ಮುಸುವ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮುಸುವಗಳು[೧]
ಬೂದು ಮುಸುವ, ಮಹಾರಾಷ್ಟ್ರ, ಭಾರತ
Scientific classification e
ಕ್ಷೇತ್ರ: ಯೂಕ್ಯಾರ್ಯೋಟಾ
ಸಾಮ್ರಾಜ್ಯ: ಅನಿಮೇಲಿಯ
ವಿಭಾಗ: ಕಾರ್ಡೇಟಾ
ವರ್ಗ: ಮ್ಯಾಮೇಲಿಯಾ
ಗಣ: ಪ್ರೈಮೇಟ್ಸ್
ಕುಟುಂಬ: ಸರ್ಕೋಪಿತೇಸಿಡೇ
ಉಪಕುಟುಂಬ: ಕೊಲೋಬಿನೀ
Jerdon, 1867
ಜಾತಿಗಳು

ಕೊಲಾಬಸ್
ಪಿಲಿಯೊಕೊಲಾಬಸ್
ಪ್ರೋಕೊಲಾಬಸ್
ಟ್ರ್ಯಾಕಿಪಿತೆಕಸ್
ಪ್ರೆಸ್‍ಬೈಟಿಸ್
ಸೆಮ್ನೊಪಿತೆಕಸ್
ಪೈಗ್ಯಾತ್ರಿಕ್ಸ್
ರೈನೋಪಿತೆಕಸ್
ನೇಸ್ಯಾಲಿಸ್
ಸಿಮಿಯಾಸ್
ಸರ್ಕೊಪಿತೆಕಾಯ್ಡೀಸ್
ಡಾಲಿಕೊಪಿತೆಕಸ್
ಮೀಸೊಪಿತೆಕಸ್
ಮೈಕ್ರೊಕೊಲಾಬಸ್
ಪ್ಯಾರಾಕೊಲಾಬಸ್
ಪ್ಯಾರಾಪ್ರೆಸ್‍ಬೈಟಿಸ್
ರೈನೊಕೊಲಾಬಸ್

ಮುಸುವ ಪ್ರೈಮೇಟ್ ಗಣದ ಸರ್ಕೊಪಿತಿಸಿಡೀ ಕುಟುಂಬದ ಕೊಲೊಬಿನೀ ಉಪಕುಟುಂಬಕ್ಕೆ ಸೇರಿದ ಪ್ರೆಸ್‍ಬೈಟಿಸ್ ಜಾತಿಯ ಎಂಟಿಲಸ್, ಪೈಲಿಯೇಟಸ್, ಜೀಯೈ ಮತ್ತು ಜಾನೈ ಎಂಬ ನಾಲ್ಕು ಪ್ರಭೇದಗಳ ಕೋತಿಗಳಿಗೆ ಅನ್ವಯವಾಗುವ ಸಾಮಾನ್ಯ ಹೆಸರು (ಲಾಂಗೂರ್). ಮುಸಿಯ ಪರ್ಯಾಯ ನಾಮ.[೨]

ಎಂಟೆಲಸ್ ಪ್ರಭೇದ[ಬದಲಾಯಿಸಿ]

ಇವುಗಳ ಪೈಕಿ ಎಂಟೆಲಸ್ ಪ್ರಭೇದ ಪಶ್ಚಿಮ ಭಾರತ ಮರುಪ್ರದೇಶವನ್ನು ಹೊರತುಪಡಿಸಿ, ಹಿಮಾಲಯದಿಂದ ಮೊದಲುಗೊಂಡು ಕನ್ಯಾಕುಮಾರಿಯವರೆಗೆ ಭಾರತಾದ್ಯಂತ ಕಾಣದೊರೆಯುತ್ತದಾಗಿ ಇದನ್ನು ಮುಸುವಗಳ ಮಾದರಿಯಾಗಿ ವಿವರಿಸಲಾಗಿದೆ. ಇದಕ್ಕೆ ಹನುಮಾನ್ ಕೋತಿ ಎಂಬ ಹೆಸರೂ ಉಂಟು. ಇದರ ದೇಹದ ಉದ್ದ ಸುಮಾರು 70 ಸೆಂಮೀ. ತೂಕ 10-20 ಕೆಜಿ. ಉತ್ತರ ಭಾರತದ ಮುಸುವ ದಕ್ಷಿಣದ್ದಕ್ಕಿಂತ ಹೆಚ್ಚು ಬಲಯುತ ಹಾಗೂ ಭಾರವುಳ್ಳದ್ದು. ದೇಹದ ಉದ್ದಕ್ಕಿಂತ ಹೆಚ್ಚು ಉದ್ದವಾದ ಬಾಲ (ಅಂದರೆ ಸುಮಾರು 100 ಸೆಂಮೀ ಉದ್ದ) ಉಂಟು.[೩][೪] ಮೈಬಣ್ಣ ಬೂದುಗಪ್ಪು. ಮುಖ, ಪಾದ ಹಾಗೂ ಕಿವಿ ಅಚ್ಚಗಪ್ಪು. ಮೈಮೇಲೆ ನಯವಾದ ಕೂದಲುಂಟು.

ಮುಸುವ

ಆವಾಸಸ್ಥಾನ[ಬದಲಾಯಿಸಿ]

ಇವುಗಳ ವಾಸ ಸಾಮಾನ್ಯವಾಗಿ ಮರಗಳಿಂದ ತುಂಬಿರುವ ಕಾಡುಗಳಲ್ಲಿ.[೫] ಕೆಲವೆಡೆ ಕಲ್ಲುಬಂಡೆಗಳಿಂದ ಕೂಡಿದ ನೆಲೆಗಳಲ್ಲೂ ವಾಸಿಸುವುದುಂಟು. ಅಂತೆಯೇ ಹಳ್ಳಿ ಪಟ್ಟಣಗಳ ಆಸುಪಾಸಿನಲ್ಲೂ ದೇವಾಲಯಗಳ ಬಳಿಯಲ್ಲೂ ನೆಲೆನಾಡಿಕೊಂಡಿರುವುದುಂಟು. ಇವುಗಳ ಬಗ್ಗೆ ಹಿಂದೂಗಳಲ್ಲಿ ಪೂಜ್ಯಭಾವನೆ ಇರುವುದರಿಂದ ಹಳ್ಳಿ ಪಟ್ಟಣಗಳಲ್ಲಿ ಯಾರೂ ಇವನ್ನು ಹಿಂಸಿಸುವುದಿಲ್ಲ. ಆದ್ದರಿಂದ ಇಂಥದಲ್ಲಿ ವಾಸಿಸುವ ಮುಸುವಗಳಿಗೆ ಮನುಷ್ಯನನ್ನು ಕಂಡರೆ ಭಯವಿಲ್ಲ. ಆದರೆ ಕಾಡುಗಳಲ್ಲಿ ಜೀವಿಸುವ ಮುಸುವಗಳನ್ನು ಅಲ್ಲಿಯ ಆದಿವಾಸಿ ಬುಡಕಟ್ಟುಗಳವರು ಬೇಟೆಯಾಡುವುದರಿಂದ ಮನುಷ್ಯನ ಹೆದರಿಕೆ ಇವುಗಳಲ್ಲಿ ಕಂಡುಬರುತ್ತದೆ.

ಆಹಾರ[ಬದಲಾಯಿಸಿ]

ಭಾರತದ ಪೆಂಚ್ ರಾಷ್ಟ್ರೀಯ ಉದ್ಯಾನವನದಲ್ಲಿ ಲಂಗೂರ್; ಭಾರತದ ಮುಸಿಯ

ಮುಸುವಗಳು ಶುದ್ಧ ಸಸ್ಯಾಹಾರಿಗಳಾಗಿದ್ದು ಎಲೆಚಿಗುರು, ಹೂ, ಹಣ್ಣುಗಳನ್ನು ತಿಂದು ಬದುಕುವುವು. ಸಾಮಾನ್ಯವಾಗಿ ಸೂರ್ಯೋದಯದ ವೇಳೆಗೆ ಆಹಾರ ಸೇವನೆಗೆ ತೊಡಗಿ, ಮಧ್ಯಾಹ್ನ ಕೊಂಚ ಹೊತ್ತು ಮರಗಳ ತಂಪು ನೆರಳಿನಲ್ಲಿ ವಿಶ್ರಮಿಸುತ್ತಿದ್ದು, ಮತ್ತೆ ಸಂಜೆ ಕತ್ತಲಾಗುವ ತನಕ ತಿನ್ನುವುದು ಇವುಗಳ ಸ್ವಭಾವ.

ನಡವಳಿಕೆ[ಬದಲಾಯಿಸಿ]

ರಾತ್ರಿ ಯಾವುದಾದರೂ ಮರವನ್ನು ಆಯ್ದು ಅದರ ತುದಿರೆಂಬೆಗಳ ಮೇಲೆ ನಿದ್ದೆ ಮಾಡುತ್ತವೆ. ಹುಲಿ, ಚಿರತೆಗಳೇ ಮುಸುವಗಳ ಪ್ರಧಾನ ಶತ್ರುಗಳು.

ಮುಸುವಗಳು 15-25 ಸಂಖ್ಯೆಯ ಗುಂಪುಗಳಲ್ಲಿ ವಾಸಿಸುವುವು. ಸಾಮಾನ್ಯವಾಗಿ ಒಂದೊಂದು ಗುಂಪೂ ತನ್ನದೇ ಆದ, ಸುಮಾರು 1.3 ರಿಂದ 13 ಚ.ಕಿಮೀ. ವಿಸ್ತಾರದ ಕ್ಷೇತ್ರದಲ್ಲಿ ಜೀವಿಸುತ್ತದೆ. ಗುಂಪಿಗೆ ಅತ್ಯಂತ ಬಲಶಾಲಿಯಾದ ಗಂಡು ಮುಸುವ ನಾಯಕ. ಸಾಧಾರಣವಾಗಿ ಗುಂಪಿನಲ್ಲಿ ಎಲ್ಲವೂ ಪರಸ್ಪರ ಶಾಂತಿ ಮತ್ತು ಸಹಕಾರದಿಂದ ಬದಕುತ್ತವೆ. ಗುಂಪಿನ ಸದಸ್ಯರ ನಡುವಣ ಸಂಬಂಧ ಬಲುಸೂಕ್ಷ್ಮ ರೀತಿಯದು.

ಸಂತಾನವೃದ್ಧಿ[ಬದಲಾಯಿಸಿ]

ಇದರ ಸಂತಾನವೃದ್ಧಿಯ ಕಾಲ ಜನವರಿ-ಫೆಬ್ರುವರಿ. ಒಂದು ಸೂಲಿಗೆ ಸಾಮಾನ್ಯವಾಗಿ ಒಂದು ಮರಿ ಹುಟ್ಟುತ್ತದೆ. ಹುಟ್ಟಿದಾಗ ಮರಿ ಸಂಪೂರ್ಣವಾಗಿ ಕಪ್ಪಾಗಿರುತ್ತದೆ. ಬರುಬರುತ್ತ ಮೈ ಬೂದುಗಪ್ಪು ಬಣ್ಣವನ್ನು ತಳೆಯುತ್ತದೆ. ಗರ್ಭಾವಧಿ ಸುಮಾರು 6 ತಿಂಗಳು.

ಪೈಲಿಯೇಟಸ್ ಪ್ರಭೇದ (ಟೋಪಿ ಮುಸುವ ಅಥವಾ ಎಲೆತಿನ್ನುವ ಕೋತಿ ಕ್ಯಾಪ್ಡ್ ಲಾಂಗುರ್, ಲೀಫ್ ಮಂಕಿ)[ಬದಲಾಯಿಸಿ]

ಅಸ್ಸಾಮ್ ರಾಜ್ಯದಲ್ಲಿ ಕಾಣದೊರೆಯುತ್ತದೆ. ಇದರ ದೇಹದ ಗಾತ್ರ 60-70 ಸೆಮೀ. ತೂಕ 12 ಕೆಜಿ. ಬಾಲ 75-100 ಸೆಂಮೀ ಉದ್ದ ಇದೆ. ಮೈಬಣ್ಣ ಗಾಢಬೂದು. ಕೆನ್ನೆ ಮತ್ತು ಉದರಭಾಗಗಳು ಕಿತ್ತಳೆ ಕಂದು ಇಲ್ಲವೆ ಬಂಗಾರಬಣ್ಣದವಾಗಿವೆ.

ಜೀಯೈ ಪ್ರಭೇದ[ಬದಲಾಯಿಸಿ]

ಚಿನ್ನದ ಬಣ್ಣದ ಮುಸುವ (ಗೋಲ್ಡನ್ ಲಾಂಗುರ್) ಎಂಬ ಹೆಸರಿನಿಂದ ಪ್ರಸಿದ್ಧವಾಗಿರುವ ಇದು ಭೂತಾನ ಭಾರತ ಗಡಿಪ್ರದೇಶದಲ್ಲಿಯ ಕಾಡುಗಳಲ್ಲಿ ಕಾಣದೊರೆಯುತ್ತದೆ. ಇದರ ಮೈ ಕೆನೆ ಇಲ್ಲವೆ ಬಂಗಾರ ಬಣ್ಣದ್ದು.[೬] ಮುಸುಡು ಮಾತ್ರ ಕಪ್ಪು.[೭] ಬಾಲದ ತುದಿ ಕೊಂಚ ಗೊಂಡೆಯಂತಿದೆ.

ಜಾನೈ ಪ್ರಬೇಧ[೮][ಬದಲಾಯಿಸಿ]

ಕರ್ನಾಟಕದ ಕೊಡಗಿನಿಂದ ಹಿಡಿದು ಕನ್ಯಾಕುಮಾರಿಯವರೆಗಿನ ಪಶ್ಚಿಮ ಘಟ್ಟಗಳ ಕಾಡುಗಳ ಕಾಣದೊರೆಯುವ ಮುಸುವ ಇದು. ಎಂದೇ ಇದಕ್ಕೆ ನೀಲಗಿರಿ ಮುಸುವ (ನೀಲಗಿರಿ ಲಾಂಗುರ್) ಎಂಬ ಹೆಸರು ಬಂದಿದೆ. 900-2000 ಮೀ ಎತ್ತರದ ಷೋಲಾ ಕಾಡುಗಳಲ್ಲಿ ಇದು ವಾಸಿಸುತ್ತದೆ. 80 ಸೆಂಮೀ ಉದ್ದದ 11-14 ಕೆಜಿ ಭಾರದ ದೇಹ, 75-90 ಸೆಂಮೀ ಉದ್ದದ ಬಾಲ ಇದಕ್ಕುಂಟು. ಮೈಬಣ್ಣ ಹೊಳೆಯುವ ಕಪ್ಪು ಅಥವಾ ಕಪ್ಪು ಮಿಶ್ರ ಕಂದು. ತಲೆ ಮಾತ್ರ ಹಳದಿ ಕಂದು.

ಇದರ ಚೆಲುವಾದ ಚರ್ಮ ಮತ್ತು ಔಷಧಿ ಗುಣಗಳಿವೆಯೆಂದು ಹೇಳಲಾದ ಇದರ ಮಾಂಸ, ರಕ್ತ ಹಾಗೂ ಒಳಗಿನ ಅಂಗಾಂಗಗಳಿಗಾಗಿ ಇದನ್ನು ಬೇಟೆಯಾಡುತ್ತ ಬಂದಿರುವುದರಿಂದ ಇದರ ಸಂಖ್ಯೆ ಗಣನೀಯವಾಗಿ ಇಳಿದಿದ್ದು ವಿನಾಶದ ಅಂಚಿನಲ್ಲಿ ನಿಂತಿರುವ ಪ್ರಾಣಿಗಳ ಪೈಕಿ ಇದು ಕೂಡ ಸೇರಿದೆ.[೯]

ಉಲ್ಲೇಖಗಳು[ಬದಲಾಯಿಸಿ]

  1. Groves, C. P. (2005). "SUBFAMILY Colobinae". In Wilson, D. E.; Reeder, D. M (eds.). Mammal Species of the World: A Taxonomic and Geographic Reference (3rd ed.). Johns Hopkins University Press. pp. 167–178. ISBN 978-0-8018-8221-0. OCLC 62265494.
  2. http://pin.primate.wisc.edu/factsheets/entry/gray_langur/taxon
  3. McQuinn, A. (2016). Rowe, N. & Myers, M. (eds.). All the World's Primates. Pogonias Press. pp. 578–579. ISBN 9781940496061.
  4. Anandam, M.V.; Karanth, K.P. & Molur, S. (2013). Mittermeier, R.A.; Rylands, A.B. & Wilson, D.E. (eds.). Handbook of the Mammals of the World. Vol. Volume 3: Primates. Lynx Ediciones. p. 733. ISBN 978-8496553897.
  5. Kumara, H.N.; Kumar, A. & Singh, M. (2020). "Semnopithecus entellus". IUCN Red List of Threatened Species. 2020: e.T39832A17942050. doi:10.2305/IUCN.UK.2020-2.RLTS.T39832A17942050.en. Retrieved 17 January 2022.
  6. Prater 1971, p. 42.
  7. Khajuria 1956.
  8. "Semnopithecus johnii". ITIS Report. ITIS. Retrieved 18 January 2020.
  9. Malviya, M.; Srivastav, A.; Nigam, P.; Tyagi, P. C. (2011). "Indian National Studbook of Nilgiri Langur (Trachypithecus johnii)" (PDF). Wildlife Institute of India, Dehradun and Central Zoo Authority, New Delhi.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಮುಸುವ&oldid=1200956" ಇಂದ ಪಡೆಯಲ್ಪಟ್ಟಿದೆ