ರಾಠಿ (ಗೋವಿನ ತಳಿ)
ರಾಠಿ | |
---|---|
ತಳಿಯ ಹೆಸರು | ರಾಠಿ (ರಾಠ್ ಅಥವಾ ರಾಥಿ) |
ಮೂಲ | ಪಶ್ಚಿಮ ರಾಜಸ್ಥಾನ |
ವಿಭಾಗ | ಹಾಲಿನ ತಳಿ |
ಬಣ್ಣ | ಕಂದು, ಬಿಳಿ ಬಣ್ಣ ಮಿಶ್ರಣ, ಸಂಪೂರ್ಣ ಕಂದು ಅಥವಾ ಕಪ್ಪು ಬಿಳಿ ಮಿಶ್ರಣ |
ಮುಖ | ಮೂತಿ: ಕಪ್ಪು, ಕಣ್ಣು ರೆಪ್ಪೆ: ಕಂದು ಅಥವಾ ಕಪ್ಪು |
ಕೊಂಬು | ಗಿಡ್ಡ |
'ರಾಠ್ ಅಥವಾ ರಾಥಿ ಒಂದೇ ತಳಿಯ ಎರಡು ಪ್ರಕಾರಗಳು ಎನ್ನಬಹುದು. ಅವು ಮೂಲತಃ ಒಂದೇ ತಳಿಯಾದರೂ ಎರಡು ವಿಭಿನ್ನ ಸ್ಥಳಗಳಲ್ಲಿ ಹೆಚ್ಚಾಗಿ ಸಾಕಲ್ಪಟ್ಟು ಎರಡು ಹೆಸರು ಪಡೆದುಕೊಂಡವು, ಆಯಾ ಸ್ಥಳಗಳ ವಾತಾವರಣಕ್ಕೆ ಅನುಗುಣವಾಗಿ ಕೆಲವು ಬದಲಾವಣೆಗಳಾಗಿವೆ. ರಾಠ್ ಮಧ್ಯಮಗಾತ್ರದ ಆಕರ್ಷಕ ತಳಿ. ರಾಠ್ ಅನ್ನು ಹೆಚ್ಚಾಗಿ ಹಾಲಿನ ತಳಿಯಾಗಿ ಗುರುತಿಸಿದರೆ ರಾಠಿ ಉತ್ತಮ ಕೆಲಸಗಾರತಳಿ. ಆದರೆ ಈ ಭೇದ ಆಯಾ ಸ್ಥಳಗಳ ಔಪಯೋಗಿಕ ಭಿನ್ನತೆಯಿಂದ ಆದದ್ದು ಅಷ್ಟೆ. ರಾಠಿ ರಾಜಸ್ಥಾನದ ಪಶ್ಚಿಮಭಾಗದ ಬಿಕನೆರ್ ಹಾಗೂ ಗಂಗಾನಗರ ಪ್ರಾಂತ್ಯದಲ್ಲಿ ಹೆಚ್ಚಾಗಿ ಕಾಣಸಿಗುವ ತಳಿ. ರಾಠ್‌ನ ಮೂಲ ಅಲ್ವಾರ್ ಜಿಲ್ಲೆ. ರಾಠ್ ಎಂಬ ಜನಾಂಗ ಇವುಗಳನ್ನು ಪಾಲಿಸಿದ್ದರಿಂದ ಇವುಗಳಿಗೆ ಆ ಹೆಸರು. ರಾಠ್ ಜನಾಂಗ ಒಂದು ಶುದ್ಧ ಅಲೆಮಾರಿ ಜನಾಂಗ. ಬಿಕಾನೆರ್, ಅಲ್ವಾರ್, ನರ್ನೌಲ್, ಬಾಂಸುರ್ ಇತ್ಯಾದಿ ಜಿಲ್ಲೆಗಳಲ್ಲಿ ಇವರದ್ದು ಗೋವಿನೊಂದಿಗೆ ನಿತ್ಯಸಂಚಾರ. ರಾಥ್ ತಳಿ ದೇಶದ ಎಲ್ಲ ಭಾಗಗಳಲ್ಲೂ ಕಾಣಸಿಗಬಹುದಾದರೂ ಶುದ್ಧರೂಪದಲ್ಲಿರುವುದು ಇಲ್ಲಿಯೆ. ಇವುಗಳು ಅತ್ಯುತ್ತಮ ಹಾಲಿನ ತಳಿಗಳು.
ಬೂದು ಬಣ್ಣದ ಮೈಗೆ ಬಿಳಿ ಚುಕ್ಕೆಗಳಿರುವುದು ರಾಠ್ ತಳಿಯಾದರೆ ಸ್ವಲ್ಪ ಕಂದು ಬಣ್ಣ ರಾಠಿಯದ್ದು. ಪೂರ್ತಿ ಬೂದು ಅಥವಾ ಪೂರ್ತಿ ಬೂದು ಬಣ್ಣದ ಹಸುಗಳು ಅಪರೂಪಕ್ಕೆ ಕಾಣಸಿಗುತ್ತವೆ. ಎರಡೂ ತಳಿಗಳಲ್ಲಿಯೂ ಶರೀರದ ಕೆಳಭಾಗಗಳಲ್ಲಿ ಬಣ್ಣ ತಿಳಿಯಾಗುತ್ತಾ ಹೋಗುತ್ತದೆ. ಸಣ್ಣ ಕಿವಿ, ದೊಡ್ದ ಗಂಗೆದೊಗಲು ಘನವಾದ ಕೆಚ್ಚಲು ಗಿಡ್ಡ ಕೊಂಬು ಕೆಲವು ಸಾಮ್ಯತೆಗಳು. ಒಂದು ಕರುವಿನ ಅವಧಿಗೆ ಅಜಮಾಸು ೧೫೦೦ರಿಂದ ೨೦೦೦ ಕೇಜಿಯಷ್ಟು ಹಾಲು ನೀಡುತ್ತವೆ. ಹೋರಿಗಳು ಸಧೃಡ; ಮರುಭೂಮಿಯಲ್ಲೂ ಅತಿಗಟ್ಟಿ ಜಾಗೆಗಳಲ್ಲೂ ಹತ್ತು ತಾಸಿಗೂ ಅಧಿಕ ಸಮಯ ಬಿಡದೆ ದುಡಿಯಬಲ್ಲವು. ಮರುಭೂಮಿಯಲ್ಲಿ ಭಾರ ಹೊತ್ತು ೨೦ ಮೈಲಿಯವರೆಗೂ ನಡೆಯಬಲ್ಲವು.
ಈ ತಳಿಯು ಶುದ್ಧವಾಗಿ ಉಳಿಯಲು ಕಾರಣ ರಾಠ್ ಜನಾಂಗ ಇವುಗಳನ್ನು ಪಾಲಿಸಲು ಹಾಕಿಕೊಂಡ ಸ್ವಯಂಸಂಹಿತೆ. ರಾಠ್ ತಳಿಯನ್ನು ಬೇರೆ ತಳಿಯೊಂದಿಗೆ ಬೆರೆಯದಂತೆ ಅತಿಯಾದ ಎಚ್ಚರಿಕೆ, ಹೆಚ್ಚು ಕಾಳಜಿವಹಿಸಲು ಸಾಧ್ಯವಾಗುವಂತೆ ಸಣ್ಣ ಸಣ್ಣ ಮಂದೆಗಳಲ್ಲಿ ಸಾಕುವುದು ಇವು ಕೆಲವು ಉದಾಹರಣೆಗಳು. ಇವು (ರಾಠ್ ಹಾಗೂ ರಾಠಿ) ಅದೆಷ್ಟು ಆರ್ಥಿಕವಾಗಿ ಅನುಕೂಲವೆಂದರೆ ಅಮೇರಿಕಾದ ಓಕ್ಲಹಾಮ ವಿಶ್ವವಿದ್ಯಾನಿಲಯದ ಹೈನುಗಾರಿಕಾ ವಿಭಾಗ ಈ ತಳಿಯನ್ನು poor man’s breed ಎಂದೇ ಬಣ್ಣಿಸುತ್ತದೆ. ಭಾರತೀಯ ವಿಶ್ವವಿದ್ಯಾನಿಲಯದ ಯಾವ ತಾಣಗಳಲ್ಲಿಯೂ ಇದರ ಬಗ್ಗೆ ಉಲ್ಲೇಖವಿಲ್ಲ! ಈ ತಳಿ ವಿನಾಶದ ಹಾದಿಯಲ್ಲಿರುವ ತಳಿಗಳಲ್ಲಿ ಒಂದಾಗಿದೆ.
ಚಿತ್ರಗಳು
[ಬದಲಾಯಿಸಿ]-
ಗಂಡು
-
ಹೆಣ್ಣು
ಆಧಾರ/ಆಕರ
[ಬದಲಾಯಿಸಿ]'ಗೋವಿಶ್ವಲೋಕ' ಜಾಲತಾಣದ 'ಗೋವಿಶ್ವ' ಇ-ಪತ್ರಿಕೆ Archived 2018-11-24 ವೇಬ್ಯಾಕ್ ಮೆಷಿನ್ ನಲ್ಲಿ.