ವಿಷಯಕ್ಕೆ ಹೋಗು

ಜೀವಶಾಸ್ತ್ರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜೀವಾಣು ರೆಕ್ಕೆಜೋಪಾದಿಯ ಎಲೆಗಳು
ದುಂಬಿ ಗ್ಯಾಝೆಲ್
ಜೀವಿಗಳ ವೈಚಿತ್ರ್ಯದ ಸಂಶೋದನೆ (clockwise from top-left) ಒಂದು ಜಾತಿಯ ಜೀವಾಣು - ಇ. ಕೋಲಿ, ರೆಕ್ಕೆಜೋಪಾದಿಯ ಎಲೆಗಳುಳ್ಳ ಒಂದು ವಿಧದ ಸಸ್ಯ, ಜಿಂಕೆಯ ಒಂದು ಜಾತಿ ಗ್ಯಾಝೆಲ್, ದುಂಬಿಯ ಜಾತಿಯ ಹುಳ

ಜೀವಶಾಸ್ತ್ರ[ಟಿಪ್ಪಣಿ ೧] ಅಥವಾ ಜೀವವಿಜ್ಞಾನವು ಬದುಕಿರುವ ಜೀವಿಗಳ ಮತ್ತು ಜೀವರಾಶಿಗಳ ಬಗೆಗೆ ಅಧ್ಯಯನ ಮಾಡುವ ಒಂದು ನೈಸರ್ಗಿಕ ವಿಜ್ಞಾನ. ಅದು ಜೀವಿಗಳ ರಚನೆ, ಕಾರ್ಯನಿರ್ವಹಣೆ, ಬೆಳವಣಿಗೆ, ವಿಕಾಸ, ಹಂಚಿಕೆ, ಗುರುತಿಸುವಿಕೆ ಮತ್ತು ಜೀವ ವರ್ಗೀಕರಣಗಳ ಅಧ್ಯಯನವನ್ನು ಒಳಗೊಂಡಿದೆ.[] ಆಧುನಿಕ ಜೀವಶಾಸ್ತ್ರವು ಹಲವು ಶಾಖೆಗಳು ಮತ್ತು ಉಪಶಾಖೆಗಳನ್ನು ಒಳಗೊಂಡ ದೊಡ್ಡ ಮತ್ತು ವಿಶಾಲದೃಷ್ಟಿಯನ್ನು ಹೊಂದಿದ ಕ್ಷೇತ್ರ. ಜೀವಶಾಸ್ತ್ರದ ವಿಶಾಲ ವ್ಯಾಪ್ತಿಯ ಹೊರತಾಗಿಯೂ ಅದರೊಳಗೆ ಅಧ್ಯಯನ ಮತ್ತು ಸಂಶೋಧನೆಗಳನ್ನು ಮುನ್ನಡೆಸಿ ಅದನ್ನು ಒಂದೇ ಮತ್ತು ಸುಸಂಗತ ಕ್ಷೇತ್ರವಾಗಿ ಬೆಸೆಯುವ ಕೆಲವು ಸಾಮಾನ್ಯ ಮತ್ತು ಒಗ್ಗೂಡಿಸುವ ಪರಿಕಲ್ಪನೆಗಳು ಇವೆ. ಸಾಮಾನ್ಯವಾಗಿ ಜೀವಕೋಶ ಮೂಲಭೂತ ಘಟಕ ಎಂದು ಜೀವಶಾಸ್ತ್ರ ಗುರುತಿಸುತ್ತದೆ. ಹಾಗೆಯೇ ಜೀವಶಾಸ್ತ್ರ ಗುರಿತಿಸಿದಂತೆ ಜೀನ್ ಅಥವಾ ವಂಶವಾಹಿಗಳು ಅನುವಂಶಿಕತೆಯ ಮೂಲಭೂತ ಘಟಕಗಳು ಮತ್ತು ವಿಕಾಸವು ಹೊಸ ಸ್ಪೀಶೀಷ್ ಅಥವಾ ಪ್ರಭೇದವನ್ನು ಸಂಯೋಜಿಸುವ ಮತ್ತು ಹುಟ್ಟುಹಾಕುವ ಪ್ರಕ್ರಿಯೆಯನ್ನು ಮುಂತಳ್ಳುವ ಎಂಜಿನ್. ಇಂದು ಅರ್ಥ ಮಾಡಿಕೊಂಡಂತೆ ಎಲ್ಲಾ ಜೀವಿಗಳು ಶಕ್ತಿಯನ್ನು ವ್ಯಯಿಸಿ ಮತ್ತು ರೂಪಾಂತರಿಸಿ ಹಾಗೂ ಸ್ಥಿರ ಮತ್ತು ಬಹುಮುಖ್ಯ ಸ್ಥಿತಿಯಾದ ಸಮಸ್ತಂಭನ ಅಥವಾ ಹೋಮಿಯೊಸ್ಟಾಸಿಸ್ ಎನ್ನುವ ಪ್ರಕ್ರಿಯೆಯ ಮೂಲಕ ಒಳ ವಾತಾವರಣವನ್ನು ನಿಯಂತ್ರಿಸಿ ಬದುಕುತ್ತವೆ.

ಜೀವಶಾಸ್ತ್ರದ ಉಪಶಾಖೆಗಳನ್ನು ಅವುಗಳ ಜೀವಿಯ ಅಧ್ಯಯನ ಪ್ರಮಾಣನುಸಾರ, ಅಧ್ಯಯನ ಮಾಡುವ ಜೀವಿಯ ವರ್ಗ ಮತ್ತು ಅವುಗಳನ್ನು ಅಧ್ಯಯನ ಮಾಡುವ ಪದ್ಧತಿಯ ಮೇಲೆ ವ್ಯಾಖ್ಯಾನಿಸಲ್ಪಟ್ಟಿವೆ. ಜೀವರಸಾಯನಶಾಸ್ತ್ರವು ಜೀವಿರಾಶಿಯ ಮೂಲಭೂತ ರಸಾಯನಶಾಸ್ತ್ರವನ್ನು ಅಧ್ಯಯನ ಮಾಡುತ್ತದೆ: ಅಣ್ವಿಕ ಜೀವಶಾಸ್ತ್ರವು ಜೈವಿಕ ಅಣುಗಳ ಸಂಕೀರ್ಣ ಪರಸ್ಪರ ಕ್ರಿಯೆಯನ್ನು ಪರಿಶೀಲಿಸುತ್ತದೆ: ಸಸ್ಯಶಾಸ್ತ್ರವು ಸಸ್ಯಗಳ ಜೀವಶಾಸ್ತ್ರವನ್ನು ಪರಿಶೀಲಿಸುತ್ತದೆ: ಕೋಶ ಜೀವಶಾಸ್ತ್ರವು (ಜೀವರಾಶಿಯ ಮೂಲಭೂತ ರಚನೆಗಳಾದ ಜೀವಕೋಶಗಳನ್ನು ಅಧ್ಯಯನ ಮಾಡುತ್ತದೆ: ದೇಹಶಾಸ್ತ್ರವು (ಮಾರ್ಫಾಲಜಿ) ಜೀವಿಯ ಅಂಗಾಶಗಳು, ಅಂಗಗಳು ಮತ್ತು ಅಂಗ ವ್ಯವಸ್ಥೆಗಳ ಭೌತಿಕ ಮತ್ತು ರಸಾಯನಿಕ ಕಾರ್ಯನಿರ್ವಹಣೆ ಅಧ್ಯಯನ ಮಾಡುತ್ತದೆ: ವಿಕಸನೀಯ ಜೀವಶಾಸ್ತ್ರವು ಜೀವ ವೈವಿದ್ಯತೆಯನ್ನು ಹುಟ್ಟುಹಾಕಿದ ಪ್ರಕ್ರಿಯೆಯನ್ನು ಪರಿಶೀಲಿಸುತ್ತದೆ; ಮತ್ತು ಪರಿಸರವಿಜ್ಞಾನವು ಜೀವಿಯ ಪರಿಸರದೊಂದಿಗಿನ ಪರಸ್ಪರ ಕ್ರಿಯೆಯನ್ನು ಪರಿಶೀಲಿಸುತ್ತದೆ. []

ಇತಿಹಾಸ

[ಬದಲಾಯಿಸಿ]
ರಾಬರ್ಟ್ ಹುಕ್‌ನ ಹೊಸತನದ ಮೈಕ್ರೋಗ್ರಾಫಿಯಾದಲ್ಲಿನ ಒಂದು ನೊಣದ ಚಿತ್ರ 1665
ಎರ್ನೆಸ್ಟ್ ಹೆಕಲ್‌ನ ಟ್ರೀ ಆಫ್ ಲೈಫ್ (1879)

ಜೀವಶಾಸ್ತ್ರದ ಇಂಗ್ಲೀಶ್‌ನ ಸಂವಾದಿ ಪದವಾದ ಬಯಲಾಜಿ ಎರಡು ಗ್ರೀಕ್ ಪದಗಳಾದ ಬಯೋಸ್ ಅಥವಾ ಜೀವರಾಶಿ ಮತ್ತು ಲಾಜಿಯ ಅಥವಾ ಅಧ್ಯಯನ ಪದಗಳಿಂದ ರೂಪಗೊಂಡಿದೆ.[][] ಈ ಪದವನ್ನು ಲ್ಯಾಟಿನ್ ಭಾಷೆಯ ರೂಪದಲ್ಲಿ ಮೊದಲು ೧೭೩ ೬ರಲ್ಲಿ ಸ್ವೀಡನ್ನಿನ ವಿಜ್ಞಾನಿ ಕಾರ್ಲ್ ಲಿನ್ನೇಯಸ್ ತನ್ನ ಕೃತಿ ಬಿಬ್ಲಿಯೊಥೆಕ ಬೊಟಾನಿಕದಲ್ಲಿ ಬಳಸಿದ. ಮತ್ತೆ ಈ ಪದವನ್ನು ೧೭೬೬ರಲ್ಲಿ ಮೈಕೆಲ್ ಕ್ರಿಸ್ಟೋಫ್ ಹ್ಯಾನೊವ್ ತನ್ನ ಕೃತಿಯಲ್ಲಿ ಬಳಸಿದ. ಜರ್ಮನ್‌ನಲ್ಲಿ ಈ ಪದವನ್ನು ಮೊದಲು ೧೭೭೧ರಲ್ಲಿ ಲಿನ್ನೇಯಸ್ ಕೃತಿಯ ಅನುವಾದದಲ್ಲಿ ಬಳಸಲಾಯಿತು. ೧೭೯೭ರಲ್ಲಿ ಥಿಯೊಡರ್ ಗಾರ್ಗ್ ಅಗಸ್ಟ್‌ ರೂಸ್ ತನ್ನ ಕೃತಿಯ ಮುನ್ನುಡಿಯಲ್ಲಿ ಈ ಪದ ಬಳಸಿದ. ಕಾರ್ಲ್ ಫೆಡ್ರಿಕ್ ಬುರ್‌ಡಾಕ್ ೧೮೦೦ರಲ್ಲಿ ಈ ಪದವನ್ನು ಹೆಚ್ಚು ಸೀಮಿತ ಅರ್ಥದಲ್ಲಿ ಬಳಸಿದ. ಆಧುನಿಕ ಅರ್ಥದಲ್ಲಿ ಈ ಪದವನ್ನು ಗೊಟ್‌ಪ್ರೈಡ್ ರೇನ್‌ಹೋಲ್ಡ್ ಟ್ರೆವಿರಾನಸ್ ತನ್ನ ಆರು ಸಂಪುಟಗಳ ಕೃತಿಯಲ್ಲಿ (೧೮೦೨-೧೮೨೨) ಮಾಡಿದ. ಅವನು ಹೀಗೆ ಹೇಳುತ್ತಾನೆ:[] [ಟಿಪ್ಪಣಿ ೨]

ನಮ್ಮ ಸಂಶೋಧನೆಯ ಉದ್ಧೇಶ ವಿಭಿನ್ನ ರೂಪದಲ್ಲಿ ಮತ್ತು ಅಭಿವ್ಯಕ್ತಿಯಲ್ಲಿ ಜೀವರಾಶಿಗಳ ಅಧ್ಯಯನ, ಯಾವ ಪರಿಸ್ಥಿತಿಯಲ್ಲಿ ಮತ್ತು ನಿಯಮಗಳ ಅಡಿಯಲ್ಲಿ ಈ ವಿದ್ಯಮಾನ ಸಂಭವಿಸುತ್ತದೆ ಮತ್ತು ಯಾವ ಕಾರಣಗಳಿಂದ ಅದು ಪ್ರಭಾವಿತವಾಗುತ್ತದೆ ಎಂಬುದರ ಅಧ್ಯಯನ ಇಲ್ಲಿನ ಉದ್ಧೇಶ. ಈ ಉದ್ಧೇಶ ಹೊಂದಿದ ವಿಜ್ಞಾನವನ್ನು ಜೀವಶಾಸ್ತ್ರ ಅಥವಾ ಜೀವರಾಶಿಯ ತತ್ತ್ವ ಎಂದು ಕರೆಯಬಹುದು.

ಆಧುನಿಕ ಜೀವಶಾಸ್ತ್ರ ಇತ್ತೀಚಿನ ಬೆಳವಣಿಯಾದರೂ ಇದಕ್ಕೆ ಸಂಬಂಧಿಸಿದ ವಿಜ್ಞಾನಗಳು ಮತ್ತು ಇದರೊಳಗೆ ಬರುವ ಜ್ಞಾನಶಾಖೆಗಳನ್ನು ಪ್ರಾಚೀನ ಕಾಲದಿಂದಲೇ ಅಧ್ಯಯನ ಮಾಡಲಾಗಿದೆ. ಪ್ರಾಕೃತಿಕ ತತ್ತ್ವಜ್ಞಾನವನ್ನು ಪ್ರಾಚೀನ ನಾಗರೀಕತೆಗಳಷ್ಟು ಹಿಂದೆಯೇ ಮೆಸೊಪೊಟಾಮಿಯಾ, ಈಜಿಪ್ಟ್, ಭಾರತೀಯ ಉಪಖಂಡ ಮತ್ತು ಚೀನಾಗಳಲ್ಲಿ ಅಧ್ಯಯನ ನಡೆಸಲಾಗಿತ್ತು. ಆದರೆ, ಆಧುನಿಕ ಜೀವಶಾಸ್ತ್ರದ ಹುಟ್ಟು ಮತ್ತು ಪ್ರಕೃತಿಯನ್ನು ಅಧ್ಯಯನ ಮಾಡುವ ರೀತಿಯ ಮೂಲವನ್ನು ಬಹಳಷ್ಟು ಸಲ ಪ್ರಾಚೀನ ಗ್ರೀಕ್‌ನಲ್ಲಿ ಗುರುತಿಸಲಾಗುತ್ತದೆ.[][] ವೈದ್ಯಕೀಯವನ್ನು ಸಂಪ್ರದಾಯಿಕವಾಗಿ ಹಿಪೋಕ್ರಟೀಸ್ (ಕ್ರಿ ಪೂ ೪೬೦ – ಕ್ರಿ ಪೂ ೩೭೦) ನಲ್ಲಿ ಗುರುತಿಸಿದರೆ ಜೀವಶಾಸ್ತ್ರದ ಬೆಳವಣಿಗೆಗೆ ವಿಸೃತ ಕೊಡುಗೆ ಕೊಟ್ಟವನೆಂದರೆ ಅರಿಸ್ಟಾಟಲ್ (ಕ್ರಿ ಪೂ ೩೮೪ – ಕ್ರಿ ಪೂ ೩೨೨). ಅದರಲ್ಲೂ ಮುಖ್ಯವಾದುದು ಅವನ ಪ್ರಾಣಿಗಳ ಇತಿಹಾಸ. ಇದು ಮತ್ತು ಇತರ ಕೃತಿಗಳು ಅವನ ನಿಸರ್ಗವಾದಿ ಒಲವನ್ನು ತೋರುತ್ತವೆ. ಅವನ ಇತರ ಕೃತಿಗಳು ಹೆಚ್ಚು ಪ್ರಯೋಗವಾದಿಯಾಗಿದ್ದು ಜೈವಿಕ ಕಾರಣಗಳು ಮತ್ತು ಜೀವ ವೈವಿದ್ಯತೆಯ ಕಡೆ ಗಮನಹರಿಸಿದವು. ಲೈಸೆಮ್‌ನಲ್ಲಿ ಅರಿಸ್ಟಾಟಲ್‌ನ ವಾರಸುದಾರನಾದ ಥಿಯೊಫ್ರಟಸ್ ಸಸ್ಯಶಾಸ್ತ್ರದ ಮೇಲೆ ಸರಣಿ ಪುಸ್ತಕಗಳನ್ನು ಬರೆದ ಮತ್ತು ಇವು ಸಸ್ಯ ವಿಜ್ಞಾನಕ್ಕೆ ಪ್ರಾಚೀನ ಕಾಲದ ಅತ್ಯಂತ ಮಹತ್ವದ ಕೊಡುಗೆಗಳಾಗಿ ಮಧ್ಯಕಾಲೀನ ಯುಗದಲ್ಲಿಯೂ ಉಳಿದುಕೊಂಡು ಬಂದಿದ್ದವು.[]

ಜೀವಶಾಸ್ತ್ರದ ಮೇಲೆ ಬರೆದ ಮಧ್ಯಕಾಲೀನ ಇಸ್ಲಾಮ್ ಸಂಸ್ಕೃತಿಯ ವಿದ್ವಾಂಸರಲ್ಲಿ ಅಲ್-ಜಹೀಜ್ (781-869), ಸಸ್ಯಶಾಸ್ತ್ರದ ಮೇಲೆ ಬರೆದ ಅಲ್‌-ದೀನವರೀ (828-896) ಮತ್ತು ಅಂಗರಚನಾಶಾಸ್ತ್ರ ಹಾಗೂ ದೇಹಶಾಸ್ತ್ರದ ಮೇಲೆ ಬರೆದ[] ರಝೆಸ್ (865-925)ರು ಸೇರಿದ್ದಾರೆ. ವೈದ್ಯಕೀಯವನ್ನು ವಿಶೇಷವಾಗಿ ಗ್ರೀಕ್ ತತ್ತ್ವಜ್ಞಾನ ಸಂಪ್ರದಾಯದಾಯದ ಇಸ್ಲಾಮ್ ವಿದ್ವಾಂಸರು ಅದ್ಯಯನ ಮಾಡಿದರು ಮತ್ತು ಪ್ರಾಕೃತಿಕ ಇತಿಹಾಸದಲ್ಲಿ ಅರಿಸ್ಟಾಟಲ್‌ನ ಚಿಂತನೆಗಳಿಂದ ವಿಶೇಷವಾಗಿ ಅವನ ಜೀವಿಗಳ ಸ್ಥಿರ ಶ್ರೇಣಿ ವ್ಯವಸ್ಥೆಯ ಚಿಂತನೆಯನ್ನು ಬಹಳವಾಗಿ ಬಳಸಿದರು. ಆಂಟನ್ ವಾನ್ ಲೀವೆನ್‌ಹಾಕ್‌ನ ಸೂಕ್ಷದರ್ಶಕದ ನಾಟಕೀಯ ಸುಧಾರಣೆಯೊಂದಿಗೆ ಜೀವಶಾಸ್ತ್ರವು ವೇಗವಾಗಿ ಬೆಳೆಯತೊಡಗಿತು. ಈ ನಂತರವೇ ವಿದ್ವಾಂಸರು ರೇತ್ರಾಣು, ಬ್ಯಾಕ್ಟೀರಿಯ, ಇಂಫುಸೋರಿಯಾ (ತೀರಾ ಚಿಕ್ಕ ಜಲವಾಸಿ ಜೀವಿಗಳು) ಮತ್ತು ಸೂಕ್ಷಜೀವಿ ಪ್ರಪಂಚದ ವೈವಿಧ್ಯತೆಯನ್ನು ಕಂಡುಹಿಡಿದರು. ಜಾನ್ ಸ್ವಮೆರಡಮ್‌ನ ಪರಿಶೀಲನೆಗಳು ಕೀಟಶಾಸ್ತ್ರದಲ್ಲಿ ಹೊಸ ಆಸಕ್ತಿ ಬೆಳೆಯುವಂತೆ ಮಾಡಿದವು ಮತ್ತು ಛೇದನ (ಡಿಸೆಕ್ಟಶನ್) ಹಾಗೂ ಬಣ್ಣಹಾಕುವ (ಸ್ಟೇನಿಂಗ್) ತಂತ್ರಗಳು ಅಭಿವೃದ್ಧಿ ಹೊಂದುವಲ್ಲಿ ಸಹಾಯ ಮಾಡಿದವು.[೧೦]

ಸೂಕ್ಷ್ಮದರ್ಶಕದ ಪ್ರಗತಿಯು ಸಹ ಜೀವಶಾಸ್ತ್ರದ ಚಿಂತನೆಯ ಮೇಲೆ ದೊಡ್ಡ ಪ್ರಬಾವ ಬೀರಿತು. 19ನೆಯ ಶತಮಾನದ ಆರಂಭದಲ್ಲಿ ಹಲವು ಜೀವವಿಜ್ಞಾನಿಗಳು ಜೀವಕೋಶದ ಪ್ರಾಮುಖ್ಯತೆಯ ಬಗೆಗೆ ಗಮನ ಸೆಳೆದಿದ್ದರು. ೧೮೩೮ರಲ್ಲಿ ಸ್ಕಲೆಡೆನ್ ಮತ್ತು ಸ್ಕವಾನ್ನ್ ಸಾರ್ವತ್ರಿಕ ಚಿಂತನೆಗಳನ್ನು ಪ್ರೋತ್ಸಾಹಿಸಿದರು. ೧) ಜೀವಿಯ ಮೂಲಭೂತ ಘಟಕ ಜೀವಕೋಶ ೨) ಜೀವಕೋಶ ಒಂದು ಜೀವರಾಶಿಯ ಎಲ್ಲ ಲಕ್ಷಣಗಳನ್ನು ಹೊಂದಿದೆ. ಆದರೆ ೩) ಎಲ್ಲಾ ಜೀವಕೋಶಗಳು ಇತರ ಜೀವಕೋಶಗಳ ವಿಭಜನೆಯಿಂದ ಬಂದವು ಎಂಬ ಚಿಂತನೆಯನ್ನು ಅವರು ವಿರೋದಿಸಿದರು. ೧೮೬೦ರ ದಶಕಕ್ಕಾಗಲೇ ರಾಬರ್ಟ್ ರಿಮಾರ್ಕ್ ಮತ್ತು ರೊಡಾಲ್ಫ್ ವಿರ್‌ಚೊ ಅವರ ಸಂಶೋಧನೆಯಿಂದಾಗಿ ಬಹುತೇಕ ಜೀವವಿಜ್ಞಾನಿಗಳು ಮುಂದೆ ಜೀವಕೋಶ ಸಿದ್ಧಾಂತ ಎಂದು ಹೆಸರು ಪಡೆದ ಚಿಂತನೆಯ ಮೂರು ತತ್ತ್ವಗಳನ್ನು ಒಪ್ಪಿಕೊಂಡಿದ್ದರು.[೧೧][೧೨]

ಈ ನಡುವೆ ಜೀವ ವರ್ಗೀಕರಣವು ಪ್ರಾಕೃತಿಕ ಇತಿಹಾಸಕಾರರ ಪ್ರಮುಖ ವಿಷಯವಾಯಿತು. ಕಾರ್ಲ್ ಲಿನ್ನೇಯಸ್ ೧೭೩೫ರಲ್ಲಿ ಪ್ರಧಾನ ಪ್ರಾಕೃತಿಕ ಪ್ರಪಂಚದ ಜೀವವರ್ಗೀಕರಣವನ್ನು ಪ್ರಕಟಿಸಿದ (ಇಂದೂ ಸಹ ತುಸು ಬದಲಾವಣೆಯೊಂದಿಗೆ ಇದನ್ನೇ ನಾವು ಬಳಸುತ್ತಿದ್ದೇವೆ) ಮತ್ತು ೧೭೫೦ರ ದಶಕದಲ್ಲಿ ಎಲ್ಲಾ ಪ್ರಭೇದಗಳಿಗೆ ವೈಜ್ಞಾನಿಕ ಹೆಸರು ಕೊಡುವುದನ್ನು ಚಾಲ್ತಿಗೆ ತಂದ[೧೩] ಜಾರ್ಜಸ್-ಲೂಯಿಸ್ ಲೆಕ್ಲಾರ್ಕ್, ಕಾಮ್ಟೆ ಡಿ ಬಪ್ಫನ್ ಪ್ರಭೇದಗಳನ್ನು ಕೃತ್ರಿಮ ವರ್ಗಗಳೆಂದು ಮತ್ತು ಜೀವಿಗಳು ಹೊಂದಿಕೊಳ್ಳುವ ಗುಣ ಉಳ್ಳವೆಂತಲೂ, ಸಾಮಾನ್ಯ ವಂಶದಿಂದ ಬಂದಿರುವ ಸಾಧ್ಯತೆಯನ್ನು ಸಹ ಸೂಚಿಸಿದ್ದರು. ಬಪ್ಫನ್ ವಿಕಾಸ ಚಿಂತನೆಯನ್ನು ವಿರೋಧಿಸಿದಾಗ್ಯೂ ಅವನು ವಿಕಾಸ ಚಿಂತನೆಯ ಇತಿಹಾಸದಲ್ಲಿ ಪ್ರಮುಖ ಹೆಸರು ಮತ್ತು ಅವನ ಕೃತಿಗಳು ಲೆಮಾರ್ಕ್ ಮತ್ತು ಡಾರ್ವಿನ್‌ನ ವಿಕಾಸ ಸಿದ್ಧಾಂತಗಳನ್ನು ಪ್ರಭಾವಿಸಿದವು.[೧೪]

ವಿಕಾಸದ ಬಗೆಗಿನ ಗಂಭೀರ ಚಿಂತನೆಯು ಸಂಗತ ವಿಕಾಸ ಸಿದ್ಧಾಂತವನ್ನು ಮೊದಲ ಬಾರಿಗೆ ಮಂಡಿಸಿದ ಜೀನ್-ಬಾಪ್ಟಿಸ್ಟೆ ಲೆಮಾರ್ಕ್‌ನಿಂದ ಆರಂಭವಾಯಿತು.[೧೫] ಅವನ ಚಿಂತನೆಯ ಪ್ರಕಾರ ವಿಕಾಸವು ಜೀವಿಗಳ ಮೇಲೆ ಪರಿಸರದ ಒತ್ತಡದಿಂದ ಉಂಟಾಗಿದೆ. ಇದರ ಅರ್ಥವೆಂದರೆ ಹೆಚ್ಚು ಸಲ ಮತ್ತು ಹೆಚ್ಚು ತೀವ್ರವಾಗಿ ಬಳಸಿದ ಅಂಗಗಳು ಹೆಚ್ಚು ಸಂಕೀರ್ಣ ಮತ್ತು ದಕ್ಷವಾಗುವ ಮೂಲಕ ಜೀವಿಯನ್ನು ಪರಿಸರಕ್ಕೆ ಹೊಂದಿಕೊಳ್ಳುವಂತೆ ಮಾಡುತ್ತವೆ. ಹೀಗೆ ಪಡೆದ ಗುಣಗಳು ಮುಂದಿನ ಸಂತಾನಕ್ಕೆ ಕೊಡಲ್ಪಡುತ್ತವೆ ಮತ್ತು ನಂತರದ ಪೀಳಿಗೆಗಳು ಹಾಗೆ ಕೊಡಲ್ಪಟ್ಟ ಗುಣಗಳನ್ನು ಅಭಿವೃದ್ಧಿ ಪಡಿಸಿ, ಹೆಚ್ಚು ಪರಿಪೂರ್ಣ ಮಾಡುತ್ತವೆ ಎಂದು ಲೆಮಾರ್ಕ್ ಎಂದು ಭಾವಿಸಿದ.[೧೬] ಬ್ರಿಟನ್ನಿನ ನಿಸರ್ಗವಾದಿ ಚಾರ್ಲ್‌ಸ್ ಡಾರ್ವಿನ್ ಹಮ್‌ಬೋಲ್ಟ್‌ನ ಜೀವಭೂಗೋಳಶಾಸ್ತ್ರ ಮಾರ್ಗ, ಲೆಲ್ಲೆಯ ಏಕರೂಪಪ್ರಕ್ರಿಯವಾದಿ ಭೂವಿಜ್ಞಾನ, ಜನಸಂಖ್ಯೆ ಬೆಳವಣಿಗೆಗಳ ಬಗೆಗಿನ ಮಾಲಥಸ್‌ನ ಬರಹಗಳು ಮತ್ತು ತನ್ನ ರೂಪವಿಜ್ಞಾನದಲ್ಲಿನ ಪರಿಣಿತಿ ಹಾಗೂ ವಿಸೃತ ನಿಸರ್ಗದ ಅವಲೋಕನಗಳನ್ನು ಒಟ್ಟುಗೂಡಿಸಿ ನೈಸರ್ಗಿಕ ಆಯ್ಕೆ ಆಧಾರದ ಮೇಲೆ ಯಶಸ್ವಿ ವಿಕಾಸ ಸಿದ್ಧಾಂತವನ್ನು ರೂಪಿಸಿದ. ಇಂತಹುದೇ ಕಾರಣಗಳು ಮತ್ತು ಸಾಕ್ಷಿಗಳು ಅಲ್‌ಫ್ರೆಡ್ ರಸಲ್ ವಾಲೆಸ್‌ನನ್ನು ಸ್ವತಂತ್ರವಾಗಿ ಇಂತಹುದೇ ನಿರ್ಣಯಕ್ಕೆ ಬರುವಂತೆ ಮಾಡಿದವು. [೧೭][೧೮] ವಿಕಾಸವು ವಿವಾದಕ್ಕೆ ಒಳಗಾದಾಗ್ಯೂ (ವಿವಾದ ಇಂದೂ ಮುಂದುವರೆದಿದೆ) ವಿಜ್ಞಾನಿ ಸಮುದಾಯದಲ್ಲಿ ತ್ವರಿತವಾಗಿ ಹರಡಿತು ಮತ್ತು ಸ್ವಲ್ಪ ಕಾಲದಲ್ಲಿಯೇ ವೇಗವಾಗಿ ಬೆಳೆಯುತ್ತಿರುವ ಜೀವಶಾಸ್ತ್ರದ ಕೇಂದ್ರ ಸೂತ್ರವಾಯಿತು.

ಅನುವಂಶಿಕತೆಯ ಭೌತಿಕ ಪ್ರಾತಿನಿಧ್ಯವು ವಿಕಾಸ ಸೂತ್ರಗಳು ಮತ್ತು ಪಾಪುಲೇಶನ್ ಜೆನೆಟಿಕ್ಸ್ಗಳೊಂದಿಗೆ (ಪಾಪುಲೇಶನ್ ಜೆನೆಟಿಕ್ಸ್) ಕಂಡುಹಿಡಿಯಲ್ಪಟ್ಟಿತು. 1940ರ ದಶಕ ಮತ್ತು ಆರಂಭಿಕ ೧೯೫೦ರ ದಶಕದ ಪ್ರಯೋಗಗಳು ಜೀನ್ ಅಥವಾ ವಂಶವಾಹಿ ಎಂದು ಕರೆಯಲಾದ ಜೀವಿಯ ಗುಣಲಕ್ಷಣಗಳನ್ನು ಒಯ್ಯುವ ಘಟಕಗಳು ವರ್ಣತಂತುಗಳ (ಕ್ರೋಮೋಸೋಮ್) ಮೇಲೆ ಇರುತ್ತವೆಂತಲೂ, ಡಿಎನ್‌ಎ ಈ ವರ್ಣತಂತುವಿನ ಭಾಗವೆಂತಲೂ ಸೂಚಿಸುತ್ತಿದ್ದವು. ವೈರಾಣು ಮತ್ತು ಬ್ಯಾಕ್ಟಿರಿಯಗಳಂತಹ ಹೊಸ ಜೀವಿಗಳ ಮೇಲೆ ಕೇಂದ್ರೀಕರಣ ಇದರೊಂದಿಗೆ ೧೯೫೩ರಲ್ಲಿ ಡಿಎನ್‌ಎ ಎರಡು ಸುರುಳಿಗಳ ರಚನೆಯ ಕಂಡುಹಿಡಿಯುವಿಕೆ ಅಣ್ವಿಕ ಜೀವಶಾಸ್ತ್ರ (ಮಾಲೆಕ್ಯುಲರ್ ಬಯಾಲಜಿ) ಯುಗಕ್ಕೆ ನಾಂದಿ ಹಾಡಿತು. ಡಿಎನ್ಎಗಳಲ್ಲಿ ಕೊಡಾನುಗಳು ಇರುತ್ತವೆಂದು ಅರಿತ ಮೇಲೆ ಹರ್‌ ಗೋಬಿಂದ್ ಖುರಾನ, ರಾಬರ್ಟ್ ಡಬ್ಲು. ಹೋಲೆ ಮತ್ತು ಮಾರ್ಷಲ್ ವಾರೆನ್ ನಿರೆನ್‌ಬರ್ಗ್ ಜೆನೆಟಿಕ್ ಸಂಕೇತಗಳನ್ನು ಬಿಡಿಸಿದರು. ಕೊನೆಯದಾಗಿ ೧೯೯೦ರಲ್ಲಿ ಸಾಮಾನ್ಯ ಮಾನವನ [[ಜಿನೋಮ್‌ನಿ ನಕಾಶೆ ತಯಾರಿಸುವ ಉದ್ಧೇಶದಿಂದ ಮಾನವ ಜೀನೋಮ್ ಪ್ರಾಜೆಕ್ಟ್ ರೂಪತಳೆಯಿತು. ಈ ಪ್ರಾಜೆಕ್ಟ್ ಸಾರಭೂತವಾಗಿ ೨೦೦೩ರಲ್ಲಿಯೇ ಪೂರ್ಣಗೊಂಡಿತು[೧೯] ಮತ್ತು ವಿಶ್ಲೇಷಣೆಯೊಂದಿಗೆ ಅದನ್ನಿನ್ನೂ ಪ್ರಕಟಿಸ ಬೇಕಿದೆ. ಮಾನವ ಜೀನೋಮ್ ಪ್ರಾಜೆಕ್ಟ್ ಸಂಚಿತ ಜೀವಶಾಸ್ತ್ರದ ಜ್ಞಾನವನ್ನು ಮಾನವನ ಮತ್ತು ಇತರ ಜೀವಿಗಳ ದೇಹಗಳ ಕಾರ್ಯನಿರ್ವಹಣೆಯ, ಅಣು ವಾಖ್ಯಾನ ಮಾಡಲು ಇರಿಸಿದ ಜಾಗತಿಕ ಪ್ರಯತ್ನದ ಮೊದಲ ಹೆಜ್ಜೆ.

ಆಧುನಿಕ ಜೀವವಿಜ್ಞಾನದ ತಳಪಾಯ

[ಬದಲಾಯಿಸಿ]

ಜೀವಕೋಶ ಸಿದ್ಧಾಂತ

[ಬದಲಾಯಿಸಿ]
ಮಾನವ ಕ್ಯಾನ್ಸರ್ ಜೀವಕೋಶಗಳು ನೀಲಿ ಬಣ್ಣದಲ್ಲಿರುವ ನ್ಯೂಕ್ಲಿಯಸ್‌ನೊಂದಿಗೆ (ವಿಶೇಷವಾಗಿ ಡಿಎನ್ಎ). ಎಡಗಡೆ ಇರುವ ಜೀವಕೋಶ ಮೈಟಾಸಿಸ್ ವಿಭಜನೆಯ ಹಂತದಲ್ಲಿದ್ದು ಅದರ ಡಿಎನ್ಎ ಸಾಂದ್ರಗೊಂಡಿದೆ.

ಜೀವಕೋಶ ಸಿದ್ಧಾಂತ ಜೀವರಾಶಿಯ ಮೂಲಭೂತ ಘಟಕ ಜೀವಕೋಶವೆಂತಲೂ ಮತ್ತು ಎಲ್ಲಾ ಜೀವಿಗಳೂ ಒಂದು ಅಥವಾ ಅದಕ್ಕೂ ಹೆಚ್ಚು ಜೀವಕೋಶಗಳನ್ನು ಅಥವಾ ಈ ಜೀವಕೋಶಗಳು ದ್ರವಿಸಿದ ಉತ್ಪನ್ನಗಳನ್ನು ಹೊಂದಿರುತ್ತವೆ (ಉದಾ. ಚಿಪ್ಪುಗಳು, ಕೂದಲುಗಳು ಮತ್ತು ಉಗುರುಗಳು ಮುಂ.) ಎಂದು ಹೇಳುತ್ತದೆ. ಎಲ್ಲಾ ಜೀವಕೋಶಗಳು ಇತರ ಜೀವಕೋಶಗಳಿಂದ ಜೀವಕೋಶ ವಿಭಜನೆಯಿಂದು ಹುಟ್ಟುತ್ತವೆ. ಬಹುಜೀವಕೋಶ ಜೀವಿಗಳಲ್ಲಿನ ಎಲ್ಲಾ ಜೀವಕೋಶಗಳೂ ಫಲೀಕರಿಸಿದ ಅಂಡದಲ್ಲಿರುವ ಒಂದೇ ಜೀವಕೋಶದಿಂದ ಬಂದಿರುತ್ತವೆ. ಹಲವು ರೋಗ ಪ್ರಕ್ರಿಯೆಗಳಲ್ಲಿಯೂ ಜೀವಕೋಶ ಪ್ರಾಥಮಿಕ ಘಟಕ. ಜೊತೆಗೆ, ಜೀವಕೋಶದಲ್ಲಿ ಶಕ್ತಿ ಹರಿಯುವಿಕೆ ವಿದ್ಯಮಾನವು ಮೆಟಬಾಲಿಸಂ ಅಥವಾ ಚಯಾಪಚಯ ಎಂಬ ಕ್ರಿಯೆಯ ಭಾಗವಾಗಿ ನಡೆಯುವ ಪ್ರಕ್ರಿಯೆಗಳ ಅಂಗವಾಗಿ ನಡೆಯುತ್ತದೆ. ಕೊನೆಯದಾಗಿ, ಜೀವಕೋಶಗಳು ಅನುವಂಶಿಕ ಮಾಹಿತಿಯನ್ನು (ಡಿಎನ್ಎ) ಹೊಂದಿದ್ದು ಇದು ಜೀವಕೋಶ ವಿಭಜನೆಯ ವೇಳೆಯಲ್ಲಿ ಜೀವಕೋಶದಿಂದ ಜೀವಕೋಶಕ್ಕೆ ರವಾನಿಸಲ್ಪಡುತ್ತದೆ.

ವಿಕಾಸ

[ಬದಲಾಯಿಸಿ]
ಕಪ್ಪು ಬಣ್ಣದ ಜೀವಿಗಳ ನೈಸರ್ಗಿಕ ಆಯ್ಕೆ

ಜೀವಶಾಸ್ತ್ರದ ಸಂಘಟಿಸುವ ಕೇಂದ್ರ ಪರಿಕಲ್ಪನೆ ಪ್ರಕಾರ ಜೀವಿಗಳು ಬದಲಾಗುತ್ತವೆ ಮತ್ತು ವಿಕಾಸದ ಮೂಲಕ ವೃದ್ಧಿಯಾಗುತ್ತವೆ ಹಾಗೂ ಎಲ್ಲಾ ತಿಳಿದ ಜೀವ ಸ್ವರೂಪಕ್ಕೂ ಸಾಮಾನ್ಯ ಹುಟ್ಟು ಇದೆ. ಭೂಮಿಯ ಮೇಲಿರುವ ಎಲ್ಲಾ ಬದುಕಿರುವ ಮತ್ತು ಅಳಿದ ಜೀವಿಗಳೂ ಸಾಮಾನ್ಯ ಪೂರ್ವಜನಿಂದ ಅಥವಾ ಸಾಮಾನ್ಯ ವಂಶವಾಹಿ ಸಂಗ್ರಹದಿಂದ ಬಂದಿವೆ ಎಂದು ವಿಕಾಸ ಸಿದ್ಧಾಂತ ಹೇಳುತ್ತದೆ. ಎಲ್ಲಾ ಜೀವಿಗಳ ಈ ಕೊನೆಯ ಸಾಮಾನ್ಯ ಪೂರ್ವಜ ಸುಮಾರು ೩೫೦ ಕೋಟಿ ವರುಷಗಳ ಹಿಂದೆ ಕಾಣಿಸಿಕೊಂಡಿತು ಎಂದು ಅದು ನಂಬುತ್ತದೆ.[೨೦] ಜೀವವಿಜ್ಞಾನಿಗಳು ಸಾಮಾನ್ಯವಾಗಿ ಜೆನೆಟಿಕ್ ಕೋಡ್‌ನ ಸರ್ವವ್ಯಾಪಕತೆ ಮತ್ತು ಎಲ್ಲಾ ಕಡೆಯ ಇರುವಿಕೆಯು ಎಲ್ಲಾ ಬ್ಯಾಕ್ಟೀರಿಯ, ಆರ್ಕಿಯಾಗಳು (ಏಕಜೀವಕೋಶ ಜೀವಿಗಳು ಮತ್ತು ಪ್ರೊಕ್ಯಾರಿಯಟ್‌ಗಳು ಅಥವಾ ಜೀವಕೋಶದ ಅಂಗಕ ಅಥವಾ ಆರ್ಗನೆಲ್‌ಗಳಿಗೆ ಪೊರೆ ಇಲ್ಲ) ಮತ್ತು ಯುಕ್ಯಾರಿಯಟ್‌ಗಳಿಗೆ (ಜೀವಕೋಶದ ಅಂಗಕಗಳಿಗೆ ಪೊರೆ ಇರುತ್ತದೆ) ಸರ್ವ ಸಾಮಾನ್ಯ ಪೂರ್ವಜ ಸಿದ್ಧಾತಕ್ಕೆ ಖಚಿತ ಸಾಕ್ಷಿ (ನೋಡಿ: ಜೀವದ ಹುಟ್ಟು) ಎಂದು ಭಾವಿಸುತ್ತಾರೆ. [೨೧]

ವಿಜ್ಞಾನ ಪದವಾಗಿ ೧೮೦೯ರಲ್ಲಿ ಜೀನ್-ಬಾಪ್ಟಿಸ್ಟೇ ಡಿ ಲೆಮಾರ್ಕ್ ಬಳಕೆಗೆ ತಂದ ವಿಕಾಸವು [೨೨] ಐವತ್ತು ವರ್ಷಗಳ ನಂತರ ಚಾರ್ಲ್‌ಸ್‌ ಡಾರ್ವಿನ್‌ನಿಂದ ಕಾರ್ಯಸಾಧ್ಯ ವೈಜ್ಞಾನಿಕ ಮಾದರಿಯಾಗಿ ಅದರ ಚಾಲನ ಶಕ್ತಿ ನೈಸರ್ಗಿಕ ಆಯ್ಕೆ ಎಂದು ಸ್ಫುಟವಾಗಿ ಹೇಳಿದಾಗ ಸ್ಥಾಪಿತವಾಯಿತು.[೨೩][೨೪][೨೫] (ಈ ಪರಿಕಲ್ಪನೆಯ ಬಗೆಗಿನ ಸಂಶೋಧನೆಗಳು ಮತ್ತು ಪ್ರಯೋಗಗಳ ಹಿನ್ನೆಲೆಯಲ್ಲಿ ಡಾರ್ವಿನ್‌ ಜೊತೆಗೆ ಅಲ್‌ಫ್ರೆಡ್ ರಸಲ್ ವಾಲೆಸ್ ಜಂಟಿಯಾಗಿ ಈ ಪರಿಕಲ್ಪನೆಯನ್ನು ಕಂಡುಹಿಡಿದ ಎಂದು ಗುರುತಿಸಲಾಗಿದೆ.[೨೬]) ಭೂಮಿಯ ಮೇಲಿನ ಜೀವಿಗಳ ದೊಡ್ಡ ಮಟ್ಟದ ವ್ಯತ್ಯಾಸಕ್ಕೆ ಕಾರಣ ವಿಕಾಸ ಎಂದು ಈಗ ವಿವರಿಸಲಾಗುತ್ತಿದೆ.

ಡಾರ್ವಿನ್ ಪ್ರಭೇದಗಳು ಮತ್ತು ತಳಿಗಳು ನೈಸರ್ಗಿಕ ಆಯ್ಕೆ ಮತ್ತು ಕೃತಿಮ ಆಯ್ಕೆ ಅಥವಾ ಆಯ್ದ ತಳಿಗಳ ಬೆಳುಸುವಿಕೆಯ ಮೂಲಕ ಅಭಿವೃದ್ಧಿ ಹೊಂದುತ್ತವೆ ಎಂದು ಸಿದ್ಧಾಂತೀಕರಿಸಿದ.[೨೭] ಜೆನೆಟಿಕ್ ಚಲನೆ ಅಥವಾ ಜೆನೆಟಿಕ್ ಡ್ರಿಫ್ಟ್‌ನ್ನು ಸಿದ್ಧಾಂತದ ಆಧುನಿಕ ವಿಕಸನೀಯ ಸಂಯೋಜನೆಯಲ್ಲಿ ವಿಕಾಸ ಪ್ರಕ್ರಿಯೆಯ ಒಂದು ಹೆಚ್ಚುವರಿ ಶಕ್ತಿಯಾಗಿ ಪರಿಗಣಿಸಲಾಯಿತು.[೨೮]

ಪ್ರಭೇದದ ವಿಕಾಸದ ಇತಿಹಾಸವು ತಾನು ಹುಟ್ಟಿದ ವಂಶದ ಬೇರೆ ಬೇರೆ ಸ್ಪೀಷಿಸ್‌ಗಳ ಗುಣಲಕ್ಷಣಗಳು ಮತ್ತು ಇದರೊಂದಿಗೆ ಇತರ ಪ್ರಭೇದಗಳೊಂದಿಗಿನ ವಂಶಾವಳಿ ಸಂಬಂಧವನ್ನು ಒಟ್ಟಾರೆಯಾಗಿ ಫೈಲೊಜೆನಿ ಅಥವಾ ಜೀವಿಯ ವಂಶವೃಕ್ಷ ಎಂದು ಕರೆಯಲಾಗಿದೆ. ಪೈಲೊಜೆನಿ ಮಾಹಿತಿ ಪಡೆಯಲು ಜೀವಶಾಸ್ತ್ರದ ಬಗೆಗೆ ತೀರ ಭಿನ್ನ ಮಾರ್ಗಗಳನ್ನು ಅನುಸರಿಸಲಾಗುತ್ತಿದೆ. ಇವು ಅಣ್ವಿಕ ಜೀವಶಾಸ್ತ್ರ ಅಥವಾ ಜೀನೋಮಿಕ್ಸ್[ಟಿಪ್ಪಣಿ ೩]ಗಳಲ್ಲಿ ನಡೆಯುವ ಡಿಎನ್‌ಎ ಸರಣಿಗಳ ಹೋಲಿಕೆ ಮತ್ತು ಪ್ರಾಗ್ಜೀವಶಾಸ್ತ್ರದಲ್ಲಿ ಪ್ರಾಚೀನ ಜೀವಿಗಳ ಪಳಿಯುಳಿಕೆಗಳು ಮತ್ತು ಇತರ ದಾಖಲೆಗಳ ಪರಿಶೀಲನೆಯನ್ನು ಒಳಗೊಂಡಿದೆ.[೨೯] ಜೀವವಿಜ್ಞಾನಿಗಳು ಬೇರೆ ಬೇರೆ ಪದ್ಧತಿಗಳ ಮೇಲೆ ವಿಕಾಸ ಸಂಬಂಧವನ್ನು ಸಂಘಟಿಸುತ್ತಾರೆ ಮತ್ತು ವಿಶ್ಲೇಷಿಸುತ್ತಾರೆ. ಇಂತಹ ಪದ್ಧತಿಗಳು ಫೈಲೊಜೆನೆಟಿಕ್ಸ್, ಟ್ಯಾಕ್ಸಿಮೆಟ್ರಿಕ್ಸ್[ಟಿಪ್ಪಣಿ ೪] ಮತ್ತು ಏಕಮೂಲವರ್ಗ[ಟಿಪ್ಪಣಿ ೫]ಗಳನ್ನು ಒಳಗೊಂಡಿವೆ.

ತಳಿವಿಜ್ಞಾನ

[ಬದಲಾಯಿಸಿ]
ನೇರಳೆ (B) ಹಾಗೂ ಬಿಳಿಯ (b) ಬಣ್ಣಗಳ ಹೂವಿನ ಭಿನ್ನಯುಗ್ಮಜ ಸಸ್ಯಗಳ ನಡುವಿನ ಸಂಕರವನ್ನು ಸೂಚಿಸುವ ಪುನ್ನೆಟ್ ಚೌಕ[ಟಿಪ್ಪಣಿ ೬]

ಎಲ್ಲಾ ಜೀವಿಗಳಲ್ಲಿಯೂ ವಂಶವಾಹಿಗಳು ಅನುವಂಶಿಕತೆಯ ಪ್ರಾಥಮಿಕ ಘಟಕಗಳು. ವಂಶವಾಹಿಗಳು ಜೀವಿಯ ಸ್ವರೂಪ ಮತ್ತು ಕಾರ್ಯನಿರ್ವಹಣೆಯನ್ನು ನಿರ್ದಿಷ್ಟವಾಗಿ ಪ್ರಭಾವಿಸು ಡಿಎನ್ಎ ಪ್ರದೇಶವೊಂದಕ್ಕೆ ಸಂವಾದಿಯಾಗಿರುತ್ತವೆ. ಬ್ಯಾಕ್ಟೀರಿಯದಿಂದ ಪ್ರಾಣಿಗಳವರೆಗೆ ಎಲ್ಲ ಜೀವಿಗಳೂ ಡಿಎನ್ಎ ನಕಲು ಮಾಡುವ ಮತ್ತು ಅದನ್ನು ಪ್ರೋಟೀನ್ ಆಗಿ ಅನುವಾದಿಸುವ ಒಂದೇ ರೀತಿಯ ಯಂತ್ರಾಂಗವನ್ನು ಹೊಂದಿವೆ. ಜೀವಕೋಶಗಳು ಡಿಎನ್‌ಎ ವಂಶವಾಹಿಯನ್ನು ಅದರ ಆರ್‌ಎನ್ಎ ಆವೃತ್ತಿಯಾಗಿ ಲಿಪ್ಯಂತರ ಮಾಡುತ್ತವೆ ಮತ್ತು ನಂತರ ರಿಬೋಸೋಮ್ [ಟಿಪ್ಪಣಿ ೭] ಆರ್‌ಎನ್ಎಯನ್ನು ಅಮಿನೊ ಆಮ್ಲ ಸರಣಿಯಾದ ಪ್ರೋಟೀನ್‌ಗೆ ಅನುವಾದಿಸುತ್ತದೆ. ಆರ್‌ಎನ್‌ಎ ಕೋಡಾನ್‌]ನಿಂದ ಅಮಿನೋ ಆಮ್ಲ ತಯಾರಿಸಲು ಇರುವ ಅನುವಾದ ಸಂಕೇತ ಬಹುತೇಕ ಜೀವಿಗಳಲ್ಲಿ ಒಂದೇ, ಕೆಲ ಜೀವಿಗಳಲಷ್ಟೇ ಇದು ತುಸು ಬದಲಿ ಇದೆ. ಉದಾಹರಣೆಗೆ ಮಾನವನ ಇನ್ಸುಲಿನ್‌ನನ್ನು ಸಂಕೇತಿಸುವ ಡಿಎನ್ಎ ಸರಣಿಯನ್ನು ಸಸ್ಯಗಳಂತಹ ಬೇರೆ ಜೀವಿಗಳಲ್ಲಿ ಒಳಸೇರಿಸಿದರೆ ಅದು ಇನ್ಸುಲಿನನ್ನೇ ಸಂಕೇತಿಸುತ್ತದೆ.[೩೦]

ಡಿಎನ್‌ಎ ಯುಕ್ಯಾರಿಯಟ್ ಜೀವಿಗಳಲ್ಲಿ ರೇಖಾಕಾರದ ವರ್ಣತಂತುಗಳಲ್ಲಿ ಕಾಣಿಸಿಕೊಂಡರೆ ಪ್ರೊಕ್ಯಾರಿಯಟ್ ಜೀವಿಗಳಲ್ಲಿ ವೃತ್ತಾಕಾರದ ವರ್ಣತಂತುಗಳಲ್ಲಿ ಕಾಣಿಸಿಕೊಳ್ಳುತ್ತದೆ. ವರ್ಣತಂತುವು ಡಿಎನ್‌ಎ ಮತ್ತು ಹಿಸ್ಟೋನ್‌[ಟಿಪ್ಪಣಿ ೮]ಗಳನ್ನು ಒಳಗೊಂಡಿರುತ್ತದೆ. ಜೀವಕೋಶದಲ್ಲಿರುವ ವರ್ಣತಂತುಗಳ ಜೋಡಿ ಮತ್ತು ಮೈಟೋಕಾಂಡ್ರಿಯನ್, ಹರಿದ್ರೇಣು (ಕ್ಲೋರೋಪಾಸ್ಟ್) ಅಥವಾ ಇತರ ಕಡೆಗಳಲ್ಲಿ ಕಂಡುಬರುವ ಸಣ್ಣ ಪ್ರಮಾಣದ ಅನುವಂಶಿಕತೆಯ ಮಾಹಿತಿಯನ್ನು ಒಟ್ಟಾರೆಯಾಗಿ ಜಿನೋಮ್ ಎಂದು ಕರೆಯಲಾಗುತ್ತದೆ. ಯುಕ್ಯಾರಿಯಟ್ ಜೀವಿಗಳಲ್ಲಿ ಜೀನೋಮ್ ಡಿಎನ್‌ಎ ಜೀವಕೋಶದ ನ್ಯೂಕ್ಲಿಯಸ್‌ನಲ್ಲಿರುತ್ತದೆ ಮತ್ತು ಮೈಟೋಕಾಂಡ್ರಿಯ ಮತ್ತು ಹರಿದ್ರೇಣುನಲ್ಲಿ ಡಿಎನ್‌ಎ ಸಣ್ಣ ಪ್ರಮಾಣದಲ್ಲಿರುತ್ತದೆ. ಪ್ರೊಕ್ಯಾರಿಯಟ್ ಜೀವಿಗಳಲ್ಲಿ ಡಿಎನ್ಎ ಅನಿಯಮಿತ ಆಕಾರದ ನ್ಯೂಕ್ಲಿಯಾಡ್‌[ಟಿಪ್ಪಣಿ ೯]ನಲ್ಲಿರುತ್ತದೆ.[೩೧] ಅನುವಂಶಿಕತೆಯ ಮಾಹಿತಿ ವಂಶವಾಹಿಯಲ್ಲಿರುತ್ತದೆ ಮತ್ತು ಜೀವಿಯ ಇದರ ಪೂರ್ಣ ಮಾಹಿತಿಯನ್ನು ಜೀನ್‌ಮಾದರಿ ಎಂದು ಕರೆಯಲಾಗುತ್ತದೆ.[೩೨]

ಸಮಸ್ತಂಭನ

[ಬದಲಾಯಿಸಿ]
ಹೈಪೊಥಾಲಮಸ್ (ಮಿದುಳಿನ ಒಂದು ಭಾಗ) ಸಿಆರ್‌ಹೆಚ್ (ಒಂದು ಹಾರ್ಮೋನು) ದ್ರವಿಸುತ್ತದೆ ಮತ್ತು ಸಿಆರ್‌ಹೆಚ್ ಪಿಟ್ಯೂಟರಿ ಗ್ರಂಥಿ ಎಸಿಟಿಹೆಚ್ (ಒಂದು ಹಾರ್ಮೋನು) ಶ್ರವಿಸುವಂತೆ ನಿರ್ದೇಶಿಸುತ್ತದೆ. ಎಸಿಟಿಹೆಚ್ ಅಡರೆನಲ್ ಕಾರ್ಟೆಕ್ಸ್‌ಗೆ ಕೊರ್‌ಟಿಸಾಲ್‌ನಂತಹ ಗ್ಲುಕೊಕೊರ್ಟಿಕಾಯ್ಡ್‌ಗಳನ್ನು ಶ್ರವಿಸುವಂತೆ ನಿರ್ದೇಶಿಸುತ್ತದೆ. ಅಗತ್ಯವಾದಷ್ಟು ಗ್ಲುಕೊಕೊರ್ಟಿಕಾಯ್ಡ್‌ಗಳು ಶ್ರವಿಸಿದ ನಂತರ ಗ್ಲುಕೊಕೊರ್ಟಿಕಾಯ್ಡ್‌ಗಳು ಹೈಪೋಥಾಲಮಸ್ ಮತ್ತು ಪಿಟ್ಯೂಟರಿ ಗ್ರಂಥಿ ಶ್ರವಿಸುವ ದರವನ್ನು ಕಡಿಮೆ ಮಾಡುವಂತೆ ಮಾಡುತ್ತವೆ.[೩೩]

ಸಮಸ್ತಂಭನ ಅಥವಾ ಹೊಮಿಯೋಸ್ಟಾಸಿಸ್ ಎಂದರೆ ತೆರೆದ ವ್ಯವಸ್ಥೆಯೊಂದು ಅಂತರಸಂಬಂಧಿ ನಿಯಂತ್ರಣ ವಿಧಾನದ ಹತೋಟಿಯಲ್ಲಿ ಹಲವು ಸಕ್ರಿಯ ಸಮತೋಲನದ ಹೊಂದಾಣಿಕೆಗಳ ಮೂಲಕ ತನ್ನ ಒಳ ವಾತಾವರಣವನ್ನು ನಿಯಂತ್ರಿಸಿ ಸ್ಥಿರ ಪರಿಸ್ಥಿತಿಯನ್ನು ಮುಂದುವರೆಯುವಂತೆ ಮಾಡುವ ಸಾಮರ್ಥ್ಯ. ಎಲ್ಲಾ ಜೀವಿಗಳು ಅವು ಏಕಜೀವಕೋಶಿಗಳಾಗಿರಲಿ ಅಥವಾ ಬಹುಜೀವಕೋಶಿಗಳಾಗಿರಲಿ ಸಮಸ್ತಂಭನವನ್ನು ಪ್ರದರ್ಶಿಸುತ್ತವೆ.[೩೪]

ಸಕ್ರಿಯ ಸಮತೋಲನವನ್ನು ಮುಂದುವರೆಸಲು ಮತ್ತು ಕೆಲವು ಕಾರ್ಯಗಳನ್ನು ಪರಿಣಾಮಕಾರಿಯಾಗಿ ಆಚರಣೆಗೆ ತರಲು ವ್ಯವಸ್ಥೆಯು ವ್ಯಾಕುಲತೆ ಅಥವಾ ಗೊಂದಲದ ಸ್ಥಿತಿಯನ್ನು ಗುರುತಿಸಿ ಅದಕ್ಕೆ ಪ್ರತಿಕ್ರಿಯಿಸ ಬೇಕಾಗುತ್ತದೆ. ವ್ಯಾಕುಲತೆಯನ್ನು ಗುರುತಿಸಿದ ಮೇಲೆ ಜೈವಿಕ ವ್ಯವಸ್ಥೆಯು ಸಾಮಾನ್ಯವಾಗಿ ನೆಗೆಟಿವ್ ಫೀಡ್‌ಬ್ಯಾಕ್‌[ಟಿಪ್ಪಣಿ ೧೦] ಮೂಲಕ ಪ್ರತಿಕ್ರಿಯಿಸುತ್ತದೆ. ಇದರ ಅರ್ಥವೆಂದರೆ ಅಂಗ ಅಥವಾ ವ್ಯವಸ್ಥೆಯ ಚಟುವಟಿಕೆಯನ್ನು ಹೆಚ್ಚು ಅಥವಾ ಕಡಿಮೆ ಮಾಡುವ ಮೂಲಕ ಪರಿಸ್ಥಿತಿಯ ಸ್ಥಿರತೆಯನ್ನು ತರುವುದು. ಸಕ್ಕರೆಯ ತೀರ ಕಡಿಮೆ ಇದ್ದಾಗ ಗ್ಲುಕಗಾನ್[ಟಿಪ್ಪಣಿ ೧೧] ಬಿಡುಗಡೆ ಒಂದು ಉದಾಹರಣೆ.

ಶಕ್ತಿ

[ಬದಲಾಯಿಸಿ]

ಬದುಕಿರುವ ಜೀವಿಯ ಉಳಿದುಕೊಳ್ಳುವುದು ಶಕ್ತಿಯ ಸತತ ಸೇರಿಸುವಿಕೆಯ ಮೇಲೆ ಆಧಾರ ಪಟ್ಟಿರುತ್ತದೆ. ಅದರ ರಚನೆ ಮತ್ತು ಕಾರ್ಯನಿರ್ವಹಣೆಗೆ ಜವಾಬುದಾರಿ ಹೊತ್ತಿರುವ ರಸಾಯನಿಕ ಕ್ರಿಯೆಗಳು ಅವುಗಳ ಆಹಾರ ಎಂದು ಪರಿಗಣಿಸಲಾದವುಗಳಿಂದ ಶಕ್ತಿಯನ್ನು ಪಡೆಯುವ ಸಾಮರ್ಥ್ಯ ಹಾಗೂ ಅದನ್ನು ರೂಪಾಂತರಿಸಿ ಹೊಸ ಜೀವಕೋಶಗಳನ್ನು ರೂಪಿಸುವ ಮತ್ತು ಪೋಷಿಸುವ ಸಾಮರ್ಥ್ಯ ಪಡೆದಿವೆ. ಈ ಪ್ರಕ್ರಿಯೆಯಲ್ಲಿ ಜೀವಿಗಳ ಆಹಾರವಾದ ರಾಸಾಯನಿಕ ಪದಾರ್ಥಗಳ ಅಣುಗಳು ಎರಡು ಪಾತ್ರ ವಹಿಸುತ್ತವೆ; ಮೊದಲನೆಯದು, ಅವುಗಳಲ್ಲಿ ಶಕ್ತಿ ಜೈವಿಕ ರಸಾಯನಿಕ ಕ್ರಿಯೆಗಳಿಗೆ ಅಗತ್ಯವಾದ ಶಕ್ತಿಯಾಗಿ ಮಾರ್ಪಡಿಸ ಬಹುದಾದ ಸಾಮರ್ಥ್ಯ ಅಡಕವಾಗಿರುತ್ತದೆ; ಎರಡು, ಅವು ಜೈವಿಕ ಅಣುಗಳಿಂದ ಕೂಡಿದ ಹೊಸ ಅಣು ರಚನೆಗಳಾಗಿ ಬೆಳೆಯುತ್ತವೆ.

ಪರಿಸರ ವ್ಯವಸ್ಥೆಯಲ್ಲಿ ಶಕ್ತಿಯನ್ನು ಒಳಗೆ ತರುವ ಜವಾಬುದಾರಿಯನ್ನು ನಿಭಾಯಿಸುವ ಜೀವಿಗಳನ್ನು ಉತ್ಪಾದಕರು ಅಥವಾ ಸ್ವಪೋಷಿತಗಳು (ಆಟೋಟ್ರೋಫ್‌ಗಳು) ಎಂದು ಕರೆಯಲಾಗಿದೆ. ಬಹುತೇಕ ಈ ಎಲ್ಲಾ ಜೀವಿಗಳೂ ಸ್ವಭಾವಸಿದ್ಧವಾಗಿ ಸೂರ್ಯನಿಂದ ಶಕ್ತಿ ಪಡೆಯುತ್ತವೆ.[೩೫] ಸಸ್ಯಗಳು ಮತ್ತು ಇತರ ದ್ಯುತಿಪೋಷಿತಗಳು (ಫೋಟೋಟ್ರೋಫ್‌ಗಳು [ಟಿಪ್ಪಣಿ ೧೨]) ದ್ಯುತಿಸಂಶ್ಲೇಷಣೆ (ಫೋಟೋಸಿಂಥೆಸಿಸ್‌) ಎಂಬ ಪ್ರಕ್ರಿಯೆ ಮೂಲಕ ಸೌರ್ಯಶಕ್ತಿ ಬಳಸಿ ಕಚ್ಚಾ ಪದಾರ್ಥಗಳನ್ನು ಎಟಿಪಿನಂತಹ (ಎಟಿಪಿ-ಅಡೆನೊಸಿನ್ ಟ್ರೈಪಾಸ್ಟೇಟ್) ಜೈವಿಕ ಅಣುಗಳಾಗಿ ಪರಿವರ್ತಿಸುತ್ತವೆ. ಈ ಎಟಿಪಿ ಅಣುವಿನ ಬಂಧನ ಒಡೆದು ಶಕ್ತಿ ಪಡೆಯಬಹುದು.[೩೬] ಕೆಲವು ಪರಿಸರವ್ಯವಸ್ಥೆಗಳಲ್ಲಿ ರಸಪೋಷಿತಗಳು (ಕೆಮೊಟ್ರೋಫಿಗಳು) ಮೀಥೇನ್, ಸಲ್ಪೈಡ್‌ಗಳು ಅಥವಾ ಇತರ ಸೌರ್ಯಶಕ್ತಿಯೇತರ ಮೂಲಗಳಿಂದ ತಮ್ಮ ಎಲ್ಲಾ ಶಕ್ತಿಯ ಅಗತ್ಯಗಳನ್ನು ಪೂರೈಸಿಕೊಳ್ಳುತ್ತವೆ.[೩೭]

ಬಂಧಿತವಾದ ಶಕ್ತಿಯ ಕೆಲ ಭಾಗ ಒಟ್ಟು ಜೀವರಾಶಿ ಅಥವಾ ಬಯೋಮಾಸ್‌ ಉತ್ಪಾದಿಸಲು, ನಿಭಾಯಿಸಲು ಮತ್ತು ಬೆಳವಣಿಗೆ ಹಾಗೂ ಅಭಿವೃದ್ಧಿಗೆ ಬಳಸಲಾಗಿದೆ. ಉಳಿದದರಲ್ಲಿ ಬಹುಭಾಗ ಬಿಸುಪಿಗೆ ಮತ್ತು ಪೋಲು ಅಣುಗಳಾಗಿ ಕಳೆದುಹೊಗುತ್ತದೆ. ರಾಸಾಯನಿಕ ಪದಾರ್ಥಗಳಲ್ಲಿ ಹಿಡಿದಿಟ್ಟ ಶಕ್ತಿಯನ್ನು ಜೀವಿಯ ಬದುಕುವಿಕೆಗೆ ಅಗತ್ಯವಾದ ಶಕ್ತಿಯಾಗಿ ಪರಿವರ್ತಿಸುವಲ್ಲಿ ಪಾತ್ರವಹಿಸುವ ಪ್ರಕ್ರಿಯೆಗಳು ಮೆಟಬಾಲಿಸಂ[ಟಿಪ್ಪಣಿ ೧೩] (ಚಯಾಪಚಯ)[೩೮] ಮತ್ತು ಜೀವಕೋಶದ ಉಸಿರಾಟ.[೩೯][ಟಿಪ್ಪಣಿ ೧೪]

ಶಾಖೆಗಳು

[ಬದಲಾಯಿಸಿ]

ಈ ಕೆಳಗಿನವು ಜೀವಶಾಸ್ತ್ರದ ಪ್ರಮುಖ ಶಾಖೆಗಳು[೪೦][೪೧]

  • ಅಂಗರಚನಾಶಾಸ್ತ್ರ – (ಅನಾಟಮಿ) ಸಸ್ಯ, ಪ್ರಾಣಿ ಮತ್ತು ಇತರ ಜೀವಿಗಳಲ್ಲಿನ ಅಥವಾ ವಿಶೇಷವಾಗಿ ಮಾನವನ ಆಕರ ಮತ್ತು ಕಾರ್ಯವಿಧಾನಗಳ ಅಧ್ಯಯನ ಇದರ ಉಪಶಾಖೆ -ಊತಕಶಾಸ್ತ್ರ - ಜೀವಕೋಶಗಳು ಮತ್ತು ಅಗಾಂಶಗಳ ಅಧ್ಯಯನ. ಅಂಗರಚನಾಶಾಸ್ತ್ರದ ಒಂದು ಸೂಕ್ಷ್ಮದರ್ಶಿ ಶಾಖೆ.
  • ಅಣ್ವಿಕ ಜೀವಶಾಸ್ತ್ರ – (ಮಾಲೆಕ್ಯೂಲಾರ್ ಬಯಾಲಜಿ) ಜೀವಶಾಸ್ತ್ರ ಮತ್ತು ಜೈವಿಕ ಕಾರ್ಯಗಳನ್ನು ಅಣು ಮಟ್ಟದಲ್ಲಿ ಅಧ್ಯಯನ ಮಾಡುತ್ತದೆ. ಇದರ ಕೆಲವು ವಿಷಯಗಳು ಜೀವರಸಾಯನ ಶಾಸ್ತ್ರದಲ್ಲಿಯೂ ಬರುತ್ತವೆ.
  • ಅರಿವು ಜೀವಶಾಸ್ತ್ರ – (ಕಾಗ್ನಿಟಿವ್ ಬಯಲಾಜಿ) ಅರಿವನ್ನು ಒಂದು ಜೈವಿಕ ಕಾರ್ಯವಾಗಿ ಅಧ್ಯಯನ
  • ಇಂಗಾಲೀಯ ರಸಾಯನಶಾಸ್ತ್ರ – (ಬಯೋಕೆಮಿಸ್ಟ್ರಿ) ಜೀವಿಗಳ ಇರುವಿಕೆ ಮತ್ತು ಕಾರ್ಯನಿರ್ವಹಣೆಗೆ ಅಗತ್ಯವಾದ ರಾಸಾಯನಿಕ ಕ್ರಿಯೆಗಳ ಅಧ್ಯಯನ, ಸಾಮಾನ್ಯವಾಗಿ ಜೀವಕೋಶದ ಹಂತದಲ್ಲಿ.
  • ಏಕೀಕೃತ ಜೀವಶಾಸ್ತ್ರ – (ಇಂಟಗ್ರೇಟಿವ್ ಬಯಾಲಜಿ) ಪೂರ್ಣ ಜೀವಿಯ ಅಧ್ಯಯನ
  • ಕಟ್ಟಡ ಜೀವಶಾಸ್ತ್ರ – (ಬಿಲ್ಡಿಂಗ್ ಬಯಾಲಜಿ) ಒಳಾಂಗಣದಲ್ಲಿ ಜೀವಿಗಳು ಬದುಕುವ ಪರಿಸರವನ್ನು ಅಧ್ಯಯನ ಮಾಡುತ್ತದೆ
  • ಕೃಷಿ – ಅಥವಾ ವ್ಯವಸಾಯ ಬೆಳೆಗಳನ್ನು ಬೆಳೆಯುವುದು ಮತ್ತು ಪ್ರಾಣಿ ಸಾಕಣೆ, ಪ್ರಾಯೋಗಿಕ ಅನ್ವಯಕತೆಯ ಒತ್ತಿನೊಂದಿಗೆ ಅಧ್ಯಯನ.
  • ಕೋಶ ಜೀವಶಾಸ್ತ್ರ – ಜೀವಕೋಶವನ್ನು ಒಂದು ಪೂರ್ಣ ಘಟಕವಾಗಿ ಮತ್ತು ಬದುಕಿರುವ ಜೀವಕೋಶದಲ್ಲಿ ಕಾಣಬರುವ ಅಣು ಮತ್ತು ರಾಸಾಯನಿಕ ಪರಸ್ಪರ ಕ್ರಿಯೆಗಳ ಅಧ್ಯಯನ
  • ಕ್ವಾಂಟಂ ಜೀವಶಾಸ್ತ್ರ – ಜೈವಿಕ ವಸ್ತುಗಳಿಗೆ ಮತ್ತು ಸಮಸ್ಯೆಗಳಿಗೆ ಕ್ವಾಂಟಂ ಮೆಕಾನಿಕ್ಸ್ ಅನ್ವಯಿಸುವುದರ ಅಧ್ಯಯನ
  • ಖಜೀವಶಾಸ್ತ್ರ – (ಆಸ್ಟ್ರೊಬಯಾಲಜಿ) ವಿಶ್ವದಲ್ಲಿ ಜೀವಿಗಳ ವಿಕಾಸ, ಹಂಚಿಕೆ ಮತ್ತು ಭವಿಷ್ಯದ ಅಧ್ಯಯನ
  • ಜೀವ ಇನ್‌ಫಾರ್‌ಮ್ಯಾಟಿಕ್ಸ್ – ಜೀನೋಮಿಕ್ಸ್ ಮತ್ತು ಇತರ ಜೈವಿಕ ದತ್ತಾಂಶಗಳ ಅಧ್ಯಯನ, ಸಂಗ್ರಹ ಮತ್ತು ದಾಸ್ತಾನಿಗೆ ಮಾಹಿತಿ ತಂತ್ರಜ್ಞಾನದ ಬಳಕೆ
  • ಜೀವ ವೈದ್ಯಕೀಯ ಸಂಶೋದನೆ – (ಬಯೋಮೆಡಿಕಲ್ ರಿಸರ್ಚ್)ಆರೋಗ್ಯ ಮತ್ತು ರೋಗಗಳ ಅಧ್ಯಯನ.
    • ಔಷದವಿಜ್ಞಾನ- (ಫಾರ್ಮಕಾಲಜಿ) ಔಷದಗಳ ಮತ್ತು ಪ್ರಾಯೋಗಿಕವಾಕವಾಗಿ ಅವುಗಳ ತಯ್ಯಾರಿ, ಬಳಕೆ ಮತ್ತು ಪರಿಣಾಮಗಳ ಅಧ್ಯಯನ
  • ಜೀವಗಣಿತ – ಮಾದರಿಗಳ ಮೇಲೆ ಒತ್ತಿನೊಂದಿಗೆ ಜೈವಿಕ ಪ್ರಕ್ರಿಯೆಗಳ ಪ್ರಮಾಣಾತ್ಮಕ ಅಥವಾ ಗಣಿತೀಯ ಅಧ್ಯಯನ
  • ಜೀವ ಭೌತವಿಜ್ಞಾನ – (ಬಯೋಫಿಸಿಕ್ಸ್) ಸಂಪ್ರದಾಯಿಕವಾಗಿ ಭೌತ ವಿಜ್ಞಾನದಲ್ಲಿ ಬಳಸುತ್ತಿರುವ ಸಿದ್ಧಾಂತಗಳು ಮತ್ತು ವಿಧಾನಗಳನ್ನು ಅನ್ವಯಿಸಿ, ಜೈವಿಕ ಪ್ರಕ್ರಿಯೆಗಳನ್ನು ಭೌತ ವಿಜ್ಞಾನದ ಮೂಲಕ ಅಧ್ಯಯನ ಮಾಡುವುದು
  • ಜೀವಸಂಕೇತ ಶಾಸ್ತ್ರ– (ಬಯೋಸೀಮಿಯಾಟಿಕ್ಸ್) ಜೈವಿಕ ಪ್ರಕ್ರಿಯೆಗೆ ಅರ್ಥ ರೂಪಿಸುವಿಕೆ ಮತ್ತು ಸಂವಹನ ಮಾದರಿಗಳನ್ನು ಅನ್ವಯಿಸಿ ಅಧ್ಯಯನ ಮಾಡುವದು
  • ಜೈವ ಇಂಜಿನಿಯರಿಂಗ್ – ಜೀವಶಾಸ್ತ್ರವನ್ನು ಇಂಜಿನಿಯರಿಂಗ್ ಮೂಲಕ ಅಧ್ಯಯನ, ಅನ್ವಯಕ ಜ್ಞಾನಕ್ಕೆ ಅದರಲ್ಲೂ ವಿಶೇಷವಾಗಿ ಜೈವತಂತ್ರವಿದ್ಯೆ ಅಥವಾ ಬಯೋಟೆಕ್ನಾಲಜಿಗೆ ಒತ್ತು
  • ಜೈವ ಭೂವಿಜ್ಞಾನ- ಜೀವಸಂಕುಲಗಳ ಪ್ರಾದೇಶಿಕ ಮತ್ತು ಜಾಗತಿಕ ಹಂಚಿಕೆಯ ಅಧ್ಯಯನ
  • ತಳಿವಿಜ್ಞಾನ– (ಜೆನೆಟಿಕ್ಸ್) ವಂಶವಾಹಿ ಅಥವಾ ಜೀನ್‌ಗಳು ಮತ್ತು ಅನುವಂಶಿಕತೆಯ ಅಧ್ಯಯನ.
    • ಎಪಿಜೆನೆಟಿಕ್ಸ್‌ – ಸಂಬಂಧಿತ ಡಿಎನ್‌ಎ ಬದಲಾವಣೆಯಿಂದಲ್ಲದ ವಂಶವಾಹಿ ಅಭಿವ್ಯಕ್ತಿ ಅಥವಾ ವ್ಯಕ್ತನಮೂನೆಯ (ಫಿನೊಟೈಪ್) ಬದಲಾಣೆಗಳ ಅಧ್ಯಯನ.
  • ನ್ಯಾನೊ ಜೀವಶಾಸ್ತ್ರ – ನ್ಯಾನೊತಂತ್ರಜ್ಞಾನವನ್ನು ಜೀವಶಾಸ್ತ್ರದಲ್ಲಿ ಹೇಗೆ ಬಳಸ ಬಹುದು ಎಂಬುದರ ಅಧ್ಯಯನ. ಇದು ಜೀವಿಗಳು ಮತ್ತು ಅವುಗಳ ಭಾಗಗಳನ್ನು ನ್ಯಾನೊಮಟ್ಟದಲ್ಲಿ ಹೇಗೆ ಸಂಘಟಿಸಲಾಗಿದೆ ಎಂಬುದನ್ನು ಸಹ ಅಧ್ಯಯನ ಮಾಡುತ್ತದೆ.
  • ನರ ಜೀವಶಾಸ್ತ್ರ – ನರ ವ್ಯವಸ್ಥೆಯ ಅಧ್ಯಯನ. ಇದು ನರ ವ್ಯವಸ್ಥೆಯ ಅಂಗರಚನಾ ಶಾಸ್ತ್ರ, ಶರೀರವಿಜ್ಞಾನ ಮತ್ತು ರೋಗಶಾಸ್ತ್ರಗಳನ್ನು ಸಹ ಒಳಗೊಂಡಿದೆ
  • ಪರಿಸರ ಜೀವಶಾಸ್ತ್ರ – ಒಟ್ಟಾರೆ ನೈಸರ್ಗಿಕ ಪ್ರಪಂಚ ಅಥವಾ ನಿರ್ದಿಷ್ಟ ಪ್ರದೇಶ ವಿಶೇಷವಾಗಿ ಅದರ ಮೇಲೆ ಮಾನವನ ಚಟುವಟಿಕೆಯ ಪರಿಣಾಮಗಳ ಅಧ್ಯಯನ
  • ಪರಿಸರ ವಿಜ್ಞಾನ – (ಎಕಾಲಜಿ) ಜೀವಿಗಳ ಒಂದು ಇನ್ನೊಂದರೊಂದಿಗಿನ ಮತ್ತು ಇತರ ಪರಿಸರದ ಅಜೀವ ಅಂಶಗಳೊಂದಿಗೆ ಪರಸ್ಪರ ಕ್ರಿಯೆಯ ಅಧ್ಯಯನ
  • ಪಾಪುಲೇಶನ್ ಜೀವಶಾಸ್ತ್ರ – ಜೀವಿಯ ಗುಂಪುಗಳ ಅಧ್ಯಯನ ಇದರ ಉಪವಿಭಾಗಗಳು:
    • ಪಾಪುಲೇಶನ್ ಪರಿಸರ ವಿಜ್ಞಾನ – ಜೀವಿಗಳ ಒಟ್ಟುಸಂಖ್ಯೆಯ ಚಾಲಕ ಶಕ್ತಿ ಮತ್ತು ಅಳಿವುಗಳನ್ನು ಅಧ್ಯಯನ ಮಾಡುತ್ತದೆ. **ಪಾಪುಲೇಶನ್ ತಳಿಶಾಸ್ತ್ರ – ಜೀವಿಗಳ ಒಟ್ಟುಸಂಖ್ಯೆ (ಪಾಪುಲೇಶನ್)ಯಲ್ಲಿ ವಂಶವಾಹಿ ಸಂಭವನೀಯತೆಯ ಬದಲಾವಣೆಗಳ ಅಧ್ಯಯನ
  • ಪ್ರಾಗ್ಜೀವಶಾಸ್ತ್ರ – (ಪಾಲಿಯೆಂಟಾಲಜಿ) ಪಳೆಯುಳಿಕೆಗಳು ಮತ್ತು ಕೆಲವೊಮ್ಮೆ ಜೀವಿಯ ಪೂರ್ವೇತಿಹಾಸದ ಸಾಕ್ಷಿಗಳ ಅಧ್ಯಯನ.
  • ಪ್ರಾಣಿಶಾಸ್ತ್ರ - ಪ್ರಾಣಿಗಳ ಅಧ್ಯಯನ ಮತ್ತು ಇದು ಅವುಗಳ ವರ್ಗೀಕರಣ, ಅಂಗರಚನೆ, ಬೆಳವಣಿಗೆ ಭೌಗೋಳಿಕ ಮತ್ತು ವರ್ತನೆಗಳ ಅಧ್ಯಯನವನ್ನು ಒಳಗೊಂಡಿದೆ. ಇದರ ಉಪಶಾಖೆಗಳು:
    • ಉರಗಶಾಸ್ತ್ರ – (ಹೆರ್ಪಟಾಲಜಿ) ಸರೀಸೃಪಗಳು (ಹಾವು, ಹಲ್ಲಿ, ಮೊಸಳೆ, ಆಮೆ ಮೊದಲಾದವನ್ನು ಒಳಗೊಂಡ ವರ್ಗ) ಮತ್ತು ಉಭಯಜೀವಿಗಳ (ನೆಲದ ಮೇಲೆ ಮತ್ತು ನೀರಿನಲ್ಲಿ ಎರಡೂ ಕಡೆ ಜೀವಿಸುವ ಪ್ರಾಣಿಗಳು) ಅಧ್ಯಯನ.
    • ಕೀಟಶಾಸ್ತ್ರ – (ಎಂಟಮಾಲಜಿ) ಕೀಟಗಳ ಅಧ್ಯಯನ.
    • ಪಕ್ಷಿಶಾಸ್ತ್ರ – (ಒರ್ನಿತಾಲಜಿ) ಪಕ್ಷಿಗಳ ಅಧ್ಯಯನ.
    • ಮತ್ಸ್ಯಶಾಸ್ತ್ರ – (ಇಕ್ತಿಯಾಲಜಿ) ಮೀನುಗಳ ಅಧ್ಯಯನ.
    • ವರ್ತನೆಶಾಸ್ತ್ರ – (ಎತಾಲಜಿ) ಪ್ರಾಣಿಗಳ ವರ್ತನೆಯನ್ನು ಅಧ್ಯಯನ ಮಾಡುತ್ತದೆ.
    • ಸಸ್ತನಿಶಾಸ್ತ್ರ – (ಮ್ಯಾಮಾಲಜಿ) ಸಸ್ತನಿಗಳ ಅಧ್ಯಯನ.
  • ಜೈವಿಕ ತಂತ್ರಜ್ಞಾನ – (ಬಯೋಟೆಕ್ನಾಲಜಿ) ಜೈವಿಕ ಪದಾರ್ಥದ ಕುಶಲ ನಿರ್ವಹಣೆಯ ಅಧ್ಯಯನ. ಇದು ವಂಶವಾಹಿ ಅಥವಾ ಜೆನೆಟಿಕ್ ಬದಲಾವಣೆ ಮತ್ತು ಸಂಶ್ಲೇಷಣೆ ಜೀವಶಾಸ್ತ್ರವನ್ನು ಒಳಗೊಳ್ಳುತ್ತದೆ.
    • ಸಂಶ್ಲೇಷಣೆ ಜೀವಶಾಸ್ತ್ರ – (ಸಿಂಥೆಟಿಕ್ ಬಯಾಲಜಿ) ಜೀವಶಾಸ್ತ್ರ ಮತ್ತು ಇಂಜಿನಿಯರಿಂಗ್‌ಗಳನ್ನು ಸೇರಿಸಿ ಸಂಶೋಧನೆ, ಇದು ಪ್ರಕೃತಿಯಲ್ಲಿಲ್ಲದ ಜೈವಿಕ ಕ್ರಿಯೆ ರೂಪಿಸುವುದನ್ನು ಒಳಗೊಳುತ್ತದೆ
  • ಬಯೋಮೆಕಾನಿಕ್ಸ್ – ಹಲವು ಸಲ ವೈದಕೀಯದ ಶಾಖೆಯಾದ ಇದು ಜೀವಿಗಳ ಯಾಂತ್ರಿಕತೆಯನ್ನು ಅಧ್ಯಯನ ಮಾಡುತ್ತದೆ. ಇಲ್ಲಿಯ ಒತ್ತು ಕೃತಿಮ ಅಂಗಗಳ ಜೋಡಣೆ ಮತ್ತು ಅಂಗಗಳ ಕಾರ್ಯನಿರ್ವಹಣೆಯ ಬದಲಾವಣೆಯನ್ನು ಒಳಗೊಂಡಿದೆ
  • ಬಯೋಮ್ಯೂಸಿಕಾಲಜಿ – ಸಂಗೀತವನ್ನು ಜೈವಿಕ ದೃಷ್ಟಿಕೋನದಿಂದ ಅಧ್ಯಯನ ಮಾಡುವುದು.
  • ಬೆಳವಣಿಗೆ ಜೀವಶಾಸ್ತ್ರ – (ಡೆವಲಪ್‌ಮೆಂಟಲ್ ಬಯಾಲಜಿ) ಜೀವಿಯೊಂದು ಜೈಗೋಟ್ ಅಥವಾ ಯುಗ್ಮಜದಿಂದ ಪೂರ್ಣ ರೂಪವಾಗಿ ಬೆಳೆಯುವ ಪ್ರಕ್ರಿಯೆಯ ಅಧ್ಯಯನ.
    • ಭ್ರೂಣಶಾಸ್ತ್ರ – ಬ್ರೂಣದ ಬೆಳವಣಿಗೆಯ ಅಧ್ಯಯನ (ಫಲವತ್ತಾಗಿಸುವಿಕೆಯಿಂದ ಹುಟ್ಟಿನವರೆಗೆ)
  • ಮನೋಜೀವಶಾಸ್ತ್ರ - ಮನೋವಿಜ್ಞಾನದ ಜೈವಿಕ ಆಧಾರದ ಅಧ್ಯಯನ
  • ರಕ್ತಶಾಸ್ತ್ರ – ರಕ್ತ ಮತ್ತು ಅದನ್ನು ರೂಪಿಸುವ ಅಂಗಗಳ ಅಧ್ಯಯನ
  • ರಾಚನಿಕ ಜೀವಶಾಸ್ತ್ರ - ಜೈವಿಕ ಬೃಹತ್ ಅಣುಗಳಿಗೆ ಸಂಬಂಧಿಸಿದ ಅಧ್ಯಯನ. ಇದು ಅಣುಜೀವ ಶಾಸ್ತ್ರ, ಜೀವರಸಾಯನ ಶಾಸ್ತ್ರ ಮತ್ತು ಜೀವಭೌತ ಶಾಸ್ತ್ರದ ಶಾಖೆ
  • ರೋಗಶಾಸ್ತ್ರ – ರೋಗಗಳ ಕಾರಣಗಳು, ಪ್ರಕ್ರಿಯೆಗಳು, ಸ್ವಭಾವ ಮತ್ತು ಬೆಳವಣಿಗೆಗಳ ಅಧ್ಯಯನ
  • ವಾಯುಜೀವಶಾಸ್ತ್ರ – (ಏರೋಬಯಾಲಜಿ) ಗಾಳಿಯಲ್ಲಿರುವ ಸೂಕ್ಷ್ಮಜೀವಿಗಳು, ಪರಾಗ ಮುಂತಾದ ಸಾವಯವ ಕಣಗಳ ಅಧ್ಯಯನ
  • ವಿಕಸನೀಯ ಜೀವಶಾಸ್ತ್ರ – ಕಾಲಾನುಕ್ರಮದಲ್ಲಿ ಜೀವಸಂಕುಲಗಳ ಹುಟ್ಟು ಮತ್ತು ಉತ್ತರಾಧಿಕಾರಿಗಳ ಅಧ್ಯಯನ
  • ಶರೀರ ವಿಜ್ಞಾನ – ಬದುಕಿರುವ ಜೀವಿಗಳ ಅಂಗಗಳು ಮತ್ತು ಭಾಗಗಳ ಕಾರ್ಯನಿರ್ವಹಣೆಯ ಅಧ್ಯಯನ
  • ಶೈತ್ಯ ಜೀವಶಾಸ್ತ್ರ – (ಕ್ರಯೊಬಯಾಲಜಿ) ಜೀವಿಗಳ ಮೇಲೆ ಸಾಮಾನ್ಯ ತಾಪಮಾನಕ್ಕಿಂತ ಕಡಿಮೆ ತಾಪಮಾನದ ಪರಿಣಾಮಗಳ ಅಧ್ಯಯನ
  • ಸಂರಕ್ಷಣಾ ಜೀವಶಾಸ್ತ್ರ – ನೈಸರ್ಗಿಕ ಪರಿಸರ, ನೈಸರ್ಗಿಕ ಪರಿಸರ ವ್ಯವಸ್ಥೆ, ಸಸ್ಯ ಮತ್ತು ವನ್ಯಜೀವಕುಲಗಳನ್ನು ಕಾಪಾಡುವುದು, ರಕ್ಷಿಸುವುದು ಅಥವಾ ನವೀಕರಿಸುವುದರ ಅಧ್ಯಯನ
  • ಸಮಾಜ ಜೀವಶಾಸ್ತ್ರ – (ಸೋಶಿಯೊಬಯಾಲಜಿ) ಸಮಾಜಶಾಸ್ತ್ರದ ಜೈವಿಕ ಆಧಾರದ ಅಧ್ಯಯನ
  • ಸರೋವರ ವಿಜ್ಞಾನ – ಸಿಹಿನೀರಿನ ಮುಖ್ಯವಾಗಿ ಕೊಳ, ಸರೋವರಗಳ ಅಧ್ಯಯನ
  • ಸಸ್ಯ ರೋಗಶಾಸ್ತ್ರ – (ಫೈಟೊಪೆತಾಲಜಿ) ಸಸ್ಯಗಳ ರೋಗಗಳ ಅಧ್ಯಯನ
  • ಸಸ್ಯಶಾಸ್ತ್ರ – ಸಸ್ಯಗಳ ಅಧ್ಯಯನ
  • ಸಾಗರ ಜೀವಶಾಸ್ತ್ರ – ಸಾಗರ ಪರಿಸರ ವ್ಯವಸ್ಥೆ, ಸಸ್ಯಗಳು,ಪ್ರಾಣಿಗಳು ಮತ್ತು ಇತರ ಜೀವಿಗಳ ಅಧ್ಯಯನ
  • ಸೂಕ್ಷ್ಮಜೀವಶಾಸ್ತ್ರ – (ಮೈಕ್ರೊಬಯಾಲಜಿ) ಸೂಕ್ಷಜೀವಿಗಳು ಮತ್ತು ಅವುಗಳ ಇತರ ಜೀವಿಗಳೊಂದಿಗಿನ ಪರಸ್ಪರ ಕ್ರಿಯೆಗಳ ಅಧ್ಯಯನ.
    • ಬ್ಯಾಕ್ಟೀರಿಯಾಲಜಿ – ಬ್ಯಾಕ್ಟೀರಿಯಾ ಅಧ್ಯಯನ.
    • ಪರಜೀವಿ ಶಾಸ್ತ್ರ - ಪರಜೀವಿ (ತನ್ನ ಎಲ್ಲಾ ಪೌಷ್ಠಿಕಾಂಶಗಳನ್ನು ಇನ್ನೊಂದು ಜೀವಿಯಿಂದ ಪಡೆಯುವ ಜೀವಿ) ಮತ್ತು ಪರಾವಲಂಬಿಕೆಯನ್ನು ಅಧ್ಯಯನ ಮಾಡುತ್ತದೆ.
    • ವೈರಾಣುಶಾಸ್ತ್ರ – ವೈರಾಣುಗಳು ಮತ್ತು ಇತರ ವೈರಸ್‌ ಹೋಲುವ ಏಜೆಂಟುಗಳ ಅಧ್ಯಯನ.
    • ಶಿಲೀಂಧ್ರ ಶಾಸ್ತ್ರ– ಶಿಲೀಂಧ್ರಗಳ ಅಧ್ಯಯನ.
  • ಸೋಂಕುಶಾಸ್ತ್ರ – (ಎಪಿಡೆಮಿಯಾಲಜಿ) ಸಾರ್ವಜನಿಕ ಆರೋಗ್ಯ ಸಂಶೋಧನೆಯ ಪ್ರಮುಖ ಭಾಗ, ಜನರ ಆರೋಗ್ಯದ ಮೇಲೆ ಪರಿಣಾಮ ಬೀರುವ ಅಂಶಗಳ ಅಧ್ಯಯನ.

ಅನುಕ್ರಮ_ವಿಶ್ಲೇಷಣೆ

ಟಿಪ್ಪಣಿಗಳು

[ಬದಲಾಯಿಸಿ]
  1. ವಿಕಿಪೀಡಿಯ ಇಂಗ್ಲೀಶ್ Biology ಪುಟದ ಭಾಗಶಹ ಅನುವಾದ ಲಿಂಕ್ https://en.wikipedia.org/wiki/Biology
  2. ಈ ಪ್ಯಾರದಲ್ಲಿನ ಕೆಲವು ಪುಸ್ತಕದ ಹೆಸರುಗಳು ಅನಗತ್ಯವೆಂದು ಬಿಟ್ಟುಬಿಡಲಾಗಿದೆ
  3. ಜೀನೋಮ್ ಅಥವಾ ಒಂದು ಜೀವಿಯ ಜೀವಕೋಶ ಒಂದರಲ್ಲಿರುವ ಎಲ್ಲಾ ಡಿಎನ್‌ಎಯ ಅನುಕ್ರಮ, ಜೋಡಣೆ, ಕಾರ್ಯನಿರ್ವಹಣೆಯ ವಿಶ್ಲೇಷಣೆ ಮತ್ತು ರಚನೆಯ ಬಗೆಗಿನ ಅಧ್ಯಯನ.
  4. ಫೆನೆಟಿಕ್ಸ್-ಅಥವಾ ಬಾಹ್ಯ, ಸಾಮಾನ್ಯವಾಗಿ ದೇಹರಚನೆಯ ಆಧಾರದ ಮೇಲಿನ ಹೋಲಿಕೆ
  5. ಕ್ಲಾಡಿಸ್ಟಿಕ್ಸ್ ಅಥವಾ ಹಂಚಿಕೊಂಡ ಗುಣಲಕ್ಷಣಗಳ ಆಧಾರದ ಮೇಲಿನ ವರ್ಗೀಕರಣ
  6. ತಳಿ ಬೆಳೆಸುವಿಕೆ ಪ್ರಯೋಗ ಅಥವಾ ಸಂಕರಗಳಲ್ಲಿ ಪಲಿತಾಂಶವನ್ನು ಊಹಿಸಲು ಬಳಸುವ ಚೌಕ. ಇದಕ್ಕೆ ರೆಗಿನಾಲ್ಡ್ ಸಿ. ಪುನೆಟ್‌ನ ಹೆಸರನ್ನು ಇಡಲಾಗಿದೆ
  7. ಬದುಕಿರುವ ಜೀವಕೋಶಗಳಲ್ಲಿ ಕಂಡುಬರುವ ರಿಬೋಸೋಮ್ ಸಂಕೀರ್ಣ ಅಣು ಯಂತ್ರಾಂಗ ಮತ್ತು ಇದು ಜೈವಿಕ ಪ್ರೋಟೀನ್ ಸಂಯೋಜನೆಯ ಸ್ಥಳವಾಗಿ ಕೆಲಸ ಮಾಡುತ್ತದೆ.
  8. ಯುಕ್ಯಾರಿಯಟ್ ಜೀವಕೋಶಗಳಲ್ಲಿ ಡಿಎನ್‌ಎ ಸುರಿಳಿ ಇರುವಿಕೆಯಲ್ಲಿ ಪಾತ್ರವಹಿಸುವ ಪ್ರಮುಖ ಪ್ರೋಟೀನ್
  9. ನ್ಯೂಕ್ಲಿಯಾಡ್‌ನ ಅರ್ಥ ನ್ಯೂಕಿಯಸ್‌ನಂತಹ ಎಂದು. ಯುಕ್ಯಾರಿಯಟ್‌ ಜೀವಕೋಶಗಳಲ್ಲಿದ್ದಂತೆ ಇದರ ಸುತ್ತ ನ್ಯೂಕ್ಲಿಯಾರ್ ಮೆಂಬರೇನ್ ಅಥವಾ ಪೊರೆ ಇರುವುದಿಲ್ಲ.
  10. ಫೀಡ್‌ಬ್ಯಾಕ್ ಪರಿಣಾಮವಾಗಿ ಉತ್ಪಾದನೆಯನ್ನು ಆರಂಭಿಕ ನಿಬಂಧನೆಗೆ ವಿರೋಧವಾಗಿ ಬಳಸಿ ಮೂಲ ಪ್ರಕ್ರಿಯೆಯನ್ನು ಮಂದಗೊಳಿಸುವ ಪ್ರವೃತ್ತಿ. ಇದಕ್ಕೆ ವಿರುದ್ಧವಾಗಿ ಪಾಸಿಟಿವ್ ಫೀಡ್‌ಬ್ಯಾಕ್ ಪರಿಣಾಮವಾಗಿ ಪ್ರಕಿಯೆ ಹೆಚ್ಚಾಗುತ್ತದೆ ಅಥವಾ ಉತ್ಪಾದನೆ ಹೆಚ್ಚುತ್ತದೆ.
  11. ಮೇದೋಜಿರಕಾಂಗ ಅಥವಾ ಪ್ಯಾಂಕ್ರಿಯಾಸ್ ಶ್ರವಿಸುವ ಒಂದು ಹಾರ್ಮೋನು
  12. ಇದು ಮತ್ತು phototropism ಅಥವಾ ದ್ಯುತಿಅನುವರ್ತನೆ ಬೇರೆ ಬೇರೆ. ದ್ಯುತಿಅನುವರ್ತನೆಯು ಸಸ್ಯಗಳ ಭಾಗ ಬೆಳಕಿಗೆ ಸಂಬಂಧಿಸಿದಂತೆ ವಾಲಿಕೊಂಡಿರುವುದು.
  13. ಈ ಪ್ರಕ್ರಿಯೆಯಲ್ಲಿ ಆಹಾರವು ಶಕ್ತಿಯಾಗಿ ಮತ್ತು ಜೈವಿಕ ಅಣುಗಳಾಗಿ ಪರಿವರ್ತಿಸಲಾಗುತ್ತದೆ, ಅಲ್ಲದೆ ವ್ಯರ್ಥವಾದುದನ್ನು ತೆಗೆದು ಹಾಕಲಾಗುತ್ತದೆ.
  14. ಇಲ್ಲಿಂದ ಮುಂದೆ Study and Research ವಿಭಾಗವನ್ನು ಅನುವಾದದಿಂದ ಕೈಬಿಡಲಾಗಿದೆ

ಉಲ್ಲೇಖಗಳು

[ಬದಲಾಯಿಸಿ]
  1. Based on definition from: "Aquarena Wetlands Project glossary of terms". Texas State University at San Marcos. Archived from the original on 2004-06-08.
  2. "Life Science, Weber State Museum of Natural Science". Community.weber.edu. Retrieved 2013-10-02.
  3. "Who coined the term biology?". Info.com. Retrieved 2012-06-03.
  4. "biology". Online Etymology Dictionary.
  5. Richards, Robert J. (2002). The Romantic Conception of Life: Science and Philosophy in the Age of Goethe. University of Chicago Press. ISBN 0-226-71210-9.
  6. Magner, Lois N. (2002). A History of the Life Sciences, Revised and Expanded. CRC Press. ISBN 978-0-203-91100-6.
  7. Anthony Serafini (2013). The Epic History of Biology. Retrieved 14 July 2015.
  8. One or more of the preceding sentences incorporates text from a publication now in the public domain: Chisholm, Hugh, ed. (1911). "Theophrastus". Encyclopædia Britannica (11th ed.). Cambridge University Press.
  9. Fahd, Toufic (1996). "Botany and agriculture". In Morelon, Régis; Rashed, Roshdi. Encyclopedia of the History of Arabic Science 3. Routledge. p. 815. ISBN 0-415-12410-7.
  10. Magner, Lois N. (2002). A History of the Life Sciences, Revised and Expanded. CRC Press. pp. 133–144. ISBN 978-0-203-91100-6.
  11. Sapp, Jan (2003) Genesis: The Evolution of Biology, Ch. 7. Oxford University Press: New York. ISBN 0-19-515618-8
  12. Coleman, William (1977) Biology in the Nineteenth Century: Problems of Form, Function, and Transformation, Ch. 2. Cambridge University Press: New York. ISBN 0-521-29293-X
  13. Mayr, The Growth of Biological Thought, chapter 4.
  14. Mayr, The Growth of Biological Thought, chapter 7
  15. Gould, Stephen Jay. The Structure of Evolutionary Theory. The Belknap Press of Harvard University Press: Cambridge, 2002. ISBN 0-674-00613-5. p. 187.
  16. Lamarck (1914)
  17. Mayr, The Growth of Biological Thought, chapter 10: "Darwin's evidence for evolution and common descent"; and chapter 11: "The causation of evolution: natural selection"
  18. Larson, Edward J. (2006). "Ch. 3". Evolution: The Remarkable History of a Scientific Theory. Random House Publishing Group. ISBN 978-1-58836-538-5.
  19. Noble, Ivan (2003-04-14). "BBC NEWS | Science/Nature | Human genome finally complete". BBC News. Retrieved 2006-07-22.
  20. De Duve, Christian (2002). Life Evolving: Molecules, Mind, and Meaning. New York: Oxford University Press. p. 44. ISBN 0-19-515605-6.
  21. Futuyma, DJ (2005). Evolution. Sinauer Associates. ISBN 978-0-87893-187-3. OCLC 57311264.
  22. Packard, Alpheus Spring (1901). Lamarck, the founder of Evolution: his life and work with translations of his writings on organic evolution. New York: Longmans, Green. ISBN 0-405-12562-3.
  23. The Complete Works of Darwin Online – Biography. darwin-online.org.uk. Retrieved on 2006-12-15
  24. Dobzhansky, T. (1973). "Nothing in biology makes sense except in the light of evolution". The American Biology Teacher 35 (3): 125–129. doi:10.2307/4444260.
  25. As Darwinian scholar Joseph Carroll of the University of Missouri–St. Louis puts it in his introduction to a modern reprint of Darwin's work: "The Origin of Species has special claims on our attention. It is one of the two or three most significant works of all time—one of those works that fundamentally and permanently alter our vision of the world ... It is argued with a singularly rigorous consistency but it is also eloquent, imaginatively evocative, and rhetorically compelling." Carroll, Joseph, ed. (2003). On the origin of species by means of natural selection. Peterborough, Ontario: Broadview. p. 15. ISBN 1-55111-337-6.
  26. Shermer p. 149.
  27. Darwin, Charles (1859). On the Origin of Species, John Murray.
  28. Simpson, George Gaylord (1967). The Meaning of Evolution (Second ed.). Yale University Press. ISBN 0-300-00952-6.
  29. "Phylogeny". Bio-medicine.org. 2007-11-11. Retrieved 2013-10-02.
  30. Marcial, Gene G. (August 13, 2007) From SemBiosys, A New Kind Of Insulin. businessweek.com
  31. Thanbichler M, Wang S, Shapiro L (2005). "The bacterial nucleoid: a highly organized and dynamic structure". J Cell Biochem 96 (3): 506–21. doi:10.1002/jcb.20519. PMID 15988757.
  32. "Genotype definition – Medical Dictionary definitions". Medterms.com. 2012-03-19. Retrieved 2013-10-02.
  33. Raven, PH; Johnson, GB. (1999) Biology, Fifth Edition, Boston: Hill Companies, Inc. p. 1058. ISBN 0697353532.
  34. Rodolfo, Kelvin (2000-01-03) What is homeostasis? Scientific American.
  35. Bryant, D.A. & Frigaard, N.-U. (2006). "Prokaryotic photosynthesis and phototrophy illuminated". Trends Microbiol 14 (11): 488–96. doi:10.1016/j.tim.2006.09.001. PMID 16997562.
  36. Smith, A. L. (1997). Oxford dictionary of biochemistry and molecular biology. Oxford [Oxfordshire]: Oxford University Press. p. 508. ISBN 0-19-854768-4. Photosynthesis – the synthesis by organisms of organic chemical compounds, esp. carbohydrates, from carbon dioxide using energy obtained from light rather than the oxidation of chemical compounds.
  37. Edwards, Katrina. Microbiology of a Sediment Pond and the Underlying Young, Cold, Hydrologically Active Ridge Flank. Woods Hole Oceanographic Institution.
  38. Campbell, Neil A. & Reece, Jane B (2001). "6". Biology. Benjamin Cummings. ISBN 978-0-8053-6624-2. OCLC 47521441.
  39. Bartsch, John and Colvard, Mary P. (2009) The Living Environment. New York State Prentice Hall. ISBN 0133612023.
  40. "Branches of Biology". Biology-online.org. Retrieved 2013-10-02.
  41. "Biology on". Bellaonline.com. Retrieved 2013-10-02.