ವಿಷಯಕ್ಕೆ ಹೋಗು

ಉಪ್ಪಾಗೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಮಂತುಳ್ಳಿ ಇಂದ ಪುನರ್ನಿರ್ದೇಶಿತ)
ಉಪ್ಪಾಗೆ
Scientific classification
ಸಾಮ್ರಾಜ್ಯ:
Plantae
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
Eudicots
(ಶ್ರೇಣಿಯಿಲ್ಲದ್ದು):
ಗಣ:
ಕುಟುಂಬ:
ಕುಲ:
ಪ್ರಜಾತಿ:
G. gummi-gutta
Binomial name
Garcinia gummi-gutta
(L.) Roxb.
Synonyms[]
  • Cambogia binucao Blanco
  • Cambogia gemmi-gutta L.
  • Cambogia solitaria Stokes
  • Garcinia affinis Wight & Arn.
  • Garcinia cambogia (Gaertn.) Desr.
  • Garcinia sulcata Stokes

ಉಪ್ಪಾಗೆ ಅಥವಾ ಉಪ್ಪಗೆ ನಿತ್ಯಹರಿದ್ವರ್ಣ ಕಾಡುಗಳಲ್ಲಿ ಬೆಳೆಯುವ ಒಂದು ಮರ. ಔಷಧೀಯ ಗುಣಗಳುಳ್ಳ ಹಣ್ಣುಗಳನ್ನು ಬಿಡುತ್ತವೆ. ಸಸ್ಯಶಾಸ್ತ್ರದಲ್ಲಿ ಗಾರ್ಸಿನಿಯಾ ಕುಟುಂಬದಲ್ಲಿ ಬರುವ ಇವು ಗಾರ್ಸಿನೀಯಾ ಗಮ್ಮಿಗಟ್ಟ (Garcenia gummi-gutta) ಎಂಬ ವೈಜ್ಞಾನಿಕ ಹೆಸರನ್ನು ಹೊಂದಿವೆ. ಗಾಂಬೋಜ್, ಕಾಚ್‍ಪುಳಿ, ಕಾಚಂಪುಳಿ, ಪಣಪ್ಪುಳಿ, ಮಂತುಹುಳಿ, ಮಂತುಳ್ಳಿ ಹೀಗೆ ಉಪ್ಪಾಗೆಗೆ ವಿವಿಧ ಹೆಸರುಗಳಿವೆ. ತಮಿಳು ಮತ್ತು ಮಲಯಾಳಂನಲ್ಲಿ ಕೋಡಂಪುಳಿ ಎಂದು ಕರೆಯಲ್ಪಡುತ್ತದೆ.

ಭಾರತದಲ್ಲಿ

[ಬದಲಾಯಿಸಿ]

ಇದು ಭಾರತದ ಮೂಲ ನಿವಾಸಿ; ತಮಿಳುನಾಡಿನ ನೀಲಗಿರಿ, ಕೇರಳದ ತಿರುವಾಂಕೂರು, ಕರ್ನಾಟಕದ ಮಲೆನಾಡು ಪ್ರದೇಶಗಳಲ್ಲಿ ಹೇರಳವಾಗಿ ಬೆಳೆಯುತ್ತದೆ. ಈ ಮರದ ೩೫ ಪ್ರಬೇಧಗಳು ಭಾರತದಲ್ಲಿದೆ. ಕರ್ನಾಟಕ ಮತ್ತು ಕೇರಳಪಶ್ಚಿಮಘಟ್ಟದ ಕಾಡುಗಳಲ್ಲದೇ ಇಂಡೋನೇಷ್ಯಾ ಮತ್ತು ಆಫ್ರಿಕಾದಲ್ಲೂ ಇವು ಬೆಳೆಯುತ್ತವೆ. ಕರ್ನಾಟಕದಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಯಥೇಚ್ಛವಾಗಿ ಬೆಳೆಯುತ್ತದೆ. ಪಶ್ಚಿಮಘಟ್ಟದ ಪ್ರದೇಶದಲ್ಲಿ ೧೦ ಪ್ರಬೇಧಗಳು ಕಾಣಸಿಗುತ್ತಿದ್ದು, ಉತ್ತರ ಕನ್ನಡ ಜಿಲ್ಲೆಯ ಅರಣ್ಯಗಳಲ್ಲಿ ಉಪ್ಪಗೆ, ಮುರಗಲು, ಅರಿಸಿಣಗುರಗಿ, ಜಾಣಗೆ, ಕಾಡುಮುರಗಲು ಪ್ರಬೇಧಗಳು ಕಾಣಸಿಗುತ್ತವೆ. ನಿತ್ಯಹರಿದ್ವರ್ಣ ಮತ್ತು ಸೋಲಾ ಕಾಡುಗಳ ತಂಪು ಹಾಗೂ ತೇವಾಂಶಗಳಿರುವಲ್ಲಿ ಹೆಚ್ಚಾಗಿ ಕಂಡುಬರುತ್ತಿದ್ದು, ತಂಪಗಿನ ವಾತಾವರಣದಲ್ಲಿ ನೆಟ್ಟು ಬೆಳೆಸಬಹುದು.

ವಿವರಗಳು

[ಬದಲಾಯಿಸಿ]

ಇದು ಶಂಕುವಿನಾಕಾರದಲ್ಲಿರುವ ಮರವಾಗಿದ್ದು ಸರಿಸುಮಾರು ೧೦ ರಿಂದ ೨೦ ಮೀಟರ್ ಬೆಳೆಯುವ ಇವು ೩೦ ಮಿ.ವರೆಗೂ ಬೆಳೆಯಬಲ್ಲವು. ಅಭಿಮುಖ ವೃಂತಪರ್ಣರಹಿತ ಎಲೆಗಳನ್ನು ಪಡೆದಿದೆ. ಸೇಬಿನ ಗಾತ್ರದ ಫಲಗಳನ್ನು ಬಿಡುತ್ತದೆ. ಹೆಣ್ಣುಮರಗಳು ಮಾತ್ರ ಹಣ್ಣುಗಳನ್ನು ಬಿಡುತ್ತವೆ. ಹೂಗಳು ಕೆಂಪು ಮಿಶ್ರಿತ ಹಳದಿ ಬಣ್ಣದಿಂದ ಕೂಡಿರುತ್ತವೆ.[] ಫೆಬ್ರುವರಿ-ಮಾರ್ಚನಲ್ಲಿ ಹೂ ಬಿಡುವ ಉಪ್ಪಾಗೆ ಹಣ್ಣಾಗುವುದು ಜೂನ್-ಜುಲೈ ತಿಂಗಳ ಮಳೆಗಾಲದಲ್ಲಿ. ಹಣ್ಣುಗಳು ತಿಳಿಹಳದಿ ಬಣ್ಣದಿಂದ ಕೂಡಿದ್ದು ಉಬ್ಬು ತಗ್ಗಿನ ಮೇಲ್ಮೈ ಹೊಂದಿ ಚಿಕ್ಕ ಕುಂಬಳಕಾಯಿಯ ರೂಪ ಅಕಾರ ಇರುತ್ತದೆ. ಹಣ್ಣಿನ ಮೇಲ್ಭಾಗ ೬-೮ ಉಬ್ಬಿದ ಗೆರೆಗಳಿಂದ ಕೂಡಿದ್ದು ಒಂದು ಹಣ್ಣಿನಲ್ಲಿ ೬-೮ ಬೀಜಗಳಿರುತ್ತವೆ. ಉಪ್ಪಾಗೆ ಹಣ್ಣುಗಳು ಆಹಾರ ಮತ್ತು ಔಷಧೀಯ ಕಾರಣಕ್ಕಾಗಿ ಬಳಸಲ್ಪಡುತ್ತವೆ. ಬೀಜದ ಗಿಡ ಬೆಳೆ ಕೊಡಲು ಹತ್ತು-ಹನ್ನೆರಡು ವರ್ಷ ತೆಗೆದುಕೊಳ್ಳುತ್ತದೆ. ಕಸಿ ಗಿಡಕ್ಕೆ ಮೂರು ವರ್ಷ ಸಾಕು. ಇದು ಕಾಚಂಪುಳಿ ಅಥವಾ ಮಂತಪುಳಿ ಎಂದು ಕೊಡಗು ಜಿಲ್ಲೆಯಲ್ಲಿ ಹೆಸರಾಗಿದೆ. ಕೊಡಗಿನಲ್ಲಿ ಸುಮಾರು ೩೦-೪೦ ಪ್ರಭೇದಗಳಿವೆ. ಕೊಡಗಿನ ಕಾಫಿಯ ತೋಟಗಳ ನಡುವೆ ಅಲ್ಲಲ್ಲಿ ಕಂಡುಬರುವ ಉಪ್ಪಾಗೆಯ ಮರಗಳು ೬೦-೮೦ ಅಡಿ ಎತ್ತರ ಹಾಗೂ ಅದಕ್ಕೆ ಸಮನಾದ ದಪ್ಪ ಮತ್ತು ವಿಸ್ತಾರಗಳನ್ನೊಳಗೊಂಡಂತೆ ಬೃಹದಾಕಾರವಾಗಿ ಬೆಳೆಯಬಲ್ಲದು. ಉತ್ತಮ ಫಸಲು ದೊರೆತರೆ ಒಂದು ದೊಡ್ಡ ಮರದಲ್ಲಿ ೧೫ ರಿಂದ ೨೦ ಕ್ವಿಂಟಲ್ ಹಣ್ಣುಗಳು ದೊರೆಯುತ್ತವೆ.

ಬಲಿತ ಹಣ್ಣು
Garcinia gummi-gutta tree in Kerala, India

ಉಪಯೋಗಗಳು/ಬಳಕೆಗಳು

[ಬದಲಾಯಿಸಿ]
  • ಈ ಹಣ್ಣಿನ ಒಣಸಿಪ್ಪೆ ಸಂಸ್ಕರಿಸಿ ಮಂದಸಾರ ತಯಾರಿಸುತ್ತಾರೆ. ಇದು ಕೊಡಗು ಹಾಗೂ ಕೇರಳದಲ್ಲಿ ಹಂದಿಮಾಂಸದ ಮತ್ತು ಮೀನಿನ ಅಡುಗೆಗಳಿಗೆ ಬಳಸಲ್ಪಡುತ್ತದೆ. ಕೊಡಗಿನಲ್ಲಿ ಕೃಷಿಕರು ಮಳೆಗಾಲದಲ್ಲಿ ಉಪ್ಪಾಗೆ ಹಣ್ಣನ್ನು ಸಂಗ್ರಹಿಸಿ ಒಣಗಿಸಿಡುತ್ತಾರೆ. ಇದನ್ನು ಮಾಂಸಹಾರಕ್ಕೆ ಹುಳಿ ಪದಾರ್ಥವಾಗಿ ಬಳಸುತ್ತಾರೆ. ಕೆಲವು ಪದಾರ್ಥಗಳಿಗೆ ಉಪ್ಪಾಗೆಯ ಒಣಗಿಸಿದ ಸಿಪ್ಪೆಯನ್ನು ಉಪಯೋಗಿಸಿದರೆ ಹಣ್ಣಿನ ನೀರನ್ನು ಇಂಗಿಸಿ ತಯಾರಿಸಿದ ಹುಳಿನೀರು ಕೂಡ ಹೆಚ್ಚಾಗಿ ಬಳಸುತ್ತಾರೆ. ಒಂದು ಕಿಲೋ ಒಣಸಿಪ್ಪೆ ಆಗಲು ಸುಮಾರು ಮೂರು ಕಿಲೋ ಹಣ್ಣುಗಳು ಬೇಕಾಗುತ್ತವೆ. ಸರಿಯಾಗಿ ಒಣಗಿದೆ ಸಿಪ್ಪೆಯನ್ನು ಎರಡು ವರ್ಷಗಳ ಕಾಲ ಕೆಡದೇ ಇಡಬಹುದು. ಉಪ್ಪು ಸೇರಿಸಿ ಗಾಳಿಯಾಡದಂತೆ ಕಟ್ಟಿಟ್ಟರೆ ಇನ್ನೂ ಹೆಚ್ಚಿನ ಕಾಲ ಇಡಬಹುದು.
  • ಮಾನವನ ದೇಹದ ಕೊಬ್ಬು ಮತ್ತು ಬೊಜ್ಜನ್ನು ಕರಗಿಸಲು ಸಹಾಯವಾಗುವುದೆಂದು ಹೇಳಲಾಗುವ ಹೈಡ್ರಾಕ್ಸಿ ಸಿಟ್ರಿಕ್ ಅಂಶ ಉಪ್ಪಾಗೆ ಹೊಂದಿರುವುದರಿಂದ ಇದಕ್ಕೆ ಬಹುಬೇಡಿಕೆಯಿದೆ.[] ಉಪ್ಪಾಗೆ ಹಣ್ಣಿನ ಸೇವನೆಯಿಂದ ಮಲಬದ್ಧತೆ, ಮುಟ್ಟಿನ ತೊಂದರೆ, ಜಂತುಹುಳದ ಬಾಧೆ ಮುಂತಾದವುಗಳನ್ನು ನಿವಾರಿಸಬಹುದು. ಕಣ್ಣುತುರಿ, ಕಾಲಿನ ಒಡಕಿಗೂ ಇದು ಮದ್ದು.
  • ಹಣ್ಣಿನ ಬೀಜವು ಕೊಬ್ಬಿನಂಶ ಹೊಂದಿದ್ದು ಇದರಿಂದ ತುಪ್ಪವನ್ನು ತೆಗೆಯಲಾಗುತ್ತದೆ. ಇದರ ಬೀಜಗಳನ್ನು ಒಣಗಿಸಿ ಕುಟ್ಟಿ ಬೇಯಿಸಿದರೆ ಇದರ ಕೊಬ್ಬು ಖಾದ್ಯ ತೈಲವಾಗಿ ಲಭ್ಯ. ಇದು ಹಳದಿ ಬಣ್ಣದಿಂದ ತುಪ್ಪದಂತೆ ಗಟ್ಟಿಯಾಗುವ ಗುಣವನ್ನು ಹೊಂದಿದ್ದು ತಿಂಡಿತಿನಿಸುಗಳ ತಯಾರಿಗೆ ಯೋಗ್ಯವಾಗಿದೆ. ಮಲೆನಾಡಿನಲ್ಲಿ ಇದು ಉಪ್ಪಾಗೆ ತುಪ್ಪ ಎಂದು ಬಳಸಲ್ಪಡುತ್ತದೆ.
  • ಪುನರ್ಪುಳಿಯಂತೆ ಶರಬತ್ತು ಕೂಡ ತಯಾರುಮಾಡಬಹುದು.
  • ಈ ಮರದ ಚೌಬೀನೆಯನ್ನು ಪೆಟ್ಟಿಗೆ ತಯಾರಿಕೆಯಲ್ಲಿ ಉಪಯೋಗಿಸುವುದುಂಟು. ಮರದಿಂದ ಬರುವ ರೆಸಿನ್ನಿನಿಂದ ಹಳದಿ ಬಣ್ಣದ ಮೆರುಗೆಣ್ಣೆ ತಯಾರಿಸಲಾಗುತ್ತದೆ.
  • ಹಣ್ಣಿನ ಸಿಪ್ಪೆಯ ಕಷಾಯ ಸಂಧಿವಾತಕ್ಕೆ ಮದ್ದು. ಪಶುಗಳ ಬಾಯಿ ಕಾಯಿಲೆಯಲ್ಲಿ ಹಣ್ಣಿನ ರಸವನ್ನು ಕೊಡುವುದುಂಟು.
  • ಅಲ್ಲದೆ ಉದ್ಯಾನವನಗಳಲ್ಲೂ ತೋಪುಗಳಲ್ಲೂ ನೆರಳಿಗಾಗಿ ಮಂತುಳ್ಳಿಯನ್ನು ಬೆಳೆಸುವುದಿದೆ.

ಹೊರಕೊಂಡಿಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. "Garcinia gummi-gutta (L.) Roxb". The Plant List. Royal Botanic Gardens, Kew and Missouri Botanical Garden. Retrieved 1 June 2013.
  2. ಬಹುಪಯೋಗಿ ಉಪ್ಪಾಗೆ ಬಹುಬೇಡಿಕೆ:ರೈತರು ಹರ್ಷ, ವಿಕ ಸುದ್ದಿಲೋಕ | Jun 16, 2014
  3. Botanical Bonanza, Deccan Herald, July 29, 2014


ಹೆಚ್ಚಿನ ಓದು

[ಬದಲಾಯಿಸಿ]
  • ಪುಸ್ತಕ: ಗಾರ್ಸಿನಿಯಾ ಬ್ರದರ್ಸ್ ಎಂಬ ಗಾರುಡಿಗರು, ಲೇಖಕರು: ಡಾ. ಬಿ. ಎಸ್. ಸೋಮಶೇಖರ, ೧೪೬+೮ ಪುಟಗಳು, ಬೆಲೆ ರೂ. ೧೦೦, ಪ್ರ: ಸ್ನೇಹಕುಂಜ (ಹೊನ್ನಾವರ), ಲೈಫ್ ಟ್ರಸ್ಟ್ (ಸಿರ್ಸಿ) ಹಾಗೂ ಇಂಡಿಕಸ್ ‌(ಬೆಂಗಳೂರು)
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಉಪ್ಪಾಗೆ&oldid=1205486" ಇಂದ ಪಡೆಯಲ್ಪಟ್ಟಿದೆ