ವಿಷಯಕ್ಕೆ ಹೋಗು

ಬೋರಾನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಬೊರಾನ್ ಇಂದ ಪುನರ್ನಿರ್ದೇಶಿತ)


5 ಬೆರಿಲಿಯಮ್ಬೋರಾನ್ಇಂಗಾಲ
-

B

ಅಲ್ಯುಮಿನಿಯಮ್
ಸಾಮಾನ್ಯ ಮಾಹಿತಿ
ಹೆಸರು, ಚಿಹ್ನೆ ಮತ್ತು ಕ್ರಮಾಂಕ ಬೋರಾನ್, B, 5
ರಾಸಾಯನಿಕ ಸರಣಿmetalloid
ಗುಂಪು, ಆವರ್ತ, ಖಂಡ 13, 2, p
ಸ್ವರೂಪಕಪ್ಪು ಯಾ ಕಂದು
ಅಣುವಿನ ತೂಕ 10.811(7) g·mol−1
ಋಣವಿದ್ಯುತ್ಕಣ ಜೋಡಣೆ 1s2 2s2 2p1
ಋಣವಿದ್ಯುತ್ ಪದರಗಳಲ್ಲಿ
ಋಣವಿದ್ಯುತ್ಕಣಗಳು
2, 3
ಭೌತಿಕ ಗುಣಗಳು
ಹಂತಘನ
ಸಾಂದ್ರತೆ (ಕೋ.ತಾ. ಹತ್ತಿರ)2.34 g·cm−3
ದ್ರವಸಾಂದ್ರತೆ at ಕ.ಬಿ.2.08 g·cm−3
ಕರಗುವ ತಾಪಮಾನ2349 K
(2076 °C, 3769 °ಎಫ್)
ಕುದಿಯುವ ತಾಪಮಾನ4200 K
(3927 °C, 7101 °F)
ಸಮ್ಮಿಲನದ ಉಷ್ಣಾಂಶ50.2 kJ·mol−1
ಭಾಷ್ಪೀಕರಣ ಉಷ್ಣಾಂಶ480 kJ·mol−1
ಉಷ್ಣ ಸಾಮರ್ಥ್ಯ(25 °C) 11.087 J·mol−1·K−1
ಆವಿಯ ಒತ್ತಡ
P/Pa 1 10 100 1 k 10 k 100 k
at T/K 2348 2562 2822 3141 3545 4072
ಅಣುವಿನ ಗುಣಗಳು
ಸ್ಪಟಿಕ ಸ್ವರೂಪrhombohedral
ಆಕ್ಸಿಡೀಕರಣ ಸ್ಥಿತಿಗಳು4,[] 3, 1[]
(mildly acidic oxide)
ವಿದ್ಯುದೃಣತ್ವ2.04 (Pauling scale)
ಅಣುವಿನ ತ್ರಿಜ್ಯ85 pm
ಅಣುವಿನ ತ್ರಿಜ್ಯ (ಲೆಖ್ಕಿತ)87 pm
ತ್ರಿಜ್ಯ ಸಹಾಂಕ82 pm
ಇತರೆ ಗುಣಗಳು
ಕಾಂತೀಯ ವ್ಯವಸ್ಥೆnonmagnetic
ವಿದ್ಯುತ್ ರೋಧಶೀಲತೆ(20 °C) 1.5×104Ω·m
ಉಷ್ಣ ವಾಹಕತೆ(300 K) 27.4 W·m−1·K−1
ಉಷ್ಣ ವ್ಯಾಕೋಚನ(25 °C) 5–7 µm·m−1·K−1
ಶಬ್ದದ ವೇಗ (ತೆಳು ಸರಳು)(20 °C) 16200 m/s
ಸಗಟು ಮಾಪನಾಂಕ(β form) 185 GPa
ಮೋಸ್ ಗಡಸುತನ9.3
Vickers ಗಡಸುತನ49000 MPa
ಸಿಎಎಸ್ ನೋಂದಾವಣೆ ಸಂಖ್ಯೆ7440-42-8
ಉಲ್ಲೇಖನೆಗಳು

ಬೋರಾನ್ ಒಂದು ಮೂಲವಸ್ತು. ಇದು ಅತ್ಯಂತ ಗಟ್ಟಿಯಾದ ಅಲೋಹ. ಆವಿಯಾದ ಸರೋವರಗಳ ತಳದಲ್ಲಿ ವಿಫುಲವಾಗಿ, ಪ್ರಪಂಚದೆಲ್ಲೆಡೆ ದೊರೆಯುತ್ತದೆ. ಸಸ್ಯಗಳ ಬೆಳವಣಿಗೆಗೆ ಆವಶ್ಯವಾದ ಮೂಲವಸ್ತು.[][][] ಹಲವಾರು ಕೈಗಾರಿಕೆಗಳಲ್ಲಿ ವ್ಯಾಪಕವಾಗಿ ಉಪಯೋಗದಲ್ಲಿದೆ. ಉಷ್ಣನಿರೋಧಕ ಗಾಜಿನ ತಯಾರಿಕೆಯಲ್ಲಿ,[][] ಹಲವಾರು ಬಗೆಯ ಔಷಧಗಳಲ್ಲಿ ಬಳಕೆಯಲ್ಲಿದೆ. ಇದನ್ನು ೧೮೦೮ರಲ್ಲಿ ಫ್ರಾನ್ಸ್ಜೋಸೆಫ್ ಗೆ ಲುಸಾಕ್ ಮತ್ತು ಲೂಯಿಸ್ ಜಾಕಸ್ ಥೆನಾರ್ಡ್ ಎಂಬವರು ಮೂಲವಸ್ತುವಾಗಿ ಗುರುತಿಸಿದರು.

ಆವರ್ತಕೋಷ್ಟಕದಲ್ಲಿಯ ಐದನೆಯ ಧಾತು. ರಾಸಾಯನಿಕ ಪ್ರತೀಕ B. ಅಲೋಹ. ಪರಮಾಣು ಸಂಖ್ಯೆ ೫; ಪರಮಾಣು ತೂಕ ೧೦.೮೧೧. ಇದರ ಎರಡು ಸಮಸ್ಥಾನಿಗಳ (ಐಸೊಟೋಪ್ಸ್) ಪರಮಾಣು ತೂಕ ೧೦ ಮತ್ತು ೧೧. ಇದು ಅಲೋಹವಾಗಿದ್ದರೂ ಲೋಹಗುಣಗಳನ್ನು ಪ್ರದರ್ಶಿಸುವುದರಿಂದ ಆವರ್ತಕೋಷ್ಟಕದ ಮೂರನೆಯ (III) ಗುಂಪಿಗೆ ಸೇರಿಸಲ್ಪಟ್ಟಿದೆ. ಕಾರ್ಬನ್ ಮತ್ತು ಸಿಲಿಕಾನುಗಳೊಡನೆ ಹಾರಿಜೀಯ ಮತ್ತು ಕರ್ಣ ಸಂಬಂಧಹೊಂದಿದೆ. ಎಲೆಕ್ಟ್ರಾನಿಕ್ ವಿನ್ಯಾಸ ೨.೩.

ಹೋಮ್‌ಬರ್ಗ್ ಎಂಬವ ಸಲ್ಫ್ಯೂರಿಕ್ ಆಮ್ಲದೊಂದಿಗೆ ಬೋರಾಕ್ಸ್ ರಾಸಾಯನಿಕವನ್ನು (ಬಿಳಿಗಾರ; ಟಿನ್‌ಕಾಲ್) ಬೆರೆಸಿ ಕಾಸುವುದರ ಮೂಲಕ ಸ್ಫಟಿಕರೂಪದ ವಸ್ತು ಪಡೆದ (೧೭೦೨). ಇದನ್ನು ಬೋರಾನ್ ಆಮ್ಲ ಎಂದು ಹೆಸರಿಸಿದ. ಗೇ ಲೂಸ್ಯಾಕ್ ಮತ್ತು ತೆನಾರ್ಡ್ ಎಂಬ ರಸಾಯನವಿಜ್ಞಾನಿಗಳು ಬೋರಾನ್ ಆಕ್ಸೈಡನ್ನು ಪೊಟ್ಯಾಸಿಯಮ್ಮಿನ ಜೊತೆಗೂಡಿಸಿ ಕಬ್ಬಿಣದ ಕೊಳವೆಯಲ್ಲಿ ಕಾಸಿ ಈ ಧಾತುವನ್ನು ಪಡೆದರು.[] ೧೮೧೨ರಲ್ಲಿ ಹಂಫ್ರಿ ಡೇವಿ ಇದನ್ನು ಬೋರಾನ್ ಎಂದು ನಾಮಕರಿಸಿದ.[]

ಲಭ್ಯತೆ

[ಬದಲಾಯಿಸಿ]

ಬೋರಾನ್ ಸ್ಫಟಿಕರೂಪದಲ್ಲೂ ಅಸ್ಫಟಿಕ (ನಯಪುಡಿ) ರೂಪದಲ್ಲೂ ಇರುತ್ತದೆ. ಸಾಮಾನ್ಯವಾಗಿ ಆಕ್ಸಿಜನ್‌ಯುಕ್ತ ಸಂಯುಕ್ತ ವಸ್ತುಗಳ ರೂಪದಲ್ಲೇ ದೊರೆಯುವುದು. ಬೋರಿಕ್ ಆಮ್ಲ (H3BO3) ಮತ್ತು ಬೋರಾಕ್ಸ್ (Na2B4O7.10H2O), ಕ್ಯಾಲ್ಸಿಯಮ್ ಬೋರೇಟ್ (Ca2B6O11.5H2O) ಎನ್ನುವ ಕೋಲೊಮನೈಟ್ ಲವಣ, ಬೋರಾನ್ ನೈಟ್ರೊಕ್ಯಾಲ್‌ಸೈಟ್ (CaH2B4O8.8H2O) ಎನ್ನುವ ಯೂಲಿಸ್ಕೈಟ್ (2Mg3B8O15.MgCl2) ಮತ್ತು ಲೆಂಡರೆಲೈಡ್ [(NH4)2(B5O8)2] ಎಂಬ ಲವಣಗಳು ಹಾಗೂ ಕರ್ನೈಟ್ (Na2B4O7.4H2O) ಲವಣ ಇವೇ ಈ ಸಂಯುಕ್ತಗಳು.

ತಯಾರಿಕೆ

[ಬದಲಾಯಿಸಿ]

ಪ್ಲಾಟಿನಮ್ ಧ್ರುವಗಳ ನಡುವೆ ಬೋರಾನ್ ಆಕ್ಸೈಡನ್ನು ವಿದ್ಯುದ್ವಿಶ್ಲೇಷಿಸುವುದರಿಂದ ಅಸ್ಫಟಿಕ ಬೋರಾನ್ ದೊರೆಯುತ್ತದೆ. ಪೊಟ್ಯಾಸಿಯಮ್ ಅಥವಾ ಸೋಡಿಯಮ್ ಇಲ್ಲವೆ ಪುಡಿಮಾಡಿದ ಮೆಗ್ನೀಸಿಯಮ್ಮಿನೊಂದಿಗೆ ಬೋರಿಕ್ ಆಕ್ಸೈಡನ್ನು ತಾಮ್ರದ ಕೊಳವೆಯಲ್ಲಿ ಕಾಸುವುದರಿಂದ ಬೋರಾನನ್ನು ತಯಾರಿಸಬಹುದು. ಸೋಡಿಯಮ್ ಅಥವಾ ಪೊಟ್ಯಾಸಿಯಮ್ ಇಲ್ಲವೆ ಹೈಡ್ರೊಜನ್ನಿನಿಂದ ಬೋರಾನ್ ಹ್ಯಾಲೈಡುಗಳನ್ನು ಅಪಕರ್ಷಣಗೊಳಿಸುವುದರಿಂದಲೂ ಬೋರಾನನ್ನು ಪಡೆಯಬಹುದು. ಬೋರಿಕ್ ಆಕ್ಸೈಡ್, ಮೆಗ್ನೀಸಿಯಮ್ ಆಕ್ಸೈಡ್ ಮತ್ತು ಮೆಗ್ನೀಸಿಯಮ್ ಫ್ಲೂರೈಡುಗಳು ಇರುವ ಮಿಶ್ರಣವನ್ನು ಧನಧ್ರುವವಾಗುವ ಕಾರ್ಬನ್ ಮೂಸೆಯಲ್ಲಿ ಹಾಕಿ ಋಣಧ್ರುವವಾಗಿ ಕಬ್ಬಿಣದ ಕಂಬಿಯನ್ನು ಬಳಸಿ ೧೧೦೦oC ಉಷ್ಣತೆಯಲ್ಲಿ ವಿದ್ಯುದ್ವಿಶ್ಲೇಷಿಸುವುದರಿಂದಲೂ ಬೋರಾಕ್ ಆಕ್ಸೈಡ್ ಸೇರಿಸಿ ಅದರಲ್ಲಿಯ ಪೊಟ್ಯಾಸಿಯಮ್ ಫ್ಲೂಬೊರೈಟನ್ನು ವಿದ್ಯುದ್ವಿಶ್ಲೇಷಿಸಿದಾಗ ಅಧಿಕ ಪರಿಮಾಣದಲ್ಲಿ ಬೋರಾನ್ ತಯಾರಾಗುತ್ತದೆ.

ಗುಣಗಳು

[ಬದಲಾಯಿಸಿ]

ಅಸ್ಫಟಿಕರೂಪದ ಬೋರಾನ್ ಕಂದುಬಣ್ಣದ ಪುಡಿ. ಸಾಧಾರಣ ಕೊಠಡಿ ಉಷ್ಣತೆಯಲ್ಲಿ ಸ್ಥಿರವಾಗಿರುತ್ತದೆ. ೭೦೦ oC ನಷ್ಟು ಉಷ್ಣತೆಯಲ್ಲಿ ಜ್ವಾಲಾರಹಿತವಾಗಿ ಉರಿದು ಆಕ್ಸೈಡ್ ಮತ್ತು ನೈಟ್ರೈಡುಗಳನ್ನು ಉತ್ಪತ್ತಿ ಮಾಡುತ್ತದೆ. ದ್ರವರೂಪದ ಅಲ್ಯೂಮಿನಿಯಮ್ಮಿನಲ್ಲಿ ಇದು ಲೀನವಾಗುತ್ತದೆ. ಇದನ್ನು ತಂಪಿಸುವುದರಿಂದ ಪಾರಕ, ವರ್ಣರಹಿತ ಸ್ಫಟಿಕಗಳು ದೊರೆಯುತ್ತವೆ. ಸ್ಫಟಿಕರೂಪದ ಬೋರಾನ್ ಹೊಳೆಯುವಂಥದು. ಇದರ ವಕ್ರೀಭವನಾಂಕ ಹೆಚ್ಚಿದಂತೆಲ್ಲ ವಾಹಕತ್ವ ವೃದ್ಧಿಸುತ್ತದೆ. ೯೯.೫%ನಷ್ಟು ಶುದ್ಧ ರೂಪದ ಬೋರಾನಿನ ವಿಕಾಸಗುಣಾಂಕ, ೨೦ oC ಮತ್ತು ೭೫೦ oC ಉಷ್ಣತೆಗಳ ನಡುವೆ ೮.೩ x ೧೦-೬. ಗ್ರಾಹ್ಯೋಷ್ಣ ೦oC ನಿಂದ ೧೦೦ oC ವರೆಗೆ ೦.೩೦೭. ಉಷ್ಣತೆ ಹೆಚ್ಚಿದಂತೆಲ್ಲ ಗ್ರಾಹ್ಯೋಷ್ಣವೂ ಹೆಚ್ಚುತ್ತದೆ.

ನುಣುಪಾದ ಬೋರಾನ್ ಪುಡಿ ಘನರೂಪದ ಬೋರಾನಿಗಿಂತಲೂ ಹೆಚ್ಚು ಕ್ರಿಯಾಶಾಲಿ. ಇದನ್ನು ವಾಯುವಿನಲ್ಲಿ ಕಾಸಿದಾಗ ಇಲ್ಲವೇ ಕಾಸಿದ ಪೊಟ್ಯಾಸಿಯಮ್ ಕ್ಲೋರೈಡ್ ದ್ರಾವಣದಲ್ಲಿ ಹಾಕಿದಾಗ ಉಜ್ಜ್ವಲವಾಗಿ ಉರಿಯುತ್ತದೆ. ಇದು ಉತ್ಕರ್ಷಣಕಾರಿಗೆ ರಾಸಾಯನಿಕವಾಗಿ ರೋಧಿಯಾಗಿರುವಂಥದು. ಅಧಿಕ ಉಷ್ಣತೆಗೆ ಕಾಸಿದ ನೈಟ್ರಿಕ್ ಆಮ್ಲದೊಂದಿಗೆ ವರ್ತಿಸಿದಾಗ ನಿಧಾನವಾಗಿ ಬೋರಿಕ್ ಆಮ್ಲ ಉಂಟಾಗುತ್ತದೆ. ಉತ್ಕರ್ಷಣಗೊಂಡು ಹೈಡ್ರೊಜನ್ನನ್ನು ಹೊರಗೆಡಹುತ್ತದೆ. ಲೋಹಗಳ ಜೊತೆ ವರ್ತಿಸಿದಾಗ ತತ್ಸಂಬಂಧಿ ಲೋಹಬೋರೈಡುಗಳು ಉಂಟಾಗುತ್ತವೆ.

ಉಪಯೋಗಗಳು

[ಬದಲಾಯಿಸಿ]

ತಾಮ್ರದ ಎರಕದ ಅಚ್ಚಿನ ಕೆಲಸಗಳಲ್ಲಿ ಅಪಕರ್ಷಣಕಾರಿಯಾಗಿ ಇದನ್ನು ಬಳಸುವುದಿದೆ. ಉಕ್ಕಿನ ಕಾಠಿಣ್ಯವನ್ನು ಹೆಚ್ಚಿಸಲು ಹಾಗೂ ಉಕ್ಕಿನ ಯಾಂತ್ರಿಕ ಗುಣಗಳನ್ನು ಉತ್ತಮಪಡಿಸಲು ಫೆರೊಬೋರಾನಿನ ರೂಪದ ೦.೦೦೨% ಬೋರಾನನ್ನು ಉಪಯೋಗಿಸುತ್ತಾರೆ. ಅಧಿಕ ವಿದ್ಯುದ್ವಹನತೆಯಿರುವ ತಂತಿಯನ್ನು ಎಳೆಯಲು ಅಲ್ಯೂಮಿನಿಯಮ್ ಮಿಶ್ರಲೋಹದೊಂದಿಗೆ ಇದನ್ನು ಬೆರೆಸುವುದಿದೆ. ಊಷ್ಮಸಹ ಆಕ್ಸೈಡುಗಳಿಗೆ (ರಿಫ್ರ್ಯಾಕ್ಟರಿ ಆಕ್ಸೈಡ್ಸ್) ಇದನ್ನು ಅಪಕರ್ಷಣಕಾರಿಯಾಗಿ ಉಪಯೋಗಿಸುತ್ತಾರೆ. ವೇಗವರ್ಧನಾಕಾರಿಯಾಗಿಯೂ ಯುರೇನಿಯಮ್-ಗ್ರ್ಯಾಫೈಟ್ ರಿಯಾಕ್ಟರಿನಲ್ಲಿ ನಿಯಂತ್ರಣಕಾರಿಯಾಗಿಯೂ ಹೊತ್ತಿಸುವ ವಸ್ತುವಾಗಿಯೂ ಇದರ ಬಳಕೆ ಇದೆ. ದಿಷ್ಟಕಾರಿ ಮುಂತಾದ ನಿಯಂತ್ರಣ ನಳಿಕೆಗಳಲ್ಲೂ ಇದು ಉಪಯೋಗಕ್ಕೆ ಬರುತ್ತದೆ. ಉತ್ತಮ ನ್ಯೂಟ್ರಾನ್ ಅವಶೋಷಕವಾಗಿರುವುದರಿಂದ ಪರಮಾಣು ಕಾರ್ಯಗಳಲ್ಲೂ ಇದರ ಬಳಕೆ ಉಂಟು.[೧೦] ಅತ್ಯಂತ ಹೆಚ್ಚಿನ ಕಾಠಿಣ್ಯಾಂಕದ ಸಲುವಾಗಿ ಇದನ್ನು ಘರ್ಷಕವಾಗಿಯೂ (ಅಬ್ರೇಸಿವ್) ಬಳಸುತ್ತಾರೆ.

ಬೋರಾನಿನ ಪ್ರಮುಖ ಸಂಯುಕ್ತಗಳು

[ಬದಲಾಯಿಸಿ]

ಹೈಡ್ರೊಜನ್, ಹ್ಯಾಲೊಜನ್ನುಗಳು ಆಕ್ಸಿಜನ್, ನೈಟ್ರೊಜನ್, ಕಾರ್ಬನ್ ಮತ್ತು ಗಂಧಕಗಳೊಡನೆ ಬೋರಾನ್ ಬೆರೆತಾಗ ಬೇರೆ ಬೇರೆ ಸಂಯುಕ್ತಗಳು ಏರ್ಪಡುತ್ತವೆ. ಇದರಿಂದ ಬೋರಾನಿನ ಪ್ರಸಾಮಾನ್ಯ ವೇಲೆನ್ಸಿ ೩ ಎಂಬುದು ವ್ಯಕ್ತವಾಗುವುದು. ಹೈಡ್ರೊಜನ್ನಿನಿಂದ ಉಂಟಾದ ಸಂಯುಕ್ತಗಳು ತಮ್ಮ ಸಂಯೋಜನೆ ಮತ್ತು ರಚನೆಗಳ ಸಲುವಾಗಿ ಅಪಸಾಮಾನ್ಯದವಾಗಿರುತ್ತವೆ. ಕೈಗಾರಿಕಾದೃಷ್ಟಿಯಿಂದ ಪ್ರಮುಖವೆನಿಸಿರುವ ಸಂಯುಕ್ತಗಳು ಎಂದರೆ ಬೋರಾನುಗಳು, ಬೋರಿಕ್ ಆಮ್ಲ ಮತ್ತು ಬೋರಾಕ್ಸ್.

ಬೋರಾನ್ ಹೈಡ್ರೈಡುಗಳು (ಬೋರೇನುಗಳು)

[ಬದಲಾಯಿಸಿ]

ಮೆಗ್ನೀಸಿಯಮ್ ಬೋರೈಡನ್ನು ೧೦% ಹೈಡ್ರೊಕ್ಲೋರಿಕ್ ಆಮ್ಲದೊಡನೆ ೫೦ಸಿ ಉಷ್ಣತೆಯಲ್ಲಾಗಲಿ ೮N ಫಾಸ್ಫರಿಕ್ ಆಮ್ಲದೊಡನೆ ೭೦ C ಉಷ್ಣತೆಯಲ್ಲಾಗಲಿ ಕಾಸುವುದರಿಂದ ಬೋರಾನ್ ಹೈಡ್ರೈಡುಗಳು ತಯಾರಾಗುತ್ತವೆ.

ಡೈಬೋರೇನ್: ಸುಮಾರು ೫ ಗಂಟೆಗಳ ಕಾಲ ೯೫C ನಿಂದ ೧೦೦C ಉಷ್ಣತೆಯಲ್ಲಿ ಡೈಹೈಡ್ರೊಟೆಟ್ರಬೋರೇನನ್ನು ಕಾಸುವುದರಿಂದ ಮತ್ತು ಉತ್ಪನ್ನಗಳನ್ನು ದ್ರವವಾಯುವಿನಲ್ಲಿ ಸಾಂದ್ರೀಕರಿಸಿ, ೧೧೨C ಉಷ್ಣತೆಯಲ್ಲಿ ಪ್ರಭಂಜನಗೊಳಿಸಿಯೋ (ಫ್ರ್ಯಾಕ್ಸಿನೇಟ್) ಆತಿನೇರಿಳೆ ಬಣ್ಣ ಬೆಳಕಿಗೆ B4H10 ಒಡ್ಡಿಯೋ ಡೈಬೋರೇನನ್ನು (B2H6) ತಯಾರಿಸುತ್ತಾರೆ.

ಡೈಹೈಡ್ರೊಟೆಟ್ರಬೋರೇನ್: ಅಯಡೊ ಡೈಬೋರೆನಿನ ಮೇಲೆ ಸೋಡಿಯಮ್ಮನ್ನು ವರ್ತಿಸುವುದರಿಂದಲೋ ಮೆಗ್ನೀಸಿಯಮ್ ಬೋರಯಡಿನ ಮೇಲೆ ಆಮ್ಲವನ್ನು ವರ್ತಿಸುವುದರಿಂದಲೊ ಡೈಹೈಡ್ರೊಟೆಟ್ರಾಬೋರೇನ್ ಉತ್ಪತ್ತಿಯಾಗುತ್ತದೆ.

ಪೆಂಟಬೋರೇನ್: ಡೈಬೋರೇನನ್ನು ಒಣ ಹೈಡ್ರೊಕ್ಲೋರಿಕ್ ಆಮ್ಲದೊಂದಿಗೆ ೧೨೫ C ಉಷ್ಣತೆಯಲ್ಲಿ ಕಾಸುವುದರಿಂದ ಪೆಂಟಬೋರೇನನ್ನು ತಯಾರಿಸಬಹುದು.

ಡೈಹೈಡ್ರೊಪೆಂಟಾಬೋರೇನ್: B10H14 ನ್ನು ಬಹಳ ಹೊತ್ತು ಕೊಠಡಿ ಉಷ್ಣತೆಯಲ್ಲೇ ಇಡುವುದರಿಂದ ಉಂಟಾಗುತ್ತದೆ.

ಡೆಕ್ಸಬೋರೇನ್: ಸ್ವಾಭಾವಿಕ ಅನಿಲದಿಂದ (ನ್ಯಾಚುರಲ್ ಗ್ಯಾಸ್) ತಯಾರಿಸುವುದಿದೆ.

ಡೆಕ್ಸಬೋರೇನ್ : B2H6 ಅಥವಾ B4H10ನ್ನು ಕಾಸುವುದರಿಂದ ಉಂಟಾಗುತ್ತದೆ.

ಎಲ್ಲ ಬೋರಾನ್ ಹೈಡ್ರೈಡುಗಳೂ ನೀರಿನಿಂದ ವಿಭಜನೆಹೊಂದಿ ಹೈಡ್ರೊಜನ್ನನ್ನು ಉತ್ಪತ್ತಿಮಾಡುತ್ತವೆ. B2H6 ಬಲುಬೇಗ ವಿಭಜನೆಗೊಂಡರೆ ಇತರ ಬೋರೇನುಗಳು ನಿಧಾನವಾಗಿ ಜಲವಿಶ್ಲೇಷಣೆಗೊಳ್ಳುತ್ತವೆ. ಬೋರೇನುಗಳು ಹ್ಯಾಲೊಜನ್ನುಗಳೊಂದಿಗೆ ಬಲು ಬಿರುಸಾಗಿ ವರ್ತಿಸಿದಾಗ ಕಡಿಮೆ ಒತ್ತಡ ಹಾಗೂ ಕಡಿಮೆ ಉಷ್ಣತೆಯಲ್ಲಿ ಪ್ರತಿಸ್ಥಾಪನಾ ವಸ್ತುಗಳು ಉಂಟಾಗುತ್ತದೆ.

ಬೋರಿಕ್ ಆಮ್ಲ

[ಬದಲಾಯಿಸಿ]

ಬಿಸಿಮಾಡಿದ ಬೋರಾಕ್ಸಿನ ಸಾರ ದ್ರಾವಣವನ್ನು ಸಾಕಷ್ಟು ಪರಿಮಾಣದ ಸಾರ ಹೈಡ್ರೊಕ್ಲೋರಿಕ್ ಆಮ್ಲ ಇಲ್ಲವೆ ಸಲ್ಫ್ಯೂರಿಕ್ ಆಮ್ಲದೊಂದಿಗೆ ವರ್ತಿಸುವುದರಿಂದ ಬೋರಿಕ್‌ಆಮ್ಲದ ಸ್ಫಟಿಕಗಳು ಮೂಡುತ್ತವೆ. ಸಲ್ಫರ್ ಆಕ್ಸೈಡನ್ನು ನೀರಿನ ಮಾಧ್ಯಮದಲ್ಲಿ ಕೊಲೊಮನೈಟ್ (ಕ್ಯಾಲ್ಸಿಯಮ್ ಬೋರೇಟ್) ದ್ರಾವಣದಲ್ಲಿ ಹಾಯಿಸುವುದರಿಂದಲೂ ಬೋರಿಕ್ ಆಮ್ಲವನ್ನು ತಯಾರಿಸಬಹುದು. ಪಾತ್ರೆಗಳಿಗೆ ಹೊಳಪು ನೀಡಿಕೆ, ಕುಂಭ ಕಲಾ ಕೆಲಸಗಳಲ್ಲಿ ಮೆರುಗು ನೀಡಿಕೆ, ಲೋಹತಯಾರಿಕೆ, ಅಗ್ನಿನಿರೋಧನ ಸಂಯೋಜನೆ, ಸಾಬೂನು ಮುಂತಾದ ಅಂಗರಾಗವಸ್ತುಗಳ ತಯಾರಿಕೆ, ಮೆರುಗು ಬಣ್ಣಗಳ ತಯಾರಿಕೆ, ಉಷ್ಣನಿರೋಧಕ ಗಾಜಿನ ವಸ್ತುಗಳ ತಯಾರಿಕೆ ಮುಂತಾದೆಡೆಗಳಲ್ಲಿ ಬೋರಿಕ್ ಆಮ್ಲದ ಬಳಕೆ ಇದೆ.

ಬೋರಾಕ್ಸ್ (ಬಿಳಿಗಾರ ಅಥವಾ ಸೋಡಿಯಮ್ ಬೋರೇಟ್)

[ಬದಲಾಯಿಸಿ]

ಜಲಯುಕ್ತ ಸೋಡಿಯಮ್ ಬೋರೇಟ್ ತಿಬೆಟ್ಟಿನಲ್ಲಿಯೂ ಕ್ಯಾಲಿಫೋರ್ನಿಯಾದ ಉಪ್ಪಿನ ಸರೋವರಗಳಲ್ಲೂ ಎಲ್ಲ ಕ್ಷಾರ ಮಣ್ಣುಗಳಲ್ಲೂ ಸಾಕಷ್ಟು ಪ್ರಮಾಣದ ಸೋಡಾ ಆ್ಯಷ್‌ನೊಂದಿಗೆ ಬೆರೆಸಿ, ಚೆನ್ನಾಗಿ ಕಾಸಿ ಬತ್ತಿಸಿ ತಂಪಾಗಿಸಿದರೆ ಬೋರಾಕ್ಸ್ ಹರಳುಗಳ ರೂಪದಲ್ಲಿ ಮೂಡುತ್ತದೆ. ಕೊಲೊಮನೈಟನ್ನು ಚೆನ್ನಾಗಿ ಪುಡಿ ಮಾಡಿ ಸೋಡಿಯಮ್ ಕಾರ್ಬೊನೇಟಿನ ಸಾರ ದ್ರಾವಣದೊಡನೆ ಕುದಿಸಿ ಅನಂತರ ಉಂಟಾದ CaCO3 ನ್ನು ಒತ್ತರಿಸಿ ಸೋಸಿದರೆ ಬೋರಾಕ್ಸ್ ಹರಳುಗಳು ಮೈದಳೆಯುತ್ತವೆ. ಸೋಸಿದ ದ್ರವದಲ್ಲಿ ಬೋರಾಕ್ಸ್ ಮತ್ತು ಸೋಡಿಯಮ್ ಮೆಟಬೋರೇಟುಗಳಿರುವುವು. ತಂಪುಮಾಡುವುದರಿಂದ ಬೋರಾಕ್ಸ್ ಸ್ಫಟೀಕಿಕರಣಗೊಳ್ಳತ್ತದೆ. ಬೋರಾಕ್ಸ್ ಬಲು ಬೆಲೆಬಾಳುವ ವಸ್ತು. ಗಾಜಿನ ವಸ್ತುಗಳು, ನೀಲಿಮಿಶ್ರಿತ ಸೋಪುಗಳು ಮುಂತಾದ ಪದಾರ್ಥಗಳನ್ನು ಸಂರಕ್ಷಿಸಲು, ಮೆರಗು ಎಣ್ಣೆಯ ತಯಾರಿಕೆ, ಬೆಂಕಿಕಡ್ಡಿ ಕೈಗಾರಿಕೆ, ಹತ್ತಿ ಮತ್ತು ಹೊಗೆಸೊಪ್ಪುಗಳ ಬೆಳೆಗೆ ಗೊಬ್ಬರರೂಪದಲ್ಲಿ-ಹೀಗೆ ಬೋರಾಕ್ಸ್ ಉಪಯೋಗಕ್ಕೆ ಬರುತ್ತದೆ.

ಇತರ ಸಂಯುಕ್ತಗಳು

[ಬದಲಾಯಿಸಿ]

ಬೋರಾನ್ ಕಾರ್ಬೈಡ್, ಬೋರಾನ್ ನೈಟ್ರೈಡ್, ಬೋರಾನ್ ಸಲ್ಫೈಡ್, ಬೋರಾನ್ ಟೆಟ್ರಕ್ಲೋರೈಡ್, ಬೋರಾನ್ ಟ್ರೈಬ್ರೊಮೈಡ್ ಮುಂತಾದ ಬೋರಾನ್ ಸಂಯುಕ್ತಗಳು ಇವೆ. ಇವಲ್ಲದೆ ಲೋಹೀಯ ಬೋರೈಡುಗಳೂ ಲೋಹೀಯ ಬೋರೊಹೈಡ್ರೈಡುಗಳೂ, ಮೀಥೈಲ್ ಬೋರೇಟ್, ಈಥೈಲ್ ಬೋರೇಟ್ ಮುಂತಾದ ಆರ್ಗ್ಯಾನಿಕ್ ಬೋರಾನ್ ಸಂಯುಕ್ತಕಗಳೂ ಉಂಟು.

ಉಲ್ಲೇಖಗಳು

[ಬದಲಾಯಿಸಿ]
  1. W.T.M.L. Fernando, L.C. O'Brien, P.F. Bernath. "Fourier Transform Spectroscopy: B4Σ−X4Σ" (PDF). University of Arizona, Tucson. Retrieved 2007-12-10.{{cite web}}: CS1 maint: multiple names: authors list (link)
  2. K.Q. Zhang, B.Guo, V. Braun, M. Dulick, P.F. Bernath. "Infrared Emission Spectroscopy of BF and AIF" (PDF). Retrieved 2007-12-10. {{cite web}}: Text "University of Waterloo, Waterloo, Ontario" ignored (help)CS1 maint: multiple names: authors list (link)
  3. Mahler, R. L. "Essential Plant Micronutrients. Boron in Idaho" (PDF). University of Idaho. Archived from the original (PDF) on 1 October 2009. Retrieved 2009-05-05.
  4. "Functions of Boron in Plant Nutrition" (PDF). U.S. Borax Inc. Archived from the original (PDF) on 20 March 2009.
  5. Blevins, Dale G.; Lukaszewski, K. M. (1998). "Functions of Boron in Plant Nutrition". Annual Review of Plant Physiology and Plant Molecular Biology. 49: 481–500. doi:10.1146/annurev.arplant.49.1.481. PMID 15012243.
  6. "Boron: Statistics and Information". USGS. Archived from the original on 16 September 2008. Retrieved 2009-05-05.
  7. Hammond, C. R. (2004). The Elements, in Handbook of Chemistry and Physics (81st ed.). CRC press. ISBN 978-0-8493-0485-9.
  8. Gay Lussac, J.L. & Thenard, L.J. (1808). "Sur la décomposition et la recomposition de l'acide boracique". Annales de chimie. 68: 169–174.
  9. Davy H (1809). "An account of some new analytical researches on the nature of certain bodies, particularly the alkalies, phosphorus, sulphur, carbonaceous matter, and the acids hitherto undecomposed: with some general observations on chemical theory". Philosophical Transactions of the Royal Society of London. 99: 39–104. doi:10.1098/rstl.1809.0005.
  10. Fabrication and Evaluation of Urania-Alumina Fuel Elements and Boron Carbide Burnable Poison Elements Archived 27 July 2020 ವೇಬ್ಯಾಕ್ ಮೆಷಿನ್ ನಲ್ಲಿ., Wisnyi, L. G. and Taylor, K.M., in "ASTM Special Technical Publication No. 276: Materials in Nuclear Applications", Committee E-10 Staff, American Society for Testing Materials, 1959

ಹೊರಗಿನ ಕೊಂಡಿಗಳು

[ಬದಲಾಯಿಸಿ]
"https://kn.wikipedia.org/w/index.php?title=ಬೋರಾನ್&oldid=1117145" ಇಂದ ಪಡೆಯಲ್ಪಟ್ಟಿದೆ