹವು ಕ್ಯಾಸಿನಿ ಅಂತರವನ್ನು ಈ ರೀತಿಯಲ್ಲಿ ಸೃಷ್ಟಿಸಿದೆ. ಉಪಗ್ರಹಗಳ ಗುರುತ್ವದಲ್ಲುಂಟಾಗುವ ಗಲಿಬಿಲಿಗಳಿಂದ ಕೆಲವು ಸುರುಳಿಯಾಕಾರದ ರಚನೆಗಳು ಉಂಗುರಗಳ ಮೇಲೆ ಉಂಟಾಗುತ್ತವೆ.

ಕ್ಯಾಸಿನಿ ಬಾಹ್ಯಾಕಾಶ ಶೋಧಕದಿಂದ ಲಭ್ಯವಾದ ಮಾಹಿತಿಯ ಪ್ರಕಾರ, ಶನಿಯ ಉಂಗುರಗಳು ತಮ್ಮದೇ ಆದ ವಾಯುಮಂಡಲವನ್ನು ಹೊಂದಿವೆ. ಈ ವಾಯುಮಂಡಲಗಳು, ಸೂರ್ಯನ ಅತಿನೇರಳೆ ಕಿರಣಗಳು ಉಂಗುರಗಳ ಮೇಲಿನ ಹಿಮವನ್ನು ವಿಭಜಿಸಿದಾಗ ಉತ್ಪನ್ನವಾಗುವ ಆಮ್ಲಜನಕದಿಂದ (O2) ಕೂಡಿವೆ. ನೀರಿನ ಕಣಗಳ ನಡುವೆ ಉಂಟಾಗುವ ರಾಸಾಯನಿಕ ಕ್ರಿಯೆ ಮತ್ತು ಅತಿನೇರಳೆ ಪ್ರಚೋದನೆಯಿಂದ O2 ಮತ್ತಿತರ ವಸ್ತುಗಳು ಉತ್ಪನ್ನವಾಗಿ ಹೊರಹಾಕಲ್ಪಡುತ್ತವೆ. ಈ ವಾಯುಮಂಡಲಗಳ ಮಾದರಿಯ ಪ್ರಕಾರ, ಇಲ್ಲಿ H2 ವನ್ನೂ ಕಾಣಬಹುದು. O2 ಮತ್ತು H2 ಗಳಿಂದ ಕೂಡಿದ ಈ ವಾಯುಮಂಡಲಗಳು ಎಷ್ಟು ವಿರಳವಾಗಿವೆಯೆಂದರೆ, ಈ ಅನಿಲಗಳನ್ನು ಹೇಗಾದರೂ ಮಾಡಿ ಉಂಗುರಗಳ ಮೇಲೆ ಸಾಂದ್ರೀಕರಿಸಿದರೆ, ಇವು ಕೇವಲ ೧ ಪರಮಾಣುವಷ್ಟು ದಪ್ಪನಾದ ಪದರವನ್ನು ಹೊಂದುತ್ತವೆ.[೧೧] ಇದೇ ರೀತಿಯಲ್ಲಿ, ಉಂಗುರಗಳು ವಿರಳವಾದ ಹೈಡ್ರಾಕ್ಸೈಡ್ (OH) ವಾಯುಮಂಡಲವನ್ನೂ ಹೊಂದಿವೆ. O2 ನಂತೆ, OH ವಾಯುಮಂಡಲವೂ ನೀರಿನ ಕಣಗಳ ವಿಭಜನೆಯಿಂದ ಉಂಟಾಗುತ್ತದೆ. ಆದರೆ, ಈ ವಿಭಜನೆಯು, ಶನಿಯ ಉಪಗ್ರಹವಾದ ಎನ್‌ಸೆಲಾಡಸ್ ಹೊರಹಾಕಿದ ನೀರಿನ ಕಣಗಳನ್ನು ಶಕ್ತಿಯುತ ಅಯಾನುಗಳು (ion) ಅಪ್ಪಳಿಸಿದಾಗ ಉಂಟಾಗುತ್ತದೆ. ಈ ವಾಯುಮಂಡಲವು ಅತ್ಯಂತ ವಿರಳವಾಗಿದ್ದರೂ, ಭೂಮಿಯಿಂದ ಹಬಲ್ ದೂರದರ್ಶಕವು ಇದನ್ನು ಪತ್ತೆ ಹಚ್ಚಿತು. [೧೨]

ಶನಿಯ ಪ್ರಕಾಶತೆಯಲ್ಲಿ ಜಟಿಲವಾದ ವಿನ್ಯಾಸಗಳನ್ನು ಕಾಣಬಹುದು. ಈ ವಿನ್ಯಾಸಗಳಲ್ಲಿ ಹೆಚ್ಚಿನವು ಶನಿಯ ಉಂಗುರಗಳ ರೂಪದಲ್ಲುಂಟಾಗುವ ಬದಲಾವಣೆಗಳಿಂದ ಸೃಷ್ಟಿಯಾದವು. ಈ ಬದಲಾವಣೆಗಳು ಶನಿಯ ಪ್ರತಿ ಪರಿಭ್ರಮಣದಲ್ಲಿ ಎರಡು ಬಾರಿ ಪುನರಾವರ್ತಿಸುತ್ತವೆ. ಇದಲ್ಲದೆ, ಗ್ರಹದ ಕಕ್ಷೀಯ ಕೇಂದ್ರ ಚ್ಯುತಿಯ ಕಾರಣದಿಂದ, ಶನಿಯ ವೈರುಧ್ಯತೆಯಲ್ಲಿರುವಾಗ ಉತ್ತರಾರ್ಧ ಗೋಳವು ದಕ್ಷಿಣಾರ್ಧ ಗೋಳಕ್ಕಿಂತ ಹೆಚ್ಚು ಪ್ರಕಾಶಮಾನವಾಗಿರುತ್ತದೆ (Henshaw, C., 2003).[೧೩]

ಉಂಗುರಗಳ ಕೀಲುಗಳು

[ಬದಲಾಯಿಸಿ]
B ಉಂಗುರದ ಕೀಲುಗಳು: ವಾಯೇಜರ್ ೨ ೧೯೮೧ರಲ್ಲಿ ತೆಗೆದ ಚಿತ್ರ.

೧೯೮೦ರವರೆಗೂ ಶನಿಯ ಉಂಗುರಗಳ ರಚನೆಯನ್ನು ಗುರುತ್ವ ಬಲದ ಆಧಾರದ ಮೇಲೆ ಮಾತ್ರ ವಿವರಿಸಲಾಗುತ್ತಿತ್ತು. ಆದರೆ, ವಾಯೇಜರ್ ನೌಕೆಯು B ಉಂಗುರದಲ್ಲಿ "ಕೀಲುಗಳು" ಎಂದು ಕರೆಯಲಾಗುವ ತ್ರಿಜ್ಯಾಕಾರದ ವೈಶಿಷ್ಟ್ಯಗಳನ್ನು ಪತ್ತೆ ಹಚ್ಚಿತು. ಇವುಗಳ ಸ್ಥಿರತೆ ಮತ್ತು ಉಂಗುರಗಳ ಸುತ್ತ ಪರಿಭ್ರಮಣವು, ಕಕ್ಷೀಯ ಚಲನೆಯೊಂದಿಗೆ ಸಮಂಜಸವಾಗಿರಲಿಲ್ಲ. ಈ ಕಾರಣದಿಂದ, ಇವುಗಳ ರಚನೆಯನ್ನು ಗುರುತ್ವದ ಆಧಾರದ ಮೇಲೆ ವಿವರಿಸಲು ಆಗಲಿಲ್ಲ. ಉಂಗುರಗಳ ಬೆಳಕಿನ ಹಿನ್ನೆಲೆಯಲ್ಲಿ ಕತ್ತಲಾಗಿ ಕಾಣುವ ಈ ಕೀಲುಗಳು ಉಂಗುರಗಳ ಕತ್ತಲ ಹಿನ್ನೆಲೆಯಲ್ಲಿ ಪ್ರಕಾಶಮಾನವಾಗಿ ಕಾಣುತ್ತವೆ. ಇವು ಬಹುತೇಕವಾಗಿ ಶನಿಯ ಕಾಂತಗೋಳದೊಂದಿಗೇ ಪರಿಭ್ರಮಿಸುವುದರಿಂದ, ಇವು ವಿದ್ಯುತ್-ಕಾಂತೀಯ (electromagnetism) ಒಡನಾಟಗಳಿಂದ ಉಂಟಾಗಿವೆಯೆಂದು ಅನುಮಾನಿಸಲಾಗಿದೆ. ಆದರೆ, ಈ ಕೀಲುಗಳ ಹಿಂದೆಯಿರುವ ಪ್ರಕ್ರಿಯೆ ಏನೆಂಬುದು ಇನ್ನೂ ನಿಖರವಾಗಿ ತಿಳಿದುಬಂದಿಲ್ಲ.

೨೦೦೫ರಲ್ಲಿ ಕ್ಯಾಸಿನಿ ಚಿತ್ರೀಕರಿಸಿದ ಕೀಲುಗಳು.

೨೫ ವರ್ಷಗಳ ನಂತರ, ಕ್ಯಾಸಿನಿಯು ಮತ್ತೊಮ್ಮೆ ಕೀಲುಗಳನ್ನು ವೀಕ್ಷಿಸಿತು. ಈ ಕೀಲುಗಳು ಋತುಕಾಲಿಕವೆಂದು ಕಂಡುಬರುತ್ತವೆ. ಇವು ಶನಿಯ ಚಳಿಗಾಲ/ಬೇಸಿಗೆಯಲ್ಲಿ ಮಾಯವಾಗಿ ಶನಿಯು ವಿಷುವತ್‌ಸಂಕ್ರಾಂತಿಯನ್ನು (equinox) ಸಮೀಪಿಸುತ್ತಿದ್ದಂತೆ ಮರುಕಳಿಸುತ್ತವೆ. ಕ್ಯಾಸಿನಿಯು ೨೦೦೪ರಲ್ಲಿ ಶನಿಯ ಬಳಿ ತಲುಪಿದಾಗ ಈ ಕೀಲುಗಳು ಕಾಣಿಸಲಿಲ್ಲ. ಕೀಲುಗಳ ನಿರ್ಮಾಣವನ್ನು ವಿವರಿಸಲು ಯತ್ನಿಸುತ್ತಿದ್ದ ಕೆಲವು ಮಾದರಿಗಳ ಆಧಾರದ ಮೇಲೆ, ಇವು ೨೦೦೭ರವರೆಗೆ ಮತ್ತೆ ಕಾಣುವುದಿಲ್ಲವೆಂದು ಕೆಲವು ವಿಜ್ಞಾನಿಗಳು ಶಂಕಿಸಿದರು. ಆದರೂ, ಕ್ಯಾಸಿನಿ ಚಿತ್ರೀಕರಣ ತಂಡವು ಉಂಗುರಗಳ ಚಿತ್ರಗಳಲ್ಲಿ ಈ ಕೀಲುಗಳನ್ನು ಹುಡುಕುತ್ತಲೇ ಇದ್ದಿತು. ಸೆಪ್ಟೆಂಬರ್ ೫, ೨೦೦೫ರಂದು ತೆಗೆದ ಚಿತ್ರಗಳಲ್ಲಿ ಕೀಲುಗಳು ಮತ್ತೆ ಗೋಚರಿಸಿದವು.

ನೈಸರ್ಗಿಕ ಉಪಗ್ರಹಗಳು

[ಬದಲಾಯಿಸಿ]
ಶನಿಯ ಉಪಗ್ರಹಗಳಲ್ಲಿ ನಾಲ್ಕು: ಡಯೋನಿ, ಟೈಟನ್, ಪ್ರೊಮೇಥಿಯಸ್ (ಉಂಗುರಗಳ ತುದಿಯಲ್ಲಿ), ಟೆಲೆಸ್ಟೊ (ಮೇಲ್ಭಾಗದ ಮಧ್ಯದಲ್ಲಿ).

ಶನಿಗ್ರಹವು ಹಲವಾರು ನೈಸರ್ಗಿಕ ಉಪಗ್ರಹಗಳನ್ನು ಹೊಂದಿದೆ. ಶನಿಯನ್ನು ಸುತ್ತುತ್ತಿರುವ ಎಲ್ಲಾ ಹಿಮದ ತುಣುಕುಗಳನ್ನೂ ಪಾರಿಭಾಷಿಕವಾಗಿ ಉಪಗ್ರಹಗಳೆಂದೇ ಪರಿಗಣಿಸಬಹುದು. ಇದಲ್ಲದೆ, ಉಂಗುರದ ದೊಡ್ಡದೊಂದು ತುಣುಕು ಮತ್ತು ಒಂದು ಉಪಗ್ರಹದ ನಡುವೆ ಯಾವುದೇ ರೀತಿಯ ವ್ಯತ್ಯಾಸಗಳಿಲ್ಲದಿರಬಹುದು. ಇದರಿಂದ, ಶನಿಗೆ ಎಷ್ಟು ಉಪಗ್ರಹಗಳಿವೆ ಎಂದು ನಿಖರವಾಗಿ ನಿರ್ಧರಿಸಲಾಗಿಲ್ಲ. ೨೦೦೬ರ ಹೊತ್ತಿಗೆ, ೫೬ ಉಪಗ್ರಹಗಳನ್ನು ಗುರುತಿಸಲಾಗಿದೆ. ಇವುಗಳಲ್ಲಿ ಹಲವು ಬಹಳ ಸಣ್ಣವು. ಇವುಗಳಲ್ಲಿ ಏಳು ಉಪಗ್ರಹಗಳು ತಮ್ಮದೇ ಗುರುತ್ವ ಬಲದಿಂದ ಗೋಳಾಕಾರಕ್ಕೆ ಕುಸಿಯುವಷ್ಟು ಭಾರಿಯಾಗಿವೆ. ಕೆಳಗಿನ ಕೋಷ್ಟಕದಲ್ಲಿ ಈ ಉಪಗ್ರಹಗಳನ್ನು ಭೂಮಿಯ ಚಂದ್ರನಿಗೆ ಹೋಲಿಸಲಾಗಿದೆ. ಶನಿಯ ಗಮನಾರ್ಹವಾದ ಒಂದು ಉಪಗ್ರಹ ಟೈಟನ್. ಇದು ಸೌರಮಂಡಲದಲ್ಲಿ ದಟ್ಟವಾದ ವಾಯುಮಂಡಲವನ್ನು ಹೊಂದಿರುವ ಏಕೈಕ ಉಪಗ್ರಹವಾಗಿದೆ.

ಟೈಟನ್‌ನ ಪ್ರಕಾಶಮಾನವಾದ ಆಕಾರ ಮತ್ತು ಗ್ರಹವನ್ನಾವರಿಸುವ ಅದರ ಮಸುಕು ಉಂಟುಮಾಡಿರುವ ನಿಗೂಢತೆಯನ್ನು ಭೇದಿಸುತ್ತಿರುವ ಶನಿಯ ಉಂಗುರಗಳು. ಎನ್‌ಸೆಲಾಡಸ್ ಉಪಗ್ರಹದ ಹಿಮಧಾರೆಗಳು ಅದರ ದಕ್ಷಿಣಧ್ರುವದ ಬಳಿ ಮಂದವಾಗಿ ಕಾಣುತ್ತವೆ. ಉತ್ತರ ದಿಕ್ಕು ಮೇಲಕ್ಕಿದೆ.
ಭೂಮಿಯ ಚಂದ್ರನಿಗೆ ಹೋಲಿಸಿದಂತೆ ಶನಿಯ ಪ್ರಮುಖ ಉಪಗ್ರಹಗಳು.
ಹೆಸರು
ವ್ಯಾಸ
(ಕಿ.ಮೀ.)
ದ್ರವ್ಯರಾಶಿ
(ಕಿ.ಗ್ರಾಂ.)
ಕಕ್ಷೀಯ ತ್ರಿಜ್ಯ (ಕಿ.ಮೀ.) ಕಕ್ಷೀಯ ಪರಿಭ್ರಮಣ ಕಾಲ (ದಿನಗಳು)
ಮಿಮಾಸ್ ೪೦೦
(ಚಂದ್ರನ ೧೦%)
೦.೪×೧೦೨೦
(ಚಂದ್ರನ ೦.೦೫%)
೧೮೫,೦೦೦
(ಚಂದ್ರನ ೫೦%)
೦.೯
(ಚಂದ್ರನ ೩%)
ಎನ್‌ಸೆಲಾಡಸ್ ೫೦೦
(೧೫%)
೧.೧×೧೦೨೦
(೦.೨%)
೨೩೮,೦೦೦
(೬೦%)
೧.೪
(ಚಂದ್ರನ ೫%)
ಟೆಥಿಸ್ ೧೦೬೦
(ಚಂದ್ರನ ೩೦%)
೬.೨×೧೦೨೦
(ಚಂದ್ರನ ೦.೮%)
೨೯೫,೦೦೦
(ಚಂದ್ರನ ೮೦%)
೧.೯
(ಚಂದ್ರನ ೭%)
ಡಯೋನಿ ೧೧೨೦
(ಚಂದ್ರನ ೩೦%)
೧೧×೧೦೨೦
(ಚಂದ್ರನ ೧.೫%)
೩೭೭,೦೦೦
(ಚಂದ್ರನ ೧೦೦%)
೨.೭
(ಚಂದ್ರನ ೧೦%)
ರಿಯಾ ೧೫೩೦
(ಚಂದ್ರನ ೪೫%)
೨೩×೧೦೨೦
(ಚಂದ್ರನ ೩%)
೫೨೭,೦೦೦
(ಚಂದ್ರನ ೧೪೦%)
೪.೫
(ಚಂದ್ರನ ೨೦%)
ಟೈಟನ್ ೫೧೫೦
(ಚಂದ್ರನ ೧೫೦%)
೧೩೫೦×೧೦೨೦
(ಚಂದ್ರನ ೧೮೦%)
೧,೨೨೨,೦೦೦
(ಚಂದ್ರನ ೩೨೦%)
೧೬
(ಚಂದ್ರನ ೬೦%)
ಲಪೀಟಸ್ ೧೪೪೦
(ಚಂದ್ರನ ೪೦%)
೨೦×೧೦೨೦
(ಚಂದ್ರನ ೩%)
೩,೫೬೦,೦೦೦
(ಚಂದ್ರನ ೯೩೦%)
೭೯
(ಚಂದ್ರನ ೨೯೦%)
ಇವುಗಳ ಆವಿಷ್ಕಾರದ ಸಮಯಗಳಿಗೆ, ಸೌರಮಂಡಲದ ಗ್ರಹಗಳು ಮತ್ತವುಗಳ ನೈಸರ್ಗಿಕ ಉಪಗ್ರಹಗಳ ಆವಿಷ್ಕಾರದ ಸಮಯಗಳು ಲೇಖನವನ್ನು ನೋಡಿ.

ಶನಿಯ ಅನ್ವೇಷಣೆ

[ಬದಲಾಯಿಸಿ]

ಪಯೋನೀರ್ ೧೧ ಯಾತ್ರೆ

[ಬದಲಾಯಿಸಿ]

ಸೆಪ್ಟೆಂಬರ್ ೧೯೭೧೯ರಲ್ಲಿ ಮೊದಲ ಬಾರಿಗೆ ಶನಿಯನ್ನು ತಲುಪಿದ ಪಯೋನೀರ್ ೧೧ ನೌಕೆಯು ಶನಿಯ ಮೋಡದ ಪದರದಿಂದ ೨೦,೦೦೦ ಕಿ.ಮೀ. ಅಂತರದಲ್ಲಿ ಹಾದುಹೋಯಿತು. ಶನಿ ಮತ್ತು ಅದರ ಕೆಲವು ಉಪಗ್ರಹಗಳ ಕೆಳ ದರ್ಜೆಯ ಚಿತ್ರಗಳನ್ನು ತೆಗೆಯಿತು. ಈ ಚಿತ್ರಗಳಲ್ಲಿ ಮೇಲ್ಮೈ ವೈಶಿಷ್ಟ್ಯಗಳನ್ನು ಗುರುತಿಸಲಾಗಲಿಲ್ಲ. ಈ ಗಗನನೌಕೆಯು ಉಂಗುರಗಳ ಅಧ್ಯಯನವನ್ನೂ ಮಾಡಿತು; ಈ ಅಧ್ಯಯನದ ಕೆಲವು ಫಲಿತಾಂಶಗಳೆಂದರೆ, ತೆಳುವಾದ F-ಉಂಗುರದ ಆವಿಷ್ಕಾರ ಮತ್ತು ಸೂರ್ಯನತ್ತ ನೋಡಿದಾಗ ಉಂಗುರಗಳಲ್ಲಿನ ಗಾಢವಾದ ಅಂತರಗಳು ಹೊಳೆಯುತ್ತವೆಯೆಂಬ ವಿಷಯ (ಅರ್ಥಾತ್, ಈ ಅಂತರಗಳು ಸಂಪೂರ್ಣವಾಗಿ ಟೊಳ್ಳಾಗಿಲ್ಲ). ಪಯೋನೀರ್ ನೌಕೆಯು ಟೈಟನ್ ಉಪಗ್ರಹದ ತಾಪಮಾನವನ್ನೂ ಮಾಪಿಸಿತು.[೧೪]

ವಾಯೇಜರ್ ಯಾತ್ರೆಗಳು

[ಬದಲಾಯಿಸಿ]

ನವೆಂಬರ್ ೧೯೮೦ರಲ್ಲಿ ವಾಯೇಜರ್ ೧ ಶೋಧಕವು ಶನಿಯನ್ನು ತಲುಪಿ, ಗ್ರಹ, ಉಪಗ್ರಹಗಳು, ಮತ್ತು ಉಂಗುರಗಳ ಉತ್ತಮ ದರ್ಜೆಯ ಚಿತ್ರಗಳನ್ನು ಮೊದಲ ಬಾರಿಗೆ ತೆಗೆಯಿತು. ಉಪಗ್ರಹಗಳ ಮೇಲ್ಮೈ ವೈಶಿಷ್ಟ್ಯಗಳು ಮೊದಲಬಾರಿಗೆ ಕಂಡುಬಂದವು. ವಾಯೇಜರ್ ೧ ಶೋಧಕವು ಟೈಟನ್ ಉಪಗ್ರಹದ ನಿಕಟಕದಲ್ಲಿ ಹಾದುಹೋಗಿ, ಅದರ ವಾಯುಮಂಡಲದ ಬಗ್ಗೆ ನಮಗಿದ್ದ ತಿಳುವಳಿಕೆಯನ್ನು ಅಪಾರವಾಗಿ ವರ್ಧಿಸಿತು. ಆದರೆ, ಟೈಟನ್‌ನ ವಾಯುಮಂಡಲವನ್ನು ಗೋಚರ ಬೆಳಕು ಭೇದಿಸುವುದಿಲ್ಲವೆಂದೂ ಇದರಿಂದ ತಿಳಿದುಬಂದಿತು. ಇದರಿಂದ, ಟೈಟನ್‌ನ ಮೇಲ್ಮೈಯನ್ನು ನೋಡಲಾಗಲಿಲ್ಲ. ಈ ಕಾರ್ಯಾಚರಣೆಯು ಗಗನನೌಕೆಯನ್ನು ಸೌರಮಂಡಲದ ಸಮತಳದಿಂದ ಹೊರಕ್ಕೆ ಕೊಂಡೊಯ್ದಿತು.

ಸುಮಾರು ಒಂದು ವರ್ಷದ ನಂತರ ಆಗಸ್ಟ್ ೧೯೮೧ರಲ್ಲಿ, ವಾಯೇಜರ್ 2 ನೌಕೆಯು ಶನಿಯ ಅಧ್ಯಯನವನ್ನು ಮುಂದುವರಿಸಿತು. ನಿಕಟದಿಂದ ಶನಿಯ ಚಿತ್ರಗಳನ್ನು ಮತ್ತು ಉಂಗುರಗಳ ವಾಯುಮಂಡಲಗಳಲ್ಲಿ ಬದಲಾವಣೆಗಳ ಪುರಾವೆಗಳನ್ನು ಗಳಿಸಲಾಯಿತು. ದುರದೃಷ್ಟವಶಾತ್, ಈ ಸಮಯದಲ್ಲಿ ಒಂದೆರಡು ದಿನಗಳ ಕಾಲದವರೆಗೆ ಶೋಧಕದ ಕ್ಯಾಮೆರಾವನ್ನು ತಿರುಗಿಸುವ ಯಾಂತ್ರಿಕ ವ್ಯವಸ್ಥೆಯು ಕೆಟ್ಟುಹೋಗಿದ್ದರಿಂದ, ಸ್ವಲ್ಪ ಪೂರ್ವೋದ್ದೇಶಿತ ಚಿತ್ರೀಕರಣವು ನಡೆಯಲಿಲ್ಲ. ನಂತರ, ಶನಿಯ ಗುರುತ್ವದ ಸಹಾಯದಿಂದ ನೌಕೆಯ ಪಥವನ್ನು ಯುರೇನಸ್ನ ಕಡೆ ತಿರುಗಿಸಲಾಯಿತು.

ಈ ಶೋಧಕವು ಗ್ರಹದ ಉಂಗುರಗಳ ಬಳಿಯಲ್ಲಿ ಅಥವಾ ಒಳಗೆ ಪರಿಭ್ರಮಿಸುತ್ತಿರುವ ಹಲವಾರು ಹೊಸ ಉಪಗ್ರಹಗಳನ್ನು ಕಂಡುಹಿಡಿದು ಅವುಗಳ ಅಸ್ತಿತ್ವವನ್ನು ದೃಢೀಕರಿಸಿತು. ಇದಲ್ಲದೆ, ಮ್ಯಾಕ್ಸ್‌ವೆಲ್ ಮತ್ತು ಕೀಲರ್ ಸಂದುಗಳಂಥ ಸಣ್ಣ ಅಂತರಗಳನ್ನೂ ಕಂಡುಹಿಡಿಯಿತು.

ಕ್ಯಾಸಿನಿ ಪರಿಭ್ರಮಕ

[ಬದಲಾಯಿಸಿ]
ಕ್ಯಾಸಿನಿಯಿಂದ ಕಂಡಂತೆ ಶನಿಯು ಸೂರ್ಯನನ್ನು ಮರೆಮಾಡುತ್ತಿದೆ.

ಜುಲೈ ೧, ೨೦೦೪ರಂದು ಕ್ಯಾಸಿನಿ-ಹಯ್ಗನ್ಸ್ ಗಗನನೌಕೆಯು ಶುಕ್ರನ ಸುತ್ತ ಪರಿಭ್ರಮಿಸಲು ಶುರುಮಾಡಿತು. ಇದಕ್ಕೆ ಮುನ್ನವೇ ಕ್ಯಾಸಿನಿಯು ಶನಿಯನ್ನು ವ್ಯಾಪಕವಾಗಿ ಅಧ್ಯಯಿಸಿತ್ತು. ಜೂನ್ ೨೦೦೪ರಲ್ಲಿ ಇದು ಫೀಬೀ ಉಪಗ್ರಹದ ಸಮೀಪದಲ್ಲಿ ಹಾದುಹೋಗಿ ಉತ್ತಮ ದರ್ಜೆಯ ಚಿತ್ರಗಳನ್ನು ಮತ್ತು ಮಾಹಿತಿಯನ್ನು ಕಳುಹಿಸಿತ್ತು. ಪರಿಭ್ರಮಕವು ಎರಡು ಬಾರಿ ಟೈಟನ್‌ನ ಸಮೀಪದಲ್ಲಿ ಹಾರಿಹೋಗಿ, ಡಿಸೆಂಬರ್ ೨೫, ೨೦೦೪ರಂದು ಹಯ್ಗನ್ಸ್ ಶೋಧಕವನ್ನು ಇಳಿಸಿತು. ಜನವರಿ ೧೪, ೨೦೦೫ರಂದು ಇಳಿದ ಹಯ್ಗನ್ಸ್ ಶೋಧಕವು ವಾಯುಮಂಡಲದ ಮೂಲಕ ಚಲಿಸುವಾಗ ಮತು ಇಳಿದಾದ ಮೇಲೆ ಬಹಳಷ್ಟು ಮಾಹಿತಿಯನ್ನು ಕಳುಹಿಸಿತು. ೨೦೦೫ರ ಹೊತ್ತಿಗೆ ಕ್ಯಾಸಿನಿಯು ಟೈಟನ್ ಮತ್ತಿತರ ಹಿಮಾವೃತ ಉಪಗ್ರಹಗಳ ಬಳಿ ಹಲವು ಬಾರಿ ಹಾದುಹೋಗಿತ್ತು. ಶನಿಯ ಉಪಗ್ರಹವಾದ ಎನ್‌ಸೆಲಾಡಸ್ನ ಮೇಲೆ ಬಿಸಿ ಬುಗ್ಗೆಗಳ (geysers) ರೂಪದಲ್ಲಿ ಹೊರಚಿಮ್ಮುವ ನೀರಿನ ಜಲಾಶಯಗಳನ್ನು ಕ್ಯಾಸಿನಿ ಕಂಡುಹಿಡಿದಿರುವುದಾಗಿ ಮಾರ್ಚ್ ೧೦, ೨೦೦೬ರಂದು ನಾಸಾ ಘೋಷಿಸಿತು[೧೫]. ಸೆಪ್ಟೆಂಬರ್ ೨೦, ೨೦೦೬ರಂದು ಕ್ಯಾಸಿನಿ ಶೋಧಕವು ತೆಗೆದ ಚಿತ್ರವೊಂದು, ಮುಂಚೆ ತಿಳಿದಿರದಿದ್ದ ಉಂಗುರವೊಂದನ್ನು ಬಯಲುಮಾಡಿತು. ಈ ಉಂಗುರವು G ಮತ್ತು E ಉಂಗುರಗಳ ಒಳಗಿದ್ದು, ಶನಿಯ ಮುಖ್ಯ ಉಂಗುರಗಳ ಹೊರಗಿದೆ.[೧೬] ಈ ಗಗನನೌಕೆಯು ಶನಿಯ ಸುತ್ತ ೭೪ ಪರಿಭ್ರಮಣಗಳನ್ನು ಮುಗಿಸಿ, ೨೦೦೮ರಲ್ಲಿ ತನ್ನ ಮುಖ್ಯೋದ್ದೇಶವನ್ನು ಪೂರ್ಣಗೊಳಿಸುತ್ತದೆ.

ಇದರ ಬಗ್ಗೆ ತಾಜಾ ಮಾಹಿತಿಗೆ, ಕ್ಯಾಸಿನಿ ಅಂತರಜಾಲ ಪುಟ Archived 2006-04-28 ವೇಬ್ಯಾಕ್ ಮೆಷಿನ್ ನಲ್ಲಿ. ವನ್ನು ನೋಡಿ.
ಶನಿಯ ದಕ್ಷಿಣ ಧ್ರುವದಲ್ಲಿ ಒಂದು ದೊಡ್ಡ ಚಂಡಮಾರುತದ ಚಿತ್ರ.

ಶನಿಯ ಅತ್ಯುತ್ತಮ ನೋಟ

[ಬದಲಾಯಿಸಿ]
ಶನಿಯ ವಿಯುತಿಗಳು: ೨೦೦೧-೨೦೨೯

ಇತಿಹಾಸಪೂರ್ವ ಕಾಲದಿಂದಲೂ ಶನಿಯು ಪರಿಚಿತವಾಗಿರುವ ಗ್ರಹ. ಬರಿಗಣ್ಣಿಗೆ ಕಾಣುವ ೫ ಗ್ರಹಗಳಲ್ಲಿ ಶನಿಯು ಅತಿ ದೂರದ ಗ್ರಹ (ಉಳಿದ 4 ಗ್ರಹಗಳು: ಬುಧ, ಶುಕ್ರ, ಮಂಗಳ ಮತ್ತು ಗುರು). ೧೭೮೧ರಲ್ಲಿ ಯುರೇನಸ್‌ನ ಆವಿಷ್ಕಾರದ ಮುನ್ನ ಖಗೋಳಶಾಸ್ತ್ರಜ್ಞರಿಗೆ ತಿಳಿದಿದ್ದ ಕಟ್ಟಕೊನೆಯ ಗ್ರಹ ಶನಿ. ಬರಿಗಣ್ಣಿಗೆ ಪ್ರಕಾಶಮಾನವಾದ ಹಳದಿ ನಕ್ಷತ್ರದಂತೆ ಕಾಣುವ ಶನಿಯ ಗೋಚರಪ್ರಮಾಣವು +೧ ರಿಂದ ೦ ಯ ವ್ಯಾಪ್ತಿಯಲ್ಲಿರುತ್ತದೆ. ಕಡೇಪಕ್ಷ ೨೦ ಪಟ್ಟು ದೃಷ್ಟಿ ವರ್ಧನೆ ಮಾಡುವಂಥ ದೊಡ್ಡ ದುರ್ಬೀನು ಅಥವಾ ದೂರದರ್ಶಕದ ನೆರವಿಲ್ಲದೆ ಶನಿಯ ಉಂಗುರಗಳನ್ನು ನೋಡುವುದು ಕಷ್ಟ.

ವರ್ಷದ ಬಹುತೇಕ ಕಾಲದಲ್ಲಿ ಶನಿಗ್ರಹವು ತನ್ನ ಉಂಗುರಗಳೊಂದಿಗೆ ನೋಡಲು ಚೆನ್ನಾಗಿ ಕಾಣಿಸಿದರೂ, ಗ್ರಹವು ವಿಯುತಿಯಲ್ಲಿದ್ದಾಗ (ಗ್ರಹವು ೧೮೦° ನೀಳತೆಯನ್ನು ಹೊಂದಿ ಆಗಸದಲ್ಲಿ ಸೂರ್ಯನಿಗೆ ವಿರುದ್ಧ ದಿಕ್ಕಿನಲ್ಲಿರುವಂತೆ ಕಂಡಾಗ ವಿಯುತಿಯುಂಟಾಗುತ್ತದೆ) ಅದರ ಉಂಗುರಗಳನ್ನು ಹೆಚ್ಚು ಸ್ಫುಟವಾಗಿ ನೋಡಬಹುದು. ಜನವರಿ ೧೨, ೨೦೦೫ರ ವೈರುಧ್ಯತೆಯಲ್ಲಿ ಶನಿಯು ಬಹಳ ಪ್ರಕಾಶಮಾನವಾಗಿ ಕಂಡಿತು. ೨೦೩೧ರ ನಂತರವೇ ಶನಿಯು ಇದಕ್ಕಿಂತ ಹೆಚ್ಚು ಪ್ರಕಾಶಮಾನವಾಗಿ ಕಾಣುವುದು.

ಹೆಚ್ಚಿನ ವಿವರಗಳಿಗೆ, ಶನಿಗ್ರಹದ ಸನ್ನಿವೇಶಗಳು ಲೇಖನವನ್ನು ನೋಡಿ.

ವಿವಿಧ ಸಂಸ್ಕೃತಿಗಳಲ್ಲಿ ಶನಿ

[ಬದಲಾಯಿಸಿ]

ಈ ಗ್ರಹವನ್ನು ಹಿಂದೂ ಜ್ಯೋತಿಷ್ಯದಲ್ಲಿ "ಶನಿ" ಎಂದು ಕರೆಯಲಾಗಿದೆ. ಹಿಂದೂ ಸಂಸ್ಕೃತಿಯಲ್ಲಿ ನವ ಗ್ರಹಗಳೆಂದು (Navagraha) ಕರೆಯಲಾಗುವ ೯ ಗ್ರಹಗಳನ್ನು ಉಲ್ಲೇಖಿಸಲಾಗುತ್ತದೆ. ಗ್ರಹಗಳು ಜನರ ಜೀವನದ ಮೇಲೆ ಪ್ರಭಾವ ಬೀರುತ್ತವೆಯೆಂಬ ನಂಬಿಕೆಯಿರುವುದರಿಂದ, ಈ ನವಗ್ರಹಗಳನ್ನು ಒಲಿಸಿಕೊಳ್ಳುವ ಪ್ರಯತ್ನಗಳನ್ನು ಮಾಡಲಾಗುತ್ತದೆ. ಅಶುಭವಾದ ಗ್ರಹವೆಂದು ಗುರುತಿಸಲಾದ ಶನಿಯನ್ನು ಕಷ್ಟ ಕಾರ್ಪಣ್ಯಗಳನ್ನು ಹೊಂದಿರುವ ಜನರು ಪೂಜಿಸುತ್ತಾರೆ. ಸೂರ್ಯ ದೇವತೆಯು ಶನಿಯ ತಂದೆ.

ಚೈನಾ ಮತ್ತು ಜಪಾನೀಯರ ಸಂಸ್ಕೃತಿಗಳಲ್ಲಿ ಶನಿಯನ್ನು ಭೂ ನಕ್ಷತ್ರವೆಂದು (土星) ಕರೆಯಲಾಗುತ್ತದೆ. ಇದು ಚೀನೀಯರ ಪಂಚಭೂತಗಳ ತತ್ವದ ಮೇಲೆ ಆಧಾರಿತವಾಗಿದೆ. ಹೀಬ್ರೂ ಭಾಷೆಯಲ್ಲಿ ಶನಿಯನ್ನು 'Shabbathai' ಎನ್ನುತ್ತಾರೆ (ಕಬಾಲಾವನ್ನು ನೋಡಿ). ತುರುಷ್ಕರ ಮತ್ತು ಮಲಯ ಭಾಷೆಗಳಲ್ಲಿ 'ಜುಹಲ್' ಎಂದು ಕರೆಯುತ್ತಾರೆ.

ಇವನ್ನೂ ನೋಡಿ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. http://www.ifa.hawaii.edu/~sheppard/satellites/satsatdata.html
  2. http://www.onasch.de/astro/showobject.php?lang=en&head=f&anim=129&obj=p06
  3. http://www.solarviews.com/eng/vgrsat.htm Solarviews
  4. http://adsabs.harvard.edu/cgi-bin/nph-bib_query?bibcode=1988Icar...76..335G&db_key=AST&data_type=HTML&format=
  5. http://adsabs.harvard.edu/cgi-bin/nph-bib_query?bibcode=1993Sci...260..329S&db_key=AST&data_type=HTML&format=
  6. http://www.aas.org/publications/baas/v34n3/dps2002/10.htm
  7. "NASA Sees into the Eye of a Monster Storm on Saturn". Archived from the original on 2011-10-05. Retrieved 2010-10-10.
  8. https://www.nasa.gov/mission_pages/cassini/media/cassini-062804.html
  9. "ಆರ್ಕೈವ್ ನಕಲು". Archived from the original on 2009-03-21. Retrieved 2010-10-10.
  10. http://www-history.mcs.st-andrews.ac.uk/~history/Extras/Maxwell_Saturn.html
  11. http://news.bbc.co.uk/1/hi/sci/tech/4640641.stm
  12. http://adsabs.harvard.edu/cgi-bin/nph-bib_query?bibcode=2006ApJ...644L.137J&db_key=AST&data_type=HTML&format=&high=42bf06f4d906731
  13. https://archive.is/20120723185300/www.britastro.org/jbaa/113-1.htm
  14. "ಆರ್ಕೈವ್ ನಕಲು". Archived from the original on 2006-01-30. Retrieved 2021-08-10.
  15. "ಆರ್ಕೈವ್ ನಕಲು". Archived from the original on 2008-03-03. Retrieved 2010-10-10.
  16. New Ring Spotted Around Saturn Archived 2006-09-20 ವೇಬ್ಯಾಕ್ ಮೆಷಿನ್ ನಲ್ಲಿ. – Article on CNN.com.
  • H. Karttunen, P. Kröger, et al., Fundamental Astronomy, Springer, 3th Ed., Helsinki, 2000.
  • Patrick Moore, ed., The 1993 Yearbook of Astronomy, Mark Kidger, "The 1990 Great White Spot of Saturn", 176-215, (New York: W.W. Norton & Company, 1992).

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]