ಗುಡಿಗಾರಿಕೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ



ಗುಡಿಗಾರಿಕೆ ಎಂಬುದು ಗಂಧದ ಕಟ್ಟಿಗೆ, ಬೆಂಡು, ಕೆಲಮಟ್ಟಿಗೆ ಮಣ್ಣು-ಇವುಗಳ ಕುಶಲ ಕೆಲಸಕ್ಕೆ ಈ ಹೆಸರಿದೆ. ಕಟ್ಟಿಗೆಯ ಕುಶಲ ಕೈಗಾರಿಕೆ ವಾಸ್ತು ಶಿಲ್ಪಗಳಷ್ಟೇ ಪ್ರಾಚೀನವಾದುದು. ಅರಮನೆಗಳ, ದೇವಸ್ಥಾನಗಳ, ಹಳೆಯ ಕಾಲದ ಮನೆಗಳ ಮಹಾದ್ವಾರ, ಮೊದಲ ಬಾಗಿಲು, ಛತ್ತು, ರಥ, ಕಿಟಕಿಯ ಚೌಕಟ್ಟುಗಳು ಮೊದಲಾದುವನ್ನು ಚಿತ್ರ ವಿಚಿತ್ರವಾಗಿ ಕೆತ್ತಿ ಅಲಂಕರಣ ಮಾಡುವುದು ಹಿಂದಿನಿಂದ ಬಂದಿರುವ ಸಂಪ್ರದಾಯ. ಗಂಧದ ಕಟ್ಟಿಗೆಯಲ್ಲಿ ಕೆತ್ತನೆಯ ಕೌಶಲವನ್ನು ತೋರಿಸುವ ಒಂದು ಸಾಂಪ್ರದಾಯಿಕ ಕಾಯಕಕ್ಕೆ ಸಂಬಂಧಿಸಿದವರನ್ನು ಸಾಮಾನ್ಯವಾಗಿ ಗುಡಿಗಾರ ರೆನ್ನುತ್ತಾರೆ.

ಗುಡಿಗಾರರ ವಾಸಸ್ಥಳಗಳು[ಬದಲಾಯಿಸಿ]

  • ಕನ್ನಡ ನಾಡಿನ ಗುಡಿಗಾರರು ಗೋವದಿಂದ ಬಂದವರು. ಶಿವಮೊಗ್ಗ ಜಿಲ್ಲೆಯ ಸೊರಬ ಸಾಗರ ತಾಲ್ಲೂಕುಗಳಲ್ಲಿಯೂ ಉತ್ತರ ಕನ್ನಡದ ಯಲ್ಲಾಪುರ,ಸಿರ್ಸಿ, ಕುಮಟ, ಹೊನ್ನಾವರ, ಸಿದ್ದಾಪುರ ತಾಲ್ಲೂಕುಗಳಲ್ಲಿ ಇವರು ವಾಸಿಸುತ್ತಿದ್ದಾರೆ.ಯಲ್ಲಾಪುರದ ಗುಡಿಗಾರರು ಹೊರರಾಜ್ಯ ಹೊರದೇಶಗಳಿಗೂ ತಮ್ಮ ಕೊಡುಗೆಯನ್ನು ನೀಡಿದ್ದಾರೆ. ಬಿಳಿಗೋಡು, ತವಂದೆ, ಜಿಂಗಿಕೊಪ್ಪ, ತಾಳಗುಪ್ಪ, ಹೊನ್ನೆಕೇರಿ, ಬನವಾಸಿ, ಕೊಪ್ಪ, ಇಸಳೂರ, ಹೆಬ್ಬಳ್ಳಿ, ಖರ್ಲೂ, ಬೀಳಗಿ, ಹೆರೂರಗಳಲ್ಲಿನವರು ಗುಡಿಗಾರಿಕೆಯನ್ನೂ ಕೃಷಿಯನ್ನೂ ಒಟ್ಟಾಗಿ ನಡೆಸಿಕೊಂಡು ಬಂದಿದ್ದಾರೆ.
  • ಕುಮಟ, ಹೊನ್ನಾವರಗಳಲ್ಲಿ ಇವರನ್ನು ಶೆಟ್ಟಿಗಳೆಂದು ಕರೆಯುತ್ತಾರೆ. ಸಾಗರ ಸೊರಬಗಳಲ್ಲಿ ವೃತ್ತಿಯಿಂದಲೇ ಇವರನ್ನು ಗುರುತಿಸಬೇಕಾಗುತ್ತದೆ. ಶೆಟ್ಟಿಗಳ ಮನೆಮಾತು ಕೊಂಕಣಿಯಾದರೆ ಉಳಿದವರದು ಕನ್ನಡ.

ಶೈವ ಧರ್ಮೀಯರು[ಬದಲಾಯಿಸಿ]

  • ಇವರು ಶೈವ ಧರ್ಮೀಯರು: ಜನಿವಾರ ಧರಿಸುತ್ತಾರೆ. ಇವರ ಮಠ ಶೃಂಗೇರಿ; ಕುಲದೇವತೆಗಳ ದೇವಸ್ಥಾನಗಳು ಗೋವದಲ್ಲಿವೆ. ಹವ್ಯಕ ಬ್ರಾಹ್ಮಣರು ಇವರ ಧರ್ಮಕಾರ್ಯಗಳನ್ನು ನಡೆಸಿಕೊಡುತ್ತಾರೆ. ಗೌಡ ಚಿತ್ರಕರೆಂಬ ಮತ್ತೊಂದು ಹೆಸರು ಇವರಿಗುಂಟು. ಇವರು ಭಾರ ದ್ವಾಜ, ವಸಿಷ್ಠ, ಗೌತಮ, ಕಶ್ಯಪ ಮತ್ತು ಕೌಂಡಿಣ್ಯ ಗೋತ್ರದವರು. ಇವರಲ್ಲಿ ಮಾಂಸಾಹಾರಕ್ಕೆ ನಿಷೇಧವಿಲ್ಲ. ಕುಟುಂಬ ಅವಿಭಕ್ತ ಪದ್ಧತಿಯದು. ಗಂಡಸರು ಗಂಧದ ಕೆಲಸವನ್ನೂ ಹೆಂಗಸರು ಬೆಂಡಿನ ಕೆಲಸವನ್ನೂ ಮಾಡುತ್ತಾರೆ.
  • ಬೆಂಡಿನಿಂದ ಹೂ, ಹೂಮಾಲೆ, ಗುಚ್ಛಗಳನ್ನು ಹೆಂಗಸರು ಮಾಡಿದರೆ, ಬಾಸಿಂಗ, ಮೊಗ್ಗಿನ ತುರಾಯಿಯನ್ನು ಗಂಡಸರೇ ಮಾಡುತ್ತಾರೆ. ಪ್ರತಿವರ್ಷ ಶ್ರಾವಣ, ಭಾದ್ರಪದ ಮಾಸಗಳಲ್ಲಿ ಗುಡಿಗಾರರು ಗಣಪತಿಯನ್ನು ಮಾಡಿ ಮಾರುತ್ತಾರೆ. ಇದೂ ಬಾಸಿಂಗ ತಯಾರಿಕೆಯೂ ತಕ್ಕಮಟ್ಟಿಗೆ ಆದಾಯ ತರುವ ಬಾಬುಗಳು. ಗಂಧದ ಕಟ್ಟಿಗೆ, ಹಸ್ತಿದಂತ, ಉಸುಕಿನ ಕಾಗದ, ಮೇಣದ ಪಾಲೀಷು-ಇವು ಗುಡಿಗಾರರ ಕಚ್ಚಾಸಾಮಗ್ರಿಗಳು.
  • ತಮ್ಮ ಕೆಲಸದಲ್ಲಿವರು ಗರಗಸ, ಉಜ್ಜುಗೊರಡು, ನಾನಾತರದ ಚಾಣ, ಮೊಳೆ, ತಿರುಗು ಮೊಳೆ, ಮರಡುಗಳನ್ನು (ಹಿಂಜಸ್) ಬಳಸುತ್ತಾರೆ. ಮೊದಲು ತಾವು ಮಾಡಬಯಸಿದ ಕಲಾಕೃತಿಗೆ ಅಳತೆಗನುಗುಣವಾಗಿ ಕಟ್ಟಿಗೆಯನ್ನು ಕತ್ತರಿಸಿಕೊಳ್ಳುತ್ತಾರೆ. ಆಮೇಲೆ ಆ ತುಂಡಿಗೆ ಸಾಮಾನ್ಯ ಕಲಾಕೃತಿಯ ರೂಪಕೊಟ್ಟು ತದನಂತರ ಅದನ್ನು ಸೂಕ್ಷ್ಮ ಕೆತ್ತನೆಯಿಂದ ತಿದ್ದುತ್ತಾರೆ. ಕೊನೆಯಲ್ಲಿ ಉಸುಕಿನ ಕಾಗದ ಮತ್ತು ಮೇಣದ ಪಾಲೀಷಿನಿಂದ ಹೊಳಪು ಕೊಡುತ್ತಾರೆ.

ಶಿಲ್ಪದ ಸಾಂಪ್ರದಾಯಿಕ ಶೈಲಿ[ಬದಲಾಯಿಸಿ]

  • ಗುಡಿಗಾರರ ಕೃತಿಗಳು ವಾಸ್ತು ಮತ್ತು ಶಿಲ್ಪದ ಸಾಂಪ್ರದಾಯಿಕ ಶೈಲಿಯನ್ನು ಹೋಲುತ್ತದೆ. ರಾಮಾಯಣ, ಮಹಾಭಾರತ, ಹಿಂದೂ ಪುರಾಣಗಳು ಇವರ ಆಕಾರಗಳು. ದೇವರ ಮೂರ್ತಿಗಳು, ಒಡವೆಯ ಪೆಟ್ಟಿಗೆಗಳು, ಫೋಟೋ ಚೌಕಟ್ಟುಗಳು, ವ್ಯಾಸಪೀಠ, ಕಾಗದವನ್ನು ಕತ್ತರಿಸುವ ಚಾಕುಗಳು, ಬೀಸಣಿಕೆಗಳು, ವಿಸಿಟಿಂಗ್ ಕಾರ್ಡುಗಳು, ಆನೆ, ಹೂಮಾಲೆ ಇತ್ಯಾದಿಗಳನ್ನು ಇವರು ಸಾಮಾನ್ಯವಾಗಿ ತಯಾರಿಸುತ್ತಾರೆ. ಈಗೀಗ ಆಧುನಿಕ ಬೇಡಿಕೆಗಳನ್ನು ಗಮನಿಸಿ ಹೊಸ ಹೊಸ ವಸ್ತುಗಳನ್ನು ಸಿದ್ಧಪಡಿಸಿಕೊಡುತ್ತಿದ್ದಾರೆ.
  • ಗುಡಿಗಾರಿಕೆಯಲ್ಲಿ ಕಚ್ಚಾವಸ್ತುವಿನ ಕಿಮ್ಮತ್ತಿಗೂ ಕಲಾಕೃತಿಯ ಬೆಲೆಗೂ ನೇರವಾದ ಸಂಬಂಧವಿಲ್ಲ. ಗುಡಿಗಾರರು ಸ್ವತಂತ್ರ ವೃತ್ತಿಯವರು. ಕೇವಲ ಕೆಲವೇ ಕೆಲಸಗಾರರನ್ನು ನಿಯಮಿಸಿಕೊಳ್ಳುತ್ತಾರೆ. ಬೆಂಗಳೂರು, ಮೈಸೂರು, ತಮಿಳುನಾಡು, ಮುಂಬಯಿ, ಕೋಲ್ಕತ ದೆಹಲಿಗಳು ಗುಡಿಗಾ ರರ ಮಾರುಕಟ್ಟೆಗಳು. ನೂರಕ್ಕೆ ಅರವತ್ತರಷ್ಟು ಗುಡಿಗಾರರಿಗೆ ಸ್ವಂತ ಜಮೀನಿದ್ದು ಕೃಷಿ ಮಾಡುತ್ತಾರೆ. ಶೇ.80 ಗುಡಿಗಾರರ ಉತ್ಪನ್ನ ಸಾಮಾನ್ಯವಾಗಿ ತಿಂಗಳಿಗೆ ಸುಮಾರು 500-1000 ರೂಪಾಯಿಗಳವರೆಗೆ ಇದೆ.
  • ಶೇ. 30 ಭಾಗ ವ್ಯಾಪಾರ ಸಹಕಾರಿ ಸಂಘಗಳ ಮುಖಾಂತರವೂ, ಉಳಿದುದು ನೇರವಾಗೂ ಆಗುತ್ತದೆ. ಶಿವಮೊಗ್ಗ, ಕುಮಟಗಳಲ್ಲಿ ಗುಡಿಗಾರರ ತರಬೇತಿಗಾಗಿ ಅರ್ಟಿಸಾನ್ ಟ್ರೇನಿಂಗ್ ಇನ್ಸ್ಟಿಟ್ಯೂಟ್ ಎಂಬ ಸಂಸ್ಥೆಗಳಿರುವವಲ್ಲದೆ, ಮೈಸೂರಿನ ಚಾಮರಾಜೆಂದ್ರ ಟೆಕ್ನಿಕಲ್ ಇನ್ಸ್ಟಿಟ್ಯೂಟ್ ಮತ್ತು ಮುಂಬಯಿಯಿನ ಜೆ. ಜೆ. ಸ್ಕೂಲ್ ಆಫ್ ಆಟ್ರ್ಸ್‌ ಸಂಸ್ಥೆಗಳಲ್ಲೂ ತರಬೇತಿಯ ಅವಕಾಶವುಂಟು. ಗುಡಿಗಾರರ ಕಲಾಕೌಶಲ ಜಗತ್ಪ್ರಸಿದ್ಧವಾಗಿದೆ.
  • 1871ರಲ್ಲಿ ಅಂತಾರಾಷ್ಟ್ರೀಯ ವಾರ್ಷಿಕ ಪ್ರದರ್ಶನದಲ್ಲಿ ಇವರ ಜಾಗತಿಕ ವಸ್ತುಪ್ರದರ್ಶನದಲ್ಲಿ ಕೆಲವು ಕೃತಿಗಳು ಬೆಳ್ಳಿಯ ಪದಕಗಳನ್ನು ಪಡೆದಿವೆ. ಈ ಉದ್ಯೋಗ ಲಾಭದಾಯಕವಲ್ಲದ್ದರಿಂದ ಹೊಸ ಪೀಳಿಗೆ ನೌಕರಿಯನ್ನು ಸೇರತೊಡಗಿದೆ. ಇಂದು ಈ ಉದ್ಯೋಗದಲ್ಲಿರುವವರು ಜಾತಿಯ ವೈಶಿಷ್ಟ್ಯವೆಂಬ ಅಭಿಮಾನದಿಂದ ಮಾತ್ರ ಈ ಕಲೆಯನ್ನು ನಡೆಯಿಸಿಕೊಂಡು ಹೋಗುತ್ತಿದಾರೆ. ಈಚೆಗೆ ಆಲ್ ಇಂಡಿಯ ಹ್ಯಾಂಡಿಕ್ರಾಫ್ಟ್‌ ಬೋರ್ಡ್ ಈ ಕೈಕಸಬನ್ನು ಸಂರಕ್ಷಿಸುವುದಕ್ಕಾಗಿ ಶ್ರಮಿಸುತ್ತಿದೆ.
  • ಹೊನ್ನಾವರದ ಎಸ್. ವೆಂಕಪ್ಪ, ಸೊರಬದ ಹಿರಿಯಣ್ಣಪ್ಪಾ, ಕುಮಟದ ವಾಮನ ಸುಬ್ರಾಯ ಸೇಟ್, ಅದೇ ಊರಿನ ಸುಬ್ರಾಯ ರಾಮಚಂದ್ರ ಸೇಟ್ ಮತ್ತು ಶಂಬಾ ಅನಂತ ಶೇಟ್, ಸಿದ್ದಾಪುರದ ವೆಂಕಟಗಿರಿ ಚಿದಂಬರ ಚಿತ್ರಕ್ ಮೊದಲಾದವರು ಗುಡಿಗಾರಿಕೆಯಲ್ಲಿ ಪ್ರಸಿದ್ಧರಾದವರು (ನೋಡಿ- ಕೆತ್ತನೆ ಕೆಲಸ; ಗಂಧದಮರ; ತೇರು; ದಂತದ ಕೆತ್ತನೆ).