ಯಾಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಟ್ರಿಪೊನೀಮ ಪ್ಯಾಲಿಡಮ್ ಪರ್ಟೆನ್ಯೂಯೀ ಬ್ಯಾಕ್ಟೀರಿಯಾ ಸೋಂಕಿನಿಂದ ಉಂಟಾದ ಮೊಣಕೈ ಮೇಲಿನ ಗಂಟುಗಳು

ಯಾಸ್ ಎಂಬುದು ಟ್ರಿಪೊನೀಮ ಅಥವಾ ಸ್ಪೈರೋಕೀಟ ಎಂಬ ಏಕಾಣುಗುಂಪಿಗೆ ಸೇರಿದ, ಪರ್ಟೆನ್ಯೂಯೀ ಪ್ರಭೇದದ, ವಿಷಾಣುವಿನ ಸೋಂಕಿನಿಂದ ಉಂಟಾಗುವ ಒಂದು ಕ್ಷಿಪ್ರ ಸಾಂಕ್ರಾಮಿಕ ರೋಗ.[೧][೨] ಪರ್ಯಾಯನಾಮ ಫ್ರಾಂಬೀಸಿಯ. ಪ್ರಮುಖವಾಗಿ ಚರ್ಮರೋಗವೇ ಆದರೂ ಲೋಳೆಪೊರೆ, ಮೂಳೆಗಳಿಗೂ ಇದು ಆವರಿಸುವುದುಂಟು. ರೋಗಾಣು ಪರಂಗಿ ರೋಗದ (ಸಿಫಿಲಿಸ್) ರೋಗಾಣುವಿನಂತೆಯೇ ಇರುತ್ತದೆ.[೩] ಯಾಸ್ ಬಲುಮಟ್ಟಿಗೆ ಪರಂಗಿರೋಗವನ್ನೇ ಹೋಲುತ್ತದೆ. ಆದರೆ ಅದರಂತೆ ಲೈಂಗಿಕ ರೋಗವಲ್ಲ.[೪] ಆಫ್ರಿಕ ಮತ್ತು ಅಮೆರಿಕ ಖಂಡಗಳ ಉಷ್ಣವಲಯದ ಪ್ರದೇಶಗಳು, ಪೂರ್ವ ಮತ್ತು ಪಶ್ಚಿಮ ಇಂಡೀಸ್ ದ್ವೀಪಗಳು, ದಕ್ಷಿಣ ಪೆಸಿಫಿಕ್ ದ್ವೀಪಗಳಲ್ಲಿ ಈ ರೋಗ ವ್ಯಾಪಕವಾಗಿ ಕಾಣಬರುತ್ತದೆ. ನೀಗ್ರೋ ಬುಡಕಟ್ಟಿನ ಜನ ಹಾಗೂ ಮಕ್ಕಳಲ್ಲಿ ಈ ರೋಗ ಹೆಚ್ಚು ಸಾಮಾನ್ಯ.

ರೋಗಲಕ್ಷಣಗಳು[ಬದಲಾಯಿಸಿ]

ಸೋಂಕು ತಗಲಿದ ಸುಮಾರು 1-2 ತಿಂಗಳುಗಳಲ್ಲಿ ಸಾಧಾರಣವಾಗಿ ಕಾಲಿನ ಚರ್ಮದ ಮೇಲೆ ತರಚಲಾಗಿ ಕೆಂಪು ಹಳದಿ ಬಣ್ಣದ ಶಂಕ್ವಾಕಾರದ ಗುಬುಟು ಉದ್ಭವಿಸುತ್ತದೆ. ಇದು ಹುಣ್ಣಾಗಿ ಒಡೆದು ವ್ರಣವಾಗಿ ರಸಿಕೆ ಸುರಿಸುತ್ತದೆ. ರಸಿಕೆಯಿಂದ ಮೈಮೇಲೆ ಇತರ ಭಾಗಗಳಲ್ಲೂ ಅನೇಕಾನೇಕ ಹುಣ್ಣು ವ್ರಣಗಳು ಉಂಟಾಗುವುದು ಸಾಮಾನ್ಯ. ಮೊದಲೇ ಆಗಿರುವ ಗಾಯವೊ ವ್ರಣವೊ ಇಂಥ ಪ್ರಥಮ ಸೋಂಕಿಗಾಗಲಿ ಮರು ಸೋಂಕಿಗಾಗಲಿ ಈಡಾಗುವುದು ಬಲು ಸುಲಭ. ಮರುಸೋಂಕಿಗೆ ಈಡಾದ ಸ್ಥಳದಲ್ಲಿ ಚರ್ಮದ ಮೇಲೆಲ್ಲಾ ಬಿಳಿ ಹಿಟ್ಟು ಉದರಿಸಿದಂತೆ ಕಾಣಬರುತ್ತದೆ. ಆನಂತರ ಅಲ್ಲಲ್ಲೇ ವಿಶಿಷ್ಟ ಲಕ್ಷಣದ ಹುಣ್ಣುಗಳು ಎದ್ದು ಅವು ವ್ರಣವಾಗಿ ರಸಿಕೆ ಜಿನುಗಿಸಲು ಪ್ರಾರಂಭಿಸುತ್ತವೆ. ಸೋಂಕು ಹೀಗೆ ದೇಹದ ಅನೇಕ ಕಡೆಗಳಿಗೆ ಹರಡುವುದಕ್ಕೆ ರೋಗಿಯ ಬಟ್ಟೆ, ನೊಣ ಇತ್ಯಾದಿ ಕಾರಣ. ಈ ಕಾರಣದಿಂದಲೇ ರೋಗ ಬೇರೆಯವರಿಗೆ ಹರಡುವ ಸಂಭವವೂ ಉಂಟು.

ಮೂಳೆ ಹಾಗೂ ಕೀಲುಗಳ ನೋವು, ನವೆ, ಅಂಗುಲು ವ್ರಣಗಳ ನೋವಿನಿಂದಾಗಿ ಸರಿಯಾಗಿ ನಡೆಯುವುದಕ್ಕಾಗದೆ ನಳ್ಳಿಯಂತೆ ಅಡ್ಡಡ್ಡಾಗಿ ನಡೆಯುವುದು; ಹಸ್ತದ ಮೇಲಿನ ವ್ರಣದ ನೋವಿನಿಂದಾಗಿ ಸರಿಯಾಗಿ ಕುಳಿತುಕೊಳ್ಳುವುದಕ್ಕೆ ಆಗದಿರುವುದು ಇತ್ಯಾದಿಗಳಿಂದ ರೋಗ ಬಲು ತೊಂದರೆ ಕೊಡುವುದಾದರೂ ಪ್ರಾಣಾಪಾಯವಿರದೆ ಚಿಕಿತ್ಸೆ ಇಲ್ಲದ ಸಂದರ್ಭದಲ್ಲೂ ಸುಮಾರು 1-2 ವರ್ಷಗಳಲ್ಲಿ ತಾನಾಗಿಯೇ ವಾಸಿಯಾಗಿರುತ್ತದೆ. ಬೇರೆ ಎಡೆಗಳಲ್ಲಿನ ವ್ರಣಗಳು ನೋವನ್ನು ಉಂಟುಮಾಡುವುದಿಲ್ಲ. ಈ ರೋಗ ಪರಂಗಿರೋಗದಂತಾದರೂ ಅದು ಬರುವಂತೆ ಆಜನ್ಮವಾಗಿ ಬರದಿರುವಂಥದು. ರೋಗ ಅನುವಂಶಿಕವೂ ಅಲ್ಲ. ಸೋಂಕು ಹಬ್ಬುವಿಕೆ ಲೈಂಗಿಕವಲ್ಲವಾದ್ದರಿಂದ ಮತ್ತು ಕೊಳಕಾಗಿದ್ದು ರಸಿಕೆ ಸಂಪರ್ಕದಿಂದಾಗುವುದರಿಂದ ನಗರಗಳಿಗಿಂತಲೂ ಗ್ರಾಮಾಂತರ ಪ್ರದೇಶಗಳಲ್ಲಿ ಇದು ಕಾಣಿಸಿಕೊಳ್ಳುವುದು ಹೆಚ್ಚು ಸಾಮಾನ್ಯ. ಆದರೂ ರೋಗ ಪರಂಗಿರೋಗವಲ್ಲವೆಂದು ನಿರ್ಧರಿಸಲು ರಕ್ತದ ವಿಶೇಷ ಪರೀಕ್ಷೆಮಾಡುವುದು ನಿಷ್ಪ್ರಯೋಜಕ. ಏಕೆಂದರೆ ಈ ಎರಡು ರೋಗಗಳಲ್ಲೂ ಅಂಥ ವಿಶೇಷ ಪರೀಕ್ಷೆಯಿಂದ ತಿಳಿದುಬರುವುದು ಕೇವಲ ಒಂದೇ ತೆರನಾದ ಮಾಹಿತಿ.

ಚಿಕಿತ್ಸೆ[ಬದಲಾಯಿಸಿ]

ಯಾಸ್ ರೋಗವೂ ಪರಂಗಿ ರೋಗದ ಚಿಕಿತ್ಸಕ ಮದ್ದುಗಳಿಗೆ ಸುಲಭವಾಗಿ ಮಣಿಯುತ್ತದೆ. ಮದ್ದಿನಿಂದಾಗಲಿ ತಾನಾಗಿಯೇ ಆಗಲಿ ವಾಸಿ ಆದ ರೋಗ ವ್ಯಕ್ತಿಗೆ ರಕ್ಷಣೆ ಒದಗಿಸುವುದು ಅಷ್ಟಕ್ಕಷ್ಟೆ. ವ್ಯಕ್ತಿ ಮುಂದೆ ಪುನಃ ಹೊಸ ಸೋಂಕಿಗೆ ಈಡಾಗುವುದೂ ತಿಳಿದಿದೆ.

ಉಲ್ಲೇಖಗಳು[ಬದಲಾಯಿಸಿ]

  1. Mitjà O; Asiedu K; Mabey D (2013). "Yaws". The Lancet. 381 (9868): 763–73. doi:10.1016/S0140-6736(12)62130-8. PMID 23415015. S2CID 208791874.
  2. Mitjà O; Hays R; Rinaldi AC; McDermott R; Bassat Q (2012). "New treatment schemes for yaws: the path toward eradication" (pdf). Clinical Infectious Diseases. 55 (3): 406–412. doi:10.1093/cid/cis444. PMID 22610931. Archived from the original on 18 May 2014.
  3. "Yaws Fact sheet N°316". World Health Organization. February 2014. Archived from the original on 3 March 2014. Retrieved 27 February 2014.
  4. Marks, M; Lebari, D; Solomon, AW; Higgins, SP (September 2015). "Yaws". International Journal of STD & AIDS. 26 (10): 696–703. doi:10.1177/0956462414549036. PMC 4655361. PMID 25193248.

ಹೊರಗಿನ ಕೊಂಡಿಗಳು[ಬದಲಾಯಿಸಿ]

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಯಾಸ್&oldid=1199043" ಇಂದ ಪಡೆಯಲ್ಪಟ್ಟಿದೆ