ಸಿದ್ಧವೇಷ

ವಿಕಿಪೀಡಿಯ ಇಂದ
(ಸಿದ್ದವೇಷ ಇಂದ ಪುನರ್ನಿರ್ದೇಶಿತ)
Jump to navigation Jump to search

ತುಳುನಾಡಿನ ಜನಪದ ಕಲೆಗಳಲ್ಲಿ ಸಿದ್ಧವೇಷ ಎಂಬುದು ಕೂಡ ಒಂದು. ಈ ಕುಣಿತಕ್ಕೆ ತುಳುನಾಡಿನ ಹಳ್ಳಿಗಳಲ್ಲಿ ಬಹಳ ಪ್ರಾಮುಖ್ಯತೆ ನೀಡಲಾಗುತ್ತದೆ. ಸುಗ್ಗಿ ತಿಂಗಳಲ್ಲಿ ಕೃಷಿ ಚಟುವಟಿಕೆ ಮುಗಿದ ನಂತರ ಪುರುಷ ಪ್ರಧಾನವಾದ ಈ ಕುಣಿತವನ್ನು ಮೂರು, ನಾಲ್ಕು ಅಥವಾ ಐದು ದಿನಗಳ ಕಾಲ ರಾತ್ರಿ ಸಮಯದಲ್ಲಿ ಕುಣಿತ ಮಾಡುವುದು ಕಲೆಯ ವಿಶೇಷತೆಯಾಗಿದೆ. ತುಳುನಾಡಿನ ಜನಪದ ಕುಣಿತಗಳಲ್ಲಿ ಆಚರಣಾತ್ಮಕ ಕುಣಿತಗಳು ಮತ್ತು ಮನೋರಂಜನಾತ್ಮಕ ಕುಣಿತಗಳೆಂಬ ಎರಡು ರೀತಿಯ ಕುಣಿತಗಳಿವೆ. ವಿವಿಧ ಹೆಸರುಗಳಿಂದ ಕರೆಯಲ್ಪಡುವ ಈ ಕುಣಿತ ಆಚರಣಾತ್ಮಕವೂ, ಹೌದು ಮನೋರಂಜನೆಯೂ ಹೌದು.

ಸಿದ್ಧವೇಷ

ಸಿದ್ಧವೇಷ[ಬದಲಾಯಿಸಿ]

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ, ಪುತ್ತೂರು ಮತ್ತು ಬೆಳ್ತಂಗಡಿ ತಾಲೂಕುಗಳಲ್ಲಿ ವಾಸ ಮಾಡುತ್ತಿರುವ 'ಗೌಡ' ಜನಾಂಗದವರು ಸುಗ್ಗಿ ಹುಣ್ಣಿಮೆಯ ಸಂದರ್ಭದಲ್ಲಿ ‘ಸಿದ್ಧವೇಷ’ ಕುಣಿಯುತ್ತಾರೆ.[೧] ನಿಗದಿ ಪಡಿಸಿದ ದಿನ ಹಳ್ಳಿಯ ಹಿರಿಯನೊಬ್ಬನ ನೇತೃತ್ವದಲ್ಲಿ ಆಸಕ್ತ ಗೌಡ ಯುವಕರು ಊರಿನ ಭೂತದ ಛಾವಡಿಯಲ್ಲೋ, ಗುರಿಕಾರನ ಮನೆಯಲ್ಲೋ ಒಟ್ಟು ಸೇರಿ ‘ಸಿದ್ಧವೇಷ’ ಕುಣಿಯಲು ದಿನ ನಿಶ್ಚಯ ಮಾಡುತ್ತಾರೆ. ಕನಿಷ್ಠ ಏಳೆಂಟು ಮಂದಿ ಯುವಕರು ಕುಣಿತಕ್ಕೆ ನಿಲ್ಲುತ್ತಾರೆ. ಅತ್ಯಂತ ಹಾಸ್ಯಪ್ರಜ್ಞೆ ಇರುವಾತನು ‘ಬ್ರಾಹ್ಮಣ’ನ ವೇಷವನ್ನು ಹಾಕುತ್ತಾನೆ. ಇನ್ನೊಬ್ಬ ದಾಸಯ್ಯನ ವೇಷವನ್ನೂ ಉತ್ಸಾಹಿಯೂ ಕ್ರಿಯಾಶೀಲನೂ ಆಗಿರುವಾತ ಮತ್ತೊಬ್ಬ ಸನ್ಯಾಸಿಯ ವೇಷ ಹಾಕಲು ತಯಾರಾಗುತ್ತಾನೆ. ಇವಿಷ್ಟು ಸಿದ್ಧವೇಷದ ಪಾತ್ರಗಳು.

ವೇಷಭೂಷಣ[ಬದಲಾಯಿಸಿ]

ಕುಣಿತದವರು ತಲೆಗೆ ಕೆಂಪುಬಣ್ಣದ ಮುಂಡಾಸನ್ನು ಸುತ್ತಿಕೊಳ್ಳುತ್ತಾರೆ. ಮುಂಡಾಸಿನ ಒಂದು ತುದಿ ಬಲ ಕಿವಿಯ ಕಡೆಯಿಂದ ಭುಜಕ್ಕೆ ಇಳಿದಿರುತ್ತದೆ. ಬಿಳಿ ಪಂಚೆಯ ಕಚ್ಚೆ ಹಾಕಿ ಮೈಗೆ ಬನಿಯನ್ ಧರಿಸುತ್ತಾರೆ. ಕೆಲವು ಕಡೆ ಅಂಗಿ ಹಾಕುವ ಕ್ರಮವೂ ಉಂಟು. ಸೊಂಟಕ್ಕೆ ಗಟ್ಟಿಯಾಗಿ ದಟ್ಟಿಯೊಂದನ್ನು ಬಿಗಿಯುತ್ತಾರೆ. ದಾಸಯ್ಯನು ಕೆಂಪು ಶಾಲು ಹೊದ್ದು ಕೈಯಲ್ಲಿ ಶಂಖ ಮತ್ತು ಜಾಗಟೆಯನ್ನು ಹಿಡಿದಿರುತ್ತಾನೆ. ಬ್ರಾಹ್ಮಣ ವೇಷದಾರರಿಗೆ ಬಿಳಿ ಪಂಚೆಯ ಕಚ್ಚಿ, ತಲೆಗೆ ಜುಟ್ಟು ಗೋಣಿನಾರಿನ ಹಗ್ಗದಿಂದ ತಯಾರಿಸಿದ ಜನಿವಾರವಿರುತ್ತದೆ. ಮೈಗೆ ಗಂಧ, ಹಣೆಗೆ ನಾಮ ಇರುತ್ತದೆ. ಕುಣಿತದ ಮುಖ್ಯ ವೇಷವೆಂದರೆ ‘ಸನ್ಯಾಸಿ’ಯದು. ಈತನ ದೇಹಕ್ಕೆ ಒಣಗಿದ ಬಾಳೆಎಲೆಗಳನ್ನು ದೇಹವು ಕಾಣದಂತೆ ಕಟ್ಟಲಾಗುತ್ತದೆ. ಕಂಗಿನ ಹಾಳೆಯನ್ನು ಶಂಖುವಿನಾಕಾರದಲ್ಲಿ ಮಡಿಸಿ ತಲೆಗೆ ಬೋರಲಾಗಿ ಇಟ್ಟುಕೊಂಡು ತಲೆಯನ್ನು ಮರೆಸುತ್ತಾರೆ. ಹಸಿ ಬಾಳೆಎಲೆಯನ್ನು ತಂದು ಗರಗಸದಂತೆ ಕತ್ತಲು ಮುಖಕ್ಕೆ ಅಡ್ಡವಾಗಿ ಕಟ್ಟಿ ಇಡೀ ಮುಖವನ್ನು ಮರೆಮಾಚುತ್ತಾರೆ.[೨]

ಕುಣಿತದಲ್ಲಿರುವ ವೇಷಗಳು[ಬದಲಾಯಿಸಿ]

ಅನ್ಯರನ್ನು ಹೊರತುಪಡಿಸಿ, ಗೌಡ ಜನಾಂಗದವರು ಈ ಕುಣಿತದಲ್ಲಿ ಪಾಲ್ಗೊಳ್ಳುತ್ತಾರೆ. ದಾಸಯ್ಯ, ಬ್ರಾಹ್ಮಣ,ಸನ್ಯಾಸಿ, ಕುಣಿತದವರು.

ಹಿನ್ನೆಲೆ[ಬದಲಾಯಿಸಿ]

ಗೌಡ ಜನಾಂಗದ ಮೂಲ ಭಾಷೆ ಕನ್ನಡ ಆಗಿರುವುದರಿಂದ ಇಂದು ಕೂಡಾ ಕುಣಿತದಲ್ಲಿ ಅಲ್ಲಲ್ಲಿ ಕನ್ನಡ ಭಾಷೆ ಬಳಕೆಯಾಗುವುದನ್ನು ನಾವು ಕಾಣುತ್ತೇವೆ. ನಾಥಪಂಥ ಮೂಲತ: ಬೌದ್ದ ಧರ್ಮದ ಮಹಾಯಾನ ಶಾಖೆಯ ವಜ್ರಯಾನದಿಂದ ಹುಟ್ಟಿದ ಬೌದ್ದ ತಾಂತ್ರಿಕ ಸಂಪ್ರದಾಯಕ್ಕೆ ಸೇರಿದೆ. ಇದು ಕಾಲದ ಪ್ರಭಾವಕ್ಕೆ ಸಿಲುಕಿ ನಂತರ ಶೈವ ಧರ್ಮದ ತೆಕ್ಕೆಗೆ ಬಂದು ಅದರ ತಾಂತ್ರಿಕ ಶಾಖೆಯಾಗಿ ಪರಿವರ್ತನೆಯಾಯಿತು. ಇಲ್ಲಿ ಧರ್ಮಗಳ ಉಗಮದ ನಂತರ ಆ ಧರ್ಮಗಳು ರಾಜತ್ವದ ಸೆಳೆತಕ್ಕೆ ಸಿಲುಕಿ ಅಲ್ಲಲ್ಲಿ ವಿವಿಧ ಪಂಥಗಳಾಗಿ ಆಯಾಯ ಕಾಲದ ಪ್ರಭಾವಕ್ಕೆ ಒಳಗಾಗಿ ತನ್ನದೇ ಆದ ಅಸ್ತಿತ್ವವನ್ನು ಕೆಲವು ಪಂಥಗಳು ಕಳೆದುಕೊಂಡಿವೆ. ಇನ್ನೂ ಕೆಲವು ಪಂಥಗಳು ತನ್ನ ನೆಲೆಯನ್ನು ಗಟ್ಟಿಗೊಳಿಸಿವೆ. ಮತ್ಸ್ಯೇಂದ್ರನಾಥನು ನಾಥ ಪಂಥದ ಪ್ರವರ್ತಕನಾಗಿದ್ದು ಈತ ಕದಳೀ ಅಥವಾ ಕದ್ರಿಯಲ್ಲಿ ಸ್ಥಾಪಿಸಿದ ಶಿವಲಿಂಗವೇ ಮಂಜುನಾಥ ಎಂಬ ಹೆಸರು ಪಡೆದು ಪ್ರಖ್ಯಾತಿಯನ್ನು ಹೊಂದಿತು. ನಾಥಪಂಥದಲ್ಲಿ ಹನ್ನೆರಡು ಗುಂಪುಗಳಿವೆ. ನಾಥ ಪಂಥಕ್ಕೆ ಸಂಬಂಧಿಸಿದ ಪೂಜಾ ಸ್ಥಳಗಳಾಗಿ ಮಠ, ದೇವಸ್ಥಾನ ಹಾಗೂ ಸಮಾಧಿಗಳು ಮುಖ್ಯವಾಗಿ ಗುರುತಿಸಿಕೊಳ್ಳುತ್ತವೆ. ನೇಪಾಳ ಹಾಗೂ ಪಾಕಿಸ್ತಾನಗಳಲ್ಲಿ ಈ ಪಂಥದ ಪೂಜಾ ಸ್ಥಳಗಳು ಹೆಚ್ಚಾಗಿ ಕಂಡುಬರುತ್ತದೆ. ಯಾವುದೇ ವ್ಯಕ್ತಿಯೂ ಸಂನ್ಯಾಸಿಯಾಗಿ ಯೋಗಸಾಧನೆ ಮಾಡುವುದೇ ಮುಕ್ತಿಗೆ ದಾರಿ ಎಂಬ ನಂಬಿಕೆ ಈ ಪಂಥದ್ದಾಗಿದೆ. ಈ ಪಂಥದ ಅನುಯಾಯಿಗಳನ್ನು ಯೋಗಿ ಅಥವಾ ಜೋಗಿ ಎಂದು ಕರೆಯುತ್ತಾರೆ. ಮಂಗಳೂರಿನ ಕದ್ರಿಗುಡ್ಡ ನಾಥಪಂಥದ ಪ್ರಮುಖ ಕೇಂದ್ರ 10-11ನೇ ಶತಮಾನದಲ್ಲಿ ಕದ್ರಿಯು ದಕ್ಷಿಣ ಭಾರತದಲ್ಲಿ ಪ್ರಮುಖವಾದ ಮಠವಾಗಿತ್ತು. ಇಲ್ಲಿ ಮಂಜುನಾಥನಲ್ಲದೆ ತುಳುನಾಡ ದೈವಗಳು ಕೂಡಾ ಪೂಜಿಸಲ್ಪಡುತ್ತಿತ್ತು. ಅದನ್ನು ಇಂದು ಕೂಡ ಆಚರಿಸಿಕೊಂಡು ಬರಲಾಗಿದೆ. ಗುರುಪುರ, ವಿಟ್ಲ, ಪುತ್ತೂರು. ತುಳುನಾಡಿನೆಲ್ಲೆಡೆ ಈ ಪಂಥದ ಅನುಯಾಯಿಗಳು ಕಂಡುಬರುತ್ತಾರೆ. ಚುಂಚನಗಿರಿ ಮಠ ಕೂಡ ಜೋಗಿ ಸಂಪ್ರದಾಯಕ್ಕೆ ಸೇರಿದೆ. ಪುತ್ತೂರು, ಸುಳ್ಯದಲ್ಲಿ ಈ ಪಂಥದವರು ಪುರುಷ ಕುಣಿತಕ್ಕೆ ಸಾಮ್ಯವಿರುವ ಸಿದ್ದವೇಷ ಎಂಬ ಹಗಲು ಕುಣಿತವನ್ನು ಮಾಡುತ್ತಾರೆ. ಅದೇ ರೀತಿ ಇಂದು ಬೆಳ್ತಂಗಡಿ ತಾಲೂಕಿನಲ್ಲಿ ಮಾತ್ರ ಅಲ್ಲಲ್ಲಿ ಕಂಡುಬರುತ್ತಿರುವ ಪುರುಷರ ಕುಣಿತವನ್ನು ರಾತ್ರಿ ಸಮಯ ಮಾಡುತ್ತಾರೆ. ಗದ್ದೆಯಲ್ಲಿ ಅಥವಾ ಒಬ್ಬ ಗೌಡ ಮುಖಂಡನ ಮನೆಯಲ್ಲಿ ಸಂಬಂಧ ಪಟ್ಟ ಸ್ಥಳ ಸಾನಿಧ್ಯ ದೈವ ದೇವರುಗಳಿಗೆ ಕೈ ಮುಗಿದು ಆ ಕುಣಿತಕ್ಕೆ ಸಂಬಂಧಿಸಿದ ಸಂಪ್ರದಾಯಕ್ಕೆ ಧಕ್ಕೆ ಬಾರದಂತೆ ಹಲವಾರು ವಿಧಿವಿಧಾನಗಳನ್ನು ಆಚರಿಸಿ ವೇಷ ಹಾಕಲು ಪ್ರಾರಂಭಿಸುತ್ತಾರೆ. ಮಂಜುನಾಥ ಸ್ವಾಮಿಯ ದೇವರ ಎದುರು ಆಯಾಯ ವೇಷಕ್ಕೆ ನಿಗದಿಯಾದ ವ್ಯಕ್ತಿಗಳು ಭಕ್ತಿ ಶ್ರದ್ದೆಯಿಂದ ವೇಷ ಧರಿಸಿ ಆ ವೇಷಗಳಿಗೆ ಜೀವ ತುಂಬುತ್ತಾರೆ. ಆರಾಧನಾ ವೇಷಗಳಿಗೆ ಸಂಬಂಧಿಸಿದಂತೆ (ದೇವರ ಬಲಿ, ದೈವದ ಪಾತ್ರಿ ಇತ್ಯಾದಿ) ಒಂದು ವೇಷಕ್ಕೆ ನಿಗದಿಯಾದ ವ್ಯಕ್ತಿಯೇ ಎಲ್ಲಾ ದಿನವು ಅದೇ ವೇಷವನ್ನು ನಿರ್ವಹಿಸುತ್ತಾರೆ. ಎಲ್ಲಾ ವಿಧಿವಿಧಾನಗಳು ಮುಗಿದ ನಂತರ ವೇಷಧಾರಿಗಳು, ವಾಲಗದವರು ಹಾಗೂ ಇತರರು ಒಟ್ಟು ಸೇರಿ ಡಿಂಬಿಸಾಲೆ ಎಂಬ ಉದ್ಘೋಷವನ್ನು ಹಾಕುತ್ತಾರೆ. ಆ ನಂತರ ಎಲ್ಲರೂ ಒಟ್ಟಾಗಿ ಊರಿನ ಗುತ್ತಿನ ಮನೆಯಿಂದ ಆರಂಭಿಸಿ ಮನೆಮನೆಗೆ ಕುಣಿತ ಮಾಡಿಕೊಂಡು ಹೋಗಿ ಪ್ರತಿಯೊಂದು ಮನೆಯಲ್ಲೂ ಎಲ್ಲಾ ವೇಷಧಾರಿಗಳು ತಾವು ಧರಿಸಿದ ಪಾತ್ರದ ಪ್ರದರ್ಶನವನ್ನು ನೀಡುತ್ತಾರೆ. ಪ್ರತಿ ಮನೆಯಲ್ಲೂ ಕೂಡ ಮಂಜುನಾಥನಿಗೆ ಪೂಜೆ ಸಲ್ಲಿಸಲಾಗುತ್ತದೆ.ನಾಥಪಂಥದ ಪ್ರಮುಖ ದೇವರು ಕದ್ರಿ ಮಂಜುನಾಥನನ್ನು ಮನೆಮನೆಗೆ ತಲುಪಿಸುವ ಕಾರ್ಯ ಇಲ್ಲಿ ನಡೆಯುತ್ತದೆ. ಈ ಸಂದರ್ಭದಲ್ಲಿ ನಾಥಪಂಥದ ಪ್ರಚಾರವು ಇಲ್ಲಿ ಮುಖ್ಯ ಉದ್ದೇಶವಾಗಿತ್ತು.

ದಿಂಬಸಾಲೆ[ಬದಲಾಯಿಸಿ]

ನಿಗುರಿ ನಿಂತ ಶಿಶ್ನದಂತೆ ಮಾಡಿ ಸೊಂಟದ ಮುಂಭಾಗಕ್ಕೆ ಕಟ್ಟಿಕೊಳ್ಳುತ್ತಾರೆ. ಸನ್ಯಾಸಿಯ ಕೈಯಲ್ಲಿ ದೊಣ್ಣೆಯೊಂದು ಇರುತ್ತದೆ. ವೇಷಗಳೆಲ್ಲ ಸಿದ್ಧವಾದ ಮೇಲೆ ರಾತ್ರಿಯಾಗುತ್ತಲೇ ಊರು ಸುತ್ತಲು ಹೋಗುತ್ತಾರೆ. ಎಲ್ಲರು ‘ಡಿಂಬಸಾಲೆ’ ಎಂಬ ಸೊಲ್ಲನ್ನು ಹೇಳುತ್ತಾ ಮುಂದುವರಿಯುತ್ತಾರೆ. ತಾವು ಕುಣಿತ ಮಾಡಲಿರುವವರ ಮನೆಗೆ ಹೋಗಿ ಅವರನ್ನು ಎಬ್ಬಿಸುತ್ತಾರೆ. ದೀಪದ ವ್ಯವಸ್ಥೆ ಮಾಡಿಕೊಂಡು ಕುಣಿತವನ್ನು ಆರಂಭಿಸುತ್ತಾರೆ. ಆರಂಭದಲ್ಲಿ ಸನ್ಯಾಸಿ ಮಾತ್ರ ಮರೆಯಲ್ಲಿರುತ್ತಾನೆ. ಕುಣಿತಗಾರರು ವೃತ್ತಾಕಾರವಾಗಿ ನಿಂತು ಹಾಡಿನ ಒಂದು ಸೊಲ್ಲನ್ನು ಹಾಡುತ್ತಾರೆ. ಹೀಗೆ ನಾಲ್ಕು ಹೆಜ್ಜೆಗಳಲ್ಲಿ ವೃತ್ತಾಕಾರವಾಗಿ ಕುಣಿಯುತ್ತಾರೆ. ಪ್ರತಿ ನಾಲ್ಕನೆ ಹೆಜ್ಜೆಗೆ ಕುಣಿತದವರು ವೃತ್ತದ ಮಧ್ಯಕ್ಕೆ ಚಾಚಿಕೊಂಡು ಕೇಂದ್ರಿಕೃತವಾಗುತ್ತಾರೆ. ಅದೇ ಸಂದರ್ಭದಲ್ಲಿ ಎರಡು ಕೈಗಳನ್ನು ಬಲವಾಗಿ ತಾಡಿಸಿ ಚಪ್ಪಾಳೆಯ ಸ್ವರ ಹೊರಡಿಸುತ್ತಾರೆ. ಹೀಗೆ ಹಾಡು ಕುಣಿತ ಮುಂದುವರೆಯುತ್ತಿದ್ದಾಗ ‘ಶೃಂಗೇರಿ ಮಠದಿಂದ’ ಎಂಬ ಸೊಲ್ಲನ್ನು ಸೇರಿಸುತ್ತಿದ್ದಂತೆ ಮರೆಯಾಗಿದ್ದ ಸನ್ಯಾಸಿ ಥಟ್ಟನೆ ಅಂಗಳದಲ್ಲಿ ಪ್ರತ್ಯಕ್ಷನಾಗುತ್ತಾನೆ. ದೊಣ್ಣೆಯನ್ನು ನೆಲದಲ್ಲಿ ಊರುತ್ತಾ ಕುಂಟನಂತೆ ಹೆಜ್ಜೆ ಹಾಕಿ ಲಂಘಿಸಿಕೊಂಡು ಬರುವ ಸನ್ಯಾಸಿ ಕುಣಿತದವರ ವೃತ್ತವನ್ನು ಭೇದಿಸಿ ಒಳಕ್ಕೆ ನುಗ್ಗುತ್ತಾನೆ. ಅದೇ ಸಂದರ್ಭದಲ್ಲಿ ಬ್ರಾಹ್ಮಣರು ಅಂಗಳದ ಬಲಬದಿಗೂ, ದಾಸಯ್ಯ ಅಂಗಳದ ಎಡಬದಿಗೂ ಬಂದು ಕುಳಿತುಕೊಳ್ಳುತ್ತಾರೆ.

ಸನ್ಯಾಸಿ ವೃತ್ತದೊಳಗೆ ಪ್ರವೇಶಿಸುತ್ತಿದ್ದಂತೆ ಕುಣಿತದವರು ತಮ್ಮ ಗಾತ್ವನ್ನು ಕುಗ್ಗಿಸಿ ದೇಹವನ್ನು ಬಗ್ಗಿಸಿ ಕುಣಿತದ ವೇಗವನ್ನು ಹೆಚ್ಚಿಸುತ್ತಾರೆ. ಅದೇ ಪ್ರಮಾಣದಲ್ಲಿ ತನ್ನ ವೇಗವನ್ನು ಹೆಚ್ಚಿಸಿಕೊಂಡ ಸನ್ಯಾಸಿಯು ವೃತ್ತದೊಳಗೆ ಕುಂಟುತ್ತಾ ಅಹಹಾ..ಕುಹಹಾ..ಎಂಬ ಅಸಂಬದ್ದ ಪ್ರಲಾಪ ಮಾಡುತ್ತಾ ಅಡ್ಡಾದಿಡ್ಡಿಯಾಗಿ ಸುತ್ತುತ್ತಿರುತ್ತಾನೆ ಕೊನೆಗೆ ಕುಣಿತದ ಅನಂತರ ಅವರೆಲ್ಲಾ ಅಂಗಳದ ಬದಿಗೆ ಸರಿದು ಸನ್ಯಾಸಿಗೆ ಮುಖ್ಯಸ್ಥಳವನ್ನು ಬಿಟ್ಟು ಕೊಡುತ್ತಾರೆ. ಅಷ್ಟರಲ್ಲಿ ದಾಸಯ್ಯನು ಶಂಖ ಊದುತ್ತಾ, ಜಾಗಟೆ ಭಾರಿಸುತ್ತಾ ಬರುತ್ತಾನೆ. ಬ್ರಾಹ್ಮಣ ಜನಿವಾರವನ್ನು ನೀವುತ್ತಾ ಬಾಯಲ್ಲಿ ಮಂತ್ರ ಹೇಳುತ್ತಾ ವಟಗುಟ್ಟುತ್ತಿರುತ್ತಾನೆ. ಕೊನೆಗೆ ಅವರಿಬ್ಬರನ್ನು ಅಂಗಳದ ಸುತ್ತಾ ಓಡಾಡಿಸುತ್ತಾ ಸನ್ಯಾಸಿಯ ತನ್ನ ಶಿಶ್ನವನ್ನು ಇವರಿಬ್ಬರಿಗೂ ತಾಗಿಸಲು ಯತ್ನಿಸುತ್ತಾನೆ.[೩]

ಕೊನೆಗೆ ಬ್ರಾಹ್ಮಣ ಹಾಗೂ ದಾಸಯ್ಯ ಬದಿಗೆ ಸರಿಯುತ್ತಾರೆ ಸನ್ಯಾಸಿ ಒಬ್ಬನೇ ಉಳಿಯುತ್ತಾನೆ. ಇದೇ ರೀತಿ ತನ್ನ ಚೇಷ್ಟೆಯನ್ನು ಮುಂದುವರಿಸುತ್ತಿರುತ್ತಾನೆ. ಮನೆಯವರು ಭತ್ತ, ಅಕ್ಕಿ, ಹಣದ ರೂಪದಲ್ಲಿ ಸಂಭಾವನೆ ಕೊಡುತ್ತಾರೆ. ಅದನ್ನು ಹೆಗಲಿಗೇರಿಸಿಕೊಂಡು ಇಡೀ ಸಮೂಹ ಮುಂದಿನ ಮನೆಗೆ ಹೋಗುತ್ತದೆ. ಹೀಗೆ ಹೋಗುವಾಗ ದಾರಿಗೆದುರಾಗಿ ಸಿದ್ಧವೇಷದ ಇನ್ನೊಂದು ತಂಡ ಸಿಗಬಾರದು ಎಂದಿದೆ. ಎದುರಾದರೆ ಸಿದ್ಧರ ಬಗೆಗೆ ಮರಗಳ ಬಗೆಗೆ ಪ್ರಶ್ನೋತ್ತರ ನಡೆಯುತ್ತದೆ. ಸರಿಯಾದ ಉತ್ತರ ಬಾರದಿದ್ದಲ್ಲಿ ಹೊಡೆದಾಟಗಳೂ ನಡೆಯುದಿದೆ. ಹಾಗಾಗಿ ಎರಡು ತಂಡಗಳು ಮುಖಾಮುಖಿಯಾಗುವುದನ್ನು ತಪ್ಪಿಸಿಕೊಂಡು ಹೋಗುತ್ತಾರೆ. ಸುಗ್ಗಿ ಹುಣ್ಣಿಮೆಯ ದಿನದಂದು ಈ ಕುಣಿತ ಮುಕ್ತಾಯಗೊಳ್ಳುತ್ತದೆ. ಆ ದಿನ ತಂಡದವರೆಲ್ಲ ಒಟ್ಟುಸೇರಿ ಕೋಳಿಕೊಯ್ದು, ರೊಟ್ಟಿ ತಯಾರಿಸಿ, ಹೆಂಡದ ಜೊತೆಗೆ ಪೂಜೆ ನೆರವೇರಿಸುತ್ತಾರೆ.

ಉಲ್ಲೇಖ[ಬದಲಾಯಿಸಿ]

  1. ಡಾ.ಪುರುಷೋತ್ತಮ ಬಿಳಿಮಲೆ, ೧೯೯೦. ಕರಾವಳಿ ಜಾನಪದ, ಮಂಗಳಗಂಗೋತ್ರಿ ದಕ್ಷಿಣಕನ್ನಡ ಜಿಲ್ಲೆ ಈ ಪುಸ್ತಕದಲ್ಲಿ ಸಿದ್ಧವೇಶ:ಪ್ರತಿಭಟನೆ ಮತ್ತು ನಿರಸನ
  2. ಡಾ. ಯದುಪತಿ ಗೌಡ, ೨೦೦೩. ಗೌಡರು-ಜನಾಂಗ ಮತ್ತು ಕುಣಿತ ಸಂ:ಡಾ.ಕೆ.ಚಿನ್ನಪ್ಪ ಗೌಡ, ಗೌಡ ಜನಾಂಗ ಇತಿಹಾಸ ಮತ್ತು ಸಂಸ್ಕೃತಿ, ಬೆಳ್ಳಿಹಬ್ಬ ಆಚರಣಾ ಸಮಿತಿ, ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘ, ಮಂಗಳೂರು
  3. ಡಾ.ಚಕ್ಕೆರೆ ಶಿವಶಂಕರ್, ೨೦೦೬. ಜನಪದ ಕಲಾ ಪ್ರವೇಶ, ಸಾಗರ್ ಪ್ರಕಾಶನ, ಬೆಂಗಳೂರು. ಕರಾವಳಿ ಕರ್ನಾಟಕದ ಜನಪದ ಕಲೆಗಳು - ಸಿದ್ಧವೇಷ