ವಿಷಯಕ್ಕೆ ಹೋಗು

ವಿಶ್ವಕಪ್ ಫುಟ್ಬಾಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವಿಜಯಿಗಳಿಗೆ ನೀಡಲಾಗುವ ಫಿಫಾ ಅಧ್ಯಕ್ಷರ ಕಪ್

ಫಿಫಾ ವಿಶ್ವ ಕಪ್ ಫುಟ್ಬಾಲ್ ಕ್ರೀಡೆಯ ಅತ್ಯುನ್ನತ ಪ್ರಶಸ್ತಿಯಾಗಿದೆ. ಇದನ್ನು ಸಾಮಾನ್ಯವಾಗಿ ವಿಶ್ವ ಕಪ್ ಫುಟ್ಬಾಲ್ ಎಂದೇ ಕರೆಯುವುದು ವಾಡಿಕೆ. ಈ ಪಂದ್ಯಾವಳಿಯು ಫಿಫಾ ( ಅಂತರರಾಷ್ಟ್ರೀಯ ಫುಟ್ಬಾಲ್ ಫೆಡರೇಷನ್ )ದ ಸದಸ್ಯರಾಷ್ಟ್ರಗಳ ಪುರುಷರ ತಂಡಗಳ ನಡುವೆ ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ನಡೆಯುವುದು. ೧೯೩೦ರಲ್ಲಿ ಆರಂಭವಾದ ಈ ಪಂದ್ಯಾವಳಿ ೧೯೪೦ ಮತ್ತು ೧೯೪೪ರಲ್ಲಿ ದ್ವಿತೀಯ ವಿಶ್ವಯುದ್ಧದ ಕಾರಣದಿಂದಾಗಿ ನಡೆಯಲಿಲ್ಲ. ಈ ಪಂದ್ಯಾವಳಿಯ ಅಂತಿಮ ಚರಣವು ಸಾಮಾನ್ಯವಾಗಿ ವಿಶಕಪ್ ಫುಟ್ಬಾಲ್ ಫೈನಲ್ಸ್ ಎಂದು ಕರೆಯಲ್ಪಟ್ಟು ವಿಶ್ವದ ಅತಿ ಹೆಚ್ಚಿನ ಸಂಖ್ಯೆಯ ಜನತೆಯಿಂದ ನೇರವಾಗಿ ದೂರದರ್ಶನದ ಮೂಲಕ ವೀಕ್ಷಿಸಲ್ಪಡುತ್ತದೆ. ೨೦೦೬ರಲ್ಲಿ ನಡೆದ ಇತ್ತೀಚಿನ ಫೈನಲ್ಸ್ ಸುಮಾರು ೭೧ ಕೋಟಿ ಜನರಿಂದ ವೀಕ್ಷಿಸಲ್ಪಟ್ಟಿತು. ಪ್ರಸ್ತುತ ಈ ಅಂತಿಮ ಹಂತದಲ್ಲಿ ೩೨ ದೇಶಗಳ ತಂಡಗಳು ಪಾಲ್ಗೊಳ್ಳುತ್ತವೆ. ಒಂದು ಯಾ ಹೆಚ್ಚು ಆತಿಥೇಯ ರಾಷ್ಟ್ರಗಳ ಹಲವು ನಗರಗಳಲ್ಲಿ ಸುಮಾರು ಒಂದು ತಿಂಗಳ ಕಾಲ ಈ ಅಂತಿಮ ಘಟ್ಟದ ಪಂದ್ಯಗಳು ಆಡಲ್ಪಡುತ್ತವೆ. ಅಂತಿಮ ಹಂತಕ್ಕೆ ತಂಡಗಳನ್ನು ಆಯ್ಕೆ ಮಾಡಲು ಸುಮಾರು ಮೂರು ವರ್ಷಗಳ ಅವಧಿಯಲ್ಲಿ ಪ್ರಪಂಚದೆಲ್ಲೆಡೆ ಅರ್ಹತಾಸುತ್ತಿನ ಪಂದ್ಯಗಳನ್ನು ಆಡಲಾಗುತ್ತದೆ. ಈವರೆವಿಗೆ ೧೮ ಬಾರಿ ಫೈನಲ್ಸ್ ನಡೆದಿದ್ದು ಕೇವಲ ೭ ರಾಷ್ಟ್ರಗಳು ಮಾತ್ರ ವಿಶ್ವಕಪ್ ಅನ್ನು ಗೆದ್ದಿವೆ. ಬ್ರಝಿಲ್ ೫ ಬಾರಿ ಗೆಲುವು ಸಾಧಿಸಿ ಅತಿ ಯಶಸ್ವೀ ತಂಡವೆನಿಸಿದೆ. ಉಳಿದಂತೆ ಇಟಲಿ ೪ ಬಾರಿ , ಜರ್ಮನಿ ೩ ಬಾರಿ, ಅರ್ಜೆಂಟೀನ ಮತ್ತು ಉರುಗ್ವೆ ೨ ಬಾರಿ ಹಾಗೂ ಇಂಗ್ಲಂಡ್ ಮತ್ತು ಫ್ರಾನ್ಸ್ ತಲಾ ಒಂದು ಬಾರಿ ಪ್ರಶಸ್ತಿ ಗೆದ್ದಿವೆ. ಈ ಹಿಂದಿನ ವಿಶ್ವಕಪ್ ದಕ್ಷಿಣ ಆಫ್ರಿಕಾದಲ್ಲಿ ೨೦೧೦ರಲ್ಲಿ ನಡೆಯಿತು. ಸ್ಪೇನ್ ತಂಡ ಇದರಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತು. ಪ್ರಸ್ತುತ ಬ್ರೆಜಿಲ್ನಲ್ಲಿ ವಿಶ್ವಕಪ್ ನಡೆಯುತ್ತಿದೆ. ಮುಂದಿನ ವಿಶ್ವಕಪ್ ೨೦೧೮ರಲ್ಲಿ ರಷ್ಯಾದಲ್ಲೂ ಹಾಗು ೨೦೨೨ರಲ್ಲಿ ಕತಾರ್ನಲ್ಲೂ ನಡೆಯಲಿವೆ.(ಫೀಫಾ+2014ರ ವಿಶ್ವ ಕಪ್ ವಿವರ)
ನವೆಂಬರ್ ೨೦ ೨೦೨೨ರಿಂದ ಖತಾರ್ ನಲ್ಲಿ ಫಿಫಾ ವಿಶ್ವ ಕಪ್ ೨೨ನೆಯ ಆವೃತ್ತಿ ಶುರುವಾಗಿದೆ.


ಇತಿಹಾಸ[ಬದಲಾಯಿಸಿ]

ಜಾಗತಿಕ ಮಟ್ಟದ ಫುಟ್ಬಾಲ್ ಕ್ರೀಡೆಯು ಜನಪ್ರಿಯತೆ ತೋರಿಸುವ ಭೂಪಟ. ಹಸಿರು ಮತ್ತು ಕೆಂಪು ವಿವಿದ (ಬಣ್ಣದ) ಛಾಯೆಗಳು ೧,೦೦೦ ಆಟಗಾರರ ನಿವಾಸಿಗ ಸಾಂದ್ರತೆ ಸೂಚಿಸುತ್ತದೆ .

ಬ್ರಿಟಿಷ್ ದ್ವೀಪಗಳಲ್ಲಿ ಇಪ್ಪತ್ತನೆಯ ಶತಮಾನದ ಆರಂಭದಲ್ಲಿ ಫುಟ್ಬಾಲ್ ಕ್ರೀಡೆಯು ಸಾಕಷ್ಟು ಜನಪ್ರಿಯತೆ ಗಳಿಸಿಕೊಂಡಿತ್ತು. ೧೯೦೦ ಮತ್ತು ೧೯೦೪ರ ಒಲಿಂಪಿಕ್ಸ್ ನಲ್ಲಿ ಫುಟ್ಬಾಲ್ ಒಂದು ಪ್ರದರ್ಶನ ಆಟವಾಗಿ ಸೇರಿಸಲ್ಪಟ್ಟು ಮುಂದೆ ೧೯೦೮ರ ನಂತರ ಸ್ಪರ್ಧಾಕ್ರೀಡೆಯಾಗಿ ಬಡ್ತಿ ಹೊಂದಿತು. ೧೯೦೪ರಲ್ಲಿ ಸ್ಥಾಪಿತವಾದ ಫಿಫಾ ಒಲಿಂಪಿಕ್ಸ್ ನ ಹೊರಗೆ ಒಂದು ಜಾಗತಿಕ ಮಟ್ಟದ ಫುಟ್ಬಾಲ್ ಪಂದ್ಯಾವಳಿಯನ್ನು ಆಯೋಜಿಸಲು ಕ್ರಮಕೈಗೊಂಡಿತು. ಆದರೆ ಆರಂಭದ ಯತ್ನಗಳು ಸಫಲವಾಗಲಿಲ್ಲ. ಬ್ರಿಟಿಷ್ ಫುಟ್ಬಾಲ್ ಅಸೋಸಿಯೇಷನ್ ಮತ್ತು ಫಿಫಾ ದ ನಡುವೆ ಸಾಕಷ್ಟು ತಿಕ್ಕಾಟ ನಡೆದು ಕೊನೆಗೆ ಫಿಫಾ ಒಲಿಂಪಿಕ್ ಫುಟ್ಬಾಲ್ ಗೆ ಮಾನ್ಯತೆ ನೀಡಿತು ಅಲ್ಲದೆ ೧೯೨೦ರಲ್ಲಿ ಒಲಿಂಪಿಕ್ಸ್ ನಲ್ಲಿ ಫುಟ್ಬಾಲ್ ಪಂದ್ಯಾವಳಿಯ ಜವಾಬ್ದಾರಿಯನ್ನು ಹೊತ್ತುಕೊಂಡಿತು. ಹೀಗೆ ನಿಜವಾದ ಅರ್ಥದಲ್ಲಿ ಅಂತರಾಷ್ಟ್ರೀಯ ಫುಟ್ಬಾಲ್ ಪಂದ್ಯಾವಳಿ ಯು ಮೊದಲ ಬಾರಿಗೆ ೧೯೨೦ರಲ್ಲಿ ಒಲಿಂಪಿಕ್ಸ್ ನಲ್ಲಿ ನಡೆಯಿತು. ತರುವಾಯ ಫಿಫಾ ತನ್ನದೇ ಆದ ವಿಶ್ವ ಫುಟ್ಬಾಲ್ ಚಾಂಪಿಯನ್ ಶಿಪ್ ನಡೆಸುವ ತನ್ನ ಹಳೆಯ ಯೋಜನೆಗೆ ಮತ್ತೆ ಜೀವ ತುಂಬಿ ೧೯೩೦ರಲ್ಲಿ ಉರುಗ್ವೆಯಲ್ಲಿ ಪ್ರಪ್ರಥಮ ವಿಶ್ವಕಪ್ ಪಂದ್ಯಾವಳಿಯನ್ನು ಆಯೋಜಿಸಲಾಯಿತು. ೧೯೨೪ ಮತ್ತು ೧೮೨೮ರ ಒಲಿಂಪಿಕ್ಸ್ ನಲ್ಲಿ ಉರುಗ್ವೆ ತಂಡವು ಫುಟ್ಬಾಲ್ ಸ್ವರ್ಣಪದಕ ಪಡೆದಿತ್ತು. ಅಲ್ಲದೇ ಉರುಗ್ವೆಯು ೧೯೩೦ರಲ್ಲಿ ತನ್ನ ಸ್ವಾತಂತ್ರ್ಯೋತ್ಸವದ ಶತಮಾನವನ್ನು ಆಚರಿಸುವುದಾಗಿದ್ದರಿಂದ ಸಹಜವಾಗಿಯೇ ಮೊದಲ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿ ನಡೆಸುವ ಅವಕಾಶ ಪಡೆದುಕೊಂಡಿತು. ಈ ಪಂದ್ಯಾವಳಿಯ ಕನಸನ್ನು ನನಸಾಗಿಸುವಲ್ಲಿ ಫಿಫಾದ ಅಧ್ಯಕ್ಷ ಜೂಲ್ಸ್ ರಿಮೆ ಪ್ರಧಾನಪಾತ್ರ ವಹಿಸಿದನು. ಉರುಗ್ವೆಗೆ ಆತಿಥ್ಯ ವಹಿಸಿದುದು ಯುರೋಪ್ ನ ಬಹಳಷ್ಟು ರಾಷ್ಟ್ರಗಳಿಗೆ ಪಥ್ಯವಾಗಲಿಲ್ಲ. ಅಲ್ಲದೇ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ಅಟ್ಲಾಂಟಿಕ್ ಮಹಾಸಾಗರದ ಮೇಲಿನ ದೀರ್ಘ ಮತ್ತು ದುಬಾರಿ ವೆಚ್ಚದ ನೌಕಾಯಾನ ಕೈಗೊಳ್ಳಬೇಕಾಗಿದ್ದುದರಿಂದ ಯುರೋಪ್ ನ ಪ್ರಮುಖ ತಂಡಗಳು ಈ ಪಂದ್ಯಾವಳಿಯಿಂದ ಹೊರಗುಳಿದವು. ಕೊನೆಗೆ ೧೩ ತಂಡಗಳು ಮೊದಲನೆಯ ವಿಶ್ವಕಪ್ ನಲ್ಲಿ ಭಾಗವಹಿಸಿದವು. ಮಾಂಟೆವಿಡಿಯೋದಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ಅರ್ಜೆಂಟೀನ ತಂಡವನ್ನು ೪-೨ ಗೋಲುಗಳಿಂದ ಸೋಲಿಸಿದ ಆತಿಥೇಯ ಉರುಗ್ವೆ ಪ್ರಥಮ ವಿಶ್ವಕಪ್ ಅನ್ನು ಗೆದ್ದುಕೊಂಡಿತು. ಪ್ರಾರಂಭದ ವಿಶ್ವಕಪ್ ಸರಣಿಗಳಿಗೆ ದೀರ್ಘ ನೌಕಾಯಾನದ ಸಮಸ್ಯೆ ಹಾಗೂ ಯುದ್ಧದ ಸಮಸ್ಯೆ ಕಾಡಿತು. ೧೯೩೦ ಮತ್ತು ೧೯೩೪ರ ಮುಂದಿನೆರಡೂ ಫೈನಲ್ಸ್ ಪಂದ್ಯಾವಳಿಗಳು ಯುರೋಪ್ ನಲ್ಲಿ ನಡೆದುವು. ದಕ್ಷಿಣ ಅಮೆರಿಕದ ಹೆಚ್ಚಿನ ತಂಡಗಳು ಇವುಗಳಲ್ಲಿ ಪಾಲ್ಗೊಳ್ಳಲಿಲ್ಲ. ಇಟಲಿ ತಂಡವು ಈ ಎರಡೂ ವಿಶ್ವಕಪ್ ಗಳಲ್ಲಿ ಜಯ ಸಾಧಿಸಿತು. ೧೯೪೨ ಮತ್ತು ೧೯೪೬ರ ವಿಶ್ವಕಪ್ ಪಂದ್ಯಾವಳಿಗಳು ದ್ವಿತೀಯ ವಿಶ್ವಯುದ್ಧದ ಕಾರಣದಿಂದಾಗಿ ರದ್ದಾದವು. ೧೯೩೪ರಿಂದ ೧೯೭೮ರವರೆಗೆ ಅಂತಿಮಘಟ್ಟದಲ್ಲಿ ೧೬ ತಂಡಗಳು ಪಾಲ್ಗೊಳ್ಳುತಿದ್ದುವು. ಇದನ್ನು ೧೯೮೨ರಲ್ಲಿ ೨೪ ತಂಡಗಳಿಗೆ ಮತ್ತು ೧೯೯೮ರಲ್ಲಿ ೩೨ಕ್ಕೆ ಹೆಚ್ಚಿಸಲಾಯಿತು. ಇದರಿಂದಾಗಿ ಆಫ್ರಿಕಾ, ಉತ್ತರ ಅಮೆರಿಕ, ಏಷ್ಯಾದ ದೇಶಗಳಿಗ ಹೆಚ್ಚಿನ ಪ್ರಾತಿನಿಧ್ಯ ದೊರೆಯುವಂತಾಯಿತು. ೨೦೦೬ರ ವಿಶ್ವಕಪ್ ಫೈನಲ್ಸ್ ಗೆ ಅರ್ಹತೆ ಪಡೆಯಲು ೧೯೮ ದೇಶಗಳು ಪ್ರಯತ್ನಿಸಿದುವು. ಈ ಸಂಖ್ಯೆ ೨೦೧೦ರ ಫೈನಲ್ಸ್ ಗೆ ೨೦೪ ಕ್ಕೆ ಏರಲಿದೆ.(ಫೀಫಾ+2014ರ ವಿಶ್ವ ಕಪ್ ವಿವರ)

ಹೊರಾಂಗಣ[ಬದಲಾಯಿಸಿ]

ಹೊರಾಂಗಣ ವಿಸ್ತೀರ್ಣದ ಮಾನದಂಡಗಳು (See Imperial version)

ಪ್ರಶಸ್ತಿಯ ಕಪ್[ಬದಲಾಯಿಸಿ]

೧೯೩೦ರಿಂದ ೧೯೭೦ರವರೆಗೆ ವಿಜಯೀ ತಂಡಕ್ಕೆ ಜೂಲ್ಸ್ ರಿಮೆ ಟ್ರೋಫಿಯನ್ನು ನೀಡಲಾಗುತ್ತಿತ್ತು. ಇದನ್ನು 'ವಿಶ್ವಕಪ್' ಎಂದಷ್ಟೇ ಕರೆಯಲಾಗುತ್ತಿತ್ತು. ೧೯೭೦ರಲ್ಲಿ ಬ್ರೆಜಿಲ್ ಮೂರನೆಯ ಬಾರಿಗೆ ವಿಜಯ ಸಾಧಿಸಿದಾಗ ಜೂಲ್ಸ್ ರಿಮೆ ಟ್ರೋಫಿಯನ್ನು ಶಾಶ್ವತವಾಗಿ ತನ್ನಲ್ಲೇ ಇರಿಸಿಕೊಳ್ಳುವ ಹಕ್ಕು ಪಡೆಯಿತು. ಆದರೆ ೧೯೮೩ರಲ್ಲಿ ಈ ಟ್ರೋಫಿ ಕಳುವಾಗಿ ಮತ್ತೆ ದೊರೆಯಲೇ ಇಲ್ಲ. ಇದರಲ್ಲಿದ್ದ ಚಿನ್ನಕ್ಕಾಗಿ ಟ್ರೋಫಿಯನ್ನು ಕರಗಿಸಲಾಯಿತು ಎಂದು ಒಂದು ಊಹೆ. ೧೯೭೦ರನಂತರ ಒಂದು ಹೊಸ ಟ್ರೋಫಿಯನ್ನು ತಯಾರಿಸಲಾಯಿತು. ಇದನ್ನು ಫಿಫಾ ಅಧ್ಯಕ್ಷರ ವಿಶ್ವಕಪ್ ಎಂದು ಹೆಸರಿಸಲಾಗಿದೆ. ೩೬ಅಂಗುಲ ಎತ್ತರವಿದ್ದು ೬೧೭೫ ಗ್ರಾಂ ತೂಗುವ ಈ ಟ್ರೋಫಿಯನ್ನು ೧೮ ಕ್ಯಾರಟ್ ಘನವಾದ ಚಿನ್ನದಿಂದ ತಯಾರಿಸಲಾಗಿದೆ. ಇದರ ಕೆಳಭಾಗದಲ್ಲಿ ಪ್ರತಿಬಾರಿಯ ವಿಜೇತರ ಹೆಸರನ್ನು ಕೊರೆಯಲು ಅವಕಾಶವಿದ್ದು ೨೦೩೮ರ ವರೆಗಿನ ಎಲ್ಲ ವಿಜಯಿಗಳ ಹೆಸರು ಸೇರಿಸಲು ಸಾಕಾಗುವಷ್ಟು ಸ್ಥಳವಿದೆ.

"೧೯ ನೇ ವಿಶ್ವಕಪ್ ಫುಟ್ಬಾಲ್ ಪಂದ್ಯ", ೨೦೧೦ ರ ಜೂನ್ ನಲ್ಲಿ[ಬದಲಾಯಿಸಿ]

"೧೯ ನೇ ವಿಶ್ವಕಪ್ ಫುಟ್ಬಾಲ್ ಪಂದ್ಯ", ಸನ್, ೨೦೧೦ ರ ಜೂನ್ ೧೧, ರಿಂದ ಜುಲೈ ೧೧ ರವರೆಗೆ " ದಕ್ಷಿಣ ಆಫ್ರಿಕ "ದಲ್ಲಿ ನಡೆಯಲಿದೆ. ಇದುವರೆವಿಗೂ ಹೆಚ್ಚಾಗಿ, ಅತಿಧೇಯ ರಾಷ್ಟ್ರಗಳೇ ತಮ್ಮ ನೆಲದಲ್ಲಿ ವಿಶ್ವಕಪ್ ಗೆದ್ದು ತಮ್ಮ ದೇಶದ ಪ್ರತಿಷ್ಠೆಯನ್ನು ಮೆರೆಸಿವೆ. ಇದೀಗ, ದಕ್ಷಿಣ ಆಫ್ರಿಕದಲ್ಲಿ ಪ್ರಥಮಬಾರಿ, " ೧೯ ನೇ ಫಿಫಾ ವಿಶ್ವಕಪ್ ಫುಟ್ಬಾಲ್ ಕೂಟ " ಜರುಗಲಿದೆ. ಈ "ಮಹಾ ಕೂಟಯುದ್ಧ" ದಲ್ಲಿ, ಒಟ್ಟು ೩೨ ತಂಡಗಳು ಭಾಗವಹಿಸಲಿವೆ. "ವಿಶ್ವಕಪ್ ಉದ್ಘಾಟನಾ ಸಮಾರಂಭ", ಜೂನ್ ೧೧ ರಂದು, "ಜೋಹಾನ್ಸ್ ಬರ್ಗ್" ನಲ್ಲಿ ಜರುಗುವುದು. ೩೧ ದಿನಗಳ ಕಾಲ ನಡೆಯುವ ೩೨ ತಂಡಗಳ ೮ ಗುಂಪುಗಳು, ಮತ್ತೆ ಕವಲೊಡೆದು, ಪ್ರತಿಗುಂಪಿನಲ್ಲಿ ೨ ತಂಡಗಳಾಗಿ ವಿಂಗಡಿಸಲ್ಪಡುತ್ತವೆ. ಪ್ರತಿಗುಂಪಿನ ೨ ತಂಡಗಳು "ಪ್ರಿ ಕ್ವಾರ್ಟರ್ ಫೈನಲ್ ಹಂತ"ಕ್ಕೆ ಅರ್ಹತೆ ಪಡೆಯುತ್ತವೆ. "ವಿಶ್ವಕಪ್ ನ ಒಟ್ಟು ಬಹುಮಾನದ ಮೊತ್ತ", ೪೨೦ ಮಿಲಿಯನ್ ಡಾಲರ್ ಗಳು. ವಿಜೇತ ಟೀಮಿಗೆ, ೩೦ ಮಿಲಿಯನ್ ಡಾಲರ್ ಗಳು ದೊರೆಯುತ್ತವೆ. ಇಷ್ಟೊಂದು ಭಾರಿ ಮೊತ್ತದ "ಪ್ರಶಸ್ತಿಹಣ," ಕ್ರಿಕೆಟ್ ನಲ್ಲೂ ಇಲ್ಲ. ಕ್ರಿಕೆಟ್ ವೀಕ್ಷಕರಿಗಿಂತ ಫುಟ್ಬಾಲ್ ಪಂದ್ಯವನ್ನು ನೋಡಲು ಬರುವ ವೀಕ್ಷಕರು, ಅತಿ ಹೆಚ್ಚು. ಕಳೆದ ೨೦೦೬ ರ, ವಿಶ್ವಕಪ್ ಪಂದ್ಯಗಳನ್ನು ೨೬.೨೯ ಶತಕೋಟಿ ಅಭಿಮಾನಿಗಳು ವಿವಿಧ ಚಾನೆಲ್ ಗಳ ಮೂಲಕ ಮನೆಯಲ್ಲೇ ನೋಡಿ ಆನಂದಿಸಿದ್ದರು. ಈ ಬಾರಿ ಅಂತಹ ಪ್ರೇಕ್ಷಕರ ಸಂಖ್ಯೆ ಇನ್ನೂ ಹೆಚ್ಚುವ ಸಂಭವಗಳಿವೆ. "ಫುಟ್ಬಾಲ್ ಗೆ ಸಾಟಿ ಫುಟ್ಬಾಲೇ ಆಗಿರುವುದರಿಂದ", ಮುಂದಿನ ೩೧ ದಿನಗಳಲ್ಲಿ ವಿಶ್ವದ ಅತಿಹೆಚ್ಚು ಜನ ಫುಟ್ಬಾಲ್ ಬಿಟ್ಟು ಬೇರೆ ಯಾವ ಪಂದ್ಯಗಳನ್ನೂ ವೀಕ್ಷಿಸಿವುದು ಅತಿ ಕಡಿಮೆ.

'ಬ್ರೆಸಿಲ್ ತಂಡ', ಎದುರಿಸುತ್ತಿರುವ 'ಸ್ಪರ್ಧಾತ್ಮಕ-ಸವಾಲು'[ಬದಲಾಯಿಸಿ]

ಇದುವರೆವಿಗೆ ಜರುಗಿದ ೧೮ ವಿಶ್ವಕಪ್ ಪಂದ್ಯದಲ್ಲಿ, ೫ ಬಾರಿ ಪ್ರಶಸ್ತಿಯನ್ನು ಬಗಲಿಗೇರಿಸಿದ ಬ್ರೆಸಿಲ್ ಟೀಮಿನಮೇಲೆ, "ವಿಶ್ವದ ಪುಟ್ಬಾಲ್ ಪ್ರಿಯ"ರ ನಿರೀಕ್ಷೆಯ ಭಾರವಿದೆ. '೨೦೧೪ ರಲ್ಲಿ, ವಿಶ್ವ ಫುಟ್ಬಾಲ್ ಟೂರ್ನಿ', ಹಾಗೂ "೨೦೧೬ ರ ಒಲಂಪಿಕ್ ಕ್ರೀಡೆ" ಗಳನ್ನುಆಯೋಜಿಸುವ ಜವಾಬ್ದಾರಿಗಳನ್ನು "ಬ್ರೆಸಿಲ್ ದೇಶ " ಹೊತ್ತಿರುವುದರಿಂದ, ಅದು ಅತ್ಯುತ್ತಮ ಪ್ರದರ್ಶನವನ್ನು ದರ್ಶಾಯಿಸಿ, "ವಿಶ್ವ ಕ್ರೀಡಾ ನಕ್ಷೆ"ಯಲ್ಲಿ ತಮ್ಮ ದೇಶವನ್ನು ಸರಿಯಾಗಿ ಗುರುತಿಸಿಕೊಳ್ಳುವ ಪ್ರಯತ್ನ ಮಾಡುತ್ತಿದೆ. ಕಣದಲ್ಲಿರುವ ಹಲವು ತಂಡಗಳು ಬೆರಗುಗೊಳಿಸಿ ಅಚ್ಚರಿಯ ಫಲಿತಾಂಶಗಳನ್ನು ಹೊರಹೊಮ್ಮಿಸುವ ಬಲವನ್ನು ಹೊಂದಿವೆ. ಪ್ರತಿಗುಂಪಿನಲ್ಲೂ 'ಬಲಾಢ್ಯ ಯುವ-ತಂಡಗಳು' ಗೆಲುವಿಗಾಗಿ 'ಮಹಾಸಂಘರ್ಷಮಯ ಆಟದ ಸವಿ' ಯನ್ನು ಸಭಿಕರಿಗೆ ಉಣಬಡಿಸುವುದನ್ನು ಆಶಿಸಬಹುದಾಗಿದೆ.

"ಫಿಫಾ ಪುಟ್ಬಾಲ್ ಪಂದ್ಯ" ದಲ್ಲಿ, "ಭಾರತ"ದ ಪಾತ್ರ[ಬದಲಾಯಿಸಿ]

೧.೨೫ ಬಿಲಿಯನ್ ಜನಸಂಖ್ಯೆಯಿರುವ ಭಾರತ, ಪ್ರಾರಂಭಿಕ ವಿಶ್ವಕಪ್ ಸೆಣೆಸಾಟದಲ್ಲಿ ಪ್ರವೇಶಿಸಿ ಪ್ರಧಾನ ಹಂತದಲ್ಲಿ ಆಡಲು ಹೆಣಗುತ್ತಲೇ ಇದೆ. ಚಿಕ್ಕಪುಟ್ಟ ದ್ವೀಪಗಳು ಸಹಿತ "ಫುಟ್ಬಾಲ್ ಮಹಾಮೇಳ"ದಲ್ಲಿ ಪಾಲ್ಗೊಂಡು ಚಾಂಪಿಯನ್ ಆಗಿವೆ. ಅರ್ಹತಾ ಸುತ್ತಿನ ಹಂತದಲ್ಲಿ, ೨೦೨ ರಾಷ್ಟ್ರಗಳು ಭಾಗವಹಿಸಿದ್ದವು. ಪಂದ್ಯಗಳನ್ನು ೨೦೦೭ ರ ಆಗಸ್ಟ್ ನಲ್ಲಿ ಪ್ರಾರಂಭವಾದವು. ಒಟ್ಟು ನಡೆದ ಪಂದ್ಯಗಳು-೮೪೮. ವವೆಂಬರ್, ೨೦೦೯ ರಲ್ಲಿ ಪಂದ್ಯಗಳು ಮುಗಿದವು. "ಏಷ್ಯಾ ಮಹಾಖಂಡ" ದ ಕಡೆಯಿಂದ ಭಾರತವೂ ಸೇರಿದಂತೆ, ಒಟ್ಟು ೪ ತಂಡಗಳು ಆಯ್ಕೆಯಾದವು. ಮೊಟ್ಟಮೊದಲ ಪಂದ್ಯದಲ್ಲೇ ಭಾರತ ಸೋಲುಂಡು ಹೊರಬಿದ್ದಿತು. ಭಾರತದ ಒಂದು ಪುಟ್ಟ ರಾಜ್ಯದ ವಿಸ್ತೀರ್ಣವಿರುವ ದೇಶಗಳು, ವಿಶ್ವಕಪ್ ನಲ್ಲಿ ಆಡುವ ಅರ್ಹತೆ ಪಡೆದವು.

ಇದುವರೆಗಿನ ವಿಶ್ವಕಪ್ ಫಲಿತಾಂಶಗಳು[ಬದಲಾಯಿಸಿ]

ವರ್ಷ ಆತಿಥೇಯ ರಾಷ್ಟ್ರ ನಿರ್ಣಾಯಕ ಪಂದ್ಯ ಮೂರನೆಯ ಸ್ಥಾನಕ್ಕಾಗಿ ಪಂದ್ಯ
ವಿಜಯಿ ಸ್ಕೋರ್ ದ್ವಿತೀಯ ಸ್ಥಾನ ಮೂರನೆಯ ಸ್ಥಾನ ಸ್ಕೋರ್ ನಾಲ್ಕನೆಯ ಸ್ಥಾನ
೧೯೩೦ ಉರುಗ್ವೆ ಉರುಗ್ವೆ ೪–೨ ಅರ್ಜೆಂಟೀನ ಯು.ಎಸ್.ಎ ಮತ್ತು ಯೊಗೋಸ್ಲಾವಿಯ . .
೧೯೩೪ ಇಟಲಿ ಇಟಲಿ ೨–೧ ಝೆಕೊಸ್ಲೊವಾಕಿಯ ಜರ್ಮನಿ ೩–೨ ಆಸ್ಟ್ರಿಯ
೧೯೩೮ ಫ್ರಾನ್ಸ್ ಇಟಲಿ ೪–೨ ಹಂಗರಿ ಬ್ರೆಜಿಲ್ ೪–೨ ಸ್ವೀಡನ್
೧೯೫೦ ಬ್ರೆಜಿಲ್ ಉರುಗ್ವೆ ಬ್ರೆಜಿಲ್ ಸ್ವೀಡನ್ ಸ್ಪೆಯ್ನ್
೧೯೫೪ ಸ್ವಿಟ್ಝರ್ಲಂಡ್ ಪಶ್ಚಿಮ ಜರ್ಮನಿ ೩–೨ ಹಂಗರಿ ಆಸ್ಟ್ರಿಯ ೩–೧ ಉರುಗ್ವೆ
೧೯೫೮ ಸ್ವೀಡನ್ ಬ್ರೆಜಿಲ್ ೫–೨ ಸ್ವೀಡನ್ ಫ್ರಾನ್ಸ್ ೬–೩ ಪಶ್ಚಿಮ ಜರ್ಮನಿ
೧೯೬೨ ಚಿಲಿ ಬ್ರೆಜಿಲ್ ೩–೧ ಝೆಕೊಸ್ಲೊವಾಕಿಯ ಚಿಲಿ ೧–೦ ಯೊಗೋಸ್ಲಾವಿಯ
೧೯೬೬ ಇಂಗ್ಲೆಂಡ್ ಇಂಗ್ಲೆಂಡ್ ೪–೨ ಪಶ್ಚಿಮ ಜರ್ಮನಿ ಪೋರ್ಚುಗಲ್ ೨–೧ ಸೋವಿಯತ್ ಒಕ್ಕೂಟ
೧೯೭೦ ಮೆಕ್ಸಿಕೋ ಬ್ರೆಜಿಲ್ ೪–೧ ಇಟಲಿ ಪಶ್ಚಿಮ ಜರ್ಮನಿ ೧–೦ ಉರುಗ್ವೆ
೧೯೭೪ ಪಶ್ಚಿಮ ಜರ್ಮನಿ ಪಶ್ಚಿಮ ಜರ್ಮನಿ ೨–೧ ನೆದರ್ಲೆಂಡ್ಸ್ ಪೋಲಂಡ್ ೧–೦ ಬ್ರೆಜಿಲ್
೧೯೭೮ ಅರ್ಜೆಂಟೀನ ಅರ್ಜೆಂಟೀನ ೩–೧ ನೆದರ್ಲೆಂಡ್ಸ್ ಬ್ರೆಜಿಲ್ ೨–೧ ಇಟಲಿ
೧೯೮೨ ಸ್ಪೆಯ್ನ್ ಇಟಲಿ ೩–೧ ಪಶ್ಚಿಮ ಜರ್ಮನಿ ಪೋಲಂಡ್ ೩–೨ ಫ್ರಾನ್ಸ್
೧೯೮೬ ಮೆಕ್ಸಿಕೋ ಅರ್ಜೆಂಟೀನ ೩–೨ ಪಶ್ಚಿಮ ಜರ್ಮನಿ ಫ್ರಾನ್ಸ್ ೪–೨ ಬೆಲ್ಜಿಯಂ
೧೯೯೦ ಇಟಲಿ ಪಶ್ಚಿಮ ಜರ್ಮನಿ ೧–೦ ಅರ್ಜೆಂಟೀನ ಇಟಲಿ ೨–೧ ಇಂಗ್ಲಂಡ್
೧೯೯೪ ಯು.ಎಸ್.ಎ ಬ್ರೆಜಿಲ್ ೦–೦ ಇಟಲಿ ಸ್ವೀಡನ್ ೪–೦ ಬಲ್ಗೇರಿಯ
೧೯೯೮ ಫ್ರಾನ್ಸ್ ಫ್ರಾನ್ಸ್ ೩–೦ ಬ್ರೆಜಿಲ್ ಕ್ರೊಏಶಿಯ ೨–೧ ನೆದರ್ಲೆಂಡ್ಸ್
೨೦೦೨ ದಕ್ಷಿಣ ಕೊರಿಯ ಮತ್ತು ಜಪಾನ್ ಬ್ರೆಜಿಲ್ ೨–೦ ಜರ್ಮನಿ ಟರ್ಕಿ ೩–೨ ಕೊರಿಯ ಗಣರಾಜ್ಯ
೨೦೦೬ ಜರ್ಮನಿ ಇಟಲಿ ೧–೧ ಫ್ರಾನ್ಸ್ ಜರ್ಮನಿ ೩–೧ ಪೋರ್ಚುಗಲ್
೨೦೧೦ ದಕ್ಷಿಣ ಆಫ್ರಿಕ ಸ್ಪೇನ್ ೧-೦ ನೆದರ್ ಲ್ಯಾಂಡ್ ಜರ್ಮನಿ ೩-೨ ಉರುಗ್ವೇ

ವಿಶ್ವಕಪ್ ಗಳಲ್ಲಿ ವಿವಿಧ ದೇಶಗಳ ಸಾಧನೆ[ಬದಲಾಯಿಸಿ]

ದೇಶ ಚಾಂಪಿಯನ್ ದ್ವಿತೀಯ ಸ್ಥಾನ ಮೂರನೆಯ ಸ್ಥಾನ ನಾಲ್ಕನೆಯ ಸ್ಥಾನ
ಬ್ರೆಜಿಲ್ ೫ (೧೯೫೮, ೧೯೬೨, ೧೯೭೦, ೧೯೯೪, ೨೦೦೨) ೨ (೧೯೫೦*, ೧೯೯೮) ೨ (೧೯೩೮, ೧೯೭೮) ೧ (೧೯೭೪)
ಇಟಲಿ ೪ (೧೯೩೪, ೧೯೩೮, ೧೯೮೨, ೨೦೦೬) ೨ (೧೯೭೦, ೧೯೯೪) ೧ (೧೯೯೦) ೧ (೧೯೭೮)
ಜರ್ಮನಿ ೩ (೧೯೫೪, ೧೯೭೪, ೧೯೯೦) ೪ (೧೯೬೬, ೧೯೮೨, ೧೯೮೬, ೨೦೦೨) ೩ (೧೯೩೪, ೧೯೭೦, ೨೦೦೬) ೧ (೧೯೫೮)
ಅರ್ಜೆಂಟೀನ ೨ (೧೯೭೮, ೧೯೮೬) ೨ (೧೯೩೦, ೧೯೯೦) .. ..
ಉರುಗ್ವೆ ೨ (೧೯೩೦, ೧೯೫೦) .. .. ೨ (೧೯೫೪, ೧೯೭೦)
ಫ್ರಾನ್ಸ್ ೧ (೧೯೯೮) ೧ (೨೦೦೬) ೨ (೧೯೫೮, ೧೯೮೬) ೧ (೧೯೮೨)
ಇಂಗ್ಲೆಂಡ್ ೧ (೧೯೬೬) .. .. ೧ (೧೯೯೦)
ಸ್ಪೆಯ್ನ್ ೧(೨೦೧೦) .. .. ೧ (೧೯೫೦)
ನೆದರ್ಲಂಡ್ಸ್ .. ೨ (೧೯೭೪, ೧೯೭೮) .. ೧ (೧೯೯೮)
ಝೆಕೊಸ್ಲೋವಾಕಿಯ .. ೨ (೧೯೩೪, ೧೯೬೨) .. ..
ಹಂಗರಿ .. ೨ (೧೯೩೮, ೧೯೫೪) .. ..
ಸ್ವೀಡನ್ .. ೧ (೧೯೫೮*) ೨ (೧೯೫೦, ೧೯೯೪) ೧ (೧೯೩೮)
ಪೋಲಂಡ್ .. .. ೨ (೧೯೭೪, ೧೯೮೨) ..
ಆಸ್ಟ್ರಿಯ .. .. ೧ (೧೯೫೪) ೧ (೧೯೩೪)
ಪೋರ್ಚುಗಲ್ .. .. ೧ (೧೯೬೬) ೧ (೨೦೦೬)
ಯುಗೋಸ್ಲಾವಿಯ .. .. ೧ (೧೯೩೦) ೧ (೧೯೬೨)
ಯು.ಎಸ್.ಎ. .. .. ೧ (೧೯೩೦) ..
ಚಿಲಿ .. .. ೧ (೧೯೬೨) ..
ಕ್ರೊಏಶಿಯ .. .. ೧ (೧೯೯೮) ..
ಟರ್ಕಿ .. .. ೧ (೨೦೦೨) ..
ಸೋವಿಯತ್ ಒಕ್ಕೂಟ .. .. .. ೧ (೧೯೬೬)
ಬೆಲ್ಜಿಯಮ್ .. .. .. ೧ (೧೯೮೬)
ಬಲ್ಗೇರಿಯ .. .. .. ೧ (೧೯೯೪)
ಕೊರಿಯ ಗಣರಾಜ್ಯ .. .. .. ೧ (೨೦೦೨*)

ನೋಡಿ[ಬದಲಾಯಿಸಿ]

  • ಫೀಫಾಹೆಚ್ಚಿನ ಇತಿಹಾಸ ,+2014ರ ವಿಶ್ವ ಕಪ್ ವಿವರ

ಬಾಹ್ಯ ಸಂಪರ್ಕಗಳು[ಬದಲಾಯಿಸಿ]