ಗುಡಿಗಾರ ಸಮಾಜ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗುಡಿಗಾರ ಸಮಾಜ

ಮರಗೆಲಸ ಮಾಡುವವರನ್ನು ಬಡಗಿ-ಆಚಾರಿ ಎಂದು ಕರೆಯುವುದು ವಾಡಿಕೆ. ಆದರೆ, ಶ್ರೀಗಂಧದಮರದ ಕೆತ್ತನೆ ಮಾಡುವವರನ್ನು ಗುಡಿಗಾರರೆಂದು ಕರೆಯುತ್ತಾರೆ. ಕಟ್ಟಿಗೆಯ ಕೆಲಸದೊಂದಿಗೆ ಕೆಲ ಮಟ್ಟಿಗೆ ಬೆಂಡು, ಮಣ್ಣು, ಕೊಂಬು, ದಂತಗಳ ಕೆಲಸವನ್ನೂ ಇವರು ಮಾಡುತ್ತಾರೆ. ಬೆಂಡಿನಿಂದ ಹೂವು, ಮಾಲೆ ತಯಾರಿಸುತ್ತಾರೆ. ಮಣ್ಣಿನಿಂದ ಮೂರ್ತಿ ತಯಾರಿಸುತ್ತಾರೆ. ಕೊಂಬು, ದಂತಗಳಿಂದ ವಿವಿಧ ವಸ್ತುಗಳನ್ನು ರಚಿಸುತ್ತಾರೆ. ಆದರೆ ಹೆಚ್ಚಾಗಿ ಗಂಧದ ಕಟ್ಟಿಗೆಯಿಂದ ಇವರು ತಮ್ಮ ಕೌಶಲವನ್ನು ಸಾಂಪ್ರದಾಯಿಕ ಶೈಲಿಯಲ್ಲಿ ಮೂಡಿಸುತ್ತಾರೆ. ಗಂಧದ ಕೆಲಸ ಮಾಡುವವರಿಗೆ ಸಾಮಾನ್ಯವಾಗಿ ಗುಡಿಗಾರರೆಂದು ಕರೆಯಲಾಗುತ್ತದೆ. ಈ ಗುಡಿಗಾರರನ್ನು ಕೆಲವೆಡೆ ಶೇಟ ಎಂದೂ, ಶೆಟ್ಟಿ ಎಂದೂ ಗುರುತಿಸಿ ಕರೆಯುತ್ತಾರೆ. ಅವರ ಕೆಲಸವನ್ನು ನೋಡಿಯೇ ಅವರನ್ನು ಗುಡಿಗಾರರೆಂದು ಗುರುತಿಸಬೇಕಾದ ಪರಿಸ್ಥಿತಿ ಕೆಲವೆಡೆ ಉಂಟು.

ಮಹಾಭಾರತದ ಆದಿಪರ್ವದಲ್ಲಿ ರಾಕ್ಷಸ ಶಿಲ್ಪಿ ಮಯ, ಪಾಂಡವರಿಗಾಗಿ ಇಂದ್ರಪ್ರಸ್ಥ ಎಂಬಲ್ಲಿ ಸಾಲಂಕೃತವಾದ ಸಭಾಭವನವೊಂದನ್ನು ಕಟ್ಟಿಕೊಟ್ಟನೆಂದು ಹೇಳಲಾಗಿದೆ. ರಾಕ್ಷಸ ಶಿಲ್ಪಿ ಮಯನಂತೆ ಅಲಂಕೃತ ಭವನ ನಿರ್ಮಾಣಕ್ಕೆ ಪ್ರಖ್ಯಾತನಾದವನು ವಿಶ್ವಕರ್ಮ. ಈತ ದೇವಶಿಲ್ಪಿ. ವಿಶ್ವಕರ್ಮ ಎಂಬ ಮಾತಿಗೆ ಬಡಗಿ ಎನ್ನುವ ಅರ್ಥ ಕ್ರಮೇಣ ಬಂತು. ಇಂದಿನ ಬಡಗಿಗಳು ವಿಶ್ವಕರ್ಮನ ವಂಶಸ್ಥರು ನಾವು ಎಂದು ಹೇಳಿಕೊಳ್ಳುತ್ತಾರೆ. ಗುಡಿಗಾರರಲ್ಲಿಯೇ ಮರದ ಕೆತ್ತನೆಯ ಬಾಗಿಲು, ರಥ ತಯಾರಿಕೆ, ದೇವರ ಮಂಟಪ, ಗುಡಿ-ಗೋಪುರ ನಿರ್ಮಾಣ, ಗುಡಿ ಒಳಗಿನ ಕೆತ್ತನೆಯ ಮೇಲ್ಚಾವಣಿ(ceiling), ಛತ್ತು ಕೆತ್ತುವುದರಲ್ಲಿಯೂ ಕೆಲವರು ಸಿದ್ಧಿಪಡೆದಿರುವುದು ಈ ಮಾತಿಗೆ ಸಮರ್ಥನೆಯನ್ನು ಕೊಡುತ್ತದೆ.

ಕನ್ನಡ ನಾಡಿನ ಗುಡಿಗಾರರು ಮೂಲತಃ ಗೋವಾದವರು. ಅರಮನೆಯ ಶೃಂಗಾರಕ್ಕೋ, ಗುಡಿ ನಿರ್ಮಾಣಕ್ಕೋ ವಿಜಯನಗರದ ಅರಸರುಗಳು ಇವರನ್ನು ಕನ್ನಡ ನಾಡಿಗೆ ಆಹ್ವಾನಿಸಿದ್ದಿರಬೇಕು. ಪೋರ್ಚುಗೀಸರು ಗೋವಾದಲ್ಲಿ ವಸಾಹತು ಸ್ಥಾಪಿಸಿದಾಗ ಈ ವಲಸೆಯ ಪ್ರಮಾಣ ಹೆಚ್ಚಿತು. ಇದಕ್ಕೆ ಕಾರಣ ಪೋರ್ಚುಗೀಸರಿಂದ ಮತಾಂತರದ ಒತ್ತಡ ಬಂದಾಗ ಕರ್ನಾಟಕದತ್ತ ವಲಸೆ ಬಂದಿರಬಹುದೆಂದು ಪ್ರತೀತಿ ಇದೆ. ಹೀಗೆ ಕರ್ನಾಟಕಕ್ಕೆ ವಲಸೆ ಬಂದ ಗುಡಿಗಾರರಿಗೆ ರಾಜಶ್ರಯ ದೊರಕುತ್ತಿತ್ತು. ಕುಂಡೋದರಿ, ಮಳಸಾದೇವಿ, ರವಳನಾಥ ಮುಂತಾದ ಹೆಸರಿನ ಗುಡಿಗಾರರ ಕುಲ ದೇವರ ದೇವಸ್ಥಾನಗಳು ಇಂದೂ ಗೋವದಲ್ಲಿರುವುದು ಆ ದೇವ-ದೇವತೆಗಳಿಗೆ ಇವರು ನಡೆದುಕೊಳ್ಳುತ್ತಿರುವುದು ಅವರ ಮೂಲತಾಣ ಗೋವಾ ಆಗಿತ್ತು ಎಂಬುದನ್ನು ಪುಷ್ಟೀಕರಿಸುವಂತಿದೆ.

ಜನಸಂಖ್ಯಾ-ವ್ಯಾಪ್ತಿ[ಬದಲಾಯಿಸಿ]

ಸುಮಾರು ಮೂರುಸಾವಿರದ ಐನೂರು ಜನಸಂಖ್ಯೆ ಮಿತಿಯೊಳಗಿರುವ ಗುಡಿಗಾರರಲ್ಲಿ, ಉದ್ಯೋಗನಿರತ ಹಲವಾರು ಕುಟುಂಬಗಳಿವೆ. ಗುಡಿಗಾರಿಕೆ ಕಸುಬನ್ನು ವ್ಯವಸಾಯವನ್ನೋ, ನೌಕರಿಯನ್ನೋ ಅವಲಂಬಿಸಿ ಬದುಕುತ್ತಿರುವ ಗುಡಿಗಾರರೂ ಇದ್ದಾರೆ. ಆಸ್ಟ್ರೇಲಿಯಾ, ಒಮನ್, ಕತಾರ್, ಅರಬ್ ರಾಷ್ಟ್ರಗಳು, ಉನೈಟೆಡ್ ಕಿಂಗ್ಡಮ್, ಅಬುದಾಬಿಯಲ್ಲಿ ಗುಡಿಗಾರರು ನೆಲೆಸಿರುತ್ತಾರೆ. ಬೆಂಗಳೂರು, ಮುಂಬೈನಲ್ಲಿ ನೆಲೆಸಿರುವ ಹೆಚ್ಚಿನ ಗುಡಿಗಾರ ಕುಟುಂಬಗಳು ಖಾಸಗಿ ಕಂಪನಿಗಳಲ್ಲಿ ನೌಕರಿಯಲ್ಲಿದ್ದು ಇವುರು ಗುಡಿಗಾರಿಕೆಯ ಕಸುಬಿನಲ್ಲಿ ತೊಡಗಿರುವುದಿಲ್ಲ. ಗುಡಿಗಾರರ ಮೂಲ ಸ್ಥಳವಾದ ಶಿವಮೊಗ್ಗ ಜಿಲ್ಲೆಯ ಸಾಗರ, ಸೊರಬ, ಉತ್ತರ ಕನ್ನಡ ಜಿಲ್ಲೆಯ ಸಿರ್ಸಿ, ಯಲ್ಲಾಪುರ, ಸಿದ್ಧಾಪುರ, ಕುಮಟಾ, ಹೊನ್ನಾವರ, ಭಟ್ಕಳ ಭಾಗಗಳಲ್ಲಿ ನೆಲೆಸಿರುವ ಗುಡಿಗಾರರು ತಮ್ಮ ಶ್ರೀಗಂಧದ ಕೆತ್ತನೆ, ಮರದ ಬಾಗಿಲುಗಳ ಕೆತ್ತನೆ, ಬೆಂಡಿನ ಕೆಲಸ, ಮಣ್ಣಿನ ಮತ್ತು ಕಲ್ಲಿನ ಮೂರ್ತಿಗಳನ್ನು ತಯಾರಿಸುವ ಕೆಲಸವನ್ನು ಈಗಲೂ ನಡೆಸಿಕೊಂಡು ಬರುತ್ತಿದ್ದಾರೆ. ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಜಂಬೆಹಳ್ಳಿ, ಸಿರ್ಸಿತಾಲೂಕಿನ ಸೋಂದಾ, ಚವತಿ, ಇಸಳೂರು, ಎಕ್ಕಂಬಿ, ಸಿದ್ಧಾಪುರ ತಾಲೂಕಿನ ಬಿಳಗಿಯಲ್ಲಿ ನೆಲೆಸಿರುವ ಗುಡಿಗಾರರು ಗುಡಿಗಾರಿಕೆಯ ವೃತ್ತಿಯಲ್ಲಿ ಕೃಷಿಯನ್ನು ನಡೆಸಿಕೊಂಡು ಬರುತ್ತಿದ್ದಾರೆ. ಕುಮಟಾ, ಹೊನ್ನಾವರ ಭಾಗಗಳಲ್ಲಿ ಇವರನ್ನು ಶೇಟ-ಶೆಟ್ಟಿ ಎಂದು ಕರೆಯಲಾಗುತ್ತದೆ. ಇವರ ಮನಮಾತು ಕೊಂಕಣಿ. ಆದರೆ ಕೊಂಕಣಿ ಮನೆಮಾತಾಗಿರುವ ಗೌಡ ಸಾರಸ್ವತರಿಗೂ ಇವರಿಗೂ ಆಚಾರ ವಿಚಾರಗಳಲ್ಲಿ ತುಂಬಾ ವ್ಯತ್ಯಾಸವಿದೆ. ಇವರ ಹಬ್ಬ ಹರಿದಿನಗಳನ್ನೂ, ಮುಂಜಿ-ಮದುವೆ ಮುಂತಾದವುಗಳನ್ನೂ ನಡೆಸಲು ಹವ್ಯಕ ಪುರೋಹಿತರೇ ಆಗಬೇಕೆ ಹೊರತು ಕೊಂಕಣಿ ಭಟ್ಟರನ್ನು ಬಳಸುವುದಿಲ್ಲ. ಸಾಗರ, ಸೊರಬಗಳಲ್ಲಿ ವಾಸಿಸುತ್ತಿರುವ ಗುಡಿಗಾರರ ಮಾತೃಭಾಷೆ ಕನ್ನಡ. ಕೆಲವಡೆ ಇವರನ್ನು ಗೌಡ ಚಿತ್ರಕರೆಂಬ ಹೆಸರಿನಿಂದಲೂ ಕರೆಯುತ್ತಾರೆ.

ದೇವರ-ಮಠ[ಬದಲಾಯಿಸಿ]

ಗುಡಿಗಾರರು ಅಪಾರ ದೈವಭಕ್ತರು. ಇವರು ಶೈವ ಮಥಸ್ತರು. ದೇವತಾರಾಧನೆಗೆ ಇವರಲ್ಲಿ ಪ್ರಾಶಸ್ತ್ಯವಿದೆ. ಕುಂಡೋದರಿ, ಮಾಳಸ, ರವಳನಾಥ, ಇವರ ಕುಲದೇವರು. ವಿಶ್ವಕರ್ಮನನ್ನು ಪೂಜಿಸುತ್ತಾರೆ. ಈ ಕುಲದೇವತೆಗಳ ದೇವಾಯತನಗಳು ಗೋವಾದಲ್ಲಿದೆ. ಇವರ ಗುರುಮಠ ಶೃಂಗೇರಿ. ಶೃಂಗೇರಿ ಮಠಕ್ಕೆ ನಡೆದುಕೊಳ್ಳುತ್ತಾರೆ. ಹಬ್ಬ-ಹರಿದಿನಗಳಲ್ಲಿ ಮುಂಜಿ-ಮದುವೆ ಮುಂತಾದ ಶುಭಕಾರ್ಯಗಳಲ್ಲಿ ಹೆಂಗಸರು ವಿಶೇಷವಾಗಿ ಪಾತ್ರವಹಿಸುತ್ತಾರೆ.

ಗೋತ್ರಗಳು[ಬದಲಾಯಿಸಿ]

ಬ್ರಾಹ್ಮಣರಂತೆ ಇವರೂ ವಿವಿಧ ಗೋತ್ರಗಳನ್ನು ಹೊಂದಿದ್ದಾರೆ. ಸಂಧ್ಯಾವಂದನೆ ವೇಳೆ ಗೋತ್ರ ಪ್ರವರ ರೂಢಿಯಲ್ಲಿದೆ. ಭಾರಧ್ವಾಜ್‌, ವಸಿಷ್ಟ, ವಿಶ್ವಾಮಿತ್ರ, ಗೌತಮ, ಕಶ್ಯಪ, ಕೌಂಡಿಣ್ಯ, ಕೌಶಿಕ ಮುಂತಾದ ಗೋತ್ರದವರು ಇವರು. ಇವರಲ್ಲಿ ಸಗೋತ್ರ ವಿವಾಹ ನಿಷೇಧ. ಗುಡಿಗಾರ ಹೆಂಗಸರು ಕೇವಲ ಅಡುಗೆ, ಮನೆ ವಾರ್ತೆಗಳಲ್ಲಿ ಮಾತ್ರ ತಮ್ಮ ದಿನ ಕಳೆಯುವವರಲ್ಲ. ಅವುಗಳ ಜೊತೆಗೆ ಗಂಡಸರ ಕೆಲಸದಲ್ಲಿ ನೆರವು ನೀಡುತ್ತಾರೆ. ಬೆಂಡಿನ ಕೆಲಸ, ಮೂರ್ತಿ, ಪೆಟ್ಟಿಗೆಗಳಿಗೆ ಹೊಳಪು ನೀಡುವಿಕೆ ಮುಂತಾದವುಗಳಲ್ಲಿ ಹೆಂಗಸರದೇ ಪಾತ್ರ ಹೆಚ್ಚು. ಗುಡಿಗಾರ ಹೆಂಗಸರು ಚುರುಕು ಬುದ್ಧಿಯವರು. ಕೈಗಳೂ ಅಷ್ಟೆ ಕೆಲಸದಲ್ಲಿ ತುಂಬಾ ಚುರುಕು.

ಹವ್ಯಕ ಸಂಪ್ರದಾಯ[ಬದಲಾಯಿಸಿ]

ಮಲೆನಾಡು ಪ್ರದೇಶದಲ್ಲಿ ನೆಲೆ ನಿಂತಿರುವ ಹವ್ಯಕರ ಸಂಪ್ರದಾಯಕ್ಕೂ ಗುಡಿಗಾರರ ಸಂಪ್ರದಾಯಕ್ಕೂ ತೀರ ಹತ್ತಿರದ ಸಂಬಂಧ. ಬಹಳಷ್ಟು ಶಾಸ್ತ್ರಾಚರಣೆ ಹವ್ಯಕರಂತೆಯೇ ಇದೆ. ಹವ್ಯಕರು ಆಚರಿಸುವ ಹಬ್ಬ-ಹರಿದಿನಗಳೇ ಗುಡಿಗಾರರ ಹಬ್ಬಗಳು. ಗುಡಿಗಾರರ ಮದುವೆ-ಮುಂಜಿ ಮುಂತಾದವನ್ನು ನಡೆಸಿಕೊಡುವವರೂ ಹವ್ಯಕ ಪುರೋಹಿತರೇ. ಹವ್ಯಕರು ಹೆಚ್ಚಾಗಿರುವ ಸಿರ್ಸಿ, ಸಿದ್ಧಾಪುರ, ಕುಮಟಾ, ಸಾಗರ, ಸೊರಬಗಳಲ್ಲಿ ಗುಡಿಗಾರರು ನೆಲೆಸಿದ್ದು, ಹವ್ಯಕರೊಂದಿಗೆ ನಿಕಟ ಸಂಪರ್ಕ ಬಂದಿರಬಹುದಾಗಿದೆ.

ಮದುವೆ-ಮುಂಜಿ[ಬದಲಾಯಿಸಿ]

ಗುಡಿಗಾರರು ಶೈವ ಮಥಸ್ತರು. ಜನಿವಾರ ಧರಿಸುತ್ತಾರೆ. ಉಪನಯನ ಸಂಸ್ಕಾರ ನಡೆಸುವವರೂ ಹವ್ಯಕ ಪುರೋಹಿತರೇ. ತಂದೆ ಗಾಯತ್ರಿ ಮಂತ್ರ ಉಪದೇಶಿಸುತ್ತಾರೆ. ಉಪನಯನವಾಗದೆ ಮದುವೆ ನಿಶಿದ್ಧ. ಹಿಂದೆ ಹುಡುಗ ಒಂಭತ್ತು ಅಥವಾ ಹತ್ತು ವರುಷದವನಾಗಿದ್ದಾಗಲೇ ಉಪನಯನ ಮಾಡುತ್ತಿದ್ದರು. ಆದರೆ ಈಗ ಮದುವೆಯ ಮುಂಚಿನ ದಿನವೂ ಮದುಮಗ 'ವಟು'ವಾಗುವುದೂ ಉಂಟು.

ಹೆಣ್ಣು ಮಕ್ಕಳಿಗೆ ಉಪನಯನ ಸಂಸ್ಕರಾವಿಲ್ಲ. ಮದುವೆ ಪದ್ಧತಿ ಪೂರ್ಣವಾಗಿ ಹವ್ಯಕರಂತೆಯೇ ಸಪ್ತಪದಿ, ಮೆಟ್ಟಕ್ಕಿ, ಲಾಜಾಹೋಮ, ಅರುಂಧತಿ ದರ್ಶನ, ಫಲಶೋಭನ, ಹವನ ಎಲ್ಲವೂ ಇವರಲ್ಲಿ ಉಂಟು. ಹವ್ಯಕರಂತೆಯೇ ಹುಡುಗಿಯ ಸೋದರಮಾವನಿಗೆ ಇವರಲ್ಲಿಯೂ ಪ್ರಾಮುಖ್ಯತೆ. ಹುಡುಗಿಯನ್ನು ಧಾರೆಯೆರೆದು ಕೊಡಲು ವಿವಾಹಮಂಟಪಕ್ಕೆ ಕರೆತರುವವನೂ ಸೋದರಮಾವನೇ. ಒಂದು ವ್ಯತ್ಯಾಸವೆಂದರೆ ಈತ ದೀಪಧಾರಿಯಾಗಿರುತ್ತಾನೆ. ಹವ್ಯಕರಲ್ಲಿ ಸೋದರಮಾವ ದೀಪ ಹಿಡಿಯುವುದಿಲ್ಲ. ಥಟ್ಟನೆ ನೋಡಿದಾಗ ಹವ್ಯಕ ಸಮಾಜದ ವಿವಾಹದಂತೆಯೇ ಗುಡಿಗಾರರ ವಿವಾಹ ಕಾರ್ಯಕ್ರಮ ತೋರುತ್ತದೆ. ಈಗೀಗ ಸಣ್ಣ ಪುಟ್ಟ ವ್ಯತ್ಯಾಸಗಳು ಆಗುತ್ತಿವೆ. ಗುಡಿಗಾರರ ಹೆಂಗಸರು ಮದುವೆ-ಮುಂಜಿ ಮುಂತಾದ ವಿಶೇಷ ಸಂದರ್ಭಗಳಲ್ಲಿ ಹದಿನೆಂಟು ಮೊಳಗಳ ಸೀರೆಯನ್ನು ದೇಶಸ್ಥ ಬ್ರಾಹ್ಮಣ ಹೆಂಗಸರಂತೆ ಉಡುತ್ತಾರೆ. ಈ ಒಂದು ಅಂಶ ಇದು ಗುಡಿಗಾರರ ಮದುವೆ ಮನೆಯೆಂದು ಗುರುತಿಸಲು ನೆರವಾಗುತ್ತದೆ.

ಗುಡಿಗಾರರು ತಂದೆ-ತಾಯಿ ನಿಶ್ಚಯಿಸಿದವರನ್ನು ಒಪ್ಪಿ ಮದುವೆಯಾಗುತ್ತಿದ್ದರು. ಈಗ ಕಾಲ ಬದಲಾಗಿದೆ. ಉಳಿದ ಸಮಾಜದವರ ಮೇಲೆ ಹೊಸಗಾಳಿ ಬೀಸುತ್ತಿರುವಂತೆಯೇ ಗುಡಿಗಾರರ ಮೇಲೆಯೂ ಹೊಸಗಾಳಿಯ ಪ್ರಭಾವ ಹೆಚ್ಚುತ್ತಿದೆ. ಅಂತರ್ಜಾತಿಯ ವಿವಾಹಗಳೂ ಕೆಲವು ನಡೆದಿವೆ.

ಶ್ರೀಗಂಧ[ಬದಲಾಯಿಸಿ]

ಗುಡಿಗಾರಿಕೆ ಪುಡಿ ಮಾಡುವುದು ಶ್ರೀಗಂಧದ ಕೊರಡಿನಿಂದ. ಗುಡಿಗಾರರ ಕೈಚಳಕದಿಂದ, ಚಾಣಗಳ ಚುರುಕು ತಿರುಹುವಿನಿಂದ ಕೊರಡು ಕೊನರುತ್ತದೆ. ಭಾರತದಲ್ಲಿ ಬಹಳ ಪ್ರಾಚೀನ ಕಾಲದಿಂದಲೂ ಶ್ರೀಗಂಧ ಬಳಕೆಯಲ್ಲಿದೆ. ಮಲಯ ಪರ್ವತವೆಂದು ಪ್ರಚಲಿತವಾಗಿರುವ ಪೂರ್ವ-ಪಶ್ಚಿಮ ಘಟ್ಟಗಳಲ್ಲಿ ಶ್ರೀಗಂಧದ ಮರ ವಿಶೇಷವಾಗಿ ಬೆಳೆಯುತ್ತಿತ್ತೆಂದು ಪ್ರತೀತಿ. ಕವಿಸಮಯವಾಗಿರುವ ಮಲಯಮಾರುತಕ್ಕೆ ಸುಗಂಧ ಬಂದಿರುವುದು ಆ ಪ್ರದೇಶದಲ್ಲಿನ ಗಂಧದ ಮರಗಳಿಂದಲೇ.

ಶ್ರೀಗಂಧದ ಮರ 'ಸ್ಯಾಂಟಲೇಸೀ' ಕುಟುಂಬಕ್ಕೆ ಸೇರಿದೆ. ಸ್ಯಾಂಟಲಂ ಅಲ್ಬಂ ಎಂಬುದು ಇದರ ವೈಜ್ಞಾನಿಕ ಹೆಸರು. ಇದು ಕರ್ನಾಟಕದ ರಾಜವೃಕ್ಷ. ಅನಧಿಕೃತವಾಗಿ ಗಂಧದ ಮರ ಕಡಿಯುವ ಹಾಗಿಲ್ಲ. ಸರ್ಕಾರದ ರಕ್ಷಿತ ಸಂಪತ್ತು ಅದು. ಗಂಧದ ಮರ ಅರ್ಧ ಪರಾವಲಂಬಿ ಸಸ್ಯ. ತನ್ನ ಸುತ್ತಮುತ್ತ ಬೆಳೆಯುವ ಇತರ ಜಾತಿಯ ಗಿಡಮರಗಳ ಬೇರುಗಳೊಂದಿಗೆ ತನ್ನ ಬೇರುಗಳ ಮೂಲಕ ಸಂಪರ್ಕ ಕಲ್ಪಿಸಿಕೊಂಡು, ವಿಶೇಷ ರೀತಿಯ ಹೀರು ಬೇರುಗಳನ್ನು ಆಶ್ರಯದಾತ ಸಸ್ಯಗಳ ಬೇರುಗಳೊಳಕ್ಕೆ ಕಳುಹಿಸಿ ತನ್ನ ಬೆಳವಣಿಗೆಗೆ ಅಗತ್ಯವಾದ ಖನಿಜಾಂಶಗಳನ್ನು ಹೀರಿಕೊಳ್ಳುತ್ತದೆ. ಹೀಗೆ ಹೀರಿಕೊಂಡ ಖನಿಜಗಳನ್ನು ಬಳಸಿಕೊಂಡು ತನಗೆ ಬೇಕಾದ ಆಹಾರ ಪದಾರ್ಥಗಳನ್ನು ತನ್ನ ಹಸಿರೆಲೆಗಳ ಸಹಾಯದಿಂದ ದ್ಯುತಿಸಂಶ್ಲೇಷಣೆ ಕ್ರಿಯೆಯ ಮೂಲಕ ತಯಾರಿಸುವ ಸಾಮರ್ಥ್ಯ ಮಾತ್ರ ಇದಕ್ಕೆ ಇದೆ.

30-40 ಅಡಿ ಎತ್ತರದವರೆಗೂ ಗಂಧದ ಮರ ಬೆಳೆಯುತ್ತದೆ. ನೆಲ ಉತ್ತಮವಾಗಿದ್ದರೆ 60ಅಡಿ ಎತ್ತರದವರೆಗೂ ಅದು ಬೆಳೆಯುತ್ತದೆ. ಗಂಧದ ಮುಖ್ಯ ಕಾಂಡದ ಸುತ್ತಳತೆ 3ರಿಂದ 3.5ಅಡಿ ಇರುತ್ತದೆ. ಗಂಧದ ಎಲೆಗಳು ತುಂಬಾ ಚಿಕ್ಕವು; ಒತ್ತೊತ್ತಾಗಿ ಇರುತ್ತವೆ. ಶ್ರೀಗಂಧದ ಮರವು ಉತ್ತಮ ಬೆಳವಣಿಗೆಗೊಂಡು ಕೆತ್ತನೆಯ ಕೆಲಸದ ಉಪಯೋಗಕ್ಕೆ ಬರಬೇಕಾದರೆ ಕನಿಷ್ಟ 50 ರಿಂದ 60 ವರ್ಷಗಳು ಬೇಕು. ಗಂಧದ ಚೇಗು ಎಂದರೆ ತಿರುಳು, ಕೆತ್ತನೆಗೆ ಬಹಳ ಯೋಗ್ಯ ಎನ್ನಿಸಿದೆ. ಇದರ ಮೃದುತ್ವ ಹಾಗೂ ಸುವಾಸನೆ ಈ ಮರವನ್ನು ಗುಡಿಗಾರರು ಆಯ್ದುಕೊಳ್ಳಲು ಕಾರಣವಾಗಿರಬೇಕು. ಜೊತೆಗೆ ಇದು ತುಂಬಾ ನೆಣಪು. ಬೇರೆ ಮರಗಳಂತೆ ಗಂಧದ ಚಕ್ಕೆ ಏಳುವುದೂ ಕಡಿಮೆ. ಗುಡಿಗಾರರಿಗೆ ಸರ್ಕಾರ ಶ್ರೀಗಂಧದ ಕೆತ್ತನೆಯ ಮತ್ತು ಇತರ ಮರಗಳಿಂದ ತಯಾರಾದ ಕರಕುಶಲ ಕಲಾವಸ್ತುಗಳನ್ನು ಖರೀದಿಸಲು ಮತ್ತು ಮಾರಾಟ ಮಾಡಲು ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮವನ್ನು ತೆರೆದಿದೆ. ಇದರ ಕೇಂದ್ರ ಕಛೇರಿ ಬೆಂಗಳೂರಿನಲ್ಲಿದ್ದು, ಶಾಖೆಗಳು (ಕ್ರಾಫ್ಟ್ ಕಾಂಪ್ಲೆಕ್ಸ್) ಮೈಸೂರು, ಕೆತ್ತನೆ, ಸಾಗರ, ಸೊರಬ, ಸಿರ್ಸಿ, ಕುಮಟಾಗಳಲ್ಲಿದ್ದು ಪಂಡಿತರ ಪದ್ಧತಿಯ ಮೂಲಕ ಶ್ರೀಗಂಧದ ಮರದ ನಿಗಮವನ್ನು ಪೂರೈಸುತ್ತದೆ. ಗುಡಿಗಾರ ಕಸುಬಿನವನೆಂಬುದರ ಬಗ್ಗೆ ಪುರಾವೆ ನೀಡಿದರೆ ಅಂಥ ವ್ಯಕ್ತಿಗೆ ಗುರುತು ಚೀಟಿ ನೀಡಿ ನಿಗಮದಲ್ಲಿ ನೊಂದಾಯಿಸಿಕೊಂಡು ಅವರಿಗೆ ಪ್ರತಿ ತಿಂಗಳೂ ಈ ಗುರುತು ಚೀಟಿಯ ಮೂಲಕ ನಿರ್ದಿಷ್ಟ ಪಡಿಸಿದ ಪ್ರಮಾಣದ ಗಂಧದ ಕಟ್ಟಿಗೆ ನೀಡಲಾಗುತ್ತದೆ. ಈ ಕಲಾಕಾರಿಗೆ ವಾಸಿಸಲು ಮನೆಯನ್ನು (ವಸತಿ ಕಾರ್ಯಗಾರ) ಈ ಕಾಂಪ್ಲೆಕ್ಸ್ ಗಳ ಆವರಣದಲ್ಲಿ ನಿಗಮವು ನಿರ್ಮಿಸಿಕೊಟ್ಟಿದ. ಮೊದಲು ತಾವು ಮಾಡಬಯಸಿದ ಕಲಾಕೃತಿಯ ಅಳತೆಗನುಗುಣವಾಗಿ ಗುಡಿಗಾರರು ಗಂಧದ ತುಂಡನ್ನು ಕತ್ತರಿಸಿಕೊಳ್ಳುತ್ತಾರೆ. ಆನಂತರ ಆ ತುಂಡಿಗೆ ಸಾಮಾನ್ಯ ಕಲಾಕೃತಿಯ ರೂಪ ಕೊಟ್ಟು ಕೆತ್ತಲಾರಂಭಿಸುತ್ತಾರೆ. ಆಕಾರ ಮೂಡಿದ ನಂತರ ಸೂಕ್ಷ್ಮ ಕೆತ್ತನೆಯಿಂದ ತಿದ್ದುತ್ತಾರೆ. ಕೊನೆಯಲ್ಲಿ ಉಸುಕಿನ ಕಾಗದ, ಮೇಣದ ಪಾಲೀಶುಗಳಿಂದ ಹೊಳಪು ಕೊಡುತ್ತಾರೆ. ತೆಳುವಾದ ಭಾಗವನ್ನು ಪರಸ್ಪರ ಜೋಡಿಸಲು ಫೆವಿಕಾಲ್ ಉಪಯೋಗಿಸುತ್ತಾರೆ. ಪೆಟ್ಟಿಗೆಯ ಬಾಹ್ಯಜೋಡಣೆಗೂ, ಅಲಂಕಾರ ಚಿತ್ರಣದ ಜೋಡಣೆಗೂ ಫೆವಿಕಾಲ್ ಉಪಯೋಗಿಸುವುದುಂಟು.[೧]

ಕೊರಡಿನಿಂದ ಕೊನರುವ ವಸ್ತುಗಳು[ಬದಲಾಯಿಸಿ]

ಗುಡಿಗಾರರ ಕೃತಿಗಳು, ವಾಸ್ತುಶಿಲ್ಪ ಮತ್ತು ಶಿಲ್ಪದ ಸಾಂಪ್ರದಾಯಿಕ ಶೈಲಿಯನ್ನು ಹೋಲುತ್ತವೆ. ಮೂರ್ತಿ, ಪೆಟ್ಟಿಗೆ, ಕಲಾತ್ಮಕ ವಸ್ತುಗಳು, ಕೈ ಚಾಮರ, ಗುಂಡಿ, ಜಪಮಣಿ, ಮಂಟಪ, ಕಾಗದ ಕತ್ತರಿಸುವ ಚಾಕುಗಳು, ವಿಸಿಟಿಂಗ್ ಕಾರ್ಡುಗಳು, ಆನೆ ಇತ್ಯಾದಿ ಸಣ್ಣ ವಸ್ತುಗಳಿಂದ ಕುಡುಗೋಲು, ಲಟ್ಟಣಿಕೆ, ಮಂದಾಸನ, ತೇರು, ಬಾಗಿಲ ಚೌಕಟ್ಟು, ರಥಗಳ ಮಾದರಿ ಹೀಗೆ ಹಲವು ಬಗೆಯ ವಸ್ತುಗಳನ್ನು ಇವರು ಕೆತ್ತುತ್ತಾರೆ. ನಾಲ್ಕು ಇಂಚಿನಿಂದ ಹಿಡಿದು ಎರಡು ಅಡಿ ಎತ್ತರದ ಮೂರ್ತಿ ಹಾಗೂ ಮರದ ಪೆಟ್ಟಿಗೆಗಳನ್ನು ಇವರು ತಯಾರಿಸುತ್ತಾರೆ. ಆದರೆ, ಇವೆಲ್ಲವೂ ಯಾವುದೇ ಆಧುನಿಕ ಯಂತ್ರದ ಸಹಾಯವಿಲ್ಲದೆ ಕೇವಲ ಕೈಯಿಂದಲೇ ತಯಾರಾಗುತ್ತವೆ. ಸೂಕ್ಷ್ಮವಾದ ಕುಸುರಿ ಕೆಲಸದಂಥವನ್ನೂ ಸಹ ಚಾಣದ ಸಹಾಯದಿಂದ ಇವರು ಕೈ ಮೂಲಕ ನಡೆಸುತ್ತಾರೆ. ಅಗಾಧ ತಾಳ್ಮೆ, ಸೂಕ್ಷ್ಟದೃಷ್ಟಿ, ಚಚ್ಚರದ ಕಾರ್ಯ ಇದು. ಇಷ್ಟೂ ಗುಣಗಳನ್ನು ಗುಡಿಗಾರರು ಹೊಂದಿದ್ದಾರೆ.

ಪೌರಾಣಿಕ ಮೂರ್ತಿಗಳು[ಬದಲಾಯಿಸಿ]

ಗುಡಿಗಾರರು ತಾವು ರಚಿಸುವ ಮೂರ್ತಿಗಳಿಗೆ ಮೂಲ ಆಕರವಾಗಿ ಮಹಾಭಾರತ, ರಾಮಾಯಣ ಹಾಗೂ ಹಿಂದೂ ಪುರಾಣಗಳನ್ನು ಇರಿಸಿಕೊಂಡಿದ್ದಾರೆ. ಗೀತೋಪದೇಶ, ರಾಧಾಕೃಷ್ಣ, ತಾಂಡವನೃತ್ಯ, ದಶಾವತಾರ, ದತ್ತಾತ್ರೆಯ, ಶೇಷಶಾಯಿ, ಕರ್ಣ-ಕುಂತಿ, ಅಶ್ವಮೇಧ ಹೀಗೆ ಹತ್ತಾರು ಪೌರಾಣಿಕ ಪರಿಕಲ್ಪನೆಗಳು ಮೂರ್ತಿ ರೂಪವಾಗಿ ಮೈತಳೆಯುತ್ತವೆ, ಈಗೀನ ಆಧುನಿಕ ಬೇಡಿಕೆಗಳನ್ನು ಗಮನಿಸಿ ಹೊಸ ಹೊಸ ವಸ್ತುಗಳನ್ನೂ ಸಿದ್ಧಪಡಿಸುತ್ತಿದ್ದಾರೆ.

ಒಂದು ಚೌಕಟ್ಟು, ಚೌಕಟ್ಟಿನೊಳಗೆ ಮೂವರು ಸಂಭಾಷಣೆಯಲ್ಲಿ ನಿರತರಾಗಿದ್ದಾರೆ. ಅವರು- ಡಾ. ರಾಧಾಕೃಷ್ಣನ್, ರಾಜೇಂದ್ರ ಪ್ರಸಾದ್ ಹಾಗೂ ಪಂಡಿತ ಜವಹರಲಾಲ್‌ ನೆಹರು, ಅವರ ಹಿನ್ನೆಲೆಯಲ್ಲಿ ಅಖಂಡ ಭಾರತದ ಚಿತ್ರ. ಗಾಂಧೀಜಿಯವರ ಚಿತ್ರ. ರಾಷ್ಟ್ರಧ್ವಜ, ರಾಷ್ಟ್ರಚಿಹ್ನೆ. ಕೆತ್ತನೆಗೆ ಕೊಟ್ಟ ಹೆಸರು 'ಭಾರತದ ಭಾಗ್ಯವಿಧಾತರು'. ಈ ಚಿತ್ರ ಹಲವೆಡೆ ಪ್ರದರ್ಶಿತವಾಗಿ ಪ್ರಶಂಸಿಸಲ್ಪಟ್ಟಿದೆ. ಹರಿಜನ ಯುವತಿಯೋರ್ವಳ ಹೆಗಲಮೇಲೆ ಕೈಯಿಟ್ಟ ಗಾಂಧೀಜಿಯ ಚಿತ್ರ. ಇವು ಆಧುನಿಕ ಬಗೆಗೆ ಒಂದೆರಡು ಉದಾಹರಣೆಗಳು. ಸಮಕಾಲೀನ ವಿಚಾರಗಳು ಇಂದು ಕೊರಡಿನಲ್ಲಿ ಕೊನರುತ್ತವೆ. ಸಿನಿಮಾ ನಟರುಗಳೂ ಗಂಧದಲ್ಲಿ ಮೂಡಿ ಬರುತ್ತಿದ್ದಾರೆ.

ಹತಾರಗಳು[ಬದಲಾಯಿಸಿ]

ಇವರು ಕೆತ್ತನೆಗೆ ಉಪಯೋಗಿಸುವ ಹತಾರಗಳು ಹಲವು. ಮರ ಕಟ್ಟಿಗೆಯ ಕೆಲಸ ಮಾಡುವ ಆಚಾರಿಗಳು ಉಪಯೋಗಿಸುವ ಅರಗಳು ಹಲವು. ಡ್ರಿಲ್ ಮಿಶನ್, ಸುತ್ತಿಗೆ, ಹಲವು ಬಗೆಯ ಗರಗಸ, ಉಜ್ಜುಗೊರಡು ಇಕ್ಕಳ, ಮಟ್ಟ ಮುಂತಾದವನ್ನು ಇವರೂ ಉಪಯೋಗಿಸುತ್ತಾರೆ. ಆದರೆ ಗುಡಿಗಾರರ ಕೆಲಸ, ಕೈಚಳಕ ಸಾಗುವುದು ಹೆಚ್ಚಾಗಿ ವಿವಿಧ ಚಾಣಗಳಿಂದ; ಉಳಿಗಳಿಂದ-ಬಾಗಿನಚಾಣ, ಪಟ್ಟಚಾಣ, ಕಡೀಚಾಣ, ಕೊಚ್ಚಿಗಿಚಾಣ, ಮೂಲೆಚಾಣ, ಚೂರಿಚಾಣ, ಕೊರೆಚಾಣ ಹೀಗೆ ಹಲವು ಬಗೆಯ ಚಾಣಗಳನ್ನು ಗುಡಿಗಾರರು ಬಳಸುತ್ತಾರೆ. ಈ ಚಾಣಗಳ ಬಾಯಿ ಅರ್ಧ ನೂಲಿನಿಂದ 3/4 ಇಂಚಿನವರೆಗೆ ಇರುತ್ತದೆ.ಗುಡಿಗಾರರು ಉಪಯೋಗಿಸುವ ಉಳಿಗಳಲ್ಲಿಯೂ ಹಲವು ಬಗೆಗಳಿವೆ. ಮೊನೆ ಉಳಿ, ಕಡಿ ಉಳಿ, ಬಾಗಿದ ಉಳಿ, ಮೂಲೆ ಉಳಿ, ಕೊರೆ ಉಳಿ, ಇತ್ಯಾದಿ. ಇವು ಮುಕ್ಕಾಲು ಇಂಚಿನಿಂದ ನಾಲ್ಕು ಇಂಚಿನವರೆಗೆ ಬಾಯಿ ಹೊಂದಿರುತ್ತದೆ. ಗುಡಿಗಾರರು ಬಳಸುವ ಕೆತ್ತನೆಯ ಹತಾರಗಳು ಅಂಗಡಿಗಳಲ್ಲಿ, ಗುಜರಿ ವಸ್ತು ಮಾರುಕಟ್ಟೆಗಳಲ್ಲಿ ದೊರೆಯುವುದಿಲ್ಲ. ಕಮ್ಮಾರರಿಗೆ ಆರ್ಡರ್ ಕೊಟ್ಟು ತಯಾರಿಕೆಯ ವೇಳೆ ಅಲ್ಲೇ ಉಳಿದು, ಸಲಹೆ ಕೊಟ್ಟು ಬೇಕಾದ ಮಾದರಿಯನ್ನು ತಯಾರಿಸಿಕೊಳ್ಳಬೇಕು. ಒಬ್ಬ ಗುಡಿಗಾರನಿಗೆ ಸುಮಾರು ಐವತ್ತಕ್ಕೂ ಹೆಚ್ಚು ಹತಾರಗಳ ಅಗತ್ಯವಿರುತ್ತದೆ. ಈ ಹತಾರಗಳನ್ನು ಹೊಂದಿಸಿಕೊಳ್ಳುವಲ್ಲಿ ಆತ ಸಾವಿರ ರೂಪಯಿಗಳನ್ನು ವಿನಿಯೋಗಿಸಬೇಕಾಗುತ್ತದೆ.

ಬೆಲೆ[ಬದಲಾಯಿಸಿ]

ಕಲೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಈ ಮಾತು ಗುಡಿಗಾರರ ಕೆತ್ತನೆಯ ವಿಷಯದಲ್ಲಂತೂ ನೂರಕ್ಕೆ ನೂರರಷ್ಟು ಸತ್ಯವಾದದ್ದು. ಕೊರಡೊಂದು ಸುಂದರ ಪುತ್ಥಳಿಯಾಗಿ ನಿಂತಾಗ ನೂರಾರು ರೂಪಾಯಿಗಳ ಬೆಲೆಯಲ್ಲಿ ಮಾರಾಟವಾಗುವುದುಂಟು. ಇನ್ನೂರು ರೂಪಾಯಿಗಳಿಂದ ಸಾವಿರಾರು ರೂಪಯಿಗಳ ಬೆಲೆಯ ಸುಂದರ ಕೆತ್ತನೆಯ ವಸ್ತುಗಳು ಇವರ ಕೌಶಲ್ಯಕ್ಕೆ ಸಾಕ್ಷಿಯಾಗಿ ನಿಂತಿವೆ.

ಮಾರುಕಟ್ಟೆ[ಬದಲಾಯಿಸಿ]

ದೇಶ ವಿದೇಶಗಳಲ್ಲಿ ಗಂಧದ ಕೆತ್ತನೆಯ ವಸ್ತುಗಳಿಗೆ ಬೇಡಿಕೆ ಇದೆ. ಕಲಕತ್ತಾ, ದೆಹಲಿ, ಬೆಂಗಳೂರು, ಚೆನ್ನೈ, ಕೊಚಿನ್ ಮುಂತಾದ ನಗರಗಳಲ್ಲಿ ಸರ್ಕಾರದ ವತಿಯಿಂದ ಸ್ಥಾಪಿಸಿರುವ 'ಕಾವೇರಿ' ಎಂಪೋರಿಯಂ'ಗಳಿಗೆ ಗುಡಿಗಾರರು ನಿರ್ಮಿಸಿದ ಕಾಲಾಕೃತಿಗಳು ರವಾನೆಯಾಗುತ್ತವೆ. ಸಾಮಾನ್ಯವಗಿ ಬೇರೆ ಬೇರೆ ನಗರಗಳಿಂದ, ಎಂಪೋರಿಯಂಗಳಿಂದ, ಸಂಘ-ಸಂಸ್ಥೆಗಳಿಂದ ವಸ್ತುಗಳಿಗೆ ಬೇಡಿಕೆ ಇರುತ್ತದೆ. ಬೇಡಿಕೆಯನ್ವಯ ವಸ್ತುಗಳನ್ನು ಪೂರೈಸುತ್ತಾರೆ. ಬೇಡಿಕೆ ಇಲ್ಲದಿರುವಾಗ ಸುಮ್ಮನೆ ಕೂರುವ ಜಾಯಿಮಾನ ಇವರದಲ್ಲ. ಇವರ ಚಾಣಕ್ಕೆ ಬಿಡುವೆಂಬುದಿಲ್ಲ. ತಯಾರಿಸಿದ ವಸ್ತುಗಳು ಮಾರಾಟವಾಗದೆ ಉಳಿಯುವ ದಾಖಲೆ ಇವರಲ್ಲಿಲ್ಲ.

ಸಂಘಗಳು[ಬದಲಾಯಿಸಿ]

ಗುಡಿಗಾರರಿರುವ ಶಿವಮೊಗ್ಗ ಜಿಲ್ಲೆಯ ಸಾಗರ ಮತ್ತು ಸೊರಬ ತಾಲೂಕು ಕೇಂದ್ರಗಳಲ್ಲಿ 'ಮೈಸೂರು ಗುಡಿಗಾರರ ಸಹಕಾರ ಸಂಘ'ಗಳಿವೆ. ಗುಡಿಗಾರಿಕೆಯಲ್ಲಿ ತೊಡಗಿರುವವರು ಈ ಸಂಘದ ಸದಸ್ಯರಾಗಿರುತ್ತಾರೆ. ಶೇಕಡಾ 30ರಷ್ಟು ವ್ಯಾಪಾರ ಸಹಕಾರೀ ಸಂಘಗಳ ಮೂಲಕ ನಡೆಯುತ್ತವೆ. ಪ್ರತಿ ಸಂಘವೂ ಒಂದು ಆಡಳಿತ ಸಮಿತಿಯನ್ನು ಹೊಂದಿದೆ. ಈ ಆಡಳಿತ ಸಮಿತಿಯಲ್ಲಿ ಹನ್ನೊಂದು ಮಂದಿ ಪದಾಧಿಕಾರಿಗಳಿರುತ್ತಾರೆ. ವೃತ್ತಿನಿರತ ಗುಡಿಗಾರರು ಈ ಸಂಘದ ಸದಸ್ಯರು. ಸಮಿತಿಯಲ್ಲಿ ಒಬ್ಬ ಛೇರ್ಮನ್, ಒಬ್ಬ ಸೇಲ್ಸ್ ಮನ್, ಮೂವರು ಡೈರೆಕ್ಟರ್ಸ್ಗಳು ಇರುತ್ತಾರೆ. ಸಂಘದ ಲೆಕ್ಕಪತ್ರಗಳನ್ನಿಡಲು ಒಬ್ಬ ಕಾರ್ಯದರ್ಶಿ ಇರುತ್ತಾನೆ. ಸಮಿತಿಯ ಎಲ್ಲ ಪದಾಧಿಕಾರಿಗಳೂ ಗೌರವ ಪದಾಧಿಕಾರಿಗಳು. ಅವರು ಸಂಬಳ ತೆಗೆದುಕೊಳ್ಳುವುದಿಲ್ಲ. ಕಾರ್ಯದರ್ಶಿ ಮಾತ್ರ ಸಂಬಳ ತೆಗೆದುಕೊಳ್ಳುತ್ತಾನೆ.

ಗಂಧದ ಹಾರ[ಬದಲಾಯಿಸಿ]

ಗಂಧದ ಮರದ ಯಾವ ಭಾಗವೂ ಅನುಪಯುಕ್ತವಲ್ಲ. ಗಂಧದ ಕೊರಡಿಗೆ ಅಥವಾ ಹಲಗೆಗೆ ಉಜ್ಜು ಗೊರಡು ಹಾಕಿ ನುಣುಪು ಮಾಡುವಾಗ ತೆಳ್ಳನೆಯ ಸಿಪ್ಪೆಗಳು ಏಳುತ್ತವೆ. ಆ ಸಿಪ್ಪೆಗಳನ್ನು ಒಂದು ನಿಶ್ಚಿತ ರೂಪ, ಆಕಾರದಲ್ಲಿ ಕತ್ತರಿಸಿ ಮಾಡಲಾಗುತ್ತದೆ. ಇದರ ನಡುವೆ, ಬದಿಗೆ ಬೆಂಡಿನ ಗುಲಾಬಿ ಹೂವನ್ನು ಅಲಂಕಾರಕ್ಕಾಗಿ ಪೋಣಿಸುತ್ತಾರೆ. ಈ ಹಾರಗಳಲ್ಲಿಯೂ ವೈವಿಧ್ಯತೆ ಇದೆ. ಸಿಪ್ಪೆಗಳನ್ನು ಒಂದರಜೊತೆಗೊಂದರಂತೆ ಪೋಣಿಸಿ ಹಾರ ಕಟ್ಟುತ್ತಾರೆ. ಇದಕ್ಕೆ ಬೆಲೆ ಕಡಿಮೆ. ಹೆಚ್ಚು ಕುಶಲತೆಯೇನೂ ಈ ಹಾರ ಮಾಡಲು ಸಾಧ್ಯವಿಲ್ಲ. ಸಿಪ್ಪೆಗಳನ್ನಾಯ್ದು, ನಿರ್ದಿಷ್ಟ ಪ್ರಮಾಣದಲ್ಲಿ ಕತ್ತರಿಸಿ, ಮಡಿದು ಕಟ್ಟಿ ಹಾರ ನೇಯುವುದು ಇನ್ನೊಂದು ಪದ್ಧತಿ. ಮಡಿದು ಕಟ್ಟಿದ ಈ ಸಿಪ್ಪೆಗಳ ನಡುವೆ ಗಿಣ್ಣುಗಳೋಪಾದಿ ನಡುವೆ ಸಿಪ್ಪೆಗಳ ಸುತ್ತುವಿಕೆ ಕಾಣುತ್ತವೆ. ಒಂದು ಗಿಣ್ಣುವಿಗೂ ಇನ್ನೊಂದಕ್ಕೂ ಎರಡು ಬೆರಳುಗಳ ಅಂತರವಿರುತ್ತದೆ. ಇದರಲ್ಲಿಯೂ ಎರಡೂ ಪಾರ್ಶ್ವಗಳ ನಡುವೆ ಹಾಗೂ ಹಾರದ ಮಧ್ಯಭಾಗದಲ್ಲಿ ಬೆಂಡಿನ ಹೂವನ್ನು ಪೋಣಿಸಿರುತ್ತಾರೆ. ಈ ಬಗೆಯ ಹಾರ ತಯಾರಿಸಲು ಸಮಯ ಹೆಚ್ಚು ತಗಲುತ್ತದೆ. ಕೌಶಲ್ಯವೂ ಅಗತ್ಯ. ಹಾಗಾಗಿ ಬೆಲೆಯೂ ಹೆಚ್ಚು. ಇನ್ನೊಂದು ಬಗೆಯದ ಮಣಿ ಪುಷ್ಪಹಾರ. ಹೆಸರೇ ಸೂಚಿಸುವಂತೆ ಯಾವುದೇ ಮಣಿಯನ್ನು ಹಾರದಲ್ಲಿ ಪೋಣಿಸುವುದಿಲ್ಲ. ಆದರೆ, ಗಂಧದ ಸಿಪ್ಪೆಯನ್ನೇ ಮಣಿಯಂತೆ ಕೈ ಚಳಕದಿಂದ ಪರಿವರ್ತಿಸಿ ನೇಯ್ದಿರುತ್ತಾರೆ. ಈ ಮಣಿಯು ಚಿಕ್ಕ ಚಿಕ್ಕ ಸಿಪ್ಪೆ ಉಂಡೆಗಳಾಗಿರುತ್ತವೆ. ಈ ಉಂಡೆಗಳನ್ನು ಪೋಣಿಸಿ ಹಾರ ನೆಯ್ಯಲಾಗುತ್ತದೆ. ಸಾಮಾನ್ಯವಾಗಿ ಈ ಹಾರಗಳು ಆಳುದ್ದ ಇರುತ್ತವೆ. ಮೂರು ದಾರ ಅಥವಾ ಎಳೆಗಳಾಗಿದ್ದು ಅವು ಅಲ್ಲಲ್ಲಿ ಒಂದಾಗಿ ಪುನಃ ಮೂರು ಎಳೆಗಳಾಗಿ ವಿಂಗಡಿಸಲ್ಪಡುತ್ತವೆ. ಇವುಗಳ ಬೆಲೆ ದುಬಾರಿ. ಸಾಮಾನ್ಯವಾಗಿ ಸಭೆ-ಸಮಾರಂಭಗಳಲ್ಲಿ ಗಂಧದ ಹಾರಗಳನ್ನು ಅತಿಥಿ-ಅಧ್ಯಕ್ಷರಿಗೆ ಅರ್ಪಿಸುವುದು ರೂಢಿಯಲ್ಲಿದೆ.

ಗಂಧದ ಪುಡಿ[ಬದಲಾಯಿಸಿ]

ಮೂರ್ತಿಗಳ ಕೆತ್ತನೆ, ಪೆಟ್ಟಿಗೆಗಳ ತಯಾರಿ ನಡೆಯುವಾಗ ಚಾಣಗಳಿಂದ ಕೊರಡನ್ನು ಕೊರೆಯುತ್ತಾರೆ. ಆಗ ಬರುವ ಪುಡಿಗಳನ್ನು ಗುಡಿಗಾರರು ಎಸೆಯುವುದಿಲ್ಲ. ಅದನ್ನು ಊದುಬತ್ತಿ ತಯಾರಿಕೆಯಲ್ಲಿ ಬಳಸುತ್ತಾರೆ. ಊದುಬತ್ತಿ ಈ ಪುಡಿಯಿಂದ ಗಂಧದ ಸುವಾಸನೆ ಸೂಸುವುದು.[೨]

ಅಂಗಡಿ: ಕೆಲಸದ ತಾಣ[ಬದಲಾಯಿಸಿ]

ಗುಡಿಗಾರರ ಅಂಗಡಿ ಹಾಗೂ ಅವರು ಕೆಲಸ ಮಾಡುವ ಜಾಗವನ್ನು ಪ್ರತ್ಯೇಕಿಸುವುದು ಕಷ್ಟ. ಕೆತ್ತನೆಯ ಕಾರ್ಯ ನಡೆಯುವಲ್ಲಿಯೇ ತಯಾರಾದ ಪೆಟ್ಟಿಗೆಗಳೋ ಮೂರ್ತಿಗಳೋ ಇರುವುದುಂಟು. ಅಂಗಡಿಗೆ ಪ್ರವೇಶಿಸಿದಾಗಲೇ ಗಂಧದ ಸುಗಂಧ ನಮ್ಮ ಮೂಗಿಗೆ ಬಡಿಯುತ್ತದೆ. ಸಣ್ಣಪುಟ್ಟ ಸದ್ದಿನೊಂದಿಗೆ ಕೊರಡಿನೊಂದಿಗೆ ಕೈ ಆಡಿಸುವ, ಕೊರಡನ್ನು ಸುಂದರ ಪುತ್ಥಳಿಯನ್ನಗಿ ಪರಿವರ್ತಿಸುವ ರೂವಾರಿಗಳು ಕಾಣಸಿತೊಡಗುತ್ತಾರೆ. ತಲ್ಲಿನತೆ ಇವರ ಮಂತ್ರ. ಅವರ ಕೈಗಳು ಯಂತ್ರ.

ಬೆಂಡಿನ ಕೆಲಸ[ಬದಲಾಯಿಸಿ]

ಗುಡಿಗಾರ ಹೆಂಗಸರು ಬೆಂಡಿನ ಕೆಲಸ ಮಾಡುತ್ತಾರೆ. ಬೆಂಡು ಒಂದು ಬಗೆಯ ಕೋಲಿನೊಳಗಿರುವ ತಿರುಳು. ಆ ಕೋಲನ್ನು 'ಬೆಂಡುಕೋಲು' ಎಂದೇ ಕರೆಯುತ್ತಾರೆ. ಬಯಲು ಸೀಮೆಯ ಕೆಲವು ಕಡೆ, ಹನಗಲ್ಲು, ಹಾವೇರಿ ಮುಂತಾದೆಡಗಳ ಕೆರೆಗಳಲ್ಲಿ ಈ ಬೆಂಡುಗೋಲು ಬೆಳೆಯುತ್ತದೆ. ಅವನ್ನು ಕತ್ತರಿಸಿ, ಹೊರೆ ಕಟ್ಟಿ ತರಲಾಗುತ್ತದೆ. ಒಂದು ಹೊರೆಯಲ್ಲಿ ಸುಮಾರು ನೂರು ಕೋಲುಗಳಿರುತ್ತವೆ. ಈ ಹೊರೆಯನ್ನು ಒಂದು 'ಪಿಂಡಿ' ಎಂದು ಕರೆಯುತ್ತಾರೆ. ಹಸಿಯಾಗಿರುವ ಈ ಬೆಂಡುಕೋಲುಗಳನ್ನು ಒಣಗಿಸಲಾಗುತ್ತದೆ. ನಂತರ ಅದರ ಮೇಲಿನ ಒರಟು ಭಾಗವನ್ನು ತೆಗೆಯಲಾಗುತ್ತದೆ. ತಿರುಳನ್ನು ಒಂದು ಚಾಕುವಿನ ಸಹಾಯದಿಂದ ಸುರುಳಿ ಸಿಪ್ಪೆಯಾಗಿ ಸುಲಿಯುತ್ತಾರೆ. ಯಂತ್ರದ ಮೂಲಕ ಮರದ ತೊಗಟೆಯ ಸುರುಳಿ ತೆಗೆದಂತೆ ಈ ಕಾರ್ಯ. ಸಿಪ್ಪೆಯ ಸುರುಳಿ ಬಿಳಿಯ ಬಣ್ಣದಲ್ಲಿರುತ್ತದೆ. ಇದನ್ನು ಬೇಕಾದ ಆಕಾರಕ್ಕನುಗುಣವಾಗಿ ಕತ್ತರಿಸುತ್ತಾರೆ. ಅನಂತರ ಅದಕ್ಕೆ ಬಣ್ಣ ಹಾಕುತ್ತಾರೆ. ಆನಂತರ ಹೂವುಗಳಾಗಿಯೋ, ಬಾಸಿಂಗದ, ತೊಂಡಿಲಿನ ಶೃಗಾರ ಸಾಧನೆಗಳನ್ನಗಿಯೋ ಇವುಗಳನ್ನು ಆಕಾರಕ್ಕನ್ವಯ ಪೋಣಿಸುತ್ತಾರೆ. ಅಂಟುವಿಕೆಯ ಸಲುವಾಗಿ ಪೆವಿಕಾಲ್ ಬಳಸುತ್ತಾರೆ. ಬೆಂಡಿನ ಹೂ ಭಾರವಾಗಿರುವುದಿಲ್ಲ. ಅದುಮಿದರೆ ಹಾಳಾಗಿಹೋಗುತ್ತದೆ. ತೀರಾ ಮೃದು ಅವು. ಬೆಂಡು ಹೂ ತಯಾರಿಕೆಯಲ್ಲಿ ಗುಡಿಗಾರ ಹೆಂಗಸರು ಪಳಗಿದ ಕೈ. ಬೆಂಡಿನ ಹಾರಕ್ಕೆ ವಿಶೇಷ ಬೇಡಿಕೆ ಇಲ್ಲ. ಹಾಗಾಗಿ ಹೆಚ್ಚಾಗಿ ಬೆಂಡಿನ ಹಾರವನ್ನು ತಯಾರಿಸುವುದಿಲ್ಲ. ಬೆಂಡು ಹೂವನ್ನು ಗಂಧದ ಹಾರದ ಎರಡೂ ಬದಿ, ಮಧ್ಯದಲ್ಲಿ ಹಾಗೂ ಹಾರದ ನಡುವಿನ ಭಾಗದಲ್ಲಿ ಸೇರಿಸುತ್ತಾರೆ. ತೊಂಡಿಲು ಬಾಸಿಂಗಗಳ ತಯಾರಿಕೆಯಲ್ಲಿ ಬೆಂಡಿನ ಬಳಕೆಯೇ ಜಾಸ್ತಿ.


ತೊಂಡಿಲು-ಬಾಸಿಂಗ

ಗಂಧದ ಕೆತ್ತನೆಯ ಕೆಲಸ ಮಾಡುವವರೇ ತೊಂಡಿಲು ಬಾಸಿಂಗದ ಕೆಲಸವನ್ನೂ ಮಾಡುತ್ತಾರೆ. ಮದುವೆಯ ವೇಳೆ ವಧು-ವರರು ತೊಂಡಿಲು ಬಾಸಿಂಗ ಧರಿಸುವುದು ಕೆಲವು ಸಮಾಜದಲ್ಲಿ ಸಂಪ್ರದಾಯ. ಗುಡಿಗಾರರು ಈ ತೊಂಡಿಲು-ಬಾಸಿಂಗಗಳನ್ನು ತಯಾರಿಸಿ ಕೊಡುತ್ತಾರೆ. ತೊಂಡಿಲು-ಬಾಸಿಂಗಗಳು ಬೆಂಡು ಹಾಗೂ ಮಣಿಗಳಿಂದ ತಯಾರಾಗುತ್ತವೆ. ಸಾಮಾನ್ಯವಾಗಿ ಗುಡಿಗಾರ ಗಂಡಸರು ಬಾಸಿಂಗವನ್ನೂ ಹೆಂಗಸರು ತೊಂಡಿಲನ್ನೂ ಮಾಡುತ್ತಾರೆ. ತೊಂಡಿಲು-ಬಾಸಿಂಗದ ಕೆಲಸದಲ್ಲಿಯೂ ಗುಡಿಗಾರರ ಕರಕೌಶಲ್ಯವನ್ನು ಕಾಣಬಹುದಾಗಿದೆ.

ಆಹಾರ[ಬದಲಾಯಿಸಿ]

ಮೂಲತಃ ಗುಡಿಗಾರರು ಸಸ್ಯಾಹಾರಿ, ಮಾಂಸಾಹಾರ ವರ್ಜ್ಯವೇನೂ ಅಲ್ಲ. ಗೋಧಿ, ಜೋಳ ಇವುಗಳ ಬಳಕೆ ಕಡಿಮೆ. ಅಕ್ಕಿ, ಹಾಲು, ಹವ್ಯಕರಂತೆ ಇವರಿಗೂ ಬೇಕು. ಹಬ್ಬ-ಹರಿದಿನಗಳಲ್ಲಿ ವಿಶೇಷ ತಿಂಡಿ-ತಿನಿಸುಗಳನ್ನು ತಯಾರಿಸುತ್ತಾರೆ. ಇವುಗಳಲ್ಲಿ ಚಕ್ಕುಲಿ, ಚೂಡಾ, ವುಂಡೆ, ಕರ್ಜಿಕಾಯಿ, ತಂಬಿಟ್ಟುಂಡೆ, ಹಲಸಿನೆಲೆ ಕಡುಬು, ಅರಿಶಿನ ಎಲೆಯ ಕಡುಬು, ಕೆಸವಿನೆಲೆಯೆ ಪತ್ರೊಡೆ, ಸಜ್ಜಪ್ಪ, ಹೋಳಿಗೆಗಳು, ಇತರೆ ಪ್ರಮುಖ ತಿಂಡಿಗಳು.

ಪ್ರಶಸ್ತಿಗಳು[ಬದಲಾಯಿಸಿ]

ರಾಷ್ಟ್ರೀಯ, ಅಂತರ್ರಾಷ್ಟ್ರೀಯ ಹಲವು ಪ್ರದರ್ಶನಗಳಲ್ಲಿ ಗುಡಿಗಾರರ ಕಲಾಕೃತಿಗಳು ಪ್ರದರ್ಶಿಸಲ್ಪಟ್ಟಿವೆ. ಬಹುಮಾನ ಪ್ರಶಸ್ತಿಗಳನ್ನು ಗಳಿಸಿವೆ. ಕ್ರಿ.ಶ. 1867ರಷ್ಟು ಹಿಂದೆಯೇ ವಿದೇಶಕ್ಕೆ ದಾಟಿ ಪ್ರದರ್ಶಿಸಿದ ಕೀರ್ತಿ ಗುಡಿಗಾರರ ಕಲಾಕೃತಿಗಳದು. ಹೊನ್ನಾವರದ ಸುಬ್ಬಣ್ಣ ಗುಡಿಗಾರರು ರಚಿಸಿದ ಗಂಧದ ಮೂರ್ತಿ 1867ರಲ್ಲಿ ಪ್ಯಾರಿಸ್ ನ ವಸ್ತುಪ್ರದರ್ಶನದಲ್ಲಿ ಸೇರಿತ್ತು. ಇದಕ್ಕೆ ಬೆಳ್ಳಿಯ ಪದಕವೂ ದೊರಕಿತ್ತು. ಗುಡಿಗಾರರಲ್ಲಿ ಹಲವು ವ್ಯಕ್ತಿಗಳಿಗೆ ರಾಜ್ಯ ಹಾಗೂ ರಾಷ್ಟ್ರದ ಬಹುಮಾನ, ಪ್ರಶಸ್ತಿಗಳು ದೊರಕಿದೆ. ಸಮಾಜದ ಹಿರಿಯ ಕಲಾವಿಧರು ರಚಿಸಿರುವ ಕಲಾಕೃತಿಗಳು ಮೈಸೂರಿನ ಜಗನ್ಮೋಹನ ಅರಮನೆಯಲ್ಲೂ, ಮುಂಬೈನ ಕಿಂಗ್ಸ್ ವೇಲ್ ಮ್ಯೂಸಿಯಮ್ ನಲ್ಲೂ ಮತ್ತು ಲಂಡನಿನ ಮ್ಯೂಸಿಯಂನಲ್ಲೂ ಕಾಣಬಹುದಾಗಿದೆ.

ಪ್ರಶಸ್ತಿ ವಿಜೇತರು[ಬದಲಾಯಿಸಿ]

ಗುಡಿಗಾರ ಸಮಾಜದ ಹಿರಿಯ ಹಾಗು ಆಚಾರ್ಯರೆನಿಸಿರುವ ಶ್ರೀ ಮುಡುಗೋಡು ಹಿರಣ್ಯಪ್ಪನವರು ಅತ್ಯಂತ ಶ್ರೇಷ್ಟ ಕಲಾವಿದರು. ಇವರು ದಂತದಲ್ಲಿ ರಚಿಸಿರುವ ಸಿಂಹಾಸನವು ರಾಮಾಯಣ ಹಾಗು ಮಹಾಭಾರತದ ಚರಿತ್ರೆವುಳ್ಳ ಕೆತ್ತನೆಯಿಂದ ಕೂಡಿದ್ದು ಇಂದು ಯಾರೂ ರಚಿಸಲಾರದಂತ ಕೃತಿಯಾಗಿರುತ್ತದೆ. ಈ ದಂತ ಸಿಂಹಾಸನವು ಜಗತ್ಪ್ರಸಿದ್ಧಿಯಾಗಿದ್ದು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಾಮಚಂದ್ರಾಪುರ ಮಠದಲ್ಲಿದ್ದು ಎಲ್ಲರೂ ವೀಕ್ಷಿಸಬಹುದಾಗಿದೆ. ದಿ|| ವಿಠ್ಠಲ ರಾಮಚಂದ್ರ ಶೇಟ್, ದಿ|| ಕೆ. ಜಿ. ಶಾಂತಪ್ಪ, ಜಡೆ ಮಂಜುನಾಥಪ್ಪ, ದಂತ ಶಿಲ್ಪಿ ಹೊನ್ನಾವರದ ಎಚ್. ವೆಂಕಟಪ್ಪ ಶೆಟ್ಟಿ ಇವರುಗಳು ಸಮಾಜದ ಶ್ರೇಷ್ಟ ಕಲಾವಿದರೆಂದು ಗುರುತಿಸಲ್ಪಟ್ಟಿರುತ್ತಾರೆ. ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬ ಮಾತಿನಂತೆ ಈ ಸಮಾಜದ ಯುವ ಕಲಾವಿದರಾದ ಶ್ರೀ ಅಶೋಕ ಚಿಕ್ಕಣ್ಣ ಗುಡಿಗಾರ್, ಚಿಕ್ಕ ವಯಸ್ಸಿನಲ್ಲಿಯೇ ರಾಷ್ಟ್ರ ಪ್ರಶಸ್ತಿ ಪಡೆದಿರುತ್ತಾರೆ. ಶ್ರೀ ಸುರೇಶ ಚಿಕ್ಕಣ್ಣ ಗುಡಿಗಾರ್, ಶ್ರೀ ವಿವೇಕಾನಂದ ಸುಬ್ರಹ್ಮಣ್ಯ ಗುಡಿಗಾರ್ ಇವರುಗಳುಚಿಕ್ಕ ವಯಸ್ಸಿನಲ್ಲಿಯೇ ತಮ್ಮ ಅತ್ಯುತ್ತಮ ಕಲಾಕೃತಿಗಳಿಗೆ ರಾಜ್ಯ ಪ್ರಶಸ್ತಿ ಪಡೆದು ಸನ್ಮಾನಿತರಾಗಿರುತ್ತಾರೆ. ಇವರಂತೆಯೇ ಇನ್ನೂ ಹತ್ತು-ಹಲವಾರು ಕಲಾವಿದರು ರಾಜ್ಯ ಪ್ರಶಸ್ತಿ ಮತ್ತು ಕಮಲಾದೇವಿ ಚಟ್ಟೋಪಧ್ಯಾಯ ಪ್ರಶಸ್ತಿ ಪಡೆದು ಸನ್ಮಾನಿತರಾಗಿರುತ್ತಾರೆ.

ಉಪಸಂಹಾರ[ಬದಲಾಯಿಸಿ]

ಇತ್ತೀಚಿನ ವರ್ಷಗಳಲ್ಲಿ ಗುಡಿಗಾರರ ಕೆತ್ತನೆ ಕೆಲಸಕ್ಕೆ ಪ್ರಾಮುಖ್ಯವಾಗಿರುವ ಶ್ರೀಗಂಧದ ಕೊರತೆಯಿಂದಾಗಿ ಗುಡಿಗಾರರ ಕಲೆ ಅವಸಾನದತ್ತ ಸಾಗಿದೆ. ಗುಡಿಗಾರರು ಇದಕ್ಕೆ ಪರ್ಯಾಯಾವಾಗಿ ಮರದ ಕೆತ್ತನೆ, ಬೆಂಡಿನ ಕೆಲಸ, ಮಣ್ಣಿನ ಮತ್ತು ಕಲ್ಲಿನ ಮೂರ್ತಿಗಳನ್ನು ನಿರ್ಮಿಸುವ ಕೆಲಸದಲ್ಲಿ ತೊಡಗಿರುತ್ತಾರೆ. ಸರ್ಕಾರವು ಗುಡಿಗಾರರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಗಮನ ಅರಿಸಬೇಕಾದ ಅವಶ್ಯಕತೆ ಇದೆ.

.

ಬಾಹ್ಯಾ ಕೊಂಡಿಗಳು[ಬದಲಾಯಿಸಿ]

1. http://www.kamat.com/kalranga/people/gudigars/index.htm

2. http://www.india-crafts.com/wood_crafts/sandalwood/

3. https://en.wikipedia.org/wiki/Ashok_Gudigar

4. https://en.wikipedia.org/wiki/Gudigar

ಉಲೇಖನಗಳು[ಬದಲಾಯಿಸಿ]

  1. "ಶ್ರೀ ಗಂಧದ ಮರ".
  2. "ಗಂಧದ ಪುಡಿ".