ವಿಷಯಕ್ಕೆ ಹೋಗು

ಸದಸ್ಯ:N C MAMATHA/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಚಿಕ್ಕಮಗಳೂರು ಭಾರತ ದೇಶದ, ಕರ್ನಾಟಕ ರಾಜ್ಯದ ಒಂದು ಜಿಲ್ಲೆ. ಚಿಕ್ಕಮಗಳೂರು ಜಿಲ್ಲೆ ಕಾಫಿನಾಡು ಎಂದು ಸಹ ಕರೆಯಲ್ಪಡುತ್ತದೆ. ಕ್ರಿ.ಶ. ೧೬೭೦ ರಲ್ಲಿ ದೇಶದಲ್ಲಿಯೇ ಮೊಟ್ಟಮೊದಲ ಕಾಫಿಯನ್ನು ದತ್ತಗಿರಿ/ಬಾಬಾ ಬುಡನ್‌ಗಿರಿಯಲ್ಲಿ ಬೆಳೆಯಲಾಯಿತು. ಚಿಕ್ಕಮಗಳೂರಿನ ಗಿರಿಶ್ರೇಣಿಗಳು ಪಶ್ಚಿಮ ಘಟ್ಟಗಳ ಒಂದು ಭಾಗವಾಗಿದ್ದು, ತುಂಗಾ ಮತ್ತು ಭದ್ರಾ ನದಿಗಳ ಮೂಲಸ್ಥಾನವಾಗಿದೆ. ಕರ್ನಾಟಕದ ಅತ್ಯಂತ ಎತ್ತರ ಶಿಖರವಾದ ಮುಳ್ಳಯ್ಯನ ಗಿರಿ ಚಿಕ್ಕಮಗಳೂರಿನಲ್ಲಿದೆ. ಈ ಜಿಲ್ಲೆಯು ಮಲೆನಾಡು, ಅರೆಮಲೆನಾಡು, ಹಾಗೂ ಬಯಲುಸೀಮೆಗಳನ್ನೊಳಗೊಂಡಿದೆ, ಈ ಜಿಲ್ಲೆಯ ಹೆಚ್ಚು ಪ್ರದೇಶ ಮಲೆನಾಡು'. ವಿವಿಧ ಜಾತಿಯ ಪ್ರಾಣಿಗಳನ್ನೊಳಗೊಂಡ ಅಭಯಾರಣ್ಯಗಳು, ನಿತ್ಯಹರಿದ್ವರ್ಣಕಾಡುಗಳಿಂದ ಕೂಡಿದ ಪರ್ವತ ಶ್ರೇಣಿಗಳು ಹಾಗೂ ಅನೇಕ ಜಲಪಾತಗಳು ಮತ್ತು ಕಾಫಿ, ಟೀ, ಏಲಕ್ಕಿ, ಮೆಣಸು, ಅಡಿಕೆ,ಬಾಳೆ, ತೆಂಗುಗಳನ್ನು ಬೆಳೆಯುವ ನಾಡಾಗಿದೆ. ಜಲ ಮತ್ತು ಪ್ರಕೃತಿ ಸಂಪತ್ತಿನಿಂದ ಪ್ರಸಿದ್ಧಿ ಪಡೆದಿದೆ.

ಉಗಮ[ಬದಲಾಯಿಸಿ]

[ಬದಲಾಯಿಸಿ]

ಚಿಕ್ಕಮಗಳೂರು ಜಿಲ್ಲೆಯು ಅದರ ಜಿಲ್ಲಾಕೇಂದ್ರವಾದ ಚಿಕ್ಕಮಗಳೂರು ಪಟ್ಟಣದಿಂದ ತನ್ನ ಹೆಸರನ್ನು ಪಡೆದುಕೊಂಡಿದೆ. ಚಿಕ್ಕಮಗಳೂರು ಎಂದರೆ “ಚಿಕ್ಕ ಮಗಳ ಊರು” ಎಂದರ್ಥ. ಈ ಪಟ್ಟಣವನ್ನು ಪ್ರಸಿದ್ಧ ಸಖರಾಯ ಪಟ್ಟಣ ಮುಖ್ಯಸ್ಥನಾದ ರುಕ್ಮಾಂಗದ, ಚಿಕ್ಕ ಮಗಳಿಗಾಗಿ ವರದಕ್ಷಿಣೆಯಾಗಿ ನೀಡಿದ ಎಂದು ಹೇಳಲಾಗಿದೆ. ಅದ್ದರಿಂದ ಈ ನಗರಕ್ಕೆ ಚಿಕ್ಕಮಗಳೂರು ಎಂಬ ಹೆಸರು ಬಂದಿದೆ. ಹಾಗೆಯೇ “ಹಿರಿಯ ಮಗಳ ಊರು” ಹಿರೇಮಗಳೂರು ಎಂಬ ಊರು ಚಿಕ್ಕಮಗಳೂರಿನಿಂದ ೫ ಕೀ.ಮೀ.ದೂರದಲ್ಲಿದೆ. ಅದಾಗ್ಯೂ ಬಹುತೇಕರು ಚಿಕ್ಕಮಗಳೂರುನ್ನ ಚಿಕ್ಕಮಂಗಳೂರು ಎಂದು ತಪ್ಪಾಗಿ ಉಚ್ಛರಿಸುತ್ತಾರೆ.ಚಿಕ್ಕಮಗಳೂರು ಜಿಲ್ಲೆ ೧೯೪೭ ರ ತನಕ ಕಡೂರು ಎಂದು ಕರೆಯಲ್ಪಡುತ್ತಿತ್ತು. ಕೆಲವು ಹಳೆಯ ಶಾಸನಗಳ ಪ್ರಕಾರ ಚಿಕ್ಕಮಗಳೂರು ಮತ್ತು ಹಿರೇಮಗಳೂರುಗಳನ್ನು ಕ್ರಮವಾಗಿ ಕಿರಿಯ ಮುಗುಲಿ ಮತ್ತು ಪಿರಿಯ ಮುಗುಲಿ ಎಂದು ಕರೆಯಲಾಗುತ್ತಿತ್ತು.

ಪ್ರಮುಖ ಬೆಳೆ[ಬದಲಾಯಿಸಿ]

[ಬದಲಾಯಿಸಿ]

ಚಿಕ್ಕಮಗಳೂರಿನಲ್ಲಿ ಅತಿಹೆಚ್ಚು ಬೆಳೆಯುವ ಬೆಳೆ ಕಾಫಿ. ಇಲ್ಲಿನ ರೈತರು ಕಾಫಿ ಬೆಳೆಯಮೇಲೆ ಅವಲಂಬಿತರಾಗಿದ್ದಾರೆ. ಇಲ್ಲಿ ಅತಿಹೆಚ್ಚು ಮಳೆಯಾಗುತ್ತದೆ.ಕಾಫೀಯ ತವರುರು ಬಾಬಾಬುಡನ್ ಎ಼಼ಂಬ ಅರೇಬಿಯನ್ ಫಕೀರ್ ಕರ್ನಾಟಕದಲ್ಲಿ ಕಾಫಿಯನ್ನು ಪರಿಚಯಿಸಿದರು. ಇಲ್ಲಿ ಬೆಳೆಯುವ ಕಾಫಿಯ ತಳಿಗಳೆಂದರೆ ಅರೇಬಿಕ್ ಮತ್ತು ರೋಬಸ್ಟ ಅರೇಬಿಕ್ ತಳಿಯನ್ನು ಇಲ್ಲಿ ಹೆಚ್ಚು ಬೆಳೆಯಲಾಗುತ್ತಿದೆ.

ಇತಿಹಾಸ[ಬದಲಾಯಿಸಿ]

[ಬದಲಾಯಿಸಿ]

ಶ್ರೀ ಆದಿಶಕ್ತಿ ವಸಂತ ಪರಮೇಶ್ವರಿ ದೇವಸ್ಥಾನ, ಅಂಗಡಿ ಹೊಯ್ಸಳರ ಸಾಮ್ರಾಜ್ಯ ಉಗಮವಾದ ಮತ್ತು ಹೊಯ್ಸಳರು ಸಾಮ್ರಾಜ್ಯದ ತಮ್ಮ ಆರಂಭದಲ್ಲಿ ದಿನಗಳನ್ನು ಕಳೆದ ಸೊಸೆಯೂರು ಚಿಕ್ಕಮಗಳೂರು ಜಿಲ್ಲೆಯಲ್ಲಿದೆ. ಸೊಸೆಯೂರು ಕಾಲನಂತರ ಹೊಯ್ಸಳರ ಪ್ರಥಮ ರಾಜಧಾನಿ ಶಶಕಪುರವಾಗಿ ನಿರ್ಮಾಣವಾಯಿತು. ಸೊಸೆಯೂರು ಈಗ ಅಂಗಾಡಿ ಗ್ರಾಮವೆಂದು ಗುರುತಿಸಲ್ಪಡುತ್ತದೆ.ಇದು ಮೂಡಿಗೆರೆ ತಾಲ್ಲೂಕಿನಲ್ಲಿದೆ. ಹಿಂದೊಮ್ಮೆ ದಟ್ಟವಾದ ಗೊಂಡಾರಣ್ಯದಲ್ಲಿ ಜೈನ ಮುನಿಗಳ ಜ್ಞಾನ ತಪಸ್ಸಿಗೆ ಯೋಗ್ಯವಾದ ಸ್ಥಳ ಇದಾಗಿತ್ತೆಂದು, ಚಾಳುಕ್ಯ ನಾಡಿನಿಂದ ಮಲ್ಲಚಂದ್ರದೇವ ಇಲ್ಲಿಗೆ ಬಂದನೆಂಬ ವಿಷಯ ೧೦ನೇ ಶತಮಾನದ ಶಾಸನದಲ್ಲಿ ಉಲ್ಲೇಖಿಸಲಾಗಿದೆ. ಒಂದು ದಂತಕಥೆಯ ಪ್ರಕಾರ, ಒಂದೊಮ್ಮೆ ಈಗಿನ ಅಂಗಡಿ ಗ್ರಾಮದ ವಾಸಂತಿಕಾದೇವಿಯ ಗುಡಿ ಮುಂದೆ ಸುದತ್ತಾಚಾರ್ಯರು ತಮ್ಮ ಶಿಷ್ಯರಿಗೆ ಪಾಠ-ಪ್ರವಚನ ಕಲಿಸುತ್ತಿದ್ದ ಸಂದರ್ಭದಲ್ಲಿ, ಹುಲಿಯೊಂದು ದಿಢೀರನೆ ಗುಡಿಯ ಬಳಿ ಇದ್ದ ಶಿಷ್ಯಾರ್ಥಿಗಳ ಮೇಲೆ ಎರಗಲು ಬಂದಾಗ ಸುದತ್ತಾಚಾರ್ಯರು ಕೂಡಲೇ ಅದನ್ನು ಹೊಡೆಯಲು, ತನ್ನ ಶಿಷ್ಯ ಸಳನಿಗೆ "ಹೊಯ್ ಸಳ" ಎಂದು ಆಜ್ಞಾಪಿಸಿದರು. ಇದೇ ಹೊಯ್ಸಳ ಶಬ್ದದ ಮೂಲ ಎನ್ನುತ್ತಾರೆ. ಕೂಡಲೇ ಸ್ಥಳದಲ್ಲಿದ್ದ ಸಳನು ತನ್ನ ಗುರುಗಳ ಆಜ್ಞೆಯಂತೆ ಹುಲಿಯೊಂದಿಗೆ ವೀರಾವೇಶದಿಂದ ಹೋರಾಡಿ ಹುಲಿಯನ್ನು ಕೊಂದನಂತೆ. ೧೧೧೭ರ ವಿಷ್ಣುವರ್ಧನನ ಶಾಸನದಲ್ಲಿ ಈ ಕಥೆ ಮೊದಲು ಕಾಣಬರುತ್ತದೆ. ಆದರೆ ಇದರ ತಥ್ಯ ಅನುಮಾನಾಸ್ಪದವಾಗಿದ್ದು ಇನ್ನೂ ದಂತಕಥೆಯ ರೂಪದಲ್ಲಿಯೇ ಉಳಿದಿದೆ.ವಿಷ್ಣುವರ್ಧನನು ತಲಕಾಡಿನಲ್ಲಿ ಚೋಳರನ್ನು ಸೋಲಿಸಿದ ಮೇಲೆ ಬಹುಶಃ ಈ ಕಥೆ ಹುಟ್ಟಿರಬಹುದು ಅಥವಾ ಹೆಚ್ಚು ಪ್ರಚಲಿತವಾಗಿರಬಹುದು. ಹೊಯ್ಸಳರ ಲಾಂಛನವು ಸಳನು ಹುಲಿಯನ್ನು ಕೊಲ್ಲುತ್ತಿರುವ ಚಿತ್ರವಾಗಿದ್ದು, ಚೋಳರ ಲಾಂಛನವು ಹುಲಿಯಾಗಿತ್ತು ಎಂಬ ಅಂಶಗಳು ಈ ಊಹೆಗೆ ಕಾರಣ .ಕ್ರಿ.ಶ ೧೦೬೨ ರಲ್ಲಿ ವಿನಯಾದಿತ್ಯ ತನ್ನ ರಾಜಧಾನಿಯನ್ನು ಸೊಸೆಯೂರಿನಿಂದ (ಶಶಕಪುರ-ಅಂಗಡಿ) ಬೇಲೂರಿಗೆ ವರ್ಗಾಯಿಸಿದನಂತೆ. ಅಂಗಡಿ ಗ್ರಾಮದ ಹೊಯ್ಸಳರ ಕಾಲದ ವಾಸಂತಿಕ ದೇವಾಲಯ ಹಾಗೂ ಮಕರ ಜಿನಾಲಯ, ನೇಮೀನಾಥ ಬಸದಿ, ಶಾಂತಿನಾಥ ಬಸದಿ, ವೈಷ್ಣವ ಪಂಥದ ಕೇಶವ ದೇವಾಲಯ, ಶೈವ ಪಂಥದ ಪಾತಾಳ ರುದ್ರೇಶ್ವರ ದೇವಾಲಯ ಹಾಗೂ ಮಲ್ಲೇಶ್ವರ, ಮಲ್ಲಿಕಾರ್ಜುನ ದೇವಾಲಯಗಳು ಈ ಸ್ಥಳದ ಮಹಿಮೆಯನ್ನು ಸಾರುತ್ತವೆ. ತರೀಕೆರೆ ತಾಲ್ಲೂಕಿನ ಅಮೃತಪುರದಲ್ಲಿ ಹೊಯ್ಸಳ ಸಾಮ್ರಾಜ್ಯದ ದೊರೆ ಎರಡನೇ ವೀರ ಬಲ್ಲಾಳ (೧೧೭೩-೧೨೨೦ ಸಿ.ಇ.) ನಿರ್ಮಿಸಿದ ಅಮೃತೇಶ್ವರ ದೇವಸ್ಥಾನವಿದೆ. ಕ್ರಿ.ಶ. ೧೬೭೦ ರಲ್ಲಿ ದೇಶದಲ್ಲಿಯೇ ಮೊಟ್ಟಮೊದಲ ಕಾಫಿಯನ್ನು ಬಾಬಾ ಬುಡನ್‌ಗಿರಿಯಲ್ಲಿ ಬೆಳೆಯಲಾಯಿತು. ಬಾಬಾ ಬುಡನ್ ಅವರು ಮೆಕ್ಕಾ ತೀರ್ಥಯಾತ್ರೆ ಮಾಡುತ್ತಿರುವಾಗ ಯೆಮೆನ್ಮೋಕಾ ಬಂದರಿನಲ್ಲಿ ಕಾಫಿ ಬಗ್ಗೆ ಅವರಿಗೆ ತಿಳಿಯಿತು. ಅವರು ಏಳು ಕಾಫಿಯ ಬೀಜವನ್ನು ಹೊಕ್ಕಳಿನ ಸುತ್ತ ಆಡಗಿಸಿಟ್ಟುಕೊಂಡು ಅರೇಬಿಯಾದಿಂದ ಹೊರಗೆ ತಂದರು. ಅವರು ಮನೆಗೆ ಮರಳುತ್ತಿರುವಾಗ ಬಾಬಾ ಬುಡನಗಿರಿ/ದತ್ತ ಪೀಠ ಬೆಟ್ಟದಲ್ಲಿ ಕೆಲವು ಬೀಜಗಳನ್ನು ನೆಟ್ಟರು ಎಂದು ಹೇಳುತ್ತಾರೆ. ಈ ಜಿಲ್ಲೆಯಲ್ಲಿ ಕೇಂದ್ರ ಕಾಫಿ ಸಂಶೋಧನ ಸಂಸ್ಥೆಯು ಇದ್ದು. ಇದನ್ನು ಹಿಂದೆ ೧೯೨೫ ರಲ್ಲಿ ಲೇ. ಡಾ. ಲೆಸ್ಲಿ. ಸಿ. ಕೊಲ್‌ಮನ್ ನೇತೃತ್ವದಲ್ಲಿ ಆರಂಭವಾದ ಕಾಫಿ ಎಕ್ಸ್‌ಪೆರಿಮೆಂಟಲ್ ಸ್ಟೇಷನ್ ಎಂದು ಕರೆಯಲಾಗಿತ್ತು. ಈ ಸಂಸ್ಥೆ ೧೧೯.೮೬ ಎಕರೆಗಳಷ್ಟು ಪ್ರದೇಶದಲ್ಲಿ ಹರಡಿಕೊಂಡಿದೆ ಮತ್ತು ಸಂಸ್ಥೆಯು ಕಾಫಿ ಗುಣಮಟ್ಟ ಸುಧಾರಿಸಲು ಸಂಶೋಧನೆಯನ್ನು ನಡೆಸುತ್ತದೆ.

ಭೌಗೋಳಿಕ[ಬದಲಾಯಿಸಿ]

[ಬದಲಾಯಿಸಿ]

ಚಿಕ್ಕಮಗಳೂರು ಕರ್ನಾಟಕದ ಮಧ್ಯಭಾಗದಲ್ಲಿ ಇದೆ, ಇದು ರಾಜ್ಯದ ರಾಜಧಾನಿಯಿಂದ ೨೫೧ ಕಿ.ಮೀ. ದೂರದಲ್ಲಿದೆ. ಚಿಕ್ಕಮಗಳೂರು ೧೨° ೫೪' ೪೨“-೧೩° ೫೩' ೫೩“ ಉತ್ತರ ಅಕ್ಷಾಂಶ ಹಾಗೂ ೭೫° ೦೪' ೪೫“'-೭೬° ೨೧' ೫೦'” ಪೂರ್ವ ರೇಖಾಂಶದಲ್ಲಿದೆ. ಚಿಕ್ಕಮಗಳೂರು ಜಿಲ್ಲೆಯು ಪೂರ್ವದಿಂದ ಪಶ್ಚಿಮಕ್ಕೆ ೧೩೮.೪ ಕಿ.ಮೀ. ಮತ್ತು ಉತ್ತರದಿಂದ ದಕ್ಷಿಣಕ್ಕೆ ೮೮.೫ ಕಿ.ಮೀ. ಉದ್ದವಿದೆ. ಜಿಲ್ಲೆಯಲ್ಲಿ ಸಮಾನ್ಯವಾಗಿ ವರ್ಷಕ್ಕೆ ಸರಾಸರಿ ೧೯೨೫ ಮಿ.ಮೀ. ಮಳೆಯಾಗುತ್ತದೆ. ಜಿಲ್ಲೆಯ ಅತ್ಯಂತ ಎತ್ತರವಾದ ಸ್ಥಳ ಮುಳ್ಳಯ್ಯನ ಗಿರಿ, ಸಮುದ್ರ ಮಟ್ಟಕ್ಕಿಂತ ೧೯೫೫ ಮೀಟರ್ ಎತ್ತರದಲ್ಲಿ ಇದೆ, ಇದು ಕರ್ನಾಟಕದ ಅತ್ಯಂತ ಎತ್ತರವಾದ ಸ್ಥಳ ಕೂಡ. ಜಿಲ್ಲೆಯ ಒಟ್ಟು ವಿಸ್ತೀರ್ಣ ೨೧೦೮.೬೨ ಕಿ.ಮೀ . ಅದರಲ್ಲಿ ಶೇಕಡ ೩೦ರಷ್ಟು ಕಾಡುಗಳಿಂದ ಆವರಿಸಲ್ಪಟ್ಟದೆ. ಚಿಕ್ಕಮಗಳೂರು ಜಿಲ್ಲೆಯ ಪೂರ್ವಕ್ಕೆ ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆ, ದಕ್ಷಿಣಕ್ಕೆ ಹಾಸನ ಜಿಲ್ಲೆ, ಪಶ್ಚಿಮದಲ್ಲಿ ಪಶ್ಚಿಮ ಘಟ್ಟಗಳು ಚಿಕ್ಕಮಗಳೂರನ್ನು ದಕ್ಷಿಣ ಕನ್ನಡ ಮತ್ತು ಉಡುಪಿಯಿಂದ ಬೇರ್ಪಡಿಸುತ್ತವೆ ಮತ್ತು ಉತ್ತರದಲ್ಲಿ ಶಿವಮೊಗ್ಗ ಮತ್ತು ದಾವಣಗೆರೆ ಜೊತೆಗೆ ತನ್ನ ಗಡಿಯನ್ನು ಹಂಚಿಕೊಂಡಿದೆ.