ವಿಷಯಕ್ಕೆ ಹೋಗು

ಸಿದ್ಧಿವಿನಾಯಕ ಲಕ್ಷ್ಮೀನಾರಾಯಣ ದೇವಸ್ಥಾನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ದೇವಸ್ಥಾನಗಳು ನಮ್ಮ ಸಂಸ್ಕೃತಿಯ ಪ್ರತೀಕ, ಭಾರತದಾದ್ಯಂತ ಸಂಚರಿಸುತ್ತಾ ಹೋದಂತೆಲ್ಲಾ ಅದೆಷ್ಟೋ ದೇವಾಲಯಗಳು ನಮ್ಮ ಕಣ್ಣಿಗೆ ಬೀಳುತ್ತವೆ. ಇನ್ನು ಕರ್ನಾಟಕಕ್ಕೆ ಬಂದರೆ ಅಲ್ಲಿ ಗಲ್ಲಿಗಲ್ಲಿಗಳಲ್ಲಿ ದೇವಾಲಯಗಳು ಸ್ಥಾಪನೆಗೊಂಡಿವೆ. ಪ್ರತೀ ದೇವಾಲಯಗಳೂ ಕೂಡಾ ತಮ್ಮದೇ ಆದ ಹಿನ್ನೆಲೆ ಮತ್ತು ಇತಿಹಾಸ ಹೊಂದಿವೆ. ಕೆಲವು ದೇವಾಲಯಗಳು ಪುರಾಣದ ತಿರುಳನ್ನು ತನ್ನೊಳಗೆ ಹುದಿಗಿಸಿಟ್ಟುಕೊಂಡಿವೆ. ದೇವರ ಸನ್ನಿಧಿಯಲ್ಲಿನ ಪ್ರತೀ ಕಲ್ಲುಗಳು, ಕಂಬಗಳೂ ಕೂಡಾ ನಮಗೆ ಒಂದೊಂದು ಕಥೆ ಹೇಳುತ್ತವೆ. ಹೀಗೇ ಮಾನವನಲ್ಲಿ ಭಕ್ತಿ ತುಂಬುವ ಆಲಯಗಳಾಗಿ, ಶಕ್ತಿ ದೇವಾಲಯಗಳಾಗಿ, ಗತಕಾಲದ ವೈಭವದ ಎಳೆಎಳೆಯನ್ನೂ ಸಾರವತ್ತಾಗಿ ತಿಳಿಸುವ ಕೇಂದ್ರಗಳಾಗಿವೆ ನಮ್ಮ ದೇವಾಲಯಗಳು.

ಇನ್ನು ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕು ಪ್ರಸಿದ್ದ ಪ್ರವಾಸೀ ತಾಣಗಳಿಗೆ ಹೆಸರುವಾಸಿ, ಜಗತ್ಪ್ರಸಿದ್ಧ ಜೋಗ ಜಲಪಾತ ಒಂದು ಕಡೆ ಆದರೆ ಕಳೆದು ಹೋದ ಕರ್ನಾಟಕದ ವೈಭವವನ್ನು ತಿಳಿಸುವ ಕೆಳದಿ, ಇಕ್ಕೇರಿ ಒಂದುಕಡೆ, ಹೀಗೆ ಸಾಗುತ್ತಾ ಹೋದಂತೆ ಮಲೆನಾಡಿನ ಸೊಬಗು ಇಮ್ಮಡಿಗೊಳಿಸುವ ಶರಾವತಿ ಹಿನ್ನೀರು ಇಂತಹ ಪ್ರಕೃತಿ ಮಡಿಲಲ್ಲಿ ಎಲೆಮರೆಯ ಕಾಯಿಯಂತೆ ತಲೆ ಎತ್ತಿರುವ ದೇವಾಲಯವೇ ಹಂಸಗಾರಿನ ಸಿದ್ದಿವಿನಾಯಕ ಲಕ್ಷ್ಮೀನಾರಾಯಣ ದೇವಸ್ಥಾನ.

Map

ಹಂಸಗಾರು

[ಬದಲಾಯಿಸಿ]

ಇದು ಬೆಂಗಳೂರಿನಿಂದ 372 ಕಿ.ಮೀ ದೂರದಲ್ಲಿದೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಿಂದ ಕೇವಲ 16 ಕಿ.ಮೀ ದೂರ ಕ್ರಮಿಸಿದರೆ ಹಂಸಗಾರಿನ ಸಿದ್ದಿವಿನಾಯಕ ಲಕ್ಷ್ಮೀನಾರಾಯಣ ದೇವಸ್ಥಾನ ನಮಗೆ ಎದುರಾಗುತ್ತದೆ. ಈ ದೇವಾಲಯವು ಸುಮಾರು 300 ಕ್ಕೂ ಹೆಚ್ಚು ವರ್ಷಗಳ ಇತಿಹಾಸ ಹೊಂದಿದೆ. ಇದು ಆ ಗ್ರಾಮದ ಶಕ್ತಿ ದೇವತೆಯಾಗಿದ್ದು ನಂಬಿ ಬಂದ ಭಕ್ತರ ಇಷ್ಟಾರ್ಥ ನೆರವೇರಿಸಿ ಬೇಡಿದ್ದನ್ನು ನೀಡುವ ಕಾಮದೇನುವಾಗಿದೆ. ಹಿಂದೆ ಹಂಸ ಮಹರ್ಷಿ ಎಂಬ ಋಷಿಯೊಬ್ಬ ಈ ಜಾಗದಲ್ಲಿ ಕಠಿಣ ತಪಸ್ಸನ್ನಾಚರಿಸಿದ್ದರಿಂದ ಈ ಪ್ರದೇಶಕ್ಕೆ ಹಂಸಗಾರು ಎಂಬ ಹೆಸರು ಬಂತು ಎನ್ನುವ ಪ್ರತೀತಿ ಇದೆ. ಇಷ್ಟೇ ಅಲ್ಲ ನಕ್ಷೆಯಲ್ಲಿ ಈ ಪ್ರದೇಶ ಹಂಸ ಪಕ್ಷಿಯ ಆಕೃತಿಯಂತೆ ಕಂಡದ್ದರಿಂದಲೂ ಇದಕ್ಕೆ ಈ ಹೆಸರು ಬಂತು ಎಂದು ಹೇಳುತ್ತಾರೆ.

ದೇವಸ್ಥಾನ

[ಬದಲಾಯಿಸಿ]

ಇನ್ನು ದೇವಾಲಯದ ವಿಷಯಕ್ಕೆ ಬಂದರೆ ಇಲ್ಲಿ ಲಕ್ಷ್ಮೀ ಶ್ರೀಮನ್ನಾರಾಯಣನ ಹೃದಯಲ್ಲಿ ನೆಲೆಸಿರುವುದರಿಂದ ನಾರಾಯಣನ ಮೂರ್ತಿಯನ್ನು ಮಾತ್ರ ಕಾಣಬಹುದು. ಇದರ ಎದುರಿನಲ್ಲಿ ಸಕಲ ವಿಘ್ನ ನಿವಾರಕನಾದ ಸಿದ್ದಿವಿನಾಯಕನನ್ನೂ ಕಾಣಬಹುದು. ಹಾಗಾದರೆ ಇಲ್ಲಿ ಲಕ್ಷ್ಮೀನಾರಾಯಣ ಬಂದದ್ದಾದರೂ ಹೇಗೆ? ಆತನ ಮೂರ್ತಿ ಇಲ್ಲಿ ಪ್ರತಿಷ್ಠಾಪನೆ ಗೊಳ್ಳಲು ಕಾರಣವೇನೆಂದು ನೋಡುತ್ತಾ ಹೋದರೆ ಇದು ನಮ್ಮನ್ನ ಸ್ವಾತಂತ್ರ್ಯ ಹೋರಾಟದ ಆ ಕರಾಳ ದಿನಗಳತ್ತ ಕರೆದೊಯ್ಯುತ್ತದೆ. ಆಗ ಪೋರ್ಚುಗೀಸರು ಆಳ್ವಿಕೆ ಮಾಡುತ್ತಿದ್ದ ಕಾಲ. ವಸ್ತುಗಳನ್ನು ಕೊಟ್ಟು ವಸ್ತುಗಳನ್ನು ತರುವ ಪದ್ದತಿ ಜಾರಿಯಲ್ಲಿದ್ದ ಸಮಯವದು. ಹಂಸಗಾರು ಹೊಸಹಳ್ಳಿ ಹಾಗೂ ಅಲ್ಲೇ ಸುತ್ತಮುತ್ತಲಿನ ಜನರೆಲ್ಲರೂ ಊರಿನಿಂದ ಗಾಡಿಗಳನ್ನು ಕಟ್ಟಿಕೊಂಡು ದೂರದ ಹೊನ್ನಾವರದ ಸಂತೆಗೆ ಮಾರಾಟಕ್ಕಾಗಿ ಬರುತ್ತಿದ್ದರು. ಒಂದೆರಡು ಗಾಡಿಗಳಲ್ಲಿ ಇವರು ಸಂತೆ ಪೇಟೆಗೆ ಹೋಗುತ್ತಿರಲಿಲ್ಲ. ಎಲ್ಲರೂ ಮಾತನಾಡಿಕೊಂಡು 20-30 ಗಾಡಿಗಳನ್ನು ತಾವು ಬೆಳೆದ ಮೆಣಸು, ಏಲಕ್ಕಿ,ಅಡಿಕೆ ಮುಂತಾದ ಪದಾರ್ಥಗಳನ್ನು ತುಂಬಿಕೊಂಡು ಮಾರಾಟಕ್ಕೆ ಹೋಗುತ್ತಿದ್ದರು. ಹೀಗೇ ವರುಷಗಳು ಉರುಳಿರಲು ಒಂದು ದಿನ ಮಾರ್ಗ ಮದ್ಯದಲ್ಲಿ ಇವರೆಲ್ಲರೂ ವಿಶ್ರಾಂತಿಗಾಗಿ ತಂಗಿದ್ದ ಸಮಯ. ಸುಮಾರು ಬೆಳಗಿನ ಜಾವದಲ್ಲಿ ಆ ಗುಂಪಿನಲ್ಲಿದ್ದ ಒಬ್ಬ ವ್ಯಕ್ತಿಗೆ ನಾನು ಇಲ್ಲಿದ್ದೇನೆ, ಕಾಡಿನಲ್ಲಿನ ಇಂತದ್ದೊಂದು ಮರದ ಕೆಳಗೆ ನಾನಿದ್ದೇನೆ ನನ್ನನ್ನು ನಿಮ್ಮ ಊರಿಗೆ ತೆಗೆದುಕೊಂಡು ಹೋಗಿ ಎಂದು ಶ್ರೀಮನ್ನಾರಾಯಣ ಕನಸಿನಲ್ಲಿ ಹೇಳಿದಂತೆ ಭಾಸವಾಗಿ ಮರುದಿನ ಘಟನೆಯನ್ನು ಎಲ್ಲರಿಗೂ ವಿವರಿಸಲು ಊರ ಮಂದಿ ಸೇರಿ ಕಾಡಿನಲ್ಲಿ ಕನಸಿನಲ್ಲಿ ಹೇಳಿದ ಸ್ಥಳ ಅರಸಿ ಹೋಗಲು ಅವರಿಗೆ ಅಲ್ಲಿ ಒಂದು ಅಚ್ಚರಿ ಕಾದಿತ್ತು. ಕನಸಿನಲ್ಲಿ ಹೇಳಿದ ವಾಣಿಯಂತೆ ಅಲ್ಲಿ ಶ್ರೀ ಲಕ್ಷ್ಮೀನಾರಾಯಣನ ಮೂರ್ತಿ ತರಗೆಲೆಗಳ ಅಡಿಯಲ್ಲಿ ಊರ ಜನರಿಗೆ ಸಿಕ್ಕಿತ್ತು. ಇಷ್ಟಾದ ಮೇಲೆ ಆ ವಿಗ್ರಹವನ್ನು ಗ್ರಾಮಕ್ಕೆ ತರುವುದು ಹೇಗೆ? ಅದು ಪೋರ್ಚುಗೀಸರ ಕಣ್ಣು ತಪ್ಪಿಸಿ ತರುವುದು ಒಂದು ದೊಡ್ಡ ಸವಾಲೇ ಆಗಿತ್ತು. ಕೊನೆಗೆ ವಿಗ್ರಹವನ್ನು ಕಂಬಳಿ ಯೊಂದರಲ್ಲಿ ಸುತ್ತಿ ಗಾಡಿಗೆ ಹಾಕಿಕೊಂಡು ಬರುತ್ತಿರುವಾಗ ಪೋರ್ಚುಗೀಸ್ ಅಧಿಕಾರಿಗಳು ಗಾಡಿಯ ತಪಾಸಣೆಗೆಂದು ಬಂದಾಗ ಅಲ್ಲಿ ಯಾವುದೋ ವ್ಯಕ್ತಿ ನೋವಿನಿಂದ ನರಳಿದಂತೆ ಎಲ್ಲರಿಗೂ ಭಾಸವಾಗಿತ್ತು ಅಧಿಕಾರಿಗಳು ಕೂಡಾ ಗಾಡಿಯಲ್ಲಿ ಅನಾರೋಗ್ಯ ಪೀಡಿತ ಇದ್ದಾನೆಂದೇ ಭಾವಿಸಿ ತಪಾಸಣೆ ನಡೆಸದೇ ಗಾಡಿಯನ್ನು ಹಾಗೇ ಬಿಟ್ಟು ಕಳಿಸಿದರಂತೆ. ಇದು ದೇವರ ಪವಾಡ ಎಂಬುದು ಪ್ರತೀತಿ. ಆದರೆ ಆ ಕಾಡಿನ ಮದ್ಯದಲ್ಲಿ ವಿಗ್ರಹ ಬಂದದ್ದಾದರೂ ಹೇಗೆ ಎಂಬುದೇ ಚಿಂತಕರ ಪ್ರಶ್ನೆ. ಹೀಗೆ ಲಕ್ಷ್ಮೀನಾರಾಯಣ ಹಂಸಗಾರು ಗ್ರಾಮಕ್ಕೆ ಪ್ರವೇಶ ಪಡೆದದ್ದು. ಇನ್ನು ಈ ಸ್ಥಳಕ್ಕೆ ಭೇಟಿ ನೀಡಿದ ದತ್ತಾತ್ರೇಯ ಸ್ವಾಮಿಯ ಅವತಾರಿಯಾದ ಸದ್ಗುರು ಶ್ರೀಧರ ಸ್ವಾಮಿಗಳು ಹೇಳಿದ ಪ್ರಕಾರ ಈ ದೇವಾಲಯಕ್ಕೆ ಸಾಕ್ಷಾತ್ ಜಯ-ವಿಜಯರೇ ಕಾವಲಿದ್ದಾರೆ. ಅಷ್ಟೇ ಅಲ್ಲ ಈ ಊರಿನಿಂದ ಕೆಲವೇ ಕಿಲೋಮೀಟರ್ ಅಂತರದಲ್ಲಿ ಹೊಸಹಳ್ಳಿ ಎಂಬ ಗ್ರಾಮವಿದೆ. ಅಲ್ಲಿ ಆಂಜನೇಯನ ಸನ್ನಿಧಾನವಿದೆ. ಅಲ್ಲಿ ನೆಲೆಸಿರುವ ಆಂಜನೇಯ ಪ್ರತೀ ದಿನ ರಾತ್ರಿ ಲಕ್ಷ್ಮೀನಾರಾಯಣ ನೆಲೆನಿಂತ ಈ ಪ್ರದೇಶಕ್ಕೆ ಭೇಟಿ ನೀಡುತ್ತಾನೆ. ತನ್ನ ಸ್ವಾಮಿಯ ದರ್ಶನ ಮಾಡಿ ಹೋಗುತ್ತಾನೆ ಎಂದು ಹೇಳಿದ್ದರಂತೆ. ಇಂದಿಗೂ ಜನರಲ್ಲಿ ಆ ಕುರಿತು ಬಲವಾದ ನಂಬಿಕೆ ಇದೆ.

ಇಲ್ಲಿ ಮೊದಲು ವಾಸಮಾಡಿದ್ದು ಸಿದ್ದಿವಿನಾಯಕ. ಗಣಪತಿ ಹಂಸಗಾರಿನಲ್ಲಿನ ಮೊದಲ ದೇವತೆ. ಆತನಿಗೆ ಬೇರೆಡೆಯಲ್ಲಿ ಗುಡಿ ಕಟ್ಟಿ ಪೂಜಿಸಲಾಗುತ್ತಿತ್ತು ನಂತರದ ದಿನಗಳಲ್ಲಿ ಲಕ್ಷ್ಮೀನಾರಯಣನ ಪ್ರವೇಶದ ನಂತರ ಸಿದ್ದಿವಿನಾಯಕ ಮತ್ತು ಲಕ್ಷ್ಮೀನಾರಯಣ ಇಬ್ಬರನ್ನೂ ಒಂದೇ ಕಡೆ ಪ್ರತಿಷ್ಠಾಪಿಸಿ ಪೂಜಿಸಲಾಯಿತು. ಆ ನಂತರವೇ ದೇವಸ್ಥಾನವು ಸಿದ್ದಿವಿನಾಯಕ ಲಕ್ಷ್ಮೀನಾರಯಣ ದೇವಸ್ಥಾನ ಎಂಬ ಹೆಸರಿಂದ ಪ್ರಖ್ಯಾತವಾಯಿತು!

ಇನ್ನು ವಿಶಾಲ ಜಾಗದಲ್ಲಿ ನಿರ್ಮಾಣವಾದ ಈ ದೇವಾಲಯ ಉದ್ದನೆಯ ಚಂದ್ರಸಾಲೆ, ಪ್ರದಕ್ಷಿಣಾ ಮಂಟಪ, ಘಂಟಾಮಂಟಪ , ನಿತ್ಯ ದೇವರ ಅಭಿಷೇಕಕ್ಕಾಗಿ ಒಂದು ಬಾವಿ ಹೊಂದಿದೆ. ಇಷ್ಟೇ ಅಲ್ಲ ಎಲ್ಲೆಡೆಯೂ ಬತ್ತಿಹೋಗಿ, ಗಿಡ ಗಂಟೆಗಳಿಂದ ತುಂಬಿ ಮರಿಚಿಕೆಯಾಗಿ ಹೋಗಿದ್ದ ಪುಷ್ಕರಿಣಿ ನಮಗೆ ಇಲ್ಲಿ ಕಾಣಸಿಗುತ್ತದೆ. ಇನ್ನು ಬಹುತೇಕ ದೇವಾಲಯಗಳಂತೆ ಇಲ್ಲಿಯೂ ದ್ವಜಸ್ಥಂಭವನ್ನು ನಾವು ಕಾಣಬಹುದು. ಈ ದ್ವಜಸ್ಥಂಭ ಸ್ಥಾಪನೆಯ ಹಿಂದೆ ಒಂದು ರೋಚಕ ಕಥೆ ಇದೆ. ಈ ದ್ವಜಸ್ಥಂಭ ಇಲ್ಲಿನವರಿಗೆ ಒಂದು ಕಾಡಿನಲ್ಲಿ ಸಿಕ್ಕಿರುವುದು. ಇದನ್ನು ಅಲ್ಲೇ ಹತ್ತಿರದಲ್ಲಿದ್ದ ಬೆಳ್ಳೆಣ್ಣೆ ಎಂಬ ಊರಿನ ದೇವಸ್ಥಾನಕ್ಕೆ ಸಾಗಿಸಲು ಎಲ್ಲರೂ ತೀರ್ಮಾನಿಸಿರುತ್ತಾರೆ. ಅದರಂತೆ ಕಲ್ಲಿನ ಕಂಬವಾದ ಅದನ್ನು ಎಷ್ಟು ಮಂದಿ ಪ್ರಯತ್ನ ಪಟ್ಟರೂ ಕಿಂಚಿತ್ತೂ ಸರಿಸಲು ಆಗದಿದ್ದಾಗ ಆನೆಯೊಂದನ್ನು ತಂದು ಅದಕ್ಕೆ ಕಟ್ಟಿ ಎಳೆಸುವ ಪ್ರಯತ್ನ ಮಾಡಿದರೂ ಅ ಕಂಬ ಅಲ್ಲಿಂದ ಕದಲುವುದೇ ಇಲ್ಲ. ನಂತರ ಇದನ್ನು ಹಂಸಗಾರಿನ ಲಕ್ಷ್ಮೀನಾರಾಯಣನ ಸನ್ನಿಧಾನಕ್ಕೆ ತೆಗೆದುಕೊಂಡು ಹೋಗುವುದಾಗಿ ಹೇಳಿದಾಗ ಆ ಕಂಬ ಜಾಗ ಬಿಟ್ಟಿತ್ತಂತೆ, ಅಂದು ಕಲ್ಲಾಗಿ ನೆಲಕಂಟಿದ್ದ ಆ ಕಂಬ ಇಂದು ಹಂಸಗಾರು ದೇವಸ್ಥಾನದಲ್ಲಿ ದ್ವಜಸ್ಥಂಭವಾಗಿ ರಾರಾಜಿಸುತ್ತದೆ. ದೇವರ ಸಂಕಲ್ಪ ಹೇಗಿದೆಯೋ ಹಾಗೆಯೇ ನೆಡೆಯಬೇಕಲ್ಲವೇ?

ಉತ್ಸವಗಳು

[ಬದಲಾಯಿಸಿ]

ಇನ್ನು ಈ ದೇವಸ್ಥಾನದಲ್ಲಿ ವರ್ಷದಲ್ಲಿ 3 ಬಾರಿ ವಿಶೇಷ ಉತ್ಸವಗಳು ಜರುಗುತ್ತವೆ. ಮೊದಲನೇಯದು ಆಯನೋತ್ಸವ ಇದು ಸುಮಾರು ಮಾರ್ಚ್ ಅಥವಾ ಏಪ್ರಿಲ್ ತಿಂಗಳಲ್ಲಿ ಜರುಗುತ್ತದೆ. ಇದು ಅತ್ಯಂತ ವಿಜೃಂಭಣೆಯಿಂದ ನಡೆಯುವ ಕಾರ್ಯಕ್ರಮವಾಗಿದೆ. ಎರಡನೇಯದಾಗಿ ಯುಗಾದಿ ಸಂತರ್ಪಣೆ, ಇದು ಯುಗಾದಿ ದಿನದಿಂದ ಚಿತ್ರ ಪೂರ್ಣಿಮೆಯ ವರೆಗೆ ನಡೆಯುತ್ತದೆ. ಆ ಸಮಯದಲ್ಲಿ ಪಲ್ಲಕ್ಕಿ ಉತ್ಸವ ಮತ್ತು ದೇವರಿಗೆ ನಿತ್ಯ ವಿಷೇಶ ಪೂಜಾ ಕೈಂಕರ್ಯಗಳು ನಡೆಯುತ್ತವೆ. ಇನ್ನು ಮೂರನೇಯದಾಗಿ ಆಷಾಡ ಮಾಸದಲ್ಲಿ ನಡೆಯುವ ಉತ್ಸವ. ಈ ಸಮಯದಲ್ಲಿ ಹೋಮ ಹವನಗಳನ್ನು ನಡೆಸಲಾಗುತ್ತದೆ. ಅನುಕೂಲಕ್ಕೆ ತಕ್ಕಂತೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.

ಯುಗಾದಿ ಮತ್ತು ಆಷಾಢ ಮಾಸದ ಉತ್ಸವಗಳು ಕೇವಲ ಊರಿನವರಿಗೆ ಮಾತ್ರ ಸೀಮಿತವಾಗಿದ್ದರೆ. ಆಯನೋತ್ಸವ ಸುತ್ತ ಹತ್ತು ಹಳ್ಳಿಗಳ ಜನರೂ ಸೇರಿ ನಡೆಸುವ ಹಬ್ಬವಾಗಿದೆ. ಇದು ಎಲ್ಲಾ ಜನಾಂಗದವರೂ ನಿಂತು ಮಾಡುವ ಕಾರ್ಯವಾಗಿದೆ. ಈ ಸಮಯದಲ್ಲಿ ಪ್ರತಿಯೊಂದು ಜನಾಂಗಕ್ಕೂ ಒಂದೊಂದು ಜವಾಬ್ದಾರಿ ನೀಡಲಾಗಿದೆ. ಚಪ್ಪರ ಹಾಕಲು ಒಂದು ಜನಾಂಗ, ದೀಪ ಹಿಡಿಯುವವರು ಒಂದು ಜನಾಂಗ, ಹೀಗೆ ಅನೇಕ ಕೆಲಸಗಳು ಎಲ್ಲರಿಗೂ ಹಂಚಿಕೆಯಾಗಿವೆ.

ಇನ್ನು ಈ ಉತ್ಸವದ ಪ್ರಮುಖ ಆಕರ್ಶಣೆ ಎಂದರೆ ತೆಪ್ಪೋತ್ಸವ. ಹಗಲು 8 ಗಂಟೆಗೆ ಪ್ರಾರಂಭವಾಗುವ ಉತ್ಸವದ ಒಂದು ಹಂತ ಮುಗಿದ ಸೂಚನೆ ನೀಡುವುದೇ ಈ ತೆಪ್ಪೋತ್ಸವ. ಮರುದಿನ ಮುಂಜಾನೆ 2 ಗಂಟೆ ಸಮಯದಲ್ಲಿ ಬಾಳೆ ದಿಂಡಿನಿಂದ ತೆಪ್ಪ ಮಾಡಿ ಅದಕ್ಕೆ ಹೂವುಗಳಿಂದ ಅಲಂಕರಿಸಿ ಅದರ ಮದ್ಯದಲ್ಲಿ ದೇವರನ್ನು ಕೂರಿಸಿ ಪುಷ್ಕರಿಣಿಯಲ್ಲಿ ತೇಲಿಸಲಾಗುತ್ತದೆ. ಆ ದೃಷ್ಯ ನೋಡುಗರಿಗೆ ರೋಮಾಂಚನವನ್ನುಂಟುಮಾಡುತ್ತದೆ. ಇದಾದ ನಂತರ ದೇವಸ್ಥಾನದ ಬಾಗಿಲನ್ನು ಮುಚ್ಚಿ ಬಿಡಲಾಗುತ್ತದೆ. ವೈಕುಂಠದ ಬಾಗಿಲನ್ನು ಲಕ್ಷ್ಮೀ ಭದ್ರ ಪಡಿಸಿಕೊಂಡ ಸನ್ನಿವೇಶ, ಶ್ರೀಮನ್ನಾರಾಯಣ ಆಕೆಯ ಮನವೊಲಿಸಿ ಬಾಗಿಲನ್ನು ತೆಗೆಸಿದ್ದು ಹೇಗೆ ಎಂಬುದನ್ನು ಮಾತುಗಾರಿಕೆ ಎಂಬ ಒಂದು ಕಲಾ ಪ್ರಕಾರದ ಮೂಲಕ ಕಥೆ ಹೇಳಲಾಗುತ್ತದೆ. ಇದಾದ ನಂತರ ಬಾಗಿಲು ತೆರೆದು ದೇವರನ್ನು ಒಳಗೆ ಕರೆದುಕೊಂಡು ಹೋಗಲಾಗುತ್ತದೆ. ಅಷ್ಟಾಂಗ ಸೇವೆಯಂತಹ ವಿವಿಧ ಕಾರ್ಯಕ್ರಮಗಳು ಇಲ್ಲಿ ನಡೆಯುತ್ತವೆ. ಈ ಉತ್ಸವದ ಸಮಯದಲ್ಲಿಯೇ ಬಹಳಷ್ಟು ಮಂದಿ ಹರಕೆ ಕಟ್ಟಿಕೊಂಡವರು ಹರಕೆ ತೀರಿಸಿ ಹೋಗುತ್ತಾರೆ. ಈ ಸಮಯದಲ್ಲಿಯೇ ಅಕ್ಕಿ, ಕಾಯಿ, ದವಸಧಾನ್ಯಗಳು, ದುಡ್ಡು ಮುಂತಾದವುಗಳ ತುಲಾಭಾರ ಸೇವೆಯೂ ನಡೆಯುತ್ತದೆ. ಹೀಗೆ ಹರಕೆ ಕಟ್ಟಿಕೊಂಡವರು ಕಾರ್ಯಸಿದ್ದಿಯ ಫಲವಾಗಿ ಇಲ್ಲಿ ನಿರಂತರ ಸೇವೆ ಸಲ್ಲಿಸುತ್ತಾರೆ.

ಲಕ್ಷ್ಮೀನಾರಾಯಣ ತನ್ನ ಬಳಿ ಕಷ್ಟ ಎಂದು ಬಂದವರನ್ನು ಎಂದೂ ಹಾಗೆಯೇ ಕಳಿಸಿಲ್ಲ. ಇಲ್ಲಿ ಬಂದವರು ಸಮಾಧಾನದಿಂದ ಹಿಂದಿರುಗಿದ್ದಾರೆ. ಇಲ್ಲಿ ಗಮನಿಸಬೇಕಾದ ಮತ್ತೊಂದು ಆಂಶ ಎಂದರೆ ಆ ಊರಿನಲ್ಲಿ ಯಾರಿಗೂ ಯಾವ ಕೊರತೆಯೂ ಇಲ್ಲ. ದೇವಸ್ಥಾನದ ಹೆಸರಿಗೆ ಇರೋದು ಕೇವಲ ಮೂರು ಗುಂಟೆ ಜಾಗ ಮಾತ್ರ. ಆದರೆ ಅಲ್ಲಿನ ಪ್ರತಿಯೊಂದು ಮನೆಯವರೂ ಕೂಡಾ ಮೂರು ಗುಂಟೆಗಳಿಗಿಂತಲೂ ಅಧಿಕ ಜಾಗದ ತೋಟ ಗದ್ದೆಗಳನ್ನು ಹೊಂದಿದ್ದಾರೆ. ಬಡತನವಿಲ್ಲ, ನೋವಿಲ್ಲ, ಸುಖ ಶಾಂತಿ ನೆಮ್ಮದಿಯ ಬೀಡಾಗಿದೆ ಈ ಹಂಸಗಾರು. ಹೀಗಿರುವಾಗ ವೈಕುಂಠದ ಒಡೆಯನ ನಿಜವಾದ ಅಸ್ತಿತ್ವಕ್ಕೆ ಬೇರೆ ಉದಾಹರಣೆ ಬೇಕೆ? ಇಲ್ಲಿಗೆ ಜಯ ವಿಜಯರೇ ಕಾವಲಿರುವಾಗ, ಪ್ರತೀ ದಿನವೂ ಆಂಜನೇಯನ ಪಾದಸ್ಪರ್ಷವಾಗುವ ಪವಿತ್ರ ನೆಲವಾಗಿರುವಾಗ ಅಷ್ಟೇ ಏಕೆ ಸಾಕ್ಷಾತ್ ಶ್ರೀಮನ್ನಾರಾಯಣನೇ ನೆಲೆನಿಂತ ಈ ಊರಿನಲ್ಲಿ ಸುಖ ಶಾಂತಿ ನೆಮ್ಮದಿ ಸದಾಕಾಲ ನೆಲೆಸಿರಲಿ ಎಂಬುದೇ ಊರವರ ಮತ್ತು ಅಲ್ಲಿ ಭೇಟಿ ನೀಡಿದವರ ಆಶಯವಾಗಿದೆ.