ಮಹಿಳೆಯರ ಕೇಶಾಲಂಕಾರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಭಾರತದಲ್ಲಿ ಮಹಿಳೆಯರಿಗೆ ವಿಶೇಷ ಸ್ಥಾನ ಮಾನವಿದೆ. ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಯರಿಗೆ ಮತ್ತು ಅವರ ಸೌಂದರ್ಯಕ್ಕೆ ವಿಶೇಷ ಗೌರವವಿದೆ. ಅಲಂಕಾರದ ಒಲವು ಹೆಣ್ಣಿನಲ್ಲಿ ರಕ್ತಗತವಾಗಿ ಬಂದಿದೆ. ಮಹಿಳೆಯರು ಮದುವೆಯ ದಿನದಂದು ಕೇಶಾಲಂಕಾರ ಮಾಡುವುದು ವಾಡಿಕೆ. ಕಾಲ ಕಳೆದಂತೆ ಹೆಂಗಳೆಯರ ಮನಸ್ಥಿತಿಗೆ ಒಗ್ಗಿಕೊಂಡು ಆಧುನಿಕತೆಯ ಮೆರುಗನ್ನು ಹೊಂದಿರುವ ಮಹಿಳೆಯ ಕೇಶ ಶೃಂಗಾರ ಬಹಳ ಜನಪ್ರಿಯವಾಗಿದೆ. ಸಾಂಪ್ರದಾಯಿಕ, ಆಧುನಿಕ ಹಾಗೂ ಪೂಜೆ-ಪುನಸ್ಕಾರಕ್ಕೆ ಹೊಂದುವಂತೆ ಮತ್ತು ಮುಖದ ಲಕ್ಷಣವನ್ನು ಆಧರಿಸಿ ಹಲವಾರು ಮಾದರಿಯಲ್ಲಿ ಕೇಶಾಲಂಕಾರವನ್ನು ಮಾಡಲಾಗುತ್ತದೆ.

ಹಿಂದು, ಮುಸ್ಲಿಂ, ಕ್ರಿಶ್ಚಿಯನ್ ಸೇರಿದಂತೆ ನಾನಾ ಧರ್ಮಗಳಲ್ಲಿ ವಿಭಿನ್ನ ರೀತಿಯಲ್ಲಿ ಕೇಶ ವಿನ್ಯಾಸವನ್ನು ಮಾಡುತ್ತಾರೆ. ಮಹಿಳೆಯರು ಕೇಶವನ್ನು ಹೆಚ್ಚಾಗಿ ಹೂವಿನಲ್ಲಿ ಸಿಂಗಾರ ಮಾಡುತ್ತಾರೆ. ಬೇಸಿಗೆ, ಮಳೆ ಅಥವಾ ಚಳಿ ಯಾವುದೇ ಕಾಲವಿರಲಿ, ಆ ಸಂದರ್ಭಕ್ಕೆ ಒಗ್ಗುವಂತೆ ಮಹಿಳೆಯರು ವಿಶಿಷ್ಟವಾಗಿ ಕೇಶಾಲಂಕಾರ ಮಾಡಿ, ಕಂಗೊಳಿಸುತ್ತಾರೆ.

ಅನಾದಿ ಕಾಲದಿಂದಲೂ ಮಹಿಳೆಯರು ಕೇಶಾಲಂಕಾರ ಕಲೆಯಲ್ಲಿ ನಿಪುಣತೆಯನ್ನು ಹೊಂದಿದ್ದಾರೆ. ಹೆಣ್ಣಿನ ಸೌಂದರ್ಯ ಅವಳ ಕೇಶದಲ್ಲಿ ಅಡಗಿದೆ. ಮದುವೆ[೧], ನಾಮಕರಣ, ಮುಂತಾದ ಶುಭ ಸಂದರ್ಭಗಳಲ್ಲಿ ಮಹಿಳೆ ವಿಶೇಷವಾಗಿ ಅಲಂಕರಿಸಿಕೊಂಡು ಬೀಗುತ್ತಾಳೆ. ಕೂದಲಿನಲ್ಲಿ ಹಲವಾರು ವಿಧಗಳಿವೆ. ದಟ್ಟ ಕೂದಲು, ನೀಳ ಕೂದಲು, ಗುಂಗುರು ಕೂದಲು, ಕಪ್ಪು ಕೂದಲು, ವಿರಳ ಕೂದಲು, ಬಿಳಿಮಿಶ್ರಿತ ಕಪ್ಪು ಕೂದಲು ಮುಖ್ಯವಾಗಿದೆ.

ಜಡೆಯ ವಿನ್ಯಾಸಗಳು[ಬದಲಾಯಿಸಿ]

ಹೆಣ್ಣಿಗೆ ಜಡೆಯೇ ಸಿಂಗಾರ ಎನ್ನುವ ಮಾತಿದೆ. ಹಲವಾರು ಪ್ರಕಾರಗಳಲ್ಲಿ ಜಡೆಯನ್ನು ಸಿಂಗರಿಸಲಾಗುತ್ತದೆ. ಸಂದರ್ಭಕ್ಕೆ ಅನುಗುಣವಾಗಿ ಮಾಡುವ ಕೇಶ ಅಲಂಕಾರಗಳಲ್ಲಿ ಹಲವು ವಿನ್ಯಾಸಗಳಿವೆ. ಅವುಗಳಲ್ಲಿ ಪ್ರಮುಖವಾಗಿ ಒಂದು ಜಡೆ, ಮೂರು ಕಾಲಿನ ಜಡೆ, ಸಾವಿರ ಕಾಲಿನ ಜಡೆ, ತಲೆ ಅಥವಾ ಹಣೆ ಗಂಟು, ತೆಳು ಜಡೆ, ಮೊಗ್ಗಿನ ಜಡೆ, ತುರುಬು, ಬಿಚ್ಚು ಮುಡಿ, ಎರಡು ಜಡೆ, ನಾಲ್ಕು ಕಾಲಿನ ಜಡೆ, ಕೃಷ್ಣಗೊಂಡೆ, ಮೊಲದ ಕಿವಿ ಜುಟ್ಟು ಮುಂತಾದವುಗಳು ಹೆಚ್ಚಾಗಿ ಕಾಣ ಸಿಗುತ್ತದೆ.

ಕೃಷ್ಣಗೊಂಡೆ[ಬದಲಾಯಿಸಿ]

ಈ ಶೈಲಿಯ ಕೇಶಾಲಂಕಾರವನ್ನು ಸಾಮಾನ್ಯವಾಗಿ ಮಕ್ಕಳಿಗೆ ಮಾಡಲಾಗುತ್ತದೆ. ಹೆಣ್ಣು ಮಗುವಿನ ನೆತ್ತಿಯ ಮೇಲೆ ನಾಲ್ಕು ಕಡೆ ಕೂದಲನ್ನು ಬಿಟ್ಟು ನಡುವೆ ಉಳಿದ ಕೂದಲನ್ನು ಎತ್ತಿ ಕಟ್ಟಿ ಕುಚ್ಚಿನಾಕಾರ ಮಾಡಿ ಗಂಟು ಕಟ್ಟುತ್ತಾರೆ.

ಮೊಲದ ಕಿವಿ ಜುಟ್ಟು[ಬದಲಾಯಿಸಿ]

ಕೂದಲನ್ನು ಸಿಕ್ಕಿಲ್ಲದಂತೆ ಬಾಚಬೇಕು. ನಂತರ ನೇರ ತೆಗೆದು ಎರಡು ಬದಿಗೂ ಸಮಾನವಾದ ಕೂದಲನ್ನು ತೆಗೆದುಕೊಂಡು ಒಂದೊಂದು ಕಡೆಯೂ ಮುಕ್ಕಾಲು ಪಾಲು ಕೂದಲನ್ನು ಹಾಗೆಯೇ ಬಿಡಬೇಕು. ಕಾಲು ಭಾಗದ ಕೂದಲನ್ನು ತುದಿಯವರೆಗೂ ಹೆಣೆದು ರಬ್ಬರ್ ಅಥವಾ ಟೇಪಿನಿಂದ ಕೂದಲನ್ನು ಕಟ್ಟಬೇಕು. ಬಳಿಕ ಎರಡೂ ಕಡೆಯೂ ಆ ಕೂದಲನ್ನು ಮೇಲೆ ಎತ್ತಿ ಕಟ್ಟಬೇಕು. ಕಟ್ಟಿರುವ ಕೂದಲು ಮೊಲದ ಕಿವಿಯಂತೆ ಕಾಣುತ್ತದೆ.

ಸಾವಿರ ಕಾಲಿನ ಜಡೆ[ಬದಲಾಯಿಸಿ]

ಸಾವಿರ ಕಾಲಿನ ಜಡೆಯಲ್ಲಿ ಎರಡು ವಿಧಗಳಿವೆ. ಮೊದಲ ವಿಧದಲ್ಲಿ, ಕೂದಲಿನ ಸಣ್ಣ ಸಣ್ಣ ಎಳೆ ತೆಗೆದು ಆ ಭಾಗಗಳನ್ನೆಲ್ಲ ಮೂರು ಕಾಲಿನ ಜಡೆಯ ಮಾದರಿಯಲ್ಲಿ ನಾಜೂಕಾಗಿ ಹೆಣೆಯಬೇಕು. ಜಡೆ ಹೆಣೆದಾಗ ದಟ್ಟ ಕೂದಲಿದ್ದರೆ ಜಡೆಯು ಅಂಗೈ ಅಗಲ ಕಾಣಿಸುತ್ತದೆ. ಎರಡನೆಯ ವಿಧದಲ್ಲಿ, ಕೂದಲನ್ನು ಚಿಕ್ಕ ಚಿಕ್ಕದಾಗಿ ತೆಗೆದುಕೊಳ್ಳಬೇಕು. ಬಳಿಕ ಅದನ್ನು ಇಪ್ಪತ್ತೊಂದು ಭಾಗ ಮಾಡಿಕೊಂಡು ಅವುಗಳಲ್ಲಿ ಸಣ್ಣ ಸಣ್ಣ ಜಡೆಗಳನ್ನು ಹೆಣೆಯಬೇಕು. ನಂತರ ಅವುಗಳನ್ನು ಒಟ್ಟುಗೂಡಿಸಿಕೊಂಡು ಮೂರು ಕಾಲಿನ ಜಡೆ ಹೆಣೆದು ಮೇಲಕ್ಕೆ ಕಟ್ಟಬೇಕು.

ಮೊಗ್ಗಿನ ಜಡೆ[ಬದಲಾಯಿಸಿ]

ಮೊಗ್ಗಿನ ಜಡೆಯನ್ನು ಮದುವೆಯ ಸಂದರ್ಭದಲ್ಲಿ ವಧುವಿಗೆ ಹಾಕಲಾಗುತ್ತದೆ. ಸಾಮಾನ್ಯವಾಗಿ ಮೈಸೂರು ಮಲ್ಲಿಗೆ ಅಥವಾ ಮಂಗಳೂರು ಮಲ್ಲಿಗೆಯ ಮೊಗ್ಗಿನಿಂದ ಮೊಗ್ಗಿನ ಜಡೆಯನ್ನು ಹಾಕುತ್ತಾರೆ. ಮೊದಲು ಮೂರು ಕಾಲಿನ ಜಡೆಯನ್ನು ಹೆಣೆಯುತ್ತಾರೆ, ಜಡೆಯ ಕೊನೆಯಲ್ಲಿ ಕುಚ್ಚಾಗಿ ಅದನ್ನು ಭದ್ರಗೊಳಿಸಿ, ಉದ್ದವಾದ ಸೂಜಿಗೆ ಗಟ್ಟಿ ದಾರದಿಂದ ಮೂರು ಸಾಲಿನ ಮೊಗ್ಗನ್ನು ನಾಜೂಕಾಗಿ ಪೋಣಿಸುತ್ತಾರೆ. ನಂತರ ಜಡೆಯ ಮೇಲೆ ಕೂರಿಸಿ ನಡು ನಡುವಿನಲ್ಲಿ ಕೆಂಪು ಬಣ್ಣದ ಗುಲಾಬಿಯನ್ನು ಸೇರಿಸುತ್ತಾರೆ. ಆಧುನಿಕತೆಯ ಒಲವನ್ನು ಹೊಂದಿದ ಮಹಿಳೆಯರು ಎಥ್‍ನಿಕ್ ಲುಕ್ ಹೊಂದಿರುವಂತಹ ಜರತಾರಿ, ಹರಳು, ಗುಲಾಬಿ ಹೂ, ಮಣಿಗಳನ್ನು ಒಳಗೊಂಡ ರೆಡಿಮೆಡ್ ಕೃತಕ ಮೊಗ್ಗಿನ ಜಡೆಗೆ ಮಾರು ಹೋಗುತ್ತಾರೆ. ಹೇರ್‍ಪಿನ್, ಆಕರ್ಷಕ ವಿಶಿಷ್ಟ ಹೇರ್ ಆ್ಯಕ್ಸೆಸರೀಸ್, ತೆಳುವಾದ ಹೇರ್‍ಬ್ಯಾಂಡ್, ಜಡೆಯ ಕೊನೆಯಲ್ಲಿ ಗುಚ್ಛದಂತೆ ವಿನ್ಯಾಸ ಮಾಡಿ, ವಧುವಿಗೆ ಒಗ್ಗುವಂತಹ ಮೊಗ್ಗಿನ ಜಡೆಯನ್ನು ಆಯ್ಕೆ ಮಾಡಲಾಗುತ್ತದೆ.

ತುರುಬು[ಬದಲಾಯಿಸಿ]

ಮೊದಲು ಒಂದು ಸಿಂಬಿ ಇಟ್ಟು ಕೂದಲಿನಿಂದ ದೊಡ್ಡದಾದ ಗಂಟನ್ನು ಕಟ್ಟಬೇಕು. ಉಳಿದ ಅರ್ಧ ಕೂದಲನ್ನು ಓರಣಾಗಿ ಬಾಚಿ ಅರ್ಧ ಚಂದ್ರಾಕಾರದ ಸಿಂಬಿಯನ್ನು ಒಳಗಿಟ್ಟು ಸುತ್ತಲೂ ಕೂದಲನ್ನು ಸುತ್ತಬೇಕು. ನಂತರ ಮುಡಿಯ ಕೆಳ ಭಾಗದಿಂದ ನೆಟ್ಟಗೆ ಮುಡಿಯವರೆಗೆ ಬರುವಂತೆ ಮತ್ತೆ ಸುತ್ತಿ ಪಿನ್ನುಗಳನ್ನು ಹಾಕಬೇಕು. ಇವುಗಳಲ್ಲಿ ಹಲವಾರು ವಿಧದ ತುರುಬುಗಳನ್ನು ಕಟ್ಟಬಹುದಾಗಿದೆ. ಅವುಗಳಲ್ಲಿ ತಲೆಗಂಟು, ಬಿಚ್ಚೋಡೆ, ಸಿರಿ ಮುಡಿ, ಪೂಮುಡಿ, ಜೋಲ್ಮುಡಿ, ಜಡೆಮುಡಿ, ಸೋರ್ಮುಡಿ, ಮುತ್ತಿನ ಮುಡಿ, ಬಿಡು ಮುಡಿ, ಬಂಬಲ್ಮುಡಿ ಪ್ರಮುಖವಾಗಿದೆ. ಕಾಲ ಕಳೆದಂತೆ ತುರುಬು ಕಟ್ಟುವ ವಿಧಾನವು ಬದಲಾಗಿದೆ. ಆಧುನಿಕತೆಗೆ ಒಪ್ಪುವಂತೆ ತುರುಬಿಗೆ ನೆಟ್[ಬಲೆ] ಮಾದರಿಯ ಅಲಂಕಾರಿಕ ವಸ್ತುವನ್ನು ಬಳಸಿಕೊಂಡು ನವೀನ ಶೈಲಿಯಲ್ಲಿ ಕೇಶವನ್ನು ಅಲಂಕರಿಸುತ್ತಾರೆ.

ಎರಡು ಜಡೆ[ಬದಲಾಯಿಸಿ]

ತಲೆ ಕೂದಲು ಬಾಚಿ ಮಧ್ಯೆ ಬೈತಲೆ ತೆಗೆದು ಕೂದಲುಗಳನ್ನು ಸರಿಯಾಗಿ ಎರಡು ಭಾಗ ಮಾಡಬೇಕು. ಒಂದನ್ನು ಬಲಕ್ಕೆ ಮತ್ತೊಂದನ್ನು ಎಡಕ್ಕೆ ತಿರುಗಿಸಿ ಪ್ರತ್ಯೇಕವಾಗಿ ಎರಡು ಜಡೆಯನ್ನು ಹೆಣೆಯಬೇಕು.

ಪೈನಾಪಲ್ ಜಡೆ[ಬದಲಾಯಿಸಿ]

ಕೂದಲನ್ನು ಹಿಂದಕ್ಕೆ ಬಾಚಿ ರಬ್ಬರ್ ಬ್ಯಾಂಡ್ ಹಾಕಿ, ಸಮನಾಗಿ ಎರಡು ಭಾಗ ಮಾಡಬೇಕು. ಮೊದಲು ಒಂದು ಭಾಗದ ಕೂದಲನ್ನು ಸ್ವಲ್ಪ ಸ್ವಲ್ಪ ತೆಗೆದುಕೊಂಡು ಮೂರು ಕಾಲಿನ ಜಡೆ ಹಾಕಬೇಕು. ಎರಡೂ ಕಡೆಯಲ್ಲೂ ಈ ರೀತಿ ಮಾಡಿದ ನಂತರ ಜಡೆ ಹಾಕಿ ಕೊನೆಯ ಕೂದಲಿಗೆ ರಬ್ಬರ್ ಬ್ಯಾಂಡ್ ಹಾಕಬೇಕು. ಕೊನೆಯ ತುದಿ ಕೂದಲನ್ನು ಹಿಡಿದು ಪಿನ್ನುಗಳನ್ನು ಹಾಕಿ ಸೇರಿಸಬೇಕು. ಎರಡೂ ಕಡೆಯ ಕೂದಲನ್ನು ಸೇರಿಸಿದಾಗ ಮಧ್ಯೆ ಕೂದಲ ಬಳಿ ಪೈನಾಪಲ್ ಆಕಾರವಾಗಿ ಕಾಣುತ್ತದೆ.

ಹಾಫ್ಕ್ರೌನ್ ಜಡೆ[ಬದಲಾಯಿಸಿ]

ಬಲಭಾಗದ ಕಿವಿಯ ಮೇಲಿನ ಕೂದಲನ್ನು ಹಿಡಿದುಕೊಂಡು ಜಡೆ ಕಟ್ಟಲು ಕೂದಲನ್ನು ಮೂರು ಭಾಗಗಳನ್ನಾಗಿ ಮಾಡಿ, ಎಡ ಭಾಗದತ್ತ ಜಡೆಯನ್ನು ಹೆಣೆಯಬೇಕು. ಕೊನೆಯಲ್ಲಿ ಎಡ ಕಿವಿಯ ಭಾಗದಲ್ಲಿ ಹೇರ್ ಇಲಾಸ್ಟಿಕ್‍ನಿಂದ ಜಡೆಯನ್ನು ಉಳಿದ ಕೂದಲಿಗೆ ಕಟ್ಟಬೇಕು. ಇದೇ ರೀತಿಯಲ್ಲಿ ಎಡ ಕಿವಿಯ ಮೇಲ್ಭಾಗದಿಂದ ಒಂದರಿಂದ ಎರಡು ಇಂಚು ಕೂದಲನ್ನು ಆಯ್ಕೆ ಮಾಡಿ, ಮೂರು ವಿಭಾಗ ಮಾಡಬೇಕು. ಜಡೆಯನ್ನು ಹೆಣೆಯುತ್ತಾ ತಲೆಯ ಹಿಂದಿನ ಭಾಗದಿಂದ ಎಡದಿಂದ ಬಲಕ್ಕೆ ಜಡೆ ಹೆಣೆದು, ಕೊನೆಯಲ್ಲಿ ಜಡೆಯ ತುದಿಯನ್ನು ಹೇರ್ ಇಲಾಸ್ಟಿಕ್‍ನಿಂದ ಬಲಭಾಗದ ಕಿವಿಯ ಮೇಲಿನ ಇತರ ಕೂದಲಿನೊಂದಿಗೆ ಕಟ್ಟಬೇಕು. ಬಲ ಭಾಗದ ಮೊದಲ ಜಡೆಯನ್ನು ಎಡ ಭಾಗಕ್ಕೆ ತರುವಾಗ ಮಧ್ಯದಲ್ಲಿ ಬಾಬ್ಬಿ ಪಿನ್‍ಗಳನ್ನು ಬಳಸಬೇಕು.

ಫ್ರೀ ಹೇರ್[ಬದಲಾಯಿಸಿ]

ತಲೆಯ ಮಧ್ಯ ಭಾಗದಲ್ಲಿ ಸಮನಾಗಿ ಬೈ ತಲೆಯನ್ನು ತೆಗೆದು ಕೂದಲನ್ನು ಬಿಡಬೇಕು.

ಜಡೆ ವಿವರಣೆ[ಬದಲಾಯಿಸಿ]

ಜಡೆ ಕಟ್ಟುವುದು ಅಥವಾ ಹೆಣೆಯುವುದು ಒಂದು ವಿಶಿಷ್ಟ ಕಲೆ. ಹಲವಾರು ರೀತಿಯಲ್ಲಿ ಜಡೆಯನ್ನು ಹೆಣೆಯಲಾಗುತ್ತದೆ. ಬೈತಲೆ, ಎಡ ವಾರೆಗೆರೆ, ಬಲ ವಾರೆಗೆರೆ, ಚಿಕ್ಕ ಗೆರೆ, ನೇರ ಗೆರೆ ಮತ್ತು ಯಾವುದೇ ಗೆರೆಯನ್ನು ಎಳೆಯದೆ ಮುಡಿಯನ್ನು ಕಟ್ಟುವುದು ಜಡೆ ನೇಯುವ ಪ್ರಕಾರಗಳಾಗಿವೆ. ಇತ್ತೀಚಿನ ದಿನಗಳಲ್ಲಿ ಜಡೆಗಳ ಕೇಶಾಲಂಕಾರ ಬಹಳ ಕಡಿಮೆ ಆಗುತ್ತಿದೆ. ಆದರೆ ಇತಿಹಾಸ ಮರುಕಳಿಸುತ್ತದೆ ಎಂಬ ಮಾತಿನಂತೆ ಹಳೆ ಕಾಲದ ಕೇಶಾಲಂಕಾರಗಳು ಅಸ್ತಿತ್ವದಲ್ಲಿದೆ. ಕೂದಲಿಗೆ ಹೊಸ ವಿನ್ಯಾಸ ನೀಡಿದರೆ ಅಂದ ಹೆಚ್ಚುತ್ತದೆ. ಯಾವುದೇ ಹೇರ್‍ಸ್ಟೈಲ್‍ಗೆ ಆಕರ್ಷಣೆ ಅಥವಾ ಸೌಂದರ್ಯ ಹೊಸ ಕಳೆಯನ್ನು ನೀಡುತ್ತದೆ. ಮಕ್ಕಳ, ಹದಿಹರೆಯದವರ, ಮದುವೆಯಂತಹ ವಿಶೇಷ ಸಂದರ್ಭಗಳಲ್ಲಿ, ಪಾರ್ಟಿಗಳಲ್ಲಿ, ಸಮಾರಂಭಗಳಲ್ಲಿ, ಕಾಲೇಜಿಗೆ ಹೋಗುವಾಗ, ಆಫೀಸಿಗೆ ಹೋಗುವಾಗ ಹೀಗೆ ಹತ್ತು ಹಲವು ಕಡೆಗಳಲ್ಲಿ ವೈವಿಧ್ಯಮಯ ರೀತಿಯ ಕೇಶಾಲಂಕಾರಗಳು ರಾರಾಜಿಸುತ್ತದೆ.[೨]

ಉಲ್ಲೇಖಗಳು[ಬದಲಾಯಿಸಿ]

  1. www.pellipoolajada.com/tag/moggina-jade/</ref>
  2. https://www.lorealparisusa.com › beauty magazine › hair style</ref>
  3. https://beautyhealthtips.in/ideas-and-pictures-of-best-wedding-hairstyles/>
  1. http://www.stylecraze.com/articles/indian-bridal-hairstyles-that-you-should-definitely-check-before-your-decide-your-final-look/
  2. https://beautyhealthtips.in/ideas-and-pictures-of-best-wedding-hairstyles/