ಜಯಪ್ರಕಾಶ ಮಾವಿನಕುಳಿ
This biographical article is written like a résumé. (May 2021) |
ಜಯಪ್ರಕಾಶ ಮಾವಿನಕುಳಿ | |
---|---|
ಜನನ | ಮೇ ೦೫, ೧೯೫೧ |
ವೃತ್ತಿ |
|
ಅಭ್ಯಾಸ ಮಾಡಿದ ವಿದ್ಯಾ ಸಂಸ್ಥೆ | ಮೈಸೂರು ವಿಶ್ವವಿದ್ಯಾನಿಲಯ |
ಕಾಲ | 20ನೆಯ ಶತಮಾನ |
ಪ್ರಕಾರ/ಶೈಲಿ |
|
ವಿಷಯ | ಪ್ರೇಮ ಮತ್ತು ಸಾಮಾಜಿಕ ಕಳಕಳಿ |
ಸಾಹಿತ್ಯ ಚಳುವಳಿ | ನವೋದಯ |
ಬಾಳ ಸಂಗಾತಿ | ಜೀವನ ಕಲಾ |
ಮಕ್ಕಳು | ೨ |
ಜಯಪ್ರಕಾಶ ಮಾವಿನಕುಳಿ ವೃತ್ತಿಯಲ್ಲಿ ಓರ್ವ ಉಪನ್ಯಾಸಕರು. ಇವರು ಕನ್ನಡ ಭಾಷೆಯ ಕವಿ, ಕಾದಂಬರಿಕಾರ, ವಿಮರ್ಶಕ, ಸಂಪಾದಕ, ಆಕಾಶವಾಣಿ ಕಲಾವಿದ, ನಾಟಕಕಾರ, ರಂಗಕರ್ಮಿ ಮತ್ತು ಚಿತ್ರನಟ. ನಾಟಕ, ಕಾದಂಬರಿ, ಸಣ್ಣಕಥೆ, ಕಾವ್ಯ, ಸಂಪಾದನೆ ಸೇರಿದಂತೆ ಸುಮಾರು ಎಪ್ಪತ್ತು ಪುಸ್ತಕಗಳು ಪ್ರಕಟವಾಗಿವೆ. ೨೦೧೮ರ ಫೆಬ್ರವರಿ ತಿಂಗಳಲ್ಲಿ ಶಿವಮೊಗ್ಗದಲ್ಲಿ ನಡೆದ ೧೩ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿದ್ದರು.[೧][೨]
ಜೀವನ
[ಬದಲಾಯಿಸಿ]ತಂದೆ ಶ್ರೀ ರಾಮಭಟ್ಟ ಮತ್ತು ತಾಯಿ ಶ್ರೀಮತಿ ಸಾವಿತ್ರಮ್ಮನವರ ಮಗನಾಗಿ ದಿ. ೦೫-೦೫-೧೯೫೧ ರಂದು ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕರ್ಕಿಕೊಪ್ಪ ಎಂಬ ಹಳ್ಳಿಯ ಒಂದು ಅವಿಭಕ್ತ ಕುಟುಂಬದಲ್ಲಿ ಜನಿಸಿದರು.
ಶಿಕ್ಷಣ
[ಬದಲಾಯಿಸಿ]ತಮ್ಮ ಪ್ರಾಥಮಿಕ ಶಿಕ್ಷಣವನ್ನು ಮತ್ತು ಉನ್ನತ ಪ್ರಾಥಮಿಕ ಶಿಕ್ಷಣವನ್ನು ಕರ್ಕಿಕೊಪ್ಪದ ತಮ್ಮ ಹಳ್ಳಿಯ ಸರ್ಕಾರಿ ಕನ್ನಡ ಮಾಧ್ಯಮದ ಪ್ರಾಥಮಿಕ ಶಾಲೆಯಲ್ಲಿ ಮುಗಿಸಿದರು, ನಂತರ, ಸಾಗರದ ಮುನಿಸಿಪಲ್ ಪ್ರೌಢಶಾಲೆ (ಈಗ ಸರ್ಕಾರಿ ಪದವಿಪೂರ್ವ ಕಾಲೇಜು)ಯಲ್ಲಿ ತಮ್ಮ ಪ್ರೌಢಶಿಕ್ಷಣವನ್ನು ಮುಗಿಸಿದರು, ಪದವಿ ಪೂರ್ವ ಶಿಕ್ಷಣವನ್ನು ಸಾಗರದ ಲಾಲ್ ಬಹುದ್ದೂರ್ ಕಾಲೇಜಿನಲ್ಲಿ ಮುಗಿಸಿದರು. ನಂತರ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಮನಃಶಾಸ್ತ್ರ ಮತ್ತು ರಾಜ್ಯಶಾಸ್ತ್ರಗಳ ಐಚ್ಛಿಕ ವಿಷಯದಲ್ಲಿ ಪದವಿ ಪಡೆದರು, ಮೈಸೂರಿನ ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಕೇಂದ್ರ 'ಮಾನಸ ಗಂಗೋತ್ರಿ'ಯಲ್ಲಿ ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಜೊತೆಯಲ್ಲಿಯೇ ಸ್ನಾತಕೋತ್ತರ ಜಾನಪದ ಡಿಪ್ಲೊಮೋ ಕೋರ್ಸನ್ನು ಮುಗಿಸಿದರು. ನಂತರ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಿಂದ ಕಾನೂನು ಪದವಿಯ ಕೋರ್ಸನ್ನು ಮುಗಿಸಿ, ನಂತರ ಮಂಗಳೂರು ವಿಶ್ವ ವಿದ್ಯಾನಿಲಯದಲ್ಲಿ ಡಾಕ್ಟರೇಟ್ ಪಡೆದಿದ್ದಾರೆ.
ವೃತ್ತಿ ಜೀವನ
[ಬದಲಾಯಿಸಿ]ಮಾವಿನಕುಳಿ ತಮ್ಮ ವೃತ್ತಿ ಜೀವನವನ್ನು ಕುಂದಾಪುರ ಭಂಡಾರಕಾರ್ಸ್ ಕಾಲೇಜಿನ ರಾಜ್ಯಶಾಸ್ತ್ರ ಅಧ್ಯಾಪಕರಾಗಿ ಪ್ರಾರಂಭಿಸಿದರು. ಬಳಿಕ ಮೂಲ್ಕಿ, ಮೂಡುಬಿದಿರೆ ಕಾರ್ಕಳ, ಉಡುಪಿ ಮತ್ತು ಗುಳೇದಗುಡ್ಡದ ವಿವಿಧ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸಿ ನಿವೃತ್ತಿ ಹೊಂದಿದರು.
ಸಾಮಾಜಿಕ ಸಂಬಂಧ
[ಬದಲಾಯಿಸಿ]ಸಾಹಿತ್ಯ ಕೃಷಿ
[ಬದಲಾಯಿಸಿ]ಕನ್ನಡ ಸಾಹಿತ್ಯದಲ್ಲಿ ಅನೇಕ ಕಥೆ, ಲೇಖನಗಳನ್ನು ಮತ್ತು ನಾಟಕಗಳನ್ನು ಬರೆದಿದ್ದಾರೆ. ಶಾಲಾ-ಕಾಲೇಜು ದಿನಗಳಲ್ಲಿ ಸಾಹಿತ್ಯ ಮತ್ತು ನಾಟಕ ಕ್ಷೇತ್ರಗಳಲ್ಲಿ ಆಸಕ್ತರಾಗಿದ್ದ ಡಾ. ಮಾವಿನಕುಳಿಯವರು ಅನೇಕ ಕಥೆ, ಲೇಖನಗಳನ್ನು ಆ ದಿನಗಳಲ್ಲಿ ಬರೆದರು. ಅವರ ಪ್ರಥಮ ಕವಿತಾ ಸಂಕಲನ 'ಸಾಗರದಲ್ಲಿ ಸಾಯಂಕಾಲ' ಸಾಗರದ 'ಅಕ್ಷರ ಪ್ರಕಾಶನ'ದಿಂದ (1978) ಪ್ರಕಟವಾಯಿತು. 'ವಿರಹ ಕಡಲು', 'ಅಶ್ವತ್ಥಾಮ', 'ಕಾಲಯಾನ' ಕವಿತಾ ಸಂಗ್ರಹಗಳನ್ನು ಪ್ರಕಟಿಸಿದ್ದಾರೆ. ಅವರ ಕವಿತಾ ಸಂಗ್ರಹಕ್ಕೆ 'ಕಡೆಂಗೋಡ್ಲು ಶಂಕರ ಭಟ್ಟ ಕಾವ್ಯಪ್ರಶಸ್ತಿ' 'ಮುದ್ದಣ ಕಾವ್ಯಪ್ರಶಸ್ತಿ'ಗಳು ದೊರಕಿವೆ.
ಕಾದಂಬರಿಕಾರರಾಗಿ ಅವರ 'ಅಂತರ' (1980) ಕಾದಂಬರಿ ಅವರನ್ನು ಜನಪ್ರಿಯಗೊಳಿಸಿದೆ. ಆ ವರ್ಷದ ಹನ್ನೆರಡು ಶ್ರೇಷ್ಠ ಗ್ರಂಥಗಳಲ್ಲಿ ಅವರ 'ಅಂತರ' ಕಾದಂಬರಿಯೂ ಒಂದಾಗಿತ್ತು ಎಂದು 'ಗ್ರಂಥ ಲೋಕ' ಸಮೀಕ್ಷೆಯಲ್ಲಿ ಹೇಳಿತ್ತು. ಈ ಕಾದಂಬರಿ ಯುವ ಮನಸ್ಸನ್ನು ಸೂರೆಗೊಂಡಿತು ಎಂಬುದಕ್ಕೆ ಅದು ಐದನೇ ಮುದ್ರಣವನ್ನು ಕಂಡಿದ್ದಕ್ಕೆ ಸಾಕ್ಷಿಯಾಗಿದೆ. ಈ ಕಾದಂಬರಿಯು ಇಂಗ್ಲಿಷ್ ಮತ್ತು ತೆಲುಗು ಬಾಷೆಗಳಿಗೆ ಬಾಷಾಂತರಗೊಂಡಿದೆ . ಅವರ ಕಾದಂಬರಿ 'ಪ್ರತಿರೂಪ' ತರಂಗದಲ್ಲಿ ಪ್ರಕಟವಾಗಿದೆ. ಕನ್ನಡದ ಪ್ರಮುಖ ಕಥೆಗಾರರಾಗಿ ರೂಪುಗೊಂಡಿರುವ ಜಯಪ್ರಕಾಶ್ ಮಾವಿನಕುಳಿಯವರು 'ಕಾಲ', 'ಮುಖಗಳು', 'ಹೆಜ್ಜೆ ಮೂಡದ ಹಾದಿಯಲ್ಲಿ', 'ಚಂದಿರನೇತಕೆ ಓಡುವನಮ್ಮ', 'ಬ್ರಹ್ಮರಾಕ್ಷಸ' ಕಥಾಸಂಕಲನಗಳನ್ನು ಪ್ರಕಟಿಸಿದ್ದಾರೆ. ಅವರ ಆಯ್ದ ಕಥಾ ಸಂಕಲನ 'ಗಾಂಧಾರಿ ಕನ್ನಡಿ ನೋಡಿದಳು' ಪ್ರಕಟವಾಗಿದೆ. ಪ್ರಜಾವಾಣಿ ದೀಪಾವಳಿ ಕಥಾ ಸ್ಪರ್ಧೆಯಲ್ಲಿ ಎರಡು ಬಾರಿ, ಲಂಕೇಶ್ ಪತ್ರಿಕೆ ದೀಪಾವಳಿ ಕಥಾ ಸ್ಪರ್ಧೆಯಲ್ಲಿ ಬಹುಮಾನಗಳನ್ನು ಅವರ ಕಥೆಗಳು ಪಡೆದಿವೆ. ಅವರ ಕಥೆಗಳು ಕರ್ನಾಟಕದ ಎಲ್ಲಾ ಪತ್ರಿಕೆಗಳಲ್ಲೂ ಪ್ರಕಟವಾಗಿವೆ. ಅವರ ಕಥಾಸಂಗ್ರಹ 'ಹೆಜ್ಜೆ ಮೂಡದ ಹಾದಿಯಲ್ಲಿ'. ಅವರ ಕಥಾಸಂಕಲನಗಳಿಗೆ 'ಭಾರತ ರತ್ನ ಎಂ. ವಿಶ್ವೇಶ್ವರಯ್ಯ ಸಾಹಿತ್ಯ ಪ್ರಶಸ್ತಿ', ನಾರಾಯಣ ರಾವ್ ವಡೆ ಪ್ರಶಸ್ತಿ ಮತ್ತು ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ಲಭಿಸಿವೆ.
ರಂಗಭೂಮಿ
[ಬದಲಾಯಿಸಿ]ಕನ್ನಡದ ರಂಗಭೂಮಿಯಲ್ಲಿ ತೊಡಗಿಕೊಂಡಿರುವ ಡಾ. ಮಾವಿನಕುಳಿಯವರು 'ಶೇಫಾಲಿಕಾ', 'ಕೊಡೆಯಪ್ಪನ ಕಥಾ ಸಂಗ್ರಹ', 'ಮಹಾಯಾತ್ರೆ 'ರೂಪಾಂತರ', 'ಅಕಬರ', 'ನಿರಾಕರಣ', 'ಪಾಟ್ರೆ', 'ಅಭಿಯಾನ' ಇನ್ನಿತರ ನಾಟಕಗಳನ್ನು ಬರೆದಿದ್ದಾರೆ. ಅವರ ನಾಟಕಗಳು ಆರ್ಯಭಟ ಪ್ರಶಸ್ತಿ, ಗೊರೂರು ಪ್ರಶಸ್ತಿ, ಇನ್ನಿತರ ಪ್ರಶಸ್ತಿಗಳನ್ನು ಪಡೆದಿವೆ. ಅವರ ಅನೇಕ ನಾಟಕಗಳು ಅನೇಕ ಬಾರಿ ರಾಜ್ಯದ ವಿವಿಧೆಡೆಗಳಲ್ಲಿ ಪ್ರದರ್ಶನಗೊಂಡಿವೆ. ದೂರದರ್ಶನ, ಆಕಾಶವಾಣಿಯಲ್ಲೂ ಅವರ ನಾಟಕ ಪ್ರಸಾರವಾಗಿದೆ. ಅವರ ನಾಟಕ 'ಅಭಿಯಾನ'ಕ್ಕೆ 'ಉಗ್ರಾಣ ಮಂಜೇಶ ರಾವ್ ಪ್ರಶಸ್ತಿ' ಮತ್ತು ದುಬೈನ 'ಧ್ವನಿ ಪ್ರತಿಷ್ಠಾನ ಪ್ರಶಸ್ತಿ'ಗಳೂ ಲಭಿಸಿವೆ. ಅವರ ಏಳು ನಾಟಕಗಳ ಸಂಪುಟ 'ಜಯಭಾರತಿ' ಪ್ರಕಟಗೊಂಡಿವೆ. ಅವರ ನಾಟಕ 'ಅಕಬರ' ಹಿಂದಿ ಭಾಷೆಗೆ ಅನುವಾದವಾಗಿದೆ. ಅವರು ಅನುವಾದಕರಾಗಿ ಅವರು ಜಪಾನಿ ಕವಿತೆಗಳ 'ವಸಂತ ಋತು ಮಳೆ' ಮತ್ತು 'ನೆನಪು ನಿರಂತರ' ಕಾದಂಬರಿಗಳನ್ನು ಆಂಗ್ಲ ಭಾಷೆಯಿಂದ ಕನ್ನಡಕ್ಕೆ ಅನುವಾದಿಸಿ ಪ್ರಕಟಿಸಿದ್ದಾರೆ. ಜಾನಪದ ಸಂಗ್ರಾಹಕರಾಗಿ ಉತ್ತರ ಕನ್ನಡದ ತಳವರ್ಗದ 'ಹರಿಕಾಂತರ ಪದಗಳು' ಕೃತಿಯನ್ನು ಸಂಗ್ರಹಿಸಿ ಪ್ರಕಟಿಸಿದ್ದಾರೆ. ಅವರು ಸಹೃದಯ ವಿಮರ್ಶಕರಾಗಿ 'ಅವಲೋಕನ', 'ಸಮುಚಿತ' ಮತ್ತು ಸಮಾಹಿತ' ಗ್ರಂಥಗಳನ್ನು ಪ್ರಕಟಿಸಿದ್ದಾರೆ. ಪಂಡಿತ ಮುಳಿಯ ತಿಮ್ಮಪ್ಪಯ್ಯರವರ ಬಗ್ಗೆ ಅವರು ಬರೆದ ಏಕವ್ಯಕ್ತಿ ಪ್ರಬಂಧ(ಮಾನೋಗ್ರಾಫ್)ವನ್ನು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಕಟಿಸಿದೆ.
ರಂಗಭೂಮಿಯಲ್ಲಿ ನಿರಂತರ ತೊಡಗಿಕೊಂಡಿರುವ ಜಯಪ್ರಕಾಶ ಮಾವಿನಕುಳಿಯವರು ನಟರಾಗಿ, ನಿರ್ದೇಶಕರಾಗಿ, ನಾಟಕ ಸಂಸ್ಥೆಗಳ ಸಂಚಾಲಕರಾಗಿ, ನಾಟಕ ವಿಮರ್ಶಕರಾಗಿ ನಲವತ್ತು ವರೊಷಗಳಿಂದ ರಂಗಭೂಮಿಯ ಬಗ್ಗೆ ನಿರಂತರ ಕೆಲಸ ಮಾಡುತ್ತಾ ಬಂದಿದ್ದಾರೆ. ಅವರು ಬರೆದ ನಾಟಕ ಪ್ರದರ್ಶನಗಳ ವಿಮರ್ಶೆ 'ನಾಟಕ ನೋಡೋಣ ಬಾರೇ ಸಖಿ' ಕೃತಿಗೆ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಮಂಗಳೂರು ಆಕಾಶವಾಣಿಯ ನಾಟಕದ 'ಬಿ ಹೈ' (Be high) ಧ್ವನಿ ಕಲಾವಿದರಾಗಿರುವ ಡಾ. ಮಾವಿನಕುಳಿ ಅವರಿಗೆ ಅವರ ರಂಗಭೂಮಿ ಸಾಧನೆ ಪರಿಗಣಿಸಿ 'ಕರ್ನಾಟಕ ನಾಟಕ ಅಕಾಡೆಮಿ' ಪ್ರಶಸ್ತಿ ನೀಡಿ ಗೌರವಿಸಿದೆ.
ಸಂಪಾದನೆ
[ಬದಲಾಯಿಸಿ]ಹದಿನಾರು ಅತ್ಯಂತ ಮೌಲಿಕ ಗ್ರಂಥಗಳನ್ನು ಸಂಪಾದಿಸಿರುವ ಮಾವಿನಕುಳಿಯವರು ಕನ್ನಡಲೋಕಕ್ಕೆ ಮುಖ್ಯವಾಗಿ ಕನ್ನಡ ಸಾಹಿತ್ಯದ ಸಂಶೋಧಕರಿಗೆ ತುಂಬಾ ಉಪಕಾರ ಮಾಡಿದ್ದಾರೆ. ಇವುಗಳು ಶಿವರಾಮ ಕಾರಂತ, ಅನಂತಮೂರ್ತಿ, ಚಂದ್ರಶೇಖರ ಕಂಬಾರ, ಲಂಕೇಶ, ಪಾ.ವೆಂ. ಆಚಾರ್ಯ, ಎಂ.ಕೆ. ಇಂದಿರಾ, ಬಿ.ವಿ. ಕಾರಂತ, ವಿವೇಕಾನಂದ, ಗಾಂಧಿ ಅವರುಗಳ ಬಗೆಗೆ ಇರುವುದು ಅವರ ಅಪಾರ ಆಸಕ್ತಿಯನ್ನು, ಬದ್ಧತೆಯನ್ನು ಎತ್ತಿ ಹೇಳುತ್ತದೆ. ಅವರು ಸಂಪಾದಿಸಿದ ಪಾ.ವೆಂ. ಆಚಾರ್ಯ, ಎಂ.ಕೆ. ಇಂದಿರಾ ಗ್ರಂಥಗಳನ್ನು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಕಟಿಸಿದೆ.
ಅವರ ಕಥೆಗಳು, ಲೇಖನಗಳು ಕವಿತೆಗಳು ಸಾಹಿತ್ಯ ಅಕಾಡೆಮಿಯ ವಾರ್ಷಿಕ ಸಂಚಿಕೆಗಳಲ್ಲಿ ಸೇರ್ಪಡೆಯಾಗಿದೆ. ಅವರ ಕಥೆ 'ಸೊಳ್ಳೆಗಳು' ಮತ್ತು 'ಅನುಗಾಲವು ಚಿಂತೆ ಜೀವಕೆ' ಆಧಾರಿತ ನಾಟಕಗಳ ರೂಪಾಂತರ 'ಅನುಗಾಲ' ನಾಟಕಕೃತಿಯನ್ನು ಶ್ರೀ ಹಿರೇಮಠ್ ರಚಿಸಿದ್ದಾರೆ. ಸಿನಿಮಾ ವಿಮರ್ಶೆಗಳನ್ನು ಬರೆದಿದ್ದಾರೆ.
ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಮೂರು ವರುಷಗಳು ಪದವಿ ತರಗತಿ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕವಾಗಿದೆ.
ದಸರಾ ಕವಿಗೋಷ್ಠಿ, ಕೊಚಿನ್ನಲ್ಲಿ ನಡೆದ ದಕ್ಷಿಣ ಭಾರತೀಯ ಕವಿಗೋಷ್ಠಿ, ಲಕ್ಕುಂಡಿ ಉತ್ಸವ ಕವಿಗೋಷ್ಠಿ, ಸಾಹಿತ್ಯ ಅಕಾಡೆಮಿ ಕವಿಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ ಮತ್ತು ಅನೇಕ ಕವಿಗೋಷ್ಠಿಗಳ ಅಧ್ಯಕ್ಷತೆ ವಹಿಸಿದ್ದಾರೆ. ಮಣಿಪುರದಲ್ಲಿ ನಡೆದ ಬಹುಭಾಷಾ ಕಥಾಗೋಷ್ಠಿಯ ಜೊತೆಗೆ ಅನೇಕ ಕಥಾ ಶಿಬಿರ, ಕಾರ್ಯಾಗಾರಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಭಾಗವಹಿಸಿದ್ದಾರೆ.
ಸಾಮಾಜಿಕ ಚಟುವಟಿಕೆಗಳು
[ಬದಲಾಯಿಸಿ]2000ರಲ್ಲಿ ಪ್ರಥಮ ಉಡುಪಿ ಜಿಲ್ಲಾ ಶಿಕ್ಷಕ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಹದಿಮೂರನೆಯ ಕಾರ್ಕಳ ತಾಲೂಕು ಸಾಹಿತ್ಯ ಸಮ್ಮೇಳನ(4-2-2017)ದ ಅಧ್ಯಕ್ಷರಾಗಿ ಸಮ್ಮೇಳನ ನಡೆಸಿಕೊಟ್ಟಿದ್ದಾರೆ.
ಕಾಲೇಜು ಶಿಕ್ಷಕ ಸಂಘಟನೆಯಲ್ಲಿ ಮುಂಚೂಣಿಯಲ್ಲಿ ನಿಂತು ಕಾಲೇಜು ಶಿಕ್ಷಕರಿಗೆ ಅವಿರತ ನ್ಯಾಯ ದೊರಕಿಸಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್, ಸೆನೆಟ್, ಅಕಾಡೆಮಿಕ್ ಕೌನ್ಸಿಲ್, ಫೈನಾನ್ಸ್ ಕಮಿಟಿ ಸದಸ್ಯರಾಗಿ ಆಯ್ಕೆಗೊಂಡು ನಿರಂತರ ಶಿಕ್ಷಕರ ಮತ್ತು ಶಿಕ್ಷಣದ ಬಗ್ಗೆ ಚಿಂತನೆ ನಡೆಸಿದ್ದಾರೆ. ಕರ್ನಾಟಕ ನಾಟಕ ಅಕಾಡೆಮಿ, ಎಸ್ಎಸ್ಎಲ್‌ಸಿ ಪರೀಕ್ಷಾ ಮಂಡಳಿ, ಕೇಂದ್ರ ಸಾಹಿತ್ಯ ಅಕಾಡೆಮಿ ಕನ್ನಡ ಭಾಷಾ ಮಂಡಳಿ, ಗ್ರಂಥಾಲಯ ಪ್ರಾಧಿಕಾರಗಳ ಸದಸ್ಯರಾಗಿ ಸೇವೆಸಲ್ಲಿಸಿದ್ದಾರೆ.
ಅನೇಕ ರಂಗಸಂಸ್ಥೆಗಳನ್ನು - ಅಸಂಗತ (ಕುಂದಾಪುರ), ಅಭಿಮುಖ (ಮೂಲ್ಕಿ), ರಂಗಭಾರತಿ (ಮೂಡುಬಿದಿರೆ), ಭುವನರಂಗ (ಕಾರ್ಕಳ), ರಂಗಸಂಸ್ಕೃತಿ (ಕಾರ್ಕಳ), ರಂಗಸಂಗಮ (ಮೂಡುಬಿದಿರೆ) - ಹೋದಕಡೆಯೆಲ್ಲಾ ಸಂಸ್ಥೆಗಳನ್ನು ಕಟ್ಟಿ ರಂಗಭೂಮಿಗಾಗಿ ಶ್ರಮಿಸಿದ್ದಾರೆ. ಸಂಘಟನಾ ಚತುರರಾಗಿರುವ ಡಾ. ಮಾವಿನಕುಳಿಯವರು ದಕ್ಷಿಣ ಕನ್ನಡ ಜಿಲ್ಲೆಯ ಎರಡು ಜಿಲ್ಲಾ ಸಾಹಿತ್ಯ ಸಮ್ಮೇಳನ (ಮೂಲ್ಕಿ ಮತ್ತು ಮೂಡಬಿದಿರೆಯ) ಪ್ರಧಾನ ಕಾರ್ಯದರ್ಶಿಯಾಗಿ, ಎರಡು (ಮಂಗಳೂರು ಮತ್ತು ಮೂಡುಬಿದಿರೆ) ರಾಜ್ಯ ಸಮ್ಮೇಳನಗಳ ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ದುಡಿದಿದ್ದಾರೆ. 'ಶಿವರಾಮ ಕಾರಂತ ಪ್ರತಿಷ್ಠಾನದ ದ ಸ್ಥಾಪಕ ಪ್ರಧಾನ ಕಾರ್ಯದರ್ಶಿಯಾಗಿ ಇಲ್ಲಿಯವರೆಗೂ ಮೂವತ್ತು ವರ್ಷಗಳಿಂದ ದುಡಿಯುತ್ತಲೇ ಇದ್ದಾರೆ. ಈ ಪ್ರತಿಷ್ಠಾನದಿಂದ ಪ್ರತೀ ವರ್ಷ ಇಪ್ಪತ್ತೈದು ಸಾವಿರ ರೂಪಾಯಿಗಳ ಕಾರಂತ ಪ್ರಶಸ್ತಿ, ಕಾರಂತ ಪುರಸ್ಕಾರಗಳನ್ನು ಸುಮಾರು ನಲವತ್ತು ಸಾಹಿತಿಗಳಿಗೆ ನೀಡುತ್ತಾ ಬಂದಿರುವುದು ಉಲ್ಲೇಖಾರ್ಹ.
ಡಾ. ಜಯಪ್ರಕಾಶ ಮಾವಿನಕುಳಿಯವರು ಚಲನಚಿತ್ರ ರಂಗದಲ್ಲಿ ನೀನಾಸಮ್ ಮತ್ತು ಫಿಲಂ ಇನ್ಸ್ಟಿಟ್ಯೂಟ್, ಪೂನಾದಲ್ಲಿ ಶಿಬಿರಾರ್ಥಿಯಾಗಿ ತರಬೇತಿ ಪಡೆದು '೪೦೦' ಮತ್ತು 'ಬ್ರೇಕಿಂಗ್ ನ್ಯೂಸ್' ಎಂಬ ಎರಡು ಸಿನಿಮಾಗಳಲ್ಲಿ ನಟಿಸಿದ್ದಾರೆ.
ಕೃತಿಗಳು
[ಬದಲಾಯಿಸಿ]ನಾಟಕಗಳು
[ಬದಲಾಯಿಸಿ]- ಶೇಪಾಲಿಕಾ(೧೯೮೬)
- ನಿರಾಕರಣ(೧೯೮೬)
- ಪಾರ್ಟಿ(೧೯೮೮)
- ಮಹಾಯಾತ್ರೆ(೧೯೯೧)
- ಕೊಡೆಯಪ್ಪನ ಕಥಾ ಪ್ರಸಂಗ(೧೯೯೫)
- ರೂಪಾಂತರ(೧೯೯೬)
- ಅಕಬರ(೨೦೦೪)
- ಅಭಿಯಾನ(೨೦೦೯)
- ಜಯಭಾರತಿ(ಏಳು ನಾಟಕಗಳ ಸಂಪುಟ)(೨೦೧೩)
ಕವನ ಸಂಕಲನಗಳು
[ಬದಲಾಯಿಸಿ]- ಸಾಗರದಲ್ಲಿ ಸಾಯಂಕಾಲ(೧೯೭೮)
- ಅಶ್ವತ್ಥಾಮ(೧೯೮೪)
- ವಿರಹ ಕಡಲು(೨೦೦೪)
ಕಥಾ ಸಂಕಲನಗಳು
[ಬದಲಾಯಿಸಿ]- ಕಾಲ(೧೯೮೯)
- ಮುಖಗಳು(೧೯೯೨)
- ಹೆಜ್ಜೆ ಮೂಡದ ಹಾದಿಯಲ್ಲಿ(೧೯೯೫)
- ಚಂದಿರನೇತಕೆ ಓಡುವನಮ್ಮ(೨೦೦೪)
- ಬ್ರಹ್ಮರಾಕ್ಷಸ(೨೦೧೬)
ಕಾದಂಬರಿಗಳು
[ಬದಲಾಯಿಸಿ]- ಅಂತರ(೧೯೮೦)
ಸಂಪಾದನೆ
[ಬದಲಾಯಿಸಿ]ಕೃತಿಗಳು
[ಬದಲಾಯಿಸಿ]- ಲಂಕೇಶರ ನಾಟಕಗಳು(೧೯೯೯)
- ನಮ್ಮ ಪ್ರೀತಿಯ ಸುಬ್ಬಣ್ಣ(೧೯೯೮)
- ಕಾರಂತರ ಯುಗಾಂತ(ಶಿವರಾಮ ಕಾರಂತರ ಸ್ಮರಣೆ)(೧೯೯೯)
- ರಂಗ ಜಂಗಮ(ಬಿ. ವಿ. ಕಾರಂತರ ಸ್ಮರಣೆ)(೨೦೦೨)
- ನೇರ ನುಡಿಗೆ ನೂರು ವರುಷಗಳು(ಶಿವರಾಮ ಕಾರಂತರಿಗೆ ನೂರು)(೨೦೦೪)
- ಶಿವಾಪುರ ಕಂಬಾರ ನಮಸ್ಕಾರ(ಚಂದ್ರಶೇಖರ ಕಂಬಾರರ ಕುರಿತು)(೨೦೦೪)
- ಪರಿಸರ ಗೆಳೆಯ ಮುರಾರಿ(೨೦೦೬)
- ಇಂದೂ ಇರುವ ಗಾಂಧಿ(೨೦೦೭)
- Ethics and Human values in Education(೨೦೦೮)
- ತುಳು ನಾಡಿನ ಜೈನ ಶಾಸನಗಳು(ಇತರರೊಡನೆ)(೨೦೦೩)
- ನಮ್ಮ ಪ್ರೀತಿಯ ರಾಮಕೃಷ್ಣ ಹೆಗಡೆ(೨೦೧೧)
- ಶಿಖರ ಶೇಖರ ಕಂಬಾರ(ಕಂಬಾರರ ಕುರಿತು)(೨೦೧೨)
- ವಿವೇಕಾನಂದ ಚಿಂತನ(೨೦೧೪)
- ಅಶಾಂತ ಸಂತ ಅನಂತ(ಅನಂತಮೂರ್ತಿ ಕುರಿತು)(೨೦೧೬)
ಲೇಖನಗಳು
[ಬದಲಾಯಿಸಿ]- ಅವಲೋಕನ(೧೯೮೨)
- ಕಾಲಯಾನ(೨೦೧೪)
- Common Man and Bureaucracy(೧೯೮೮)
- ಹರಿಕಾರಂತರ ಪದಗಳು(೧೯೯೨)
- ಸಮೀಹಿತ(೧೯೯೭)
- ರಂಗ ಪ್ರತಿಸ್ಪಂದನ(೨೦೦೦)
- ಶಿಕ್ಷಕರಿಗೆ ಶುಭವಾಗಲಿ(೨೦೦೭)
- ಬಾರೆ ಗೆಳತಿ ನಾಟಕ ನೋಡೋಣ(೨೦೦೬)
- ಇಲ್ಲಿರುವುದೆಲ್ಲ ಬಿಟ್ಟು(೨೦೦೯)
- ಮಹಿಳೆಯರೇ ಮಹಿಳೆಯರೇ(೨೦೦೯)
- ಕುಂದಾಪುರ ರಾಣಿಯೇ ಬಾಗಿಲು ತೆಗೆಯೇ(೨೦೧೦)
- ಪಂಡಿತ ಮುಳಿಯ ತಿಮ್ಮಪ್ಪಯ್ಯ(೨೦೧೩)
ಸ್ಮರಣ ಸಂಚಿಕೆ
[ಬದಲಾಯಿಸಿ]- ನಂದಿನಿ(ಇತರರೊಡನೆ)
- ಶಾಂಭವಿ(ಇತರರೊಡನೆ)
- ಸಂಗಮ
- ರತ್ನಾಕರ(ಇತರರೊಡನೆ)
- ಚೋಡಾಮಣಿ
- ಸುವರ್ಣ ಸಂಸ್ಕ್ಋತಿ
- ರಂಗಶ್ರೀ(ಇತರರೊಡನೆ)
ಅನುವಾದ
[ಬದಲಾಯಿಸಿ]- ವಸಂತ ಋತು ಮಳೆ(ಜಪಾನ ಕವಿ ಕಾಜುವೋಸಿ ಇಕೆಡಾ ಅವರ ಕವಿತೆಗಳು)
ನಾಟಕ ನಿರ್ದೇಶನ
[ಬದಲಾಯಿಸಿ]- ಅಕಬರ
- ಆಮ್ರಪಾಲಿ
- ಆಸ್ಪೋಟ
- ಎಲ್ಲಾರು ನನ್ನವರೇ
- ಒಂದು ಲೋಕಕಥೆ
- ಕತ್ತಲೆ ದಾರಿ ದೂರ
- ಕೊಡೆಗಳು
- ಕೊಡೆಯಪ್ಪನ ಕಥಾ ಪ್ರಸಂಗ
- ಕೊತ್ವಾಲ
- ಘಾಸಿರಾಮ್
- ಚಿನ್ನದ ಬಂಡಿ
- ಚೋಮ
- ಜೀವನ ನೌಕೆ
- ನಾಯಕ
- ಪ್ರೇತಗಳು
- ಬದುಕ ಮನ್ನಿಸ ಪ್ರಭುವೇ
- ಭಾಗೀರಥಿ
- ಯಯಾತಿ
- ರಂಗನಟ
- ರೂಪಾಂತರ
- ಶೇಫಾಲಿಕ
- ಸೂರ್ಯಾಸ್ತದಿಂದ ಸೂರ್ಯಾಸ್ತದವರೆಗೆ
- ಸೂಳೆ ಮತ್ತು ಸನ್ಯಾಸಿ
ಪ್ರಶಸ್ತಿ ಮತ್ತ ಗೌರವ
[ಬದಲಾಯಿಸಿ]- ನಿರಾಕರಣ- ನಾಟಕ: ಕಾಸರಗೋಡು 'ಯವನಿಕ' ಏರ್ಪಡಿಸಿದ ಅಖಿಲ ಭಾರತ ನಾಟಕ ರಚನೆಯಲ್ಲಿ ಪ್ರಶಸ್ತಿ
- ಮುಖಗಳು- ಭಾರತ ರತ್ನ ಸರ್. ಎಂ. ವಿಶ್ವೇಶ್ವರಯ್ಯ ಸಾಹಿತ್ಯ ಪ್ರಶಸ್ತಿ, ಬೆಂಗಳೂರು
- ಬಾಗಲಕೋಟೆ ನಾರಾಯಣರಾವ್ ವಡೆ ಸಾಹಿತ್ಯ ಪ್ರಶಸ್ತಿ
- ಕರ್ನಾಟಕ ವಿಶ್ವ ವಿದ್ಯಾಲಯ ಧಾರವಾಡ (೧೯೯೫-೧೯೯೬) ಪಠ್ಯ ಪುಸ್ತಕ
- ಆರ್ಯಭಟ ಪ್ರಶಸ್ತಿ, ಬೆಂಗಳೂರು
- 'ಗೊರೂರು ಪ್ರಶಸ್ತಿ', ಬೆಂಗಳೂರು
- ಸದಾನಂದ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ಅಖಿಲ ಭಾರತ ನಾಟಕ ರಚನಾ ಸ್ಪರ್ಧೆಯ ಮೆಚ್ಚುಗೆ
- ಸಂಘಟನೆಗಾಗಿ 'ನಾಗರಿಕ ಶ್ರೇಷ್ಠತಾ ಪ್ರಶಸ್ತಿ' ದೆಹಲಿಯ ಸಿಟಿಜನ್ ಫೋರಂನಿಂದ
- ಕಡೆಂಗೋಡ್ಲು ಶಂಕರಭಟ್ಟ ಕಾವ್ಯ ಪ್ರಶಸ್ತಿ
- ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ
- ಕರ್ನಾಟಕ ನಾಟಕ ಅಕಾಡೆಮಿ ಪುಸ್ತಕ ಪ್ರಶಸ್ತಿ
- ಕರ್ನಾಟಕ ಸಾಹಿತ್ಯ ಅಕಾಡೆಮಿ ಅತ್ಯುತ್ತಮ ಪುಸ್ತಕ ಪ್ರಶಸ್ತಿ-(೨೦೧೬ನೆ ಸಾಲಿನ) ಬ್ರಹ್ಮರಾಕ್ಷಸ ಕಥಾಸಂಕಲನ(ವಿಜಯ ಕರ್ನಾಟಕ-೦೪/೦೩/೨೦೧೮)
- ಮುದ್ದಣ ಕಾವ್ಯ ಪ್ರಶಸ್ತಿ ೨೦೧೮ [೩]
- ೧೨/೧೨/೨೦೧೮ ಮತ್ತು ದಿ. ೧೩/೧೨/೨೦೧೮ರಂದು ಶಿವಮೊಗ್ಗದಲ್ಲಿ ನಡೆದ ಜಿಲ್ಲಾ ೧೩ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
ಚಿತ್ರಗಳು
[ಬದಲಾಯಿಸಿ]-
ಶಿವಮೊಗ್ಗದಲ್ಲಿ ದಿ. ೧೨/೧೨/೨೦೧೮ ರಂದು ನಡೆದ ಶಿವಮೊಗ್ಗ ಜಿಲ್ಲಾ ೧೩ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಸ್ಥಾನದಿಂದ ಜಯಪ್ರಕಾಶ ಮಾವಿನಕುಳಿಯವರು ಭಾಷಣ ಮಾಡುತ್ತಿರುವುದು.
-
ಶಿವಮೊಗ್ಗದಲ್ಲಿ ದಿ. ೧೨/೧೨/೨೦೧೮ ರಂದು ನಡೆದ ಶಿವಮೊಗ್ಗ ಜಿಲ್ಲಾ ೧೩ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಸ್ಥಾನದಿಂದ ಜಯಪ್ರಕಾಶ ಮಾವಿನಕುಳಿಯವರು ಮೆರವಣಿಗೆಯಲ್ಲಿ ಹೊರಟಿರುವುದು.
-
ಶಿವಮೊಗ್ಗದಲ್ಲಿ ದಿ. ೧೨/೧೨/೨೦೧೮ ರಂದು ನಡೆದ ಶಿವಮೊಗ್ಗ ಜಿಲ್ಲಾ ೧೩ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಸ್ಥಾನದಿಂದ ಜಯಪ್ರಕಾಶ ಮಾವಿನಕುಳಿಯವರು ಮಾಡಿದ ಭಾಷಣ.
ಉಲ್ಲೇಖ
[ಬದಲಾಯಿಸಿ]