ವಿಷಯಕ್ಕೆ ಹೋಗು

ಮಗಧ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮಗಧ ರಾಜ್ಯ

ಸು. ಕ್ರಿ.ಪೂ. 1200–ಕ್ರಿ.ಪೂ. 322
Location of ಮಗಧ ಸಾಮ್ರಾಜ್ಯ
ಕ್ರಿ.ಪೂ. ೬ನೇ-೪ನೇ ಶತಮಾನಗಳಲ್ಲಿ ಮಗಧ ರಾಜ್ಯದ ವಿಸ್ತರಣೆ
ರಾಜಧಾನಿ ರಾಜಗೃಹ. ನಂತರ, ಪಾಟಲಿಪುತ್ರ (ಆಧುನಿಕ ಪಾಟ್ನಾ)
ಭಾಷೆಗಳು ಹಳೆ ಇಂಡೊ-ಆರ್ಯ (ಉದಾ. ಮಗಧಿ ಪ್ರಾಕೃತ, ಇತರ ಪ್ರಾಕೃತಗಳು, ಸಂಸ್ಕೃತ)
ಧರ್ಮ ಜೈನ ಧರ್ಮ
ಬೌದ್ಧ ಧರ್ಮ
ಹಿಂದೂ ಧರ್ಮ
ಸರ್ಕಾರ ಸಂಪೂರ್ಣ ರಾಜಪ್ರಭುತ್ವ, ಅರ್ಥಶಾಸ್ತ್ರದಲ್ಲಿ ವಿವರಿಸಿದಂತೆ
ಐತಿಹಾಸಿಕ ಯುಗ ಪ್ರಾಚೀನ ಕಾಲ
 -  ಸ್ಥಾಪಿತ ಸು. ಕ್ರಿ.ಪೂ. 1200
 -  ಸ್ಥಾಪನೆ ರದ್ದತಿ ಕ್ರಿ.ಪೂ. 322
ಚಲಾವಣೆ ಪಣಸ್
ಇಂದು ಇವುಗಳ ಭಾಗ  ಭಾರತ
 ಬಾಂಗ್ಲಾದೇಶ
 ನೇಪಾಳ
Warning: Value specified for "continent" does not comply

ಮಗಧ ದಕ್ಷಿಣ ಬಿಹಾರದಲ್ಲಿನ ಒಂದು ಪ್ರಾಚೀನ ರಾಜ್ಯವಾಗಿತ್ತು ಮತ್ತು ಪ್ರಾಚೀನ ಭಾರತದ ಹದಿನಾರು ಮಹಾಜನಪದಗಳಲ್ಲಿ ಒಂದಾಗಿತ್ತು. ಮಗಧವು ಜೈನ ಧರ್ಮ ಮತ್ತು ಬೌದ್ಧ ಧರ್ಮದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸಿತು, ಮತ್ತು ಭಾರತದ ಮಹಾನ್ ಸಾಮ್ರಾಜ್ಯಗಳಲ್ಲಿ ಎರಡು, ಮೌರ್ಯ ಸಾಮ್ರಾಜ್ಯ ಮತ್ತು ಗುಪ್ತ ಸಾಮ್ರಾಜ್ಯಗಳು, ಮಗಧದಲ್ಲಿ ಹುಟ್ಟಿದವು.

ಮಗಧದ ಅಸ್ತಿತ್ವವನ್ನು ವೈದಿಕ ಪಠ್ಯಗಳಲ್ಲಿ ಕ್ರಿ.ಪೂ. ೬೦೦ಕ್ಕಿಂತ ಬಹಳ ಮುಂಚೆ ದಾಖಲಿಸಲಾಗಿದೆ. ಅಥರ್ವವೇದದಲ್ಲಿ ಮಗಧ ಜನರ ಅತ್ಯಂತ ಮುಂಚಿನ ಉಲ್ಲೇಖ ಆಗಿದೆ, ಇದರಲ್ಲಿ ಅಂಗರು, ಗಾಂಧಾರರು ಮತ್ತು ಮುಜಾವತರ ಜೊತೆಗೆ ಇವರನ್ನು ಪಟ್ಟಿಮಾಡಲಾಗಿದೆ. ಗಂಗಾ ನದಿಯ ದಕ್ಷಿಣದ ಬಿಹಾರ್ ಪ್ರದೇಶ ಈ ರಾಜ್ಯದ ಮಧ್ಯಭಾಗವಾಗಿತ್ತು; ರಾಜಗೃಹ (ಇಂದಿನ ರಾಜ್‍ಗೀರ್) ಅದರ ಮೊದಲ ರಾಜಧಾನಿಯಾಗಿತ್ತು ಇದರ ನಂತರ ಪಾಟಲಿಪುತ್ರ (ಆಧುನಿಕ ಪಟ್ನಾ) ರಾಜಧಾನಿಯಾಯಿತು. ವಜ್ಜಿ ಹಾಗೂ ಅಂಗದ ವಶಪಡಿಸಿಕೊಳ್ಳುವಿಕೆಯ ನಂತರ ಬಹುತೇಕ ಬಿಹಾರ್ ಹಾಗೂ ಬಂಗಾಳವನ್ನು ಒಳಗೊಳ್ಳುವಂತೆ, ತರುವಾಯ ಪೂರ್ವ ಉತ್ತರ ಪ್ರದೇಶ ಹಾಗೂ ಒರಿಸ್ಸಾದ ಬಹುಭಾಗವನ್ನು ಒಳಗೊಳ್ಳುವಂತೆ ಮಗಧ ವಿಸ್ತಾರಗೊಂಡಿತು.[] ಕಟ್ಟಕಡೆಗೆ ಮಗಧ ರಾಜ್ಯವು ಬಿಹಾರ್, ಝಾರ್ಖಂಡ್, ಒರಿಸ್ಸಾ, ಪಶ್ಚಿಮ ಬಂಗಾಳ, ಪೂರ್ವ ಉತ್ತರ ಪ್ರದೇಶ ಮತ್ತು ಬಾಂಗ್ಲಾದೇಶ ಹಾಗೂ ನೇಪಾಳ ರಾಜ್ಯವನ್ನು ಒಳಗೊಂಡಿತ್ತು.

ಪ್ರಾಚೀನ ಮಗಧ ರಾಜ್ಯವನ್ನು ಜೈನ ಮತ್ತು ಬೌದ್ಧ ಪಠ್ಯಗಳಲ್ಲಿ ಅತೀವವಾಗಿ ಉಲ್ಲೇಖಿಸಲಾಗಿದೆ. ಇದನ್ನು ರಾಮಾಯಣ, ಮಹಾಭಾರತ ಮತ್ತು ಪುರಾಣಗಳಲ್ಲೂ ಉಲ್ಲೇಖಿಸಲಾಗಿದೆ. ಮಗಧ ರಾಜ್ಯವು ರಾಜಕುಮಾರ ಸಮುದಾಯದಂತಹ ಗಣತಂತ್ರವಾದಿ ಸಮುದಾಯಗಳನ್ನು ಒಳಗೊಂಡಿತ್ತು. ಗ್ರಾಮಗಳು ಗ್ರಾಮಕರೆಂದು ಕರೆಯಲ್ಪಡುತ್ತಿದ್ದ ತಮ್ಮ ಸ್ಥಳೀಯ ಮುಖ್ಯಸ್ಥರ ಅಡಿಯಲ್ಲಿ ಸ್ವಂತ ಸಭೆಗಳನ್ನು ಹೊಂದಿದ್ದವು. ಅವುಗಳ ಆಡಳಿತವನ್ನು ಕಾರ್ಯಕಾರಿ, ನ್ಯಾಯಿಕ, ಮತ್ತು ಸೇನಾ ಕ್ರಿಯೆಗಳಾಗಿ ವಿಭಜಿಸಲಾಗಿತ್ತು.

ಇತಿಹಾಸ

[ಬದಲಾಯಿಸಿ]

ಮಗಧದ ಮುಂಚಿನ ಅರಸರ ಬಗ್ಗೆ ಬಹಳ ಕಡಿಮೆ ಖಚಿತ ಮಾಹಿತಿಯಿದೆ. ಬೌದ್ಧ ಪಾಲಿ ಅಂಗೀಕೃತ ಪವಿತ್ರ ಗ್ರಂಥಗಳು, ಜೈನ ಆಗಮಗಳು ಮತ್ತು ಹಿಂದೂ ಪುರಾಣಗಳು ಅತ್ಯಂತ ಪ್ರಮುಖ ಮೂಲಗಳಾಗಿವೆ. ಈ ಮೂಲಗಳ ಆಧಾರದ ಮೇಲೆ, ಮಗಧವು ಹರ್ಯಂಕ ರಾಜವಂಶದಿಂದ ಸುಮಾರು ೨೦೦ ವರ್ಷಗಳವರೆಗೆ (ಸು. ಕ್ರಿ.ಪೂ. ೬೦೦ - ಕ್ರಿ.ಪೂ. ೪೧೩) ಆಳಲ್ಪಟ್ಟಿತ್ತು ಎಂದು ತೋರುತ್ತದೆ.

ಬೌದ್ಧ ಧರ್ಮದ ಸಂಸ್ಥಾಪಕನಾದ ಗೌತಮ ಬುದ್ಧನು ತನ್ನ ಜೀವನದ ಹೆಚ್ಚಿನ ಭಾಗ ಮಗಧ ರಾಜ್ಯದಲ್ಲಿದ್ದನು. ಅವನು ಬೋಧ್ ಗಯಾದಲ್ಲಿ ಜ್ಞಾನೋದಯ ಪಡೆದನು, ಸಾರ್‍ನಾಥ್‍ನಲ್ಲಿ ತನ್ನ ಮೊದಲ ಉಪದೇಶ ಕೊಟ್ಟನು ಮತ್ತು ಮೊದಲ ಬೌದ್ಧ ಸಂಗೀತಿ ರಾಜಗೃಹದಲ್ಲಿ ನಡೆಯಿತು.

ಮಹಾಭಾರತವು ಬೃಹದ್ರಥನನ್ನು ಮಗಧದ ಮೊದಲ ರಾಜ ಎಂದು ಕರೆಯುತ್ತದೆ. ಹರ್ಯಂಕ ರಾಜವಂಶದ ರಾಜ ಬಿಂಬಿಸಾರನು ಒಂದು ಸಕ್ರಿಯ ಮತ್ತು ವಿಸ್ತರಣಾ ನೀತಿಯನ್ನು ನಡೆಸಿ, ಈಗ ಪಶ್ಚಿಮ ಬಂಗಾಳ ಎಂದು ಕರೆಸಿಕೊಳ್ಳುವ ಅಂಗ ರಾಜ್ಯವನ್ನು ಗೆದ್ದುಕೊಂಡನು.

ರಾಜ ಬಿಂಬಿಸಾರನು ತನ್ನ ಪುತ್ರ ಅಜಾತಶತ್ರುವಿನ ಕೈಯಿಂದ ಮರಣಹೊಂದಿದನು. ನೆರೆರಾಜ್ಯ ಕೋಸಲದ ರಾಜ ಮತ್ತು ಬಿಂಬಿಸಾರನ ಷಡ್ಡಕನಾಗಿದ್ದ ಪಸೇನದಿ ಕಾಶಿ ಪ್ರಾಂತ್ಯದ ಉಡುಗೊರೆಯನ್ನು ತಡವಿಲ್ಲದೆ ಮರುಪಡೆದನು.

ಗಂಗಾ ನದಿಯ ಉತ್ತರದ ಪ್ರದೇಶದಲ್ಲಿದ್ದ ಲಿಚ್ಛವಿಯರೊಂದಿಗೆ ರಾಜ ಅಜಾತಶತ್ರುವಿನ ಯುದ್ಧದ ಕಾರಣದ ವಿವರಣೆಗಳು ಸ್ವಲ್ಪ ಭಿನ್ನವಾಗಿವೆ. ಅಜಾತಶತ್ರು ಈ ಪ್ರದೇಶಕ್ಕೆ ಒಬ್ಬ ಮಂತ್ರಿಯನ್ನು ಕಳಿಸಿದನು ಮತ್ತು ಅವನು ಮೂರು ವರ್ಷ ಲಿಚ್ಛವಿಗಳ ಏಕತೆಯನ್ನು ದುರ್ಬಲಗೊಳಿಸಲು ಕೆಲಸ ಮಾಡಿದನು ಎಂದು ತೋರುತ್ತದೆ. ಗಂಗಾ ನದಿಯ ಆಚೆ ದಡದಲ್ಲಿ ತನ್ನ ದಾಳಿಯನ್ನು ಆರಂಭಿಸಲು, ಅಜಾತಶತ್ರುವು ಪಾಟಲಿಪುತ್ರ ಪಟ್ಟಣದಲ್ಲಿ ಒಂದು ಕೋಟೆಯನ್ನು ಕಟ್ಟಿದನು. ಭಿನ್ನಾಭಿಪ್ರಾಯಗಳಿಂದ ಛಿದ್ರವಾಗಿದ್ದ ಲಿಚ್ಛವಿಗಳು ಅಜಾತಶತ್ರುವಿನ ವಿರುದ್ಧ ಹೋರಾಡಿದರು. ಅವರನ್ನು ಸೋಲಿಸಲು ಅಜಾತಶತ್ರುವಿಗೆ ಹದಿನೈದು ವರ್ಷ ಹಿಡಿಯಿತು. ಅಜಾತಶತ್ರುವು ಎರಡು ಹೊಸ ಅಸ್ತ್ರಗಳನ್ನು ಹೇಗೆ ಬಳಸಿದನೆಂದು ಜೈನ ಪಠ್ಯಗಳು ಹೇಳುತ್ತವೆ: ಕವಣೆಯಂತ್ರ, ಮತ್ತು ಓಲಾಡುವ ಗದೆಯಿದ್ದ ಮುಚ್ಚಲ್ಪಟ್ಟ ರಥ (ಇದನ್ನು ಅಧುನಿಕ ಟ್ಯಾಂಕ್‍ಗೆ ಹೋಲಿಸಲಾಗಿದೆ). ಪಾಟಲಿಪುತ್ರವು ಒಂದು ವಾಣಿಜ್ಯ ಕೇಂದ್ರವಾಗಿ ಬೆಳೆಯುವುದಕ್ಕೆ ಶುರುವಾಯಿತು ಮತ್ತು ಅಜಾತಶತ್ರುವಿನ ಮರಣದ ನಂತರ ಮಗಧದ ರಾಜಧಾನಿಯಾಯಿತು.

ಶಿಶುನಾಗ ರಾಜವಂಶವು ಹರ್ಯಂಕ ರಾಜವಂಶವನ್ನು ಸೋಲಿಸಿತು. ಕೊನೆಯ ಶಿಶುನಾಗ ರಾಜನಾದ ಕಾಲಸೋಕನನ್ನು ಕ್ರಿ.ಪೂ. ೩೪೫ ರಲ್ಲಿ ಮಹಾಪದ್ಮ ನಂದನು ಹತ್ಯೆಮಾಡಿದನು. ಇವನು ನವನಂದರು ಎಂದು ಕರೆಯಲ್ಪಟ್ಟವರಲ್ಲಿ ಮೊದಲನೆಯವನು. ಇವನಿಗೆ ಎಂಟು ಪುತ್ರರಿದ್ದರು.

ಕ್ರಿ.ಪೂ. ೩೨೬ರಲ್ಲಿ, ಅಲೆಕ್ಸಾಂಡರ್‍ನ ಸೇನೆ ಮಗಧದ ಪಶ್ಚಿಮ ಗಡಿಗಳನ್ನು ಸಮೀಪಿಸಿತು. ಗಂಗಾ ನದಿ ದಡದಲ್ಲಿ ಮತ್ತೊಂದು ಬೃಹತ್ ಭಾರತೀಯ ಸೇನೆಯನ್ನು ಎದುರಿಸುವ ನಿರೀಕ್ಷೆಯೊಂದಿಗೆ ದಣಿದು ಹೆದರಿದ್ದ ಸೇನೆಯು ಬ್ಯಾಸ್ ನದಿಯ ಹತ್ತಿರ ಬಂಡಾಯವೆದ್ದಿತು ಮತ್ತು ಹೆಚ್ಚು ಪೂರ್ವಕ್ಕೆ ಪ್ರಯಾಣಿಸಲು ನಿರಾಕರಿಸಿತು. ತನ್ನ ಅಧಿಕಾರಿಯನ್ನು ಭೇಟಿ ಮಾಡಿದ ನಂತರ ಅಲೆಕ್ಸಾಂಡರ್‍ನು ಹಿಂದಿರುಗುವುದು ಉತ್ತಮ ಎಂದು ಮನಗಂಡು ದಕ್ಷಿಣಕ್ಕೆ ತಿರುಗಿದನು.

ಕ್ರಿ.ಪೂ. ೩೨೧ರ ಸುಮಾರು, ನಂದ ರಾಜವಂಶ ಕೊನೆಗೊಂಡಿತು ಮತ್ತು ಚಂದ್ರಗುಪ್ತ ಮೌರ್ಯನು ಚಾಣಕ್ಯನ ಸಹಾಯದಿಂದ ಮಹಾನ್ ಮೌರ್ಯ ಸಾಮ್ರಾಜ್ಯದ ಮೊದಲ ರಾಜನಾದನು. ನಂತರ ಈ ಸಾಮ್ರಾಜ್ಯವು ರಾಜ ಅಶೋಕನ ಅಡಿಯಲ್ಲಿ ಬಹುತೇಕ ದಕ್ಷಿಣ ಏಷ್ಯಾದಾದ್ಯಂತ ವಿಸ್ತರಿಸಿತು. ಮೊದಲು ಇವನು ಕ್ರೂರ ಅಶೋಕನೆಂದು ಪರಿಚಿತನಿದ್ದನು, ಆದರೆ ನಂತರ ಬೌದ್ಧ ಧರ್ಮದ ಅನುಯಾಯಿಯಾಗಿ ಧರ್ಮ ಅಶೋಕನೆಂದು ಕರೆಯಲ್ಪಟ್ಟನು. ಆಮೇಲೆ, ಮೌರ್ಯ ಸಾಮ್ರಾಜ್ಯ, ಹಾಗೆಯೇ ಶುಂಗ ಮತ್ತು ಖಾರಬೇಳ ಸಾಮ್ರಾಜ್ಯಗಳೂ ಕೊನೆಗೊಂಡವು. ಇವುಗಳ ಬದಲಿಗೆ ಗುಪ್ತ ಸಾಮ್ರಾಜ್ಯ ಅಸ್ತಿತ್ವಕ್ಕೆ ಬಂದಿತು. ಮಗಧದಲ್ಲಿ ಪಾಟಲಿಪುತ್ರವು ಗುಪ್ತ ಸಾಮ್ರಾಜ್ಯದ ರಾಜಧಾನಿಯಾಗಿ ಉಳಿಯಿತು.

ಸಂಸ್ಕೃತಿ

[ಬದಲಾಯಿಸಿ]

ಮಗಧದ ಸಂಸ್ಕೃತಿ ಕೆಲವು ರೀತಿಗಳಲ್ಲಿ ಇಂಡೊ-ಆರ್ಯರ ವೈದಿಕ ರಾಜ್ಯಗಳಿಗಿಂತ ಭಿನ್ನವಾಗಿತ್ತು. ಬುದ್ಧನಿಗೆ ಸಂಬಂಧಿಸಿದಂತೆ, ಈ ಪ್ರದೇಶವು ಬಹುತೇಕವಾಗಿ ವಾಯವ್ಯದಲ್ಲಿ ಕೋಸಲದ ರಾಜಧಾನಿ ಶ್ರಾವಸ್ತಿಯಿಂದ ಆಗ್ನೇಯದಲ್ಲಿ ಮಗಧದ ರಾಜಧಾನಿ ರಾಜಗೃಹದವರೆಗೆ ವಿಸ್ತರಿಸಿತ್ತು. ಒಬ್ಬ ವಿದ್ವಾಂಸನ ಪ್ರಕಾರ ನಿಜಕ್ಕೂ ಬೃಹತ್ ಮಗಧದ ಸಂಸ್ಕೃತಿಯಿತ್ತು ಮತ್ತು ಇದು ವ್ಯಾಕರಣಕಾರ ಪಾಣಿನಿಯ ಸಮಯದವರೆಗೆ (ಸು. ಕ್ರಿ.ಪೂ. ೧೫೦) ವೈದಿಕ ಸಂಸ್ಕೃತಿಯಿಂದ ಅಭಿಜ್ಙೇಯವಾಗಿ ವಿಶಿಷ್ಟವಾಗಿ ಉಳಿದಿತ್ತು. ಶತಪಥ ಬ್ರಾಹ್ಮಣದಂತಹ ವೈದಿಕ ಪಠ್ಯಗಳು ಈ ಪ್ರದೇಶದ ನಿವಾಸಿಗಳನ್ನು ಪೈಶಾಚಿಕರೆಂದು ಮತ್ತು ಅನಾಗರಿಕ ಭಾಷೆ ಮಾತಾಡುತ್ತಿದ್ದರೆಂದು ಚಿತ್ರಿಸಿದವು. ವೈದಿಕ ಆರ್ಯರಿಗೆ ಪ್ರತಿಸ್ಪರ್ಧಿಯಾಗಿದ್ದ ಈ ಸಂಸ್ಕೃತಿಯು ಮುಂಚಿನ ಬೌದ್ಧ ಕಾಲದಲ್ಲಿ ಪೂರ್ವ ಗಂಗಾ ಬಯಲಲ್ಲಿ ಪ್ರಬಲವಾಗಿತ್ತೆಂದು ಸೂಚಿಸಲು ಅಗಾಧ ಪ್ರಮಾಣದ ಸಾಕ್ಷ್ಯಾಧಾರವಿದೆ ಎಂದು ಒಬ್ಬ ಬೌದ್ಧ ಅಧ್ಯಯನಕಾರನು ಬರೆದನು. ಹಾಗಾಗಿ ಈ ಮುಂಚಿನ ಅವಧಿಯಲ್ಲಿ ಸಂಪ್ರದಾಯಸ್ಥ ವೈದಿಕ ಬ್ರಾಹ್ಮಣರು ಮಗಧಧಲ್ಲಿ ಅಲ್ಪಸಂಖ್ಯಾತರಾಗಿದ್ದರು.

ಮಗಧದ ಧರ್ಮಗಳನ್ನು ಶ್ರಮಣ ಸಂಪ್ರದಾಯಗಳೆಂದು ಕರೆಯಲಾಗುತ್ತದೆ ಮತ್ತು ಜೈನ ಧರ್ಮ, ಬೌದ್ಧ ಧರ್ಮ ಮತ್ತು ಆಜೀವಿಕವನ್ನು ಒಳಗೊಳ್ಳುತ್ತವೆ. ಶ್ರೇಣಿಕ, ಬಿಂಬಿಸಾರ ಮತ್ತು ಅಜಾತಶತ್ರುವಿನಂತಹ ಮುಂಚಿನ ಮಗಧ ರಾಜರು ಬೌದ್ಧ ಮತ್ತು ಜೈನ ಧರ್ಮಗಳನ್ನು ಪ್ರೋತ್ಸಾಹಿಸಿದರು, ಇವರನ್ನು ಅನುಸರಿಸಿದ ನಂದ ರಾಜವಂಶವು (ಕ್ರಿ.ಪೂ. ೩೪೫-೩೨೧) ಬಹುತೇಕವಾಗಿ ಜೈನವಾಗಿತ್ತು. ಈ ಶ್ರಮಣ ಧರ್ಮಗಳು ವೈದಿಕ ದೇವತೆಗಳನ್ನು ಆರಾಧಿಸುತ್ತಿರಲಿಲ್ಲ, ಮತ್ತು ಒಂದು ರೀತಿಯ ತಪಶ್ಚರ್ಯ ಹಾಗೂ ಧ್ಯಾನವನ್ನು ಆಚರಿಸುತ್ತಿದ್ದವು ಮತ್ತು ದುಂಡನೆಯ ಸಮಾಧಿ ದಿಬ್ಬಗಳನ್ನು ನಿರ್ಮಿಸುವ ಪ್ರವೃತ್ತಿ ಹೊಂದಿದ್ದವು (ಬೌದ್ಧ ಧರ್ಮದಲ್ಲಿ ಇವಕ್ಕೆ ಸ್ತೂಪಗಳೆಂದು ಹೆಸರು). ಈ ಧರ್ಮಗಳು ಆಧ್ಯಾತ್ಮಿಕ ಜ್ಞಾನದ ಮೂಲಕ ಪುನರ್ಜನ್ಮದ ಆವರ್ತಕ ಸುತ್ತುಗಳು ಮತ್ತು ಕರ್ಮದ ಪ್ರತಿಫಲದಿಂದ ಯಾವುದೋ ರೀತಿಯ ಮೋಕ್ಷವನ್ನು ಅರಸಿದವು.

ಅರಸರು

[ಬದಲಾಯಿಸಿ]

ಹರ್ಯಂಕ ರಾಜವಂಶ (ಸು. ಕ್ರಿ.ಪೂ. 600 – 413)

[ಬದಲಾಯಿಸಿ]
  • ಭಟ್ಟೀಯ
  • ಬಿಂಬಿಸಾರ (ಕ್ರಿ.ಪೂ. 544-493)
  • ಅಜಾತಶತ್ರು (ಕ್ರಿ.ಪೂ. 493-461)
  • ಉದಯಭದ್ರ
  • ಅನುರುದ್ಧ
  • ಮುಂಡ
  • ನಾಗದಾಸಕ

ಶಿಶುನಾಗ ರಾಜವಂಶ (ಕ್ರಿ.ಪೂ. 413–345)

[ಬದಲಾಯಿಸಿ]

ನಂದ ರಾಜವಂಶ (ಕ್ರಿ.ಪೂ. 345–321)

[ಬದಲಾಯಿಸಿ]
  • ಮಹಾನಂದಿನ್‍ನ ಹಾದರದ ಮಗನಾದ ಮಹಾಪದ್ಮ ನಂದ ಉಗ್ರಸೇನನು (ಕ್ರಿ.ಪೂ. 345ರಿಂದ), ಮಹಾನಂದಿನ್‍ನ ಸಾಮ್ರಾಜ್ಯವನ್ನು ಉತ್ತರಾಧಿಕಾರದಿಂದ ಪಡೆದ ನಂತರ ನಂದ ರಾಜವಂಶವನ್ನು ಸ್ಥಾಪಿಸಿದನು
  • ಪಂಡುಕ
  • ಪಂಘುಪತಿ
  • ಭೂತಪಾಲ
  • ರಾಷ್ಟ್ರಪಾಲ
  • ಗೋವಿಶಾನಕ
  • ದಶಸಿದ್ಧಕ
  • ಕೈವರ್ತ
  • ಧನ ನಂದ (ಕ್ರಿ.ಪೂ. 321ವರೆಗೆ), ಚಂದ್ರಗುಪ್ತ ಮೌರ್ಯನಿಂದ ಸೋಲಿಸಲ್ಪಟ್ಟನು

ಉಲ್ಲೇಖಗಳು

[ಬದಲಾಯಿಸಿ]
  1. Ramesh Chandra Majumdar (1977). Ancient India. Motilal Banarsidass Publ. ISBN 81-208-0436-8.
"https://kn.wikipedia.org/w/index.php?title=ಮಗಧ&oldid=805148" ಇಂದ ಪಡೆಯಲ್ಪಟ್ಟಿದೆ